“ಶಬ್ದವನ್ನು ಪೋಣಿಸಿ ರಚಿಸುವರು ಕಾವ್ಯ, ಸಾಹಿತ್ಯದ ಮಾಲೆಯನ್ನೇ ರಚಿಸಿದವರ ದರ್ಶನ ಲಭಿಸಿದ್ದು ನಮ್ಮೆಲ್ಲರ ಭಾಗ್ಯ!”
ನಿಜವಾಗಿಯೂ ಇದೊಂದು ಪುಣ್ಯ, ಭಾಗ್ಯ. ಸಾಹಿತಿಗಳ ದರ್ಶನ, ಅವರೊಂದಿಗೆ ಲಭಿಸಿದ ಒಡನಾಟ, ಅವರ ಮಾರ್ಗದರ್ಶನ ಪಡೆಯುವ ಸೌಭಾಗ್ಯ ಕನಸು ನನಸಾದ ಅನುಭವ…..
ಕನ್ನಡ ಬಳಗದಲ್ಲಿ ಸಾಹಿತ್ಯದ ಕೆಲಸ ಆಗುತ್ತಿಲ್ಲ, ಸಾಹಿತ್ಯಾಸಕ್ತರಿಗೆ ಭೇಟಿಯಾಗಿ, ವಿಚಾರ ವಿನಿಮಯ ಮಾಡುವ ಅವಕಾಶ ಬೇಕೆಂಬ ಒತ್ತಾಸೆಯಿಂದ ಉಮಾ, ಪ್ರಸಾದ್, ಶ್ರೀವತ್ಸ ಹಾಗೂ ಕೇಶವ್ ಮುಂದಾದರು; ಕನ್ನಡ ಸಾಹಿತ್ಯ, ಸಾಂಸ್ಕೃತಿಕ, ವಿಚಾರ ವೇದಿಕೆಗೆ ಬುನಾದಿ ಹಾಕಿದರು. ಮತ್ತೆ ಹಲವು ಸಮಮನಸ್ಕರನ್ನೊಡಗೂಡಿ ಜಾಲಜಗುಲಿಯಲ್ಲಿ ಕನ್ನಡ ವಾರಪತ್ರಿಕೆ ಪ್ರಾರಂಭವಾಯಿತು. ೨೦೧೪ರ ಅಕ್ಟೋಬರ್ ನಲ್ಲಿ ನಡೆದ ದೀಪಾವಳಿ ಕಾರ್ಯಕ್ರಮದಲ್ಲಿ ಈ ಜಗುಲಿಯ ಉದ್ಘಾಟನೆ “ಅನಿವಾಸಿ” ಎಂಬ ಹೆಸರಿನೊಂದಿಗೆ ಪ್ರಸಿದ್ಧ ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರಿಂದ ಆದದ್ದನ್ನು ನೀವು ಓದಿದ್ದೀರ. ಆ ಸಮಾರಂಭದಲ್ಲಿ ಪ್ರಥಮ ಬಾರಿಗೆ ಕವಿ ಗೋಷ್ಠಿ ಸೊಗಸಾಗಿ ನಡೆದು, ವೇದಿಕೆಯ ಸದಸ್ಯರಲ್ಲದೇ, ಇತರ ಸಾಹಿತ್ಯಾಸಕ್ತರ ಗಮನ ಸೆಳೆಯಿತು; ವೇದಿಕೆಗೆ ಹೊಸ ಆಯಾಮ ಕೊಟ್ಟಿತು.
ಯುಗಾದಿ ಕಾರ್ಯಕ್ರಮಕ್ಕೆ ಹೊಸತನವಿರಬೇಕೆಂದು ಫೆಬ್ರುವರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಆಹ್ವಾನಿತ ಕವನಗಳನ್ನು ಅತಿಥಿಗಳಾದ ಬಿ.ಆರ್.ಲಕ್ಷ್ಮಣರಾಯರಿಗೂ, ಮಮತಾ ಸಾಗರ್ ಅವರಿಗೂ ಮೊದಲೇ ಕಳಿಸಿ, ಅವರ ಅನಿಸಿಕೆಗಳನ್ನೂ, ಕಾವ್ಯ ಕಮ್ಮಟವನ್ನೂ ನಡೆಸಿದರೆ, ನಮಗೆಲ್ಲ ಹೊಸ ಹುರುಪು ಬರುವುದು ಶತಃಸಿದ್ಧ ಎಂಬುದು ಎಲ್ಲರ ಒಮ್ಮತದ ಅನಿಸಿಕೆಯಾಗಿತ್ತು. ಈ ತರಹದ ಕಮ್ಮಟಗಳನ್ನು ನಡೆಸಿ ಅನುಭವವಿರುವ ಮಮತಾ ಸಾಗರ್ ನಮ್ಮೊಡನೆ ಕಾಲ ಕಳೆಯುವ ವಿಚಾರ ನಮ್ಮನ್ನು ಹುರಿದುಂಬಿಸಿದ್ದರಲ್ಲಿ ಸಂದೇಹವಿಲ್ಲ. ಸಮಯ ಕಳೆದಂತೆ, ಚಿಮ್ಮಿದ ಹುರುಪಿನ ಒಸರೆ ಆರದಂತೆ ನಮ್ಮನ್ನೆಲ್ಲ ಪ್ರಸಾದ್ ಹಾಗೂ ಶ್ರೀವತ್ಸ ಪ್ರೋತ್ಸಾಹಿಸುತ್ತ ಕವನ ಬರೆಸಿದರು. ಬರೆದಿದ್ದನ್ನು ಮಮತಾ ಹಾಗೂ ಲಕ್ಷ್ಮಣರಾಯರಿಗೆ ಸಮಯಕ್ಕೆ ಸರಿಯಾಗಿ ಕಳಿಸಿ, ತೆರೆಮರೆಯಲ್ಲಿ ಕಮ್ಮಟದ ಯಶಸ್ಸಿಗೆ ನಾಂದಿ ಹಾಡಿದರು.
ನಮಗೆಲ್ಲ ಬೆಳಗಿನಿಂದಲೇ ಕಾತರ. ಕಾರಣಾಂತರಗಳಿಂದ ತುಸು ತಡವಾಗಿಯೇ ಆರಂಭವಾದರೂ, ಪ್ರಸಾದರ ಪೀಠಿಕೆಯ ನಂತರ ಕಾರ್ಯಕ್ರಮವು ಕ್ಷಣಾರ್ಧದಲ್ಲಿ ತನ್ನ ಲಯವನ್ನು ಕಂಡುಕೊಂಡಿತು. ಲಯಕ್ಕೆ ಪೂರಕವಾಗಿ ಶ್ರೀವತ್ಸ ದೇಸಾಯಿ ಕಾರ್ಯಕ್ರಮವನ್ನು ಔಪಚಾರಿಕವಾಗಿ ಪ್ರಾರಂಭಿಸಿದರು. ಮುಖ್ಯ ಅತಿಥಿಗಳಾದ ಶ್ರೀಯುತ ಬಿ. ಆರ್. ಲಕ್ಷ್ಮಣರಾವ್ ಹಾಗೂ ಡಾ.ಮಮತಾ ಸಾಗರ ಅವರ ಪರಿಚಯವನ್ನು ಪ್ರೇಮಲತಾ ಮತ್ತು ರಾಮಶರಣ ಕ್ರಮವಾಗಿ ಮಾಡಿಕೊಟ್ಟರು.ರಾಮಶರಣ ಅವರು ಹೊಸಬರಿಗೆ ನಮ್ಮ ಜಾಲಜಗುಲಿ “ಅನಿವಾಸಿ”ಯ ಪರಿಚಯ ಮಾಡಿಸಿ ಕಳೆದ ದೀಪಾವಳಿ ಸಮಾರಂಭದಲ್ಲಿ ಡಾ. ಹೆಚ್ ಎಸ್ ವೆಂಕಟೇಶ ಮೂರ್ತಿಯವರಿಂದ ಉದ್ಘಾಟನೆಯಾದದ್ದನ್ನು ನೆನಪಿಸಿ, ಇನ್ನೂ ಹೆಚ್ಚು ಹೆಚ್ಚು ಜನ “ಅನಿವಾಸಿ” ಜಗುಲಿಗೆ ಭೇಟಿ ನೀಡಿ ಎಂದು ಕಳಕಳಿಯಿಂದ ವಿನಂತಿಸಿದರು.
ವಿಚಾರಗಳನ್ನು ಎತ್ತಿ ಹಿಡಿಯುವ ಮೆಟಫರ್ (metaphor) ಆಗಿರುತ್ತವೆ ಎಂಬುದನ್ನು ಮಮತಾ ಸಾಗರ ಅವರು ಮನಮುಟ್ಟುವಂತೆ ಪ್ರತಿಪಾದಿಸಿ ಸಭಿಕರನ್ನು ತಮ್ಮ ವಾಗ್ಝರಿಯ ಉತ್ಸಾಹದಲ್ಲಿ ಕೊಚ್ಚಿಕೊಂಡು ಹೋದರು.
ಮಮತಾ ಸಾಗರರವರ ‘ಮಳೆ’ ಹಾಗೂ ‘ತಾಯಿ’ ಕವಿತೆ ಮೈಯಲ್ಲಿ ರೋಮಾಂಚನ ಹುಟ್ಟಿಸಿತು. ಅವರ ಕವನ ವಾಚನಾ ಶೈಲಿ ಅನುರೂಪ. ಶಬ್ದಗಳ ಮೋಡಿ, ಮತ್ತೆ ಮತ್ತೆ ಬರುವ ಸಾಲುಗಳು ನದಿಯ ಪ್ರವಾಹದಂತೆ ನಮ್ಮನ್ನು ಸುಳಿ ಸಿಕ್ಕಿಸಿ ‘ಮಳೆ’ ಕವಿತೆಯ ಪ್ರೇಮಿಗಳ ನಡುವಿನ ಸಂಭಾಷಣೆಯಲ್ಲಿ ನಮ್ಮನ್ನು ಬೇರೊಂದು ಲೋಕಕ್ಕೆ ಕೊಂಡೊಯ್ದಿತು. ಬಿ. ಆರ್. ಲಕ್ಷ್ಮಣರಾವ್ ಅವರ ‘ಅದ್ಭುತ ರಸದ’ ಬಗ್ಗೆ ಬರೆದ ಕವನ ಅವರ ವೈವಿಧ್ಯತೆಗೆ ಎತ್ತಿ ಹಿಡಿದ ಕನ್ನಡಿಯಂತಿತ್ತು.
ಇನ್ನೂ ಸ್ವಲ್ಪ ಇದ್ದರೂ ಬೇಕಿತ್ತು ಎಂದೆನಿಸುತ್ತಿದರೂ, ಮುಂದಿನ ಕಾರ್ಯಕ್ರಮಗಳಿಗೆ ಆಸ್ಪದ ಮಾಡಿಕೊಡಲು ಕಾರ್ಯಕ್ರಮಕ್ಕೆ ‘ಇತಿಶ್ರೀ’ ಹೇಳಲಾಯಿತು.ವಂದನಾರ್ಪಣೆಯ ಮೂಲಕ ಕಾರ್ಯಕ್ರಮನ್ನು ಮುಗಿಸಿ, ಮುಂದಿನ ಕಾರ್ಯಕ್ರಮಕ್ಕೆ ಎಲ್ಲರೂ ‘ತೃಪ್ತ’ ಮನಸ್ಸಿನಿಂದ ಮುಖ್ಯ ವೇದಿಕೆಯತ್ತ ತೆರಳಿದರು. ಈ ವರದಿಯನ್ನು ಓದಿದ ನಂತರ, ಈ ಜಾಲಜಗುಲಿಯ ಕೊಂಡಿಯನ್ನು ತಮ್ಮ ಬಂಧು-ಮಿತ್ರರೊಂದಿಗೆ ಹಂಚಿಕೊಂಡು ಓದಿ; ನಿಮ್ಮಲ್ಲೂ ಬರೆಯುವ ಹುರುಪಿದ್ದರೆ, ಗದ್ಯ-ಪದ್ಯಗಳನ್ನು ಬರೆದು ಕಳಿಸಿ. ಕನ್ನಡ ಬಳಸಿ, ಉಳಿಸಿ, ಬೆಳೆಸಿ.
-ಸುಹಾಸ್ ಪುರುಷೋತ್ತಮ ಕರ್ವೆ/ರಾಂ