ಎರಡು ಕವಿತೆಗಳು – ಸವಿತಾ ಮದುಸೂಧನ್

ಈ ವಾರದ ಕವನಗಳು ಸವಿತಾ ಮಧುಸೂದನ್ ಯುಗಾದಿ ಕಾರ್ಯಕ್ರಮಕ್ಕೆ ರಚಿಸಿದವಾಗಿವೆ. ಆಧ್ಯಾತ್ಮಿಕ ಅರ್ಥವುಳ್ಳ ಈ ಕವನಗಳು ಕುವೆಂಪು ಅವರಿಂದ ಪ್ರೇರೇಪಿತವಾದಂತಿದೆ. ಆಕಾಶ ದೀವಿಗೆ, ನಮ್ಮನ್ನು ಬಡಿದೆಬ್ಬಿಸುವಲ್ಲಿ ಸಂದೇಹವಿಲ್ಲ. ಸಮ್ಮೋಹನ ನಮ್ಮನ್ನಾವರಿಸುವ ಮೋಹವನ್ನು ಹರಿದು ಹೊರಬರುವ ಹಾದಿ ಹುಡುಕೆಂದು ಆರ್ತ್ರನಾದಗೈಯುತ್ತಿದೆ!

ಆಕಾಶ ದೀವಿಗೆ 

ಈ ಗಾಡಂಧಕಾರದಲಿ ಕಾದಿಹುದು
ಪುನರುತ್ಥಾನದ ಸ್ವಾಗತಗೈಯಲು;
ಅದೋನೋಡಿ! ಮುಗಿಲೆತ್ತರದ ತಾಳೆಗಳು
ತೇಜಪುಂಜ ಭಾಸ್ಕರನ ಚಿತ್ತಾರವ ಬಿಡಿಸಿಹವು

ಚಂಚಲ ಮೇಘಗಳ ಚಿತ್ತಸ್ಥಿರ ವೀಕ್ಷಕ
ಅಂಬರಿನಿಂದ ಆವೃತನಾದ ಬಾಲರವಿಯು ಸಾರುತಿಹನು-
“ಏಳಿ, ಎದ್ದೇಳಿ, ಅನಂತ ಚೇತನಕೆ ಎಚ್ಚರಗೊಳ್ಳಿ
ನಿರ್ವಿಕಾರರಾಗಿ ಅತ್ಯುನ್ನತ ಮುಗಿಲಿನೆತ್ತರಕೇರಿ”

ಸಮ್ಮೋಹನ 

ಯಾವ ಸ್ವಪ್ನ ಸೆರೆಹಿಡಿದಿಹುದೋ
ಅದಾವ ಮಾಯೆ ಮನ ಸೆಳೆದಿಹುದೋ!
ಉದಧಿಯಲಿ ಉದಿಸಿರುವ
ವಜ್ರ ವೈಢೂರ್ಯವನ್ನಾಲಿಸುವ ನೀ
ಮನಸೋತು ಮೈ ಮರೆತಂತಿದೆ,
ಆ ಹೊಳಪಿನಲ್ಲಿ ಕಣ್ಣು ಮಬ್ಬಾಗಿದೆ

ಭೋರ್ಗರೆಯುವ ಭವಸಾಗರದಿ
ಎದ್ದಿವೆ ತೆರೆಗಳು ದೈತ್ಯಾಕಾರದಿ
ಬೆನ್ಹತ್ತಿ ಬರುತಲಿವೆ ಜೋಕೆ!
ಕಡಲ ತಳಕೆ ತರಂಗಗಳ ಶಿಬಿಕೆ.
ಈಜಿ,  ಕಿರಿದ್ವೀಪವ ಸೇರಲಾಗದೇ?
ಪುನಃ ಪ್ರಾರ್ಥಿಸಿ ದಡವ ಅರಸಲಾಗದೇ?

– ಡಾ. ಸವಿತಾ ಮಧುಸೂದನ್