ರಾಷ್ಟ್ರಕವಿ ಜಿಎಸ್ಎಸ್ – ೯೫: ನುಡಿ-ಸ್ಮರಣೆ

ಸಹೃದಯರೆ, ನಾಳೆ ರಾಷ್ಟ್ರಕವಿ ಡಾ. ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ (ಜಿಎಸ್ಎಸ್) ಅವರ ೯೫ನೆಯ ಜನ್ಮದಿನ. ಕನ್ನಡ ನವೋದಯ ಸಾಹಿತ್ಯದ ಆಧಾರಸ್ತಂಭಗಳಲ್ಲೊಬ್ಬರಾದ ಜಿಎಸ್ಎಸ್ ಕರ್ನಾಟಕದ ಹೆಸರಾಂತ ಕವಿಗಳಲ್ಲೊಬ್ಬರು, ಲೇಖಕರು, ಸಂಶೋಧಕರು. ಅವರ ಜನ್ಮದಿನದಂದು, ಅವರ ಸಾಹಿತ್ಯಿಕ ಕೊಡುಗೆಯನ್ನು ನೆನೆಯುವ ಮೂಲಕ ಮಹಾಕವಿಯ ಸ್ಮರಣೆ ಮಾಡೋಣ, ಬನ್ನಿ. ನಮ್ಮ ಅನಿವಾಸಿ ಯುಕೆ ಬಳಗದ ಸದಸ್ಯೆ-ಸದಸ್ಯರು, ತಮ್ಮಿಷ್ಟದ ಕವನಗಳನ್ನು ಆಯ್ಕೆ ಮಾಡಿಕೊಂಡು, ಹಾಡಿ, ಆ ಮೂಲಕ ಕವಿ ಜಿಎಸ್ಎಸ್ ಅವರಿಗೆ ನುಡಿ-ನಮನಗಳನ್ನು ಅರ್ಪಿಸಿದ್ದಾರೆ. ಆ ಕವನ-ಗಾಯನದ ವಿಡಿಯೊಗಳನ್ನು ಈ ಕೆಳಗೆ ಹಂಚಿಕೊಂಡಿದ್ದೇವೆ. ತಾವೆಲ್ಲರೂ ಅವನ್ನು ನೋಡಿ, ಆನಂದಿಸಿ, ಅನಿವಾಸಿ ಬಳಗದ ಅರ್ಪಣೆಯಲ್ಲಿ ಭಾಗಿಯಾಗಬೇಕೆಂದು ಕೋರುವೆ. ಈ ಪ್ರಸ್ತುತಿಯನ್ನು ಹುಟ್ಟುಹಾಕಿದ ಅಮಿತಾ ರವಿಕಿರಣ ಅವರಿಗೂ, ಕೊಟ್ಟ ಸಮಯದಲ್ಲೇ ಹಾಡಿ-ಅನಿಸಿಕೆ ಬರೆದು ಕಳಿಸಿದ ಅನಿವಾಸಿಯ ಕುಟುಂಬದವರಿಗೂ ಮತ್ತು ಮಾರ್ಗದರ್ಶನ ಕೇಳಿದಾಗ ಬೇಸರೆಯದೆ ಸಹಾಯಮಾಡಿದ ಶ್ರೀವತ್ಸ ದೇಸಾಯಿಯವರಿಗೂ ನಾನು ಆಭಾರಿ. – ಎಲ್ಲೆನ್ ಗುಡೂರ್ (ಸಂ.)

ಚಿತ್ರಕೃಪೆ: ಕರ್ನಾಟಕ.ಕಾಮ್ (ಮೂಲ: ಪ್ರಜಾವಾಣಿ)

*************************************************************************************************

ಶ್ರೀಮತಿ ಅನು ಆನಂದ್

ಎದೆ ತುಂಬಿ ಹಾಡಿದೆನು – ಈ ಕವನವನ್ನ ಮೊದಲ ಬಾರಿಗೆ ನಾನು ಕೇಳಿದ್ದು, ನಾನು middle school ನಲ್ಲಿ ಇದ್ದಾಗ. ಗಣೇಶನ ಹಬ್ಬವನ್ನ ನಮ್ಮ road ನಲ್ಲಿ ದೊಡ್ಡ ಪೆಂಡಾಲ್ ಹಾಕಿ, ೧೦ ದಿನ, ಬಹಳ ಅದ್ಧೂರಿಯಿಂದ ಆಚರಿಸ್ತಿದ್ವಿ. ಆಗ, ಪ್ರತಿ ವರುಷ, ಒಂದು ಸಂಜೆಯ ಕಾರ್ಯಕ್ರಮ ಮೈಸೂರ್ ಅನಂತಸ್ವಾಮಿ ಅವರ ತಂಡದಿಂದ ತಪ್ಪದೆ ನಡೆಯುತ್ತಿತ್ತು. ಸ್ವತಃ ಮೈಸೂರ್ ಅನಂತಸ್ವಾಮಿ ಅವರೇ ಈ ಕವನವನ್ನ ಹಾಡಿದ್ದನ್ನ, ಆ ಚಿಕ್ಕ ವಯಸ್ಸಿನಲ್ಲಿ ಕೇಳಿದ ನನಗೆ, ಈ ಕವನ, ಬಾಲ್ಯದ ಸವಿ ನೆನಪುಗಳನ್ನು ತರುತ್ತದೆ. ಹೃದಯದಾಳದಿಂದ ಹೊಮ್ಮಿದ ಸರಳ, ಸುಂದರ ಪದಗಳು, ಹೇಳಲು, ಕೇಳಲು ಆನಂದ! GSS ಅವರನ್ನ ನೋಡುವ ಭಾಗ್ಯ ನನಗೆ ಸಿಗಲಿಲ್ಲ. ಆದರೆ ಅವರ ರಚನೆಯಯನ್ನು ಮೈಸೂರ್ ಅನಂತಸ್ವಾಮಿಯವರಿಂದ ಕೇಳಿದ ಧನ್ಯತಾಭಾವ ಮನಸ್ಸಿಗೆ ಹಿತವನ್ನು ನೀಡುತ್ತದೆ. ನಂತರದ ನನ್ನ ಜೀವನದಲ್ಲಿ ಈ ಕವನವನ್ನ ಬಹಳಷ್ಟು ಮಂದಿ ಹಾಡಿರುವುದನ್ನು ಕೇಳಿ ಸಂತೋಷಪಟ್ಟಿದ್ದೇನೆ. ಆದರೆ ಬಾಲ್ಯದ ಆ ನೆನಪು ಸದಾ ಹಸಿರು, ಸದಾ ಸುಮಧುರ!!

ನಾನೂ ನನ್ನ ಹೃದಯ ತುಂಬಿ, ಸವಿ ನೆನಪುಗಳೊಳಗೂಡಿ ಆ ಕವನವನ್ನ ಹಾಡುವ ಪ್ರಯತ್ನವನ್ನು ಮಾಡಿದ್ದೇನೆ. ನಿಮ್ಮ ಕಿವಿ ಮುಚ್ಚದಂತಾಗದಿರಲಿ ಎಂಬುದೇ ನನ್ನ ಆಶಯ!

****************************************************************************************************

ಶ್ರೀಮತಿ ರಮ್ಯಾ ಭಾದ್ರಿ

‘ಹಾಡು ಹಳೆಯದಾದರೇನು ಭಾವ ನವನವೀನ’ ಎಂದು ಬರೆದ ನಮ್ಮ ನೆಚ್ಚಿನ ರಾಷ್ಟ್ರಕವಿ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ (ಜಿಎಸ್ಎಸ್) ಅವರ ಸಾಲುಗಳು ಅದೆಷ್ಟು ಸೊಗಸು. ಇಂತಹ ಅಸಂಖ್ಯಾತ ಸುಂದರ ಮಧುರ ಕವನಗಳ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ನಾನಾ ಪ್ರಕಾರಗಳಲ್ಲಿ ಶ್ರೀಮಂತಗೊಳಿಸಿದ ಶ್ರೇಯಸ್ಸು ಜಿಎಸ್ಎಸ್ ಅವರದು. ಈ ಕವನಗಳಲ್ಲಿರುವ ಸರಳತೆ, ಪದಗಳಲ್ಲಿ ಹೊರಹೊಮ್ಮುವ ಭಾವ ಇಂದಿಗೂ ಎಂದಿಗೂ ಜನಮನಗಳಲ್ಲಿ ಅಚ್ಚಳಿಯದಂತೆ ಉಳಿದು ಹಾಡಾಗಿ ಹೊರಹೊಮ್ಮುತ್ತಲೇ ಇರುತ್ತದೆ.  ಜಿಎಸ್ಎಸ್ ಅವರ ೯೫ನೇ ಜನ್ಮದಿನದ ಸ್ಮರಣಾರ್ಥ ಅವರದೇ ಕವನದ ಸಾಲುಗಳನ್ನು ಹಾಡುವುದರ ಮೂಲಕ ಅವರಿಗೆ ಗಾನನಮನ ಸಲ್ಲಿಸುವ ನನ್ನ ಕಿರು ಪ್ರಯತ್ನ.  ನಾನು ಆಯ್ದುಕೊಂಡಿರುವ ಗೀತೆ  ‘ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ’.  ಈ ಹಾಡಿನೊಂದಿಗಿನ ನಂಟು ಬಹಳ ಹಳೆಯದು.  ನನ್ನ ಶಾಲೆಯಲ್ಲಿ ಜರುಗಿದೆ ‘ಹಸಿರೇ ಉಸಿರು’ ಎಂಬ ನಾಟಕದಲ್ಲಿ ಕಂಡುಬಂದ ಹೃದಯಂಗಮ ದೃಶ್ಯ ಹಾಗೂ ಅದರಲ್ಲಿ ಮೂಡಿಬಂದ ಹಾಡುಗಳು ನನ್ನ ಮೇಲೆ ಬಹಳ ಪ್ರಭಾವ ಬೀರಿದ್ದವು.  ಮಾನವ ತನ್ನ ಸ್ವಾರ್ಥಕ್ಕಾಗಿ ಹಸಿರನ್ನು ನಾಶಮಾಡಿದಾಗ (‘ನಾನು ಹಡೆದವ್ವ ಹೆಸರು ಪ್ರಕೃತಿ ಮಾತೆ’ ಹಾಡು ಹಾಡುತ್ತ ರೋದಿಸುವ ವನದೇವತೆ) ಅದರ ಪರಿಣಾಮವಾಗಿ  ಮಳೆ ಮಾಯವಾಗಿ, ಭೂಮಿ ಬರಡಾಗಿ, ಹನಿ ನೀರಿಗಾಗಿ ಎಲ್ಲೆಲ್ಲೂ ಹಾಹಾಕಾರವೇಳುವುದು.  ಆಗ ತಮ್ಮ ತಪ್ಪಿನ ಅರಿವಾಗಿ ನೊಂದು ಬೆಂದ ಜನ ಪರಿತಪಿಸುತ್ತ ಮೋಡಗಳೆಡೆ ಮುಖ ಮಾಡಿ ಈ ಹಾಡನ್ನು ಹಾಡಿದಾಗ ಮೋಡಗಳು ಕರಗಿ ಮಳೆಯಾಗಿ ಸುರಿದ ಇಳೆಗೆ ತಂಪೆರೆದು, ಮತ್ತೆ ಚಿಗುರೊಡೆದು ಹಸಿರಾಗಲು ಜನರ ಹಸಿವ ನೀಗಿಸುತೆ ಉಸಿರುನೀಡುವುದು.  ಹೀಗೆ ಹಸಿರೇ ಉಸಿರು ಎಂಬ ಕೂಗು ಮುಗಿಲು ಮುಟ್ಟುತ್ತ ನಾಟಕ ಕೊನೆಯಾಗುವುದು.  ಕೈಗೆ ಎಟುಕದ, ಕೂಗಿದರು ಧ್ವನಿಗೆ ನಿಲುಕದಷ್ಟು ದೂರದಲ್ಲಿರುವ ಮೋಡಗಳನ್ನು ಮಳೆಯಾಗಿ ಸುರಿಸಿದ ಈ ಹಾಡಿಗೆ ಅದೆಷ್ಟು ಶಕ್ತಿಯಂದು ಆಗ ಯೋಚಿಸಿದ ನನ್ನ ಮುಗ್ದ ಮನಸ್ಸಿನಲ್ಲಿ ಬೇರೊರಿಬಿಟ್ಟಿತು.  ಪ್ರತಿಬಾರಿ ಈ ಹಾಡು ಕೇಳಿದಾಗಲೆಲ್ಲ ನಾಟಕದ ಆ ದೃಶ್ಯ ಕಣ್ಣಮುಂದೆ  ಹಾದು ಹೋಗುವುದು.  ಕರುಣಾರಸ ಭರಿತವಾದ, ನನ್ನ ತಂಗಿಯಿಂದ ಕಲಿತ ಈ  ಹಾಡನ್ನು ಹಾಡುವ ಪ್ರಯತ್ನ ಮಾಡಿರುವೆನು.  ಜಿಎಸ್ಎಸ್ ಅವರ ಮಾತುಗಳಲ್ಲಿ ಹೇಳುವುದಾದರೆ ಎದೆ ತುಂಬಿ ಹಾಡಿರುವೆನು ಇಂದು ನಾನು ಮನವಿಟ್ಟು ಕೇಳುವಿರಿ ಅಲ್ಲಿ ನೀವು ಎನ್ನುವ ಆಶಯದಲ್ಲಿ.

***************************************************************************************************

ಶ್ರೀಮತಿ ಸುಮನಾ ಧ್ರುವ

ಹುಚ್ಚು ಖೋಡಿ ವಯಸ್ಸಿನವಳಾಗಿದ್ದೆ ಆಗ, ಇನ್ನೂ ನೆನಪಿದೆ ಆಗಿನ ಮನಸ್ಥಿತಿ — ಜಗತ್ತೆಲ್ಲ ತಪ್ಪು, ನಾನು ಮಾತ್ರ ಸರಿ!!  ಎಲ್ಲರನ್ನು ವಿರೋಧಿಸಬಲ್ಲೆ, ಗೆಲ್ಲ ಬಲ್ಲೆ ಅನ್ನುವಂಥ ಹುಂಬ ಧೈರ್ಯ ಧಗೆ, ಎದೆಯಲ್ಲಿ.  

ಮರೆಯಲಾಗದು ಮಳೆಯ ಮುಂಜಾನೆಗಳು.  ಅಡುಗೆ ಮನೆಯಿಂದ ಅಮ್ಮ “ಏಳೇ ಸುಮಾ ಸ್ಕೂಲಿಗೆ ಹೊತ್ತಾಯಿತು” ಅಂತ ಕೂಗೋವಾಗ, ಹಿಂದೆ ಸಣ್ಣಗೆ ವಿವಿಧಭಾರತಿಯ ಭಾವ ಸಂಗಮ ಕಾರ್ಯಕ್ರಮದಲ್ಲಿ, ಜಿ.ಎಸ್.ಎಸ್ ಅವರ “ಧಗೆ ಆರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು” ಅಂತ ಬಿ.ರ್ ಛಾಯಾ ಹಾಡ್ತಿದ್ರೆ ಅದೇನೇನೋ ವಿಚಿತ್ರ ಭಾವನೆಗಳು, ಹೊಂದಿಕೆ ಆಗದೆ ಉಳಿದು ಹೋದ ಪಜಲ್ನಂತೆ ಎಲ್ಲ ಗೋಜಲು ಗೋಜಲು.  ಅದೇ ಹಾಡನ್ನ ಈಗ ಮೆಲುಕು ಹಾಕಿದ್ರೆ, ಆಗ ಸಿಕ್ಕುಸಿಕ್ಕಾಗಿದ್ದು ಈಗ ಅಯ್ಯೋ ಅದೆಷ್ಟು ಸರಳ ಅನಿಸುತ್ತದೆ.

***********************************************************************************************

ಡಾ. ದಾಕ್ಷಾಯಿಣಿ ಗೌಡ

ವೇದಾಂತಿ ಹೇಳಿದನು… ರಾಷ್ಟ್ರಕವಿ  ಶ್ರೀಯುತ ಜಿ.ಸ್. ಶಿವರುದ್ರಪ್ಪನವರ ಪ್ರಸಿದ್ಧ ಮತ್ತು ಜನಪ್ರಿಯ ಕವನಗಳಲ್ಲಿ ಒಂದು.

ಈ ಕವಿತೆಯಲ್ಲಿ ಜೀವನದ ತತ್ವವನ್ನು ಎರಡು ವಿಭಿನ್ನ ರೀತಿಯ ದೃಷ್ಟಿಕೋನದಲ್ಲಿ, ಪ್ರತಿಯೊಬ್ಬ ಓದುಗನಿಗೂ ಅರ್ಥವಾಗುವ ಪರಿಯಲ್ಲಿ ಕವಿ ಪರಿಚಯಿಸುತ್ತಾನೆ. “ಜೀವನದಲ್ಲಿ ಎಲ್ಲವೂ ನಶ್ವರ” ಎಂದು ವೇದಾಂತಿ ಹೇಳಿದರೆ “ಕಾಣುವುದೆಲ್ಲ ಸುಂದರ” ಎಂದು ಹಾಡಿ, ಕನವರಿಸಿ, ಸಾರಿ ಹೇಳುತ್ತಾನೆ ಕವಿ.

ಈ ನಶ್ವರ ಜಗತ್ತಿನ ಬಗ್ಗೆ ವೇದಾಂತಿ ಏನೇ ಹೇಳಲಿ, ಕವಿಹೃದಯದ ಶ್ರೀಮಂತಿಕೆ, ಆತನ ನೋಟದಲ್ಲಿ ಹುದುಗಿದ ಸೌಂದರ್ಯಕ್ಕೆ ಬೆರಗಾಗಿ, ಮರುಳಾಗಿ, ಓದುಗನೂ ಕವಿಯೊಡನೆ ತಾನೂ ಕಲ್ಪನಾಲೋಕದ ಸುರೆಯ ಅಮಲಿನಲ್ಲಿ ತೇಲುತ್ತಾನೆ.

ಮಾನಸ ಸರೋವರ ಎನ್ನುವ ಕನ್ನಡ ಚಲನಚಿತ್ರದಲ್ಲಿ ಈ ಕವಿತೆಯನ್ನು ಅಳವಡಿಸಿಕೊಳ್ಳಲಾಗಿದೆ.

**********************************************************************************************

ಡಾ. ಲಕ್ಷ್ಮೀನಾರಾಯಣ ಗುಡೂರ್

ಭಾವುಕ ಮನಸುಗಳಿಗೆ, ಭಾವುಕ ದನಿಗಳಿಗೆ ಭಾವನೆಯ ಶಬ್ದಗಳನ್ನು ಹೆಣೆದು ಕೊಟ್ಟ ರಾಷ್ಟ್ರಕವಿಗೆ ನನ್ನ ವಂದನೆಗಳು. ನಾನು ಮೊದಲಿನಿಂದಲೋ ಚಿತ್ರಕಲೆಯ ಕಡೆಗೆ ಒಲವಿದ್ದವನಾದರೂ, ಶಬ್ದಗಳಲ್ಲಿ ಚಿತ್ರಿಸಿದ ಚಿತ್ರಣದಂತೆ ತೋರುವ ಕವನಗಳೂ ಒಮ್ಮಿಂದೊಮ್ಮೆಲೆ ನನ್ನನ್ನು ಆಕರ್ಷಿಸತೊಡಗಿದವು. ಮೈಸೂರು ಅನಂತಸ್ವಾಮಿಯವರು ಹಾಡಿದ ಎದೆ ತುಂಬಿ ಹಾಡಿದೆನು ಅಂದು ನಾನು ಅಂಥ ಹಾಡುಗಳಲ್ಲಿ ಒಂದು. “ಹಾಡು ಹಳೆಯದಾದರೇನು ಭಾವ ನವನವೀನ” ಇದನ್ನು ನಾನು ಮೊದಲು ಕೇಳಿದ್ದು ಮಾನಸ ಸರೋವರ ಚಿತ್ರ ನೋಡಿದಾಗ. ಯಾವುದೇ ಪೇಂಟಿಂಗನ್ನು ತುಂಬಾ ಹತ್ತಿರದಿಂದ ನೋಡಿದರೆ ಸರಿಯಾಗಿ ಕಾಣುವುದಿಲ್ಲ – ಹಾಗೆಯೇ ಈ ಹಾಡಿನಲ್ಲೂ; ಉಪಯೋಗಿಸಿದ ಶಬ್ದಗಳು ಸರಳವಾದರೂ, ಪೂರ್ತಿ ಕೇಳುವಾಗ ಕವನ ಅರ್ಥಪೂರ್ಣವೆನಿಸುತ್ತದೆ ನನಗೆ.

ರಾಷ್ಟ್ರಕವಿಗೆ ನನ್ನ ನಮನಗಳು …….. ಹಾಡಿನ ಈ ನನ್ನ ಪ್ರಯತ್ನದೊಂದಿಗೆ.

**********************************************************************************************

ಶ್ರೀಮತಿ ಶಾಂತಲಾ ರಾವ್

ಈ ಹಾಡಿನ ಪ್ರತಿಯೊಂದು ಶಬ್ದ ನನ್ನ ಆಧ್ಯಾತ್ಮಿಕ ಪಯಣವನ್ನ ಪರಿಚಯಿಸತೇತಿ. ನನ್ನ ಹುಡುಕಾಟಾನೂ ಇದs ರೀ. ನಾನು ಆ ಪರಬ್ರಹ್ಮನ ಒಂದು ಸಣ್ಣ ಅಂಶ. ಆ ಪರಮಾತ್ಮನೊಳಗ ಸೇರಿಕೊಳ್ಳಾಕ, ಕೂಡಿಕೊಳ್ಳಾಕ ಎಷ್ಟ್ ಚಡಪಡಸಾಕತ್ತೇನಿ ಅನ್ನು ವಿಷಯವನ್ನ ಈ ಕವನ ಭಾಳ್ ಚಂದ್ ಹೇಳ್ತೇತಿ ಅಂತ ನನಗ ಅನಸ್ತೇತಿ. ನನ್ನ ಮನಸ್ನ್ಯಾಗ ಕಡಲು ಅಂದ್ರ ಆ ಪರಮಾತ್ಮಾ ಹೆಂಗ್ ಇರ್ರ್ಬೆಕ್ ಅಂತ ಚಿತ್ರಾ, ಮತ್ತ ವಿಚಾರ ಬರ್ರ್ತಾವು ಮತ್ತ ಅವನ್ನ ಹೆಂಗ್ ಸೇರುವುದೋ ಅನ್ನು ಕುತೂಹಲ ಭಾಳ್ ಐತ್ರಿ.
ಇಷ್ಟೆಲ್ಲಾ ಜನಾ ನಾವ್ ಅದೇವೆಲ್ಲ, ಎಲ್ಲಾರೂ ಒಂದ್ ಒಂದ್ ಹೊಳಿ ಇದ್ದಹಂಗ. ಆದ್ರೂ ಒಂದs ಥರಾ ಅದೇವಿ ಅಂದ್ರ ಎಲ್ಲಾರ ಒಳಗ ಅದs ಪರಮಾತ್ಮನ್ ಅಂಶ ಇದ್ದದ್ದಕ್ಕ ನಾವೆಲ್ಲಾ ಒಂದ ಅನ್ನು ವಿಚಾರ. ಶಿವರುದ್ರಪ್ಪ ಅಜ್ಜಾರು ನನ್ ಮನಸ್ನ್ಯಾಗಿನ್ ವಿಚಾರ ಹೆಂಗ್ ತಿಳ್ಕೊಂಡರೋ ಏನೊ. ಅವ್ರಿಗೆ ನನ್ನ ಅನಂತಾನಂತ ಧನ್ಯವಾದಗಳು.
ಈ ಹಾಡ್ ಹಾಡಿರು ಅಶ್ವಥ್ ಅವ್ರ ಧ್ವನಿ ಅಂತೂ ಕೇಳಿದ್ರ ಮನಸಿಗೆ ಹೋಳಿಗಿ ತಿಂದ್ಹಂತಾ ಖುಷೀ ರಿ.
ಈ ಹಾಡು ಹಾಡಿದ್ ನನ್ ಪುಣ್ಯಾ ಅನ್ಕೋತೇನ್ರಿ.
ಸ್ವರಾ ಹೆಚ್ಚು ಕಡಿಮಿ ಇದ್ದಿದ್ದ್ಕ ಕ್ಷಮಸ್ರಿ.

*********************************************************************************************

ಶ್ರೀಮತಿ ಅಮಿತಾ ರವಿಕಿರಣ

“ನಾವಿಬ್ಬರು ಅಂದು ಹೊಳೆಯ ದಡದಲಿ ನಿಂದು”

ರಾಷ್ಟ್ರಕವಿ ಜಿ ಎಸ ಶಿವರುದ್ರಪ್ಪ ನವರ ಈ ಕವಿತೆ ನನಗೆ ತುಂಬಾ ಇಷ್ಟ. ಈ ಹಾಡನ್ನ ನನ್ನ ತಂದೆಯವರು ಹಾಡುವಾಗ ನಾನು ಇದನ್ನ ಕೇಳಿ ಕೇಳಿ ಕಲಿತೆ. ಇದು ನಾನು ಕಲಿತ ಮೊದಲ ಭಾವಗೀತೆ ಭಾವಗೀತೆಗಳೆಂದರೇನು ಎಂದು ಅರ್ಥವಾಗುವ ಮೊದಲು ಕಲಿತು ಹಾಡಿದ್ದು. ಪ್ರತಿ ಗೀತೆಯನ್ನು ಹಾಡುವಾಗ ಹಾಡುಗಾರರ ಮನಸ್ಸಲ್ಲಿ ಒಂದು ಚಿತ್ರ ಓಡುತ್ತಿರುತ್ತದೆ. ನನಗೆ ಈ ಹಾಡು ಹೇಳುವಾಗೆಲ್ಲ ನನ್ನ ಅಜ್ಜಿ ಮನೆಯ ಮುಂದೆ ಇದ್ದ ಪುಟ್ಟ ಹೊಳೆ, ಅಲ್ಲಿ ಮರಳಲ್ಲಿ ಆಡುತ್ತಿದ್ದ ನಮ್ಮ ಚಿತ್ರಗಳು ಕಣ್ಣ ಮುಂದೆ ಬರುತ್ತದೆ; ಈಗಲೂ ಅದೇ ಚಿತ್ರ.

ಹಳ್ಳಿಗಳಲ್ಲಿ ಬೆಳದವರಿಗೆ, ಪವರ್ ಕಟ್, ಸಿಂಗಲ್ ಫ್ಯುಸ್ ಎಲ್ಲ ಚಿರಪರಿಚಿತ ಪದಗಳು. ಗುಬ್ಬಿ ಲ್ಯಾಂಟನ್  ಮಿನುಗಲ್ಲೇ  ತೆರೆದುಕೊಳ್ಳುವ ಸಂಜೆಗತ್ತಲು, ಪಪ್ಪಾನ ಜೊತೆಗೆ ದನಿಗೂಡಿಸಿ ಹಾಡುತ್ತಿದ್ದ ”ನೆನಪಿದೆಯೇ ನೆನಪಿದೆಯೇ” ನನ್ನ ಅತ್ಯಮೂಲ್ಯ ನೆನಪ ನಿಧಿ.

ಈ ಹಾಡನ್ನು ಯಶವಂತ್ ಹಳಬಂಡಿ ಅವರ ದನಿಯಲ್ಲಿ ಕೇಳುವುದೇ ಚಂದ. ”ಮುಂಗಾರು ಮಳೆ ಹೊಯ್ದು ನಾವಿಬ್ಬರು ತೋಯ್ದು” ಎನ್ನುವ ಸಾಲು ಹಾಡಿದ ನಂತರ ಅಲ್ಲಿ ಚಿಕ್ಕದೊಂದು ವಯೊಲಿನ್ ಮ್ಯೂಸಿಕ್ ಇತ್ತು, ಪಪ್ಪ ಅದನ್ನ ಮ್ಮ್ಮ್ ಮ್ಮ್ಮ್ ಮ್ಮ್ ಎಂದು ಹಾಡಿ ನನಗೆ ಹಿನ್ನೆಲೆ ಸಂಗೀತವನ್ನು ಕೊಡುತ್ತಿದ್ದರು.

ನಾನು ಹೊಸ ಶಾಲೆಗೆ ಸೇರಿದಾಗ ಇಡೀ ಶಾಲೆಯ ಮುಂದೆ ಅಚಾನಕ್ ಆಗಿ ಒಮ್ಮೆ ಹಾಡುವ ಅವಕಾಶ ಸಿಕ್ಕಾಗ ನಾನು ಇದೆ ಹಾಡನ್ನು ಹಾಡಿದ್ದೆ. ನಂತರ ಸಂಗೀತ ಕಲಿಸುತ್ತಿದ್ದ ಗ್ರೇಸಿ ಟೀಚರ್ ನನಗೆ ಈ ಹಾಡನ್ನು ಎಲ್ಲ ಮಕ್ಕಳಿಗೆ ಹೇಳಿಕೊಡಲು ಎರಡು ಸಂಗೀತ ತರಗತಿಗಳನ್ನು ಕೊಟ್ಟಿದ್ದರು. ಈಗ ಆ ಘಟನೆ ನೆನೆದಾಗಲೆಲ್ಲ  ಅದೊಂದು ಥರದ ಹೆಮ್ಮೆ, ಖುಷಿಯ ಅನುಭವ.

ಇಷ್ಟು ನೆನಪುಗಳನ್ನು, ಇನ್ನೂ ಎಷ್ಟೋ ಮರೆಯಲಾರದ ಸಣ್ಣ ಸಣ್ಣ ಸಾರ್ಥಕ ಘಳಿಗೆಗಳನ್ನು ನನ್ನಂಥ ಭಾವುಕ ಮನಸಿನ ಮಂದಿಗೆ ಅಕ್ಷರಗಳ ಮೂಲಕ ಒದಗಿಸಿಕೊಟ್ಟ ರಾಷ್ಟ್ರಕವಿಗೆ ಕೋಟಿ ನಮನಗಳು.

*********************************************************************************************

ಶ್ರೀಮತಿ ಸವಿತಾ ಸುರೇಶ್

ಸ್ತ್ರೀ ಅಂದರೆ ಅಷ್ಟೇ ಸಾಕೇ???

ರಾಷ್ಟ ಕವಿ ಜಿ.ಎಸ್.ಶಿವರುದ್ರಪ್ಪ ನವರ ವಿರಚಿತ ಈ ಕವಿತೆಯನ್ನು ಯಾವುದೇ ಸ್ತ್ರೀ ಓದುವಾಗ ಅಥವ ಇದರ ಹಾಡನ್ನು ಕೇಳಿ ಆಲಿಸುವಾಗ ಆಕೆಗೆ ಒಡನೆಯೇ ತನ್ನ ಬಗ್ಗೆ ಅಭಿಮಾನ, ಆತ್ಮಗೌರವ ಹೆಚ್ಚಾಗುತ್ತದೆ. ಏಕೆಂದರೆ ಕವಿಗಳು ಓರ್ವ ಸ್ತ್ರೀ ಜೊತೆಯಲ್ಲಿ ಪ್ರಕೃತಿ ಮಾತೆಯನ್ನು ಸಹ ಅಷ್ಟೇ ರೂಪರಚಿಸಿದ್ದಾರೆ. ಕವಿತೆಯ ಪ್ರಧಾನ ಆಶಯ ಮಾನವ ಕುಲವನ್ನು ಸಲಹುವ ಪಂಚಭೂತಗಳನ್ನೊಳಗೊಂಡ ಪ್ರಕೃತಿ ಮಾತೆ ಹಾಗೂ ಹೆಣ್ಣಿನ ತಾಯ್ತನದ ಆರಾಧನೆ. ನಾಲ್ಕು ಸಾಲಿನ ನಾಲ್ಕು ನುಡಿಗಳ ಈ ಕವಿತೆಯ ಸಾಹಿತ್ಯ ಸ್ವರೂಪದಲ್ಲಿ, ಮೊದಲ ಮೂರು ನುಡಿಗಳು ಪ್ರಕೃತಿ ಮಾತೆಯ ತಾಯ್ತನದ ಬಗ್ಗೆ ವಿಶ್ಲೇಷಿಸಿದರೆ ಕೊನೆಯ ನುಡಿ ಹೆಣ್ಣಿಗೆ – ಅಷ್ಟೇ ಸೊಗಸಾಗಿ ಪ್ರತಿ ಶಬ್ದಗಳಲ್ಲಿ ವಿಶ್ಲೇಷಿಸಿದ್ದಾರೆ!!

ಹಾಗಾಗಿ ಈ ಕವಿತೆಯನ್ನು ಪ್ರತಿ ಬಾರಿ ನಾನು ಹಾಡುವಾಗ ನನ್ನ ಬಗ್ಗೆ ನನಗೆ ಆತ್ಮ ಗೌರವ, ಅಭಿಮಾನ ಮತ್ತು ಹೆಗ್ಗಳಿಕೆ. ಇದರ ಸಾಹಿತ್ಯಕ್ಕನುಗುಣವಾಗಿ ಸಿ.ಅಶ್ವತ್ಥ್ ಅವರ ಮಿಶ್ರಭೌಳಿಯ ಅವರದೇ ಶೈಲಿಯ ರಾಗರಚನೆ ಅಣು ಅಣುವಾಗಿ ಮುದ ನೀಡುವುದು.

**********************************************************************************************

ಶ್ರೀ ಮುಕೇಶ್ ಕಣ್ಣನ್

ನಾನೊಬ್ಬ ಸಂಗೀತಗಾರ, ಯುಕೆಯ ಮ್ಯಾಂಚೆಸ್ಟರ್ ನಗರದ ವಾಸಿ. ಬರೆಯುವುದಿಲ್ಲವಾದರೂ ಸಾಕಷ್ಟು ಓದುತ್ತೇನೆ. ಅಮಿತಾ ರವಿಕಿರಣ ಅವರ ಮೂಲಕ ಅನಿವಾಸಿ ಬಳಗದ ಚಟುವಟಿಕೆಗಳ ಬಗ್ಗೆ, ಅವರ ಬ್ಲಾಗಿನಲ್ಲಿ ಬರುವ ಲೇಖನಗಳ ಬಗ್ಗೆ ತಿಳಿಯುತ್ತದೆ. ಕೆಲಸದ ಒತ್ತಡದ ಮಧ್ಯ ಬಿಡುವಾದಾಗ ಓದುತ್ತೇನೆ. ಈ ವಾರದ ಪ್ರಸ್ತುತಿ ರಾಷ್ಟ್ರಕವಿ ಡಾ. ಜಿಎಸ್ಎಸ್ ಅವರಿಗೆ ಅರ್ಪಿಸುತ್ತಿರುವ ನುಡಿ-ನಮನ ಅಂತ ಗೊತ್ತಾದಾಗ, ಅವರ ಎಷ್ಟೊಂದು ಜನಪ್ರಿಯ ಹಾಡುಗಳು ನೆನಪಾದವು. ನಾನೂ ಏನಾದರೂ ಸಂಗೀತ ರೂಪದಲ್ಲಿ ಭಾಗವಹಿಸಬಹುದೇ ಅಂತ ವಿಚಾರಿಸಿದೆ. ಅನಿವಾಸಿಯ ಸದಸ್ಯನಲ್ಲದಿದ್ದರೂ, ಬಳಗದ ಸಹೃದಯರ ಒಪ್ಪಿಗೆಯಿಂದ ನನ್ನ ಚಿಕ್ಕ ಪ್ರಸ್ತುತಿಯನ್ನು ಅರ್ಪಿಸುತ್ತಿದ್ದೇನೆ.

**********************************************************************************************