ದಿನನಿತ್ಯದ ತತ್ವಜ್ಞಾನ – ರವಿರಾಜ ಉಪ್ಪೂರರ ಕವನಗಳು

ಅನಿವಾಸಿಯ ಬಂಧುಗಳಿಗೆಲ್ಲ ನಮಸ್ಕಾರಗಳು. ಈ ಶುಕ್ರವಾರ ದಿಢೀರ್ ದೋಸೆಯಂತೆ ಕೊನೆಯ ಗಳಿಗೆಯಲ್ಲಿ ಬಡಿಸುತ್ತಿರುವ ಕವನಗಳು, ಡಾ. ರವಿರಾಜ್ ಉಪ್ಪೂರರ ಹಂಚಿನಲ್ಲಿ ತಯಾರಾದವು. ಮೂಲತಃ ಉಡುಪಿಯವರಾದ ರವಿರಾಜ್, ವೃತ್ತಿಯಲ್ಲಿ ಕ್ಷ-ಕಿರಣ ತಜ್ಞರು. 2010ರಿಂದ ಇಂಗ್ಲಂಡಿನಲ್ಲಿ ತಮ್ಮ ಪತ್ನಿ-ಪುತ್ರರೊಂದಿಗೆ ವಾಸವಾಗಿರುವ ರವಿರಾಜ್ ಕವನ ಗೀಚುವುದಲ್ಲದೇ (ಅವರದೇ ಮಾತಿನಲ್ಲಿ), ಯಕ್ಷಗಾನದಲ್ಲೂ ಆಸಕ್ತಿ ಉಳ್ಳವರು. ಬನ್ನಿ, ಏನು ಹೇಳುತ್ತಾರೋ ನೋಡೋಣ – ಲಕ್ಷ್ಮೀನಾರಾಯಣ ಗುಡೂರ, ಸಂಪಾದಕ (ಸಬ್ಸ್ಟಿಟ್ಯೂಟ್).

***********************************************************************

ಪಯಣವೆಲ್ಲಿಗೋ ತಿಳಿಯದೇ ಹೊರಟಿರುವೆ 
ಗಾಣದೆತ್ತಿನಂತೆ ತಿರುಗುತಿರುವೆ ಗುರಿ ಇಲ್ಲದೇ 
ಬಂದಿರುವುದು ಒಬ್ಬನೇ... ಹೋಗುವುದೂ ಒಬ್ಬನೇ 
ನಡುದಾರಿಯಲೊಂದಿಷ್ಟು ನಲಿಯಬಾರದೇ 
ಕಲೆಯಬಾರದೇ ಒಂದಿಷ್ಟು ನಿನ್ನಿಷ್ಟದ ಜೀವಗಳೊಡನೆ ?
ಯಾಕೀ ಬಿಗುಮಾನ ... ಇಲ್ಲಿಯದೇನೂ ನಿನ್ನದಲ್ಲ 
ಜೋಳಿಗೆಯ ಭರಿಸಿಕೋ ಪ್ರೀತಿ ಸ್ನೇಹದ ಭಂಡಾರವ
ನಿನ್ನೀ ಬಾಳಿಗೆ ಅದುವೇ ನಿನಗಾಧಾರವು

*******

ಮೊದಮೊದಲು ತೊದಲಿ ನಡೆಯುವಾಗ 
ಕೈ ಹಿಡಿದು ನಡೆಸಿದೆ ನೀನೆನ್ನ 
ಮಡದಿಯ ಕೈ ಹಿಡಿದೊಡೇ ಮರೆವೆನೇ 
ನೀನಿತ್ತ ಕೈಯ ಆಸರೆಯ?
ನಿನಗಾಗುವೆ ನಾನಾಸರೆ 
ಮುಪ್ಪಿನಲಿ ನಿನ್ನ ಕೈಗೋಲಾಗಿ ತಾಯೆ

*******

ಹಳೆಯ ನೆನಪುಗಳು 
ಸುರುಳಿ ಬಿಚ್ಚಿದರೆ 
ಉರುಳಿ ಹೋಗುವುದು 
ಮರಳಿ ಬಾರದ ಕಾಲದ 
ವಿರಳ ಕ್ಷಣಗಳು ಮನದಾಳದಲ್ಲಿ

*******

ಮಿನುಗುವ ನಕ್ಷತ್ರ ಕಂಡಾಗಲೆಲ್ಲ 
ಮಲಗುವ ಅನಿಸುತ್ತದೆ 
ಮನಸಿನ ತುಂಬೆಲ್ಲ ತುಂಬಿರುತ್ತೆ 
ತಾರೆಯರ ತಾರಾಗಣ 
ಎದ್ದು ನೋಡಿದರೆ ಇನ್ನೂ 
ಬೆಳಕೇ ಹರಿದಿಲ್ಲ .... ಬರೀ ಕನಸುಗಳು 
ರವಿಯ ಆಗಮನಕೆ ಮಾಯವಾಯಿತೆಲ್ಲಾ 
ಕನಸಿನ ತಾರಾಗಣ .... 
ಮರೆಯಾದವು ಎಲ್ಲಾ  ಅಸಂಖ್ಯ ಮಿನುಗುತಾರೆಗಳು 
ಉಳಿದದ್ದು ಬರೀಯ ನಿದ್ರೆಗೆಟ್ಟ ರಾತ್ರಿಯು,
ಹಗಲಿಡೀ ಕಾಯಬೇಕಲ್ಲ ಇನ್ನು 
ಮಿನುಗು ತಾರೆಯರ ನೋಡಲು ... 
ಕನಸಿನ ರಾತ್ರೆಯ ಕಳೆಯಲು

*******

ನೀಲಾಕಾಶ ಹೊಂಬಣ್ಣದ ರಾತ್ರಿಯುಡಿಗೆ ತೊಟ್ಟು 
ಕಾಯುತಿರುವಳು ಪ್ರಣಯಕ್ಕಾಗಿ ತಿಂಗಳೊಂದಿಗೆ 
ಬಾಗಿಲಲಿ ನಿಂತು ಇಣುಕಿ ನೋಡುತಿಹನು ಬೆಳಗಿನ ಗೆಳೆಯ ರವಿ 
ದಣಿವಾಗಿಹ ನಮಗೆಲ್ಲ ಇವರಿಬ್ಬರ ಪ್ರಣಯ ಪ್ರಸಂಗವೇ ಒಂದು ಮನೋರಂಜನೆ ..

*******

ಗೌತಮನಿಗಾಯಿತು ಜೀವನ್ಮರಣದ ಲೆಖ್ಖಾಚಾರ
ಅರಳೀಮರದಡಿಯಲ್ಲಿ 
ನನಗರಿವಾಯಿತು ಮುಂದಿನ ಜೀವನದ ಸಾಕ್ಷಾತ್ಕಾರ 
ಅಡುಗೆಮನೆಯ ಸಿಂಕಿನಲ್ಲಿ 
ಹತ್ತಾರು ಪಾತ್ರೆಗಳ ತಿಕ್ಕಾಟದೊಂದಿಗೆ 
ತಿಳಿದಿರಲಿ ನಿನಗೆ ಸಹಬಾಳ್ವೆಯ ಮರ್ಮ ಇದೆಂದು 
ಆಸೆಯೇ ದುಃಖ್ಖಕ್ಕೆ ಮೂಲ ಎಂಬುದೀಗರಿವಾಯ್ತು 
ಸಾವೇ ಇರದ  ಮನೆಯ ಸಾಸಿವೆಯಂತೆ
ನೀ ಆಸೆ ಪಡದಿರು ಜೀವನದಿ ಬರೀ ಸುಖವ 
ಅದುವೇ ಬುದ್ದನಿಗೆ ನೀ ನೀಡುವ ಗೌರವ

*******

ದಟ್ಟ ಕಾಡಿನಲಿ  ಮದ್ದಾನೆಯ ಮದಿಸಬಲ್ಲೆ 
ಇಟ್ಟ ಬಾಣದ ಗುರಿಯ ಬದಲಿಸಬಲ್ಲೆ 
ಕೊಟ್ಟ ಮಾತನೂ ಮುರಿಯಬಲ್ಲೆ 
ಮಾರುತತನುಜನ ಮುರಿದಿಕ್ಕಬಲ್ಲೆ 
ಆದರೆ ನನ್ನಾಕೆಯನು ಸೋಲಿಸಲಾರೆ, ಮಾತಿನ ಮಲ್ಲೆ 
ಏನಾದರೂ ಆಕೆಯೇ ನನ್ನ ನಲ್ಲೆ

*******

ನಿನ್ನ ಮಡಿಲಲ್ಲಿ ಮರೆಯಾಗಿಸಬಲ್ಲೆ ಪ್ರಖರ ರವಿಕಿರಣವನ್ನೇ 
ಕರಗಿ ನೀರಾಗಿ ಸುರಿಸುವೆ ನೀ ಮಳೆಯ ಬರೀ ವರ್ಷಋತುವಿನಲ್ಲಿ 
ನನ್ನಾಕೆಯೋ ... ಮರೆಯಾಗಿಸಬಲ್ಲಳು ನನ್ನಾಲೋಚನೆಗಳನು 
ತನ್ನ ಮಾತಿನ ಮೋಡಿಯಲ್ಲಿ 
ಮತ್ತೊ ... ಸುರಿಸಬಲ್ಲಳು ಕಣ್ಣೀರಿನ ಮಳೆಯ 
ಸರ್ವ ಋತುಗಳಲ್ಲೂ!

*******

ರೀ... ತರಕಾರಿಯ ತರಲು ಹೊರಟಿರೇ 
ನನ್ನವಳು ಅಡುಗೆಮನೆಯಿಂದಲೇ ಉಲಿದಳು 
ಚರ್ಚೆ ಮಾಡದೆ ತಂದರೆ 
ಸಿಡುಕುವಳು ನಿಮಗೇನೂ ಬಾರದು ಉಳಿಸಲು 
ಮತ್ತೆ ... ತಂದಿರುವ ತರಕಾರಿಗಳೋ ಬರೀ ಹುಳಗಳು !!!.

*******

ಕಾಳ್ಗಪ್ಪು ನಾನು ನಿಶೆ
ಎಂದವಳು ದುಃಖದಲಿ
ಕಣ್ಣೀರ ಸುರಿಸುತಿರೆ
ಅವಳಶ್ರು ಬಿಂದುಗಳು
ಬಾನ ಬಯಲಿನ ತುಂಬ
ನಗೆಯ ನಕ್ಷತ್ರ ಮಿನುಗಿದವು

*************************

- ರವಿರಾಜ್ ಉಪ್ಪೂರ್

ಜಯ ಕರ್ನಾಟಕ ಮಾತೆ – ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ರಾಜ್ಯೋತ್ಸವದ ಶುಭಾಶಯಗಳೊಂದಿಗೆ, ಅನಿವಾಸಿ ಬಳಗದ ಕೊಡುಗೆ ಇಲ್ಲಿದೆ; ಕೆಲವು ಕವನಗಳು, ಹರಕೆಗಳು, ಶುಭಾಶಯಗಳು; ಕೆಲವು ಕೈಬರಹದಲ್ಲೂ ಇವೆ. ವಾರದ ಮಧ್ಯೆ ರಾಜ್ಯೋತ್ಸವದ ಪ್ರಯುಕ್ತ. ಕೈಬರಹದಲ್ಲಿ ಕಳಿಸುವಂತೆ ಕೇಳುವ ಸಲಹೆ ಕೊಟ್ಟದ್ದಕ್ಕೆ ಧನ್ಯವಾದಗಳು ಸಲ್ಲುವುದು ಅಮಿತಾ ರವಿಕಿರಣ ಅವರಿಗೆ. – ಎಲ್ಲೆನ್ ಗುಡೂರ್ (ಸಂ.)

 ನಮ್ಮ ಹೆಮ್ಮೆಯ ನಾಡು - ಡಾ. ಜಿ ಎಸ್ ಶಿವಪ್ರಸಾದ್
 
 ಸುಸಂಸ್ಕೃತ  ಸಜ್ಜನ ಸುಪ್ರಜೆಗಳ ನಾಡು 
 ಶರಣರ ದಾಸರ ಅರಸರ ಬೀಡು 
 ತಾಮರ ಕಬ್ಬಿಣ ಬಂಗಾರದ ಗೂಡು 
 ಸಸ್ಯ ಸರೋವರ ಸಮೃದ್ಧಿಯ ಕಾಡು 
  
 ಸುಂದರ ಸಹ್ಯಾದ್ರಿಯ ನಿನ್ನಯ ಸೆರಗು 
 ಶಿಲ್ಪ ಶೃಂಗಾರದ ಬೇಲೂರಿನ ಬೆರಗು 
 ಭೋರ್ಗರೆಯುವ ಜೋಗದ ಗುಂಡಿಯ ಗುಡುಗು 
 ಮೊರೆಯುವ ಕಡಲಿನ ತೀರದ ಮೆರುಗು 
  
 ಕೃಷ್ಣ ತುಂಗೆ ಕಾವೇರಿಯ ಸವಿಯು 
 ರಸಋಷಿ, ಬೇಂದ್ರೆಯ ಕಾವ್ಯದ ರಸವು 
 ನಿರ್ಮಲ ನಿರಂತರ ನಿನ್ನಯ ಚೆಲುವು 
 ತಂದಿದೆ ನಮಗೆ ಇನ್ನಿಲ್ಲದ ಒಲವು 
****************************************
 ಭಾಷಾಭಿಮಾನ - ರಾಮಶರಣ್ ಲಕ್ಷ್ಮೀನಾರಾಯಣ
  
 ವರ್ಷಕ್ಕೊಮ್ಮೆ
 ನವಂಬರ್ ಒಂದರಂದು
 ಕರ್ನಾಟಕವೇ ಉಸಿರೆಂದು
 ಕೇವಲ ರಾಜ್ಯೋತ್ಸವದ ಹೊತ್ತಿಗೆ 
 ಓಡುವರು ಕೊಳ್ಳಲು ಕನ್ನಡದ ಹೊತ್ತಿಗೆ
    
 ಸದಾ ಮನದಲ್ಲಿ
ಕರೆದರೆ ಕರೆಯಲಿ ಬಿಡಿ
 ಎಲ್ಲರೆದುರೆ ಮಮ್ಮ
 ಪುಳಕ ಜಾಸ್ತಿ ಒಂದು ಹಿಡಿ
 ಮಗು ಕರೆದರೆ ಅಮ್ಮ
  
 ಹೊರ ದೇಶದಲ್ಲಿ
 ಕನ್ನಡ ಕೇಳಿದೆನೆಂಬ ಅನುಮಾನ
 ತಿರುಗಿ ನೋಡಲೇಕೆ ಬಿಗುಮಾನ
 ಆದರಿದು ಸೂಪರ್ ಮಾರ್ಕೆಟ್ ಐಲು
 So what, ಕನ್ನಡವೇ ನಮ್ಮ ಐಲು
  
 ಕರುನಾಡಿನಲಿ ಕನ್ನಡವ
 ಬೆಳೆಸದವ ಅನಿವಾಸಿ
 ಇಂಗ್ಲೆಂಡಿನಲಿ ಕನ್ನಡವ 
 ಬೆಳೆಸಿದವ 'ಅನಿವಾಸಿ'
********************************* 
ಕನ್ನಡ ಈಸ್ ದ ಬೆಸ್ಟ್.... - ಮುರಳಿ ಹತ್ವಾರ್

 ಕನ್ನಡ ಇಸ್ ದ ಬೆಸ್ಟು ಲ್ಯಾಂಗ್ವೇಜು ಟು ಸ್ಪೀಕು 
 ಅನ್ನೊ ಇಂಗ್ಲಿಷಿನ ಪದಗಳ 'ಉ'(ಪ್)ಕಾರ ಸಾಕು 
 ಕೃಷ್ಣ-ತುಂಗೆ-ಕಾವೇರಿ ಪೊರೆದ ಪದಗಳ ಸಿರಿ ಬೇಕು  
 ಆ ಸವಿಗನ್ನಡದ ರುಚಿ ನಮ್ಮ ನಾಲಿಗೆಯಲರಳುತಿರಬೇಕು
 
-  ಮುರಳಿ ಹತ್ವಾರ್ 
 ೩೧.೧೦.೨೦೨೦
 (ಕೈಬರಹದಲ್ಲೂ ಒಂದು ಚುಟುಕವಿದೆ - ಸಂ.)  
***********************************
 
ಕನ್ನಡದ ರುಚಿ ಮತ್ತಿತರ ಚುಟುಕಗಳು - ಲಕ್ಷ್ಮೀನಾರಾಯಣ ಗುಡೂರ್ 
 ೧.
 ಬೆಳಗಾವಿಯ ಕುಂದಾದಲಿ, ಕಲಬುರಗಿಯ ಕರದಂಟಿನಲಿ
 ಮದ್ದೂರಿನ ವಡೆಯಲ್ಲಿ, ಉಡುಪಿಮಠದ ಹುಳಿಯಲ್ಲಿ
 ಕಾಣುವ ರುಚಿವೈವಿಧ್ಯವೇ ಕಾಣುವುದು ನನಗೆ
 ಹೋಗೂಣು-ಬರೂಣು; ಶರಣರೀ ಯಪ್ಪಾ;
 ಬತ್ತೈತೇ ಬಾರಲಾ ಮತ್ತು ಎಂತದು ಮಾರಾಯಗಳಲ್ಲೂ..!
  
 ೨.
 ಇಪ್ಪತ್ತೈದು ವರ್ಷ ಪಳಗಿದ ಐತಾಳರ-ಭಟ್ಟರ
 ಅಡುಗೆಗೆ ಬಾಯಿಚಪ್ಪರಿಸುವ ನನಗೆ,
 ಸಾವಿರಾರು ವರ್ಷ, ರನ್ನ, ಪಂಪ, ನಾರಣಪ್ಪ,
 ದಾಸರು, ಬಸವಣ್ಣ, ಕುವೆಂಪು, ಬೇಂದ್ರೆ, ಮಾಸ್ತಿ
 ಇತ್ಯಾದಿ ಭಾಷಾಭಟ್ಟರ ಕೈಯಲ್ಲಿ ಪಕ್ವವಾದ
 ಕನ್ನಡದ ಪಾಕಧಾರೆಯ ಸವಿ ಹೇಗಿರಬೇಡ!
  
 ೩.
 ಕನ್ನಡಸಾರಸ್ವತಲೋಕದ ಘಟಾನುಘಟಿಗಳು
 ಕನ್ನಡಕ್ಕಾಗಿ ತಮ್ಮ ಜೀವಮಾನವನ್ನೇ
 ತೇಯ್ದಿರುವಾಗ,
 ನನ್ನ ಸೇವೆ ನಲ-ನೀಲ-ಜಾಂಬವರೊಂದಿಗೆ ಸೇತುವೆಗೊಂದು ಪುಟ್ಟ ಕಲ್ಲು ಹಾಕಿದ
 ಅಳಿಲಿನಷ್ಟೆಂದರೂ ಅದು ......
 ಅಹಂಕಾರವೇ ಆದೀತು! 

೪.
ಅತ್ತ ಎಕ್ಕಡ, ಇತ್ತ ಎನ್ನಡ...
ನಡುವೆ ಎಲ್ಲಿದೆ ಕನ್ನಡ?
ತೆಲುಗು-ತಮಿಳು ಪಕ್ಕದಲ್ಲಿವೆ…
ನಮ ಹೃದಯಲ್ಲಿದೆ ಕನ್ನಡ! 
***********************************
 "ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು" 
  
 ನವೆಂಬರ್ ಒಂದರಂದು ಶುಭಾಶಯಗಳ ಮಳೆಯೊಂದು ಹರಿಯುವುದಂತೆ, 
 ಹೌದೇ?
 ಕನ್ನಡನಾಡು-ನುಡಿಗಳ ಕೊಂಡಾಡುವ ಹೊಳೆಯಂತೆ, ನಿಜವೇ? 
 ಆದರೆ ಈ ಹೆಮ್ಮೆಯ ಸಂಭ್ರಮ ಕೇವಲ ನವೆಂಬರಿಗೆ ಏಕೆ ಸೀಮಿತ? 
 ದಿನವೂ ಆಚರಿಸಬಹುದಲ್ಲವೇ ನಮ್ಮ ಕನ್ನಡ ಹಬ್ಬ?
  
 'ಡೋರ್ ಕ್ಲೋಸ್ ಮಾಡು' ಅನ್ನುವ ಕನ್ನಡಕ್ಕಿಂತ 'ಬಾಗಿಲು ಹಾಕು' ಅನ್ನುವ 
 ಕನ್ನಡ ಚೆಂದ ಅಲ್ಲವೇ?
 'ಸ್ಕೂಲ್ ಗೆ ಹೋಗು' ಅನ್ನುವ ಕನ್ನಡಕ್ಕಿಂತ 'ಶಾಲೆಗೆ ಹೋಗು' ಅನ್ನುವ 
 ಕನ್ನಡ ಚೆಂದ ಅಲ್ಲವೇ?
 ಹೀಗೆ ಒಂದೊಂದು ಮಾತಿನಲ್ಲೂ ನಮ್ಮ ಭಾಷೆಯ ಸವಿಯನ್ನು 
 ಆನಂದಿಸಬಹುದಲ್ಲವೇ ?
 ಮುಂದಿನ ಪೀಳಿಗೆಗೆ ನಾವೇ ತಾನೇ ಈ ಅಮೂಲ್ಯ ಸಂಪತ್ತನ್ನು 
 ಒಪ್ಪಿಸಬೇಕು ?
  
 ಇಂಗ್ಲಿಷ್, ಇನ್ನಿತರ ಭಾಷೆಗಳಿಗೆ, ಅಣ್ಣತಮ್ಮಂದಿರ, ಅಕ್ಕತಂಗಿಯರ, 
 ಸ್ನೇಹಿತರ ಸ್ಥಾನ ಕೊಡಬಹುದಲ್ಲವೇ ?
 ಕನ್ನಡಕ್ಕೆ ಮಾತ್ರ ಉನ್ನತವಾದ ತಾಯಿಯ ಸ್ಥಾನವೊಂದೇ ಸರಿ ಅಲ್ಲವೇ?
  
 ಹೌದು!! ಹೌದು!! 
  
 ದಿನ ನಿತ್ಯವೂ ಪಾಲ್ಗೊಳ್ಳೋಣ, ಕನ್ನಡದ ಉತ್ಸವದಲ್ಲಿ. 
 ದಿನ ನಿತ್ಯವೂ ಆಚರಿಸೋಣ ಕನ್ನಡತನವನ್ನು. 
  
 ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
  
 - ಸುಮನ ಧ್ರುವ 

************************************************************************