ಸ್ವಾತಂತ್ರ್ಯ-ಡಾ. ಪ್ರೇಮಲತ ಬಿ.

 

modified cloths
ಸ್ವಾತಂತ್ರ್ಯ

ನನಗೀಗ ೧೯ ವರ್ಷ. ಕೆಲವೊಮ್ಮೆ ಆಲೋಚನಾ ಲಹರಿಯಿಂದ ನಾನು ಇತರರಿಗಿಂತ ವಿಭಿನ್ನ ಮಿಡಿತಗಳನ್ನು ಹೊಂದಿರುವಂತೆ ಅನಿಸಿದರೂ ತಾರುಣ್ಯದ ದಿನಗಳ ಎಲ್ಲ ಭಾವನೆಗಳ ಉಗಮದ ಪ್ರತಿ ಅನುಭವ ನನಗಾಗಿದೆ. ಮಧ್ಯಮವರ್ಗದ ಸಾಂಪ್ರದಾಯಿಕ ಕುಟುಂಬದಿಂದ ಬಂದಿರುವ ಕಾರಣದಿಂದಲೋ ಏನೋ, ಪ್ರೀತಿ-ಪ್ರೇಮದ ಅಲೆಗಳಲ್ಲಿ, ಡಿಸ್ಕೋ-ಕುಡಿತಗಳ ಅಮಲಿನಲ್ಲಿ ಕೊಚ್ಚಿಹೋಗುವ ಉನ್ಮಾದಕ್ಕಾಗಿ ಮನಸ್ಸು ತೀವ್ರವಾಗಿ ಮಿಡಿದಿಲ್ಲ. ಬದಲು ಸಮಾಜದಲ್ಲಿ ಮುಕ್ತತೆಯನ್ನು ಕಾಣುವ, ಸ್ವಾತಂತ್ರದ ಸಂಪೂರ್ಣ ಸ್ವೇಚ್ಚೆಗಾಗಿ ನನ್ನ ಮನಸ್ಸು ತುಮಲಗೊಳ್ಳುತ್ತದೆ. ಧೀಮಂತ ಯುವ ಶಕ್ತಿಯನ್ನು ಬಳಸಿ ಈ ಸಂಕುಚಿತ ಸಮಾಜವನ್ನು ಬದಲು ಮಾಡಬೇಕೆಂಬ ಉತ್ಕಟೇಚ್ಚೆ ನನ್ನಲ್ಲಿ ಯಥೇಚ್ಚವಾಗಿದೆ.

ಒಬ್ಬ ಸುಂದರ ಯುವತಿಯನ್ನು ಕಂಡರೆ ಮನಸ್ಸು ಪುಳಕಗೊಳ್ಳುಷ್ಟೇ ಸಹಜವಾಗಿ ಸಮಾಜದಲ್ಲಿನ, ಅನೀತಿ, ಅಧರ್ಮ, ಲಂಚಕೋರತನ, ಶಿಕ್ಷಣದಲ್ಲಿರುವ ರಾಜಕೀಯ ಇವುಗಳನ್ನು ಕಂಡಾಗ ಕೆಡುಕೆನಿಸುತ್ತದೆ.ಧಮನಿ, ಧಮನಿಗಳಲ್ಲಿ ಹರಿವ ರಕ್ತ ಬಿಸಿಯಾಗಿ ಅಸಹಾಯಕತೆಯ ನಿಟ್ಟಿಸುರಾಗಿ ಹೊರಬಂದು ಆತ್ಮಸಾಕ್ಷಿ ನನ್ನನ್ನು ಹಿಂಸಿಸುತ್ತದೆ.ಬೆಟ್ಟಗಳನ್ನು ಹತ್ತಲು, ನದಿಗಳನ್ನು ಈಜಲು,ಬಯಲಿನಲ್ಲಿ ನಿರ್ಭಿಡೆಯಾಗಿ ಓಡಲು, ಕಾಡಿನಲ್ಲಿ ಒಂಟಿಯಾಗಿ  ಅಲೆಯಲು ಅದಮ್ಯ ಉತ್ಸಾಹ ಹೊಂದಿರುವ ನನ್ನಂತಹವರ ಮಿಡಿತಗಳು, ರಸ್ತೆಯಲ್ಲಿ ಸಂಕೋಚ ಪಡದೆ, ಹೆದರದೆ ನಡೆಯಲೂ ಆಗದಿರುವ ಈ ವ್ಯವಸ್ಥೆಯಲ್ಲಿ ಹಾಗೇ ತಣ್ಣಗಾಗಿಬಿಡುತ್ತವೆ. ಇದು ನಿರಾಶಾವಾದವಲ್ಲ. ಬದುಕಿನ ಕ್ರೂರ ಸತ್ಯ!

ಇದಕ್ಕೆ ವಿರುದ್ಧವಾಗಿ ಸೊಲ್ಲೆತ್ತಿದರೆ ಆತ್ಮಹತ್ಯೆಯ ಹೆಸರಲ್ಲಿ ಅವರ ಹತ್ಯೆ! ಹಾಡುಹಗಲಲ್ಲೇ ಗುಂಡು! ವ್ಯವಸ್ಠಿತ ಜಾಲದ ಮಾಯೆಯಲ್ಲಿ ಎಲ್ಲ ಮಾಹಿತಿ,ಪರಿಣತಿಗಳ ವಿಪರ್ಯಾಸ! ಮಾಧ್ಯಮಗಳ ಹುಟ್ಟಡಗಿಸಿ, ಪರ-ವಿರೋಧಗಳ ಮಾರುಕಟ್ಟೆಯನ್ನು ಸೃಷ್ಟಿಸಿ ಅಪಹಾಸ್ಯವಾಗುತ್ತಿರುವ ಈ ದೇಶದ ಯುವ ತರುಣನಾಗಿ ನಾನೇನು ಮಾಡಬಲ್ಲೆ?!

ಅಖಂಡವಾಗಿ ನಿಂತಿರುವ ದೊಡ್ಡ ದೇಶ ನನ್ನದು. ಆದರೆ ಇಲ್ಲಿ ಬದಲಾವಣೆಯ ಹರಿಕಾರರು ಯಾರದರೂ ಇದ್ದಾರೆಯೇ? ಅಂತವರಿಗಾಗಿ ನಾನು ಹುಡುಕಿ ಅಲೆಯಲೇ? ಈ ವ್ಯವಸ್ಥಿತ ಭ್ರಶ್ಟಾಚಾರ ನನ್ನ ಮನಸ್ಸುನ್ನು ಆಲೆಗಳೇ ಇಲ್ಲದ ಸಮುದ್ರವಾಗಿ ಯಾಂತ್ರಿಕತೆಯನ್ನು ರೂಢಿಸಿಕುಳ್ಳುವಂತೆ ಮಾಡುವ  ಮೊದಲು, ನನ್ನ ಭವಿಷ್ಯವನ್ನು ಹೇಗೆ ತಿರುಗಿಸಲಿ? ಇಂದಿನ ಸ್ವತಂತ್ರ ದಿನಾಚರಣೆಯ ಯಾವ ಭಾಷಣಕರರಲ್ಲೂ ನಾನು ಬದಲಾವಣೆಯ ಕಿಡಿಯಿರಲಿ, ಕಾವನ್ನೂ ಕಾಣಲಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಸ್ವಾತಂತ್ರ ದಿನಾಚರಣೆಯ ಬಗ್ಗೆ ಪುಳಕಿತಗೊಳ್ಳುವ ದಿನಗಳಿಂದ ಬದಲಾಗಿ, ನಿರಾಶಗೊಳ್ಳುವ ಆತಂಕಕ್ಕೆ ಸಿಲಿಕಿಕುಳ್ಳುತ್ತಿದ್ದೇನೆ! ದೇವರೇ ರಕ್ಷಿಸು !!

“ಹತ್ತಾರು ವರ್ಷದ ಅವೇ ಹಳೇ ಬಟ್ಟೆಗಳನ್ನು ಅದೇನಂತ ಹಾಕ್ಕೋತಿಯೋ? ಬಿಸಾಕಿ, ಬೇರೆ ಹೊಲಿಸಿಕೋ…. “ ನಡುಮನೆಯಲ್ಲಿ ಬಟ್ಟೆ ಮಡಿಚಿಡುತ್ತಿದ್ದ ಅಮ್ಮ ಕೂಗಿದಳು.

“ಅವೇನು ಹರಿದಿಲ್ಲವಲ್ಲಮ್ಮ..? ಹೊಸದ್ಯಾಕೆ ಬೇಕು?”-  ಹರೆಯದ ದಿನಗಳ ನನ್ನ ಹಳೇ ದಿನಚರಿ ಪುಸ್ತಕದಲ್ಲಿ ಸ್ವತಂತ್ರ ದಿನಾಚರಣೆಯ ದಿನ ಬರೆದದದ್ನ್ನು ಓದುವುದನ್ನು ನಿಲ್ಲಿಸಿ ತಲೆ ಎತ್ತಿ ಕೂಗಿ ದಬಕ್ಕನೆ ಇಹಲೋಕಕ್ಕೆ ಬಂದೆ! ಇವತ್ತು ಕೂಡ ಇನ್ನೊಂದು ಸ್ವತಂತ್ರ ದಿನಾಚರಣೆ! ಹಾಗೆಂದೇ ನನ್ನಲ್ಲಿ ಈ ತಾದಾನ್ಮ್ಯತೆ.

ಅಮ್ಮ ಹೇಳುತ್ತಿದ್ದುದು ಸರಿಯೆಂದು ಗೊತ್ತಿದ್ದರೂ ಹತ್ತು ವರ್ಷಗಳಿಂದ ಹೇಳುತ್ತಿದ್ದ ಅದೇ ಉತ್ತರ ಹೇಳಿದೆ. ಅಮ್ಮನಲ್ಲವೇ…..ದಬಾಯಿಸಿಬಿಡಬಹುದು!

“ಈಗೆಲ್ಲ ಈ ತರದವನ್ನು ಜನ ಹಾಕ್ಕೊಳಲ್ಲ.  ಫ್ಯಾಷನ್ ಬದಲಾಗಿದೆ. ಜನ ಆಡ್ಕೊಂಡ್ ನಗ್ತಾರೆ….” ಅಮ್ಮನೇನು ಬಿಡುವವಳಲ್ಲ.

“ಆಡ್ಕೊಂಡ್ ನಗಲಿ ಬಿಡು.ನಾನು ಯಾರಿಗೇನು ತೊಂದರೆ ಮಾಡ್ತಿಲ್ವಲ್ಲ.ಈ ಜನರಿಗೆ ಯಾರು ಅವರಿಗೆ ಹಾನಿ ಮಾಡ್ತಿದ್ದಾರೆ ಅನ್ನೋ ಅರಿವಿದ್ರೆ ತಾನೆ..”

“ಏನೋಪ್ಪ..,ಬೇಕಾದಷ್ಟು ದುಡೀತೀಯ.ವಯಸ್ಸಿದೆ,ಎಲ್ಲರಂಗಿರು ಅಂತ ಹೇಳಿದೆ… “ ಅಮ್ಮ ಅಲ್ಲಿಗೆ ಸುಮ್ಮನಾದಳು. ಮನಸ್ಸಲ್ಲಿ ಏನೆಂದು ಕೊಂಡಳೋ ಯಾರಿಗೆ ಗೊತ್ತು?

ಭಾರತ ಬಿಟ್ಟು ೧೫ ವರ್ಷವಾಯ್ತು.ಇಪ್ಪತ್ತೈದು ವರ್ಷದ ವಯಸ್ಸಿನಲ್ಲಿ ಇದ್ದ ಆಕಾರದಲ್ಲೇ ಈಗಲೂ ಇದ್ದೇನೆ!! ಮನಸ್ಥಿತಿ, ಕಾಲಗತಿಯಲ್ಲೂ…..

ಹರಿಯದ ಬಟ್ಟೆಗಳನ್ನು ಎಸೆಯದೆ,ಬೆಳೆಸಿಕೊಂಡ ಭಾವನೆಗಳನ್ನು ಹರಿದುಕೊಳ್ಳದೆ ಗಡಿಯಾರದಂತೆ ಪ್ರತಿ ಆಗಷ್ಟ್ ಗೆ ಸರಿಯಾಗಿ ಭಾರತಕ್ಕೆ ಮರಳಿದ್ದೇನೆ. ಅದೇ ಹಳೆಯ ಬಟ್ಟೆಗಳನ್ನು ಅಲೆಮಾರಿನಿಂದ ತೆಗೆದು ಉಟ್ಟು, ಪರಕಾಯ ಪ್ರವೇಶ ಮಾಡಿದಂತೆ ಹುದುಗಿಕೊಂಡಿದ್ದೇನೆ.ಕಾಲಕ್ರಮದಲ್ಲಿ ನಾನೊಂದಾಗಿದ್ದಾಗ ನನಗನಿಸಿದ್ದ ಎಲ್ಲ ಭಾವನೆಗಳಿಗೆ ಮರುಜೀವ ನೀಡಿ ಅಪ್ಯಾಯಕರವಾದ ಹಲವು ಭಾವನೆಗಳನ್ನು ಮೆಲುಕು ಹಾಕಲು ತವಕಿಸುತ್ತೇನೆ.

ನಡುಮನೆಯಲ್ಲಿ ಅಮ್ಮ  ಟೆಲಿಪೋನಿನಲ್ಲಿ ಮಾತನಾಡುತ್ತಿದ್ದಳು.

“ಚೆನ್ನಾಗಿದ್ದೀರ? …ಹೌದು.. ಮಗ-ಸೊಸೆ ಬಂದು ಒಂದು ವಾರ ಆಯ್ತು. ಇಲ್ಲ. ಸೊಸೆ ಮಕ್ಕಳನ್ನು ಕರ್ಕೊಂಡು ಅವರಮ್ಮನ ಮನೆಗೆ ಹೋಗಿದ್ದಾಳೆ….ಇಂಗ್ಲೆಂಡಿನಲ್ಲೇ ಇರಲ್ವಂತೆ. ಬರ್ತೀನಿ ಅಂತಾನೆ ಇರ್ತಾನೆ..ಅದೇನು ಮಾಡ್ತಾನೋ ಗೊತ್ತಿಲ್ಲ… ನನಗೇನೋ ಬರ್ತಾನೆ  ಅನ್ನಿಸುತ್ತೆ.ಅದ್ರೂ ಹೇಳಕ್ಕಾಗಲ್ಲ…ದೇವರಿಟ್ಟಂತೆ ಅಗ್ಲಿ ಬಿಡಿ ಗಂಗ, ನನ್ನ ಕೈ ಲೇನಿದೆ ಹೇಳಿ…”

ಅಮ್ಮ ತನ್ನ ಗೆಳತಿ ಗಂಗಾಂಬಿಕೆಯ  ದೂರವಾಣಿ ಕರೆಗೆ  ಕಿವಿಯೊಡ್ಡಿದ್ದಳು. ನನ್ನ ಅಕ್ಕ ಮತ್ತು ಭಾವ ಇದೇ ದೇಶದಲ್ಲಿದ್ದು ಅಮ್ಮನನ್ನು ನೋಡಿಕೊಳ್ಳುತ್ತಿರುವುದರಿಂದ ಅಮ್ಮನ ಬಗ್ಗೆ ಆತಂಕವಿಲ್ಲ, ಭಾವ ಅಮ್ಮನ ಕೊನೆಯ ತಮ್ಮನೂ ಆಗಿರುವುದರಿಂದ ಅಳಿಯ ಎಂಬ ಹಂಗಿಲ್ಲ! ಗಂಡುಮಗ ಜೊತೆಯಲ್ಲಿಲ್ಲದ ಕೊರತೆ ಅಮ್ಮನ ಮಾತಲ್ಲಿ ಕಾಣಿಸುತ್ತಿತ್ತು. ಆದರೆ, ನಿರಾಸೆಯನ್ನು ಹತ್ತಿಕ್ಕಿ, ನಿರುಮ್ಮಳವಾಗಿ ಗೆಳತಿಯ ಜೊತೆ ಅಮ್ಮ ಮಾತು ಮುಂದುವರಿಸಿದಳು.

“ಬೆಂಗಳೂರಲ್ಲಿ ಬೇಕದಷ್ಟು ಆಸ್ತಿ ಮಾಡಿದ್ದಾರಲ್ಲ…ಹೌದು… ಒಂದು ಫ್ಲಾಟ್ ಇದೆ, ಮನೆ ಇದೆ.ಎರಡನ್ನೂ ಬಾಡಿಗೆಗೆ ಕೊಟ್ಟಿದ್ದಾನೆ.ಬೇಕಾದಷ್ಟು ಬಾಡಿಗೆ ಬರುತ್ತೆ.ಲಂಡನ್ನಿನಲ್ಲೇನು…ಅವರಿಗೆ ಬೇಕಾದಂತೆ ಸಂಬಳ…ಕೈಗೊಂದು, ಕಾಲಿಗೊಂದು ಆಳು…ಎರಡೆರಡು ಕಾರು…ಗೊತ್ತಲ್ಲ, ಆ ದೇಶದ ದುಡ್ಡಿಗೆ ಡಾಲರಿಗಿಂತ ಭಾರೀ ಬೆಲೆಯಂತಲ್ಲ…… “

ನಾಲ್ಕನೇ ತರಗತಿಗೆ ಓದು ನಿಲ್ಲಿಸಿ,೧೬ ಕ್ಕೆಲ್ಲ ಮದುವೆಯಾದ ಅಮ್ಮನಿಗೆ ಯಾವ ಕೊರತೆಯೂ ಇರಲಿಲ್ಲ. ಕೈ ತುತ್ತು ನೀಡಿ ಬೆಳೆಸಿದ ಮಗನ ಅಗಲಿಕೆಯ ನೋವನ್ನು ಅವನ ದುಡ್ಡಿನ ಬಗೆಗಿನ ಬೊಗಳೆಯಲ್ಲಿ ಮುಳುಗಿಸಿ.ಗೆಳತಿಯ ಮುಂದೆ ತೇಲಿಬಿಡುತ್ತಿದ್ದಾಳೆ. ಸಂಬಂಧಗಳು ಸಮುದ್ರದ ಎರಡೆರಡು ದಿಕ್ಕಿನಲ್ಲಿ ಹರಡಿಕೊಂಡರೂ ಹಣದ ಮೇಲ್ಮೈ ಅಡಿ ಅಗಲಿಕೆಯ ನೋವನ್ನು ಬಚ್ಚಿಟ್ಟು ಸಮಾಜದಲ್ಲಿ ಮೂಗೆತ್ತಿ ನಡೆವ ಅಮ್ಮನ ಕುಶಲತೆಗೆ ತಲೆಬಾಗಬೇಕೇನೋ……

ಅಮ್ಮನನ್ನು ಬಿಗಿದಪ್ಪಿ ಬಾಚಿ ಕೂರಬೇಕೆಂದು ಎಷ್ಟೋ ಸಾರಿ ಅನ್ನಿಸುತ್ತದೆ,ತಂದೆ ತೀರಿದ ಮೇಲೆ ಮೊಮ್ಮಕ್ಕಳ ಸ್ಪರ್ಷ ಬಿಟ್ಟರೆ ಅವಳಿಗೆ ಬೇರಿಲ್ಲ. ಹಾಗೆ ಮಾಡಿದರೆ ಅವಳು ಕೊಸರಿಕೊಂಡರೂ ಒಳಗೊಳಗೆ ಸಂತಸ ಪಡುತ್ತಾಳೆಂದೂ ನನಗನಿಸಿದೆ. ಆದರೆ ಪರಸ್ಪರ ವರ್ಷಕ್ಕೊಮ್ಮೆ ಎದುರಾದಾಗ ಹಸ್ತವನ್ನು ಅದುಮಿಕ್ಕಿದ್ದಕ್ಕಿಂತ ಹೆಚ್ಚು ಮಾಡಿಲ್ಲ. ಪರದೇಶಿಯಾದ ನಾನು ಒಂದಿಷ್ಟೂ ಸ್ವದೇಶಿತನವನ್ನು ಬಿಟ್ಟಿಲ್ಲ!!

“ ಅಯ್ಯೋ ನೀನೇನೋ…ನೀನು, ನಿನ್ನ ಮಕ್ಳು ಎಲ್ಲ ಹೋಟೆಲಿನಲ್ಲಿ ನಮ್ಮ ತರಾನೇ ತಿಂದಿರಲ್ಲೋ…ಶಾರದಮ್ಮನ ಮಗಳು- ಗಂಡ ಅಮೆರಿಕದಿಂದ  ಬಂದಾಗ ನೀನು ನೋಡಬೇಕಿತ್ತು. ಅವರ ಊಟದ ಕಟ್ಟುಪಾಡೇನು… ನೀರಿನ ವ್ಯವಸ್ಠೆಯೇನು…ಇಡೀ ಮೂರು ವಾರ ಅವರ ಮನೆಯಲ್ಲಿ ನಡೆದದ್ದು ಮುಂದಿನ ಮೂರು ತಿಂಗಳ ಕಾಲ ನಮ್ಮ ಮಹಿಳಾ ಸಂಘದಲ್ಲಿ ಚರ್ಚೆಯಾಯ್ತು…”

ಅಂತ ಅಮ್ಮ ಒಮ್ಮೆ ಹೇಳಿದ್ದಳು.ಅಮ್ಮನ ಈ ಮಾತಲ್ಲಿ ನಿರಾಶೆಯ ಸುಳಿವಿತ್ತು ಎನ್ನುವಲ್ಲಿ ನನಗೆ ಸಂಶಯವಿರಲಿಲ್ಲ. ಅಮ್ಮ ನನ್ನ ಬಗ್ಗೆ ಏನು ತಾನೇ ಹೇಳಿಕೊಳ್ಳಲು ಸಾಧ್ಯವಿತ್ತು? ನನ್ನಲ್ಲಿ ಪರದೇಶದ ದುಡ್ಡಿನ ಯಾವ ಗತ್ತುಗಳೂ ಇರಲಿಲ್ಲ!

ಒಮ್ಮೊಮ್ಮೆ ಈ ಜಟಿಲ ಸಮಾಜ ಪರದೇಶದಿಂದ ಬಂದ ಭಾರತೀಯರು ಪಾಸ್ಚಿಮಾತ್ಯರ ರೀತಿಯೇ ವರ್ತಿಸಲಿ ಎಂದು  ನಿರೀಕ್ಷಿಸುತ್ತದೆ. ಅದನ್ನು ನೋಡುವ ಅರೆಕ್ಷಣದ ಮನರಂಜನೆಯನ್ನು ಬಿಟ್ಟರೆ ಅದರಿಂದ ಇವರಿಗೆ ಗಿಟ್ಟುವುದಾದರೂ ಏನು?ಭಾರತೀಯತೆಯಲ್ಲಿ ಮೀಯಲು ಸಾವಿರಾರು ಮೈಲಿ ಹಾರಿಬರುವ ನಮಗೆ ಕೆಲವೊಮ್ಮೆ ನಿರಾಶೆ ಕಟ್ಟಿಟ್ಟ ಬುತ್ತಿ! ಪರದೇಶದಲ್ಲಿ ಭಾರತೀಯರಂತಿರುವ ನಮಗೆ,ಭಾರತಕ್ಕೆ ಮರಳಿದಾಗ ಪಾಶ್ಚಾತ್ಯರಂತೆ ವರ್ತಿಸಬೇಕಾದ ಹಿಂಸೆ ! ವಿದೇಶದಲ್ಲಿರುವಾಗ ಭಾರತೀಯರು ಎಂಬುದನ್ನು ಮರೆತು ಬಿಳಿಯರಿಗಿಂತ ಬೆಳ್ಳಗೆ ವರ್ತಿಸಿ,ಭಾರತದಲ್ಲೂ ಅದೇ ಚಮಕ್ ತೋರಿಸುವ ಭಾರತೀಯರು ಇವರಿಗೆ ಮಾದರಿ!!!! ಭಾರತದ ಇಂದಿನ ಸಮಾಜದಲ್ಲಿ ಪಾಶ್ಚಾತ್ಯರ ಅಂಧ ಅನುಕರಣೆ ಊಟ, ಉಡಿಗೆ, ತೊಡಿಗೆಗಳಲ್ಲಿ ಹಾಸು ಹೊಕ್ಕಿದೆ.

ಇತ್ತೀಚೆಗೆ ಗೆಳೆಯರ ಸಮಾವೇಶದಲ್ಲಿ ಅಮೆರಿಕಾದ ಉಡುಗೆ ತೊಟ್ಟು, ಸಂಜೆಯಲ್ಲಿ ಕರಿಕಪ್ಪು ಕನ್ನಡಕ ತೊಟ್ಟು, ಹೆಂಡತಿಗೆ ತುಂಡುಲಂಗ ಉಡಿಸಿಕೊಂಡು ಬಂದಿಳಿದ ಗೆಳೆಯ ರವಿಯ ಸಂಸಾರದ ಜೊತೆ ಫೊಟೋ ಕ್ಲಿಕ್ಕಿಸಿಕೊಳ್ಳಲು ಸಾಲುಗಟ್ಟಿ ಸರತಿಗೆ ಕಾದ ನನ್ನ ಭಾರತೀಯ ಮಿತ್ರರ ಬಗ್ಗೆ ಕನಿಕರವಾಯ್ತು,   ಮರುಕ್ಷಣ ಫೇಸ್ಬುಕ್ಕಿನಲ್ಲಿ, ವ್ಹಾಟ್ಸಪ್ಪಿನಲ್ಲಿ ಅಮೆರಿಕಾದ ತಮ್ಮ ಮಿತ್ರರ ಜೊತೆ ತೆಗೆಸಿಕೊಂಡ ಚಿತ್ರಗಳ ರವನೆ ಮಾಡುತ್ತಿದ್ದರು. ಭಾರತದಲ್ಲಾದರೂ ಭಾರತೀಯ ಉಡುಗೆ ಉಡುವ ಅವಕಾಶ ಇದೆ  ಎಂದು ತಿಳಿದು ಅಪ್ಪಟ ಭಾರತೀಯ ತೊಡುಗೆಯಲ್ಲಿದ್ದ ನಮ್ಮನ್ನು  ಕೇಳುವವರಿರಲಿಲ್ಲ!!!. ಕನ್ನಡದಲ್ಲಿ ಮಾತಾಡುತ್ತಿದ್ದವರು ಬಹುಶಃ ನಾವಿಬ್ಬರೇ!!!

ಊಟಕ್ಕೆ ಫ್ರೆಂಚ್ ಮೆನ್ಯು. ಜೊತೆಗೆ ಪಿಜ್ಜ, ಬರ್ಗರ್ರು ಗಳೇ….  ಸಸ್ಯಾಹಾರಿಯಾದ ನಮಗೆ ಮನೆ ಬಿಟ್ಟು ಹೊರಹೋದರೆ ಇಂಗ್ಲೆಂಡಿನಲ್ಲಿ ಇಂತವೇ ಊಟಗಳ ಹೊರತು ಇನ್ನೊಂದು ಸಿಗುವುದಿಲ್ಲ. ಭಾರತದಕ್ಕೆ ಬಂದಾಗಲೂ ಫ್ರೆಂಚ್,ಇಟಲಿಯ ಊಟ ಮಾಡಲು ನನಗೂ-ಸುಮಿಗೂ ಬೋರು ಹೊಡೆದಿತ್ತು. ತಮ್ಮ ಜಾನಿ –ವಾಕರ್ ಬಾಟಲ್ ಗಳನ್ನು ಮುಖದ ಮುಂದೆ ಹಿಡಿದುಕೊಂಡು ಫ್ಹೋಟೊ ಕ್ಲಿಕ್ಕಿಸಿಕೊಂಡು ರೊಯ್ಯನೆ ವಾಟ್ಸಪ್ಪಿಗೆ ರವಾನಿಸುವುದನ್ನು ಮಾತ್ರ ಮರೆಯದ ಗೆಳೆಯರು ಸಂತೋಷವಾಗಿರುವುದನ್ನು ಬಿಟ್ಟು ತೋರಿಕೆಯ ಆಟಗಳಲ್ಲಿ ಸಂತೋಷ ಕಾಣುವುದನ್ನು ಕಂಡೆವು. ಬಾಯಿ ತುಂಬಾ ಮನಸ್ಪೂರ್ವಕವಾಗಿ ಮಾತಾಡಿ , ಹಳೆಯ ದಿನಗಳನ್ನು ನೆನೆದು ಮನಸಾರೆ ನಗೋಣ ಅಂತ ಬಂದ ನನಗೆ ಪೆಚ್ಚಾದದು ಸುಮಿಗೂ ತಿಳಿಯಿತೇನೋ. ಅವಳು ಅದನ್ನು ತೋರಿಸಲಿಲ್ಲ.

ನೂರಾರು ವರ್ಷಗಳ ತಮ್ಮ ಸಾಮಾಜಿಕ ದಿನಚರಿಯಲ್ಲಿ ಸಹಜವಾಗಿ ಮುಳುಗಿರುವ ಪಾಶ್ಚಿಮಾತ್ಯರು…ಅವರ ಅಂಧ ಅನುಕರಣೆಯಲ್ಲಿ ಅಂತಹಃಕರಣ ಕಳೆದುಕೊಳ್ಳುತ್ತಿರುವ ಭಾರತೀಯ ಸಮಾಜಕ್ಕೆ ಏನಾಗಿದೆ…??ಪ್ರತಿ ಆಂಗ್ಲನಲ್ಲಿ ತಾನು ಆಂಗ್ಲನೆಂದು ಇರುವ ಹೆಮ್ಮೆ,ಭಾರತೀಯನಲ್ಲಿ ಆಳವಾಗಿ ಬೇರು ಬಿಟ್ಟಿರುವ ಕೀಳಿರಿಮೆಗಳ ವ್ಯತ್ಯಾಸ ಡಣಾಡಾಳಾಗಿ ಕಾಣುತ್ತದೆ.ಇದನ್ನೇ ಬಳಸಿಕೊಂಡು ಕಳೆದ ಹತ್ತು ವರ್ಷಗಳಲ್ಲಿ ಕುಸಿಯುತ್ತಿರುವ ತಮ್ಮ ದೇಶದ ಮಾರುಕಟ್ಟೆಗಳನ್ನು ಮತ್ತೆ ಬೆಳೆಸಿಕೊಳ್ಳಲು ಭಾರತದಂತಹ ದೇಶಗಳಿಗೆ ಬರುತ್ತಿರುವ ಮಾರುಕಟ್ಟೆಯ ಸರದಾರರು ಭಾರತೀಯರಿಗೆ ಮೂಗುದಾರ ಹಾಕಿ ಗುಲಾಮಗಿರಿಗೆ ತೊಡಗಿಸಿಕೊಳ್ಳುತ್ತಿದ್ದಾರೆ. ಕತ್ತೆಗಳಿಗೆ ಕೋಲಿದ್ದವನೇ ಮಾಲೀಕ….

modified eyes

ಮನಸ್ಸು ಹಿಂದಕ್ಕೆ ಓಡಿತು….

ಗಾಂಧೀಜಿಯ ಆತ್ಮ ಚರಿತ್ರೆ ನನ್ನ ಮೆಲೆ ಗಾಢ ಪರಿಣಾಮ ಬೀರಿತ್ತು. ಇಂಗ್ಲೆಂಡಿಗೆ ಹೊರಟಾಗ  ಯಾವ ಪರಿಸ್ಥಿ ತಿಯಲ್ಲೂ ಬದಲಾಗದ ಹಠಮಾರಿ ಸ್ವಭಾವದ ಗಾಂಧಿಗೆ ಇಂಗ್ಲೆಂಡಿನಲ್ಲಿ ಓದಿನ ಬಳಿಕವೇ ಭಾರತದ ಸ್ವತಂತ್ರದ ಅರಿವು ಮೂಡಿತೆಂಬ ಸಮಜಾಯಷಿ ಹೇಳಿಕೊಂಡಿದ್ದೆ.ತರಭೇತಿಯ ನೆಪದಲ್ಲಿ ಹೊರಟು, ಹೊಟ್ಟೆ ಪಾಡಿನ ಹೆಸರಲ್ಲಿ ಇನ್ನೂ ಪರದೇಶದಲ್ಲೇ ಇದ್ದೇನೆ.ಯಾವ ಗಿಂಬಳವೂ ಇಲ್ಲದೆ, ತೆರಿಗೆ ವಂಚಿಸದೆ ಕೂಡಿಟ್ಟ ಪ್ರತಿ ಪೌಂಡನ್ನು ಭಾರತದ ರೂಪಾಯಿಯಾಗಿಸಿ ಭಾರತದಲ್ಲಿ ನೆಲವನ್ನು ಕೊಂಡು ಭಾರತೀಯನಾಗಿ ಹಿಂತಿರುಗುವ ಕನಸನ್ನು ಮುಂದುವರಿಸಿದ್ದೇನೆ.ಆದರೆ ಕಾರಣವೇ ಇಲ್ಲದೆ ಸಾವಿರಾರು ಪಟ್ಟು ಜಿಗಿದ ಭಾರತದ ಕರಾಳ ಮಾರುಕಟ್ಟೆಗೆ ನನ್ನ ದುಡಿಮೆ ಸಾಕಾಗಲಿಲ್ಲ. ತೆಗೆದ ಸಾಲಗಳಿಗೆ ಈಗಲೂ ಹಣ  ತುಂಬುತ್ತಿದ್ದೇನೆ…

ಮನೆಯಿಂದ ನಡೆದು ಹತ್ತಿರದಲ್ಲಿರುವ ಸ್ಟೇಡಿಯಂ ತಲುಪಿದೆ. ಜನಜಂಗುಳಿ ಸೇರಿತ್ತು. ಹಲವಾರು ಪೋಷಕ ವೃಂದದ ಜೊತೆ ಇದ್ದವರೆಲ್ಲ ಬರೀ ಪಡ್ಡೆ ಹುಡುಗರು. ಸ್ವಯಂ ಸೇವಕರು, ನಿವೃತ್ತರಾದ ಶಿಕ್ಷಕರು, ಬಿಳೀ ಟೋಪಿ ತೊಟ್ಟ ದೇಶ ಭಕ್ತರು ನಿಧಾನವಾಗಿ ಇಲ್ಲಿಗೆ ಬರುವುದನ್ನು ನಿಲ್ಲಿಸಿದ್ದಾರೇನೋ.

“ಎಕ್, ದೋ, ತೀನ್..ಚಾ..ರ್…”

ರಂಗು ರಂಗಿನ ಬಣ್ಣದ ಬಟ್ಟೆ ತೊಟ್ಟ ವಿವಿಧ ಶಾಲೆಗಳ ಮಕ್ಕಳು ಸ್ವತಂತ್ರ ದಿನಾಚರಣೆಯ ಕವಾಯತಿನಲ್ಲಿ ತೊಡಗಿಕೊಂಡಿದ್ದರು. ಈ ದಿನ ನಾನು ಪ್ರತಿ ವರ್ಷದಂತೆ ಸ್ಟೇಡಿಯಂನಲ್ಲಿ ತಪ್ಪದೆ ಹಾಜರ್. ಒಂದೊಮ್ಮೆ ನಾನು ಈ ಮಕ್ಕಳಲ್ಲಿ ಒಬ್ಬನಾಗಿದ್ದೆ. ಹೀಗೇ ಕವಾಯತು ಮಾಡಿ, ನಮ್ಮ ಭಾರತದ ಬಗ್ಗೆ ಹೆಮ್ಮೆಯಿಂದ ಬೀಗಿದ್ದೆ. “ನಿಮಗೇಕೆ ಕೊಡಬೇಕು ಕಪ್ಪ…., ನೀವೇನು ಇಷ್ಟರಾ..ಒಡೆಯರಾ…” – ಎಂದು ಕೇಳುವ ಕಿತ್ತೂರು ರಾಣಿಯ ಪಾಠವನ್ನು ಓದುವಾಗ ಕಣ್ಣೀರು ಹಾಕಿದ್ದೆ. ಈಗ ಪ್ರತಿ ವರ್ಷಕ್ಕೊಮ್ಮೆ ಇಂಗ್ಲೆಂಡಿನ ಜನತೆಗೆ ಸೇವೆ ಸಲ್ಲಿಸಿ ಗಳಿಸಿದ ದುಡ್ಡಿನಲ್ಲಿ ಸ್ವತಂತ್ರ ಭಾರತದ ಮಾರುಕಟ್ಟೆಯಲ್ಲಿ ಸಿಗದ ಸೌಲಭ್ಯಗಳಿಗಾಗಿ, ನಿಯತ್ತಿಗಾಗಿ, ಸಮಾನತೆಗಾಗಿ ತಪ್ಪದೆ ಕಪ್ಪವನ್ನು(ತೆರಿಗೆ) ಕಟ್ಟಿ ಧನ್ಯನಾಗುತ್ತಿದ್ದೇನೆ! ಇದು ನಾನು  ಭಾರತದ ಪಟ್ಟಭದ್ರ ಹಿತಾಸಕ್ತಿಗಳಿಂದ ಗಳಿಸಿದ ಮುಕ್ತಿಗಾಗಿಯೂ ಇರಬಹುದು!

ಇಲ್ಲಿ ಎಲ್ಲರೂ  ಆಶೆಗಳನ್ನು ಕೈಬಿಟ್ಟಿದ್ದಾರೆ. ಮಾಧ್ಯಮಗಳು ರಾಜಕೀಯದ ಉಧ್ಯಮಿಗಳ ಕೈ ವಶವಾಗಿದೆ! ನ್ಯಾಯಾಲಯಗಳು ಕಣ್ಣಿಲ್ಲದೆ ಕೆಲಸ ಮಾಡುತ್ತಿವೆ.ಪೋಲಿಸರು ತಮಗೇ ದಕ್ಕಿರದ ನ್ಯಾಯ, ಸ್ವಾತಂತ್ರಗಳಿಗೆ ಹೋರಾಡುವಲ್ಲಿ ಕೂಡ ಹತಾಶರಾಗಿ ರಾಜೀನಾಮೆ ಕೊಡುತ್ತಿದ್ದಾರೆ.ಶಿಕ್ಷಣ ಖರೀದಿಗಿದೆ.ಹೊಸದಾಗಿ ಹರಿದಾಡುತ್ತಿರುವ ವಾಣಿಜ್ಯ ಬೆಳವಣಿಗೆಗೆ ಪ್ರತಿಯಾಗಿ ಬೆಳೆಯದ ಸೌಲಭ್ಯಗಳಿಂದ ಇಡೀ ವ್ಯವಸ್ಥೆ ನಲುಗಿದೆ. ಇವರ ಮಧ್ಯೆ ದೇವರ ಹೆಸರಿನ ದೊಡ್ಡ ದಂಧೆ ನಡೆದಿದೆ. ಪ್ರಜೆಗಳಿಗೆ ದ್ವನಿ ನೀಡಿಲ್ಲದ ಪ್ರಪಂಚದ ಅತಿದೊಡ್ಡ ಪ್ರಜಸತ್ತಾತ್ಮಕ ದೇಶ ನಮ್ಮನ್ನು  ಕುಬ್ಜರನ್ನಾಗಿಸುತ್ತದೆ. ಹಗಲಿರುಳು ಇಲ್ಲಿ  ಜೀವಗಳು ಮಿಡಿಯುತ್ತವೆ,ದುಡಿಯುತ್ತವೆ,ನಲುಗುತ್ತವೆ,ಸಾಯುತ್ತವೆ.ಅನಿವಾಸಿಯಾಗಿ ಅತಂತ್ರತೆಯನ್ನು ಒಪ್ಪಿಕೊಳ್ಳಲು ಸ್ವತಂತ್ರ ಭಾರತ ನಮ್ಮನ್ನು ಪ್ರೇರೇಪಿಸುತ್ತಿದೆ.ಅನಿವಾಸಿಯನ್ನು ಅನಿವಾಸಿಯಾಗಿಯೇ ಉಳಿಸಿಬಿಡುತ್ತದೆ!!!

ನಾನೊಬ್ಬ ಅತಿ ಸಂವೇದನಾಶೀಲ.ಭಾರತ ಬಿಟ್ಟು ಹೋದ ದಿನವೇ ನನ್ನ ಮನಸ್ಸಿನ ಗಡಿಯಾರ ನಿಂತುಹೋಗಿದೆ. ಅದಕ್ಕೇ ಈ ತುಮುಲ. ಕೆಲವೊಮ್ಮೆ ಈ ಯೋಚನಾಲಹರಿಗಳನ್ನು ತಡೆಯುವುದು ಕಷ್ಟವಾಗುತ್ತದೆ. ಪ್ರತಿ ದಿನ ಭಾರತದ ರಾಜಕೀಯ ವಿಚಾರಗಳನ್ನು ಹಿಂದಿ ಚಾನಲ್ಲುಗಳಲ್ಲಿ ತಪ್ಪದೆ ನೋಡಿ ನನ್ನ ತಿಳುವಳಿಕೆಯನ್ನು ವಿಸ್ತರಿಸಿಕೊಳ್ಳುತ್ತಲೇ ಇರುತ್ತೇನೆ. ಎಲ್ಲಿಯೋ ಒಂದೆಡೆ ನನ್ನ ಆಶಾವಾದ ಇನ್ನೂ ಜೀವಂತವಾಗಿರುವ ಕಾರಣ, ಕಣ್ಣುಗಳು ಬದಲಾವಣೆಗಳಿಗಾಗಿ ಹುಡುಕುತ್ತಿರುತ್ತವೆ.

ಇಲ್ಲಿಯೇ ಇದ್ದಿದ್ದರೆ,ಒಂದೊಂದಾಗಿ ನನ್ನ ಸಂವೇದನೆಯ ಅಲೆಗಳು ಅಳಿಸಿಹೋಗಿರುತ್ತಿದ್ದವು.ಕರಾಳ ಸಮಾಜ ನಿಧಾನವಾಗಿ ನನ್ನನ್ನು ತನ್ನ ಕಾಲ ಬುಡಕ್ಕೆ ಬಗ್ಗಿಸಿಕೊಳ್ಳುತಿತ್ತು.  ಭಾರತದ ಹೊರಗೆ ಸುಧಾರಿಸಿದ ಮುಂದುವರೆದ ಇತರೆ ಸಮಾಜ,ವ್ಯವಸ್ಥೆ ಇರುವುದೇ ನನ್ನ ಅನುಭವಕ್ಕೆ ಬರುತ್ತಿರಲಿಲ್ಲ. ಮನಸ್ಸು ಕೂಡ ಮಣಿದಿರುತಿತ್ತು. ನನ್ನ ಇತರೆ ವಿದೇಶಿ ಗೆಳೆಯರ ಮನಸ್ಸಿದ್ದಿದ್ದರೆ, ದ್ವಂದ್ವಗಳೇ ಇಲ್ಲದೆ ನೆಮ್ಮದಿಯಾಗಿ ಕಂದು ವರ್ಣದ ಪ್ರಜೆಯಾಗಿ ತಲೆಬಾಗುತ್ತಿದ್ದೆ.

“ಟ್ರ್ ಣ್..ಣ್……ಣ್… “ನನ್ನ ಮೊಬೈಲ್ ಹೊಡೆದುಕೊಂಡಿತು.ವಿಚಾರ ಸರಣಿ ಕಡಿಯಿತು.

“ರೀ… ಶ್ಯಾಂ ಗೆ ಜ್ವರ…. ಕೈ ಕಾಲು ನೋವು ಅಂತ ಬೇರೆ ಹೇಳ್ತಿದ್ದಾನೆ. ಡಾಕ್ಟರ ಹತ್ರ ಕರಕೊಂಡು ಹೋಗ್ತಿದ್ದೀನೆ. ಅರ್ಧ ಗಂಟೆ ಬಿಟ್ಟು ಫೋನ್ ಮಾಡಿ.”

“ಹೌದಾ? ಯಾಕೆ ಅಷ್ಟಕ್ಕೇ ಡಾಕ್ಟರ್? ಒಂದೆರಡು ದಿನ ಜ್ವರದ ಮಾತ್ರೆ ಕೊಡು…”

“ಇಲ್ಲರೀ,ಜೊತೆಗೆ  ಮಂಡಿ,  ಕೀಲುಗಳು ನೋವು ಅಂತಿದ್ದಾನೆ. ಈ ಚಿಕನ್ ಗುನ್ಯ, ಡೆಂಗ್ಯೂ… ಗಳೆಲ್ಲ ಇದಾವಲ್ಲ. ಮೊನ್ನೆ ಸೊಳ್ಳೆ ಕಚ್ಚಿದ್ದು  ದಪ್ಪಗೆ ಆಗಿತ್ತು, ಇನ್ನೂ ಹೋಗಿಲ್ಲ. ಜೀಕ ವೈರಸ್ ಕೂಡ ಬಂದಿತೆ ಅಂತ ಓದಿಲ್ವ, ಇಲ್ಲಿ ಡಾಕ್ಟರ್ರುಗಳನ್ನು ಬೇರೆ ನಂಬಂಗಿಲ್ಲ… ಅರ್ಧ ಗಂಟೆ ಬಿಟ್ಟು ….” ಜನ ಜಂಗುಳಿಯ, ವಾಹನಗಳ ಅಪಾರ ಶಬ್ದ,ಹಾರನ್ನುಗಳ ಭರಾಟೆಯಲ್ಲಿ ಮಿಕ್ಕದ್ದು ಕೇಳಲಿಲ್ಲ. ಎದ್ದು ಹೊರಟೆ.

ಆ  ಕ್ಷಣ ನನ್ನ ರಕ್ತ ಮತ್ತೆ ಕುದೀತು. ಇಷ್ಟೊಂದು ಜನ. ಏನೆಲ್ಲ ಪ್ರತಿಭೆ. ನಮ್ಮ ದೇಶದ ಎಲ್ಲರಿಗೂ ಪಾಶ್ಚಿಮಾತ್ಯರಿಗೆ ಸಮಾನವಾಗಿ ಬದುಕುವ  ಸೌಲಭ್ಯಗಳು, ಅವಕಾಶ ಸಿಗಬೇಕು. ಇವರಲ್ಲಿ  ಮುಂದುವರಿದ ದೇಶದ ಜನರಲ್ಲಿ ಇರುವ ಎಲ್ಲವೂ ಇದೆ. ದುಡಿಯುವ ಬಲ, ಪ್ರತಿಭೆ, ಸಂಖ್ಯೆ ಜೊತೆಗೆ ಸಾತ್ವಿಕತೆ ಕೂಡ. ವ್ಯವಸ್ಠೆ ಬದಲಾಗಿ, ಆಡಳಿತ ಹಿಡಿದವರು ಬದಲಾದರೆ

ಮಾಡಲಾರದ್ದೇನಿದೆ? ಈ ಭ್ರಷ್ಟ ರಾಜಕಾರಣಿಗಳೆಲ್ಲ ವಿದೇಶಕ್ಕೆ ಚಿಕಿತ್ಸೆಗೆ ಓಡುವಾಗ ನಮ್ಮ ಜನರ ಬಗ್ಗೆ ಯೋಚಿಸ್ತಾರಾ? ದೇಶದಲ್ಲಿರೋ ಕಪ್ಪು ಹಣ ಹೊರತೆಗೆದ್ರೆ, ಸರಿಯಾಗಿ ತೆರಿಗೆ ವಸೂಲಿ ಮಾಡಿದ್ರೆ, ಸ್ವತ್ರಂತ್ರ ಬಂದ ೭೦ ವರ್ಷಗಳಲ್ಲಾದರೂ ಭಾರತ ಸುಧಾರಿಸೀತು. ಇದು ಇಲ್ಲಿನ ಎಲ್ರಿಗೂ ಗೊತ್ತು. ಆದರೆ,ಎಲ್ಲರೂ ಇನ್ನೊಬ್ಬ ಗಾಂಧಿಗೆ ಕಾಯುತ್ತಿದ್ದಾರೆ ಅನ್ನಿಸಿತು!

ಮನೆಯತ್ತ ದಾಪು ಗಾಲು ಹಾಕಿದೆ. ಡಾಂಬರು ಇಲ್ಲದ ರಸ್ತೆಗಳು ಬದಲಾಗುವುದು ಯಾವಾಗಲೋ? ಭಾರತ ಮುಂದುವರೀತಾ ಇದೆ ಅಂತ ಕೇಳಿದಾಗಲೆಲ್ಲ ಮನಸ್ಸು ನಲಿಯುತ್ತದೆ. ಹೆಮ್ಮೆಯಿಂದ ಬೀಗುತ್ತದೆ. ಭಾರತಕ್ಕೆ ಬಂದಾಗಲೆಲ್ಲ ಇಲ್ಲಿ ಹೆಚ್ಚಾದ, ಗಗನಕ್ಕೆರಿರುವ ಬೆಲೆಗಳನ್ನು ನೋಡಿ ಆಶ್ಚರ್ಯವಾಗುತ್ತದೆ, ಅಂತೆಯೇ ಜನರ ಬದುಕನ್ನು ಬದಲಿಸಬಲ್ಲ ಶೌಚಾಲಯಗಳು, ಜೀವಗಳನ್ನು ಉಳಿಸಬಲ್ಲ ರಸ್ತೆಗಳನ್ನು ಕಾಣದೆ ಮನಸ್ಸು ನಿರಾಶೆಗೊಳ್ಳುತ್ತದೆ.  ಕಾಲುದಾರಿಗಳು ಖಂಡಿತಾ ಇಲ್ಲ. ಮೈಮೇಲೆ ಬರುವ ವಾಹನಗಳನ್ನು ನೋಡಬೇಕಾ ಅಥವಾ ರಸ್ತೆಯ ಮಧ್ಯೆ ಇರುವ ಗುಂಡಿಗಳನ್ನು ನೋಡಬೇಕಾ  ತಿಳಿಯದೆ ನಮ್ಮ ಬದಲಾಗದ ವ್ಯವಸ್ಥೆಯನ್ನು ವಾಚಾಮ ಗೋಚರ ಜೋರಾಗಿ ಬಯ್ದೆ. ಅರೆಕ್ಷಣ    ಸಮಾಧಾನವಾಯ್ತು. ಆ ಕ್ಷಣ ವಿದೇಶವಾಸಿಯಾದರೂ ಭಾರತದ ಪ್ರತಿ ಸಾಮಾನ್ಯ ಮಧ್ಯಮ ವರ್ಗದ ಪ್ರಜೆಗಳಲ್ಲಿ ನಾನೂ ಒಂದಾಗಿದ್ದೆ! ನನಗೆ ಅಡ್ಡಲಾಗಿ ನಿಧಾನವಾಗಿ ರಸ್ತೆ ಜನರ ಜೊತೆಯೇ ದಾಟಿ ಓಡಿದ ಹೆಗ್ಗಣ ನನಗೆ ಅಸಹ್ಯ ತರಲಿಲ್ಲ!!!!

ಮನೆ ತಲುಪಿ ಮುಂದಿನ ಕೆಲಸಗಳಿಗೆ ಒಪ್ಪಿಸಿಕೊಂಡೆ.

ಶ್ಯಾಂ ಚೇತರಿಸಿಕೊಂಡ. ಹೊರಡೋ ದಿನ ಆಟವಾಡುತ್ತಲೇ ಬಂತು. ಅಮ್ಮನ ಕಣ್ಣಲ್ಲಿ ಮತ್ತೆ ನೀರು.

ನಮ್ಮ ವಿಮಾನ ಗಗನಕ್ಕೆ ತೇಲಿದಂತೆ ನನ್ನ ಮನದಲ್ಲಿ ಕೊನೆಗೆ ಉಳಿದದ್ದು ಅಮ್ಮನ ಕಣ್ಣುಗಳು ಮಾತ್ರ. ವಿಮಾನ ನಿಲ್ದಾಣಕ್ಕೆ ಬರುವ ಮುನ್ನ ನಾನು ಅಮ್ಮನಿಗೆ ಹೇಳಿದ್ದೆ…“ಅಮ್ಮ, ನೀನು ಹೇಳೋದ್ ಸರಿ, ನಾನು ಅದೇ ಹಳೇ ಬಟ್ಟೆ ಹಾಕಿದ್ರೆ ಇಲ್ಲಿನ ಜನ ಖಂಡಿತ ನಗ್ತಾರೆ. ಬೇರೆ ಬಟ್ಟೆ ಹೊಲಿಯಕ್ಕೆ  ಆಂಟನಿಯತ್ರ ಅಳತೆ, ದುಡ್ಡು ಕೊಟ್ಟು ಬಂದಿದೀನಿ. ಮನೇಗೆ ಬಟ್ಟೆ ತಂಡಿಟ್ಟಿರು. ಮುಂದಿನ ವರ್ಷ ನಾನು ಬಂದಾಗ ಹಾಕ್ಕೊಳಕ್ಕೆ ಆಗುತ್ತೆ…. ಹಳೇವನ್ನು ಯಾರಾದ್ರು ೧೮-೧೯ ವರ್ಷದವರು ಗೊತ್ತಿದ್ರೆ ಕೊಡು…”

ಅಮ್ಮನ ಕಣ್ಣಲ್ಲಿ ಅಚ್ಚರಿ ಕಂಡರೂ, ಮಗ ತನ್ನ ಮಾತನ್ನು ಕೊನೆಗೂ ಕೇಳಿದ ತೃಪ್ತಿಯಿತ್ತು. ಅಮ್ಮನ ಅಪಾರ ಸಮಾಧಾನ,  ಅಲ್ಪ ತೃಪ್ತಿಗಳಲ್ಲಿ  ಭಾರತವೇ ಕಂಡಿತ್ತು!!!

— ಡಾ.ಪ್ರೇಮಲತ ಬಿ.

( ಸಿಂಗಾಪೂರ್  ಕಳೆದ ವರ್ಷ ನಡೆಸಿದ ಸಿಂಚನ  ಸಾಹಿತ್ಯ ಸ್ಪರ್ಧೆಯಲ್ಲಿಜ್ ಈ ಕಥೆಗೆ ಪ್ರಥಮ ಬಹುಮಾನ ದೊರಕಿದೆ)

Advertisements

‘ಮಜಾ ವಿತ್ ಸೃಜನ್’ – ಕಿರು ಹಾಸ್ಯನಾಟಕ

ಕನ್ನಡ ಬಳಗದಲ್ಲಿ  ‘ಮಜಾ ವಿತ್  ಸೃಜನ್’ ಕಿರು ಹಾಸ್ಯನಾಟಕ

ರಚನೆ: ಡಾ. ಜಿ.ಎಸ್. ಶಿವ ಪ್ರಸಾದ್

shiva-prasad-with-srujan-lokesh
ಸೃಜನ್ ಜೊತೆಗೆ ಶಿವಪ್ರಸಾದ್

ಹಿನ್ನೆಲೆ ಕನ್ನಡ ಕಿರು ತೆರೆಯ ಕಾಮಿಡಿ ಶೋ ಮಜಾ ಟಾಕೀಸ್ನ ಹೀರೋ/ಸ್ಟಾರ್ ಸೃಜನ್ ಲೋಕೇಶ್ ಅವರು ಕನ್ನಡ ಬಳಗ ಯು.ಕೆ.ಯ ಆಹ್ವಾನದ ಮೇರೆಗೆ ಇಂಗ್ಲೆಂಡಿಗೆ ಬಂದಿದ್ದಾರೆ. ಕನ್ನಡ ಬಳಗ ಏರ್ಪಡಿಸಿದ್ದ ದೀಪಾವಳಿ ಸಂಭ್ರಮದಲ್ಲಿ ಅವರು ವೇದಿಕೆಯ ಮೇಲೆ ಬಂದು, ಇನ್ನೊಬ್ಬ ಪಾತ್ರಧಾರಿಯೊಂದಿಗೆ ಜೊತೆಗೂಡಿ ನಟಿಸಿ ಈ ಕಿರು ನಾಟಕವನ್ನು ಪ್ರದರ್ಶಿಸಲು ಒಪ್ಪಿರುತ್ತಾರೆ. ಆ ಪಾತ್ರಧಾರಿ  ಕನ್ನಡ ಬಳಗದ ಸದಸ್ಯ. 

ದೃಶ್ಯ –  ಒಂದು

ಪಾತ್ರಧಾರಿ ಹಾಡುತ್ತಾ ಪ್ರವೇಶ ಮಾಡುತ್ತಾನೆ: ‘ಬೆಳ್ಳಿ ಮೂಡಿತೋ ಕೋಳಿ ಕೂಗಿತೋ’… ‘ಬೆಳ್ಳಿ ಮೂಡಿತೋ ಕೋಳಿ ಕೂಗಿತೋ’…

ಸೃಜನ್: ಅಲ್ಲ ನೋಡಿ, ನಾನು ಮೂರ್ ದಿವಸದಿಂದ ಇಂಗ್ಲೆಂಡ್ನಲ್ಲಿ ಇದ್ದೀನಿ. ಒಂದು ದಿವಸಾನೂ ಕೋಳಿ ಕೂಗಿದ್ದು ಕೇಳಿಸಲಿಲ್ಲ!

ಪಾತ್ರಧಾರಿ: ಸೃಜನ್, ಅದು ಹೇಗೆ ಸಾಧ್ಯ? ಇಲ್ಲಿ ಜನ ಇರೋ ಕೋಳಿಗಳನ್ನ ಹಿಡ್ಕಂಡು ತಿಂದ್ರೆ, ಕೂಗಕ್ಕೆ ಕೋಳಿ ಇದ್ರೆ ತಾನೇ!

ಒಂದು ವೇಳೆ ಕೆಲವು ಕೋಳಿ ಇನ್ನೂ ಉಳಿದಿದ್ರೆ ಅವು ಚಳಿಗೆ ಬೆಚ್ಚಗೆ ಮಲ್ಗಿರ್ತಾವೆ!

ಇನ್ನೂ ಕೆಲವು ಚುರುಕಾದ ಮರಿ ಕೂಗಿದರೂ ನಿಮ್ಗೆ ಕೇಳಿಸಿಲ್ಲ ಅಂತ ಅನಿಸುತ್ತೆ?

ಸೃಜನ್: ಹೇಯ್, ನಾನೇನು ಕೆಪ್ಪ ಅಲ್ಲ, ದೊಡ್ಡ ದೊಡ್ಡ ಶೋ ನಡುಸ್ಕೊಡ್ತೀನಿ?!

ಪಾತ್ರಧಾರಿ: ಸೃಜನ್ ನಾನು ನಿಮ್ಮನ್ನ ಕೆಪ್ಪ ಅಂದಿಲ್ಲ ರೀ, ನೋಡಿ, ನೀವು ಅಲ್ಲಿಂದ ಬಂದಿದ್ದೀರಿ, ಸ್ವಲ್ಪ ಜೆಟ್ ಲ್ಯಾಗ್ ಇರಬಹದು ಅಷ್ಟೆ … ಹಾಗೆ… ಇಲ್ಲಿ ಮನೆಗಳ ಕಿಟಕಿಗೆ ಡಬಲ್ ಗ್ಲೇಝಿನ್ಗ್ ಹೊಡೆದಿದ್ದಾರೆ. ಹೊರಗೇನಾಗ್ತಿದ್ರು ಒಳಗೆ ಕೇಳಿಸೋಲ್ಲ, ಒಳಗೆ ಕಳ್ಳ ಬಂದು ನಾವು ಬೊಬ್ಬೆ ಹೊಡಕೊಂಡ್ರು ಹೊರಗೆ ಯಾರಿಗೂ ಕೇಳಿಸೋಲ್ಲ!!

ಸೃಜನ್: ಇದ್ಯಂಥ ಲೈಫ್ ರೀ ನಿಮ್ಮದು!! ಬೆಳ್ಳಿ ಮೂಡಿತೋ ಅಂತ ಹಾಡ್ತಾ ಇದ್ದೀರಾ? ಮೂರ್ ದಿವಸದಲ್ಲಿ ನಾನು ಬೆಳ್ಳಿ ಮೂಡಿದ್ದನ್ನು ನೋಡಲೇ ಇಲ್ಲವಲ್ಲ!

ಪಾತ್ರಧಾರಿ: ಸೃಜನ್, ಇದು ಇಂಗ್ಲೆಂಡ್ ರೀ …‘ಸೂರ್ಯ ಮುಳುಗದ ಸಾಮ್ರಾಜ್ಯ’ ಇಲ್ಲಿ ಸೂರ್ಯ ಮುಳುಗಿದರೆ ತಾನೇ ಹುಟ್ಟುಕ್ಕೆ!

ಸೃಜನ್: ಅದೆಲ್ಲ ಹಳೆ ಕಂತೆ ಬಿಟ್ಟಹಾಕ್ರಿ. ನಿಮ್ಮ ಇಂಗ್ಲಂಡ್ Brexit ಆದ್ಮೇಲೆ ಅದ್ಯಾವ ‘ಸೂರ್ಯ ಮುಳುಗದ ಸಾಮ್ರಾಜ್ಯ’ ಅಂತ ಎಲ್ಲರಿಗು ಗೊತ್ತು ಬಿಡ್ರಿ ! ಇಮಿಗ್ರೇಷನ್ ಇಮಿಗ್ರೇಷನ್ ಅಂತ ಎಲ್ಲ ಬಾಗಿಲು ಮುಚ್ಚಿ ಕುತ್ಕೊಂಡ್ರೆ ದೇಶ ಉದ್ದಾರ ಆಗುತ್ತಾ ಹೇಳಿ? ಅದೇನೋ ಗಾದೆ ಇದೆಯಲ್ಲ … ‘ಮಾಡಿದ್ದು ಉಣ್ಣೋ ಮಹರಾಯ’ ಅಂತ…

ಇಂಥ lousy weather ಇದ್ದರೆ ಸೂರ್ಯ ಎಲ್ಲಿ ಕಾಣಿಸ್ತಾನೆ ಹೇಳಿ. ಅಂದ ಹಾಗೆ ಇಲ್ಲಿ ಜನ ಮೂರೂ ಮೂರೂ ದಿವಸಕ್ಕು ಅದೇನೋ Holiday ಅಂತ ಬಿಸಿಲಿರೋ ಜಾಗಕ್ಕೆ ಓಡಿಹೋಗಿ ಬಟ್ಟೆ ಬಿಚ್ಕೊಂಡು ಪಾಪ ಬಿಸಿಲು ಕಾಯಿಸ್ತಾರೆ ಅಂತ ಕೇಳಿದ್ದೆ. ಅಂದ ಹಾಗೆ ನಮ್ಮ ಗೋವ ಬೀಚ್ಗೆ ವಿಮಾನದ ತುಂಬಾ ಬಿಳಿ ಜನ ಸೂರ್ಯನ್ನ ಕಾಣಕ್ಕೆ ಬರ್ತಾರೆ!!

ಇದ್ಯಂಥ ಲೈಫ್ ರೀ ನಿಮ್ದು!

ಪಾತ್ರಧಾರಿ: ಸೃಜನ್, ಸರಿ ನಾನು ಹೊರ್ಡ್ತೀನಿ, Thank you very much.

ಸೃಜನ್: ಅಲ್ಲಾರಿ, ನಿಮ್ಮ ಇಂಗ್ಲಂಡ್ ನಲ್ಲಿ ಜನ ಯಾಕೆ ಎಲ್ಲದುಕ್ಕೂ ಥ್ಯಾಂಕ್ಸ್ ಹೇಳ್ತಾರೆ? ಕೂತರೆ ಥ್ಯಾಂಕ್ಸ್, ನಿಂತರೆ ಥ್ಯಾಂಕ್ಸ್, ಕೆಮ್ಮಿದರೆ sorry, ತೇಗಿದರೆ pardon me! ಇವರೆಲ್ಲ ನಮ್ಮ ಮದುವೆ ಮನೆಗೆ ಅಥವಾ ಸಮಾರಾಧನೆಗೆ ಬಂದು ನೋಡಬೇಕು. ಜನ ಹೇಗೆ ಸಂತೃಪ್ತಿಯಾಗೆ ತರಾವರಿ ತೇಗತಾರೆ ಅಂತ!! ನಿಮ್ಮ ಥರ ಸಾವಿರಾರು ಸಾರಿ Thank you, pardon me ಅಂತಾ ಇದ್ರೆ ನಮ್ಮ ಬಾಯಿ ಬಿದ್ದು ಹೊಗುತ್ತೆ!

ಪಾತ್ರಧಾರಿ: ಸೃಜನ್ ಅವರೇ, ಇಲ್ಲಿ ಜನ ಬರಿ ಮಾತಲ್ಲಿ thanks ಅಂತ ಹೇಳ್ತಾರೆ. ನೀವು ಯಾವತ್ತಾದ್ರು ಜಪಾನ್ ದೇಶಕ್ಕೆ ಹೋಗಿದ್ದಿರ??

ಸೃಜನ್: ಇಲ್ವಲ್ಲ, ಅಲ್ಲಿ ಏನು ವಿಶೇಷ?

ಪಾತ್ರಧಾರಿ: ಅಲ್ಲಿ ಜನ Hello ಮತ್ತೆ Thanks ಹೇಳೋದು ನೋಡಿದ್ರ?? ಪ್ರತಿ ಸಾರಿ ಬಗ್ಗಿ ಬಗ್ಗಿ ಬೆನ್ನು ಮುರ್ಕೊಬೇಕಾಗುತ್ತೆ! England ನಲ್ಲಿ ಬಾಯಿಗೆ ಸ್ವಲ್ಪ ಕೆಲಸ ಅಷ್ಟೆ. ಅಂದ ಹಾಗೆ ಇಲ್ಲಿ ಇರೋ ಮೊಳೆ ಡಾಕ್ಟರ್ಗಳು ಅವ್ರಿಗೆನಾದ್ರು ಜಪಾನೀಸ್ ಭಾಷೆ ಬಂದಿದ್ರೆ … ಅಲ್ಲಿ ಹೋಗಿ ಪ್ರೈವೇಟ್ ಪ್ರಾಕ್ಟೀಸ್ ಮಾಡೇ ಬಿಡ್ತಾಯಿದ್ರು.

ಪಾತ್ರಧಾರಿ: ಅಂದ ಹಾಗೆ Orthpoedic ಡಾಕ್ಟರ್ ಗಳ ಬಗ್ಗೆ ಒಂದು ಜೋಕು ಜ್ಞಾಪಕ್ಕೆ ಬಂತು…

ಸೃಜನ್: ಹೇಳಿ ನೋಡೋಣ…

ಪಾತ್ರಧಾರಿ: ನಮ್ಮ ಪಕ್ಕದ ಮನೆ ಪುಟ್ಟ ಹುಡುಗಿ ಕಾಜಲ್ ಅವಳ ಪ್ರೈಮರಿ ಸ್ಕೂಲ್ನಲ್ಲಿ ಮೇಡಂ ನಿಮ್ಮಪ್ಪ ಏನು ಕೆಲಸ ಮಾಡ್ತಾರೆ ಮರಿ ಅಂತ  ಕೇಳಿದಾಗ ಅವಳು ನಮ್ಮಪ್ಪ Octopus surgeon ಅಂದಳಂತೆ. ಮೇಡಂ ಗೆ ತಲೆಬುಡ ಏನು ತಿಳಿಲಿಲ್ಲ. ಅವತ್ತು ಸಂಜೆ ಕಾಜಲ್ ಅಪ್ಪ ಗಿರೀಶ್ ಸ್ಕೂಲಿಗೆ ಬಂದಾಗ ಅಪ್ಪನನ್ನೇ ಮೇಡಂ  ನೇರವಾಗಿ ಕೇಳಿದರು. ಅಪ್ಪ ತಾನು Orthopedic surgeon ಅಂದಾಗಾ ಮೇಡಂ ಗೆ ಸಕತ್ ನಗುಬಂತು, ಅಪ್ಪ ಮತ್ತು ಕಾಜಲ್ ಕೂಡ ಬಿದ್ದು ಬಿದ್ದು ನಕ್ಕಿದ್ರು.

ಎಲ್ಲ Orthopedic surgeonಗಳು ಇದರ ಬಗ್ಗೆ ಯೋಚಿಸಿರಬೇಕು. ಎಲ್ಲ ಮನುಷ್ಯರಿಗೂ Octopus ತರಹ ಎಂಟು ಕೈ ಕಾಲುಗಳಿದ್ದರೆ ತಮ್ಮ ಪ್ರೈವೇಟ್ ಪ್ರಾಕ್ಟೀಸ್ ಇನ್ನು ಹತ್ತು ಪಟ್ಟು ಹೆಚ್ಚಾಗಿರ್ತಿತ್ತು ಅಂತ!!

ಪಾತ್ರಧಾರಿ: ಸೃಜನ್ ಅವರೇ, ನಿಮಗೆ ಈಗ ಒಂದು ಜೋಕ್ ಹೇಳಿಯಾಯಿತು. ಈಗ ಒಂದು ತಮಾಷೆ ಪದ್ಯ ಓದಬಹುದೇ?

ಸೃಜನ್: ಹೇಳಿ ನೋಡೋಣ.

ಪಾತ್ರಧಾರಿ: ನೀವು ಜನಪ್ರಿಯವಾದ ಡಾ.ಜಿ.ಎಸ್.ಎಸ್ ಅವರ ‘ಎದೆ ತುಂಬಿ ಹಾಡಿದೆನು’ ಕವಿತೆ ಕೇಳಿರಬಹುದು. ಇದನ್ನು ನಮ್ಮ ಬಳಗದ ದಿವಂಗತ ಡಾ.ರಾಜಾರಾಂ ಕಾವಳೆಯವರು ಬೇರೆ ರೀತಿಯಲ್ಲಿ ಬಳಸಿಕೊಂಡು ಹಾಸ್ಯ ಕವನವನ್ನು ರಚಿಸಿದ್ದಾರೆ.

ಇದನ್ನು ನೀವೇ ಯಾಕೆ ಹಾಡಬಾರದು?

ಸೃಜನ್: ಓ.ಕೆ. ಟ್ರೈ ಮಾಡ್ತೀನಿ… ಸೃಜನ್ ಹಾಡುತ್ತಾರೆ…

ಎಡೆಬಿಡದೆ ಮಾಡಿದೆನು ಅಡುಗೆ ನಾನು
ಮನಃ ತೃಪ್ತಿ ಮಾಡಿದಿರಿ ಊಟ ನೀವು.
ಪಾತ್ರಧಾರಿ: ಬರ್ತೀನಿ ಸೃಜನ್ ಅವರೇ, ನಮಸ್ಕಾರ.

srujan-cartoon-1
ಚಿತ್ರ ಕಲೆ: ಲಕ್ಷ್ಮೀ ನಾರಾಯಣ ಗುಡೂರ

*****

ದೃಶ್ಯ 2 ಮತ್ತು ದೃಶ್ಯ 3

ಹಿನ್ನೆಲೆ – ಈ ದೃಶ್ಯದಲ್ಲಿ ಪಾತ್ರಧಾರಿ ಕನ್ನಡ ಬಳಗದ ಕಿರಿಯ ಸದಸ್ಯ. ಅವನು ಇತ್ತೀಚಿನ ದಿನಗಳಲ್ಲಿ ಇಂಗ್ಲೆಂಡ್ ಗೆ ಬಂದಿರುವವರಲ್ಲಿ ಒಬ್ಬ. ಅವನಿಗೆ ಸೃಜನ್ ಜೊತೆ ಮಂಡ್ಯ ಕನ್ನಡದಲ್ಲಿ ಮಾತಾಡುವ ಖಯಾಲಿ!  

ಹಾಡುತ್ತ ಪಾತ್ರಧಾರಿಯ ಪ್ರವೇಶ, “ಗುಂಡಿನ ಮತ್ತೆ ಗಮ್ಮತ್ತು, ಅಳತೆ ಮೀರಿದರೆ ಆಪತ್ತು…”

ಸೃಜನ್: ಅಲ್ಲಾಪ್ಪ, ಇನ್ನು 3 ಘಂಟೆ! ಆಗಲೇ ಗುಂಡಿನ ಬಗ್ಗೆ ಯೋಚಿಸ್ತಾ ಇದ್ದೀಯ?!

ಪಾತ್ರಧಾರಿ: ಸೃಜನ್ ಅಣ್ಣ, ಇದು ಇಂಗ್ಲೆಂಡ್, ಇಲ್ಲಿ ಜನ ಮಧ್ಯಾನ್ಹ ರಾತ್ರಿ ಉಟಕ್ಕೆ ಬೀರ್ ವೈನು ನಾವು ನೀರ್ ಕುಡಿದಂಗೆ ಕುಡಿತಾರೆ. ಮೇಲಾಗಿ ಸ್ಕಾಚ್ ವಿಸ್ಕಿ ಕಂಡ್ ಹಿಡಿದಿದ್ದು ಪಕ್ಕದ ಸ್ಕಾಟ್ ಲ್ಯಾಂಡ್ ನಲ್ಲಿ.

ಸೃಜನ್: ಅಯ್ಯೋ ಅವ್ರ ಅರೋಗ್ಯ ಕೆಟ್ಟರೆ ಆಸ್ಪತ್ರೆಗೆ ದುಡ್ಡು ಯಾರ್ ಕಟ್ತಾರೆ? ನಾವೇನೋ ಇಂಡಿಯಾದಲ್ಲಿ ಪಾರ್ಟಿ ಗೀರ್ಟಿನಲ್ಲಿ ಸೂರ್ಯ ಕೆಳಗೊದ್ಮೇಲೆ ಕುಡಿತೀವಿ.

ಪಾತ್ರಧಾರಿ: ಅಣ್ಣಾ ಇದು ರಾಮರಾಜ್ಯ. ಇಲ್ಲಿ ಆಸ್ಪತ್ರೆ Free, ಕೆಲಸ ಇಲ್ಲ ಅಂತ ಕೈ ಎತ್ ದವ್ರಗೆ ಮನೆ ಮತ್ತೆ ಊಟ ಎಲ್ಲ free!

ಸೃಜನ್: ಎ ಹಂಗಾರೆ ನಾನು ಇಮಿಗ್ರೇಷನ್ ತಗೊಂಡ್ರೆ ಹೇಗೆ, ಪರ್ಮೆನೆಂಟ್ ಆಗಿ ಇಲ್ಲೇ ಇದ್ ಬಿಡನ ಅಂತ ಆಸೆ ಆಗ್ತಾ ಇದೆ!!

ಪಾತ್ರಧಾರಿ: ಪರ್ಪಂಚ್ ದಲ್ಲಿ ಇರೊ ಜನ ಇಂಗ್ಲಂಡ್ ನಲ್ಲಿ ಬಂದು ಸೆಟ್ಲ್ ಆಗ್ತಾರೆ ಅಂತ ಇಲ್ಲಿ ಜನ ಅದೇನೋ Brexit ಅಂತ ಬಾಗಲ್ ಮುಚ್ತಾ ಅವ್ರೆ. ನೀವೇನಾದ್ರು ಇಲ್ಲಿ ಸೆಟ್ಲ್ ಆದ್ರೆ ನಿಮ್ಮ ಕನ್ನಡ ಭಾಷೆ ಇಂಡಿಯಾದಲ್ಲಿ ಬಿಟ್ ಬನ್ನಿ.

ಇಲ್ಲಿ ಯು. ಕೆ. ಕನ್ನಡಿಗರು ಕನ್ನಡ ಮಾತನ್ನು ಮರೆತು ಎಲ್ಲ ಟಸ್ಸ್ ಪುಸ್ ಅಂತ… ಇಂಗ್ಲಿಷಲ್ಲಿ ಮಾತಾಡಿಕೊಂಡು ಮಕ್ಕಳಿಗೂ ಕನ್ನಡ ಕಲಿಸ್ತಿಲ್ಲ, ನೀವು ಅವರಿಗೆಲ್ಲ ಸ್ವಲ್ಪ ಬುದ್ಧಿವಾದ ಹೇಳಿ ಸೃಜನ್ ಅಣ್ಣ…

ಸೃಜನ್: ಹೌದ, ನಾನು ಈಗ ಕನ್ನಡದ ಬಗ್ಗೆ, ಭಾಷೇ ಅಭಿಮಾನದ ಬಗ್ಗೆ ಯು.ಕೆ ಕನ್ನಡಿಗರಿಗೆ ಭಾಷಣ ಶುರುಮಾಡಬಹುದಾ?

ಪಾತ್ರಧಾರಿ: ಅಣ್ಣ ಹಾಗ್ ಮಾಡಬೇಡಿ. ಯಾಕೆ ಅಂದ್ರೆ ಯು.ಕೆ ಕನ್ನಡಿಗರಿಗೆ ಭಾಷಣ ಅಂದ್ರೆ ಅಲರ್ಜಿ! ಭಾಷಣ ಬೇಕಾದ್ರೆ ನೀವು ಇಲ್ಲಿ ಒಂದು ಬುದ್ಧಿ ಜೀವಿಗಳ ಗುಂಪು KSSVV ಅಂತ ಐತೆ, ಅಲ್ಲಿ ಮಾಡ್ ಬಹದು. ಕನ್ನಡ ಬಳಗದಲ್ಲಿ ಭಾಷಣ ತಂದು ನಮ್ಮ ಕಾರ್ಯದರ್ಶಿ ಡಾ.ಪ್ರಸಾದ್ ಅವರು ಎಲ್ರಿಂದ ಸಾಕಷ್ಟು ಚೀಮಾರಿ ಹಾಕುಸ್ಕೊಂಡವ್ರೆ.

ಡಾ.ಪ್ರಸಾದ್ ಅವರು ಹಿಂದೆ ಭಾಷಣ ಮಾಡಿ ಮಾಡಿ… ಅವರು ಎದ್ನಿಂತ್ರೆ ಜನ ಭಾಷ್ಣ ಮಾಡಕ್ಕೆ ನಿಂತವ್ರೆ ಅಂತ ಗಾಬ್ರಿ ಬೀಳ್ತಾರೆ. ಅದ್ಕೆ ಡಾ.ಪ್ರಸಾದ್ ಅವ್ರು ಕನ್ನಡ ಬಳಗದ್ ಫಂಕ್ಷನ್ ನಲ್ಲಿ ಕುಂತೆ ಇರ್ತಾರೆ! ನೀವೇನಾದ್ರು ಈ ಜನಕ್ಕೆ ಹೇಳ್ಬೇಕ್ ಅಂದ್ರೆ ಅವರಿಗೆ ಹಾಡು ಅಥವಾ ಡ್ಯಾನ್ಸ್ ಮೂಲ್ಕ ಹೇಳಿದ್ರೆ ಮಾತ್ರ ಅರ್ಥವಾಗೋದು.

ನೀವು ಇವತ್ತಿನ ಪ್ರೊಗ್ರಾಮ್ ನೋಡಿಲ್ವಾ ಅದು ಬರಿ ಹಾಡು ಅಥ್ವಾ ಡ್ಯಾನ್ಸ್  ಅಷ್ಟೆ…

ಸೃಜನ್: ತುಂಬಾ ಒಳ್ಳೆ ಆಲೋಚನೆ, ಸರಿ ನಾನು ಹಾಡಲ್ಲಿ ಕನ್ನಡಿಗರಿಗೆ ಅಭಿಮಾನ ತುಂಬತೀನಿ… (ಕಂಠ ಸರಿ ಮಾಡಿಕೊಳ್ಳುತ್ತಾ ಹಾಡು ಶುರು ಮಾಡುತ್ತಾರೆ)

ಸೃಜನ್: ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು… (ಎಂದು ಕೆಲವು ನಿಮಿಷ ಹಾಡುತ್ತಾರೆ)

ಪಾತ್ರಧಾರಿ: ಸೃಜನ್ ಅಣ್ಣ ಒಳ್ಳೆ ಸಂದೇಶ ಬಿಡಿ, ಮತ್ತೊoದು ವಿಚಾರ…

ಸೃಜನ್: ಇನ್ನೆನಪ್ಪ?

ಪಾತ್ರಧಾರಿ: ಇತ್ತೀಚ್ಗೆ ಯು.ಕೆ ನಲ್ಲಿ ಇರೋ ಕನ್ನಡಿಗ್ರು ಹಾದಿಗೊಂದು ಬೀದಿಗೊಂದು ಕನ್ನಡ ಸಂಘ ಕಟ್ಕೊಂಡ್ ಅವ್ರೆ. ಎಲ್ಲ ಒಟ್ಟಾಗಿ ಅಂತ ರಾಮ್ ಮೂರ್ತಿ, ವಿವೇಕ್, ಮತ್ತೆ ಭಾನುಮತಿ ಅವ್ರು ಹೋದ್ಕಡೆ ಎಲ್ಲಾ ಬೇಡ್ ಕೊಂಡ್ರು. ಆದ್ರೆ ಜನ ಮುಂದಕ್ ಹೋಗಿ ಅಂತಾರೆ! ರಾಮ್ ಮೂರ್ತಿ, ವಿವೇಕ್,  ಮತ್ತೆ ಭಾನುಮತಿ ಅವ್ರು Mission Impossible ಅಂತ ತಲೆಮೇಲೆ ಕೈ ಹೊತ್ಕೊಂಡು ಕುಂತವ್ರೆ. ಸೃಜನ್ ಅಣ್ಣ ನೀವಾದ್ರೂ ವಸಿ ಯು.ಕೆ. ಕನ್ನಡಿಗ್ರ್ನ  ಒಟ್ಟಿಗೆ ಸೇರ್ಸಿ…

ಸೃಜನ್: ಇದು ಬಹಳ ಜವಾಬ್ದಾರಿ ಕೆಲಸ. ಒಂದ್ ಹಾಡಿನ ಮೂಲಕ ಪ್ರಯತ್ನ ಮಾಡ್ ಬಿಡ್ತೀನಿ (ಕಂಠ ಸರಿ ಮಾಡಿಕೊಳ್ಳುತ್ತಾ ಹಾಡು ಶುರು ಮಾಡುತ್ತಾರೆ). “ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ತಾಯ್ನಾಡ ಜಯಭೇರಿ ನೀವಾದವೆನ್ನಿ.” (ಎರಡು ನಿಮಿಷ ಹಾಡುತ್ತಾರೆ)

****

ಚಿತ್ರ ಕಲೆ: ಲಕ್ಷ್ಮೀ ನಾರಾಯಣ ಗುಡೂರ
ಚಿತ್ರ ಕಲೆ: ಲಕ್ಷ್ಮೀ ನಾರಾಯಣ ಗುಡೂರ

ದೃಶ್ಯ 3

ಪಾತ್ರಧಾರಿ: ಸೃಜನ್ ಅಣ್ಣ, ನೀವು ಬೆಂಗಳೂರಿನಲ್ಲಿ ಅದೇನೋ ‘ನಿಜ ಟಾಕೀಸ್ ‘ ಅಂತ ನಡಸಿ ತುಂಬಾ ಫೇಮಸ್ ಆಗ್ಬುಟ್ಟು ಈಗ ಸೆಲಿಬ್ರಿಟಿ ಅಂತ ಎಲ್ಲ ಹೇಳ್ತಾವ್ರೆ.

ಸೃಜನ್: ಎ ಬೆಪ್ ತಕಡಿ, ಅದು ‘ಮಜಾ ಟಾಕೀಸ್’ ಕಣೋ!!

ಪಾತ್ರಧಾರಿ: ಅಲ್ಲ ನೀವು ಸಿನ್ಮ ಸೆಟ್ ಹಾಕಿ ಆಡಿಯನ್ಸ್ ಕರಸಿ ಸಿನಮಾ ನಟ ನಟಿಯರನ್ನ ಕರ್ದು ಲೈವ್ ಮ್ಯೂಸಿಕ್ ಬ್ಯಾಂಡ್ ಇಟ್ಮೇಲೆ ಅದು ‘ನಿಜಾ  ಟಾಕೀಸ್’ ಅಲ್ದೆ ಇನ್ನೇನು?

ಸೃಜನ್: ಅಲ್ಲ ನೀ ಹೇಳದೇನೋ ಸರಿ ಇರಬಹದು. ಅಂದ ಹಾಗೆ ‘ನಿಜ’ ಅಂದ್ರೆ ಒಂದು ಅರ್ಥದಲ್ಲಿ ‘Reality’ ಅಂತ. ಮುಂದಕ್ಕೆ ‘ನಿಜಾ ಟಾಕೀಸ್’ ಅಂತ ಒಂದು ‘Reality’ ಷೋ ಮಾಡೋದಕ್ಕೆ ಒಳ್ಳೆ ಐಡಿಯಾ ಕೊಟ್ಟೆ ಕಣೋ, ಭೇಷ್! ನಾನು ಇಂಗ್ಲೆಂಡ್ಗೆ ಬಂದಿದಿಕ್ಕೆ ಒಂದು ಒಳ್ಳೆ ಐಡಿಯಾ ಸಿಕ್ತು ಬಿಡು!!

ಪಾತ್ರಧಾರಿ: ಅಣ್ಣ ನಿಮ್ಮ ಷೋ ನಲ್ಲಿ ಇಂದ್ರಜಿತ್ ಅಂತ ಒಬ್ಬರು ಹೋಸ್ಟ್ ಸೋಫಾ ಮೇಲೆ ಕುಂತ್ಕಂಡು ಮಾತ್ ಮಾತ್ಗೆ ಚಪ್ಪಾಳೆ ತಟ್ಟಿ ನಗ್ತಾರಲ್ಲ ಅವ್ರು ವಾರಾ ವಾರಾ ತಿರುಪತಿಗೆ ಹೋಗ್ತಾರ? ತಲೆ ಯಾಕ್ ಅಂಗೆ ಬೋಳುಸ್ಕಂಡವ್ರೆ?!

ಸೃಜನ್: ಏ ಅವ್ರು ಯಾರ್ ಗೊತ್ತ? ನಮ್ಮ ಕನ್ನಡ ಸಾಹಿತಿ, ಮೇಸ್ಟ್ರು, ಲಂಕೇಶ್ ಪತ್ರಿಕೆಯ ಲಂಕೇಶಪ್ಪ ಅವ್ರ ಮಗ ಕಣೋ. ಅವ್ರು ಅಪ್ಪಂತರ ಒಬ್ಬ ಸೆಲೆಬ್ರಿಟಿ. ಕನ್ನಡದ ಪತ್ರಕರ್ತ ಮತ್ತೆ ಫಿಲಂ ನಿರ್ದೇಶಕರು. ಈಗಿನ್ ಕಾಲ್ದಲ್ಲಿ ಬಾಲ್ಡ್ ಆಗಿರವ್ರು ಗುಂಡ್ ಹೊಡಸ್ಕೊಳದೆ ಫ್ಯಾಷನ್ನು. ಅವ್ರು ಎದ್ರಿಗೆ ಕುಳ್ತಿದ್ರೆ ನಂಗೆ ಕನ್ನಡಿನೆ ಬೇಡ!

ಪಾತ್ರಧಾರಿ: ಅಣ್ಣ ಅವ್ರು ಅವರಪ್ಪನ ಪತ್ರಿಕೆ ನಡೆಸೋದ್ಬಿಟ್ಟು ನಿಮ್ಮ ಷೋ ನಲ್ಲಿ ಯಾಕೆ ಕುಂತ್ಕೊತಾರೆ?

ಸೃಜನ್: ಅವ್ರ ಖುಷಿ! ನಿನಗ್ಯಾಕೋ ಅದು?

ಪಾತ್ರಧಾರಿ: ನಿಮ್ಮ ಟಿ.ವಿ ಷೋದಲ್ಲಿ ಅಪರ್ಣ ಅಂತ ತುಂಬಾ ಚನ್ನಾಗಿ ಕನ್ನಡ ಮಾತ್ ಆಡ್ತಾರಲ್ಲ, ಅವ್ರು ಕನ್ನಡ ಮೇಡಂ ಅ? ಇಂಗ್ಲೆಂಡ್ ಗೆ ಬಂದು ಮಕ್ಕಳಿಗೆ ಕನ್ನಡ ಹೇಳ್ಕೊಡ್ತಾರ? ಯು ಕೆ ಕನ್ನಡ ಬಳಗ್ ದವರು ಇಲ್ಲಿ ‘ಕನ್ನಡ ಕಲಿ’ ಕ್ಲಾಸ್ ಮಾಡ್ತಿವಿ ಅಂತ ಕರ್ನಾಟ್ಕ ಗೊವೆರ್ ಮೆಂಟ್ ಇಂದ ದುಡ್ಡ್ ಇಸ್ಕಂಡ್ ಅವ್ರೆ, ಅವ್ರ್ಗೆ ಒಳ್ಳೆ ಕನ್ನಡ ಮೇಡಂ ಇನ್ನು ಸಿಕ್ಕಿಲ್ಲ?!

ಸೃಜನ್: ಎ ಅವ್ರುನ ಜನ ಮರ್ಯಾದೆ ಇಂದ ‘ಅಪರ್ಣ ಮೇಡಂ’ ಅಂತ ಕರಿತಾರೆ ಅವ್ರು ನಿಜವಾದ ಸ್ಕೂಲ್ ಮೇಡಂ ಅಲ್ವೋ. ಅವ್ರು ಎಲ್ಲಾ ಸಭೆಯಲ್ಲಿ ಚನ್ನಾಗಿ ಕನ್ನಡ ಮಾತಾಡಿ Compere ಮಾಡ್ತಾರೆ. ಮತ್ತೆ ಒಳ್ಳೆ ಸಿನಿಮಾ ಮತ್ತೆ ಟಿವಿ ಆಕ್ಟರ್, ಪ್ರೆಸೆಂಟರ್ ಕಣೋ… In fact ‘one and only’ Aparna, ಕನ್ನಡಿಗರ ಅಪರಂಜಿ!!

ಪಾತ್ರಧಾರಿ: ನಿಮ್ಮ ಷೋದಲ್ಲಿ ‘ಡಿಂಗಿಚಿಕ’ ಅಂತ ಡ್ಯಾನ್ಸ್ ಮಾಡಿ ಬಣ್ಣ ಬಣ್ಣ ಬಟ್ಟೆ ಹಾಕೊಂಡು ಕೂಲಿಂಗ್ ಗ್ಲಾಸ್ ಹಾಕೊಂಡು ಜನನ ನಗಸ್ತರಲ್ಲ, ಅವ್ರು ಸ್ಟೇಜ್ ಮೇಲೆ ಕತ್ಲೆ ಹೊತ್ತಲ್ಲಿ ಅದ್ಯಾಕೆ ಕೂಲಿಂಗ್ ಗ್ಲಾಸ್ ಹಾಕೊಂಡ್ ಅವ್ರೆ. ಇಂಗ್ಲೆಂಡಿಗೆ ಅವ್ರೆನಾದ್ರು ಬಂದ್ರೆ ಪಾಪ ಕುರುಡಾ ಅಂತ ಒಂದು ಕಡ್ಡಿನೋ ಅಥವಾ ಒಂದ್ ಗೈಡ್ ನಾಯಿನೋ ಕೊಡ್ತಾರೆ!!

ಪಾತ್ರಧಾರಿ: ಸೃಜನ್ ಅಣ್ಣ, ನಿಮ್ಮ ‘ಮಜಾ ಟಾಕೀಸ್’ ಬಗ್ಗೆ ನಮ್ಮ ಕನ್ನಡ ಬಳಗದವ್ರ್ಗೆ ಸ್ವಲ್ಪ Detail ಆಗಿ ತಿಳಸ್ತೀರ?

ಸೃಜನ್: ನಾನ್ ಯಾಕ್ ತಿಳಸ್ ಬೇಕು?! ನೀವೆಲ್ಲ ಇಲ್ಲಿ ಟಿ.ವಿ ನಲ್ಲಿ ನೋಡ್ಕಳಿ!

ಪಾತ್ರಧಾರಿ: ಅಣ್ಣ ಇಲ್ಲಿ ಕನ್ನಡ ಚಾನಲ್ ಬರಕ್ಕಿಲ್ಲ, ನಮಗೆಲ್ಲ You tubeನಲ್ಲಿ ಹಳಸಿದ್ದು ಮಾತ್ರ ಸಿಕ್ಕತ್ತೆ. ಇಲ್ಲಿ ತಮಿಳ್ ಚಾನೆಲ್ ಇದೆ, ಹಿಂದಿ ಇದೆ, ಬಂಗಾಳಿ ಇದೆ. ಕನ್ನಡ ಮಾತ್ರ ಇಲ್ಲ. ನಾವು ಕನ್ನಡ ಜನ, ನಮ್ಮ ಭಾಷೆ ಬಗ್ಗೆ ಅಭಿಮಾನ ಕಡಿಮೆ, ನಮಗೆ ಗಲಾಟಿ ಮಾಡಿ ಗೊತ್ತಿಲ್ಲ, ನಾವು ಸಾಧು ಜನಗಳು ನೋಡಿ. ನಮ್ಮ ಕನ್ನಡ ಬಳಗದ ಫಂಕ್ಷನ್ ಗೆ ಬನ್ನಿ ಬನ್ನಿ ಅಂತ ಜನಕ್ಕೆ ಅರಿಶಿನ ಕುಂಕುಮ ಕೊಟ್ಟು ಕರಿಬೇಕು. ಮಾತ್ ಎತ್ತಿದರೆ ಅವರ್ಗೆ ಬಳಗದ  ಫಂಕ್ಷನ್ ನಲ್ಲಿ ಡಿಸ್ಕೌಂಟ್ ಕೊಡಿ ಅಂತ ಕೇಳ್ತಾರೆ. ನಿಮ್ ತರ ಫಿಲಂ ಸ್ಟಾರ್ ಕರ್ಸೋದಿಕ್ಕೆ ಎಷ್ಟು ಕರ್ಚ್ ಆಗುತ್ತೆ ಅಂತ ಯೋಚನೆ ಮಾಡಲ್ಲ. “ಕೊಡೋದು ಮೂರ್ ಕಾಸು, ಕೋಣೆ ತುಂಬಾ ಹಾಸು” ಅಂದ್ರೆ ಹೆಂಗೆ ಸಾಧ್ಯ?

ಸೃಜನ್: ನೀವೆಲ್ಲ ಏನು ಬೇಜಾರ್ ಮಾಡ್ಕೋಬೇಡಿ. ಹೀಗೆ ಕನ್ನಡಕ್ಕೆ ಅಂತ ಒಳ್ಳೆ ಕೆಲಸ ಮಾಡಿ, ಎಲ್ಲ ಒಂದಾಗಿ ಕನ್ನಡ ಉಳಿಸಿ ಬೆಳಸಿ. ನಾನು ನಮ್ಮ ಕಲರ್ಸ್ TV ಮತ್ತೆ ಬೇರೆ ಬೇರೆ ಚಾನಲ್ ಗಳ್ಗೆ ಶಿಫಾರಸ್ ಮಾಡ್ತೀನಿ. ನೀವೆಲ್ಲ ಮುಂದೆ ಮಜಾ ಟಾಕೀಸ್ ಲೈವ್ ಪ್ರೊಗ್ರಾಮ್ ನೋಡಬಹುದು. ಸರಿ, ನಾನು ವಾಪಸ್ ಬೆಂಗಳೂರಿಗೆ  ಹೊರಡಬೇಕು. ಯು ಕೆ ಕನ್ನಡಿಗರು ನಮ್ಮ ಷೋಗೆ ಬರಬೇಕು. ಅದಕ್ಕೆ ವ್ಯವಸ್ಥೆ ಮಾಡ್ತೀನಿ.

A day without laughter is a day wasted!

ಬರ್ತೀನಿ ನಮಸ್ಕಾರ.

  ***