ಕನ್ನಡದ ಮನ ಕೇಳಿದ ಹಿಂದಿ ಗಾನಾ!

image.png  ಹುಟ್ಟೂರಿನಿಂದ ಎಷ್ಟೇ ದೂರ ಬಂದರೂ, ಬೆಳೆದಂತೆ ಬೇಕಾದ ಭಾಷೆಗಳ ಕಲಿತು ಬಳಸಿದರೂ, ಮನಸು ಮಂಥಿಸುವದು ಮಾತೃಭಾಷೆಯಲ್ಲೇ. ಹೀಗೆ ಹಿಂದಿಯಲ್ಲಿ ಕೇಳಿ ಆನಂದಿಸಿದ ಹಾಡುಗಳನ್ನು ಕನ್ನಡದಲ್ಲಿ ಜೀರ್ಣಿಸಿಕೊಂಡು, ಆ ಹಾಡುಗಳ ಭಾವವನ್ನ ಲಯದೊಂದಿಗೆ ಕನ್ನಡದಲ್ಲಿ ಬರೆಯುವ ಹವ್ಯಾಸದ ಅನಿವಾಸಿ ವೈದ್ಯ ಕೇಶವ ಕುಲಕರ್ಣಿ, ತಮ್ಮ ಭಂಡಾರದ ಎರಡು ಹಾಡುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. 

 
ಹಿಂದಿಯ ಹಾಡು ಮತ್ತು ಸಿನೆಮಾ ಹೆಸರು ಕಮೆಂಟುಗಳಲ್ಲಿ ಕಾಣಿಸುವ ಜಾಣ್ಮೆ ಹಾಗು ಉತ್ಸಾಹ ಅನಿವಾಸಿ ಓದುಗರಲ್ಲಿದೆ ಎನ್ನುವ ವಿಶ್ವಾಸ ನಮ್ಮದು. 
 

೧. ಈಶ್ವರ ಅಲ್ಲಾ 

 

ಈಶ್ವರ ಅಲ್ಲಾ ನಿನ್ನಯ ಜಗದಿ
ದ್ವೇಷವಿದೇಕೆ ಛಲವೇಕೆ? ।ಪ!

ನಿನ್ನಯ ಮನವು ಆಲದ ಮರವು
ಮನುಜನ ಮನವು ತೃಣವೇಕೆ? ।ಅ.ಪ।

ಅಡಿಗಡಿಗೊಂದು ಗಡಿಗಳು ಏಕೆ
ನಿನ್ನದೇ ಅಲ್ಲವೇ ಜಗವೆಲ್ಲಾ?
ನೇಸರ ನಮ್ಮನು ಸುತ್ತುತಲಿದ್ದರೂ
ಕತ್ತಲೆ ನಮ್ಮಯ ಬದುಕೆಲ್ಲಾ
ಭೂಮಿಯ ಸೀರೆಯ ಅಂಚಿನ ತುಂಬ
ಮನುಜನ ರಕುತದ ಕಲೆ ಏಕೆ? ।೧।

ಕಿವಿಗಪ್ಪಳಿಸಿವೆ ಹಾಹಾಕಾರ
ಒಲುಮೆಯ ಮಾತು ಕೇಳಿಸದು
ಚೂರ್ಚೂರಾದವು ಸಾವಿರ ಕನಸು
ಜೋಡಿಪರಾರೋ ಕಾಣಿಸದು
ಮನ ಬಾಗಿಲಿಗೆ ಬಿದ್ದಿದೆ ಬೀಗ
ಬೀಗಕೆ ಹಿಡಿದಿದೆ ತುಕ್ಕೇಕೆ? ।೨। 

 
 
ಕುರುಹು: ಸಂಗೀತ ಎ.ಆರ್. ರಹಮಾನ್, ಸಾಹಿತ್ಯ: ಜಾವೇದ್ ಅಕ್ತರ್ 
 
 
2. ನಾನಾರು?
ಹೇಳಿ ಯಾರಾದರೂ ನಾನೆಲ್ಲಿರುವೆ
ಹೇಳಿ ಯಾರಾದರೂ ನಾ ಏಕಿರುವೆ
ಸರಿಯೊ ತಪ್ಪೊ ಹೇಳಿ ನನ್ನಯ ದಾರಿ
ಶುರು ಮಾಡಲೊ ಬೇಡವೊ ನನ್ನ ಸವಾರಿ


ಹೆದರುವೆ ನಾ ಕನಸುಗಳಿಂದಲೆ
ಇರಿಯುವುದೇ ಬದುಕನು
ಬೆದರುವೆ ನಾ ನನ್ನವರಿಂದಲೆ
ಮುರಿಯುವರೇ ಮನಸನು


ನಾ ಕತ್ತಲೋ ಬೆಳದಿಂಗಳೊ
ನಾ ಬೂದಿಯೊ ಇಲ್ಲ ಬೆಂಕಿಯೊ
ನಾ ಬಿಂದುವೊ ನಾ ಅನಂತವೊ
ನಾ ಶಾಂತಿಯೊ ಇಲ್ಲ ಪ್ರಳಯವೊ

ಹೇಳಿ ಯಾರಾದರೂ ನಾನಾರು
ಏಕೆ ಇಲ್ಲಿರುವೆ ಯಾಕಾದರು
ನನ್ನ ಮೇಲೆ ನನಗೇ ನಂಬಿಕೆ‌ ಬರಬಹುದೆ?
ನಾನಿದ್ದರೂ ಇರದಿದ್ದರೂ ಜಗ ಬದಲಾಗುವುದೆ?


ಯಾರ ಮಡಿಲಲಿ ಮಲಗಿ ಅಳಲಿ
ಎಡವಿದರೆ ನಾ
ಯಾರನ್ನು ಕೇಳಲಿ ದಾರಿ
ತಪ್ಪಿದರೆ ನಾ


ನಾ ಮೌನವೋ ನಾ ಭಾಷೆಯೊ
ನಾ ಆಸೆಯೋ ನಿರಾಸೆಯೊ
ನಾ ರೆಕ್ಕೆಯೋ ಕಲ್ ಬಂಡೆಯೊ
ದೂರಾಸೆಯೋ ದುರಾಸೆಯೊ


ನಿಜ‌ ಹೇಳಲೆ ನುಂಗಿ ಕೊಳ್ಳಲೇ
ಮನ ಬಿಚ್ಚಲೆ ಇಲ್ಲ ಅದುಮಲೆ
ಬಲೆ ಹರಿಯಲೆ ಶರಣಾಗಲೇ
ನಾ ಸೆಣಸಲೇ ಶರಣಾಗಲೆ

ನಾನಾರು?

 

ಕುರುಹು: ಈ ಸಿನೆಮಾ ಬಿಡುಗಡೆಯಾಗಿದ್ದು ೨೦೧೭ರಲ್ಲಿ. ಇದರ ಗಳಿಕೆ ಭಾರತದಲ್ಲಿ ೯೦ ಕೋಟಿ, ಚೈನಾದಲ್ಲಿ ೯೦೦ ಕೋಟಿ!

 

ಇವತ್ತು ಕ್ರಿಸ್ಮಸ್!

ಪ್ರಪಂಚದಾದ್ಯಂತ ಕೋಟ್ಯಾಂತರ ಮಕ್ಕಳು ಎದುರು ನೋಡುವ ಆ ಒಂದು ದಿನ ಇವತ್ತು – ಕ್ರಿಸ್ಮಸ್ ಹಬ್ಬ. ಎಲ್ಲೆಲ್ಲೂ ಬಣ್ಣ ಬಣ್ಣದ ದೀಪಾಲಂಕಾರ. ಹಾಡುಗಳು. ಇಡೀ ದೇಶವೇ ಆಚರಿಸುವ ದೊಡ್ಡ ಹಬ್ಬ. ಪ್ರತಿಯೊಂದು ಶಾಲೆಯ ಮಕ್ಕಳು ಒಂದು ತಿಂಗಳು ಕ್ರಿಸ್ಮಸ್ ಹಬ್ಬದ ಚಟುವಟಿಕೆಗಳಲ್ಲಿ ಭಾಗವಹಿಸಿ, ಹಾಡುಗಳ ಹೇಳಿ, ಆನಂದಿಸುವ ಕಾಲ. ಗಪ್ ಚಿಪ್ ಆಗಿ ಚಿಮಿಣಿಯಲ್ಲಿ ಸಾಂಟಾ ಬಂದು ಕೊಡುವ ಉಡುಗೊರೆಗಳು. ಮೈಮೇಲೆ ಕಪ್ಪು ಉಡುಗೆಯಿದ್ದರೂ ಮನೆಯಲ್ಲಿ, ಬೀದಿಯಲ್ಲಿ ಬಣ್ಣದ ಓಕುಳಿ. ಕ್ರಿಸ್ತ ಹುಟ್ಟಿದ ಕತೆ. ಬಂಧುಬಳಗ ಬಂದು ಸೇರುವ ಸಂದರ್ಭ. ತಿಂಡಿ ತಿನಿಸು ಊಟ. ಮನ ಬಿಚ್ಚಿ ಕೊಡುವ ದಾನದತ್ತಿಗಳು. ನಮ್ಮೆಲ್ಲರ ಮನೆಗಳಲ್ಲೂ ಒಂದು ಅಲಂಕಾರಿಕ ಕ್ರಿಸ್ಮಸ್ ಟ್ರೀ. ಹಿಮದೇಶಗಳ ಚಳಿ, ಕತ್ತಲು ತುಂಬಿದ ವಾತಾವರಣಕ್ಕೆ ಬೇಕೇ ಬೇಕಿದ್ದ, ಆತ್ಮವನ್ನ ಬೆಚ್ಚಗಿರಿಸುವ ಹಬ್ಬದ ಸೀಸನ್. ಇಲ್ಲಿವೆ ಕೆಲ ವಿಡಿಯೋಗಳು, ನಿಮಗಾಗಿ. -ಸಂ.

img-20161213-wa0010
ಸ್ವರ್ಣ-ವಿಶ್ವನಾಥ್ ಮಂದಗೆರೆ ಮನೆಯಲ್ಲಿ ಕ್ರಿಸ್ಮಸ್ ಟ್ರೀ

ಚಿಕ್ಕ ಮಕ್ಕಳು ಹೇಳುವುದು – Can we have Xmas everyday?

ರುಡೊಲ್ಫ್ ಜಿಂಕೆಯ ಕೆಂಪು ಮೂಗು ಅದಕ್ಕೆ ಕಾರಣವೋ ಎಂಬ ಅನುಮಾನ!

 

ಆ ಮಗು ಹುಟ್ಟುವ ಸಮಯ. ಮೇರಿಯ ಕಂದನೋ, ದೇವಕಿ ತನಯನೋ…

 

ಆಸ್ಟ್ರೇಲಿಯಾದ ಬೇಸಗೆಯಲ್ಲಿ ಬೀಚ್, ಬಾರ್ಬಿಕ್ಯೂ. ಕಾಂಗರೂಗಳ ಜೊತೆ ಈ ಹಾಡು – Six White Boomers…

 

ಈ ವರ್ಷ ನೊಬೆಲ್ ಪ್ರಶಸ್ತಿ ಪಡೆದ ಹಾಡುಗಾರ-ಸಾಹಿತಿ ಬಾಬ್ ಡಿಲೊನ್ ಹಾಡಿದ್ದು – Must Be Santa

 

ಮರೆಯಲಾಗದ ‘ವ್ಹಾಮ್’ -Last Christmas

 

ಜಾನ್ ಲೆನ್ನನ್ ಹಾಡಿದ Happy Xmas, War is Over…