ನಮಸ್ಕಾರ. ಎರಡು ವಾರಗಳ ಹಿಂದೆ `ಬಾಲ್ಯದ ನೆನಪುಗಳು
` ಸರಣಿಯ ಲೇಖನಗಳು ಪ್ರಕಟವಾದಾಗ ಇವು ಈ ಸರಣಿಯ ಕೊನೆಯ ಲೇಖನಗಳು ಅಂತ ನಾನು ಬರೆದಿದ್ದು ನಿಮಗೆ ನೆನಪಿರಬಹುದು. ಆಗ ಅದಕ್ಕೆ ಕಾರಣವೂ ಇತ್ತು – ಅದಕ್ಕಾಗಿ ಬಂದಿದ್ದ ಲೇಖನಗಳ ಕಂತೆ ಖಾಲಿಯಾಗಿತ್ತು! ಆದರೆ ಆ ಸರಣಿಯಲ್ಲಿ ಬಂದ ರಸಪೂರ್ಣ ಬರಹಗಳು ಇನ್ನಷ್ಟು ಆಸಕ್ತರಲ್ಲಿ ಬರೆಯುವ ಉತ್ಸಾಹವನ್ನು ಮೂಡಿಸಿ, ಸರಣಿಯನ್ನು ಫೀನಿಕ್ಸ್ ಹಕ್ಕಿಯಂತೆ ಮತ್ತೆ ಎದ್ದು ಬರುವಂತೆ ಮಾಡಿವೆ. ಸಂಪಾದಕನಾಗಿ ನನಗೇನೋ ಸಂತೋಷವೇ, ಇನ್ನಷ್ಟು ಪ್ರಕಟಣಾ ಸಾಮಗ್ರಿ ದೊರೆಯಿತೆಂದು! ಇದೋ, ಇಲ್ಲಿವೆ ಇನ್ನೆರಡು ಬರಹಗಳು. ಉಮಾ ವೆಂಕಟೇಶ್ ನಮ್ಮನ್ನು ಮೈಸೂರಿನ ತಮ್ಮ ಶಾಲೆಗೆ ಕರೆದೊಯ್ದು ತಮ್ಮೊಬ್ಬ ತುಂಟ ಸಹಪಾಠಿಯ ಪರಿಚಯ ಮಾಡಿಸಿದರೆ, ಸವಿತಾ ಸುರೇಶ್ ಅವರು ತಮ್ಮ ಬಾಲ್ಯದ ಹವ್ಯಾಸವನ್ನು ನೆನೆಯುತ್ತಾರೆ. ಎಂದಿನಂತೆ ಓದಿರಿ, ಆನಂದಿಸಿರಿ, ಕಮೆಂಟಿಸಿರಿ ಮತ್ತೂ ನೀವೂ ಬರೆದು ನನಗೆ ಕಳುಹಿಸಿರಿ – ಎಲ್ಲೆನ್ ಗುಡೂರ್ (ಸಂ.)
ಮೈಸೂರಿನ ವಾಣಿ ವಿದ್ಯಾಮಂದಿರ – ಉಮಾ ವೆಂಕಟೇಶ್
ನೂರೊಂದು ನೆನಪು ಎದೆಯಾಳದಿಂದ, ಲೇಖನವಾಗಿ ಬಂತು ಆನಂದದಿಂದ: ಮೈಸೂರನ್ನು ನೆನೆದೊಡನೆ ಮುದಗೊಳ್ಳುವ ನನ್ನ ಮನದಲ್ಲಿ, ಬಾಲ್ಯದ ದಿನಗಳೊಂದಿಗೆ ಬೆಸದಿರುವ ನೆನಪುಗಳು ಸಾವಿರಾರು ತರಂಗಗಳಂತೆ ಹೊರಹೊಮ್ಮುತ್ತವೆ. ಈ ನೆನಪಿನ ತರಂಗಗಳಲ್ಲಿ ಮೈಸೂರಿನ ವಾಣಿ ವಿದ್ಯಾಮಂದಿರದ ಶಾಲೆಯಲ್ಲಿ ನಾನು ಕಳೆದ ೩ ವರ್ಷಗಳೂ ಸೇರಿವೆ. ನನ್ನ ತಂದೆ ಬಳ್ಳಾರಿಯಲ್ಲಿ ಭೂಗರ್ಭಶಾಸ್ತ್ರಜ್ಞರಾಗಿದ್ದರು. ಅಲ್ಲಿನ ಕೆಲಸ ಬಿಟ್ಟು ೧೯೬೯ರಲ್ಲಿ ನಮ್ಮ ತವರೂರಾದ ಮೈಸೂರಿಗೆ ಹಿಂತಿರುಗಿ ಬಂದಾಗ ನಾನಿನ್ನೂ ೫ನೆಯ ತರಗತಿಯಲ್ಲಿದ್ದೆ. ಅಕ್ಟೋಬರ್ ತಿಂಗಳಿನಲ್ಲಿ ವಾಪಸ್ ಬಂದಿದ್ದರಿಂದ ಅದು ಮಿಡ್ ಟರ್ಮ್ ಅವಧಿ. ಯಾವ ಶಾಲೆಗಳಲ್ಲೂ ಅಷ್ಟೊಂದು ಸುಲಭವಾಗಿ ಪ್ರವೇಶ ಸಿಗುತ್ತಿರಲಿಲ್ಲ. ನನ್ನ ಅಜ್ಜನಿಗೆ ವಾಣಿ ವಿದ್ಯಾಮಂದಿರದ ನಿರ್ವಾಹಕರಾಗಿದ್ದ ದಿ. ರಂಗಸ್ವಾಮಿ ಅಯ್ಯಂಗಾರ್ ಮತ್ತು ಅವರ ಸಹೋದರಿ ಪಂಕಜಮ್ಮ ಅವರ ಪರಿಚಯವಿತ್ತು. ರಂಗಸ್ವಾಮಿ ಅಯ್ಯಂಗಾರ್ ಅವರಿಗೆ ಕಾಲೇಜಿನಲ್ಲಿ ಸಹಪಾಠಿ ಆಗಿದ್ದರೆಂದು ಹೇಳುತ್ತಿದ್ದ ನೆನಪು. ಸರಿ, ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಮ್ಮ ಮನೆ ಇತ್ತು. ಈ ಶಾಲೆಯೂ ಅಲ್ಲೇ ಹತ್ತಿರದಲ್ಲಿ ಇದ್ದರಿಂದ ನಾವು ಮೂರು ಜನ ಮಕ್ಕಳಿಗೂ ಅದೇ ಶಾಲೆಯಲ್ಲಿ ಪ್ರವೇಶ ಸಿಕ್ಕಿತ್ತು. ಶಿಸ್ತು ಮತ್ತು ಉತ್ತಮ ಶಿಕ್ಷಕಿಯರಿದ್ದ ಆ ಶಾಲೆಯಲ್ಲಿ ವಿದ್ಯಾಭ್ಯಾಸದ ಮಟ್ಟ ಚೆನ್ನಾಗಿತ್ತೆಂದು ಎಲ್ಲರೂ ಹೇಳುತ್ತಿದ್ದ ಮಾತು ನಿಜವಾಗಿತ್ತು. ನನ್ನ ತರಗತಿಯಲ್ಲಿ ಸುಮಾರು ೪೦ ಜನ ಮಕ್ಕಳಿದ್ದ ನೆನಪು. ನನಗೆ ಎಲ್ಲರ ಹೆಸರೂ ನೆನಪಿಲ್ಲ. ಆದರೆ ತರಗತಿಯಲ್ಲಿ ತನ್ನ ತುಂಟತನ, ಪುಂಡಾಟಕ್ಕೆ ಹೆಸರಾಗಿದ್ದ ಚಂದ್ರಶೇಖರನ ಹೆಸರು ಮತ್ತು ಅವನು ನಡೆಸುತ್ತಿದ್ದ ಉಡಾಳತನ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಚಂದ್ರಶೇಖರ ಎಂದೂ ತರಗತಿಯಲ್ಲಿ ಪಾಠದ ಕಡೆಗೆ ಗಮನ ಕೊಟ್ಟವನಲ್ಲ. ಹೋಮ್ ವರ್ಕ್ ಮಾಡುವ ಜಾಯಮಾನವಂತೂ ಅವನದಾಗಿರಲಿಲ್ಲ. ಸದಾ ಜೊತೆಯಲ್ಲಿದ್ದ ಹುಡುಗ-ಹುಡುಗಿಯರನ್ನು ಕೀಟಲೆ ಮಾಡುತ್ತಾ, ಅವರ ಹೋಮ್ ವರ್ಕ್ ಮತ್ತು ಪಠ್ಯಪುಸ್ತಕಗಳ ಮೇಲೆ ಇಂಕ್ ಚೆಲ್ಲಿಯೋ, ಅವರನ್ನು ಚಿವುಟುತ್ತಲೋ ಗೋಳು ಹುಯ್ದುಕೊಳ್ಳುವ ಅವನ ನಡತೆ ಹಲವೊಮ್ಮೆ ನಮಗೆಲ್ಲಾ ಪ್ರಾಣಸಂಕಟವಾಗಿತ್ತು. ಆದರೆ ತರಗತಿಯಲ್ಲಿ ಟೀಚರ್ ಕೇಳುವ ಪ್ರಶ್ನೆಗಳಿಗೆ ಅವನು ನೀಡುತ್ತಿದ್ದ ಉತ್ತರದ ವೈಖರಿ ಹಲವು ಬಾರಿ ಇಡೀ ಕ್ಲಾಸಿನಲ್ಲಿ ನಗೆಯ ಬುಗ್ಗೆಯನ್ನೆಬ್ಬಿಸುತ್ತಿತ್ತು. ಒಮ್ಮೆ ನಮ್ಮ ಕನ್ನಡ ಟೀಚರ್ ಸುಬ್ಬುಲಕ್ಷ್ಮಿ, “ಲೋ ಚಂದ್ರಶೇಖರ, ಸಂಧಿ ಎಂದರೇನೋ?” ಎಂದು ಪ್ರಶ್ನಿಸಿದ್ದಾಗ, ಅವನು ಸಲೀಸಾಗಿ “ಟೀಚರ್, ನಮ್ಮ ಮನೆ ಮತ್ತು ಪಕ್ಕದ ಮನೆಯ ಕಾಂಪೋಂಡ್ ಮಧ್ಯೆ ಇರುವ ತೂತಿಗೆ ಸಂಧಿ ಎನ್ನುತ್ತಾರೆ” ಎಂದು ತನ್ನ ವಿದ್ವತ್ತನ್ನು ಮೆರೆದಿದ್ದ! ಯಾವ ವಿಷಯದ ಟೆಸ್ಟಿನಲ್ಲೂ ಅವನಿಗೆ ಒಂದಂಕಿಯಲ್ಲದೇ ಹೆಚ್ಚಿನ ಮಾರ್ಕ್ ದೊರಕುತ್ತಿರಲಿಲ್ಲ. ಇಷ್ಟಾದರೂ ಅವನೇನೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಸದಾ ಹಸನ್ಮುಖಿಯಾಗೇ ತನ್ನ ದಿನನಿತ್ಯದ ತುಂಟಾಟಗಳನ್ನು ಮುಂದುವರೆಸುತ್ತಿದ್ದ ಅವನನ್ನು ಕಂಡು ಅನೇಕ ಬಾರಿ ಬೆರಗಾಗುತ್ತಿದ್ದೆವು. ನಮ್ಮ ಶಾಲೆಯ ಮುಖ್ಯೋಪಾಧ್ಯಾಯಿನಿ ಪಂಕಜಮ್ಮ ನಮ್ಮ ಇಂಗ್ಲೀಷ್ ಟೀಚರ್. ಬಹಳ ದರ್ಪ ಮತ್ತು ಶಿಸ್ತಿನ ಮಹಿಳೆ. ೬೦-೭೦ರ ದಶಕದಲ್ಲಿ, ಶಾಲೆಯ ಪುಸ್ತಕಗಳನ್ನು ಇಟ್ಟುಕೊಳ್ಳಲು ಹೊಸದಾಗಿ ಆಲುಮಿನಿಯಮ್ ಪೆಟ್ಟಿಗೆಗಳು ಮಾರುಕಟ್ಟೆಗೆ ಬಂದಿದ್ದವು. ಸರಿ ಮಧ್ಯಮ ವರ್ಗದ ಮನೆಯ ಮಕ್ಕಳ ಕೈಯಲ್ಲಿ ಈ ಆಲುಮಿನಿಯಮ್ ಪೆಟ್ಟಿಗೆಗಳು ರಾರಾಜಿಸಲಾರಂಭಿಸಿತ್ತು. ನಮ್ಮ ತಂದೆ ನಮ್ಮ ಮನೆಯಲ್ಲಿ ಮೂವರಿಗೂ, ನಮ್ಮ ಹೆಸರನ್ನು ಕೆತ್ತಿಸಿ ಮೂರು ಪೆಟ್ಟಿಗೆ ಖರೀದಿಸಿ ಕೊಟ್ಟಿದ್ದರು. ಅದನ್ನು ಶಾಲೆಗೆ ಒಯ್ಯುವುದೇ ನಮಗೆ ಒಂದು ಹೆಮ್ಮೆಯ ಕೆಲಸ. ಸರಿ ಹುಡುಗಿಯರು ಶಿಸ್ತಾಗಿ ಈ ಪೆಟ್ಟಿಗೆ ಹಿಡಿದು ಬರುತ್ತಿದ್ದದ್ದನ್ನು ಕಂಡ ಚಂದ್ರಶೇಖರನ ಕಣ್ಣುಗಳಿಗೆ ಇದು ಸಹನವಾಗಲಿಲ್ಲ. ನನ್ನ ಸಹಪಾಠಿ ಜಯಶ್ರೀಯ ಪೆಟ್ಟಿಗೆ ಅವನ ದಾಳಿಗೆ ತುತ್ತಾಯಿತು. ಅವಳ ಕೈಯಿಂದ ಪೆಟ್ಟಿಗೆ ಕಿತ್ತುಕೊಡದ್ದಲ್ಲದೇ, ಇದೇನು ಈ ಹಜಾಮನ ಪೆಟ್ಟಿಗೆ ತಂದಿದ್ದೀಯಾ ಎಂದು ಅಣಕಿಸಿದಾಗ, ಅವಳ ಕಣ್ಣಿನಲ್ಲಿ ಗಂಗಾ-ಕಾವೇರಿಯ ಧಾರೆಯೇ ಹರಿಯಿತು. ಸರಿ, ಪಂಕಜಮ್ಮ ಅವರಿಗೆ ದೂರು ತಲುಪಿತು. ಸಿಟ್ಟಿನಿಂದ ಕೆಂಡಾಮಂಡಲವಾದ ಆಕೆ, ಕೈಯ್ಯಲ್ಲಿ ದೊಡ್ಡ ರೂಲರ್ ಝಳಪಿಸುತ್ತಾ, ತಮ್ಮ ದೊಡ್ಡ ದರ್ಪದ ಧ್ವನಿಯಲ್ಲಿ, “ಭಡವಾ, ಸರಸ್ವತಿ ಇಟ್ಟು ತರುವ ಪೆಟ್ಟಿಗೆಯನ್ನು, ಹಜಾಮನ ಪೆಟ್ಟಿಗೆಗೆ ಹೋಲಿಸುತ್ತೀಯಾ” ಎಂದು ಘರ್ಜಿಸುತ್ತಾ, ಚಂದ್ರಶೇಖರನ್ನು ಬೆಂಚಿನ ಮೇಲೆ ನಿಲ್ಲಿಸಿದರು. ಅಲ್ಲೇ ಅಳುತ್ತಾ ನಿಂತಿದ್ದ ಜಯಶ್ರೀಯನ್ನು ಕರೆದು, ಅವನ ಎರಡೂ ಕೆನ್ನೆಗೆ ಹೊಡೆಯಲು ಆಣತಿ ಇತ್ತರು. ಮೊದಲು ಸ್ವಲ್ಪ ಹಿಮ್ಮೆಟ್ಟಿದ ಜಯಶ್ರೀ, ತನ್ನ ಪೆಟ್ಟಿಗೆಗಾದ ಅವಮಾನ ನೆನಪಾಗಿ ಧೈರ್ಯಮಾಡಿ ಅವನ ಕೆನ್ನೆಗೆ ಹೊಡೆದಾಗ ಅದನ್ನು ಸ್ವಲ್ಪ ಭಯದಿಂದಲೇ ನೋಡುತ್ತಿದ್ದ ನಮಗೆ, ಸರಿ ಇನ್ನು ಚಂದ್ರಶೇಖರನ ಪುಂಡಾಟ ಅವತ್ತಿಗೆ ಮುಗಿಯಿತು ಎಂದು ನಿಟ್ಟುಸಿರಿಟ್ಟೆವು.
ಆದರೆ, ಅಂದು ಶಾಲೆ ಮುಗಿಸುವವರೆಗೂ ಸ್ವಲ್ಪ ಮಂಕಾಗಿದ್ದ ಚಂದ್ರಶೇಖರ ಮನೆಗೆ ಹೊರಟಾಗ ಎಂದಿನಂತೆ ತನ್ನ ನಿತ್ಯಶೈಲಿಯಲ್ಲಿ ಇತರ ಹುಡುಗರನ್ನು ರಸ್ತೆಯಲ್ಲಿ ಗೋಳುಹುಯ್ದುಕೊಳ್ಳುತ್ತಿದ್ದ. ನಾನು, ನನ್ನ ಅಕ್ಕ ಅದನ್ನು ನೋಡಿದಾಗ, ಇದೇನು ಇವನಿಗೆ ಮನೆಯಲ್ಲಿ ತಂದೆ-ತಾಯಿ ಯಾವ ಕ್ರಮವನ್ನೂ ಕೈಗೊಳ್ಳದೆ ಒಳ್ಳೆ ಬೀದಿ ಬಸವನಂತೆ ಬಿಟ್ಟಿದ್ದಾರಲ್ಲ ಎಂದು ತಲೆಕೆಡಿಸಿಕೊಂಡಿದ್ದೆವು. ಹೀಗೆ ೩ ವರ್ಷ ಕಳೆದು ನಾವೆಲ್ಲಾ ೭ನೆಯ ತರಗತಿಗೆ ಕಾಲಿಟ್ಟೆವು. ಅದೇ ಕೊನೆಯ ವರ್ಷ. ಆಗೆಲ್ಲ ೭ನೆಯ ತರಗತಿಯ ಕೊನೆಯಲ್ಲಿ ಪಬ್ಲಿಕ್ ಪರೀಕ್ಷೆ ಇತ್ತು. ಅದು ನಮ್ಮ ಜೀವನದ ಮೊದಲ ದೊಡ್ಡ ಪರೀಕ್ಷೆ. ಹಾಗಾಗಿ ಮೊದಲಿನಿಂದಲೇ ಸ್ಪೆಶಲ್ ಕ್ಲಾಸಿನ ಕಾಟ. ಇದ್ದಕ್ಕಿದ್ದ ಹಾಗೆ ಚಂದ್ರಶೇಖರನ ನಡವಳಿಕೆಯಲ್ಲಿ ಬದಲಾವಣೆ ಕಾಣಿಸಲಾರಂಭಿಸಿತ್ತು. ಬಹುಶಃ ಪಂಕಜಮ್ಮ ಅವನ ತಂದೆ-ತಾಯಿಯರನ್ನು ಕರೆಸಿ, ಅವರಿಗೆ ultimate warning ಕೊಟ್ಟಿದ್ದರೇನೋ ಅನ್ನಿಸುತ್ತೆ. ಕ್ಲಾಸಿನಲ್ಲಿ ಗಂಭೀರವಾಗಿ ಕುಳಿತು ಪಾಠದ ಕಡೆಗೆ ಗಮನವೀಯುತ್ತಿದ್ದ ಚಂದ್ರಶೇಖರನಿಗೆ ಟೆಸ್ಟುಗಳಲ್ಲಿ ಸ್ವಲ್ಪ ಡೀಸೆಂಟ್ ಆಗಿ ಮಾರ್ಕುಗಳೂ ಬರಲಾರಂಭಿಸಿತ್ತು. ಅವನ ತುಂಟಾಟಗಳೂ ಹೆಚ್ಚುಕಡಿಮೆ ನಿಂತಿದ್ದವು. ಆದರೂ ಹಲವೊಮ್ಮೆ ಹುಡುಗಿಯರ ಜಡೆ ಎಳೆಯುವ ಚಟುವಟಿಕೆ ಮುಂದುವರೆದಿತ್ತು. ಶಾಲೆಯ ಕಡೆಯ ಟರ್ಮ್ ಶುರುವಾದಾಗ, ಸ್ಪೆಶಲ್ ಕ್ಲಾಸಿನ ಹಾವಳಿ ಹೆಚ್ಚಿ, ಅವನೂ ತಣ್ಣಗಾದ. ಪಬ್ಲಿಕ್ ಪರೀಕ್ಷೆಯಲ್ಲಿ ಅವನು ೪೦% ಮಾರ್ಕ್ ಬಂದು ಪಾಸಾಗಿದ್ದ ಎಂದು ತಿಳಿದಾಗ, ನಮಗೆಲ್ಲಾ ಸ್ವಲ್ಪ ಆಶ್ಚರ್ಯವಾಗಿತ್ತು. ಚಂದ್ರಶೇಖರನ ಯಶಸ್ಸಿಗೆ ನಮ್ಮ ಹಲವಾರು ನಮ್ಮ ಟೀಚರುಗಳ ಮುತುವರ್ಜಿ ಬಹುಶಃ ಕಾರಣವಾಗಿತ್ತು. ಶಾಲೆಯ ಕಡೆಯ ಸಮಾರಂಭ ಬೀಳ್ಕೊಡುಗೆಯ ದಿನ, ಅವನೂ ತನ್ನ ಆಟೋಗ್ರಾಫ್ ಎಲ್ಲರ ಮುಂದಿಟ್ಟಾಗ, ನಾವು ಅವನ ಹಿಂದಿನ ತುಂಟಾಟ ಪುಂಡಾಟವನ್ನು ಮರೆತು ಅದರಲ್ಲಿ Best Wishes ಬರೆದದ್ದು ಇಂದಿಗೂ ನನ್ನ ನೆನಪಿನಲ್ಲಿ ಹಸಿರಾಗಿದೆ. ವಾಣಿ ವಿದ್ಯಾ ಮಂದಿರ ಬಿಟ್ಟ ನಂತರ ನನ್ನ ಹೈಸ್ಕೂಲಿನ ದಿನಗಳಲ್ಲಿ ನಾನೆಂದೂ ಚಂದ್ರಶೇಖರನನ್ನು ನೋಡಲೇ ಇಲ್ಲಾ. ಅವನು ಎಲ್ಲಿ ತನ್ನ ಹೈಸ್ಕೂಲ್ ವಿದ್ಯಾಭ್ಯಾಸ ಮುಂದುವರೆಸಿದ ಎನ್ನುವ ಮಾಹಿತಿಯೂ ನನಗೆ ಸಿಗಲಿಲ್ಲ. ನನ್ನ ಶಾಲೆಯ ದಿನಗಳ ನೆನಪಾದಾಗಲೆಲ್ಲ, ಚಂದ್ರಶೇಖರ ಸುಳಿಯುತ್ತಿರುತ್ತಾನೆ. ಇತ್ತೀಚೆಗೆ ನನ್ನ ಅಕ್ಕನ ಕೈಯಲ್ಲಿ ಮಾತಾನಾಡುವಾಗ, ವಾಣಿ ವಿದ್ಯಾ ಮಂದಿರದ ಬಗ್ಗೆ ಮಾತನಾಡಿದ್ದೆವು. ಆಗಲೂ ಚಂದ್ರಶೇಖರ ನಮ್ಮ ಸಂಭಾಷಣೆಯಲ್ಲಿ ಸುಳಿದು ನಾವಿಬ್ಬರೂ ಅವನ ತುಂಟಾಟವನ್ನು ನೆನೆಸಿಕೊಂಡು ನಕ್ಕಿದ್ದೆವು. ಬಾಲ್ಯದ ಆಟ, ಆ ಹುಡುಗಾಟ ಇನ್ನೂ ನಮ್ಮ ನೆನಪಿನಿಂದ ಮಾಸಿಲ್ಲ. ಇಂದು ಚಂದ್ರಶೇಖರ ನಮ್ಮಂತೆಯೇ ಸಂಸಾರಿಯಾಗಿ ಮಕ್ಕಳು-ಮೊಮ್ಮಕ್ಕಳೊಂದಿಗೆ ಜೀವನ ನಡೆಸುತ್ತಿರಬೇಕು.
– ಉಮಾ ವೆಂಕಟೇಶ್
***************************************************************
ನೆನಪಿನ ನೀರೆ – ಸವಿತ ಸುರೇಶ್

ಅಮ್ಮಮ್ಮ, ದೊಡ್ಡಮ್ಮ ಹಾಗು ಅಮ್ಮ ಹಾಕುತ್ತಿದ್ದ ಕಸೂತಿ ಕೆಲಸವನ್ನು ನೋಡುತ್ತಿದ್ದ ನನಗೆ ಕಸೂತಿ ಎಂದರೆ ಆಸಕ್ತಿ ಇತ್ತು. ಆದರೆ ಹಾಕಲು ಬಿಡುತ್ತಿರಲಿಲ್ಲ. ಏಕೆಂದರೆ ಸೂಜಿ ಕೈಗೆ ಬಹಳಷ್ಟು ಬಾರಿ ಚುಚ್ಚಿಕೊಂಡಿದ್ದೆ.
ಹಾಗಾಗಿ ೭ನೇ ತರಗತಿ ಯಲ್ಲಿ ಓದುತಿದ್ದಾಗ ನಮ್ಮ ಶಾಲೆಯಲ್ಲಿ ಕಸೂತಿ ಕಕ್ಷವಿತ್ತು. ಹೇಗಾದರೂ ಮಾಡಿ ಕಸೂತಿ ಹಾಕಲೇಬೇಕೆಂದು ನಿರ್ಧರಿಸಿ, ಅಮ್ಮನಿಗೆ ಗೊತ್ತಾಗದಂತೆ ಶಾಲೆಯಲ್ಲೇ ಕುಳಿತು ಹಾಕಿದಂತ ಕಸೂತಿ.ಬಹಳಷ್ಟು ಬಾಲ್ಯದ ಮುಗ್ಧ ನೆನಪಾಗುತ್ತದೆ.
ಕಸೂತಿ ಕಲಿಸುತ್ತಿದ್ದ ನಮ್ಮ Work Experience ಶಿಕ್ಷಕಿಯಾದ ಜಯಲಕ್ಷ್ಮಿ ಮಿಸ್. ನಾವು ಮಕ್ಕಳೆಲ್ಲ ಸೇರಿ ಆಡುತ್ತಿದ್ದ ಕೊಟ್ಟಡಿ; ನಾನು ‘ಕನ್ನಡ ಪ್ರಭ ‘ ದಿನಪತ್ರಿಕೆಯಿಂದ ಮುಖ್ಯಾಂಶಗಳನ್ನು ಆಯ್ದು ಬರೆಯುತ್ತಿದ್ದ ಬೋರ್ಡ್; ಮಧ್ಯಾಹ್ನ ಊಟದ ಸಮಯದಲ್ಲಿ ನಾವು ಸ್ನೇಹಿತರೆಲ್ಲರೂ ಪರಸ್ಪರ ಡಬ್ಬಿಯ ಊಟವನ್ನು ಹಂಚಿಕೊಂಡು ಹರಟೆ ಹೊಡೆಯುತ್ತಿದ್ದ ಜಗುಲಿ; ಬೆಲ್ ಹೊಡೆದರೆ attender ಚಿಕ್ಕಣ್ಣ ನಮ್ಮನ್ನೆಲ್ಲಾ ಕೊಟ್ಟಡಿಗೆ ಓಡಿಸುತ್ತಿದ್ದ ಸನ್ನಿವೇಶ….. ಇನ್ನೂ ಅದೆಷ್ಟೋ!!!!!!.
ಒಂದು painting ತೆಗೆದುಕೊಂಡು ಹಾಕಿದ್ದ ಕಸೂತಿ ಇದು. ಜಯಲಕ್ಷ್ಮಿ ಮಿಸ್ ಯಿಂದ ‘ V Good’ ಎಂದು ಕೆಂಪು ಶಾಹಿಯಲ್ಲಿ ಬಿದ್ದ ಸಹಿ ಮನಸ್ಸಿಗೆ ಏನೋ ಸಾಧಿಸಿದ ಹಾಗೆ ಪರಮಾನಂದ.
ನಂತರ ಮನೆಗೆ ಬಂದು ಅಮ್ಮನಿಗೆ ತೋರಿಸಿ ಶಭಾಷ್ ಎಂದು ಪ್ರಶಂಸೆ ಪಡೆದ್ದದ್ದು. ಈ ಕಸೂತಿ ಹಾಕಿ ೩೨ ವರ್ಷಗಳಾದರೂ, ಹಾಕಿದ ಸಂದರ್ಭ, ಛಲ, ಶ್ರದ್ಧೆ, ಬಾಲ್ಯದ ನೆನಪುಗಳು ಹಾಗೆ ಅಚ್ಚಹಸಿರಾಗಿಯೇ ಉಳಿದಿದೆ ಏಕೆಂದರೆ ಇದನ್ನು ನಾನು frame ಹಾಕಿ ನನ್ನ ಕೋಣೆಯಲ್ಲೇ ಇಟ್ಟಿದ್ದೇನೆ!!!!!!!!!!
✍ಸವಿತ ಸುರೇಶ್
******************************************************************