ಭರವಸೆ

ಯುಗಾದಿ  ಹಬ್ಬದ ಕವಿ ಗೋಷ್ಠಿ ‘ಅನಿವಾಸಿ’ ಯ ಬಾಳಿನಲ್ಲಿ ಹೊಸ ಭರವಸೆ ಹುಟ್ಟಿಸುವಲ್ಲಿ ಸಫಲವಾಯಿತು. ಈ ಆಶಯವನ್ನು ಪ್ರತಿಬಿಂಬಿಸುತ್ತಿದೆ ಶಿವಪ್ರಸಾದರ ಕವನ…

ಹುಚ್ಚು ಮಾಧ್ಯಮಗಳ ಹಾವಳಿಯಲ್ಲಿ
ಕುಗ್ಗಿಹೊಗಿವೆ ನಮ್ಮ ಕ್ರಿಯಾತ್ಮಕ ಚಿಂತನೆಗಳು
ಕಂಪ್ಯೂಟರ್ಗಳ ಸಾಮ್ರಾಜ್ಯದಲಿ
ಒಣಗಿಹೋಗಿವೆ ಶಾಹಿ ಕುಡಿಕೆಗಳು
ಸೊರಗಿವೆ ಬಣ್ಣ ಬಣ್ಣದ ಲೇಖನಿಗಳು

ಇ-ಮೇಲ್ ಮೊಬೈಲ್ ಗಳ ಧಾಳಿಯಲ್ಲಿ
ಮಲಗಿವೆ ಪತ್ರ ವ್ಯವಹಾರಗಳು
ಆಂಗ್ಲಭಾಷೆಯ ಪ್ರವಾಹದಲಿ
ಕೊಚ್ಚಿಹೋಗಿವೆ ನಮ್ಮಿ ಭಾಷೆಗಳು
ಸಾಂಸ್ಕೃತಿಕ ಮೌಲ್ಯಗಳು, ಸಂಪ್ರದಾಯಗಳು

ತಲೆಯೆತ್ತಿವೆ ಆತಂಕವಾದೀ ಶಕ್ತಿಗಳು
ಉಗ್ರಗಾಮಿಗಳ ಪಿತೂರಿಗಳು
ನಡುಗಿಸಿವೆ ನಾಗರೀಕತೆಯ ಖಾಯಿಲೆಗಳು
ಎಡ್ಸ್ ಡಯಾಬಿಟಿಸ್ ಬ್ಲಡ್ ಪ್ರೆಶರ್ ಗಳು

ಮಾಯವಾಗಿವೆ ಹಚ್ಚ ಹಸುರಿನ ಕಾಡುಗಳು
ಕರಗಲಿವೆ ಹಿಮದ ಗೆಡ್ಡೆಗಳು
ಇಲ್ಲಿವೆ ಪ್ರಕೃತಿ ವಿಕೋಪಗಳು
ಧಗೆ ಬಿಸಿಲು ಸುನಾಮಿ ಭೂಕಂಪಗಳು

ಈ ತಲ್ಲಣ ಗೊಳಿಸುವ ಹಿನ್ನೆಲೆಯಲ್ಲಿ
ಅನಿಶ್ಚಿತ ಇಂದು ನಾಳೆಗಳಲಿ
ಮುರಿದುಬಿದ್ದ ವಿಶ್ವಾಸಗಳಲಿ
ಸರಿ ತಪ್ಪುಗಳ ದ್ವಂದಗಳಲ್ಲಿ

ಇನ್ನೂ ಉಳಿದಿವೆ…
ಭರವಸೆಗಳು, ಛಲಗಳು
ನಿರ್ಧಾರ, ನಂಬಿಕೆ ಮತ್ತು ಆಶಯಗಳು

ಅತಿಥಿಗಳು – ವಿಜಯಾ ನಾಯಕ್ ಬರೆದ ಚುಟುಕುಗಳು

ಡಾ. ವಿಜಯಾ ನಾಯಕ್, ದಕ್ಷಿಣ ಕನ್ನಡದಲ್ಲಿ ಹುಟ್ಟಿ ಬೆಳೆದವರು. ದಿ.ಶಿವರಾಮ ಕಾರಂತರ ಓಡನಾಟ ಅವರಿಗೆ ಚಿಕ್ಕಂದಿನಲ್ಲಿ ಸಿಕ್ಕ ಭಾಗ್ಯ. ಕಾರಂತರ ಬಾಲವನದಲ್ಲಿ ಅವರೊಟ್ಟಿಗೆ ಆಡಿ ಬೆಳೆದದ್ದು ವಿಜಯಾರವರ ಸಾಹಿತ್ಯ ಸ್ಫೂರ್ತಿಗೆ ನೀರೆರೆದಂತಿದೆ. ಅವರ ಕವನಗಳಿಗೆ ಪ್ರಶಸ್ತಿಗಳು ಬಂದಿವೆ. ಕಾವ್ಯದೊಂದಿಗೆ, ಚಿತ್ರಕಲೆಯಲ್ಲೂ ಅವರಿಗೆ ಆಸಕ್ತಿ. ಅವರ ಕವನಗಳಿಗೆ ಚಿತ್ರ ಬರೆದು ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇದೊಂದು ಆಕರ್ಷಕ ಹೊಸ ಪ್ರಯೋಗ.

ವೈದ್ಯಕೀಯ ಕವನಗಳು/ಚುಟುಕುಗಳು, ಕನ್ನಡದಲ್ಲಿ ಸಹಜವಾಗಿ ಲಭ್ಯವಿಲ್ಲ. ತನ್ನ ವೈದ್ಯಕೀಯ ಜ್ಞಾನ ಬಳಸಿ ಅವರು ಬರೆದಿರುವ     ಕವನಗಳು ವಿಜಯಾರವರ ಪ್ರಯೋಗಶೀಲತೆಗೆ ಸಾಕ್ಷಿ. ಅವರ ಅತಿಥಿಗಳು ಕರೆಯದೇ ಬರುವವರು, ಸರಿಯಾಗಿ ಹಿಂಡಿ, ಸತ್ವ ಹೀರಿ ನೆಲೆ ನಿಲ್ಲುವವರು.

ಬೀಸಿ ಬಂದುಡಿದು ಮಲಗಿಸಿ

ಉಸಿರನ್ನುಳಿದು ಮತ್ತೆಲ್ಲವ

ಕಸಿದು ಕಬಳಿಸಿ, ಕಳೆದ ನಿನ್ನೆಗಳ

ಬಿಸಿ ನೆತ್ತರ ರಾತ್ರಿಗಳ ನೆನಪಿನ ಹೊತ್ತಗೆಯನು

ಕಿತ್ತೆಸೆದು ಮುಸಿ ಮುಸಿ ನಗುತಿದೆ – ಪಾರ್ಶ್ವವಾಯ

ಇರಿವ ಚಳಿಯೊಡನೆ ತಿಮಿರದಲಿ

ಸೂರಿನೊಳಗಿಂದ ತೂರಿಬಂದು ಕ್ಷಣದಲಿ

ಏರಿ ಬರುವ ಮೇಲುಸಿರಿನ ಕೊಡುಗೆ ಇತ್ತು

ಕೂರಗೊಡದೆ, ನೇರ ಮಲಗಗೊಡದೆ

ಎದೆಯೊಳಗಿಂದ ಸೀಳಿ

ಬರುವ ದನಿಯಾಲಿಸಿ ಸವಿಯುತಿದೆ – ಗೂರಲು

ಚೇತನದ ಹನಿಯಾಗಿದ್ದ ತನುವನು

ಭೂತದಂತೆ ಹೊಕ್ಕಿ ಕಾಣದಂತಿದ್ದು

ಊತ, ವಾತ, ಎದೆ ಬಡಿತವೆಂದು

ಮತ್ತೆ ಹೊಟ್ಟೆಯಲ್ಲಿದೆ ಕೆಟ್ಟ ನೀರೆಂದು

ಮೆತ್ತಗೆ ಕೊಲ್ಲಲೆಳಸುತಿದೆ – ರಕ್ತಹೀನತೆ

Image result for rheumatic feverಎದೆಯೊಂದು ತಾಳವಿಲ್ಲದ ತಮ್ಮಟೆಯಾಗಿ

ನೊಂದ ದೇಹ ಎಮಿಕೆಯ ಹಂದರವಾಗಿ

ಬೆದರಿ ನಿಂತ ಬಂಧುಗಳು ಮೂಗರಾಗಿ ಆಸೆ ಬಿಟ್ಟಾಗ

“ಶುದ್ಧ ನಿಸ್ಸಾರ” ವೆಂದೆನಿಸಿ, ಕುಣಿದು ಕುಪ್ಪಳಿಸುವ ಇನ್ನೊಬ್ಬ

ಮುಗ್ಧ ಎಳೆಯನ ಮೊಣಕಾಲನರಸಿ ಓಡತ್ತದೆ – ನಿಷ್ಠೂರಿ ಶೀತವಾಯು

– ವಿಜಯಾ ನಾಯಕ್