ಸುತ್ತಮುತ್ತಲಿನ ಋಣಾತ್ಮಕ ಬೆಳವಣಿಗೆಗಳು ನಮ್ಮನ್ನಾವರಿಸಿರುವ ಈ ಸಂಧರ್ಭದಲ್ಲಿ, ಇನ್ನು ಕೆಲವೇ ದಿನಗಳಲ್ಲಿ ಯುಗಾದಿ ಹಬ್ಬವಿದೆ ಎಂಬುದು ಕೆಲವರಿಗೆ ಮರೆತು ಹೋಗಿದ್ದರೆ ಯಾವುದೇ ಆಶ್ಚರ್ಯವಿಲ್ಲ.ಇದೇ ತಿಂಗಳ ಕೊನೆಯಲ್ಲಿ ನಡೆಯಬೇಕಾಗಿದ್ದ ಅನೇಕ ಯುಗಾದಿ ಕಾರ್ಯಕ್ರಮಗಳು ರದ್ದಾಗಿವೆ. ಸಾಮಾಜಿಕ ಪ್ರಾಣಿಗಳಾಗಿರುವ ನಾವೆಲ್ಲರೂ, ನಮ್ಮ ಗುಣಕ್ಕೆ ವಿರುದ್ಧವಾಗಿ ಸಾಮಾಜಿಕವಾಗಿ ಪ್ರತ್ಯೇಕವಾಗಿ ಮನೆಯ ನಾಲ್ಕು ಗೋಡೆಗಳಿಗೆ ನಮ್ಮನ್ನು ಸೀಮಿತಗೊಳಿಸಿಕೊಳ್ಳಬೇಕಾಗಿರುವದು ಇಂದಿನ ಸ್ಥಿತಿ. ಪ್ರತೀ ವರುಷ ಬೇವು ಸಾಂಕೇತಿಕವಾಗುತ್ತಿತ್ತು ಆದರೆ ಈ ವರುಷದ ಯುಗಾದಿಯ ಬೇವು-ಬೆಲ್ಲದಲ್ಲಿ ಬೇವಿನ ಪ್ರಮಾಣ ಸ್ವಲ್ಪ ಹೆಚ್ಚಾದಂತೆಯೇ ಕಾಣುತ್ತಿದೆ. ಜೀವನದ ಸಿಹಿ ಕಹಿಗಳನ್ನು ಸಮನಾಗಿ ಕಾಣಬೇಕು ಎಂಬ ಹಬ್ಬದ ಪ್ರತೀತಿಯನ್ನು ನಾವು ಈ ವರುಷ ಸಾಮೂಹಿಕವಾಗಿ ಪಾಲನೆಗೆ ತರಲೇಬೇಕಾಗಿದೆ. ಈ ಸಂಧರ್ಭದಲ್ಲಿ ಡಿ.ವಿ. ಜಿ ರವರ ಒಂದು ಮುಕ್ತಕ ನೆನಪಾಗುತ್ತಿದೆ.
ವಹಿಸು ಕೆಲ ಭಾರಗಳ; ಸಹಿಸು ಕೆಲ ನೋವುಗಳ ।
ಪ್ರಹರಿಸರಿಗಳನನಿತು ಯುಕ್ತಗಳನರಿತು ॥
ಮಹಿಯ ನಾಟಕದಿ ನೀಂ ಮನಸಿಟ್ಟು ಕುಣಿಕುಣಿದು ।
ವಿಹರಿಸಾತ್ಮಾಲಯದಿ- ಮಂಕುತಿಮ್ಮ ॥
ಬದುಕಿನಲ್ಲಿ ಕೆಲವು ಭಾರಗಳನ್ನು ಹೊತ್ತುಕೋ, ಕೆಲವು ನೋವುಗಳನ್ನು ಸಹಿಸಿಕೋ, ನಿನ್ನ ಶತ್ರುಗಳನ್ನು ಆದಷ್ಟು ಬಗ್ಗುಬಡಿ, ಬದುಕುವಾಗ ಯುಕ್ತ-ಅಯುಕ್ತಗಳನ್ನು ಅರಿತು, ನಿನಗೆ ವಹಿಸಿದ ಈ ಭೂಮಿಯ ಮೇಲಿನ ನಾಟಕದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು, ನಿನ್ನ ಪಾತ್ರವನ್ನು ವಹಿಸು. ಹಾಗೆ ಮಾಡುವಾಗ ನೀನು ಆತ್ಮದ ಆಲಯದಲ್ಲಿ ವಿಹರಿಸು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ(ರಸಧಾರೆ-೯೦೪). ಅದರಂತೆ ನಾವು ನಮ್ಮ ಶತ್ರುವನ್ನು ಅರಿತುಕೊಂಡು, ಅದನ್ನು ಬಗ್ಗು ಬಡೆಯಲು ಸಾಮಾಜಿಕ ಪ್ರತ್ಯೇಕತೆ (Social Distancing) ಎಂಬ ಭಾರವನ್ನು ಹೊರಬೇಕಾಗಿದೆ, ಕೆಲವು ನೋವುಗಳನ್ನು ಸಹಿಸಬೇಕಾಗಿದೆ ಮತ್ತು ಈ ವರುಷದ ಯುಗಾದಿಯನ್ನು ಮನೆಗಷ್ಟೇ ಸೀಮಿತಗೊಳಿಸಿ ಆಚರಿಸಬೇಕಾಗಿದೆ. ಈ ಸಂಧರ್ಭದಲ್ಲಿ ನಂಬಿಕೆಯ ಬೆಲ್ಲವ ನೆನೆದು, ಮಾನವೀಯತೆಗೆ ಮೆರಗು ತರಲು ಸದಾವಕಾಶವೆಂದು ತಿಳಿದು ನಮ್ಮ ಕೈಲಾದಷ್ಟು ಸಮಾಜಮುಖಿಯಾಗುವುದರ ಮೂಲಕ ಯುಗಾದಿಯನ್ನು ಆಚರಿಸೋಣ. ನಿಮಗೆಲ್ಲರಿಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಷಯಗಳು.
ಯುಗಾದಿ ಹಬ್ಬದ ಪ್ರಯುಕ್ತ ಈ ವಾರ ‘ಅನಿವಾಸಿ’ಯಲ್ಲಿ ಗೋಪಾಲಕೃಷ್ಣ ಹೆಗ್ಡೆ ರವರು ಬರೆದಿರುವ ಲೇಖನ ಮತ್ತು ಅನಿತಾ ಹೆಗ್ಡೆ ರವರು ಬರೆದಿರುವ ಒಂದು ಕವನವನ್ನು ಪ್ರಕಟಿಸುತ್ತಿದ್ದೇವೆ, ಓದಿ ಪ್ರೋತ್ಸಾಹಿಸಿ.
(ಸಂ : ಶ್ರೀನಿವಾಸ ಮಹೇಂದ್ರಕರ್)
೨೦೨೦ರ ಮೌನ ಯುಗಾದಿಯ ವಿಚಾರಗಳು


ವರ್ಷಕ್ಕೊಮ್ಮೆ ಬರುವ ದಕ್ಷಿಣ ಭಾರತೀಯ ಹಬ್ಬಗಳಲ್ಲಿ ಒಂದಾದ ಯುಗಾದಿ ಹಬ್ಬ, ಈ ವರ್ಷ ಕೇವಲ ಸಾಂಕೇತಿಕವಾಗಿ ಸಂಭವಿಸುತ್ತಿದೆ, ಸಂಭ್ರಮದಲ್ಲಿ ಅಲ್ಲ . ಯಾವುದೇ ವಸ್ತು ಅಥವಾ ಘಳಿಗೆ – ಘಟನೆಯನ್ನು, ಸಾಂಕೇತಿಕವಾಗಿ ಅನುಭವಿಸುವದು, ಅಂದರೆ ಅದನ್ನು ಹಾಗೆ ಕಲ್ಪಿಸಿಕೊಳ್ಳುವದು ಅಥವಾ ಅದು ಅಂದರೆ ಏನು ಎಂದು ವಿಚಾರಿಸುವದು, ಚರ್ಚಿಸುವದು, ಎಲ್ಲ ಕೇವಲ ಮನೋಮಂಥನದ ಚಟುವಟಿಕೆಯೇ ಸರಿ. ಆದರೇನಂತೆ ?
ಈ ಯುಗಾದಿ, ಕಾವಿಡ್-೧೯ ಎಂಬ ವೈರಾಣು, ಕಳೆದ ೩-೪ ತಿಂಗಳಲ್ಲಿ, ಈ ನಮ್ಮ ಮನುಕುಲದ ಲಕ್ಷಾಂತರ ಜನರನ್ನು ಮುಖ್ಯವಾಗಿ, ಅವರ ಶ್ವಾಸಕೋಶವನ್ನೇ ತನ್ನ ಭಯಂಕರ ವಜ್ರಮುಷ್ಠಿಯಲ್ಲಿ ಹಿಡಿದು ಕಾಡಿ ಕೊಲ್ಲಲು, ಜಗತ್ತಿನಾದ್ಯಂತ ದಿನೇ- ದಿನೇ, ಬೆಳೆದುಕೊಳ್ಳುತ್ತಿರುವದು ಒಂದು ಪ್ರಳಯದ ಚಿತ್ರಣವೇ ಸರಿ. ಪ್ರಾಣದಾತ ವಾಯುವಿನ ಸಂಬಧವನ್ನೇ ಧಿಕ್ಕರಿಸಿಯೂ, ಅವನಿಗಿಂತ ಪ್ರಬಲನಾಗಿ ಹರಡಬಲ್ಲೆನೆಂಬ ಅಹಂನಲ್ಲಿ, ಹೂಂಕರಿಸಿ ಘರ್ಜಿಸುತ್ತಿರುವ, ಕಣ್ಣಿಗೂ ಕಾಣಸಿಗದ ಈ ವೈರಾಣು, ವಾಯುವಿನ ಕಾರ್ಯಕೇಂದ್ರವಾದ ಶ್ವಾಸಕೋಸಕ್ಕೇ ಧಕ್ಕೆಯಿಟ್ಟು, ಅವನನ್ನು ಹೀಯಾಳಿಸಿ ಕುಣಿಯುತ್ತಿರುವ ಈ ಸಂದರ್ಭ ಒಂದು ಪ್ರಳಯ ಸಂಕೇತವೇ -ಅಥವಾ ಸ್ಮಶಾನದ ಮಹಾ ಪ್ರೇತವೇ ಎಂದೆಲ್ಲ ಪರಿಗಣಿಸಿದಲ್ಲಿ ಉತ್ಪ್ರೇಕ್ಷೆಯೇನೂ ಅಲ್ಲ ಅನ್ನಿಸಿದೆ.
ಮೇಲೆ ಅಂದುಕೊಂಡಂತೆ ಗಾಳಿಯ ಸಂಭಂಧವಿಲ್ಲದೆಯೂ , ಬಿರುಗಾಳಿಯಂತೆ ದೇಶ ದೇಶಗಳಿಗೂ ಹರಡುತ್ತಿರುವ ಈ ವೈರಾಣು ಖಾಯಿಲೆ, ನಾವಿಂದು ಹಂಬಲಿಸಿ ಬಂದು ತಂಗಿದ ಯುನೈಟೆಡ್ ಕಿಂಗ್ಡಮ್ ಅನ್ನು ಸುತ್ತಿಕೊಳ್ಳುತ್ತಿರುವಂತ ಈ ಉಗ್ರಚಿತ್ರಣದಲ್ಲಿ, ಈ ವೈರಾಣುವೆಂಬ ಖಳನಾಯಕ-ಚಿತ್ರಕಾರ, ಮಾಮೂಲಾಗಿ ನಡೆದುಕೊಂಡು ಹೋಗಬೇಕಾಗಿದ್ದ ದಿನನಿತ್ಯದ ಕಾರ್ಯಾಚರಣೆಗಳನ್ನೆಲ್ಲವನ್ನು ಅವನ ಕಪ್ಪುಬಣ್ಣ ಒಂದರಲ್ಲೇ ಗಾಬಳಿಸಿ ನುಂಗಿ, ಅವೆಲ್ಲ ಒಂದೊಂದಾಗಿ ಅಳಿಸಿ ಹೋಗುವಂತೆ ಮಾಡುತ್ತಿರುವ ತನ್ನ ಕಾರ್ಯಾಚರಣೆಯಲ್ಲಿ, ನಮ್ಮಂತ ಅನಿವಾಸಿಗರೆಲ್ಲ ಜಗತ್ತಿನಾದ್ಯಂತ, ಅಲ್ಲಲ್ಲಿ ಹಮ್ಮಿಕೊಂಡಿದ್ದ ಯುಗಾದಿ ಹಬ್ಬಕ್ಕೇ ಕಪ್ಪು ಸುರಿದುಬಿಟ್ಟಿದ್ದಾನೆ. ಹೀಗಾಗಿ ಈ ೨೦೨೦ರ ವರ್ಷದಲ್ಲಿ ಯುಗಾದಿ ಸಂಭ್ರಮ ಇಲ್ಲವಾಯಿತು, ಸಡಗರ ಸುಮ್ಮನಾಯಿತು. ಈ ಮೌನದ ಗಳಿಗೆಯಲ್ಲಿ ರಾಗ ಚಾರುಕೇಶಿ ಸಮಂಜಸವಾಗಿದ್ದರೂ, ಸುಮ್ಮನಾದ ಈ ಯುಗಾದಿಯ(ಸಮಯದ)ನೆನಪಿನಲ್ಲಿ ಅದರ ಸಾಂಕೇತಿಕವೋ ಎಂಬಂತೆ ಒಂದು ‘ಹೊಸರಾಗ’ ಕಲ್ಪಿಸಿಕೊಳ್ಳಲು ಪ್ರಯತ್ನಿಸಿದರೆ, ಅದನ್ನು ಈ ಸಮಯ ಪ್ರಳಯಕಾಲೀನ ಎಂದು ಇಲ್ಲಿಯವರೆಗೆ ಚಿತ್ರಿಸಿದ್ದಕ್ಕಾಗಿ, ಈ ನನ್ನ ಪ್ರಯತ್ನಅಪ್ರಸ್ತುತ ಎಂದು ಜರಿದುಬಿಟ್ಟೀರೇನೋ ಎಂಬ ಭಯ, ಬರೆಯುವ ನನ್ನ ಈ ಲೇಖನಿಯನ್ನು ಕಾಡಿರುವುದು ಓದುಗರಿಗೆ ಕಾಣಸಿಗದಿರಬಹುದು! ಹತ್ತಿರದ ಸ್ನೇಹಿತರೋ ಅಥವಾ ಸಂಬಂಧಿಯೊಬ್ಬರೋ ಅಕಸ್ಮಾತ್ ಅನಾರೋಗ್ಯರು ಎಂಬ ಸುದ್ದಿಯ ಭಯಾನಕ ಸ್ವಪ್ನ ನಿಜವಾದ ಕ್ಷಣಗಳು, ನಮ್ಮನ್ನೆಲ್ಲ ಇಂದಿನ ದಿನಗಳಲ್ಲಿ ಬೆನ್ನತ್ತು ಕಾಡಿವೆ ಎಂದು ಬಹಿರಂಗದಲ್ಲಿ ಸೂಚಿಸದೆಯೇ, ನನ್ನ ಈ ಮೇಲಿನ ಹೊಸರಾಗದ ಆಸೆ, ಅಕಾಲಿಕವಾದರೂ ಆಂತರಂಗಿಕ ಮತ್ತು ಆದರಣೀಯ ಎಂಬ ಯೋಚನೆ, ನಿಮ್ಮೆಲ್ಲ ಓದುಗರ ಚಿತ್ರಣಕ್ಕೂ ಬಂದೀತೆ? ದಿಬ್ಬಣವಿಲ್ಲದ ಇಂತಹ ದಿನಗಳು ಕೇವಲ ದಾರಿದ್ರ್ಯದ , ದಾರುಣ ಕ್ಷಣಗಳೇ -ಮತ್ತೇನು ಎಂಬುದೂ, ಇನ್ನೊಂದು ಯೋಚನೆ.
ಪ್ರತಿವರ್ಷ ಯುಗಾದಿಯ ಸಂದರ್ಭದಲ್ಲಿ ಹಲವಾರು ಸಡಗರವರ್ಣಿತ ಬರಹಗಳನ್ನು ಓದಿದಾಗಲೆಲ್ಲ, ಜಗತ್ತಿನ ಬೇರೊಂದು ಕಡೆ, ಹಲವಾರುಕಡೆ ನಡೆಯುತ್ತಿದ್ದ, ರೂಪಿತವಾಗುತ್ತಿದ್ದ ಅಮಾನುಷಿಕ ಕ್ರತ್ಯಗಳ ಬೆಂಕಿಯನ್ನು, ಅದರಿಂದ ಮುಸುಕಿದ ಹೊಗೆಯನ್ನು, ಈ ಸಡಗರವರ್ಣಿತ ಬರಹದೊಂದಿಗೆ ಜೊತೆ-ಜೊತೆಯಾಗಿ ಸೇವಿಸಲಾಗದೆ ಚಡಪಡಿಸಿದ್ದುಂಟು. ಆದರೂ ಅಂದಿನ, ಇಂದಿನ ಮತ್ತು ಮುಂದೆಂದಿನ ಸಡಗರದ ಆಚರಣೆ ಅಸಂಗತವೇನೂ ಅಲ್ಲವೇ ಅಲ್ಲ; ಆದರೆ ಮೇಲೆ ಸೂಚಿಸಿಕೊಟ್ಟ ‘ಕಾಡಿದ-ಕಾಣಸಿಗದ ‘ ವಿನಮ್ರಿತ ರೀತಿಯ ಭಾವನೆಗಳನ್ನೂ, ಸಡಗರದಂತರಂಗದಲ್ಲಿ ಅಳವಡಿಸಿಕೊಂಡಲ್ಲಿ ಸಡಗರದ ಚಿತ್ರಣ ಸಂಪೂರ್ಣವಲ್ಲವಾದರೂ, ಪೂರ್ಣವಾದೀತೇನೋ ಎಂಬ ಆಶಯ, ಈ ಮೌನ ಯುಗಾದಿಯ ಆಶಯವಾಗಿ ನನ್ನಲ್ಲಿ ಬೆಳಿದಿದೆ .
ಹೀಗೆಲ್ಲ ವಿಚಾರ ಮಾಡುತ್ತಾ ಹೋದಾಗ ಅನ್ನಿಸಿದ್ದು, ಕಂಡುಕೊಂಡಿದ್ದು ಸ್ವಲ್ಪ ಮಟ್ಟಿಗಾದರೂ,ಈ ಯುಗಾದಿಯ ಸಾಂಕೇತಿಕ ಸಂದೇಶ, ಪ್ರಳಯವೇ ಆಗಬೇಕಾಗಿಲ್ಲವಾದರೂ, ಯೋಚಿಸಿದಾಗ ಪ್ರತಿಯುಗದ ಆದಿಯಲ್ಲಿ ಅದು ಆದಂತಿದೆ; ಪ್ರಳಯದ ಭಯಾನಕತೆಯ ಭಾವವನ್ನೂ ಮತ್ತೆ ಅದರ ನೋವನ್ನು ತಿರಸ್ಕರಿಸದೆ, ಬದಲಾಗಿ ಅಳವಡಿಸಿಕೊಂಡ, ಆದರಿಸಿದಂತೆಯೇ ಧರಿಸಿಕೊಂಡ ನಮ್ಮ ಧರಿತ್ರಿ, ಹೊಸಯುಗವನ್ನು ಪ್ರತಿಬಾರಿ ವಿಶ್ವರೂಪ ಸೌಂದರ್ಯದಲ್ಲಿ ರೂಪಿಸಿಕೊಳ್ಳುತ್ತದೆಯಲ್ಲವೇ? ಪ್ರಳಯಗರ್ಭಿತ ಯುಗ-ಯುಗಗಳಲ್ಲಿ ಕಾಣುವದು ಈ ಯುಗಾದಿಯ ಸಂಕೇತ, ನೋವು ಮುನ್ಸೂಚಿಸುವ ಸುಖ ಸಂದೇಶ ವಿಪರ್ಯಾಸವೇ ಅಲ್ಲ . ಹೀಗಾಗಿ, ಇಂದಿನ ಭಯವನ್ನು ಮತ್ತು ನೋವನ್ನು ತ್ಯಜಿಸದೆ, ಅದನ್ನು, ಇದು ಈಗ ನನಗೆ ಈ ರೂಪದಲ್ಲಿ ಯಾಕಾಯಿತು ಎಂದು ಆತ್ಮವಿಶ್ಲೇಷಣೆ ಮಾಡಿಕೊಂಡಂತೆ, ಈ ಮೌನ ಯುಗಾದಿಯ ಅಂತರಂಗದ ಸಂದೇಶ ಸಂಕೇತ, ನಮ್ಮ ಮಾನಸಿಕ ವಿಕಾಸನೆಯ ಮಾರ್ಗವಾದೀತೇ, ಒಪ್ಪವಿದೆಯೇ ಅಕಾಲಿಕ ಪ್ರಶ್ನೆಗೆ? ಹೀಗೆ ಸಾಗಿವೆ ನನ್ನ ಮೌನಲೋಚನೆಗಳು.
ವಸಂತ ಚಿಗುರು


ಯುಗಾದಿ ಮತ್ತೆ ಬಂತು ವಸಂತ ಋತುವಿನಲಿ
ಚಿಗುರೊಡೆಯಿತು ಮಾವು
ಸಾಕಿಷ್ಟು ಕೋಗಿಲೆಗೆ ಮಧುರಗಾನ
ಚಿಗುರೊಡೆಯಿತು ಬೇವು
ಬೆಲ್ಲದ ಹದ ಸಮ್ಮಿಳಿತ
ಸಾಕಿಷ್ಟು ಮಾನವಗೆ ಸಮತೋಲನ
ಎಲ್ಲೆಡೆ ವಸಂತ ಚಿಗುರು, ವಸಂತ ವಿಸ್ಮಯ!
ಹಿಮ ಕರಗಿ ಧುಮ್ ಎಂದಿತು
ಭೂಶಿರಕಾಯಿತು, ಸೂರ್ಯನ ಆಲಿಂಗನ ಚುಂಬನ
ಎಳೆ ಬಿಸಿಲು ಮಂಜಿನ ಮೇಲೆ, ಹೊಳೆಯುವ ಮುತ್ತಿನ ಹಾರ
ಎಲ್ಲೆಡೆ ಹೂವಿನ ಸಾಲು, ದುಂಬಿಗೂ ಹಬ್ಬದ ಕಾಲ!
ಕಂಪಿಸಿತು ಕೈಗಳು, ಜರಿ ಜರಿದು ಧರೆಗಿಳಿದ ಆ ಶಂಖ ಪುಷ್ಪ
ಇಬ್ಬನಿಯ ಮಸುಬಿನಲೂ ಸ್ಪಷ್ಟ ಆ ಮೋಹಕ ನೋಟ
ಹೇಳಲೇನಾದರೆಂಬ ಕಾತುರ, ಮೌನವೇ ಎಲ್ಲದಕೂ ಉತ್ತರ
ಬರಲಿ ಮಗದೊಮ್ಮೆ ಯುಗಾದಿ, ಮಗೆ ಮಗೆದು ಹಬ್ಬದ ಸಂಭ್ರಮ
ಮತ್ತೊಡೆಯಿತು ಚಿಗುರು, ಹೂವರಳಿ ಹೊಸತನ
ಎಲ್ಲೆಡೆ ವಸಂತ ಚಿಗುರು, ಸೃಷ್ಟಿಯ ವಿಸ್ಮಯ!
ರೇಶಿಮೆ ಸೀರೆ ಹಬ್ಬಕೆ, ಸವಿ ನೆನಪುಗಳ ಮಿಶ್ರಣ
ಶೃಂಗಾರದ ಸಂಭ್ರಮ, ಮುತ್ತಿನ ನತ್ತು
ಕತ್ತಿಗೆ ಮುತ್ತಿನ ಸರ, ಅದಕೊಪ್ಪುವ ಕಿವಿಯೋಲೆ
ಬಿಸಿ ಉಸಿರು ಸನಿಹದಲಿ, ನಾಚಿ ರಂಗಾದಳು ಆಸರೆಯಲಿ
ಇಟ್ಟು ದುಂಡನೆಯ ಕುಂಕುಮದ ಬೊಟ್ಟು, ಜಡೆಗೆ ಮಲ್ಲಿಗೆ ದಂಡೆ
ಪಿಸುರಿದ ಮೆಲ್ಲಗೆ ಸನಿಹದಲಿ, ಇದು ನನ್ನವಳಿಗೆ ಶೋಭೆ ಎಂದು
ಮತ್ತೊಡೆಯಿತು ಚಿಗುರು, ಹಬ್ಬದ ಸಂಭ್ರಮ
ಎಲ್ಲೆಡೆ ಹೊಸ ಚಿಗುರು, ವಸಂತ ತನ್ಮಯ!
ಚಿಗುರೊಡೆದು ಒಂದಿದ್ದು ನಾಲ್ಕಾಗಿ
ಬೆಳೆದು ಹಣ್ಣಾಗು, ಹೆಬ್ಬಾವಲ್ಲ
ಉದುರುವುದು ಅನೀವಾರ್ಯ, ಬೀಳುವುದಲ್ಲ
ಹುಟ್ಟು ಸಾವುಗಳ ಅಂತರದಲಿ, ದ್ವಂದ್ವ, ತಿಳಿ ನೀರ ಅರಿಯೇನೇ ಇರಲಿ
ಮತ್ತೊಡೆಯಿತು ಚಿಗುರು, ಜೀವನ ಉತ್ಸಾಹದ
ಎಲ್ಲೆಡೆ ವಸಂತ ಚಿಗುರು, ಇದುವೇ ಕಾಲಚಕ್ರದ ವಿಸ್ಮಯ!
ಬೆಳ್ಳಂ ಬೆಳಿಗ್ಗೆ ಮೂಡಲ ಮನೆಯ ರವಿ ಕಿರಣ
ತೊಯ್ದ ತೊಯ್ದ ಮನೆಯೆಲ್ಲಾ ಮನವೆಲ್ಲಾ
ದೇವರಿಗೆ ನಂದಾದೀಪ, ಗಂಧ ಚಂದನದ ಲೇಪ
ಲವಲವಿಕೆ ಗಾಜಿನ ಬಳೆಗಳಿಗೆ, ಗೆಜ್ಜೆ ಕಾಲ್ಗಳಿಗೆ ಹೊಸತನ
ಘಮ್ ಘಮ್ ಪಾಯಸ, ಹೋಳಿಗೆ ಹೂರಣ
ಕಹಿ ಮೊದಲು ಪಾನಕಕೆ ಹೊಸ ಬೆಲ್ಲ, ಹಳಸಲ್ಲ ಹೊಸತನ
ಮತ್ತೊಡೆಯಿತು ವಸಂತ ಚಿಗುರು, ಸಂತೋಷದ
ನವೋಲ್ಲಾಸದ, ಪಥದಿ ಸಾಗುವ ಜೀವನ ಪಯಣ!