ಮಗಳಿಗೆ – ಮುರಳಿ ಹತ್ವಾರರ ಕವನ

ಹೊಸ ಜೀವವ ಬರಮಾಡಿಕೊಳ್ಳುವ ಘಳಿಗೆ ಹೆತ್ತವರಿಗೆ ಅವಿಸ್ಮರಣೀಯ. ಮಕ್ಕಳ ಭವಿಷ್ಯ ಉಜ್ವಲವಾಗಲೆಂಬುದೇ ತಾಯಿ-ತಂದೆಯರ ಅವಿರತ ಹಂಬಲ. ಆದರೆ, ಜಗತ್ತು ಎಂದಿನಂತಿಲ್ಲ. ಜನಾಂಗೀಯ ದ್ವೇಷ, ಒಡೆದಾಳುವ ಪ್ರವೃತ್ತಿ, ಪರಿಸರ ವಿಷಮತೆ ಮನುಕುಲವನ್ನು ಎಲ್ಲಿಗೊಯ್ಯುತ್ತಿದೆ ಎಂಬರಿವಿಲ್ಲದ ಗೊಂದಲ  ನಮ್ಮನ್ನಾವರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಮುರಳಿ ಹತ್ವಾರರು ತಮ್ಮ ನವಜಾತ ಶಿಶುವಿಗೆ ಕೋರುವ ಹಾರೈಕೆ……..
ಮುದ್ದು ಮಗಳಿಗೆ,
ದಿನ ತುಂಬಿ ಒಂದಾಗಿತ್ತು,
ನಿನ್ನಮ್ಮನಿಗೆ ತಲೆಸುತ್ತು!
ಬರುವ ಅವಸರ ನಿನಗೆ, ಕಳಿಸುವ
ಆತುರ ಅವಳಿಗಿರಲಿಲ್ಲ!
ಬಗೆದು ಬರಮಾಡಿಕೊಂಡದ್ದಾಯಿತು.
ನಿನ್ನಳುವಿನ ನಗೆ, ನಿನ್ನಮ್ಮನ ನಗೆಯಳು
ನನ್ನ ಭಾವದ ಭಾಷೆಗೆ ನಿಲುಕದ್ದು; ಅರ್ಥ
ಹುಡುಕುವ ಧೈರ್ಯ ನನಗಿಲ್ಲ!
ಕಿಟಕಿಯಾಚೆ, ತೆಮ್ಸ್ ತಣ್ಣಗೆ ಹರಿಯುತಿತ್ತು.
ದಡದಾಚೆಯ ಪಾರ್ಲಿಮೆಂಟಿನೊಳಗೆ ಬ್ರೆಕ್ಸಿಟ್ಟಿನ
ಬೆಂಕಿ ಆರಿಸಲು ನೀರು ಹುಡುಕುತಿ್ತರಬೇಕು
ಮೇ ಮತ್ತವಳ ಬಿಳಿ ಹಿಂಡು! ಸೂರ್ಯ ಮುಳುಗುತ್ತಿದ್ದ
ಪಾರ್ಲಿಮೆಂಟಿನ ಹಿಂದೆ, ಎಂದಿನಂತೆ.
ರಿಪೇರಿಯ ಮೌನದಲಿತ್ತು ಬಿಗ್ ಬೆನ್ ಘಂಟೆ.
ತನ್ನ ಏರಿಳಿತದಾಟಕ್ಕೆ  ತೆಮ್ಸ್ ನೆಚ್ಚುವುದು
ಸೂರ್ಯ-ಚಂದ್ರರ ಮಾತ್ರ!
ನಿನ್ನಮ್ಮ-ಅಪ್ಪನ ತವರಿನಲ್ಲಿ, ಚಹಾ ಮಾರಿ ಬೆಳೆದು
ದೇಶದ ಚುಕ್ಕಾಣಿ ಹಿಡಿದ ಜನನಾಯಕನ
ಹುಟ್ಟು ದಿನದ ಸಂಭ್ರಮ! ನರ್ಮದೆಯ ಹರಿವು
ಬದಲಿಸುವ ಅಡ್ಡಗೋಡೆಯ ಮೇಲೆ ದೀಪ
ಬೆಳಗಿದ್ದು ಅವನಾಚರಣೆ. ಆ ಗೋಡೆಯ ಮೇಲೆ
ಅವನ ನಾಯಕನ ನೂರಾಳೆತ್ತರದ ಕಬ್ಬಿಣದ
ಗೊಂಬೆಯ ನಿಲ್ಲಿಸುವ ಆಸೆ ಅವನಿಗೆ.
ನರ್ಮದೆ ಕಿಲಕಿಲನೆ ನಕ್ಕಿರಬೇಕು!
ನಿನ್ನ ನಾಳಿನ ನೆಲೆ ಎಲ್ಲೋ? ಬಸವಳಿದ
ಧರೆಯೋ? ಬೆಳದಿಂಗಳ ದೊರೆಯೋ?
ಮಂಗಳನ ಅಂಗಳದ ಪೊರೆಯೋ?
ನಿನ್ನ ಹರಿವಿನ ಲಹರಿ, ಹಾರುವ ದಿಕ್ಕು ಬದಲಿಸುವ
ಹುಂಬತನ ನಮಗಿಲ್ಲ. ದಾರಿಯ ಒಪ್ಪ
ಗೊಳಿಸಿ, ದಡವ ಕಟ್ಟುತ ಸಂಕಲ್ಪಿಸವುದಿಷ್ಟೇ:
ನಡೆಸುವೆವು ಕೈ ಹಿಡಿದು ನೀ ನಡೆವೆಡೆಗೆ;
ನಿನ್ನರಿವಿನ ಗುರಿಯ ಸಾಗರ ನಿನಗೆ ಸಿಗುವರೆಗೆ.
–ಮುರಳಿ ಹತ್ವಾರ

ನೆನಪಿನಂಗಳದ ಆಲೆಮನೆ ಮತ್ತು ಕುಂದಾದ್ರಿ- ಅರ್ಪಿತ ಹರ್ಷ

ಹೊಸ ಪರಿಚಯ

arpita harsha
ಅರ್ಪಿತ ಹರ್ಷ

ಶ್ರೀಮತಿ ಅರ್ಪಿತ ಹರ್ಷ ಹುಟ್ಟಿ ಬೆಳೆದಿದ್ದು ಸೊರಬ ತಾಲೂಕಿನ ಬರಿಗೆ ಎಂಬ ಪುಟ್ಟ ಹಳ್ಳಿಯಲ್ಲಿ. ಮೊದಲಿನಿಂದ ಹಸಿರು ತುಂಬಿದ ಕಾಡು , ಧೋ ಎಂದು ಸುರಿಯುವ ಮಳೆ ನೋಡಿ ಅದೇನೋ ಕವನ ಗೀಚುವ , ಕಥೆ ಬರೆಯುವ ಹುಮ್ಮಸ್ಸು ಇದಕ್ಕೆ ಸಾಥ್ ನೀಡಿದ್ದು ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿದ್ದು ಪತ್ರಕರ್ತರಾದ  ಇವರ ಅಪ್ಪ . ಕನಸನ್ನು ನನಸಾಗಿಸಿದ್ದು ಉಜಿರೆಯ ಪತ್ರಿಕೋದ್ಯಮ ವಿಭಾಗ. ಸಂಯುಕ್ತ ಕರ್ನಾಟಕದಲ್ಲಿ ಇಂಟರ್ನ್ಶಿಪ್ , ದೂರದರ್ಶನದಲ್ಲಿ ಸ್ವಲ್ಪ ದಿನಗಳ ವೃತ್ತಿ.

ಮದುವೆಯಾಗಿ ಬಂದಿದ್ದು ಲಂಡನ್ , ಕಳೆದ ೬ ವರ್ಷಗಳಿಂದ ಲಂಡನ್ ವಾಸ.  ವಿಜಯ ನೆಕ್ಸ್ಟ್ , ವಿಜಯಕರ್ನಾಟಕ , ಸಖಿ ಪಾಕ್ಷಿಕ ಉದಯವಾಣಿ, ಹೊಸದಿಗಂತ ಮುಂತಾದ ಪತ್ರಿಕೆಗಳಲ್ಲಿ ಸಾಕಷ್ಟು ಆರ್ಟಿಕಲ್ ಗಳು ಪ್ರಕಟಗೊಂಡಿವೆ. ಬೇಸರ ಕಳೆಯಲು ಗೀಚುವ ಕೆಲವೊಮ್ಮೆ ಪ್ರಕಟಗೊಂಡ ಲೇಖನಗಳನ್ನು ಬ್ಲಾಗ್ http://ibbani-ibbani.blogspot.co.uk/ ಇಲ್ಲಿ ಓದಬಹುದು .  ಜಾನಪದ ಗೀತೆಗಳನ್ನು ಹಾಡುವುದು , ಹೊಸ ರುಚಿ ಮಾಡುವುದು ಹವ್ಯಾಸ . ಪ್ರಸ್ತುತ ರಿಟೇಲ್ ವಿಭಾಗದಲ್ಲಿ ಉದ್ಯಮದಲ್ಲಿರುವ ಅರ್ಪಿತ ಅನಿವಾಸಿಯ ಪರಿಚಯವಾದ ಬಗ್ಗೆ ಸಂತಸ ಪಟ್ಟಿದ್ದಾರೆ.ಈಗಾಗಲೇ ಪ್ರಕಟಗೊಂಡಿರುವ ಅವರ ಒಂದೆರಡು ಲೇಖನಗಳನ್ನು ಇಲ್ಲಿ ಪ್ರಸ್ತುತ ಪಡಿಸಿ ಅವರನ್ನು ಅನಿವಾಸಿಗೆ ಸ್ವಾಗತಿಸುತ್ತಿದ್ದೇನೆ- ಸಂ.


 

ನೆನಪಿನಂಗಳದ   ಆಲೆಮನೆ   ಮತ್ತು ಕುಂದಾದ್ರಿ

ಅಮ್ಮನಿಗೊಂದು ಫೋನ್ ಮಾಡಿದ್ದೆ. ಫೋನ್ ಮಾಡುವುದು ಮಾಮೂಲಿ ದೂರದಲ್ಲಿದ್ದರೆ ಇರುವುದು ಅದೊಂದೇ ದಾರಿ ,ಫೋನ್ ನಲ್ಲೆ ನಗು, ಅಳು, ಸಿಟ್ಟು ಎಲ್ಲವನ್ನು ತೋರಿಸಿ ನಾನಿನ್ನು ನಿನ್ನ ಮಗಳಮ್ಮ  ಎಂದು ತೋರಿಸಿಕೊಡುವುದು .ಈ ಭಾರಿ ಫೋನ್ ಮಾಡಿ ದಾಗ ಅಮ್ಮ ಅಂದರು ನೀನಿಲ್ಲಿರಬೇಕಿತ್ತು ಕಣೆ ಅದಾಗದಿದ್ದರೂ  ಈ ಟೈಮ್ ನಲ್ಲೆ ನೀನು ಒಮ್ಮೆ ಭಾರತಕ್ಕೆ ಬರುವ ಪ್ಲಾನ್ ಹಾಕಬೇಕಿತ್ತು ಎಂದು . ನಾನು ಮನಸ್ಸಿನಲ್ಲೇ ಅಂದುಕೊಂಡೆ ಬೇಕು ಅಂದಾಗ ಬರುವಹಾಗಿದ್ದಿದ್ದರೆ ಚೆನ್ನಾಗಿರುತ್ತಿತ್ತು ಈ ಹಾಳಾದ್ದು ವಿದೇಶ ಅನ್ನೋದು ಒಮ್ಮೆ ಅಂಟಿಕೊಂಡು ಬಿಟ್ಟರೆ ಮತ್ತೆ ತಿರುಗಿ ಹೋಗುವುದು ಬಹಳ ಕಷ್ಟ . ಆದರೂ  ಹತ್ತಿರದವರ ಮದುವೆ , ಮುಂಜಿ  ಹೀಗೆ ಎಲ್ಲ ಬಿಟ್ಟು ಇಲ್ಲಿದ್ದಾಗ ಅನಿಸುತ್ತದೆ ಛೆ ಮಿಸ್ ಮಾಡಿಕೊಂಡೆ ಎಂದು . ಅದರಲ್ಲೂ ಈ ಲಂಡನ್ ನಲ್ಲಿ ಬರುವ ಕಿಟಿಕಿಟಿ  ಮಳೆ ನೋಡಿದಾಗಂತೂ ನಮ್ಮ ಮಲೆನಾಡ ಆ ಬೋರ್ಗರೆಯುವ ಮಳೆ ನೆನಪಾಗಿ ಮೈಯೆಲ್ಲಾ ಪರಚಿಕೊಳ್ಳುವಷ್ಟು ಸಿಟ್ಟು ಬರುತ್ತದೆ .  ನನ್ನನ್ನು ಲಹರಿಯಿಂದ ಎಚ್ಚರಿಸಿದ ಅಮ್ಮ ಫೆಬ್ರವರಿ ಬಂತು ಅಂದ್ರೆ ಸಾಕು ನಮ್ಮೂರಲ್ಲಿ ಆಲೆಮನೆ ಪ್ರಾರಂಭ ಆಗೋಗುತ್ತೆ ನೀ ಇದ್ದಿದ್ದರೆ ದಿನ ಒಂದೊಂದು ಆಲೆ ಮನೆಗೆ ಹೋಗಿ ಬಿಸಿಬೆಲ್ಲ , ಮತ್ತು ಬೇಕಾದಷ್ಟು ಕಬ್ಬಿನಹಾಲು ಕುಡಿದು ಬರಬಹುದಿತ್ತು ಅಂದಳು . ಅಷ್ಟೇ ನಾನು ಕಳೆದುಹೋದೆ .

ನಮ್ಮೂರು ಮಲೆನಾಡಿನ ಒಂದು ಹಳ್ಳಿ . ಪುಟ್ಟ ಹಳ್ಳಿಯೇನಲ್ಲ  ಊರಿನಲ್ಲಿ ಸುಮಾರು 100 ಮನೆಗಳಿವೆ ಅದರಲ್ಲಿ 80 ಮನೆಗಳು ಬೇಸಾಯ ಮಾಡುವವರು ಅಂದರೆ ಭತ್ತ  ಮುಖ್ಯ ಬೆಳೆ  ಜೊತೆಗೆ ಶುಂಟಿ , ಹತ್ತಿ, ಶೇಂಗ, ಜೋಳ ,ಕಬ್ಬು ಇವುದಗೆಲ್ಲ ಉಪಬೆಳೆಗಳು  ಹಾಗೆ ಇವುಗಳನ್ನೆಲ್ಲ ಬೆಳೆದಾಗ ಕೆಲವರು ಮನೆಗೆ ತಂದು ಕೊಡುವುದೂ  ಉಂಟು .  ಈ ಫೆಬ್ರವರಿ ತಿಂಗಳಿನಲ್ಲಿ ಆಲೆಮನೆಯ ಭರಾಟೆ ಬಹಳ ಜೋರು . ಎಲ್ಲೆಲ್ಲಿಂದಲೋ ಬಂದು ಕಬ್ಬಿನ  ಹಾಲು ಕುಡಿದು ಹೋಗುವವರು ಬಹಳ .  ನನಗೆ ತುಂಬಾ ಚಿಕ್ಕವಳು ಇದ್ದಾಗಿ ನಿಂದಲೂ  ಅಪ್ಪ ಆಲೆ ಮನೆಗೆ ಕರೆದುಕೊಂಡು ಹೋಗುತ್ತಿದ್ದ ಅಲ್ಲಿ ಬೇಕಾದಷ್ಟು ಹಾಲು ಕುಡಿದು ಬಿಸಿ ಬೆಲ್ಲ ತಿಂದು ಮನೆಗೆ ಬರುವಾಗ ಒಂದು ಕ್ಯಾನ್ ನಲ್ಲಿ ಫ್ರೆಶ್ ಕಬ್ಬಿನ ಹಾಲು ತುಂಬಿಸಿಕೊಂಡು ಬರುತ್ತಿದ್ದೆವು .

ಸಂಜೆ ನಮ್ಮದು ಕಂಬಳ ಪ್ರಾರಂಭ . ಊರಿನ ಅಕ್ಕಪಕ್ಕದ ಮನೆಯ ಅಣ್ಣಂದಿರು , ಚಿಕ್ಕಪ್ಪ ದೊಡ್ದಪ್ಪಂದಿರು ಜೊತೆಗೆ ನನ್ನ ವಾರಿಗೆಯವರು 4-5 ಮಕ್ಕಳು ಹೀಗೆ ಸೇರಿ ಕುಳಿತು ಹರಟೆ ಹೊಡೆದು ಕಬ್ಬಿನ  ಹಾಲು ಕುಡಿಯುವುದು . ಅಲ್ಲಿ ಹೆಂಗಸರಿಗೆ ಪ್ರವೆಶವಿರುತ್ತಿರಲಿಲ್ಲ ಕೇವಲ ಮಕ್ಕಳು ಮತ್ತು ಉಳಿದ ಗಂಡಸರು . ಹಾಗಾಗಿ ಕಬ್ಬಿನ ಹಾಲಿನ ಜೊತೆ ತಿನ್ನಲು ಏನಾದರೂ  ಬೇಕಾದರೆ ಗಂಡಸರೇ ಮಾಡಿಕೊಳ್ಳಬೇಕಿತ್ತು . ನನ್ನ ಅಪ್ಪನಿಗೆ ನಮ್ಮಕಡೆ ಕುಟ್ಟವಲಕ್ಕಿ ಎಂದು ಮಾಡುತ್ತಾರೆ ಅದೆಂದರೆ ಬಹಳ ಇಷ್ಟ ಅದು ಕಬ್ಬಿನಹಾಲಿನ ಜೊತೆ ಒಳ್ಳೆ ಕಾಮ್ಬಿನೆಶನ್  ಕೂಡ ಹೌದು ಜೊತೆಗೆ ಉಪ್ಪುಕಾರ ಚೆನ್ನಾಗಿ ಇರುವ ಮಾವಿನಮಿಡಿ ಉಪ್ಪಿನಕಾಯಿ . ಹಾಗಾಗಿ ಕುಟ್ಟವಲಕ್ಕಿಯನ್ನು  ಅಪ್ಪ ಬಹಳ ಇಷ್ಟಪಟ್ಟು ಬಹಳ ಸೊಗಸಾಗಿ ಮಾಡುತ್ತಿದ್ದರು . ಅಬ್ಬ ಅದರ ಖಾರವೆಂದರೆ ಖಾರ . ಅದು ಕಬ್ಬಿನ ಹಾಲಿನೊಂದಿಗೆ ಬಹಳ ಚಂದ ಮ್ಯಾಚ್ ಆಗುತ್ತಿತ್ತು .  ಅದರ ಜೊತೆಗೆ ಒಂದಿಷ್ಟು ಜೋಕ್ಸ್  , ಹರಟೆ ಹೀಗೆ ಗಂಟೆಗಳು ಸರಿದಿದ್ದೇ ಗೊತ್ತಾಗುತ್ತಿರಲಿಲ್ಲ . ನಮ್ಮ ಕಂಬಳ ಪ್ರಾರಂಭ ಆಗುತ್ತಿದುದೆ ರಾತ್ರಿ ಹತ್ತರ ನಂತರ  ಮುಗಿಯುತ್ತಿದುದು 1 ಗಂಟೆಯ ನಂತರ . ಅವರ ಜೋಕ್ಸ್ ಗಳು ಆ ಮಾತುಗಳು ಅರ್ಥವಾಗದಿದ್ದರೂ ಏನೋ ಒಂದು ಖುಷಿ ಇರುತ್ತಿತ್ತು ಆ ಕಂಬಳದಲ್ಲಿ.ಮತ್ತು ಆಲೆಮನೆ ಎಷ್ಟೇ ದೂರವಾದರೂ  ಪಾಪ ಅಪ್ಪ ನನಗೋಸ್ಕರ ಹೋಗಿ ತಂದುಕೊಡುತ್ತಿದ್ದರು . ಒಮ್ಮೊಮ್ಮೆ ನನ್ನ ಎತ್ತಿಕೊಂಡು ಹೋಗುತ್ತಿದ್ದುದು ನನಗೆ ನೆನಪಿದೆ ..!!

ಒಮ್ಮೆ ನಾನು ಕಬ್ಬಿನ  ಹಾಲು ಬೇಕು ಎಂದು ಅಪ್ಪನ ಹತ್ತಿರ ಕೇಳಿದ್ದೆ ಸಂಜೆ ಕರೆದುಕೊಂಡು  ಹೋಗುವುದಾಗಿ ಮಾತು ಕೊಟ್ಟಿದ್ದರು . ಅಷ್ಟರಲ್ಲಿ ನಮ್ಮ ಮನೆ ಹಸು ಕರು ಹಾಕಲು ಒದ್ದಾಡುತ್ತಿತ್ತು ಡಾಕ್ಟರ ಬಂದು ಕರು ಹೊರಬರುವಷ್ಟರಲ್ಲಿ ರಾತ್ರಿ 10 ಗಂಟೆಯಾಗಿತ್ತು ಆದರೂ ಅಪ್ಪ ನನಗೋಸ್ಕರ 2 ಕಿಲೋಮೀಟರ್ ನಡೆದುಕೊಂಡು ಹೋಗಿ ಕ್ಯಾನ್ ತುಂಬಾ ಕಬ್ಬಿನ ಹಾಲು ತುಂಬಿಸಿಕೊಂಡು ಕೊಟ್ಟಿದ್ದರು . ಆ ದಿನ ನನಗಾದ ಖುಷಿ ಅಪ್ಪನ ಮುಖದಲ್ಲಿ ರಿಫ್ಲೆಕ್ಟ್ ಆಗಿತ್ತು . ಹೀಗೆ ಆಲೆಮನೆ ಎಂದರೆ ಇದೆಲ್ಲ ನೆನಪಿನಂಗಳದಿಂದ ಜಾರುತ್ತದೆ .

ಕ್ರಮೇಣ ಕಾಲ ಬದಲಾಯಿತು ಜನ ಕೂಡ ಚೇಂಜ್ ಕೇಳ್ತಾರಲ್ವಾ  ನಡೆದುಕೊಂಡು ಆ ಗದ್ದೆಯಲ್ಲಿ ಯಾರು ಹೋಗ್ತಾರೆ ಬೈಕ್ ನಲ್ಲಿ ಹೋಗಿ ತಂದು ಬಿಡ್ತೀವಿ ನೀವೆಲ್ಲ ಮನೇಲೆ ಇರಿ ಎನ್ನುವ ಕಾಲ ಬಂತು . ಆದರು ಆ ಕಂಬಳ ಮಾತ್ರ ನಡೆಯುತ್ತಲೇ ಇತ್ತು . ಸ್ವಲ್ಪ ವರ್ಷ ಕಳೆದ ನಂತರ ಮನೆಗೆ ಬಂದು “ಭಟ್ರೇ ಇವತ್ತು ನಮ್ಮನೆ ಆಲೇಮನೆ ಬರ್ರಿ “ಅನ್ನುತ್ತಿದ್ದವರು ಕಡಿಮೆಯಾದರು  . ಆದರು ನಾನು ನಮ್ಮನೆಗೆ ಯಾವಾಗಲು ಬರುವವರ ಮನೆಯ ಆಲೆಮನೆ ಯಾವಾಗ ಎಂದು ಮೊದಲೇ ಕೆಳುತ್ತಿದ್ದುದರಿಂದ ಕರೆಯುತ್ತಿದ್ದರು . ಈಗಲೂ ಮನೆಗೆ ಬಂದು ಕರೆಯುವವರಿದ್ದಾರೆ. ಜೊತೆಗೆ ಫೋನ್ ಮಾಡಿ ಬನ್ನಿ ಎಂದು ಕರೆಯುವವರು ಇದ್ದಾರೆ . ಅಪ್ಪ ಹೋಗಿ ಕ್ಯಾನ್ ತುಂಬಿಸಿಕೊಂಡು ಬರುವುದು ನಡೆಯುತ್ತಿದೆ . ಆದರೆ ನಾನು ಮಾತ್ರ ಮಿಸ್ಸಿಂಗ್ .

ಈ ಲಂಡನ್ ನಲ್ಲಿ ಎಲ್ಲಿ ಹುಡುಕಿದರೂ  ಕಬ್ಬಿನ  ಹಾಲು ಸಿಗುವುದಿಲ್ಲ ಬೇರೆಲ್ಲ ಬಾಟಲ್ ಗಳು ಬೇಕಾದಷ್ಟು ಸಿಗುತ್ತದೆ . ಇಂತ ಸಮಯದಲ್ಲೇ ನಮ್ಮ ದೇಶ ನಮ್ಮ ಹಳ್ಳಿ ನಮ್ಮ ಮನೆ ಎಲ್ಲ ಬಹಳ ಕಾಡೋದು. ಬಹಳ ಮಿಸ್ ಮಾಡಿಕೊಳ್ಳೋದು  :(…:) ಅದಕ್ಕಾಗಿ ನಾನು ಈಗಲೇ ತೀರ್ಮಾನಿಸಿ ಬಿಟ್ಟಿದ್ದೇನೆ ಮುಂದಿನ ವರ್ಷದ ಆಲೆಮನೆಗೆ ಎಷ್ಟೇ ಕಷ್ಟ ಆದರೂ ನಮ್ಮೂರಲ್ಲಿರಬೇಕು ಎಂದು.

ಬಾಗ ಎರಡು;

ಅದೊಂದು ವೀಕೆಂಡ್ . ಊರಿಗೆ ಹೋದ ನಾವು ಎಲ್ಲಾದರೂ ಹತ್ತಿರದಲ್ಲಿ ಸುತ್ತಲು ಹೋಗಬೇಕು ಎಂದು ನಿರ್ಧರಿಸಿದ್ದೆವು. ನಗರಗಳ ಓಡಾಟ ಬೇಸರ ತರಿಸಿದ್ದರಿಂದ ಯಾವುದಾದರೂ ಒಂದು ಒಳ್ಳೆಯ ತಾಣಕ್ಕೆ ಹೋಗಬೇಕು ಎಂಬುದು ನಮ್ಮ ಮನೆಯವರೆಲ್ಲರ ಅಪೇಕ್ಷೆಯಾಗಿತ್ತು. ಹಾಗೆಂದೇ ನಿರ್ಧರಿಸಿ ಪರಿಚಯದವರನ್ನು ವಿಚಾರಿಸಿದಾಗ ಸಿಕ್ಕಿದ್ದು ಈ ಬೆಟ್ಟ. ಸುಮಾರು ನಾಲ್ಕರಿಂದ ಐದು ಕಿ ಮೀ  ನಷ್ಟು ದೂರ ಎತ್ತರದ ಬೆಟ್ಟದೆಡೆಗೆ ನಾವು ಹೊರಟ ಕಾರು ನಮ್ಮನ್ನು ಎಳೆಯಲಾರದೆ ಎಳೆದುಕೊಂಡು ಹೋಗುತ್ತಿದ್ದರೆ ಸುತ್ತಲೂ ದಟ್ಟ  ಕಾಡು. ಅದು ಸಂಜೆಯ ಸಮಯವಾಗಿದ್ದರಿಂದಲೋ ಏನೋ ತಣ್ಣನೆಯ ಗಾಳಿ , ಒಂದು ಕಾರು ಹೋಗುತ್ತಿದ್ದರೆ ಇನ್ನೊಂದು ಎದುರಿನಿಂದ ಬರಲಾರದಂತ ಇಕ್ಕಟ್ಟು ರಸ್ತೆಯಾದದ್ದರಿಂದಲೋ ಏನೋ ರಸ್ತೆ ಬಿಕೋ ಎನ್ನುತ್ತಿತ್ತು. ಕಾರು ಮೇಲೇರುತ್ತಿದ್ದಂತೆ ಕಿಟಕಿಯಿಂದ ಸುಮ್ಮನೆ ಗಾಳಿಗೆ ಹೊರಗೆ ಮುಖ ಒಡ್ಡಿದರೆ ಅದ್ಬುತ ಲೋಕ. ಸುಂದರವಾದ ಹಸಿರು ತುಂಬಿದ ಅರಣ್ಯಗಳ ಬೀಡು. ಅದೊಂದು ಅದ್ಬುತ ಲೋಕವೇ ಸರಿ. ಕಾರಿನಲ್ಲಿ ಹಳೇ ಹಿಂದಿ ಚಿತ್ರಗೀತೆಗಳ ಸರಮಾಲೆ ಇಳಿಸಂಜೆಯ ಸೂರ್ಯ ಮುಳುಗುವ ಹೊತ್ತಿನ ಆ ಸುಂದರ ಕ್ಷಣ ಅಕ್ಷರಗಳಲ್ಲಿ ವರ್ಣಿಸುವುದು ಕಷ್ಟ ಅದನ್ನು ನೋಡಿಯೇ ಅನುಭವಿಸಬೇಕು.

kundadri

ಕಾರು ಇಳಿದು ಮೆಟ್ಟಿಲುಗಳನ್ನು ಏರಿದರೆ ಬೆಟ್ಟದ ತುದಿ ತಲುಪಿದರೆ ಅಲ್ಲಿ ಕಾಣುವುದು ಪ್ರಕೃತಿಯ ಸುಂದರ ತಪ್ಪಲು. ಸುತ್ತಲೂ ಕಲ್ಲು ಬಂಡೆಗಳನ್ನು ಹೊಂದಿ ಮಧ್ಯದಲ್ಲಿ ದೇವಸ್ಥಾನವನ್ನು ಹೊಂದಿರುವ ಈ ಸ್ಥಳದಲ್ಲಿ ನಿಂತು ಒಮ್ಮೆ ಕೆಳ ನೋಡಿದರೆ ಅಲ್ಲಿ ಕಾಣುವುದು ಹಸಿರು , ಬರೀ ಹಸಿರು. ಬೀಸುವ ತಂಗಾಳಿಗೆ ಮೈಯೊಡ್ಡಿ ಈ ಹಸಿರನ್ನು ಕಣ್ಣು ತುಂಬಿಸಿಕೊಳ್ಳುವುದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ ?

ಹೌದು ನಾನು ಈಗ ಹೇಳ ಹೊರಟಿರುವ  ,ಇಷ್ಟೊಂದು ಸುಂದರವಾದ ಪ್ರಕೃತಿಯ ಸೊಬಗನ್ನು ನೋಡಲು ನೀವೂ ಕೂಡ  ನೋಡ ಬಯಸುತ್ತೀರಾದರೆ  ಕುಂದಾದ್ರಿ ಸರಿಯಾದ ಸ್ಥಳ. ತೀರ್ಥಹಳ್ಳಿಯಿಂದ ಸುಮಾರು ೨೩ ಕಿ ಮೀ ಅಂತರದಲ್ಲಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಬರುವ ಈ ಕುಂದಾದ್ರಿ ಜೈನರ ಪವಿತ್ರ ಸ್ಥಳವೂ ಹೌದು. ಹದಿನೇಳನೆ ಶತಮಾನದ ಜೈನ ಮುನಿಗಳ ಕಾಲದಿಂದಲೂ ಇರುವ ಈ ಕುಂದಾದ್ರಿಯು ಸುಮಾರು ೮೦೦ ಮೀಟರ್ ಎತ್ತರದಲ್ಲಿರುವ ಬೆಟ್ಟದ ಮೇಲಿದೆ. ಜೈನ ಮೂರ್ತಿಗಳನ್ನು ಒಳಗೊಂಡಿರುವ ಈ ಜೈನ ಬಸದಿಯಲ್ಲಿ ನಿತ್ಯವೂ ಪೂಜೆಯೂ ನಡೆಯುತ್ತದೆ ಮತ್ತು ಸಾವಿರಾರು ಜೈನ ಭಕ್ತರು ಕೂಡ ಇಲ್ಲಿ ಪ್ರತಿ ವರ್ಷ ಭೇಟಿ ನೀಡುತ್ತಾರೆ.  ತೀರ್ಥಹಳ್ಳಿ ಮತ್ತು ಉಡುಪಿ ಮಾರ್ಗವಾಗಿ ಸಂಚರಿಸುವಾಗ ಸಿರುವ ಈ ಕುಂದಾದ್ರಿ ಪ್ರವಾಸಿಗರು ಭೇಟಿ ನೀಡಬಹುದಾದ ಸುಂದರ ಸ್ಥಳ . ಹಸುರಿನಿಂದ ಕೂಡಿರುವ ಈ ಸ್ಥಳ ಗಾಳಿ ಬೆಳಕಿನ ಜೊತೆಗೆ ಮನಸ್ಸನ್ನು ತಂಪು ಮಾಡುತ್ತದೆ. ಈ ಬೆಟ್ಟವು ಬಹಳ ಎತ್ತರದಲ್ಲಿ ಇರುವುದರಿಂದ ಇಲ್ಲಿ ನಿಂತು ಸುತ್ತಲಿನ ಹಸಿರ ಸಿರಿಯನ್ನು ಕಣ್ಣು ತುಂಬಿಕೊಳ್ಳಬಹುದು.ಮೇಲಿನವರೆಗೂ ಟೆಂಪೋ ಅಥವಾ ಜೀಪು ಹೋಗುವ ರಸ್ತೆಯನ್ನು ಇತ್ತೀಚಿಗೆ ಮಾಡಿರುವುದರಿಂದ ಸಾಕಷ್ಟು ಪ್ರವಾಸಿಗರ ಗಮನವನ್ನು ಸಹ ಇದು ಸೆಳೆಯುತ್ತಿದೆ. ರಸ್ತೆ ಕೂಡ ಯಾವುದೇ ತೊಡಕುಗಳಿಲ್ಲದೆ , ಗುದ್ದು ಗುಂಡಿಗಳಿಲ್ಲದೆ ಸುಲಭವಾಗಿ ಸಾಗಬಹುದಾದ ರಸ್ತೆಯಾಗಿದೆ .ಈ ಬೆಟ್ಟ  ಇತ್ತೀಚಿಗೆ ಹೆಚ್ಚು ಜನಪ್ರಿಯಗೊಳ್ಳುತ್ತಿದ್ದು ಕರ್ನಾಟಕದಿಂದಷ್ಟೇ ಅಲ್ಲ ,ಗುಜರಾತ್ , ಮಹಾರಾಷ್ಟ್ರ ಹೀಗೆ ಉತ್ತರ ಭಾರತದ ಇನ್ನಿತರ ಸ್ಥಳಗಳಿಂದ ಜೈನ ಭಕ್ತರು ಇಲ್ಲಿ ಬಂದು ಒಂದು ದಿನ ನೆಲೆಸಿ ಪೂಜೆಯ ಜೊತೆಗೆ ಇಲ್ಲಿನ ಅದ್ಬುತ ಪ್ರಕೃತಿಯ ಮಡಿಲಲ್ಲಿ ಮಿಂದು ಹೋಗುತ್ತಾರೆ ಎಂಬುದು ಇಲ್ಲಿನ ಅರ್ಚಕರ ಅಂಬೋಣ. ಅಷ್ಟೇ ಅಲ್ಲ ಸಾವಿರಾರು ವರ್ಷಗಳ ಹಿಂದೆ ಕಲ್ಲಿನಿಂದ ಕಟ್ಟಲಾದ ಜೈನ ಬಸದಿಯು ಇಂದಿಗೂ ಕೂಡ ವಾಸ್ತು ಶಿಲ್ಪಗಳನ್ನು ಉಳಿಸಿ ಕೊಂಡು ಬಂದಿರುವುದು ಇದರ ವಿಶೇಷತೆಯೇ ಸರಿ. ಇತ್ತೀಚಿಗೆ  ಜೀರ್ಣೋದ್ಧಾರ ಮಾಡಿ ಕೆಲವೊಂದು ಬದಲಾವಣೆಯನ್ನು ಕೂಡ ಮಾಡಲಾಗಿದೆ ಎನ್ನುತಾರೆ ಇಲ್ಲಿನ ಅರ್ಚಕರು.

kundadri 4

 

ಈ ಕುಂದಾದ್ರಿಯ ಜೈನ ದೇಗುಲದ  ಪಕ್ಕದಲ್ಲಿರುವ ಕೊಳವು ಅಂತರ ಗಂಗೆಯಾಗಿದ್ದು ಸುಮಾರು 118 ಅಡಿ ಆಳವಿದೆ . ಎಂದೂ ಬತ್ತದೇ ಸದಾ ನೀರನ್ನು ಹೊಂದಿರುವ ಈ ಕೊಳವನ್ನು ಒಮ್ಮೆ ಸ್ವಚ್ಛಗೊಳಿಸಲು ಒಂದು ವಾರ ಬೇಕಾಗುವುದು ಎಂದು ಅಲ್ಲಿನ ಅರ್ಚಕರು ತಿಳಿಸುತ್ತಾರೆ.ಆಗಾಗ ಇದನ್ನು ಸ್ವಚ್ಚಗೊಳಿಸುವುದು ಕೂಡ ನಡೆದು ಕೊಂಡು ಬರುತ್ತಿದೆ ಎನ್ನಲಾಗುತ್ತದೆ. ಸ್ವಚ್ಚವಾದ ನೀರನ್ನು ಹೊಂದಿರುವ ಈ ರೀತಿಯ ಸಾಕಷ್ಟು ಅಂತರಗಂಗೆಗಳನ್ನು ಇಲ್ಲಿ ಕಾಣಬಹುದು. ಈ ಸ್ಥಳ ಕಲ್ಲಿನ ಬಂಡೆಗಳಿಂದ ಸುತ್ತುವರೆದಿದ್ದು ಕೆಳಗೆ ಇಳಿದು ಕೂಡ ಸಾಕಷ್ಟು ಪ್ರಕೃತಿ ವೀಕ್ಷಣೆ ಮಾಡಬಹುದು. ಕಲ್ಲು ಬಂಡೆಗಳ  ಮಧ್ಯದಲ್ಲಿ ಅಲ್ಲಲ್ಲಿ ಅಂತರಗಂಗೆ ಎದ್ದಿರುವುದು ಕೂಡ ವಿಶೇಷವೆನ್ನಬಹುದು.  ಅತಿ ಎತ್ತರದ ಬೆಟ್ಟವಿರುವುದರಿಂದ  ಸೂರ್ಯಾಸ್ತಮಾನವೂ  ಇಲ್ಲಿ ಸುಂದರವಾಗಿ ಕಾಣಿಸುತ್ತದೆ . ಆಗುಂಬೆಗಿಂತ ಎತ್ತರದಲ್ಲಿ ಈ ಕುಂದಾದ್ರಿ ಬೆಟ್ಟ ಇರುವುದರಿಂದ ಮೋಡ ಕವಿದು ಮುಸುಕು ಇರದಿದ್ದಲ್ಲಿ ಇಲ್ಲಿಂದ ಸೂರ್ಯಾಸ್ತ ಸುಂದರವಾಗಿ ಕಾಣಿಸುತ್ತದೆ ಎನ್ನಲಾಗುತ್ತದೆ.

ಪ್ರಕೃತಿಯ ಹಚ್ಚ ಹಸುರನ್ನು ಹೊಂದಿರುವ ಈ ಸುಂದರ ಸ್ಥಳದಲ್ಲಿ ಚಲನಚಿತ್ರದ ಶೂಟಿಂಗ್ ಕೂಡ ನಡೆದಿದೆ. ಕುಂದಾದ್ರಿ ತಲುಪಲು ಸುಮಾರು ನಾಲ್ಕು ಕಿ ಮೀ ನಷ್ಟು ಎತ್ತರಕ್ಕೆ ಏರಬೇಕಾಗಿದ್ದು ಈಗ ಇಲ್ಲಿ ರಸ್ತೆ ಮಾಡಿರುವುದರಿಂದ ಜೀಪ್ , ಕಾರು ಗಳು ತುದಿಯವರೆಗೆ ಹೋಗುತ್ತವೆ. ಮೇಲೆ ಜೈನ ಬಸದಿಯನ್ನು ನೋಡಿಕೊಂಡು ಸುತ್ತಲೂ ಇರುವ ಕೊಳ ಮತ್ತು ಪ್ರಕೃತಿಯ ಸೊಬಗನ್ನು ಸವಿದು ಅಲ್ಲೇ ಕುಳಿತು ಮನಸ್ಸನ್ನು ಮುದಗೊಳಿಸಿಕೊಂಡು ಒಂದು ದಿನವನ್ನು ಸುಂದರವಾಗಿ ಕಳೆಯಲು  ಇದು ಸರಿಯಾದ ಸ್ಥಳ. ಜೊತೆಗೆ ನಮಗೆ ಬೇಕಾದ ಚುರುಮುರಿ ಇನ್ನಷ್ಟು ಕುರುಕಲು ತಿಂಡಿಗಳಿದ್ದರೆ ಅದನ್ನು ತಿನ್ನುತ್ತಾ ಕುಳಿತುಬಿಟ್ಟರೆ ಎದ್ದು ಬರಲು ಕೂಡ ಮನಸ್ಸಾಗದು.ಅದಲ್ಲದೆ  ಇತ್ತೀಚಿಗೆ ಸಾಕಷ್ಟು ಧಾರವಾಹಿಗಳಲ್ಲೂ ಕೂಡ ಈ ಸ್ಥಳವನ್ನು ಚಿತ್ರೀಕರಣಕ್ಕೆ ಬಳಸಿರುವುದನ್ನು ಕಾಣಬಹುದು.

kundadri 2

ಇಲ್ಲಿಂದ ೨೩ ಕಿ ಮೀ ಅಂತರದಲ್ಲಿ ತೀರ್ಥಹಳ್ಳಿ ಇದ್ದು ಇಲ್ಲಿ ರಾಮೇಶ್ವರ ದೇವಸ್ಥಾನ ಮತ್ತು ಅಲ್ಲಿಯ ಪಕ್ಕದ ತುಂಗಾ ನದಿಯ ತಟ ಕೂಡ ಸಂಜೆಯ ಸಮಯದಲ್ಲಿ ಸುಂದರವಾಗಿರುತ್ತದೆ.  ಪ್ರಕೃತಿಯ ಸೊಬಗನ್ನು ಸವಿಯಬಯಸುವವರು ಕುಂದಾದ್ರಿ ಯನ್ನು ವರ್ಷದ ಯಾವುದೇ ಸಮಯದಲ್ಲಿ ಕೂಡ ಭೇಟಿ ನೀಡಬಹುದಾದರೂ ಇದು ಆಗುಂಬೆಗೆ ಸಮೀಪವಿರುವುದರಿಂದ ಅಲ್ಲಿನ ಸೂರ್ಯಾಸ್ತ ನೋಡಲು ಸರಿಯಾದ ಸಮಯ ಡಿಸೆಂಬರ್ ತಿಂಗಳು.

                                                                                               ಚಿತ್ರ ಲೇಖನ- ಅರ್ಪಿತಾ  ಹರ್ಷ