ಈ ಅಂಧಾನುಕರಣೆ ಬೇಕೇ? – ವೈಶಾಲಿ ದಾಮ್ಲೆ ಅವರ ಲೇಖನ

(‘ಪರಿವರ್ತನೆ ಜಗದ ನಿಯಮ’ ಎಂಬ ವಿಚಾರ ನಮಗೆಲ್ಲಾ ತಿಳಿದಿದೆ. ಜಾಗತೀಕರಣದ ಯುಗದಲ್ಲಿ ಮಾಧ್ಯಮಗಳ ಮೂಲಕ ಪರಿವರ್ತನೆ ಹಾಗು ಪ್ರಗತಿ ಬಹಳ ಬಿರುಸಾಗಿ ನಡೆದಿದೆ. ಸಮಾಜದ ಆರ್ಥಿಕ ಕೆಳವರ್ಗದವರು ಮೇಲುವರ್ಗದವರನ್ನು ಅನುಕರಿಸುವುದು ಹಾಗೇ ಅಭಿವೃದ್ಧಿ ಗೊಳ್ಳುತ್ತಿರುವ ಬಡದೇಶಗಳು ಅಭಿವೃದ್ಧಿಗೊಂಡ ಶ್ರೀಮಂತ ದೇಶಗಳಲ್ಲಿನ ಭಾಷೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಬದುಕುವ ರೀತಿಯನ್ನು ಅನುಕರಿಸುವುದು ಸಾಮಾನ್ಯವಾಗಿದೆ ಹಾಗೆ ಅನಿವಾರ್ಯವೂ ಆಗಿದೆ. ಆದರೆ ಈ ಪರಿವರ್ತನೆ ಹಾಗು ಬದಲಾವಣೆಗಳನ್ನು ತಮ್ಮದಾಗಿಸಿಕೊಳ್ಳಲು ಸಮಾಜ ಸಿದ್ಧವಾಗಿದೆಯೇ ಎಂಬುದು ಮುಖ್ಯವಾದ ವಿಷಯ. ಬದಲಾಗುತ್ತಿರುವ ಸಮಾಜದಲ್ಲಿ ಯಾವ ಸಾಮಾಜಿಕ ಮೌಲ್ಯಗಳು ಹಾಗು ಬದುಕುವ ರೀತಿ ಸರಿ ಅಥವಾ ತಪ್ಪು ಎಂದು ನಿರ್ಧಾರ ಮಾಡುವುದು ಕಷ್ಟ. ಬಹುಶಃ ಅದನ್ನು ಒಂದು ಕಾಲಮಾನಕ್ಕೆ ಒಳಪಡಿಸಿ ಯಾವ ಪೀಳಿಗೆಗೆ ಅಥವಾ ತಲೆಮಾರಿಗೆ ಅನ್ವಯವಾಗುತ್ತದೆ ಎಂದು ಪರಿಗಣಿಸುವುದು ಉಚಿತ. ಕೆಲವು ಬದಲಾವಣೆಗಳು ಎಲ್ಲ ಕಾಲಕ್ಕೂ ಹಾಗೆ ಸರ್ವರಿಗೂ ಅನ್ವಯವಾಗಬಹುದು.

ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಯುವುದನ್ನೆಲ್ಲಾ ಅನುಕರಿಸಿ ನಾವು ಮುಂದುವರಿದ ದೇಶಕ್ಕೆ ಕಡಿಮೆ ಇಲ್ಲ ಎಂಬ ಒಂದು ಸುಳ್ಳು ಕಲ್ಪನೆಯಲ್ಲಿ ಜೀವನ ಮಾಡುವುದು ತಪ್ಪು. ಎಷ್ಟೋ ಮೌಲ್ಯಗಳನ್ನು ಬದುಕಿನ ರೀತಿಯನ್ನು ಶೋಧಿಸಿ ನಮ್ಮ ಸಮಾಜಕ್ಕೆ ಅಳವಡಿಸಿಕೊಳ್ಳುವುದು ಜಾಣತನ. ಈ ದಿಸೆಯಲ್ಲಿ ಸಮಾಜ, ಸರ್ಕಾರ ಹಾಗು ಮಾಧ್ಯಮಗಳಿಗೆ ಮಹತ್ತರವಾದ  ಜವಾಬ್ದಾರಿಯಿದೆ. ಪರಿವರ್ತನೆಗಳನ್ನು ನಿಯಂತ್ರಿಸುವ ಅಗತ್ಯವಿದೆ.

ವಿವೇಚನೆಯಿಲ್ಲದ ಅಂಧಾನುಕರಣೆಗಳು ತಂದೊಡ್ಡುವ ಸಮಸ್ಯೆಗಳು ಹಲವಾರು. ಈ ವಿಚಾರವನ್ನು ವೈಶಾಲಿಯವರು ತಮ್ಮ ವೈಯುಕ್ತಿಕ ಅನುಭವದ ಕೆಲವು ಘಟನೆಗಳನ್ನು ಕೈಗೆತ್ತಿಕೊಂಡು ಧೀರ್ಘವಾಗಿ ಚಿಂತಿಸಿದ್ದಾರೆ. ಸಂ)

***

ಈ ಅಂಧಾನುಕರಣೆ ಬೇಕೇ? ವೈಶಾಲಿ ದಾಮ್ಲೆ ಅವರ ಲೇಖನ

anukarane

ನನಗಿಲ್ಲಿ ಮ್ಯಾಂಚೆಸ್ಟರ್ ನಲ್ಲಿ ಈಗ ಭಾರತದ ಟಿವಿ ವಾಹಿನಿಗಳನ್ನು ನೋಡಲಿಕ್ಕಾಗುತ್ತದೆ ಅನ್ನೋದು ಒಂಥರಾ ಖುಷಿಯೇ . ಆದರೆ ಈ ಖುಷಿಯ ಹಿಂದೆ ಕೆಲವೊಮ್ಮೆ ದುಃಖ-ಆತಂಕಗಳ ಕಾರ್ಮೋಡ ಕವಿಯುವುದೂ ಇದೆ. ಹೇಗೆ ಮತ್ತು ಏಕೆ ಎಂದು ಇತ್ತೀಚೆಗಿನ ಒಂದು ಉದಾಹರಣೆಯ ಮೂಲಕ ವಿವರಿಸುತ್ತೇನೆ. ಇದನ್ನು ಅನಿವಾಸಿ ಅಮ್ಮನೊಬ್ಬಳ ಅಂತರಂಗದ ಅಳಲು ಎಂದು ನೀವು ಅರ್ಥ ಮಾಡಿಕೊಳ್ಳುವಿರಾಗಿ ನಂಬುತ್ತೇನೆ.

ಮೊನ್ನೆ ಒಂದು ದಿನ ಟಿವಿ ನೋಡುತ್ತಾ ಚ್ಯಾನೆಲ್ ಬದಲಾಯಿಸುತ್ತಿದ್ದೆ. ಹಿಂದಿಯ ಫೇಮಸ್ (?) ಚ್ಯಾಟ್ ಷೋ ‘ಕಾಫಿ ವಿದ್ ಕರಣ್ ‘ ಪ್ರಸಾರವಾಗುತ್ತಿತ್ತು. ಹಲವು ವರ್ಷಗಳ ಹಿಂದೆ ಕಾಲೇಜು ದಿನಗಳಲ್ಲಿ ಇದರ ಕೆಲವೊಂದು ಎಪಿಸೋಡ್ ಗಳನ್ನು ನೋಡಿ ನಾನು ಖುಷಿ ಪಟ್ಟಿದ್ದಿದೆ (ಇದು ನನ್ನ ಈ ವರ್ಷದ ಕ್ರಿಸ್ಮಸ್ ಕನ್ಫೆಷನ್ ಅಂತ ತಿಳ್ಕೊಳ್ಳಿ) ಹಿಂದಿಯ ಪ್ರಸಿದ್ಧ ನಾಯಕ- ನಾಯಕಿಯರ ಲವ್ ಸ್ಟೋರಿಗಳು, ಅವರ ಜಗಳ- ಸ್ನೇಹಗಳು ಇತ್ಯಾದಿಗಳನ್ನು ನೋಡಿ, ಕೇಳಿ ಆನಂದಿಸಿದ್ದಿದೆ. ಅದಾಗಿ ಈಗ ೧೦-೧೨ ವರ್ಷಗಳ ನಂತರ ಬಾಲಿವುಡ್ ಸಿನೆಮಾಗಳ ಒಲವು ಸ್ವಲ್ಪ ಕಡಿಮೆಯಾದದ್ದೂ ಹೌದು. ಕೆಲವು ಹಿಂದಿ ಸಿನೆಮಾಗಳನ್ನು ವೀಕ್ಷಿಸಿದಾಗಲಂತೂ, ಬಹುಶಃ ಹಿಂದಿ ಸಿನೆಮಾಗಳನ್ನು ನೋಡಿ, ಖುಷಿ ಪಡುವ ನಮ್ಮ ಕಾಲ ಆಗಿ ಹೋಯಿತೇನೋ ಎಂದು ನಾನೂ, ನನ್ನವರೂ ಕೊರಗಿದ್ದಿದೆ. ಅದ್ಯಾಕೋ ಏನೋ, ಅಂದು ‘ ಕಾಫಿ ವಿದ್ ಕರಣ್ ‘ ನ ಆ ಎಪಿಸೋಡ್ ನೋಡುವ ತಪ್ಪು ನಿರ್ಧಾರ ಮಾಡಿದೆ.

ಕರಣ್ ಜೋಹರ್ ತನ್ನ ಎಂದಿನ ಶೈಲಿಯಲ್ಲಿ, ಇನ್ನೊಬ್ಬರ ವೈಯಕ್ತಿಕ ಜೀವನದ ಆಗು-ಹೋಗುಗಳಲ್ಲಿ, ರೂಮರ್ – ಗಾಸಿಪ್ ಗಳಲ್ಲಿ ತಮ್ಮ ಸುಖ ಕಾಣುವ ಹದಿಹರೆಯದ ಕಾಲೇಜ್ ಹುಡುಗಿಯರಂತೆ, ಕಾರ್ಯಕ್ರಮ ನಡೆಸಿಕೊಡುತ್ತಿದ್ದ. ಆ ದಿನ ಕರಣ್ ಕಾರ್ಯಕ್ರಮದ ಅತಿಥಿಗಳು, ಹಿಂದಿ ಸಿನೆಮಾ ಲೋಕದ ಈಗಿನ ಇಬ್ಬರು ಫೇಮಸ್ ಹೀ(ಜೀ? )ರೋಗಳು. ಈಗಿನ ಯುವಪೀಳಿಗೆಯ ರೋಲ್ ಮಾಡೆಲ್ ಗಳು.

ಅವರಲ್ಲೊಬ್ಬನಿಗೆ ಕರಣ್ ನ ಪ್ರಶ್ನೆ: ‘So, you are not in a relationship now, you are single?’
ಆ ಪ್ರಶ್ನೆಗೆ ಹೀರೊ ‘ಯಸ್’ ಅಂದ. ಮುಂದುವರಿದ ಕರಣ್ ‘OK… so what do you do for sex?’ ಅಂತ ಕೇಳಿದ
ಅದಕ್ಕೆ ಹೀರೋನ ಉತ್ತರ: ‘Have it’!!!

ಇದನ್ನು ನೋಡಿ/ ಕೇಳಿ ಕೆಲವು ನಿಮಿಷಗಳ ಕಾಲ ನನಗೆ ದಂಗು ಬಡಿದಂತಾಗಿತ್ತು. ನಾನು ಇಂಗ್ಲೆಂಡಿಗೆ ಬಂದು ಈ ತಿಂಗಳಿಗೆ ಸರಿಯಾಗಿ ಹತ್ತು ವರುಷಗಳಾಗಿವೆ. ಇತ್ತೀಚಿಗೆ ನಾನು ಹಿಂದಿ ಕಾರ್ಯಕ್ರಮಗಳನ್ನು/ ಸಿನೆಮಾಗಳನ್ನು ನೋಡುವುದು ಬಹಳ ಕಡಿಮೆಯಾಗಿದೆ. ಆದರೆ ಈ ಕಾರ್ಯಕ್ರಮವನ್ನು ನೋಡಿ ನನ್ನ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಮೂಡಿದ್ದಂತೂ ನಿಜ. ಈ ಚ್ಯಾಟ್ ಷೋ ದಲ್ಲಿ ಇದ್ದವನು ಒಬ್ಬ ಸಿನೆಮಾ ನಾಯಕ. ಇಂದಿನ ಯುವಕ- ಯುವತಿಯರು ಅವನನ್ನು ಆರಾಧ್ಯ ದೈವದಂತೆ ಕಾಣುವುದು ಸಹಜ. ಇಂತಹ ತಥಾಕಥಿತ ರೋಲ್ ಮಾಡೆಲ್ ಗಳು, ಈ ತರಹದ ಬೇಜವಾಬ್ದಾರಿಯ ಉತ್ತರವನ್ನು ರಾಷ್ಟ್ರೀಯ ಟಿವಿ ವಾಹಿನಿಯಲ್ಲಿ ಕೊಡುವುದು ಸರಿಯೇ? ಅಥವಾ ಈ ರೀತಿಯ ಕ್ಯಾಶುವಲ್  ಉತ್ತರವನ್ನು ಆ ಟಿವಿ ಚ್ಯಾನಲ್ ಅಷ್ಟೊಂದು ಕ್ಯಾಶುವಲ್ ಆಗಿ ತೋರಿಸುವುದು ಸರಿಯೇ?

ಅವರವರ ವೈಯಕ್ತಿಕ ಜೀವನದಲ್ಲಿಅವರು ನಾಲ್ಕು ಗೋಡೆಗಳ ಮಧ್ಯೆ ಯಾರೊಂದಿಗೆ ಏನು ಮಾಡುತ್ತಾರೆನ್ನುವುದು, ಅವರ ವ್ಯಕ್ತಿ ಸ್ವಾತಂತ್ರ್ಯದ ವಿಷಯ. ಅದನ್ನು ಸರಿ- ತಪ್ಪೆಂದು ನಿರ್ಧರಿಸುವುದು ಯಾರ ಜವಾಬ್ದಾರಿಯೂ ಅಲ್ಲ, ಇಲ್ಲಿ ನನ್ನ ಉದ್ದೇಶವೂ ಅದಲ್ಲ. ಹಾಗಂತ, ಕ್ಯಾಶುವಲ್ ಸೆಕ್ಸ್  ಅನ್ನುವುದನ್ನು ಅಷ್ಟೊಂದು ಸಾಮಾನ್ಯ ವಿಷಯವೆಂಬಂತೆ ಮಾತಾಡುವುದು, ಪ್ರಸಾರ ಮಾಡುವುದು ಸರಿಯಲ್ಲ ಅನ್ನುವುದು ನನ್ನ ಅಭಿಪ್ರಾಯ. ಸಿನೆಮಾ ನಟರನ್ನು ಆರಾಧಿಸುವ ಯುವ ಪೀಳಿಗೆ, ಅವರ ಈ ಬೇಜವಾಬ್ದಾರಿಯ ವರ್ತನೆಯನ್ನೂ ಅನುಕರಿಸಿದರೆ ಅದರ ಪರಿಣಾಮ ಒಳ್ಳೆಯದಾಗುವುದೇ? ಪಾಶ್ಚಾತ್ಯರನ್ನು ಅಂಧಾನುಕರಣೆ ಮಾಡುವ ಭಾರತದ ಸೋ ಕಾಲ್ಡ್ ಮಾಡರ್ನ್ ಜನತೆ, ಇಂತಹ ‘ ಮಾಡರ್ನ್’ ವರ್ತನೆಗಳಿಂದಾಗುವ ಅನಾಹುತಗಳನ್ನು ಅರಿತಿದೆಯೇ? ಕ್ಯಾಶುವಲ್ ಸೆಕ್ಸ್ ನೊಂದಿಗೆ ಬರುವ, ಪಾಶ್ಚಾತ್ಯ ದೇಶಗಳಿಗೆ ದೊಡ್ಡ ತಲೆನೋವಾಗಿರುವ ಟೀನೇಜ್ ಪ್ರೆಗ್ನೆನ್ಸಿ, ಡ್ರಗ್ ಎಡಿಕ್ಷನ್, ಲೈಂಗಿಕ ರೋಗಗಳು (sexually transmitted diseases) ಇತ್ಯಾದಿ ಸಮಸ್ಯೆಗಳಿಗೆ ಭಾರತ ತಯಾರಾಗಿದೆಯೇ? ಅಥವಾ ಇಂತಹ ಸಮಸ್ಯೆಗಳನ್ನು, ಪಾಶ್ಚಾತ್ಯರಷ್ಟು ಓಪನ್ ಮೈಂಡೆಡ್ ಆಗಿ, ತೀರ್ಮಾನದ ಧಾಟಿಯಿಲ್ಲದೆ  ಭಾರತದ ಸಮಾಜ ಸ್ವೀಕರಿಸುತ್ತದೆಯೇ? ಇವೆಲ್ಲದರ ವಿವೇಚನೆ ಇಲ್ಲದೆ ಇಂತಹ ಕಾರ್ಯಕ್ರಮಗಳ ನಿರ್ಮಾಣ ಮತ್ತು ಪ್ರಸಾರ ಖಂಡಿತ ಅತ್ಯಂತ ಬೇಜವಾಬ್ದಾರಿಯದು.

ಎಷ್ಟೋಬಾರಿ ನನಗನ್ನಿಸುತ್ತದೆ, ಬಹುಶಃ ನನಗೇ ವಯಸ್ಸಾಯಿತೇನೋ, ಉರುಳುತ್ತಿರುವ ಕಾಲಚಕ್ರದೊಂದಿದೆ ನಾನೇ ಹೆಜ್ಜೆ ಹಾಕುತ್ತಿಲ್ಲವೇನೋ ಎಂದು. ಹಲವು ಬಾರಿ ತಾಯ್ನಾಡಿಗೆ ಹೋದಾಗ ‘ನಾವು ಬಿಟ್ಟು ಬಂದ ಭಾರತ ೧೦ ವರ್ಷ ಮುಂದೆ ಹೋಗಿದೆ, ನಾವಿನ್ನೂ ೧೦ ವರ್ಷ ಹಿಂದಿದ್ದೇವೆ ‘ ಎಂದು ಅನಿಸಿದ್ದಿದೆ. ನಾನು ಮೇಲೆ ವಿವರಿಸಿದ, ಪಾಶ್ಚಾತ್ಯ ದೇಶಗಳಲ್ಲಿ ಸಾಮಾನ್ಯವೆನಿಸುವ ಕೆಲವು ವಿಷಯಗಳು ಇಂದು ಭಾರತದಲ್ಲೂ ವ್ಯಾಪಕವಾಗಿವೆ ಎಂದು ನನ್ನ ಸ್ನೇಹಿತರಿಂದ ಕೇಳಿದಾಗ, ಹೃದಯ ಭಾರವಾಗುತ್ತದೆ. ಪಾಶ್ಚಾತ್ಯರು ಮಾಡುವುದೆಲ್ಲವನ್ನೂ ನಾವು ಮಾಡಲೇ ಬೇಕೇ?  ಅನುಕರಣೆ ಮಾಡುವುದೇ ಆದರೆ, ಅವರ ಶಿಸ್ತು, ಕ್ಲಪ್ತತೆ, ಸ್ವಚ್ಛತೆ, ಇನ್ನೊಬ್ಬರತ್ತ  ವಿಧೇಯತನ,  ಅನಾವಶ್ಯಕವಾಗಿ ಬೇರೆಯವರ ವಿಷಯಗಳಲ್ಲಿ ಮೂಗು ತೂರಿಸದಿರುವುದು- ಇತ್ಯಾದಿಗಳನ್ನು ಅನುಕರಣೆ ಮಾಡಬಹುದಲ್ಲವೇ?

ನನ್ನ ಹಿರಿಯರು, ಆತ್ಮೀಯರನೇಕರು ನನಗೆ ಯಾವಾಗಲೂ ಹೇಳುತ್ತಾರೆ ”ಇಬ್ಬರು ಹೆಣ್ಣು ಮಕ್ಕಳಿದ್ದಾರೆ ನಿನಗೆ, ಹೊರದೇಶದಲ್ಲಿ ಇನ್ನು ಹೆಚ್ಚು ದಿನ ಇರಬೇಡ, ಹೆಣ್ಣು ಮಕ್ಕಳನ್ನು ಬೆಳೆಸುವ ದೇಶ ಅಲ್ಲ ಅದು, ಬೇಗ ಊರಿಗೆ ಬಂದು ಬಿಡು” ಎಂದು. ನಾನು ಯಾವಾಗಲೂ ಈ ವಿಷಯದ ಬಗ್ಗೆ, ನಾವು ಇಲ್ಲಿರುವ, ಊರಿಗೆ ಮರಳಿ ಹೋಗುವ ಸಾಧ್ಯತೆಗಳ  ಗುಣಾವಗುಣಗಳ  ಬಗ್ಗೆ ನನ್ನ ಪತಿಯೊಂದಿಗೆ, ಅಪ್ಪ, ಅಮ್ಮ, ತಮ್ಮನೊಂದಿಗೆ ಚರ್ಚೆ ಮಾಡುತ್ತಿರುತ್ತೇನೆ. ನನ್ನ ದೊಡ್ಡ ಮಗಳು ಪ್ರತಿ ದಿನವೂ ಒಂದಲ್ಲ ಒಂದು ಪ್ರಶ್ನೆಯನ್ನು ತೆಗೆದುಕೊಂಡು ಬರುತ್ತಾಳೆ. ”ಅಮ್ಮ, ನೀನು ಯಾಕೆ ಹಾಗೆ ಮಾಡುವುದಿಲ್ಲ? ಅಮ್ಮ, ನಾನು ಯಾಕೆ ಹೀಗೆ ಮಾಡಬಾರದು? ” ಇತ್ಯಾದಿ. ಅವಳ ಹೆಚ್ಚಿನ ಎಲ್ಲ ಪ್ರಶ್ನೆಗಳಿಗೂ ನಾನು ಒಂದೇ ಉತ್ತರ ನೀಡುತ್ತೇನೆ ”ಪುಟ್ಟಿ, ನಾವು ಭಾರತದಿಂದ ಬಂದಿದ್ದೇವೆ. ಭಾರತದಲ್ಲಿ ನಾವು ಹಾಗೆ ಮಾಡುವುದಿಲ್ಲ”. ಅವಳಿಗೆ ಸದ್ಯಕ್ಕಂತೂ ಈ ಉತ್ತರ ಸಮಂಜಸವೆನಿಸುತ್ತದೆ. ಆದರೆ, ಭಾರತದಲ್ಲಿಯೂ ಇಲ್ಲಿ ನಡೆಯುವ ಹಲವು ‘ ಮಾಡರ್ನ್’ ವಿಷಯಗಳು ನಡೆಯುತ್ತಿರುವಾಗ, ಅಲ್ಲಿ ಅವಳು ಈ ಪ್ರಶ್ನೆಗಳನ್ನು ಕೇಳಿದರೆ ನಾನೇನು ಉತ್ತರ ಕೊಡಲಿ ಎಂಬ ಅಭದ್ರತೆ ನನ್ನನ್ನು ದಿನವೂ ಕಾಡುತ್ತದೆ.

ಬೆಳೆಯುವ ವಯಸ್ಸಿನಲ್ಲಿ ಒಡನಾಡಿಗಳ, ಸಮಾನ ವಯಸ್ಕರ ಒತ್ತಡ, ಬೆಳೆಯುವ ಮನಸ್ಸಿನ ಕುತೂಹಲ, ಈ ಕುತೂಹಲದಿಂದಾಗುವ ಅನಾಹುತಗಳು ಎಲ್ಲರಿಗೂ ಗೊತ್ತಿರುವ ವಿಷಯಗಳೇ. ಹೀಗಿರುವಾಗ, ಮಾಧ್ಯಮಗಳೂ, ಸಿನೆಮಾ ತಾರೆಗಳೂ, ಈ ಬೆಳೆಯುವ ಸಿರಿಗಳನ್ನೂ ಹಾಗೂ ಇಂದಿನ ಯುವ ಜನತೆಯನ್ನೂ ಮಾರ್ಗದರ್ಶನ ಮಾಡಿ ಸನ್ನಡತೆಯತ್ತ ಒಯ್ಯಬೇಕೇ ಹೊರತು, ತಮ್ಮ ಬೇಜವಾಬ್ದಾರಿಯ ವರ್ತನೆಯಿಂದ, ಹೇಳಿಕೆಗಳಿಂದ   ದಾರಿ ತಪ್ಪಿಸಬಾರದು ಅಲ್ಲವೇ?