ತಂತ್ರ ಯುಗದಲ್ಲಿ ಯಾನ ಮಾಡುತ್ತಿರುವಾಗ ಸುದರ್ಶನ್ ಅವರ ನೀಳ್ಗವನ ಬೇರೊಂದು ಕಾಲದಲ್ಲಿ ನಡೆದ ಕಥೆಯೇನೋ ಎಂದು ಪ್ರಾರಂಭದಲ್ಲಿ ಅನಿಸುವುದು ಸಹಜ. ಆದರೆ ಇಲ್ಲಿ ಬರುವ ಸನ್ನಿವೇಶಗಳು ನಿತ್ಯ ಸತ್ಯ. ಅನಿವಾಸಿಯ ಸಂಪಾದಕನಾಗಿ ನನಗೆ ಪ್ರತೀ ಸೋಮವಾರ, ಗುರುವಾರ ಮನಸ್ಸಿನಲ್ಲಿ ಇದೇ ಬಗೆಯ ತಳಮಳ. ನಾಳೆ ಪ್ರಕಟವಾಗುವ ಕೃತಿ ಯಾವುದು, ಅದನ್ನು ಜಾಲ ತಾಣಕ್ಕೆ ಏರಿಸಿಯಾಯಿತೇ, ತಪ್ಪುಗಳಿವೆಯೇ ಹೀಗೆ ಹಲವಾರು ಯೋಚನೆಗಳು. ಕೆಲಸ, ಸಂಸಾರದ ಎಳೆತಗಳು ಇವೆಲ್ಲವೂ ಇಲ್ಲಿ ಪದರ ಪದರವಾಗಿ ತೆರೆದುಕೊಳ್ಳುತ್ತವೆ. ತೆರೆದುಕೊಳ್ಳುತ್ತಲೇ ಸದ್ಯಕ್ಕೆ ಧಡಕ್ಕನೆ ಎಳೆತರುತ್ತದೆ.
ಬಲುದಿನದಿ ಮಿತ್ರನಿಗೆ ಪತ್ರವನೆ ಬರೆದಿಲ್ಲ
ಬರೆಯಲೆ ನಾನು ಬೇಗ
ತಾಳೆಗರಿಯೊಂದೆಳೆದು ಕುಳಿತಿರುವೆ ಯೋಚಿಸುತ
ಏನನ್ನು ಬರೆಯಲೀಗ
ಉಭಯಕುಶಲೋಪರಿಯ ಎರಡು ಸಾಲುಗಳನ್ನು
ಬರೆದಿರುವೆ ಲೇಖನಿಯಲಿ
ಮದ್ಯಾಹ್ನದೂಟಕ್ಕೆ ಆಲಸ್ಯವದು ಸೇರಿ ನಿದ್ದೆ
ಮೂಡಿತು ಕಣ್ಣುಗಳಲಿ
ನಿದ್ರೆಯಿಂದೆದ್ದು ಮುಂದೆ ಬರೆಯುವೆನೆಂದು
ನಾ ಅಲ್ಲಿ ವಿಶ್ರಮಿಸಲು
ಎದ್ದು ನೋಡಲು ತಾಳೆ ಗರಿ ಬದಲಾಗಿ
ತೊಗಲಿನಾ ಪತ್ರವಿರಲು
ತೊಗಲಿನಾ ಹಾಳೆಯಲಿ ನಾ ಪತ್ರ ಉದ್ಧರಿಸೆ
ಮತ್ತೆರೆದು ಸಾಲು ಬರೆದು
ಮುಂದಿನಾ ವಿಷಯಗಳ ಬರೆಯುವೆನು ನಂತರದಿ
ಎಂದಂದು ಒಳಗೆ ಸರಿದು
ಸಂಜೆಯಾಯಿತು ಸಂಧ್ಯಾ ವಂದನೆಯ ನಾ ಮುಗಿಸಿ
ಬಂದಿರಲು ಪತ್ರ ಬರೆಯೆ
ತೊಗಲು ಹಾಳೆಯ ಬದಲು ಅಲ್ಲಿತ್ತು ಸುಂದರ
ಬಟ್ಟೆಯ ಓಲೆ ಗರಿಯೆ
ನನ್ನ ಊರಿನ ವಿಷಯ ಅರುಹುತ್ತ ಕೇಳಿದೆನು
ಆತನ ಸುದ್ದಿಯೆಂತು
ಆಷ್ಟಕ್ಕೆ ಅಡಿಗೆಯಾ ಮನೆಯಿಂದ ನನಗೊಂದು
ಊಟಕ್ಕೆ ಕರೆಯು ಬಂತು
ಪತ್ರವನು ಬದಿಗಿಟ್ಟು ರುಚಿಯೂಟ ಸವಿಯಲಿಕೆ
ನಾನಂದು ಹೋದೆ ಒಳಗೆ
ಬಟ್ಟೆಯಾ ಓಲೆಯದು ಕಾಗದದ ಪತ್ರವಾಗಿತ್ತು
ತಾ ಅಷ್ಟರೊಳಗೆ!!
ಕಾಗದದ ಮೇಲೆರೆಡು ಸಾಲು ಗೀಚಿರಲಿಲ್ಲ
ಅಷ್ಟರಲೆ ಮಗನು ಬಂದು
ನಮ್ಮ ಜೊತೆಯಲಿ ನೀನು ಆಟವಾಡುವುದಿಲ್ಲ
ದೂಷಿಸುತ ಕರೆದನಂದು
ಎಲವೊ ಮಿತ್ರನೆ ನಿನಗೆ ಪತ್ರ ಬರೆಯುವ ಕೆಲಸ
ಎಳೆಯುತಿದೆ ದೀರ್ಘವಾಗಿ
ಎಂದು ಮರುಗುತ ಹೊರಟೆ ಮಗನೊಡನೆ ಆಡಲಿಕೆ
ಅವನ ಮನ ಶಾಂತಿಗಾಗಿ
ಬಂದು ಪತ್ರವ ಮುಗಿಸಿ ಮಡಿಸಿ ಲಕೋಟೆಗೆ
ಹಾಕಬೇಕೆಂದು ನೆನೆದು
ಮೇಲೊಂದು ಮರೆಯದೆಯೆ ಅಂಚೆ ಚೀಟಿಯನೆಂದು
ಮೆತ್ತಬೇಕೆಂದು ಬಗೆದು
ಮಗನಲ್ಲಿ ಮಲಗಿದನು ಇನ್ನು ತೊಂದರೆಯಿಲ್ಲ
ಪತ್ರವನು ನಾ ಮುಗಿಸಲು
ಭರದಿಂದ ಬಂದಿರಲು ಕಾಣದೆಯೆ ಕಾಗದವ
ಸುತ್ತಲೂ ಹುಡುಕುತಿರಲು
ಅಲ್ಲಿತ್ತು ಗಣಕಯಂತ್ರದ ಪರದೆ ಪರದೆಯಲಿ
ನನ ಒಕ್ಕಣೆಗಳು
ಮುಂದೆ ಬರೆಯುವುದಕೆ ಲೇಖಣಿಯೆ ಬೇಕಿಲ್ಲ
ಬೆರಳಚ್ಚು ಗುಂಡಿಗಳಿರಲು
ಪಟಪಟನೆ ನಾ ಬಡಿಯೆ ಮೂಡಿರಲು ಪರದೆಯಲಿ
ನನ್ನೆಲ್ಲ ಮನದ ಮಾತು
ಸಂಗ್ರಹಿಸಿ ಪರದೆಯಲಿ ಶೇಖರಿಸಿ ಕಳುಹಿಸಿರೆ
ಕ್ಷಣದಲ್ಲಿ ಹಾರಿಹೋಯ್ತು
ಪತ್ರಗಳ ವಿನಿಮಯಕೆ ಬೇಕಿತ್ತು ಹಿಂದೆಲ್ಲ
ದಿನ ವಾರ ಮಾಸ ಕಾಲ
ಕಣ್ಣೆವೆಯ ಬಡಿವಲ್ಲಿ ಹೊತ್ತೊಯ್ದು ತಲುಪಿಸಿದೆ
ಮಾಯೆಯಾ ಅಂತರ್ಜಾಲ
ಏನಿದಚ್ಚರಿ ದೇವ ಪ್ರತಿಸಲಕು ಪಡೆಯುತಿದೆ
ನನ ಪತ್ರ ರೂಪಾಂತರ
ಸಂದೇಶದ ಮಣ್ಣ ಕಲಸಿ ರೂಪಾಂತರವ
ನೀಡಿರೆ ಕಾಲ- ಕುಂಬಾರ
ಕಾಲನಾ ಹರಿವಿನಲಿ ಕುಳಿತು ನಾ ದೋಣಿಯಲಿ
ಅನುಭವಿಸಿ ಅಚ್ಚರಿಯನು
ಕನಸೊ ನನಸೊ ಎಂದು ತಿಳಿಯದಲೆ ಬೆಚ್ಚುತಲಿ
ಬಿಟ್ಟಿರಲು ನನ ಕಣ್ಣನು
ನಿಮ್ಮ ಬಡಬಡಿಕೆಯಲಿ ನನಗೆ ನಿದ್ರೆಯದಿಲ್ಲ
ದೂರುತಲಿ ನನ ಹೆಂಡತಿ
ಪತ್ರ ಬರೆಯುವುದೆಂದು ನಿಮ್ಮ ಹಣೆಯಲ್ಲಿಲ್ಲ
ಎಂದೆನುತ ತಿವಿದು ಮೂತಿ
ಮಗ್ಗುಲಿಗೆ ಹೊರಳಿದಳು ಕೊಡುತಲಿ ಎಚ್ಚರಿಕೆ
ಹೊಡೆದಳು ತಾನು ಗೊರಕೆ
ನಿದ್ರೆ ಬಾರದೆ ನಾನು ಮನದ ಕಸವನು ಗುಡಿಸೆ
ಹಿಡೆದೆ ಮರೆವಿನ ಪೊರಕೆ.
ಡಾ. ಸುದರ್ಶನ ಗುರುರಾಜರಾವ್.