ಕವಿ ಎನ್.ಎಸ್ ಲಕ್ಷೀನಾರಾಯಣ ಭಟ್ಟರಿಗೆ ಶ್ರದ್ಧಾಂಜಲಿ – ಡಾ.ಉಮಾ ವೆಂಕಟೇಶ್ ಮತ್ತು ಶ್ರೀಮತಿ ಗೌರಿಪ್ರಸನ್ನ

ಕನ್ನಡ ಸಾಹಿತ್ಯ ಲೋಕದಲ್ಲಿಎನ್ನೆಸ್ಸೆಲ್ ಎಂದೇ ಪರಿಚಿತರಾದ ಈ ಕವಿಯ ಭಾವಗೀತೆಗಳನ್ನು ಕೇಳಿ ಆನಂದಿಸದಿರುವ ಕನ್ನಡಿಗನಿಲ್ಲ. “ತೊರೆದು ಹೋಗದಿರೊ ಜೋಗಿ“ , “ಎಲ್ಲಿ ಜಾರಿತೋ ಮನವು“, “ಈ ಬಾನು ಈ ಚುಕ್ಕಿ“ ಕೆಲ ಉದಾಹರಣೆಗಳಷ್ಟೆ.

ಭಾವಗೀತೆ,ಕಾವ್ಯ, ಅನುವಾದ, ವಿಮರ್ಶೆ ಮುಂತಾದ ರೀತಿಯ ಬರಹಗಳಿಂದ ಎನ್ನೆಸ್ಸೆಲ್ ರವರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಶಿಶುನಾಳ ಶರೀಫ಼್ ಸಾಹೇಬರ ತತ್ವಪದಗಳನ್ನು ಕಲೆಹಾಕಿ, ಅದಕ್ಕೆ ಟೀಕೆ-ಟಿಪ್ಪಣಿಯನ್ನು ಬರೆದು ಪುಸ್ತಕವಾಗಿ ಪ್ರಕಟಿಸಿದ್ದಾರೆ. ಸುಳಿ, ದೀಪಿಕಾ, ಬಾರೋ ವಸಂತ, ಅರುಣ ಗೀತೆ, ಕವಿತಾ, ಬಂದೇ ಬರತಾವ ಕಾಲ, ಮಾಧುರಿ, ಇವು ಅವರ ಜನಪ್ರಿಯ ಕವನ ಸಂಕಲನಗಳಲ್ಲಿ ಕೆಲವು. ಇಂಗ್ಲಿಷ್ ನ ಯೇಟ್ಸ್, ಎಲ್ಲಿಯಟ್ ಇನ್ನೂ ಮುಂತಾದ ಕವಿಗಳ ಸಾನೆಟ್ ಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ೧೯೭೪ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ೨೦೧೨ ರಲ್ಲಿ ಅನಕೃ ಪ್ರಶಸ್ತಿ ಇವರಿಗೆ ಸಂದಿದೆ.

ಉಮಾ ವೆಂಕಟೇಶ್ ರವರು ಲಕ್ಷೀನಾರಯಣ ಭಟ್ಟರ ಜೊತೆ ಕಳೆದ ತಮ್ಮ ಸವಿನೆನಪನ್ನು ಈ ಲೇಖನದಲ್ಲಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ, ಗೌರಿಪ್ರಸನ್ನ ಅವರು ಭಟ್ಟರ ಭಾವಮಯ, ಪ್ರೇಮಮಯ ಕವನಗಳನ್ನು ನೆನೆದಿದ್ದಾರೆ –ಸಂ

ಕವಿ ಎನ್. ಎಸ್. ಲಕ್ಷ್ಮಿನಾರಾಯಣಭಟ್ಟ

ಕಳೆದ ಶನಿವಾರ ಬೆಳಿಗ್ಗೆ ಎದ್ದೊಡನೆ ಫ಼ೇಸ್-ಬುಕ್ಕಿನಲ್ಲಿ ನನ್ನ ಸ್ನೇಹಿತೆ ತ್ರಿವೇಣಿ, ಕವಿ ಶರೀಫ್ ಭಟ್ಟರು ಇನ್ನಿಲ್ಲ ಎಂದು ಅವರ ಕವನವೊಂದನ್ನು ಪೋಸ್ಟ್ ಮಾಡಿದ್ದರು. ಅದನ್ನು ನೋಡಿದಾಗ ತಕ್ಷಣ ಸ್ವಲ್ಪ ಆಘಾತವಾದರೂ, ಸಾರ್ಥಕ ಜೀವನ ನಡೆಸಿದ ಕವಿಯ ಸಾಹಿತ್ಯ ಕೃಷಿಯ ಬಗ್ಗೆ ಬಹಳ ಹೆಮ್ಮೆಯೆನಿಸಿತು. ಈಗ ೨೦ ವರ್ಷಗಳ ಹಿಂದೆ ಅವರನ್ನು ಕಾರ್ಡಿಫ಼ಿನಲ್ಲಿ ಭೇಟಿಯಾಗಿದ್ದು ನನ್ನ ನೆನಪಿನಲ್ಲಿ ಸುಳಿಯಿತು. ೨೦೦೦ ಆಗಸ್ಟ್ ತಿಂಗಳ ಹಿತವಾದ ಬೇಸಿಗೆಯ ಒಂದು ದಿನ, ನಮ್ಮ ಆತ್ಮೀಯ ಕುಟುಂಬ ಮಿತ್ರ ಡಾ ಆರ್.ಎಸ್.ಎಸ್ ಕೃಷ್ಣಮೂರ್ತಿಯವರು ಫೋನ್ ಮಾಡಿ, ಇಂದು ಸಂಜೆ ನಮ್ಮ ಮನೆಗೆ ಬನ್ನಿ. ಬೆಂಗಳೂರಿನಿಂದ ಕವಿ ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟರು ಬಂದಿದ್ದಾರೆ ಎಂದಾಗ, ನಮಗೆ ಬಹಳ ಸಂತೋಷವಾಯಿತು. ಶಾಲೆಯಲ್ಲಿ ಕವಿ. ಎನ್. ಎಸ್. ಎಲ್ ಅವರ ಕವನವನ್ನು ಪಠ್ಯಪುಸ್ತಕದಲ್ಲಿ ಓದಿದ್ದ ನನಗೆ ಅವರನ್ನು ಮುಖತಃ ನೋಡುವ ಅವಕಾಶ ಸಿಕ್ಕಿತ್ತು. ಕನ್ನಡದ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಹಿರಿಯ ಪುತ್ರ ರವಿಶಂಕರ್ ಅವರ ಜೊತೆಯಲ್ಲಿ ಬಂದಿದ್ದ ಎನ್. ಎಸ್. ಎಲ್ ಅವರನ್ನು ನೋಡಿದಾಕ್ಷಣ, ಅವರ ಸರಳತೆ ಮತ್ತು ವಿನಯಗಳು ನಮ್ಮನ್ನು ಕೂಡಲೆ ಆಕರ್ಶಿಸಿತ್ತು. ಸಂಜೆಯ ಹಿತವಾದ ಬಿಸಿಲಿನಲ್ಲಿ, ಮೌಂಟನ್ ಆಶ್ ಪಟ್ಟಣದ ಸುಂದರವಾದ ಪರಿಸರದಲ್ಲಿ ಕೃಷ್ಣಮೂರ್ತಿ ಮತ್ತು ಅವರ ಪತ್ನಿ ರೋಸಿಲಿ ಅವರು ಕೊಟ್ಟ ಆಂಬೊಡೆ ಮೆಲ್ಲುತ್ತಾ ಭಟ್ಟರ ಜೊತೆ ನಡೆಸಿದ ಸಂಭಾಷಣೆ ನನ್ನ ಮನದಲ್ಲಿನ್ನೂ ಹಸಿರಾಗಿದೆ. ತಮ್ಮ ಬಾಲ್ಯ ಮತ್ತು ಕಾಲೇಜಿನ ದಿನಗಳ ಬಗ್ಗೆ ಬಹಳ ಉತ್ಸುಕತೆಯಿಂದ ಮಾತನಾಡಿದ ಭಟ್ಟರು, ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಅವರಿಗಿದ್ದ ಅಭಿಮಾನವನ್ನು ಅವರದೇ ಆದ ಶೈಲಿಯಲ್ಲಿ ಹೇಳುತ್ತಿದ್ದನ್ನು ಕೇಳುತ್ತಾ ಕುಳಿತ ನಮಗೆ ಸಮಯ ಕಳೆದದ್ದು ತಿಳಿದಿರಲಿಲ್ಲ. ನನ್ನ ಪತಿ ಸತ್ಯಪ್ರಕಾಶ್ ಒಬ್ಬ ವಿಜ್ಞಾನಿ ಎಂದು ಗೊತ್ತಾದಾಗ, ಅವರಿಬ್ಬರ ನಡುವೆ ನಡೆದ ಸಂಭಾಷಣೆ ಬಹಳ ಆಸಕ್ತಿಪೂರ್ಣವಾಗಿತ್ತು.

ಒಬ್ಬ ಪ್ರಮುಖ ಕವಿ, ವಿಮರ್ಶಕ ಹಾಗೂ ಕಾವ್ಯಾನುವಾದಕರಾಗಿ ಕನ್ನಡ ಸಾರಸ್ವತಲೋಕಕ್ಕೆ ಪರಿಚಿತರಾದ ಭಟ್ಟರು, ಕಾವ್ಯಲೋಕದಲ್ಲಿ ತಮ್ಮ ಕವನಗಳು, ಶೇಕ್ಸಪಿಯರ್, ಏಟ್ಸ್ ಮತ್ತು ಟಿ.ಎಸ್. ಎಲಿಯಟ್ಟರ ಕೃತಿಗಳ ಅನುವಾದದಿಂದ ಎತ್ತರದ ಸ್ಥಾನ ಗಳಿಸಿದ್ದಾರೆ. ಜೀವನದ ಸತ್ಯತೆಯನ್ನು ಅನ್ವೇಷಿಸಲು ಸಾಹಿತಿ ಮತ್ತು ವಿಜ್ಞಾನಿಗಳು ಅನುಸರಿಸುವ ಮಾರ್ಗ ಭಿನ್ನವಾದರೂ, ಅವರಿಬ್ಬರ ಗುರಿ ಒಂದೇ ಎನ್ನುವುದನ್ನು ಬಹಳ ಉತ್ಕಟತೆಯಿಂದ ನಮಗೆ ವಿವರಿಸಿದ ಕವಿ ಎನ್. ಎಸ್. ಭಟ್ಟರ ಮಾತುಗಾರಿಕೆ ನಮ್ಮನ್ನು ಮೋಡಿಮಾಡಿತ್ತು. ಮರುದಿನ ನಮ್ಮ ಮನೆಗೆ ಬೆಳಗಿನ ಉಪಹಾರಕ್ಕೆ ಬಂದಾಗ, ನಾನು ಮಾಡಿದ್ದ ಅಕ್ಕಿ ರೊಟ್ಟಿಯನ್ನು ತಿನ್ನುವಾಗ, ಅದರ ರುಚಿ ಅವರ ತಾಯಿಯವರನ್ನು ನೆನಪಿಗೆ ತರುತ್ತಿದೆ ಎಂದಾಗ ನನ್ನ ಮನ ಹಿರಿಹಿರಿ ಹಿಗ್ಗಿತ್ತು. ಅವರ ಬಾಲ್ಯದ ಕಡುಬಡತನ, ಕಷ್ಟದ ಕಾಲೇಜಿನ ದಿನಗಳ ಬಗ್ಗೆ ಅವರ ಅನುಭವವನ್ನು ಕೇಳುತ್ತಿದ್ದಾಗ, ಕೇವಲ ತಮ್ಮ ಪರಿಶ್ರಮ, ಪ್ರತಿಭೆಗಳಿಂದ ಜೀವನದಲ್ಲಿ ಸಾಧನೆಗೈದ ಭಟ್ಟರ ಜೀವನ ನಿಜಕ್ಕೂ ಅಭಿನಂದನೀಯ. ಅಮೆರಿಕೆಯ ಕನ್ನಡ ಸಾಹಿತ್ಯ ರಂಗದ ಆಶ್ರಯದಲ್ಲಿ ಅವರು ನಡೆಸಿದ ಕನ್ನಡ ಭಾಷೆ ಮತ್ತು ಸಾಹಿತ್ಯದ ಕಮ್ಮಟ ಮತ್ತು ಶಿಬಿರಗಳ ಬಗ್ಗೆ ಇಂದಿಗೂ ಅಮೆರಿಕೆಯಲ್ಲಿ ನಮ್ಮ ಸ್ನೇಹಿತರು ಬಹಳ ಹೆಮ್ಮೆಯಿಂದ ಮಾತನಾಡುವುದನ್ನು ಕೇಳಿದ್ದೇನೆ. ಶಿಶುನಾಳ ಶರೀಫರ ಅನುಭಾವಗೀತೆಗಳನ್ನು ಸಂಗೀತದ ಮೂಲಕ ಕನ್ನಡಿಗರ ಮನೆ-ಮನಗಳಿಗೆ ತಲುಪಿಸಿದ ಕವಿ ಎನ್. ಎಸ್. ಲಕ್ಷ್ಮಿನಾರಾಯನ ಭಟ್ಟರ ನಿಧನದಿಂದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ.

ತಾಳಿದವರೇ ಗೆಲುವರು
ಆಳಗಳಿಗೆ ಇಳಿವರು
ನೋವು ಕಡೆದ ಮೆಟ್ಟಿಲೇರಿ
ಶಿಖರಗಳಲಿ ಹೊಳೆವರು”

ಅವರ ಕವನದ ಈ ಸಾಲುಗಳಲಿ, ಅವರ ಜೀವನದ ಎಲ್ಲಾ ಸತ್ಯತೆಗಳೂ ಅಡಗಿವೆ.

ಡಾ. ಉಮಾ ವೆಂಕಟೇಶ್

ಎದೆಯ ಬಯಲಲಿ ಭಾವಗಳ ಬಿತ್ತಿ ಬೆಳೆದ ಮಾಂತ್ರಿಕ.

ಮಧುಮಾಸದೊಂದು ಹಗಲಿಗೆ ನಿನ್ನ ಹೋಲಿಸಲೇ?
ನಿನ್ನ ಸೌಮ್ಯತೆ ಚೆಲುವು ಅದಕಿಂತಲೂ ಹಿರಿದು
ನಡುಗುವುವು ಸವಿಮೊಗ್ಗುಗಳು ಒಡ್ಡುಗಾಳಿಗೆ,
ಬೇಸಿಗೆಯ ಗೇಣಿ ಬಲು ಬೇಗನೇ ಮುಗಿಯುವುದು;
ಆಗಸದ ಕಣ್ಣು ಕೆಲವೊಮ್ಮೆ ಧಗೆ ಕಾರುವುದು,
ಎಷ್ಟೋ ಸಲ ಅದರ ಹೊಂಬಣ್ಣ ಮಂಕಾಗುವುದು;
ಆಕಸ್ಮಿಕಕ್ಕೋ ಪ್ರಕೃತಿಯ ಒರಟು ಹೊರಳಿಗೋ
ಸಿಕ್ಕು ಒಂದೊಂದೇ ಸೌಂದಯ೯ದೆಳೆ ಕಳಚುವುದು;
ನಿನ್ನ ಅಮೃತವಸಂತ ಕಾಂತಿ ಉಳಿವುದು ನಿತ್ಯ
ಕಾಯ್ದುಕೊಳ್ಳುವುದು ತನ್ನನ್ನು, ಕಾವ್ಯದನಂತ
ರೇಖೆಯಲಿ ಬೆಳೆದಿರಲು ನೀನು, ಸಾವಿಗಸಾಧ್ಯ
ತನ್ನ ನೆರಳಿಗೆ ನಿನ್ನನೆಳೆವೆನೆನ್ನುವ ಪಂಥ.
ಲೋಕ ಬಾಳುವವರೆಗೂ ಕಣ್ಣು ಕಾಣುವವರೆಗೂ
ಉಳಿದು ಇದು ನೀಡುವುದು ಅಮರತ್ವವನು ನಿನಗೂ.

ಕವಿ ಲಕ್ಷ್ಮೀನಾರಾಯಣ ಭಟ್ಟರ ‘ ಷೇಕ್ಸ್‌ಪಿಯರ್  ಸಾನೆಟ್ ಚಕ್ರ’ ದ ಸುನೀತವಿದು. ಹೌದು; ಕವಿ ಶಾಶ್ವತವಾಗಿರದಿದ್ದರೂ ಕವಿತೆ ಅಮರ..ತನ್ಮೂಲಕ ಕವಿಯೂ..ಯಾರಿಗೂ ಜಗ್ಗದ ಕಾಲವೂ ಇಲ್ಲಿ ನಿಸ್ಸಹಾಯಕ.ಅಂತೆಯೇ ತಮ್ಮ ಕಾವ್ಯಭಾವದ ಮಳೆ ಸುರಿಸಿ ನಮ್ಮಂಥ ಅಸಂಖ್ಯ  ಓದುಗ-ಕೇಳುಗರೆದೆಯಲ್ಲಿ ಬೀಜಬಿತ್ತಿ ಬಗೆಬಗೆ ತೆನೆಗಳನ್ನು ಬೆಳೆದ ಮಾಂತ್ರಿಕ ಕವಿಯ  ಐಂದ್ರಜಾಲದ ಮೋಡಿ ಮುಗಿಯುವಂಥದ್ದಲ್ಲ.

ಹೈಸ್ಕೂಲಿನ ಹದಿಹರೆಯದ ದಿನಗಳಿಂದಲೂ ಭಟ್ಟರು ತಮ್ಮ ಕವಿತೆಗಳ ಮೂಲಕ ನನಗೆ ‘ಸಾಥ್’ ನೀಡುತ್ತ ಬಂದಿದ್ದಾರೆ.ಕ್ಯಾಸೆಟ್ ಯುಗದಲ್ಲಿ ರೀಲು ಕಿತ್ತು ಬಂದರೂ ಪೆನ್ನಿಲ್ ನಿಂದ ಅದನ್ನು ಸುತ್ತಿ ಮತ್ತೆ ಮತ್ತೆ ಕೇಳಿದ್ದಿದೆ.’ ಮೈಸೂರು ಮಲ್ಲಿಗೆ’ ಯ ಕ್ಯಾಸೆಟ್ ನಲ್ಲಿ ಅವರು ನೀಡಿದ ಚಂದದ ‘ಕಾಮೆಂಟ್ರಿ’ ಈಗಲೂ ನನ್ನ ಮೊಬೈಲ್‌ ನ ಯು.ಟ್ಯೂಬ್.ಲೈಬ್ರರಿಯಲ್ಲಿ ಅಡಗಿ ಕುಳಿತು ಹಿಟ್ಟು ನಾದುವಾಗ, ಈರುಳ್ಳಿ ಹೆಚ್ಚುವಾಗ ಯಾವಾಗೆಂದರೆ  ಆವಾಗ ನನ್ನೊಡನೆ ಮಾತಾಡುತ್ತದೆ. ಪ್ರತಿ ಹುಣ್ಣಿಮೆಯಂದೂ ‘ಪಕ್ಷಕೊಮ್ಮೆ ಬಿಳಿ ಪತ್ತಲ ನೇಯುವ’ ಹಸ್ತದ ದಶ೯ನ ಮಾಡಿಸುತ್ತದೆ.ಕನ್ನಡದ ಓದಿನಷ್ಟು ಇಂಗ್ಲೀಷ್‌ ಓದು ಸರಳ-ಸುಭಗವೆನ್ನಿಸದೇ ಒದ್ದಾಡಿದಾಗ ಇಂಗ್ಲೀಷಿಗೇ ಮೈಸೂರು ಸಿಲ್ಕ್ ಸೀರೆಯುಡಿಸಿ, ಮೈಸೂರು ಮಲ್ಲಿಗೆ ಮುಡಿಸಿ ‘ಸಾನೆಟ್’ ನ್ನು ಸುನೀತವಾಗಿಸಿದ್ದಾರೆ. ಅರಿವಿಲ್ಲದೇ ಅನಾಯಾಸವಾಗಿ ಕವಿಯೊಬ್ಬ ಅದ್ಹೇಗೆ ಬದುಕನ್ನು ಆಕ್ರಮಿಸಬಲ್ಲ ಎಂಬುದು ಸೋಜಿಗ.

‘ಸುಳ್ಳೇ ನಿರಿಗೆಯ ಚಿಮ್ಮುವ  ನಡಿಗೆಗೆ ಬಳ್ಳಿಯ ಬೆಡಗಿತ್ತೇ’….ಹದಿಹರೆಯದ ದಿನಗಳಲ್ಲಿ ಅಮ್ಮನದೋ,ಮಾಮಿ – ಚಿಕ್ಕಮ್ಮನದೋ ಸೀರೆಯನುಟ್ಟು ಸೆರಗು ಸಾವರಿಸುತ್ತ, ನಿರಿಗೆ ಚಿಮ್ಮುತ್ತ ಡೌಲಿನಿಂದ ನಡೆಯುವಾಗಲೆಲ್ಲ ‘ದೀಪಿಕಾ’ ದ ಸಾಲು ತಲೆಯಲ್ಲಿ..ಎದೆಯಲ್ಲಿ..ಗುನುಗಲ್ಲಿ.

ಮುಂದೆ ಗೆಳೆಯನೊಬ್ಬ ನಲ್ಲನಾದಾಗ ‘ ನಲ್ಲನ ಕಣ್ಣಿನ ಸನ್ನೆಗೆ ಕವಿತೆಯ ಸುಳ್ಳಿನ ಸೊಬಗಿತ್ತೇ..ಮೆಲ್ಲಗೆ  ಉಸುರಿದ ಸೊಲ್ಲಿನ ಸವಿಯು  ಬೆಲ್ಲವ ಮೀರಿತ್ತೆ’…ಮನದ ತುಂಬ ಭಟ್ಟರ ಹಾಡಿನ ಮಧುರಾಲಾಪ. ಇಬ್ಬರ ಮಧ್ಯೆ ಮುನಿಸು ನುಸುಳಿದಾಗ ‘ ಹಿಂದೆ ಹೇಗೆ ಚಿಮ್ಮುತಿತ್ತು ಕಣ್ಣ ತುಂಬ ಪ್ರೀತಿ’ ಎಂಬ ಹಳಹಳಿಕೆ…ಮಾತು ಬೆಳೆದು ಅಂತರ ಹೆಚ್ಚಾದಾಗಲೆಲ್ಲ “ಕುರುಡು ಹಮ್ಮು ಬೇಟೆಯಾಡಿ ಪ್ರೀತಿ ನರಳಿದೆ’ ಎನ್ನುವ ಒದ್ದಾಟ… ‘ ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ ಕರೆಯುವೆ ಕೈ ಬೀಸಿ ” ಆತ೯ ಒರಲಾಟ… ಭಾವೋತ್ಕಷ೯ದ ರಸಗಳಿಗೆಗಳಲ್ಲೂ”….. “ಹೇಗೆ ತಾಳಲಿ ಹೇಳೆ ಈ ಮಧುರ ಅನುಭವವ” ….”ಇಂಥ ಭಾವವೇ ನಾಳೆ ಉಳಿಯದೆಯೇ ಕಳೆದೀತು ಎಂಬ ವ್ಯಥೆಯ” ಎಂಬಂಥ ಆತಂಕದ  ಬಡಬಡಿಕೆಗಳು..

ದಾಂಪತ್ಯದ ಅಮೃತಫಲಗಳಾದ ಕಂದಮ್ಮಗಳ ತೊಟ್ಟಿಲ ಜೀಕುವಿಕೆಯಲ್ಲೂ  “ತಾವರೆ ದಳ  ನಿನ್ನ ಕಣ್ಣು, ಕೆನ್ನೆ ಮಾವಿನಹಣ್ಣು..ಎಲ್ಲಿಂದ ಬಂದೆ ಈ ಮನೆಗೆ ನಂದನ ಇಳಿದಂತೆ ಭುವಿಗೆ’, ಸ್ವಗ೯ದ ಸುಗ್ಗಿ ಮನ – ಮನೆಯಂಗಳದಲ್ಲಿ..ಈಗ ನಮ್ಮ ನೆಲದಿಂದ ಗಾವುದ ದೂರವಿರುವ ನಮ್ಮೆದೆಯಲ್ಲಿ”.

“ಅಪ್ಪನು ಬೆಳೆಸಿದ ಮಲ್ಲಿಗೆ ಚಪ್ಪರ  ಹೂಗಳ ಚೆಲ್ಲಿತ್ತೇ..ಅಮ್ಮನು ಬಡಿಸಿದ ಊಟದ ಸವಿಯು ಘಮ್ಮನೇ ಕಾಡಿತ್ತೇ..ಅಣ್ಣನ ಕೀಟಲೆ, ತಮ್ಮನ ಕಾಟಕೆ ಬಣ್ಣದ ಬೆಳಕಿತ್ತೆ..ಕಾಣದ ಕೈ ಎಲ್ಲಾ ಕದ್ದು ಉಳಿಯಿತು ನೆನಪಷ್ಟೇ”….ಇದೀಗ ನೆನಪುಗಳೇ ಜೀವದ್ರವ್ಯ…..ಮನವ ಜಾರಿಸಿ, ಅರಿವಿಗಿರುವ ಬೇಲಿಯ ಜಾಡಿಸಿ, ಹಸಿದ ಕಂದನಿರದ ನಾಡಿನ ಕನಸು ಕಂಡ ಕವಿಮನದ ಪಾರಿಜಾತ ಗಂಧ ದೂರ ತೀರದಿಂದ ಸದಾ ತೇಲಿ ಬರುತ್ತಿರಲಿ.. ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮ ಜಲದಾ ಕಂಪು ನಮ್ಮಾತ್ಮವನ್ನು ಪೊರೆಯುತ್ತಿರಲಿ.

ಹೋಗಿ ಬನ್ನಿ ಭಟ್ಥರೇ..ಮಸುಕು ಕಂಗಳಿಂದ,ಮಣಭಾರದೆದೆಯಿಂದ ವಿದಾಯ ಹೇಳುತ್ತಿರುವೆ. ನೀವಿತ್ತ ಹಾಡುಗಳು..ಭಾವಗಳು ನನ್ನೊಳಗೆ ಸದಾ ಜೀವಂತ.

ಶ್ರೀಮತಿ ಗೌರಿಪ್ರಸನ್ನ

‘ನಮ್ಮ ನಿಮ್ಮ ನಿಸಾರ್ ಅಹ್ಮದ್‘ ಮತ್ತು ನಾಡೋಜ ನಿಸಾರ್ ಅಹ್ಮದರಿಗೆ ನುಡಿನಮನ

ಪ್ರಿಯ ಓದುಗರೆ,

This image has an empty alt attribute; its file name is na-as-hindu.jpg

ಹೋದವಾರದ ಪ್ರೊ. ನಿಸಾರ್ ಅಹಮದ್ ರವರನ್ನು, ಕವಿಯಾಗಿ ಮತ್ತು ವ್ಯಕ್ತಿಯಾಗಿ ನೆನೆಸಿಕೊ೦ಡು, ಅನಿವಾಸಿ ಬಳಗದ ಕೆಲ ಸದಸ್ಯರು ಬರೆದ ಲೇಖನಗಳನ್ನು ಪ್ರಕಟಿಸಿದೆವು. ಇ೦ತಹ ಅತಿದೊಡ್ದ ಪ್ರತಿಭಾವ೦ತ ಕವಿಯ ಆಳ, ಅಗಾಧತೆಯ ಬಗ್ಗೆ ನಮಗೆ ತಿಳಿದಿರುವುದು ಬಹಳ ಕಡಿಮೆ. ಈ ವಾರದ ಲೇಖನದಲ್ಲಿ ಪ್ರಸಾದ್ ಮತ್ತು ಗೌರಿಯವರು ನಿಸಾರ್ ಅಹ್ಮದರನ್ನು ತಮ್ಮದೇ ವಿಶಿಷ್ಟ  ರೀತಿಯಲ್ಲಿ ಸ್ಮರಿಸಿದ್ದಾರೆ

ನಮ್ಮ ಇ೦ದಿನ ಭಾರತ ಧರ್ಮದ ಹೆಸರಿನಲ್ಲಿ ಅದರದೇ ಅದ ಹೊಸ ಬದಲಾವಣೆಯನ್ನು ಕ೦ಡಿರುವ ಈಗಿನ ವರ್ಷಗಳಲ್ಲಿ ನಾವು ಮತ್ತು ನಮ್ಮ ನ೦ಬಿಕೆಗಳು ನಮ್ಮ ಸುತ್ತಲಿರುವ, ನಮ್ಮನನುಸರಿಸದವರ ಮೇಲೆ ಯಾವ ರೀತಿಯ ಪರಿಣಾಮ ಮಾಡುತ್ತಿರಬಹುದು ಎನ್ನುವುದರ ಬಗ್ಗೆ ನಾವು ಸಾಮಾನ್ಯವಾಗಿ ಯೋಚಿಸುವುದಿಲ್ಲ. ಶಿವಪ್ರಸಾದ್ ರವರು ತಮ್ಮ ಲೇಖನದಲ್ಲಿ, ಕವಿ ನಿಸಾರ್ ಅಹ್ಮದ್ ರವರು ನಮ್ಮೆಲ್ಲರಿಗಿ೦ತ ಅಚ್ಚಕನ್ನಡಿಗನಾಗಿ, ಧರ್ಮದ  ಚೌಕಟ್ಟಿನಲ್ಲಿ ಬ೦ಧಿಯಾಗದೆ, ತನ್ನ ಬರಹದಿ೦ದ ನಮ್ಮನ್ನು ರ೦ಜಿಸಿ ಚಿ೦ತಿಸುವ೦ತೆ ಮಾಡಿದ ಸ್ನೇಹಮಯಿ ತನ್ನ ಕವಿತೆಗಳಲ್ಲಿ ’ಸಮನ್ಮಯಿ ನಾನೆತ್ತ’ ಅಥವಾ ’ನಿಮ್ಮೊಡನಿದ್ದರೂ ನಿಮ್ಮ೦ತಾಗದೆ’ ಎ೦ದು ಕೇಳುವ೦ತೆ ಮಾಡಿರಬಹುದಾದ ತಮ್ಮ/ನಮ್ಮ ಪ್ರಸ್ತುತ ಸಮಾಜದ ಬಗ್ಗೆ ಕೆಲಕ್ಷಣ ಚಿ೦ತಿಸುವ೦ತೆ ಮಾಡಿದ್ದಾರೆ. ಕವಿ ನಿಸಾರರ ಕವನಗಳ೦ತೆ ಇದರಲ್ಲಿ ಚಿ೦ತನೆಯನ್ನು ಪ್ರೇರೆಪಿಸುವ ಉದ್ದೇಶವಿದೆಯೆ ಹೊರತು ಯಾವ ರೀತಿಯ ಅಪಾದನೆಯಿಲ್ಲ.

ಗೌರಿಪ್ರಸನ್ನರವರ ಈ ವಾರದ ಲೇಖನದಲ್ಲಿ ನಿಸಾರ್ ಅಹ್ಮದ್ ರವರ ಕವಿತೆಗಳ ರಸಿಕತೆಯ ಬಗ್ಗೆ ತಿಳಿಸಿರುವುದಲ್ಲದೆ, ಜೊತೆಗೆ ಅವರಿಗಿದ್ದ ಹಾಸ್ಯ ಪ್ರವೃತ್ತಿಯನ್ನು ಅವರ ಚುಟುಕಗಳ ಮೂಲಕ ನಮಗೆ ತಿಳಿಸಿ ಮನಕ್ಕೆ ಮುದವಿತ್ತಿದ್ದಾರೆ. ಈ ಚೇತೊಹಾರಿ ಲೇಖನದಲ್ಲಿ ಮತ್ತೆ ಈ ಕವಿ ಅನುಭವಿಸಿರಬಹುದಾದ ನೋವು, ತುಮಲಗಳ ಮಿಡಿತವಿದೆ, ಮತ್ತೊಮ್ಮೆ ಚಿ೦ತನೆಗೆ ಆಹ್ವಾನವಿದೆ – ಸ೦

ಪರಿಚಯ

ಹೆಸರು ಶ್ರೀಮತಿ ಗೌರಿಪ್ರಸನ್ನ.ಹುಟ್ಟಿ ಬೆಳೆದದ್ದು ವಿಜಯಪುರದಲ್ಲಿ.ಕನಾ೯ಟಕ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ.ಸುಗಮಸಂಗೀರ,ಹಿಂದೂಸ್ತಾನಿ ಹಾಗೂ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ.ರೇಡಿಯೋ ಗಿರಮಿಟ್ ದಲ್ಲಿ ‘ಹರಟೆ ಕಟ್ಟೆ’ಕಾಯ೯ಕ್ರಮ ನಡೆಸಿಕೊಡುತ್ತೇನೆ.ಆಗಾಗ ಕಥೆ, ಲಲಿತಪ್ರಬಂಧಗಳನ್ನು ಬರೆಯುತ್ತಿರುತ್ತೇನೆ.ಕಳೆದೈದು ವರುಷಗಳಿಂದ ಲಂಡನ್ನಿನ ಸ್ಲೋದಲ್ಲಿ ವಾಸ.

 

ನಮ್ಮ – ನಿಮ್ಮ’   ಪ್ರೊಫೆಸರ್ ನಿಸಾರ್ ಅಹಮದ್  – ಡಾ.  ಜಿ.  ಎಸ್.  ಶಿವಪ್ರಸಾದ್

ನಿಸಾರ್ ಅಹಮದ್, ಇಂಗ್ಲೆಂಡಿನ ಚೆಶೈರಿನಲ್ಲಿ ನಡೆದ ಯು.ಕೆ. ಕನ್ನಡ ಬಳಗದ ರಜತಮಹೋತ್ಸವ ಸಮಾರಂಭಕ್ಕೆ ೨೦೦೮ ರಲ್ಲಿ   ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿ ಸಮ್ಮೇಳನದಲ್ಲಿ ನಾನು,  ಜಯಂತ್  ಕಾಯ್ಕಿಣಿ  ಮತ್ತು ಇತರ ಕವಿಗಳು ಭಾಗವಹಿಸಿದ್ದೆವು. ಮೂರು ದಿನಗಳ ಕಾರ್ಯಕ್ರಮದಲ್ಲಿ  ನಿಸಾರ್ ಅವರು ತಮ್ಮ ಅನನ್ಯವಾದ ಹಾಸ್ಯ ಪ್ರಜ್ಞೆಯಿಂದ ನಮ್ಮನ್ನೆಲ್ಲಾ ನಕ್ಕು ನಗಿಸಿದರು. ತಮ್ಮ ಕನ್ನಡ ಭಾಷೆಯ ಮೇಲಿರುವ ಪ್ರೀತಿ ಅಭಿಮಾನಗಳಿಂದ ನಮ್ಮಲ್ಲಿನ ಕನ್ನಡ ಪ್ರಜ್ಞೆಯನ್ನು  ಜಾಗೃತಗೊಳಿಸಿದರು. ಅನಿವಾಸಿ ಕನ್ನಡಿಗರಿಗೆ  ನಿಸಾರ್  ಕೂಡಲೇ ಹತ್ತಿರವಾಗಿ ಬಿಟ್ಟು “ನಮ್ಮ”   ನಿಸಾರ್  ಅಹಮದ್  ಆದರು. ಕಾಲಗಳು ಕಳೆದಂತೆ,  ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿ ಬದಲಾದಂತೆ  ನಿಸಾರ್  ಅಹಮದ್  ನಮ್ಮಲ್ಲಿನ  ಕೆಲವರಿಗೆ ನಮ್ಮವರಾಗದೆ ದೂರ ಉಳಿಯುವ ಶೋಚನೀಯ ಪರಿಸ್ಥಿತಿ ಮೆಲ್ಲಗೆ ಆವರಿಸಿದ್ದು ದುರದೃಷ್ಟಕರ ಎನ್ನಬಹುದು. 

ಮುಸ್ಲಿಂ ಕುಟುಂಬವೆಂಬ “ಪರಕೀಯತೆ”ಯಲ್ಲಿ  ಹುಟ್ಟಿ ಬೆಳೆಯುತ್ತಾ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು   ತಮ್ಮದಾಗಿಸಿಕೊಂಡು ಓಬ್ಬ ಕವಿಯಾಗಿ ಬೆಳೆಯಬೇಕಾದರೆ ಸಮಾಜದಲ್ಲಿ  ತಾನು ಮೊದಲು ಅಂಗೀಕೃತವಾಗ ಬೇಕೆಂಬ  ಅನಿವಾರ್ಯ ಒತ್ತಡ  ನಿಸಾರ್  ಅವರಿಗೆ ಇದ್ದರಬಹುದು. ಈ ಒತ್ತಡ  ಸಮಾಜದ  ಮುಖ್ಯವಾಹಿನಿಯಲ್ಲಿರುವವರಿಗೆ  ಸುಲಭವಾಗಿ ನಿಲುಕುವ ವಿಚಾರವಲ್ಲ. ಬಹುಶ ಈ ಕಾರಣಕ್ಕಾಗಿ ಶುರುವಿನಲ್ಲಿ  ನಿಸಾರ್  ಅವರು ಹಲವಾರು ನಾಡಭಕ್ತಿಗೀತೆಗಳಂತೆ ತೋರುವ   ‘ಜೋಗದ ಸಿರಿ ಬೆಳಕಿನಲ್ಲಿ , ‘ತಾಯಿ ಭೂಮಿ ತಾಯಿ’, ಎಲ್ಲಿ ರಮ್ಯಾ ತಾಣ ಅಲ್ಲಿ ನಿನಗೆ ವಂದನ’ ಈ ರೀತಿಯ ಕವನಗಳನ್ನು ಬರೆದು ನಾಡಿನ ಹಿರಿಮೆ-ಗರಿಮೆಯನ್ನು ಕುವೆಂಪು ನಂತರದ ಸಮಯದಲ್ಲಿ ಕನ್ನಡಕ್ಕೆ ತಂದುಕೊಟ್ಟಿರಬಹುದು. ಇದು ನನ್ನ  ಊಹೆಯಲ್ಲಿನ ಒಂದು ಸಾಧ್ಯತೆ ಅಷ್ಟೇ . ಇದಕ್ಕೆ ಬೇರೆ ಪ್ರೇರಣೆಗಳು ಕೂಡ ಇರಬಹುದು. ಒಂದು  ವಿಚಾರವನ್ನು ಇಲ್ಲಿ ನಾನು ಪ್ರಸ್ತಾಪ ಮಾಡುವುದು ಉಚಿತ;   ಒಂದು  ಸಂದರ್ಶನದಲ್ಲಿ  ನಿಸಾರ್  ಅವರು  ‘ನಾನು ಶುರಿವಿನಲ್ಲಿ ಹೆಸರಿಗಾಗಿ  ಮತ್ತು   ಜನರ ಪ್ರೀತಿಯನ್ನುಗಳಿಸುವ ಉದ್ದೇಶದಿಂದ ಕವಿತೆಗಳನ್ನು ಬರೆದಿದ್ದು ಮುಂದಕ್ಕೆ ನಾನು ಸಮಾಜಕ್ಕೆ ಮತ್ತು ಸಾಹಿತ್ಯಕ್ಕೆ ಕೊಡುಗೆ ನೀಡುವ ಸಲುವಾಗಿ ಬರೆಯಲು ಮೊದಲುಗೊಂಡೆ’ ಎಂದು ಹೇಳಿದ್ದಾರೆ.

ನಿಸಾರ್ ಅವರ ಇನ್ನೊಂದು ಜನಪ್ರಿಯ ಗೀತೆ ” ಬೆಣ್ಣೆ ಕದ್ದ ನಮ್ಮ ಕೃಷ್ಣ, ಬೆಣ್ಣೆ ಕದ್ದನಮ್ಮ’ ಎಂಬ ಸಾಲುಗಳನ್ನು ನೋಡಿದಾಗ ಈಗಿನ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ರೀತಿಯ ಸಾಲುಗಳನ್ನು ಹಿಂದೂ ಧರ್ಮದ ಹೊರಗೆ ಇರುವ ಒಬ್ಬ ಕವಿ ಬಹುಶ ಬರೆಯಲು ಮುಜುಗುರ ಪಡಬಹುದು. ಈ ಕವಿತೆಯಲ್ಲಿನ “ನಮ್ಮ ಕೃಷ್ಣ” ಎಂಬ ಅಭಿವ್ಯಕ್ತಿ  ನಿಸಾರ್  ನಮ್ಮೊಡನಿದ್ದು ನಮ್ಮಂತೆಯೇ ಆದವರು ಎಂಬುದಕ್ಕೆ ಸಾಕ್ಷಿ ಎನ್ನಬಹುದು.  ಈಗ ಆ ಒಂದು ಅನಿಸಿಕೆಗಳಿಲ್ಲ.  ಕಳೆದ ಕೆಲವು ವರ್ಷಗಳಿಂದ ಎದ್ದಿರುವ ಧರ್ಮವೆಂಬ ಗೋಡೆ ನಮ್ಮ ನಿಮ್ಮನ್ನು ವಿಭಜಿಸಿದೆ. ಕೆಲವು ಪ್ರಜ್ಞಾವಂತರು ಈ  ‘ನಾವು-ನೀವು’ ವಿಚಾರವನ್ನು ಇಲ್ಲಿ ನಾನೇಕೆ ಪ್ರಸ್ತಾಪ ಮಾಡುತ್ತಿದ್ದೇನೆ  ಎಂದು ಪ್ರಶ್ನಿಸಬಹುದು ಅದಕ್ಕೆ ಸಮಂಜಸವಾದ  ಉತ್ತರ ಅವರವರೇ ಕಂಡುಕೊಳ್ಳಬೇಕು.

ನಿಸಾರ್ ಅವರು ಒಂದು ಸಂದರ್ಶನದಲ್ಲಿ ‘ಧರ್ಮ ಎಲ್ಲರಿಗೂ ಒಂದು ವೈಯುಕ್ತಿಕವಾದ  ವಿಚಾರವಾಗಿರಬೇಕು. ಒಬ್ಬ ಕವಿ, ಲೇಖಕನ  ಚಿಂತನೆಗಳನ್ನು,  ಬರವಣಿಗೆಯನ್ನು  ಅವನ ಧರ್ಮದ ಹಿನ್ನೆಲೆಯಲ್ಲಿ ಇಟ್ಟು ವಿಶ್ಲೇಷಿಸಬಾರದು. ಅವನು ಅದರಿಂದ  ಮುಕ್ತವಾಗಿರಬೇಕು. ಎಲ್ಲ ಧರ್ಮಗಳಲ್ಲಿ ಧರ್ಮವನ್ನು ಕಾಪಾಡುವುದಕ್ಕೆ ಕೆಲವು  ಸ್ವಯಂ ಪ್ರೇರಿತ, ಸ್ವಯಂ ಸೇವಕ  “ಧಾರ್ಮಿಕ ಪೋಲೀಸರು” ಹುಟ್ಟಿಕೊಂಡಿದ್ದಾರೆ. ಅದರ ಅವಶ್ಯಕತೆ ಇಲ್ಲ. ಪ್ರತಿಯೊಬ್ಬರಲ್ಲೂ   ನಮ್ಮೊಳಗೇ ಇರುವ ನೈತಿಕ ಜವಾಬ್ದಾರಿ ನಮಗೆ ಮಾರ್ಗದರ್ಶನ ನೀಡಬೇಕು. ಎಲ್ಲರೂ  ಧರ್ಮಗಳ ಸಾರವನ್ನು ಅರಿತು ಸಮನ್ವಯದೆಡೆಗೆ ಶ್ರಮಿಸಬೇಕು.  ಅದನ್ನು ಬಿಟ್ಟು ಧರ್ಮದ ತಿರುಳನ್ನು ತಿರಿಚಿ ವ್ಯಾಖ್ಯಾನಿಸಬಾರದು’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

This image has an empty alt attribute; its file name is religious-hormony.jpg

ಹಿಂದೂ ಮುಸ್ಲಿಂ ನಡುವಿನ  ಸಾಮಾಜಿಕ ಸಂಬಂಧವನ್ನು ಗಮನಿಸಿದಾಗ ನಿಸಾರ್  ಹೇಳುವಂತೆ  ಕಲೆ ಮತ್ತು ಧರ್ಮ ಇವೆರಡೂ ಬೇರೆ ಬೇರೆಯಾಗಿದ್ದವು. ಹಿಂದೆ ಬಿಸ್ಮಿಲ್ಲಾ ಖಾನ್ ಅವರು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಶಹನಾಯಿ ನುಡಿಸಲು ಅವರಿಗೆ ಆಹ್ವಾನವಿತ್ತು.  ಬಾಲಿವುಡ್ಡಿನ ಶಾರುಕ್ ಖಾನ್, ನಾಸಿರುದ್ದೀನ್ ಷಾ,  ಇರ್ಫಾನ್ ಖಾನ್ ಇವರೆಲ್ಲ  ಭಾರತದ  ಸೆಕ್ಕ್ಯುಲರ್ ದೃಷ್ಟ್ಟಿಯಿಂದ ನಮ್ಮವರೇ ಆದರೂ ಕೆಲವರು ಅವರನ್ನು  ಇಂದಿನ  ‘ಹಿಂದೂ ರಾಷ್ಟ್ರೀಯತೆ’ ಎಂಬ ಧಾರ್ಮಿಕ ಅಳತೆಗೋಲಿನಲ್ಲಿ  ಅಳೆದು ಪರಕೀಯರಾಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ  ನಿಸಾರ್  ಅವರ ಅರ್ಥಪೂರ್ಣ ಹಾಗು ನೋವಿನ ಎಳೆ ಇರುವ ಕವನವನ್ನು  ನಾನು ಓದುಗರ ಗಮನಕ್ಕೆ ತಂದಿದ್ದೇನೆ.  ಆ ಕವನದ ಆಯ್ದ ಸಾಲುಗಳು ಹೀಗಿವೆ;

ನಿಮ್ಮೊಡನಿದ್ದು ನಿಮ್ಮಂತಾಗದೆ ಜಗ್ಗಿದ ಕಡೆಬಾಗದೇ

ನಾನು ನಾನೇ ಆಗಿ ಈ ನೆಲದಲ್ಲೇ  ಬೇರೊತ್ತಿದ್ದರೂ ಬೀಗಿ

ಪರಕೀಯನಾಗಿ ತಲೆ ಎತ್ತುವುದಿದೆ ನೋಡಿ ಅದು ಬಲು ಕಷ್ಟ

ಒಳಗೊಳಗೇ ಬೇರು ಕುಯ್ದು ಲೋಕದೆದುರುಲಿ ನೀರ ಹುಯ್ದು

ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ ಗೊತ್ತಿಲ್ಲದಂತೆ

ನಟಿಸಿ ಚಕಾರವೆತ್ತದೆ, ನಿಮ್ಮೊಡನೆ ಕಾಫೀ ಹೀರಿ

ಪೇಪರೋದಿ ಹರಟೆ ಹರಟಿ ಬಾಳು ತಳ್ಳುವುದಿದೆ ನೋಡಿ

ಅದು ಬಹಳ ಕಷ್ಟದ ಕೆಲಸ

ನಾನು ಕಳೆದ ಎರಡು ದಶಕಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿ ಅನಿವಾಸಿ ಭಾರತೀಯನಾಗಿದ್ದೇನೆ. ಇಲ್ಲಿನ ಭಾಷೆ  ಮತ್ತು ಸಂಸ್ಕೃತಿಯನ್ನು ನನ್ನದಾಗಿಸಿಕೊಂಡಿದ್ದೇನೆ. ಇಲ್ಲಿನ ಪೌರತ್ವವನ್ನು  ಸ್ವೀಕರಿಸಿದ್ದೇನೆ. ಇಂಗ್ಲಿಷಿನಲ್ಲಿ ಪದ್ಯಗಳನ್ನು ಪ್ರಕಟಿಸಿದ್ದೇನೆ. ಇಷ್ಟೆಲ್ಲಾ ಇದ್ದರೂ ನನ್ನಲ್ಲಿ ಒಂದು ಪರಕೀಯತೆಯ ಭಾವನೆಗಳಿವೆ. ಅದನ್ನು ನಿರ್ದಿಷ್ಟವಾಗಿ  ಗುರುತಿಸಲು ಹೆಣಗುತ್ತಿದ್ದೇನೆ. ನಿಸಾರ್  ಅವರ  ಈ ಮೇಲಿನ ಕವಿತೆಯನ್ನು  ನನ್ನ ಅನಿವಾಸಿ ಬದುಕಿನ  ಹಿನ್ನೆಲೆಯಲ್ಲಿ ಮತ್ತೆ ಮತ್ತೆ ಓದಿದ್ದೇನೆ.  ಬದುಕಿನ ಕೆಲವು ಅನಿವಾರ್ಯ ಸಂಗತಿಗಳೊಂದಿಗೆ ಹೊಂದಿಕೊಂಡು ಬದುಕಲು ಕಲಿತ್ತಿದ್ದೇನೆ.

ಜಾತಿ, ಮತ, ಧರ್ಮ, ಭಾಷೆ, ಸಂಸ್ಕೃತಿ  ಮತ್ತು ಲೈಂಗಿಕ ಪ್ರವೃತಿ  ಹೀಗೆ ಅನೇಕ ಅಂಶಗಳು ನಮ್ಮಲಿ ಪರಕೀಯ ಎಂಬ ಭಾವನೆಗಳು ಉದ್ಭವಿಸಲು ಕಾರಣವಾಗಬಹುದು. ನಮ್ಮ ನಮ್ಮೊಳಗೇ ಎಲ್ಲ ಸರಿಸಮಾನವಾಗಿದ್ದೂ ಕೆಲವು  ಸಂದರ್ಭಗಳಲ್ಲಿ   ಒಬ್ಬ ವ್ಯಕ್ತಿಗೆ ತಾನು ಪರಕೀಯ ಎಂಬ ಭಾವನೆಗಳು ಮೂಡುವುದುಂಟು. ಈ ವಿಚಾರಗಳನ್ನು ಇಟ್ಟುಕೊಂಡು ನಿಸಾರ್ ಅವರ ಮೇಲಿನ  ಕವನದಲ್ಲಿನ ಅನಿಸಿಕೆಗಳನ್ನು ಗಮನಿಸಿದಾಗ ಅವರು ಪರಕೀಯರಾಗಿದ್ದರು ಎಂದು ಅವರ ಅಭಿಮಾನಿಗಳಿಗೆ ಅನ್ನಿಸುವುದಿಲ್ಲ.  ಕೆಲವು ಮತಾಂಧ ಗುಂಪಿನ ಜಾತಿವಾದಿಗಳ ವರ್ತನೆಯಿಂದ ನಿಸಾರ್ ಅಹಮದ್ ಅವರಿಗಾದ ನೋವಿನ  ಹಿನ್ನೆಲೆಯಲ್ಲಿ ಈ ಕವಿತೆ ಮೂಡಿಬಂದಿರಬಹುದು. ನಿಸಾರ್ ಅವರು ಪ್ರಜಾವಾಣಿಯ ಒಂದು ಸಂದರ್ಶನದಲ್ಲಿ “ನನ್ನ ಗುರು ಹಿರಿಯರು, ನನ್ನ ಸ್ನೇಹಿತರು  ನನ್ನನ್ನು  ಬೇರೆ ಜಾತಿ ಮತಕ್ಕೆ ಸೇರಿದ ಅನ್ಯವ್ಯಕ್ತಿ ಎಂದು ನೋಡಿಲ್ಲ , ಕನ್ನಡಿಗ ಅಂತ ನೋಡಿದ್ದಾರೆ. ಅದು ನಮ್ಮ ಕನ್ನಡಿಗರ ದೊಡ್ಡಗುಣ” ಎಂದು ಹೇಳಿದ್ದಾರೆ. ಇದು ನಮಗೆಲ್ಲಾ ಸಮಾಧಾನಕರವಾದ ವಿಚಾರ.  ಕನ್ನಡಿಗರ ಆತ್ಮೀಯ ನಿಸಾರ್ ಅಹಮದ್ ಅವರ ಪುತ್ಥಳಿಯನ್ನು ಅವರ ಕಾವ್ಯಕ್ಕೆ ಸ್ಫೂರ್ತಿ ತಂದ  ಲಾಲ್ ಬಾಗಿನಲ್ಲಿ  ಇಟ್ಟು ಅವರನ್ನು ನೆನೆಯುವಂತಾಗಲಿ.  ಅವರ ಅಭಿಮಾನಿಗಳ ಪಾಲಿಗೆ ಅದೇ ನಿತ್ಯೋತ್ಸವ.       

ಡಾ.  ಜಿ.  ಎಸ್.  ಶಿವಪ್ರಸಾದ್, ಶೆಫೀಲ್ಡ್ , ಯು. ಕೆ .

ನಾಡೋಜ ನಿಸಾರ್ ಅಹ್ಮದ್ ನುಡಿನಮನ ಮತ್ತು ಬದುಕಲ್ಲಿ ಸಾರ ತುಂಬಿದ ನಿಸಾರ್ – ಶ್ರೀಮತಿ ಗೌರಿಪ್ರಸನ್ನ

ಗರಿಗರಿ ಶಟ್೯ಪ್ಯಾಂಟು ,ಸೂಟು-ಬೂಟು,ಅದಕ್ಕೊಪ್ಪುವ ಟೈ,ವಾರೆ ಬೈತಲೆ ತೆಗೆದು ಒಪ್ಪವಾಗಿ ಬಾಚಿದ ಕೂದಲು ,ಎತ್ತರದ ನಿಲುವು, ನಗುಮೊಗ….ಒಟ್ಟಿನಲ್ಲಿ  ಸುಂದರಾಂಗ ಈ ನಿಸಾರ್. ಅವರು ಬರೆದ ಕವಿತೆಗಳೋ ಮನೋಹರ…ಈಗಿನ ಮಕ್ಕಳ ಬಾಯಲ್ಲಿ ಹೇಳುವುದಾದರೆ ಅವರು ನಮ್ಮ ಮೊದಲ ‘ಕ್ರಶ್ ‘ಎನ್ನಲಡ್ಡಿಯಿಲ್ಲ.ನಿತ್ಯೋತ್ಸವದ ಗೀತೆಗಳನ್ನು ಅವರದೇ ಗಂಭೀರ ದನಿಯ ಸ್ಪಷ್ಟ ಉಚ್ಚಾರಣೆಯ ಶ್ರೀಮಂತ ಕನ್ನಡದ ವಿವರಣೆಯೊಂದಿಗೆ ಅದೆಷ್ಟು ಸಾವಿರ ಸಲ ಕೇಳಿದ್ದೆವೋ ದೇವರೇ ಬಲ್ಲ.ಅವರ ವಿವರಣೆಯ ಒಂದೊಂದು ಪದವೂ ನನಗೀಗಲೂ ಬಾಯಿಪಾಠ.ಜೋಗದ ಸಿರಿ ,ನಲವಿನ ಬಳ್ಳಿ ,ಎಲ್ಲ ಮರೆತಿರುವಾಗ ,ನೀ ನುಡಿಯದಿರಲೇನು, ಮತ್ತದೇ ಬೇಸರ ಅದೇ ಸಂಜೆ……ಓಹ್! ಒಂದೊಂದು ಹಾಡೂ ನಮ್ಮ ಜೀವನದ ಅವಿಭಾಜ್ಯ ಅಂಗಗಳು.ನಮ್ಮ ಹದಿಹರೆಯದ ಕನಸು-ಕನವರಿಕೆಗಳಿಗೆ ,ಪ್ರೀತಿ-ಪ್ರಣಯಗಳಿಗೆ, ಜಗಳ-ಮುನಿಸುಗಳಿಗೆ, ವಿರಹ-ಬೇಸರಗಳಿಗೆಲ್ಲ ಈ ಹಾಡುಗಳಿಂದಲೇ ಮೂತ೯ರೂಪ.ಅವರ ಹಾಡುಗಳ ಒಂದು ‘ಕೋಟ್ ‘ಆದರೂ ನಮ್ಮ ಪ್ರೇಮಪತ್ರಗಳಲ್ಲಿರಲೇಬೇಕಿತ್ತು.ಹೀಗೆ ನಿಸಾರ್ ಅಹಮದ್ ಅವರು ಒಬ್ಬ ದೊಡ್ಡ ಸಾಹಿತಿಯಾಗಿ ಎಲ್ಲೋ ನಮ್ಮಿಂದ ದೂರವಿರಲಿಲ್ಲ;ನಮ್ಮೊಳಗೊಂದಾಗಿದ್ದರು. ಕಾಣದೆಯೂ ಆಪ್ತರಾಗಿದ್ದರು.ದೂರದ ಬೆಂಗಳೂರು -ಶಿವಮೊಗ್ಗೆಗಳಲ್ಲಿದ್ದೂ ನಮಗೆ ಅತೀ ಸನಿಹವಾಗಿದ್ದರು.

ಅವರ ಭಾಷಾ ಶ್ರೀಮಂತಿಕೆ ,ಪ್ರೌಢ ವಿಷಯಮಂಡನೆ ,ವೈಚಾರಿಕತೆ,ಹಳಿ ತಪ್ಪದ ಭಾವಲಹರಿಗಳು…..ಗದ್ಯ ಪದ್ಯ ಎರಡರಲ್ಲೂ ಸೈ ಎನ್ನಿಸುವಂತಿದ್ದವು.ಪ್ರತಿವಾರ ತರಂಗದಲ್ಲಿ ಪ್ರಕಟವಾಗುತ್ತಿದ್ದ ಅವರ ‘ಅಚ್ಚುಮೆಚ್ಚು’ಬರಹಗಳಿಗಾಗಿ ಹುಚ್ಚಿಯಂತೆ ಕಾಯ್ದು ಎಲ್ಲರೂ ಓದಿಯಾದ ಮೇಲೆ ಅದನ್ನು ಕಟ್ ಮಾಡಿ ಬೈಂಡಿಂಗ್ ಮಾಡಿಟ್ಟ ಸರಣಿಗಳೆಷ್ಟೋ? ಸೀದಾ ನನ್ನ ನೋಟ್ ಬುಕ್ ನಲ್ಲಿ ಭಟ್ಟಿ ಇಳಿಸಿಕೊಂಡ ಲೇಖನಗಳೆಷ್ಟೋ? ಈಗಲೂ ಅವೆಲ್ಲ ನನ್ನೊಡನಿವೆ. ಹಳದಿಯಾದ ಹಾಳೆ, ಮಂಕಾದ ಮಸಿಯೊಡನೆ..ಅದೇ ಭಾವತೀವ್ರತೆಯ ಪರಮಾಪ್ತ ಅನಿಸಿಕೆಯೊಡನೆ. ಅವರೇ ಹೇಳುವಂತೆ ‘ಎಷ್ಟೋ ವೇಳೆ ಕವನ ಸೋಲುವುದು ಕವಿ ತಾನು ಪಡೆದಿರುವುದರಲ್ಲಿ ಜುಗ್ಗತನ ತೋರಿಸಿದ್ದರಿಂದಲ್ಲ; ಬಿಡುವುದರಲ್ಲಿ ಧಾರಾಳ ತೋರಿಸದೇ ಇದ್ದುದರಿಂದ’….ನಿಸಾರ್ ಅವರಿಗೆ ಯಾವುದನ್ನು ಕೊಡಬೇಕು ,ಯಾವುದನ್ನು ಬಿಡಬೇಕು ಎಂಬುದರ ಸ್ಪಷ್ಟ ಅರಿವಿದ್ದರಿಂದಲೇ ಅವರು ‘ಮೌನದಲ್ಲಿ ಗಳಿಸಿದ್ದನ್ನು ಶಬ್ದದಲ್ಲಿ ಉಳಿಸಲು ಸಾಧ್ಯವಾಯ್ತೇನೋ?!

ವಿಭಿನ್ನ ಸಂಸ್ಕೃತಿಯ ಪರಿಸರದಲ್ಲಿ ಹುಟ್ಟಿ ಬೆಳೆದು ,ಸಂಸ್ಕೃತಿ ದ್ವಂದ್ವದ ಬಗ್ಗೆ ಅವರು ಹೇಳುವುದು ಹೀಗೆ… “ ಎರಡೂ ನನ್ನದೆನ್ನುವ ಸುಂದರ ಭ್ರಮೆ ಒಂದು ಕಡೆ;ಎರಡಕ್ಕೂ ಹೊರಗಾದ ಅನಾಥ ಅನಿಸಿಕೆ ಇನ್ನೊಂದು ಕಡೆ.ಅತ್ತ ಹುಟ್ಟಿನಿಂದ ಹೊತ್ತು  ತಂದ ಧಮ೯ ಮತ್ತು ಜೀವನ ವಿಧಾನಗಳಿಗೂ  ಪೂತಾ೯ ತೆರೆದುಕೊಳ್ಳದೇ, ಇತ್ತ ನನ್ನ ಪರಿಸರದ ಸಂಸ್ಕೃತಿ ಹಾಗೂ ಜೀವನ ವಿಧಾನಗಳಿಗೂ ಹಾಯಿಸಿಕೊಳ್ಳದೇ, ಒಮ್ಮೆ ಸ್ವಧಮೇ೯ ನಿಧನಂ ಶ್ರೇಯಃ ಎಂದು, ಮತ್ತೊಮ್ಮೆ ನಾವೆಲ್ಲರೂ ಒಂದೇ ಜಾತಿ , ಒಂದೇ ಮತ, ಒಂದೇ ಕುಲವೆಂದು ಡೋಲಾಯಮಾನವಾಗಿ ಒದ್ದಾಡುವ ತ್ರಿಶಂಕುಸ್ಥಿತಿ. ಆ ತೀವ್ರ ಅಸಹಾಯಕತೆ ಅವರ ‘ಇಬ್ಬಂದಿ’ ಪದ್ಯದಲ್ಲಿ ಹರಳುಗಟ್ಟಿದೆ.

ನನ್ನ ಲೋಕೋದಾರದನ್ಯತೆಯ ಕಾಫರತನಕ್ಕೆದೆ,

ಕುಸಿದು ಅತ್ತರೀಗ,ಸಂತೈಸದು ವಿಗ್ರಹಬಾ ಎನ್ನದು ಕಾಬಾ, ಸತ್ತರಗ್ನಿ ಸಂಸ್ಕಾರವಿತ್ತ, ಗುಣಿಯ ಮಣಭಾರವತ್ತ;

ವಾಮಕ್ಕೆ ಸಂಸ್ಕೃತ , ಬಲಕ್ಕರಬ್ಬೀ -ಸಮನ್ವಯಿ ನಾನೆತ್ತ?

ಪ್ರೌಢ ಗದ್ಯಪದ್ಯಗಳ ಕರ್ತರಾದ ಇವರು ಹನಿಗವನಗಳಂಥ ‘ಮಿಂಚಿಕೆ’ಗಳನ್ನೂ ಬರೆದಿದ್ದಾರೆಂಬುದು ಬಹಳಷ್ಟು ಜನಕ್ಕೆ ಗೊತ್ತಿಲ್ಲ…ರಸಾಸ್ವಾದಕ್ಕಾಗಿ ನಾಲ್ಕಾರು ಮಿಂಚಿಕೆಗಳನ್ನು ಹಂಚಿಕೊಂಡಿದ್ದೇನೆ.

. ಮಾತಿನ ಗುಟ್ಟು

‘ಮಯೂರ’ಕ್ಕಿಂತ ‘ಸುಧಾ’ವಾಸಿ

ಅಂದ್ರೊಮ್ಮೆ ಗುಂಡಯ್ಯ ಶೆಟ್ಟಿ

ಸಾಹಿತ್ಯಪ್ರೇಮಕ್ಕೆ ಅಚ್ಚರಿಪಟ್ಟು

ಅಂದ್ಕೊಂಡೆ..ಆಸಾಮಿ ಗಟ್ಟಿ

ಆಮೇಲೆ ಅರಿತೆ ಶೆಟ್ರು ಆ ದಿವ್ಸ

ಆಡಿದ ಮಾತಿನ ಗುಟ್ನ

‘ಅನುಭವದ ಮಾತು ನಾನಂದದ್ದು

ಕಟ್ಟಬಹುದು ದೊಡ್ಡ ದೊಡ್ಡ ಪಟ್ನ।।

. ಪರಿಣಾಮ.

ಪಾನಿಪುರಿ ಮಸಾಲೆಪುರಿ ಸೇವ್ ಪುರಿ

ಭೇಲ್ ಪುರಿ ಆಲೂ ಪುರಿ ದಹಿಪುರಿ

ಇನ್ನೂ ಎಷ್ಟೋ ಪುರಿಗಳ ಪಟ್ಟಿ

ಮಾಣಿ ಒದರಿದಾಗ ಹೂಂಗುಟ್ಟಿ

ಅಂದುಕೊಂಡೆ ಇವುಗಳೆಲ್ಲ ಸೇರಿ

ತೋರಿಸುತ್ತವೆ ಯಮಪುರಿ ।।

೩. ಕಾರಣ

“ಯಾಕಪ್ಪ ಅಳ್ತಿದ್ದಿ?”

“ಕೋಟ್ಯಧೀಶ್ವರ ಈಶ್ವರಪ್ಪ ಸತ್ಹೋದ್ನಂತ ಸುದ್ದಿ!”

“ನೆಂಟ್ನ ಅವ್ನು ನಿಂಗೆ?”

“ಅಲ್ಲ ಅಂತ್ಲೆ ಅಳ್ತಿರೋದು,ಗೊತ್ತಾಗೋಲ್ವ ಪೆಂಗೆ?” ।।

೪. ಪ್ರಶ್ನೆ – ಹುತ್ತರ

“ಹಲ್ಪ ಪ್ರಾಣ ಮ ಆ ಪ್ರಾಣ, ಹೇನೆಂಬುದರ ಹರಿವಿಲ್ಲದ

ಹಿವನೊಬ್ಬ ಕೋಣ, ಸಿಸ್ಯನಾಗಿ ಹನುಗ್ರಯಿಸಿ

ನೀಡಿ ಹೊಳ್ಳೆಯ ಸಿಕ್ಸಣ”

“ಆಗೆಯೇ ಹಾಗಲಿ,ಎದರಬೇಡ, ಹೀವೊತ್ತಿನಿಂದಲೇ

ಹೋದು ಹಾರಂಭಿಸೋಣ”

೫. ಹಿತವಾದ

“ಗುರುವೇ ,ಜೀವನದಲ್ಲಿ ನಾನು

ಹಿಡಿಯಬೇಕಾದ್ದು ಯಾವ ದಾರಿ?”

“ಜವಾಬುದಾರಿ”

ಇಂಥ ಲಘುವಾದ ಹನಿಗವನಗಳನ್ನು ನೀಡಿದವರ ನಿಮ್ಮೊಡನಿದ್ದೂ ನಿಮ್ಮಂತಾಗದೆ ,ಅಮ್ಮ ,ಆಚಾರ,ನಾನು ,ಹಕ್ಕು, ನಾನು ಮತ್ತು ರಂಗೋಲಿಗಳಂಥ ಪ್ರಬುದ್ಧ ಕವನಗಳನ್ನು ನೀಡಿ ನಮ್ಮನ್ನು ಚಿಂತನೆಗೆ ತಳ್ಳುತ್ತಾರೆ.’ರಾಮನ್ ಸತ್ತ ಸುದ್ದಿ’ಯಂತೂ ಬದುಕಿನ ಬಗ್ಗೆ ,ನಾನು ,ನನ್ನದು ಎಂಬ ಅಸ್ತಿತ್ವಗಳ ಬಗ್ಗೆ ಜಿಜ್ಞಾಸೆಯನ್ನೇ ಹುಟ್ಟು ಹಾಕುತ್ತದೆ .

“ಎಲ್ಲೋ ಹೇಗೋ ಸಾಯುತ್ತೇನೆ ತಿಳಿಯುವುದಿಲ್ಲ..

ನನ್ನ ಹೆಸರು, ಹುದ್ದೆ, ಪದ್ಯ, ತಳಮಳ, ಬದುಕು – ತಿಳಿಯುವುದಿಲ್ಲ.”

ನಿಸಾರ್ ಅವರೇ ,ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಗಳು ,ಗತಸಾಹಸ ಸಾರುತಿರುವ ಶಾಸನಗಳ ಸಾಲುಗಳು ,ಓಲೆಗರಿಯ ಸಿರಿಗಳು ,ದೇಗುಲಗಳ ಭಿತ್ತಿಗಳು  ಇರುವವರೆಗೂ ನಿಮ್ಮ ಗೀತೆಗಳ ನಿತ್ಯೋತ್ಸವ ನಡೆದೇ ಇರುತ್ತದೆ; ನೀವು ಇಲ್ಲದೆಯೂ ನಮ್ಮೊಡನಿರುತ್ತೀರಿ.ಹಲವೆನ್ನದ ಹಿರಿಮೆಯ ,ಕುಲವೆನ್ನದ ಗರಿಮೆಯ ,ಸದ್ವಿಕಾಸ ಶೀಲ ನುಡಿಯ ಲೋಕಾವೃತ ಸೀಮೆಯ – ಕನ್ನಡಾಂಬೆಯ ಈ ನಿಮ೯ತ್ಸರ ವತ್ಸನಿಗೆ ಗದ್ಗದ ಹೃದಯದ ಶೃದ್ಧಾಂಜಲಿಗಳು.

ಶ್ರೀಮತಿ ಗೌರಿ ಪ್ರಸನ್ನ