ಕೈದೋಟದ ಕೆಸರು ! – ಶ್ರೀವತ್ಸ ದೇಸಾಯಿ

ಆತ್ಮೀಯ ಓದುಗರೇ ! ಜೂನ್ ೫ ೨೦೨೧ ರಂದು ವಿಶ್ವ ಪರಿಸರ ದಿನಾಚರಣೆಯ ಸುಸಂದರ್ಭದಲ್ಲಿ ಅನಿವಾಸಿಯ ತಂಗುದಾಣದ ನೂತನ ವಿಭಾಗ ‘ಹಸಿರು ಉಸಿರು’ ಸೇರ್ಪಡಿಸಲಾಗಿದ್ದು ಈ ಸರಣಿಯಲ್ಲಿ ಡಾ|| ಶ್ರೀವತ್ಸ ದೇಸಾಯಿ ಅವರು ‘ಕೈದೋಟದ ಕೆಸರು’ ಎಂಬ ಶೀರ್ಷಿಕೆಯ ಲೇಖನವನ್ನು ಅನನುಭವಿ ತೋಟಗಾರರಾಗಿದ್ದರೂ ಸ್ವತಃ ತಾವೇ ತಮ್ಮ ಕೈದೋಟದಲ್ಲಿ ತೋಟಗಾರಿಕೆ ಕಾರ್ಯ ನಿರ್ವಹಿಸಿ ಅದರ ಅನುಭವ ಹಂಚಿಕೊಂಡು ಹಸಿರು ದೇವತೆಗೆ ನೈವೇದ್ಯೆ ಸಲ್ಲಿಸಿದ್ದಾರೆ !
ಈ ಸುದಿನ ಆಚರಿಸಲು ನಮ್ಮ ಉತ್ಸುಹಕ ಅನಿವಾಸಿ ಸದಸ್ಯರಾದ ಎಲ್. ಎನ್. ಗುಡೂರ್ ಮತ್ತು ಪ್ರೇಮಲತಾ ಅವರು ತಮ್ಮ ಗೃಹದೋಟದ ಹಸಿರುಭರಿತ ವರ್ಣರಂಜಿತ ಚಿತ್ರಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ . ಓದಿ ಪ್ರತಿಕ್ರಿಯಿಸಿ. -ಸವಿ. ಸಂ

ಹಸಿರು ಉಸಿರು- ಕೈದೋಟದ ಕೆಸರು!

(ಕೃಪೆ: ನಾನು ಕಾರ್ಯನಿರತನಾದಾಗ ಕ್ಲಿಕ್ಕಿಸಿದ್ದು: John Fletcher)


ಕೈಕೆಸರಾದರೆ ಬಾಯಿ ಮೊಸರು ಎನ್ನುವ ಹಳೆಯ ಗಾದೆ ನಮ್ಮ ಊರಲ್ಲಿ. ಅದೇ ತರ ‘Have you got green fingers? ಎನ್ನುವ ಪದಗುಚ್ಛ ಕೇಳಿಬರುವದು ಇಲ್ಲಿ ಇಂಗ್ಲೆಂಡಿನಲ್ಲಿ.

ಇತ್ತೀಚೆಗೆ ಎಲ್ಲೆಡೆ ಆಚರಿಸಿದ ಸಾರ್ವತ್ರಿಕ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ’ಅನಿವಾಸಿ’ಯ ವಾಟ್ಸಪ್ಪಿನಲ್ಲಿ ಸಂಪಾದಕಿ ಕೊಟ್ಟ ಸೂಚನೆ:”ಹಸಿರು ಉಸಿರು’’ ಶೀರ್ಷಿಕೆಗೆ ಈ ವಾರ ಏನಾದರೂ ಲೇಖನ ಬರೆದು ಕಳಿಸಿರಿ ಎಂದಾಗ ನನಗೆ ತೋಚಿದ್ದು, ನನ್ನ ಹಸಿರು ವೆಜಿಟಬಲ್ ಪ್ಯಾಚ್ ಬಗ್ಗೆ ನಾಲ್ಕು ಸಾಲು ಬರೆಯುವಾ ಎಂದು. ಈ ಫೋಟೊದಲ್ಲಿ ಕಾಣುವಂತೆ ಅಪರೂಪಕ್ಕೆ ಹಚ್ಚ ಹಸಿರಾದ ಸ್ಪಿನ್ಯಾಚ್ ಗಿಡಗಳಿಂದ ಕಂಗೊಳಿಸುವ ನನ್ನ ಹಿತ್ತಲಿನಲ್ಲಿಯ ಪುಟ್ಟ ಕೈದೋಟ ಈ ವರ್ಷ ಪ್ರತಿವರ್ಷಕ್ಕಿಂತ ಹೆಚ್ಚು ಹಸಿರಾಗಿ ಕಣ್ಣಿಗೆ ತಂಪು ಕೊಡುತ್ತಿದೆ. ಇದರ ರಹಸ್ಯ ಗೊತ್ತ್ಗಿಲ್ಲ. ನನಗೆ  ’ಗ್ರೀನ್ ಫಿಂಗರ್ಸ” ಅಂತ ಬಡಾಯಿ ಕೊಚ್ಚಿಕೊಳ್ಳಲು ಗಾರ್ಡನಿಂಗ್ ವಿಷಯದಲ್ಲಿ ನನಗೆ ನೈಪುಣ್ಯತೆ ಇಲ್ಲ. ಆದರೆ ಈ ದೇಶದಲ್ಲಿ ಸಂಸಾರ ಮಾಡಿ ಮನೆಕಟ್ಟಿಕೊಂಡ ಕಳೆದ ನಾಲ್ಕು ದಶಕಗಳಲ್ಲಿ ಅಲ್ಪ ಸ್ವಲ್ಪ ತೋಟದ ಕೆಲಸದ ನಿಯಮ, ಗತ್ತುಗಳನ್ನು ಅರಿತುಕೊಂಡಿದ್ದೇನೆ, ಅಂತ ನನ್ನ ಗ್ರಹಿಕೆ! ತರಕಾರಿ ತೋಟ ಮಾಡಲು ಅತೀವ ದೈಹಿಕ ಪರಿಶ್ರಮ ಮಾಡುವ ಶಕ್ತಿಯಾಗಲಿ ಇಚ್ಛೆಯಾಗಲಿ ಅವಶ್ಯಕತೆಯಾಗಲಿ ಇಲ್ಲ. ಆದರೆ ನಾವೇ ಬೀಜ ಬಿತ್ತಿ, ನೀರೆರೆದು ಸಸಿ ಬೆಳೆದು ’ಫಲಂ ಪತ್ರಂ’ ಕೊಡುವಾಗ ಅನಿಸುವುದು ನಿಸರ್ಗಕ್ಕೆ ಹತ್ತಿರವಾಗುತ್ತಿದ್ದೇವೆ ಅಂತ. ಪ್ರಕೃತಿಯ ಬಗ್ಗೆ ಗೌರವೂ ಉಂಟಾಗುತ್ತದೆ. ‘From garden to table in half an hour’ ಅಂತ ಬರೀ ಅರ್ಧ ಗಂಟೆಯಲ್ಲಿ ಹಿತ್ತಲಲ್ಲಿ ಬೆಳೆದದ್ದನ್ನು ಕಟಾವ್ ಮಾಡಿ, ಬೇಯಿಸಿ ಟೇಬಲ್ಗೆ ತಂದು ಮನಸ್ಸಿನಲ್ಲೇ ದೇವರಿಗೆ ”ಫಲಂ ಪತ್ರಂ ತೋಯಂ” ಅರ್ಪಿಸಿ ಫಸಲನ್ನು ಉಣ್ಣುವಾಗ ಒಂದು ತರದ ಧನ್ಯತಾ ಭಾವ! ಅತ್ಯಂತ ರುಚಿಕರ ಸಹ. ಅದಲ್ಲದೆ ಆ ಹಚ್ಚ ಹಸಿರೆಲೆಗಳು CO2 ಹೀರಿ ಆಮ್ಲಜನಕವನ್ನು ಕೊಡುತ್ತದೆ ಅನ್ನುವ ನಂಬಿಕೆಯಿಂದ ಪರಿಸರಕ್ಕೆ ನನ್ನದೊಂದು ಪುಟ್ಟ ಸೇವೆ ಅನ್ನುವ ಭಾವ, ಸಹ!

ಮೇಲಿನ ಚಿತ್ರದಲ್ಲಿ ಕಾಣುವ ’ತರಕಾರಿ’ಸಸ್ಯಗಳು ಸ್ಪಿನಾಚ್ ಅಂತ ಹೇಳಿದೆ. ಕೆಲವರು ’ಸ್ಪಿನಕ’  ಅಂತಲೂ ಉಚ್ಚರಿಸುತ್ತಾರೆ. ನೋಡಲು ನಮ್ಮ ದೇಸಿ ’ಪಾಲಕ್’ ತರ ಕಾಣಿಸುತ್ತದೆಯಲ್ಲವೆ? ಇದು ಪರ್ಶಿಯದಿಂದ ಪೂರ್ವಕ್ಕೆ ಹರಡಿ ಭಾರತಕ್ಕೂ ಬಂದಿದೆಯಂತೆ. ಆ ಹೆಸರು ಸಹ ಪರ್ಶಿಯನ್ ಮೂಲದ ಅಸ್ಪನಾಕ್ ಇದರ ತದ್ಭವ ಅಥವಾ ಅಪಭ್ರಂಶ ಇರಬಹುದು. ಭಾರತೀಯ Malabar spinach ನಮ್ಮೂರಿನ ಬಸಳೆ ಸೊಪ್ಪಿನಂತೆ ಕಾಣುತ್ತದೆ (Basella alba). ನನ್ನ ತೋಟದ ಸುಕ್ಕುಗಟ್ಟಿದಂಥ ಎಲೆಯ ಪ್ರಭೇದ ಸೆವಾಯ್ (Savoy) ಅಥವಾ ಸೆಮಿ-ಸೆವಾಯ್ ಇರಬೇಕು. ಈ ವರ್ಷ ಎಪ್ರಿಲ್ನಲ್ಲಿ ಬರಬೇಕಾದ ಮಳೆ ಮೇ ತಿಂಗಳದಲ್ಲಿ ಬಿದ್ದು ಉಷ್ಣತಾಮಾನವೂ ಏರಿ ಎಂದಿಲ್ಲದೆ ಇಷ್ಟು ಹುಲುಸಾಗಿ ಬೆಳೆದಿದೆ. ಅದಕ್ಕೆ ಕಳೆದ ವರ್ಷ ಲಾಕ್ ಡೌನ್ ಪ್ರಾರಂಭವಾದಾಗ ಸಮಯದ ಸದುಪಯೋಗ ಮಾಡಿಕೊಂಡು ಈ 12×8 ಪ್ಲಾಟನ್ನು ಚೆನ್ನಾಗಿ ಅಗೆದು, ಕಳೆ ಕಿತ್ತಿ, ಹುಲ್ಲು ಸೆಗಣಿಯಿಂದಾದ ಫಾರ್ಮ್ ಯಾರ್ಡ್ ಗೊಬ್ಬರ ಹಾಕಿ, ನೀರೆರೆದು ಕೈಕಾಲು ಕೆಸರುಮಾಡಿಕೊಂಡುದರ ಫಲವಾಗಿ ಭೂಮಿಯಲ್ಲಿ ವರ್ಷಾನುಗಟ್ಟಲೆ ಬಿದ್ದಿದ್ದ ಬೀಜಗಳು ಮೊಳೆತು ಎರಡು ಫೂಟಿನಷ್ಟು ತಲೆಯೆತ್ತಿ ನಿಂತಿವೆ. 35 ವರ್ಗಳ ಕೆಳಗೆ ಬರಿ 40ಪೆನ್ಸಿಗೆ ಕೊಂಡ ಸ್ಪಿನಾಚ್ ಬೀಟ್ ಪ್ಯಾಕೆಟ್ಟಿನ ಬೀಜಗಳಿಂದ ಹುಟ್ಟಿ ಮೊದಲು ಸ್ಥಾಪಿಸಿದ ಸಸಿಗಳು ಬೆಳೆದು, ವರ್ಷಂಪ್ರತಿ ಚಳಿಗಾಲದ ವರೆಗೆ ಸತತವಾಗಿ ಅಡುಗೆಗೆ ಎಲೆಗಳ ಸರಬರಾಜು ಮಾಡಿ  ಒಂದೆರಡು ಸಸಿಗಳು ಹೂವು ಬಿಟ್ಟು ಬೀಜ ಕಟ್ಟಿ ಮಣ್ಣಿಗೆ ಬಿದ್ದು ಫೀನಿಕ್ಸ್ ತರ ಪ್ರತಿವರ್ಷ ಎದ್ದು ಈಗ ಎಷ್ಟೋ ತಲೆಮಾರುಗಳ ಸೇವೆಯನ್ನು ಒದಗಿಸುತ್ತಿದೆಯೆಂದರೆ ಆಶ್ಚರ್ಯವಾಗುತ್ತದೆ. ಈ ತರಕಾರಿ ಆರೋಗ್ಯಕ್ಕೂ ಒಳ್ಳೆಯದಂತೆ.  ಮೂರು ವಿಟಾಮಿನ್ನುಗಳು (A, C, B6), ಕ್ಯಾಲ್ಸಿಯಂ, ಮೆಗ್ನೀಸಿಯಂ ಅದಕ್ಕಿಂತ ಮೇಲಾಗಿ ಕಬ್ಬಿಣದ ಅಂಶ ಹೆಚ್ಚಂತೆ. ದೇಹಧಾರ್ಢ್ಯವನ್ನು ಹೆಚ್ಚಿಸುವಂಥ ಹೆಗ್ಗಳಿಕೆಯ ಈ ’ವೆಜ್’ 1929ರಲ್ಲಿ ಅವತರಿಸಿದ ಕಾರ್ಟೂನ್ ನಾಯಕ ’ಬಾಹು’ಬಲಿ ಪೊಪಾಯ್ (Popeye) ಎನ್ನುವ ಕಲಾಸಿಯ ಹೆಸರು ದೇಶವಿದೇಶದಲ್ಲಿ ಜನಪ್ರಿಯವಾಯಿತು. ಮಕ್ಕಳೆಲ್ಲ You must eat your greens (’ಹಸಿರನ್ನು ಮೇಯು’) ಅಂತ ಹಿರಿಯರಿಂದ ಉಪದೇಶ, ಧಮಕಿ  ಕೇಳಿಸಿಕೊಳ್ಳುವಂತಾಯಿತು. ಬೆಂಗಳೂರಿನ ಅವರೆಕಾಳಿನ ಮೇಳ ದಂತೆ ಟೆಕ್ಸಾಸಿನ ಕ್ರಿಸ್ಟಲ್ ಸಿಟಿ ’ಸ್ಪಿನಾಚ್ ಫೆಸ್ಟ’ ಗೆ ಹೆಸರುವಾಸಿಯಾಗಿದೆ. ಕಳೆದ ಸಲ ಭಾರತಕ್ಕೆ ಹೋದಾಗ ಬೆಂಗಳೂರಿನ ಅವರೆಕಾಳಿನ ಜಿಲೇಬಿಯ ರೆಸಿಪಿಯನ್ನು ಸಹ ನೋಡಿದ್ದೆ. ಅದೇ ತರ ಸ್ಪಿನಚ್ ಜಿಲೇಬಿಯೂ ಸಾಧ್ಯವೇ? ಯಾರಿಗಾದರೂ ರೆಸಿಪಿ ಗೊತ್ತಿದ್ದರೆ ದಯವಿಟ್ಟು ತಿಳಿಸಿ!

-ಶ್ರೀವತ್ಸ ದೇಸಾಯಿ

*************************************

ಎಲ್. ಎನ್. ಗುಡೂರ್ ಅವರ ಗೃಹದೋಟದ ಹಸಿರು ಸೊಬಗಿನ ಸಿರಿ!

ಕುಸುಮಾಲತೆಯರು ಪ್ರೇಮಲತಾ ಅವರ ಹೂದೋಟದಲ್ಲಿ !