ಅನಿವಾಸಿ ಯುಗಾದಿ ಸಂಚಿಕೆ -೨೦೨೩

ಆತ್ಮೀಯ ಓದುಗರೆಲ್ಲರಿಗೂ ನಮಸ್ಕಾರ, 
ಈ ವಾರದ ಅನಿವಾಸಿ ಸಂಚಿಕೆ ಬಲು ವಿಶೇಷ, ಯುಗಾದಿ ಹಬ್ಬ ಯಾವತ್ತಿಗೂ ತನ್ನೊಂದಿಗೆ ಹೊಸತನ್ನು ಹೊತ್ತು ತರುತ್ತದೆ, ಹಸಿರು,ಚಿಗುರು,ಹೂವು,ಹಣ್ಣು ನಿಸರ್ಗವೇ ಸಂಭ್ರಮ ಹೊದ್ದು ನಿಂತಂತೆ ಭಾಸವಾಗುತ್ತದೆ. 
ಹಬ್ಬ ತಪ್ಪಿದರೂ ಹೋಳಿಗೆ ತಪ್ಪದು ಎಂಬ ಗಾದೆ ಮಾತಿನಂತೆ ಅನಿವಾಸಿ ಈ ಸಂಚಿಕೆಯು ಹಬ್ಬದ ಎರಡು ದಿನಗಳ ನಂತರ ಪ್ರಕಟವಾಗುತ್ತಿದೆ, ಆದರೆ ಈ ಲೇಖನಗಳನ್ನ ಓದಿದರೆ ಮತ್ತೆ ನೀವು ಯುಗಾದಿಯ ಸಂಭ್ರಮವನ್ನ ಅನುಭವಿಸುವುದರಲ್ಲಿ ಯಾವ ಅನುಮಾನವೂ ಇಲ್ಲ. ಈ ಸಂಚಿಕೆಯಲ್ಲಿ ಮೂರು ಹೊಸ ಲೇಖಕರು ಅನಿವಾಸಿಯಲ್ಲಿ ತಮ್ಮ ಯುಗಾದಿಯ ನೆನಪುಗಳನ್ನ, ಸಂಭ್ರಮ, ಹಬ್ಬದ ಜವಾಬ್ದಾರಿಗಳನ್ನ ಕುರಿತು ಬರೆದಿದ್ದಾರೆ. ಮೂವರು ಲೇಖಕರಿಗೂ ಅನಿವಾಸಿ ಬಳಗಕ್ಕೆ ಸ್ವಾಗತ ಕೋರುತ್ತೇನೆ.ಎಂದಿನಂತೆ ತಾವೆಲ್ಲರೂ ಓದಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ. 
ತಮಗೆಲ್ಲರಿಗೂ ಈ ಶೋಭಕೃತ್ ಸಂವತ್ಸರ ಶುಭಪ್ರದವಾಗಲಿ ಎಂಬ ಆಶಯದೊಂದಿಗೆ. 
-ಅಮಿತಾ ರವಿಕಿರಣ್  (ಸಂ)

ಹಬ್ಬದ ಜವಾಬ್ದಾರಿ - ಚೇತನ್ ಅತ್ನಿ 

ಗಾಂಧಿವಾದಿ ಗೊರೂರರು ಗೊರೂರು ಮತ್ತು ಹೇಮಾವತಿಯ ದಂಡೆಯಲ್ಲಿರುವ ಇತರ ಹಳ್ಳಿಗಳನ್ನು ಸೀರೆಯ ಸೆರಗಿಗೆ ಹೋಲಿಸುತ್ತಾರೆ ಏಕೆಂದರೆ ಸೀರೆಯ ಸೌಂದರ್ಯವನ್ನು ಹೆಚ್ಚಿಸುವುದೇ ಸೆರಗಂತೆ ಹಾಗೆಯೆ ಗೊರೂರು ಮತ್ತು ಹೇಮಾವತಿಯ ದಂಡೆಯಲ್ಲಿರುವ ಇತರ ಹಳ್ಳಿಗಳು ಕೂಡ,ಅಲ್ಲೆಲ್ಲೋ ಮೂಡಗೆರೆಯಲ್ಲಿ ಹುಟ್ಟಿ ಪಶ್ಚಿಮ ಘಟ್ಟಗಳನ್ನು ಸುತ್ತಿ ಬರುವ ಹೇಮಾವತಿಯನ್ನು ಗೊರೂರಿನಲ್ಲಿ ತಡೆದು ನಮ್ಮ ಜನ ಹೊಳೆನರಸೀಪುರದ ಮೂಲಕ ಕಾವೇರಿಗೆ ಸೇರಿಸಿದ್ದಾರೆ ಅದಕ್ಕೆ ಏನೋ ಗೊರೂರರು ಈ ಹಳ್ಳಿಗಳನ್ನು ಸೀರೆಯ ಸೆರಗಿಗೆ ಹೋಲಿಸಿದ್ದು.

 

ಇಂತಿಪ್ಪ ಗೊರೂರಿನಿಂದ ಒಂದೆರಡು ಮೈಲಿಗಳಲ್ಲಿ ಇರುವ ನನ್ನ ಹಳ್ಳಿಯಲ್ಲಿ ಯುಗಾದಿಯ ನನ್ನ ನೆನಪುಗಳನ್ನು ಹಂಚಿಕೊಳ್ಳುವ ಪ್ರಯತ್ನವಷ್ಟೇ ಇದು, ಅದು ನೀವು ಸಹಿಸಿಕೊಂಡಷ್ಟು ಸಮಯ , ನನ್ನ ಹಳ್ಳಿಯು ಕೂಡ ಗೊರೂರರು ಹೋಲಿಸುವಂತೆ ಅಷ್ಟೇ ಸುಂದರವಾಗಿದೆ ಅದರಲ್ಲಿಯೂ ಹಬ್ಬಗಳ ಸಮಯದಲ್ಲಿ ಅದರ ಸೊಬಗು ಹೆಚ್ಚುವುದು ಸಹಜವೇ, ತರಹೇವಾರಿ ಸಿದ್ಧತೆ ಆಚರಣೆಗಳಿಗೆ ತರಹೇವಾರಿ ಜವಾಬ್ದಾರಿಗಳು,ಹಬ್ಬದ ಹಿಂದಿನ ದಿನ ರಾಸುಗಳ ಅಲಂಕಾರಕ್ಕಾಗಿ ನಮ್ಮ ಹಳ್ಳಿಯ ದಿಣ್ಣೆಯ ಮೇಲೆ ಸಿಗುವ ಕಣಿಗಲೆ ಹೂವುಗಳನ್ನು,ಹೊಳೆಯ ದಂಡೆಯಲ್ಲಿ ಸಿಗುವ ಮಾವಿನ ಸೊಪ್ಪು ಮತ್ತು ಊರ ಮುಂದಿನ ಅರಳಿಮರದ ಪಕ್ಕದಲ್ಲಿರುವ ಬೇವಿನ ಮರದಿಂದ ಸೊಪ್ಪು ಕಿತ್ತುತರಲು ಅಪ್ಪನ ಜೊತೆ ಹೋಗುವುದು ಮಕ್ಕಳಾದ ನಮ್ಮ ಜವಾಬ್ದಾರಿ ಅಂತೆಯೇ ಹಬ್ಬದ ಸಂಜೆ ಹಸುಗಳಿಗೆ ಮಜ್ಜನ,ಕೊಂಬುಗಳಿಗೆ ಕೆಮಣ್ಣಿನ ಚಿತ್ತಾರ,ಕೊರಳಿಗೆ ಕಣಿಗಲೆಯ ಹಾರ ಇವೆಲ್ಲ ತಯಾರಿ ಮಾಡುವ ಅಪ್ಪನ ಜೊತೆ ನಿಂತು ನೋಡುವ ಜವಾಬ್ದಾರಿಯು ಕೂಡ ಇದೆ ಮಕ್ಕಳದು..!!, ಇತ್ತಕಡೆ ಅಮ್ಮನನ್ನು ಬಿಟ್ಟಾರು ಈ ಮಕ್ಕಳು ಅಂದುಕೊಂಡಿರಾ? ಹಬ್ಬಕ್ಕೆ ಒಂದು ವಾರ ಮುಂಚೆಯೇ ಇವರಿಗೆ ಇನ್ನು ಸಾಕಷ್ಟು ಜವಾಬ್ದಾರಿಗಳಿರುತ್ತವೆ..!! ಮನೆಗೆ ಸುಣ್ಣ ಬಣ್ಣಗಳಾದ ನಂತರ ಮನೆಯ ಮುಂಬಾಗದ ಗೋಡೆಗಳ ಮೇಲೆ ಚಂದ್ರ ಮತ್ತು ಹಾಲಿನಿಂದ ತಯಾರಿಸಿದ ಮಿಶ್ರಣದಿಂದ ಹಂಚಿಕಡ್ಡಿಯಲ್ಲಿ ಹತ್ತು ಹಲವು ಚಿತ್ತಾರಗಳನ್ನು (ಕಾರ್ಣಿ) ಮೂಡಿಸುತಿದ್ದ ಅಮ್ಮನೊಂದಿಗೆ ನಿಂತು ಉಸ್ತುವಾರಿ ನೋಡಿಕೊಳ್ಳುವುದು ಕೂಡ ಮಕ್ಕಳ ಜವಾಬ್ದಾರಿ..!!

 

ಇಷ್ಟೆಲ್ಲಾ ತಯಾರಿಗಳ ನಡುವೆ ಬಾಯಿ ರುಚಿಗೆ ಒಳ್ಳೆಯ ಊಟ ಉಪಹಾರಗಳಿಲ್ಲದಿದ್ದರೆ ಸರಿಹೋಗುವುದೇ,ಅದು ನಮಗೆ ಹೆಚ್ಚು ಆಸಕ್ತಿ ಇರುವ ವಿಷಯವೇ ಅದು ಹಬ್ಬದ ಹಿಂದಿನ ದಿನ ಅಮ್ಮ ಮತ್ತು ಅಜ್ಜಿ ನಂತರದ ವರ್ಷಗಳಲ್ಲಿ ಅಮ್ಮ ಮತ್ತು ಅಪ್ಪ ಕುಳಿತು ತಯಾರಿಸುತ್ತಿದ್ದ ಒಬ್ಬಟ್ಟು, ಹಬ್ಬದ ದಿನದ ಉಪಹಾರಕ್ಕಾಗಿ ಸಿದ್ಧವಾಗುತ್ತಿದ್ದ ಇಡ್ಲಿ ಹಿಟ್ಟು ಇವೆಲ್ಲದರ ಸಿದ್ದತೆಯನ್ನು ಕುಳಿತು ನೋಡುವುದರ ಜೊತೆಗೆ ಒಂದಷ್ಟು ಹೂರಣವನ್ನು ಮೆಲ್ಲುವುದು ಕೂಡ ನಮ್ಮದೇ ಜವಾಬ್ದಾರಿ, ಇಷ್ಟೆಲ್ಲಾ ಜವಾಬ್ದಾರಿಗಳನ್ನು ಹೊತ್ತು ಹಬ್ಬದ ಸಿದ್ಧತೆಗಳನ್ನು ನಡಸಿದ ನಂತರವೂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸದ್ದಿದ್ದರೆ ಆದೀತೇ ..?

 

ಹಬ್ಬದ ದಿನಚರಿ ಆರಂಭಗೊಳ್ಳುವುದು ಆಟದಿಂದಲೇ, ಹಬ್ಬವಾದರೇನಂತೆ ನಮ್ಮ ಮೂಲಭೂತ  ಜವಾಬ್ದಾರಿ ಮತ್ತು ಕರ್ತವ್ಯವಾದ ಆಟವನ್ನು ಬಿಡಲಾದೀತೇ ..!! ಎಂದಿನ ಶ್ರದ್ಧೆಯಂತೆ ಅಂದು ಕೂಡ ಆಟಕ್ಕೆ ಮೊದಲ ಪ್ರಾಶಸ್ತ್ಯ ಹಾಗೆಯೆ ನಮ್ಮನ್ನು ಹುಡುಕಿ ಮನೆಗೆಳೆದೊಯ್ಯುವುದು ನಮ್ಮಜ್ಜನ ಜವಾಬ್ದಾರಿ, ಮನೆ ತಲುಪಿದ ತಕ್ಷಣವೇ ಎಣ್ಣೆ ಸ್ನಾನ, ನನಗೆ ಇಂದು ಆಶ್ಚರ್ಯವಾಗುವುದು  ಆ ೨೦,೩೦ ನಿಮಿಷಗಳ ಎಣ್ಣೆ ಸ್ನಾನಕ್ಕೆ ಯಾಕಷ್ಟು ಬಡಿದುಕೊಳ್ಳುತಿದ್ದೆವು ಎಂದು ಹಾಗಿರುತಿತ್ತು ನನ್ನಜ್ಜಿ ತಲೆ ತಿಕ್ಕುತಿದ್ದ ಪರಿ ಮತ್ತು ಕಾದ ನೀರಿನ ಚುರುಕು, ಈ ರಣ  ರೋಚಕ ಸ್ನಾನದ ನಂತರ ಒಂದು ಸಣ್ಣ ಪೂಜೆ (ನಮಗೇನು ಅಂತಹ ಆಸಕ್ತಿ ಇರಲಿಲ್ಲ ಬಿಡಿ) ,ಈ ಪೂಜೆಯ ನಂತರವೇ ನಮ್ಮ ಮುಖ್ಯ ಜವಾಬ್ದಾರಿಗಳ ಸರಣಿ ಶುರುವಾಗುವುದು ಅದುವೇ ತ್ರೇತಾಯುಗದಲ್ಲಿ ರಾಮನಿಗಾಗಿ ಕಾದು ಕುಳಿತಂತೆ ಕಾದ ನಮ್ಮ ಹೊಟ್ಟೆಯ ಪೂಜೆ.

ನಾನು ಮತ್ತು ನನ್ನ ಅಣ್ಣ ಒಂದೂವರೆ ಡಜನ್ಗಿಂತ ಕಡಿಮೆ ಇಡ್ಲಿ ತಿಂದ ದಾಖಲೆಗಳೇ ಇಲ್ಲ ಅದು ಕಾಯಿ ಚಟ್ನಿ, ನಮ್ಮ್ ಮನೆ ಗೌರಿಯ ಹಾಲಿನಿಂದ ಮಾಡಿದ ಗಟ್ಟಿ ಮೊಸರು ಮತ್ತು ತುಪ್ಪದ ಜೊತೆ ಆದರೂ ನನ್ನ ಅಣ್ಣನ ದಾಖಲೆ ಮುರಿಯಲಾಗಲಿಲ್ಲವಲ್ಲ ಎನ್ನುವುದೊಂದೇ ನನ್ನ ಇಂದಿನ ಕೊರಗು, ಚಟ್ನಿ ಖಾಲಿಯಾಯಿತು ಎಂದು ಇಡ್ಲಿಯನ್ನು,ಇಡ್ಲಿ ಖಾಲಿಯಾಯಿತು ಎಂದು ಚಟ್ನಿಯನ್ನು ಒಂದರಮೇಲೆ ಒಂದನ್ನು ಹಾಕಿಸಿಕೊಂಡು ತಿನ್ನುವುದೇ ಅವನ ಸ್ಪೆಶಿಯಾಲಿಟಿ..!!  ಅಷ್ಟರ ಹೊತ್ತಿಗೆ ನಮ್ಮೊರಿನ ಗ್ರಾಮದೇವತೆ ಅತ್ನಿಯಮ್ಮನಿಗೆ ಪೂಜೆ ಮಾಡಿಸಲು ಬರುವ ನಮ್ಮೂರ ಮತ್ತು ಅವರ ಪೂರ್ವಜರ ಕಾಲದಲ್ಲಿ ನಮ್ಮೊರಿನಲ್ಲಿದ್ದ ಜನಗಳಿಗೆ ಪೂಜೆ ಮಾಡಿಕೊಡುತ್ತಿದ್ದ ನಾಲ್ಕಾರು ತಾತ್ಕಾಲಿಕ ಪೂಜಾರಿಗಳಲ್ಲಿ ಒಬ್ಬರಾದ ನಮಪ್ಪ ಮನೆಗೆ ಬಂದಿರುತ್ತಿದ್ದರು ಅವರು ಹೊತ್ತು ತಂದ ತೆಂಗಿನಕಾಯಿ ಹೋಳುಗಳು , ಬಾಳೆಹಣ್ಣು ,ಚಿಲ್ಲರೆಗಳನ್ನು ಬೇರ್ಪಡಿಸುವುದು ನಮ್ಮ ಜವಾಬ್ದಾರಿ ,ಹಾಗೆಯೆ ಒಂದೆರಡು ನಾಕಣಿಯೋ, ಎಂಟಾಣಿಯನ್ನೋ ಚಡ್ಡಿಯ ಜೋಬಿಗೆ ಇಳಿಸುವುದು ಕೂಡ ಈ ಎಲ್ಲ ಕಾಯ ವಾಚ ತಪ್ಪದೆ ಮಾಡುತ್ತಿದ್ದೆವು ( ನಮ್ಮೂರ ಹೆಸರು ಅತ್ನಿ ,ಯಾವದೋ ಕಾಲದಲ್ಲಿ ಅತ್ರಿ ಮಹಾ ಋಷಿಗಳು ನಮ್ಮೂರ ಹೊಳೆಯ ದಂಡೆಯ ಮೇಲೆ ಕುಳಿತು ತಪಸ್ಸು ಮಾಡಿದ್ದರಂತೆ ಆ ಕಾರಣಕ್ಕಾಗಿ ಅತ್ನಿ ಈ ಕಥೆ ಹೇಳಲು ಯಾವುದೇ ಶಾಸನಗಳಿಲ್ಲ) .

 

ಈ ನಮ್ಮ ಇಡ್ಲಿಯ ತೀರಿಸುವ ಜವಾಬ್ದಾರಿ ಮುಗಿದ ನಂತರ ನಾವು ನೇರ ಹೋಗುತ್ತಿದದ್ದೇ ತೆಂಗಿನಕಾಯಿಗೆ ಕಲ್ಲು ಹೊಡೆಯುವ ಆಟ ನೋಡಲು ಅಲ್ಲಿ ಎಲ್ಲ ಭುಜಬಲ ಪರಾಕ್ರಮಿಗಳಿಗೆ ಕಲ್ಲುಗಳನ್ನು ಪೂರೈಸುವ  ಜವಾಬ್ದಾರಿ ನಮ್ಮದು , ಅಂಗಡಿಯವರು ಒಂದು ತೆಂಗಿನಕಾಯನ್ನು ಒಂದು ಮೂವತ್ತೋ ನಲವತ್ತೋ ಮೀಟರ್ಗಳ ದೂರದಲ್ಲಿ ಇಡುತ್ತಿದ್ದರು , ಇಂತಿಪ್ಪ ತೆಂಗಿನಕಾಯಿಗೆ ಅಲ್ಲಿ ನೆರದಿದ್ದ ಭುಜಬಲ ಪರಾಕ್ರಮಿಗಳು ಹೊಡಯುವ ಪ್ರಯತ್ನ ಮಾಡುತಿದ್ದರು ಒಂದು ಕಲ್ಲಿಗೆ ನಾಕಾಣೆಯೋ ಎಂಟಾಣೆಯೋ ಇದ್ದಿರಬೇಕು ನನಗೆ ಶ್ರೀಲಂಕಾದ ಮಾಲಿಂಗನನ್ನು ನೋಡಿದಾಗ ತಕ್ಷಣ ಜ್ಞಾಪಕ್ಕೆ ಬರುವುದು ನಮ್ಮೂರಿನ ಈ ಭುಜಬಲ ಪರಾಕ್ರಮಿಗಳೇ  , ಈ ಕಲ್ಲು ಹೊರುವ ಜವಾಬ್ದಾರಿ ಮುಗಿದ ನಂತರ ಮನೆಯಲ್ಲಿ ಹೋಳಿಗೆಯ ಊಟ , ಒಂದಷ್ಟು ಪಾಯಸ ಕೋಸಂಬಮರಿ ಮತ್ತು ಕೊನೆಯಲ್ಲಿ ಮಜ್ಜಿಗೆ.

 

ನಮ್ಮ ಊಟ ತೀರಿಸುವ ಹೊತ್ತಿಗೆ ನಮ್ಮೂರಿನ ರಾಸುಗಳು ಸರ್ವಾಲಂಕೃತ ಭೂಷಿತರಾಗಿ ಹೊನ್ನಾರಿನ ಮಹೂರ್ತಕ್ಕಾಗಿ ಕಾಯುತ್ತ ನಿಂತಿರುತಿದ್ದವು, ಈ ಮಹೂರ್ತ ಇಡುವ, ಪಂಚಾಂಗ ಶ್ರವಣ  ಮಾಡುವ/ಕೇಳುವ ಜವಾಬ್ದಾರಿಗಳು ನಮ್ಮ ವ್ಯಾಪ್ತಿಯಿಂದ ಆಚೆ ಇದ್ದುದ್ದರಿಂದ ನಾವೇನು ಅಷ್ಟು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ನಮ್ಮ ಜವಾಬ್ದಾರಿ ಇದದ್ದು ಈ ರಾಸುಗಳನ್ನು ಪ್ರೋತ್ಸಾಹಿಸುವುದಷ್ಟೇ..!! ಮತ್ತು ಹೊನ್ನರನ್ನು ನೋಡಿ ಖುಷಿ ಪಡುವುದು.

 

ಇಷ್ಟೆಲ್ಲಾ ಮುಗಿಯುವ ಹೊತ್ತಿಗೆ ರಾತ್ರಿ ಆಗಿರುತ್ತಿತ್ತು ಹಾಗೆಯೆ ನಮ್ಮ ಹೆಗಲಮೇಲಿದ್ದ ಜವಾಬ್ದಾರಿಗಳು ಅಷ್ಟೇ ಕಡಿಮೆ ಆಗಿರುತ್ತಿದ್ದವು, ಕಡಿಮೆ ಅನ್ನುವುದಕ್ಕಿಂತ್ತಾ ಮುಗಿದಿರುತ್ತಿದ್ದವು ಅನ್ನೋಣ , ಇಂತಿಪ್ಪ ಹಬ್ಬದ ಹಲವು ಜವಾಬ್ದಾರಿಗಳನ್ನು ಮುಗಿಸಿದ ಹೆಮ್ಮೆಯಿಂದ ನಮ್ಮಗಳ ಕಣ್ಣು ಎಳಯದಿದ್ದೀತೆ, ಹಾಗೆಯೆ ನಿದ್ದೆಗೆ ಜಾರಲಾಗದಿದ್ದೀತೆ ..?

ಚೇತನ್ ಅತ್ನಿ

( ಚೇತನ್ ಅತ್ನಿ ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನವರು, ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಿಂದ ಬಿ.ಇ ಪದವಿ ಮುಗಿಸಿ ಬೆಂಗಳೂರಿನಲ್ಲಿ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತಿದ್ದು ಸದ್ಯಕ್ಕೆ ಕಂಪನಿ ಕಡೆಯಿಂದ ಅವರನ್ನು ಲಂಡನ್ಗೆ ವರ್ಗಾಯಿಸಲಾಗಿದೆ. ಒಂದರಿಂದ ಹತ್ತನೇ ತರಗತಿಯವರೆಗೂ ಅವರು ಕನ್ನಡ ಮಾದ್ಯಮದಲ್ಲಿ ಒಂದಿದುದರಿಂದ ಕನ್ನಡ ಪುಸ್ತಕಗಳ ಓದಿನಲ್ಲಿ ಆಸಕ್ತಿ,ಅವರಿಗೆ ಈಗ ಬರಹದ ಪ್ರಯತ್ನಕ್ಕೆ ಹಚ್ಚಿದೆ.)

ಹೊಂಗೆಯ ಹೊಂಗನಸು -ಪ್ರಮೋದ್ ಸಾಲಿಗ್ರಾಮ ರಾಮಕೃಷ್ಣ


ಶಾಲಾ ದಿನದಿಂದಲೂ ನನಗೆ ಹಬ್ಬ ಅಂದ್ರೆ, ರಜಾದಿನ - ಮಜಾ ಮಾಡೋದು ಅಷ್ಟೇ. ಅದರಲ್ಲೂ ಯುಗಾದಿ ಅಂದರೆ ಎಣ್ಣೆ ನೀರಿನ ಸ್ನಾನ, ಹೊಸ ಬಟ್ಟೆ, ಒಬ್ಬಟ್ಟು-ಆಂಬೋಡೆ  ಅಷ್ಟೇ . ಬೆಂಗ್ಳೂರಲ್ಲೇ ಹುಟ್ಟಿ ಬೆಳೆದ ನನಗೆ ಈ ಹರಳೆಣ್ಣೆ ಸ್ನಾನ ಅಂದ್ರೆ ಅಷ್ಟಕ್ಕಷ್ಟೇ . ಬರೀ ಬನಿಯನ್ ಚಡ್ಡಿ ಹಾಕಿ ಕೂರಿಸಿ ಮೈಯೆಲ್ಲ ಹರಳೆಣ್ಣೆ ಹಚ್ಚಿದ್ದೆ ಹಚ್ಚಿದು . ಸ್ವಲ್ಪ ರಾಮಾಚಾರಿ ಸಿನಿಮಾದ ಬುರುಡೆ ಬುರುಡೆ ಹಾಡು ಜ್ಞಾಪಿಸಿಕೊಳ್ಳಿ. ದೇಹಕ್ಕೆ ಹರಳೆಣ್ಣೆ ಇಳೀಬೇಕು ಅಂತ ಬಿಸಿಲಲ್ಲಿ ನಿಲ್ಲೋಕೆ ಹೇಳ್ತಿದ್ರು . ಮುಜುಗರ ಆಗತ್ತೆ ಅಂತ ಆಕ್ಷೇಪಿಸಿದರೆ, ಗಂಡು ಹುಡುಗ ನಿನಗೆಂಥದ್ದೋ ಅಂತ ಹೇಳಿ ಕಾಫಿ ಕೊಟ್ಟು ಸಮಾಧಾನಿಸ್ತಿದ್ರು . ಘಂಟೆಗಳ ನಂತರ ಕಣ್ ಉರಿನಮ್ಮ ಅಂತ ಎಷ್ಟೇ ಗೋಗರೆದರು ಬಿಡದೇ ನಮ್ಮಮ್ಮ ರಪ ರಪಾ ಅಂತ ಸೀಗೆಕಾಯಿ ಹಚ್ಚುತ್ತಿದ್ದರು. ಸೀಗೆಕಾಯಿ ಉಷ್ಣ ಆಗುತ್ತೆ ಅಂತ ಚಿಗರೆ ಪುಡಿ ಬೇರೆ ಮಿಕ್ಸ್ ಮಾಡೋರು - ಈ ಮಿಶ್ರಣ ಘಾಟನ್ನು ಇನ್ನು ಹೆಚ್ಚಾಗಿಸ್ತಿತ್ತು. 


 ಅಪ್ಪ ಪಂಚಾಂಗ ಶ್ರವಣ ಅಂತ ಮಾಡ್ತಿದ್ರೆ : ನನ್ನ ಗಮನ ಎಲ್ಲ ಮಿಥುನ ರಾಶಿಗೆ ಏನು ಫಲ ಅನ್ನೋದರ ಕಡೆಗೆ ಅಷ್ಟೇ. ಆಯ - ವ್ಯಯ ಅಂದರೆ ಗೊತ್ತಿರದ ದಿನಗಳವು. ಬೇವು ಬೆಲ್ಲ ಹಂಚೋವಾಗ - ಬೇವು ಬೇಡವೆಂದು ರಂಪಾಟ ಮಾಡ್ತಿದ್ದೆ. ಹೊಸ ಬಟ್ಟೆ ಹಾಕೊಂಡು ಬೀದಿಗಿಳಿದರೆ ಮನೆಯಲ್ಲಿ ಅಡುಗೆ ಆಗೋವರ್ಗು ಕಾಲ್ ಇಡ್ತಿರ್ಲಿಲ್ಲ .ಷಡ್ರಸಗಳಿಂದ ತುಂಬಿರೋ ಮಾವಿನಕಾಯಿ ಚಿತ್ರಾನ್ನ, ಶಾವಿಗೆ ಪಾಯಸ,ಹೆಸರುಬೇಳೆ ಸೌತೆಕಾಯಿ ಕೋಸಂಬರಿ, ಕಡಲೆ ಹುಸಲಿ, ಹೋಳಿಗೆ, ಆಂಬೋಡೆ ಮುಂತಾದವಗುಳನ್ನೆಲ್ಲಾ    ಚೆನ್ನಾಗಿ ಬ್ಯಾಟಿಂಗ್ ಮಾಡಿದ ನಂತರ Cousins ಮನೆಗೆ ಕರ್ಕೊಂಡ್ ಹೋಗು, ಆಟ ಆಡಬೇಕು ಅಂತ ತಾಕೀತು ಮಾಡ್ತಿದ್ದೆ . ಸಂಜೆವರ್ಗು ಆಟ. ಸಂಜೆ ಮೇಲೆ Udaya TV ಲಿ ಒಂದು ಹೊಸ ಸಿನಿಮಾ ಇವಿಷ್ಟೇ . 



 ಬಹಳ ವಸಂತಗಳ ನಂತರ, ಪ್ರಾಯಶಃ ಗೃಹಸ್ಥನಾದಮೇಲೆ ಯುಗಾದಿ ಈಗ ಬದಲಾಗಿವೆ. ಪ್ರತಿ ವಿಷಯಗಳ ಮಹತ್ವ ಅರಿವಾದಂತೆ, ಸಂಪ್ರದಾಯಗಳು ಅರ್ಥಪೂರ್ಣ ಎಂದೆನಿಸಿದೆ.  ಚೈತ್ರಮಾಸದಿಂದ ವಸಂತ ಋತು ಶುರುವಾಗುತ್ತದೆ. ಛಳಿ - ಮಳೆಗಾಲದಿಂದ ಬಳಲಿ ತತ್ತರಿಸಿದ ಪ್ರಕೃತಿ ಮತ್ತೆ ಚಿಗುರಿ ಹೂ ಬಿಟ್ಟು ಹಸಿರಾಗಿ ನಳನಳಿಸುತ್ತದೆ.  ಹೊಸ ವರ್ಷ, ಹೊಸ ಪ್ರಯತ್ನ , ಹೊಸ ಮನುಷ್ಯನಾಗು ಎಂಬ ಸೂಚನೆಯಂತೆ.


 ಚೈತ್ರ ಪಾಡ್ಯದ ಹಬ್ಬಕ್ಕೋಸ್ಕರ ಇವತ್ತು ನಾನು ಮನೆಯನ್ನ Deep ಕ್ಲೀನ್ ಮಾಡಿ, ಮಾವಿನ ಸೊಪ್ಪು ಸಂಗ್ರಹಿಸಿ, ಕಡ್ಡಿ ಚುಚ್ಚಿ ತೋರಣ ಕಟ್ಟುತ್ತೇನೆ. ಸ್ನಾನ -ಸಂಧ್ಯಾವಂದನೆ ಮುಗಿಸಿ , ಒಂಟಿಕೊಪ್ಪಲ್ ಪಂಚಾಂಗ ತಂದು ಸವಿವರವಾಗಿ ವಾರ್ಷಿಕ ಮುನ್ನೋಟ ತಿಳಿಯುವುದು.  ಬದುಕಿನ ದ್ಯೋತಕವಾಗಿರುವ  ಬೇವು - ಬೆಲ್ಲದ ಸಮ್ಮಿಶ್ರಣ ಮನಸಾರೆ ಸ್ವೀಕರಿಸುವುದು. ಅಡುಗೆ ಮನೆಯ ಕೆಲಸಗಳಲ್ಲಿ ಶ್ರೀಮತಿಗೆ ನೆರವಿಗೆ ಬರೋದಾದ್ರೆ ತೆಂಗಿನಕಾಯಿ ಕೊರೆಯುವುದು, ಮಾವಿನಕಾಯಿ ತುರಿಯುವುದು, ಹೂರ್ಣದ ಉಂಡೆ ಕಟ್ಟುವುದು ಮುಂತಾದವು. ತದನಂತರದಲ್ಲಿ ಬಿದಿಗೆ ದಿನ ಚಂದ್ರ ದರ್ಶನ ಮಾಡಿ, ಹಾಯಾದ ಹೊಂಗೆಯ ಹೊಂಗನಸೊಂದನ್ನು ಕಂಡರೆ ಅಲ್ಲಿಗೆ ಯುಗಾದಿ ಸಂಪನ್ನ.  


ಚಿಕ್ಕವನಿದ್ದಾಗ ಎಲ್ಲೊ ಕೇಳಿದ್ದ ಈ ಹಾಡು, ಈಗ ಬಾಳ ಗೆಳತಿ ಭಾವನಾಳೊಂದಿಗೆ ಗುನುಗೋವಾಗ ಆಪ್ಯಾಯಮಾನ ಎನಿಸುತ್ತದೆ. 


``ಚಿಂತೆ ನೋವು ಹಗುರಾಯಿತು, ಸುಗ್ಗಿ  ಸಿರಿಯ ಮಳೆಯಾಯ್ತು 

ಮನದ ತುಂಬ ಹರುಷದ ಹೂರಣ ಆಹಾ  ಮೂಡಿತು...

ಎಲ್ಲೆಲ್ಲೂ ಜೀವಕಳೆ, ಜೀವಕಿದು ಹೂವಕಳೆ  

ಎಲ್ಲೆಲ್ಲೂ ಜೀವಕಳೆ, ಜೀವಕಿದು ಹೂವಕಳೆ  

ಹಳೆಯ ಕೊಳೆಯ ತೊಳೆಯ ಬಂತು ರಂಗಿನ  ಯುಗಾದಿ``



ಅನಿವಾಸಿ ಬಳಗದ ಸರ್ವರಿಗೂ ಯುಗಾದಿಯ ಶುಭಾಶಯಗಳು.
  ---ಪ್ರಮೋದ್ ಸಾಲಿಗ್ರಾಮ ರಾಮಕೃಷ್ಣ

 (ಪ್ರಮೋದ್ ಹುಟ್ಟಿ  ಬೆಳೆದದ್ದು ಓದಿದ್ದು  ಜೀವನ ರೂಪಿಸಿಕೊಂಡಿದ್ದು ಬೆಂಗಳೂರಿನಲ್ಲಿ . ಪ್ರಸ್ತುತ ಕೆಲಸದ ನಿಮಿತ್ತ ಉತ್ತರ ಐರ್ಲೆಂಡ್ನ ಬೆಲ್ಫಾಸ್ಟ್ ನಗರದಲ್ಲಿ 
ನೆಲೆಸಿದ್ದಾರೆ. ಸಿಟಿ ಬ್ಯಾಂಕ್ ನಲ್ಲಿ ಬಿಸಿನೆಸ್ ಅನಲಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಮೋದ್ ಅವರಿಗೆ ಚಾರಣ ಸಿನಿಮಾಗಳು ಅಂದರೆ ಪಂಚಪ್ರಾಣ .ಜೊತೆಗೆ ಫಿಲ್ಟರ್ ಕಾಫಿ, ಬಾಳೆಎಲೆ ಭೋಜನ ಪ್ರಿಯ. 
ಓದು, ಹಾಡುವುದು, ಬರವಣಿಗೆ ಮೆಚ್ಚಿನ ಹವ್ಯಾಸಗಳು.) 
ನನ್ನ ಬಾಲ್ಯದ ಯುಗಾದಿ- ಪ್ರತಿಭಾ ರಾಮಚಂದ್ರ 

ನಮ್ಮ ಬಾಲ್ಯದ ದಿನಗಳ ಯುಗಾದಿ ಹಬ್ಬದಲ್ಲಿ ಇರುತ್ತಿದ್ದ ಸಡಗರ-ಸಂಭ್ರಮ ಈಗಿನ ದಿನಗಳಲ್ಲಿ ಇಲ್ಲಾ ಅನ್ನೋದನ್ನ ಎಷ್ಟು ಜನರು ಒಪ್ಪುತ್ತೀರಾ? ಅದರಲ್ಲೂ ನನ್ನ ಹಾಗೆ ಮದುವೆ ಆದ ಮೇಲೆ ಹೊರ ದೇಶದಲ್ಲಿ ನೆಲೆಸಿರುವರಿಗಂತೂ ಆ ಅನುಭವ ಸಿಗೋದು ಬಹಳ‌ ವಿರಳ!

ಈ ವರ್ಷದ ಯುಗಾದಿಯಂದು ವಾಟ್ಸಾಪ್ ಗ್ರೂಪೊಂದರಲ್ಲಿ ಶುಭಾಶಯದ ಜೊತೆ ಒಂದು ಸುಂದರವಾದ ಚಿತ್ರ ಬಂದಿತ್ತು. ಆ ಚಿತ್ರ ನೋಡಿ ನನ್ನ ಬಾಲ್ಯದ ಯುಗಾದಿ ಕಣ್ಮುಂದೆ ಬಂದ ಹಾಗೆ ಆಯಿತು ಮತ್ತು ಅದರ ಬಗ್ಗೆ ಬರಿಯೋಣ ಅಂತ ಅನ್ನಿಸಿತು.
 

ನಾನು ಸುಮಾರು ೮-೯ ವಯಸ್ಸಿನವಳಿದ್ದಾಗಿನ ಯುಗಾದಿ ಹಬ್ಬದ ಅನುಭವ ಇದು. ‌ನಾನು ಚಿಕ್ಕಂದಿನಿಂದ ಬೆಳದಿದ್ದು, ಶಾಲಾ-ಕಾಲೇಜಿಗೆ ಹೋಗಿದ್ದೆಲ್ಲಾ ಬೆಂಗಳೂರಿನಲ್ಲಿ. ನಮ್ಮ ಮನೇಲಿ ಯುಗಾದಿ ಹಬ್ಬ ಬಹಳ ಮುಖ್ಯವಾಗಿ ಆಚರಿಸೋ ಹಬ್ಬಗಳಲ್ಲಿ ಒಂದು. ಆಗ ಮಾತ್ರ ಅಪ್ಪ ತಪ್ಪದೇ ಎಲ್ಲರಿಗೂ ಹೊಸ ಬಟ್ಟೆ ಕೊಡಿಸುತ್ತಿದ್ದರು. ಹೊಸ ಬಟ್ಟೆ ಹಾಕೊಂಡು ಮಿಂಚೋಕೆ ಬಲು ಕಾತುರದಿಂದ ಕಾಯ್ತಾ ಇರ್ತಿದ್ದೆ ನಾನು! 

 

ಹಬ್ಬದ ದಿನ, ನನ್ನ ಬೆಳಿಗ್ಗೆ ಶುರು ಆಗ್ತಾ ಇದ್ದಿದ್ದು ರೇಡಿಯೊ ಅಥವಾ ಟಿ.ವಿ ಲೀ ಈ ಜನಪ್ರಿಯ ಹಾಡನ್ನು ಕೇಳ್ತಾ - "ಯುಗ‌ ಯುಗಾದಿ ಕಳೆದರೂ, ಯುಗಾದಿ ಮರಳಿ‌ ಬರುತಿದೆ, ಹೊಸ ವರುಷ ಕೆ ಹೊಸ ಹರುಷವ ಹೊಸತು ಹೊಸತು ತರುತಿದೆ, ಹೊಸತು ಹೊಸತು ತರುತಿದೆ". ಅಷ್ಟು ಹೊತ್ತಿಗಾಗಲೆ ಅಮ್ಮ- ಅಪ್ಪ ಎದ್ದು ಹಬ್ಬದ ಕೆಲಸಗಳನ್ನು ಶುರು ಮಾಡಿಕೊಂಡಿರುತ್ತಿದ್ದರು. ಅಮ್ಮ ಮನೆ ಮುಂದೆ ಚೆಂದವಾದ‌ ಯುಗಾದಿ ರಂಗೋಲಿ ಹಾಕಿರುತ್ತಿದ್ರು . ತಡ ಮಾಡದೆ ನಾನು ಕೂಡ ಬೇಗನೆ ಸ್ನಾನ ಮುಗಿಸಿ, ಹೊಸ ಬಟ್ಟೆ ಹಾಕೊಂಡು ರೆಡಿಯಾಗ್ತಿದ್ದೆ. ಮತ್ತು ಅವತ್ತು ಹೂವು ಮುಡಿಯೋಕೆ ಸಿಗ್ತಿತ್ತು ಅನ್ನೋದು ನನಗೆ ಬಹಳ ಖುಷಿ!

 

ಇನ್ನು ಅಪ್ಪನ ಕೆಲಸ, ಬಾಗಿಲಿಗೆ ಮಾವು-ಬೇವು-ಹೂವಿನ ತೋರಣ ಹಾಕೋದು. ಆ ಕೆಲಸದಲ್ಲಿ ಅಪ್ಪನಿಗೆ ತುಂಬಾ ಉತ್ಸಾಹದಿಂದ ಸಹಾಯ ಮಾಡ್ತಿದ್ದವಳು ನಾನೇ. ಎಲ್ಲಾ ಮಾವಿನ ಎಲೆಗಳು ಆದಷ್ಟು ಸಮವಾಗಿ ಇರಬೇಕು ಅಂತ, ಅಳತೆ ಪ್ರಕಾರ ಸಮವಾಗಿ ಇರೋ ಎಲೆಗಳನ್ನು ಆರಿಸಿ ಕೊಡುತ್ತಿದ್ದೆ . ಆ ಸಮಯದಲ್ಲಿ ಅಮ್ಮ ಪೂಜೆ ಹಾಗು ಬೆಳಿಗ್ಗೆ ತಿಂಡಿ ತಯಾರಿಯಲ್ಲಿ ತೊಡಗಿರುತ್ತಿದ್ದರು. ತೋರಣಗಳನ್ನು ಹಾಕುವ ಕೆಲಸ ಮುಗಿದ ಮೇಲೆ ಪೂಜೆಗಾಗಿ ಅಮ್ಮ ಕರೆಯೋ ತನಕ ಕೆಲವು ಇತರೆ ಸಣ್ಣ-ಪುಟ್ಟ ಕೆಲಸಗಳನ್ನು ಅಪ್ಪ ಮುಗಿಸೋರು. ಇನ್ನು ಪೂಜೆಗೆ ಬನ್ನಿ ಅಂತ ಅಮ್ಮನ ಕರೆ ಬರುತ್ತಿತ್ತು. ಪೂಜೆ ಮುಗಿದ ಮೇಲೆ ಬೇವು-ಬೆಲ್ಲ ತಿನ್ನುವ ಸಮಯ - ಯಾರು ಹೆಚ್ಚು ಬೇವನ್ನು ತಿಂತಾರೋ ಅವರಿಗೆ ವರ್ಷವಿಡೀ ಹೆಚ್ಚು ಖುಷಿ ಸಿಗುತ್ತೆ ಅಂತ ಅಮ್ಮ ಹೇಳೋರು, ಹಾಗಾದ್ರೂ ಬೇವು ತಿನ್ನಲೀ ಅನ್ನೊ ಪ್ಲಾನ್ ಅವರದು. ಯಾರು ಏನು ಹೇಳಿದ್ರು ನಾನು ಮಾತ್ರ ಎಲ್ಲರಿಗಿಂತ ಕಡಿಮೆ ಬೇವು ತಿಂತಿದ್ದೆ! 😉

ಪೂಜೆ ನಂತರ ಏನಾದ್ರು ಸಿಂಪಲ್ ತಿಂಡಿ ಅವತ್ತು. ಮಧ್ಯಾಹ್ನಕ್ಕೆ ಭರ್ಜರಿ ಊಟ ಇರೋದಲ್ವಾ, ಅದಕ್ಕೆ!!  

ನಂತರ , ಅಮ್ಮ-ಅಪ್ಪ ಮಧ್ಯಾಹ್ನದ ಅಡುಗೆ ತಯಾರಿ ಕಡೆ ಹೋಗೋರು. ಮತ್ತೆ ಆಗಿನ್ನೂ ನಮ್ಮ ವಾರ್ಷಿಕ ಪರೀಕ್ಷೆಗಳು ಮುಗಿದಿರುತ್ತಿರಲಿಲ್ಲ, ಹಾಗಾಗಿ ಅಣ್ಣನೂ-ನಾನು ಸ್ವಲ್ಪ ಹೊತ್ತು ಪಠ್ಯಾಭ್ಯಾಸ ಮಾಡುತ್ತಿದ್ದವು. ಹೋಳಿಗೆ ಸುವಾಸನೆ ಬಂದಾಗ, ಊಟ ಇನ್ನೇನು ರೆಡಿ ಅಂತ ಸೂಚನೆ, ಹೊಟ್ಟೆ ತಾಳ ಹಾಕಕ್ಕೆ ಶುರು ಮಾಡ್ತಾಯಿತ್ತು! ಯುಗಾದಿ ಹಬ್ಬದ ಊಟ ಮಾತ್ರ ಯಾವಾಗಲೂ ಬಾಳೆ ಎಲೆ ಮೇಲೆ ಮಾಡ್ತಿದ್ವಿ. ಮೆನು ಹೀಗೆ ಇರ್ತಿತ್ತು - ಕೋಸಂಬರಿ, ಹುರುಳಿಕಾಯಿ ಪಲ್ಯ, ಹೀರೇಕಾಯಿ ಬಜ್ಜಿ, ಮಾವಿನಕಾಯಿ ಚಿತ್ರಾನ್ನ, ಅನ್ನ- ಹೋಳಿಗೆ ಸಾರು, ಯುಗಾದಿಯ ಮುಖ್ಯ ಭಕ್ಷ್ಯವಾದ ತೊಗರಿ ಬೇಳೆ ಹೋಳಿಗೆ ಮತ್ತು ಅದರ ಜೊತೆ ನೆಂಚಿಕೊಂಡು ತಿನ್ನಲು ಅಮ್ಮ ಒಂದು ಸ್ಪೆಷಲ್ ಗೊಜ್ಜು ಮಾಡ್ತಿದ್ರು (ಕಡಲೆ ಕಾಳು, ಬಟಾಣಿ, ಬದನೆಕಾಯಿ, ಆಲೂಗಡ್ಡೆ ಹಾಕಿ). ತುಪ್ಪ ಹಾಗೂ ಹಾಲು ಕೂಡ ಇರ್ತಿತ್ತು, ಆದರೆ ನನಗೆ ಮತ್ತು ಅಣ್ಣನಿಗೆ ಮಾತ್ರ ಹೋಳಿಗೆ ಜೊತೆ ಬೆಸ್ಟ್ ಕಾಂಬಿನೇಷನ್ ಕಾಳು ಗೊಜ್ಜು. ನನಿಗಂತೂ ಬರೀ ಹೋಳಿಗೇನೇ ಅರ್ಧ ಹೊಟ್ಟೆ ತುಂಬ್ತಾಯಿತ್ತು, ಬೇರೆಲ್ಲಾ ಸ್ವಲ್ಪೇ ಸ್ವಲ್ಪ ತಿಂತಿದ್ದೆ ಅಷ್ಟೇ. ಇಂತಹ ಸ್ವಾದಿಷ್ಟ ಭೋಜನದ ಬಗ್ಗೆ ಕೇವಲ ಬರಿಯವಾಗಲೇ ನನ್ನ ಬಾಯಲ್ಲಿ ನೀರು ಬರುತ್ತದೆ !! ಇಷ್ಟು ಗಡತ್ತಾದ ಊಟದ ನಂತರ ಎಲ್ಲ ಒಂದು ಒಳ್ಳೆ ನಿದ್ರೆ ಮಾಡ್ತಿದ್ವಿ. ಈ ಎಲ್ಲಾ ‌ಅಡುಗೆ ಸುಮಾರು ಉಳಿದಿರುತ್ತಿತ್ತು, ಹಾಗಾಗಿ ಅಮ್ಮನಿಗೆ ರಾತ್ರಿ ಮತ್ತೆ ಅಡುಗೆ ಮಾಡೋ ಗೋಜು ಇರ್ತ ಇರ್ಲಿಲ್ಲ . ಹೋಳಿಗೆ ಸಾರಂತೂ ಮುಂದಿನ ೨ ದಿನಗಳಿಗೂ ಆಗ್ತಿತ್ತು. ಅದನ್ನು ಜಾಸ್ತಿನೇ ಮಾಡ್ತಿದ್ರು ಏಕಂದರೆ ಆ ಸಾರಿನ ವಿಷೇಷನೇ ಅದು, ಹಳೆಯದಾದಷ್ಟೂ ರುಚಿ ಹೆಚ್ಚು, ಮತ್ತೆ ಯಾರೂ ಹಳೇ ಸಾರು ಬೋರ್ ಆಯ್ತು ಅಂತ ಕಂಪ್ಲೇನ್ ಮಾಡ್ತಿರ್ಲಿಲ್ಲಾ! 

 ಈ ಯುಗಾದಿ ಹಬ್ಬದ ಸಡಗರ ನೆನಪಿನ ಜಾತ್ರೆಯನ್ನೇ ನನ್ನ ಕಣ್ಣ ಮುಂದೆ ತಂದು ನಿಲ್ಲಿಸುತ್ತದೆ.  
ಪ್ರತಿಭಾ ರಾಮಚಂದ್ರ
 
(ಪ್ರತಿಭಾ ರಾಮಚಂದ್ರ ಮೂಲತಃ ಬೆಂಗಳೂರಿನವರು, ಸುಮಾರು ೧೨ ವರ್ಷಗಳಿಂದ ಇಂಗ್ಲೆಂಡಿನಲ್ಲಿ ವಾಸವಾಗಿದ್ದಾರೆ. ಪ್ರತಿಭಾ ಒಬ್ಬ ಐಟಿ ಗ್ರ್ಯಾಜುಯೇಟ್ ಹಾಗು ಕನ್ನಡ ಶಿಕ್ಷಕಿ. ಒಬ್ಬ ಮುದ್ದು ಮಗನ ತಾಯಿ ಕೂಡ.ಜೊತೆಗೆ ರೇಡಿಯೋ ಕಾರ್ಯಕ್ರಮಗಳನ್ನೂ ಕೊಡುತ್ತಾರೆ.) 
ಚಿತ್ರ:ಗೂಗಲ್ 
ಚಿತ್ರ: ಅಮಿತಾ ರವಿಕಿರಣ್ 

ಸಂಕ್ರಾಂತಿ ವಿಶೇಷ: ಯೋಗೀಂದ್ರ ಮರವಂತೆ ಬರೆದ `ಶ್ಯಾವಿಗೆ ಹಬ್ಬ` ಮತ್ತು ಕೇಶವ ಕುಲಕರ್ಣಿ ಬರೆದ `ಅಮರಪ್ರೇಮ` ಕತೆಯ ಕೊನೆಯ ಭಾಗ

ನಮಸ್ಕಾರ ಅನಿವಾಸಿ ಬಂಧುಗಳೇ. ಬೆಳಗಾದರೆ ಭೋಗಿ-ಸಂಕ್ರಾಂತಿಗಳು.  ಸುಗ್ಗಿಯ ಹಬ್ಬ ತಮ್ಮೆಲ್ಲರಿಗೂ ಹಿಗ್ಗನ್ನು ತರಲಿ. ಹುಗ್ಗಿಯ  ಘಮದಂತೆ ಬದುಕು ಹಿತವಾಗಲಿ 

ಎಳ್ಳು-ಬೆಲ್ಲದ ಸಿಹಿ ಬಾಳ ತುಂಬಿರಲಿ. ಸಿಹಿಗಬ್ಬು, ಬಾಳೆ- ಬಾರೆ, ಸೀತನಿ-ಸುಲಗಾಯಿ..ಆಹಾ! 'ಈ ಜನುಮವೇ   ಆಹಾ ದೊರಕಿದೆ ರುಚಿ ಸವಿಯಲು.. ಈ ಜಗವಿದೆ ನವರಸಗಳ ಉಣಬಡಿಸಲು' ಅಲ್ಲವೇ? 

ಬನ್ನಿ.. ಇವತ್ತು ಮರವಂತೆಯವರ ಮನೆಯಲ್ಲಿ ಶ್ಯಾವಿಗೆಯಂತೆ. ಎಂಥಾ  ಸೊಗಸಾದ ಊಟ  ಉಣಬಡಿಸಿದ್ದಾರೆ  ಸವಿಯಬನ್ನಿ.

ಉಂಡಾದ ಮೇಲೆ ಹಾಯಾಗಿ ಅಡ್ಡಾಗಿ ಅಮರಪ್ರೇಮ ಕಥಾಯಾನ ಮಾಡಿ ಸಂಕ್ರಾಂತಿ ಸಂಭ್ರಮ ಹೆಚ್ಚಿಸಿಕೊಳ್ಳಿ. 
 
~ ಗೌರಿ ಪ್ರಸನ್ನ, ಸಂಪಾದಕರು

ಶ್ಯಾವಿಗೆ ಹಬ್ಬ – ಯೋಗೀಂದ್ರ ಮರವಂತೆ

ಇವತ್ತು ಶ್ಯಾವಿಗೆ. ಇಂತಹ ಇವತ್ತು  ವಾರಾಂತ್ಯದ ದಿನಗಳಾದ ಶನಿವಾರ  ಆದಿತ್ಯವಾರ ಅಲ್ಲದಿದ್ದರೆ ಯಾವುದೊ ಹಬ್ಬದ ರಜೆಯ ದಿವಸ ಬರುತ್ತದೆ. ಇಲ್ಲದಿದ್ದರೆ ಶ್ಯಾವಿಗೆಯಂತಹ ಪ್ರಯಾಸಕರ ಸಾಹಸವನ್ನು ದೈನಿಕದ ಕೆಲಸ ಇರುವ ವಾರದ ನಡುವೆ  ಯಾರಾದರೂ ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆ ಕಡಿಮೆ. ಶ್ಯಾವಿಗೆಯನ್ನು ತಲೆಮಾರುಗಳಿಂದ ತಯಾರಿಸಿ  ಪ್ರೀತಿಸಿ ಆಸ್ವಾದಿಸಿ ಬಡಿಸಿ ಉಣಿಸಿ ತಣಿಸಿದ ಪರಂಪರೆಯಲ್ಲಿ ಹುಟ್ಟಿದ್ದು ನನ್ನ ಭಾಗ್ಯ ಇರಬೇಕು. ಸಂಗೀತ ನೃತ್ಯ  ಪ್ರಕಾರಗಳಲ್ಲಿ ಇಂತಹ ಶೈಲಿ ಘರಾನಾ ತಿಟ್ಟು ಮಟ್ಟು  ಎಂದೆಲ್ಲ ಇದೆಯಲ್ಲ. ಪರಂಪರೆಯೊಂದು ಗುರುವಿನಿಂದ ಶುರುವಾಗಿ  ಶಿಷ್ಯರ ತಲಾಂತರಗಳಿಗೆ ವಿಶಿಷ್ಟ ಗುರುತಾಗಿ  ಹರಿದು ಹೋಗುವಂತಹದು. ಹೀಗೆ ಹೆಸರಾಂತ ಪರಂಪರೆಯಿಂದ ಬಂದವರನ್ನು ನೋಡಿದ ಕೇಳಿದ ತಕ್ಷಣ ಇನ್ಯಾರೋ ,"ಓ ಇವರು ಇಂತಹಲ್ಲಿಗೆ ಸೇರಿದವರು "ಎಂದು ಸುಲಭವಾಗಿ ಗುರುತಿಸುವುದಿದೆ.  ಅಂತಹ ಯಾವುದೇ  ಗಾಯಕ ವೈಣಿಕ ನರ್ತಕ ಕಲಾವಿದರ  ಸಾಲಿಗೆ ಪರಂಪರೆಗೆ  ಸೇರದ ನಾನು  , ಆದರೆ, ಒಂದು ವೇಳೆ ಮನುಷ್ಯರೇ ಆರೋಪಿಸಿಕೊಂಡ  ಸಾಮೂಹಿಕ ಗುರುತಿಗೆ  ಸೇರಲೇಬೇಕಾದ  ಸಂದರ್ಭದಲ್ಲಿ   " ಶ್ಯಾವಿಗೆ ಘರಾನಾ"ಕ್ಕೆ ಮಾತ್ರ ಸೇರಬೇಕಾದವನು ಎಂದು ಅನಿಸಿದ್ದಿದೆ. ಶ್ಯಾವಿಗೆಯನ್ನು  ತಿಂಡಿ ಎಂತಲೋ  ಕಜ್ಜಾಯ ಊಟ ಉಪಹಾರ ಎಂತಲೋ ವರ್ಗೀಕರಿಸಿದವರಿದ್ದಾರೆ. ಮತ್ತೆ ಕೆಲವರು ಅದರ ತಯಾರಿಯ ಹಿಂದಿನ ಸಿದ್ಧತೆ ಬದ್ಧತೆ ಶ್ರಮ ಸಾಹಸಗಳನ್ನು ಕಂಡು ಅಡಿಗೆಯ ಪ್ರಕಾರದಿಂದಲೇ ಹೊರಗಿಟ್ಟು ದೂರ ಉಳಿದಿದ್ದಾರೆ. ನನ್ನ ಮಟ್ಟಿಗೆ ಶ್ಯಾವಿಗೆ ಇಂತಹ ಮಾನವ ಮಿತಿಯ ವಿವರ ವರ್ಣನೆಗಳನ್ನು ಮೀರಿದ ಒಂದು ಮಹಾ ಕುಸುರಿ ಕೆತ್ತನೆ  ಕಾವ್ಯ.

ಈ ಕಾಲದಲ್ಲಿ ಉಪ್ಪಿಟ್ಟನ್ನು  ಪಾಯಸ  ಫಲೂದಂತಹ ಸಿಹಿಖಾದ್ಯಗಳನ್ನೂ ಶ್ಯಾವಿಗೆ ಬಳಸಿ  ತಯಾರಿಸುವುದು  ಜನಪ್ರಿಯವಾಗಿರುವವಾದರೂ  "ಒತ್ತು ಶ್ಯಾವಿಗೆ"ಯನ್ನೇ ಶ್ಯಾವಿಗೆ ಎಂದು ಸಂಬೋಧಿಸುವುದು ಕೆಲವು ಊರು ಮನೆಗಳಲ್ಲಿ ಇಂದಿಗೂ  ಕ್ರಮ.  ಹಲವು ಮಾದರಿ ಬಗೆಗಗಳ ಶ್ಯಾವಿಗೆಳು ಅಸ್ತಿತ್ವದಲ್ಲಿ ಇದ್ದರೂ ಅದರ  ಉಗಮ ಮೂಲ ನಾಲ್ಕು ಸಾವಿರ ವರ್ಷಗಳ ಹಿಂದೆ ಚೈನಾದಲ್ಲಿ ಆಯಿತು ಎಂದು ಕೆಲವು ಆಹಾರ ಇತಿಹಾಸಕಾರರು ಬರೆದಿಟ್ಟಿದ್ದಾರೆ. ಇನ್ನು ಕೆಲವರು ಅನಾದಿ ಕಾಲದಲ್ಲಿ ನೂಡಲ್ಸ್ ನಂತಹ ತಿನಿಸು ಇಟೆಲಿಯಲ್ಲಿ ಇತ್ತು ಎಂದೂ ಹೇಳಿದ್ದಾರೆ. ಮತ್ತೊಬ್ಬರು ಕ್ರಿಸ್ತ ಪೂರ್ವ ೨೦೦೦ದ ಹೊತ್ತಿಗೆ ಭಾರತದಲ್ಲಿಯೂ ಶ್ಯಾವಿಗೆ ಮಾದರಿಯ ಊಟ ತಿಂಡಿ ಇದ್ದುದರ ಕುರುಹು ಇದೆ ಎನ್ನುತ್ತಾರೆ. ಹಲವು ನೂರು, ಕೆಲವು ಸಾವಿರ ವರ್ಷಗಳ ಹಿಂದೆ ಶ್ಯಾವಿಗೆಯ ಹುಟ್ಟು ಎಲ್ಲೇ ಆಗಿದ್ದರೂ ,ಅಂದಿನಿಂದ ಇಂದಿನ ತನಕದ ಸುದೀರ್ಘ ಯಾನದಲ್ಲಿ  ಜಗತ್ತಿನ ಬೇರೆ ಬೇರೆ ಮೂಲೆಗಳಿಗೆ  ಹರಡಿ ಹಲವು ಮಾರ್ಪಾಟುಗಳನ್ನು ಕಂಡು ಇಂದು ಇಲ್ಲಿ ಹೀಗೆ ಹಸನಾಗಿ ಬದುಕಿ ಬಾಳಿಕೊಂಡಿದೆ.

ಶ್ಯಾವಿಗೆ ಮಾಡುವವರು ತಯಾರಿಯನ್ನು ಹಿಂದಿನ ದಿನ ಅರೆಯುವ ಕೆಲಸದಿಂದ ಆರಂಭಿಸಿರುತ್ತಾರೆ. ಇನ್ನು ನನ್ನಂತೆ ತಿನ್ನುವುದರಲ್ಲಿ  ತೀವ್ರ  ಆಸಕ್ತಿ ಇರುವವರು ಅದಕ್ಕಿಂತಲೂ ಮೊದಲೇ ಒಂದು ಮಾನಸಿಕ ಸಿದ್ಧತೆ  ಪ್ರತೀಕ್ಷೆಯಲ್ಲಿ ಇರುತ್ತಾರೆ. ಬಿಡಿ,ಅರೆಯುವುದು ಶ್ಯಾವಿಗೆ ಯಾನದ  ಮೊದಲ ಹಂತವಾದರೂ ಅದಕ್ಕೂ ಪೂರ್ವದಲ್ಲಿ  ಶ್ಯಾವಿಗೆ ಸ್ನೇಹಿ ಅಕ್ಕಿ ಕೈವಶವಾಗಿರಬೇಕು. ಶ್ಯಾವಿಗೆಗೆ ಸಮರ್ಪಕ  ಅಕ್ಕಿ ಯಾವುದು ಎಂದು ಅರಸುವುದು ಮತ್ತೆ ಕಂಡುಹಿಡಿಯುವುದು ಪರಂಪರೆ ಪ್ರಯೋಗಗಳು ಕಲಿಸಿಕೊಡುವ ಗುಟ್ಟುಗಳಲ್ಲಿ ಒಂದು. ಬಿಳಿಯಾಗಿ ಹೊಳೆಯುವ ಯಾವುದೋ  ಅಕ್ಕಿ, ದುಬಾರಿಯಾದ ಕಾರಣಕ್ಕೆ ಒಳ್ಳೆಯದು ಎನ್ನುವ ಹೆಸರು ಪಡೆದ ಅಕ್ಕಿ ಇಂತಹವನ್ನು ತಂದು ಅರೆದು ಶ್ಯಾವಿಗೆ ಮಾಡಲು ಕೈಹಾಕಿದರೆ ಉದ್ದುದ್ದ ಎಳೆಯಾಗಿ ನಿಂತು ನಲಿದು ಬಾಳಬೇಕಾದ  ಶ್ಯಾವಿಗೆ ನೂಲುಗಳು ಕ್ಷಣಮಾತ್ರದಲ್ಲಿ  ತುಂಡು ತುಂಡಾಗಿ ಹರಿದು ಛಿದ್ರವಾಗಿ ನಾಲಿಗೆಯಲ್ಲಿ ನಿಲ್ಲದೆ ಕರಗಿ ನಿರಾಸೆ ಜಿಗುಪ್ಸೆ ಹುಟ್ಟಿಸುವ ಸಾಧ್ಯತೆಯೇ ಹೆಚ್ಚು. ಕೇರಳದ ಕಡೆಯ  ಶ್ಯಾವಿಗೆ ಬಿಳಿ ಅಲ್ಲದೇ ಕೆಂಪು ಅಕ್ಕಿಯಿಂದಲೂ  ತಯಾರಾಗುತ್ತದೆ."ಇಡಿಯಪ್ಪಂ" ಎನ್ನುವ ಹೆಸರಿನ ಕೇರಳದ ಶಾವಿಗೆ ಪ್ರಕಾರಕ್ಕೆ ನೂಲುಪೊಟ್ಟು ,ನೂಲಪ್ಪಮ್ ಎಂಬ ಹೆಸರುಗಳೂ ದಕ್ಷಿಣ ಭಾರತದಲ್ಲಿ ಪ್ರಚಲಿತದಲ್ಲಿ ಇವೆ. ಇನ್ನು ಆಂಗ್ಲ ಭಾಷೆಯಲ್ಲಿಯೇ ಹೆಸರು ಬೇಕೆಂದು ಬಯಸುವವರು  ರೈಸ್ ನೂಡಲ್ಸ್ ಅಥವಾ ಸ್ಟ್ರಿಂಗ್ ಹೋಪರ್ ಎಂದೂ ಕರೆದು ಕೃತಾರ್ತರಾಗಬಹುದು. ರುಚಿ ಗಂಧಗಳಲ್ಲಿ ಕೇರಳದ ಅಥವಾ ಇನ್ಯಾವುದೋ ರಾಜ್ಯದ  ಶ್ಯಾವಿಗೆ ಕನ್ನಡದ ಶ್ಯಾವಿಗೆಗಿಂತ ಭಿನ್ನ. ಮೇಲುನೋಟಕ್ಕೆ ಎಲ್ಲ ಬಗೆಯ ಶ್ಯಾವಿಗೆಗಳೂ  ಸುರುಳಿಸುತ್ತಿದ ನೂಲಿನ ಮುದ್ದೆಯಾದರೂ  ಅವುಗಳೊಳಗೆ ವೈವಿಧ್ಯ ಇದೆ. ವೈವಿಧ್ಯಮಯ ಶ್ಯಾವಿಗೆಯನ್ನು  ಪ್ರೀತಿಸಿ ಸ್ವಯಂ ತಯಾರಿಸುವವರು  ಜಗತ್ತಿನ ಯಾವುದೇ  ಮೂಲೆಯಲ್ಲಿ ಇದ್ದರೂ ಅಲ್ಲಿನ ಸ್ಥಳೀಯ ಅಂಗಡಿಗಳಲ್ಲಿ ಸಿಗುವ ಅಕ್ಕಿಗಳಲ್ಲಿ ಶ್ಯಾವಿಗೆಗೆ ಹೊಂದುವ ಅಕ್ಕಿ ಯಾವುದು ಎಂದು ತಮ್ಮ ಅಡುಗೆಯ ವಿಜ್ಞಾನ  ಗಣಿತ ಪ್ರಯೋಗಗಳನ್ನು  ಜೊತೆಮಾಡಿಸಿ ಕಂಡುಕೊಂಡಿರುತ್ತಾರೆ. ಅದಕ್ಕಿಂತ ಮುಖ್ಯವಾಗಿ ತಾವಿರುವ ಊರಿಗೆ ಶ್ಯಾವಿಗೆ ಒತ್ತುವ ಒರಳನ್ನೂ ಕೊಂಡೊಯ್ದಿರುತ್ತಾರೆ. ಹಿತ್ತಾಳೆಯ ಹೊಳೆಯುವ ಒರಳುಗಳು ಸಣ್ಣ ದೊಡ್ಡ ಗಾತ್ರದಲ್ಲಿ ಕನ್ನಡ ನಾಡಿನ ಅಂಗಡಿಗಳಲ್ಲಿ ದೊರೆಯುತ್ತವೆ. ವಿದೇಶ ಪ್ರವಾಸದ ಬ್ಯಾಗಿನ ಅಚ್ಚುಕಟ್ಟಿನ ಜಾಗದಲ್ಲಿ ಸಾಗಿಸಲು  ಅನುಕೂಲಕರ ಆಗಲಿ ಎಂದು ಒರಳಿನ ಭಾಗಗಳನ್ನು ಹೊರಡುವಾಗ  ಬಿಡಿಸಿ ಮತ್ತೆ ತಲುಪಿದ ಮೇಲೆ ಜೋಡಿಸಲಾಗುವ ನಮೂನೆಗಳೂ ದೊರೆಯುತ್ತವೆ. ಅಂತೂ ಒರಳೂ ಇದ್ದು, ಸೂಕ್ತವಾದ ಅಕ್ಕಿಯೂ ದಕ್ಕಿದ ಮೇಲೆ ,  ಮರುದಿನ ಬೆಳಿಗ್ಗೆಯ ಶ್ಯಾವಿಗೆ ತಯಾರಿಗೆ  ಹಿಂದಿನ ಸಂಜೆ  ಅರೆದಿಡಬಹುದು ,  ಜೊತೆಗೆ  ತೆಂಗಿಕಾಯಿ ತುರಿದು ಸೇರಿಸುವ ಪದ್ಧತಿಯೂ ಇದೆ. ಕೆಲವು ಊರು ಮನೆಗಳಲ್ಲಿ ತೆಂಗಿನ ಕಾಯಿ ಹಾಕದೆಯೂ  ಶ್ಯಾವಿಗೆ ಮಾಡುತ್ತಾರೆ.

ನಾನಂತೂ ಶ್ಯಾವಿಗೆ ಪರಂಪರೆಯಲ್ಲಿ "ತೆಂಗಿನಕಾಯಿ ಸಹಿತ" ಸಂತತಿಗೆ  ಸೇರಿದವನು. ಶ್ಯಾವಿಗೆಯನ್ನು ಆಘ್ರಾಣಿಸಿಯೇ ಅದಕ್ಕೆ ತೆಂಗಿನ ಕಾಯಿ ಹಾಕಿದ್ದಾರೋ ಇಲ್ಲವೋ ಎಂದು ಹೇಳಬಲ್ಲ ಹುಟ್ಟಾ  ಕಟ್ಟಾ ಶ್ಯಾವಿಗೆ ಪ್ರೇಮಿಗಳೂ ಇದ್ದಾರೆ.  ಎಷ್ಟು ಅಕ್ಕಿಗೆ ಎಷ್ಟು ತೆಂಗಿನಕಾಯಿ  ಸೇರಿಸಿ  ಅರೆಯಬೇಕು ಎನ್ನುವುದು ಶ್ಯಾವಿಗೆಯ ಸೂಕ್ಶ್ಮಾತಿಸೂಕ್ಷ್ಮಗಳಲ್ಲಿ  ಇನ್ನೊಂದು. ಈ ಹಂತದಲ್ಲಿ ಕಾಯಿ ಹೆಚ್ಚು ಸೇರಿಸಿದರೆ ಶ್ಯಾವಿಗೆ ತಯಾರಾಗುವ ಕೊನೆಯ ಹಂತದಲ್ಲಿ ಎಳೆಗಳು ತೀರಾ ದುರ್ಬಲವಾಗಿ ಪುಡಿ ಪುಡಿ ಆಗುತ್ತವೆ.ಕಡಿಮೆ ಆದರೆ ಎಳೆಗಳು ಗಟ್ಟಿಯಾಗಿ ತಿನ್ನುವ ಅನುಭವ ಕೆಡುತ್ತದೆ.  ಚದುರಂಗದ ಆಟದಲ್ಲಿ ಹಲವು ಹೆಜ್ಜೆಗಳ ಮುಂದಿನ ಪರಿಣಾಮವನ್ನು ಅಳೆದು ಮೊದಲೇ ಯೋಜನೆ ಮಾಡಿ ಜಾಗರೂಕವಾಗಿ ಮುನ್ನಡೆಯುವಂತೆ   ಈ ಮಹಾಖಾದ್ಯದ ತಯಾರಿಯೂ.  ಒಂದಾನೊಂದು ಕಾಲದಲ್ಲಿ ನನ್ನ ತಂದೆ ತಾಯಿಯರ  ಕಡೆಯ ಅಮ್ಮಮ್ಮಂದಿರು (ಅಜ್ಜಿಯರು) ಶಿಲೆಯ ಅರೆಯುವ  ಕಲ್ಲುಗಳ ಎದುರು ನೇರ  ಕುಳಿತು ಒಂದು ಕೈಯಿಂದ ಕಲ್ಲನ್ನು ತಿರುವುತ್ತಾ ಮತ್ತೊಂದರಲ್ಲಿ ಅಷ್ಟಷ್ಟೇ ಅಕ್ಕಿ ತುರಿದ ಕಾಯಿಯನ್ನು ಕಲ್ಲಿನ ಕುಳಿಗೆ ಜಾರಿಸುತ್ತಾ ನಡುನಡುವೆ ಹಣೆಯ ಬೆವರನ್ನೂ ಸೆರಗಿಂದ ಒರಸುತ್ತ  ಸಣ್ಣ ಸದ್ದಿನಲ್ಲಿ ಅರೆಯುತ್ತಿದ್ದ  ಪ್ರಕ್ರಿಯೆ ಇದೀಗ ತಲೆಮಾರುಗಳನ್ನು ದಾಟಿ ಬಟನ್ ಒತ್ತಿದೊಡನೆ ಕರ್ಕಶವಾಗಿ ಗಿರಗಿಟ್ಟುವ ಮಿಕ್ಸರ್ ಗ್ರೈಂಡರ್ ಗಳ  ಶಬ್ದದ  ನಡುವೆ  ನುಣ್ಣಗೆ ತೆಳ್ಳಗಾಗುವುದಕ್ಕೆ ಒಗ್ಗಿಕೊಂಡಿವೆ. ಹೀಗೆ ಸಿದ್ಧವಾದ ನೀರುನೀರಾದ ಶ್ಯಾವಿಗೆ ಹಿಟ್ಟು ಒಂದು ರಾತ್ರಿಯನ್ನು  ಏನೂ  ಮಾಡದೇ ಪಾತ್ರೆಯೊಂದರಲ್ಲಿ ಬೆಳಗಿನ ನಿರೀಕ್ಷೆಯಲ್ಲಿ ಕಳೆಯುತ್ತದೆ . ,ಮರುದಿನ ಬೆಳಗಿಗೆ ತುಸು ಹುಳಿಯಾಗಿ ಮುಂದಿನ ಹಂತಕ್ಕೆ ಅಣಿಗೊಳ್ಳುತ್ತದೆ. ಇನ್ನು ಶ್ಯಾವಿಗೆ ಸಂಭ್ರಮದ ದಿನದ ಬೆಳಿಗ್ಗೆ  ಒಲೆಯ ಮೇಲಿರುವ ಬಾಣಾಲೆಯನ್ನು ಏರಿದ   ತೆಳ್ಳಗಿನ ಹಿಟ್ಟು ,ಮನೆಯ ನಿಷ್ಣಾತ ಬಾಣಸಿಗರ ಸುಪರ್ದಿಯಲ್ಲಿ   ನಿಧಾನವಾಗಿ ಕುದಿಯುತ್ತಾ   ಮಗುಚಿಸಿಕೊಳ್ಳುತ್ತ   ಮುದ್ದೆಯಾಗುತ್ತದೆ   , ಮತ್ತೆ ಆ ಗಟ್ಟಿ ಮುದ್ದೆ ಕೈಮುಷ್ಟಿಯ ಬಿಗಿಯಲ್ಲಿ  ಉಂಡೆಯ ರೂಪವನ್ನು ಪಡೆದು  ಇಡ್ಲಿ ಅಟ್ಟ  ಅಥವಾ ಕುಕರ್ ಒಳಗೆ ನಂತರ ಬೇಯುತ್ತದೆ ತೋಯುತ್ತದೆ . ತೆಳ್ಳಗಿನ ಹಿಟ್ಟು ಯಾವ ಬೆಂಕಿಯಲ್ಲಿ ಎಷ್ಟೊತ್ತು ಕುದಿಯಬೇಕು ಎಷ್ಟು ಗಟ್ಟಿಯಾಗಬೇಕು ಮತ್ತೆ  ಎಷ್ಟು ಬೇಯಬೇಕು ಎನ್ನುವುದು ಕೂಡ ಶ್ಯಾವಿಗೆಯ ಯಶಸ್ಸಿನ ಹಿಂದೆ ದುಡಿಯುವ  ನಯ ನಾಜೂಕಿನ ವಿಚಾರಗಳು.

ಈಗ  ಮೃದುವಾಗಿ ಹದವಾಗಿ ಕುದಿದು ಬೆಂದ ಉಂಡೆಗಳು ಒತ್ತಿಸಿಕೊಳ್ಳಲಿಕ್ಕೆ ತಯಾರು. ಎಂದೋ ಯಾರೋ ಮಹಾ ಇಂಜಿನೀಯರ್ ಒಬ್ಬರು ಸಂಶೋಧನೆಯ ಕಾರಣಕ್ಕೆ  ಈಗಲೂ ಅವರಿಗೆ  ಪುಣ್ಯ ಸಂಚಯ ಮಾಡಿಸುತ್ತಿರುವ   "ಶ್ಯಾವಿಗೆ ಒರಳು" ಇಷ್ಟೊತ್ತಿಗೆ ಮೈಮುರಿದು ಅಡುಗೆ ಮನೆಯಲ್ಲಿ ಪ್ರತ್ಯಕ್ಷ ಆಗಿರುತ್ತದೆ. ಸಾಮಾನ್ಯವಾಗಿ ಮನೆಯ ಅಟ್ಟದಲ್ಲೋ ಅಡುಗೆ ಮನೆಯ ನೇಪತ್ಯದಲ್ಲೋ ನಿಷ್ಕ್ರಿಯವಾಗಿರುವ  ಒರಳು, ಶ್ಯಾವಿಗೆ ಒತ್ತಬೇಕಾದ ಅಪರೂಪದ ವಿಶೇಷ ದಿನಗಳಲ್ಲಿ ಮಾತ್ರ ಹೊರಬಂದು ಕತ್ತು ಗಿರಗಿರ ತಿರುಗಿಸುವ  ಮೂರು ಕಾಲಿನ ವಿಚಿತ್ರ ಜಂತುವಾಗಿ ಜೀವ ತಳೆಯುತ್ತದೆ  . ಒರಳಿನ  ತಿರುಗಿಸುವ  ಹಿಡಿಯ ಕೆಳಗಿನ ಭಾಗಕ್ಕೆ ತೆಂಗಿನ ಎಣ್ಣೆ ಸವರುವುದು  ಪ್ರತಿ ಒತ್ತಿಗೂ  ಮೇಲೆ ಕೆಳಗೆ ಹೋಗುವಾಗ ಆಗುವ ಘರ್ಷಣೆಯನ್ನು ತಗ್ಗಿಸುತ್ತದೆ, ಅಮೂಲ್ಯವಾದ ಒರಳಿನ ಆಯಸ್ಸನ್ನು ವರ್ಧಿಸುತ್ತದೆ ಎನ್ನುವುದನ್ನು ಅಡುಗೆಮನೆ ನಿರ್ವಹಿಸುವ ಅನುಭವದ ಯಾರೂ ಹೇಳಬಲ್ಲರು. ಹೀಗೆ ಒರಳುಯಂತ್ರದ ಪ್ರವೇಶ ಅಲಂಕಾರ ಆಗುತ್ತಿರುವಾಗ  ಒಲೆಯ ಮೇಲೆ ಬೆಂದ ಹಿಟ್ಟಿನ ಉಂಡೆಗಳ ಬಿಸಿ ಆರದಂತೆ ಸಣ್ಣ ಬೆಂಕಿ ಮುಂದುವರಿಯುತ್ತಿರುತ್ತದೆ. ಇನ್ನು ಅಕ್ಕಿ ಕಾಯಿಯಗಳು ಅರೆದು ಬೆಂದ  ಉಂಡೆಗಳು ಶ್ಯಾವಿಗೆಯ ಎಳೆಗಳಾಗಿ ಮಾರ್ಪಡುವ ದಿವ್ಯ ಘಳಿಗೆ ಸನ್ನಹಿತವಾದಾಗ ಆಯಾ ಮನೆಯ ಬಲಿಷ್ಠ ಒತ್ತುಗಾರರಿಗೆ ಒಂದು ಕೂಗು ಕರೆ ಹೋಗುತ್ತದೆ. ಒಬ್ಬರು ಶ್ಯಾವಿಗೆ ಒರಳಿನ ಒತ್ತು ಪಾತ್ರೆ ಹಿಡಿಯುವಷ್ಟು ಬೆಂದ ಹಿಟ್ಟಿನ ಉಂಡೆಯನ್ನು ಕುಳಿತು ತುಂಬಿಸಿದರೆ  ಇನ್ನೊಬ್ಬರು ನಿಂತು, ಒರಳಿನ ಎರಡು ಕಾಲುಗಳನ್ನು ತಮ್ಮ ಪಾದಗಳಿಂದ ಅದುಮಿ ಹಿಡಿದು ಎರಡು ಕೈಯಲ್ಲಿ ಹ್ಯಾಂಡಲ್ ಬಾರ್ ತಿರುಗಿಸುತ್ತಾ ಶ್ಯಾವಿಗೆ ಒತ್ತುತ್ತಾರೆ. ಪ್ರತಿ ಸುತ್ತಿಗೂ ಅಷ್ಟಷ್ಟು ಶ್ಯಾವಿಗೆ ಎಳೆಯಾಗಿ ನೂಲಾಗಿ  ಒರಳಿನ ಕೆಳಗಿರುವ ಅಚ್ಚಿನಿಂದ ಹೊರ ಬರುತ್ತದೆ, ಕುಳಿತವರು ಪ್ಲೇಟ್ ಅನ್ನು  ಎಳೆಗಳು ಹೊರ ಬರುವ ಲಯಕ್ಕೆ ಹೊಂದಿಕೊಂಡು ತಿರುಗಿಸುತ್ತಾ  ಸುರುಳಿಯಾಗಿ ಸುತ್ತಿಸಿ ಮುದ್ದೆಯನ್ನು ಹಿಡಿಯುತ್ತಾರೆ . ಶ್ಯಾವಿಗೆ ಮಾಡುವುದರಲ್ಲಿ ಪಳಗಿರುವ  ಅಜ್ಜಿ ಅಮ್ಮ ಹೆಂಡತಿ  ದೊಡ್ಡಮ್ಮ ಚಿಕ್ಕಮ್ಮ ಅತ್ತಿಗೆ ಹೆಂಡತಿಯಂತಹ ಮಹಾನ್ ಬಾಣಸಿಗರು ಬಿಸಿ ಹಿಟ್ಟಿನ ಮುದ್ದೆಯನ್ನು ಒರಳಿಗೆ ತುಂಬುವ ಮತ್ತೆ  ಒತ್ತಿದಾಗ ಕೆಳಗೆ ಧಾರೆಯಾಗಿ ಇಳಿಯುವ ಶ್ಯಾವಿಗೆಯನ್ನು ಪ್ಲೇಟು ಹಿಡಿದು ಸುತ್ತಿಸಿ ಹದ್ದುಬಸ್ತಿನಲ್ಲಿಡುವ ಕೆಲಸ ಮಾಡಿದರೆ, ರಟ್ಟೆಯ ಬಲ ಹೆಚ್ಚಿರುವ ಗಂಡ ಮಗ ಅಳಿಯ ಮೊಮ್ಮಗರಂತವರು  ಒರಳು ತಿರುಗಿಸುವ ಹೊಣೆಗಾರಿಕೆಯನ್ನು  ನಿರ್ವಹಿಸುತ್ತಾರೆ.ಕೆಲವು ಪ್ರದರ್ಶನಗಲ್ಲಿ ಈ ಪಾತ್ರಗಳು ಬದಲಾಗುವುದು ಒಬ್ಬರೇ ಎರಡು ಮೂರು ಪಾತ್ರ ಮಾಡಬೇಕಾದ ಅನಿವಾರ್ಯತೆ ಬರುವುದೂ ಇರುತ್ತದೆ. ಕಾರ್ಖಾನೆಯೊಂದರ ನಿರ್ಧರಿತ  ನಿಯಮಿತ ಚಲನೆಗಳಂತೆ  ಕುಕ್ಕರಿನಲ್ಲಿ ಹದ ಬಿಸಿಯಲ್ಲಿರುವ ಒಂದೊಂದೇ ಹಿಟ್ಟಿನ ಉಂಡೆಗಳು  ಒರಳಿನ ತೂತು ಅಚ್ಚುಗಳ ಮೂಲಕ ಹಾದು ನೀಳ  ನೂಲಿನ ಗುಚ್ಛದ ಸ್ವರೂಪವನ್ನು  ಪಡೆದು ಪ್ಲೇಟಿನಲ್ಲಿ ಇಳಿದು ದೊಡ್ಡ ಪಾತ್ರಕ್ಕೆ ವರ್ಗಾವಣೆ ಆಗುತ್ತಿರುತ್ತವೆ. ಇಡೀ ಕುಟುಂಬ ಮನೆಯನ್ನು, ತಾನು ರೂಪ ಆಕಾರ ಪಡೆಯುವ ಪ್ರಸನ್ನ ಘಳಿಗೆಯಲ್ಲಿ ಅಡಿಗೆಮನೆಯ ಸೂರಿನ ಕೆಳಗೆ ಒಂದು ಮಾಡಿಸುವ ಸಾಮರ್ಥ್ಯ  ಶ್ಯಾವಿಗೆ ಎನ್ನುವ ಅದ್ಭುತ ಪ್ರಕ್ರಿಯೆಗೆ ಇದೆ. 

ಹೀಗೆ ತಯಾರಾದ ಶ್ಯಾವಿಗೆಯನ್ನು ಹೇಗೆ ತಿನ್ನಬೇಕು ಬಾರದು ಎನ್ನುವುದರ ಬಗ್ಗೆ ಅದರ ಪ್ರೇಮಿಗಳಲ್ಲಿ ಜಿಜ್ಞಾಸೆ ಇದೆ ಅವರೊಳಗೆ ಪಂಥ  ಗುಂಪುಗಳೂ ಇವೆ .ಈ ಗುಂಪುಗಾರಿಕೆ ಒಡಕುಗಳು ಶ್ಯಾವಿಗೆ  ಹುಟ್ಟಿತು ಎನ್ನಲಾದ ಕೆಲ ಸಾವಿರ ವರ್ಷಗಳ ಹಿಂದೆಯೂ ಇದ್ದವೋ   ಇತ್ತೀಚಿಗೆ ಹುಟ್ಟಿಕೊಂಡದ್ದೋ  ಆ ಶ್ಯಾವಿಗೆಯ ಎಳೆಗಳೇ ಹೇಳಬೇಕು.  ಕೆಲವರು ಶ್ಯಾವಿಗೆ ಮುದ್ದೆಗೆ  ತೆಂಗಿನೆ ಎಣ್ಣೆ ಕಲಸಿಕೊಂಡು ಉಪ್ಪಿನ ಕಾಯಿಯ ಜೊತೆ ತಿನ್ನುವ, ಅಲ್ಲವೇ ಕಾಯಿರಸ, ಸಾಂಬಾರ್ ಇನ್ನೇನೋ ಖಾರ ಪದಾರ್ಥದ  ಜೊತೆ ಸೇವಿಸುವ  ಖಡಕ್ ಮನುಷ್ಯರು. ಇನ್ನು ಕೆಲವರು ತುರಿದ ತೆಂಗಿನ ಕಾಯಿಯನ್ನು ಮಿಕ್ಸರ್ ಅಲ್ಲಿ ಅರೆದು ಹಿಂಡಿದ  ಹಾಲಿಗೆ ಬೆಲ್ಲ ಸೇರಿಸಿ ತಯಾರಾದ ಕಾಯಿಹಾಲಿನ ಜೊತೆ ಮಾತ್ರ ಶ್ಯಾವಿಗೆಯನ್ನು ಸವಿಯ ಬಲ್ಲ ಸಂಕುಲದವರು. ತಿನ್ನುವ ಹೊತ್ತಿನಲ್ಲಿ ನಮ್ಮೊಳಗೇ ಭಿನ್ನಾಭಿಪ್ರಾಯ ಎಷ್ಟೇ ಇದ್ದರೂ  ಶ್ಯಾವಿಗೆಯ ಕುರಿತಾದ ಅಭಿಮಾನ ಒತ್ತಾಯ ಪ್ರೀತಿಯ ವಿಷಯದಲ್ಲಿ ಎಲ್ಲರೂ ಸಂಘಟಿತರು.

 ಮರವಂತೆಯ ನನ್ನ ಬಾಲ್ಯದ ಬೇಸಿಗೆ ರಜೆಯಯಲ್ಲಿ  ಮಂಗಳೂರು ಚಿಕ್ಕಮ್ಮನ ಮನೆಗೆ ಹೋಗಿದ್ದಾಗ, ಅಲ್ಲಿ ವಾಸಿಸುತ್ತಿದ್ದ ಅಮ್ಮಮ್ಮನಿಗೂ ನನಗೂ ಒಂದು ಪಂಥ ಬಿದ್ದ್ದಿತ್ತು.  ಒಂದೋ ಆಕೆ ನಿತ್ಯವೂ ಶ್ಯಾವಿಗೆ ಮಾಡಿ ದಣಿದು ನಿಲ್ಲಿಸಬೇಕು, ಇಲ್ಲದಿದ್ದರೆ  ನಾನು ದಿನಾ  ತಿಂದು ತಿಂದು ಸಾಕೆನ್ನಬೇಕು. ಈ ಪಂಥದ ಪ್ರಕಾರ ಪ್ರತಿ ದಿನ ಬೆಳಿಗ್ಗೆ ಅಮ್ಮಮ್ಮನಿಂದ ಹೊಚ್ಚ ಹೊಸ ಶ್ಯಾವಿಗೆ ತಯಾರಿ ಮತ್ತೆ  ನಿತ್ಯವೂ  ನಾನು ತಿನ್ನುವುದು ನಡೆಯಿತು. ಒಂದು ವಾರದ  ಪರಿಯಂತ ನಿತ್ಯ ನಡೆದ ಈ ಹಿತಸ್ಪರ್ಧೆಯಲ್ಲಿ ಸೋಲು ಗೆಲುವುಗಳ ನಿರ್ಧಾರ ಆಗದೇ , ಲೋಕಹಿತಕ್ಕಾಗಿ ನಾವಿಬ್ಬರೂ ಹೊಂದಾಣಿಕೆ ಒಪ್ಪಂದ ಮಾಡಿಕೊಂಡು  ಪಂಥವನ್ನು ಕೈಬಿಟ್ಟಿದ್ದೆವು.  ಶ್ಯಾವಿಗೆಯ ಸುದೀರ್ಘ ಇತಿಹಾಸದಲ್ಲಿ ದಾಖಲಾದ ಅವಿಸ್ಮರಣೀಯ ಜಿದ್ದು  ಇದಾಗಿದ್ದಿರಬಹುದು.  ಇಂದಿಗೂ ಶ್ಯಾವಿಗೆ -ಕಾಯಿ ಹಾಲುಗಳ ಜೋಡಿಯನ್ನು ಮೀರಿದ ಸುಖ ರಸಸೃಷ್ಟಿ  ಇನ್ನೊಂದಿಲ್ಲ ಎಂದು ನಂಬುವ ಕೆಲವರಲ್ಲಿಯಾದರೂ ನಾನೊಬ್ಬ. ಶ್ಯಾವಿಗೆಯನ್ನು ಇನ್ನೊಂದು ಆಹಾರ ಎಂತಲೋ ವಿಶೇಷ ತಿಂಡಿ ಎಂದೋ  ಹಲವರು  ಕರೆಯಬಹುದಾದರೂ ನನ್ನ ಮಟ್ಟಿಗೆ ಶ್ಯಾವಿಗೆ ಯಾವಾಗಲೂ ಹಬ್ಬ; ಮತ್ತೆ ಇವತ್ತು ಮನೆಯಲ್ಲಿ ಶ್ಯಾವಿಗೆ.

ಅಮರಪ್ರೇಮ (ಕತೆ): ಕೇಶವ ಕುಲಕರ್ಣಿ (ಕೊನೆಯ ಕಂತು)

ಮೊದಲ ಕಂತನ್ನು ಇನ್ನೂ ಓದಿಲ್ಲದಿದ್ದರೆ, ಓದಲು ಇಲ್ಲಿ ಒತ್ತಿ

ಎರಡನೆಯ ಕಂತನ್ನು ಇನ್ನೂ ಓದಿಲ್ಲದಿದ್ದರೆ, ಓದಲು ಇಲ್ಲಿ ಒತ್ತಿ

ಅಮರನಿಗೆ ಪ್ರೇಮಾಳನ್ನು ನೋಡುವ ಅದಮ್ಯ ಹಂಬಲ ಪರಾಕಾಷ್ಠೆಗೆ ತಲುಪಿದ್ದು, ೨೦ನೇ ವರ್ಷದ ಪುನರ್ಮಿಲನದ ಕಾರ್ಯಕ್ರಮದ ಸಲುವಾಗಿ, ಪುಣೆಯಿಂದ ಬೆಂಗಳೂರಿಗೆ ರೈಲಿನಲ್ಲಿ, ಬೆಂಗಳೂರಿನಿಂದ ಮೈಸೂರಿಗೆ ಬಸ್ಸಿನಲ್ಲಿ ಪಯಣಿಸಿ, ಬಸ್ ನಿಲ್ದಾಣದಿಂದ ಹೊಟೇಲಿಗೆ ಆಟೋದಲ್ಲಿ ಬಂದಿಳಿದ ಆ ಒಂದು ದಿನದ ಸುದೀರ್ಘ ಪಯಣದಲ್ಲಿ. 

ಪ್ರೇಮಾ ಬರುತ್ತಾಳೆ, ಬರುವುದಿಲ್ಲ ಎನ್ನುವ ಚಡಪಡಿಕೆ; ಜೊತೆಗೆ ಅವಳ ಗಂಡನೂ ಬರಬಹುದು, ಬರಲಿಕ್ಕಿಲ್ಲ ಎನ್ನುವ ಗೊಂದಲ. ಗಂಡ ಬರದಿದ್ದರೆ ಒಳ್ಳೆಯದು, ಅವಳ ಜೊತೆ ಕೂತು ನಾಕು ಮಾತಾದರೂ ಆಡಲು ಸಮಯ ಸಿಕ್ಕಬಹುದು ಎಂಬ ಹಂಬಲ. ಆದರೆ ಅಮೇರಿಕದಲ್ಲಿ ಈಗ ರಜೆಯ ಸಮಯವಲ್ಲವೇ, ಅವಳು ಕುಟುಂಬ ಸಮೇತ ಬಂದೇ ಬರುತ್ತಾಳೆ ಎನ್ನುವ ತರ್ಕ. ಅವಳಿಗೆ ಬಹುಷಃ ಇಬ್ಬರು ಮಕ್ಕಳಿರಬಹುದು. ತನ್ನ ಮಗಳಿಗಿಂತ ದೊಡ್ಡ ಮಕ್ಕಳಿರುತ್ತಾರೆ, ಏಕೆಂದರೆ ಅವಳಿಗೆ ತನಗಿಂತ ಮೊದಲು ಮದುವೆ ಆಯಿತಲ್ಲವೇ?  ಸ್ವಲ್ಪ ದಪ್ಪಗಾಗಿರಬಹುದು, ಇಲ್ಲ, ಅಮೇರಿಕದಲ್ಲಿರುವವರಿಗೆ ದೇಹದ ಬಗ್ಗೆ ತುಂಬ ಕಾಳಜಿಯಂತೆ, ಮೊದಲಿಗಿಂತ ಸಪೂರವಾಗಿರಬಹುದು ಎಂದೆಲ್ಲ ಪ್ರಯಾಣದ ತುಂಬ ಯೋಚಿಸಿದ. 

ಪ್ರೇಮಾ ಎದುರಾದಾಗ ಯಾವ ಮಾತಿನಿಂದ ಶುರು ಮಾಡುವುದು, ಯಾವ ಯಾವ ಹಳೆಯ ವಿಷಯಗಳ ಬಗ್ಗೆ ಮಾತಾಡುವುದು ಎಂದು ಮನದಲ್ಲೇ ಪಟ್ಟಿ ಮಾಡಿಕೊಂಡ. ಕಾಲೇಜಿನಲ್ಲಿರುವಾಗ ಇದ್ದ ತನ್ನ ದಟ್ಟ ಕಪ್ಪು ಕೂದಲು ಬಹಳಷ್ಟು ಮಾಯವಾಗಿ ಉಳಿದ ಅರೆಬಕ್ಕ ತಲೆಯ ಬಗ್ಗೆ ಕಸಿವಿಸಿಯಾಯಿತು. ನಿಯಮಿತವಾಗಿ ವ್ಯಾಯಾಮ ಮಾಡಿದ್ದರೆ ಇಷ್ಟು ಹೊಟ್ಟೆ ಬರುತ್ತಿರಲಿಲ್ಲ ಎಂದು ಮೊಟ್ಟಮೊದಲ ಬಾರಿಗೆ ತನ್ನ ಹೊಟ್ಟೆಯ ಬಗ್ಗೆ ಬೇಸರ ಮೂಡಿತು.

ಅವಳಿಗೆ ತನ್ನ ಹೆಂಡತಿಯನ್ನು ಹೇಗೆ ಪರಿಚಯಿಸುವುದು, ಅದಕ್ಕಿಂತ ಹೆಚ್ಚಾಗಿ ತನ್ನ ಮಗಳ ಹೆಸರು ಕೂಡ `ಪ್ರೇಮಾ` ಎಂದು ಹೇಗೆ ಹೇಳುವುದು ಎನ್ನುವ ಪ್ರಶ್ನೆಗಳಿಗೆ ಇಡೀ ಪ್ರಯಾಣದಲ್ಲಿ ಉತ್ತರಗಳೇ ಸಿಗಲಿಲ್ಲ. ಹಲವಾರು ಸನ್ನಿವೇಷಗಳನ್ನು ತಾನೇ ಸೃಷ್ಟಿಸಿಕೊಂಡು ಅದನ್ನು ಹೇಗೆ ನಿಭಾಯಿಸುವುಸುದು ಎಂದು ಪ್ರಯಾಣದ ಪೂರ್ತಿ ನಾನಾ ರೀತಿಯ ಲೆಖ್ಖಾಚಾರ ಹಾಕುತ್ತಲೇ ಇದ್ದ. ಹೆಂಡತಿ ಮತ್ತು ತಾಯಿಯ ಮಾತನ್ನು ಕೇಳಿ ಮಗಳಿಗೆ `ಪ್ರೇಮಾ` ಎನ್ನುವ ಹೆಸರನ್ನು ಯಾವ ಕಾರಣಕ್ಕೂ ಇಡಲು ಬಿಡಬಾರದಿತ್ತು ಎಂದು ತನ್ನನ್ನೇ ಬಯ್ದುಕೊಂಡ. ಏನಾದರೂ ಕಾರಣ ಹೇಳಿ ಹೆಂಡತಿ ಮಗಳನ್ನು ಕರೆತರಬಾರದಿತ್ತು ಎಂದುಕೊಂಡ. ಹೊಟೇಲು ತಲುಪಿದರೂ ತನ್ನ ಸಮಸ್ಯೆಗೆ ಯಾವ ಸಮಂಜಸ ಉತ್ತರವೂ ದೊರಕದೇ, ಹೇಗೆ ಆಗುತ್ತೋ ಹಾಗೆ ಆಗಲಿ ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡ. 

ಮೊದಲೇ ಬುಕ್ ಮಾಡಿರುವ ಹೋಟೀಲು ತಲುಪಿದಾಗ ಆಗಲೇ ಸಂಜೆ ಆಗಿತ್ತು. ಎಲ್ಲ ಕ್ಲಾಸ್‍ಮೇಟುಗಳೂ ಆಗಲೇ ಮುಖ್ಯ ಸಭಾಂಗಣಕ್ಕೆ ಹೋಗಿಯಾಗಿತ್ತು. ಹಾಗಾಗಿ ಅಮರನಿಗೆ ಯಾವ ಗೆಳೆಯರೂ ಸಿಗಲಿಲ್ಲ. 

ರೂಮಿಗೆ ಬಂದವರೇ ಸ್ನಾನ ಮಾಡಿ, `ಪುನರ್ಮಿಲನ`ಕ್ಕಾಗಿಯೇ ಖರೀದಿಸಿದ ಹೊಸ ಬಟ್ಟೆಗಳನ್ನು ಮೂವರೂ ಹಾಕಿಕೊಂಡರು. ಉಷಾ ಮದುವೆಯ ಮನೆಗೆ ಹೋಗುವವಳಂತೆ ಶೃಂಗಾರ ಮಾಡಿಕೊಂಡು ನಳನಳಿಸುತ್ತಿದ್ದಳು. ಎಂದೂ ಅಷ್ಟಾಗಿ ಹೊಗಳದ ಅಮರ `ಚೆನ್ನಾಗಿ ಕಾಣುತ್ತಿದ್ದೀಯಾ,` ಎಂದು ಹೆಂಡತಿಯನ್ನು ಹೊಗಳಿದ. ಮಗಳೂ ಚೆನ್ನಾಗಿ ಡ್ರೆಸ್ ಮಾಡಿದ್ದಳು, `ಸೋ ಕ್ಯೂಟ್,` ಎಂದು ಮಗಳ ಕೆನ್ನೆಗೆ ಮುತ್ತನಿಟ್ಟ. `ಏನು ಯಜಮಾನರು, ಇವತ್ತು ಭಾರೀ ಮೂಡಿನಲ್ಲಿ ಇರುವಂತಿದೆ!` ಎಂದು ಉಷಾ ತಮಾಷೆ ಮಾಡಿದಳು. ಮಗಳ ಮುಂದೆಯೇ ಹೆಂಡತಿಯ ಕೆನ್ನೆಗೂ ಒಂದು ಮುತ್ತನಿತ್ತ. ಮಗಳು ಖುಷಿಯಲ್ಲಿ ನಕ್ಕಳು. ಲಿಫ್ಟಿನಿಂದ ಇಳಿದು `ಪುನರ್ಮಿಲನ` ನಡೆಯುತ್ತಿರುವ ಹೊಟೀಲಿನ ಸಭಾಂಗಣದತ್ತ ಹೊರಡಲು ಹೊಟೇಲಿನ ಲಾಬಿಗೆ ಬಂದರು. 

ಹೆಂಡತಿ ಮಗಳನ್ನು ಹೊಟೇಲ್ ಲಾಬಿಯಲ್ಲಿ ಕೂರಲು ಹೇಳಿ, ಸಭಾಂಗಣ ಎಲ್ಲಿದೆ ಎಂದು ರೆಸೆಪ್ಷೆನ್ನಿನಲ್ಲಿ ಕೇಳಿಕೊಂಡು ಬರುತ್ತೇನೆ ಎಂದು ಅಮರ ರಿಸೆಪ್ಷನ್ನಿಗೆ ಬಂದು, ಅಲ್ಲಿರುವ ಹುಡುಗನಿಗೆ ಕೇಳಿದ.

ಅಷ್ಟರಲ್ಲಿ ಹಿಂದಿನಿಂದ ಯಾರೋ ಬಂದು ಅವನ ಕಣ್ಣು ಮುಚ್ಚಿದರು. ಯಾರು ಎಂದು ಅಮರನಿಗೆ ಗೊತ್ತಾಗದಿದ್ದರೂ ಬಳೆಗಳ ಸದ್ದು ಮತ್ತು ಪರ್ಫ್ಯೂಮಿನ ವಾಸನೆಯಿಂದ ಹೆಣ್ಣು ಎನ್ನುವುದಂತೂ ಗೊತ್ತಾಯಿತು. ಬಂದಿದ್ದು ರಿ-ಯುನಿಯನ್ನಿಗೆ ತಾನೆ, ತನಗೆ ಪ್ರೇಮಾಳನ್ನು ಬಿಟ್ಟರೆ ಇನ್ಯಾರೂ ಸನಿಹದ ಗೆಳತಿಯರಿರಲಿಲ್ಲ. ಕಾಲೇಜಿನಲ್ಲಿ ಇರುವಾಗ ಒಂದೇ ಒಂದು ದಿನವೂ ಸಲಿಗೆಯಿಂದ ಭುಜವನ್ನೂ ತಟ್ಟಿರದ ಹುಡುಗಿ, ಈಗ ಹಿಂದಿನಿಂದ ಬಂದು ಕಣ್ಣು ಮುಚ್ಚುವುದೆಂದರೆ!  ಅವಳು ಪ್ರೇಮಾ ಅಲ್ಲದಿದ್ದರೆ ಅಥವಾ ತನ್ನನ್ನು ಇನ್ನಾರೋ ಎಂದು ಅಂದುಕೊಂಡು ಬೇರೆ ಯಾರೋ ಕ್ಲಾಸ್‍ಮೇಟ್ ಹುಡುಗಿ ತನ್ನ ಕಣ್ಣು ಮುಚ್ಚಿದ್ದರೆ ಎಂದು ಅಂದುಕೊಂಡು, `ಯಾರು? ಹು ಈಸ್ ಇಟ್?` ಎಂದ. 

ಅತ್ತ ಕಡೆಯಿಂದ ಯಾವ ಉತ್ತರವೂ ಬರಲಿಲ್ಲ. ಅಮರನ ಕಣ್ಣಿನ ಮೇಲಿನ ಬಿಗಿತ ಹೆಚ್ಚಾಯಿತು. ಅಮರನಿಗೆ ಬೇರೆ ದಾರಿಯೇ ಇರಲಿಲ್ಲ, `ಪ್ರೇಮಾ!` ಎಂದ. ಕಣ್ಣು ಕಟ್ಟಿದ್ದ ಕೈ ಸಡಿಲಿತು. ತಿರುಗಿ ನೋಡಿದರೆ, ಸಾಕ್ಷಾತ್ ಪ್ರೇಮಾ ಸಕಲ ಶೃಂಗಾರದೊಂದಿಗೆ ಸೀರೆಯುಟ್ಟು ಮುಖದಲ್ಲಿ ಮಿಲಿಯನ್ ವ್ಯಾಟ್ ಬೆಳಕು ಸೂಸಿ ನಗುತ್ತಿದ್ದಳು. 

`ನನ್ನನ್ನು ಮರೆತೇ ಬಿಟ್ಟಿದ್ದೀಯೇನೋ ಅಂದುಕೊಂಡಿದ್ದೆ, ಪರವಾಗಿಲ್ಲ, ಇನ್ನೂ ನನ್ನ ನೆನಪಿದೆಯಲ್ಲ,` ಎಂದು ಪಾಶ್ಯಾತ್ಯ ದೇಶದಲ್ಲಿ ಭೇಟಿಯಾದಾಗ ಮಾಡುವಂತೆ ಅಮರನನ್ನು ತಬ್ಬಿಕೊಂಡು ಕೆನ್ನೆಯ ಹತ್ತಿರ ಕೆನ್ನೆ ತಂದು ಹಿಂದೆ ಸರಿದಳು. ಅವಳ ತಾಕಿಯೂ ತಾಕದ ದೇಹ, ಕೆನ್ನೆ ಮತ್ತು ಕೇಶರಾಶಿಗೆ ಒಂದು ಕ್ಷಣ ಅಮರ ಮೈಮರೆತ; ಅವಳ ಮೈಗಂಧ ಮೂಗಿನಿಂದ ಹೊರಬಿಡುವ ಮನಸ್ಸಿಲ್ಲದೇ ಉಸಿರು ಹಿಡಿದೇ ನಿಂತ. ಕಾಲೇಜಿನಲ್ಲಿ ಒಟ್ಟಿಗಿದ್ದ ಐದೂವರೆ ವರ್ಷದಲ್ಲಿ ಒಂದೇ ಒಂದು ಸಲವೂ ಇಷ್ಟು ಸನಿಹ ಅವಳ ಹತ್ತಿರ ಬಂದಿರಲಿಲ್ಲ. 

ಲಾಬಿಯಲ್ಲಿ ಮಗಳ ಜೊತೆ ಏನೋ ಮಾತಾಡುತ್ತ ಕುಳಿತ ಉಷಾ ಇದನ್ನು ಗಮನಿಸದೇ ಇರಲಿಲ್ಲ.

`ಹೇಗಿದ್ದೀಯಾ? ಯಾವಾಗ ಬಂದೆ? ನೀನು ಬರುತ್ತೀಯೋ ಇಲ್ಲವೋ ಅಂದುಕೊಂಡಿದ್ದೆ,` ಎಂದ.

`ನಾನು ಅಷ್ಟೇ. ನೀನಂತೂ ಯಾರ ಜೊತೆನಲ್ಲೂ ಸಂಪರ್ಕದಲ್ಲಿಲ್ಲ, ನೀನು ಬರುವುದಿಲ್ಲ ಎಂದೇ ತುಂಬ ಜನ ಹೇಳಿದ್ದರು. ಇನ್ ಫ್ಯಾಕ್ಟ್, ನಿನ್ನನ್ನು ನೋಡಿ ನನಗೆ ಆಶ್ಯರ್ಯವೇ ಆಯಿತು. ಏನೋ ಎಷ್ಟು ವರ್ಷವಾಯಿತೋ? ಎಷ್ಟೊಂದು ಮಾತಾಡಲು ಇದೆಯೋ?` ಎಂದಳು.

`ನೀನೊಬ್ಬಳೇ ಬಂದಿರುವೆಯೋ, ಇಲ್ಲಾ ಎಲ್ಲರೂ ಬಂದ್ದಿದ್ದೀರೋ?` ಎಂದು ಕೇಳಿದ.

`ಎಲ್ಲಾ ಬಂದ್ದಿದ್ದೇವೆ, ನೀನು?` ಎಂದಳು.

ಅದೇ ಸಮಯಕ್ಕೆ ಅವರತ್ತಲೇ ನಡೆದುಕೊಂಡು ಬರುತ್ತಿದ್ದ ಗಂಡಸು ಮತ್ತು ಹುಡುಗನನ್ನು. 

`ಇವನು ನನ್ನ ಗಂಡ ರಾಜ್ ಮತ್ತು ಒಬ್ಬನೇ ಮಗ` ಎಂದು ಪರಿಚಯಿಸಿ, ಗಂಡನಿಗೆ, `ಇವನು ನನ್ನ ಕ್ಲಾಸ್‍ಮೇಟ್` ಎಂದು ಪರಸ್ಪರ ಪರಿಚಯ ಮಾಡಿದಳು. 

ಅಮರ ಕೈಕುಲುಕಿ, `ಹಾಯ್, ನಾನು ಅಮರ ಚರಂತಿಮಠ, ನೈಸ್ ಮೀಟಿಂಗ್ ಯು, ರಾಜಶೇಖರ ಕೃಷ್ಣೇಗೌಡ,` ಎಂದ. ಅಮರನಿಗೆ ತನ್ನ ಗಂಡನ ಪೂರ್ತಿ ಹೆಸರು ನನಪಿರುವುದನ್ನು ಕೇಳಿ ಪ್ರೇಮಾ ಹುಬ್ಬೇರಿಸಿ ಅಮರನತ್ತ ನೋಡಿದಳು. 

ರಾಜಶೇಖರ ಅವಕ್ಕಾಗಿ ಒಂದು ಕ್ಷಣ ಗಲಿಬಿಲಿಗೊಂಡಂತೆ ಕಂಡ, ತಕ್ಷಣವೇ ಸಾವರಿಸಿಕೊಂಡು, `ಹಾಯ್, ನೈಸ್ ಮೀಟಿಂಗ್ ಯು, ಅಮರ್` ಎಂದ. ಅಮರ ಅದನ್ನು ಗಮನಿಸದೇ ಇರಲಿಲ್ಲ.

ಲಾಬಿಯಲ್ಲಿ ಕೂತ ಉಷಾ ಈಗ ಮೈಯೆಲ್ಲ ಕಣ್ಣಾಗಿ ರಿಸೆಪ್ಷನ್ನಿನಲ್ಲಿ ನಡೆಯುತ್ತಿರುವುದನ್ನೆಲ್ಲ ನೋಡುತ್ತಿದ್ದಳು; ತನಗಿಂತ ವಯಸ್ಸಾದ ಹೆಂಗಸೊಂದು ಸಕಲ ಅಲಂಕಾರ ಭೂಷಿತೆಯಾಗಿ ಚಿಕ್ಕ ಹುಡುಗಿಯಂತೆ ಹಿಂದಿನಿಂದ ತನ್ನ ಗಂಡನ ಕಣ್ಣು ಮುಚ್ಚುವುದು, ಇಬ್ಬರೂ ತಬ್ಬಿಕೊಳ್ಳುವುದು, ಕಿಲಕಿಲ ನಗುವುದನ್ನು ನೋಡುತ್ತಲೇ ಇದ್ದಳು. ಅಮರ ಉಷಾಳನ್ನು ಕರೆದ. ಉಷಾ ಗಂಟು ಮುಖ ಹಾಕಿಕೊಂಡು ಮಗಳನ್ನು ಕರೆದುಕೊಂಡು ರಿಸೆಪ್ಷೆನ್ನಿಗೆ ಬಂದಳು. 

ಪ್ರೇಮಾಳಿಗೆ ತನ್ನ ಹೆಂಡತಿಯ ಪರಿಚಯ ಮಾಡಿಸಿದ, `ಇವಳು ನನ್ನ ಹೆಂಡತಿ, ಉಷಾ, ಮತ್ತು ಮಗಳು ಪ್ರೇಮಾ,` ಎಂದ. ಪ್ರೇಮಾಳ ಮುಖದಲ್ಲಿ ಒಂದು ತೆಳುವಾದ ನಗು ಮೂಡಿ, ಅಮರನತ್ತ ಓರೆನೋಟ ಬೀರಿ, ಉಷಾಳ ಕೈ ಕುಲುಕಿದಳು. ಉಷಾ ಕೂಡ ಕೈಕುಲುಕಿ (ಕೃತಕವಾಗಿ) ಮುಗುಳ್ನಕ್ಕಳು. ಅವಳ ಆತ್ಮವಿಶ್ವಾಸ, ಚೆಲುವು, ನಿಲುವು, ಶೃಂಗಾರಗಳನ್ನು ನೋಡಿ ಈರ್ಷೆಯಾದರೂ ತೋರಿಸಿಕೊಳ್ಳಲಿಲ್ಲ.  

ಅಮರ ಹೆಂಡತಿಯತ್ತ ತಿರುಗಿ, `ಇವರು ರಾಜಶೇಖರ ಕೃಷ್ಣೇಗೌಡ, ಅಮೇರಿಕದಲ್ಲಿ ಡಾಕ್ಟರು, ಇವಳು ಅವರ ಹೆಂಡತಿ, ನನ್ನ ಕ್ಲಾಸ್-ಮೇಟ್,` ಎಂದ. 

ಪ್ರೇಮಾ ಕೈ ಚಾಚಿ ಉಷಾಳ ಕೈ ಕುಲುಕಿ ಹತ್ತಿರ ಬಂದು ತಬ್ಬಿಕೊಂಡು, ‘ನಾನು ಪ್ರೇಮಾ,’ ಎಂದಳು. 

ಇಬ್ಬರು `ಪ್ರೇಮಾ`ರ ನಡುವೆ ನಿಂತ ಉಷಾಳ ಮುಖದ ಬಣ್ಣವೇ ಬದಲಾಯಿತು. ಒಂದು ಕ್ಷಣ ತನ್ನ ಮಗಳು ‘ಪ್ರೇಮಾ’ನ್ನೂ ಇನ್ನೊಂದು ಕ್ಷಣ ಅಮರನ ಕ್ಲಾಸ್‍ಮೇಟ್ ‘ಪ್ರೇಮಾ’ಳನ್ನೂ ನೋಡಿದಳು. 

ನಂತರ ಏನು ಮಾಡುವುದೆಂದು ತೋಚದೇ, ತನಗಾದ ಆಘಾತವನ್ನು ಮುಚ್ಚಿಕೊಳ್ಳಲು ಕಣ್ಣು ತಿರುಗಿಸಿದಾಗ, ಅವಳ ದೃಷ್ಟಿ ಅಪ್ಪನ ಕೈಹಿಡಿದು ನಿಂತಿದ್ದ ಪ್ರೇಮಾಳ ಮಗನ ಮೇಲೆ ಬಿತ್ತು. ತನ್ನನ್ನು ಸ್ಥಿಮಿತಕ್ಕೆ ತಂದುಕೊಳ್ಳಲು, ಒಣಗಿಹೋದ ತುಟಿಯಲ್ಲೇ ಹುಡುಗನ ಕೆನ್ನೆ ಸವರಿ `ಎಷ್ಟು ಕ್ಯೂಟಾಗಿದ್ದಾನೆ ನಿಮ್ಮ ಮಗ‘, ಎಂದು, ‘ಏನು ಮರಿ ನಿನ್ನ ಹೆಸರು?` ಎಂದು ಕೇಳಿದಳು. 

ಹುಡುಗ ಹೇಳಿದ, `ಅಮರ್`.

(ಮುಗಿಯಿತು)