`ಅನಿವಾಸಿ`ಗೆ ಅಭಿನಂದನೆಗಳು

ಕೆಲ ಸಾಹಿತ್ಯಾಸಕ್ತ ಯು.ಕೆ ಕನ್ನಡಿಗರು ಆರಂಭಿಸಿದ ಈ ಜಗುಲಿಯ ( ಆನ್ ಲೈನ್ ) ಈ ವಾರಪ್ರತ್ರಿಕೆ ೫೦೦ ಕ್ಕೂ ಹೆಚ್ಚಿನ ಸಂಚಿಕೆಗಳನ್ನು ಹೊರತಂದಿರುವುದು ಒಂದು, ಉತ್ಸಾಹದ, ಯಶಸ್ಸಿನ, ಕನ್ನಡದ, ಹೊರನಾಡಿನ ಕನ್ನಡಿಗರ, ಪರಿಶ್ರಮದ ಪ್ರೇಮಕತೆ.

ತಮ್ಮ ದಿನನಿತ್ಯದ ಕೆಲಸ ಕಾರ್ಯಗಳ, ಮಕ್ಕಳ, ಕುಟುಂಬದ, ಜವಾಬ್ದಾರಿಯ ಭಾರವನ್ನು ನಿರ್ವಹಿಸುವ ಹೊಣೆ ಹೊತ್ತಿದ್ದರೂ, ಕನ್ನಡ ಪ್ರೇಮಿ, ಕ್ರಿಯಾಶೀಲ ಅನಿವಾಸಿ ಸ್ನೇಹಿತರ ಅನನ್ಯ ಕೊಡುಗೆಯ ಫಲ ಈ ಸಂಚಿಕೆ. ಇದರಲ್ಲಿ ಪುಟ್ಟ ಲೇಖನ, ಪದ್ಯಗಳನ್ನು ಬರೆಯುವಂತ ನನ್ನಂತಹ ಹವ್ಯಾಸಿ ಲೇಖಕರಿಂದ ಹಿಡಿದು, ಪ್ರಶಸ್ತಿ, ಪುರಸ್ಕಾರಗಳಿಗೆ ಅರ್ಹವಾದ ಪುಸ್ತಕಗಳನ್ನು ಬರೆದು ಪ್ರಕಟಿಸಿದ ಅತ್ಯುತ್ತಮ ಲೇಖಕರು ಸಹ ಇದ್ದಾರೆ. ಎಲ್ಲಾ ರೀತಿಯ ಕ್ರಿಯಾಶೀಲ ಯುಕೆ ಕನ್ನಡಿಗರಿಗೆ ಅನಿವಾಸಿ, ಮನೆಯಾಗಿ, ನೆಲೆಯಾಗಿ ನಿಂತಿದೆ . ಅನಿವಾಸಿಯೊಂದಿನ ನನ್ನ ಅನುಭವವಿದು ,,,

“ಅನಿವಾಸಿ” ನಿನಗೆ ಅಭಿನಂದನೆ,
ಛಲ ಬಿಡದೆ ನಿಂತ ನಿನ್ನ ತಾಳ್ಮೆಗೆ ವಂದನೆ.

ಬರುಡಾಗಿ ಬಾಡಿದೆ, ಮಳೆಯಿಲ್ಲದೆ ಮರುಗಿದೆ,
ಕೆಲಹನಿ ಬಿದ್ದರೂ ಸಾಕೆಂದು ಕೊರಗಿದೆ,
ಕೋವಿಡ್ ಮಾರಿಯ ಕೈಗಳಲ್ಲಿ ನಲುಗಿದೆ.
ಒರತೆಯ ಕೆಲಹನಿಗಳಲ್ಲಿ ಜೀವ ಹಿಡಿದೆ .

ಹಿಗ್ಗಿ, ನುಗ್ಗಿ ಬಂದೆವು ನಾವು ನಿನ್ನಬಳಿ ಕೆಲವೊಮ್ಮೆ
ಹಿಂತಿರುಗಿಯೂ ನೋಡದೆ ಹೋದೆವು ಒಮ್ಮೊಮ್ಮೆ.
ಮರೆತೇ ಬಿಟ್ಟೆವು ನಿನ್ನ, ಮುಚ್ಚಿ ನಮ್ಮ ಕಣ್ಣನ್ನು
ಬಿಡಲಿಲ್ಲ ನೀನು ಮಿಲನದ ಆಶಾವಾದವನ್ನು.

ಅನಿವಾಸಿಯ ಬದುಕು ಸುಲಭದ ಮಾತಲ್ಲ
ಹೊಸ ಚಂಚಲತೆಯ ಮಾಯೆ ನಮ್ಮ ಸುತ್ತೆಲ್ಲ.
ಕಟ್ಟುವರು ಜನ ದಿನಕ್ಕೊಂದು ಹೊಸ ತಾಣ
ಮಾಡುವರು ಈ ಜಗಲಿಯಿಂದ ಆ ಜಗುಲಿಗೆ ಪ್ರಯಾಣ.

ಜನ್ಮ ನಿನ್ನಿಂದ, ಕತೆ, ಕವನ, ಪ್ರವಾಸ ಕಥನ,
ನಮ್ಮ, ನಿಮ್ಮ ಊರಿನ ಭವ್ಯ ದರ್ಶನ.
ಚಲನಚಿತ್ರ, ಪುಸ್ತಕಗಳ ವಿಮರ್ಶನ,
ಛಾಯಾಗ್ರಹಣ ಭಾವಚಿತ್ರಗಳ ಪ್ರದರ್ಶನ

ನಿನ್ನಿಂದ ಪಡೆದೆ ನಾ ಹೊಸ ಸ್ನೇಹ ಸಂಬಂಧ
ವಿಸ್ತರಿಸಿ ನನ್ನ ಕನ್ನಡದ ಜಗತ್ತಿನ ಬಂಧ.
ಕರುನಾಡಿನಿಂದ ಬಂದರು ಕನ್ನಡದ ಕಲಿಗಳು
ಅನಿವಾಸಿ ಅಂಗಳದ ನಲ್ಮೆಯಲಿ ನಲಿಯಲು.

ಭರವಸೆ, ವಿಶ್ವಾಸ, ನಂಬಿಕೆ, ನೆಚ್ಚಿಕೆಯ ಆಶಾವಾದದಲಿ
ಬಯಸುವ ಕನ್ನಡದ ಸಿರಿಯ ಅನಿವಾಸಿ ಅಂಗಳದಲಿ.

ಅನಿವಾಸಿಗೆ ಶುಭ ಕೋರುವ,


ಡಾ . ದಾಕ್ಷಾಯಿಣಿ

ಇನ್ನು ಯಾಕ ಬರಲಿಲ್ಲವ್ವ…

-ಅಮಿತಾ ರವಿಕಿರಣ್ 
ಅನಿವಾಸಿಗಳಾದ ನಮಗೆ ನಮ್ಮ ಜನ್ಮಭೂಮಿ ಭೇಟಿ ಮಾಡುವ ಅವಕಾಶ ಒದಗಿ, ಒಂದಷ್ಟು ದಿನ ತಾಯಿನೆಲದ ಗಾಳಿ ಬೆಳಕಿನಲ್ಲಿ ನಾವು ತೋಯ್ದು ಬರುವ ಗಳಿಗೆಗಳು ಒದಗಿ ಬಂದಾಗ ವ್ಯಕ್ತಪಡಿಸಲಾಗದ ಒಂದು ಖುಷಿ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಅದಕ್ಕೆ ನಾನು ಕೂಡ  ಹೊರತಲ್ಲ. ನಾನು ಈ ಬಾರಿ ಭಾರತಕ್ಕೆ ಭೇಟಿ ಕೊಟ್ಟಿದ್ದು ನಾಲ್ಕು ವರ್ಷ ಒಂಬತ್ತು ತಿಂಗಳುಗಳ ಧೀರ್ಘ ಅಂತರದ ನಂತರ. ಯುಕೆ ಗೆ ಬಂದ ನಂತರ ನಾನು ಭಾರತಕ್ಕೆ ಹೋಗಿದ್ದು ಮೂರೇ ಬಾರಿ ಹೋದಾಗಲೆಲ್ಲ ಕೆಲವು ಜವಾಬ್ದಾರಿಗಳನ್ನು ಹೊತ್ತುಕೊಂಡೇ ಹೋಗಿದ್ದೆ, ತಂಗಿ ಮದುವೆ, ಮಗನ ಉಪನಯನ, ಪುಟ್ಟ ಮಗಳನ್ನು ಎತ್ತಿಕೊಂಡು ಹೀಗೆ ಏನಾದರೊಂದು ಕಾರಣಗಳಿಂದ ನನಗೆ ಬೇಕಾದೆಡೆ ಬೇಕಾದಂತೆ ನನ್ನ ರಜಾ ಕಾಲವನ್ನು ಕಳೆಯುವುದು ಸಾಧ್ಯವಾಗಿರಲಿಲ್ಲ. ಜೊತೆಗೆ ಅದು ಅಗತ್ಯ ಅಂತ ಕೂಡ ಅನಿಸಿರಲಿಲ್ಲ. ಹೋದಾಗಲೆಲ್ಲ ಅಮ್ಮನ ಕಯ್ಯಡಿಗೆ ತಿಂದು. ಅತ್ತೆಮನೆಗೆ ಹೋದಾಗ ಏಕಮೇವ ಸೊಸೆಯಾದ ಕಾರಣ ಅವರ ಇಚ್ಛೆ, ಬಯಕೆಗಳಂತೆ  ಸುತ್ತಮುತ್ತಲಿನ ದೇವಸ್ಥಾನ ಸುತ್ತಿ ,ಸಂಬಂಧಿಕರ ಮನೆಗೆ ಹೋಗಿ ಅವಕಾಶ ಆದರೆ  ಯಾವುದೋ ಒಂದೆರಡು ಪೂಜೆಯಲ್ಲಿ ಆರತಿ ಹಾಡು ಹೇಳಿದರೆ  ನನ್ನ ಭಾರತ ಪ್ರಯಾಣ ಮುಗಿದಿರುತ್ತಿತ್ತು. ಇದಕ್ಕಿಂತ ಭಿನ್ನವಾಗಿ ನಾನು ಕೂಡ ಎಂದೂ ಯೋಚಿಸಿಯೂ ಇರಲಿಲ್ಲ.
ಆದರೆ ಈ ಬಾರಿ ಭಾರತ ಭೇಟಿ ನನ್ನ ಪಾಲಿಗೆ ಅತೀ ವಿಶೇಷ, ಕೋವಿಡ್,lockdown ಅಂತೆಲ್ಲ ಎರಡುಬಾರಿ ನನ್ನ ವಿಮಾನ ರದ್ದಾಗಿತ್ತು,ಮಕ್ಕಳ ಶಾಲೆ ,ಪತಿಯ ಉದ್ಯೋಗ ,ಇದೆಲ್ಲ ನನ್ನ ಮನಸಿಗೆ ಬಂದಾಗ ಟ್ರಿಪ್ ಪ್ಲಾನ್ ಮಾಡಲು ಸಹಕಾರಿಯಾಗಿರಲಿಲ್ಲ. ಹೀಗಾಗಿ ನಾಲ್ಕು ವರ್ಷ ಒಂಬತ್ತು ತಿಂಗಳ ನಂತರ ನಾನು ತಾಯ್ನೆಲವನ್ನು ನೋಡಲಿದ್ದೆ , ತನ್ನ ಪರಿವಾರ ಕುಟುಂಬವನ್ನು ಭೇಟಿಯಾಗಲಿದ್ದೆ. ಗೋವಿನ ಹಾಡು ಪೂರ್ಣ ಪಾಠವನ್ನ ರೆಕಾರ್ಡ್ ಮಾಡಬೇಕೆನ್ನುವ ಪೂರ್ವ ನಿಯೋಜನೆ ಬಿಟ್ಟರೆ ನಾನು ಬೇರೆ ಯಾವುದೇ ಪ್ಲಾನ್ಗಳನ್ನು ಮಾಡದೆ ಸುಮ್ಮನೆ ಹೋಗಿದ್ದೆ. ಸಮಷ್ಟಿ ತನ್ನಷ್ಟಕ್ಕೆ ತಾನೇ ನನ್ನ ೫೦ ದಿನಗಳನ್ನು ಅತ್ಯಂತ ಸುಂದರವಾಗಿ  ಯೋಜಿಸಿ ಕೊಟ್ಟಿತ್ತು . ನಾನು ಖುಷಿಯನ್ನ ಆಸ್ವಾಧಿಸಲೋ ಸಮಷ್ಟಿಗೆ ಧನ್ಯವಾದ ಹೇಳಲೋ ತಿಳಿಯದಾಗಿತ್ತು . ಸಿಕ್ಕ ಗಳಿಗೆಗಳನ್ನು ನನ್ನ ಪುಟ್ಟ ಕ್ಯಾಮರಾದಲ್ಲಿ ಫ್ರೀಜ್ ಮಾಡಿ ಇಡುವುದೊಂದೇ ನನಗಿದ್ದ ಆಯ್ಕೆ ಎಷ್ಟೋ ಬಾರಿ ಅದು ಕೂಡ ಆಗಲಿಲ್ಲ. ಅನಿವಾಸಿ ಗುಂಪು ನನ್ನ ಮಟ್ಟಿಗೆ ನನ್ನ ಯುಕೆಯ ತವರುಮನಿ ಇದ್ದಂತೆ, ನನ್ನ ಪುಟ್ಟ ಪುಟ್ಟ ಪ್ರಯತ್ನಗಳನ್ನು ಶ್ಲಾಘಿಸಿ ಮತ್ತಷ್ಟು ಸಾಧನೆಗೆ, ಓದಿಗೆ ಹಚ್ಚುವ ನನ್ನ ಅತ್ಯಾಪ್ತ ಬಳಗ, ನಿಮ್ಮೆಲ್ಲರೊಂದಿಗೆ ನನ್ನ ಭಾರತ ಭೇಟಿಯ ಅತ್ಯಂತ ಖುಷಿಯ ಕೆಲ ತಾಸುಗಳ ಅನುಭವ ಹಂಚಿಕೊಳ್ಳುವ ಇಚ್ಛೆ ನನ್ನದು. 

ಊರಿಗೆ ಹೋದರೆ ಧಾರವಾಡಕ್ಕೆ ಹೋಗದಿದ್ದರೆ ನನ್ನ ಪ್ರವಾಸವೇ ಅಪೂರ್ಣ,ನನ್ನ ಊರಿಂದ ಧಾರವಾಡ ೭೦ಕಿಲೋಮೀಟರ ದೂರ, ಹೀಗೆ ಮನಸು ಬಂದಾಗಲೆಲ್ಲ ಹೋಗಿ ಬರಬಹುದು.ಮತ್ತು ಧಾರವಾಡ್ ಹೋಗಲು ಯಾವುದೇ ಕಾರಣ ನೆವಗಳು,ಬೇಡ ಇದೊಂದು ರೀತಿ ಮನಸು ಬಂದಾಗ ಗುಡಿಗೆ ಹೋಗುತ್ತೀವಲ್ಲ ಹಾಗೆ. ಆದರೆ ಈ ಸಲದ ಮೊದಲ ಧಾರವಾಡದ ಭೇಟಿ ಸಾಧ್ಯ ಆಗಿದ್ದು  ಪ್ರಜಾವಾಣಿಯ ೭೫ನೇ ವರ್ಷದ ಸಂಭ್ರಮಾಚರಣೆಯ ನಿಮಿತ್ತ ಏರ್ಪಡಿಸಿದ್ದ ಒಂದು ಚಂದದ ಕವಿಗೋಷ್ಠಿ, ಮತ್ತು ಸಂಗೀತ ವಿದ್ಯಾಲಯದ ಮಕ್ಕಳಿಂದ ವಿಶೇಷ ಗಾಯನ ಕಾರ್ಯಕ್ರಮ ಜೊತೆಗೆ ನನ್ನ ಗಾಯನ ಕಾರ್ಯಕ್ರಮವನ್ನೂ ಆಯೋಜಿಸಿದ್ದರಿಂದ. 

ಆನಂದಕಂದರು ಬರೆದ 'ನಲ್ವಾಡಗಳು' ಕವನ ಸಂಕಲನವನ್ನು ಕೆಲವರ್ಷಗಳಿಂದ ಹುಡುಕುತ್ತಿದ್ದೆ, ಎಲ್ಲಿ ಪ್ರಯತ್ನಿಸಿದರೂ ಸಿಗಲಿಲ್ಲ. ಫೇಸಬುಕ್ ನಿಂದ ಪರಿಚಿತರಾದ ರಾಜ್ ಕುಮಾರ್ ಮಡಿವಾಳರ್ ಅವರಿಗೆ ಬೆಲ್ಫಾಸ್ಟ್ ನಲ್ಲಿ ಇರುವಾಗಲೇ ಒಂದು ಮೆಸೇಜ್ ಮಾಡಿ ಕೇಳಿದ್ದೆ ನಿಮ್ಮಲ್ಲಿ ಅಪ್ಪಿತಪ್ಪಿ ನಲ್ವಾಡುಗಳು ಸಂಕಲನ ಇದ್ದರೇ ಅದರದೊಂದು copy ಸಿಗಬಹುದೇ ? ಎಂದು. ಬಂದಾಗ ಬರ್ರಿ ಐತಿ ಕೊಡ್ತೀನಿ ಅಂದ್ರು.
ಸಪ್ತಾಪುರದಲ್ಲಿ ಇರುವ ಅವರ ಅಂಗಡಿಗೆ ಹೋಗಿ ಪುಸ್ತಕ collect ಮಾಡಲು ಹೋದವಳು ಅವರು ಹೇಳುವ ಸಾಹಿತ್ಯ ಲೋಕದ ಚಂದದ ಕಥೆಗಳನ್ನ ಕೇಳುತ್ತ,ಹಾಡುಗಳ ಬಗ್ಗೆ ಮಾತಾಡುತ್ತ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಅವರಿಗೆ ಎಂದು ತಂದುಕೊಂಡಿದ್ದ ಬುತ್ತಿಯಲ್ಲಿ ನನಗೊಂದು ಪಾಲು ಕೊಟ್ಟು ಅವರ ಶ್ರೀಮತಿ ಸುಮಾ ಮತ್ತು ರಾಜ್ಕುಮಾರ್ ಅವರು ನನ್ನ ಜೀವ ಬಂಧುಗಳೇ ಆಗಿದ್ದರು. 
ಇನ್ನೇನು ಹೊರಡಬೇಕು ಅನ್ನುವಾಗ 'ಇಲ್ಲೇ ಹಳ್ಳಿಯೊಳಗ ಒಂದು ಕನ್ನಡ ಸಾಲಿ ಐತ್ರಿ ನಿಮಗ ಆಗತದ ಅಂದ್ರ ಒಂದೈದು ನಿಮಿಷ ಹೋಗಿ ಬರೋಣ,?' ಅಂದ್ರು ನನಗೆ ಇಲ್ಲ ಅನ್ನುವ ಮನಸು ಇಚ್ಛೆ ಎರಡು ಇರಲಿಲ್ಲ. ಅವರ ಕಾಕಾನ ಕಾರಿನಲ್ಲಿ ನಾನು ಹೊರಟಿದ್ದು ಧಾರವಾಡ ಹತ್ತಿರದ ಹಳ್ಳಿ ಮುಗಧ ಕ್ಕೆ. ಹೆಸರಿನಷ್ಟೇ ಚಂದ ಊರು ಅದು. 'ಬೇಂದ್ರೆಯವರು ಮೇಘದೂತ ಬರೆಯಲು ಶುರು ಮಾಡಿದ್ದು ಇದೆ ಊರಿನ ದೇವಿ ಗುಡಿಯ ಕಟ್ಟಿ ಮ್ಯಾಲೆ' ಅನ್ನುವ ಮಾತು ಕೇಳುತ್ತಲೇ ನನಗೆ ಮಾತೆ ಹೊರಡಲಿಲ್ಲ .ಒಂದುರೀತಿಯ ಖುಷಿಯ ಗುಂಗು. 
 
ಮುಗದದ  ಶಾಲೆಯ ಅತೀ ಉತ್ಸಾಹಿ ,ಸಾಹಿತ್ಯಪ್ರೇಮಿ ಶಿಕ್ಷಕರು ನನ್ನನು ೧೦ ನೇ ತರಗತಿಯ ಮಕ್ಕಳೊಂದಿಗೆ ಮಾತಾಡಲು ತರಗತಿಗೆ ಕರೆದುಕೊಂಡು ಹೋದರು, ಮಕ್ಕಳು ಬೇಂದ್ರೆಯವರ ಎರಡು ಗೀತೆಗಳನ್ನು ಚಂದದ ರಾಗದಲ್ಲಿ ಹಾಡಿದರು. ಹಕ್ಕ್ಕಿಹಾರುತಿದೆ ನೋಡಿದಿರಾ? ಎಂಬ ಗೀತೆ ಕೇಳಿದ್ದ ನನಗೆ, ಮಕ್ಕಳು ಆ ಗೀತೆಯ ಹಿಂದೆಯೇ  ಬೆಕ್ಕು ಹಾರುತಿದೆ ನೋಡಿದಿರಾ ಅಂತೇ ಅದೇ ರಾಗದಲ್ಲಿ ಹಾಡಿದಾಗ ಮತ್ತು ಈ ಗೀತೆಯು ಬೇಂದ್ರೆಯವರೇ ಬರೆದದ್ದು ಎಂದು ತಿಳಿದಾಗ ಅತೀವ ಆಶ್ಚರ್ಯವಾಯಿತು. ಮಕ್ಕಳಿಗೆ ನಾನೂ ಒಂದೆರಡು ಹಾಡು ಹೇಳಿಕೊಟ್ಟೆ. ಮಕ್ಕಳ ಮುಗ್ಧ ಪ್ರಶ್ನೆಗಳಿಗೆ ಉತ್ತರಿಸುವಾಗ , ಕೆಲವೇ ವರ್ಷಗಳ ಹಿಂದೆ ನಾನುಕೂಡ  ಈ  ಮಕ್ಕಳಂತೆ ಇಂಥದೇ ಶಾಲೆಯಲ್ಲಿ ಹೀಗೆ ಖುಷಿ ಖುಷಿಯಾಗಿ ಹಾಡು ಹೇಳುತ್ತಾ ಕುಳಿತಿದ್ದಿದು ನೆನಪಾಯಿತು. ಆ ಶಾಲೆಯಿಂದ ವಾಪಸ್ ಧಾರವಾದ ತಲುಪುವ ಹೊತ್ತಿಗೆ ಮನಸೆಲ್ಲ ಬೇಂದ್ರೆ , ಮೇಘದೂತ , ರಾಜಕುಮಾರ್ ಅಣ್ಣ ಹೇಳಿದ ಬೇಂದ್ರೆ ಅಜ್ಜನ ಕಥೆಗಳು. ಇಷ್ಟು ಹತ್ತಿರ ಬಂದು ಬೇಂದ್ರೆಅಜ್ಜನ ಮನೆಯ ಆವರಣಕ್ಕೆ ಒಮ್ಮೆ ಹೋಗಿ ಬರದಿದ್ದರೆ ಅಂತ ಅನ್ನಿಸಿದ್ದರೂ ಆದಿನ ಸಮಯ ಮೀರಿ ಹೋಗಿತ್ತಾದ್ದರಿಂದ ಸುಮ್ಮನೆ ಮನೆಗೆ ಮರಳಿದೆ. 

ಇನ್ನೇನು ಸೂಟಿ ಮುಗೀತು ಮತ್ತ ಗಂಟುಮೂಟಿ ಕಟಗೊಂಡು ವಾಪಸ್ ಕರ್ಮಭೂಮಿಗೆ ಹೊರಡ್ಲಿಕ್ಕೆ ಬರೀ ಐದ ದಿನ ಉಳದಾವು ಅನ್ನೋ ಹೊತ್ತಿನಲ್ಲಿ ಮತ್ತೊಮ್ಮೆ ಧಾರವಾಡ ಹೋಗುವ ಗಳಿಗೆ ಕೂಡಿ ಬಂತು., ದೂರದಿಂದ ಬಂದ ಸ್ನೇಹಿತರೊಬ್ಬರಿಗೆ ಬೇಂದ್ರೆಯವರ ಮನೆ ನೋಡಬೇಕಿತ್ತು, ಬೇಂದ್ರೆ ಭವನದಲ್ಲಿ ಇದ್ದ ಸಿಬ್ಬಂದಿಯನ್ನು ಮನೆಯ ಗೇಟಿನೊಳಕ್ಕೆ ಹೋಗಲು ಅನುಮತಿ ಕೇಳಿದೆವು, ಆರಂ ಆಗಿ ಹೋಗಿ ಬರ್ರಿ , ನೀವು ಒಳಗೂ ಹೋಗಬಹುದು. ಅಲ್ಲೇ ಬೇಂದ್ರೆಯವರು ಬಳಸಿದ ವಸ್ತುಗಳು ಅದಾವು ಅದನ್ನೂ ನೋಡಿ ಬರ್ರಿ, ಆಮೇಲೆ ಅವರ ಭಾವಚಿತ್ರಗಳ ಸಂಗ್ರಹ ನೋಡ್ಲಿಕ್ಕೆ ಇಲ್ಲಿ ಬರ್ರಿ ಎಂದರು. 

ನಾವು ಗೇಟಿನೊಳಗೆ ಕಾಲು ಇಟ್ಟಾಗ ಚಂದದ  ಬೆಳಗು ಹಳದಿ ಗೋಡೆಯ ಮನೆಯನ್ನು ಇನ್ನೂ ಚಂದ ಮಾಡಿತ್ತು, ಅವರ ಮೊಮ್ಮೊಗಳು ಮತ್ತವರ ಪತಿ ತುಂಬಾ ಆತ್ಮೀಯವಾಗಿ ಮಾತನಾಡಿದರು, ನಾನು ಮೆತ್ತಗೆ 'ನಾನು ಹುಟ್ಟಿದ್ದು ಬೇಂದ್ರೆಯವರ ಜನ್ಮದಿನದಂದು' ಅಂದೆ.  ಹಂಗಾದ್ರ ನೀವೂ ಬರೀತೀರಿ? ಅಂದ್ರು, ನಾನು `ಇಲ್ಲ ರೀ ಹಾಡ್ತೀನಿ` ಅಂದೇ, ಅದು ಹೆಂಗ ಸಾಧ್ಯ ? ಅವರ ಹುಟ್ಟಿದ ದಿನ ಹುಟ್ಟಿ ಬರೆಯಲ್ಲ ಅಂದ್ರ ? ಅಂದು ನಕ್ಕರು. ಫೋಟೋ ವಿಡಿಯೋಗ್ರಫಿ ಹುಚ್ಚು ಇರುವ, ಅದಕ್ಕಿಂತ ಹೆಚ್ಚು ಬೇಂದ್ರೆ ಅವರನ್ನು ಪ್ರೀತಿಸುವ ನನ್ನ ಸ್ನೇಹಿತರು `ನಾವು ಕೆಲ ಹಾಡುಗಳನ್ನ ರೆಕಾರ್ಡ್ ಮಾಡ್ಕೊಬಹುದಾ? ಎಂದು ಕೇಳಿದಾಗ ಬೇಂದ್ರೆ ಅಜ್ಜನ ಮೊಮ್ಮಗಳು ಅರ್ರೆ ,ಅದ್ಯಾಕ್ ಕೇಳ್ತೀರಿ ಮಾಡ್ಕೋರಿ ಅಂತ ಖುಷಿಯಿಂದ ಒಪ್ಪಿಕೊಂಡರು. 
ಹಾಡುವ ಯಾವುದೇ ತಯಾರಿ ಮಾಡಿಕೊಳ್ಳದ ನಾನು ಅವರು ಹಾಡು ಅಂದ ತಕ್ಷಣ ನೆನಪಿಗೆ ಬಂದಿದ್ದು - ಇನ್ನು ಯಾಕ ಬರಲಿಲ್ಲವ್ವ ... ಕವಿತೆಯ ಸಾಲುಗಳು. 
ವಾಹನಗಳ  ಸದ್ದಿನ ನಡುವೆ ನಾನು ಹಾಡಿದ್ದು ಅದೆಷ್ಟು ಸರಿಯಾಗಿದೆಯೋ ಗೊತ್ತಿಲ್ಲ ,ಆದರೆ ಕನ್ನಡದ ಇಬ್ಬರು ಮೇರು ಕವಿಗಳು ವಾಸಿಸಿದ, ಓಡಾಡಿದ ಸ್ಥಳದಲ್ಲಿ ನನಗೆ ಅವರ ಹಾಡುಗಳನ್ನು ಹಾಡುವ ಅವಕಾಶ, ಅದೃಷ್ಟ ಭಗವಂತ ಒದಗಿಸಿಕೊಟ್ಟಿದ್ದಕ್ಕೆ ನಾ ಅವನಿಗೆ ಋಣಿ. (ಇಲ್ಲಿಗೆ ಬರುವ ಮೊದಲು ಮೈಸೂರಲ್ಲಿ ಕುವೆಂಪು ಅವರ ಮನೆಯ ಆವರಣದಲ್ಲಿ ಕೂತು ಸಹ ಅವರ ಒಂದು ಕವನವನ್ನು ಹಾಡಿದ್ದೆ.)
ಡಾ ದ ರಾ ಬೇಂದ್ರೆ ಅವರ ಮನೆಯ ಆವರಣ ,ಸಾಧನಕೇರಿ ಧಾರವಾಡ