ಒಂದೋ ಎರಡೋ ಬಾಳೆಲೆ ಹರಡೋ ಮತ್ತು ನನ್ನ ಮೆಚ್ಚಿನ ಲೇಖಕಿಗೊಂದು ಹೃತ್ಪೂರ್ವಕ ನಮನ

ಆತ್ಮೀಯ  ಓದುಗರಿಗೆ ನಮಸ್ಕಾರ

ರುಚಿಯಾದ ಅಡಿಗೆ ಮಾಡುವದು ಕಷ್ಟವೆಂದರೆ ಮಾಡಿದ್ದನ್ನು ತಿನ್ನುವುದೂ ಕೂಡ  ಕಷ್ಟವೆಂಬುವುದು  ಬಹು ಜನರಿಗೆ ಗೊತ್ತಿರಿಲರಾರದ ಸಂಗತಿ ಇರಬಹುದು . ಪ್ರಪಂಚದ ಬೇರೆ ಬೇರೆ ದೇಶಗಲ್ಲಿ ತಿನ್ನುವ ಆಹಾರ ವಿಭಿನ್ನವಾಗಿದ್ದರೆ, ತಿನ್ನುವ ಪದ್ಧತಿ ಕೂಡ ಅಷ್ಟೇ ವಿಭಿನ್ನವಾಗಿದೆ. ನಾನು ಮೊದಲು ಸಲ ಈ ದೇಶಕ್ಕೆ ಬಂದಾಗ ಫೋರ್ಕ್ ಮತ್ತು ಚಮಚ ಹಿಡಿದು ತಿನ್ನಲು ಹೋಗಿ ಹಾಗು ಜಪನೀಸ ನೂಡಲ್ಸನ್ನು ಕಡ್ಡಿಯಿಂದ ಎತ್ತಲು ಹೋಗಿ ನಗೆಪಾಡಾಗಿದ್ದು ಇನ್ನೂ ನೆನಪು. ಡೈನಿಂಗ್ ಟೇಬಲ್ ಮೇಲೆ ಕುಳಿತು ಆರಾಮವಾಗಿ ತಿನ್ನುವವರಿಗೆ ನಮ್ಮ ಹಳ್ಳಿಗೆ ಕರೆದೊಯ್ದು ಹಾಸಿದ ಚಾಪೆಯ ಮೇಲೆ ಕುಳಿತು ತಿನ್ನಲು ಹೇಳಿದರೆ ಎಂಥ ಕಷ್ಟವಾದೀತು? ಇಂಥ ವಿಷಯದ ಮೇಲೆ ಸರಾಳವಾಗಿ ಜುಳು ಜುಳು ನೀರಿನಂತೆ ಹರಿಯುವ ‘ ಹರಟೆ ‘ ಓದಲು ಸಿಕ್ಕರೆ ಮನಸಿಗೆ ಎಷ್ಟೊಂದು ಖುಷಿ ! ಇಷ್ಟು ಸಲೀಸಾಗಿ  ಹರಟೆಯನ್ನು ಬರೆಯಲು ಗೌರಿ ಪ್ರಸನ್ನನವರನ್ನು ಬಿಟ್ಟರೆ ಇನ್ನ್ಯಾರಿಗೆ ಸಾಧ್ಯ? ಬನ್ನಿ, ತಪ್ಪದೆ ಅವರ ಹರಟೆಯನ್ನು ಓದಿ ಆನಂದಿಸಿ .

ಒಬ್ಬೊಬ್ಬರ ಜೀವನದಲ್ಲೂ ಇನ್ನೊಬ್ಬ ಪ್ರಭಾವಿತ ವ್ಯಕ್ತಿಯ ಪ್ರಭಾವ ಇರುವದು ಸಹಜ. ನನ್ನ ಚಿಕ್ಕ ವಯಸಿನಲ್ಲಿ ಕನ್ನಡ ಸಾಹಿತ್ಯದತ್ತ ಅಭಿರುಚಿ ಬೆಳೆಯಲು ಕಾರಣರಾದವರು ನನ್ನ ನೆಚ್ಚಿನ ಕಾದಂಬರಿಕಾರ್ತಿ ‘ತ್ರಿವೇಣಿ’ ಯವರು . ಸೆಪ್ಟೆಂಬರ್ ೧ ಅವರ ಹುಟ್ಟುದಿನ . ಈ ಸಮಯದಲ್ಲಿ ನಾನು ಅವರಿಗೊಂದು ಹೃತ್ಪೂರ್ವಕ ನಮನ ಸಲ್ಲಿಸಲು ಸಣ್ಣ ಬರಹವನ್ನು ಬರೆದಿರುವೆ , ತಾವೆಲ್ಲಾ ಓದುವಿರೆಂದು ಭಾವಿಸಿರುವೆ 

ದಯವಿಟ್ಟು ಎರಡೂ ಬರಹಗಳನ್ನು ಸಮಯ ಸಿಕ್ಕಾಗ ಓದಿ , ಹಾಗೆಯೇ ಎರಡಕ್ಷರದ ಅನಿಸಿಕೆಯನ್ನು ಬರೆಯಲು ಮರೆಯಬೇಡಿ 

–  ಸಂಪಾದಕ 

ಒಂದೋ ಎರಡೋ ಬಾಳೆಲೆ ಹರಡೋ

ಗೌರಿ ಪ್ರಸನ್ನ

‘ಒಂದೋ ಎರಡೋ ಬಾಳೆಲೆ ಹರಡೋ’ ಅನ್ನುವ ಹಾಡಿನಿಂದಲೇ ನಮ್ಮ ಒನ್ನೆತ್ತಾ ಶುರುವಾಗಿ ನಾವು ರಾಕ್ಷಸ ಗಣದಿಂದ ಸಾಕ್ಷರರಾಗುವತ್ತ ಮೊದಲ ಹೆಜ್ಜೆಯಿಟ್ಟದ್ದು. ನಮಗೆ ಆಗಲೂ, ಈಗಲೂ ಊಟದ ಆಟ ಕೊಟ್ಟಷ್ಟು ಖುಷಿ ಬೇರಾವುದೂ ಕೊಟ್ಟಿಲ್ಲ ಅನಬಹುದು. ನಾ ಎಷ್ಟೋ ಸಲ ವಿಚಾರ ಮಾಡತಿರತೀನಿ. ಈ ‘ಊಟ’ ಅನ್ನೂದು ಇರಲಿಲ್ಲಂದ್ರ ಕೆಲಸನs ಇರತಿರಲಿಲ್ಲ ಅಂತ. ನಾವೂ ಗಿಡಮರಬಳ್ಳಿಗಳ ಗತೆ ಅಥವಾ ಕೋಯಿಮಿಲ್ ಗಯಾದ ‘ಜಾದೂ’ ನ ಗತೆ ಬರೀ ಸೂರ್ಯನ ಬಿಸಿಲೋ, ನೀರೋ ಇವುಗಳಿಂದನೇ ಬದುಕೂ ಹಂಗಿದ್ರ ಯಾವ ಕೆಲಸದ ರಗಳೆನೇ ಇರತಿರಲಿಲ್ಲ. ಕನಿಷ್ಠ ಪಕ್ಷ ಪಶುಪಕ್ಷಿಗಳ ಗತೆ ಸೊಪ್ಪು, ಹುಲ್ಲು, ಹಣ್ಣುಹಂಪಲ, ಹಸಿಮಾಂಸಗಳನ್ನು ಹಂಗೇ ನೇರವಾಗಿ ತಿನ್ನೂ ಹಂಗಿದ್ರ ಹೆಂಗಿರತಿತ್ತು..?! ಆವಾಗ ಈ ಭಾಂಡಿ ತೊಳಿ, ಕಟ್ಟಿ ಒರಸು, ಕಿರಾಣಿ ತಗೊಂಬಾ, ಕಾಸು, ಕಟ್ಟು, ಕುದಿಸು, ಬೇಯಿಸು, ಹೆಚ್ಚು, ಕೊಚ್ಚು, ತೊಳಿ, ಬಳಿ ಅನ್ನೋ ಯಾವ ಉಸಾಬರಿನೂ ಇರತಿರಲಿಲ್ಲ. ಹಂಗಂದ್ರ ಈ ಊಟನೇ ಎಲ್ಲಾದಕ್ಕೂ ಮೂಲ ಅಂದ್ಹಂಗಾತು. ದಾಸರೂ ಸಹಿತ ಅದಕ್ಕಾಗೇ ‘ಎಲ್ಲಾರೂ ಮಾಡುವುದು ಹೊಟ್ಟೆಗಾಗಿ’ ಅಂತ ಇನ್ ಡೈರೆಕ್ಟ್ ಆಗಿ ಈ ಊಟದ ಬಗ್ಗೆನೇ ಹೇಳ್ಯಾರ ಅನಸತದ.  ‘ತಂಡುಲದ ಹಿಡಿಯೊಂದು, ತುಂಡು ಬಟ್ಟೆಯದೊಂದು ಅಂಡಲೆತವಿದಕೇನೋ ಮಂಕುತಿಮ್ಮ’ ಅಂತಾರ ನಮ್ಮ ತಿಮ್ಮ ಗುರು.

 ಊಟಾ ಏನೋ ಎಲ್ಲಾರೂ ಮಾಡತಾರ. ಮಾಡಿದ್ದಣ್ಣೋ ಮಹರಾಯ ಅಂತ ಕೆಲವರು ತಾವೇ ಕೈ ಸುಟಗೊಂಡು ಬಾಯಿನೂ ಸುಟಗೋತಾರ. ಇನ್ನ ಕೆಲವರು ಏನೂ ಬಿಸಿಯಿಲ್ಲದೇ ಖಮ್ಮಗ ಮತ್ತೊಬ್ಬರು ಮಾಡಿ ಹಾಕಿದ್ದನ್ನ ಸುಮ್ಮ ತಿಂದು ಬಿಮ್ಮಗಿರತಾರ. ಮತ್ತೂ ಕೆಲವರು ತಿನ್ನೂತನಾ ತಿಂದು ಆಮ್ಯಾಲೆ “ಹೋಳ ಭಾಳ ಹಣ್ಣ ಬೆಂದಾವ ಅಂತಲೋ, ಬ್ಯಾಳಿ ಬೆಂದೇ ಇಲ್ಲ” ಅಂತನೋ ಕಿಟಿಪಿಟಿ ನಡಸಿರತಾರ. ಅಂತೂ ಊಟ ಅಂಬೋ ಆಟ ಅವರವರದೇ ರೀತಿಯೊಳಗ ಎಲ್ಲಾರೂ ಆಡತಿರತಾರ. ಈ ಊಟ ಮಾಡೂ ರೀತಿ, ಅದರ ವಿಧಿ -ವಿಧಾನಗಳು ಎಷ್ಟೊಂದ ನಮೂನೀರಿ?! ಜಾಗಾದಿಂದ ಜಾಗಾಕ್ಕ ಈ ಊಟದ ರೀತಿ-ನೀತಿಗಳು ಬ್ಯಾರೆ ಬ್ಯಾರೆ ಆಗತಾವ ಅನ್ರಿ. ನಮ್ಮ ಕಡೆ ಅಂದ್ರ ದಕ್ಷಿಣ ಭಾರತದಾಗ ಬಾಳೆ ಎಲೆಗಳ ಸಂಭ್ರಮ. ಏನರೇ ಹಬ್ಬ-ಹುಣ್ಣಿಮಿ, ಮದುವಿ-ಮುಂಜಿವಿ, ಆರಾಧನಿ-ಸಮಾರಾಧನಿ ಅಂತೆಲ್ಲ ಇದ್ರ  ಬಾಳೆಎಲೆ ಊಟ ಗ್ಯಾರಂಟೀರಿ. ನಾವು ಸಣ್ಣವರಿದ್ದಾಗ ರವಿವಾರಕ್ಕೊಮ್ಮೆ ಸಂತ್ಯಾಗ ಬಾಳಿ ಎಲಿ ತಂದು, ದಿಂಡ ತಗದು, ಅವನ್ನ ಹೆಚ್ಚಿ ಸಣ್ಣಸಣ್ಣ ಎಲೆಗಳನ್ನಾಗಿ ಮಾಡಿ ಒಂದು ತಟ್ಟಿನ ಚೀಲ ‘ನಮ್’ ಅನ್ನೂ ಅಷ್ಟು ಒದ್ದಿ ಮಾಡಿ ಅದರಾಗ ಸುತ್ತಿ ಇಡತಿದ್ರು ನಮ್ಮ ಮುದ್ದಣ್ಣ ಮಾಮಾ. 15-20 ದಿನಗಟ್ಟಲೇ ಛಲೋ ಇರತಿದ್ವು. ಸ್ವಲ್ಪ ಹಳದಿ ಒಡದ್ರೂ ನಮಗೇನ ಫರಕ ಬೀಳತಿರಲಿಲ್ಲ.( ಯಾಕಂದ್ರ ನಮ್ಮ ಕಣ್ಣೆಲ್ಲ ಎಲೆಯ ಮೇಲಿನ ಖಾದ್ಯಗಳ ಬಣ್ಣದೆಡೆ ನೆಟ್ಟಿರುತ್ತಿದ್ದವೆನ್ನಿ) ಊಟಾ ಆದಮ್ಯಾಲೆ ಅವೇ ಎಲೆಗಳು ಸಾಳುಂಕೆ ಅವರ ಮನೆಯ ಎಮ್ಮೆ-ಆಕಳುಗಳಿಗೆ  ಸುಗ್ರಾಸ ಭೋಜನವಾಗುತ್ತಿದ್ದವು. 

 ಈ ಬಾಳೆ ಎಲಿ ಹೆಂಗ ಹಾಕಬೇಕು ಅನ್ನೂದೇ ಒಂದು ಸಮಸ್ಯೆ ಹಲವರಿಗೆ. ಉದ್ದ ಹಾಕಬೇಕೋ, ಅಡ್ಡ ಹಾಕಬೇಕೋ, ಅದರ ಮಾರಿ ಯಾವ ಕಡೆ ಇರಬೇಕು, ಕುಡಿ ಬಾಳೆ ಎಲಿ ಹಾಕಬೇಕೋ ಬ್ಯಾಡೋ ..ಹೀಂಗ ನೂರಾ ಎಂಟು ಪ್ರಶ್ನೆ ಇರತಾವರೀ ( ಯಾಕಂದ್ರ ಚೊಚ್ಚಲ ಗಂಡಸ ಮಕ್ಕಳಿದ್ದವರು ಕುಡಿ ಬಾಳಿ ಎಲ್ಯಾಗ ಉಣಬಾರದಂತ ಶಾಸ್ತ್ರ ಅದ ಅಂತರಿ).  ಎಲಿ ಹಾಕಿದ ಮ್ಯಾಲೆ ಇನ್ನ ಸಾಲಕ ಉಪ್ಪಿನ ಹಿಡಕೊಂಡು ಚಟ್ಟಿ, ಕೋಸಂಬ್ರಿ, ಪಲ್ಯಾ, ಕಾರೇಸಾ, ಬುರಬುರಿ, ಪಾಯಸ, ಅನ್ನ, ತೊವ್ವೆಗಳಿಗಲ್ಲ ಅದರದರದೇ ನಿರ್ದಿಷ್ಟ ಜಾಗ ಇರತಾವರೀ. ಉಪ್ಪು ಎಡಕ್ಕ, ಪಾಯಸ ಬಲಕ್ಕ, ಅನ್ನದ ಬಲಬದಿಗೆ ತೊವ್ವೆ, ಅದರ ಮೇಲೆ ತುಪ್ಪ … ಹೀಂಗ ಏನೇನೋ. ಅವೆಲ್ಲ ಅದಲು ಬದಲು ಆಗೂ ಹಂಗಿಲ್ರೀ. ನೀವೇನರೇ ಪಾಯಸ ಎಡಕ್ಕ ಬಡಸಿದಿರೋ ‘ಹುಚ್ಚ ಖೋಡಿ’ ಅಂತ ಗ್ಯಾರಂಟಿ ಬಯ್ಯಿಸಿಕೋತಿರಿ. ಕೆಲವು ಮಂದಿ ಅಂತೂ ವಾಗತ್ಯ ಮಾಡಿಕೋತಾರ. ಹಂಗಂತ ಇದೇ ಸರಿ ಅಂತ ಅಲ್ರಿ. ಕೆಲವರಲ್ಲಿ ಉಪ್ಪಿಲ್ಲದೇ ಊಟ ಬಡಿಸುವಂತಿಲ್ಲ. ಇನ್ನ ಕೆಲವರಲ್ಲಿ ಮೊದಲು ಉಪ್ಪು ಹಾಕುವಂತಿಲ್ಲ. ಕೆಲವರಲ್ಲಿ ಪಾಯಸ- ಪರಮಾನ್ನದಿಂದ ಊಟ ಆರಂಭ ಆದ್ರ, ಇನ್ನ ಕೆಲವರಲ್ಲಿ ‘ಡೆಸರ್ಟ್’ಅಂತ ಊಟ ಆದಮ್ಯಾಲೆ ತಿಂತಾರ. ಕೆಲವೆಡೆ ಶುಭ ಸಂದರ್ಭಗಳಲ್ಲಿ ಮುದ್ದಿಪಲ್ಯ ನಿಷಿದ್ಧ. ಇನ್ನು ಕೆಲವೆಡೆ ಅದು ಕಂಪಲ್ಸರಿ ಇರಲೇಬೇಕು. ಕೆಲವರಿಗೆ ಭಕ್ರಿ-ಬದನೆಕಾಯಿ ಹಬ್ಬಹರಿದಿನಗಳಲ್ಲಿ ನಿಷಿದ್ಧ.  ಇನ್ನು ಕೆಲವರಲ್ಲಿ ಮದುವೆ ಊಟಕ್ಕೂ ಅವು ಬೇಕು. ಹೀಂಗ ದೇಶ-ಕಾಲ ಭೇದಗಳು ಭಾಳ ಇರತಾವ್ರಿ ಈ ಊಟದಾಗ.

ಈ ಬಾಳಿ ಎಲಿ ಊಟದ ಮಜಾನೇ ಬ್ಯಾರೆ ಇರತದ್ರಿ. ಮದುವಿ ಭೂಮದಾಗಂತೂ ಇಷ್ಟುದ್ದ ಏಕ ಎಲಿ ಮ್ಯಾಲೆ ಬಡಿಸಿದ ನಾನಾ ನಮೂನಿ ಸಂಡಿಗಿ-ಹಪ್ಪಳ-ಮಂಡಿಗೆಗಳು, ಶ್ಯಾವಿಗೆ-ಬಟವಿ ಪಾಯಸಗಳು, ಎಲೆ ಮುಂದೆ ಹಾಕಿದ ಬಣ್ಣಬಣ್ಣದ ಮನಸೆಳೆವ ರಂಗೋಲಿಗಳು, ಬೆಳಗುತ್ತಿರುವ ಸಮೆಗಳು… ನೋಡೂ ಹಂಗ ಇರತದ. ಆದ್ರ ಮಣೆ ಮ್ಯಾಲೆ ಕೂತು ಎಲೆ ತುದಿಯ ಖಾದ್ಯಗಳನ್ನೆಲ್ಲ ಬಗ್ಗಿ ಬಗ್ಗಿ ಹೆಕ್ಕಿ ತಿನ್ನೂದರಾಗ ದೊಡ್ಡ ಸರ್ಕಸ್ಸೇ ಆಗತದ. ಮೊನ್ನೆ ಇಲ್ಲೊಬ್ಬರ ಮನ್ಯಾಗ ವಾಸ್ತುಶಾಂತಿಗಂತ ಊಟಕ್ಕ ಕರದಿದ್ರು. ತಾಜಾ ಹಸರ ದೊಡ್ಡದೊಡ್ಡ ಬಾಳಿಎಲಿ ಮ್ಯಾಲೆ ಛಂದಾಗಿ ಬಡಸಿದ್ರು. ಆದ್ರ ಆ ಭಾರೀ ಜರದ ರೇಶ್ಮೆ ಸೀರೆ ಉಟಗೊಂಡು , ನಮ್ಮ ಗಜಗಾತ್ರದ ದೇಹ ಹೊತಗೊಂಡು , ಕೆಳಗ ನೆಲದ ಮ್ಯಾಲೆ ಕೂತು ಊಟಾ ಮಾಡೂದರಾಗ ‘ಊಟಾನೂ ಇಷ್ಟ ತ್ರಾಸಿಂದs’ ಅಂತ ಅನ್ನಿಸಿಬಿಡತರೀ. ಯಾಕಂದ್ರ ಕೋಸಂಬ್ರಿ, ಅಂಬೊಡೆ, ಮೈಸೂರ ಪಾಕು ಎಲ್ಲಾ ಮುಂದ ಹಾಕಿಬಿಟ್ಟಾರ್ರೀ. ಬಗ್ಗಬೇಕಂದ್ರ ನಮ್ಮ ಹೊಟ್ಟಿ ಅಡ್ಡ. ಕಡೀಕೆ ನಾ ಬಡಸಲಿಕ್ಕೆ ಬಂದವರಿಗೆ ಹೇಳೇಬಿಟ್ಟೆ. ’ಇಲ್ಲೇ ಇತ್ತತ್ತೇ ಹಾಕಿಬಿಡ್ರಿ. ಬಗ್ಗಲಿಕ್ಕೆ ಆಗಂಗಿಲ್ಲ’ ಅಂತ. ಅವರೂ ನನ್ನ ಮಾರಿ ನೋಡಿ ನಕ್ಕೋತ ಹಾಕಿ ಹೋದ್ರ ಬಿಡ್ರಿ. ಮತ್ತೇನ ಮಾಡೂದ್ರಿ? ಊಟದ ವಿಷಯ ನಾಚಿಕೊಂಡ ಕೂತರ ಹೆಂಗ ನಡೀತದ್ರೀ? 

ಈ ಬಾಳಿ ಎಲಿ ಆವಾಂತರ ಒಂದೊಂದ ಅಲ್ರೀ. ಒಂದ ಸಲ ಶಿರಸಿಗೆ ನನ್ನ ಗೆಳತಿ ಊರಿಗೆ ಹೋಗಿದ್ದೆ. ಅಕಿ ಎಲ್ಲೋ ತಮ್ಮ ನೆಂಟರ ಮನಿಗೆ ನಮ್ಮನ್ನ ಕರಕೊಂಡು ಹೋಗಿದ್ಲು. ಅವರು ನಾವು ಬಯಲುಸೀಮಿಯಿಂದ ಬಂದವರು, ತಮ್ಮೂರಿನ ಸ್ಪೆಷಲ್  ತಿನಸಬೇಕೆಂದು ತೋಟದಿಂದ ತಾಜಾ ಬಾಳಿ ಎಲಿ ಕತ್ತರಿಸಿಕೊಂಡು ಬಂದು ಮನೆಯ ತೋಟದ ರುಚಿರುಚಿಯಾದ ಘಮಗುಡುವ ಮಾವಿನಹಣ್ಣಿನ ಸೀಕರಣೆಯನ್ನು ಹಲಸಿನ ಹಪ್ಪಳದ ಜೋಡಿಗೆ ಅದರಾಗ ಬಡಿಸಿದರು. ನಾ ಕಕ್ಕಾಬಿಕ್ಕಿ. ಬಾಳಿಎಲ್ಯಾಗ ಸೀಕರಣಿ ಹೆಂಗ ತಿನ್ನೂದ್ರಿ?! ಅದು ಹರಕೊಂಡು ಹೊಂಟದ. ಕೈಯಾಗ ತಗೊಂಡು ನೆಕ್ಕಲಿಕ್ಕ ಹೋದ್ರ ಮೊಣಕೈತನಾ ಸೋರಿ ಸೀರಿ ಮ್ಯಾಲೆ ಬೀಳಲಿಕ್ಹತ್ತೇದ. ಅವರು ಆದರ ಮಾಡಿ ಬಲವಂತ ಮಾಡಿದರೂ ಹಾಕಿಸಿಕೊಳ್ಳಲಾರದಂಥ ಪರಿಸ್ಥಿತಿ. ಒಂದ ಬಟ್ಟಲದಾಗೋ, ದೊನ್ನ್ಯಾಗೋ ಹಾಕಿಕೊಡಬಾರದs ಅಂತ ಮನಸಿನಾಗ ಬಯ್ಯಕೋತ ಅಂಥ ರುಚಿಯಾದ ಸೀಕರಣೀನ್ನ ಸುಡ್ಲಿ ಈ ಬಾಳಿ ಎಲ್ಯಾಗ ಬಡಿಸಿದ್ರು ಅಂತ ತಿನ್ನಲಾರದ ಬಿಡೂದಾತು.

ಈ ಬಾಳಿ ಎಲಿ ಊಟೇನೋ ಛಂದ. ಆದ್ರ ಆಮ್ಯಾಲೇನರೇ ಎಂಜಲಾಗ್ವಾಮಾ ಮಾಡೂ ಪಾಳಿ ಬಂತೋ .. ಭಾರೀ ತ್ರಾಸರೀ. 

ಅಂತೂ ಊಟಾ ಮಾಡೂದು (ಅದೂ ಬಾಳೆ ಎಲಿದು)  ಆಟಾ ಆಡೂದರಷ್ಟ ಸರಳ ಅಲ್ಲಾ ಅನ್ನೂದು ನನ್ನ ಅಂಬೋಣ. ನೀವೇನಂತೀರಿ? 

ವಿ.ಸೂ. ಇನ್ನ ನನ್ನ ಕೊರೆತ ಮುಗದಿಲ್ಲಾ. ಈಗ ಒಂದೋ, ಎರಡೋ.. ಆಗೇದ. ಇನ್ನ ಮೂರೋ, ನಾಕೋ, ಐದೋ, ಆರೋ ಎಲ್ಲಾ ಬಾಕಿ ಅವ. ಮಾನಸಿಕವಾಗಿ ಸಿದ್ಧವಾಗಿರಿ ಕೊರೆಸಿಕೊಳ್ಳಲು..

ಮೂಲ ಕವಿಯ ಕ್ಷಮೆ ಯಾಚಿಸಿ..

ಒಂದೋ, ಎರಡೋ ..ಬಾಳೆಲೆ ಹರಡೋ

( ನೀರ ತಗೋರಿ..ಎರಡೆಳಿ ರಂಗೋಲಿ ಹಾಕ್ರಿ)

ಮೂರೋ, ನಾಕೋ ಅನ್ನವ ಹಾಕೋ

(ಚಟ್ನಿ,ಕೋಸಂಬ್ರಿ, ಪರಮಾನ್ನ??!!)

ಐದೋ, ಆರೋ ಬೇಳೆಯ ಸಾರೋ

(ತವ್ವಿ, ತುಪ್ಪ ತಗೋರಿ ಮದಲs)

ಏಳೋ, ಎಂಟೋ ಪಲ್ಯಕೆ ದಂಟೋ

(ಪಲ್ಯಾ ಮದಲs ಬರಬೇಕಿತ್ತಲ್ರೀ .)

ಒಂಬತ್ತೋ, ಹತ್ತೋ ಎಲೆ ಮುದುರೆತ್ತು

(ಸ್ವೀಟು, ಚಿತ್ರಾನ್ನ, ಮೊಸರನ್ನ ಎಲ್ರಿ?)

ಒಂದರಿಂದ ಹತ್ತು ಹೀಗಿತ್ತು..

(ಒಂದರಿಂದ ನೂರಿದ್ರೂ ನಡೀತಿತ್ರೀ..

ಯಾವುದೂ ಐಟಂ ಬಿಡಬಾರದಿತ್ರಿ)

ಊಟದ ಆಟವು ಮುಗಿದಿತ್ತು

(ಉಸಿರಿನ ಓಟವೂ  ನಿಂತಿತ್ತು..)

ನನ್ನ ಮೆಚ್ಚಿನ ಲೇಖಕಿಗೊಂದು ಹೃತ್ಪೂರ್ವಕ ನಮನ

ಶಿವಶಂಕರ ಮೇಟಿ

(ಚಿತ್ರ: ಗೂಗಲ್ ಕೃಪೆ)

ಸೆಪ್ಟೆಂಬರ್ ೧ ಕನ್ನಡದ  ಕಾದಂಬರಿಗಾರ್ತಿಯರ ಇತಿಹಾಸದಲ್ಲಿ ನೆನಪಿಡುವ ದಿನ . ಏನಿದರ ವಿಶೇಷತೆ ಎನ್ನುತ್ತೀರಾ ?

ಇದು ಕನ್ನಡದ  ಕಾದಂಬರಿ ಲೋಕ ಕಂಡ ಅಪರೂಪದ ಲೇಖಕಿ ತ್ರಿವೇಣಿಯವರ ಜನುಮ ದಿನ . ಬಾಲ್ಯದಿಂದಲೂ ನನಗೆ ಅವರ ಮೇಲಿರುವ ಅಪಾರ ಗೌರವದ ಋಣಿಯಾಗಿ,  ಇದೊಂದು ಸಣ್ಣ ಲೇಖನದ ಮೂಲಕ ಅವರಿಗೊಂದು ನಮನ .

ಕನ್ನಡದ ‘ಜೇನ್ ಆಸ್ಟಿನ್ ‘ ಎಂದೇ ಹೆಸರಾಗಿದ್ದ ತ್ರಿವೇಣಿಯವರು ಹುಟ್ಟಿದ್ದು ಸೆಪ್ಟೆಂಬರ್ ೧ , ೧೯೨೮ ರಲ್ಲಿ . ಮೈಸೂರಿನ ಚಾಮರಾಜಪುರದಲ್ಲಿ ಜನನ . ಭಾಗೀರಥಿ ಜನ್ಮನಾಮವಾದರೂ ‘ಅನಸೂಯಾ’ ಆಗಿ ಶಾಲೆಗೆ ಸೇರಿ, ‘ತ್ರಿವೇಣಿ ‘ಎಂಬ  ಲೇಖನಿ ಹೆಸರಿನಿಂದ ಕನ್ನಡ ಸಾಹಿತ್ಯಕ್ಕೆ ಚಿರ ಪರಿಚಿತರಾದವರು. ಸಾಹಿತ್ಯ ಸಂಸ್ಕೃತಿಯ ಮನೆಯ ವಾತಾವರಣದಲ್ಲಿ ಬೆಳೆದ ಅವರಿಗೆ ಬಾಲ್ಯದಿಂದಲೂ ಓದುವ ಹುಚ್ಚು ಸಹಜವಾಗಿತ್ತು ( ಬಿ ಎಂ ಶ್ರೀ  ಚಿಕ್ಕಪ್ಪ ಮತ್ತು ವಾಣಿ ಸೋದರ ಸಂಬಂಧಿ ). ಮೈಸೂರಿನ ಮಹಾರಾಣಿ ಕಾಲೇಜಿನಿಂದ ಬಂಗಾರದ ಪದಕದೊಂದಿಗೆ ಬಿ. ಎ ಮುಗಿಸಿದ  ಅವರಿಗೆ  ಮನೋವಿಜ್ಞಾನ ಮತ್ತು ಸಮಾಜಶಾಸ್ತ್ರದ ಬಗ್ಗೆ ತುಂಬ ಆಸಕ್ತಿ ಇತ್ತು. 

ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದರೂ ಅಂತರಾಳದಲ್ಲಿ ಅಡಗಿದ್ದ ಸಾಹಿತ್ಯದ ಒಲವು ಅವರನ್ನು ಕಾದಂಬರಿ ಲೋಕಕ್ಕೆ ಕರೆದುಕೊಂಡು ಹೋಗಿತ್ತು. ಹೆಣ್ಣಿನ ಆಸೆಗಳಿಗೆ ಪುರುಷ ಪ್ರಧಾನವಾದ ಸಮಾಜದಲ್ಲಿ ಬೆಲೆಯೇ ಇಲ್ಲವೆಂದು ಪ್ರತಿಪಾದಿಸುವ ಅವರ ಮೊದಲು ಕಾದಂಬರಿ ‘ ಅಪಸ್ವರ ‘ ೧೯೫೩ ರಲ್ಲಿ ಪ್ರಕಟವಾಯಿತು. ಹೆಣ್ಣಿನ ಮಾನಸಿಕ ತುಮುಲ, ಶೋಷಣೆ, ಸಮಾಜದಲ್ಲಿ ಅವಳೆದಿರಿಸುವ ಸಮಸ್ಯೆಗಳು ಅವರ ಕಾದಂಬರಿಯ ಜೀವಾಳವಾಗಿದ್ದವು . ಮಾನಸಿಕ ರೋಗಿ ಗುಣಮುಖವಾದರೂ ಸಮಾಜ ಅವರನ್ನು ನೋಡುವ ಪರಿಯನ್ನು ‘ ಶರಪಂಜರದಲ್ಲಿ ‘ ಬಿಂಬಿಸಿದ್ದರೆ, ಯೌವ್ವನದ  ಹೊಳೆಯಲ್ಲಿ ಉಕ್ಕುವ ಕಾಮದಾಸೆ ಮತ್ತು ತಪ್ಪು ಪುರುಷನಿಗೆ ಮಾತ್ರ ಸೀಮಿತವಲ್ಲ ಹೆಣ್ಣಿಗೂ ಅನ್ವಯವಾಗುತ್ತದೆ  ಹಾಗು ಒಬ್ಬರನೊಬ್ಬರು  ಕ್ಷಮಿಸಿ ನಡೆದರೆ ಜೀವನ ಸಾರ್ಥಕವೆಂಬುವದನ್ನು ‘ಸೋತು ಗೆದ್ದವಳು’ ಎಂಬ ಕಾದಂಬರಿಯಲ್ಲಿ  ಚಿತ್ರಿಸಿದ್ದಾರೆ. ‘ಹಣ್ಣೆಲೆ ಚಿಗುರಿದಾಗ’ ದಲ್ಲಿ ವಿಧವಾ ವಿವಾಹದ ವಿಷಯವಿದ್ದರೆ ‘ಹೂವು ಹಣ್ಣು’ ನಲ್ಲಿ ಅಸಹಾಯಕ ಹೆಣ್ಣು ವೇಶ್ಯಾ ವೃತ್ತಿಯ  ಜಾಲದಲ್ಲಿ ಸಿಲುಕುವ ವ್ಯಥೆಯಿದೆ. ಅವರ ಒಂದೊಂದು ಕಾದಂಬರಿಗಳನ್ನು ವಿಮರ್ಶಿಸಲು ನೂರಾರು ಪುಟಗಳೇ ಬೇಕಾಗಬಹುದು . ಅವರು ಬರೆದ ೨೧ ಕಾದಂಬರಿಗಳು ಕನ್ನಡ ಸಾಹಿತ್ಯ ಲೋಕದ ೨೧ ಮುತ್ತುಗಳು ಎಂದರೆ ತಪ್ಪಾಗಲಾರದು.

ಐವತ್ತರಿಂದ  ಅರವತ್ತರ ದಶಕದಲ್ಲಿ ಬರೆದ ಅವರ ಕಾದಂಬರಿಗಳು ಹಳೆಯದಾದರೂ , ಕಾದಂಬರಿಯ ಕಥೆಗಳಲ್ಲಿ ಇರುವ ವಿಚಾರಧಾರೆ ಮತ್ತು ಪಾತ್ರಗಳು ಇಂದಿನ ಆಧುನಿಕ ಸಮಾಜದಲ್ಲೂ ನವ್ಯವೆಂದು ಅನಿಸುತ್ತವೆ. ಅವರ ಹಲವಾರು ಕಾದಂಬರಿಗಳು ಬೇರೆ  ಭಾಷೆಗಳಲ್ಲಿ ಅನುವಾದಗೊಂಡಿವೆ. ಅವರ ಕಾದಂಬರಿಗಳು ಸಾಮಾನ್ಯ ಓದುಗರನ್ನು ಮಾತ್ರವಲ್ಲ ಪ್ರಸಿದ್ಧ ಚಿತ್ರ ನಿರ್ದೇಶಕರನ್ನು ಕೂಡಾ ಆಕರ್ಷಿಸಿದ್ದವು . ಇಪ್ಪತ್ತೊಂದರಲ್ಲಿ ಏಳು ಕಾದಂಬರಿಗಳು ಸುಪ್ರಸಿದ್ದ ಕನ್ನಡ ಚಿತ್ರಗಳಾಗಿ ಬೆಳ್ಳಿ ತೆರೆಯನ್ನು ಕಂಡಿವೆ. ಶರಪಂಜರ , ಬೆಕ್ಕಿನ ಕಣ್ಣು ಮತ್ತು ಬೆಳ್ಳಿಮೋಡ  ಚಿತ್ರಗಳನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದರೆ , ಹಣ್ಣೆಲೆ ಚಿಗುರಿದಾಗ, ಹೂವು ಹಣ್ಣು, ಕಂಕಣ ಮತ್ತು ಮುಕ್ತಿ  ಬೇರೆ ಪ್ರಸಿದ್ಧ ನಿರ್ದೇಶಕರಿಂದ  ತೆರೆಯನ್ನು ಕಂಡಿವೆ.

ಹಲವಾರು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿದ್ದವು . ‘ಅವಳ ಮನೆ’ ಗೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದ್ದರೆ , ‘ಕಂಕಣ’ ದ ಕಥೆಗೆ ಕರ್ನಾಟಕ ಮೋಶನ್ ಪಿಕ್ಚರ್ ಪ್ರಶಸ್ತಿ ಬಂದಿತ್ತು . 

ಸಾಹಿತ್ಯ ಜೀವನದಲ್ಲಿ ಸವಿಯಿದ್ದರೂ ಅವರ ಸ್ವಂತ ಜೀವನದಲ್ಲಿ ನೋವಿನ ಅಲೆಯಿತ್ತು. ಮೆಚ್ಚಿ ಕೈ  ಹಿಡಿದ ಪ್ರೋತ್ಸಾಹಕ ಪತಿಯಿದ್ದರೂ (ಪ್ರೊಫೆಸ್ಸರ್ ಶಂಕರ್), ಹನ್ನೆರಡು ವರ್ಷದ ದಾಂಪತ್ಯ ಜೀವನದಲ್ಲಿ ಮಕ್ಕಳಾಗಲಿಲ್ಲ ಎಂಬ ಕೊರಗು ಸದಾ ಅವರನ್ನು ಕೊರೆಯುತಲಿತ್ತು . ಎರಡು ಸಲ ಗರ್ಭಪಾತವಾದಾಗ ಅವರು ಕುಸಿದು ಹೋಗಿದ್ದರು. ತಮ್ಮ ಮಾನಸಿಕ ವೇದನೆಯನ್ನು ‘ಅತಿಥಿ ಬರಲೇ ಇಲ್ಲ’ ಎಂಬ ಕಥೆಯಲ್ಲಿ ತೋಡಿಕೊಂಡಿದ್ದಾರೆ.

ಆದರೆ  ಕೊನೆಗೂ ಅತಿಥಿ ಬಂದಾಗ ವಿಧಿ ಅವರ ಅದೃಷ್ಟದ ಪುಟವನ್ನು ಬೇರೆ ರೀತಿಯಲ್ಲಿ ಬರೆದಿತ್ತು ಜುಲೈ ೧೯ , ೧೯೬೩ ರಲ್ಲಿ ಅವರು ಹೆಣ್ಣು ಮಗುವಿಗೆ  ಜನ್ಮವಿತ್ತಿದ್ದರು. ಹತ್ತು ದಿನಗಳ ನಂತರ ಪಲ್ಮನರಿ ಎಂಬೋಲಿಸಂ (ಶ್ವಾಸಕೋಶದಲ್ಲಿ ಸಿಲುಕಿದ ರಕ್ತದ ಹೆಪ್ಪು) ಗೆ ಬಲಿಯಾಗಿ  ಕೊನೆಯ ಉಸಿರನ್ನು ಎಳೆದರು . ಮೂವತ್ತೈದರ ಹರೆಯದಲ್ಲಿ ಇನ್ನೂ ಬಾಳಿ , ಬದುಕಿ ಹೆಮ್ಮರವಾಗಬೇಕಿದ್ದ ಪ್ರತಿಭೆಯ ಸಸಿ ಕಮರಿ ಹೋಯಿತು. ಕನ್ನಡದ  ಕಾದಂಬರಿ ಲೋಕ ಒಬ್ಬ ಮಹಾನ್  ಲೇಖಕಿಯನ್ನು ಕಳೆದುಕೊಂಡಿತು. ಅವರು ಇನ್ನು ಹೆಚ್ಚಿಗೆ ಬಾಳಿ  ಬದುಕಿದ್ದರೆ  ಅದೆಷ್ಟು ಪ್ರಸಿದ್ಧ ಕಾದಂಬರಿಗಳು  ಕನ್ನಡ ಸಾಹಿತ್ಯವನ್ನು ಸೇರುತ್ತಿದ್ದವೋ? ಇನ್ನೆಷ್ಟೋ ರಂಜಿತ ಚಲನ ಚಿತ್ರಗಳು ತೆರೆ ಕಾಣುತಿದ್ದವೋ ಎಂಬುದು ಕಲ್ಪನೆ ಮಾತ್ರ ಅವರು ಬದುಕಿರುವಾಗ ಅವರ ಯಾವುದೇ ಕಾದಂಬರಿಗಳು ಚಲನ ಚಿತ್ರಗಳಾಗಿರಲಿಲ್ಲ ಎಂಬುದು ವಿಷಾದನೀಯ .

ಅವರ ಮಗಳು  ಮೀರಾ ಶಂಕರ್ ಇತ್ತೀಚಿಗೆ ತೆಗೆದುಕೊಂಡ ನಿರ್ಧಾರ ಶ್ಲಾಘನೀಯ. ಚಾಮರಾಜಪುರದಲ್ಲಿ ಸುಮಾರು ಇನ್ನೂರು ವರ್ಷದಷ್ಟು ಹಳೆಯದಾದ ಅವರ ಮನೆಯನ್ನು ‘ತ್ರಿವೇಣಿ ಮ್ಯೂಸಿಯಂ’ ಆಗಿ ಪರಿವರ್ತಿಸಲಿದ್ದಾರೆ. ಮ್ಯೂಸಿಯಂನ ಜೊತೆಗೆ ಅವರ ಹೆಸರು ನವ ಪೀಳಿಗೆಗೆ ಗೊತ್ತಾಗಲಿ ಮತ್ತು ಅಮರವಾಗಿ ಉಳಿಯಲಿ ಎಂಬುವದು ನನ್ನ ಆಸೆ.

ತ್ರಿವೇಣಿಯವರು ಇಂದಿಗೂ ನನ್ನ ನೆಚ್ಚಿನ ಲೇಖಕಿ . ಚಿಕ್ಕಂದಿನಲ್ಲಿ ನಮ್ಮ ಮನೆಯಲ್ಲಿ ದೊರೆತ ಅವರ ಎರಡು ಕಾದಂಬರಿಗಳು ನನಗೆ ಕನ್ನಡ ಸಾಹಿತ್ಯ ಲೋಕಕ್ಕೆ ದಾರಿಯನ್ನು ತೋರಿಸಿದ್ದವು . ಪುಸ್ತಕಗಳನ್ನು ಓದುವ ಹುಮ್ಮಸ್ಸವನ್ನು ಹುಟ್ಟಿಸಿದ್ದವು. ಅವರ  ಉಳಿದ  ಕಾದಂಬರಿಗಳನ್ನು ಓದುವ ತವಕ ಮನಸಿನಲ್ಲಿ ಸದಾ ಇತ್ತು ಆದರೆ  ಅವಕಾಶ ಸಿಕ್ಕಿರಲಿಲ್ಲ . ಹೈಸ್ಕೂಲಿಗೆಂದು ಪಕ್ಕದ ಬೈಲಹೊಂಗಲಕ್ಕೆ ಸೇರಿದಾಗ ನಾನು ಮೊದಲು ಮಾಡಿದ ಕೆಲಸ ಗ್ರಂಥಾಲಯದ ಸದಸ್ಯನಾಗಿದ್ದು (ಸುಳ್ಳು ವಯಸ್ಸು ಹೇಳಿ ). ಅವರ  ಎಲ್ಲ  ಕಾದಂಬರಿಗಳು ಗ್ರಂಥಾಲಯದಲ್ಲಿ ಸಿಗದೇ ಇದ್ದರೂ ಸುಮಾರು ಪುಸ್ತಕಗಳು ಸಿಕ್ಕಿದ್ದು ಮನಸಿಗೆ ಖುಷಿ ತಂದಿತ್ತು. ತನ್ಮಯನಾಗಿ ಅವರ ಕಾದಂಬರಿಯನ್ನು ಓದುತ್ತಿದ್ದರೆ ನನಗೆ  ಆ ಕಥೆ ಎಲ್ಲೋ ನಮ್ನ ಪಕ್ಕದ ಮನೆಯಲ್ಲಿಯೇ ನಡೆದಿದೆ ಎಂದು ಅನಿಸುತಿತ್ತು. ಕಾದಂಬರಿಯ ಕಥೆ ಅಷ್ಟೊಂದು ಸರಳ  ಮತ್ತು ಸಹಜವಾಗಿರುತಿತ್ತು . 

ಮುಂದೆ ಧಾರವಾಡದ ಕರ್ನಾಟಕ ಕಾಲೇಜು ಸೇರಿದಾಗ , ಅವರ ಉಳಿದ ಕಥೆಗಳನ್ನು ಓದಲು ಅವಕಾಶ  ಸಿಕ್ಕಿದ್ದು ನನ್ನ ಜೀವನದ ಸಂತೋಷದ ಘಟನೆಗಳಲ್ಲಿ ಒಂದು ಎಂದು ಹೇಳಬಲ್ಲೆ . ಅವರ ಎಲ್ಲಾ ಪುಸ್ತಕದ ಕಿಟ್ಟು ಇಂದಿಗೂ  ‘ಅಮೆಜಾನ್  ‘ ಮಾರುಕಟ್ಟೆಯಲ್ಲಿ ಐದು ಸ್ಟಾರ್ ರಿವ್ಯೂನೊಂದಿಗೆ ಮಾರಾಟವಾಗುತ್ತಿದೆ ಎಂಬುದು ಹೆಮ್ಮೆಯ ಸಂಗತಿ .

ವಿಶ್ವಮಾನವ: ಜಿಮ್ ಹೇಯ್ನ್ಸ್- ಡಾ. ರಾಮಶರಣ್

“ಅನ್ನದಾತ ಸುಖೀಭವ" ಎಂದರು ನಮ್ಮ ಹಿರಿಯರು.ಯಾವುದೇ ಸಭೆ,ಸಮಾರಂಭ,ಹಬ್ಬ,ಸಂತೋಷ ಅಥವಾ ದುಃಖಗಳನ್ನು ಹಂಚಿಕೊಳ್ಳುವ ಆಚರಣೆಯ ಕಾರ್ಯಕ್ರಮಗಳಲ್ಲಿ ಆಹಾರದ ಪಾತ್ರ ಬಹುಮುಖ್ಯ.  ಪ್ರಪಂಚದೆಲ್ಲೆಡೆಯಲ್ಲಿ,ಎಲ್ಲಾ ರೀತಿಯ ಜನರನ್ನು ಭೇದಭಾವವಿಲ್ಲದೆ ಒಂದುಗೂಡಿಸುವುದರಲ್ಲಿ ಆಹಾರಕ್ಕಿಂತ ದೊಡ್ಡ ಸಾಧನವಿಲ್ಲ.ಆಹಾರ ತರುವ ಆನಂದವನ್ನು ಗುರುತಿಸಿ, ಸ್ನೇಹಿತರನ್ನು, ಅಪರಿಚಿತರನ್ನು ಒಂದುಗೂಡಿಸಿದ ಸಜ್ಜನ ಜಿಮ್ ಹೇನ್ಸ್(Jim Haynes)ನ್ನು ಅನಿವಾಸಿ ಒದುಗರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ ರಾಂ-ಸಂ

ತಿಂಡಿ-ತಿನಿಸು ಎಂದಾಗ ಎಲ್ಲರ ಕಿವಿ ನಿಮಿರುವುದು ಸಹಜ. ಇತ್ತೀಚೆಗೆ ಅನಿವಾಸಿಯಲ್ಲಿ ಹರಿದ ಅಡುಗೆ ಮನೆಯ ಸರಣಿಯ ಯಶಸ್ಸು, ಅದಕ್ಕೆ ಸಮಾನಾಂತರವಾಗಿ ನಡೆಯುತ್ತಲೇ ಇರುವ ವಾಟ್ಸಾಪ್ ಸಂದೇಶ ಸರಪಣಿಗಳೇ ಇದಕ್ಕೆ ಸಾಕ್ಷಿ. ಬಾಲ್ಯದ ನೆನಪು, ಹರೆಯದಲ್ಲಿ ಸ್ನೇಹಿತರೊಡನೆ ಕಳೆದ ಕ್ಷಣಗಳೆಂಬ ಮುತ್ತುಗಳನ್ನು ಪೋಣಿಸಿ ಹಾರವನ್ನಾಗಿಸುವುದು ನಮ್ಮ ಆಹಾರದ ಮೇಲಿನ ಪ್ರೀತಿ ಎಂದೆನಿಸುವುದು ಹಲವು ಸಲ. ಚುಮು-ಚುಮು ನಸುಕಿನಲ್ಲಿ ಶಾಲೆಗೆ ಹೊರಡುವ ಮೊದಲು ಮನೆ ಮಕ್ಕಳನ್ನೆಲ್ಲ ಒಲೆಯ ಸುತ್ತ  ತರುವುದು ಅಮ್ಮ ಮಾಡುವ ತಿಂಡಿ. ಕ್ಲಾಸುಗಳ ನಡುವೆ ಕಾಲೇಜಿನ ಮಕ್ಕಳ ಕಾಲು ಸಾಗುವುದು ಕ್ಯಾಂಟೀನ್ ಕಡೆಗೆ. ಸಂಜೆ ಗೆಳೆಯರ ಗುಂಪು ಸೇರುವುದು ತಿಂಡಿ ಗಾಡಿಗಳಿದ್ದಲ್ಲಿ. ತಿಂಡಿ-ಪಾನೀಯಗಳ ಬುನಾದಿಯ ಮೇಲೆ ಬೆಳೆದ ಬಾಂಧವ್ಯ-ಗೆಳೆತನ ಜೀವನದುದ್ದ, ಬಳ್ಳಿಗೆ ಹಂದರದಂತೆ ಆಸರೆಯಾಗಿ ಭದ್ರತೆ ನೀಡುವುದು ಸುಳ್ಳೇ? ಅದಕ್ಕೆ ಅಲ್ಲವೇ ಇರುವುದು ನಾಣ್ಣುಡಿ: “ಮಾನವನ ಹೃದಯಕ್ಕೆ ಹಾದಿ ಆತನ ಹೊಟ್ಟೆ” ಎಂಬುದು? ಹಸಿದ ಹೊಟ್ಟೆ ಸಾಹಸಕ್ಕೆ ಹಾದಿ ತೋರುತ್ತದೆ. ಬೇಟೆಯಾಡಿ, ಸಂಗ್ರಹಿಸಿ ಹೊಟ್ಟೆ ಹೊರೆಯುವ ಯುಗದಿಂದ ಕುಳಿತಲ್ಲೇ ಬೇಕಾದ ತಿನಿಸು ತರಿಸಿ, ತಿನ್ನುವ ಸಿಗುವ ಯುಗಕ್ಕೆ ಮನು ಕುಲ ಕಾಲಿಟ್ಟಿದೆ. ಆದರೂ, ವಿಶೇಷ ತಿನಿಸಿಗಾಗಿ, ವಿಶಿಷ್ಟ ಅನುಭವಕ್ಕಾಗಿ  ಇಂದಿಗೂ ನೂರಾರು ಮೈಲಿ ಪ್ರಯಾಣ ಮಾಡುವವರಿದ್ದಾರೆ. ಇದೇ ಆಧಾರದ ಮೇಲೆ ಜಗದ್ವಿಖ್ಯಾತ ‘ಮಿಶೆಲಿನ್ ಗೈಡ್’ ಅಸ್ತಿತ್ವಕ್ಕೆ ಬಂತು. ನನಗೊಬ್ಬ ಗೆಳೆಯನಿದ್ದಾನೆ. ನಾವು ಮುಂಬೈನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೆವು. ಮುಂಬೈನಲ್ಲಿ ಯಾವ ಮೂಲೆಯಲ್ಲೂ ಊಟ-ತಿಂಡಿ ದುರ್ಲಭ ಎಂಬುದೇ ಇಲ್ಲ. ಅಂಥದ್ದರಲ್ಲಿ ಈತ ರಾತ್ರಿ ಪಾಳಿ ಮುಗಿದ ಮೇಲೆ ಕಿಕ್ಕರಿದ ರೈಲಿನಲ್ಲಿ ನೇತಾಡಿಕೊಂಡು ವಿ.ಟಿ. ಸ್ಟೇಷನ್ ಹತ್ತಿರವಿದ್ದ ತನ್ನ ನೆಚ್ಚಿನ ಹೋಟೆಲ್ಲಿನಲ್ಲಿ ಊಟ ಮಾಡಿ ಬರುತ್ತಿದ್ದ;  ಕೆಲವೊಮ್ಮೆ ಸ್ನೇಹಿತರನ್ನೂ ಸೇರಿಸಿಕೊಂಡು. ಇನ್ನೊಬ್ಬ ಗೆಳೆಯ ಖಯಾಲಿ ಬಂದಾಗೆಲ್ಲ, ಲಂಕಾಸ್ಟರ್ ನಿಂದ ಬ್ರಾಡ್ಫರ್ಡ್ ಗೆ ಗೆಳೆಯರ ಗುಂಪು ಕಟ್ಟಿಕೊಂಡು ಹೋಗುತ್ತಿದ್ದ. ಹೀಗೆ ಆಲೆಮನೆಗಳಲ್ಲಿ, ಚಹಾ ಅಡ್ಡಗಳಲ್ಲಿ, ಬಾರುಗಳಲ್ಲಿ  ಗೆಳೆತನಗಳು ಬೆಳೆದಿವೆ, ಬೆಳೆಯುತ್ತಲಿವೆ.  ಪಾರ್ಟಿ-ಸಮಾರಂಭಗಳ ನೆವದಲ್ಲಿ ಸಂಘ ಜೀವಿ ಮನುಜ ಬೆರೆಯುವ ಕಾರ್ಯದಲ್ಲಿ ತಿಂಡಿ-ತಿನಿಸುಗಳಿಲ್ಲದಿದ್ದರೆ ಕಳೆಯೇ ಇಲ್ಲ, ಕೊರತೆಯೇ ಜಾಸ್ತಿ.

ಇಷ್ಟೆಲ್ಲಾ ಪೀಠಿಕೆ ಹಾಕಿದ್ದಕ್ಕೆ ಒಂದು ಕಾರಣವಿದೆ. ಹೊಟ್ಟೆಯ ಹಾದಿಯಾಗಿ, ವಿಶ್ವ ಭಾತೃತ್ವವನ್ನು ಬೆಳೆಸಿದವನ ಕಥೆ ನಿಮ್ಮೊಂದಿಗೆ ಹಂಚಿಕೊಳ್ಳಲು.  ಅವನೇ 1933ರಲ್ಲಿ ಲೂಯಿಸಿಯಾನದಲ್ಲಿ ಜನಿಸಿದ ಜಿಮ್ ಹೇಯ್ನ್ಸ್. ಆತನ ತಂದೆ ಪೆಟ್ರೋಲಿಯಂ ಕಂಪೆನಿಯ ಉದ್ಯೋಗಿಯಾಗಿ ವೆನಿಝುಯೆಲದಲ್ಲಿದ್ದ. ಜಿಮ್ ತನ್ನ ಬಾಲ್ಯ, ಹದಿ ಹರೆಯವನ್ನು ಅಮೆರಿಕೆ-ವೆನಿಝುಯೆಲಾ ಪ್ರವಾಸದಲ್ಲಿ ಕಳೆದದ್ದು ಮುಂದೆ ಆತನ ಪ್ರವಾಸೀ ಮನಸ್ಥಿತಿಗೆ ಕಾರಣವಾಗಿರಬಹುದು. ತಂದೆಯ ಸಂಗ್ರಹದಲ್ಲಿದ್ದ ಪುಸ್ತಕಗಳು ಜಿಮ್ ನ ಮೇಲೆ ತುಂಬಾ ಪ್ರಭಾವ ಬೀರಿದ್ದವು. ಮಿಲಿಟರಿ ವಸತಿ ಶಾಲೆಯಲ್ಲಿದ್ದಾಗ ಸಾಹಿತ್ಯ ಸಂಘವನ್ನು ಕಟ್ಟಿದ್ದ ಜಿಮ್, ಅದ್ಭುತ ಸ್ನೇಹ ಜೀವಿ. ಆ ಶಾಲೆ ಅವನು ಸೇರಿದ್ದು ತನ್ನ ಗೆಳೆಯನಿದ್ದಾನೆಂದು. ಅಂತೆಯೇ ತನ್ನ ನ್ಯೂಯಾರ್ಕ್ ಪ್ರವಾಸಗಳಲ್ಲಿ ನಾಟಕ ನೋಡುವ ಗೀಳನ್ನೂ ಹತ್ತಿಸಿಕೊಂಡಿದ್ದ. ಕೆಲಸಕ್ಕಾಗಿ ವಾಯು ಸೇನೆಯನ್ನು ಸೇರಿದ್ದ ಜಿಮ್ ಲ್ಯಾನ್ಡ್ ಆಗಿದ್ದು ಎಡಿನ್ಬರದಲ್ಲಿ ರಶಿಯನ್ನರ

Jim Haynes obituary | Scotland | The Times
(ಚಿತ್ರ ಕೃಪೆ: ಗೂಗಲ್)

ಸಂದೇಶಗಳನ್ನು ಕದ್ದು ಕೇಳಲು. ಎರಡನೇ ವಿಶ್ವ ಯುದ್ಧ ಮುಗಿದಿತ್ತಷ್ಟೇ. ಎಡಿನ್ಬರದಲ್ಲಿ ಆಗ ತಾನೇ ತೆರೆದಿದ್ದ ಕಾಫಿ ಅಂಗಡಿ ಹಾಗೂ ಶಾಖಾಹಾರಿ ಉಪಹಾರ ಗೃಹವೊಂದು ಎಡಿನ್ಬರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ, ಉಪನ್ಯಾಸಕರ ನೆಚ್ಚಿನ ತಾಣಗಳಾಗಿದ್ದವು. ಎಡಿನ್ಬರ ವಿಶ್ವವಿದ್ಯಾಲಯ ಸೇರಿದ್ದ ಜಿಮ್ ಈ ತಾಣಗಳಲ್ಲಿ ತನ್ನ ಗೆಳೆಯರ ಬಳಗವನ್ನು ಬೆಳೆಸಿಕೊಂಡ. ಅಲ್ಲಿಯೇ ನೆಲೆಸಲು ನಿರ್ಧರಿಸಿ ಉದ್ಯೋಗಕ್ಕಾಗಿ ಪುಸ್ತಕದಂಗಡಿ ತೆಗೆಯುವುದೆಂದು ನಿರ್ಧರಿಸಿದ. ಬಸ್ಸಿನಲ್ಲಿ ಗೆಳೆಯನಾದ, ದೋಣಿ ಕಟ್ಟುವ ವ್ಯಕ್ತಿಯೊಬ್ಬ  ಅವನಿಗೆ ಅಂಗಡಿ ಕಟ್ಟಿ ಕೊಟ್ಟ. ಬ್ರಿಟನ್ನಿನ ಎಲ್ಲ ಪುಸ್ತಕ ವ್ಯಾಪಾರಿಗಳಿಗೆ ಪತ್ರ ಬರೆದು, ತನ್ನ ಅಂಗಡಿಗೆ ಪೇಪರ್ ಬ್ಯಾಕ್ ಪುಸ್ತಕಗಳನ್ನು ತರಿಸಿಕೊಂಡ. ಅದು ಸ್ಕಾಟ್ ಲ್ಯಾನ್ಡ್ ನ ಮೊದಲ ಪೇಪರ್ ಬ್ಯಾಕ್ ಪುಸ್ತಕದ ಅಂಗಡಿಯಾಗಿತ್ತು. ಬಂದವರಿಗೆ ಉಚಿತ ಕಾಫಿ-ಚಹಾ ಸರಬರಾಜಾಗುತ್ತಿತ್ತು. ಎಷ್ಟೋ ಕಡೆ ಸಿಗದ, ನಿಷೇಧಿಸಿದ ಪುಸ್ತಕಗಳೂ ಲಭ್ಯವಿದ್ದುದರಿಂದ ಅಂಗಡಿ ಬಲುಬೇಗ ಜನಪ್ರಿಯವಾಯಿತು. ಇದರ ನೆಲ ಮಾಳಿಗೆಯಲ್ಲಿ ನಾಟಕಗಳ ಪ್ರದರ್ಶನ ನಡೆಯುತ್ತಿತ್ತು. ಇದೇ “ಟ್ರಾವರ್ಸ್ ರಂಗಭೂಮಿ” ಯ ಆರಂಭ. ಆಯಸ್ಕಾಂತೀಯ ವ್ಯಕಿತ್ವದ ಜಿಮ್ ಕಲಾತ್ಮಕ ಗೆಳೆಯರೊಡಗೂಡಿ ತೆವಳುತ್ತಿದ್ದ ಎಡಿನ್ಬರ ಹಬ್ಬಕ್ಕೆ (Edinburgh festival) ಹೊಸ ಆಯಾಮ ನೀಡಿದ. ಇಂದು ಅದು “ಫ್ರಿನ್ಜ್” ಎಂದೇ ವಿಖ್ಯಾತವಾಗಿದೆ ಜಗತ್ತಿನೆಲ್ಲೆಡೆಯಿಂದ ಪ್ರತಿಭಾವಂತ ಕಾಲವಿದರನ್ನು ಆಕರ್ಷಿಸುತ್ತಿದೆ. ಟ್ರಾವರ್ಸ್ ರಂಗಭೂಮಿ ಇಂದಿಗೂ ಉತ್ತಮ ನಾಟಕಗಳನ್ನು ಪ್ರದರ್ಶಿಸುತ್ತಿದೆ.

ನಾಟಕ ಪ್ರದರ್ಶನವನ್ನು ಲಂಡನ್ನಿಗೆ ತೆಗೆದುಕೊಂಡು ಹೋಗುವ ಮಹದಾಸೆಯಿಂದ ಜಿಮ್ ಎಡಿನ್ಬರ ಬಿಟ್ಟಿದ್ದು 1966ರಲ್ಲಿ. ಅಲ್ಲಿ ನಾಟಕಗಳ ಪ್ರದರ್ಶನ ಮಾಡುತ್ತಾ ‘ಇಂಟರ್ನ್ಯಾಶನಲ್ ಟೈಮ್ಸ್’ ಎಂಬ ಪತ್ರಿಕೆ ಹಾಗು “ದಿ ಆರ್ಟ್ಸ್ ಕ್ಲಬ್” ಎಂಬ ಸಂಘವನ್ನು ಸ್ಥಾಪಿಸುತ್ತಾನೆ. ಇಲ್ಲಿ ಈತನ ಗೆಳೆಯರ ಬಳಗದಲ್ಲಿದ್ದವರು ಜಾನ್ ಲೆನನ್, ಯೋಕೋ ಓನೋ, ಡೇವಿಡ್ ಬೋವಿಯಂತಹ ದಿಗ್ಗಜಗಳು.  ಜಿಮ್ ಯಾರ ಉತ್ಸಾಹಕ್ಕೂ ನೀರೆರಚಿದವನಲ್ಲ. ಗೆಳೆಯರಿಂದ ಹೊಮ್ಮುವ ಸೃಜನಶೀಲ ಕಲ್ಪನೆಗಳಿಗೆ ಪ್ರೋತ್ಸಾಹ ನೀಡುವುದು ಆತನ ಜಾಯಮಾನ. ಇಂತಹ ಒಂದು ಯೋಜನೆಗೆ ಮಣಿದು, ನಾಟಕ ಪ್ರದರ್ಶನವನ್ನು 1969ರಲ್ಲಿ ಆಮ್ಸ್ಟರ್ಡಾಮಿಗೆ ಕೊಂಡೊಯ್ದ ಜಿಮ್ ನನ್ನು ಅಧ್ಯಾಪಕನಾಗಿ ಕರೆದಿದ್ದು ಪ್ಯಾರಿಸ್ ನಗರದ ಹೊಸ ಪ್ರಾಯೋಗಿಕ ವಿಶ್ವವಿದ್ಯಾಲಯ. ಎಲ್ಲ ರೀತಿಯ ವಿಚಾರಗಳಿಗೆ ಪೂರ್ವಗ್ರಹಗಳಿಲ್ಲದೇ ಮನಸ್ಸೊಡ್ಡುಕೊಳ್ಳುವ ಜಿಮ್ ನಂತಹ ವ್ಯಕ್ತಿಗೆ ಸರಿಯಾದ ಸಂಸ್ಥೆ, ಉದ್ಯೋಗ ಇದಾಗಿತ್ತು. ಮಾಮೂಲಿಯಾಗಿ ಜಿಮ್ ಎಲ್ಲರನ್ನೂ  ಸ್ವಾಗತಿಸುತ್ತ, ಮೈತ್ರಿ ಬೆಳೆಸುತ್ತ ಪ್ಯಾರಿಸ್ ನಗರದಲ್ಲೊಂದಾಗಿಬಿಟ್ಟ. ಹ್ಯಾಂಡ್ ಶೇಕ್ ಪ್ರಕಾಶನ, ಧ್ವನಿಸುರುಳಿ ಪತ್ರಿಕೆ (ಕ್ಯಾಸೆಟ್ ಮ್ಯಾಗಝಿನ್) ಗಳನ್ನ ಹುಟ್ಟು ಹಾಕಿ ಸಾಹಿತ್ಯ ಸೇವೆಯನ್ನು ಮುಂದುವರೆಸಿದ. ಸ್ವಚ್ಚಂಧ ಮನೋಭಾವನೆಯ ಜಿಮ್ಮನಿಗೆ ದೇಶಗಳ ನಡುವಿನ ಗಡಿ, ಬಾಂಧವ್ಯ ಮುರಿಯುವ ಅಡ್ಡಗೋಡೆಗಳಾಗಿ ಕಂಡಿದ್ದು ಆಶ್ಚರ್ಯವಲ್ಲ. ಸೀಮಾತೀತ ಜಗತ್ತನ್ನು ನಿರ್ಮಿಸುವ ಕನಸಿನಲ್ಲಿ ತನ್ನದೇ ಜಾಗತಿಕ ಪಾಸ್ಪೋರ್ಟ್ಗಳನ್ನು ಇಂಗ್ಲಿಷ್ ಹಾಗೂ ಎಸ್ಪರಾಂತೋ ಭಾಷೆಗಳಲ್ಲಿ ಛಾಪಿಸತೊಡಗಿದ. ತನ್ನ ಮನೆಗೆ ಬಂದವರಿಗೆ ಅವನ್ನು ಹಂಚುತ್ತಿದ್ದ. ಇದರಿಂದ ಎಷ್ಟೋ ಬಾರಿ ಪೊಲೀಸರಿಂದ ಎಚ್ಚರಿಕೆ ಬಂದರೂ ಆತ ಕೇಳಿರಲಿಲ್ಲ.  ಕೊನೆಯಲ್ಲಿ ಕೋರ್ಟ್ ಕಟ್ಟೆ ಏರಿದ ಮೇಲೆ ಈ ಕಾರ್ಯಕ್ಕೆ ತಡೆ ಬಂತು.

“ಎಲ್ಲರಿಗೂ ಏನಾದರೂ ಒಳ್ಳೆಯದನ್ನು ಮಾಡಬೇಕು” ಎನ್ನುವುದು ಜಿಮ್ ನ ಜೀವನಧ್ಯೇಯ. ಹಾಗಾಗೇ ಅವನನ್ನು ಹುಡುಕಿಕೊಂಡು ಜನ ಜಗತ್ತಿನ ಎಲ್ಲೆಡೆಯಿಂದ  ಬರುತ್ತಿದ್ದರು. ಅಮೇರಿಕೆಯಿಂದ ಒಬ್ಬಳು ಬ್ಯಾಲೆ ನರ್ತಕಿ ಸ್ನೇಹಿತನೊಬ್ಬನ ಸಲಹೆಯಂತೆ ಆಸರೆ ಕೋರಿ ಜಿಮ್ ನ ಮನೆಯ ಬಾಗಿಲು ತಟ್ಟಿದಳು. ಬಂದವಳ ಬಳಿ ದುಡ್ಡಿರಲಿಲ್ಲ. ಅದರ ಬದಲಾಗಿ ಜಿಮ್ ನ ಮನೆಯಲ್ಲಿರುವವರಿಗೆ ವಾರಕ್ಕೊಮ್ಮೆ ಅಡಿಗೆ ಮಾಡಿ ಹಾಕಲು ಶುರು ಮಾಡಿದಳು. ಜಿಮ್ ನ ಮನೆಯಲ್ಲಿ ಬಂದು ಹೋಗುವವರಿಗೆ ಬರವಿರಲಿಲ್ಲ. ಈ ಊಟಗಳೇ ಒಂದು ರೀತಿಯಲ್ಲಿ ಸಂಪ್ರದಾಯವಾಗಿ, ರವಿವಾರ ಸಂಜೆಯ ಔತಣ ಕೂಟವೆಂದೇ ಹೆಸರಾಯಿತು. ರವಿವಾರ ಪ್ಯಾರಿಸ್ಸಿನಲ್ಲಿದೀರಾ? ಜೊತೆ ಬೇಕೇ, ಗೆಳೆತನ ಬೆಳೆಸಬೇಕೇ? ಹಿಂದೆ-ಮುಂದೆ ನೋಡಬೇಡಿ, ಹದಿನಾಲ್ಕನೇ

Jim Haynes: A man who invited the world over for dinner - BBC News
ರವಿವಾರ ಸಂಜೆಯ ಔತಣ ಕೂಟ (ಚಿತ್ರ ಕೃಪೆ: ಗೂಗಲ್)

ಆರ್ಯಾಂಡಿಸ್ಮೆಂಟಿನಲ್ಲಿರುವ ಜಿಮ್ ಹೈನ್ಸ್ ನ ಅಡ್ಡೆಗೆ ಲಗ್ಗೆಇಡಿ. ಅಲ್ಲಿ ಸಂಜೆಯ ಹೊತ್ತಿಗೆ ನಲವತ್ತು- ಐವತ್ತು ಜನ ಇರೋದು ಗ್ಯಾರಂಟಿ. ನಿಮ್ಮ ವೇವ್ ಲೆಂಗ್ತಿಗೆ ಹೊಂದಿಕೆ ಆಗುವವರು ಸಿಕ್ಕೇ ಸಿಗುತ್ತಾರೆ. ಅವರು ಯಾವುದೊ ದೇಶದವರಾಗಿರಬಹುದು. ಹರಟೆ ಕೊಚ್ಚಲಿಕ್ಕೆ ಎಲ್ಲಿಯವರಾದರೇನು? ಯಾರಿಲ್ಲದಿದ್ದರೂ ಅಡ್ಡೆಯ ಒಡೆಯ ಜಿಮ್ ಎಲ್ಲರೊಡನೆ ಬೆರೆಯುತ್ತಾ ಬಾಯ್ತುಂಬ ನಗುತ್ತ ನಿಮಗೂ ಸಾಥ್ ನೀಡುತ್ತಾನೆ. ಉದರ ಪೂಜೆಗೆ ಬಿಸಿ ಊಟ ಕಾದಿರುತ್ತದೆ.  ನೀವೇ ಕಾಗದದ ಪ್ಲೇಟಿನಲ್ಲಿ ಬಡಿಸಿಕೊಂಡು, ಪ್ಲಾಸ್ಟಿಕ್ಕಿನ ಕಪ್ಪಿನಲ್ಲಿ ಪಾನೀಯ ಬಗ್ಗಿಸಿಕೊಂಡರಾಯಿತು. ಹೊಸ ಗೆಳೆಯರೊಡನೆ ಕಾಲ ಕಳೆದು, ಸ್ನೇಹ ಸೇತುವನ್ನು ಕಟ್ಟುವ ಸುಲಭ ಅವಕಾಶ ಮಾಡಿಕೊಟ್ಟಿದ್ದಾನೆ ವಿಶ್ವ ನಾಗರಿಕ ಜಿಮ್. ಅಲ್ಲಿ ಯಾರೂ ಹಣ ಕೇಳುವುದಿಲ್ಲ.  25 ಯುರೋ ವರೆಗೆ ಹಣಕೊಡಬಹುದು. ಆ ಹಣವೆಲ್ಲ ಉತ್ತಮ ಕಾರ್ಯಗಳಿಗೆ ವಿನಿಯೋಗಿಸಲ್ಪಡುತ್ತದೆ. ಹೋಗುವ ಮೊದಲು ಜಿಮ್ ಗೆ ಮಿಂಚಂಚೆ ಕಳಿಸಿಯೋ, ಮೆಸ್ಸೇಜ್ ಮಾಡಿಯೋ ಹೋಗಬಹುದು. ಬೇರೆ ಯಾವುದೇ ಶಿಷ್ಟಾಚಾರಗಳಿಲ್ಲ.  1970ರ ದಶಕದಲ್ಲಿ ಶುರುವಾದ ಔತಣ ಕೂಟ  ಸುಮಾರು 120,000  ಜನರನ್ನು ಆಕರ್ಷಿಸಿದೆ! ಮತ್ತೆ ಮತ್ತೆ ಬರುವವರೂ ಇದ್ದಾರೆ. ಇಲ್ಲಿ ಭೇಟಿಯಾಗಿ ಮದುವೆಯಾದವರು, ವಾಣಿಜ್ಯ ವ್ಯವಹಾರಗಳಲ್ಲಿ ಪಾಲುದಾರರಾದವರು, ಅಜೀವ ಸ್ನೇಹಿತರಾದವರು, ಹೀಗೆ ಎಲ್ಲ ಬಗೆಯ ಉದಾಹರಣೆಗಳು ಇಲ್ಲಿವೆ.

ಜಿಮ್ ನ ಮನೆಯಲ್ಲಿ ಊಟ-ತಿನಿಸುಗಳ ಸುತ್ತ ಬೆಸೆದ ಬಾಂಧವ್ಯಗಳಿಗೆ ಮಿತಿಯಿಲ್ಲ.ಹಾಗೆಂದೇ ಅವನನ್ನು ಸಾಮಾಜಿಕ ಜಾಲ ಪ್ರವರ್ತಕನೆಂದೇ ಕರೆಯುತ್ತಾರೆ. ಜಿಮ್ ನ ಅಪ್ಪ ಮದ್ಯ ವ್ಯಸನಿಯಾಗಿದ್ದ. ಜಿಮ್ ತನ್ನ 40ನೆಯ ವಯಸ್ಸಿನ ನಂತರ ಕಾಫಿ ಕುಡಿಯುವುದನ್ನೂ ಬಿಟ್ಟಿದ್ದ. ಆದರೆ ಅಪ್ಪ ಕಲಿಸಿದ ಪಾಠವೊಂದನ್ನು ಎಂದೂ ಮರೆತಿರಲಿಲ್ಲ: “ ನೀನು ಮಾಡಿದ ಉಪಕಾರವನ್ನು ಕೂಡಲೇ ಮರೆತು ಬಿಡು, ಇತರರು ನಿನಗೆ ಮಾಡಿದ ಉಪಕಾರವನ್ನು ಎಂದೂ  ಮರೆಯಬೇಡ”. ಸದಾ ಇತರರ ಸಹಾಯಕ್ಕೆ, ಸಾಹಿತ್ಯ- ಸಾಂಸ್ಕೃತಿಕ ರಂಗಗಳ ಅಭಿವೃದ್ಧಿಗೆ ಜೀವನವನ್ನೇ ಮುಡುಪಾಗಿಸಿದ ಜಿಮ್ ಜನವರಿ 6ರಂದು ಇಹ ಲೋಕ ತ್ಯಜಿಸಿದರೂ, ಆತನ ಸ್ನೇಹವನ್ನು  ಆತ ಜನರೊಡನೆ ಹಂಚಿಕೊಂಡ ರೊಟ್ಟಿಯನ್ನು ಮರೆಯಲು ಸಾಧ್ಯವೇ?

ರಾಂ

(ಉಲ್ಲೇಖ: ಬಿ.ಬಿ.ಸಿ., ಗಾರ್ಡಿಯನ್, Unfinished Histories, http://www.jim-haynes.com)