ಯುಗಾದಿ ಬರುತ್ತೆ ಬರುತ್ತೆ ಬಂತು– ಓಡಿಹೋಯಿತು-ಡಾ. ಸತ್ಯವತಿ ಮೂರ್ತಿ

ಓದುಗರೆ, ಹೋದವಾರದ ಲೇಖನದಲ್ಲಿ ಯುಗಾದಿಹಬ್ಬದ ಹಿನ್ನೆಲೆಯ ಬಹಳಷ್ಟು ವಿಷಯಗಳನ್ನು ತಿಳಿದುಕೊಂಡೆವು. ಈ ವಾರ ಯುಗಾದಿಯನ್ನು ಆಚರಿಸಿಯಾಯಿತು. ಈ ಕೆಳಗಿನ ಲೇಖನ ಹಬ್ಬದ ದಿನದಂದು ಮನೆಯೊಡತಿಯ ಸಂಭ್ರಮದ ಏರಿಳಿತಗಳನ್ನೂ , ತಿಳಿಸುವುದರ ಜೊತೆಗೆ, ನಾವು ಹಬ್ಬವನ್ನು ಎಷ್ಟು  ಹಗುರವಾಗಿ ಒಂದು ಸಾಮಾಜಿಕ ಸಂಭ್ರಮವನ್ನಾಗಿ ತೆಗೆದುಕೊಂಡು ಮುಗಿಸಿಬಿಡುತ್ತೇವೆ, ಅದರ ಆಗಮನದ ಹಿಂದಿರುವ  ಔಚಿತ್ಯವನ್ನು, ಅದರ ಆಚರಣೆಯಲ್ಲಿ ಹುದುಗಿರುವ ತತ್ವವನ್ನು ಗಮನಿಸದೆ ಹೋಗುತ್ತೇವೆ, ಎಂದು ತಿಳಿಸಲು ಪ್ರಯತ್ನಿಸಿದೆ. ಈ ವಾರದ ಲೇಖಕಿ ಡಾ. ಸತ್ಯವತಿ ಮೂರ್ತಿ. ಅವರ ಕಿರುಪರಿಚಯ ಅವರದೇ ಮಾತುಗಳಲ್ಲಿ. ಡಾ. ಸತ್ಯವತಿಯವರನ್ನು ಅನಿವಾಸಿ ಬಳಗಕ್ಕೆ ಸ್ವಾಗತಿಸೋಣ-ಸಂ.

ಲೇಖಕಿಯ ಕಿರು ಪರಿಚಯ

ಡಾ.ಸತ್ಯವತಿ ಮೂರ್ತಿ

ಡಾ ಸತ್ಯವತಿ ಮೂರ್ತಿ ವೇದ ರತ್ನ ಚೆನ್ನಕೇಶವ ಅವಧಾನಿಗಳ ಮಗಳು. ಬರಹಗಾರ್ತಿ, ಬೆಂಗಳೂರು ದೂರದರ್ಶನ ಹಾಗೂ ಆಕಾಶವಾಣಿ ಕಲಾವಿದೆ. ಇವರ ಪಿ.ಎಚ್.ಡಿ ಯ ನಿಬಂಧವೂ ಸೇರಿದಂತೆ 4 ಪುಸ್ತಕಗಳು ಪ್ರಕಟಗೊಂಡಿವೆ. ಸುಮಾರು 25 ವರ್ಷಗಳಿಂದ ಮ್ಯಾಂಚೆಸ್ಟರ್ನಲ್ಲಿ ನೆಲೆಸಿದ್ದಾರೆ. ಹಿಂದೂ ಪ್ರಿಸನ್ ಮಿನಿಸ್ಟರ್, ಫೈನ್ಯಾನ್ಶಿಯಲ್ ಅಕೌಂಟೆಂಟ್ ಹಾಗೂ ಕಂಪೆನಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ಇವರು, ಇತ್ತೀಚೆಗೆ ನಿವೃತ್ತರಾಗಿ ಇಲ್ಲಿಯ ಮಕ್ಕಳಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ.

ಯಗಾದಿ ಬರುತ್ತೆ ಬರುತ್ತೆ ಬಂತು — ಓಡಿಹೋಯಿತು

ನಾಳೆ ಯುಗಾದಿ ಹಬ್ಬ. ಸಂಭ್ರಮವೋ ಸಂಭ್ರಮ. ಕೆಲಸದಿಂದ ನೇರವಾಗಿ ಮಾರ್ಕೆಟ್ಗೆ ಹೋಗಿ ಬೇಕಾದ ಪದಾರ್ಥಗಳನ್ನೆಲ್ಲ ತಂದಾಯಿತು. “ಬೆಳಗ್ಗೆ ಎಲ್ಲರೂ ಬೇಗನೆ ಏಳಬೇಕು. ಎದ್ದು ತಲೆಗೆ ಸ್ನಾನ ಮಾಡಿ , ಪೂಜೆಗೆ ಬರಬೇಕು.ಅಪ್ಪ , ಅಜ್ಜ ಇಬ್ರು ಪೂಜೆ ಮಾಡಿದಮೇಲೆ ಮಂಗಳಾರತಿ ತೆಗೆದುಕೊಂಡು ಬೇವುಬೆಲ್ಲ ತಿನ್ನಬೇಕು. ತಿಳೀತಾ?” ಮನೆಯಲ್ಲಿ ಹಿಂದಿನ ರಾತ್ರಿಯೇ ಎಲ್ಲರಿಗೂ ತಾಕೀತು ಮಾಡಿಯಾಗಿತ್ತು. ಶೆಲ್ಫಿನ  ಹಿಂದಕ್ಕೆ  ಹೋಗಿ ಕುಳಿತಿದ್ದ ’ಯುಗ ಯುಗಾದಿ ಕಳೆದರೂ’ ಹಾಡಿನ ಧ್ವನಿ ಮುದ್ರಣವನ್ನು ಹುಡುಕಿ ತೆಗೆದಿಟ್ಟಾಯಿತು .

ಬೆಳಗ್ಗೆ6 ಗಂಟೆಗೆ ಅಲಾರಂ ಹೊಡೆದ  ಕೂಡಲೆ ಎದ್ದು ಯುಗಾದಿ ಹಾಡನ್ನು ಹಚ್ಚಿ, ಪೊರಕೆಯಿಂದ ಅಂಗಳವನ್ನು ಗುಡಿಸಿ ಮನೆಮುಂದೆ ಅಂದವಾದ ರಂಗೋಲಿಯನ್ನು ಬಿಡಿಸಿ ನನ್ನ ಕಲಾಕೃತಿಗೆ ನಾನೇ ಮೆಚ್ಚಿಕೊಂಡು, ಒಳಗೆ ಬಂದು ದೇವರ ಪೂಜೆಗೆ ಅಣಿಮಾಡಿಯಾಯಿತು. ಅಷ್ಟರಲ್ಲಿ ಫೋನ್ನಲ್ಲಿ ಮೆಸ್ಸೇಜ್ ಬಂದ ಶಬ್ದವಾಯಿತು. ಯುಗಾದಿ ಹಬ್ಬಕ್ಕೆ ಶುಭಾಶಯ ಕೋರುತ್ತ ಸಂದೇಶಗಳನ್ನು ಕಳುಹಿಸುತ್ತಿರುವ ಮಿತ್ರರು ಬಂಧುಗಳಿಗೆಲ್ಲ ನಾನೂ ಸಂದೇಶ ಕಳುಹಿಸಿದ್ದಾಯಿತು.(ಇಂಡಿಯದಲ್ಲಾಗಲೇ ಮಧ್ಯಾಹ್ನ ಅಲ್ಲವೆ?) ಆ ವೇಳೆಗೆ ಗಂಟೆ 9 ಹೊಡೆಯಿತು.

ಅಷ್ಟು ಹೇಳಿದ್ದರೂ ಇನ್ನೂ ರಜೆಯ ಗುಂಗಿನಲ್ಲಿ ಮಲಗೇ ಇದ್ದ ಮಕ್ಕಳನ್ನು ಬಲವಂತವಾಗಿ ಏಳಿಸಿ ಸ್ನಾನಕ್ಕೆ ಕಳುಹಿಸಿಯಾಯಿತು, ಸ್ನಾನ ಮಾಡಿ ಸಿದ್ಧವಾಗಿದ್ದ ನನ್ನ ಮಾವ ಹಾಗೂ ಯಜಮಾನರ ಪೂಜೆಗೆ  ಎಲ್ಲ ಸಾಮಗ್ರಿ ಇದೆಯೇ ಎಂದು ನೋಡಿಯಾಯಿತು. ಇಷ್ಟು ಹೊತ್ತಿಗೆ ಅಡುಗೆ ಮನೆ ನನ್ನನ್ನು ಕೈಬೀಸಿ ಕರೆಯುತ್ತಿತ್ತು. ಯುಗಾದಿ ಹಬ್ಬ! ಇಡ್ಲಿ ಕಡುಬು ಬೆಳಗಿನ ತಿಂಡಿಗೆ, ದೇವರ ನೈವೇದ್ಯಕ್ಕೆ ಇರಲೇಬೇಕಲ್ಲವೆ? ಅದಕ್ಕೆಂದೇ ಮತುವರ್ಜಿಯಿಂದ ನೆನ್ನೆಯೇ ಹಿಟ್ಟು ರುಬ್ಬಿಟ್ಟಿದ್ದಾಗಿತ್ತು. ಹಾಗಾಗಿ ಅವೆರಡನ್ನೂ ಸಿದ್ಧಮಾಡುವುದರಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ವಾಯಿತು. ಯಜಮಾನರ ಪೂಜೆ ಮುಗಿಯುತ್ತ ಬಂದಿತ್ತು. ಮಕ್ಕಳೂ ಸಿದ್ಧರಾಗಿದ್ದರು. ಎಲ್ಲರೂ ಸೇರಿ ಮಂಗಳಾರತಿ ಮಾಡಿ ದೇವರ ಅನುಗ್ರಹಕಾಗಿ ಪ್ರಾರ್ಥಿಸಿ “ಶತಾಯುಃ ವಜ್ರದೇಹಾಯಸರ್ವಸಂಪತ್ಕರಾಯಚ, ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ” ಶ್ಲೋಕ ಹೇಳಿ, ಹೇಳಿಸಿ ಬೇವು ಬೆಲ್ಲ ಸ್ವೀಕರಿಸಿಯಾಯಿತು. ಬೇವು ಬೆಲ್ಲ ಹಂಚುವಾಗ ಮಕ್ಕಳಿಗೆ ಹೆಚ್ಚಾಗಿ ಬೆಲ್ಲವೇ ಬರುವಂತೆ ಕೈಚಳಕ ತೋರಿಸಿದ್ದು ಮಕ್ಕಳ ಮೇಲಿನ ಪ್ರೀತಿಗಾಗಿ, ಮತ್ತೆ ಅವರಿಗೆ ಯಾವ ನೋವೂ ಬಾರದಿರಲಿ ಎಂಬ ತಾಯಿ ಮನಸ್ಸಿನ ಸದಾಶಯ ಎಂದು ಹೇಳಬೇಕಾಗಿಲ್ಲ ಅಲ್ಲವೇ? ಅಂತೂ ಬೇವು ಬೆಲ್ಲದ ಸೇವನೆ ಮುಗಿದು ಇಡ್ಲಿ ಕಡುಬುಗಳನ್ನು ಧ್ವಂಸಮಾಡಿ ಉಟ್ಟ ಹೊಸ ಬಟ್ಟೆಗಳ ಅಂದವನ್ನು ಒಬ್ಬರಿಗೊಬ್ಬರು ಗುಣಗಾನ ಮಾಡುತ್ತ ನಡುನಡುವೆ ಸ್ನೇಹಿತರು, ಬಂಧುಗಳೊಡನೆ ಫೋನಿನಲ್ಲಿ ಮಾತನಾಡುವ ವೇಳೆಗೆ ಗಂಟೆ 11:30. ಮಧ್ಯಾಹ್ನಕ್ಕೆ ಹಬ್ಬದಡುಗೆ ಮಾಡಬೇಕು.

ತಿಂದ ತಿಂಡಿಯಿನ್ನೂ ಗಂಟಲಿನಿಂದ ಇಳಿದಿರಲಿಲ್ಲ, ಅಡುಗೆಗೆ ತರಕಾರಿಗಳನ್ನು ಹೆಚ್ಚಿಕೊಂಡದ್ದಾಯಿತು. ಯುಗಾದಿ ಅಂದಮೇಲೆ ಒಬ್ಬಟ್ಟು ಮಾಡದಿರಲು ಆದೀತೆ? ನಮ್ಮ ಮನೆಯವರಿಗೆ ಕಾಯೊಬ್ಬಟ್ಟು ಇಷ್ಟವಾದರೆ, ಮಕ್ಕಳಿಗೆ ಬೇಳೆ ಒಬ್ಬಟ್ಟು ಬೇಕು. ಹಾಗಾಗಿ ಎರಡೂ ರೀತಿಯ ಒಬ್ಬಟ್ಟೂ ತಯಾರು ಮಾಡಿ ಅಡುಗೆ ಮುಗಿಸುವ ವೇಳೆಗೆ ಎಲ್ಲರೂ ಊಟಕ್ಕೆ ಸಿದ್ಧರಾಗಿದ್ದರು. ಅದೆಷ್ಟು ಬೇಗ ಇಡ್ಲಿ ಕಡುಬು ಅರಗಿಹೋಯಿತೋ ಕಾಣೆ. ಅಂತೂ ಎಲ್ಲರಿಗೂ ಹಬ್ಬದೂಟವನ್ನು ಬಡಿಸಿ ನಾನು ಊಟ ಮಾಡುವ ವೇಳೆಗೆ ಗಂಟೆ 3:30. ಅಡಿಗೆ ಮಾಡಿದರಾಯಿತೆ? ಪಾತ್ರೆ ತೊಳೆದು ಇಡಬೇಕಲ್ಲವೇ? ಇಲ್ಲದಿದ್ದರೆ ಮಾರನೆಯ ದಿನ ಕೆಲಸಕ್ಕೆ ಹೋಗುವ ಮುನ್ನ  ಅಡಿಗೆ ಮಾಡುವುದಕ್ಕೆ ಪಾತ್ರೆ ಇರಬೇಕಲ್ಲ! 

ಪಾತ್ರೆಗಳನ್ನೆಲ್ಲ ತೊಳೆದು ಅಡಿಗೆ ಮನೆ ಶುದ್ಧಿಮಾಡಿ “ಉಸ್ಸಪ್ಪಾ” ಎನ್ನುವ ವೇಳೆಗೆ ಸಂಜೆ 6 ಗಂಟೆ. ’ದೇವರಿಗೆ ದೀಪ ಹಚ್ಚಿ ಮುಚ್ಚಂಜೆಯಾಗ್ತಾ ಇದೆ’ ಅಂದ ನನ್ನ ಮಾವನವರ ಕೂಗಿಗೆ ಓಗೊಟ್ಟು ದೀಪ ಹಚ್ಚಿ ಬಂದಾಯಿತು. ಈ ನಡು ನಡುವೆ ಕಾಫಿಯ ಸೇವನೆಯಂತೂ  ಇದ್ದೇ ಇತ್ತು.

ಇನ್ನು ರಾತ್ರಿಗೆ ಏನು ಅಡಿಗೆ ಮಾಡುವುದು ಎಂದು ಯೋಚಿಸುತ್ತಿರುವಾಗ ನನ್ನ ಕೆಲಸದ ಒತ್ತಡ ನೋಡಿದ ನನ್ನವರು “ಇನ್ನೇನೂ ಮಾಡಬೇಡ , ಏನಿದೆಯೋ ಅದನ್ನೇ ಹಂಚಿಕೊಂಡು ತಿಂದರಾಯಿತು” ಎಂದರು

ಬೇಳಗಿನಿಂದ ಒಂದೇ ಸಮನೆ ಕೆಲಸಮಾಡುತ್ತಿದ್ದ ನನಗೂ ಅದೇ ಬೇಕಾಗಿದ್ದಿತು. ಅಲ್ಲದೆ ಅಷ್ಟು ಹೊತ್ತಿಗೆ ಹಬ್ಬದ ಅಮಲು ಇಳಿಯತೊಡಗಿತ್ತು. ಮಧ್ಯಾಹ್ನದ ಅಳಿದುಳಿದ ಅಡುಗೆಯನ್ನೇ ಊಟಮಾಡಿ ಮಲಗುವವೇಳೆಗೆ ರಾತ್ರೆ 9:30. ಬೆಳಗ್ಗೆ ಬೇಗನೇ ಏಳಬೇಕು. ಕೆಲಸಕ್ಕೆ ಹೊರಡುವ ವೇಳೆಗೆ ತಿಂಡಿ ಅಡುಗೆ ಎಲ್ಲ ಆಗಬೇಕಲ್ಲ. ಅಂತೂ ಉಕ್ಕಿದ ಸಂಭ್ರಮದಿಂದ ಕಾಯುತ್ತಿದ್ದ ಯುಗಾದಿ ಬಂತು, ಓಡಿಯೂ ಹೋಯಿತು. ಯುಗಾದಿಯ ದಿನವೆಲ್ಲ ಎಲ್ಲರಿಗೂ ಶುಭ ಹಾರೈಸಿದ್ದೂ ಹಾರೈಸಿದ್ದೇ! ಜೀವನದ ಅತ್ಯಮೂಲ್ಯವಾದ ದಿನ ಕಳೆದುಹೋಯಿತೆಂಬ ಪರಿವೆಯೂ ಇಲ್ಲದೆ ಹಬ್ಬವನ್ನು ಆಚರಿಸಿಯಾಯಿತು.

ಮರುದಿನ ಬೆಳಗ್ಗೆ ಮಾಮೂಲಿ ಹಾಡು .

ನಿಜವಾಗಿಯೂ ಬೇವು ಬೆಲ್ಲದ ಸೇವನೆಯ ಹಿಂದಿರುವ ತತ್ವವನ್ನು ತಿಳಿದರೆ ಯುಗಾದಿಯ ನಿಜವಾದ ಅರ್ಥ ತಿಳಿದಂತೆ!

ಅಷ್ಟಿಲ್ಲದೆ ದತ್ತಾತ್ರೇಯ ಬೇಂದ್ರೆಯವರು ಹೇಳಿದರೆ ? “ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ನಮ್ಮನಷ್ಟೆ ಮರೆತಿದೆ “.

ಡಾ.ಸತ್ಯವತಿ ಮೂರ್ತಿ

ಅಡುಗೆ – ಅಡುಗೆಮನೆ ಸರಣಿ: ಸವಿತಾ ಸುರೇಶ್ ಮತ್ತು ಶಾಂತಲಾ ರಾವ್

ಮಕರ ಸಂಕ್ರಮಣದ ಶುಭಾಶಯಗಳು, ಎಲ್ಲರಿಗೂ. ಸಂಕ್ರಾಂತಿ ಅಂದೊಡನೆ ನೆನಪಾಗುವುದು – ಕುಸುರೆಳ್ಳು ಸೇರಿಸಿದ ಎಳ್ಳು-ಬೆಲ್ಲ, ಎಳ್ಳು ಅಥವಾ ಶೇಂಗಾ ಹೋಳಿಗೆ, ಸೆಜ್ಜೆ ಭಕ್ಕರಿ (ರೊಟ್ಟಿ), ಬೆಣ್ಣೆ, ಶೇಂಗಾಹಿಂಡಿ, ಹುಗ್ಗಿ-ಗೊಜ್ಜು, ಸಿಹಿ ಪೊಂಗಲ್, ಸಕ್ಕರೆ ಅಚ್ಚುಗಳು, ಕಬ್ಬು; ಉತ್ತರ ಕರ್ನಾಟಕದವರಾದರೆ ಶೀತನಿ (ಜೋಳ / ಗೋಧಿಯ ಹಸಿ ಕಾಳುಗಳು) …. ಎಷ್ಟು ಅಂತ ಪಟ್ಟಿ ಮಾಡೋದು! ನನಗೆ ನೆನಪಿರುವಂತೆ, ಅಜ್ಜಿಗೆ ಭೋಗಿ ಬಾಗಿಣದ ಮೊರ ತಯಾರಿ ಮಾಡುವುದಕ್ಕೆ ಸಹಾಯ ಮಾಡುವ ನೆಪದಲ್ಲಿ, ಒಂದಷ್ಟು ಕಬ್ಬು, ಎಳ್ಳು-ಬೆಲ್ಲ, ಬಾರೆಹಣ್ಣು ತಿಂದು ಖಾಲಿ ಮಾಡಿದ್ದು! ಈಗ, ಅವೆಲ್ಲ ಯಾಕೆ ನೆನಪಾಯ್ತು ಅಂದರೆ, ನಮ್ಮ ಅನಿವಾಸಿ ಗುಂಪಿನ ಮಹಿಳಾಸದಸ್ಯರು ಉತ್ಸಾಹದಿಂದ ಹಂಚಿಕೊಂಡ ಅಡಿಗೆಯ ಫೋಟೊಗಳನ್ನ ನೋಡಿ. ಅದರಿಂದ ಹೊಟ್ಟೆ ಗುರ್ ಅಂದರೂ, ಕಣ್ಣು ತಂಪಾಯಿತೆನ್ನುವುದು ನಿಜ! ಸರಿ, ಎಲ್ಲರೂ ಇನ್ನೊಮ್ಮೆ ನೋಡಿ, ಸಂತೋಷ ಪಡೋಣ (ಕೊನೆಯಲ್ಲಿದೆ); ರಾಧಿಕಾ ಜೋಶಿಯವರ ಪುಟ್ಟ ಕವನದೊಂದಿಗೆ.

ಈಗ, ಹಬ್ಬದ ಪ್ರಯುಕ್ತ ಸಿಹಿ ಪದಾರ್ಥಗಳ ತಮ್ಮ ಅನುಭವಗಳನ್ನು ನಮಗೆ ಹಂಚುತ್ತಿದ್ದಾರೆ, ಸವಿತಾ ಸುರೇಶ್ ಮತ್ತು ಶಾಂತಲಾ ರಾವ್. ತಮ್ಮ ಅಡುಗೆಮನೆಯ ಪ್ರಯತ್ನವನ್ನು ಜಾಗತಿಕ ಮಾಧ್ಯಮಕ್ಕೆ ಒಯ್ದದ್ದನ್ನ ಸವಿತಾ ಅವರು ಹೇಳಿದರೆ, ಬಿಹಾರಿನ ಮೂಲೆಯಿಂದ ಧಾರವಾಡಕ್ಕೆ ತಂದು ಬೆಳೆಸಿದ ಫೇಡೆಯ ಬಗ್ಗೆ ಶಾಂತಲಾ ಅವರು ಬರೆದಿದ್ದಾರೆ. ಎರಡೂ ಅನೇಕರ ಪ್ರೀತಿಯ ತಿಂಡಿಗಳ ಬಗ್ಗೆಯೇ ಆಗಿವೆ. ಓದಿ, ಸವಿದು, ನಿಮ್ಮ ನಿಮ್ಮ ಅನಿಸಿಕೆಗಳನ್ನು ಬರೆದು ನಮಗೆ ತಿಳಿಸಿ. ನೀವೂ ಬರೆದು ಕಳಿಸಿ, ಅನಿವಾಸಿಯ ಬ್ಲಾಗಿಗೆ. – ಎಲ್ಲೆನ್ ಗುಡೂರ್ (ಸಂ.)

ಮೈಸೂರ್ ಪಾಕ್ ಪ್ರಯೋಗದ ಪಯಣ – ಸವಿತಾ ಸುರೇಶ್

ನನಗೆ ಸುಮಾರು ೭ ವರ್ಷ.  ಬಿಜಾಪುರಿಂದ ಬೆಂಗಳೂರಿಗೆ ಅಪ್ಪನ ವರ್ಗಾವಣೆ ಆದ್ಮೇಲೆ ಪ್ರತಿ ತಿಂಗಳು ೧ನೇ ತಾರೀಖು ಆಫೀಸ್ ಕೆಲಸದಿಂದ ಮನೆಗೆ ಬರುವಾಗ “ವೆಂಕಟೇಶ್ವರ ಭವನ್” ನಿಂದ ವೆಜಿಟೇಬಲ್ ಪಫ್ಸ್ ಹಾಗೂ ಸುಪ್ರಸಿದ್ಧ ಘಮ ಘಮ ಹೊಂಬಣ್ಣದ ಮೈಸೂರ್ ಪಾಕ್ ಅಪ್ಪ ಓಡಿಸುತ್ತಿದ್ದ  Yezdi ಯ ಸ್ಟೋರ್ ಬಾಕ್ಸ್ ನಲ್ಲಿ ತಪ್ಪದೇ ಹಾಜರು!  ೧ಕೆ.ಜಿ ಮೈಸೂರ್ ಪಾಕ್ ಬಾಕ್ಸ್ ತೆಗೆದ ಕೆಲವೇ ಕ್ಷಣಗಳಲ್ಲಿ ಸ್ವಾಹಾ!  ಏಕೆಂದರೆ ನಮ್ಮದು ೧೨ ಮಂದಿ ಇದ್ದ ಅವಿಭಕ್ತ ಕುಟುಂಬ. ಬಾಯಲ್ಲಿ ಬೆಣ್ಣೆಯಂತೆ ಕರ್ಗೋಗ್ತಿತ್ತು.

ಹೀಗೆ ನಾನು ೧೪ ವರ್ಷ ವಯಸ್ಸಿಗೆ ಬಂದಾಗ ಈ ಆಹ್ಲಾದಕರ ಮೈಸೂರ್ ಪಾಕ್ ಮಾಡುವುದನ್ನು ಮನೆಯಲ್ಲಿ ಕಲಿಯಬೇಕು ಎಂಬ ಇಚ್ಛೆ ಅಮ್ಮನಿಗೆ ಹೇಳಿದೆ.  ಆದ್ರೆ ಅಮ್ಮ ಕೂಡ ಎಂದೂ ಪ್ರಯತ್ನಿಸಿರಲಿಲ್ಲ.  ಅಡುಗೆ ಮನೆಗೂ ನನಗೆ ಪ್ರವೇಶ ನಿಷೇಧವಾಗಿತ್ತು.  ಏಕೆಂದರೆ ಆ rangeಗೆ ಅಮ್ಮ ಇಲ್ಲದೆ ಇರೋ ಸಮಯದಲ್ಲಿ ದಾಳಿ ಮಾಡ್ತಿದ್ದೆ.  ಆದರೆ ನನ್ನ ಈ ಬೇಡಿಕೆ ಮುಂದೆ ಇಟ್ಟಾಗ ಅಮ್ಮ ಸಾಥ್ ಕೊಟ್ರು.  ಹಾಗಾಗಿ ಬೇಸಿಗೆ ರಜೆಯಲ್ಲಿ ಅಮ್ಮ- ಮಗಳ ಮೈಸೂರ್ ಪಾಕ್ project ಶುರುವಾಯ್ತು.  ಕಡ್ಲೆಹಿಟ್ಟು, ಸಕ್ಕರೆ ಹಾಗೂ ತುಪ್ಪ – ಈ ಸುಲಭ ಸಾಮಗ್ರಿಗಳನ್ನೊಳಗೊಂಡ ಈ ಸಿಹಿತಿಂಡಿ ಮಾಡುವುದು ಬಹಳ ಕಠಿಣ.  ಅಲೆಕ್ಸಾಂಡರ್ ದಂಡಯಾತ್ರೆ ತರಹ ಬಹಳ ವ್ಯಾಯಾಮ ಮಾಡಿಸ್ತು….  ಏಕೆಂದರೆ ಮೈಸೂರ್ ಪಾಕ್ ಹೋಗಿ ಒಮ್ಮೆ ಕಡ್ಲೆ ಹಿಟ್ಟು ಹಲ್ವ, ಮತ್ತೊಮ್ಮೆ ಕಡ್ಲೆ ಹಿಟ್ಟಿನ ಇಟ್ಟಿಗೆ ಆಗ್ತಿತ್ತು.  ೧೨-೧೩ ಸತತ ಪ್ರಯತ್ನಗಳ ನಂತರ ಹಂಗೂ ಗೂಡ್ ಗೂಡ್ ಮೈಸೂರ್ ಪಾಕ್ ರೇಂಜ್ ಗೆ ಬಂತು ಹದ.  ಆದರೆ ವೆಂಕಟೇಶ್ವರ ಭವನದ ಮೈಸೂರ್ ಪಾಕ್ ಹದ ಬರ್ಲೇ ಇಲ್ಲ.  ಒಬ್ಬಳೇ ಪ್ರಯತ್ನಿಸಲು ಅಮ್ಮ ಬಿಡ್ತಾ ಇರ್ಲಿಲ್ಲ.  ಆಗ ದೂರದರ್ಶನ ಬಿಟ್ರೆ ಯಾವ ವಾಹಿನಿಯೂ ಇರ್ಲಿಲ್ಲ.  ಅಡುಗೆ ಕಾರ್ಯಕ್ರಮ ನೋಡಿದ್ದು ಜ್ಞಾಪಕ ಇಲ್ಲ.  ಆದ್ರೆ ಆ ಹದದಲ್ಲಿ ಮೈಸೂರ್ ಪಾಕ್ ಮಾಡುವುದು ಹೇಗೆ ಎಂಬೋದೆ ಸವಾಲಾಗಿತ್ತು.  ಮಾಡಲು ಬರುತ್ತಿದ್ದವರು ಯಾರೂ ನಮಗೆ ಗೊತ್ತಿರುವ ಪೈಕಿಯಲ್ಲಿ ಇರ್ಲಿಲ್ಲ.  ಪರಿಹಾರ ನಾವೇ ಕಂಡ್ಕೋಬೇಕಿತ್ತು.  ನಮ್ಮ ಈ ಪ್ರಯೋಗ ಅಪ್ಪ ಮನೆಯಲ್ಲಿ ಇಲ್ಲದೆ ಇರೋವಾಗ ಮಾಡ್ಬೇಕಿತ್ತು.  ಏಕೆಂದರೆ ಅಪ್ಪ ಸಕ್ಕತ್ Health conscious.  ಅವರೇನಾದರೂ ಮೈಸೂರ್ ಪಾಕ್ ಗೆ ಉಪಯೋಗಿಸುವ ತುಪ್ಪದ ಪ್ರಮಾಣ ನೋಡಿದ್ರೆ ಅಷ್ಟೇ ಕಥೆ!!  ಅಷ್ಟೋತ್ತರ, ಪೂಜೆ ಮಂಗಳಾರತಿ wholesale ಆಗಿ ಆಗೋ ಭಯ!  ಏಕೆಂದರೆ ಅಮ್ಮಮ್ಮ ಊರಿಂದ ಬೆಣ್ಣೆ ಕಳಿಸುತ್ತಿದ್ದರು.  ಅಂಗಡಿ ತುಪ್ಪ ಯಾರಿಗೂ ಸೇರ್ತಿರಲಿಲ್ಲ.  ನಮ್ಮ ಈ ಪ್ರಯೋಗದಲ್ಲಿ ಬಳಸ್ತಿದ್ದ ತುಪ್ಪ ವಿನಾಕಾರಣ ವ್ಯರ್ಥವಾಗ್ತಿತ್ತು ಎಂಬುದೇ ಚಿಂತೆ.  ಆದ್ರೂ ನಮ್ಮ ಪ್ರಯತ್ನ ಬಿಡಬಾರ್ದು ಎಂದು, ಮಾಡುವ ವಿಧಾನದಲ್ಲಿ ಚಿಕ್ಕ ಚಿಕ್ಕ ವಿಚಾರಗಳನ್ನೂ ಗಮನದಲ್ಲಿಟ್ಟುಕೊಂಡು ನಾವು ಮಾಡುವ ಬಾಂಡ್ಲಿ, ಗಿರಣಿಯಲ್ಲಿ ಬೀಸಿಸಿಕೊಂಡು ಬಂದ ಕಡ್ಲೆ ಹಿಟ್ಟು, ಗ್ಯಾಸ್ ಉರಿಯ ಪ್ರಮಾಣ, ಪ್ರಮುಖವಾಗಿ ಸಕ್ಕರೆಪಾಕ ( ಈ ವಿಧಾನ ಸರಿ ಬಂದರೆ ಮೈಸೂರ್ ಪಾಕ್ ಬಂದ ಹಾಗೆ) ಎಲ್ಲ ನೋಡಿಕೊಂಡು ಒಂದು ಶುಕ್ರವಾರ ಶುರು ಮಾಡಿದ್ವಿ.  ಆ ದಿನ ನಮ್ಮ ಸಂತೋಷಕ್ಕೆ ಪಾರ್ವೇ ಇಲ್ಲ.  ಕೊನೆಗೂ ನಮ್ಮ ಕನಸು ನನಸಾಯ್ತು!  ಆದರೆ ಈ ಬಾರಿ ಸಣ್ಣ ಪ್ರಮಾಣದಲ್ಲಿ ಸಾಮಗ್ರಿಗಳನ್ನು ಅಳತೆ ಮಾಡಿದ್ರು ಅಮ್ಮ.  ಆ ದಿನ ಅಮ್ಮಮ್ಮ ಕೂಡ ಊರಿಂದ ಬಂದಿದ್ದರು.  “ವೆಂಕಟೇಶ್ವರ ಭವನ್” ಮೈಸೂರ್ ಪಾಕ್ ಕೊನೆಗೂ ನಮ್ಮ ಮನೆಯಲ್ಲಿ ತಯಾರಾಯ್ತು.  ಸಂಜೆ ಪೂಜೆಗೆ ನೈವೇದ್ಯಕ್ಕಿಟ್ಟು ಪ್ರಸಾದದ ರೂಪದಲ್ಲಿ ಸಿಕ್ಕಿತು.  ಅಪ್ಪನಿಗೆ ಆ ದಿನ ನಮ್ಮ ಮೈಸೂರ್ ಪಾಕ್ ಪ್ರಯೋಗದ ಗುಟ್ಟು ರಟ್ಟಾಯ್ತು!  ಈ ಎಲ್ಲಾ ಪ್ರಯತ್ನದಲ್ಲಿ ಒಂದಂತೂ ಖಚಿತವಾಯ್ತು – ಮೈಸೂರ್ ಪಾಕ್ is not everybody’s cup of tea!

ಈ ಪ್ರಯೋಗ ಎಷ್ಟು ಉಪಯುಕ್ತವಾಯ್ತೆಂದರೆ, ಯು.ಕೆ.ಗೆ ಬಂದ ಮೇಲೆ ಎಲ್ಲಾ ಬರ್ತ್ ಡೇ ಪಾರ್ಟಿ, ಗೆಟ್ ಟುಗೆದರ್ ಗಳಿಗೆ, ಕ್ರಿಸ್ಮಸ್ ಪಾರ್ಟಿಗಳಿಗೆಲ್ಲ ಸ್ನೇಹಿತರ ಬೇಡಿಕೆ ಅದೇ ಆಯ್ತು!  ಎಷ್ಟು ಎಂದರೆ ೪ ವರ್ಷದ ಹಿಂದೆ ದೀಪಾವಳಿ ಹಬ್ಬದ ಸುಸಂದರ್ಭದಲ್ಲಿ BBC ಯಲ್ಲೂ ಸಹ ಬರುವಷ್ಟು!  ಚಿತ್ರೀಕರಣ ನನ್ನ ಅಡುಗೆ ಅರಮನೆಯಲ್ಲೇ ನಡೆಯಿತು ಎಂಬುದೇ ನನಗೆ ಹೆಮ್ಮೆಯ ಸಂಗತಿ.  ಚಿತ್ರೀಕರಣಕ್ಕೆ ಬಂದತಹ ಛಾಯಾಗ್ರಾಹಕ ಚಿತ್ರೀಕರಣ ಮಾಡಿದ ಅಂಶ ಯಾವುದು ಗೊತ್ತೇ?  ಮಿಠಾಯಿ ಟ್ರೇನಲ್ಲಿ ಹದವಾಗಿ ಸಜ್ಜಾದ ಮೈಸೂರ್ ಪಾಕ್ ಚೂರಲ್ಲ!  ಬದಲಾಗಿ ಮೈಸೂರು ಪಾಕ್ ಬಾಂಡ್ಲಿಯಲ್ಲಿ ಮಾಡುವಾಗ ಬುರು ಬುರು ಎಂದು ನೊರೆ ನೊರೆಯಾಗಿ ಉಕ್ಕುತ್ತಿದ್ದ, ಇನ್ನೂ ಅರ್ಧ ಹಂತವೂ ಮುಗಿಯದ ಮೈಸೂರ್ ಪಾಕ್!  ಪಾಂಡುರಂಗ!  “ಯಾಕಪ್ಪಾ?” ಎಂದು ಕೇಳಿದ್ರೆ, ಅವನು “That’s a mind blowing process to see.  We need a news angle.” ಅಂದ ಪುಣ್ಯಾತ್ಮ!!  ಹೀಗೂ ಚಿತ್ರೀಕರಣ ಮಾಡ್ತಾರಾ ಅನ್ಕೊಂಡೆ ಮನ್ಸಲ್ಲಿ.

BBC ಯಲ್ಲಿ ಬಂದ ನಂತರ ಮಕ್ಕಳ ಶಾಲೆಯಲ್ಲಿಯೂ ಸಹ ಬೇಡಿಕೆ ಆಯ್ತು.  ಈ ವಿಷಯ ಕೇಳಿದ ಅಮ್ಮನಿಗೆ ಸಂಭ್ರಮ, ಸಂತೋಷ, ಉನ್ಮಾದ ಎಲ್ಲವೂ ಆಯ್ತು!  ಪ್ರಯೋಗದ ಪಯಣ ಸಾರ್ಥಕ ಅಂತ ಮನಸ್ಸಿಗೆ ಮಹದಾನಂದವೂ ಆಯ್ತು!

– Saವಿ✍

*************************************************************************

ಧಾರವಾಡ ಫೇಡೇ – ಶಾಂತಲಾ ರಾವ್

ಪೇಡೇ ಅಂದ್ಕೂಡ್ಲೇ ಏನ್ ಅಕ್ಕೈತ್ರಿ?  ಬಾಯಾಗ್ ನೀರ್ ಬರ್ತಾವಾ??  ಅದಂತೂ ಆಗುದ ಬಿಡ್ರಿ… ಅದ್ ಅಲ್ದ?  ಧಾರವಾಡದ್ ನೆನಪಂತೂ ಬರsಬೇಕ ಅಲ್ರಿ?  ಮದ್ಲ ಕಣ್ಣಿನ ಮುಂದ ಬರೂದು ಬಾಬುಸಿಂಗ್ ಠಾಕೂರ್ ಅವ್ರ್ ಅಂಗಡಿ.  ಅದರ ಮುಂದ ಪಾಳೇ ಹಚ್ಚಿ ನಿಂತಿರೂ ಮಂದಿ… ಮತ್ತ ಲೈನ್ ಬಜಾರಿನ ಸಾಲ್ ಸಾಲಾಗಿರೂ ಅಂಗಡಿ ಕಾಣಸ್ತಾವು …

ಸುಭಾಸ್ ರೋಡಿನ ವಿಜಯ್ ಸ್ವೀಟ್ಸ್ ನ್ಯಾಗ ಒಬ್ರು ಅಜ್ಜಾ ಕುಂದರ್ತಿದ್ರು.  ‘ಮಿಶ್ರ ಅಜ್ಜಾ’ – ಅಲ್ಲಿನ್ ಪೇಡೇನೂ ಭಾಳ್ ರುಚಿ  ರೀ.  ಕ್ಯಾರಕೊಪ್ಪದಾಗ [ಧಾರವಾಡದ ಹತ್ತ್ರ ಹಳ್ಳಿ] ಅವ್ರ್ ಫ್ಯಾಕ್ಟರಿ ನಮ್ ಹೊಲದ್ ಮುಂದ ಐತಿ.  ನಮ್ ಅಜ್ಜಾ ಮತ್ತ ಮಿಶ್ರಾ ಅಜ್ಜಾ ದೋಸ್ತರಾಗಿದ್ರು. ಹಿಂಗಾಗಿ ಅವ್ರ್ ಅಂಗಡಿ ಪೇಡೇ ಮತ್ತ ಬ್ಯಾರೆ ಸಿಹಿ ತಿಂಡಿ, ಫರಾಳ ಭಾಳ್ ತಿಂದೇವಿ.  ಅವ್ರ್ ಸಮ್ಮಂಧಿಕ್ರ್ ಅಂಗಡಿನೂ ಅದಾವು – ಮಿಶ್ರಾ ಸ್ವೀಟ್ಸ್,  ದಿವ್ಯಾ ಸ್ವೀಟ್ಸ್,  ಬಿಗ್ ಮಿಶ್ರಾ, ನ್ಯೂ ವಿಜಯ್ ಸ್ವೀಟ್ಸ್ ಅಂತ. ಹೆಚ್ಚಾಗಿ  ಲೈನ್  ಬಜಾರ್  ಇಲ್ಲಂದ್ರ   ಸುಭಾಸ್  ರೋಡ್  ನ್ಯಾಗ ಅದಾವು. 

ಮಿಶ್ರಾ ಸ್ವೀಟ್ಸ್ ನ ಶ್ರೀ ಯೋಗೇಂದ್ರ ಮಿಶ್ರಾ, ಸಾಲ್ಯಾಗ ನನ್ನ ಸೀನಿಯರ್.  ಅವ್ರ್ ಹೇಳ್ತಿದ್ರು ಅವ್ರ್ ಅಜ್ಜಾರು – ಅವಧ್ ಬಿಹಾರಿ ಮಿಶ್ರಾ ಅವ್ರು ಕಿಶೆದಾಗ ೧ ರೂಪಾಯಿ ಇಟ್ಕೊಂಡು ಉತ್ತರ ಪ್ರದೇಶದಿಂದ ಧಾರವಾಡಕ್ ಬಂದಾಗ ಅವ್ರ್ ಕಿಶೆದಾಗ ಉಳ್ದದ್ದು ೩೩ ಪೈಸೆ ಅಂತ.  ಅವ್ರು ತೀರಿಕೊಂಡಾಗ ಅವ್ರಿಗೆ ೧೦೮ ವರ್ಷ ಅಂತ.  ನೋಡ್ರಿ ಅವ್ರು  ಹಚ್ಚಿದ್ ಗಿಡಾ, ಘಟ್ಟಿ ಬೇರೂರಿ ದೊಡ್ಡ ಗಿಡಾ ಆಗಿ ಬೆಳದ್ ಎಲ್ಲಾ ಕಡೆ ರುಚಿ ಹರಡೇತಿ… ಕಾಲಾ ಕಳಧಾಂಗ ಠಾಕೂರ್ ಪೇಢಾದವ್ರು ಅನಿಯಮಿತ ಪೇಡೇ ತಯಾರಿಸಿದ್ರ,  ಮಿಶ್ರಾ ಅವ್ರು ಧಾರ್ವಾಡಕ್ಕ ಅಷ್ಟ ಸೀಮಿತ ಆಗ್ದ ಕರ್ನಾಟಕದ್ ಉದ್ದಗಲಕ್ಕ ಪೇಡೇ ಸಿಹಿ ಹಂಚ್ಯಾರ.

ಇವೆಲ್ಲಾ ವಿಷಯಾ ನಿಮಗ ಅಂತರ್ಜಾಲದಾಗ ಸಿಗ್ಬಹುದು. ಪೇಡೇ ಮಾಡುದ್ ಹೆಂಗ್ ಅಂತನೂ ಸಾಕಷ್ಟ್ ವಿಡಿಯೋ / ವಿಧಾನ ಸಿಗ್ತಾವು.

ಇಲ್ಲೇ UK ನ್ಯಾಗ ಮಾಡಿದ್ದೆ ನಾನೂ.. ರುಚೀ ಆಗಿದ್ದ್ವು!  ನಂಗs ನಂಬ್ಕಿ ಬರ್ರ್ಲಿಲ್ಲ, ನಾನೂ ಮಾಡಬಹುದು ಇಷ್ಟ್ ರುಚೀ ಪೇಡೇ ಅಂತ … ಲೊಕ್ಡೌನಿನ್ಯಾಗ ಇನ್ನೇನ್ ರೀ ಮತ್ತ ಮಾಡೂದು? ಒಂದ್ ಫೋಟೋ ಐತ್ ನೋಡ್ರಿ ಇಲ್ಲೇ. ನಾ ಮಾಡಿದ್ ಪೇಡೇ…

ಆದ್ರ ಪೇಡೇ ಅಂದ್ರ ಮನಸ್ನ್ಯಾಗ ಏನ್ ವಿಚಾರಾ ಉಕ್ಕಿ ಬರ್ತಾವು ಅಂತ ಗೊತ್ತಾ ನಿಮಗ?  ಪೇಡೇ ಅಂದ್ರ ನಂಗ ಆಗೂ ನೆನಪು –

ಮಲೆನಾಡಿನ ಸೆರಗಾದ  ನನ್ನ ತವರಿನ ನೆನಪು. 

ಬ್ಯಾಸ್ಗಿಗೆ ಕಾದ್ ಉರದಿದ್ದ ಮಣ್ಣಿನ್ ಮ್ಯಾಲೆ ಬಿದ್ದ್ ಮದ್ಲನೇ ಮಳಿ ಹನಿಯ ಘಮ ಘಮದ ನೆನಪು.

ನಮ್ಮ್ ಅಪ್ಪಾಜಿ, ಮನ್ಯಾಗ್ ಕಾಲ್ ಇಟ್ ಕೂಡ್ಲೆ “ಮಗಳೇ” ಅಂತ ಕರ್ದಿದ್ – ಎದಿ ಮುಟ್ಟೂ ಧ್ವನಿಯ ನೆನಪು,

ನಮ್ಮ್ ಅವ್ವ ತೆಲಿ ಮ್ಯಾಲೆ ಕೈ ಸವರಿ ಹಾಡಿದ್ ಲಾಲಿ ಪದದ ನೆನಪು ..

ಪೇಡೇ ಬರೇ ಒಂದ್ ರುಚೀಯಾದ್ ತಿನ್ನೂ ದಿನಸ ಅಲ್ರಿ, ಧಾರ್ವಾಡದವರಿಗೆ.  ನಮಗ ಪೇಡೇ ಅಂದ್ರ ಖುಷಿ; ಪೇಡೇ ಅಂದ್ರ ಊರಿಂದ ದೂರ್ ಇರೂ ದುಃಖ್ಖ…

ಪೇಡೇ ಅಂದ್ರ ಅಜ್ಜಾ, ಅಮ್ಮನ್ ಆಶೀರ್ವಾದದ ನೆನಪಿನ ನೆರಳು .. ಕಾಕಾ, ಅತ್ತಿಗುಳ್ ಕರ್ರ್ಕೊಂಡ್ ಅಡ್ಡ್ಯಾಡ್ಸಿದ್ ಹಾದಿ -ಬೀದಿ ನೆನಪು ..

ಪೇಡೇ ಒಳಗಿನ್ ಹಾಲು – ನನ್ ಹಡೆದವ್ವನ ಊರಿನ ಅಕ್ಕರೆಯ ಕರೆ

ಪೇಡೇ ಒಳಗಿನ್ ಸಕ್ಕ್ರಿ – ನಮ್ಮಪ್ಪಾಜಿ ಮೀಶಿ ತಿರಿವಿ ನಗೂದ್ರಾಗ ಇರೂ ಸಿಹಿ, 

ಪೇಡೇ ಮಾಡು ಬೆಂಕಿ – ನನ್ ಗೆಳೆಯ, ಗೆಳತ್ಯಾರ್ ಸಂಬಂಧದ ಕಾವು

ಪೇಡೇ ಕೆಂಪ್ ಬಣ್ಣ – ನನ್ ಊರಿನ್ ಮಣ್ಣಿನ್ ಚಿತ್ರಣ

ಪೇಡೇ ಮ್ಯಾಲಿನ್ ಸಕ್ಕ್ರಿಪುಡಿ ನನ್ ಆ ಸಿಹಿಕಹಿ ದಿನಗಳ ನೆನಪುಗಳು – ಒಂದಿಷ್ಟ್ ಹತ್ತ್ಕೊಂಡ ಅದಾವು .. ಒಂದಿಷ್ಟ್ ಉದರಿ ಬಿದ್ದ್ ಹೋಗ್ಯಾವು …

❤🙏ನನ್ನ ಅಪ್ಪಾಜಿ ದಿ. ಸಂಗನಬಸವ ಮಟ್ಟಿ ಅವರಿಗೆ ಈ ಬರಹವನ್ನು ಅರ್ಪಿಸುವೆ 🙏❤

– Shantalawz

********************************************************************************

ಅನಿವಾಸಿಗಳ ಅಡಿಗೆಮನೆಯ ಪರಿಣತಿಯನ್ನು ತೋರುವ ಸಂಕ್ರಾಂತಿಯ ಹಬ್ಬದೂಟ. ಆನಿವಾಸಿ ಗುಂಪಿನಿಂದ ಆಯ್ದ ಚಿತ್ರಗಳ ಕೊಲಾಜ್.
ಸಂಕ್ರಾಂತಿಯ ಸಡಗರ... 

ಸಜ್ಜಿ ಭಕ್ರಿ ಗುರೆಳ್ಳು ಹಿಂಡಿ
ಶೇಂಗಾ ಎಳ್ಳು ಹೊಳ್ಗಿ
ಮಜ್ಜಗಿಯೊಳಗ ಅಲ್ಲದ ಒಗ್ಗರಣಿ
ಹುಗ್ಗಿಯ ತಿಂದು ಸುಗ್ಗಿಯ ಮಾಡಿ
ಖಬ್ಬು ಬಾಳೆಯ ನೆರಳಿನಾಗ
ಕೂತು ಭೋಗಿಯನುಂಡು
 
ಶೇಂಗಾ ಕುಸುರೆಳ್ಳು ಬೆಲ್ಲ
ಸಕ್ಕರೆ ಅಚ್ಚು ಕಬ್ಬಿನ ಜಲ್ಲೆ
ಕೈಯಲ್ಲಿ ಸಜ್ಜಾದ ತಟ್ಟೆ
ರೇಷ್ಮೆ ಲಂಗ ಉಟ್ಟು
ಮಕ್ಕಳ ಉತ್ಸಾಹದ ಮಿಶ್ರಣ 
ಭೋಗಿ ಮತ್ತು ಸಂಕ್ರಮಣ
 
- ರಾಧಿಕಾ ಜೋಶಿ

******************************************************************