ಹುಡುಗ ಮತ್ತು ಮರ – ಸುದರ್ಶನ ಗುರುರಾಜರಾವ್ ಬರೆದ ಕಥನ ಕವನ

’’ಕೊಟ್ಟದ್ದು ತನಗೆ-ಬಚ್ಚಿಟ್ಟದ್ದು ಪರರಿಗೆ ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ” ಹಾಡನ್ನು ಎಲ್ಲರೂ ಕೇಳಿರಬಹುದು. ಪಿ.ಬಿ.ಶ್ರೀನಿವಾಸರ ಸಿರಿಕಂಠದಲ್ಲಿ ಮೂಡಿ ಬಂದ ಹಾಡು ಸುಂದರ ಹಾಗೂ ಮಧುರ. ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಈ ಹಾಡಿನ ಅರ್ಥವನ್ನು ನಾನೊಮ್ಮೆ ೬-೭ ವಯಸ್ಸಿನಲ್ಲಿ ನನ್ನ ತಾಯಿಗೆ ಕೇಳಿದಾಗ ಆಕೆ ಒಂದು ಮರ ಹಾಗೂ ಹುಡುಗನ ನಡುವೆ ನಡೆದ ಈ ಕಥೆಯನ್ನು ಹೇಳಿದ್ದಳು. ನನ್ನ ಮಕ್ಕಳಿಗೆ ಒಮ್ಮೆ ಅದೇ ಕಥೆಯನ್ನು ಹೇಳುವಾಗ ಇದನ್ನು ಕವಿತೆಯ ರೂಪದಲ್ಲಿ ಬರೆಯಬಾರದೇಕೆಂದಿನಿಸಿ ಕವನೀಕರಿಸುವೆ ಪ್ರಯತ್ನ ಮಾಡಿದ್ದೇನೆ.

ನಾನು ಇದು ಭಾರತದ/ಕರ್ನಾಟಕದಲ್ಲಿ ಪ್ರಚಲಿತವಿರುವ ಕಥೆ ಎಂದೇ ಇಲ್ಲಿಯವರೆಗೂ ನಂಬಿದ್ದೆ, ಏಕೆಂದರೆ ನನ್ನ ತಾಯಿ ಇಂಗ್ಲೀಷನ್ನು ಹೆಚ್ಚು ಓದಿದವಳಲ್ಲ. ಆದರೆ ಇದು ಅಮೇರಿಕಾದ ಕವಿ ಶೆಲ್ ಸಿಲ್ವೆರ್ಸ್ಟೀನ್ ಎಂಬಾತ ಇದನ್ನು ಇಂಗ್ಲೀಷಿನಲ್ಲಿ ಬರೆದದ್ದನ್ನು ನನ್ನ ಗಮನಕ್ಕೆ ಕೇಶವ್ ತಂದದ್ದು ಒಳ್ಳೆಯದಾಯಿತು. ಈ ಕವನದ ಹೆಗ್ಗಳಿಕೆ ಅವನಿಗೇ ಸಲ್ಲಬೇಕು; ’’ The Giving Tree’’ ಎಂಬುದು ಅವನ ಕವಿತೆಯ ಹೆಸರು. ಅದು ತಿಳಿದ ನಂತರ ಈ ಕವಿತೆಯ ಶೀರ್ಷಿಕೆ ” ಕಲ್ಪವೃಕ್ಷ” ಎಂದೇಕೆ ಇಡಬಾರದೆಂದು ನನಗನಿಸಿದರೂ ನನ್ನ ಹಳೆಯ ಶೀರ್ಷಿಕೆಯನ್ನೆ ಮುಂದುವರಿಸಲು ನನ್ನ ಹೃದಯ ಹೇಳಿದ್ದರಿಂದ ಅದನ್ನೇ ಮುಂದುವರಿಸಿದ್ದೇನೆ. ನಾನು ಈ ಕವನವನ್ನು ಬರೆದಾಗ ಇದಕ್ಕೊಂದು ಮೂಲ ಕವನ ಇದೆ ಎನ್ನುವುದೇ ಗೊತ್ತಿರಲಿಲ್ಲ. ಹಾಗಾಗಿ ಈ ಕವನ ಅನುವಾದವಲ್ಲ, ಭಾವಾನುವಾದ ಎನ್ನಬಹುದು.

CC- Wiki

ಹುಡುಗ ಮತ್ತು ಮರ

ಬೆಟ್ಟದಾ ತಪ್ಪಲಲಿ ಸುಂದರ ಬಯಲೊಂದು
ಬಯಲ ಮಧ್ಯದಲಿತ್ತು ಒಂದು ಮರವು
ಕೂಗಳತೆ ದೂರದಲಿ ಪುಟ್ಟದೊಂದು ಮನೆಯು
ಮನೆಯ ಕಣ್ಮಣಿಯಾಗಿ ಗಂಡು ಮಗುವು

ತಂದೆ ತಾಯಿಯರೆಂದು ಹೊಲದಲ್ಲಿ ದುಡಿದಿರಲು
ದುಡಿಯುವಾ ಸಮಯದಲಿ ಪುಟ್ಟ ಮಗುವು
ಮರದ ಬಳಿಯಲಿ ಬಂದು ಆಟವಾಡುತಲಿರಲು
ಆಟ ಪಾಠವ ಕಂಡು ನಲಿದು ಮರವು
Read More »

ಮತ್ತೇಕೆ ಯುಗಾದಿ ಬರುತಿದೆ? – ಕೇಶವ ಕುಲಕರ್ಣಿ ಬರೆದ ಕವನ

ಯುಗ ಯುಗಾದಿ ಕಳೆದರೂ
ಮತ್ತೇಕೆ ಯುಗಾದಿ ಬರುತಿದೆ?

Photo by the author

ಹೊಸ ವರುಷ ನಮಗೆ ಜನೆವರಿ ಒಂದಾಗಿ
ಆಗಲೇ ಇದು ಎರಡನೇ ತಲೆಮಾರು.
ವಸಂತ ಮಾಸ ಯಾಕೆ ಯಾವಾಗಲೂ
ಮಾರ್ಚ್ ಯಾ ಎಪ್ರಿಲ್ ಒಂದನೇ ತಾರೀಖು
ಶುರುವಾಗಬಾರದು? ಎನ್ನುವ ಜನಾಂಗ ನಾವು.
ನಿಮ್ಮ ಈ ‘ಸಂವತ್ಸರ’
ಪ್ರನೌನ್ಸ್ ಮಾಡೋದೂ ಕಷ್ಟ ನೋಡಿ.

ಹೊಂಗೆ ಹೇಗಿರುತ್ತೇಂತ ನೋಡಿಲ್ಲ
ಭೃಂಗದಿಂದ ಕಚ್ಚಿಸಿಕೊಂಡಿದ್ದು ಮಾತ್ರ ಗೊತ್ತು.
ಬೇವಿನ ಮರ ಬಿಡಿ, ಜಾಲಿ ಮರಕ್ಕೂ
ಈ ನಗರಗಳಲ್ಲಿ ಜಾಗವಿಲ್ಲ.
ಅಷ್ಟಕ್ಕೂ ಬೇವಿನ ಮರ ಹೂ ಬಿಟ್ಟಿದೆ ಅಂದುಟ್ಟುಕೊಳ್ಳಿ!
ಅದಕ್ಕೇನು ವೆನಿಲಾದ ತರ ಬೇರೆ ದೇಶದಲ್ಲಿ ಬೆಲೆ ಇದೆಯೇ?

ಮಾವಿನ ಹಣ್ಣಿಗೆ ಈಗ ವಸಂತ ಬರಲು
ಕಾಯಬೇಕಾಗಿಲ್ಲ
ವರ್ಷದ ಹನ್ನೆರಡೂ ತಿಂಗಳೂ
ಫ್ರೂಟಿ ಲಭ್ಯ

ಹಾಗೆಂದು ನಮಗೆ ವಸಂತ, ಚೈತ್ರ
ಅಂದು ಕನ್ಫೂಸ್ ಮಾಡಬೇಡಿ
ಅವು ಹುಡುಗಿ ಹೆಸರು ಅಂದುಕೋತೀವಿ
ನಿಯತ್ತಾಗಿ ’ಸ್ಪ್ರಿಂಗ್’ ಎನ್ನಲು ಆಗೋದಿಲ್ಲವೇ ನಿಮಗೆ?

ಈ ಜನ್ಮದಲ್ಲಿ ಒಂದೇ ಬಾಲ್ಯ ಒಂದೇ ಹರೆಯ
ಅದೆಲ್ಲ ಬೇಂದ್ರೆಯಲ್ಲೇ ಕಾಲವಾಯಿತು
ಈಗ ನಮಗೋ
ಯಾವಾಗ ಬೇಕೋ ಆವಾಗ ಹೊಸ ಜನ್ಮ
ಹೊಸ ಮುಖ ಹೊಸ ತಿಕ

ಅರವತ್ತರ ಮಡೋನಾ ಕೂಡ
ಕಾಸ್ಮೆಟಿಕ್ ಸರ್ಜರಿಯಲ್ಲಿ
ಮೂವತ್ತರ ಬೆಡಗಿ
ಮುದಿ ಯಯಾತಿಯ ಜೇಬಿನಲ್ಲಿ ವಯಾಗ್ರ
ಸಾವಿನ ಕಟೆಕಟೆಯಲ್ಲಿ ಕೂಡ
ನಮಗೆ ಸನತ್ಕುಮಾರ
ನೆನಪಾಗುವುದಿಲ್ಲ ಬಿಡಿ

ಇಷ್ಟೆಲ್ಲ ಆದ್ರೂ
ಮತ್ತೇಕೆ ಯುಗಾದಿ ಬರುತಿದೆ?