ಆಕರ್ಷಕ, ಅರ್ಥಪೂರ್ಣ ಮತ್ತು ಕಾವ್ಯಚಿತ್ರವೆನ್ನುವಂತಹ ದೃಶ್ಯಗಳನ್ನು ತಮ್ಮ ಕ್ಯಾಮರಾದಿಂದ ಸೆಳೆದು ಕಳಿಸಿದವರು ಅನಿವಾಸಿಯ ಹವ್ಯಾಸಿ ಛಾಯಾಚಿತ್ರಕಾರ ಡಾ. ರಾಮ್ ಶರಣ್. ಚಿತ್ರ ಚೌಕಟ್ಟಿನಲ್ಲಿ ಮೂಡಿಸಿದ ಅವರ ದೃಶ್ಯಗಳನ್ನು ಪದ ರೂಪದಲ್ಲಿ ಕಾವ್ಯಗಳನ್ನಾಗಿಸಿದವರು ಅನಿವಾಸಿಯ ಐವರು ಪ್ರತಿಭಾವಂತ ಕವಿಗಳಾದ ಶ್ರೀನಿವಾಸ ಮಹೇಂದ್ರಕರ್, ವಿನತೆ ಶರ್ಮಾ. ಅಮಿತಾ ರವಿಕಿರಣ್, ವಿಜಯನರಸಿಂಹ ಮತ್ತು ಕೇಶವ ಕುಲಕರ್ಣಿ ಯವರು.
ಆಸಕ್ತಿಯ ವಿಚಾರ ಎಂದರೆ ಈ ದಿನದವರೆಗೆ ಯಾರು , ಯಾವ ಚಿತ್ರಕ್ಕೆ ಏನು ಬರೆಯಬಹುದೆಂದು ರಾಮಶರಣರಿಗೆ ತಿಳಿದಿರಲಿಲ್ಲ. ಹಾಗೆಯೇ ಕವಿಗಳಿಗೆ ಯಾರ ಚಿತ್ರಕ್ಕೆ ತಾವು ಬರೆಯುತ್ತಿದ್ದೇವೆಂದು ತಿಳಿದಿರಲಿಲ್ಲ. ಒಂದೊಂದು ಚಿತ್ರವನ್ನು ಒಬ್ಬೊಬ್ಬರಿಗೆ ಕಳಿಸಿ 5-6 ಸಾಲುಗಳ ಪುಟ್ಟ ಕವನಗಳನ್ನು ಮಾತ್ರವೇ ನಾನು ಅಪೇಕ್ಷಿಸಿದ್ದು. ಒಂದು ಚೌಕಟ್ಟಿನಲ್ಲಿ ಒಂದು ಚಿತ್ರವನ್ನೇನೋ ಹಿಡಿದಿಡಬಹುದು. ಆದರೆ ಅನಿವಾಸಿಯ ಕವಿಗಳ ಲಹರಿಗೆ ಚೌಕಟ್ಟು ಹಾಕಲಾದೀತೇ? ಎಲ್ಲರೂ ವಿಫುಲವಾಗೇ ಬರೆದು ಕಳಿಸಿ ಆಶ್ಚರ್ಯಗೊಳಿಸಿದ್ದಾರೆ. ಚಿತ್ರದ ಮೂಲ ಮತ್ತು ಮೂಲೆ ಮೂಲೆಯ ಪ್ರತಿ ವಿವರವನ್ನು ಕಾವ್ಯವಾಗಿಸಿದ್ದಾರೆ.
ಹಾಗಂತ ಚಿತ್ರಗಳ ಚಮತ್ಕಾರವೇನೂ ಕಡಿಮೆಯಿಲ್ಲ. ಉದಾಹರಣೆಗೆ ಒಂದು ಕವನದ ಚಿತ್ರ, ಸಂಧ್ಯಾ ಸಂದೇಶವೋ, ಉಷೆಯ ಉಗಮವೋ ಕವಿಯನ್ನು ಚಿಂತಿಸವಂತೆ ಮಾಡಿತು. ಚಿತ್ರಕಾರ ಕಳಿಸಿದ ಚಿತ್ರ -ಶೀರ್ಷಿಕೆಗಳು ಮತ್ತೆ ಕೆಲವು ಕವಿಗಳ ಕಲ್ಪನೆಯ ದಿಕ್ಕನ್ನು ಬದಲಿಸಿತು. ಮತ್ತೆ ಕೆಲವರು ಚಿತ್ರಗಳಿಗೆ ತಮ್ಮದೇ ಹೆಸರಿಟ್ಟು ಕವನ ಬರೆದರು. ಮತ್ತೆ ಇನ್ನೊಬ್ಬರಲ್ಲಿ ನೇರ ಚಿತ್ರದಲ್ಲಿನ ಒಳಚಿತ್ರ ತಲೆಕೆಳಗಾದ ಆಶ್ಚರ್ಯ ಮತ್ತೆಲ್ಲವನ್ನು ಮರೆಸಿ ಹಲವು ತರ್ಕಗಳನ್ನು ಮೂಡಿಸಿದರೆ, ಮಗದೊಬ್ಬರು ಮನಸ್ಸು ಬಂದಷ್ಟು ಕನಸಿಸಿ ’ ಉದ್ದವಾಯ್ತೇ ’ ಎಂದು ಕೇಳಿಕೊಂಡರು! ಏನಾದರಾಗಲಿ ಚಿತ್ರಗಳಲ್ಲಿನ ಬೆಳಕು ಮತ್ತು ಬಣ್ಣಗಳು ಕವಿಗಳ ಮನಸ್ಸಿನ ಅಳತೆಗೋಲು ಮತ್ತು ಕಲ್ಪನೆಗಳನ್ನು ಕದಲಿಸಿ ಚಲಿಸುವಂತೆ ಮಾಡಿರುವುದು ಮಾತ್ರ ಖಂಡಿತ ನಿಜ.
ಪ್ರೀತಿಯಲ್ಲಿ ಮೈ ಮರೆತ ಪ್ರೇಮಿಗಳ ಸುತ್ತಲಲ್ಲಿ ಸ್ತಬ್ದವಾದ ಸಮಯ,ನಿರಂತರ ಹರಿವ ಸಮಯ ಸರಳುಗಳ ಹಿಂದೆ ಬಂಧಿಯಾದ ಭಾವ, ಸಂಧ್ಯೆಯೋ-ಉಷೆಯೋ ಬಣ್ಣಗಳ ಓಕುಳಿ ಭೂಮ್ಯಾಕಾಶಗಳಿಗೆ ರಂಗೆರಚಿ ಬಿಡಿಸಿದ ಚಿತ್ತಾರ, ಸುಂದರ ರಮಣೀಯ ದೃಶ್ಯದಲ್ಲಿ ನಿರಂತರವಾಗುವ ತನುವಿನ ಧ್ಯಾನ, ಮನುಜನ ಬೆರಳ ನಡುವಿನ ಮಾಯಕದ ಗೋಲ- ಸುಂದರವಾದ ದೃಶ್ಯಗಳು ಮತ್ತು ಕಾವ್ಯಗಳು.
ಹಿಂದಿನ ಪ್ರಯತ್ನದಲ್ಲಿ ಒಬ್ಬ ಚಿತ್ರಕಾರ, ಒಬ್ಬ ಕವಿ ಮಾತ್ರ ಭಾಗವಹಿಸಿದ್ದರು. ಈ ವಾರದ ವಿಶೇಷದಲ್ಲಿ ಒಬ್ಬ ಚಿತ್ರಕಾರನ ಚಿತ್ರಗಳಿಗೆ ಬೇರೆ , ಬೇರೆ ಕವಿಗಳ ಭಾವಗಳು,ಕಲ್ಪನೆಗಳು ಸಾಕ್ಷಾತ್ಕಾರವಾಗಿ ಹೊಸ ಚಮತ್ಕಾರವನ್ನು ಮೂಡಿಸಿವೆ. ಪ್ರತಿಯೊಬ್ಬ ಕವಿಯದೂ ಅದೆಷ್ಟು ಭಿನ್ನವಾದ ದಾಟಿ ಎಂಬುದನ್ನು ತೋರಿಸಿದೆ.
ಚಿತ್ರಗಳನ್ನು ನೋಡಿ ನಿಮ್ಮ ಮನಸ್ಸಿನಲ್ಲಿಯೂ ಗುನುಗು ಮೂಡಿದರೆ, ಪ್ರಯತ್ನ ಪಟ್ಟವರ ಬೆನ್ನು ತಟ್ಟಬೇಕೆನ್ನಿಸಿದರೆ ಖಂಡಿತ ಕಮೆಂಟಿಸಿ.–ಡಾ. ಪ್ರೇಮಲತ ಬಿ

ಕಂಬಿಯ ಕಂಪನಗಳು ಬೆಳಕಿನೊಡನೆ ಸೆಣೆಸಿ
ಗೆದ್ದಿವೆ ನನ್ನ ಕರಣದೊಳಿಳಿದು
ನಾ ಗೆಲ್ಲಬಾರದೇಕೆ ನಿನ್ನ ಸ್ಪರ್ಶದ ಕಂಪನದಿ
ಗಂಟೆಯ ಮುಳ್ಳುಗಳ ತಡೆದು
ನಿರ್ಲಿಪ್ತ ಜಗತ್ತೊಂದು ನಮ್ಮ ಸುತ್ತಲೂ
ಹೆಣೆದುಕೊಳ್ಳಬಾರದೇ , ಈ ಕಾಲನ ಓಟವ
ಕಳಚಿಕೊಂಡು , ನಮ್ಮಿಬ್ಬರ ಬೆರಳುಗಳ
ಹೊಸೆದುಕೊಂಡು ,ಎಂದೆಂದಿಗೂ
ಮನಸುಗಳ ಬೆಸೆದುಕೊಂಡು
——–ಶ್ರೀನಿವಾಸ ಮಹೇಂದ್ರಕರ್

ಕಾಲವೆಂಬುದು…
ಬಂಧಿತ ಒಳಗಿನುಸಿರ ತಲ್ಲಣದ ನಿರ್ವಾತ
ಅಂಟಿರುವ ಖಾಲಿ ಗೋಡೆಗಂಜಿ ಗಡಿಯಾರ
ಬೇಡುವ ನಿರ್ಭೀತಿ, ಸಮಯದ ಚಲನದ
ಸ್ವತಂತ್ರ, ಅತಂತ್ರ ನಿರ್ಧಾರ ಕಿಟಕಿ ಸರಳಿನ
ಗೆರೆಗಳು ಬರೆವ ಪಥ ವಿದೃಶ.
ಹೊಸ ಗಾಳಿಯ ಯುಗಾದಿ ಗರಿಮೆ
ರಾತ್ರಿ ಮಿಣುಕು ಹುಳು ಕಾಲದ ಅಣುಕು
ಕತ್ತಲೆಯೇ ಅದರ ಬೆಳಕು ಬೇಕಿಲ್ಲದಕೆ
ನಮ್ಮ ನಿರ್ಧರಿತ ಸಾವು ಸೂಚಿಸುವ ಸಮಯ
ಬಂಧನವ ಬಿಸಾಡಿದ ಗೆರೆಯಿಲ್ಲದ ವಿದೃಶ ಪಥ.
ಮನಸ್ಸುಗಳ ಪಥಸಂಚಲನ ಮನುಜ ಗಣಕ
ಕೀಲಿಕೊಟ್ಟ ಮುಳ್ಳು ಜೀವಸ್ವರವಾದೀತೇ
ಸರಳುಗಳಾಚೀಚಿನ ಒಳಹೊರಗಿನ ಮರೆಮಾಚಿನ
ಪ್ರಪಂಚಗಳ ದೊಡ್ಡ ಕೈ, ಚಿಕ್ಕ ಕೈ ಬಿಚ್ಚಿಕೊಳ್ಳುವುದೇ
ಗೋಡೆ ಮೇಲಿನ ಗಡಿಯಾರ ಹೇಳುವ ವಿದೃಶ ಕಥೆ.
ಕಪ್ಪು ಬಿಳುಪು, ರಾತ್ರಿ ಹಗಲು ಪಾತ್ರಗಳು
ನಿಡುಸುಯ್ದು ಕ್ಯಾಕರಿಸಿದರೂ ಬತ್ತಲೊಲ್ಲದ ದೀಪ
ಜಗ್ಗಿದರೂ ತಲೆ ತಿರುಗುವುದು ಗಡಿಯಾರದೆಡೆಗೆ
ಪಥಸಂಚಲನದ ವಿದೃಶ ಸೈನಿಕನಲ್ಲವಾದರೂ
ದೊಡ್ಡ ಚಿಕ್ಕ ಮುಳ್ಳು ಮಾರ್ಗದರ್ಶಿ.
——— ವಿನತೆ ಶರ್ಮ

ಹೀಗೊಂದು ಕನಸಿದೆ,
ಹಾಂ ಕನಸಷ್ಟೇ,!!
ಕೇಳುವೆಯ??
ಬೆಳಗು ಮೂಡುವ ಮುನ್ನ
ಇಬ್ಬನಿ ದಾರಿ ಇಬ್ಬಾಗಿಸಿ,
ನಾವಿಬ್ಬರು ನಡೆಯೋಣ
ಒಂದಷ್ಟು ದೂರ,
ಅದೋ ಗುಡ್ಡದ ತುದಿಯಲ್ಲಿ
ಸಣ್ಣ ಗುಡಿಸಲ ಕಟ್ಟೋಣ,
ನನಗೊಂದು ಒಲೆ ಒಟ್ಟಿಕೊಡು
ಹೊಳೆನೀರ ಚಹಾ ಮಾಡಿಕೊಡುವೆ,
ಅಲ್ಲೇ,
ಒಟ್ಟಿಗೆ ಕೂತು ಕುಡಿಯೋಣ,
ಎಳೆ ಬಿಸಿಲಿನಲ್ಲಿ ಚಳಿ ಕಾಯಿಸೋಣ,
ತಳಕಾಣುವ ಹೊಳೆ ,
ಅಲ್ಲಿ ತಳಕಾಡುವ ಕೆಂಬಣ್ಣದ ರಾಣಿಮೀನು,
ಬೆಳಕ ಗೆರೆಗೆ ಮಿರುಮಿರುಗಿ ಮಿನುಗಿ
ಅಲ್ಲೇ ಕಣ್ಣಾಮುಚ್ಚಾಲೆ ಆಡುವುದನ್ನ ನೋಡೋಣ,
ಬಾನು ನೀಲಿ ರಂಗಿನಲ್ಲಿ ರಂಗಾಗುವ ನಡುನಡುವೆ
ತಿಳಿನೀರ ಕನ್ನಡಿಯಲ್ಲಿ ಮುಖ ನೋಡಿ
ಮತ್ತೆ ಮತ್ತೆ ನಾಚಿ ಬಿಳುಚುವುದನ್ನ ,
ಹಸಿರುಟ್ಟ ಪೃಥೆಯ ಜೊತೆಗೆ ಕೂತು ನೋಡೋಣ,
ಹಸಿರ ಹುಲ್ಲಿನಲಿ ಪುಟಿಯುವ ಬಿಳಿ ತುಂಬೆಹೂವ ಕಿತ್ತು ಸಿಹಿ ಹೀರುತ್ತಾ,
ಕಾಡ ಹೂಗಳ ಘಮ ಬೆನ್ನಟ್ಟಿ ,ಬರಿಗಾಲಲ್ಲಿ ಕಾಡು ಅಲೆಯೋಣ,
ಗೋಧೂಳಿಯಹೊತ್ತು ಕೆಂಪಾಗಸದ ತಂಪಿನಲಿ
ಕೈ ಕೈ ಹಿಡಿದು ಮನೆಗೆ ಮರಳೋಣ,
ಗೊತ್ತು ನನಗೆ, ಆಗದ ಹೋಗದ ಕನಸುಗಳಿವು
ಎನ್ನುತ್ತಿ ನೀನು..
ದುಡ್ಡು ಕೊಡಬೇಕಿಲ್ಲ, ನನ್ನ ಕಲ್ಪನೆ,
ನನ್ನ ಚಿತ್ರ
ಕನಸೇ ತಾನೇ, ಕಟ್ಟುತ್ತೇನೆ ಬಿಡು, ಸಾವಿರ ಸಾವಿರ ಕನಸ
ನಿನಗೂ ಗೊತ್ತಿಲ್ಲದೆ, ನಿನ್ನ ಸುತ್ತ !!!!!
——–ಅಮಿತಾ ರವಿಕಿರಣ್

ಸಂಧ್ಯಾ ಸಂದೇಶ
ಬೆಳಗೊಂದು ಬೆರಗು ಬೈಗೊಂದು ಬೆರಗು
ಎರಡರಲ್ಲೂ ಬಣ್ಣಗಳ ಮೆರುಗು
ಬಾನಂಗಳದಲ್ಲಿ ರಂಗಿನ ಚಿತ್ರ ಚಿತ್ತಾರ
ಮೂಡಣ- ಪಡುವಣಗಳ ಪುಣ್ಯವದೆಷ್ಟು ವಿಸ್ತಾರ?
ಚಂಚಲ ಚಿತ್ತಗಳನೊಮ್ಮೆಲೆ ಹಿಡಿದಿಡುವ ಚಮತ್ಕಾರ !
ಬಾನಲ್ಲಿ ನಿಜರೂಪ, ನೀರಮೇಲೆ ತದ್ರೂಪ
ಅಲ್ಲಿ ಸಂಧ್ಯೆಯಾಲಾಪ, ಇಲ್ಲಿ ಅಲೆಗಳ ಮೇಲೆ ಸಲ್ಲಾಪ
ವಿಜ್ಞಾನದ ಕನ್ನಡಕವ ತೆಗೆಯುತ್ತ
ಕವಿಯಾಗಿ ನೀ ತಳೆಯೆ ತದೇಕಚಿತ್ತ
ಮತ್ತೆ ಮತ್ತೆ ಸೆಳೆಯುವುದು ಅನಂತ ಕಾವ್ಯದತ್ತ
ಬದುಕಿನಾನಂದ ಇರುವುದು
ನೀ ಕಾಣುವ ಅನುಭವವದು
ತರ್ಕದ ವಿಜ್ಞಾನವದು ಸಲ್ಲದು
ಸಂಧ್ಯಾರಾಗದ ಸಂದೇಶವೇ ಇದು
——–✍ ವಿಜಯನರಸಿಂಹ

ಮೇಲಾವುದು ಕೆಳಗಾವುದು?
ಇದೇ ಮೇಲು ಇದೇ ಕೆಳಗು
ಎನುವ ಹಠವೇಕೆ?
ಮೇಲಾದುದು ಕೆಳಗಾಗದು
ಎನುವ ಅಹಂಕಾರ ಬೇಕೆ?
ಮೇಲಾದುದು ಕೆಳಗಾಗುವುದು
ಎನುವ ವಿನಯ ಸಾಕೆ?
ಮೇಲು ಕೆಳಗಾಗಲೇ ಬೇಕು
ಎನುವ ದ್ಷೇಷ ಬೇಕೆ?
ಕೆಳಗು ಮೇಲಾಗಲೇ ಬೇಕು
ಎನುವ ಗುರಿ ಬೇಕೆ?
ಮೇಲು ಕೆಳಗಾಗದೇ
ಕೆಳಗು ಮೇಲಾಗುವುದು
ಸಾಧ್ಯವೇ ಇಲ್ಲವೇ?
—ಕೇಶವ ಕುಲಕರ್ಣಿ
(ಮುಂದಿನ ವಾರ- ಯುವ ಎಂಜಿನಿಯರೊಬ್ಬನ ಕಥೆ)
Like this:
Like Loading...