ನಲುಮೆಯ ಓದುಗರೇ ನಮಸ್ಕಾರ! ‘ಭಾರತೀಯ ಕಾವ್ಯ ಅರಳಿ ಘಮಘಮಿಸುವ ಹೂವಾದದ್ದು, ತನ್ನ ಅತ್ಯುನ್ನತಿಯ,ಶಿಖರವನ್ನು ಸ್ಪರ್ಶಿಸಿದ್ದು ಮೂರುಸಲ. ಮೊತ್ತ ಮೊದಲು ಆದಿಕವಿ ವಾಲ್ಮೀಕಿಯ ತಪೋಸನ್ನಿಧಿಯಲ್ಲಿ; ಎರಡನೆಯದಾಗಿ ಕವಿಕುಲಗುರು ಕಾಳಿದಾಸನ ಕಲಾಜಾಲದಲ್ಲಿ; ನಂತರ ಗುರುದೇವ ರವೀಂದ್ರರ ಗೀತಾಂಜಲಿಯಲ್ಲಿ’. ಇದು ನಾನು ನನ್ನ ಹೈಸ್ಕೂಲಿನ ದಿನಗಳಲ್ಲಿ ರವೀಂದ್ರನಾಥ ಠಾಕೂರರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಮಾಡಿದ್ದ ಭಾಷಣದ ಸಾಲುಗಳು. ಬಹುಶ: ಹಾ.ಮಾ.ನಾಯಕರ ಪುಸ್ತಕದ ಸಾಲುಗಳಿರಬಹುದು ಇವು.(ಸರಿಯಾಗಿ ನೆನಪಿಲ್ಲ) ಒಂದಕ್ಷರ ಆಚೀಚೆಯಾಗದಂತೆ ಇನ್ನೂ ನೆನಪಲ್ಲಿದ್ದದ್ದು ಅಚ್ಚರಿ. ನುಡಿದು ಬೇಸತ್ತಾಗ ದುಡಿದುಡಿದು ಸತ್ತಾಗ ಜನಕ ಹಿಗ್ಗಿನ ಹಾಡು ನೀಡಿದ, ಭಾರತ ಭಾಗ್ಯವಿಧಾತನ ಜಯಗಾಥೆಯನ್ನು ಮೊಳಗಿಸಿದ ರವೀಂದ್ರನಾಥ ಠಾಕೂರರ ಜನ್ಮದಿನ ಇದೇ ಮೇ ಏಳರಂದು. ಆ ಮಹಾನ್ ಚೇತನಕ್ಕೊಂದು ಭಾವನಮನ. ‘ಇವನಾರವ ಇವನಾರವ ಎನ್ನದಿರಯ್ಯ. ಇವ ನಮ್ಮವ ಇವ ನಮ್ಮವ ಎಂದೆಣಿಸಯ್ಯ’ ಎಂಬ ವಸುಧೈವ ಕುಟುಂಬಕಂ ದ ತತ್ವ ಸಾರಿದ ಮಹಾನ್ ಶರಣ ಬಸವಣ್ಣ ಜನಿಸಿದ್ದು ಅಕ್ಷಯ ತದಿಗೆಯಂದು..ಬಾಳಿದ್ದು ಕಿಂಚಿತ್ತೂ ಕಲಂಕವಿರದ ಅಕ್ಷಯ ಬದುಕನ್ನು..ನೀಡಿದ್ದು ಬಾಳು ಹಸನಾಗಿಸುವ,ದಿವಿನಾಗಿಸುವ ವಚನಗಳ ಅಕ್ಷಯ ನಿಧಿಯನ್ನು. ಅಂಥ ಶರಣನಿಗೆ ಶರಣು ಶರಣಾರ್ಥಿಗಳು. ಬಸವೇಶ್ವರ ಹಾಗೂ ಅವನ ಕಾಲದ ಬಗ್ಗೆ ಆಳವಾದ ಅಧ್ಯಯನ ನಡೆಸಿ, ಹತ್ತು ಹಲವಾರು ಅಪೂರ್ವ ಮಾಹಿತಿಗಳನ್ನು ಕಲೆಹಾಕಿ, ಇತಿಹಾಸಕ್ಕಪಚಾರವಾಗದಂತೆ ಅಧಿಕೃತ ದಾಖಲೆಗಳನ್ನೊಳಗೊಂಡ ತಮ್ಮ ತಂದೆಯವರು ಬರೆದ ಪುಸ್ತಕದ ಬಗ್ಗೆ ಹೆಮ್ಮೆಯಿಂದ ಬರೆದಿದ್ದಾರೆ ಶ್ರೀವತ್ಸ ದೇಸಾಯರು ‘ಪುಸ್ತಕಕ್ಕೊಂದು ಕಥೆ’ಸರಣಿಯಲ್ಲಿ. ಆಸಕ್ತರು ಖಂಡಿತ ಆ ಪುಸ್ತಕವನ್ನೊಮ್ಮೆ ಅವಲೋಕಿಸಬಹುದು. ನಮ್ಮ ನಮ್ಮ ಓರೆಕೋರೆಗಳನ್ನಷ್ಟು ನಾವು ತಿದ್ದಿಕೊಂಡರೆ ಜಗವೇ ಹಸನಾದೀತು ಅಲ್ಲವೇ? ‘ಲೋಕದ ಡೊಂಕ ನೀವೇಕೆ ತಿದ್ದುವಿರಿ?’ ವಚನ ಗಾಯನ ನಿಮ್ಮೆಲ್ಲರ ಸಲುವಾಗಿ ಶ್ರೀರಂಜಿನಿ ಅವರಿಂದ. ಕೋವಿಡ್ ನಂಥ ಕಷ್ಟ ಕಾಲದಲ್ಲೂ ತಮ್ಮ ಹವ್ಯಾಸಕ್ಕೆ ನೀರೆರೆದು ,ಪೋಷಿಸಿ, ತಮ್ಮ ಮಗಳನ್ನೂ ತಮ್ಮ ಟೀಮಿನಲ್ಲಿ ಶಾಮೀಲು ಮಾಡಿಕೊಂಡು ಸಾರ್ಥಕ ಭಾವದಿಂದ ಸಂಭ್ರಮಿಸಿದ್ದಾರೆ ಲಕ್ಷ್ಮೀನಾರಾಯಣ ಗುಡೂರ ಅವರು. ಅದ್ಯಾವ ಹವ್ಯಾಸವಪ್ಪ ಎಂದಿರಾ? ಬನ್ನಿ, ಓದಿ ತಿಳಿದುಕೊಳ್ಳಿ. ಅಂದ ಹಾಗೆ ಇದು ನನ್ನ ಕಡೆಯ ಸಂಪಾದಕೀಯ ಬರಹ. ನನ್ನ ಮೇಲೆ ನಂಬುಗೆಯಿಟ್ಟು ಇಷ್ಟುದಿನ ಅನಿವಾಸಿಯ ಚುಕ್ಕಾಣಿಯನ್ನು ನನ್ನ ಕೈಯಲ್ಲಿಟ್ಟ ಎಲ್ಲ ಹಿರಿಯರಿಗೆ, ಹಿಂದೆ ನಿಂತು ಪ್ರೋತ್ಸಾಹಿಸಿ ಜಲಧಿಲಂಘನಗೈಸಿದ ಜಾಂಬವಂತರಿಗೆ, ಸಕಾಲಕ್ಕೆ ಅನಿವಾಸಿಯ ಉಗ್ರಾಣಕ್ಕೆ ಸರಕು ಸರಬರಾಜು ಮಾಡಿದ ಬರಹಗಾರರಿಗೆ, ‘ಸಿಂಗನ ಮುಂದೆ ಮಂಗ’ನಂತೆ ನಾ ಬರೆದದ್ದನ್ನು, ಸಂಪಾದಿಸಿದ್ದನ್ನು ಓದಿ,ಮೆಚ್ಚಿದ ಎಲ್ಲ ಓದುಗರಿಗೆ, ಸಮಯಾಸಮಯದ ಹಂಗಿಲ್ಲದೇ ನಾ ಕೇಳಿದಾಗೆಲ್ಲ ಸಹಾಯ ಮಾಡಿದ ಸಹೃದಯರಿಗೆ, ಕೊನೆಯದಾಗಿ ‘ಧರ್ಮೇ ಚ..ಅರ್ಥೇ ಚ.’ ದ ಜೊತೆಗೆ ‘ಸಂಪಾದಕೀಯೇಚ’ ದಲ್ಲೂ ನಿಜದ ಅರ್ಧಾಂಗನಾದ ಪತಿರಾಯ ಪ್ರಸನ್ನ ಅವರಿಗೂ ನಾನು ತುಂಬು ಆಭಾರಿ. ಅನಿವಾಸಿಯ ಚುಕ್ಕಾಣಿ ಇದೀಗ ಅತಿ ಸಮರ್ಥ ಕೈಗಳಲ್ಲಿ .. ಸ್ವಾಗತ ಶಿವಪ್ರಸಾದ್ ಅವರೇ. ನಾವು ಬರತೇವಿನ್ನ ನಮ್ಮ ನೆನಪಿರಲಿ. ನಂ ನಮಸ್ಕಾರ ನಿಮಗ. ~ ಸಂಪಾದಕಿ
’ಬಸವೇಶ್ವರ ಮತ್ತು ಅವನ ಕಾಲ’
’ಅದು ಒಂದು ಅತ್ಯಂತ ಮಹತ್ವದ ಸಂಶೋಧಕ ಗ್ರಂಥ -ಡಾ ಪಿ ಬಿ ದೇಸಾಯಿಯವರ Basaveshwara and his Times.' ಆ ಪುಸ್ತಕವನ್ನು ನಾನು ಅನುವಾದ ಮಾಡ ಬೇಕೆಂದಿದ್ದೇನೆ. ಅದಕ್ಕೆ ಅನುಮತಿ ಕೊಡಿಸುತ್ತೀರಾ’ ಎಂದು ಧಾರವಾಡದ ಮಿತ್ರ ಜಿ ಸಿ ತಲ್ಲೂರ್ ನನ್ನನ್ನು ಕೇಳಿದರು. ಅದು ಜಾನೇವರಿ 2015ರಲ್ಲಿ. ನಾನು ಆಗ ಧಾರವಾಡದಲ್ಲಿದ್ದೆ. ನನ್ನ ಬಾಲ್ಯದ ಗೆಳೆಯ ಅರುಣನ ಮಿತ್ರರಾಗಿದ್ದ ತಲ್ಲೂರು ಸಹ ಅವನಂತೆ ವೃತ್ತಿಯಿಂದ ಎಂಜನಿಯರ್. ಬಹಳಷ್ಟು ಓದಿಕೊಂಡವರು. ’ಆ ಆಂಗ್ಲ ಪುಸ್ತಕ ಕನ್ನಡ ಜನರು ಓದುವಂತಾಗ ಬೇಕೆಂದು ನನ್ನ ಬಹಳ ದಿನಗಳ ಅಭಿಲಾಷೆಯಾಗಿದೆ,’ ಅಂದರು. ನನ್ನ ತಂದೆ ಡಾ ಪಾಂಡುರಂಗರಾವ ಭೀಮರಾವ್ ದೇಸಾಯಿಯವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ (ಕವಿವಿ)ದಲ್ಲಿ ಪ್ರಾಚೀನ ಇತಿಹಾಸ ವಿಭಾಗದಲ್ಲಿ ಪ್ರೊಫೆಸರ್ ಮತ್ತು ಕನ್ನಡ ಸಂಶೋಧನ ಸಂಸ್ಥೆಯ ನಿರ್ದೇಶಕರು ಆಗಿ ಕೆಲಸಮಾಡುತ್ತಿದ್ದಾಗ 1967ರಲ್ಲಿ ಜರುಗಿದ ಬಸವೇಶ್ವರ ಅಷ್ಟ ಶತಮಾನೋತ್ಸವದ ಸಂದರ್ಭಕ್ಕೆ ಸರಿಯಾಗಿ ಪ್ರಕಟಗೊಳ್ಳುವ ಉದ್ದೇಶದಿಂದ ಆಗಿನ ಕವಿವಿ ಉಪಕುಲಪತಿಯಾಗಿದ್ದ ಡಾ ಡಿ ಸಿ ಪಾವಟೆಯವರು ಆಗ ವಿಖ್ಯಾತ ಇತಿಹಾಸಜ್ಞರಾಗಿದ್ದ ದೇಸಾಯಿ ಅವರಿಗೆ ಐತಿಹಾಸಿಕ ದಾಖಲ್ಲೆಗಳನ್ನು ಅಭ್ಯಸಿಸಿ ಒಂದು ಅಧಿಕೃತ ಸಂಶೋಧನ ಗ್ರಂಥ ಬರೆಯಲು ನಿರ್ದೇಶಿಸಿದ್ದರು. ಮೊದಲಿಂದಲೂ ಬಸವಣ್ಣನ ಮೇಲೆ ಅವರಿಗಿದ್ದ ಪ್ರೀತಿ ಮತ್ತು ಆಸ್ಥೆಯಿದ್ದುದರಿಂದ (ನನಗೆ ಅನೇಕ ಬಾರಿ ಈ ವಿಷಯವನ್ನು ಹೇಳಿದ್ದರು) ಅವರು ಒಪ್ಪಿಕೊಂಡು ಸುಮಾರು ಏಳೆಂಟು ವರ್ಷಗಳ ಸತತ ಪರಿಶ್ರಮದ ಫಲವಾಗಿ ಆ ಇಂಗ್ಲಿಷ್ ಪುಸ್ತಕವನ್ನು ಹೊರತಂದರು. ಮಣಿಪಾಲ್ ಪವರ್ ಪ್ರೆಸ್ ನವರು ಸುಂದರವಾಗಿ ಮುದ್ರಿಸಿಕೊಟ್ಟರು. ಕವಿವಿಯೇ ಅದರ ಪ್ರಕಾಶಕರಾಗಿದ್ದರು. 1968ರಲ್ಲಿ ಹೊರಬಂದ ಪುಸ್ತಕ ವಿದ್ವಾಂಸರ ಮನ್ನಣೆ ಪಡೆಯಿತು. ಆದರೆ ಆರು ದಶಕಗಳಾಗಿದ್ದರೂ ಅದರ ಪುನರ್ಮುದ್ರಣವಾಗಲಿ, ಎರಡನೆಯ ಅವೃತ್ತಿಯಾಗಲಿ ಆ ಹೊಣೆಯನ್ನು ವಿಶ್ವವಿದ್ಯಾಲಯವಾಗಲಿ ಹೊತ್ತುಕೊಳ್ಳಲಿಲ್ಲ. ದಾದಾಸಾಹೇಬ ಚಿಂತಾಮಣಿ ಪಾವಟೆಯವರು ಆ ಕೃತಿಯ ಕರಡುಪ್ರತಿಯನ್ನೇ ಓದಿ ಮೆಚ್ಚಿಕೊಂಡು ಸಂತೋಷದಿಂದ ಅದಕ್ಕೆ 1967ರಲ್ಲೇ ಮುನ್ನುಡಿ ಬರೆದರೂ 1968ರಲ್ಲಿ ಹೊರಬರುವಷ್ಟರಲ್ಲಿ ಪಂಜಾಬದ ಗವರ್ನರರಾಗಿ ನೇಮಕಗೊಂಡಿದ್ದರು. ಬಸವ ಸಮಿತಿಯವರು ಅದರ ಸಾವಿರ ಪ್ರತಿಗಳನ್ನು ಅಚ್ಚು ಹಾಕಿಸಿ ಮಾರಾಟ ಮಾಡಿದ್ದರು ಎಂದು ನನಗೆ ಗೊತ್ತಾದುದು, ಅದರ ಅನುವಾದವನ್ನು ಹೇಗೆ ಹೊರತರುವುದು ಅನ್ನುವ ಪ್ರಯತ್ನದಲ್ಲಿದ್ದಾಗ. ಮೂಲ ಲೇಖಕರು ಬದುಕಿದ್ದರೆ ಅದರ ಕನ್ನಡ ಆವೃತ್ತಿಯನ್ನು ಅವರೇ ಬರೆಯಬಹುದಿತ್ತೇನೊ. ಅವರು 1974ರಲ್ಲಿ ಹಟಾತ್ತನೆ ಸ್ವರ್ಗವಾಸಿಯಾಗಿದ್ದರು.

ಎಡಗಡೆ: ಮೂಲ ಇಂಗ್ಲಿಷ್ ಆವೃತ್ತಿ ; ಉಳಿದೆರಡು ಇತ್ತೀಚಿನ ಕನ್ನಡ ಮತ್ತು ಇಂಗ್ಲಿಷ್ ಪ್ರಕಾಶನಗಳು (ಗದಗ)
ಅನುವಾದಕರಿಗಾಗಿ ಅನ್ವೇಷಣೆ ತಲ್ಲೂರ ಅವರು ತಮ್ಮ ಕೆಲಸದಲ್ಲಿ ವರ್ಷವಿಡೀ ವ್ಯಸ್ತವಾಗಿದ್ದರಿಂದ ಒಂದು ಪದವೂ ಅನುವಾದವಾಗಿರಲಿಲ್ಲ ಎಂದು ಅವರ ಅನುಮತಿಯಿಂದ ಬೇರೆ ದಾರಿ ಹುಡುಕುತ್ತಿದ್ದೆ. ಇಷ್ಟರಲ್ಲಿ ಯೋಗಾಯೋಗದಿಂದ ಗದುಗಿನ ಪೂಜ್ಯ ತೋಂಟದ ಶ್ರೀ ಸಿದ್ಧಲಿಂಗ ಸ್ವಾಮಿಗಳು (ಅವರು ಈಗ ಇಲ್ಲ) ಇದರ ಬಗ್ಗೆ ಆಸ್ಥೆ ತೋರಿಸಿದ್ದರು. ’ಪುಸ್ತಕದ ಸ್ವಾಮ” ಎಂದೇ ಹೆಸರಾಗಿದ್ದ ಶ್ರೀಗಳು ನೂರಾರು ಪುಸ್ತಕಗಳ ಪ್ರಕಾಶನ ಮಾಡಿದ್ದರು. ಸ್ವತಃ ಈ ಪುಸ್ತಕವನ್ನು ಓದಿ ಅದರ ಅನುವಾದದ ಹೊಣೆ ಹೊತ್ತರು ಈ ಹಿಂದೆ ಅದನ್ನು ಒಬ್ಬರು ಅನುವಾದಿಸಲು ಪ್ರಯತ್ನ ಮಾಡಿ ಕೈಬಿಟ್ಟಿದ್ದ ಸುದ್ದಿ ಗೊತ್ತಾಗಿತ್ತು. ನಮಗೆಲ್ಲ ಆತ್ಮೀಯರಾಗಿದ್ದ ಡಾ ಸಿದ್ಧಲಿಂಗ ಪಟ್ಟಣಶೆಟ್ಟಿಯವರಿಗೆ ಮುಂದಿನ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು. ಅದರ ಫಲವಾಗಿ ಪ್ರೊ ಸದಾನಂದ ಕನವಳ್ಳಿಯವರು ಅರ್ಧ ಮರ್ಧ ಅನುವಾದ ಮಾಡಿದ ಕರಡು ಪ್ರತಿ ಕೈಗೆ ಸಿಕ್ಕಿತು. ಅದನ್ನು ಅತ್ಯಂತ ಕಾಳಜಿಯಿಂದ ಪರಿಷ್ಕರಿಸಿ ಪೂರ್ಣಗೊಳಿಸಿದ್ದಷ್ಟೇ ಅಲ್ಲ ಅದರ ಭಾಷೆ, ಬಿಟ್ಟು ಹೋಗಿದ್ದ ವಾಕ್ಯಗಳು, ಮೂಲ ಇಂಗ್ಲಿಷ್ ಗ್ರಂಥದಿಂದ ಅನುವಾದ ಆಗದೇ ಇದ್ದ ವಚನಗಳು, ಇವೆಲ್ಲವನ್ನು ವಿಶ್ರಾಮವಿಲ್ಲದೆ ಪರಿಶ್ರಮಿಸಿ ಸಿದ್ಧಗೊಳಿಸಿದ್ದಕ್ಕಾಗಿ ಅವರ ಮತ್ತು ಅವರ ಮಡದಿ ಹೇಮಾ ಅವರ ಋಣವನ್ನು ನಮ್ಮ ಕುಟುಂಬದವರು ಎಂದೂ ಮರೆಯಲಾರರು. ಐವತ್ತು ವರ್ಷಗಳ ಹಿಂದೆ ಕವಿವಿಯ ಕನ್ನಡ ಸಂಶೋಧನ ಸಂಸ್ಥೆ ಅದನ್ನು ಪ್ರಕಟಿಸಿದ್ದರಿಂದ ಹಕ್ಕುಗಳು ಅವರ ಹತ್ತಿರ ಇದ್ದುದರಿಂದ ನನ್ನ ಸೋದರರ ಪರವಾಗಿ ಕವಿವಿಯ ಉಪಕುಲಪತಿಗಳ ಪರವಾನಗಿ ಕೇಳಲು ಹೋದಾಗ ಸಿಕ್ಕವರು ಡಾ ಪ್ರಮೋದ ಗಾಯಿಯವರು. ಅವರ ಅಜ್ಜನ ಅಣ್ಣನೇ ಪಿ ಬಿ ದೇಸಾಯಿಯವರ ಸಹೋದ್ಯೋಯಿಯಾಗಿ ಊಟಿಯಲ್ಲಿ ಕೆಲಸ ಮಾಡಿದ್ದು ಇನ್ನೊಂದು ಕಾಕತಾಳೀಯ! ಚಿಕ್ಕವನಿದ್ದಾಗ ಅವರ ಮನೆಯಲ್ಲಿ ಅವರ ಮಕ್ಕಳೊಂದಿಗೆ ನಾವು ಸಹೋದರರು ಆಟವಾಡುತ್ತಿದ್ದೆವು.ಆ ಸಮಯದಲ್ಲೇ ತಮಿಳು ಮಯವಾದ ಊಟಿಯಲ್ಲಿ ಕನ್ನಡದ ಗಂಧವೂ ಇದ್ದಿರದ ನನಗೆ ಪ್ರಪ್ರಥಮ ವಚನವನ್ನು (’ಕಳ ಬೇಡ, ಕೊಲಬೇಡ’) ನನ್ನ ತಂದೆ ನನಗೆ ಕಲಿಸಿದ್ದು. ಈಗ ಪ್ರಮೋದ ಗಾಯಿ ಅವರ ಸಹಾಯದಿಂದ ವಿಶ್ವವಿದ್ಯಾಲಯದ ಪ್ರಸಾರಂಗದಿಂದ ಕಾಪಿರೈಟ್ ಅನುಮತಿ ಪಡೆದೆವು. 2017ರ ಬಸವ ಜಯಂತಿಯಂದು ಸರಿಯಾಗಿ ಐವತ್ತು ವರ್ಷಗಳ ನಂತರ ಕನ್ನಡ ಅನುವಾದ ಪ್ರಕಟವಾಗಿ ತೋಂಟದ ಶ್ರೀಮಠದಲ್ಲಿ ಶ್ರೀ ಸಿದ್ಧಲಿಂಗ ಸ್ವಾಮಿಗಳಿಂದ ಲೋಕಾರ್ಪಣೆಗೊಂಡಿತು. ಅದೊಂದು ಅವಿಸ್ಮರಣೀಯ ಘಟನೆ. ಪ್ರೊ ಸದಾನಂದ ಕನವಳ್ಳಿಯವರ ಕುಟುಂಬದವರೂ ಅಂದು ಉಪಸ್ಥಿತರಿದ್ದರು. ಅದೇ ಸಮಯದಲ್ಲೇ ಶ್ರೀಗಳು ಆಂಗ್ಲ ಅವೃತ್ತಿಯ ಪುನರ್ಮುದ್ರಣದ ನಿರ್ಧಾರವನ್ನೂ ತೆಗೆದುಕೊಂಡು 2018ರ ಬಸವ ಜಯಂತಿಯಂದು ಅದೂ ಬಿಡುಗಡೆಯಾಯಿತು.
ಲೇಖಕ ಎದುರಿಸ ಬೇಕಾದ ’ಅಡಚಣೆಗಳು.’

ಡಿ ಸಿ ಪಾವಟೆಯವರು ತಮ್ಮ ಮುನ್ನುಡಿಯಲ್ಲಿ (1967) ಹೇಳುತ್ತಾರೆ: ”It is therefore befitting the occasion (octocentenary) that a historical account of his life and career, based on authentic sources, should be published. Such historical account as there is at present is either marked by communal prejudices or by excessive deification of his personality. Actually there are enormous difficulties in compliling a true biography of Basaveshwar; for Basaveshwar (sic) does not figure in contemporary

inscriptions and the extant literary works do not furnish adequate historical facts about him. Thus the task poses a grave challenge to the historian and biographer.'' ಶಾಸನ ಶಾಸ್ತ್ರಜ್ಞರಾಗಿದ್ದ ಪಿ ಬಿ ದೇಸಾಯಿಯವರು ತಮ್ಮ ಅಧ್ಯನದ ಬಗ್ಗೆ ತಮ್ಮ ಪ್ರಸ್ತಾವನೆಯಲ್ಲಿ ಬರೆಯುತ್ತಾರೆ: ”ಇಲ್ಲಿಯ ವರೆಗೆ ಶೋಧಿಸಿದ ಈ ಅವಧಿಯ ಶಿಲಾಶಾಸನಗಳಲ್ಲಿ ಈ ಗುರುವಿನ (ಬಸವಣ್ಣ) ಕುರಿತು ಒಂದು ಸಾಮಾನ್ಯ ಉಲ್ಲೇಖವೂ ಸಿಗಲಾರದು.” ಆದುದರಿಂದ ಅವರು ’ಪರೀಕ್ಷೆ ನಡೆಸಿದ’ ಏಳು ರೀತಿಯ ಮಾರ್ಗಗಳನ್ನು ಹೇಳುತ್ತಾರೆ. ಅದರಲ್ಲಿ ಮುಖ್ಯವಾದವು: ಪ್ರಶ್ನಾತೀತವಾಗಿ ವಿಶ್ವಾಸಾರ್ಹ ಆಗಿರುವ ಅನಂತರದ ಶಾಸನಗಳಿಂದ ಮಾಹಿತಿ ಸಂಗ್ರಹಿಸುವದು; ಈ ಗುರುವಿನೊಡನೆ ಸಮೀಪದಿಂದ ಅಥವಾ ದೂರದಿಂದ ಸಂಪರ್ಕ ಹೊಂದಿದ ಸಮಕಾಲೀನ ಗಣ್ಯ ಪುರುಷರಿಗೆ ಸಂಬಂಧಪಟ್ಟ ಶಿಲಾಶಾಸನಗಳನ್ನು ಅಭ್ಯಸಿಸುವದು; ಅವನು ಜೀವಿಸಿದ್ದ ... ಸ್ಥಳಗಳ ಮತ್ತು ಪ್ರದೇಶಗಳ ಬಗ್ಗೆ ಶಿಲಾಶಾಸನಗಳ ಸಾಕ್ಷ್ಯಾಧಾರವನ್ನು ಸಂಗ್ರಹಿಸುವದು; ... ವಿರೋಧಿ ಪಾಳೆಯಗಳಲ್ಲಿಸೃಷ್ಟಿಸಿದ ಕೃತಿಗಳು ಆಧಾರರಹಿತ ವಿವರಗಳು ಮತ್ತು ವಿಮರ್ಶೆಗೊಳಪಡದ, ಮತ್ತು ಪೂರ್ವಾಗ್ರಹಪೀಡಿತ ಲೇಖಕರುಗಳನ್ನು ಸಂಪೂರ್ಣವಾಗಿ ತಿರಸ್ಕರಿಸುವದು. ”ಈ ರೀತಿಯಲ್ಲಿ ಆರೇಳು ವರ್ಷಗಳಾದರೂ ಹಗಲು ರಾತ್ರಿ ಸಂಶೋಧನೆಯಲ್ಲಿ ಅವರು ನಿರತರಾದದ್ದನ್ನು ನಾನು ಕಾಲೇಜಿನಲ್ಲಿದ್ದಾಗ ಪ್ರತ್ಯಕ್ಷ ಕಂಡಿದ್ದೇನೆ. ತಮ್ಮನ್ನು ಪೂರ್ತಿ ಅದರಲ್ಲಿ ತೊಡಗಿದ್ದನ್ನು ವಿವರಿಸುತ್ತ ಅವರು ನನ್ನ ಮುಂದೆ ಹೇಳಿದ ಮಾತು ಇನ್ನೂ ನೆನಪಿನಲ್ಲಿದೆ: ” ನಾನು ”ಜೈನಿಸಂ ಇನ್ ಸೌಥ್ ಇಂಡಿಯಾ” (ಅವರಿಗೆ ಡಿ ಲಿಟ್ ಡಿಗ್ರಿ ತಂದು ಕೊಟ್ಟ ಕೃತಿ) ಬರೆಯುವಾಗ ಪೂರ್ತಿಯಾಗಿ ಜಿನನಾಗಿದ್ದೆ; ಈಗ ಪೂರ್ಣ ಬಸವಮಯನಾಗಿ ಇದನ್ನು ಬರೆಯುತ್ತಿದ್ದೇನೆ!” ತಮ್ಮ ಮುನ್ನುಡಿಯಲ್ಲಿ ಡಿ ಸಿ ಪಾವಟೆಯವರು ತಾವು ಸಂತುಷ್ಟರಾಗಿ ಹೀಗೆ ಬರೆದಿದ್ದಾರೆ: ”ಅದನ್ನು ಕುರಿತು ಅವರು ಬಹಳ ಪರಿಶ್ರಮಪಟ್ಟದ್ದು ನನಗೆ ಸಂತೋಷ ತಂದಿದೆ. ಈ ವಿಷಯದ ಮೇಲೆ ಹೊಸ ಬೆಳಕನ್ನು ಚೆಲ್ಲಲು ಸಮರ್ಥರಾಗಿ ಶಾಸನಗಳು, ಅಂತೆಯೇ ಸಾಹಿತ್ಯಿಕ ಮೂಲಗಳ ಆಧಾರದ ಮೇಲೆ ಒಂದು ವಸ್ತುನಿಷ್ಠ ಅಧ್ಯಯನವನ್ನು ಪ್ರಸ್ತುತ ಪಡಿಸಿದ್ದಾರೆ. ತಕ್ಕ ಮಟ್ಟಿಗೆ ಕಠಿಣವಾದ ಈ ವಿಷಯವನ್ನು ಕುರಿತು ಅವರದು ಕೊನೆಯ ಮಾತೆಂದು ಯಾರೂ ಸೂಚಿಸುವದಿಲ್ಲ. ...ಎಲ್ಲ ವಿದ್ವಾಂಸರು ಲಕ್ಷ್ಯ ವಹಿಸಿ ಅಭ್ಯಸಿಸಲು ಪ್ರಸ್ತುತ ಪುಸ್ತಕವು ನಿಶ್ಚಿತವಾಗಿಯೂ ಅರ್ಹವಾಗಿದೆ. ಈ ಅಮೂಲ್ಯ ಕೃತಿಯನ್ನು ಕುರಿತು ನಾನು ನನ್ನ ಅಪಾರ ಶ್ಲಾಘನೆಯನ್ನು ವ್ಯಕ್ತಪಡಿಸಲೇಬೇಕು.” (ಸಿದ್ಧಲಿಂಗ ಪಟ್ಟಶೆಟ್ಟಿಯವರ ಅನುವಾದ.). ಪುಸ್ತಕದ ಕನ್ನಡ ಅನುವಾದದ ಸಿದ್ಧತೆಯ ಸಮಯದಲ್ಲಿ ವಿದ್ವಾಂಸರ ಸಂಪರ್ಕ ಮಾಡಿದಾಗ ಈ ವಿಷಯದಲ್ಲಿ ಯಾವುದೂ ಮಹತ್ವದ ಹೊಸ ವಿಷಯವಾಗಲಿ, ಶಿಲಾಶಾಸಸಗಳಾಗಲಿ ದೊರೆತಿರುವುದು ತಮ್ಮ ಅವಗಾಹನೆಗೆ ಬಂದಿಲ್ಲ ಎಂದು ಖ್ಯಾತ ಇತಿಹಾಸಜ್ಞ ಮತ್ತು ಸಂಶೋಧಕರಾಗಿದ್ದ ಕವಿವಿದ ಡಾ (ದಿ) ಶ್ರೀನಿವಾಸ ರಿತ್ತಿಯವರು ಅಭಿಪ್ರಾಯ ಪಟ್ಟಿದ್ದರು. ’ಇಂದಿಗೂ ಹೊಸ ವಿಷಯ ಸಿಕ್ಕಿಲ್ಲವೆಂಬುದು ಅಚ್ಚರಿಯ ಮಾತು ಎನಿಸಿದರೂ ಅದು ಸತ್ಯ ’ ಎಂದು ಅಭಿಪ್ರಾಯ ಪಟ್ಟಿದ್ದಾರೆ* ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ದೇವರಕೊಂಡ ರೆಡ್ಡಿ.(Personal communication 4 May, 2022)
ಅನುವಾದಕರಿಗೆ ಸವಾಲು
ಎಲ್ಲ ಅನುವಾದಕರೂ ಒಂದು ಭಾಷೆಯಿಂದ ಇನ್ನೊಂದಕ್ಕೆ ತರ್ಜುಮೆ ಮಾಡಬೇಕಾದಾಗ ಅನೇಕ ಎಡರು ತೊಡರುಗಳನ್ನು ಎದುರಿಸಬೇಕಾಗುತ್ತದೆ, ಗದ್ಯಕ್ಕಿಂತ ಪದ್ಯದಲ್ಲಿ, ಮತ್ತು ಪುರಾತನದಿಂದ ಅರ್ವಾಚೀನ ಭಾಷೆಯಲ್ಲಿ. ವಚನಗಳುಕನ್ನಡದ ವಿಶಿಷ್ಟ ಸಾಹಿತ್ಯ ಪ್ರಕಾರ ಮತ್ತು ಭಾಷೆಗೆ ನೀಡಿದ ಕೊಡುಗೆ. ಇಂಥ ಕೆಲವು ವಚನಗಳನ್ನು ಸಾಂದರ್ಭಿಕವಾಗಿ, ಅನಿವಾರ್ಯವಾಗಿ ಇಂಗ್ಲಿಷಿಗೆ ಅನುವಾದಿಸುವ ಪ್ರಸಂಗದಲ್ಲಿ ... ಕೆಲವನ್ನು ವಚನ ಶೈಲಿಯಲ್ಲಿ, ಕೆಲವನ್ನು ಗದ್ಯ ರೂಪದಲ್ಲಿ ಪಿ ಬಿ ದೇಸಾಯಿಯವರು ಅನುವಾದಿಸಿದ್ದಾರೆ. ಅನಿವಾರ್ಯವಾಗಿ ಅವು ಕೆಲವು ಸಲ ಅರ್ಥವಾದಂತೆ ಕಂಡರೂ, ಅವರ ಅನುವಾದ ಇತರ ಕೆಲವರವಚಾನುವಾದಗಳಿಗಿಂತ ಭಿನ್ನವಾಗಿದೆ, ಕಾವ್ಯಾತ್ಮಕವಾಗಿದೆ. ಅವರು ಇಂಗ್ಲಿಷಿಗೆ ತಂದ ಬಸವ, ಅಲ್ಲಮ, ಚೆನ್ನಬಸವಣ್ಣ, ನಾಗಾಂಬಾ, ಅಕ್ಕ ಮಹಾದೇವಿ ಮುಂತಾದವರ ವಚನಗಳನ್ನೇ ಒಂದು ಪುಟ್ಟ ಪುಸ್ತಕವನ್ನಾಗಿ ತರಬಹುದು. ವಚನ ಸಾಹಿತ್ಯ ಮತ್ತು ಬಸವೇಶ್ವರನ ಬಗ್ಗೆ ದೇಸಾಯರ ಸಮರ್ಪಿತ ಅಧ್ಯಯನ ಪ್ರಶಂಸನೀಯವಾದುದು.” (ಸಿದ್ಧಲಿಂಗ ಪಟ್ಟಣಶೆಟ್ಟಿ, ’ಪರಿಷ್ಕರಣ ಕುರಿತು’ ಪು xv; ಬಸವೇಶ್ವರ ಮತ್ತು ಅವನ ಕಾಲ; 2017)
(ಚಿತ್ರದಲ್ಲಿ ಡಾ ಹೇಮಾ ಮತ್ತು ಡಾ ಸಿದ್ಧಲಿಂಗ ಪಟ್ಟಣಶೆಟ್ಟಿ) ಪರಿಷ್ಕರಣೆಯ ಸಮಯದಲ್ಲಿ ಪಟ್ಟಣಶೆಟ್ಟಿಯವರಿಗೆ ಇನ್ನೊಂದು ಸಮಸ್ಯೆಯನ್ನು ಬಗೆಹರಿಸಬೇಕಾಯಿತು. ಲೇಖಕರು ವಚನಗಳಿಗೆ ಇಂಗ್ಲಿಷಿಗೆ ಅನುವಾದ ಮಾಡುವಾಗ ಆಗಿನ ಕಾಲದ ಆಕರ ಗ್ರಂಥಗಳಲ್ಲಿಯ ಅಂಕಿಯನ್ನು ಕೊಟ್ಟಿದ್ದು, ಕೆಲವನ್ನು ಬಿಟ್ಟಿದ್ದರು. ಅವುಗಳನ್ನು ಕನ್ನಡ ಆವೃತ್ತಿಯಲ್ಲಿ ಸೇರಿಸುವಾಗ ವಚನಕಾರರ (ಅಲ್ಲಮ, ಚೆನ್ನಬಸವಣ್ಣ, ಅಕ್ಕ್ಕಮಹಾದೇವಿ ಸಹ) ಮೂಲ ವಚನಗಳನ್ನು ಹುಡುಕ ಬೇಕಾಯಿತು. ಕನ್ನಡಕ್ಕೆ ಮರುಅನುವಾದ ಮಾಡುವದು ಉಚಿತವಲ್ಲದ್ದರಿಂದ, ಅದು ಕಷ್ಟತರವಾದರೂ ನಿಭಾಯಿಸಿದ್ದಾರೆ. ಅನೇಕರು ವಚನಗಳನ್ನು ಇಂಗ್ಲಿಷಿಗೆ ಅನವಾದಿಸಿದ್ದಾರೆ. ಅವರಲ್ಲಿ ಎ ಕೆ ರಾಮಾನುಜನ್ ಅವರ Speaking of Śiva, Penguin, 1973, ಪ್ರಸಿದ್ಧ ಮತ್ತು ಅನೇಕರಿಂದ ಮನ್ನಣೆ ಪಡೆದ ಕೃತಿಗಳಲ್ಲೊಂದಾಗಿದೆ. ಅದರಲ್ಲಿಯ ಅನುವಾದ ಕಾವ್ಯಮಯವಾಗಿದ್ದು ಮೂಲದ ಅರ್ಥಕ್ಕೆ ನಿಷ್ಠವಾಗಿವೆ. ಆದರೆ ಅವು ಆಯ್ದ ವಚನಗಳು ಮಾತ್ರ. ಎಲ್ಲವೂ ಇಲ್ಲ. ಅದರ ಪ್ರಸ್ತಾವನೆಯಲ್ಲಿ ಅವರು ಅನುವಾದಕರಿಗೆ ಹೇಳುವ ಕಿವಿಮಾತುಗಳು ಉಂಟು.ಉದಾ: A translation has to be true to the translator no less than to the originals. He cannot jump off his own shadow… In the act of translating, ‘the Spirit killeth and Letter giveth Life.’ etc. (p12 – 13). ಅನೇಕ ಮಾತುಗಳು ಅನುಕರಣೀಯ.

ಪುಸ್ತಕದ ಬಗ್ಗೆ
ಮುಖ್ಯ ಒಳಪುಟದಲ್ಲೇ ಬಸವಣ್ಣನನ್ನು ಸಂಬಂಧಿಸಿದ ಅತ್ಯಂತ ಮಹತ್ವದ 1206 ಇಸವಿಯ ಅರ್ಜುನವಾಡ ಶಾಸನದ ನಾಲ್ಕು ಸಾಲುಗಳನ್ನು ಲಿಪ್ಯಂತರಿಸಿ ಕೊಟ್ಟಿದೆ. ಪುಸ್ತಕದ ಹೂರಣದಲ್ಲಿ 26 ಅಧ್ಯಾಯಗಳಿದ್ದು ಪ್ರತಿಯೊಂದರ ಕೊನೆಗೆ ಹತ್ತರಿಂದ ಮೂವತ್ತರ ವರೆಗೆ ಉಲ್ಲೇಖಗಳಿವೆ. ಮಹತ್ವದ ಐತಿಹಾಸಿಕ ವಿಷಯಗಳಾದ ಬಸವಣ್ಣನ ಬದುಕು, ಹುಟ್ಟು ಮತ್ತು ಸಾವಿನ ಇಸವಿಗಳ ಬಗ್ಗೆ ನಿಖರವಾದ ಚರ್ಚೆ, ಕಲಚುರಿ ಮನೆತನದ ಇತಿಹಾಸ, ಬಿಜ್ಜಲನ ಹೆಸರಿನ ಸರಿಯಾದ ಉಚ್ಚಾರ, ಆತನ ಧರ್ಮ (ಆತ ಜೈನನಲ್ಲ, ಆತ ಶೈವನೆ ಆಗಿದ್ದ. ಪುಟ 51), ಆತನ ಕೊಲೆಗೆ ಯಾರು ಕಾರಣ ಇತ್ಯಾದಿಗಳ ಬಗ್ಗೆ ಸುದೀರ್ಘ ಚರ್ಚೆಯಿದೆ. ಕೊನೆಯಲ್ಲಿ 28 ಫೋಟೋಗಳಿವೆ. ಅದರಲ್ಲೆರಡು ಮುಖ್ಯವಾದವು ಅರ್ಜುನವಾಡ ಶಾಸನದ್ದು. ಆ ಶಾಸನ ಪೂರ್ತಿ ಲಿಪ್ಯಂತರ ಸಹ ಅನುಬಂಧದಲ್ಲಿದೆ.
ಈ ಪುಸ್ತಕ ಅದರ ಶೀರ್ಷಿಕೆ ಹೇಳುವಂತೆ ಬಸವಣ್ಣನ ಜೀವನ ಮತ್ತು ಆತ ಬದುಕಿದ ಕಾಲಘಟ್ಟದ ಧರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಆಗುಹೋಗುಗಳನ್ನು ಎರಡು ಭಾಗಗಳಲ್ಲಿ ಚಿತ್ರಿಸುತ್ತದೆ. ಒಂದನೆಯ ಭಾಗ ಬಿಜ್ಜಳನ ಬಗ್ಗೆ. (ಲೇಖಕರು ಪುಸ್ತಕದುದ್ದಕ್ಕೂ ಬಿಜ್ಜಲ ಎಂದು ’ಲ’ ಕಾರವೇ ಸರಿಯೆಂದು ಬಳಸುತ್ತಾರೆ.) ಬಸವಣ್ಣನ ಅಧ್ಯಯನಕ್ಕೆ ಇದು ಪೂರಕ ಎಂದು. ಚಾಲುಕ್ಯರ ಸಾಮಂತನಾಗಿದ್ದ ಬಿಜ್ಜಳನಲ್ಲಿ ಎರಡು ದಶಕಗಳ ಕಾಲ ಬಸವಣ್ಣ ಸೇವೆಗೈದು ಸಾಮನ್ಯ ಕರಣಿಕನ ಸ್ಥಾನದಿಂದ ಆರಂಭಿಸಿ ಭಂಡಾರಿಯ ಉನ್ನತ ಸ್ಥಾನಕ್ಕೇರಿದ. ಕಲಚುರಿ ಮನೆತನದ ಬಿಜ್ಜಳ ಈಗಿನ ಮಂಗಳವೇಢೆಯಲ್ಲಿ (ಆಗಿನ ಮಂಗಳಿವಾಡ) ಚಾಲುಕ್ಯರ ಮಹಾಮಂಡಲೇಶ್ವರನಾಗಿದ್ದವ ತನ್ನ ಮಹತ್ವಾಕಾಂಕ್ಷೆ ಮತ್ತು ಅಪಹರಣ ವಿಧಾನಗಳಿಂದ ಚಾಲುಕ್ಯ ಸಾಮ್ರಾಜ್ಯದ ಅಧಿಪತಿಯಾಗುವದನ್ನು ಸವಿಸ್ತಾರವಾಗಿ ಹೇಳುತ್ತಾರೆ. ಅವನ ಮತ್ತು ಬಸವಣ್ಣನ ಸೌಹಾರ್ದ ಸಂಬಂಧದಲ್ಲಿ ಹೇಗೆ ವಿರಸವುಂಟಾಗಿ ಆತನ ಕೊನೆಯಲ್ಲಿ ಅಂತ್ಯವಾಗುತ್ತದೆ ಎನ್ನುವದನ್ನು ಐತಿಹಾಸಿಕ ಮತ್ತು ಶಾಸನಗಳ ಪುರಾವೆಯಿಂದ ತೆರೆದಿಡುತ್ತಾರೆ ಎರಡನೆಯ ಭಾಗದಲ್ಲಿ ಬಸವಣ್ಣನ ಕುರಿತು (ಲೇಖಕರು ಬಸವೇಶ್ವರ ಎಂದೇ ಗೌರವದಿಂದ ಸಂಬೋಧಿಸುತ್ತ ಅದರ ಕಾರಣಗಳನ್ನು ಸ್ಪಷ್ಟಪಡಿಸುತ್ತಾರೆ).ಈ ಭಾಗದಲ್ಲಿಯ 18 ಅಧ್ಯಾಯಗಳಲ್ಲಿ ಮೊದಲು ಆಕರ ಮತ್ತು ಮೌಲ್ಯ ಮಾಪನಗಳು, ಮಧ್ಯ ಭಾಗದಲ್ಲಿ ’ಈ ಗುರು’ವಿನ ಚರಿತ್ರೆಯ ರೂಪರೇಷೆ, ಅವನ ವ್ಯಕ್ತಿತ್ವ ಮತ್ತು ಆತ ಆರಂಭಿಸಿದ ಚಳುವಳಿ, ನಂತರ ಕಾಲಾನುಕ್ರಮಣಿಕೆ ಮತ್ತು ಆತನ ಜೀವನದ ದಿನಾಂಕಗಳ ಖಚಿತೆಯನ್ನು ಕುರಿತು ಚರ್ಚೆ ಇವು ಇವೆ. ಆಂದೋಲನದ ಬಗ್ಗೆ ಹದಿನೆಂಟನೆಯ ಅಧ್ಯಾಯದಲ್ಲಿ ಆತನ ಅನುವಾದಿತ ವಚನಗಳನ್ನು ವಿಪುಲವಾಗಿ ಕೊಟ್ಟಿದ್ದಾರೆ. ಕನ್ನಡ, ಇಂಗ್ಲಿಷ್ ಅಲ್ಲದೆ ಅವರಿಗೆ ಸಂಸ್ಕೃತ, ಉರ್ದು, ಮರಾಠಿ, ಪ್ರಾಕೃತ, ತೆಲುಗು ಇತ್ಯಾದಿ ಏಳು ಭಾಷೆಗಳ ಮೇಲೆ ಇದ್ದ ಪ್ರಭುತ್ವದಿಂದಾಗೆ ಬಸವಣ್ಣನ ಮೇಲಿನ ಲಭ್ಯವಿದ್ದ ಎಲ್ಲ ಸಾಹಿತ್ಯವನ್ನೂ ಅಭ್ಯಸಿಸಿದ್ದರು ಎನ್ನುವದು ತಿಳಿಯುತ್ತದೆ. ಹರಿಹರನ ರಗಳೆಗಳಲ್ಲಿಯ ಕೆಲವು ಉಲ್ಲೇಖಗಳನ್ನು ಬೇರೆ ಐತಿಹಾಸಿಕ ಪುರಾವೆಗಳೊಂದಿಗೆ ಒರೆ ಹಚ್ಚಿ ನೋಡುತ್ತಾರೆ. ಬಸವಣ್ಣನ ಬದುಕು, ಕೊಡುಗೆ ಮತ್ತು ಕಾಲಕ್ರಮಣಿಕೆಯ ಖಚಿತವಾದ ಮಾಹಿತಿಯನ್ನು ಇದರಿಂದ ಆಸಕ್ತರು ತಿಳಿದುಕೊಳ್ಳಬಹುದಾಗಿದೆ.

ಪ್ರಕಾಶಕರು: ಡಾ ಎಂ ಎಂ ಕಲಬುರ್ಗಿ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ, ಎಡೆಯೂರು-ಡಂಬಳ-ಗದಗ, 582101 ಬಸವೇಶ್ವರ ಮತ್ತು ಅವನ ಕಾಲ, ಲೇಖಕರು (ಮೂಲ ಇಂಗ್ಲಿಷ್) ಡಾ ಪಿ ಬಿ ದೇಸಾಯಿ; ಅನುವಾದ: ಪ್ರೊ ಸದಾನಂದ ಕನವಳ್ಳಿ; ಪರಿಷ್ಕರಣ: ಡಾ ಸಿದ್ಧಲಿಂಗ ಪಟ್ಟಣಶೆಟ್ಟಿ; 2017 ಪುಟಗಳು 413 ಬೆಲೆ: ರೂ. 400 (English edition: Rs 500) www.jtmathgadag.co.in M +919448144419 .
ಲೇಖನ: ಶ್ರೀವತ್ಸ ದೇಸಾಯಿ, ಡೋಂಕಾಸ್ಟರ್ UK
ಫೋಟೋ ಕೃಪೆ: ಡಿ ಸಿ ಪಾವಟೆ ಮತ್ತು ತೋಂಟದಾರ್ಯ ಮಠದ ಚಿತ್ರಗಳು ಅಂತರ್ಜಾಲದಿಂದ. ಉಳಿದ ಫೋಟೋಗಳು ಲೇಖಕರವು.
ಲೋಕದ ಡೊಂಕ
~ ಶ್ರೀರಂಜಿನಿ
ಕೋವಿಡ್ ಸಮಯದ ಹವ್ಯಾಸ




ಜಗತ್ತಿನಾದ್ಯಂತ ಕೋಲಾಹಲವುಂಟು ಮಾಡಿದ ಕೋವಿಡ್ ಮಹಾಮಾರಿಯ ಕಾರಣದಿಂದ ಮನೆಯಲ್ಲೇ ಹೆಚ್ಚು ಕಡಿಮೆ ಒಂದು ವರ್ಷ ಕೂತಿದ್ದೆವಲ್ಲ, ಅದರ ಒಂದು ವೈಯಕ್ತಿಕ ಲಾಭವೆಂದರೆ, ಸಿಕ್ಕ ಒಂದಷ್ಟು ಖಾಲಿ ಸಮಯ! ಆಸ್ಪತ್ರೆಯಲ್ಲಿ ಕೆಲಸಮಾಡುವ ವೈದ್ಯರಾದ ನಮ್ಮಿಬ್ಬರಿಗೂ ದಿನಪೂರ್ತಿ ಕೆಲಸವಿದ್ದರೂ, ಸಾಯಂಕಾಲ ಮತ್ತು ವಾರಾಂತ್ಯದಲ್ಲಿ ಅಷ್ಟಿರಲಿಲ್ಲ ಅನ್ನಬಹುದು. ಆದರಲ್ಲೂ ಹಿಸ್ಟೋಪೆಥಾಲಜಿಸ್ಟ್ ಆದ ನನಗೆ 9 – 5 ರ ದಿನ, ಅದು ಬಿಟ್ಟರೆ ಮತ್ತೇನಿಲ್ಲ. ಆ ವರ್ಷದ ಬೇಸಿಗೆಯ ರಜೆಯಲ್ಲಂತೂ ರಜೆ ಹಾಕಿ ಮನೆಯಲ್ಲಿರುವಾಗ ಮಾಡಲು ಏನನ್ನಾದರೂ ಹುಡುಕಲೇಬೇಕಿತ್ತು. ಮುಂಚೆ ಏನೆಲ್ಲಾ ಮಾಡಬೇಕೆಂಬ ಆಸೆಯಿದ್ದರೂ ಮಕ್ಕಳ ಶಾಲೆ ಮತ್ತು ಪಠ್ಯೇತರ ಚಟುವಟಿಕೆಗಳಿಂದಾಗಿ ಆಗುತ್ತಿರಲಿಲ್ಲ. ಡಾನ್ಸ್, ಈಜು, ತಾಯಿಕ್ವೊಂಡೊ, ಪಿಯಾನೊ … ಹೀಗೆ ಎಷ್ಟೆಲ್ಲ ತರಗತಿಗಳಿಗೆ ಓಡಾದುವದರಲ್ಲೇ ತಾಯ್ತಂದೆಯರ ದಿನ, ಅಲ್ಲಲ್ಲ ವಾರವೇ ಕಳೆದು ಹೋಗುತ್ತದೆ. ಆಗೆಲ್ಲ ಮಾಡಬೇಕೆಂದುಕೊಂಡ ಹೊಸ ಕೆಲಸಗಳ, ಹಾಬಿಗಳ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಅಂಥದ್ದೊಂದು ಪಟ್ಟಿ ನನ್ನದೂ ಇದೆ. ಮಾಡಲಾಗದೇ ಕೊನೆಗೆ ಅದನ್ನೆಲ್ಲ “ರಿಟೈರ್ಮೆಂಟ್ ಆದಮೇಲೆ” ಅಂತ ಒಂದು ಫೋಲ್ಡರಿನಲ್ಲಿ ಹಾಕಿ ಇಟ್ಟಾಗಿತ್ತು. ಈಗ ಸಿಕ್ತಲ್ಲ ಸಮಯ ಅಂತ ಲಿಸ್ಟಿನ ಐಟಮ್ಮುಗಳನ್ನೆಲ್ಲ ಒಂದೊಂದಾಗಿ ಮರುಪರಿಶೀಲನೆಗೆ ಒಳಪಡಿಸಲಾಯಿತು. ಯಾವುದು ಆಗುತ್ತವೆ, ಯಾವುದು ಆಗವು ಅನ್ನುವ ಎರಡು ಪಟ್ಟಿಗಳು ತಯಾರಾದವು. ಅದರಲ್ಲಿ, ಯಾವುದಕ್ಕೆ ಇನ್ವೆಸ್ಟ್ಮೆಂಟ್ ಮಾಡಲು ಸಾಧ್ಯ, ಯಾವುದು ಈಗಲೇ ಬೇಡ ಅನ್ನುವ ಕ್ಲಾಸಿಫಿಕೇಶನ್ ಮಾಡಿ, ಆ ಪಟ್ಟಿಯಿಂದ ನನ್ನ ಇಷ್ಟದ ಹಾಬಿ ಎತ್ತಿಕೊಳ್ಳಲಾಯಿತು. ಅದರಲ್ಲಿ ಮ್ಯಾಕ್ರೊ ಫೋಟೋಗ್ರಫಿ ಒಂದು. ತುಂಬಾ ದಿನದಿಂದ ಕಾಯುತ್ತಿದ್ದೆ, ಅದಕ್ಕಾಗಿ ಒಂದು ಲೆನ್ಸ್ ಕೊಳ್ಳಲು. ಈಗ ಗೃಹಮಂತ್ರಿಣಿಯನ್ನು ಒಪ್ಪಿಸಿ, ಆ ಕಾರ್ಯಕ್ಕೆ ಕೈಹಾಕಿದೆ. ಮಾರ್ಕೆಟ್ ರಿಸರ್ಚ್ ಮುಗಿದು ಹೊಸದೊಂದು ಸಿಗ್ಮಾ 105 ಮಿಮಿ ಮ್ಯಾಕ್ರೋ ಲೆನ್ಸ್ ಮನೆಗೆ ಬಂದಿತು. ನನಗೋ ಹಬ್ಬವಿಲ್ಲದೇ ಉಡುಗೊರೆ ಸಿಕ್ಕಷ್ಟು ಖುಶಿಯಾಯ್ತೆನ್ನಿ – ಇಲ್ಲಿನವರ ಮಾತಿನಲ್ಲಿ ಹೇಳುವುದಾದರೆ “Christmas came early”. ಇನ್ನು ದಾಸರು “ಗುರುವಿನ ಗುಲಾಮನಾಗುವ ತನಕ …” ಅಂತ ಹೇಳಿದ ಹಾಗೆ ತಕ್ಕ ಗುರುಗಳು ಬೇಕಲ್ಲ? ಈಗ ಅದೇನೂ ಕಷ್ಟವಿಲ್ಲ, ಗೂಗಲಿನ ಗುಲಾಮನಾದರಾಯಿತು, ಅಲ್ಲವೇ? ಸಾವಿರಾರು ಗುರುಗಳು ತಮ್ಮ ತಮ್ಮ ಶಕ್ತ್ಯಾನುಸಾರ ಸ್ವಂತದ ಅಥವಾ ಪರರ ದಿವ್ಯಜ್ಞಾನವನ್ನು ಹಂಚಲೆಂದೇ ಕಾಯುತ್ತಿರುತ್ತಾರೆ. ಒಂದು ಸಲ ಗೂಗಲ್ಲಿನಲ್ಲೋ, ಫೇಸ್ ಬುಕ್ಕಿನಲ್ಲೋ ಹುಡುಕಿದರಾಯಿತು, ಅವರ ಅಲ್ಗೊರಿದಮ್ ಗಳು ಹೋದಲ್ಲೆಲ್ಲ ಅಂಥದ್ದೇ ಉತ್ತರಗಳನ್ನು ರಾಶಿಯಾಗಿ ತಂದು ಹಾಕುತ್ತವೆ. ಅದರಂತೆ ಗೂಗಲ್ಲು, ಯುಟ್ಯೂಬು ಇತ್ಯಾದಿಗಳನ್ನು ಜಾಲಾಡಿಸಿದ್ದಾಯಿತು, ಕೈಲಾದಷ್ಟು ಓದಿ – ನೋಡಿದ್ದೂ ಆಯಿತು. ಪಿಂಟರೆಸ್ಟಿನಲ್ಲಿ ನೂರಾರು ಪಿನ್ನುಗಳನ್ನು ಚುಚ್ಚಿಸಿಕೊಂಡದ್ದೂ ಆಯಿತು. ಒಂದೆರಡು ಮೀಟಿಂಗುಗಳಾದ ನಂತರ ನಾನೂ, ನನ್ನ ಅಸ್ಸಿಸ್ಟಂಟ್ ನನ್ನ ಎರಡನೆಯ ಮಗಳ ಟೀಮ್ ತಯಾರಾಯ್ತು. ಬೇಕಾಗುವ ಉಪಕರಣಗಳ ಪಟ್ಟಿಯನ್ನು ಬರೆದಿಟ್ಟುಕೊಂಡು, ಅದರ ಪ್ರಕಾರ ಮನೆಯಲ್ಲಿ ಒಂದು ಮೂಲೆಯಿಂದ ಹುಡುಕಿ ಪುಟ್ಟ ಪುಟ್ಟ ಮಾಡೆಲ್ಲುಗಳನ್ನು ಕಲೆಹಾಕಿದೆವು. ಅಡಿಗೆಮನೆಯ ಉಪಹಾರದ್ವೀಪದ (breakfast island) ಮೇಲೆ ಬೆಳಕು ಸರಿಯಿದೆಯೆಂದು ಅದನ್ನು ನಮ್ಮ ಕೆಲಸಕ್ಕೆ ಉಪಯೋಗಿಸುವ ವ್ಯವಸ್ಥೆ ಮಾಡಿಕೊಂಡೆವು. ಹಿನ್ನೆಲೆ, ಒಂದು ಟೇಬಲ್ ಲ್ಯಾಂಪು ಇತ್ಯಾದಿಗಳ ಸಂಗ್ರಹಣೆಯೂ ಆಯಿತು. ಹಿತ್ತಲಿಗೆ ಹೋಗಿ ಒಂದೆರಡು ಹೂವು, ಬೀಜಗಳು ಇಂಥದ್ದೆಲ್ಲ ತಂದು ಜೋಡಿಸಿಟ್ಟುಕೊಂಡೆವು. ಎಲ್ಲ ತಯಾರಿ ಮುಗಿದಾದ ಮೇಲೆ, ಮರುದಿನದ ಮುಹೂರ್ತದ ನಿರ್ಣಯ ಮಾಡಿ ಮಲಗಿದೆವು. ಸ್ವಲ್ಪ ಮ್ಯಾಕ್ರೊ ಫೋಟೊಗ್ರಫಿಯ ವಿವರಣೆ: ವಿಜ್ಞಾನಿಗಳ ಉಪಯೋಗಕ್ಕೆಂದು ಕ್ಯಾಮರಾವನ್ನು ಸೂಕ್ಷ್ಮದರ್ಶಕಕ್ಕೆ ಜೋಡಿಸುವುದರೊಂದಿಗೆ ಶುರುವಾದ ಈ ವಿಭಾಗ, ಈಗ ಅನೇಕ ಛಾಯಾಗ್ರಾಹಕರ, ಹವ್ಯಾಸಿಗಳ ಇಷ್ಟದ ಹವ್ಯಾಸವಾಗಿ ಜನಪ್ರಿಯವಾಗಿದೆ. ಈಗಿರುವ ರೂಪದಲ್ಲಿ ಈ ಪದ್ಧತಿ ಪ್ರಾರಂಭವಾದದ್ದು 1900ರ ಮೊದಲ ದಶಕದಲ್ಲಿ; ಎಫ್. ಪರ್ಸಿ ಸ್ಮಿಥ್ ಎನ್ನುವವರು ಪುಟ್ಟ ಹುಳುಗಳ ಚಿತ್ರ ತೆಗೆಯಲಾರಂಭಿಸಿದ್ದು. ಮುಂದೆ 1950ರ ದಶಕದಲ್ಲಿ ಬಂದ SLR (single lens reflex) ಕ್ಯಾಮರಾ ಮತ್ತದರ ಲೆನ್ಸುಗಳ ವೈವಿಧ್ಯ, ಮ್ಯಾಕ್ರೊ ಫೋಟೋಗ್ರಫಿಯನ್ನು ಇನ್ನೂ ಹೆಚ್ಚು ಜನಪ್ರಿಯಗೊಳಿಸಿತು. ಇದರಲ್ಲಿ ಫೋಟೊ ತೆಗೆಯಲ್ಪಡುವ ವಸ್ತುಗಳು, ತಮ್ಮ ನಿಜಗಾತ್ರ (life-size) ಅಥವಾ ಅದಕ್ಕಿಂತ ಹೆಚ್ಚು ದೊಡ್ಡವಾಗಿ ಹಿಡಿದಿಡಲ್ಪಟ್ಟಿರುತ್ತವೆ. ಕೆಲವಂತೂ ಅದ್ಭುತ ಬಣ್ಣ-ವಿನ್ಯಾಸಗಳೊಂದಿಗೆ ನಮ್ಮ ಕಣ್ಮನ ತಣಿಸುತ್ತವೆ (ನಿಜಗಾತ್ರದಲ್ಲಿ ನಮಗೆ ಗೋಚರವಾಗದಿದ್ದರೂ). ಅದಕ್ಕಾಗಿ ವಿಶೇಷ ಮ್ಯಾಕ್ರೋ ಲೆನ್ಸುಗಳೂ, ಫ್ಲ್ಯಾಶ್ ಲೈಟುಗಳೂ, ಮೂರ್ಕಾಲು (ಟ್ರೈಪಾಡ್) ಗಳೂ ಸಿಗುತ್ತವೆ. ನಮ್ಮ ಹುಚ್ಚು ಮತ್ತು ಕಿಸೆಯ ಶಕ್ತಿಗನುಗುಣವಾಗಿ ಖರೀದಿಸಬೇಕು, ಅಷ್ಟೇ! ಮತ್ತೆ ನಮ್ಮ ಸಾಹಸಕ್ಕೆ ಬರೋಣ. ಫ್ರಿಜ್ಜಿನಿಂದ ಹಾಲು, ಪೂಜೆಯ ತಟ್ಟೆ ಇತ್ಯಾದಿ ತೊಗೊಳ್ಳುವಾಗ “ಕ್ಯಾಮರಾಕ್ಕೇನು ನೈವೇದ್ಯ ಮಾಡಬೇಕೇನು?” ಅಂತ ಕೇಳಿಬಂತು ಹಿಂದಿನಿಂದ! ಮುಂದಿನ ಎರಡು ಗಂಟೆಗಳ ಕಾಲ, ಒಂದಾದ ಮೇಲೊಂದರಂತೆ ಮಾಡೆಲ್ಲುಗಳನ್ನು ಜೋಡಿಸುವುದು, ಹತ್ತಿಪ್ಪತ್ತು ಫೋಟೋ ತೆಗೆಯುವುದು ಇತ್ಯಾದಿ ನಡೆಯಿತು. ತೆಗೆದ ಫೋಟೊಗಳನ್ನು ನೋಡುವ ಮೊದಲು ಉಪಹಾರದ್ವೀಪದ ಸ್ವಚ್ಛತಾ ಕಾರ್ಯಕ್ರಮವಾಗಬೇಕೆಂಬ ಆದೇಶ ಹೊರಟಿತು, ಮನೆಯ ಯಜಮಾನತಿಯಿಂದ. ಗೊಣಗುತ್ತಲೇ ಅದೆಲ್ಲ ಮಾಡಿ ಮುಗಿಸಿ, ಕಂಪ್ಯೂಟರನ್ನು ದೊಡ್ಡ ಟೀವಿಗೆ ಜೋಡಿಸಿ ಒಂದೊಂದಾಗಿ ಫೋಟೋಗಳ ಪರಿಶೀಲನೆ ಮಾಡಲಾಯಿತು. ಮಸುಕಾದವನ್ನು ನಿರ್ದಯೆಯಿಂದ ಕತ್ತರಿಸಿ ಹಾಕಿ, ಉಳಿದವನ್ನು ಮತ್ತೊಮ್ಮೆ ನೋಡಿದೆವು. ಚೆನ್ನಾಗಿರುವ ಫೋಟೋಗಳನ್ನು ಹೆಮ್ಮೆಯಿಂದ ಸಮಾನಾಸಕ್ತರಿಗೂ, ಹೇಗಿದ್ದರೂ ಮೆಚ್ಚುವ ಬಂಧು-ಮಿತ್ರ ಗಣಕ್ಕೂ ಕಳಿಸಲಾಯಿತು. ಬಂದ ಒಪ್ಪಿಗೆ-ಮೆಚ್ಚುಗೆಗಳನ್ನು ಎಣಿಸಿಕೊಂಡು ನಾನೂ, ನನ್ನ ಅಸಿಸ್ಟಂಟ್ ಮಗಳೂ ಸಂತೋಷಪಟ್ಟೆವೆಂಬಲ್ಲಿಗೆ …… ಮ್ಯಾಕ್ರೋ ಫೋಟೊಗ್ರಫಿ ವೃತ್ತಾಂತವು ಮುಗಿದುದು. ನಿಮಗೂ ಒಂದು ನಾಲ್ಕು ಸ್ಯಾಂಪಲ್ಲು ಇಟ್ಟಿದೆ, ನೋಡಿ ಹೇಗಿದೆ ಹೇಳಿ. (ವಿ.ಸೂ: ಕೊನೆಯ ಭಾಗದಲ್ಲಿ ಬರೆಯುವ ಉತ್ಸಾಹದಲ್ಲಿ ಎರಡು ಎಲಿಪ್ಸಿಸ್‍ಗಳನ್ನು ಬಳಸಿದ ಲೇಖಕನನ್ನು ಕ್ಷಮಿಸಬೇಕೆಂದು ಹಿರಿಯ ಪದಾಧಿಕಾರಿಗಳಲ್ಲಿ ಮನವಿ – ಲೇ.) ~ ಲಕ್ಷ್ಮೀನಾರಾಯಣ ಗುಡೂರ್, ಪ್ರೆಸ್ಟನ್.