ಅನಿವಾಸಿಯ ನೆಚ್ಚಿನ ಓದುಗರೇ ! ಈ ವಾರದ ‘ಹಸಿರು ಉಸಿರು’ ಪ್ರವರ್ಗದ ವಿಶೇಷ ಸಾಪ್ತಾಹಿಕ ಸಂಚಿಕೆಯಲ್ಲಿ ಕಳೆದ ಎರಡು ವರ್ಷಗಳಿಂದ ಓಟಗಾರ್ತಿ, ಟೆಲ್ಫೋರ್ಡ್ ನಿವಾಸಿಯಾದ ಶಾರದ ಸಕ್ರೆಮಠ್ ಅವರು ಸೀರೆಯಲ್ಲಿ ೫ಕಿ.ಮೀ , ೧೦ ಕಿ.ಮೀ ಮ್ಯಾರಥಾನ್ ಯಶಸ್ವಿಯಾಗಿ ಪೂರ್ಣಗೊಳಿಸಿದ ಹೆಮ್ಮೆಯ ಕನ್ನಡತಿಯ ರೋಚಕ ಲೇಖನ ನಿಮ್ಮ ಮುಂದೆ. ಓದಿ ಪ್ರತಿಕ್ರಿಯಿಸಿ. -ಸವಿ.ಸಂ
ನನ್ನ ಹೆಸರು ಶಾರದ ಸಕ್ರೆಮಠ್. ಯುನೈಟೆಡ್ ಕಿಂಗ್ಡಂ ನ ಟೆಲ್ಫೋರ್ಡ್ ನಿವಾಸಿ. ಹಾಗೇರ್ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆಯಲ್ಲಿ ಸಹಾಯಕ ಲೆಕ್ಕಿಗಳಾಗಿ ಕೆಲಸ ಮಾಡುತ್ತಿದೇನೆ.
ಬಾಲ್ಯದಿಂದಲೂ ನಾನೋರ್ವ ಪರಿಸರ ಪ್ರೇಮಿಯಾಗಿದ್ದು ಧೀರ್ಘಚಾರಣ ಮಾಡುವುದೆಂದರೆ ಬಹುಉತ್ಸಾಹಿ. ಕರ್ನಾಟಕದ ಖ್ಯಾತ ಕವಿಗಳಾದ ಬೇ೦ದ್ರೆ ಅಜ್ಜರ ತವರೂರಾದ ಧಾರವಾಡ ಜಿಲ್ಲೆಯಲ್ಲಿರುವ ಕರ್ನಾಟಕ್ ಕಾಲೇಜ್ ಧಾರವಾಡ (KCD) ಒಳವಲಯದಲ್ಲಿ ಹಾಗು ಡಿ.ಸಿ ಕಾಂಪೌಂಡಿನೊಳಗೆ ಅಮ್ಮನೊಡಗೂಡಿ ಬಾಲ್ಯದಿಂದಲೂ ಧೀರ್ಘಚರಣಿಸಿದ್ದು ಇನ್ನೂ ಸವಿನೆನಪಾಗಿ ಉಳಿದಿವೆ. ಯಾವುದೇ ಸತ್ಕಾರ್ಯ ಪ್ರಾರಂಭಿಸಲು ಶ್ರೀಗಣೇಶನ ಆಶೀರ್ವಾದ ಅತ್ಯವಶ್ಯಕ ಅಲ್ಲವೇ? ಹಾಗಾಗಿ ನನ್ನ ಈ ಚಾರಣ ಪ್ರಾರಂಭಿಸಿದ್ದು KCD ವೃತ್ತದಲ್ಲಿರುವ ಗಣೇಶನ ದೇವಸ್ಥಾನದಿಂದ. ಪ್ರಾಕೃತಿಕ ಪರಿಸರದ ಆವರಣದಲ್ಲಿ ಚಾರಣಿಸುವುದರಿಂದ ದೈಹಿಕ ಚೈತನ್ಯ ಮತ್ತಷ್ಟು ಇಮ್ಮಡಿಯಾಗುವುದು.
ಚಿತ್ರ ಕೃಪೆ : ಶಾರದ ಸಕ್ರೆಮಠ್
ಮೊದಲು ಚಾರಣದಿಂದ ಪ್ರಾರಂಭಿಸಿ ನಂತರ ಓಡ ಬೇಕೆಂದು ನಿರ್ಧರಿಸಿದೆ. ಪ್ರಾರಂಭದಲ್ಲಿ ಕ್ಲಿಷ್ಟಕರವಾದರೂ ಅದನ್ನು ಸವಾಲಾಗಿ ತೆಗೆದುಕೊಂಡು ದಿಟ್ಟ ಮನಸ್ಸು ಮಾಡಿ ಪ್ರಥಮವಾಗಿ ಅಕ್ಟೋಬರ್,೨೦೧೯ ರಲ್ಲಿ ೫ಕಿ.ಮೀ ಓಟದ ಸಾಹಸಕ್ಕಿಳಿದು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದರಿಂದ ನನ್ನ ಆತ್ಮಸ್ತೈರ್ಯಮತ್ತಷ್ಟು ಹೆಚ್ಚು ಮಾಡಿತು. ತದ ನಂತರ ಕೊಂಚ ವಿಭಿನ್ನವಾಗಿ, ವಿಶೇಷವಾಗಿ ಮಾಡಬೇಕೆಂದು ಅನಿಸಿತು. ಹೇಗೆ ಎಂದು ಯೋಚನೆ ಮಾಡುವಾಗ ಹೊಳೆದದ್ದು ನನ್ನ ವಸ್ತ್ರಾಭೂಷಣ. ಓಡುವಾಗ ಸಾಮಾನ್ಯವಾಗಿ ಎಲ್ಲರೂ ಜಾಗಿಂಗ್ ವಸ್ತ್ರದಲ್ಲಿ ಓಡುತ್ತಾರೆ. ಹಾಗೆ ಮಾಡುತ್ತಿದ್ದವಳು ಸೀರೆಯಲ್ಲಿ ಮಾಡಬೇಕೆಂದು ಹೊಳಿಯಿತು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪ್ರಾಚೀನ ಕಾಲದಿಂದಲೂ ಸೀರೆ ನಾರಿಯ ಸಾಂಕೇತಿಕ ಮಹತ್ವದ ವಸ್ತ್ರವಾಗಿದ್ದು ಅದರದೆಯಾದ ವೈಶಿಷ್ಟ್ಯ ಹೊಂದಿದೆ.ಸೀರೆ ಉಡುವುದರಿಂದ ನಾರಿಯ ಸೌಂದರ್ಯ ಇಮ್ಮಡಿಯಾಗುವುದು. ಸೀರೆ ಉಡುವಾಗೆಲ್ಲ ತಾಯಿ,ತವರು ಹಾಗು ತಾಯ್ನಾಡಿನ ಹಂಬಲ ಹೆಚ್ಚಾಗುವುದು. ಸೀರೆ ಉಡುವುದೆಂದರೆ ಏನೋ ಸಂಭ್ರಮ ಸಡಗರ. ಅದರಲ್ಲೂ ಅಮ್ಮನ ಸೀರೆಯೆಂದರೆ ಏನೋ ಮನೋಲ್ಲಾಸ, ಮುದ ನೀಡುವುದು. ಅದರ ಸ್ಪರ್ಶವೇ ಅಮ್ಮ ನಮ್ಮೊಟ್ಟಿಗೆ ಇದ್ದಂತೆ. ತವರಿನ ಸವಿನೆನಪುಗಳು ಕಣ್ಣಮುಂದೆ ಬರುತ್ತವೆ. ನನಗೆ ಸೀರೆಯ ಮೇಲೆ ಅಪಾರ ಒಲವು. ಅದರಲ್ಲೂ ಇಳ್ಕಲ್ ಸೀರೆ, ರೇಷ್ಮೆ, ಮೈಸೂರು ರೇಷ್ಮೆ ಎಂದರೆ ತುಂಬ ಇಷ್ಟ.
ಚಿತ್ರ ಕೃಪೆ : ಶಾರದ ಸಕ್ರೆಮಠ್
ನಮ್ಮ ಭಾರತೀಯ ಇತಿಹಾಸದಲ್ಲಿ ಮಹಿಳೆಯರು ಸೀರೆಯುಟ್ಟು ಯುದ್ಧಭೂಮಿಯಲ್ಲಿ ಹೇಗೆ ಹೋರಾಡುಡ್ಡಿದ್ದಾರೆಂಬುದು ಅಚ್ಚರಿಗೊಳಿಸುವುದು. ಅದನ್ನು ವೀಕ್ಷಿಸುವುದೇ ರೋಚಕ. ಹಾಗಾಗಿ ನನಗೆ ಪ್ರೇರಣೆಯಾಗಿದ್ದು ಕರುನಾಡಿನ ವೀರ ಕಿತ್ತೂರು ರಾಣಿ ಚೆನ್ನಮ್ಮ. ಹಾಗಾಗಿ ಮೊದಲು ಈ ಸೀರೆಯುಟ್ಟು ಪ್ರಸಿದ್ದವಾದ ಟೆಲ್ಫರ್ಡ್ ಪಾರ್ಕ್ ಓಟದಲ್ಲಿ ಇತರೆ ಮಹಿಳೆಯರೊಂದಿಗೆ ೫ ಕಿ.ಮೀ ಓಟ ಓಡುತ್ತಿದ್ದೆ. ದಿನದಿಂದ ದಿನಕ್ಕೆ ಉತ್ಸುಹಕಳಾಗಿ ಮಾಡುವಾಗ ನನಗೆ ಓಟದ ಆಯೋಜಕರಿಂದ ಹಾಗು ಸಹಓಟಗಾರ್ತಿಯರಿಂದ ಪ್ರಶಂಸೆ ಹಾಗು ಉತ್ತೇಜನ ದೊರೆಯುತ್ತಿತ್ತು. ನನ್ನ ಬಗ್ಗೆ ನನಗೇ ಹೆಮ್ಮೆಯೆನಿಸುತ್ತಿತ್ತು. ಏಕೆಂದರೆ ನಮ್ಮ ಟೆಲ್ಫೋರ್ಡ್ ನ ಸ್ಥಳೀಯ ಪತ್ರಿಕೆಯಲ್ಲಿ ಪ್ರತಿ ವಾರ ಪ್ರಕಟವಾಗುತ್ತಿತ್ತು.ಸತತ ಪಾರ್ಕ್ ಓಟದಿಂದ ಕರುನಾಡಿನ ಕಾವಿಡ್ ರಿಲೀಫ್ ಫಂಡ್ ಗಾಗಿ ಫಂಡ್ ಗಳನ್ನೂ ಸಹ ಸಂಗ್ರಹಿಸಿದೆ. ಅಲ್ಲದೆ ನಾನು ಓಡುವಾಗ ಸ್ಪೋರ್ಟ್ಸ್ ಇಂಗ್ಲೆಂಡ್ ತಂಡದವರು ನನ್ನನ್ನು ಗುರುತಿಸಿ ‘ THE GIRL CAN CAMPAIGN’ ಎಂಬ ಕಾರ್ಯಕ್ರಮಕ್ಕೆ ಸಂದರ್ಶನ ನೀಡಲು ಹುರಿದುಂಬಿಸಿದರು. ಈ ಲಕ್ಷ್ಯಗಳು ಪೂರ್ಣಗೊಳಿಸಿ ಯುನೈಟೆಡ್ ಕಿಂಗ್ಡಮ್ ನ ಪ್ರಖ್ಯಾತ ಮ್ಯಾರಥಾನ್ ಗಾಗಿ ಓಡಲು ನನ್ನ ಹೊಂಗನಸ್ಸಾಗಿತ್ತು . ಹಾಗಾಗಿ EDINBURGH MARATHON 2020 ಗಾಗಿ ನೋಂದಾಯಿಸಿ ನನ್ನ ಓಟ ಮತ್ತಷ್ಟು ವೈಶಿಷ್ಟ್ಯ , ವೈವಿಧ್ಯಮಯವಾಗಿರಲೆಂದು ಬರಿಗಾಲಿನಲ್ಲಿ ಅಭ್ಯಾಸ ಮಾಡಲಾರಂಭಿಸಿದೆ. ಇದರಿಂದ ನನ್ನ ಆತ್ಮಸ್ತೈರ್ಯ ಪ್ರಬಲವಾಗುತ್ತ ಹೋಯಿತು.
ಆದರೆ ಕೋವಿಡ್-19 ನ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಸರ್ವರಿಗೂ ಪ್ರಭಾವ ಬೀರಿದಂತೆ ಈ ಓಟಕ್ಕೂ ಸಹ ಕಡಿವಾಣ ಹಾಕಿತು. ಹಾಗಾಗಿ ಮೇ ೨೦೨೧ಕ್ಕೆ ಮುಂದೂಡಲಾಯಿತು. ನಾನು ಕುಗ್ಗದೆ ಇನ್ನಷ್ಟು ಅಭ್ಯಾಸ ಮಾಡತೊಡಗಿದೆ. ಇದಕ್ಕೆ ನನ್ನ ಪತಿ ಹಾಗು ಪುತ್ರನಿಂದ ಬೆಂಬಲ ಪ್ರತಿ ಬಾರಿ ದೊರಕುತ್ತಿತ್ತು. ಪುತ್ರನಂತೂ ನನ್ನ ೧೦ ಕಿ.ಮೀ ಸೀರೆಯೋಟದಲ್ಲಿ ನನ್ನ ಬದಿಯಲ್ಲಿ ತನ್ನ ಸೈಕಲ್ ನಲ್ಲಿ ಚಲಿಸಿ ಉತ್ತೇಜಿಸಿದ. EDINBURGH MARATHON ಓಟವು ವಸ್ತುತಃ ಓಟವಾಗಿ ಬದಲಾಗಿ ಸಹ ಓಟಗಾರರಿಲ್ಲದೆಯೇ ಏಕಾಏಕಿ ಓಡುವುವುದೆಂದು ನಿರ್ಧರಿಸಲಾಯಿತು .
ಚಿತ್ರ ಕೃಪೆ : ಶಾರದ ಸಕ್ರೆಮಠ್
ಆ ದಿನ ನಾನು ಕರುನಾಡ ಧ್ವಜದ ಸಾಂಕೇತಿಕ ಬಣ್ಣಗಳಾದ ಹಳದಿ ಹಾಗು ಕೆಂಪು ಬಣ್ಣದ ಸೀರೆಯನ್ನುಟ್ಟು ನಮ್ಮ ಮನೆಯ ಆಸುಪಾಸಿನಲ್ಲಿರುವ ತೋಟದ ಬೀದಿಗಳಲ್ಲಿ ಓಡಲಾರಂಭಿಸಿದೆ. ಅರ್ಧ ಮ್ಯಾರಥಾನ್ ನಂತರ ತುಂತುರು ಹನಿಗಳು ಪ್ರಾರಂಭವಾಯಿತು. ಆದರೂ ಕುಗ್ಗದೆ ಮುಂದುವರಿಸಿದೆ. ಈ ಪಯಣದುದ್ದಕ್ಕೂ ಪತಿ ಹಾಗು ಪುತ್ರನ ಆಗಾಗಿನ ಆರೈಕೆಯಿಂದ ಹುರಿದುಂಬಿಸಿದರು. ೪೨.೪ ಕಿ.ಮೀ ನ ಈ ಮ್ಯಾರಥಾನ್ ಅಂತೂ ಸ್ಪೂರ್ತಿದಾಯಕವಾಗಿ ಯಶಸ್ವಿಯಾಗಿ ೫ಗಂಟೆ ೫೦ನಿಮಿಷಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಿದೆ. ನಂತರ ನಮ್ಮ ಭಾರತ ದೇಶದ ತಿರಂಗ ಧ್ವಜ ಮೇಲೆತ್ತಿಡಿದು ಛಾಯಾಚಿತ್ರದ ಭಂಗಿಗೆ ಹೆಮ್ಮೆಯಿಂದ ನಿಂತೆ. ನನ್ನ ಈ ಆತ್ಮಸ್ತೈರ್ಯ ನಮ್ಮ ಭಾರತೀಯ ಸಂಸ್ಕೃತಿಯೊಂದಿಗೆ ಮತ್ತಷ್ಟು ಸಾಹಸಗಳೊಂದಿಗೆ ಮುಗಿಲೇರುವ ಆಸೆ !!
ಸ್ನೇಹಿತರೆ ! ನಮ್ಮ ಸಂಸ್ಕೃತಿ ನಮ್ಮ ಹಿರಿಮೆ ನಮ್ಮ ಅಸ್ತಿತ್ವ . ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ! ಜೈ ಕರ್ನಾಟಕ ಜೈ ಹಿಂದ್ .
–ಶಾರದ ಸಕ್ರೆಮಠ್
ಕವಿತೆಯೊಂದು ಬೇಕಿದೆ ಎನ್ನುವ ಸಾಲೇ ಎಷ್ಟು ಲಯಾತ್ಮಕವಾಗಿದೆ. ಭಾವಗೀತೆಯ ಆರಂಭದ ಸಾಲಿನಂತಿದೆ. ಮೊದಲ ನುಡಿಯಲ್ಲಿ ಬಿಸ್ಲು ಮಳೆಯ ವಿರೋಧಾಭಾಸ, ಎರಡನೇ ನುಡಿಯಲ್ಲಿ ಪಯಣದ ವಿರೋಧಾಭಾಸ, ಮೂರನೇ ನುಡಿಯಲ್ಲಿ…
ಜೀವನದ ವಿರೋಧಾಭಾಸಗಳನ್ನು ಕವಿತೆಯ ಚೌಕಟ್ಟಿನಲ್ಲಿ ಹಿಡಿದಿರುವ ಸಾರ್ಥಕ ಪ್ರಯತ್ನ. – ರಾಂ
ವಾವ್ ಕವಿತೆಯೊಂದು ಬೇಕಿದೆ ಅನ್ನುವ ಕವಿತೆ ತುಂಬ ಚೆನ್ನಾಗಿದೆ ತಮ್ಮ ಕವಿತೆಗೆ ಅಭಿನಂದನೆಗಳು ಸರ್ ಎನ್ ಕೆ ಇಬ್ಬನಿ
ಸಂಪಾದಕೀಯವನ್ನು ಬರೆದವರು ಪ್ರಸಾದ್ ಅವರು, ನಾನಲ್ಲ! ದೇಸಾಯಿ.
ಹೂವಿನಿಂದ ನಾರೂ ಸ್ವರ್ಗ ಸೇರಿದ ಹಾಗೆ , ಡಾ. ದೇಸಾಯಿಯವರ ಅರ್ಥಗರ್ಭಿತ, ಉತ್ತಮ ಸಂಪಾದಕೀಯದಿಂದ ನನ್ನ ಕವಿತೆಗೆ ಹೊಸ ಮೆರುಗು, ಬಹು ಅರ್ಥ ಬಂದಂತಿದೆ. ಧನ್ಯವಾದಗಳು ಸಂಪಾದಕರಿಗೆ.…
ಬದುಕಿನ ಪಯಣದಲ್ಲಿ ಕೆಲವೊಮ್ಮೆ ಬೇಕು ಬೇಡಗಳ ಹಂಗಿರದೇ, ಅರಿವು ಪರಿವೆಗಳ ಮುಲಾಜು ನೋಡದೇ, ಕೆಲವು ಘಟನಾವಳಿಗಳು ಧೊಪ್ಪೆಂದು ನಮ್ಮನ್ನು ಎದುರಾಗಿ ನಮ್ಮ ದೇಹ, ಮನಸ್ಸು ಎಲ್ಲವನ್ನೂ ಯಾವ ಮಾಪನವೂ ಅಳತೆ ಮಾಡಲಾಗದಷ್ಟು ನಡುಗಿಸಿ ಬಿಡುತ್ತವೆ. ತೀವ್ರತೆಗನುಸಾರವಾಗಿ ಅಂತಹ ಘಟನೆಗಳು ಹಲವಾರು ವರುಷಗಳು ಮನಸ್ಸಲ್ಲಿ ಮನೆಮಾಡಿ , ಒಮ್ಮೆಮ್ಮೆ ಬೇಡದ ಕನಸಾಗಿ ನಿದ್ದೆಯಿಂದ ಎಬ್ಬಿಸುವಷ್ಟು ಶಕ್ತಿಶಾಲಿಯಾಗಿದ್ದರೆ, ಇನ್ನು ಕೆಲವೊಮ್ಮೆ ಅಂತಹ ಪರಿಸ್ಥಿತಿಯಿಂದ ಹೊರಬಂದು ಮರುಜನ್ಮ ಪಡೆದಂತಾಯಿತು ಎಂದೆನಿಸಿ ನಿಟ್ಟುಸಿರು ಬರಿಸುತ್ತವೆ. ಇಂತಹ ಘಟನಾವಳಿಗಳಲ್ಲಿ ಒಂದು, 2006 ನೇ ಇಸವಿಯಲ್ಲಿ ಬೇಸಿಗೆಗಾಲದ ಒಂದು ವಾರಾಂತ್ಯದಲ್ಲಿ ನಾನು ಮತ್ತು ನನ್ನ ಏಳು ಜನ ಸ್ನೇಹಿತರು ಕೈಗೊಂಡ ಚಾರಣ.
“ಗ್ರೀನ್ ರೂಟ್” ಎಂಬುದು ಬೆಂಗಳೂರು – ಮಂಗಳೂರು ರೈಲ್ವೆ ಮಾರ್ಗದ, ಪಶ್ಚಿಮ ಘಟ್ಟಗಳಲ್ಲಿ ಹರಿಯುವ ಒಂದು ಭಾಗ. ಈ ಭಾಗವು ಶಕ್ಲೇಶಪುರದಿಂದ ಹಿಡಿದು ಕುಕ್ಕೆ ಸುಬ್ರಮಣ್ಯದ ತನಕ ಸುಮಾರು 52 KM ನಷ್ಟು ಉದ್ದವಾಗಿದೆ. ಪಶ್ಚಿಮ ಘಟ್ಟಗಳ ಪ್ರಕೃತಿಯ ವಿಹಂಗಮ ನೋಟಗಳಿಗೆ ಸಾಕ್ಷಿಯಾಗಿರುವ ಈ “ಗ್ರೀನ್ ರೂಟ್”, ಸುಮಾರು 52 ಸುರಂಗಗಳನ್ನು ಮತ್ತು 109 ಸೇತುವೆಗಳನ್ನು ಒಳಗೊಂಡಿದೆ. ಪರ್ವತಗಳ ಹೊಟ್ಟೆಯನ್ನು ಸೀಳಿ ನಿರ್ಮಿಸಿರುವ ಸುರಂಗಗಳು ಸುಮಾರು 200 ರಿಂದ 750 ಮೀಟರ್ ಉದ್ದವಾಗಿವೆ. ಪರ್ವತಗಳನ್ನು ಜೋಡಿಸುವ ಕೆಲವು ಸೇತುವೆಗಳು ನೆಲದಿಂದ ಸುಮಾರು 200 ಮೀಟರ್ ನಷ್ಟು ಎತ್ತರದಲ್ಲಿದ್ದು, ಇಣುಕಿ ಕೆಳಗೆ ನೋಡುವವರ ತಲೆ ಸುತ್ತು ಬರಿಸುತ್ತವೆ. 2006 ರಲ್ಲಿ ಈ ರೈಲ್ವೇ ಮಾರ್ಗವನ್ನು ಬ್ರಾಡ್ ಗೇಜ್ ಗೆ ಪರಿವರ್ತಿಸುವ ಸಲುವಾಗಿ ಜನ ಸಾಗಣೆ ರೈಲುಗಳನ್ನು ನಿಲ್ಲಿಸಲಾಗಿತ್ತು ಮತ್ತು ಕೇವಲ ಸರಕು ಸಾಗಿಸುವ ರೈಲುಗಳು ಈ ಮಾರ್ಗವಾಗಿ ಚಲಿಸುತ್ತಿದ್ದವು. ಈ ಕಾರಣದಿಂದ, ವಿಹಂಗಮ ನೋಟಗಳಿಗೆ ಪ್ರಸಿದ್ಧಿಯಾಗಿದ್ದ ಈ ಮಾರ್ಗ ಅನೇಕ ಚಾರಣಿಕರನ್ನು ಆಕರ್ಷಿಸುತ್ತಿತ್ತು.
ಆಗತಾನೆ ಐ ಟಿ ಕಂಪೆನಿಯೊಂದರಲ್ಲಿ ಕೆಲಸ ಪ್ರಾರಂಭಿಸಿದ್ದ ನಾನು ಮತ್ತು ನನ್ನ ಏಳು ಜನ ಸ್ನೇಹಿತರು , ಗ್ರೀನ್ ರೂಟ್ ಅನ್ನು ಚಾರಣ ಮಾಡುವ ಸಾಹಸಕ್ಕೆ ಯೋಜನೆ ಸಿದ್ಧಮಾಡಿದೆವು. ಅಂದು ಶನಿವಾರ ಬೆಳೆಗ್ಗೆ ಬೆಂಗಳೂರಿನಿಂದ ಶಕ್ಲೇಶಪುರಕ್ಕೆ ಬಸ್ಸಿನಲ್ಲಿ ಪ್ರಯಾಣ ಮಾಡಿ ನಮ್ಮ ಚಾರಣವನ್ನು ರೈಲ್ವೆ ನಿಲ್ದಾಣದ ತುಸುದೂರದಲ್ಲಿರುವ ಒಂದು ಜಾಗದಿಂದ ಪ್ರಾರಂಭಿಸಿದೆವು. ಈ ಚಾರಣ ಕೇವಲ ಬೆಟ್ಟ ಗುಡ್ಡಗಳನ್ನು ಹತ್ತುವುದಾಗಿರಲಿಲ್ಲ ಬದಲಾಗಿ ರೈಲ್ವೆ ಮಾರ್ಗದ ಮೇಲೆ ನಡೆದುಕೊಂಡು ಸುರಂಗ ಮತ್ತು ಸೇತುವೆಗಳನ್ನು ದಾಟಿ ನಮ್ಮ ಗುರಿಯನ್ನು ಸೇರುವುದಾಗಿತ್ತು. ೫೨ ಕಿಲೋಮೀಟರ್ ದೂರವನ್ನು ಕೇವಲ ಒಂದೇ ದಿನದಲ್ಲಿ ಮುಗಿಸುವುದು ಸಾಧ್ಯವಿಲ್ಲವಾಗಿದ್ದರಿಂದ , ಸುಮಾರು ೩೦ km ದೂರದಲ್ಲಿರುವ ಇಡಕುಮುರಿ ನಿಲ್ದಾಣದ ವರೆಗಿನ ದಾರಿಯನ್ನು ಶನಿವಾರ ಸಂಜೆಯೊಳಗೆ ಮುಗಿಸಿ, ಅಲ್ಲೇ ರೈಲ್ವೆ ನಿಲ್ದಾಣದಲ್ಲಿ ರಾತ್ರಿ ತಂಗಿದ್ದು , ಬೆಳೆಗ್ಗೆ ಮತ್ತೆ ಕುಕ್ಕೆ ಸುಬ್ರಮಣ್ಯದ ಕಡೆಗೆ ಹೊರಡುವ ಆಲೋಚನೆಯಿತ್ತು.
ಬೇಸಿಗೆಯಾದರೂ ಪರ್ವತಶ್ರೇಣಿಯ ರೂಪರಾಶಿಗೆ ಕುಂದುಂಟಾಗದಿರಲೇನೋ ಎಂಬಂತೆ ಸೂರ್ಯನು ಕೇವಲ ತೆಳುಬಿಸಿಲನ್ನು ಸೂಸಿದ್ದು , ಮಳೆ ಮೋಡಗಳ ಯಾವುದೇ ಸುಳಿವು ಇರಲಿಲ್ಲ. ನಿಸರ್ಗದ ಸೌಂದರ್ಯವನ್ನು ಆಸ್ವಾದಿಸಲು ವಾತಾವರಣ ವಿದ್ಯುಕ್ತವಾಗಿತ್ತು. ಈ ಹಾದಿಯಲ್ಲಿ ಕೆಲವು ಮೈಲು ದೂರ ನಡೆದಾಗ, ನಮ್ಮ ಸುತ್ತಲೂ ಅವರಿಸಿದ್ದುದೊಂದೇ , ಅದು ಅಘಾದ ಪರ್ವತ ಶ್ರೇಣಿಗಳನ್ನು ಹೊದಿಸಿದ್ದ ಹಸಿರು. ನಾವೆಲ್ಲರೂ ಮಾತನಾಡುವುದನ್ನು ನಿಲ್ಲಿಸಿದರೆ ಸಾಕು ನಮ್ಮನ್ನಾವರಿಸುತ್ತಿದ್ದುದು ಆ ವನಸಿರಿಯ ಪ್ರಶಾಂತತೆ , ಪಕ್ಷಿಗಳ ಟುವಿ ಟುವಿ , ಹರಿಯುತ್ತಿದ್ದ ಝರಿಗಳ ನೀರಿನ ಜುಳು ಜುಳು ಸದ್ದು. ಸ್ನೇಹಿತರಿಂದ ದೂರ ಹೋಗಿ , ಯಾರು ಇಲ್ಲದ ಒಂದು ಸ್ಥಳದಲ್ಲಿ ಕೇವಲ ನಿಸರ್ಗದ ಸಂಗೀತವನ್ನು ಆಲಿಸುತ್ತ ಕಣ್ಣು ಮುಚ್ಚಿ ತುಸು ಹೊತ್ತು ಕುಳಿತು , ‘ಜೀವನ ಚೈತ್ರ’ ಚಿತ್ರದಲ್ಲಿ ಡಾ|| ರಾಜ್ ಕುಮಾರ್ ರ ವರಂತೆ ‘ನಾದಮಯ ಈ ಲೋಕವೆಲ್ಲ ನಾದಮಯ’ ಎಂಬ ಹಾಡನ್ನು ಹಾಡಲೇನು ಎಂಬ ಆಸೆ ಹುಟ್ಟುತ್ತಿದ್ದರೂ , ಅದು ಕೂಡುವುದಕ್ಕೂ ಹಾಡುವುದಕ್ಕೂ ಸಮಯವಾಗಿರಲಿಲ್ಲ. ಸ್ನೇಹಿತರೊಂದಿಗೆ ಹರಟುತ್ತಾ ನಡೆಯುತ್ತಾ ಸಾಗಿದೆವು .
ಕಗ್ಗತ್ತಲೆಯ ಸುರಂಗಗಳು
ಸುರಂಗವನ್ನು ಹೊಕ್ಕುವ ಮೊದಲು ಮೈಯಲ್ಲ ಕಣ್ಣಾಗಿಸಿಕೊಂಡು ಎಚ್ಚರವಾಗಿರಲೇಬೇಕಾಗಿದ್ದ ಒಂದು ವಿಷಯವೆಂದರೆ ಅದೇ ಸಮಯಕ್ಕೆ ಬರಬಹುದಾಗಿದ್ದ ಸರಕು ಸಾಗಾಣಿ ರೈಲುಗಳು. ನಿಶ್ಶಭ್ದವಾಗಿದ್ದ ಕಾಡಿನಲ್ಲಿ ರೈಲು ಬರುತ್ತಿರುವುದು ಹಲವು ಕಿಲೋಮೀಟರ್ ಗಳ ಮುಂಚೆಯೇ ನಮಗೆ ತಿಳಿಯುತ್ತಿತ್ತು. ಅಷ್ಟಾಗಿಯೂ ನಮ್ಮ ತಂಡದಲ್ಲಿನ ಕೆಲವರು ವಿಶ್ವೇಶ್ವರಯ್ಯನವರ ಮೊಮ್ಮಕ್ಕಳೇನೋ ಎಂಬಂತೆ ರೈಲಿನ ಕಂಬಿಗಳಿಗೆ ಕಿವಿಕೊಟ್ಟು , ‘ಹಾ ನಾವೆಲ್ಲಾ ಈಗ ಒಳಗೆ ಹೋಗಬಹುದು’ ಎಂದು ವಿಶ್ವಾಸದಿಂದ ಹೇಳುತ್ತಿದ್ದರು. ಅವರ ಮಾತುಗಳಮೇಲೆ ನಮಗೆ ವಿಶ್ವಾಸವಿರದಿದ್ದಾರೂ ಬೇರೆ ದಾರಿಯಿಲ್ಲದೆ ಒಳ ಹೊಕ್ಕುತ್ತಿದ್ದೆವು.
ಪ್ರತೀ ಸುರಂಗವೂ ನಮ್ಮ ಬಾಲ್ಯದ ಸಿಂಹದ ಕಥೆಗಳನ್ನು ನೆನಪಿಸುವ ಕಗ್ಗತ್ತಲಿನ ಗುಹೆಯೇ ಆಗಿತ್ತು. ಆ ಕಗ್ಗತ್ತಲಲ್ಲಿ ವಿಷಸರ್ಪವೊಂದು ಕಾಲಡಿಯಲ್ಲಿ ಹರಿದಾಡಿದರೇನು ಗತಿ ? ಆ ಕಾನನದ ನಡುವೆ ಯಾವುದೋ ಕಾಡು ಮೃಗವೊಂದು ತನ್ನ ಹಸಿವೆ ನೀಗಿಸಲು ಹೊಂಚುಹಾಕಿ ಕೂತಿದ್ದರೇನು ಗತಿ ಎಂಬ ಭಯದಲ್ಲೇ , ನೋಕಿಯಾ ಫೋನಿನ ಟಾರ್ಚ್ ಬೆಳಗಿಸಿಕೊಂಡು , ಆ ಭಯವನ್ನು ಮರೆಮಾಚಲು ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ , ನಗು ಬರದಿದ್ದರೂ, ಪ್ರತಿದ್ವನಿಗೆ ಸ್ಪಂದಿಸಿ ಗಹಗಹಿಸಿ ನಗುತ್ತಾ, ಸುರಂಗಗಳನ್ನು ದಾಟುತ್ತಿದ್ದೆವು. ಪ್ರತೀ ಸುರಂಗವನ್ನು ದಾಟಿದಾಗ, ಅಲ್ಲಿಯವರೆಗೂ ರಕ್ತ ನಾಳಗಳಲ್ಲಿ ನುಗ್ಗಾಡಿದ ಅಡ್ರಿನಲಿನ್ ನ ನಶೆಯ ಜೊತೆಗೆ ಅದೇನೋ ಅಶ್ವಮೇಧಯಾಗದಲ್ಲಿ ಒಂದೊಂದು ರಾಜ್ಯವನ್ನು ಗೆದ್ದು ಬಂದಷ್ಟು ಖುಷಿಯಾಗುತ್ತಿತ್ತು.
ರೋಮಾಂಚಕಾರಿ ಸೇತುವೆಗಳು
ಸುಮಾರು ೨೦೦ ಮೀಟರ್ ಎತ್ತರದಲ್ಲಿ ಸೇತುವೆಗಳಿದ್ದು , ಕಣಿವೆಯಲ್ಲಿ ಹರಿಯುವ ಝರಿಗಳು , ಸುತ್ತಲಿನ ಹಸಿರು ರಾಶಿ ಎಲ್ಲವೂ ಬೆಳಕಿನಾಟದಲ್ಲಿ ಜೊತೆಗೂಡಿ, ಸೇತುವೆಯಮೇಲೆ ನಡೆದಾಡುವವರಿಗೆ ಒಂದು ಮನಮೋಹಕ ದೃಶ್ಯವನ್ನು ಕಣ್ಣಮುಂದೆ ತಂದಿಡುತ್ತಿದ್ದವು . ಈಗಿನಂತೆ ನನ್ನ ಬಳಿ ಏನಾದರೂ ಡಿಜಿಟಲ್ ಕ್ಯಾಮರಾ ಅಥವಾ ಸ್ಮಾರ್ಟ್ ಫೋನ್ ಇದ್ದಿದ್ದರೆ , ಅದೆಷ್ಟು ಸಾವಿರ ಚಿತ್ರಗಳನ್ನು ತೆಗೆಯುತಿದ್ದೆನೋ ಗೊತ್ತಿಲ್ಲ. ಕೆಲವು ಸೇತುವೆಗಳ ಮೇಲೆ ನಡೆಯುವಾಗ ಮದ್ಯದಲ್ಲಿ ಉದ್ದನೆಯ ಕಿಂಡಿಗಳಿದ್ದು, ಯಾರಾದರೂ ಅಕ್ರೋಫೋಬಿಕ್ ಆಗಿದ್ದಲ್ಲಿ , ತಲೆಸುತ್ತಿ ಬೀಳುತ್ತಿದ್ದರೇನೋ. ನಮ್ಮ ಗುಂಪಿನಲ್ಲಿ ಯಾರೂ ಹಾಗಿರಲಿಲ್ಲ. ಎಲ್ಲಿಲ್ಲದ ಶೌರ್ಯ ಸಾಬೀತು ಮಾಡಲು ಹಳಿಗಳ ಮೇಲೆ ಓಡುವವರೇ ಹೆಚ್ಚು.
ಹೇಗೋ ನಾವು ಬರುವ ರೈಲುಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ಒಂದು ಸೇತುವೆಯ ಮೇಲೆ ನಾವಿರುವಾಗ ಒಂದು ರೈಲು ಅದಾವುದೋ ಮಾಯೆಯಲ್ಲಿ ನುಸುಳಿ ಬಂದೇ ಬಿಟ್ಟಿತ್ತು. ಅದು ದೂರದಲ್ಲಿರುವಾಗಲೇ ಎಲ್ಲರೂ ಓಡಿ , ಸೇತುವೆಗೆ ಆಂಟಿ ಕೊಂಡಿರುವ ಬಾಲ್ಕನಿಯಂತೆ ನೇತಾಡುತ್ತಿರುವ, ನ್ಯಾಯಾಲಯದ ಕಟಕಟೆಯಂತಿರುವ, ತುಕ್ಕುಹಿಡಿದ ಚೌಕಗಳೆರಡಲ್ಲಿ ನಿಂತೆವು. ನಮ್ಮಿಂದ ಕೇವಲ ಎರಡರಿಂದ ಮೂರು ಮೀಟರ್ ಅಂತರದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಭೋಗಿಗಳಿದ್ದ ರೈಲು ಹರಿದು ಹೋದಾಗ, ನಾವಿದ್ದ ಚೌಕ ಗಡ ಗಡ ನಡುಗಿ ಇನ್ನೇನು ಕೆಳಗೆ ಮುರಿದು ಬೀಳುವುದೇನೋ ಎನ್ನಿಸುತ್ತಿತ್ತು.
ಹೊಟ್ಟೆ ಹಸಿದಾಗ ‘ಎಡಕುಮರಿ’ ಯಲ್ಲಿದ್ದೆವು
ಹೀಗೆ ಸುರಂಗಗಳನ್ನು ಮತ್ತು ಸೇತುವೆಗನ್ನು ದಾಟುತ್ತಾ ಸಂಜೆ ಆರುಘಂಟೆಯ ಹೊತ್ತಿಗಾಗಲೇ ಎಡಕುಮರಿ ರೈಲ್ವೆ ನಿಲ್ದಾಣಕ್ಕೆ ಬಂದು ಸೇರಿದ್ದೆವು. ನಮ್ಮ ಬ್ಯಾಕ್ ಪ್ಯಾಕ್ ನಲ್ಲಿ ಇದ್ದ ಎಲ್ಲ ತಿನಿಸುಗಳೂ ಖಾಲಿಯಾಗಿದ್ದವು. ಬಾಟಲಿಯೊಳಗಿನ ನೀರು ಮುಗಿದು ಹೋಗಿತ್ತು. ಯಾವುದೇ ರೈಲ್ವೆ ನಿಲ್ದಾಣದಂತೆ ಈ ನಿಲ್ದಾಣದಲ್ಲಿಯೂ ಕುಡಿಯಲು ನೀರು ಮತ್ತು ಚಿಕ್ಕದೊಂದು ಕ್ಯಾಂಟೀನು ಇರಬಹುದೇನೋ ಎಂಬ ಆಶಾವಾದ , ಇಲ್ಲಿಗೆ ಬಂದ ನಂತರ ಹತಾಶವಾಗಿತ್ತು. ಹೀಗಾಗಿ ನಾವು ಹಸಿವಿನಲ್ಲೇ ಆ ರಾತ್ರಿ ನಿದ್ರೆಗೆ ಜಾರಬೇಕಿತ್ತು. ಹಸಿವಿನಿಂದ ನಮ್ಮ ಗಮನವನ್ನು ಬೇರೆಕಡೆಗೆ ಹರಿಸಲು ಪ್ರಯತ್ನಿಸುತ್ತಿರುವಾಗ ನಮ್ಮ ಸಹಾಯಕ್ಕೆ ಬಂದಿದ್ದು ಗುಯ್ ಗುಟ್ಟುತ್ತಿದ್ದ ಸೊಳ್ಳೆಗಳು. ಹಸಿವಿಗಿಂತಾ ಸೊಳ್ಳೆಗಳ ಪ್ರಭಾವ ಹೆಚ್ಚಾಗಿ , ಅವುಗಳಿಗಿಂತಲೂ ೩೦ ಕಿಲೋಮೀಟರ್ ನಡೆದ ದೇಹದ ದಣಿವು ಹೆಚ್ಚಾಗಿ ಹಾಗೆಯೇ ನಿದ್ದೆಗೆ ಜಾರಿದೆವು.
ಬೆಳೆಗ್ಗೆ ಐದು ಘಂಟೆಗೆ ಎದ್ದವರೇ ಮತ್ತೆ ನಮ್ಮ ಚಾರಣವನ್ನು ಪ್ರಾರಂಭ ಮಾಡುವಾಗ ಕೆಲವರು, ಮರಳಿ ಹೋಗೋಣವೆಂದು ಕೇಳಿಕೊಂಡರು. ಮತ್ತೆ ಕೆಲವರು ಬಂದ ಪ್ರಯಾಣ ಪೂರ್ತಿ ಮಾಡೋಣ ಎಂದು ಹೇಳಿದಾಗ, ಮುಂದಿಟ್ಟ ಹೆಜ್ಜೆ ಹಿಂದಿಡಬಾರದೆಂದು ಮತ್ತೆ ನಡೆದೇ ಸಾಗಿದೆವು.
ಅಡ್ಡದಾರಿ ಹಿಡಿದಾಗ
ಎಡಕುಮೇರಿ ಇಂದ ಸುಮಾರು ಐದು ಕಿಲೋಮೀಟರುಗಳ ವರೆಗೂ ನಡೆದಾಗ, ಕೆಲವರಿಗೆ ಹಸಿವು ಮತ್ತು ಬಾಯಾರಿಕೆಯಿಂದಾಗಿ ದಣಿವು ಹೆಚ್ಚಾಗತೊಡಗಿತು. ಮುಂದೆಯೂ ಹೋಗಲಾರದೆ, ಹಿಂದೆಯೂ ಹೋಗಲಾಗದೆ, ದಟ್ಟ ಅರಣ್ಯದ ಮಡುವಿನಲ್ಲಿ ಕಂಗೆಟ್ಟಿರುವಾಗ, ಒಂದು ಸೇತುವೆಯ ಕಟ್ಟೆಯ ಮೇಲೆ ಯಾರೂ ಮಾತನಾಡದೇ ಹಾಗೆಯೇ ಕುಳಿತಿದ್ದೆವು. ನಮ್ಮಲ್ಲೊಬ್ಬ ಸೇತುವೆ ಕಟ್ಟೆಯ ಮೇಲೆ ನಿಂತುಕೊಂಡು ಬಲಕ್ಕೆ ತಿರುಗಿ ನೋಡಿದ, ಅಲ್ಲೇ ಹತ್ತಿರದಲ್ಲೇ ಒಂದು ಹೆದ್ದಾರಿ ಇರುವಂತೆ ತೋರಿತು. ಅದರ ಪಕ್ಕದಲ್ಲೇ ಒಂದು ಸಣ್ಣ ಝರಿ ಇದ್ದು ಅದನ್ನು ದಾಟಿದೊಡನೆ ನಾವು ಹೆದ್ದಾರಿ ಸೇರಿ ಅಲ್ಲಿ ಯಾವುದಾದರೂ ವಾಹನವನ್ನು ಹಿಡಿದು ಕುಕ್ಕೆ ಸುಬ್ರಮಣ್ಯಕ್ಕೆ ಹೋಗಬಹುದೆಂದು ಪ್ರಸ್ತಾವ ಮಾಡಿದ. ಅನೇಕರು ಇಲ್ಲಗಳೆದರು . ತಡವಾದರೂ ಸರಿ ಗೊತ್ತಿರುವ ದಾರಿಯಲ್ಲಿ ಹೋಗೋಣ ಎಂದು ಕೆಲವರು ಹೇಳಿದರು. ಆದರೆ ಗೆದ್ದದ್ದು ಮಾತ್ರ ಅಡ್ಡ ದಾರಿ ಹಿಡಿಯುವ ಯೋಚನೆ.
ನಾವು ಇದ್ದದ್ದು ಒಂದು ಪರ್ವತ ಶ್ರೇಣಿಯ ಮೇಲೆ. ಅಲ್ಲಿಂದ ಕೆಳಗೆ ಏನನ್ನು ನೋಡಿದರೂ ಚಿಕ್ಕದಾಗಿ ಇಲ್ಲೇ ಹತ್ತಿರದಲ್ಲೇ ಇದೆ ಏನೋ ಎಂದು ತೋರುತ್ತದೆ. ಇದು ಒಂದು ರೀತಿ ಬ್ರಿಟನ್ನಿನಲ್ಲಿ ಹೊರಗೆ ಕಾಣಸಿಗುವ ಬಿಸಿಲಿದ್ದಂತೆ. ತುಂಬಾ ಪ್ರಕಾಶಮಾನವಾಗಿದೆ ಎಂದು ಜಾಕೆಟ್ ಬಿಟ್ಟು ಹೊರಗೆ ಕಾಲಿಟ್ಟಿರೋ ಛಳಿಯಲ್ಲಿ ಒದ್ದಾಡುವುದು ಕಟ್ಟಿಟ್ಟ ಬುತ್ತಿ. ಅದಲ್ಲದೆ ನಾವಿದ್ದ ಸ್ಥಳದಿಂದ ಕೆಳಗಿಳಿದು ಹೋಗುವ ಚಿಕ್ಕ ಮಾರ್ಗವನ್ನು ನಾವು ಕಾಣಬಹುದಾಗಿತ್ತು. ಆದರೆ ಕಾಡಿನ ನಡುವಿನಲ್ಲಿ ಇಳಿದಾಗ ಇಂತಹ ಚಿಕ್ಕ ಮಾರ್ಗಗಳು ಕಣ್ಮರೆಯಾಗುತ್ತವೆ. ನಮಗೂ ಆದದ್ದು ಅದೇ.
ಸೇತುವೆಯಿಂದ ಕೆಳಗಿಳಿಯುವ ದಾರಿ ಎಷ್ಟು ಕಷ್ಟದಾಯಕವಾಗಿತ್ತೆಂದರೆ, ಏನಾದರೂ ತೊಂದರೆಯಾದರೆ ಮತ್ತೆ ಮೇಲೆ ಹತ್ತಿ ವಾಪಾಸು ಬರುವುದು ಸಾಧ್ಯವೇ ಇರಲಿಲ್ಲ. ನಾವು ಹೊರಟಿದ್ದುದು ಒಂದು ರೀತಿ ಒನ್ ವೇ ದಾರಿ. ಸೇರಿದರೆ ಮನೆ ಇಲ್ಲದಿದ್ದರೆ ಯಾವೊದೋ ಒಂದು ಕಾಡು ಮೃಗದ ಗುಹೆ. ನಾವು ಸ್ವಲ್ಪ ಕೆಳಗಿಳಿದಾಗ ಸುತ್ತಾಲೂ ದಟ್ಟಾದಾದ ಮರಗಳಿದ್ದಿದ್ದರಿಂದ, ನಾವು ಹೋಗಬೇಕಿದ್ದ ದಾರಿ ಕಾಣಿಸದೇ ಹೋಯಿತು. ಎಲ್ಲರ ಮನದಲ್ಲೂ ಭಯ ಮನೆ ಮಾಡ ತೊಡಗಿತು. ಅಷ್ಟರಲ್ಲಿ ಒಬ್ಭ ಕಾಡಾನೆಯ ಹಸಿ ಲದ್ದಿಯನ್ನು ಕಂಡೆನೆಂದಾಗ ಎಲ್ಲರ ಎದೆಯೂ ಧಸ್ಸೆಂದಿತ್ತು. ನಮ್ಮೆಲ್ಲರ ಹೆಸರು ಹಾಯ್ ಬೆಂಗಳೂರು ಮತ್ತು ಟಿವಿ ಮಾದ್ಯಮಗಳಲ್ಲಿ ಕಾಡಿನಲ್ಲಿ ಕಾಣೆಯಾದವರು ಎಂದು ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದೆನ್ನಿಸತೊಡಗಿತು.ಈ ಕಾರಣದಿಂದಲಾದರೂ ನಾವು ಪ್ರಸಿದ್ಧರಾಗಬಹುದು ಎಂದು ತಮಾಷೆ ಮಾಡುತ್ತಲೇ ದಾರಿಯನ್ನು ಹುಡುಕತೊಡಗಿದೆವು. ಸುಮಾರು ಒಂದು ಎರೆಡು ಘಂಟೆಗಳ ಕಾಲ ಹುಡುಕಿದಾಗ, ಮತ್ತೆ ನಾವು ಕಂಡ ನೀರಿನ ಝರಿ ಕಾಣಿಸಿತು. ನಾವು ಸರ ಸರನೆ ಆ ನೀರಿನ ಝರಿಯ ಕಡೆಗೆ ಕೆಳಗಿಳಿದು ನಡೆಯತೊಡಗಿದೆವು. ನಾವು ನಡೆದ ದಾರಿ , ಮಳೆಗಾಲದಲ್ಲಿ ಧುಮ್ಮಿಕ್ಕುತ್ತಿದ್ದ ಒಂದು ಝರಿ ಎಂದು ನಮಗೆ ಮನವರಿಕೆಯಾಯಿತು. ಕೆಳಗೆ ಇಳಿದಾಗ ನಾವು ಕಂಡ ಝರಿ , ಝರಿಯಾಗಿರದೆ ಹರಿಯುವ ನದಿಯಾಗಿತ್ತು.
ನದಿ ದಾಟಿಸಿದ ಮಾನವ ಸರಪಳಿ
ನದಿಯನ್ನು ದಾಟದೇ ಬೇರೆ ದಾರಿಯಿರಲಿಲ್ಲ. ಆದರೆ ನದಿಯ ಆಳ ನಮಗೆ ತಿಳಿದಿರಲಿಲ್ಲ. ಹಲವರಿಗೆ ನದಿಯಲ್ಲಿ ಈಜಲೂ ಬರುತ್ತಿರಲಿಲ್ಲ. ಹಾಗೆಯೇ ನದಿಯ ಮಗ್ಗುಲು ಹಿಡಿದು ಬೇರೆ ದಾರಿಯೇನಾದರೂ ಸಿಗುವುದೇನೋ ಎಂದು ನಡೆಯುತ್ತಾ ಸಾಗಿದೆವು . ಸುಮಾರು ದೂರ ನಡೆದಾಗ ನಮಗೆ ಎದುರು ದಡದಲ್ಲಿ ಕಂಡದ್ದು ಒಂದು ದೇವಸ್ಥಾನ. ಆ ದಡದಲ್ಲಿದ್ದ ಕೆಲವರಿಗೆ ಕೈಮಾಡಿ ಮಾತಾಡಿಸಿದಾಗ, ಅವರು ದಾಟಲು ಯೋಗ್ಯವಾಗಿರುವ ಒಂದು ಜಾಗವನ್ನು ಸನ್ನೆ ಮಾಡಿ ತೋರಿಸಿದರು. ಅಷ್ಟೇನೂ ಅಗಲವಿಲ್ಲದ ನದಿಯಾಗಿದ್ದರೂ ಅದು ಹರಿಯುತಿದ್ದ ರಭಸ ತೀವ್ರವಾಗಿತ್ತು. ಆ ವ್ಯಕ್ತಿಗಳು ಉದ್ದನೆಯ ಮರದ ಕೋಲುಗಳನ್ನು ನಮ್ಮ ಕಡೆಗೆ ಎಸೆಯಲು ಪ್ರಯತ್ನಿಸಿದರು . ಆದರೆ ಅದು ಸಾಧ್ಯವಾಗಲಿಲ್ಲ.
ಕೊನೆಗೆ ದಾರಿಯಿಲ್ಲದೆ , ಎಂಟು ಜನರೂ ಕೈ ತೋಳುಗಳನ್ನು ಬಂಧಿಸಿ ಒಂದು ಮಾನವ ಸರಪಳಿಯನ್ನು ನಿರ್ಮಿಸಿದೆವು. ದಡ ಸೇರಿದರೆ ಎಲ್ಲರೂ ಸೇರುವ ಇಲ್ಲದಿದ್ದರೆ ಯಾರೂ ಬೇಡಾ ಎಂದು ನಿಶ್ಚಯಿಸಿರುವವರಂತೆ, ನದಿ ದಾಟಲು ಪ್ರಾರಂಭಿಸಿದೆವು. ನದಿ ನೋಡಲು ಎಷ್ಟು ಪ್ರಶಾಂತವಾಗಿತ್ತೋ, ಅದರ ಒಡಲಲ್ಲಿ ನೀರು ಅಷ್ಟೇ ರಭಸವಾಗಿ ಹರಿಯುತ್ತಿತ್ತು. ಕೊನೆಗೊ ನಾವು ಪಟ್ಟ ಪ್ರಯತ್ನ ವಿಫಲವಾಗಲಿಲ್ಲ ನಾವೆಲ್ಲರೂ ದಡ ಸೇರಿದ್ದೆವು. ನಮಗೊಂದು ಮರುಜನ್ಮ ಬಂದಂತಾಗಿತ್ತು.
ನಾವು ದಾಟುವ ವರೆಗೂ ಕಾದಿದ್ದ ಆ ವ್ಯಕ್ತಿಗಳು ನಾವು ಅಡ್ಡದಾರಿ ಹಿಡಿದದ್ದಕ್ಕಾಗಿ ಸ್ವಲ್ಪ ಛಿಮಾರಿ ಹಾಕಿ , ಇಲ್ಲಿ ಅನೇಕರು ಅರಣ್ಯಗಳಲ್ಲಿ ಕಾಣೆಯಾಗುವ ಉದಾಹರಣೆಗಳಿವೆ ಎಂದು ವಿವರಿಸಿದಾಗ ನಮ್ಮನ್ನು ಕಾಪಾಡಿದ ಅಷ್ಟ ದೇವತೆಗಳಿಗೂ ಕೃತಜ್ಞತೆ ಸಲ್ಲಿಸಿದೆವು. ಆ ಚೌಡೇಶ್ವರಿ ದೇವಸ್ಥಾನದ ಬಳಿ ಇದ್ದ ಒಂದು ಖಾನಾವಳಿಯಲ್ಲಿ ಹಸಿವು ತೀರಿಸಿಕೊಂಡು, ಮನೆಯ ಕಡೆ ವಾಪಾಸು ಹೊರಟೆವು. ಇಷ್ಟೆಲ್ಲಾ ಆದ ನಂತರ ಕುಕ್ಕೆ ಸುಬ್ರಮಣ್ಯ ನೋಡುವ ಹುಮ್ಮಸ್ಸು ಯಾರಿಗೂ ಇರಲಿಲ್ಲ. ಯಾವಾಗ ಬೆಂಗಳೂರು ಸೇರುತ್ತೇವೋ ನಮ್ಮ ಮನೆಯವರನ್ನು ಯಾವಾಗ ಕಂಡು ಮಾತನಾಡುತ್ತೇವೋ ಎನ್ನುವ ಕಾತುರದಲ್ಲೇ ಬೆಂಗಳೂರಿನ ಬಸ್ಸೊಂದನ್ನು ಹಿಡಿದೆವು.
ಈ ಘಟನೆ ನಡೆದು ಹಲವು ವರುಷಗಳ ವರೆಗೂ ನಾವಿದ್ದ ಪರಿಸ್ಥಿತಿಯನ್ನು ನೆನೆದರೆ ಎದೆ ಝಲ್ ಎನ್ನುತ್ತಿತ್ತು. ಕನಸಲ್ಲಿ ಈ ಘಟನೆಯ ಅನೇಕ ಆವೃತ್ತಿಗಳು ಬೇರೆ ಬೇರೆ ರೀತಿಯಲ್ಲಿ ಆವರಿಸಿ ಒಮ್ಮೆಮ್ಮೆ ನಿದ್ದೆಯಿಂದ ನನ್ನನು ಎಬ್ಬಿಸುತ್ತಿದ್ದವು. ಗೆಳೆಯರೊಂದಿಗೆ ಮಾತನಾಡಿದಾಗ ಅವರೂ ಈರೀತಿಯ ಅನುಭವವನ್ನು ಹಂಚಿಕೊಂಡಿದ್ದರು.
ಇತ್ತೀಚಿನ ವರದಿ
ಇತ್ತೀಚೆಗೆ ನನಗೆ ತಿಳಿದಂತೆ, ಈ ರೈಲು ಮಾರ್ಗದಲ್ಲಿ ಪ್ಯಾಸೆಂಜರ್ ರೈಲುಗಳ ಸಂಚಾರ ಪುನಃ ಪ್ರಾರಂಭವಾಗಿದ್ದು, ಇಲ್ಲಿ ಚಾರಣ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ದಾರಿ ಎಷ್ಟೇ ದುರ್ಗಮವಾಗಿದ್ದರೂ ನಾವು ಆನಂದಿಸಿದ ಆ ಪ್ರಕೃತಿಯ ಸೌಂದರ್ಯ ನಮ್ಮ ನೆನಪಿನನಲ್ಲಿ ಅಜರಾಮರವಾಗಿದೆ. ಈ ಪ್ರಕೃತಿ ಸೌಂದರ್ಯದ ಅನುಭವ ರೈಲಿನಲ್ಲಿ ಪ್ರಯಾಣಿಸಿದರೂ ಸಿಗುವುದಂತೆ.
ಕವಿತೆಯೊಂದು ಬೇಕಿದೆ ಎನ್ನುವ ಸಾಲೇ ಎಷ್ಟು ಲಯಾತ್ಮಕವಾಗಿದೆ. ಭಾವಗೀತೆಯ ಆರಂಭದ ಸಾಲಿನಂತಿದೆ. ಮೊದಲ ನುಡಿಯಲ್ಲಿ ಬಿಸ್ಲು ಮಳೆಯ ವಿರೋಧಾಭಾಸ, ಎರಡನೇ ನುಡಿಯಲ್ಲಿ ಪಯಣದ ವಿರೋಧಾಭಾಸ, ಮೂರನೇ ನುಡಿಯಲ್ಲಿ…