ಆ೦ಗ್ಲ ನರಿಗಳು – ಸಿ. ಹೆಚ್. ಸುಶೀಲೇಂದ್ರ ರಾವ್

♥ ∗ಅನಿವಾಸಿಗೆ ಐದು ವರ್ಷದ ಹರ್ಷ ∗♥

(ಭಾರತೀಯರಿಗೆ ತಮ್ಮನ್ನು ಎರಡು ಶತಮಾನ ಆಳಿದ ಬ್ರಿಟಿಷರು ಠಕ್ಕ ನರಿಗಳಂತೇ ಕಂಡಿದ್ದರೆ ಅಚ್ಚರಿಯಿಲ್ಲ. ಆದರೆ 53 ವರ್ಷಗಳ ಕಾಲ ಇಂಗ್ಲೆಂಡಿನಲ್ಲೇ ನೆಲಸಿರುವ ಸುಶೀಲೇಂದ್ರ ರಾವ್ ರ ಗಾಳಕ್ಕೆ ಬ್ರಿಟಿಷರ ಹಲವು ’ನರಿ ’ಗಳು  ಪದಗಳ ’ಮೀನಿಂ’ಗುಗಳಾಗಿ ಸಿಕ್ಕಿ ಬಿದ್ದು ಪದ್ಯರೂಪದಲ್ಲಿ ಮಿದುಳಿನಲ್ಲಿ ಮಿಂಚು ಹರಿಸುತ್ತವೆ.

ಇದೇ ಬಗೆಯ  ಒಂದು ಪ್ರಯತ್ನ ವಾಟ್ಸಾಪ್ ನಲ್ಲಿ ಹರಿದಾಡಿದ ನೆನಪಿದೆ. ಆದರೆ, ಅದರ ಜೊತೆಗೆ  ಒಂದಷ್ಟು ಕಥೆ, ಮಜಾ ಮತ್ತು ಮೋಜನ್ನು ಹರಿಸಿರುವ ಕವಿಗಳು ತಮ್ಮ ಬದುಕಿನುದ್ದಕ್ಕೂ  ಉಳಿಸಿಕೊಂಡ ಮಾತೃ ಭಾಷೆ ಮತ್ತು ಸಂಸ್ಕೃತಿಯ ಬೆಳಕಲ್ಲಿ ಇಲ್ಲಿನವರ  ಭಾಷೆಯ ಒಂದು ಸಾಮಾನ್ಯ  ಅಂತ್ಯಪ್ರತ್ಯಯವನ್ನು ಕನ್ನಡದ ಕನ್ನಡಕ ಹಾಕಿಕೊಂಡು ಅವಲೋಕಿಸಿದ್ದಾರೆ.

ಇಂಗ್ಲೀಷು ಭಾಷೆಯಲ್ಲಿ 26 ಅಕ್ಷರಗಳಿದ್ದರೆ ಅದರ ಜೊತೆಯಲ್ಲಿ 26 ಸಾಮಾನ್ಯ ಅಂತ್ಯ ಪ್ರತ್ಯಯಗಳಿವೆ. ಅದರ ಜೊತೆಯಲ್ಲಿ ಒಂದೇ ರೀತಿಯಲ್ಲಿ ಕೇಳಿಸುವ ಆದರೆ ಬೇರೆ ಬೇರೆ ಅರ್ಥಗಳಿರುವ ಶಬ್ದಗಳಿವೆ  ( HOMONYMS) ಅದರಂತೆ ಒಂದೇರೀತಿ ಕೇಳಿಸುವ ಆದರೆ ಬೇರೆ ಬೇರೆ  ಅಕ್ಷರ ಜೋಡಣೆಯ ಪದಗಳಿವೆ (HOMOPHONES).ಇವೆಲ್ಲದರ ಜೊತೆ  ಒಂದೇ ಅಕ್ಷರ ಜೋಡನೆಯಿದ್ದು ಬೇರೆ ಬೇರೆ ಅರ್ಥಕೊಡುವ ಪದಗಳೂ ಇವೆ (HOMOGRAPHS) ಇವೆಲ್ಲ ಯಾವುದೇ ಇತರೆ ಭಾಷಿಗರಿಗೆ ಕೆಲವೊಮ್ಮೆ ಅಚ್ಚರಿಯ ಜೊತೆ ತಲೆನೋವಾಗುವುದು ಕೂಡ ನಿಜ. ಈ ಗ-ಪದ್ಯ ದಲ್ಲಿ ಕವಿಗಳು  ’ನರಿ ’ಯಿಂದ ಕೊನೆಯಾಗುವ ಪದಗಳ ಬೇಟೆಯಾಡಿ ಅನಿವಾಸಿಯ ಓದುಗರಿಗೆ  ಕನ್ನಡದಲ್ಲಿ ಅರ್ಥಗಳ ಊಟ ಬಡಿಸಿದ್ದಾರ.- ಸಂ)

  ಪರಿಚಯ

ಸಿ. ಹೆಚ್. ಸುಶೀಲೇಂದ್ರ ರಾವ್ ಅನಿವಾಸಿಯ ಪರಿಚಿತ  ಬರಹಗಾರರು. ದಾವಣಗೆರೆಯಲ್ಲಿ ಇ೦ಜನೀಯರಿ೦ಗ್ ಪದವಿಯವರೆಗೆ ವಿದ್ಯಾಭ್ಯಾಸ  ಮಾಡಿದ ಇವರು  4 ವಷ೯ ಕರ್ನಾಟಕ ಪಿ.ಡಬ್ಲು.ಡಿಯಲ್ಲಿ ಕೆಲಸ ಮಾಡಿದರು. ನಮ್ಮಲ್ಲಿ ಕೆಲವರು ಹುಟ್ಟುವ ಮುನ್ನವೇ  ಅಂದರೆ 1966 ರಲ್ಲಿ  ಇಂಗ್ಲೆಂಡಿಗೆ ಪ್ರಯಾಣ  ಬೆಳೆಸಿದ ಇವರು ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡಿದವರು. ಮ್ಯಾಕಲ್ಸ ಫೀಲ್ಡ್   ಕೌನ್ಸಿಲ್ ಮತ್ತು ಮ್ಯಾಂಚೆಸ್ಟರ್ ಕೌನ್ಸಿಲ್ ಗಳಲ್ಲಿ ಬಹುಕಾಲ ಸೇವೆ ಸಲ್ಲಿಸಿ ನಿವೃತ್ತಿ  ಪಡೆದರು.

ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಅಭಿರುಚಿಯಿರುವ ಇವರ ಹೃದಯ ಮಾತ್ರ ಮಾತೃಭಾಷೆ ಮತ್ತು ಸ್ವದೇಶೀ ಸ್ಪರ್ಷ ಭಾವನೆಗೆಗಳಿಗೆ ಯಾವತ್ತೂ ಆತುಕೊಂಡಿದೆ. ಆಗಾಗ ಮನಸ್ಸಿಗೆ ತೋರಿದ್ದನ್ನು ಬರೆಯುವ ಹವ್ಯಾಸವಿರುವ ಇವರು ನಿವೃತ್ತಿಯ ನಂತರ ಶಾಸ್ತ್ರೀಯ ಸಂಗೀತಾಭ್ಯಾಸಗಳಿಗೂ ತೆರೆದುಕೊಂಡವರು.

ಯು.ಕೆ. ಯ ಹಿರಿಯ ಕನ್ನಡ ಸಂಸ್ಥೆ ಕನ್ನಡ ಬಳಗದ ಮೊಟ್ಟ ಮೊದಲ ಕಾರ್ಯಕಾರೀ ಸಮಿತಿಯ ಸದಸ್ಯರೂ ಮತ್ತು  ಸಂಸ್ಥಾಪಕ ಸದಸ್ಯರೂ ಆಗಿ ಕನ್ನಡ ಸೇವೆಗೆ ನಿಂತ ಇವರು 1986 ರಲ್ಲಿ ಕನ್ನಡ ಬಳಗದ ಸಂವಿಧಾನ ರಚನೆಗೆ ಸಹಕರಿಸಿದರು. ನಂತರ ಕನ್ನಡ ಬಳಗದ ಅಧ್ಯಕ್ಷರಾಗಿ ಎರಡು ವರ್ಷ ಸೇವೆ ಸಲ್ಲಿಸಿದರು. ಅನಿವಾಸಿ ಜಾಲ ಜಗುಲಿಯಲ್ಲಿ ಇವರ ಹಲವು ಕವನಗಳು ಪ್ರಕಟವಾಗಿವೆ.  ‘ರಾಜಕೀಯ ‘,  ‘ಕವಿ ಆಗಬೇಕೆ? ‘  ‘ಗ್ರೆನ್ಫಲ್ ಟವರ್ ದುರಂತ’  ಮತ್ತು ‘ದೊಂಬರಾಟವಯ್ಯ ‘ ಇವರ ಪ್ರಕಟಿತ ಕವನಗಳು-ಸಂ )

ಆ೦ಗ್ಲ ನರಿಗಳು 

ಕನ್ನಡದ ಜೊತೆಗೆ ಇ೦ಗ್ಲೀಷ ಓದಿದೆವು
ಆ೦ಗ್ಲ ನಾಡಿಗೆ ಬ೦ದು ನೆಲೆಸಿದೆವು ಅ೦ದು

ಆ೦ಗ್ಲನಾಡು ಆ೦ಗ್ಲ ಭಾಷೆ, ನಡೆ ನುಡಿಗಳ
ಹೇಗೋ ಹೊ೦ದಿಕೊ೦ಡು ಬಾಳಿದೆವು

ಕಳೆದೆವು  ವಷ೯ಗಳು ಬೆಳೆದವು ಮಕ್ಕಳು
ಬಹು ಬೇಗ ಸಾಗಿತು ಅರ್ಧ ಶತಮಾನ

ಇ೦ಗ್ಲೀಷರು ಆಳಿದರುನಮ್ಮನು ೨ ಶತಮಾನ
ಇದ್ದಿರಬೇಕು ಬುದ್ದಿಯಲಿ ನರಿಗಳ೦ತೆ ಅವರು

ಅವರು ಬುದ್ದಿವ೦ತರೋ ,ಗುಳ್ಳೆನರಿಗಳೋ
ಕುತೂಹಲ ಅವರ ಭಾಷೆ ಇಣಿಕುವ ಆಸೆ

ಹಾಗಾದರೆ ನೋಡೋಣ ಬನ್ನಿ ಇ೦ಗ್ಲೀಷ ಭಾಷೆಯಲಿ
ಎಷ್ಟು ನರಿಗಳನ್ನು ನಾವು ಹುಡುಕಬಹುದೆ೦ದು

ಇದು ಹುಚ್ಚತನ ಅನಿಸ ಬಹುದು ಅವರ ಭಾಷೆಯಲಿ
೨ಬಗೆಯ ನರಿಗಳಿವೆ ೧ nary  ೨ nery.

ಈಗ ನಾವು ಸಾಧಾರಣ ನರಿಯಿ೦ದ
ಪ್ರಾರ೦ಬಿಸಿದರೆ ಸಿಗುವುದು ordinary
ನಿಶ್ಚಲ/ಲೇಖನ ಸಾಮಗ್ರಿ ನರಿ ಬೇಕಿದ್ದರೆ
ಆಗ ನಮಗೆ ಕಾಣುವುದುStationary

ಅತ್ಯ೦ತ ಸುಧಾರಿತ/ವಿಶೇಷ ನರಿ
ನೋಡಬೇಕೆ೦ದರೆ Extraordinary
ಮತ್ತೆಕೆಲವರು ಇನ್ನೂ ತರಬೇತಿಯಲ್ಲಿರುವ
ನರಿ ನೋಡ ಬಯಸಿದರೆ Probationary

ಸುಮ್ಮನೆ ಸದ್ಯಮಟ್ಟಿಗೆ ಒ೦ದು ನರಿ
ನೋಡೋಣ ಎ೦ದರೆ Provisionary
ಒಮ್ಮೆ ಎರಡು ನರಿಗಳು ಇರುವುದನ್ನು
ಹುಡುಕ ಬೇಕಿದ್ದರೆ Bianary

ನಮಗೆ ವಿವೇಚನೆ ಇರೋ ನರಿ ತೋರಿಸಿ
ಎ೦ದು ಕೇಳಿದರೆ Discretionary
ಪೂವ೯ಸಿದ್ದತೆ/ಪೀಟಿಕೆ  ನರಿ ಹುಡುಕಲು
ಸಿಗುವುದು Preliminary

ಸುಪ್ರಸಿದ್ದ, ಪ್ರತಿಭಾಶಾಲಿ/ತೇಜಶ್ವಿ ನರಿ
ಉ೦ಟು ಅದು Luminery
ಕ್ರಾ೦ತಿಕಾರ/ಧೈರ್ಯ ನರಿ ಕಾಣಲು
ವೀಕ್ಷಿಸಿ  Revolutionary

ರಕ್ತಪಾತ/ಕೊಲೆ ಭಯಾನಕ ನರಿ
ಇರುವ ಜಾಗ Sanguinary
ಯ೦ತ್ರಗಳು/ಆಡಳಿತ ವ್ಯವಸ್ತೆನರಿ
ಇರುವ ಸ್ಥಳ  Machinary

ಧಮ೯/ಮತ ಪ್ರಚಾರಕ ನರಿಗಳು
ಅಲೆಯುವ ಜಾಗ Missinory
ಕ್ರೈಸ್ತ ಸನ್ಯಾಸಿನಿಯರ ನಿವಾಸದಲ್ಲಿ
ಸುತ್ತಾಡುವ ನರಿ Nunnery

ಪಶು ವೈದ್ಯ ಕೀಯ ನರಿಗಳು
ಸುಳಿದಾಡುವುದು Veternary
ಸ್ವಾಶಕೋಶ ವಿವರಣೆಗಳ ನರಿ
ನೋಡಲು ಹುಡುಕಿ Pulmanary

ನೂರನೇ ವಷ೯ದ ಉತ್ಸವದ ನರಿ
ನಲಿದಾಡುವಿಕೆಗೆ ನೋಡಿ Centinary
ಪ೦ಚ ವಾಷಿ೯ಕ ಆಚರಿಪ ನರಿ ಮೆರೆವ
ಜಾಗ  Quincentenary

ಪ್ರಕ್ರುತಿ ದ್ರುಶ್ಯ/ರ೦ಗ ದ್ರುಶ್ಯಗಳಲ್ಲಿ
ಚಿತ್ರಿಪ ನರಿ ಇರುವುದು Scenery
ಭವಿಷ್ಯದ ಕನಸು ಕಾಣಲು ಕಾತರೆವ
ನರಿ ರಮಿಸುವ ಸ್ಥಳ Visionary

ಆಕಸ್ಮಿಕವಾಗಿ ಕೆಲವು ನರಿಗಳು
ಕಾಣದೆ ನುಸುಳಿದ್ದರೆ ಕ್ಷಮಿಸಿ
ಎ೦ದು ಹೇಳುವ ನರಿ ಹೆದರದಿರಿ
ಆದರೆಹ್ರುದಯ ಘಾತ Coronary

ದಯವಿಟ್ಟು ಕ್ಷಮಿಸಿ ಸಾಕಾಯ್ತು
ಈ ಎಲ್ಲಾ ನರಿಗಳ ಹುಡುಕುವ ಆಟ
ಅ೦ದರೆ ಚಿ೦ತಿಸದಿರಿ  ಇದೆ ಒ೦ದು
ದೊಡ್ಡ ನರಿ ನಿಗ೦ಟು Dictionary.

————————————— ಸಿ. ಹೆಚ್. ಸುಶೀಲೇಂದ್ರ ರಾವ್

                                    (ಮುಂದಿನ ವಾರ- ಸಕ್ಕರೆ ಸವಿಯ ಜಾನಕಿ ಅಮ್ಮ)

ಅಜ್ಜಿ ನೀನು ಎಲ್ಲಿಂದ ಬಂದೆ? – ವತ್ಸಲಾ ರಾಮಮೂರ್ತಿ ಬರೆದ ಅಜ್ಜಿ ಕಥೆ!

ಅಜ್ಜಿಗೆ ಮೊಮ್ಮಗಳ ಪ್ರಶ್ನೆ. ನೆನಪಿನಾಳಕ್ಕೆ ಸೆಳೆಯಿತು ವತ್ಸಲಾ ಅವರನ್ನು ತಮ್ಮ ಪೂರ್ವಜರ ಪೇಶ್ವೆಯರ ಕಾಲಕ್ಕೆ. ಅವರ ’ನಮ್ಮೂರ ಕಥೆ’ಯನ್ನು ಓದಿ.

ಅಜ್ಜಿ ನೀನು ಎಲ್ಲಿಂದ ಬಂದೆ?

ಹೀಗೆ ಕೇಳೀದವಳು ನನ್ನ ಮುದ್ದು ಮೊಮ್ಮಗಳು ಅನಿತಾ. ಅವಳಿಗೆ ಈಗ ಎಲ್ಲ ವಿಚಾರಗಳಲ್ಲೂ ವಿಪರೀತ ಕುತೂಹಲ. ಪ್ರಶ್ನೆಗಳ ಸರಮಾಲೆಯನ್ನೇ ಪೋಣಿಸುತ್ತಾಳೆ. ”ಅಯ್ಯ! ನಾನು ಕನ್ನಂಬಾಡಿ ಅನ್ನು ಹಳ್ಳಿಯಿಂದ ಬಂದೆ. ನಿನಗ್ಯಾಕೆ ಅದೆಲ್ಲ? ನಮ್ಮ ಹಿಂದಿನವರು ನಳದುರ್ಗದಿಂದ ಬಂದರು,” ಅಂತ ಹೇಳಿಅವಳ ಕುತೂಹಲಕ್ಕೆ ತಣ್ಣೀರು ಎರಚಿದೆ. ಆಹಾ! ಒಳ್ಳೆ ಅಜ್ಜಿ ನಾನು! Typical ಹಿರಿಯಳು. ಮಕ್ಕಳು ಪ್ರಶ್ನೆ ಕೇಳಬಾರದು ಅಲ್ವೇ? ಅದು ನಮ್ಮ ಜನಾಂಗದ ಅಭಿಪ್ರಾಯ. ಆದರೆ ಅನಿತಾ ತುಂಬಾ ಚೂಟಿ: ” ಅಜ್ಜಿ ನೀನು ಎಲ್ಲ ವಿಚಾರ ಸರಿಯಾಗಿ ಹೇಳಿದರೆ ಕನ್ನಡ ಕಲಿಯುತ್ತೇನೆ!” ಅಂದಳು. ಸರಿ ಮತ್ತೆ, ಈ ಅಜ್ಜಿಗೆ ಮೈಸೂರುಪಾಕು ಸಿಕ್ಕಿದ್ದಷ್ಟೇ ಖುಷಿ. ಹಾಗಾದರೆ ಗಲಾಟೆ ಮಾಡದೆ ಕೇಳು ಅಂತ ಹೇಳಿದೆ. ಅವಳು ಚಕ್ಕಳ ಮುಕ್ಕಳ ಹಾಕಿಕೊಂಡು ಕುಳಿತಳು.

ಮಹಾರಾಷ್ಟ್ರದಂಚಿನಲ್ಲಿಯ ನಳದುರ್ಗ
ಮಹಾರಾಷ್ಟ್ರದಂಚಿನಲ್ಲಿಯ ನಳದುರ್ಗ

ನಮ್ಮ ಮನೆಯವರು ”ನಳದುರ್ಗ” ಎಂಬ ಹಳ್ಳಿಯಿಂದ ಬಂದವರು. ಅದು ಹಿಂದಿನ ಕಾಲದಲ್ಲಿ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಪರಿಸರದಲ್ಲಿದೆ. ನಮ್ಮ ಮನೆತನದವರು ಪೇಶ್ವೆಗಳ ಹತ್ತಿರ ಸೈನಿಕರಾಗಿದ್ದರಂತೆ. ಆಂಗ್ಲರು ಮತ್ತು ಮರಾಠರ ಮಧ್ಯೆ ಯುದ್ಧ ನಡೆದಾಗ ನಮ್ಮವರು ಮರಾಠಿಗರ ಕಡೆ ಹೋರಾಡಿದರಂತೆ. ಅವರ ಸೈನ್ಯ ಸೋತು, ನಮ್ಮವರೆಲ್ಲ ಯುದ್ಧದಲ್ಲಿ ತೀರಿಕೊಂಡರಂತೆ. ವಂಶವೇ ನಾಶವಾಯಿತಂತೆ. ದೇವರ ದಯೆಯಿಂದ ಒಬ್ಬೊಂಟಿಗ ಬಸಿರಿ ಹೆಂಗಸು ಉಳಿದಳು. ಅವಳ ಮೇಲೆ ಕನಿಕರ ಪಟ್ಟು ಒಬ್ಬ ಆಂಗ್ಲ ಸೈನ್ಯಾಧಿಕಾರಿ ”ಅಮ್ಮ ನಿನಗೆ ಯಾರು ದಿಕ್ಕು? ಒಬ್ಬೊಂಟಿಗ ಹೆಂಗಸು ಎಲ್ಲಿಗೆ ಹೋಗುತ್ತಿ?” ಅಂದನಂತೆ. ಆ ಬಡಪಾಯಿ ಹೆದರಿ, ನಗುತ್ತಾ, ”ನನಗೆ ಯಾರೂ ಗತಿಯಿಲ್ಲ. ಗರಗೇಶ್ವರಿಂತ ಒಂದು ಸಣ್ಣ ಊರು ಮೈಸೂರಿನ ಹತ್ತಿರ ಇದೆ. ಅಲ್ಲಿ ದೂರದ ನೆಂಟರಿದ್ದಾರೆ,” ಅಂದಳು. ಆ ಮಹಾನುಭಾವ ಈಕೆಯನ್ನು ಕುದುರೆ ಗಾಡಿಯಲ್ಲಿ ಕೂಡಿಸಿ 50 ಚಿನ್ನದ ನಾಣ್ಯಗಳನ್ನು ಕೊಟ್ಟನಂತೆ. ಆಗ ಗರಿಗೇಶ್ವರಿಗೆ ಬಂದು ಭೂಮಿ ಕೊಂಡು ಜೀವನ ನಡೆಸಿದಳಂತೆ. ಅವಳ ಮಗನೇ ನಮ್ಮ ತಾತ. ”ಅಜ್ಜಿ, ಅಜ್ಜಿ, ನಿಮ್ಮ ತಾತ ಎಲ್ಲಿದ್ದಾನೆ?” ಎಂದು ಮಧ್ಯ ಬಾಯಿ ಹಾಕಿದಳು ಅನಿತಾ. ”ನಾನೇ ಅಜ್ಜಿ; ನನಗೆ ತಾತ ಎಲ್ಲಿರುತ್ತಾರೆ, ಹೋಗಿ ದಡ್ಡಿ!” ಅಂತ ಜೋರಾಗಿ ಹೇಳಿದೆ. ”ಹೋಗಲಿ ಬಿಡು ಅಜ್ಜಿ, ಆಮೇಲೆ ಹೇಳು. ನೀನು ಹುಟ್ಟಿದೂರು ಯಾವುದಂತೆ?” ಅಯ್ಯೋ, ಭಗವಂತನೇ! ಈಕೆ ಜಿಗಣಿ ಹಿಡಿದಂತೆ ಹಿಡಿದಿದ್ದಾಳೆ. ಏನು ಮಾಡಲಿ? ನಾನು ಮುಂದೆ ಹೇಳಿದೆ: ”ಹಾಗಾದರೆ ಕೇಳೆ ಹುಡಿಗಿ! ನಮ್ಮ ತಾತ ಗರಿಗೇಶವರಿ ಹಳ್ಳಿಯಿಂದ ಮೈಸೂರಿಗೆ ಬಂದು ನೆಲಸಿದರು. ಅಲ್ಲಿಂದ ನಮ್ಮ ವಂಶದವರು ಕನ್ನಡಿಗರಾದರು. ಸುಮ್ಮಾರು 75 ವರ್ಷಗಳ ಹಿಂದೆ ನಮ್ಮ ತಂದೆಯವರು ಎಂಜಿನಿಯರ ಆಗಿದ್ದರು. ಅವರು ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಕೆಳಗೆ ಜೂನಿಯರ ಆಗಿದ್ದರು. ಕನ್ನಂಬಾಡಿಯಲ್ಲಿ ಆಣೆಕಟ್ಟು ಕಟ್ಟಲು ಸಹಾಯ ಮಾಡಿದರು.” ”ಅಜ್ಜಿ, ಕನ್ನಂಬಾಡಿ ಅಂದರೆ ಯಾವ ಊರು? ಊರಿನ ಮಹಾತ್ಮೆ ಏನು?” ಮತ್ತೆ ಅನಿತಾಳ ಪ್ರಶ್ನೆ. ಅವಳ ಕುತೂಹಲಕ್ಕೆ ಕೊನೆಯಿಲ್ಲ! ”ಎಲೈ, ಮುದ್ದು ಮಗಳೇ, ಕೇಳುವಂತವಳಾಗು!”

KRS Dam
KRS Dam

ಸುಮಾರು 12ನೆಯ ಶತಮಾನದಲ್ಲಿ ಅಲ್ಲಿ ಅತ್ಯಂತ ಸುಂದರವಾದ ವೇಣುಗೋಪಾಲನ ದೇವಸ್ಥಾನ ಇತ್ತು. ಪಕ್ಕದಲ್ಲೇ ಊರಿನ ದೇವರ ”ಕಾಳಮ್ಮ”ನ ಗುಡಿ. ಅದು ಬಹಳ ಫಲವತ್ತಾದ ಭೂಮಿ. ತಾಯಿ ಕಾವೇರಿ ನದಿಯು ತುಂಬಿ ರಭಸವಾಗಿ ಹರಿಯುತ್ತಿದ್ದಳು. ಅದು ಶ್ರೀಮಾನ್ ಕೃಷ್ಣರಾಜ ವಡೆಯರು ಆಳುತ್ತಿದ್ದ ಕಾಲ. 1924ರಲ್ಲಿ ಮೈಸೂರಿನ ಮಹಾರಾಜರು ಆ ನದಿಯ ರಭಸಕ್ಕೆ ತಡೆಹಾಕಿ ಆ ನೀರನ್ನು ಬೆಳೆ ಬೆಳೆಯಲು ಉಪಯೂಗಿಸುವ ಯೋಜನೆ ಹಾಕಿದರು. ಆಗ ಎಂ ವಿ (ಮೋಕ್ಷಗುಂಡಂ ವಿಶ್ವೇಶ್ವರಯ್ಯ) ಚೀಫ್ ಇಂಜನಿಯರ ಆಗಿದ್ದರು. ಅವರು ಮಹಾ ಮೇಧಾವಿ. ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣ ತೀರ್ಥ, ಈ ಮೂರು ನದಿಗಳು ಒಂದಾಗುವ ಸ್ಥಳದಲ್ಲಿ ಆಣೆಕಟ್ಟು ಹಾಕಲು ನಿರ್ಧರಿಸಿದರು. 1930ರಲ್ಲಿ ಕಟ್ಟಲು ಶುರುಮಾಡಿದ ಅದ್ಭುತವಾದ ಆಣೆಕಟ್ಟು 1932ರಲ್ಲಿ ಮುಗಿಯಿತು. ಆಣೆಕಟ್ಟಿನ ಗೋಡೆ 2621ಮೀಟರ ಉದ್ದ ಮತ್ತು 39ಮೀಟರ ಎತ್ತರಕ್ಕಿದೆ. ನೀರು ಉಮಾರು 80 ಅಡಿ ಎತ್ತರಕ್ಕೆ ನಿಲ್ಲುತ್ತದೆ. ಜಲಾಶಯದ ವಿಸ್ತಾರ 130 ಚದುರ ಕಿ.ಮೀ.ಗಳಷ್ಟು. 1930ರ ದಶಕದಲ್ಲಿ ಏಷ್ಯ ಖಂಡದಲ್ಲೇ ಅತ್ಯಂತ ದೊಡ್ಡದಾದ ಆಣೆಕಟ್ಟು KRS (ಕೃಷ್ಣರಾಜ ಸಾಗರ) ಆಗಿತ್ತು. ಅದು ಮೇಧಾವಿ ಎಂ ವಿ ಮತ್ತು ಕೃಷ್ಣರಾಜ ವಡೆಯರುಗಳು ಮೈಸೂರು ದೇಶಕ್ಕೆ ಕೊಟ್ಟ ಉಡುಗರೆ ಎನ್ನುತ್ತಾರೆ. ಕಾವೇರಿಯ ನೀರಿನಿಂದ ರೈತರು ಉದ್ಧಾರವಾದರು. ಅಕ್ಕಿ, ತರಕಾರಿ, ಕುಡಿಯುವ ನೀರು ದೊರಕಿತು. ಎಂಥ

ಬೃಂದಾವನ ಉದ್ಯಾನ
ಬೃಂದಾವನ ಉದ್ಯಾನ

ಮಹತ್ ಕಾರ್ಯ! ”ಅಜ್ಜಿ, ಅಲ್ಲಿ ಬೃಂದಾವನ ಅಂತ ತೋಟ ಇದೆ ಅಲ್ವಾ? ಅದು ಹೇಗೆ ಬಂತು?” ಅನಿತಾನ ಮುಂದಿನ ಪ್ರಶ್ನೆ! ”ಅಮ್ಮ, ಅನಿತಾ ದೇವಿ, ಮಲಗು. ಹೊತ್ತಾಯಿತು. ನಿಮ್ಮಪ್ಪ ಬೈತಾನೆ,” ಅಂತ ಹೇಳಿದೆ. ಈಗಿನ ಕಾಲದಲ್ಲಿ ತಂದೆ ತಾಯಿ ತುಂಬಾ ನಿಯತ್ತು, ನಿಯಮ ಅಲ್ವೆ? ಅವರ ಪ್ರಕಾರವೇ ನಾವೂ ನಡೆದುಕೊಳ್ಳ ಬೇಕು. ಅದಕ್ಕೆ ಅನಿತಾ ಅಜ್ಜಿ, ದೀಪ ಆರಿಸಿ ಬಿಡು, ಆದರೆ ಕತೆ ಹೇಲು, ಅನ್ನಬೇಕೆ ಆ ಕಿಲಾಡಿ? ನಾನು ಮುಂದುವರೆಸಿದೆ: ”ಸರಿ, ಇಸ್ಮಾಯಿಲ್ ಮಿರ್ಝಾ ಸಾಹೇಬರು ಶಾಲಿಮಾರ  ಗಾರ್ಡನ್ಸ್ ತರಹ ಕೃಷ್ಣರಾಜ ಸಾಗರದಲ್ಲಿ ಬೃಂದಾವನದ ತೋಟಕ್ಕೆ ತಳಪಾಯ ಹಾಕಿದರು. ಈಗ ತೋಟ 60 ಎಕರೆ ಇದೆ. ನಾನಾ ತರಹದ ಹಣ್ಣುಗಳು, ಸುಗಂಧಭರಿತವಾದ ಪುಷ್ಪಗಳು, ತರಕಾರಿಗಳು ಬೆಳೆಯುತ್ತಾರೆ. ಆ ತೋಟದಲ್ಲಿದ್ದರೆ ವನರಾಶಿಯ ವೈಭವಕ್ಕೆ ಎಣೆಯೇ ಇಲ್ಲ ಎಂದೆನಿಸುತ್ತದೆ.”

Musical Fountains, KRS
Musical Fountains, KRS

”ಅಜ್ಜಿ, ವೇಣುಗೋಪಾಲನ ದೇವಸ್ಥಾನ ಏನಾಯ್ತು?” ಅನಿತಾಳ ಪ್ರಶ್ನೆ ನಾನು ಮುಗಿಸುವದರಲ್ಲೇ. ”ದೇವಸ್ಥಾನ ನೀರಿನಲ್ಲಿ ಮುಳುಗೇ ಹೋಯ್ತು! ಈಗ ಬೇರೆ ದೇವಸ್ಥಾನ ಕಟ್ಟಿದ್ದಾರೆ, ಅಲ್ಲಿ. ಈಗ ಸಂಗೀತ ಹಾಡುವ ನೀರಿನ ಕಾರಂಜಿಗಳಿವೆ.” ”ಅಜ್ಜಿ, ನೀನು ಹುಟ್ಟಿದ್ದು ಅಲ್ಲೇನಾ? ನನ್ನ ಯಾವಾಗ ಅಲ್ಲಿ ಕರಕೊಂಡು ಹೋಗ್ತಿ?” ”ಈಗ ನಿದ್ರಾದೇವಿಯನ್ನು ಸ್ವಾಗತಿಸಿ ಸುಖವಾಗಿ ಮಲಗು, ಮಗಳೇ. ನಿಮ್ಮಜ್ಜಿ ಹುಟ್ಟಿದ ಊರಿಗೆ ಶಾಲೆಯ ರಜದಲ್ಲಿ ಹೋಗೋಣ. ನಿಮ್ಮಜ್ಜಿ ಸುಂದರ ರಮಣೀಯವಾದ ಸ್ಥಳ ಬಿಟ್ಟು ಈ ಚಳಿ ದೇಶದಲ್ಲಿ ಗಡ ಗಡ ನಡುಗುತ್ತಿದ್ದಾಳೆ! ಮಲಗು ಕಂದ.” ”ಕನ್ನಡ ಕಲಿ ಶಾಲೆಗೆ ಹೋಗುತ್ತೀನಿ, ಅಜ್ಜಿ!” ಅಂತ ಹೇಳಿ ಅನಿತಾ ಕನಸಿನ ಲೋಕಕ್ಕೆ ತೆರಳಿದಳು.

(ಇದು ನಿಜವಾಗಿ ನಡೆದ ಘಟನೆ)

-ಡಾ. ವತ್ಸಲಾ ರಾಮಮೂರ್ತಿ