ಕವಿ, ಕವಿತೆ ಮತ್ತು ಭಾವಗೀತೆ – ಡಾ. ಜಿ. ಎಸ್. ಶಿವಪ್ರಸಾದ್

“ಕವಿದ ಪರದೆಯನ್ನು ತಳ್ಳಿ, ಅದು ಮುಚ್ಚಿಟ್ಟ ಜಗತ್ತಿನ ಸೌಂದರ್ಯವನ್ನು ಹೊರತಂದು, ಪರಿಚಿತವಾದದ್ದರಲ್ಲೇ ಹೊಸತನ್ನು ತೋರುವ ಶಕ್ತಿ ಕವಿತೆ / ಕಾವ್ಯಕ್ಕಿದೆ.” – ಪರ್ಸಿ ಶೆಲ್ಲಿ. ಅಂತಹ ಶಕ್ತಿಯುಳ್ಳ ಕವಿತೆಯ, ಬರೆಯುವ ಕವಿಯ ಮನೋಭಾವದ ಬಗ್ಗೆ ಈ ಕೆಳಗಿನ ಸುಂದರ ಲೇಖನದಲ್ಲಿ ವಿವರಿಸಿದ್ದಾರೆ, ನಮ್ಮ ಡಾ ಜಿ ಎಸ್ ಶಿವಪ್ರಸಾದ್. ಈ ಲೇಖನ ಹೋದವಾರ ಪ್ರಕಟವಾದ ಕಾವ್ಯ ಭಾವ – ಸಂಗೀತ ಸೌರಭ ಕಾರ್ಯಕ್ರಮದ ಹಿನ್ನೆಲೆಯಲ್ಲೇ ಮೂಡಿಬಂದಿದೆ. ಎಂದಿನಂತೆ ಓದಿ ಆನಂದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ. – ಎಲ್ಲೆನ್ ಗುಡೂರ್ (ಸಂ.)

ಕವಿತೆಯೆಂದರೇನು? ಎಂಬ ಪ್ರಶ್ನೆಗೆ, ಒಬ್ಬ ಕವಿ ತನ್ನ ಬಾಹ್ಯ ಜಗತ್ತನ್ನು ಗ್ರಹಿಸಿ ತನ್ನ ಬದುಕಿನ ಅನುಭವವನ್ನು ಸಂಚಯಿಸಿ ಆ ಅನುಭವಗಳನ್ನು ಸ್ಫೂರ್ತಿ ಒದಗಿದಾಗ ಒಂದು ಕಾವ್ಯ ಸ್ವರೂಪದಲ್ಲಿ ಲಯ ಪ್ರಾಸಗಳೊಂದಿಗೆ ಛಂದೋಬದ್ಧವಾಗಿ ಅಭಿವ್ಯಕ್ತಿಗೊಳಿಸಿದಾಗ ಅದು ಕವಿತೆಯಾಗುತ್ತದೆ ಎಂದು ಸರಳವಾಗಿ ಹೇಳಬಹುದು.

ಡಾ. ಜಿ.ಎಸ್.ಎಸ್ ಅವರು ತಮ್ಮ ‘ಕಾವ್ಯಾರ್ಥ ಚಿಂತನ’ ಎಂಬ ಪ್ರೌಢ ಗ್ರಂಥದಲ್ಲಿ ಕಾವ್ಯದ ಬಗ್ಗೆ  ಹೀಗೆ ಹೇಳುತ್ತಾರೆ; “ಕಾವ್ಯ ಮೂಲತಃ ಒಂದು ಅನುಭವ ವಿಶೇಷ. ಈ ಒಂದು ಅನುಭವ ವಿಶೇಷವೇ ಕಾವ್ಯದ ಮೊದಲೂ ಹೌದು, ತುದಿಯೂ ಹೌದು, ಪ್ರೇರಣೆಯೂ ಹೌದು, ಪ್ರಯೋಜನವೂ ಹೌದು. ಓದುಗನ ಅನುಭವ ವಿಶೇಷವಾಗಿಸಲು ಒದಗಿ ಬರತಕ್ಕವು ಭಾಷೆ, ಛಂದಸ್ಸು ಪ್ರತಿಮೆ ಇತ್ಯಾದಿಗಳು. ಕಾವ್ಯ ಅಭಿವ್ಯಕ್ತಿಸುವುದು ಅನುಭವವನ್ನು ಎನ್ನದೆ ‘ಅನುಭವ ವಿಶೇಷ’ವೆಂದು ಹೇಳುವುದರಲ್ಲಿ ಅರ್ಥವಿದೆ. ಲೋಕದ ಅನುಭವವನ್ನು ಇದ್ದಹಾಗೆ ಹೇಳುವುದಾದರೆ ಅದು ಕಾವ್ಯವಾಗುವುದಿಲ್ಲ; ಅದು ವರದಿಯಾಗುತ್ತದೆ ಅಥವಾ ‘ವಾರ್ತೆ’ಯಾಗುತ್ತದೆ. ಬುದ್ಧಿಯ ಮೂಲಕ ಲೋಕ ವಿಷಯಗಳನ್ನು ಗ್ರಹಿಸಿ, ವಿಶ್ಲೇಷಿಸಿ, ತರ್ಕಬದ್ಧವಾಗಿ ನಿರೂಪಿಸುವ ಕ್ರಮವನ್ನು ಶಾಸ್ತ್ರವೆಂದೂ, ಭಾವದ ಮೂಲಕ ಗ್ರಹಿಸಿ ಅದನ್ನು ಅಭಿವ್ಯಕ್ತಿಸುವ ವಿಷಯ ಕ್ರಮವನ್ನು ಕಾವ್ಯವೆಂದೂ ಪರಿಗಣಿಸಲಾಗಿದೆ”.  ಜಿ ಎಸ್ ಎಸ್ ಅವರ ಈ ಒಂದು ವಿಶ್ಲೇಷಣೆ ಜನಸಾಮಾನ್ಯರಿಗೆ ಕವಿತೆ ಎಂದರೇನು ಎಂಬ ಮೂಲಭೂತವಾದ ಪ್ರಶ್ನೆಗೆ ತಕ್ಕಮಟ್ಟಿಗೆ ವಿವರಣೆ ನೀಡುತ್ತದೆ.

ಒಬ್ಬ ಕವಿಯು ತನ್ನ ಸ್ವಂತ ಅನುಭವಗಳನ್ನು ವಿಶೇಷಗೊಳಿಸಿ, ಭಾವನೆಗಳನ್ನು ಕವನದಲ್ಲಿ ತಂದಾಗ ಅದು ಭಾವನಿಷ್ಠ ಕವಿತೆಯಾಗುತ್ತದೆ. ಇದನ್ನು Subjective Poetry ಎಂದು ಗುರುತಿಸಿಬಹುದು. ಕವಿ ತನ್ನ ಪರಿಸರದಲ್ಲಿ ಸಂಗತಿಸಿದ ಒಂದು ವಿಚಾರವನ್ನು ತೆಗೆದುಕೊಂಡು ಅದರಿಂದ ತನ್ನ ಕಾವ್ಯವನ್ನು ಸೃಷ್ಟಿಸಿದಾಗ ಅದು ವಸ್ತುನಿಷ್ಠ ಕವಿತೆಯಾಗುತ್ತದೆ. ಇದನ್ನು Objective Poetry ಎಂದು ಗುರುತಿಸಬಹುದು. ವಸ್ತುನಿಷ್ಠ ಕವಿತೆಗಳು ಮಹಾಕಾವ್ಯವಾಗಿರಬಹುದು. ನಮ್ಮ ಭಾರತೀಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ಅದು ಪುರಾಣ ಕಥೆಗಳಾಗಿರಬಹುದು. ಪುರಾತನ ಗ್ರೀಕ್ ಹಿನ್ನೆಲೆಯಲ್ಲಿ ಅಲ್ಲಿಯ ಪುರಾಣ ಕಥೆಯಾಗಿರಬಹುದು. ಈ ರೀತಿಯ ಕವನದಲ್ಲಿ ಕವಿಗಿಂತ ಕವಿತೆಯಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಕವಿಯನ್ನು ಮೀರಿ ನಿಲ್ಲಬಹುದು.

ಇಂಗ್ಲೆಂಡಿನಲ್ಲಿ ೧೮ನೇ ಶತಮಾನದ ಆದಿಯಲ್ಲಿ  ವರ್ಡ್ಸ್ ವರ್ತ್ ಅವರ ಗೆಳೆಯ, ಸಮಕಾಲೀನ ಕವಿ ಕೋಲ್ ರಿಡ್ಜ್,   ಒಬ್ಬ ಕವಿಯಲ್ಲಿ ಇರುವ ವಿಶೇಷ ಶಕ್ತಿಯನ್ನು ಹೀಗೆ  ವಿಶ್ಲೇಷಿಸಿದ್ದಾನೆ; ಒಂದು ಕವಿತೆ ಮೂಡಬೇಕಾದರೆ ಒಂದು ಅರಿವಿನ ಮೂಲ ಕಲ್ಪನಾ ಶಕ್ತಿ (Imagination) ಅಗತ್ಯ. ಬಾಹ್ಯ ಜಗತ್ತನ್ನು ಗ್ರಹಿಸಲು ಎಲ್ಲರಿಗೂ ಸಹಜವಾಗಿ ದೊರಕುವ ಆ ಸಾಮರ್ಥ್ಯವನ್ನು ಮೂಲ ಕಲ್ಪನಾ ಶಕ್ತಿ (Primary Imagination) ಎಂದು ಕರೆಯುತ್ತಾನೆ. ನಾವು ದಿನ ನಿತ್ಯ ಸಾಧಾರಣ ಗ್ರಹಿಕೆಯಿಂದ ಪಡೆದುಕೊಂಡ ಅನುಭವವನ್ನು ಕರಗಿಸಿ ಮತ್ತೆ ಕೂಡಿಸಿ ಯಾವುದೂ ಒಂದು ಹೊಸ ಆಕೃತಿಯನ್ನು ನಿರ್ಮಾಣ ಮಾಡುವ ಸಾಮರ್ಥ್ಯ ನಮಗೆ ಒದಗಿರುವುದು ದ್ವಿತೀಯ (ಅಥವಾ ಅದ್ವಿತೀಯ) ಕಲ್ಪನಾ ಶಕ್ತಿ (Secondary Imagination) ಯಿಂದ ಎಂದು ಕೋಲ್ ರಿಡ್ಜ್ ಭಾವಿಸಿದ್ದಾನೆ. ಈ ದ್ವಿತೀಯ ಕಲ್ಪನಾ ಶಕ್ತಿ ಬಹುಶಃ ಕವಿಗಳಿಗಷ್ಟೇ ದಕ್ಕುವ ಸಾಮರ್ಥ್ಯ. ಈ ಒಂದು ಸಾಮರ್ಥ್ಯ ಅವನಿಗೆ ಪ್ರಜ್ಞಾಪೂರ್ವಕವಾಗಿಯೂ ಮತ್ತು ಉಪಪ್ರಜ್ಞೆಯಿಂದ (Sub-conscious) ನಿಲುಕಬಹುದು ಎಂದು ಕೋಲ್ ರಿಡ್ಜ್ ಅಭಿಪ್ರಾಯ ಪಟ್ಟಿದ್ದಾನೆ. ಈ ಒಂದು ಕಲ್ಪನಾ ಶಕ್ತಿಯ ಜೊತೆಗೆ ಕಾವ್ಯಕ್ಕೆ ರೂಪಕಗಳು (Metaphors) ಪ್ರತಿಮೆಗಳು (Images) ಆದಿ ಪ್ರಾಸ (Alliterations) ಎಂಬ ಅಲಂಕಾರಗಳನ್ನು (Fancy) ಪೂರಕವಾಗಿ ಬೆರೆಸಿದಾಗ ಕವಿತೆ ಸುಂದರವಾಗುತ್ತದೆ.

ಮೇಲೆ ತಿಳಿಸಿದ ಹಾಗೆ ಕವಿ ತನ್ನ ಅನುಭವಗಳನ್ನು ವಿಶೇಷಗೊಳಿಸಲು ಮತ್ತು ಕಾವ್ಯಸ್ವರೂಪದಲ್ಲಿ ಅಭಿವ್ಯಕ್ತಗೊಳಿಸಲು ಅವನಲ್ಲಿ ಕವಿಪ್ರತಿಭೆ ಇರಬೇಕು. ಕವಿಯು ಲೋಕದ ಅನುಭವಗಳನ್ನು ಗ್ರಹಿಸಿ ತನ್ನ ಸೃಜನಶೀಲತೆಯಿಂದ ಸಾಧಾರಣ ವಿಚಾರಗಳನ್ನು ವಾಸ್ತವಿಕ ನೆಲೆಯಿಂದ ಭಾವನಾತ್ಮಕ ನೆಲೆಗೆ ಕೊಂಡೊಯ್ಯುತ್ತಾನೆ.  ಬಹಳ ಹಿಂದೆ ಎಲ್ಲ ಸಂಸ್ಕೃತಿಗಳಲ್ಲಿ ಕವಿಯ ಸಾಮರ್ಥ್ಯ ದೈವದತ್ತವಾದದ್ದೆಂದು ಜನರು ನಂಬಿದ್ದರು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಿಂದೆ ಕವಿ ಸರಸ್ವತಿಪುತ್ರನೆಂದು, ಅವನಿಗೆ ಒಂದು ಹಂತದಲ್ಲಿ ಸರಸ್ವತಿಯ ಅನುಗ್ರಹವಾಗಿ ಅವನು ಕವಿಯಾದನೆಂಬ ನಂಬಿಕೆಗಳನ್ನು ಕಟ್ಟುಕಥೆಗಳಲ್ಲಷ್ಟೇ ಕಾಣಬಹುದು.  Art is human and not divine; profane and not sacred ಎಂಬ ವಿಚಾರವನ್ನು ಪಾಶ್ಚಿಮಾತ್ಯ ಸಾಹಿತ್ಯದಲ್ಲಿ ಪ್ರಸ್ತಾಪ ಮಾಡಲಾಗಿದೆ.

ಒಬ್ಬ ಕವಿಯ ಮನಸ್ಸು ಹೇಗಿರಬಹುದು? ಎಂಬ ಕುತೂಹಲಕ್ಕೆ ತಕ್ಕ ಉತ್ತರವನ್ನು  ಕೋಲ್ ರಿಡ್ಜ್ ಕೊಟ್ಟಿರುವ ಶಾಸ್ತ್ರೋಕ್ತ  ವಿವರಣೆಯನ್ನು ಮೇಲೆ ಪ್ರಾಸ್ತಾಪ ಮಾಡಲಾಗಿದೆ. ಭಾವನೆಗಳ ನೆಲೆಯಲ್ಲಿ ಕವಿಯ ಮನಸ್ಸು ಹೇಗಿರಬಹುದು? ಎಂಬುದನ್ನು ಅರ್ಥಮಾಡಿಕೊಳ್ಳಲು ಜಿ. ಎಸ್. ಎಸ್ ಅವರ “ಕವಿಯ ಮನಸು” ಎಂಬ ಕೆಳಗಿನ ಕವಿತೆಯನ್ನು ಗಮನಿಸೋಣ;

ಪ್ರಕೃತಿಯಂತೆ ಕವಿಯ ಮನಸು
ವಿಪುಲರೂಪಧಾರಿಣಿ
ಬ್ರಹ್ಮನೆದೆಯ ಕನಸಿನಂತೆ
ಕೋಟಿಕಲ್ಪಗಾಮಿನಿ
 
ಕಡಲಿನಂತೆ ಕವಿಯ ಮನಸು
ರತ್ನಗರ್ಭರಾಗಿಣಿ
ಯುಗ ಯುಗಗಳ ನಶ್ವರಕೆ
ಅಮೃತಕವಚದಾಯಿನಿ
 
ಬಾನಿನಂತೆ ಕವಿಯ ಮನಸು
ಭಾವಮೇಘಚಾರಿಣಿ
ಬೆಂದ ಭುವಿಯ ಹಸುರಿನೆದೆಗೆ
ರುಚಿರ ವರ್ಷ ರೂಪಿಣಿ

ಒಬ್ಬ ಕವಿಯ ಮನಸು ಪ್ರಕೃತಿಯಂತೆ ಬಹಳ ವೈವಿಧ್ಯವಾದದ್ದು, ಬ್ರಹ್ಮನೆದೆಯ ಕನಸುಗಳಂತೆ ಅಸಂಖ್ಯಾತ ಸಾಧ್ಯತೆಗಳನ್ನು ಉತ್ಪಾದಿಸುವ ಸಾಮರ್ಥ್ಯ ಉಳದ್ದು, ಅನರ್ಘ್ಯ ಚಿಂತನೆ ಮತ್ತು ಮೌಲ್ಯಗಳಿಂದ ತುಂಬಿದ್ದು ಅದನ್ನು ನಶ್ವರ ಗೊಳಿಸದೆ ಕಾಪಾಡುವಂಥದ್ದು ಮತ್ತೆ ಭಾವ ಲೋಕದಲ್ಲಿ ಕವಿಯ ಮನಸು ಮೋಡಗಳಂತೆ ವಿಹರಿಸಿ ಮಳೆಗರೆದು ಬೆಂದ ಹೃದಯಕ್ಕೆ ನೆಮ್ಮದಿ ನೀಡುವ ಹಂಬಲ ಉಳ್ಳದ್ದು ಎಂಬುದು ಕವಿತೆಯ ಇಂಗಿತ. ಇದು ಜಿ. ಎಸ್. ಎಸ್ ಅವರು ತಮ್ಮ ಸಹೃದಯ ಕವಿಗಳಿಗೆ ಕೊಟ್ಟಿರುವ ಅಮೂಲ್ಯವಾದ ನುಡಿನಮನ ಎಂದು ಪರಿಗಣಿಸಬಹುದು.

“ರವಿ ಕಾಣದ್ದನ್ನು ಕವಿ ಕಂಡ” ಎಂಬ ಉಕ್ತಿಯನ್ನು ಎಲ್ಲರೂ ಕೇಳಿದ್ದೇವೆ. ನಮ್ಮ ಆಕಾಶದಲ್ಲಿ ತೇಲಿಹೋಗುವ ಮೋಡಗಳನ್ನು ನಾವೆಲ್ಲ ಗಮನಿಸಿದ್ದು ಅದರಲ್ಲಿ ಯಾವ ವಿಶೇಷತೆಯನ್ನು ನಾವು ಕಾಣದೆ ಹೋಗಬಹುದು. ಇವತ್ತು ಮೋಡವಾಗಿದೆ ಮಳೆ ಬರಬಹುದು ಅಥವಾ ಇವತ್ತಿನ ಆಕಾಶದಲ್ಲಿ ತಿಳಿಮೋಡವಿದೆ ಛತ್ರಿಯ ಅಗತ್ಯವಿಲ್ಲ ಎಂಬ ಈ ಆಲೋಚನೆಗಳು ನಮಗೆ ಮೂಡಿದರೆ, ಕವಿ ಜಿ. ಎಸ್. ಎಸ್ ಅವರ ಮನಸ್ಸು ಗ್ರಹಿಸುವುದು ಹೀಗೆ;

ಮೋಡಗಳೇ ಮೋಡಗಳೇ
ಋತು ಋತುವಿಗೂ ಬಹು ರೂಪದಿ ಚಲಿಸುವ 
ನೆಲಮುಗಿಲಿನ ಸಂತಾನಗಳೇ
 
ಬೆಂದ ನೆಲಕೆ ತಂಪೆರೆಯುವ
ಮನಸಿನ ಉದಾರ ಕರುಣೆಯ ಕನಸುಗಳೆ
ಆಷಾಢ ಆಕಾಶದ ಪಾತ್ರಾದಿ
ಹರಿವ ಕಲ್ಪನೆಯ ಹೊನಲುಗಳೆ
 
ಶಾರದಾ ನೀರದ ಶಿಲ್ಪಾಕೃತಿಗಳ
ಬಾನೊಳು ರಚಿಸುವ ಪ್ರತಿಭೆಗಳೆ
ಗುಡುಗು ಮಿಂಚುಗಳ ರಮ್ಯಾದ್ಭುತದಲಿ
ತಲ್ಲಣಗೊಳಿಸುವ ಸಂಚುಗಳೆ
 
ಗಡ ಮೀರದೆ ಹೊಯ್ದಾಡುವ ಕಡಲಿನ
ಬಿಡುಗಡೆಯಾಸೆಯ ರೂಪಗಳೆ
ಎಂದಿನಿಂದಲೂ ಬೆರಗು ಹುಟ್ಟಿಸುತ 
ತೇಲುವ ನೀರಿನ ತೇರುಗಳೆ

ಇಲ್ಲಿ ಮೋಡಗಳು ನೆಲ-ಮುಗಿಲಿನ ಸಂತಾನಗಳಾಗುತ್ತವೆ, ಕರುಣೆಯ ಕನಸುಗಳಾಗುತ್ತವೆ, ಕಲ್ಪನೆಯ ಹೊನಲಾಗುತ್ತವೆ, ಕಲಾಕೃತಿಗಳನ್ನು ರಚಿಸುವ ಪ್ರತಿಭೆಗಳಾಗುತ್ತವೆ, ತೇಲುವ ನೀರಿನ ತೇರುಗಳಾಗುತ್ತವೆ. ಇಲ್ಲಿ ಬರುವ ಪ್ರತಿಮೆಗಳು ಬಹಳ ಉತ್ಕೃಷ್ಟವಾಗಿವೆ.

ಕುವೆಂಪು ಅವರ “ಬಾ ಫಾಲ್ಗುಣ ರವಿ ದರ್ಶನಕೆ” ಎಂಬ ಕವಿತೆಯಲ್ಲಿ ಮಲೆನಾಡಿನಲ್ಲಿ ಸಂಭವಿಸುವ ಸೂರ್ಯೋದಯದ ಸೊಬಗನ್ನು ವೀಕ್ಷಿಸಲು “ಶಿವ ಮಂದಿರ ಸಮ ವನಸುಂದರ ಸುಮ ಶೃಂಗಾರದ ಗಿರಿ ಶೃಂಗಕೆ ಬಾ” ಎಂದು ಓದುಗನಿಗೆ ಆಹ್ವಾನ ನೀಡುತ್ತಾರೆ. ಅಲ್ಲಿ ಸೂರ್ಯ ಕುಂಕುಮ ಧೂಳಿಯ ಓಕುಳಿಯಲ್ಲಿ ಮಿಂದೇಳುವುದನ್ನು, ಚಿನ್ನದ ಚೆಂಡಾಗುವುದನ್ನು ಕವಿ ವರ್ಣಿಸುತ್ತಾರೆ.  ಇವೆಲ್ಲಾ ನಡೆಯುವುದು ಮಲೆನಾಡಿನ ಬನಸಿರಿ ತುಂಬಿದ ಕಣಿವೆಯಲ್ಲಿ! ಈ ಒಂದು ಸುಂದರ ಚಿತ್ರಣ, ಈ ಒಂದು ಕವಿಸಮಯದಲ್ಲಿ, ಕವಿಗೆ ಸ್ಪೂರ್ತಿ ನೀಡುತ್ತದೆ.  ಕವಿಗೆ ತನ್ನ ಬದುಕಿನ ಅಧ್ಯಾತ್ಮವು, ತಾನು ಅರಿತ ಸಕಲ ಆರಾಧನೆ, ಸಾಧನೆ, ಬೋಧನೆ, ತಾನು ಕಂಡ ಅನುಭವರಸ ಅಲ್ಲಿ ದೊರೆಯುತ್ತದೆ.  ಪ್ರತಿಭೆಯ ಹೋಮಾಗ್ನಿಯ ಮೇಲೆ ಕವಿ ಮನಸ್ಸು ಉರಿದೇಳುತ್ತದೆ.  ಈ ಕ್ಷಣದಲ್ಲಿ ಮರಗಿಡದಲ್ಲಿರುವ ಜಡತೆ ಕಳೆದು ಅದರ ಒಡಲಲ್ಲಿ ಭಾವಜ್ವಾಲೆ ಸ್ಪಂದಿಸಲು ಮೊದಲುಗೊಳ್ಳುತ್ತದೆ. ಕವಿ ಸೌಂದರ್ಯ ಸಮಾಧಿ ಸ್ಥಿತಿಯಲ್ಲಿ ತನ್ನನು ತಾನೇ ಮರೆತು ಬಿಡುತ್ತಾನೆ. ಈ ರಸ ಘಳಿಗೆ ಅವನಿಗೆ ಸರ್ವಾತ್ಮನ ಸನ್ನಿಧಿಯಾಗುತ್ತದೆ. ಈ ಒಂದು ಸುಂದರ ಸನ್ನಿವೇಶದಲ್ಲಿ ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆಹರಿಸಿ ರವಿ ದಯಮಾಡುವನು! ಈ ಒಂದು ಕವಿತೆ ಒಂದು ವಸ್ತುನಿಷ್ಠ ಸೂರ್ಯೋದಯದಿಂದ ಶುರುವಾಗಿ ಭಾವನಿಷ್ಠ ಪರಾಕಾಷ್ಠತೆಯನ್ನು ತಲುಪುತ್ತದೆ. ಇಲ್ಲಿ ಗಂಟೆ ಘೋಷಣೆಯ ಸದ್ದು ಗದ್ದಲವಿಲ್ಲದೆ ನಡೆಯುವಂತಹ ಪ್ರಕೃತಿಯ ಪೂಜೆಯ ಚಿತ್ರಣ ಬಹಳ ಉತ್ಕೃಷ್ಟವಾದದ್ದು ಎನ್ನಬಹುದು. ಕುವೆಂಪು ಅವರ ಈ ರಚನೆ ಕನ್ನಡದ ಶ್ರೇಷ್ಠ ಕವಿತೆಗಳ ಸಾಲಿನಲ್ಲಿ ಎದ್ದು ನಿಲ್ಲುವ ಕವನ. ಈ ಕವಿತೆಯನ್ನು “ನವಿಲುಕಲ್ಲು” ಎಂಬ ಶಿಖರಸ್ಥಾನದಲ್ಲಿ ಉಷಃಕಾಲದಲ್ಲಿ ನಿಂತು ದೊರೆಕಿಸಿಕೊಂಡ ದರ್ಶನ ಎಂದು ಸ್ವತಃ ಕುವೆಂಪು ಅವರು ಸೂಚಿಸಿದ್ದಾರೆ. ಈ ಕವಿತೆಯನ್ನು ಕೆಳಗೆ ಒದಗಿಸಲಾಗಿದೆ.

ಶಿವಮಂದಿರ ಸಮ  ವನಸುಂದರ ಸುಮ ಶೃಂಗಾರದ ಗಿರಿ ಶೃಂಗಕೆ ಬಾ;
ಬಾ ಫಾಲ್ಗುಣ ರವಿ ದರ್ಶನಕೆ
 
ಕುಂಕುಮ ಧೂಳಿಯ ದಿಕ್ತಟ ವೇದಿಯೊಳೋಕುಳಿಯಲಿ ಮಿಂದೇಳುವನು;
ಕೋಟಿ ವಿಹಂಗಮ ಮಂಗಲರವ ರಸ ನೈವೇದ್ಯಕೆ ಮುದ ತಾಳುವನು;
ಚಿನ್ನದ ಚಂಡನೆ ಮೂಡುವನು; ಹೊನ್ನನೆ ಹೊಯ್ ನೀರ್ ನೀಡುವನು
ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆ ಹರಿಯಿಸಿ ರವಿ ದಯಮಾಡುವನು!
 
ತೆರೆತೆರೆಯಾಗಿಹ ನೊರೆ ನೊರೆ ಕಡಲನೆ ನೋಡುವ ಕಣ್ಣೋಡುವವರೆಗೆ
ಬನಸಿರಿ ತುಂಬಿದ ಕಣಿವೆಯ ಹಂಬಿರೆ ಧೂಳಿ ಸಮಹಿಮಾ ಬಾನ್ ಕರೆಗೆ
ಪ್ರತಿಭೆಯ ಹೋಮಾಗ್ನಿಯ ಮೇಲೆ ಕವಿಮನ ತಾನುರಿದುರಿದೇಳೆ
ಮರಗಿಡದಲಿ ಜಡದೊಡದಲಿ ಇದೆಕೋ ಸ್ಪಂದಿಸುತಿದೆ ಭಾವಜ್ವಾಲೆ!
 
ವರ್ಣನದಿಂದ್ರಿಯ ನಂದನವನು ದಾಂಟುತೆ ದರ್ಶನ ಮುಕ್ತಿಯು ಸೇರಿ
ವ್ಯಕ್ತಿತೆ ಮೈಮರೆವುದು ಸೌಂದರ್ಯ ಸಮಾಧಿಯೊಳಾನಂದವ ಹೀರಿ:
ಸರ್ವೇ೦ದ್ರಿಯ ಸುಖನಿಧಿ ಅಲ್ಲಿ; ಸರ್ವಾತ್ಮನ ಸನ್ನಿಧಿ ಅಲ್ಲಿ;
ಸಕಲಾರಾಧನ ಸಾಧನ ಬೋಧನದನುಭಾವರಸ ತಾನಹುದಲ್ಲಿ!

ಹಿಂದೆ ತಿಳಿಸಿದ ಅಲಂಕಾರ (Fancy) ಒಂದು ಕವಿತೆಯನ್ನು ಹೇಗೆ ಶ್ರೀಮಂತ ಗೊಳಿಸುವುದು ಎನ್ನುವುದಕ್ಕೆ ಮೇಲಿನ ಕುವೆಂಪು  ಅವರ ಕವನ ಸಾಕ್ಷಿಯಾಗಿದೆ. ಇಡೀ ಒಂದು ಕವಿತೆ ಒಂದು ಸೂರ್ಯೋದಯದ ಪ್ರತಿಮೆಯ (Image) ಕುರಿತಾಗಿದೆ. ಅದಕ್ಕೆ ವೈದೃಶ್ಯವಾಗಿ ಒಂದೇ ಕವಿತೆಯಲ್ಲಿ ಹಲವಾರು ಪ್ರತಿಮೆಗಳಿರಲು ಸಾಧ್ಯ.ನಾನೇ ರಚಿಸಿರುವ “ಒಂದು ಹಳೆಯ ಸವಿನೆನಪು” ಎಂಬ ಕವಿತೆಯ ಕೆಲವು ಸಾಲುಗಳನ್ನು ನಿದರ್ಶನಕ್ಕೆಂದು ಇಲ್ಲಿ ನಿಮ್ಮ ಗಮನಕ್ಕೆ ತಂದಿದ್ದೇನೆ.

ಮನೆ ಹಿತ್ತಲಿನಲ್ಲಿ ತಿಂಗಳ ಬೆಳಕಿನ ಹೊಳೆ ಹರಿದಿತ್ತು
ಚಾಮರ ಬೀಸುವ ತೆಂಗಿನ ಗರಿಗಳ ನಡುವೆ
ಸರಸ ಸಂಭಾಷಣೆ ನಡೆದಿತ್ತು
ಹುಣ್ಣಿಮೆ ಚಂದಿರ ಬೆಳ್ಳಿಯ ಬಾನಲಿ ತೇಲಿತ್ತು
ಮೋಡದ ಮೆರವಣಿಗೆಯು ಸಾಗಿತ್ತು
 
ಅಪ್ಪನ ಕವಿಮನ ಮುಗಿಯದ ಕವನಕೆ
ಪದಗಳ ಹುಡುಕಲು ಹೊರಟಿತ್ತು
ಹರಡಿದ ಲಂಗದ ಮಧ್ಯದಿ ಕುಳಿತ
ಅಕ್ಕನ ಹಾಡಿನ ಇಂಪಿತ್ತು
 
ಸೋರುವ ನಲ್ಲಿಯ ತಟಪಟ ಶಬ್ದವು
ರಾಗಕೆ ತಾಳವ ಹಿಡಿದಿತ್ತು
ಹಿತ್ತಲ ಗಿಡದಲಿ ಅರಳಿದ ಹೂಗಳ ಕಂಪಿತ್ತು
ತಂಗಾಳಿಯು ಮೆಲ್ಲಗೆ ಸುಳಿದಿತ್ತು
 
ಬಾವಿಲಿ ಇಣುಕುವ ಅಣ್ಣನ ಚೇಷ್ಟೆಯು
ಅಮ್ಮನಿಗಾಬರಿಗಿಟ್ಟಿತ್ತು ದನಿ ಏರಿತ್ತು!

ಈ ಒಂದು ಕವನವನ್ನು ಹಿಂದೆ ನಾನು ಒಂದು ಕಾರ್ಯಕ್ರಮದಲ್ಲಿ ಪ್ರಸ್ತುತಿ ಪಡಿಸಿದಾಗ ಅಲ್ಲಿ ಆಗಮಿಸಿದ್ದ ಯು. ಆರ್. ಅನಂತಮೂರ್ತಿ ಅವರು ನನ್ನನ್ನು ಕರೆದು ನನ್ನ ಈ ಒಂದು ಕವಿತೆಯಲ್ಲಿ ಹಲವಾರು ಸುಂದರ ಇಮೇಜಸ್ ಇದೆಯೆಂದು ಅಭಿನಂದಿಸಿದರು. ನನ್ನ ಈ ಒಂದು ಕವಿತೆಯಲ್ಲಿ ಮನೆ ಹಿತ್ತಲು, ತೆಂಗಿನ ಮರ, ಬೆಳದಿಂಗಳು, ತಿಳಿಗಾಳಿ, ಕವಿತೆಗೆ ಪದಗಳನ್ನು ಹುಡುಕಿಕೊಂಡು ಹೊರಟ ಅಪ್ಪನ ಕವಿ ಮನಸ್ಸು, ಹಾಡುತ್ತಿರುವ ಅಕ್ಕ, ಅವಳ ಹರಡಿರುವ ಲಂಗ, ಸೋರುತ್ತಿರುವ ನಲ್ಲಿ, ಹೊಗಳ ಕಂಪು, ಅಣ್ಣನ ಚೇಷ್ಟೆ, ಅಮ್ಮನ ಗಾಬರಿ ಹೀಗೆ ಹತ್ತಾರು ಚಿತ್ತಾರಗಳಿವೆ.

ಸೂಕ್ಷ್ಮ ಸಂವೇದನೆ ಉಳ್ಳ ಕವಿಗೆ ಜಗತ್ತಿನ ವಿಸ್ಮಯಗಳು ಬಹಳ ಪ್ರಸ್ತುತವಾಗುತ್ತದೆ. ಈ ವಿಚಾರವನ್ನು ಜಿ.ಎಸ್. ಎಸ್. ತಮ್ಮ ಕಾವ್ಯಾರ್ಥ ಚಿಂತನೆಯಲ್ಲಿ ಹೀಗೆ ಹೇಳುತ್ತಾರೆ; ಎಳೆಯಂದಿನಲ್ಲಿ ನಾವು ಕಾಣುತ್ತಿದ್ದ ವಿಸ್ಮಯ ಬರು ಬರುತ್ತಾ ದೈನಂದಿನ ಚಿರಪರಿಚಿತ ಸಾಧಾರಣತೆಯಲ್ಲಿ ಲಯವಾಗಿ ಹೋಗುತ್ತದೆ. ಅನಂತರ ನಾವು ವಿಸ್ಮಯಗಳನ್ನು ಬೇರೆ ಬೇರೆ ಕಡೆಯಲ್ಲಿ ಹುಡುಕಲು ತೊಡಗುತ್ತೇವೆ. ಹರಿಯುವ ನೀರು ವಿಸ್ಮಯ, ಅದು ಮೇಲೇರಿ ಆಕಾಶದಲ್ಲಿ ಮೋಡವಾಗುವುದು ವಿಸ್ಮಯ, ಗಿಡದಲ್ಲಿ ಬೆಳಗಾದಾಗ ಬಣ್ಣ ಬಣ್ಣದ ಹೂ ಅರಳಿ ಕಣ್ಣನ್ನು ಸೆಳೆಯುವುದು ವಿಸ್ಮಯ. ಯಾರನ್ನು ಕವಿ ಅಥವಾ ಕಲಾವಿದ ಎಂದು ಕರೆಯುತ್ತೇವೂ ಅವರು ಉದ್ದಕ್ಕೂ ಈ ವಿಸ್ಮಯವನ್ನು ಉಳಿಸಿಕೊಂಡು ಬಂದವರಾಗಿರುತ್ತಾರೆ. ವಿಸ್ಮಯವನ್ನು ಕಾಣುವ ಕಟ್ಟುವ ಸಾಮರ್ಥ್ಯವನ್ನು ಬೆಳಸಿಕೊಂಡಿರುತ್ತಾರೆ.” ಈ ವಿಸ್ಮಯ ಅಂಶ ಕವಿತೆಯಲ್ಲಿ ಹೇಗೆ ಮೂಡಿದೆ ಎಂಬುದನ್ನು ಅವರದೇ ಆದ “ಮಲ್ಲಿಗೆ” ಎಂಬ ಪದ್ಯದ ಆಯ್ದ ಸಾಲುಗಳಲ್ಲಿ ಕಾಣಬಹುದು;

ನೋಡು ಇದೊ ಇಲ್ಲರಳಿ ನಗುತಿದೆ
ಏಳು ಸುತ್ತಿನ ಮಲ್ಲಿಗೆ.
ಇಷ್ಟು ಹಚ್ಚನೆ ಹಸುರ ಗಿಡದಿಂ
ದೆಂತು ಮೂಡಿತು ಬೆಳ್ಳಗೆ!
 
ಕವಿಯ ಮನದಿಂದುದಿಸಿ ಮೆಲ್ಲನೆ
ಅರಳಿ ಬರುವೊಲು ಕಲ್ಪನೆ
ಎಂಥ ನವುರಿನ ಕುಶಲ ಕಲೆಯಿದು
ತನಗೆ ತಾನೇ ಮೂಡಿದೆ!

ಮೇಲಿನ ಕವಿತೆಯ ಸಾಲಿನಲ್ಲಿ ಕಾಣುವ ಆ ವಿಸ್ಮಯ ಅಚ್ಚರಿಗಳಲ್ಲದೆ ಅಲ್ಲಿ ಉಪಮೆ ಕೂಡ ಇದೆ. ಕವಿಯ ಮನಸ್ಸಿನಿಂದ ಉದಿಸುವ ಕಾವ್ಯ ಕಲ್ಪನೆಗೂ ಮತ್ತು ಹಸುರು ಗಿಡದಿಂದ ಮೂಡುವ ಬಿಳಿ ಮಲ್ಲಿಗೆಗೂ ಇರುವ ಸಾದೃಶ್ಯವನ್ನು ಕವಿ ನೋಡುತ್ತಾರೆ. ಒಂದು ಕವಿತೆಯಲ್ಲಿನ ರೂಪಕಕ್ಕೆ (Meatphor) ಒಂದು ಮಾಂತ್ರಿಕ ಶಕ್ತಿ ಇದೆ.  ಕಾವ್ಯದಲ್ಲಿನ ರೂಪಕವು ಹಲವಾರು ಸಾಧ್ಯತೆಗಳನ್ನು ತೆರೆದಿಡುತ್ತದೆ. ಓದುಗರು ತಮ್ಮ ಜೀವನದ ಅನುಭವಕ್ಕೆ ತಕ್ಕಂತೆ ಅದನ್ನು ಗ್ರಹಿಸುತ್ತಾ ಹೊದಂತೆ ಕವನಕ್ಕೆ ಬೇರೆ ಬೇರೆ ಅರ್ಥಗಳು ಹುಟ್ಟಿಕೊಂಡು ಕವಿತೆ ಇನ್ನು ಸಮೃದ್ಧಿಗೊಳ್ಳುತ್ತದೆ. “ಕಾಣದ ಕಡಲಿಗೆ ಹಂಬಲಿಸಿದೆ ಮನ” ಕವಿತೆಯಲ್ಲಿ ಕವಿ ತನ್ನ ಅಧ್ಯಾತ್ಮ ತೃಷೆಯನ್ನು ತೋಡಿಕೊಳ್ಳುವ ಉದ್ದೇಶದಿಂದ ರಚಿಸಿದ್ದರೆ ಅಲ್ಲಿ ಕಾಣದ ಕಡಲಿಗೆ ಸೇರುವ ತೊರೆ ಗುರು ಶಿಷ್ಯರ ಸಂಬಂಧದ ಪ್ರತೀಕವಾಗಿರಬಹುದು, ಅಲ್ಲಿ ಪ್ರಿಯತಮೆಯ ಕಾತರತೆ ಇರಬಹುದು. ಈ ರೂಪಕಗಳ ಬಳಕೆಯ ಸಾಮರ್ಥ್ಯದ ಬಗ್ಗೆ ಯಾರ್ಕ್ ಶೈರ್ ಕವಿ ಹರ್ಬರ್ಟ್ ರೀಡ್ ಹೇಗೆ ಹೇಳಿದ್ದಾನೆ; “ಒಬ್ಬ ನಿಜವಾದ ಕವಿಯ ಸಾಮರ್ಥ್ಯವನ್ನು ಅಳೆಯಬೇಕಾದದ್ದು ಅವನು ಪ್ರಯೋಗಿಸುವ ರೂಪಕಗಳ ಸ್ವಂತಿಕೆ ಹಾಗು ಶಕ್ತಿಯ ಮೇಲೆ”.    

ಒಂದು ಕವಿತೆ ಯಾವಾಗ ಭಾವಗೀತೆಯಾಗಬಹುದು? ಎಂಬ ಪ್ರಶ್ನೆ ಉದ್ಭವಿಸಿದಾಗ ಯಾವ ಕವಿತೆಯಲ್ಲಿ ವಸ್ತುನಿಷ್ಠೆಗಿಂತ ಭಾವನಿಷ್ಠೆ ಎದ್ದು ತೋರುತ್ತದೆಯೋ ಅದು ಭಾವಗೀತೆಯಾಗಬಲ್ಲುದು ಎನ್ನುತ್ತಾರೆ ಡಾ. ಪ್ರಭುಶಂಕರ್. ‘ಕನ್ನಡದಲ್ಲಿ ಭಾವಗೀತೆ’ ಎಂಬ ತಮ್ಮಗ್ರಂಥದಲ್ಲಿ ಭಾವಗೀತೆಗಳ ಬಗ್ಗೆ ಸವಿವರವಾಗಿ ತಿಳಿಸಿದ್ದಾರೆ. ಈ ಒಂದು ವಿಚಾರವನ್ನು ಮುಂದಕ್ಕೆ ವಿಸ್ತರಿಸಲು ಡಾ. ಪ್ರಭುಶಂಕರ್ ಅವರು ತಮ್ಮ ಆಪ್ತಮಿತ್ರರಾದ ಜಿ.ಎಸ್.ಎಸ್ ಅವರ “ಹೂಬಳ್ಳಿ” ಎಂಬ ಕವನವನ್ನು ವಿಶ್ಲೇಷಿಸಿದ್ದಾರೆ. ಆ ಕವನದ ಕೆಲವು ಸಾಲುಗಳು ಹೀಗಿವೆ;

ಯಾರೂ ತುಳಿಯದ ಹಾದಿಯ ಬದಿಯಲಿ
ಮೌನದೊಳಿರುವಳು ಈ ಚಲುವೆ
ಪ್ರಕೃತಿಯ ಸುಂದರ ಹಂದರದಲ್ಲಿ
ವಧುವಾಗಿರುವಳು ಈ ಮುಗುದೆ 
 
ಹಕ್ಕಿಯ ಇನಿದನಿಯುಂಡವಳು
ಸಗ್ಗದ ಕಂಬನಿ ಕುಡಿದವಳು
ಹೊಂಗಿರಣದ ಮೃದು ಚುಂಬನದಲ್ಲಿ
ತುಟಿಯನು ಅರಳಿಸಲರಿತವಳು
 
ಮೃದು ಗಾಳಿಯ ಮರ್ಮರ ನಾದದಲಿ
ಬಳುಕುತ ಲಾಸ್ಯವನಾಡುವಳು
ದೂರದ ದುಂಬಿಯ ಗುಂಜಾರವವನು
ಮೆಲ್ಲಗೆ ತನ್ನೆಡೆ ಸೆಳೆದವಳು

ಯಾರೂ ತುಳಿಯದ ಹಾದಿಯ ಬಳಿ ಇದ್ದ ಒಂದು ಹೂಬಳ್ಳಿ ಕವನದ ವಸ್ತುವಾಗಿ ಅಥವಾ ವಸ್ತುನಿಷ್ಠೆಯಾಗಿ ಓದುಗರ ಗಮನವನ್ನು ಸೆಳೆಯುತ್ತದೆ. ಅದನ್ನು ಪ್ರಕೃತಿಯ ಹಂದರದಲ್ಲಿ ಮುಗುದೆಯಾಗಿ ಕಾಣುವ ಕವಿ, ತನ್ನ ಕಾವ್ಯಪ್ರಜ್ಞೆಯಿಂದ ವಸ್ತುವಿಗೆ ಜೀವವನ್ನು ತುಂಬುತ್ತಾನೆ. ಮುಂದಿನ ಸಾಲುಗಳಲ್ಲಿ ಹೂಬಳ್ಳಿ ಚಲುವೆಯಾಗಿ ತನ್ನ ಸುತ್ತಣ ಹಕ್ಕಿಯ ಇಂಚರಕ್ಕೆ, ಹೊಂಗಿರಣಕ್ಕೆ ಸ್ಪಂದಿಸುವುದನ್ನು, ಮೃದು ಗಾಳಿಯ ಮರ್ಮರದಲ್ಲಿ ಲಾಸ್ಯವಾಡುವುದನ್ನು ಕಾಣಬಹುದು. ಈ ಕವನ ವಸ್ತುನಿಷ್ಠೆಯಿಂದ ಹಿಡಿದ ಮಾರ್ಗವನ್ನು ಬಿಟ್ಟು ಭಾವನಿಷ್ಠೆಯ ಜಾಡಿನಲ್ಲಿ ಸಾಗುತ್ತದೆ. ಇದು ಭಾವಗೀತೆಯ ಮುಖ್ಯ ಲಕ್ಷಣ. ಹೊರಜಗತ್ತಿನ ರೀತಿ ನಿಯಮಾವಳಿಗಳನ್ನು ಮೀರಿ ಕವಿಯ ಹೃದಯದಿಂದ ಮೂಡುವ ಭಾವನೆಯುಳ್ಳ ಕವಿತೆ ಭಾವಗೀತೆಯಾಗುತ್ತದೆ. ಸಾಮಾನ್ಯವಾಗಿ ಮೇಲ್ನೋಟಕ್ಕೆ ಸರಳವೆನಿಸಿದರೂ ಕೆಲವು ಭಾವಗೀತೆಗಳು ಗಂಭೀರವಾಗಿ, ಆಳವಾಗಿರುತ್ತವೆ. ಭಾವಗೀತೆಗಳು ತಮ್ಮ ಲಯ, ಪ್ರಾಸ, ಮತ್ತು ಛಂದಸ್ಸಿನಿಂದ ಸಂಗೀತಕ್ಕೆ ಸುಲಭವಾಗಿ ಹೊಂದಿಕೊಂಡು ಹೋಗುತ್ತವೆ. ಭಾವಗೀತೆಗಳನ್ನು ಸಂಗೀತಕ್ಕೆಂದೇ ಬರೆಯುವ ಗೀತೆಗಳಿಗಿಂತ ಸಂಗೀತಕ್ಕೆ ಒದಗುವ ಗೀತೆಗಳು ಎನ್ನಬಹುದು. ಸಂಗೀತಕ್ಕಾಗಿಯೇ ಬರೆದ ಚಿತ್ರಗೀತೆಗಳನ್ನು ಚಿತ್ರಗೀತೆಗಳೆಂದು ಮತ್ತು ಅದರ ಕರ್ತೃವನ್ನು ಕವಿ ಎಂದು ಕರೆಯದೆ ಗೀತರಚನಾಕಾರರೆಂದು ಕರೆಯುವುದು ವಾಡಿಕೆಯಾಗಿದೆ. ಹಾಗೆ ನೋಡಿದರೆ ಚಿತ್ರಗೀತೆಯಲ್ಲೂ ಭಾವಗೀತೆಯಾಗುವ ಗುಣಮಟ್ಟ ಮತ್ತು ಲಕ್ಷಣಗಳಿವೆ.   

ಭಾವಗೀತೆಯ ಸಂಪ್ರದಾಯವನ್ನು ನಾವು ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಸಾಹಿತ್ಯದಲ್ಲಿ ಕಾಣಬಹುದು. ಬಹಳ ಹಿಂದೆ ಗ್ರೀಕ್ ಸಂಸ್ಕೃತಿಯಲ್ಲಿ ಕಂಡ ಈ ಒಂದು ಪರಂಪರೆ ಸುಮಾರು ೧೩ರನೇ ಶತಮಾನದಲ್ಲಿ ಇಟಾಲಿಯನ್ ಸಾಹಿತ್ಯದಲ್ಲಿ ೧೪ ಸಾಲುಗಳ ಕವನಗಳಾಗಿ ಸಾನೆಟ್ ಎಂದು ಗುರುತಿಸಲಾಯಿತು. ಇದು ೧೬ನೇ ಶತಮಾನದಲ್ಲಿ ಇಂಗ್ಲೆಂಡ್ ತಲುಪಿ ಇಲ್ಲಿ ಶೇಕ್ಸ್ ಪಿಯರ್ ಮತ್ತು ವರ್ಡ್ಸ್ ವರ್ತ್ ರಂತ ಕವಿಗಳು ಅದನ್ನು ಎತ್ತರಕ್ಕೆ ಬೆಳೆಸಿದರು. ಭಾವಗೀತೆಯ ಇನ್ನೊಂದು ಪ್ರಕಾರವನ್ನು ಓಡ್ (Ode) ಎಂದು ಗುರುತಿಸಬಹುದು. ಇದು ಹುಟ್ಟಿದ್ದು ಗ್ರೀಕ್ ಸಂಸ್ಕೃತಿಯಲ್ಲಿ. ಈ ಕವನಗಳಲ್ಲಿ ಒಂದು ಸಮುದಾಯದ, ಒಂದು ನೆಲದ ಅಥವಾ ಒಬ್ಬ ವ್ಯಕ್ತಿಯ ಗುಣಗಾನ ಮಾಡಲು ಬಳಸಲಾಗಿತ್ತು. ಈ ಹಿನ್ನೆಲೆಯಲ್ಲಿ ಒಂದು ರಾಷ್ಟ್ರಗೀತೆಯನ್ನು ಓಡ್ ಎಂದು ಕರೆದರೆ ಬಹುಶಃ ತಪ್ಪಾಗಲಾರದು. ಭಾವಗೀತೆಯ ಇನ್ನೊಂದು ಪ್ರಕಾರವೆಂದರೆ ಲಿರಿಕಲ್ ಗೀತೆಗಳು (Lyrical Poetry) ಸಾಮಾನ್ಯವಾಗಿ ಪಕ್ಕವಾದ್ಯದೊಂದಿಗೆ ಹಾಡಬಹುದಾದ ಕವಿತೆಯನ್ನು ಲಿರಿಕಲ್ ಕವಿತೆಗಳೆಂದು ಶುರುವಿನಲ್ಲಿ ಗುರುತಿಸಲಾಯಿತು. ೧೯ನೇ ಶತಮಾನದಲ್ಲಿ ಬರೆದ ಲಿರಿಕಲ್ ಗೀತೆಗಳು ರೋಮ್ಯಾಂಟಿಕ್ ಲಿರಿಕಲ್ ಗೀತೆಗಳೆಂದು ಹೆಸರುವಾಸಿಯಾದವು. ಆ ಸಮಯದಲ್ಲಿ ಸಂಭವಿಸಿದ ಸಾಹಿತ್ಯದ ಹೊಸ ಅಲೆ (Literary Renaissance) ಯೂರೋಪಿನ ಸಾಹಿತ್ಯದ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎನ್ನಬಹುದು. ಲಿರಿಕಲ್ ಗೀತೆಗಳಲ್ಲಿ ಭಾಷೆ ಸುಮಧುರವಾಗಿದ್ದು ೨೦ನೇ ಶತಮಾನದ ಇಂಗ್ಲಿಷ್ ಕವಿ ಟಿ. ಎಸ್. ಎಲಿಯಟ್ ಈ ಗೀತೆಯ ಶೈಲಿಯನ್ನು ತಿರಸ್ಕರಿಸಿದನೆಂಬ ಸಂಗತಿ ಸ್ವಾರಸ್ಯಕರವಾಗಿದೆ. ಇಡಿಲ್ (Idle) ಎಂಬ ಭಾವಗೀತೆಯ ಪ್ರಕಾರದಲ್ಲಿ ಹಳ್ಳಿಯ ಜೀವನದ ಚಿತ್ರಗಳಿದ್ದು ಅದನ್ನು ಆಡುಭಾಷೆಯಲ್ಲಿ ಬರೆಯುವುದು ಸಾಮಾನ್ಯವಾಗಿತ್ತು. ವರ್ಡ್ಸ್ ವರ್ತ್ ಬರೆದ ‘ಸಾಲಿಟರಿ ರೀಪರ್’ (Solitary Reaper) ಎಂಬ ಜನಪ್ರಿಯ ಕವಿತೆ ಈ ಪ್ರಕಾರಕ್ಕೆ ಸೇರಿರುವ ಕವಿತೆಯೆಂದು ಗುರುತಿಸಲಾಗಿದೆ. ಈ ಕವಿತೆಯನ್ನು ಕುವೆಂಪು ಅವರು ಅನುವಾದಗೊಳಿಸಿದ್ದಾರೆ. ಅದರ ಒಂದೆರಡು ಪಂಕ್ತಿಯನ್ನು ಇಲ್ಲಿ ಒದಗಿಸಲಾಗಿದೆ;

ಹೊಲದೊಳಗೊಬ್ಬಳು ಹಳದಿಯ ಪಯಿರನು
ಕೊಯ್ಯುವ ಬಾಲೆಯ ನೋಡಲ್ಲಿ
ತನ್ನೊಳು ತಾನೇ ಹಾಡುತ ನಲಿವಳು
ಮೆಲ್ಲಡಿಯಿಡು ಬಾ ನಿಲ್ಲಿಲ್ಲಿ   
 
ಒಬ್ಬಳೇ ಕೊಯ್ವಳು ಹೊರೆಯನು ಮಾಡಿ
ಎದೆಯನು ಸೆಳೆಯುವ ಹಾಡನು ಹಾಡಿ
ಆಲಿಸು ಸದ್ದಲ್ಲಿ ಕಣಿವೆಯ ಪೆ೦ಪು
ಹೆಚ್ಚಲು ಹರಿವುದು ಗಾಣದ ಇಂಪು   

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕೃತ ಶ್ಲೋಕ, ಉಪನಿಷತ್ ಮತ್ತು ಭಗವದ್ಗೀತೆಯಲ್ಲಿ ಭಾವಗೀತೆಯ ಅಂಶವನ್ನು ಕಾಣಬಹುದು. ನಮ್ಮ ಕನ್ನಡ ಸಾಹಿತ್ಯದಲ್ಲಿ, ೧೨ನೇ ಶತಮಾನದಲ್ಲಿ, ಶರಣರು ರಚಿಸಿದ ವಚನಗಳಲ್ಲಿ ಭಾವಗೀತೆಯನ್ನು ಕಾಣಬಹುದು. ಅಲ್ಲಮ ಪ್ರಭುಗಳ ವಚನದಲ್ಲಿ ನಿಗೂಢಾರ್ಥವನ್ನು ಮತ್ತು ಹಲವಾರು ರೂಪಕಗಳನ್ನು ಕಾಣಬಹುದು. “ತನುವ ತೋಂಟವಮಾಡಿ, ಮನವ ಗುದ್ದಲಿ ಮಾಡಿ, ಅಗೆದು ಕಳೆದೆನಯ್ಯ ಭ್ರಾಂತಿಯ ಬೇರನು. ಒಡೆದು ಸಂಸಾರದ ಹೆಂಟೆಯ ಬಗೆದು, ಬಿತ್ತಿದೆನಯ್ಯ ಬ್ರಹ್ಮ ಬೀಜವ” ಎಂಬ ವಚನದಲ್ಲಿ ನಮ್ಮ ದೇಹವನ್ನೇ ತೋಟಮಾಡಿಕೊಂಡು ಮನಸ್ಸಿನ ಸಂಯಮವನ್ನು ಗುದ್ದಲಿ ಮಾಡಿಕೊಂಡು, ವಿಷಯಸುಖಗಳೆಂಬ ಭ್ರಾಂತಿಯ ಬೇರನ್ನು ಕಿತ್ತೊಗೆದು ಹಸನಗೊಳಿಸಿ, ಆಧ್ಯಾತ್ಮ ಕೃಷಿ ಮಾಡುವಲ್ಲಿ ಕಂಡುಬರುವ ಉಪಮೆಗಳು, ರೂಪಕಗಳು ಸೊಗಸಾಗಿವೆ. ಅಲ್ಲಿಂದ ಮುಂದಕ್ಕೆ ದಾಸ ಸಾಹಿತ್ಯ ವಚನಗಳಂತೆ ಸರಳವಾಗಿ ಹಾಗೆ ಭಕ್ತಿ ಪ್ರಧಾನವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ತನ್ನನ್ನೇ ತಾನು ದಕ್ಕಿಸಿಕೊಂಡಿತು. ಜಾನಪದ ಗೀತೆಗಳು ಒಬ್ಬರ ಬಾಯಿಂದ ಇನ್ನೊಬ್ಬರಿಗೆ ಹಾಡುಗಳಾಗಿ ಹಲವಾರು ಪೀಳಿಗೆಗಳನ್ನು ದಾಟಿ ಹರಿದುಬಂದಿದೆ. ಅವುಗಳನ್ನೂ ಕೂಡ ಭಾವಗೀತೆಯ ಪರಿಮತಿಯಲ್ಲಿ ಸೇರಿಸಬಹುದು. “ಅಳುವ ಕಂದನ ತುಟಿಯು ಹವಳದ ಕುಡಿಹಾಂಗ ಕುಡಿ ಹುಬ್ಬು ಬೇವಿನ ಎಸಳಂಗ, ಕಣ್ಣೋಟ ಶಿವನ ಕೈಯಲಗು ಹೊಳೆದಾಂಗ” ಎಂಬ ಈ ಜಾನಪದ ಗೀತೆಯಲ್ಲಿ ಅಳುತ್ತಿರುವ ಕಂದನಲ್ಲೂ ತಾಯಿ ಕಾಣುವ ರಸಾನುಭವ ಎದ್ದು ತೋರುತ್ತದೆ.      

ಭಾವಗೀತೆಗಳ ವಿಶಾಲ ವ್ಯಾಪ್ತಿಯ ಬಗ್ಗೆ ಡಾ. ಪ್ರಭುಶಂಕರ್ ಹೇಗೆ ಬರೆಯುತ್ತಾರೆ; “ಪ್ರಾರಂಭದಲ್ಲಿ ಭಾವಗೀತೆ ಸರಳವಾದ ರಾಗಗಳ ಮಧುರ ಗೀತೆ. ಈ ತಿಳಿಯಾದ ಬುಗ್ಗೆಯಲ್ಲೇ ಸಂತೃಪ್ತಿ ಪಡೆದು ಅದು ವಿರಮಿಸಬಹುದು; ಇಲ್ಲವೇ ಚಿಂತನೆಯಿಂದ ಭಾರವಾದ ಹೆಜ್ಜೆಗಳನ್ನಿಡುತ್ತಾ ನಡೆಯಬಹುದು, ಧ್ಯಾನಪೂರ್ಣವಾಗಬಹುದು. ಮತ್ತೆ ಕೆಲವು ಸಲ ತನ್ನ ರೆಕ್ಕೆಗಳನ್ನು ಕೆದರಿ ಮಹಾಕಾವ್ಯದ ವಿಸ್ತಾರದಲ್ಲಿ ಹಾರಬಹುದು. ಅಥವಾ ಕ್ರಿಯೆಯ ಒಂದಾದ ಮೇಲೊಂದರಂತೆ ಬರುವ ಕ್ಷಣಗಳನ್ನು ಭಾವ ಗೀತಾತ್ಮಕವನ್ನಾಗಿ ಮಾಡಿ ಹೃದಯ ಹೃದಯದೊಂದಿಗೆ, ಬುದ್ಧಿ ಬುದ್ಧಿಯೊಂದಿಗೆ, ಆತ್ಮ ಆತ್ಮದೊಂದಿಗೆ ನಡೆಯುವಂತೆ ಮಾಡಿ, ಭಾವ ಭಾವನೆ ಅನುಭವಗಳ ನಡುವೆ ಸಂಚರಿಸಿ, ಅವುಗಳಿಗೆ ಧ್ವನಿ ತುಂಬಿ ನಾಟಕವನ್ನು ರಚಿಸಬಹುದು”

ಕನ್ನಡ ಆಧುನಿಕ ಸಾಹಿತ್ಯದಲ್ಲಿ ಬಿ.ಎಂ.ಶ್ರೀ, ಡಿ.ವಿ.ಜಿ, ಕುವೆಂಪು, ಬೇಂದ್ರೆ, ರಾಜರತ್ನಂ, ಪುತಿನ, ಅಡಿಗ, ಕೆ.ಎಸ್.ಎನ್, ಜಿ.ಎಸ್.ಎಸ್, ಕಣವಿ, ನಿಸ್ಸಾರ್ ಅಹ್ಮದ್, ಲಕ್ಷ್ಮೀನಾರಾಯಣ ಭಟ್ಟ, ಎಚ್ಚೆಸ್ವಿ, ಲಕ್ಷ್ಮಣರಾವ್, ಸಿದ್ದಲಿಂಗಯ್ಯ, ವ್ಯಾಸ ರಾವ್ ಮತ್ತು ಇನ್ನೂ ಅನೇಕ ಕವಿಗಳು ಬರೆದ ಕವನಗಳಲ್ಲಿ ಭಾವಗೀತೆಗಳನ್ನು ಕಾಣಬಹುದು. ಈ ಕವನಗಳಿಗೆ ಹೆಸರಾಂತ ಸಂಗೀತ ನಿರ್ದೇಶಕರಾದ ಪಿ.ಕಾಳಿಂಗರಾವ್, ಪದ್ಮಚರಣ್, ಸಿ. ಅಶ್ವಥ್, ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆ ಮಾಡಿ, ಕೆಲವು ಗೀತೆಗಳನ್ನು ತಾವೇ ಹಾಡಿ ಸುಗಮ ಸಂಗೀತವೆಂಬ ಹೊಸ ಪರಂಪರೆಯನ್ನು ಹುಟ್ಟುಹಾಕಿದರು. ರತ್ನಮಾಲಾ ಪ್ರಕಾಶ್, ಸಂಗೀತಾ ಕಟ್ಟಿ, ಬಿ. ಆರ್. ಛಾಯಾ, ಮಂಜುಳಾ ಗುರುರಾಜ್, ಎಂ.ಡಿ ಪಲ್ಲವಿ, ಅರ್ಚನಾ ಉಡುಪ, ಶ್ರೀನಿವಾಸ  ಉಡುಪ, ನರಸಿಂಹ ನಾಯಕ ಪುತ್ತೂರು, ಶಂಕರ್ ಶಾನಭಾಗ್, ಹಳಿಬಂಡಿ, ರಾಜು, ಸುನೀತಾ ಮತ್ತು ಅನಿತಾ ಅನಂತಸ್ವಾಮಿ ಮುಂತಾದ ಗಾಯಕರು ಭಾವಪೂರ್ಣವಾಗಿ ಹಾಡಿ ಹಲವಾರು ಧ್ವನಿಸುರುಳಿಯನ್ನು, ಧ್ವನಿಮುದ್ರಿಕೆಗಳನ್ನು ತಂದು ಸುಗಮ ಸಂಗೀತ ಈಗ ದೊಡ್ಡ ಉದ್ಯಮೆಯಾಗಿದೆ. ಹಲವಾರು ಕವಿತೆಗಳು ಗೀತೆಗಳಾಗಿ ಸಾಹಿತ್ಯವಲಯದಿಂದಾಚೆಗೆ ಬಂದು ಜನ ಸಾಮಾನ್ಯರಿಗೆ ನಿಲುಕಿ ಕವಿ ಮತ್ತು ಅವನ ಕವನ ಜನಪ್ರಿಯಗೊಂಡಿದೆ. ಹಲವಾರು ಭಾವಗೀತೆಗಳನ್ನು ಕನ್ನಡ ಚಲನ ಚಿತ್ರ ಅಳವಡಿಸಿಕೊಂಡಿದೆ.

ಒಟ್ಟಾರೆ ಕವಿಯ ಮನಸ್ಸು, ಆ ಮನಸ್ಸಿನ ಹಿಂದೆ ಇರಬಹುದಾದ ಪ್ರತಿಭೆ, ಸ್ಪೂರ್ತಿ, ಕಾವ್ಯ ಸ್ವರೂಪ, ಕವಿತೆ ಮತ್ತು ಭಾವಗೀತೆಗೂ ಇರುವ ವ್ಯತ್ಯಾಸ, ಭಾವಗೀತೆಗಳ ಪ್ರಕಾರ, ಅದು ಬೆಳೆದು ಬಂದ ದಾರಿ, ಈ ವಿಚಾರಗಳ ಬಗ್ಗೆ ಸ್ಥೂಲ ಪರಿಚಯ ಮಾಡಿಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

* * *

ಉಲ್ಲೇಖ:

  1. ಕಾವ್ಯಾರ್ಥ ಚಿಂತನ ಡಾ. ಜಿ. ಎಸ್. ಶಿವರುದ್ರಪ್ಪ (ಕೇಂದ್ರ ಸಾಹಿತ್ಯ ಅಕೆಡಮಿ ಪುರಸ್ಕೃತ ಗ್ರಂಥ)
  2. ಕನ್ನಡದಲ್ಲಿ ಭಾವಗೀತೆ ಡಾ. ಪ್ರಭುಶಂಕರ್ (ಡಾಕ್ಟರೇಟ್ ಪಡೆದ ಪ್ರಬಂಧ/ಗ್ರಂಥ)
  3. ಕುವೆಂಪು ಸಮಗ್ರ ಕಾವ್ಯ
  4. ಜಿ.ಎಸ್.ಎಸ್ ಸಮಗ್ರ ಕಾವ್ಯ
  5. The Ode Less Travelled; Unlocking the poet within, Stephen Fry
  6. English Romantic Poetry an Anthology (Courtesy Google)