ಜೀವತಂತು

ರಿಚರ್ಡ್ ಅಟೆನ್ಬರೋ ಅವರ ಸಾಕ್ಷ್ಯಚಿತ್ರಗಳನ್ನು ನೋಡಿರುತ್ತೀರ. ಆಫ್ರಿಕಾದ ಹುಲ್ಲುಗಾವಲಿನ ದೃಶ್ಯ. ಸೋಮಾರಿ ಗಂಡು ಸಿಂಹ ಮರದ ನೆರಳಲ್ಲಿ ತೂಕಡಿಸುತ್ತಲೋ, ಉರುಳಾಡುತ್ತಲೋ ಬಿದ್ದಿರುತ್ತದೆ. ಅನತಿ ದೂರದಲ್ಲಿ ಸಿಂಹಿಣಿಗಳು ಅವಿತು ಬೇಟೆಗೆ ಹೊಂಚು ಹಾಕುತ್ತಿರುತ್ತವೆ. ಮೈಮರೆತು, ಸಿಂಹಿಣಿಗಳ ದಿಕ್ಕಿನಲ್ಲಿ ಬಂದಿರುವ ಎಮ್ಮೆಯ ಕರುವಿನೆಡೆ ಅವು ದಾಳಿ ಮಾಡಿದಾಗ ನಿಮ್ಮ ಮೈ ಝುಮ್ ಎಂದಿರದೇ? ಇದನ್ನು ಗ್ರಹಿಸಿ ವೇಗವಾಗಿ ಧಾವಿಸಿ ಬಂದ ಎಮ್ಮೆ ತನ್ನಿರುವನ್ನು ಲೆಕ್ಕಿಸದೆ ಹೋರಾಡಿ, ಮರಿಯನ್ನು ರಕ್ಷಿಸಿಕೊಂಡಾಗ ನೀವು, ನಿಮ್ಮೊಡನೆ ಕುಳಿತ ನಿಮ್ಮ ಮಗು ಚಪ್ಪಾಳೆ ತಟ್ಟಿರುವುದಿಲ್ಲವೇ? ಆಗ ಅದೇ ಮಗುವನ್ನೇ “ಅಯ್ಯೋ, ನನ್ನ ಕಂದ” ಎಂದು ಭಾವೋದ್ವೇಗದಿಂದ ಅಪ್ಪಿ ಮುದ್ದಾಡಿದ್ದರೆ, ನೀವು ಅಮ್ಮ. ಆ ಕ್ಷಣದಲ್ಲಿ, ಎಮ್ಮೆಯ ಕರು ಸಿಂಹಿಣಿಯ ಬಾಯಿಂದ ಬಚಾವಾದ ಸಂತೋಷದೊಡನೆ, ನನ್ನ ಮನೆಯಲ್ಲಿ, ನನ್ನ ಮಗು ಸುರಕ್ಷಿತವಾಗಿದೆ ಎಂಬ ಸಮಾಧಾನದ ನಿಟ್ಟುಸಿರು ಬಿಡುವ ಸ್ವಭಾವ ಜೀವ ತಂತುಗಳಲ್ಲಿ ಹಾಸುಹೊಕ್ಕಾಗಿರುವುದು ಅಮ್ಮ ಎಂಬ ಜೀವದಲ್ಲಿ ಮಾತ್ರ. 

ಆಕೆ ಹುಟ್ಟಿದ್ದು ಬೆಟ್ಟಗಳಲ್ಲಿ. ಮದುವೆಯಾಗಿ ಬಂದಿದ್ದು ಕಡಲಿನ ತಟಕ್ಕೆ. ಬೆಳೆದ ವಾತಾವರಣವೇ ಬೇರೆ, ಗಂಡನ ಮನೆಯ ಆಚಾರ-ವಿಚಾರಗಳೇ ಬೇರೆ; ಮಾತನಾಡುವ ಭಾಷೆಯೂ ಬೇರೆ. ಹೊರಟಿದ್ದು ದೊಡ್ಡ ಕುಟುಂಬದಿಂದ, ಹೊಕ್ಕಿದ್ದು ದೊಡ್ಡ ಕುಟುಂಬ; ಇದೊಂದೇ ಸಾಮ್ಯ. ಕಷ್ಟಪಟ್ಟು, ಬಾಳ ಸಂಗಾತಿಯ, ಆತನ ಮನೆಯವರ ಮನ ಗೆದ್ದಳು, ಭಾಷೆ ಕಲಿತು ಹಾಲಲ್ಲಿ ನೀರಾದಳು. ಆಕೆ ವಿದ್ಯಾವಂತೆ, ಪ್ರತಿಭಾವಂತೆ, ಉದ್ಯೋಗವತಿ. ಮನೆ ಒಳಗೆ, ಹೊರಗೆ ಕೆಲಸ ತೂಗಿಸಿಕೊಂಡು ಹೋಗುವ ಗಟ್ಟಿಗತಿ. ಆಕೆಗೆ ಇಬ್ಬರು ಮಕ್ಕಳು. ತನ್ನಂತೆ ಅವರು ಕಷ್ಟ ಪಡಬಾರದೆನ್ನುವುದು ಆಕೆಯ ಹಠ. ಅದರ ಹಾದಿಯ ನಕ್ಷೆಯನ್ನು ಆಕೆ ಮನದಲ್ಲೇ ಬಿಡಿಸಿಟ್ಟಳು. ಆ ದಿಸೆಯಲ್ಲಿ ಆಕೆಯದು ಅವಿರತ ಶ್ರಮ. ಅಡಿಗೆ ಮಾಡುತ್ತ, ಮಕ್ಕಳ ಕಿವಿ ಹಿಂಡಿ ಪಾಠ, ಬುದ್ಧಿ ಹೇಳುವುದು ಆಕೆಗೆ ಎಡಗೈ ಕೆಲಸ. ಬೆಳಿಗ್ಗೆ ಬೇಗನೆ ಎಬ್ಬಿಸಿ, ಸ್ನಾನ ಮಾಡಿಸಿ, ಚಹಾನೋ, ಕಾಫಿಯೋ ಕುಡಿಸಿ, ತೂಕಡಿಸುವಾಗ ತಲೆಗೆ ತಟ್ಟಿ ಎಬ್ಬಿಸಿ ಓದಿಸುವುದು ಆಕೆಯ ದಿನಚರಿ; ಕಠಿಣ ವಜ್ರದ ಹೊರಮೈ ಒಳಗಿರುವುದು ಬೆಣ್ಣೆಯಂತೆ ಮೃದುವಾದ ತಿರುಳು. ರಾತ್ರಿ ಮಲಗುವಾಗ ಹೇಳುವ ಕಥೆಗಳಲ್ಲಿ ಬರುವ ಅದ್ಭುತ ವ್ಯಕ್ತಿತ್ವಗಳನ್ನು ಮಾದರಿಯಾಗಿಸಿದಳು. ಮಕ್ಕಳ ಬಹುಮುಖ ಬೆಳವಣಿಗೆಗೆ ಆಸರೆಯಾದಳು. ನೀರಮೇಲಿನ ತಾವರೆಯ ಎಲೆಯಾದ ಗಂಡನನ್ನೂ ತನ್ನ ಕಾಯಕಕ್ಕೆ ಹುರಿದುಂಬಿಸಿದಳು. ಮಕ್ಕಳ ಸುರಕ್ಷತೆಗೆ ಧಕ್ಕೆ ಬಂದರೆ ಕರುಣಾಮಯಿ, ದುರ್ಗಿಯಾದಾಳು. ಕಣ್ಣಲ್ಲಿ ಕಣ್ಣಿಟ್ಟು, ದಾರಿ ತಪ್ಪದಂತೆ, ಮಕ್ಕಳು ಗಮ್ಯ ತಲುಪುವವರೆಗೂ ಕಾದಳು. ಅದಾದ ಮೇಲೂ ಮಕ್ಕಳು ಕರೆದಾಗ, ಕರ್ತವ್ಯವೆಂದು ಅವರಿದ್ದಲ್ಲಿ ಹೋಗಿ, ಕೈಲಾದಷ್ಟು ಸಹಾಯ ಮಾಡಿದಳು. ಮಕ್ಕಳ ಕರೆಗೆ, ಅಪ್ಪುಗೆಗೆ ಕರಗಿ ನೀರಾದಳು. ಈ ಕಥೆ ನನ್ನಮ್ಮಂದೋ ನಿಮ್ಮ ಅಮ್ಮಂದೋ? ಎಲ್ಲರ ಅಮ್ಮಂದೂ ಅಲ್ಲವೇ.  

(ಚಿತ್ರ ಕೃಪೆ: ಗೂಗಲ್)

“ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ” : ಶಂಕರಾಚಾರ್ಯರ ಮಾತು ಸಾರ್ವಕಾಲಿಕ ಸತ್ಯ; ಎಲ್ಲ ಪ್ರಾಣಿ ವರ್ಗಗಳಿಗೂ ಅನ್ವಯವಾಗುವಂತಹ ಮಾತು. ಇಂತಹ ಅದ್ಭುತ ಜೀವಕ್ಕೆ ಧನ್ಯವಾದ ಎಂದು ಹೇಳಲು ಸಾಧ್ಯವೇ! ಆದರೂ ಅದು ಆಗಾಗ ಬೇಕಾಗುವಂತಹ ಟಾನಿಕ್. ಅದಕ್ಕಾಗೇ ಬಂದಿದೆ ಈ ರವಿವಾರ ‘ಮದರ್ಸ್ ಡೇ’. ಬ್ರಿಟನ್ನಿನಲ್ಲಿ ಇದು ಈ ರವಿವಾರವಾದರೆ, ಅಮೆರಿಕ – ಭಾರತಗಳಲ್ಲಿ ಇನ್ನೆರಡು ತಿಂಗಳುಗಳಲ್ಲಿ. ನಮ್ಮಂಥ ಎಡಬಿಡಂಗಿಗಳಿಗೆ ಎರಡೂ ಆದೀತು. ಅಮ್ಮನಿಗೆ ಎರಡುಸಲವೇನು ಕ್ಷಣಕ್ಷಣವೂ ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ. 

ಮದರ್ಸ್ ಡೇ ಬಂದಂತೇ, ವ್ಯಾಪಾರಿಗಳು ಅದರ ಲಾಭ ಪಡೆಯಲು ವಿಶೇಷ ಗಾಳಗಳೊಂದಿಗೆ ಕಾಯುತ್ತಲೇ ಇರುತ್ತಾರೆ ಧನ್ಯವಾದಕ್ಕೊಂದು ಕಾಣಿಕೆ ಸಿಕ್ಕಿಸಲು. ಭಟ್ಟರು ಬರೆದಂತೆ ನಾವು ಅಮ್ಮನ ಗಾಳಕ್ಕೆ ಸಿಕ್ಕಿದ್ದರೂ ವ್ಯಾಪಾರಿಯ ಗಾಳಕ್ಕೆ ಇನ್ನೊಮ್ಮೆ ಬೀಳುವುದು ಲೌಕಿಕದ ಸತ್ಯ. ಹಾಗೇ ಹಲವು ಹನ್ನೆರಡು ಗಾಳಗಳಿಗೆ ಸಿಕ್ಕಿದ್ದರೂ, ಅಮ್ಮನ ಗಾಳದ ಶಕ್ತಿಯೇ ಬೇರೆ. ಹಾಗಿರುವಾಗ ಅಮ್ಮ ಮಗುವಿನಿಂದ ಅಪೇಕ್ಷಿಸುವುದು ಏನು? ನನಗನಿಸಿದಂತೆ ಆಕೆಗೆ ಬೇಕಿರುವುದು ನನ್ನ ಮಗು ತಾನು ಹುಟ್ಟಿ ಬೆಳೆದ ನೆಲದ ಮಣ್ಣಲ್ಲಿ ಭದ್ರವಾಗಿ ಹೆಜ್ಜೆ ಊರಿ ನಿಲ್ಲುವುದು. ಅದು ಸಾಧ್ಯವಿಲ್ಲದಿದ್ದರೆ, ಎಲ್ಲೇ ಇದ್ದರೂ ಸ್ವಾವಲಂಬಿಯಾಗಿ, ಉತ್ತಮ ನಾಗರೀಕರಾಗಿರುವುದು. ನಮ್ಮ ಮಕ್ಕಳ ಅಮ್ಮನಿಗೆ ಆಸರೆಯಾಗಿ, ಆಕೆಯನ್ನು ಗೌರವಯುತವಾಗಿ ನಡೆಸಿಕೊಳ್ಳುವುದನ್ನು ಆಕೆ ಬಯಸುತ್ತಾಳೆ. ನಮ್ಮ ಸುತ್ತಲಿನ ಅಮ್ಮಂದಿರೊಡನೆ ಗೌರವಯುತವಾಗಿ ನಡೆಯುವುದನ್ನು ಅಪೇಕ್ಷಿಸುತ್ತಾಳೆ. ನಮ್ಮ ಮನೆಯಲ್ಲೇ ಇರುವ ಬಾಲೆ ಆತ್ಮ ವಿಶ್ವಾಸದಿಂದ ಮುಂದಿನ ಸುಧೃಡ ಪೀಳಿಗೆಯ ಅಡಿಪಾಯವಾಗಿ ಬೆಳೆಯುವುದನ್ನು ನಿರೀಕ್ಷಿಸುತ್ತಾಳೆ. ಮಮತೆಯ ಗಾಳದ ಕೊಂಡಿಯಿಂದ ಸೂಸಿದ ‘ಅಮ್ಮ’ ಎಂಬ ಜೀವತಂತು ಭವಿಷ್ಯದ ಮಕ್ಕಳಲ್ಲಿ ಹಾಸುಹೊಕ್ಕಾಗುವುದರಲ್ಲಿ ಸಾರ್ಥಕ್ಯವನ್ನು ಕಾಣುತ್ತಾಳೆ. ದೂರದಲ್ಲಿರುವ ನನಗೆ, ದೂರವಾಣಿಯಲ್ಲಿ ಅಮ್ಮನಿಗೆ ಮದರ್ಸ್ ಡೇಯಂದು ಹಾರೈಸಿ, ಆಶೀರ್ವಾದ ಪಡೆಯುವುದರ ಜೊತೆಗೆ, ಆಕೆಯ ಅಪೇಕ್ಷೆಗಳನ್ನು ಕೈಲಾದಷ್ಟು ನಿರ್ವಹಿಸುವುದೇ ನಾನು ಕೊಡುವ ಕಾಣಿಕೆ.

  • ರಾಂ 

   

ಸ್ಥಿತ್ಯಂತರ ತುಮುಲ-ತರಂಗ…. by ತಿಪ್ಪೇಸ್ವಾಮಿ ಬಿಲ್ಲಹಳ್ಳಿ

♥ ∗ ಅನಿವಾಸಿಗೆ  ಐದು ವರ್ಷದ ಹರ್ಷ ∗ ♥

(ಕನ್ನಡಿಗರಾದ ನಾವೆಲ್ಲ ತಪ್ಪದೆ ವರ್ಷಾನು ವರ್ಷ ತಾಯ್ನಾಡಿಗೆ ಭೇಟಿ ಕೊಡುತ್ತೇವೆ. ಇಂತಹ ದಿನ ಭಾರತಕ್ಕೆ ಹೋಗುತ್ತೇವೆ ಎಂದು ತಿಳಿದಕೂಡಲೇ ನಮ್ಮಲ್ಲಿ ಯಾವುದೋ ಒಂದು ವಿಶೇಷ ಅನುಭೂತಿ ಮೂಡತೊಡಗುತ್ತದೆ. ತಾವರೆಯ ಎಲೆಯ ಮೇಲಿನ ನೀರ ಹನಿಯಂತೆ ಇಲ್ಲಿ ಬದುಕಿಕೊಂಡಿರುವ ನಾವು ಭಾರತದ ನೆಲದ ಮೇಲೆ ಕಾಲಿಡುತ್ತಿದ್ದಂತೆ ತಟ್ಟಕ್ಕನೆ ಜಾರಿ ಮೂಲ ನೀರನ್ನು ಸೇರುತ್ತೇವೆ. ಆಗಷ್ಟೆ ದಶಕಗಳ ಕಾಲ ನಮ್ಮ ಬದುಕನ್ನು ಹಂಚಿಕೊಂಡ ಹೊರನಾಡು ನಮ್ಮ ಬದುಕಿನ ಮೇಲೆ ಬೀರಿರುವ ಪ್ರಭಾವದ ಅರಿವಾಗಲು ತೊಡಗುತ್ತದೆ. ಈ ಕಾಲ ಬಿಂದುವಿನೊಡನೆ ನಾವು ಪ್ರತಿ ಬಾರಿ ಸಂಧಿಸುತ್ತೇವೆ. ಇಂತಹ ಹನಿ ಮತ್ತೆ ತವರನ್ನು ಸಂದಿಸುವ ಘಳಿಗೆಯ ಸ್ಥಿತ್ಯಂತರ, ಹಲವು ತುಮುಲ ತರಂಗಗಳನ್ನು ಸೃಷ್ಟಿಸುತ್ತದೆ.ನಮ್ಮ ನಾಡಿನ ಮೇಲಿನ ಪ್ರೀತಿಯಿಂದಾಗಿ, ಬೇರೆಡೆ ಕಂಡ ಎಲ್ಲ ಒಳಿತುಗಳು ಇಲ್ಲಿಗೂ ಬರಬಾರದೇಕೆ ಎನ್ನುವ ಒಂದು ಸವಿಯಾದ ಆಶಯ ನಮ್ಮನ್ನು ಆಳವಾಗಿ ಬಾಧಿಸತೊಡಗುತ್ತದೆ.ಜೊತೆಗೆ ಲೌಕಿಕ ಜಗತ್ತಿನ ಸಮಸ್ತವೂ ಇರುವ ನಮ್ಮ ವೃತ್ತಿ ಸ್ಥಳದಲ್ಲಿ ಸಿಗದ ಬಂಧು ಬಾಂಧವರ ಓಡನಾಟ ನಮ್ಮ ಕರುಳನ್ನು ತಿರುಚುತ್ತವೆ. ಇಲ್ಲಿನವರಂತೆ ನಾಟಕದ ನುಡಿಗಳನ್ನು ಆಡಲು ಬಾರದೆ ಇದ್ದರೂ ಯಾವುದೋ ಸಬೂಬಿನಲ್ಲಿ ದೂರದಿಂದ ಬರುವ ಕರುಳ ಕುಡಿಗಳನ್ನು ಬರಿ ನೋಡಿಯೇ ಆನಂದಿಸುವ, ನೀನು ದೂರವಿದ್ದರೂ ನಮಗೇನು ಆಗಿಲ್ಲ ಎನ್ನುವ ಸೋಗಿನ ಮಸುಕಲ್ಲೇ ಪ್ರೀತಿಯ ಹೊಳೆಯನ್ನು ಹರಿಸುವ ನಮ್ಮ ಹೆತ್ತವರ ಸಂದಿಗ್ದಗಳು, ಮುಚ್ಚಿಟ್ಟುಕೊಂಡರೂ ಇಣುಕಿ ನಮ್ಮನ್ನು ಅಣಕಿಸುತ್ತವೆ.

ನಮ್ಮ ಆಶಯಕ್ಕೆ ಒದಗುವ ವೇಗದಲ್ಲೇ  ಬೇಕಾದ ಎಲ್ಲ ಬದಲಾವಣೆಗಳು  ಆಗುವುದಿಲ್ಲ.ಈ  ಕಾರಣ ಸ್ಥಿತ್ಯಂತರದ ಅನುಭವ ಬಹುಶಃ ನಿರಂತರ. “ನಾವಿಷ್ಟೇ ಬಿಡಿ ಆದರೆ ಮಿಕ್ಕವರು ಮಾತ್ರ ಅತಿ ವಿಶೇಷ “ ಎಂದು ಪೂರ್ವ ನಿರ್ಧಾರಗಳನ್ನು ಮಾಡಿ  ಮೈ-ಕೈ ಕೊಡವಿಕೊಂಡವರಿಗೆ ಈ ಬಾಧೆ ಕಾಡುವುದಿಲ್ಲ. ಮಾಡಿರದ ಹಲವರಲ್ಲಿ  “ ನಾವೂ ಅವರಂತಾಗಬೇಕು, ನಮ್ಮದನ್ನು ಉಳಿಸಿಕೊಳ್ಳಬೇಕು “ ಎನ್ನುವ ಪ್ರಬಲ  ಅನಿಸಿಕೆಗಳು  ಅವರನ್ನು ಮುನ್ನೆಡೆಯಲು ಪ್ರೇರೇಪಿಸುತ್ತದೆ.

ಭಾರತದ ಭೇಟಿ ತರುವ ತುಮುಲಗಳ ತರಂಗಗಳನ್ನು ಸ್ವಾಮಿಯವರು ಈ ವಾರದ ಅನಿವಾಸಿಯ ದಡಕ್ಕೆ ಬಹಳ ಸಹಜವಾಗಿ ಆದರೆ ಮನಮುಟ್ಟುವಂತೆ ಹರಿಸಿದ್ದಾರೆ-ಸಂ )


ಪರಿಚಯ

ತಿಪ್ಪೇಸ್ವಾಮಿ ಬಿಲ್ಲಹಳ್ಳಿಯವರು ನಮ್ಮಲ್ಲಿ ಹಲವರಿಗೆ ಪರಿಚಿತರು. ಹೆಸರಿನಲ್ಲಿರುವಂತೆಯೇ ದಾವಣಗೆರೆ ಜಿಲ್ಲೆಯ ಬಿಲ್ಲಹಳ್ಳಿ ಇವರ ಸ್ವಂತದ ಊರು. ದಾವಣಗೆರೆಯ ಚನ್ನಗಿರಿ ತಾಲ್ಲೂಕಿನ ಸಂತೆ ಬೆನ್ನೂರಿನಲ್ಲಿ ಇವರ ಜನನ. ಪ್ರಾಥಮಿಕ ಶಿಕ್ಷಣವನ್ನು ತಾವರೆಕೆರೆ ಗ್ರಾಮದಲ್ಲಿ , ಪ್ರೌಢ ಶಿಕ್ಷಣವನ್ನು ಭದ್ರಾವತಿಯಲ್ಲಿ ಮಾಡಿದ್ದಾರೆ.ಮುಂದೆ ದಾವಣಗೆರೆಯ ಬಾಪೂಜಿ ನರ್ಸಿಂಗ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಇವರು ಇಂಗ್ಲೆಂಡಿನಲ್ಲಿ ಕಳೆದ ೨೦ ವರ್ಷಗಳಿಂದ ನೆಲೆಸಿದ್ದಾರೆ. ಈಗ ಸೌಥೆಂಡ್ ಆನ್ ಸೀ, ಎಸ್ಸೆಕ್ಸ್ ನಲ್ಲಿ ಅಲರ್ಜಿ ಸರ್ವೀಸ್ ವಿಭಾಗದಲ್ಲಿ ಲೀಡ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ.

ಭಾರತದಲ್ಲಿ ನರ್ಸಿಂಗ್ ಬೆಳವಣಿಗೆಗಾಗಿ ವಿಶೇಷ ಪ್ರಯತ್ನಗಳನ್ನು ಅವಿರತ ಮಾಡುತ್ತಿರುವ ತಿಪ್ಪೇಸ್ವಾಮಿ ಬಿಲ್ಲಹಳ್ಳಿಯವರ ಪ್ರಯತ್ನ ಅತ್ಯಂತ ಶ್ಲಾಘನೀಯ.

ಕನ್ನಡ ಬರಹ, ಪರ್ವಾತಾರೋಹಣ, ನಾಯಕತ್ವದ ಚಟುವಟಿಕೆಗಳಲ್ಲಿ ಇವರಿಗೆ ವಿಶೇಷ ಆಸಕ್ತಿಯಿದೆ.ಕನ್ನಡ ಬಳಗದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ 2016-2019 ರವರೆಗೆ ಸೇವೆ ಸಲ್ಲಿಸಿರುವ ಇವರು ಕೇಂಬ್ರಿಡ್ಜ್ ಕನ್ನಡ ಬಳಗದ ಕಾರ್ಯಕ್ರಮದ ಆಯೋಜನೆಯ ಮುಂದಾಳತ್ವವನ್ನು ವಹಿಸಿದ್ದನ್ನು ನಾವಿಲ್ಲಿ ನೆನೆಯಬಹುದು.

ಸ್ಥಿತ್ಯಂತರ ತುಮುಲ-ತರಂಗ…

ಆಗಸ್ಟ್ 8 ರಂದು ಲಂಡನ್ ನಿಂದ ಬೆಂಗಳೂರಿಗೆ 3 ವಾರದ ರಜೆಗೆಂದು ಪ್ರಯಾಣಿಸಿದೆ.  ಸ್ವಂತ ಊರಿನ ಪ್ರಯಾಣದ ಒಂದು ಭಾಗ.

ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ, ಉಕ್ಕಿ ಹರಿಯುತ್ತಿದ್ದ ಕೆರೆ- ಕಟ್ಟೆ- ಹೊಳೆ. ವರುಣನ ಆರ್ಭಟಕ್ಕೆ ಸಿಲುಕಿ ತತ್ತರಿಸಿದ ಹೊಲ, ಮರ, ಗಿಡಗಳು, ಜಲ ಪ್ರವಾಹದ ರಭಸಕ್ಕೆ ಕೊಚ್ಚಿ ಹೋದ ಹೆದ್ದಾರಿಗಳು, ಮುರಿದ ಸೇತುವೆಗಳು, ಮನೆ, ವಾಹನ, ಜನ- ಜಾನುವಾರುಗಳು, ಅಳಿದುಳಿದ ಕಾಡಿನಿಂದ ಬೃಹದಾಕಾರವಾಗಿ ಬೆಳೆದು ನಿಂತಿರುವ ನಾಡಿಗೆ ವಲಸೆ ಬಂದ ಪ್ರಾಣಿಗಳು ಹಾದು ಹೋಗುತ್ತಿದ್ದವು. ಗಿಡ ಮರಗಳಿಲ್ಲದ ಬೆಟ್ಟ-ಗುಡ್ಡಗಳು  ಕೆಲ ವಾರಗಳ ಹಿಂದೆ ಬಿಸಿಲಿಗೆ ಬೆಂದು ಬೆಂಗಾವಲಾಗಿ ಈಗ ಮಳೆಯ ಆರ್ಭಟಕ್ಕೆ  ತನ್ನ ಒಡಲು ಮೀರುವಷ್ಟು ಜಲವನ್ನು ಕುಡಿದು ತನ್ನ ಒಡಲೊಡೆದು ಎಲ್ಲೆಂದರಲ್ಲಿ ಕುಸಿದು ಮಾನವ ನಿರ್ಮಿತ ದಾರಿಗೆ ಅಡ್ಡಗಾಲಾಗಿ ನಿಂತು ಮಾನವ ಕುಲದ ದುರಾಸೆಯಿಂದ ತನಗಾದ ಅನ್ಯಾಯಕ್ಕೆ ರೊಚ್ಚಿಗೆದ್ದು ಮುಷ್ಕರ ಹೂಡಿದಂತೆ ಭಾಸವಾಗುತ್ತಿತ್ತು.

ಬರಿದಾದ  ಕೆರೆ-ಕಟ್ಟೆ-ನದಿಗಳನ್ನೇ ಕಸದ ಬುತ್ತಿಯೆಂದು ಭಾವಿಸಿ ಎಸೆದ ಪ್ಲಾಸ್ಟಿಕ್ ಕಪ್, ಬ್ಯಾಗ್, ಪ್ಯಾಕೆಟ್, ಕ್ಯಾನ್, ಮೆಡಿಸಿನ್ ಪ್ಯಾಕ್,  ಹೀಗೇ ಸಾವಿರಾರು ರೀತಿಯ  ತ್ಯಾಜ್ಯ ವಸ್ತುಗಳನ್ನು  ಕೆರೆ-ಕಟ್ಟೆ- ನದಿಗಳು ಹೊರಗೆಸೆದು ನಾಡಿಗೆ ಮುತ್ತು ರತ್ನ ಹವಳಗಳ ರೀತಿಯಲ್ಲಿ ಹಿಂದಿರುಗಿಸಿ ತನ್ನ ಸೇಡು ತೀರಿಸಿಕೊಂಡಂತೆನಿಸುತಿತ್ತು.

ದೇವನಹಳ್ಳಿಯಿಂದ ಬೆಂಗಳೂರು ರೈಲ್ವೆ  ನಿಲ್ದಾಣಕ್ಕೆ ಮುಂಜಾನೆ 4 ರ ಸಮಯದಲ್ಲಿ ಪ್ರಯಾಣಿಸುವಾಗ ನಗರದ ಕಳೆದ 20 ವರ್ಷದ ಬೆಳವಣಿಗಗಳು ಉದ್ಯಾನ ನಗರಿಯ ಖ್ಯಾತಿಯನ್ನು ಹುಸಿರು ಹಿಚುಕಿ ಕೊಂದು ಹಸಿರಿನ್ನೇ ಬೇರು ಸಮೇತ ಕಿತ್ತು ಒಗೆದು ಕಾಂಕ್ರೀಟ್ ಕಟ್ಟಡಗಳನ್ನು ಎಬ್ಬಿಸಿ ನಿಲ್ಲಿಸಿದಂತಿತ್ತು. ಈಗಿನ ಬೆಂಗಳೂರು ಗಾರ್ಡನ್ ಸಿಟಿಯಲ್ಲ ಅದು ಗೋ(ಡೌನ್) ಸಿಟಿಯಾಗಿ ಬದಲಾಗಿ ಬಿಟ್ಟಿದೆ. ಭೌಗೋಳಿಕ ವಿಸ್ತೀರ್ಣದ ಪ್ರಕಾರ ಬೆಂಗಳೂರು ನಗರ ಲಂಡನ್ಗಿಂತಲೂ ತುಂಬಾ ಚಿಕ್ಕದಾದರೂ ಜನಸಂಖ್ಯೆಯಲ್ಲಿ ಈಗ ಅದು ಲಂಡನ್ ಮಾದರಿಯಲ್ಲಿಯೇ ವಲಸಿಗರ ತಾಣವಾಗಿ ಪರಿವರ್ತಿತವಾಗಿದೆ. ವಿಪರ್ಯಾಸವೆಂದರೆ ಲಂಡನ್ನಲ್ಲಿ  ಹಾಸಿಗೆ ಇದ್ದಷ್ಟು ಕಾಲು ಚಾಚಿದರೆ ಬೆಂಗಳೂರಲ್ಲಿ ಕಾಲು ಚಾಚಿದಲ್ಲಿ ಹಾಸಿಗೆ ಹಾಸಿದಂತಿದೆ😰

ಶತಾಬ್ದಿ ರೈಲಿನಲ್ಲಿ ದಾವಣಗೆರೆಗೆ ಪಯಣ ಮುಂದುವರೆಸಿದೆ. ಯಥಾ ಪ್ರಕಾರ ರೈಲಿನಲ್ಲಿ ಟೀ, ಕಾಫಿ, ತುಮಕೂರ್ ತಟ್ಟೆ ಇಡ್ಲಿ, ದೋಸೆ, ಉದ್ದಿನ ವಡೆ, ಮಸಾಲ ದೋಸೆ ಇವೆಲ್ಲವನ್ನೂ ರೈಲ್ವೆ ಕ್ಯಾಂಟೀನ್ ಸಿಬ್ಬಂದಿ ಎಂಬ ಹೆಸರಿನಲ್ಲಿ ಮಾರಾಟ ಮಾಡುವವರು ಕನಿಷ್ಠ 5 ನಿಮಿಷಕ್ಕೆ ಒಬ್ಬೊಬ್ಬರೆಂಬಂತೆ ಬಂದೇ ಬರುತ್ತಿದ್ದರು. ಸವಿಯುವ ಆಸೆ ಮನದಲ್ಲಿದ್ದರೂ ಅದನ್ನು ಮಾರಾಟ ಮಾಡುವವರ ನಡವಳಿಕೆ, ಸ್ವಚ್ಛೆತೆಯ ಬಗೆಗಿನ ಕಾಳಜಿ, ಅವೈಜ್ಞಾನಿಕ ಶೈಲಿಯ ( ಶೌಚಾಲಯದ ಪಕ್ಕದಲ್ಲಿಯೇ ಉಗ್ರಾಣ) ಬಹಿರ್ದೆಸೆಗೆ ಹೋಗಿ ಸೋಪಿಲ್ಲದೆ ಕೈ ತೊಳೆದ ಮಾರಾಟಗಾರರನ್ನು ಕಂಡು ನನ್ನ ಹಸಿವನ್ನು ನೀರಿನಿಂದಲೇ ಹಿಂಗಿಸಿ ಕೊಂಡು ಕಿಟಕಿಯ ಕಡೆ ಗಮನ ಹರಿಸಿದೆ. ಕಳೆದ 20 ವರ್ಷಗಳಲ್ಲಿ ಬೆಂಗಳೂರೇ ಏಕೆ ಇಡೀ ರಾಜ್ಯವೇ ಸಾಕಷ್ಟು ಬದಲಾವಣೆಯಾದರೂ ರೈಲ್ವೆ ಬೋಗಿಯಲ್ಲಿ ಕಸದ ಡಬ್ಬವನ್ನು ಇಡಬೇಕೆಂಬ ಐಡಿಯಾ ಇದುವರೆಗೂ ಯಾರಿಗೂ ಅನ್ನಿಸಿಲ್ಲವೇ?? ಇಂದಿಗೂ ಕೂಡ ರೈಲಿನಲ್ಲಿ ತ್ಯಾಜ್ಯ ವಸ್ತುಗಳನ್ನು ಕಿಟಕಿಯ ಮೂಲಕ ಟ್ರ್ಯಾಕ್ ಮೇಲೆ ಎಸೆಯುವ ಹವ್ಯಾಸ ಬದಲಾಗಲಿಲ್ಲ. ಒಂದೆರಡು ಜೋಂಪು ನಿದ್ರಿಸುವಷ್ಟರಲ್ಲಿ ದಾವಣಗೆರೆ ತಲುಪಿದೆ. ಸ್ಟೇಷನ್ಗೆ ಅಪ್ಪಾಜಿ ಬಂದಿದ್ದರು. ಮಗನನ್ನು ಕಾಣುವ ತವಕವಿದ್ದರೂ ಅದನ್ನು ಅಮ್ಮನಿಗೆ ತೋರದೆ “ ಅವನಿಗೆ ಆಟೋದವರ ವ್ಯವಹಾರ ತಿಳಿಯುವುದಿಲ್ಲ, 60 ರೂಪಾಯಿ ಕೇಳಿದರೆ ಸುಮ್ಮನೆ ಕೊಟ್ಟು ಬರುತ್ತಾನೆ” ಎಂದು ಹೇಳಿ ತಾವೇ 50 ರುಪಾಯಿಗೆ ಒಪ್ಪಿಸಿ ಒಬ್ಬ ಆಟೋ ಚಾಲಕನೊಂದಿಗೆ ಬಂದಿದ್ದರು. ಆತ ನಮ್ಮ ಎದುರು ಮನೆಯವನಾದ್ದರಿಂದ ಅಪ್ಪಾಜಿಗೆ 10 ರೂಪಾಯಿ ಡಿಸ್ಕೌಂಟ್ ದೊರಕಿತ್ತು. ಮಗನ ಕಂಡ ಖುಷಿ ಅವರಿಗೆ ಇದ್ದರೂ ಅದನ್ನು ತೋರ್ಪಡಿಸದೆ ಬ್ಯಾಗನ್ನು ನನ್ನಿಂದ ಸ್ವೀಕರಿಸಿ ಬರಬರನೇ ಆಟೋ ಕಡೆ ನಡೆದರು.

ಮನೆಗೆ ಬಂದಾಕ್ಷಣ ಎಂದಿನಂತೆ ಅಮ್ಮ ಸ್ವಾಗತಿಸಿದರು. ಸಮಯ 11 ಘಂಟೆಯಾಗಿತ್ತು. ತಿಂಡಿಗೆ ದೋಸೆಯ ಜೊತೆಗೆ ಹೋಳಿಗೆ ತಿನ್ನಿಸುವ ಅಮ್ಮನ ಆಸೆಗೆ ತಣ್ಣೀರೆರಚಿ ರಾಗಿ ಮುದ್ದೆ, ಹುಣಸೆ ಹುಳಿ ಸಾರು, ಅನ್ನ ಊಟ ಬೇಕೆಂದು ಹೇಳಿದೆ. ಸ್ನಾನ ಮುಗಿಸುವಲ್ಲಿ ಎಲ್ಲಾ ರೆಡಿ ಆಯಿತು. ಬೃಂಚ್ (ಬ್ರೇಕ್ಫಾಸ್ಟ್ + ಲಂಚ್) ಮುಗಿಸಿ ಅಮ್ಮ ಅಪ್ಪಂದಿರೊಂದಿಗೆ ಹಾಗೂ ಅಲ್ಲಿಯೇ ನೆಲೆಸಿರುವ ನನ್ನ ತಂಗಿಯೊಂದಿಗೆ ಬಹು ದಿನಗಳ ಹರಟೆ ಮುಂದುವರೆಸಿ ಹಾಗೆಯೇ ದಿವಾನ್ ಮೇಲೆ ನಿದ್ದೆಹೋದೆ.

2 ದಿನಗಳ ಬಳಿಕ ನನಗೂ ಮುನ್ನವೇ ಇಂಡಿಯಾ ತಲುಪಿದ್ದ ಹೆಂಡತಿ ಹಾಗೂ ಮಗಳು ಧಾರವಾಡದ ಮಾವನ ಮನೆಯಿಂದ ದಾವಣಗೆರೆ ತಲುಪಿದರು. ನನ್ನ ತಮ್ಮ ಅವನ ಕುಟುಂಬ ಸಮೇತ ತರೀಕೆರೆಯಿಂದ ದಾವಣಗೆರೆ ತಲುಪಿದರು. ತಂಗಿ ಭಾವ ಹಾಗೂ ಅವರಿಬ್ಬರ ಮಕ್ಕಳು ಸೇರಿದರು. ಎಲ್ಲರೂ ಕೂಡಿದಾಗ ಹಬ್ಬದ ವಾತಾವರಣ ಮನೆಯಲ್ಲಿ…..

ತಮ್ಮನ ಮಗ ನಕ್ಷನ ತುಂಟಾಟ ಎಲ್ಲರಿಗೂ ನಗೆಯ ಹಬ್ಬವಾಗಿತ್ತು. ಇತ್ತೀಚೆಗಷ್ಟೇ ಅವನ ನರ್ಸರಿ ಎಂಟ್ರಿ ಆದ್ದರಿಂದ ಅವನ ಎ, ಬಿ, ಸಿ, ಡಿ ಹಾಗೂ 1,2,3 ಹೇಳುವ ತೊದಲಿನ ಶೈಲಿ ಮತ್ತೆ ಮತ್ತೆ ಕೇಳಬೇಕೆಂಬ ಬಯಕೆಯಾಗಿ ಅದನ್ನು ವಿಡಿಯೋ ಮಾಡಿಕೊಂಡೆ.

ನಂತರದ ದಿನಗಳಲ್ಲಿ ಕುಟುಂಬ ಸಮೇತ ಆದಷ್ಟು ಸಂಬಂಧಿಗಳ ಮನೆಗಳಿಗೆ ಭೇಟಿ ನೀಡಿ ಹಿಂದಿರುಗೆದೆವು. ಇರುವ ಸಮಯದಲ್ಲಿ ಎಲ್ಲರನ್ನೂ ಭೇಟಿಯಾಗುವುದು ಅಸಾಧ್ಯವಾದರೂ ಆದಷ್ಟು ಸಮಯವನ್ನು ಸಂಬಂಧಿಗಳೊಂದಿಗೆ ಕಳೆಯುವುದೇ ಒಂದು ಸಂತೋಷ ಹಾಗೂ ಮರೆಲಾಗದ ನೆನಪುಗಳು.

ನಂತರ ಅತ್ತೆ ಮಾವಂದಿರ ಭೇಟಿಗೆ ಧಾರವಾಡ ತಲುಪಿ ಒಂದು ದಿನದ ಪ್ರವಾಸವೆಂದು ನವಿಲು ತೀರ್ಥಕ್ಕೆ ಹೋಗಿ ಬಂದೆವು. ದಾವಣಗೆರೆಗೆ ಹಿಂದಿರುಗುವ ಸಮಯದಲ್ಲಿ ರಾಣೇಬೆನ್ನೂರಿನಲ್ಲಿ ನೆಲೆಸಿರುವ ದೇವಕುಮಾರ್ ಮಾಮನ ಯುನಿಸೆಮ್ ಕಂಪನಿಗೆ ಭೇಟಿ ನೀಡಿ ಅವರ ಕಳೆದ 15 ವರ್ಷಗಳಲ್ಲಿ ಬೆಳೆಸಿರುವ ಸೀಡ್ಸ್ ಕಂಪನಿಯ ವಹಿವಾಟಿಕೆಯ ಬಗ್ಗೆ ಅರಿತೆ. ಅವರ ಸರಳ ಸ್ವಭಾವ, ಸ್ವಂತ ಹಾಗೂ ಕಂಪನಿಯ ಸಾಧನೆಗಳ ಬಗ್ಗೆ ತಿಳಿದು ತುಂಬಾ ಸಂತೋಷದ ಜೊತೆಗೆ ಅವರ ಬಗ್ಗೆ ಅಪಾರ ಗೌರವ ಇನ್ನೂ ಹೆಚ್ಚಿತು. ಅವರಿಂದ  ಸ್ಪೂರ್ತಿಗೊಂಡು ಮುಂದೆ ಅವಕಾಶಗಳು ಸಿಕ್ಕಿದಲ್ಲಿ ನಾವು ಆ ರೀತಿಯ ಸಾಧನೆಗಳನ್ನು ಮಾಡಬೇಕೆಂಬ ಆಸೆಯಿಂದನ್ನು ಕಂಡು ದಾವಣಗೆರೆಗೆ ಹಿಂದಿರುಗಿದೆ.

ರಜೆಯ ಕೊನೆಯ ವಾರವನ್ನು  ದಾವಣಗೆರೆ, ತರೀಕೆರೆಯಲ್ಲಿ ಕಳೆದೆ. ಒಂದು ದಿನ ಅಮ್ಮ, ಅಪ್ಪ ಹಾಗೂ ತಮ್ಮನ ಕುಟುಂಬ ಸಮೇತ ಕೆಮ್ಮಣ್ಣುಗುಂಡಿ ಮತ್ತು ಕಲ್ಲತ್ತಿಗಿರಿಗೆ ಪ್ರವಾಸ ಕೈಗೊಂಡೆವು. ಆ ಐತಿಹಾಸಿಕ ಸ್ಥಳಗಳು ನನ್ನ ಕಾಲೇಜು ದಿನಗಳಲ್ಲಿ ಗೆಳೆಯರ ಕೂಡ ಕಳೆದ ಸಮಯಗಳನ್ನು ನೆನಪಿಸಿದವು.

ನಂತರ ದಾವಣಗೆರೆಯಿಂದ ತಮ್ಮನ ಕುಟುಂಬದೊಂದಿಗೆ ಬೆಂಗಳೂರು ತಲುಪಿದೆವು. ಅಲ್ಲಿ ನನ್ನ ಹೆಂಡತಿ, ಮಗಳ ಜೊತೆಗೆ ಅತ್ತೆ, ಮಾವ, ಕೋಗಲೂರಿನ ಅಳಿಯ (ಮದುವೆ ಗಂಡು) ಹಾಗೂ ಪರಮೇಶ್ ಎಲ್ಲರೂ ಸೇರಿ ಮಂಜುವಿನ 39ನೆ ಹುಟ್ಟು ಹಬ್ಬ ಆಚರಿಸಿ ಮಾರನೇ ದಿನ ಬೆಳಿಗಿನ ಜಾವ ಲಂಡನ್ ಫ್ಲೈಟ್ ಹತ್ತಿದೆವು. ವಿಮಾನದಲ್ಲಿ ಕುಳಿತಾಗ ರಜೆಯ ನೆನಪುಗಳನ್ನು ಒಂಟೆಯ ರೀತಿಯಲ್ಲಿ ಮೆಲುಕು ಹಾಕುತ್ತ ಯೋಚಿಸುತ್ತ ನಿದ್ರೆಗೆ ಹೋದೆ.

ವಿದೇಶದಲ್ಲಿ ನೆಲೆಸಿರುವ ಪ್ರತಿ ಭಾರತೀಯನಂತೆ ನನಗೂ ಹಾಗೂ ಕುಟುಂಬಕ್ಕೂ ಭಾರತದ ಬಗ್ಗೆ ಎಲ್ಲಿಲ್ಲದ ಅಭಿಮಾನ, ಪ್ರೀತಿ ಹಾಗೂ ಗೌರವ. ತಾಯ್ನಾಡ ಮೇಲಿನ ಪ್ರೀತಿಯ ಜೊತೆಗೆ ಅಲ್ಲಿನ ರಾಜಕೀಯ ಅವ್ಯವಸ್ಥೆ, ಭ್ರಷ್ಟಾಚಾರ, ಪರಿಸರ ಮಾಲಿನ್ಯತೆ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಅಸಮಾನತೆ ಮತ್ತು ಒತ್ತಡಗಳ ಬಗ್ಗೆ ಯೋಚಿಸುತ್ತಿದ್ದೆ.

   ಇವುಗಳು ತೀವ್ರ ದುಃಖಕರ ಸಂಗತಿಯಾದರೂ ಮುಂದೊಮ್ಮೆ ನಮ್ಮ ಪ್ರಾಮಾಣಿಕ ಪ್ರಯತ್ನಗಳಿಂದ ಬದಲಾವಣೆಗಳನ್ನು ತರುವ ಯತ್ನವನ್ನು ಮುಂದುವರೆಸುವಂತೆ ನಿರ್ಧರಿಸಿ ಸೌಥೆನ್ಡ್ ಮನೆಗೆ ಹಿಂದಿರುಗಿದೆ.

“ಅಲ್ಲಿದೆ ನಮ್ಮ ಮನೆ ಇಲ್ಲಿರುವೆ ಸುಮ್ಮನೆ” ಎನ್ನುವ ಮಾತು ನಿಜವಾದರೂ ನಾನೆಂದೂ ಇಲ್ಲಿ ಸುಮ್ಮನೆ ಇಲ್ಲ ಏಕೆಂದರೆ ನನಗೆ ನನ್ನ ಮನೆಯನ್ನು ಮರೆಯುವ ಸಂದರ್ಭವೇ ಇದುವರೆಗೂ ಬಂದಿಲ್ಲ ಎನ್ನುವ ನೆಮ್ಮದಿ ನನಗಿದೆ🙏🏼

                                                                                                 ——–ತಿಪ್ಪೇಸ್ವಾಮಿ ಬಿಲ್ಲಹಳ್ಳಿ

 

                                         (ಮುಂದಿನ ವಾರ -ನರಿಗಳ ಮೀನಿಂಗುಗಳು)