ನಲ್ಮೆಯ ಓದುಗ ಬಳಗಕ್ಕೆ ನಮಸ್ಕಾರ.
“ಅಮಾವಾಸ್ಯೆಯ ಮಧ್ಯರಾತ್ರಿ..ಗವ್ ಎನ್ನುವ ಕಾರಿರುಳು..ನಿರ್ಜನ ರಸ್ತೆಗಳು..ಆಗೊಮ್ಮೆ,ಈಗೊಮ್ಮೆ ಊಳಿಡುವ ನಾಯಿಗಳನ್ನು ಬಿಟ್ಟರೆ ಉಳಿದಂತೆ ಹೆಪ್ಪುಗಟ್ಟಿದ ಸ್ಮಶಾನ ಮೌನ.. ಇದ್ದಕ್ಕಿದ್ದಂತೆಯೇ ‘ಘಲ್ ಘಲ್’ ಗೆಜ್ಜೆಯ ದನಿ..’ ಇಂಥ ವರ್ಣನೆ ಓದುತ್ತಿದ್ದಂತೆಯೇ ಎಂಥ ಗಟ್ಟಿಗರ ಎದೆಯೂ ‘ಝಲ್'ಎನದೇ ಇರದು. ದೆವ್ವ-ಭೂತಗಳ ಬಗ್ಗೆ ನಂಬುಗೆ ಇರಲಿ, ಬಿಡಲಿ ಅದು ಬೇರೆ ಮಾತು. ಆದರೆ ಅದರ ಭಯದ ಸುಳಿಯಲ್ಲಿ ಒಮ್ಮೆಯಾದರೂ ಸಿಲುಕದ,ಬೆಚ್ಚಿಬೀಳದ ನರಮನುಷ್ಯನಾರೂ ಇರಲಾರ. ಚಿಕ್ಕಂದಿನಲ್ಲಿ ಅಮ್ಮ-ಅಜ್ಜಿಯರ ಮಡಿಲಲ್ಲೋ, ಸೆರಗ ಒತ್ತಾಸೆಯಲ್ಲೋ ಕುಳಿತು ಕೇಳಿದ ಏಳುಮಕ್ಕಳ ತಾಯಿ, ‘ನಾಳೆ ಬಾ’ ಓದಿ ಮರಳಿ ಹೋಗುವ ಮೋಹಿನಿ, ಮರದ ಮೇಲಿನ ಬ್ರಹ್ಮ ಪಿಶಾಚಿ, ವೇಷ ಬದಲಿಸಿ ಯಾಮಾರಿಸುವ ಚಾಣಾಕ್ಷ ದೆವ್ವಗಳು..ಇಂಥ ಥರಾವರಿ ಭೂತ-ದೆವ್ವಗಳ ಪ್ರಪಂಚಕ್ಕೆ ನಮ್ಮ ಬಾಲಿವುಡ್ ನ ಕೊಡುಗೆಯೂ ಉಲ್ಲೇಖನಾರ್ಹ.
ಅಂಥದೇ ಸಸ್ಪೆನ್ಸ್ ತುಂಬಿದ ನೀಳ ಕಥೆಯೊಂದನ್ನು ನಿಮ್ಮೆಲ್ಲರ ಓದಿಗಾಗಿ ತಂದಿದ್ದಾರೆ ಶಿವ ಮೇಟಿಯವರು. ರಾತ್ರಿ ಮನೆಯವರೆಲ್ಲ ಮಲಗಿದ ಮೇಲೆ ಟೇಬಲ್ ಲ್ಯಾಂಪಿನ ಮಂದ ಬೆಳಕಿನಲ್ಲಿ ಈ ಕಥೆಯನ್ನೋದಿ. ನಿಮ್ಮ ಹಿಂದೆ ಯಾರೋ ಬಂದು ನಿಂತಂತಾಗಿ ನೀವು ಬೆಚ್ಚಿಬಿದ್ದರೆ ‘ಸಂಪಾದಕರು’ ಹೊಣೆಗಾರರಲ್ಲ.
‘ಪುಸ್ತಕಕ್ಕೊಂದು ಕತೆ’ ಸರಣಿಯಲ್ಲಿ ಪ್ರಮೋದ್ ಲಕ್ಕುಂಡಿಯವರು ಚಂದಾಮಾಮ,ಕಾಮಿಕ್ಸ್ ನಿಂದ ಸೋವಿಯತ್ ರಷ್ಯಾದವರೆಗೆ ಪುಸ್ತಕಗಳ ಮಾಯಾಲೋಕದಲ್ಲಿ ನಮ್ಮನ್ನು ಸುತ್ತಾಡಿಸಿಕೊಂಡು ಬಂದಿದ್ದಾರೆ.ಬಾಲ್ಯದಿಂದ ಇಂದಿನವರೆಗೂ ಬೆನ್ನಟ್ಟಿಕೊಂಡು ಬಂದ ಪುಸ್ತಕ ನೆಂಟಿನ ಬಗ್ಗೆ ಆಪ್ತವಾಗಿ ಬರೆದುಕೊಂಡಿದ್ದಾರೆ.
ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಮರೆಯದಿರಿ.
~~ಸಂಪಾದಕಿ
ಯಾರಿವಳು?? ( ವೊ ಕೌನ್ ಥಿ ? )
ಕೊರೆಯುವ ಛಳಿಯಲ್ಲಿ ಮುಸುಕಿದ ಮಂಜು. ಸ್ಕಾಟ್ಲೆಂಡಿನ ಅಪ್ಪಟ ಮುಂಜಾವು. ಅಕ್ಟೋಬರ ತಿಂಗಳಿನ ಕೊನೆಯ ವಾರವಾಗಿರಬಹುದು ---
ಮಗಳನ್ನು ಶಾಲೆಗೆ ಬಿಟ್ಟು, ಆಸ್ಪತ್ರೆಯತ್ತ ಕಾರನ್ನು ಓಡಿಸುತ್ತಿದ್ದೆ
ಬಲ ತಿರುವಿನಲ್ಲಿ ಕಾರನ್ನು ಹೊರಳಿಸಿ ಇನ್ನೇನು ಮುಖ್ಯ ರಸ್ತೆಯನ್ನು ಸೇರಬೇಕು, ಅಷ್ಟರಲ್ಲಿಯೇ ಧಕ್ಕನೆ ಯಾರೋ ಕಾರಿನ ಮುಂದೆ ಬಂದರು. ಪ್ರಾಣ ಭೀತಿ ಇಲ್ಲದವರೆಂದು ಬೈದುಕೊಂಡು ಕಾರನ್ನು ನಿಲ್ಲಿಸಿದೆ. ಅವಳೊಬ್ಬಳು ಅಂದಾಜು ಮೂವತ್ತರ ಪ್ರಾಯದ ಹೆಣ್ಣುಮಗಳು . ಏನನ್ನು ಹೇಳಲಿಲ್ಲ ಆದರೆ ಮುಖದ ಮೇಲೆ ಒಂದು ಮುಗುಳ್ನಗೆ ಚೆಲ್ಲಿ ಹಾಗೆಯೇ ಹೋಗಿ ಬಿಟ್ಟಳು.ಮುಸುಕಿದ ಮಂಜಿನಲ್ಲಿ ಮುಖ ಸರಿಯಾಗಿ ಕಾಣಿಸದಿದ್ದರೂ , ವೇಷ ಭೂಷಣದಲ್ಲಿ ಮಾತ್ರ ಭಾರತೀಯಳಂತೆ ಕಂಡಳು . ಯಾರೋ ಹೊಸದಾಗಿ ಬಂದಿರಬಹುದೆಂದು ಎಂದುಕೊಂಡು ಮುಂದೆ ಸಾಗಿದೆ .
ಅದೊಂದು ಶನಿವಾರದ ಮುಂಜಾನೆ . ಆಕಾಶವೆಲ್ಲ ಬಯಲಾಗಿತ್ತು ಸೂರ್ಯನು ನಿಖರವಾಗಿ ಹೊಳೆಯುತ್ತಿದ್ದರೂ, ಬಿಸಿಲು ಮಾತ್ರ ಮೈಗೆ ತಟ್ಟುತ್ತಿರಲಿಲ್ಲ . ವರ್ಷದ ಕೊನೆಯ ಗಾರ್ಡನಿಂಗ್ ಮಾಡಿಬಿಡೋಣವೆಂದುಕೊಂಡೆ . ಸೋಮಾರಿಯಾಗಿದ್ದ ಮಕ್ಕಳನ್ನು ಕರೆದುಕೊಂಡು ಮನೆಯ ಮುಂದಿನ ಗುಲಾಬಿ ತೋಟಕ್ಕೆ ಬಂದೆ.
ಮುಂದಿನ ದ್ವಾರದ (gate) ಮುಂದೆ ಯಾರೋ ನಿಂತಿದ್ದರು . ದಿಟ್ಟಿಸಿ ನೋಡಿದಾಗ ಕಂಡಿದ್ದು ಅದೇ ಹೆಣ್ಣು ಮಗಳು , ಹಿಂದಿನ ದಿನ ಕಾರಿನ ಮುಂದೆ ಬಂದವಳು . ನನ್ನತ್ತ ಕೈ ಬೀಸಿ ಹಾಗೆ ನಿಂತಿದ್ದಳು . ಇತ್ತೀಚಿನ ದಿನಗಳಲ್ಲಿ ತುಂಬಾ ಭಾರತೀಯರು ನಾವಿದ್ದ ಊರಿಗೆ ವಲಸೆ ಬಂದು ನೆಲೆಸಿದ್ದಾರೆ. ಈ ವರ್ಷ ನನ್ನ ಮಗಳ ಶಾಲೆಯಲ್ಲಿ ಭಾರತೀಯ
ಮೂಲದ ಮಕ್ಕಳ ಸಂಖ್ಯೆ ಜಾಸ್ತಿಯಾಗಿದೆ . ಇವಳು ಯಾರೋ ಮಗಳ ಸ್ನೇಹಿತೆಯ ತಾಯಿಯಾಗಿರಬಹುದೆಂದು ಅಂದುಕೊಂಡೆ . ಮಗಳನ್ನು ಕೇಳಿದೆ ಅವಳು ಗೊತ್ತೇನೆಂದು?. ಮಗಳು ಅಂದಳು - “ಯಾರು ? ಎಲ್ಲಿ ಇದ್ದಾರೆ? ನನಗೆ ಯಾರೂ ಕಾಣಿಸುತ್ತಿಲ್ಲ . ದ್ವಾರದ ಮುಂದೆ ಯಾರೂ ಇಲ್ಲಾ” . ಹೌದು ತಿರುಗಿ ನೋಡಿದಾಗ ಯಾರೂ ಇಲ್ಲಾ. ನನಗೆ ವಿಚಿತ್ರವೆನಿಸಿತು , ಒಂದು ಕ್ಷಣದಲ್ಲಿ ಅವಳು ಎಲ್ಲಿ ಮಾಯವಾದಳೆಂದು . ತಕ್ಷಣವೇ ದ್ವಾರದತ್ತ ಹೋದೆ , ಆಚೆ ಈಚೆ ನೋಡಿದರೂ ಅವಳ ಸುಳಿವು ಸಿಗಲಿಲ್ಲ . ದ್ವಾರದ ಹತ್ತಿರ ಗುಲಾಬಿಯ ಕಂಟಿಯನ್ನು ಕತ್ತರಿಸುತ್ತಿದ್ದ ಇನ್ನೊಬ್ಬ ಮಗಳನ್ನೂ ಸಹ ಕೇಳಿದೆ . ಅವಳೂ ಸಹ ಯಾರನ್ನೂ ನೋಡಲಿಲ್ಲವೆಂದಳು . ನನ್ನನ್ನು ಅಣುಕಿಸುವಂತೆ - " ಅಪ್ಪಾ ಇತ್ತೀಚಿಗೆ ನೀನು ಬಹಳೇ ಸಸ್ಪೆನ್ಸ್ ಸಿನೆಮಾ ನೋಡುತ್ತಿರುವೆ ಅದಕ್ಕೆ ನಿನಗೆ ಹೀಗಾಗಿರಬಹುದು " ಎಂದು ನಕ್ಕಳು.
ಅವಳ ಮಾತಿಗೆ ಮುಗುಳ್ನಕ್ಕು ಸುಮ್ಮನಾದೆ. ತಲೆಯಲ್ಲಿ ಮಾತ್ರ ಯಕ್ಷಪ್ರಶ್ನೆ ಕಾಡತೊಡಗಿತು . ಒಂದು ಕ್ಸಣದಲ್ಲಿ ಅವಳು ಕಣ್ಮರೆಯಾಗಲು ಹೇಗೆ ಸಾಧ್ಯವೆಂದು . ಒಳಗಿನ ಮನಸು ಹೇಳಿತು - 'ಇದು ಪರಿಚಯದ ಮುಖವೆಂದು '. ಅವಳ ವಿಚಾರದಲ್ಲಿಯೇ ಇಡೀ ದಿನ ಕಳೆದು ಹೋಯಿತು ಆದರೆ ಉತ್ತರ ಮಾತ್ರ ಸಿಗಲೇ ಇಲ್ಲ .
ಮಾರನೆಯ ದಿನ ಭಾನುವಾರ . ಹೆಂಡತಿ ಮತ್ತು ಮಕ್ಕಳಿಗೆ ಹತ್ತಿರದ ' ಸಿಲ್ವರ್ ಬರ್ನ್ ' ಶಾಪಿಂಗ್ ಸೆಂಟರ್ ಗೆ ಹೋಗುವ ಬಯಕೆ . ಎಲ್ಲರೂ ಸೇರಿ ಸಿಲ್ವರ್ ಬರ್ನ್ ಗೆ ಬಂದದ್ದಾಯಿತು . ಹೆಂಡತಿಗೆ ವಿಂಡೋ ಶಾಪಿಂಗ್ ಬಹಳೇ ಇಷ್ಟ . ದಿನವೆಲ್ಲಾ ಶಾಪಿಂಗನಲ್ಲಿ ಕಳೆದು ಕೊನೆಗೆ ಏನನ್ನೂ ಕೊಳ್ಳದೇ ಬರಿಗೈಯ್ಯಲ್ಲಿ ಮರಳುತ್ತಾಳೆ . ಮೊದ ಮೊದಲು ಸಿಟ್ಟು ಬರುತಿತ್ತು , ಈಗ ಅಭ್ಯಾಸ ಆಗಿ ಹೋಗಿದೆ . ಅವಳನ್ನು ಅಂಗಡಿಯ ಒಳಗೆ ಬಿಟ್ಟು ನಾನು ಹೊರಗೆ ನಿಲ್ಲುವದು ಸಹಜವಾಗಿದೆ. ಇನ್ನೇನು ಅವಳನ್ನು ಮಕ್ಕಳ ಜೊತೆ ಅಂಗಡಿಯ ಒಳಗೆ ಬಿಡಬೇಕು ಎನ್ನುವಷ್ಟರಲ್ಲಿಯೇ , ನಿನ್ನೆ ಕಂಡವಳು ಮತ್ತೆ ಕಾಣಿಸಿಕೊಂಡಳು . ಸ್ವಲ್ಪ ದೂರದಲ್ಲಿಯೇ ನಿಂತಿದ್ದ ಅವಳು ಮುಗುಳ್ನಗೆ ಬೀರಿ ಮತ್ತೆ ಕೈ ಬೀಸಿದಳು . ಈ ಸಲ ಮಾತ್ರ ಅವಳನ್ನು ಮಾತನಾಡಿಸದೆ ಬಿಡಲೇಬಾರದೆಂದುಕೊಂಡು ಅವಳತ್ತ ನಡೆದೆ .
ಹತ್ತಿರ ಹೋಗಿ - ಹಲೋ ಎಂದೆ . ಮುಗುಳ್ನಗುತ್ತಾ ಅವಳು ಎಂದಳು - "ಏನು ಶಂಕ್ರಣ್ಣ ಹೇಗೆ ಇದ್ದಿಯಾ ? ಗುರುತು ಸಿಗಲಿಲ್ಲವೆ?". ನಾನು ಮಾತ್ರ ತಬ್ಬಿಬ್ಬಾದೆ , ಏನು ಹೇಳಬೇಕೆಂದು ತೋರಲಿಲ್ಲ . ಅಷ್ಟರಲ್ಲಿಯೇ ಅವಳೆಂದಳು - "ನಾನು ಮಂಜು , ನಿಮ್ಮೂರವಳು ". ಈಗ ಖಾತ್ರಿಯಾಯಿತು , ಇವಳು ನಿಜವಾಗಿಯೂ ಪರಿಚಯದವಳೆಂದು . ಒಂದು ಕ್ಷಣ ತಲೆ ಪರಚಿಕೊಂಡ ಮೇಲೆ ಗೊತ್ತಾಯಿತು ಇವಳು ನಮ್ಮೂರ ಆಚಾರ್ಯರ ಮಗಳು ಮಂಜು ಎಂದು . "ಹೇಗೆ ಇದ್ದಿಯಾ ? ಎಲ್ಲಿ ಇದ್ದಿಯಾ ? ಯಾವಾಗ ಈ ದೇಶಕ್ಕೆ ಬಂದೆ ? " ಎಂದು ಒಂದೇ ಉಸುರಿನಲ್ಲಿ ಕೇಳಿದ್ದಾಯಿತು . " ಬಂದು ಸ್ವಲ್ಪ ದಿನವಾಯಿತು , ಇಲ್ಲಿಯೇ ಹತ್ತಿರದಲ್ಲಿ ಇದ್ದೇನೆ " ಎಂದಳು . "ಎಲ್ಲಿ ಅಡ್ರೆಸ್ ಕೊಡಮ್ಮಾ , ಭೇಟಿಯಾಗೋಣವೆಂದೆ "
"೨೪೮ ಮೇಯರ್ನ್ ರೋಡ್ , ಗಿಫ್ನಾಕ್" ಎಂದಳು .
"ನಮ್ಮ ಮನೆಗೆ ಬಹಳ ಹತ್ತಿರದಲ್ಲಿ ಇದ್ದೀಯ ಎರಡು ಮೈಲ್ ದೂರ, ಇರು ನನ್ನ ಹೆಂಡತಿ ಮತ್ತು ಮಕ್ಕಳನ್ನು ಪರಿಚಯಿಸುವೆ " ಎಂದೆ . ಹೆಂಡತಿಯ ಹತ್ತಿರ ಬಂದೆ . ಹೆಂಡತಿ ಅಂದಳು - "ಏನ್ರಿ ಅಷ್ಟು ದೂರ ಹೋಗಿ ನಿಮ್ಮಷ್ಟಕ್ಕೆ ನೀವೇ ಏನು ಮಾತ್ನಾಡ್ತಾ ಇದ್ರಿ " ಎಂದಳು .
“ಆಲ್ಲ ಕಣೆ ಅವಳು ನಮ್ಮೂರ ಆಚಾರ್ಯರ ಮಗಳು ಮಂಜು . ಅವಳ ಜೊತೆಗೆ ಮಾತನಾಡ್ತಾ ಇದ್ದೆ. ಬಾ ಪರಿಚಯ ಮಾಡಿಸ್ತೀನಿ " ಎಂದೆ . "ಅಲ್ಲಿ ಯಾರಾದರು ಇದ್ದರೆ ತಾನೆ ನೀವು ಪರಿಚಯ ಮಾಡಿಸೋದು , ನಿಮ್ಮ ಭ್ರಮೆ " ಎಂದಳು . ತಾವೂ ಯಾರನ್ನು ನೋಡಲಿಲ್ಲವೆಂದು ಮಕ್ಕಳೂ ಸಹ ತಾಯಿಯ ಜೊತೆ ಕಟ್ಟಿದರು . ತಿರುಗಿ ನೋಡಿದರೆ ಅಲ್ಲಿ ಯಾರೂ ಆಲ್ಲ . ಅರೆ ಇವಳ , ಸ್ವಲ್ಪವೂ ತಡೆಯದೆ ಎಲ್ಲಿ ಇವಳು ಮಾಯವಾದಳು ಎಂದುಕೊಂಡೆ . ಹೆಂಡತಿ ಏನೊ ಗೊಣಗುಟ್ಟುತ್ತಾ ಅಂಗಡಿಯ ಒಳಗೆ ಹೋದಳು . "ಇಲ್ಲೇ ಇರಿ , ಮತ್ತೆ ಇಲ್ಲದವಳನ್ನು ಹುಡುಕುತ್ತಾ ಬೇರೆ ಕಡೆ ಎಲ್ಲೂ ಹೋಗಬೇಡಿ . ಕಳೆದ ಸಲ ಊರಿಗೆ ಹೋದಾಗ ಸೋಮೇಶ್ವರ್ ದೇವರ ಗುಡಿಗೆಹೋಗಲಿಲ್ಲ ( ಸೊಗಲ್ ಸೋಮೇಶ್ವರ ನಮ್ಮ ಮನೆ ದೇವರು ) ಅದಕ್ಕೆ ಏನೇನೋ ಆಗ್ತಾ ಆದೆ " ಎಂದು ಅನ್ನುತ್ತಾ ಮಕ್ಕಳೊಡನೆ ಅಂಗಡಿಯ ಒಳಗೆ ಹೋದಳು . ನಾನು ಮಾತ್ರ ದಂಗಾಗಿದ್ದೆ . ಅವಳು ಸತ್ಯವಾಗಿಯೂ ನಮ್ಮೂರ ಮಂಜು ಹಾಗಾದರೆ ಅವಳು ಬೇರೆಯವರಿಗೆ ಏಕೆ ಕಾಣಿಸ್ತಿಲ್ಲ ?. ಏಕೆ ತಟ್ಟನೆ ಮಾಯವಾಗುತ್ತಿದ್ದಾಳೆ ? ಆ ಶಕ್ತಿ ಅವಳಿಗೆ ಹೇಗಿದೆ ? ಇದರಲ್ಲಿ ಏನೋ ರಹಸ್ಯ ಇದೆ , ಇದನ್ನು ಕಂಡು ಹಿಡಿಯಲೇ ಬೇಕೆಂದುಕೊಂಡೆ .
( ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ.)
~~ಶಿವ ಮೇಟಿ

ಪುಸ್ತಕಲೋಕ ಪರ್ಯಟನ
ಚಿತ್ರಕೃಪೆ-ಅಂತರ್ಜಾಲ
ಪುಸ್ತಕದ ಬಗ್ಗೆ ಬರೆಯಲು ಅನಿವಾಸಿಯಲ್ಲಿ ಬಂದ ಸಂದೇಶ ಓದಿದೆ, ನಮ್ಮ ಸಂಪಾದಕರು ಸುಂದರವಾಗಿ ಹೇಳುತ್ತಾರೆ "ಪ್ರತಿ ಪುಸ್ತಕದಲ್ಲೂ ಒಂದು ಕಥೆಯಿದ್ದಂತೆ ನಮ್ಮ ನೆಚ್ಚಿನ ಅಥವಾ ನೆನಪಿನ ಪುಸ್ತಕಕ್ಕೂ ಒಂದು ಕಥೆಯಿದೆ". ನಾನು ಇದನ್ನು ಓದಿದಾಗ ಅನಿಸಿದ್ದು, "ಪ್ರತಿ ನೆನಪಿನ ಪುಸ್ತಕಕ್ಕೂ ಒಂದು ಕಥೆಯಿದ್ದಂತೆ, ನಮ್ಮ ಜೀವನದ ಪ್ರತಿ ಹಂತದಲ್ಲೂ ಪುಸ್ತಕದ (ಪುಸ್ತಕಗಳ) ನೆನಪಿದೆ. ಅದೂ ಒಂದು ಕಥೆ ಆಗಬಹುದು". ನಾನು ಒಂದು ಪುಸ್ತಕ, ಅಂದರೆ ನೆನಪಿನ ಪುಸ್ತಕದ ಬಗ್ಗೆ ಮಾತನಾಡಿಲ್ಲ ಆದರೆ ನನ್ನ ನೆನಪಿನಲ್ಲಿರುವ ಅಥವಾ ನನ್ನೊಡನೆ ಇಂದಿಗೂ ನಂಟು ಬಿಡದ ಪುಸ್ತಕಗಳ ಬಗ್ಗೆ ಬರೆಯುತ್ತಿದ್ದೇನೆ.
ಬಾಲ್ಯದಲ್ಲಿ ತಂದೆ, ತಾಯಿ ನಮಗೆ ಓದಿದ/ ಓದಿಸಿದ ಚಂದಮಾಮ, ಬೊಂಬೆಮನೆ, ಬಾಲಮಿತ್ರ ನಮಗೆ ಸಣ್ಣ ಕಥೆ ಹೇಳುತ್ತಾ ನಮಗೆ ಪುಸ್ತಕ ಲೋಕವನ್ನು ತೆರೆದು ಇಟ್ಟಿತು. ಇವುಗಳ ಜೊತೆ ಸೇರಿದ್ದು ಮತ್ತು ಇಷ್ಟವಾದದ್ದು "ಭಾರತ ಭಾರತಿ" ಪುಸ್ತಕಗಳು. ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆದರೆ ಅದು ಅವರ ಕ್ರಿಯಾಶೀಲ ಚಿಂತನೆಗೆ ಹಾದಿ ಮಾಡಿಕೊಡುತ್ತದೆ. ಈ ಪುಸ್ತಕಗಳ ಮೂಲಕ ವ್ಯಕ್ತಿ ಚಿತ್ರಣಗಳ ಜೊತೆ, ರಾಜ, ರಾಣಿಯರ ಕಥೆ, ಮಾಂತ್ರಿಕರ ಕಥೆ, ವಿಕ್ರಮ್ ಬೇತಾಳ ಕಥೆ ಹೀಗೆ ನಮ್ಮ ವಿಚಾರ ಶಕ್ತಿಗೆ ಒಂದು ಒಳ್ಳೆಯ ವ್ಯಾಯಾಮ ಆಯಿತು.
ಮುಂದೆ ಸಾಗಿದಂತೆ ಅಮರ ಚಿತ್ರ ಕಥಾ, ಇಂದ್ರಜಾಲ ಕಾಮಿಕ್ಸ್ ನಮ್ಮನ್ನು ಸೆಳೆಯ ತೊಡಗಿದವು. ನಮ್ಮ ಜನಪ್ರಿಯ ಮಾಂತ್ರಿಕ ಮಾಂಡ್ರೇಕ್, ಬಲಶಾಲಿ ಲೋಥರ್, ಬಹಾದೂರ್, ಝೋರೋ, ನಡೆದಾಡುವ ಭೂತಪ್ಪ ಫ್ಯಾಂಟಮ್, ಸಾಯರ್, ಗಾರ್ಥ್, ಫ್ಲಾಶ್ ಗೋರ್ಡಾನ್ ಇವರೆಲ್ಲರನ್ನು ಮರೆಯಲು ಸಾಧ್ಯವೇ ಇಲ್ಲ. ಈಗಿನ ಮಾರ್ವೆಲ್ ನಾಯಕರು, ಹ್ಯಾರಿ ಪಾಟರ್ ಆಗಿನ ಸಮಯದಲ್ಲಿ ಇಂದ್ರಜಾಲ ಕಾಮಿಕ್ಸ್ ತಂದ ಮೋಡಿಗೆ ಸಮ ಆಗಲಿಕ್ಕಿಲ್ಲ. ಮಾಂತ್ರಿಕ ಮಾಂಡ್ರೇಕ್ ಮುಂದುವರೆದಿದ್ದರೆ ಲೀ ಫಾಕ್ ಅವರನ್ನು ಜನರು ಸರಳವಾಗಿ ಮರೆಯುತ್ತಿರಲಿಲ್ಲ. ಜೀವನದಲ್ಲಿ ಏನಾದರೂ ಮಹತ್ತರವಾದದ್ದನ್ನು ಕಳೆದುಕೊಂಡಿದ್ದೆಂದರೆ ೩೦೦-೪೦೦ ಇಂದ್ರಜಾಲ ಕಾಮಿಕ್ಸ್ ನನ್ನ ಅಣ್ಣ ಮತ್ತು ನಾನು ಕೂಡಿ ಇಟ್ಟಿದ್ದು, ಸ್ಥಳ ಬದಲಾವಣೆಯಲ್ಲಿ ಕಳೆದದ್ದು ಸಿಗಲಿಲ್ಲ.
ಇದರಂತೆ ನೀವೆಲ್ಲ ಅಂಕಲ್ ಅನಂತ್ ಪೈ ಅವರ ಟಿಂಕಲ್ ಓದಿರಬಹುದು, ಓದಿದ್ದರೆ ನಿಮ್ಮ ಕಣ್ಣ ಮುಂದೆ ಬರುವುದು ಕಾಲಿಯಾ ಕಾಗೆ, ಸುಪಂದಿ, ತಂತ್ರಿ ಮಂತ್ರಿ, ಶಿಕಾರಿ ಶಂಬು ಮುಂತಾದವರು. ಪುಸ್ತಕದಲ್ಲಿ ಕಥೆಗಳ ಜೊತೆ ಸಾಮಾನ್ಯ ಜ್ಞಾನ ಪರೀಕ್ಷಿಸುವ ಒಗಟುಗಳು, ವಿಜ್ಞಾನದ ವಿವರಗಳು ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಓದಲು ಪ್ರೇರಣೆ ಕೊಡುತ್ತಿತ್ತು. ಆ ಸಮಯದ ಪುಸ್ತಕಗಳ ಬಗ್ಗೆ ಹೇಳುತ್ತಾ ಹೋದರೆ ಬರೆಯುವುದು ಮುಗಿಯುವುದೇ ಇಲ್ಲ, ಆರ್ಚೀ ಕಾಮಿಕ್ಸ್, ರೀಡರ್ಸ್ ಡೈಜೆಸ್ಟ್, ವಿಸ್ಡಮ್ ಹಾಗೆ ಬರೆಯುತ್ತ ಇರಬೇಕು ಅನಿಸುತ್ತದೆ. (ಟಿಂಕಲ್ ನಿಮಗೆ ಈಗ ಆನ್ಲೈನ್ ಸಿಗುತ್ತದೆ, ಸುಪಂದಿ ಚಿತ್ರಣ (ವೀಡಿಯೋಸ್) ನೋಡುವುದು ತಪ್ಪಿಸಬೇಡಿ. ಮನ ಬಿಚ್ಚಿ ನಕ್ಕು ಬಿಡಿ).
ಆ ಸಮಯದಲ್ಲಿ ವಿಜ್ಞಾನದ ವಿಷಯ ಓದಲು ನನ್ನನ್ನು ಕೈ ಮಾಡಿ ಕರೆದದ್ದು "ಬಾಲ ವಿಜ್ಞಾನ", ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಪ್ರಕಟಿಸಿದ ಮಾಸ ಪತ್ರಿಕೆ ಇದು. ಒಂದು ರುಪಾಯಿಗೆ ಸಿಗುತ್ತಿದ್ದ ಈ ಪುಸ್ತಕ ವಿಜ್ಞಾನದ ಕೌತುಕವನ್ನುನಮ್ಮೆದುರಿಗೆ ತೆರೆದು ಇಡುತ್ತಿತ್ತು. ಒಂದು ಸಂತೋಷದ ಸಂಗತಿ ಎಂದರೆ ಇದು ಈಗ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಅವರ ಅಂತರ್ಜಾಲದ ತಾಣದಲ್ಲಿ ಉಚಿತವಾಗಿ ಪಿ ಡಿ ಎಫ್ ಮಾದರಿಯಲ್ಲಿ ಲಭ್ಯವಿದೆ ( https://krvp.in/bala-vijnana-magazine.php ).
ಬಾಲ್ಯದಲ್ಲಿ ನನಗೆ ಅಚ್ಚರಿ ಮೂಡಿಸುತ್ತಿದ್ದ ವ್ಯಕ್ತಿ ಎಂದರೆ ನನ್ನ ಅಣ್ಣ (ಪ್ರಸನ್ನ), ನಾನು ೬ ನೆಯ ತರಗತಿಯಲ್ಲಿ ಇದ್ದೆ (ಅಣ್ಣ ೮ ನೆಯ ತರಗತಿ), ನಾವು ನ್ಯೂಸ್ ಮೇಲೆ ನಿಬಂಧ ಬರೆಯಬೇಕಿತ್ತು, ಬರೆದೆವು. ನನ್ನ ಅಣ್ಣನ ಪ್ರಬಂಧ ಉತ್ತಮವಾಗಿತ್ತು, ಅವನ ಪ್ರಬಂಧ ಆರಂಭ ಆಗಿದ್ದು NEWS ಎಂದರೆ ನಾರ್ತ್, ಈಸ್ಟ್, ವೆಸ್ಟ್ ಮತ್ತು ಸೌತ್ ನಿಂದ ಮತ್ತು ಉಳಿದ ವಿಷಯ ಅತ್ಯುತ್ತಮ ನ್ಯೂಸ್ ಮತ್ತು ವಿಷಯಗಳ ಬಗ್ಗೆ ಇತ್ತು. ಇಂಟರ್ನೆಟ್, ಟಿ ವಿ ಇರದ ಕಾಲ ಆದರೂ ಒಳ್ಳೆಯ ಲೇಖನ ಹುಟ್ಟಲು ಕಾರಣ ಗೆಳೆಯರಾದ ಪುಸ್ತಕಗಳು.
ಇನ್ನು ನಾವು ಇಡೀ ವರ್ಷದಲ್ಲಿ ಕಾಯುತ್ತ ಕೂಡುವುದು ಬೇಸಿಗೆಯ ರಜೆಗಾಗಿ, ಆ ಎರಡು ತಿಂಗಳು ನಮಗೆ ಹಬ್ಬ. ಯಾಕೆಂದರೆ ಎಲ್ಲ ಮೊಮ್ಮಕ್ಕಳು ಅಜ್ಜನ ಮನೆಯಲ್ಲಿ ಸೇರುವ ಸಮಯ. ಎಲ್ಲರೂ ಸೇರಿ ಹತ್ತು ಹಲವಾರು ನೆಚ್ಚಿನ ಕೆಲಸ ಮಾಡುತ್ತಿದ್ದೆವು. ಅದರಲ್ಲಿ ಒಂದು ಪ್ರತಿ ದಿನ ಸಾಯಂಕಾಲ ವಿದ್ಯಾರ್ಥಿ ವಾಚನಾಲಯಕ್ಕೆ ಭೇಟಿ ಕೊಡುವುದು, ಅಲ್ಲಿ ಪ್ರತಿ ಗೋಡೆ ಮೇಲೆ ಎಲ್ಲ ಪುಸ್ತಕಗಳ ಮುಖಪುಟ ಅಂಟಿಸುತ್ತಿದ್ದರು. ಆಗಿನ ನಮ್ಮ ಅಚ್ಚುಮೆಚ್ಚಿನ ಬರಹಗಾರರು ಜಿಂದೆ ನಂಜುಂಡಸ್ವಾಮಿ, ಟಿ ಕೆ ರಾಮರಾವ್, ಸುದರ್ಶನ ದೇಸಾಯಿ, ಕನ್ನಡದ ಪ್ರಖ್ಯಾತ ಪತ್ತೇದಾರಿ ಬರಹಗಾರರು. ಇವುಗಳ ನಡುವೆ ಸಾಮಾಜಿಕ ಮತ್ತು ಇತರೆ ಕಾದಂಬರಿಗಳನ್ನು ಓದುವ ಸಂತೋಷ ಕೂಡ ನಮಗೆ ಸಿಗುತ್ತಿತ್ತು. ನಮಗೆ ಜೇಮ್ಸ್ ಹಾಡ್ಲಿ ಚೇಸ್ ಪುಸ್ತಕ ಸಿಕ್ಕಿದ್ದು ಅದೇ ಸಮಯದಲ್ಲಿ (ಹೈಸ್ಕೂಲ್ ಪ್ರಾರಂಭದ ಸಮಯ), ಎಲ್ಲರ ಮುಂದೆ ಓದಿದರೆ ಎಲ್ಲಿ ಹಿರಿಯರು ಮಂಗಳಾರತಿ ಮಾಡುತ್ತಾರೋ ಎಂದು ಮಂಚದ ಕೆಳಗೆ ಮಲಗಿ, ಇಲ್ಲವೇ ಮೂಲೆಯಲ್ಲಿ ಕುಳಿತು ಓದುತ್ತಿದ್ದೆ. ಪತ್ತೇದಾರಿ ಪುಸ್ತಕ ಓದಿ ನಮ್ಮ ಮಕ್ಕಳ ಗುಂಪಿನಲ್ಲೇ ಕಥಾ ಸ್ಪರ್ಧೆ ನಾವೇ ನಡೆಸುತ್ತಿದ್ದೆವು. ಆ ಸಮಯ ಮರೆಲಾಗದು;ಮತ್ತೆ ಮರಳಿ ಬಾರದು. ಪತ್ತೇದಾರಿ ಕಾದಂಬರಿ ನಮ್ಮ ಮೇಲೆ ಎಂತಹ ಪರಿಣಾಮ ಬೀರಿತ್ತೆಂದರೆ, ನಮ್ಮ ಅಜ್ಜನ ಮನೆಯ ಪಕ್ಕದಲ್ಲಿ ಒಂದು ಬಿದ್ದ ಮನೆ ಇತ್ತು ಮತ್ತು ಮುಂದಿನ ಸಾಲಿನಲ್ಲಿ ಸರ್ಕಾರೀ ಹೆರಿಗೆ ಆಸ್ಪತ್ರೆ, ನಾವು ಬಿದ್ದ ಮನೆಯಲ್ಲಿ ಏನೋ ವಿಶೇಷ ಸಂಗತಿ ಇರಬಹುದು ಎಂದು ರಾತ್ರಿ ಕದ್ದು ನೋಡುತ್ತಿದ್ದೆವು. ಅದರ ಜೊತೆ ನಮಗೆ ಅನಿಸಿದ್ದು ಹೆರಿಗೆ ಸಮಯದಲ್ಲಿ ಜೀವ ಕಳೆದು ಕೊಂಡ ತಾಯಂದಿರು, ಮಕ್ಕಳು ದೆವ್ವ ಆಗಿ ಆಸ್ಪತ್ರೆಯ ಬೇವಿನ ಮರದಲ್ಲೋ, ಇಲ್ಲ ಹಿಂದಿನ ಖಾಲಿ ಜಾಗದಲ್ಲೋ ಇರುತ್ತಾರೆಂದು. ಅದನ್ನು ಗುಟ್ಟಾಗಿ ಪತ್ತೆ ಹಚ್ಚಲು ನಾವು ರಾತ್ರಿ ಕಿಡಕಿಯಲ್ಲಿ ಕಾಯುತ್ತಿದ್ದೆವು.
ಬಹಳ ಕೊರೆಯದೇ ಒಂದು ವಿಶೇಷ ಪುಸ್ತಕದ ಬಗ್ಗೆ ಬರೆಯಲು ಇಚ್ಚಿಸುತ್ತೇನೆ. ಸೋವಿಯೆತ್ ಪುಸ್ತಕಗಳ ಬಗ್ಗೆ ನೀವೆಲ್ಲ ಕೇಳಿರಬಹುದು, ಅವರ ಪುಸ್ತಕ ಮೇಳ ಬಂತೆಂದರೆ ಅದು ಜಾತ್ರೆ ನಮಗೆ, ಹೋಗಿ ಎಲ್ಲ ಪುಸ್ತಕ ಮುಟ್ಟಿ ನೋಡಿ, ಬಣ್ಣ ಬಣ್ಣದ ಚಿತ್ರಗಳನ್ನು ನೋಡಿ ಸಂತೋಷಿಸುತ್ತಿದ್ದೆವು. ಅದರಲ್ಲಿ ಮಿರ್ ಪಬ್ಲಿಷರ್ಸ್ ಅವರ ವಿಜ್ಞಾನ, ಗಣಿತ ಮತ್ತು ತಂತ್ರಜ್ಞಾನದ ಪುಸ್ತಕ ವಿಭಿನ್ನವಾಗಿರುತ್ತಿತ್ತು, ಅವರ ಕೆಲವು ಪುಸ್ತಕ ಇನ್ನೂ ನನ್ನಲ್ಲಿ ಇವೆ.ಮ ಯಾವುದೇ ವಿಷಯವನ್ನು ಸರಳವಾಗಿ, ಸಾಮಾನ್ಯರಿಗೆ ತಿಳಿಯುವಂತೆ ಇರುವ ಅವರ ಬರಹ ಓದುವದೇ ಒಂದು ಸುಗ್ಗಿ. ಅವರ ಪುಸ್ತಕಗಳನ್ನು ನೀವೂ ಓದಿ ಖುಷಿ ಪಡಿ ಎಂದು ಆರ್ಕೈವ್ ಕೊಂಡಿ ಕಳಿಸುತ್ತಿದ್ದೇನೆ - https://archive.org/details/mir-titles
ಇನ್ನು ಸುಧಾ, ತರಂಗ, ಪ್ರಜಾಮತ, ಮಲ್ಲಿಗೆ, ತುಷಾರ, ಮಯೂರ, ರಾಗಸಂಗಮ ಎಲ್ಲರೂ ಓದಿಯೇ ಇರುತ್ತೀರಾ, ಅವನ್ನೂ ಮರೆಯಬಾರದು ಎಂದು ಅವುಗಳ ಹೆಸರನ್ನೂ ಬರೆದೆ.
ಪುಸ್ತಕದ ನಂಟು ಇನ್ನೂ ನನ್ನೊಂದಿಗೆ ಇದೆ, ಈಗ ವಿವಿಡ್ಲಿಪಿಯ ಉದ್ದೇಶಗಳೊಂದಿಗೆ. ನಿಮ್ಮೆಲ್ಲರ ಪುಸ್ತಕಗಳ ನೆನಪು ನನ್ನ ನೆನಪಿನ ಕಂತೆ ಅಂತೆಯೇ ಇರಬಹುದು. ನೆನಪುಗಳು ಮಧುರ, ಮಧುರ... ನೆನೆದಷ್ಟೂ ಅತಿ ಮಧುರ. ಪುಸ್ತಕಾರ್ಪಣಮಸ್ತು
~~ಪ್ರಮೋದ್ ಲಕ್ಕುಂಡಿ