ತೊಳಲಾಟ – ದಾಕ್ಷಾಯಿಣಿ ಬರೆದ ಕವಿತೆ

ವೃತ್ತಿಯಿಂದ ವೈದ್ಯರಾದ ದಾಕ್ಷಾಯಿಣಿಯವರು ಬಿಡುವು ಮಾಡಿಕೊಂಡು ಬರಹ, ಕವಿತೆಗಳಲ್ಲಿ ತೊಡಗಿರುತ್ತಾರೆ. ‘ಅನಿವಾಸಿ‘ಯಲ್ಲಿ  ಬರೆದ ಲೇಖಕರನ್ನು ಉತ್ತೇಜಿಸುವ ಕಮೆಂಟ್ಸ್ ಬರೆಯುತ್ತಿರುತ್ತಾರೆ. ತಾವು ನೆಲೆಸಿದ ಇಂಗ್ಲೆಂಡ್ನಲ್ಲಿ ಎಲ್ಲ ಅನಿವಾಸಿಗಳಂತೆ ಅವರದೂ  ಈ ತೊಳಲಾಟ ಇದ್ದೇ ಇದೆ.

ಇಂಡಿಯಾ ಅಥವಾ ಇಂಗ್ಲೆಂಡ್
ನಿರಂತರ ಹೋರಾಟ ಮನದಲ್ಲಿ,

ಹೃದಯಕ್ಕೆ ಬೇಕು ಇಂಗ್ಲೆಂಡಿನ ತಂಪು,
ಮನಸ್ಸಿಗೆ ಬೇಕು ತಾಯ್ನಾಡಿನ ಸೊಂಪು,

ಅಲ್ಲಿನ ಗಲಾಟೆ ಗದ್ದಲ ಕಿವಿಗೆ ಕರ್ಕಷ
ಇಲ್ಲಿನ ನಿಶಬ್ದವೂ ಬೇಸರ, ನೀರಸ

ಪ್ರಶಾಂತ ಜೀವನ, ಪರಿಣಿತಿಗೆ ಆಹ್ವಾನವಿಲ್ಲಿ,
ಕಲಕಲದ ಕಿತಾಪತಿಯೂ ಬೇಕು ಜೀವನದಲ್ಲಿ

ಬರ್ಗರ್, ಬನ್, ಬ್ರೆಡ್, ತಿಂದು ಬೋರು,
ಮಸಾಲೆದೋಸೆ ಜಾಸ್ತಿಯಾದರೂ ದೇಹಕ್ಕೆ ತಕರಾರು

ಎಲ್ಲವೂ ಬೇಕು ಅದರದೆ ಪರಿಮಿತಿಯಲ್ಲಿ,
ಈ ಸಮಸ್ಯೆಗೆ ಪರಿಹಾರವೆಲ್ಲಿ?

ತ್ರಿಶಂಕು ಸಹ ತರಲಾರ ಉತ್ತರ ನಮ್ಮ ಇಬ್ಬದಿಗೆ
ನಾವೆ ತರಬೇಕು ಶಾಂತಿ, ಸಂತೋಷ ನಮ್ಮ ಮನಸ್ಸಿಗೆ.