ಗೀತೆಯ ಸಾರವನ್ನರಿತ ಕನ್ನಡಿಗ – ಡಾ. ಪತ್ತಿಕೊಂಡ ವಿಶ್ವಂಭರ ನಾಥ್: ಶ್ರೀವತ್ಸ ದೇಸಾಯಿ ಬರೆಯುವ ಲೇಖನ

ಶ್ರೀವತ್ಸ ದೇಸಾಯಿ

ಈ ವಾರ ‘ಅನಿವಾಸಿ’ಯಲ್ಲಿ ಡಾ. ಪತ್ತಿಕೊಂಡ ವಿಶ್ವಂಭರ ನಾಥ್ ರವರ ವ್ಯಕ್ತಿಚಿತ್ರಣ, ಭಗವತ್ಗೀತೆಯ ಮೇಲೆ ಅವರಿಗಿದ್ದ ಒಲವು ಹಾಗೂ ಅನೇಕ ಪ್ರತಿಕೂಲ ಪರಿಸ್ಥಿತಿಗಳನ್ನೂ ಮೀರಿ ಅವರು ಸಮಾಜಮುಖೀ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸಂಗತಿಗಳನ್ನು ಒಂದು ಸಂದರ್ಶನದ ರೂಪದಲ್ಲಿ ಶ್ರೀವತ್ಸ ದೇಸಾಯಿಯವರು ಪ್ರಸ್ತುತಪಡಿಸುತ್ತಿದ್ದಾರೆ.ಸಮಾಜದ ಒಳಿತಿಗಾಗಿ ದುಡಿದರೂ ಎಲೆಮರೆಯ ಕಾಯಿಯಂತಿರುವ, ಆದರ್ಶಪ್ರಾಯ ವ್ಯಕ್ತಿಗಳು ವಿರಳ.

ಇಂಥವರ ಸಾಲಿಗೆ ಸೇರುವ ಡಾ. ಪತ್ತಿಕೊಂಡ ವಿಶ್ವಂಭರ ನಾಥ್ ರವರ ವ್ಯಕ್ತಿಚಿತ್ರಣ ನಮಗೆಲ್ಲರಿಗೂ ದಾರಿದೀಪ ವಾಗುವುದರಲ್ಲಿ ಸಂದೇಹವಿಲ್ಲ. ಒಬ್ಬ ಸಂಪಾದಕನಾಗಿ ಈ ಲೇಖನವನ್ನು ಓದಿದಾಗ ನೆನಪಾದದ್ದು ಮಂಕುತಿಮ್ಮನ ಕಗ್ಗದ ಈ ಸಾಲುಗಳು

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು,
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ.
ಬೆಲ್ಲ-ಸಕ್ಕರೆಯಾಗು ದೀನದುರ್ಬಲರಿಂಗೆ.
ಎಲ್ಲರೊಳಗೊಂದಾಗು ಮಂಕುತಿಮ್ಮ.

ಈ ಲೇಖನವನ್ನು, ಕನ್ನಡಿಗರು ಯು ಕೆ ರವರು ಹೊರತಂದ “ಸ್ನೇಹಯಾನ” ಸಂಚಿಕೆಯಲ್ಲಿ ಮೊಟ್ಟಮೊದಲಿಗೆ ಪ್ರಕಟಿಸಲಾಗಿದ್ದು, ಮತ್ತಷ್ಟು ಓದುಗರನ್ನು ತಲುಪಲೇ ಬೇಕಾದಂತಹ ವ್ಯಕ್ತಿಚಿತ್ರಣವಿದು ಎಂದು ಭಾವಿಸಿ ಅನಿವಾಸಿಯಲ್ಲೂ ಪ್ರಕಟಿಸುತ್ತಿದ್ದೇವೆ. ಅನಿವಾಸಿ ತಾಣಕ್ಕಾಗಿ ಮೂಲ ಬರಹದಲ್ಲಿ ಸ್ವಲ್ಪ ಮಾರ್ಪಾಟುಗಳನ್ನೂ ಮಾಡಲಾಗಿದೆ.

ಡಾ. ಪತ್ತಿಕೊಂಡ ವಿಶ್ವಂಭರ ನಾಥ್

ಕನ್ನಡ ಬಳಗದಲ್ಲಿ ಮಾತನಾಡುತ್ತಿರುವ ಡಾ. ನಾಥ್ (ಕೃಪೆ: KBUK website)

ಇಂಗ್ಲೆಂಡಿನ ಈಶಾನ್ಯ ಭಾಗದಲ್ಲಿ  ಡಾ. ಪತ್ತಿಕೊಂಡ ವಿಶ್ವಂಭರ ನಾಥ್ ಅವರ ಹೆಸರನ್ನುಕೇಳದ ಕನ್ನಡಿಗರಾಗಲಿ, ಭಾರತೀಯರಾಗಲಿ ವಿರಳ ಎನ್ನಬಹುದು. ಆದರೆ ಯು ಕೆ ದ ಹೊಸ ಪೀಳಿಗೆಯ ಎಲ್ಲ ಕನ್ನಡಿಗರಿಗೆ ಅವರ ಪರಿಚಯ ಇರಲಿಕ್ಕಿಲ್ಲ. 1980ರ ದಶಕದಲ್ಲಿ ಮೂರು ವರ್ಷ (1998-2001)ಕನ್ನಡಬಳಗದ ಉಪಾಧ್ಯಕ್ಷರಾಗಿದ್ದು ಎಲ್ಲರಿಗೂ ಗೊತ್ತಿರಲಿಕ್ಕಿಲ್ಲ. ಹೆಮ್ಮೆಯಿಂದ ತಾನೊಬ್ಬ ಕನ್ನಡಿಗ, ಮೇಲಾಗಿ ಭಾರತೀಯ ಎಂದು ಕರೆದುಕೊಳ್ಳುವ ರಿಟೈರ್ಡ್ ಫ್ಯಾಮಿಲಿ ಡಾಕ್ಟರನ್ನು ಯು.ಕೆ. ಸರಕಾರ MBE ಬಿರುದು ಕೊಟ್ಟು ಸನ್ಮಾನಿಸಿದೆ (1998). ಕರ್ನಾಟಕ ಸರಕಾರ ಅವರಿಗೆರಾಜ್ಯೋತ್ಸವ ಪ್ರಶಸ್ತಿ (2001) ಕೊಟ್ಟು ಗೌರವಿಸಿದೆ. ಇದು ಇವರ ಕಿರುಪರಿಚಯ. ನಾನು ಕೇಳಿದ ಹತ್ತು ಪ್ರಶ್ನೆಗಳಿಗೆ ಅವರು ಕೊಟ್ಟ ಉತ್ತರಗಳನ್ನು ಮತ್ತು ಟೆಲಿಫೋನ್ ಸಂದರ್ಶನವನ್ನುಸಂಗ್ರಹಿಸಿ ಇದನ್ನು ಬರೆಯುತ್ತಿದ್ದೇನೆ.

ಪಿ.ವಿ. ನಾಥ್ ಅವರ ಪೂರ್ವಜರು ಎರಡು – ಮೂರು ನೂರು ವರ್ಷಗಳ ಕೆಳಗೆ ಆಂಧ್ರಪ್ರದೇಶದ ಪತ್ತಿಕೊಂಡ ಎಂಬ ಊರಿನಿಂದ ಕರ್ನಾಟಕಕ್ಕೆ ಬಂದವರು. ತಾಯಿಯ ತವರೂರು ಹುಮ್ನಾಬಾದ. ಅವರು ಮರಾಠಿ ಮಾತಾಡಿದರೆ, ತಂದೆ ತೆಲುಗು ಮತ್ತು ಕನ್ನಡ ಮಾತಾಡುತ್ತಿದ್ದರು. 1900ರಲ್ಲಿ ಅವರ ಕುಟುಂಬ ಹೊಸಪೇಟೆಗೆ ಬಂದು ನೆಲಸಿದರು.

‘ಹೇಳದೆಯೆ ಕೇಳದೆಯೆ ಬಹನು ವಿಧಿರಾಯ’ (ಮಂಕು ತಿಮ್ಮನ ಕಗ್ಗ-550)

ಅವರು ಚಿಕ್ಕವರಿದ್ದಾಗ ನಡೆದ ಘಟನೆ: ಅವರ ತಾಯಿ ಮತ್ತು ತಂದೆ ಇಬ್ಬರಿಗೂ ಕ್ಷಯರೋಗ ತಗುಲಿ (TB )ಚಿಕಿತ್ಸೆಗೆ ಬಹಳಷ್ಟು ಕಷ್ಟ ಪಟ್ಟರು. ಆಗ ಸ್ಟ್ರೆಪ್ಟೋಮೈಸಿನ್ (streptomycin) ಮದ್ದನ್ನು ಹೊರದೇಶದಿಂದ ತರಿಸಬೇಕಾಗುತ್ತಿತ್ತು. 1950ರಲ್ಲಿ ಔಷಧಿ ಅಂಗಡಿಗಳೇ ಇರದ ಹೊಸಪೇಟೇಯಿಂದ ಔಷಧಿಗಾಗಿ ಬಳ್ಳಾರಿಗೆ ಹೋಗಬೇಕಿತ್ತು. ಅದಕ್ಕೆ ತಂದೆಯವರು ತಾವೇ ಒಂದು ಅಂಗಡಿ ತೆರೆದರು. ಅವರ 10 ಜನ ಮಕ್ಕಳಲ್ಲಿ ಅವರ ತಾಯಿ ಮತ್ತು ಸೋದರಮಾವನಿಗೆ ಒಬ್ಬರಾದರೂ ಡಾಕ್ಟರಾಗಬೇಕೆಂದು ಬಯಸಿದರು. ಇದ್ದವರಲ್ಲಿ ಬುದ್ಧಿವಂತನೆಂದು ವಿಶ್ವಂಭರನನ್ನು ಮೈಸೂರು ಮೆಡಿಕಲ್ ಕಾಲೇಜಿಗೆ 1959 ರಲ್ಲಿ ಸೇರಿಸಿದರು. ಸೊಸೆಯೂ ಡಾಕ್ಟರಾಗಿ ಬಂದರೆ ಇಬ್ಬರೂ ಕೂಡಿ ನರ್ಸಿಂಗ ಹೋಂ ಶುರು ಮಾಡಿದರೆ ಹೊಸಪೇಟೇಯ ಜನರ ಸೇವೆಗೆ ಅನುಕೂಲ ಆದೀತೆಂಬ ಮುಂದಾಲೋಚನೆ, ಆಸೆ  ಅವರಿಗೆ. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಕಲಿಯುತ್ತಿದ್ದ ಬಳ್ಳಾರಿಯ ಸತ್ಯವತಿ ಎಂಬ ವೈದ್ಯಕೀಯ ವಿದ್ಯಾರ್ಥಿನಿಯೊಡನೆ ಮದುವೆಯೂ ಆಯಿತು. 1968 ರಲ್ಲಿ ಯು ಕೆ ಗೆ ಬಂದು ENT ಯಲ್ಲಿ ಡಿಪ್ಲೋಮಾ ಪರೀಕ್ಷೆ ಪಾಸು ಮಾಡಿದರು. ಆಕೆ ಹೆರಿಗೆ ವಿಷಯದಲ್ಲಿ ಸ್ನಾತಕೋತ್ತರ ಪರೀಕ್ಷೆ ಮಾಡಿ  ಅಭ್ಯಾಸ ಮುಂದುವರೆಸಿದಳು. ಇಬ್ಬರು ಹೆಣ್ಣು ಮಕ್ಕಳಾದರು. ಈ ದೇಶದಲ್ಲಿ ಬಂದು ಮೊದಲ 5 ವರ್ಷಗಳಲ್ಲಿ ಅವರು ಪಟ್ಟ ಕಷ್ಟ ಆ ಕಾಲದಲ್ಲಿ ಅವರಂತೆ ಬಂದ ಉಳಿದ ವೈದ್ಯರ ಅನುಭವಗಳಿಗಿಂತ ಭಿನ್ನವಾಗಿರಲಿಲ್ಲ. ಅದು  ಹೇಳ ಲಾಗದಷ್ಟು ಕಷ್ಟದ  ಕಥೆ. ಹೊರಗೆ ಕೆಲಸ, ಪರೀಕ್ಷೆಗಾಗಿ ಓದು, ಮಕ್ಕಳ ಪೋಷಣೆ ಹಾಗು ವಿದ್ಯಾಭ್ಯಾಸ. ಆಮೇಲೆ ಪುರಸೊತ್ತೇ ಇಲ್ಲ. ಇಷ್ಟರಲ್ಲಿ ದೈವ ತನ್ನದೊಂದು ಪರೀಕ್ಷೆ ತಂದೊಡ್ಡಿತು. 1974 ರಲ್ಲಿ MRCOG courseಗೆ ಲಂಡನ್ನಿಗೆ ಹೋಗಿ ತಿರುಗಿ ಬರುವಾಗ ಸತ್ಯವತಿ ಕಾರಿನ ಅಪಘಾತದಲ್ಲಿ ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡರು. ಮೂರನೆ ದಿನ ಅವಳ ಸರ್ಜನ್ ಆ ಆಘಾತದ  ಸುದ್ದಿಯನ್ನು ತಿಳಿಸಿದಾಗ ಗರ ಬಡೆದಂತಾಯ್ತು. ಅವರ ಜೀವನದ ದಿಕ್ಕೇ ಬದಲಾಯಿತು. ಮಡದಿಯ ಆರೈಕೆ, ಬೆಳೆಯುತ್ತಿರುವ ಮಕ್ಕಳ ಶಿಕ್ಷಣದ ಮುಂದುವರಿಕೆ, ಅವರ ಭವಿಷ್ಯದ ಚಿಂತೆ, ಇವುಗಳಿಗಾಗಿ ಈ ದೇಶದಲ್ಲಿಯೇ ಉಳಿಯುವ ನಿರ್ಧಾರ ಮಾಡಿದರು. ಆಗ ಅವರ ಬೆನ್ನೆಲುವಾಗಿ ನಿಂತ ಮಹಿಳೆ ಅದೇ ಆಸ್ಪತ್ರೆಯಲ್ಲಿ ಕೆಲಸಮಾಡುತ್ತಿದ್ದ  ಶ್ರೀಮತಿ ಬ್ರಿಟಾ ವಾಕರ್. ತನ್ನ ಕೆಲಸವನ್ನೂ ತ್ಯಜಿಸಿ ಇವರ ಸಹಾಯಕ್ಕೆ ನಿಂತಳು. ಇವರ ಮನೆತನದ ಮತ್ತು ಆಕೆಯ ನಂಟು ಮೂವತ್ತು ವರ್ಷ ಮುಂದುವರೆಯಿತು. ಸ್ಟ್ಯಾನ್ಲಿ (Stanley, Co Durham) ಎಂಬ ಊರಿನ ಜನರಲ್ ಮೆಡಿಕಲ್ ಪ್ರ್ಯಾಕ್ಟಿಶನರ್ (GP) ಆಗಿ ಸೇರಿಕೊಂಡರು. ಯಾಕಂದರೆ ಅಲ್ಲಿಂದ ಶ್ರೀಮತಿ ಬ್ರಿಟಾ ವಾಕರ್ ವಾಸಿಸುತ್ತಿದ್ದ ಹಾರ್ಟ್ಲಿಪೂಲ್ ಗೆ ಬರೀ ಅರ್ಧ ಗಂಟೆಯ ದಾರಿ. ಕರೆದಾಗ ಬರಲಿಕ್ಕೆ ಆಕೆಗೆ ಅನುಕೂಲವಾಗುತ್ತಿತ್ತು.

ಭಗವದ್ಗೀತೆಯೊಡನೆ ನಂಟು

ಅವರ ಬಗ್ಗೆ ಅಲ್ಪ ಸ್ವಲ್ಪ ಗೊತ್ತಿದ್ದ ನನಗೆ ಅವರ ಬಾಲ್ಯ ಮತ್ತು ಮನೆತನದ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ. ನಾನು ಕೇಳಿದೆ: ”ಚಿಕ್ಕಂದಿನನಲ್ಲಿ  ನಿಮ್ಮ ಪರಿಸರ ಹೇಗಿತ್ತು?ನೀವು ಭಗವದ್ಗೀತೆಯನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದಲ್ಲದೆ ಅದರ ತತ್ವಗಳ ಮೇಲೆ ಲೇಖನಗಳನ್ನು ಬರೆದು, ’ಗೀತೆ’ಯ ಮೇಲೆ ಒಂದು ಭಾಷ್ಯೆ ಸಹ ಬರೆದಿದ್ದೀರಿ. ಅದಲ್ಲದೆ ಆ ವಿಷಯದ ಮೇಲೆ ಅಧಿವೇಶನ, ಉಪನ್ಯಾಸಗಳನ್ನು ಮಾಡಿ, 17ಅಂತಾರಾಷ್ಟ್ರೀಯ Gita ಸಮ್ಮೇಳನಗಳನ್ನೂ ನಿರ್ವಹಿಸಿದ್ದೀರಿ. ನಿಮಗೆ ಅದರ ಸ್ಫೂರ್ತಿ ಎಲ್ಲಿಂದ ಮತ್ತು ಯಾವಾಗ ಬಂತು? ನೀವು ನಿಮ್ಮ ಮನೆಗೆ ”ತಪಸ್ವಿ” ಎಂದು ಹೆಸರಿಟ್ಟಿದ್ದನ್ನು ಗಮನಿಸಿದ್ದೇನೆ.” ಅಂದೆ.

ಡಾ ನಾಥ್: ”ಹೇಗೆ ಪ್ರಾರಂಭ ಮಾಡಲಿ ಎಂದು ತಿಳಿಯುತ್ತಿಲ್ಲ. ಒಂದೇ ಶಬ್ದದಲ್ಲಿ ಅಲ್ಲ  ಕೆಲವು ವಾಕ್ಯಗಳಲ್ಲೂ ಉತ್ತರಿಸಲಾರೆ. ಚಿಕ್ಕಂದಿನಲ್ಲಿ  ನನ್ನ ತಾಯಿ ನನ್ನನ್ನು ಪ್ರತಿ ಶುಕ್ರವಾರ ಗೀತಾ ಮಂದಿರಕ್ಕೆ ಕರೆದೊಯ್ಯುತ್ತಿದ್ದರು. ನನಗೆ ಆಗ 6 ವರ್ಷ. ಒಂದು ದಿನ ಸ್ವಾಮೀಜಿ ಗೀತಾ ಪಾಠ ಮಾಡಿದವರಿಗೆ ಬಹುಮಾನ ಕೊಡುವದಾಗಿ ಘೋಷಿಸಿದರು. Prize ನನ್ನನ್ನು ಆಕರ್ಷಿಸಿತು. ಕೆಲವೇ ದಿನಗಳಲ್ಲಿ 700 ಅಲ್ಲದಿದ್ದರೂ 120 ಶ್ಲೋಕಗಳನ್ನು ಬಾಯಿ ಪಾಠಮಾಡಿ ಆ ಬಹುಮಾನ ಗಿಟ್ಟಿಸಿದೆ. ನಂತರ ನನಗೆ ದೊರೆತ ’ಗೀತಾ ಮಕರಂದಂ’ ಪುಸ್ತಕ, ನನ್ನ ತಂದೆಯ ಸಂಗ್ರಹದಲ್ಲಿಯ ರಾಮಾಯಣ, ಭಾರತ, ಭಾಗವತ ಪುರಾಣ ಮುಂತಾದವುಗಳನ್ನು ಹೋಂ ವರ್ಕ್ ಮುಗಿಸಿ ಸಮಯ ಸಿಕ್ಕಾಗೆಲ್ಲ ಪುನಃ ಪುನಃ ಓದುತ್ತಿದ್ದೆ. ನಾನು ಏಳು ವರ್ಷದವನಿದ್ದಾಗ ಮನೆಗೆ ಬರುತ್ತಿದ್ದ ಒಬ್ಬ ಮಹಾ ಸಂತರು, ತಪಸ್ವಿ ಮಹಾರಾಜ ಎಂದು ಹೆಸರು, ನನ್ನ ತಲೆಯ ಮೇಲೆ ಕೈಯಿಟ್ಟು ”ಹರಿ ಓಮ್ ತತ್ ಸತ್’ ಎಂದು ಹರಸಿದರು. ಅವರೇ ನನ್ನ ಮೊದಲ ಗುರು. ನನಗೆ ವಿಶ್ವಂಭರ ಎಂದು ಹೆಸರಿಡಲು ನನ್ನ ತಾಯಿಗೆ ಆದೇಶ ಮಾಡಿದವರೂ ಅವರೇ. ನಾನು ಈಗಲೂ ಧರಿಸುತ್ತಿರುವ 150 ವರ್ಷ ಹಳೆಯ ಗೌರಿಶಂಕರ ರುದ್ರಾಕ್ಷ ಸಹ ಅವರೇ ಕೊಟ್ಟದ್ದು. ಅದು ನೇಪಾಳದ ಪಶುಪತಿನಾಥ್ ಗುಡಿಯಿಂದ ಬಂದದ್ದು. ಅದು ಎಂದೂ ನನ್ನ ಕೊರಳನ್ನು ಬಿಟ್ಟಿಲ್ಲ (ಆಸ್ಪತ್ರೆಯಲ್ಲಿ ಆಪರೇಷನ್ ಆಗುವಾಗಷ್ಟೇ ಸ್ವಲ್ಪೆ ಸಮಯ ತೆಗೆಯಬೇಕಾಗಿ ಬಂದದ್ದು ಬಿಟ್ಟರೆ). ಭಾರತದಲ್ಲಿದ್ದಾಗ ಮತ್ತು ಈ ದೇಶದಲ್ಲಿ ನೆಲೆಸಿದ ಮೇಲೂ ನಮ್ಮ ಮನೆಗೆ ಭೇಟಿ ಕೊಟ್ಟ ಸ್ವಾಮೀಜಿಗಳು, ಸ್ವಾಮಿನಿಯರು ಅನೇಕ ಜನ. ಡಾ. ರಾಮರಾವ ಅವರು ಕೊಟ್ಟ ಗೀತೆ ಮತ್ತು ಉಪನಿಷತ್ತುಗಳ ಮೇಲಿನ ಪುಸ್ತಕಗಳೇ ನನ್ನ ಹೆಂಡತಿ ಮತ್ತು ಕುಟುಂಬಕ್ಕೆ ಬಂದ ಗಂಡಾಂತರ ಕಾಲದಲ್ಲಿ ನಮಗೆ ’ತ್ರಾಹಿ’ಯಾಗಿ ಆಸರೆ ಕೊಟ್ಟದ್ದು. ಗೀತೆಯನ್ನು ಓದಿ, ಮನನ ಮಾಡಿ, ನನಗೆ ತಿಳಿದ ಅರ್ಥವನ್ನು ಬರೆದು ಮತ್ತೆ ಮತ್ತೆ ಪರಿಷ್ಕರಿಸಿ ಇಡುವ ಪರಿಪಾಠ ಮಾಡಿಕೊಂಡಿದ್ದೆ. ನನ್ನಣ್ಣನ ಮಗ ಕೊಟ್ಟ ಗಂಧದ ಕೆತ್ತನೆ ”ಗೀತೋಪದೇಶ” ನನಗೆ ಅತ್ಯಂತ ಪ್ರಿಯವಾಗಿತ್ತು. ಒಂದು ದಿನ ರಾತ್ರಿ  ಎರಡು ಗಂಟೆಗೆ ಒಂದು ಅವರ್ಣನೀಯ ಅನುಭವವಾಯಿತು. ಆಗ ಒಮ್ಮೆಲೆ ಅದರ ರಹಸ್ಯ ತಿಳಿದಂತಾಯಿತು. ಆದರೆ ನನ್ನ ಅನ್ವೇಷಣೆ ಇನ್ನೂ ಮುಗಿದಿಲ್ಲ. 1994 ರಲ್ಲಿ ಸ್ವಾಮಿ ಹರಿಹರ್ಜಿ ಮಹಾರಾಜ ಸಂತರೋಡನೆ ಭಗವದ್ಗೀತೆಯ ಮೇಲೆ ಚರ್ಚೆಯಾದ ನಂತರ ಅವರು ”ಬೇಟಾ, ನೀನು ಭಗವದ್ಗೀತೆಯ ಮೇಲೆ ಪುಸ್ತಕ ಯಾಕೆ ಬರೆಯಬಾರದು?” ಎಂದು  ನನಗೆ ಅಪ್ಪಣೆ ಕೊಟ್ಟರು. ಅದರ ಫಲವೇ ನಾನು ಬರೆದ ಗೀತೆಯ ಮೇಲಿನ ಎರಡು ಸಂಪುಟಗಳ ಭಾಷ್ಯೆ: ’ತತ್ ತ್ವಂ ಅಸಿ’ ಎಂದು ಅದನ್ನು ಕರೆದೆ. (ಈಗ ತಾನೆ ಮೂರು ಸಂಪುಟಗಳುಳ್ಳ ಅದರ ಎರಡನೆಯ ಆವೃತ್ತಿ ಪ್ರಕಟವಾಗಿದೆ.) ಅದಲ್ಲದೆ ನಾನು ಎಂಟು ಪುಸ್ತಕಗಳನ್ನು ಸಹ ಬರೆದಿದ್ದೇನೆ. ಕೆಲವು ಸಂಪಾದಿಸಿದ್ದು. ಕೆಲವು ಭಗವದ್ಗೀತೆಗೆ ಸಂಬಂಧ ಪಟ್ಟವು. ಅದಲ್ಲದೆ ಮೈಸೂರು ದತ್ತ ಪೀಠದ ಗುರು ಶ್ರೀ ಗಣಪತಿ ಸಚ್ಚಿದಾನಂದಸ್ವಾಮಿಯವರ ಜೀವನ ಚರಿತ್ರೆ, ಅರಳುಮಲ್ಲಿಗೆ ಪಾರ್ಥಸಾರಥಿಯವರ ’ದಾಸ ಸಾಹಿತ್ಯ’ ದ ಇಂಗ್ಲೀಷ್ ಅನುವಾದ, ಶ್ರೀ ಕೆ.ಕೆ ಅತ್ರಿಯವರೊಂದಿಗೆ ಎರಡು ಪುಸ್ತಕಗಳು ಇತ್ಯಾದಿ.”

ಬದುಕು ಜಟಕಾ ಬಂಡಿ

ಡಾ ನಾಥ್ ಅವರು ಇಷ್ಟೆಲ್ಲ ವೃತ್ಯೇತ್ತರ  ಕೆಲಸಗಳ ಜೊತೆಗೆ, ಮನೆಯಲ್ಲಿ ಸಂಸಾರ, ಹೊರಗೆ  ಒಂಟಿಯಾಗಿ (almost single handed G P practice) ಸಹ, ಬಲು ಕಷ್ಟದಿಂದ ಮುಂದುವರಿಸಿದರು. ಮನೆಯ ಜವಾಬ್ದಾರಿ, ಮಕ್ಕಳ ಶಿಕ್ಷಣದ ಪೂರ್ತಿ ಹೊಣೆ ಹೊತ್ತ ಮಡದಿ, ಇಬ್ಬರು ಸಹಾಯಕರ (home help) ನೆರವಿನಿಂದ ನಿಭಾಯಿಸಿದರು.  ಊರಲ್ಲಿದ್ದಿದ್ದರೆ ಸಿಗಬಹುದಾಗಿದ್ದ ಒಬ್ಬ ಸಂಬಂಧಿ ಅಥವಾ ಅಜ್ಜಿಯ ಜಾಗ ತುಂಬಿದ ಬ್ರಿಟಾ ವಾಕರ್ ಮನೆಯವಳಂತೆಯೇ ಆಗಿದ್ದಳು. ಅವರೊಡನೆ ಆರು ಸಲ ಭಾರತ ಪ್ರವಾಸಕ್ಕೂ ಹೋದವಳು ಆಕೆ. ಹಿರಿಯ ಮಗಳು ಆಕೆಯನ್ನು ತೆಲುಗಿನಲ್ಲಿ ಪ್ರೀತಿಯಿಂದ ’ಮಾಮುಲು’ ಎಂದು ಕರೆಯುತ್ತಿದ್ದಳು- Ma ಮತ್ತು  ಗೌರವವಾಚಕ ’ಮುಲು’ ಸೇರಿಸಿ! ಆಕೆ ಅಷ್ಟು ಹತ್ತಿರವಾಗಿದ್ದಳು. ‘ಆಕೆ ಸಿಕ್ಕಿರದಿದ್ದರೆ ನಮ್ಮ ಜೀವನ  ನಿರ್ಭರವಾಗುತ್ತಿತ್ತು’ ಎನ್ನುತ್ತಾರೆ ನಾಥ್.  ಹೊಸತರಲ್ಲಿ ಪ್ರ್ಯಾಕ್ಟಿಸಿನಿಂದ ಒಂದು ವಾರ ರಜೆ ತೊಗೊಳ್ಳುವದು ಸಹ ಸುಲಭವಾಗಿರಲಿಲ್ಲ. ಯಾಕಂದರೆ ಇಂಗ್ಲೆಂಡಿನ ಈಶಾನ್ಯ ಮೂಲೆಯ ಕಲ್ಲಿದ್ದಲು ಗಣಿಪ್ರದೇಶದ ಆ ಹಳ್ಳಿಗೆ ಬರಲು ಡಾಕ್ಟರುಗಳಿಗೆ ಉತ್ಸಾಹವಿರುತ್ತಿರಲಿಲ್ಲ, ಬರಲೂ ಒಪ್ಪುತ್ತಿರಲಿಲ್ಲ. ಆಗಿನ ಕಾಲದಲ್ಲಿ ಮೊಬೈಲ್ ಫೋನುಗಳಿರದೆ ಚಳಿ-ಮಳೆಗಾಲದಲ್ಲಿ ಡಾಕ್ಟರುಗಳಿಗೆ ’ಕಾಲ್’ ಮೇಲಿರುವದು, ರೋಗಿಗಳ ಮನೆಗೆ ’ವಿಸಿಟ್’ ಹೋಗುವದು ಕಷ್ಟದ ಕೆಲಸವಾಗಿಬಿಡುತ್ತಿತ್ತು! ’ಅದೊಂದು ಬೇರೆ ಜಗತ್ತೇ ಬಿಡಿ” ಅನ್ನುತ್ತಾರೆ ಅವರು.

ಕನ್ನಡ ಬಳಗ ಯು ಕೆ (KBUK)

ವಿಶ್ವಂಭರ ನಾಥ್ ಅವರು ಕನ್ನಡ ಬಳಗದ ಪ್ರಾರಂಭದ ಕಾಲದಿಂದಲೂ ಆಜೀವ ಸದಸ್ಯರು. 1998 ರಿಂದ 2001 ರ ವರೆಗೆ ಅದರ ಉಪಾಧ್ಯಕ್ಷರೆಂದಲೂ ಸೇವೆ ಸಲ್ಲಿಸಿದ್ದಾರೆ. ನಾನು ಅವರನ್ನು ಮತ್ತು ಅವರ ಕುಟುಂಬದವರನ್ನೂ ಬಳಗದ ಕಾರ್ಯಕ್ರಮಗಳಲ್ಲಿ ಮತ್ತು ಸದಸ್ಯರ ಕೂಟಗಳಲ್ಲಿ ಮೇಲಿಂದ ಮೇಲೆ ಕಾಣುತ್ತಿದ್ದೆ. ಅವರ ಇಬ್ಬರು ಪ್ರತಿಭಾವಂತ ಹೆಣ್ಣುಮಕ್ಕಳು ಸಹ ಸಕ್ರಿಯವಾಗಿ ಭಾಗವಸುತ್ತಿದ್ದರು. ಆದರೆ ಇತ್ತೀಚೆಗೆ ತಮ್ಮ ಉಳಿದ ಚಟುವಟಿಕೆಗಳಲ್ಲಿ ಆಳವಾಗಿ ತೊಡಗಿಕೊಂಡಿದ್ದರಿಂದ ತಮಗೆ ಬರಲು ಆಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಕಲಾಪ್ರೇಮಿ

ಕಲಾಪ್ರೇಮಿಯಾಗಿದ್ದ ನಾಥ್ ದಂಪತಿಗಳು ಹುಟ್ಟುಹಾಕಿದ ಅದೇ ಹೆಸರಿನ ಸಾಂಸ್ಕೃತಿಕ ಸಂಸ್ಥೆಯ ಅನೇಕ ಕಾರ್ಯಕ್ರಮಗಳಿಗೆ ನಾನು ಹೋಗಿದ್ದೇನೆ. ಅದಕ್ಕೆ ಮುಖ್ಯ ಪ್ರೇರಣೆ ಅವರ ಮಡದಿ ಡಾ.ಸತ್ಯವತಿ. ಆಕೆ ಚಿಕ್ಕವಳಾಗಿದ್ದಾಗ ನಟರಾಗಿದ್ದ ತನ್ನ ತಂದೆಯೊಡನೆ ರಂಗ ತಾಲೀಮು ನೋಡುತ್ತ ಕುಳಿತಿರುತ್ತಿದ್ದಳಂತೆ. ತೆಲುಗಿನ ಪ್ರಸಿದ್ಧ ಗೀತೆಗಳನ್ನೂ ಹಾಡುತ್ತಿದ್ದಳು. ಅನಿವಾರ್ಯವಾಗಿ ವೈದ್ಯಕೀಯ ವೃತ್ತಿ ಕೈಬಿಟ್ಟಮೇಲೆ ಸ್ಟ್ಯಾನ್ಲಿಯಲ್ಲಿ  ಶಾಸ್ತ್ರೀಯ ಸಂಗೀತವೇ ಅವಳ ಜೀವನಾಧಾರವಯಿತು. ತೆಲುಗಿನ ಪ್ರಸಿದ್ಧ ಕವಿ-ಸಾಹಿತಿಗಳು ದಿಗ್ಗಜರು ಅವರ ಮನೆಗೆ ಭೇಟಿ ಕೊಟ್ಟರು. ಆ ಉತ್ಸಾಹ ಕಲಾಸಕ್ತ ಮಿತ್ರರ ಕೂಟಗಳಿಗೆ ಪುಟ ಕೊಟ್ಟಿತು. ಆ ದಿನಗಳಲ್ಲಿ ಯು ಕೆ ಗೆ ಬಂದ ಸಂಗೀತಗಾರರ ಕಚೇರಿಗಳು ಲಂಡನ್ ಮತ್ತು ಸುತ್ತಮುತ್ತಲಿನ ಕೆಲವೇ  ಸ್ಥಳಗಳಗೆ ಸೀಮಿತವಾಗಿರುತ್ತಿತ್ತು. ಲಂಡನ್ನಿಗೆ ಬರುವ ಕಲಾವಿದರನ್ನು ಸಂಪರ್ಕಿಸಿ ತಮ್ಮೂರಿಗೆ ಬರಮಾಡಿಕೊಳ್ಳ ತೊಡಗಿದೆದರು. ಅದುವೇ ‘ಕಲಾಪ್ರೇಮಿ‘ ಎಂಬ ಸಂಸ್ಥೆಯ ಜನನ (1983). ಲಲಿತಕಲೆಗಳ ಪೋಷಣೆಯೇ ಅದರ ಉದ್ದೇಶವಾಗಿತ್ತು. ಪ್ರತಿಭಾವಂತ, ಪ್ರಖ್ಯಾತ ಕಲಾಕಾರರ ಸಂಪರ್ಕ ಅವರ ಮಡದಿಗೆ ಆನಂದ, ತೃಪ್ತಿ ಕೊಟ್ಟಿತು. ಕಾರ್ಯಕ್ರಮಗಳಾದ ನಂತರ ತಿಂಗಳಾನುಗಟ್ಟಲೆ ಅವುಗಳ ಮೆಲುಕು ಹಾಕುತ್ತ, ನಮ್ಮ ಮನೆಯಲ್ಲಿ ತಂಗಿದ ಕಲಾವಿದರೊಡನೆ ಕಳೆದ ದಿನಗಳ ನೆನಪಿನ ಸಂತೋಷವೇ ಆಕೆಗೆ ’ಥೆರಪಿ್’ಯಾಯಿತು. ಅದನ್ನು ಬೇರಾರೂ ಕೊಡಲಸಾಧ್ಯವಾಗಿತ್ತು. ನಾರ್ದರ್ನ್ ಆರ್ಟ್ಸ್ (Northern Arts) ಸಂಸ್ಥೆ ಕೆಲ ವರ್ಷಗಳ ವರೆಗೆ ’ಕಲಾಪ್ರೇಮಿ’ಯನ್ನು ಪೋಷಿಸಿತು. ಮೂರು ವರ್ಷಗಳಕಾಲ ಅದರ ಗೌರವ ಡೈರೆಕ್ಟರ್ ಆಗಿ ಸಹ ಕೆಲಸ ಮಾಡಿ ಸಂಸ್ಥೆಗೆ ಒಂದು ಹೆಸರು ತಂದರು. ಅಲ್ಲಿಗೆ ಬಂದು ಹಾಡಿ, ನುಡಿಸಿ, ಕುಣಿದು ಅವರ ಮತ್ತು ಸುತ್ತಲಿನ ಕನ್ನಡ ಮತ್ತು ಕನ್ನಡೇತರ ಭಾರತೀಯರ ಮನಗಳನ್ನು ಸೂರೆಗೊಂಡ  ಕಲಾವಿದರು ಅನೇಕರು. ಅನೇಕ ಸಲ ಅವರ ಮನೆಗೆ ಬಂದು ಹೋದವರಲ್ಲಿ, ಇತ್ತೀಚೆಗೆ ಕಣ್ಮರೆಯಾದ ಮಾಸ್ಟರ್ ಹಿರಣ್ಣಯ್ಯನವರು ಅವರ ಮಾವನವರನ್ನು ತಮ್ಮ ಗುರುಗಳೆಂದು ಕಾಣುತ್ತಿದ್ದರಂತೆ. ಅವರೇ ಪ್ರಸಿದ್ಧ ”ಲಂಚಾವತಾರ” ನಾಟಕಕ್ಕೆ ಪ್ರಚೋದನೆ ಕೊಟ್ಟವರಂತೆ. ಈ ಮಾತನ್ನು ಒಪ್ಪಿ  ಹಿರಣ್ಣಯ್ಯನವರೇ ಒಂದು ಸಂದರ್ಭದಲ್ಲಿ ಬಹಿರಂಗವಾಗಿ ಬಿತ್ತರಿಸಿದ್ದಾರೆ, ಎಂದು ಹೆಮ್ಮೆಯಿಂದ ಹೇಳುತ್ತಾರೆ ಡಾ ನಾಥ್. 1983 ರಲ್ಲಿ ಉಗಮವಾದ ’ಕಲಾಪ್ರೇಮಿ’ ಸಂಸ್ಥೆಗೆ ಈಗ ಇಳಿಗಾಲ.

ನಾನು: ನೀವು ಯು ಕೆ ಕನ್ನಡ ಬಳಗ ಪಪ್ರಥಮ ಆಜೀವ ಸದಸ್ಯರುಗಳ ಸಾಲಿನಲ್ಲಿ ಬರುತ್ತೀರಿ, ಅಲ್ಲವೆ?

ಉತ್ತರ: ಹೌದು. ಪ್ರಾರಂಭದ ದಿನಗಳಲ್ಲಿ ನಾನು ಬಳಗದ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳುತ್ತಿದೆ. ಒಮ್ಮೆ ಉಪಾಧ್ಯಕ್ಷನಾಗಿಯೂ ಆಗಿದ್ದೆ. ಅದರೆ ನಾನು ಹಮ್ಮಿಕೊಂಡಿದ್ದ ಕಾರ್ಯಬಾಹುಲ್ಯದಿಂದ ಅದು ಮುಂದುವರೆಯಲಿಲ್ಲ.

ಸೇತು ಬಂಧನ

1982ರ ಫಾಕ್ಲಂಡಿನ ಪತ್ರಿಕೆಯಲ್ಲಯ ವರದಿ;         Montage by author

ಅವರು ತಮ್ಮೂರಿಗೂ ಎಂಟು ಸಾವಿರ ಮೈಲು ದೂರದ ಫಾಕ್ಲಂಡ್ ದ್ವೀಪಗಳ ರಾಜಧಾನಿಯಾದ ಅದೇ ಹೆಸರಿನ ಸ್ಟ್ಯಾನ್ಲಿಗೂ ಸೇತುವೆ ಕಟ್ಟಿದಿರಿ, ಎಂದು ಕೇಳಿದ್ದೆ. ಆ ನಾಡಿನ  ಸುದ್ದಿ ಸುರುಳಿ (The Penguin News) ಯಲ್ಲೂ ಅವರ ಹೆಸರಿನ ಉಲ್ಲೇಖವಿದೆ. ಎತ್ತಣ ಕೆಲವೇ ಸಾವಿರ ಜನವಸತಿಯ ಕಲ್ಲಿದ್ದಲು ಗಣಿಗ್ರಾಮ, ಎತ್ತಣ ದಕ್ಷಿಣ ಅಮೆರಿಕೆಯ ಸನಿಹದ ಪೋರ್ಟ್ ಸ್ಟ್ಯಾನ್ಲಿ? ಅದೊಂದು ಸ್ವಾರಸ್ಯಕರ ಇತಿಹಾಸದ ತುಣುಕು.

ಧರ್ಮಾರ್ಥ ಕೆಲಸಗಳಲ್ಲಿ (Charity work) ತೊಡಗಿಕೊಂಡಿದ್ದ ನಾಥ್ ದಂಪತಿಗಳು ಅವಿರತ ಶ್ರಮದಿಂದ 1976ರಲ್ಲಿ ಲಯನ್ಸ್ ಕ್ಲಬ್ಬಿನ ಅಂತಾರಾಷ್ಟ್ರೀಯ ಆಡಳಿತ ಮಂಡಳಿಯಿಂದ ಮನ್ನಣೆ ಪಡೆದು ಸ್ಟ್ಯಾನ್ಲಿ ಯಲ್ಲಿ (Stanley, Co Durham) ಲಯನ್ಸ್ ಕ್ಲಬ್ಬೊಂದನ್ನು ಪ್ರಾರಂಭಿಸಿಯೇ ಬಿಟ್ಟರು.  ವರ್ಷಕ್ಕೆರಡು ಅಥವಾ ಮೂರು ಸಲ ಸತ್ಯವತಿ ತನ್ನ  ಗೆಳತಿಯರ ಸಹಾಯದಿಂದ ನೂರರಷ್ಟು ಸದಸ್ಯರಿಗೆ ಭರ್ಜರಿ ಭೋಜನದ ವ್ಯವಸ್ಥೆ ಮಾಡುತ್ತಿದ್ದರು. ಆಗ ಕೂಡಿಸಿದ ಧನವನ್ನು ತಪ್ಪದೆ ನಿಯಮಿತವಾಗಿ ಕಾಮನ್ವೆಲ್ತ್ ಇನ್ಸ್ಟಿಟ್ಯೂಟ್ ಫಾರ್ ಬ್ಲೈಂಡ್ ಗೆ  (Commonwealth Institute for the Blind) ಕಳಿಸಿಕೊಡುತ್ತಿದ್ದರು. ಕರ್ನಾಟಕದಲ್ಲಿ ಬ್ರೇಲ್ ಡುಪ್ಲಿಕೇಟರ್ ಕೊಳ್ಳಲು ಇದರಿಂದ ಸಹಾಯವಾಯಿತು. ಇದಲ್ಲದೆ ಚೆನ್ನೈದಲ್ಲಿ ನಿರ್ಗತಿಕ ಅಂಧ ಮಹಿಳೆಯರ ಆಶ್ರಯಕ್ಕೆ ಹಮ್ಮಿಣಿ ಕಳಿಸಲು ಅನುವಾಯಿತು. ಇವೆಲ್ಲ ಕಾರ್ಯಗಳು ಆಕೆಯ ಮನಸ್ಸಿಗೆ ಅತ್ಯಂತ ತೃಪ್ತಿ ಕೊಟ್ಟವು. ಈ ಮಧ್ಯೆ 1982ರಲ್ಲಿ ಶುರುವಾದ Falklands war ದಿಂದಾಗಿ ಬ್ರಿಟನ್ನಿನ ಆಡಳಿತಕ್ಕೊಳಗಾಗಿದ್ದ  ಆ ದ್ವೀಪಗಳಿಗೆ ಬಹಳಷ್ಟು ಹಾನಿಯಾಯಿತು. ಅದರ ರಾಜಧಾನಿಯಾದ ಪೋರ್ಟ್ ಸ್ಟ್ಯಾನ್ಲಿಯ ಶಾಲೆಗೆ ಉಂಟಾದ ಧಕ್ಕೆಯಿಂದ ಮಕ್ಕಳ ಅಭ್ಯಾಸದ ಸೌಲತ್ತುಗಳ ಕೊರತೆಯುಂಟಾದುದು ಅವರಿಗೆ ತಿಳಿದಾಗ (ಊರುಗಳ ಹೆಸರಿನ ಸಾಮ್ಯತೆಯ ಸ್ಪೂರ್ತಿಯಿಂದ) ಆ ಮಕ್ಕಳ ಸಹಾಯಕ್ಕೆಂದು ಫಂಡ್ ರೈಸಿಂಗ್ ಪ್ರಾರಂಭಿಸಿದರು. ಆ ದ್ವೀಪದ ಶಾಲೆಯ ಹೆಡ್ ಮಾಸ್ಟರರನ್ನು ತಮ್ಮೂರಿಗೆ ಆಮಂತ್ರಿಸಿದರು. ಲಾರ್ಡ್ ಸ್ಟ್ಯಾನ್ಲಿಯವರು ಈ ಯೋಜನೆಗೆ ಪೋಷಕರಾದರು. ಇವರೆಲ್ಲರನ್ನು ಇಲ್ಲಿಯ ಸಿವಿಕ್ ಹಾಲ್ ನಲ್ಲಿ ಸನ್ಮಾನ ಮಾಡಲಾಯಿತು. ಆ ನಂತರ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿರುವ ಎಲ್ಲ ಸ್ಟ್ಯಾನ್ಲಿ ಪಟ್ಟಣಗಳನ್ನು ಸಂಪರ್ಕಿಸಿದಾಗ ಜಗತ್ತಿನಲ್ಲಿ 30 ಸ್ಟ್ಯಾನ್ಲಿಗಳಿವೆ ಎಂಬ ಸಂಗತಿ ತಿಳಿಯಿತು.! ಅವುಗಳಲ್ಲಿ 10 ಜೊತೆಗೂಡಿದವು. BBC ಮುಖಾಂತರ ಮಾಡಿದ ಮನವಿಯಿಂದಾಗಿ ಶಿಕ್ಷಣಕ್ಕೆ ಅನುಕೂಲವಾಗುವ ಸಲಕರಣೆಗಳ ಸಂಗ್ರಹವಾಯ್ತು. ಅವುಗಳನ್ನು ರಫ್ತು ಮಾಡುವ ಖರ್ಚನ್ನು ಒಬ್ಬ ವ್ಯಾಪಾರಸ್ಥ ವಹಿಸಿಕೊಂಡ. ಇದೆಲ್ಲದರ ಪರಿಣಾಮವಾಗಿ 1983ರಲ್ಲಿ ಶಿಕ್ಷಣ ಖಾತೆಯ ಡೈರೆಕ್ಟರ್ ಮತ್ತು ಫಾಕ್ಲಂಡ್ ದ ಗವರ್ನರ್  ಆ ನಾಡಿನ 150ನೆಯ ವಾರ್ಷಿಕೋತ್ಸವಕ್ಕೆ ಡಾ. ನಾಥರನ್ನು ಆಮಂತ್ರಿಸಿದರು. ಹೇಗಿದೆ ಎರಡು ಸ್ಟ್ಯಾನ್ಲಿಗಳಿಗೆ ಸೇತುಬಂಧನ ಮಾಡಿದ ನಾಥರ ಈ ಕಥೆ?

ಕಣ್ಣಂಚಿನಲಿ ತೇವ ಮಾಡಿದ ದೃಷ್ಟಿಹೀನರ ನೃತ್ಯ:

ಬೆಂಗಳೂರಿನ ಅಂಧ ಅಕಾಡಮಿಯ ನರ್ತಕರು c 1998

1990ರಲ್ಲಿ ನನಗಾದ ಒಂದು ಮರೆಯಲಾರದ ಅನುಭವವೆಂದರೆ ಇಂಗ್ಲೆಂಡಿನ ಈಶಾನ್ಯದ ನ್ಯೂಕಾಸಲ್ ದಲ್ಲಿ ನಾನು ನೋಡಿದ ಡಾನ್ಸ್ ಪ್ರೋಗ್ರಾಂ. ಅದನ್ನು ನೋಡಿ ಬೆರಗಾದದ್ದು ಏಕೆಂದರೆ ಅದಕ್ಕೂ ಮೊದಲು ಕುರುಡರು ಅಷ್ಟು ಸುಂದರವಾಗಿ ಹೊಂದಾಣಿಕೆಯಿಂದ ಒಬ್ಬರಿಗೊಬ್ಬರಮೈ ತಗಲದಂತೆ ತಾಳಬದ್ಧವಾಗಿ ಕಣ್ಣಿಗೆ ಹಬ್ಬವಾಗುವಂತೆ ಕುಣಿದದ್ದು! ಅದನ್ನು ನೋಡಿ ನನ್ನ ಕಣ್ಣಂಚಿನಲ್ಲಿ ನೀರೂರಿತು. ಆ ಕಲಾಕಾರರು ಬೆಂಗಳೂರಿನ ರಮಣ ಮಹರ್ಷಿ ಅಕ್ಯಾಡಮಿ ಫಾರ್ ದಿ ಬ್ಲೈಂಡ್ ದ ಅಂಧ ವಿದ್ಯಾರ್ಥಿ-ವಿಧ್ಯಾರ್ಥಿನಿಯರು. ಅವರ ಡಾನ್ಸ್ ಟೀಚರ್ ನ ಉತ್ಸಾಹ ಮತ್ತು ಪರಿಶ್ರಮ ಅತ್ಯಂತ ಶ್ಲಾಘನೀಯ. ನಾಥ್ ಅವರ ಮಗಳು ಚಂದ್ರಿಕಾ 1994 ರಲ್ಲಿ ಬೆಂಗಳೂರಿಗೆ ಹೋದಾಗ ಆ ಸಂಸ್ಥೆಗೆ ಕೊಟ್ಟ ಭೆಟ್ಟಿಯ ಪ್ರೇರಣೆಯಿಂದ ಮತ್ತು ಆಕೆಯ ಒತ್ತಾಯದಿಂದ ಹತ್ತು ಜನರ ಆ ನೃತ್ಯ ತಂಡವನ್ನು ಡಾ ನಾಥ್ ಕುಟುಂಬ ಮತ್ತು ಕಲಾಪ್ರೇಮಿಯವರು ಭಾರತದಿಂದಎರಡು ಸಲ ಕರೆಸಿ ಈ ದೇಶದ ಬೇರೆ ಬೇರೆ ಸ್ಥಳಗಳಲ್ಲಿ 30ಕ್ಕೂ ಹೆಚ್ಚು ಪ್ರದರ್ಶನಗಳನ್ನು ಏರ್ಪಡಿಸಿ ಮೂವತ್ತೆರಡು ಸಾವಿರ ಪೌಂಡುಗಳಷ್ಟು ಧನವನ್ನು ಧರ್ಮಾರ್ಥದ ಕೆಲಸಕ್ಕಾಗಿ (charity) ಸಂಗ್ರಹಿಸಿ £22,000ವನ್ನು ರಮಣ ಮಹರ್ಷಿ ಅಕಾಡೆಮಿಗೆ ಕೊಟ್ಟರು! ಇದಲ್ಲದೆ ನೇತ್ರಲಕ್ಷ್ಮಿ ನೇತ್ರಾಲಯ ಆಸ್ಪತ್ರೆ ಮತ್ತು ಸತ್ಯವ್ವತಿ ಐ ಬ್ಯಾಂಕ್, ನೂರಾರು ಕಣ್ಣಿನ ಆಪರೇಶನ್ನುಗಳ ಸಲುವಾಗಿ ಸಹಾಯ ಇವು ಈ ದಂಪತಿಗಳು ನೇತ್ರಾರೋಗ್ಯಕ್ಕೆ ಮಾಡಿದ ಸೇವೆ!

ಸಂದೇಶ

ನಾನೂ ಒಬ್ಬ ಕಣ್ಣಿನ ಡಾಕ್ಟರ್ ಎಂತಲೇ  ಧೈರ್ಯದಿಂದಒಂದು ಒಂದು ಪ್ರಶ್ನೆ ಕೇಳಿದೆ: ”ನಿಮಗೆ ನೋವಾಗುವ ಹಾಗಿದ್ದರೆ ಅಥವಾ ಉತ್ತರ ಕೊಡಲು ಸಮ್ಮತಿಯಿಲ್ಲದಿದ್ದರೆ ಬೇಡ. ನೀವು ಮತ್ತು ನಿಮ್ಮ ಕುಟುಂಬದವರು ನಿಮ್ಮ ಮಡದಿಯ ದೃಷ್ಟಿಹೀನತೆಯನ್ನು ಹೇಗೆ ಎದುರಿಸುತ್ತೀರೆ? ಅದೇ ಸ್ಥಿತಿಯಲ್ಲಿರುವವರಿಗೆ ನಿಮ್ಮ ಕಿವಿಮಾತು ಏನು?”

ಡಾ.ನಾಥ್ ಮತ್ತು ಅವರ ಕುಟುಂಬ

ಡಾ ನಾಥ್: ಕಾರಿನ ಅಪಘಾತವಾದ ಮೂರನೆಯ ದಿನವೇ ದೈವ ಕಾಯ್ದಿಟ್ಟ ಭವಿಷ್ಯದ ಅರಿವಾಯಿತು. ಆಕೆಯ ಆರೈಕೆ, ಮಕ್ಕಳ ಶಿಕ್ಷಣ, ಆರೋಗ್ಯ, ನನ್ನ ವೈದ್ಯಕೀಯ ವೃತ್ತಿ ಇವುಗಳದೇ ಚಿಂತೆ ನನಗೆ. ಆಧ್ಯಾತ್ಮಿಕ ಜೀವನ, ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳುವದು, ಅದರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವದು ಇವೇ ನನ್ನ ಸಾಧನಗಳಾದವು. ನಾವು ಈ ಜೀವನದಲ್ಲಿ ಅನುಭವಿಸುವದು ಹಿಂದಿನ ಜನ್ಮದಲ್ಲಿ ನಾವು ಯಾವ ತರದ ಜೀವನ ಬಾಳಿದೆವು ಎಂದು ಅದರಲ್ಲಿ ಸ್ಪಷ್ಟವಾಗಿ ವಿದಿತವಾಗಿದೆ. ಸತ್ಯವತಿಯ ಮನೋಸ್ಥೈರ್ಯ ಅದ್ಭುತವಾಗಿತ್ತು. ಆಕೆಗೆ ನಮ್ಮ ಸೌಖ್ಯವೇ ಆದ್ಯ ಕರ್ತವ್ಯವಾಗಿತ್ತು. ಮಕ್ಕಳ ಶಿಕ್ಷಣದಲ್ಲಿ ಪೂರ್ತಿಯಾಗಿ ಪಾಲುಗೊಳ್ಳುವದು, ನಮ್ಮೆಲ್ಲರ ಸ್ವಾಸ್ಥ್ಯ ಕಾಯುವದು ಅವಳಿಗೆ ತೃಪ್ತಿ ಕೊಡುತ್ತಿದ್ದವು. ಗೀತೆಯ ಸಾರವನ್ನು ತಿಳಿದುಕೊಳ್ಳಲು ಕಾತರರಾದವರಿಗೆ ನಾನು ತಿಳಿದುಕೊಂಡದ್ದನ್ನು ಉಳಿದವರೊಡನೆ ಹಂಚಿಕೊಳ್ಳುವದಕ್ಕೇ ನಮ್ಮಿಬ್ಬರ ಸಮಯವನ್ನೆಲ್ಲ ಮುಡುಪಾಗಿಟ್ಟೇವೆ. ಮಕ್ಕಳು, ಕಿರಿಯರು, ಅದನ್ನು ಕಲಿಯುವ ಉತ್ಸಾಹ ತೋರಿದಾಗ ನನಗೆ ಅತ್ಯಂತ ಆನಂದವಾಗುತ್ತದೆ”.

”ಇನ್ನು ನನ್ನ ಸಲಹೆ? ನಿನ್ನ ಮೇಲೆಯೇ ನೀನು ಕನಿಕರಿಸಿ ನೋಡ ಬೇಡ. ನಿನ್ನ ಕರ್ತವ್ಯ (ನಿತ್ಯ ಕರ್ಮ, ನೈಮಿತ್ತಿಕ ಕರ್ಮ) ನೀನು ಮಾಡಬೇಕು. ನಿಷಿದ್ಧ ಕರ್ಮ ಬೇಡ. ದೇವರಿಂದ ಪವಾಡ ಅಪೇಕ್ಷಿಸ ಬೇಡ. ದೇವರಲ್ಲಿ ನಿನಗೆ, ನಿನ್ನವರಿಗೆ ಮನೋಸ್ಥೈರ್ಯದಿಂದ ಜೀವನವನ್ನು ಎದುರಿಸುವ ಶಕ್ತಿಯನ್ನು ಬೇಡಿಕೋ. ಸಮಾಜಕ್ಕೆ ಬೇಕಾದವನಾಗಿ ಬಾಳು. ರೀತಿ ಬಾಳುವದೇ ಹಿಂದೂ ಧರ್ಮದ ಹಿರಿಮೆ. ನಮ್ಮಿಂದಾಗಿ  ಗೀತೆಯ ಸಂದೇಶವು  ಕಳಚಿ ಹೋಗಲು ನಾವು ನಿಮಿತ್ತವಾಗಬಾರದು.”

ಎಂಥ ಮಾತು, ಎಂಥ ಅಣಿಮುತ್ತುಗಳು, ಇದು ಗೀತೋಪದೇಶವೇ! ಅವರು ಭಗವದ್ಗೀತೆಯನ್ನುಆಳವಾಗಿ ಅಭ್ಯಸಿಸಿದ್ದಲ್ಲದೆ, ಅದನ್ನು ತಮ್ಮ ಆಚರಣೆಯಲ್ಲೂ ತಂದಿದ್ದಾರೆ. ಇಲ್ಲಿಯ ವರೆಗೆ ವರ್ಷಕ್ಕೊಂದರಮ್ತೆ 17 ಅಂತರ್ರಾಷ್ಟ್ರೀಯ ಗೀತಾ ಕಾನ್ಫರನ್ಸ್ ಗಳನ್ನು ಬೇರೆ ಬೇರೆ ಸ್ಥಳಗಲ್ಲಿ, ಭಾರತದಲ್ಲಿ ಸಹ,  ಏರ್ಪಡಿಸಿ ಗೀತೆಯ ರಹಸ್ಯದ ಲಾಭವನ್ನು ಸಾವಿರಾರು ಜನರಿಗೆ ತಲುಪಿಸುತ್ತಿದ್ದಾರೆ. 2020ರಲ್ಲಿ 18ನೆಯದು ಆಗಲಿದೆಯಂತೆ.

ಅವರ ವಿವಿಧ Charity work ಗೆ ಬ್ರಿಟನ್ M B E (Member of the Excellent Order of the British Empire) ಕೊಟ್ಟಿದ್ದರಲ್ಲಿ ಮತ್ತು ಕರ್ನಾಟಕದದಿಂದ ರಾಜ್ಯ ಪ್ರಶಸ್ತಿ ದೊರೆಕಿದ್ದರಲ್ಲಿ ಆಶ್ಚರ್ಯವಿಲ್ಲ. ಅಗಣಿತ ದೃಷ್ಟಿಹೀನರಿಗೂ ಅವರ ಕುಟುಂಬದ ಧರ್ಮಾರ್ಥ ಕಾರ್ಯಗಳಿಂದ ಲಾಭವಾಗಿದೆ.  ನಾನು ಇನ್ನೂ ಕೆದಕಿದೆ: ”ಬಹುಮುಖ ಪ್ರತಿಭೆಯ ನೀವೊಬ್ಬ ಜನಪ್ರಿಯ ವೈದ್ಯ, ಲೇಖಕ, ನೈಜ ಕಲಾಪ್ರೇಮಿ ಮತ್ತು ಆಧ್ಯಾತ್ಮಿಕ ಜೀವಿ ಇವೆಲ್ಲ ಆಗಿರುವಿರಿ. ಇವುಗಳಲ್ಲಿ ನಿಮಗೆ ಯಾವುದು ಹೆಚ್ಚು ತೃಪ್ತಿಕೊಟ್ಟಿದೆ?”

Author: Dr Nath

ಡಾ ನಾಥ್: ”’ಕಲಾಪ್ರೇಮಿ’ ಸಂಸ್ಥೆಯ ಕೆಲಸದಿಂದ ಅತ್ಯಂತ ತೃಪ್ತಿಪಟ್ಟಿದ್ದೇನೆ. ಅದರಲ್ಲೂ ಅಂಗಹೀನರಾದ ಕಲಾಕಾರರ ಬೆಳವಣಿಗೆಗೆ ಈ ದೇಶದ ನಾಗರಿಕರ ಸಹಾಯ, ಬೆಂಬಲವನ್ನು ನೋಡಿದಾಗ ನಮ್ಮ ಸಂಸ್ಕೃತಿಯನ್ನು ಬೆಳೆಸಬೇಕು, ಅದರಲ್ಲೂ ಮುಖ್ಯವಾಗಿ ಯುವ ಪೀಳಿಗೆಯ ಮುಖಾಂತರ ಎಂದೆನಿಸುತ್ತದೆ. ಭಗವದ್ಗೀತೆ ನನಗೆ ಕೆಳಗೆ ಬೀಳದೆ, ಎದ್ದು ನಿಲ್ಲುವ, ನಿಂತು ಎದುರಿಸುವ ಶಕ್ತಿಯನ್ನು ಕೊಟ್ಟಿದೆ. ಶ್ರೀಕೃಷ್ಣ ಅರ್ಜುನನಿಗೆ ಕೊಡಲಿಲ್ಲವೆ ಟಾನಿಕ್? ‘ಉತ್ತಿಷ್ಠ,  ಪರಂತಪ’!” (ಭಗವದ್ಗೀತೆ: 2:3)

ಕೊನೆಯ ಪ್ರಶ್ನೆ:

ಸಾಧಕರೆಲ್ಲರಿಗೂ ಕೇಳಬೇಕಾದ ಪ್ರಶ್ನೆ: ”ನಿಮ್ಮನ್ನು ಜನ ಏನೆಂದು ನೆನೆಯಬೇಕು ಎನ್ನುತ್ತೀರಿ?”

ಆದರೆ ಅವರು ಕೊಟ್ಟ ಉತ್ತರವನ್ನು ಮಾತ್ರ ನಾನು ಊಹಿಸಿರಲಿಲ್ಲ: ”ಹಾಗೆ ಯೋಚನೆ ಮಾಡುವದೂ ನನ್ನಲ್ಲಿಯ ಅಜ್ಞಾನವನ್ನು ತೋರಿಸುತ್ತದೆ. ಅದುವೇ ಅಹಂಕಾರ. ಭಗವದ್ಗೀತೆ ಹೇಳುವುದೇ ’ಅಹಂಕಾರವನ್ನು ತೊರೆ‘, ಎಂದಲ್ಲವೆ?“

ನಿಜ. ಪ್ರಶ್ನೆಗಳು ಮುಗಿದವು. ಆದರೆ ಗೀತೆಯನ್ನೆ ಕುಡಿದು ಅರಗಿಸಿದವರಿಗೆ, ಅವರ ಬದುಕೇ ಗೀತೆಯ ಸಾರವನ್ನು ಸಾರುತ್ತಿರುವಾಗ, ನಾನು ಕೇಳಿದ ನನ್ನ ಕೊನೆಯ ಪ್ರಶ್ನೆ ಸರಿಯೇ ಎಂದು ಪೂರ್ಣ ವಿರಾಮ ಹಾಕಿದೆ. ಆ ಉತ್ತರದ ’ಬೆಳಕಿ’ನಲ್ಲೇ ಹಲವು ದಿನರಾತ್ರಿಗಳನ್ನು ಕಳೆದೆ!

ಲೇಖನ: ಶ್ರೀವತ್ಸ ದೇಸಾಯಿ ;      ಫೋಟೊ (ಎಲ್ಲ) ಕೃಪೆ: ಡಾ ನಾಥ್

ಡೋಂಕಾಸ್ಟರ್, ಯು ಕೆ

ಕನ್ನಡ ನಾಡಿನ ಹೆಮ್ಮೆಯ ಪುತ್ರ ಭಾರತ ರತ್ನ ಸರ್ ಎಂವಿ

ಭಾರತ ರತ್ನ ಸರ್ ಎಂ ವಿ ( ೧೫/೦೯/೧೮೬೧ – ೧೨/೦೪/೧೯೬೨)

 

ನಮ್ಮ ಅನಿವಾಸಿಯ ಹಿರಿಯ ಸದಸ್ಯ ರಾಮಮೂರ್ತಿ ಅವರು ನಾಡಿನ ಹೆಮ್ಮೆಯ ಪುತ್ರ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ಬಗ್ಗೆ ಬರೆದಿರುವ ಲೇಖನ ಅವರ ಬದುಕು ಮತ್ತು ಸಾಧನೆಗಳ ಬಗೆಗಿನ ಸಂಕ್ಷಿಪ್ತ ಪರಿಚಯವೆನ್ನಬಹುದು.
ಇಲ್ಲಿ ಸರ್ ಎಂವಿ ಅವರ ವಯುಕ್ತಿಕ ಪರಿಚಯವಲ್ಲದೆ ಅವರ ಪ್ರತಿಭೆ, ನಿಷ್ಠೆ ದೂರದೃಷ್ಟಿ , ಸ್ವಾಭಿಮಾನ ಮತ್ತು ಕನ್ನಡಿಗರ ಬಗ್ಗೆ ಅವರಿಗಿದ್ದ ಪ್ರೀತಿ ಮತ್ತು ಕಾಳಜಿಗಳು ಎದ್ದು ತೋರುತ್ತದೆ. ಈ ಬರವಣಿಗೆಯಲ್ಲಿನ ಹಲವಾರು ಮಾಹಿತಿಗಳು ಮತ್ತು ಸ್ವಾರಸ್ಯಕರ ಘಟನೆಗಳು ಸರ್ ಎಂವಿ ಅವರ ವ್ಯಕ್ತಿತ್ವದ ಪೂರ್ಣ ಪರಿಚಯ ಮಾಡಿಕೊಡುವುದರಲ್ಲಿ ಸಫಲವಾಗಿದೆ.

ಸರ್ ಎಂವಿ ಅವರು ಹಲವಾರು ದೇಶಗಳಲ್ಲಿ ಪ್ರವಾಸ ಮಾಡಿ ಆಗಿನ ಕಾಲಕ್ಕೆ ಅಲ್ಲಿನ ತಂತ್ರಜ್ಞಾನವನ್ನು ಅಧ್ಯಯನ ಮಾಡಿ ಅದನ್ನು ನಮ್ಮ ನಾಡಿನಲ್ಲಿ ಅಳವಡಿಸಿದ ನಿಷ್ಣಾತ ಇಂಜಿನೀಯರ್ ಅಷ್ಟೇ ಅಲ್ಲದೆ ಕೈಗಾರಿಕೆ , ವಾಣಿಜ್ಯ, ಆಡಳಿತ, ಶಿಕ್ಷಣ ಹೀಗೆ ಅನೇಕ ಕ್ಷೇತ್ರದಲ್ಲಿ ಕೈ ಹಾಕಿ ಕರ್ನಾಟಕ ರಾಜ್ಯದ ಸರ್ವತೋಮುಖ ಪ್ರಗತಿಗೆ ಕಾರಣರಾಗಿದ್ದರು  ಎಂಬ ವಿಷಯ ಈ ಲೇಖನದಲ್ಲಿ ಎದ್ದು ತೋರುತ್ತದೆ.

ನಮ್ಮ ನಾಡಿನ ಶಿಲ್ಪಿ ಸರ್ ಎಂವಿ ಅವರನ್ನು ನಾವು ಎಂದಿಗೂ ಮರೆಯಬಾರದೆಂಬ ವಿಚಾರವನ್ನು ರಾಮಮೂರ್ತಿ ತಮ್ಮ ಕೊನೆಯ ಮಾತುಗಳಲ್ಲಿ ಪ್ರಸ್ತಾಪ ಮಾಡಿರುವುದು ಸೂಕ್ತವಾಗಿದೆ. (ಸಂ )

 

ಕನ್ನಡ ನಾಡಿನ ಹೆಮ್ಮಯ ಪುತ್ರ ಭಾರತ ರತ್ನ ಸರ್ ಎಂವಿ

ರಾಮಮೂರ್ತಿ

 

ನಮ್ಮ ಇತಿಹಾಸದಲ್ಲಿ ೧೮೬೧ ಬಹಳ ಮುಖ್ಯವಾದ ವರ್ಷ ಎನ್ನ ಬಹುದು, ಈ ವರ್ಷ ಇಂಡಿಯ ದೇಶದ ಶಾಸನ ಸಭೆ (Indian Council Act ) ಜಾರಿಗೆ ಬಂತು. ಅಮರ ಕವಿ ರವೀಂದ್ರನಾಥ್ ಠಾಗೂರ್, ಪಂಡಿತ್ ಮೋತಿಲಾಲ್ ನೆಹರು, ಮದನಮೋಹನ ಮಾಳವಿಯ ಮತ್ತು ನಮ್ಮ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಮುಂತಾದ ಗಣ್ಯ ವ್ಯಕ್ತಿಗಳು ಈ  ವರ್ಷದಲ್ಲಿ  ಜನ್ಮ ತಾಳಿದರು.

ಸರ್ ಎಂವಿ ಚಿಕ್ಕಬಳ್ಳಾಪುರ್ ಹತ್ತಿರ ಮುದ್ದೇನಹಳ್ಳಿ ಗ್ರಾಮದಲ್ಲಿ ಸೆಪ್ಟೆಂಬರ್ ೧೫ ೧೮೬೧ ಜನಿಸಿದರು. ಅವರ ತಂದೆ ಶ್ರೀನಿವಾಸ ಶಾಸ್ತ್ರೀ ಮತ್ತು ತಾಯಿ ವೆಂಕಟಲಕ್ಷಮ್ಮ. ಇವರು ತೆಲಗು ಮಾತನಾಡುವ ಬ್ರಾಹ್ಮಣ ಮನೆತನದವರು, ತಂದೆ ಸಂಸ್ಕೃತ ಪಂಡಿತರು ಮತ್ತು ಅಲ್ಲಿನ ಶಾಲೆಯಲ್ಲಿ ಉಪಾಧ್ಯಾಯರು . ಬಡತನದಲ್ಲಿ ಬೆಳದ ಈ ಮಗುವಿನ ವಿದ್ಯಾಭ್ಯಾಸ ಹತ್ತಿರದಲ್ಲೇ ಬಂದೇಹಳ್ಳಿ ಗ್ರಾಮದ ಪ್ರಾಥಮಿಕ ಶಾಲೆ ಯಲ್ಲಿ ಪ್ರಾರಂಭ ವಾಯಿತು. ೧೮೭೫ರಲ್ಲಿ ಸರ್ ಎಂವಿ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ೧೮೮೧ ನಲ್ಲಿ B A ಪದವಿ ಪಡೆದರು . ಆಗ ಈ ಕಾಲೇಜು ಮದ್ರಾಸ್ ವಿಶ್ವವಿದ್ಯಾನಿಲಯಕ್ಕೆ ಸೇರಿತ್ತು, ಈತನನಿಗೆ ಹಣ ಸಹಾಯ ಏನೂ ಇರಲಿಲ್ಲ. ಆದರೆ ತುಂಬಾ ಬುದ್ದಿವಂತರಾದ ಎಂವಿ , ಹತ್ತಿರದಲ್ಲೆ ಇದ್ದ ಕೊಡಗು ಮನೆತನವರ ಮನೆಯಲ್ಲಿ ಇದ್ದು ಅವರ ಮನೆಯ ಮಕ್ಕಳಿಗೆ ಪಾಠ ಮಾಡಿ ಸ್ವಲ್ಪ ಹಣ ಸಂಪಾದಿಸಿ ವಿದ್ಯಾಭ್ಯಾಸ ಪೂರೈಸಿದರು. ಪದವಿಯಲ್ಲಿ ಇವರು ಉನ್ನತ ವರ್ಗದಲ್ಲಿ ತೇರ್ಗಡೆಯಾಗಿದ್ದು ಮೈಸೂರು ಸರ್ಕಾರ ಇವರಿಗೆ ಪುಣೆ ಯಲ್ಲಿ ಇಂಜಿ ನೀಯರಿಂಗ್ ಓದಲು ವಿದ್ಯಾರ್ಥಿವೇತನ ಕೊಟ್ಟಿತು. ಎಂವಿ ಯವರು ೧೮೮೩ ನವೆಂಬರಲ್ಲಿ ಮುಂಬೈ ವಿಶ್ವವಿದ್ಯಾನಿಲಯದಿಂದ ಮೊದಲನೆಯ ದರ್ಜೆಯಲ್ಲಿ ಉತ್ತೀರ್ಣ ರಾಗಿ ೧೮೮೪ ಫೆಬ್ರುವರಿ ತಿಂಗಳಲ್ಲಿ ಅಸಿಸ್ಟೆಂಟ್ ಇಂಜಿನೀರ್ ಹುದ್ದೆ ಪಡೆದು ನಾಸಿಕ್ ನಲ್ಲಿ ಕೆಲಸ ಶುರು ಮಾಡಿದರು .

 

ಸೆಂಟ್ರಲ್ ಕಾಲೇಜ್ ವಿದ್ಯಾರ್ಥಿ, ೧೮೭೫

 

ಸರ್ ಎಂ. ವಿ. ಬೆಳದ ಮುದ್ದೇನಹಳ್ಳಿ ಮನೆ

ಮುಂಬೈ ಸರ್ಕಾರದಲ್ಲೇ ಮುಂದೆವರೆದು Executive Engineer ಆಗಿ ಅನೇಕ ನೀರಾವರಿ ಯೋಜನಗಳನ್ನ ಸಂಪೂರ್ಣ ಮಾಡಿ ಮೇಲಿನ ಅಧಿಕಾರಗಳ ಮನ್ನಣೆ ಪಡದು ಲಂಡನ್ Institute of Civil Engineers ಸದಸ್ಯತ್ವ ಪಡೆದರು. ಈ ಒಂದು ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಇಂಜಿನೀಯರ್ ಸರ್ ಎಂವಿ ಎನ್ನಬಹುದು. ಇವರಿಗೆ ಬೇರೆ ದೇಶಗಳಿಗೆ ಹೋಗಿ ಅಲ್ಲಿನ ನೀರಾವರಿ ಮತ್ತು ಕೈಗಾರಿಕೆ ವಿಷಗಳನ್ನು ತಿಳಿದುಕೊಳ್ಳುವ ಕುತೂಹಲ ಮತ್ತು ಹಂಬಲವಿತ್ತು. ೧೮೯೮ ರಲ್ಲಿ ಜಪಾನ್ ದೇಶಕ್ಕೆ ಭೇಟಿ ಕೊಟ್ಟು ಆ ದೇಶದ ಶಿಸ್ತು ಮತ್ತು ಉತ್ಸಾಹದಿಂದ ಪ್ರಭಾವಿತರಾದರು. ಒಂದಲ್ಲ ಒಂದು ದಿನ ಭಾರತವೂ ಹೀಗೆಯೇ ಮುಂದುವರೆಯಬೇಕು ಅನ್ನುವ ಕನಸು ಅವರಿಗೆ ಇಲ್ಲಿ ಹುಟ್ಟಿರಬಹುದು. ಇನ್ನು ಮುಂದೆ ಅನೇಕ ಸಲ ಈ ದೇಶಕ್ಕೆ ಭೇಟಿ ನೀಡಿದರು

೧೮೯೯ ನಲ್ಲಿ ಪುಣೆ ನಗರದ ನೀರಾವರಿ ವ್ಯವಸ್ಥೆಗೆ ಸರ್ ಎಂವಿ ಸೂಚಿಸಿದ Block System ಅಂಗೀಕೃತವಾಗಿ ೧೯೦೧ ರಲ್ಲಿ ನಿರ್ಮಾಣವೂ ಆಯಿತು. ಈ ಸಮಯದಲ್ಲಿ ಅವರಿಗೆ ಶ್ರೀ ಗೋಪಾಲ ಕೃಷ್ಣ ಗೋಖಲೆ ಅವರ ಪರಿಚಯವಾಯಿತು. ೧೯೦೩ ರಲ್ಲಿ ವಿಶೇಶ್ವರಯ್ಯ ನವರ ಹೆಸರು ಪ್ರಸಿದ್ಧವಾಗಿದ್ದು “Automatic water flood gate system” ಅನ್ನುವ ಅವರ ವಿನ್ಯಾಸ (design) ದಿಂದ  ಇದನ್ನು ಸರ್ಕಾರ ಪೇಟೆಂಟ್ ಮಾಡಿ ಖಡಕ್ ವಾಸ್ಲಾ ಜಲಾಶದಲ್ಲಿ ಮೊದಲಬಾರಿಗೆ ಅಳವಡಿಸಲಾಯಿತು. ಸರ್ಕಾರದ ಈ ಪೇಟೆಂಟ್ ನಿಂದಾಗಿ ಸರ್ ಎಂವಿ ಅವರಿಗೆ ಹಣ ಬರಬಹುದ್ದಾಗಿದ್ದರೂ ತಾವು ತಮ್ಮ ಕರ್ತವ್ಯವಷ್ಟೇ ಮಾಡಿದೆರೆಂಬ ಕಾರಣದಿಂದ ನಿರಾಕರಿಸಿದರು.

೧೯೦೬ ರಲ್ಲಿ ಕೇಂದ್ರ ಸರಕಾರ ಇವರನ್ನು ಏಡನ್ ನಗರಕ್ಕೆ ಅಲ್ಲಿನ ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸಲು ಕೋರಿತು. ಇದು ಯಶಸ್ವಿ ಆದಮೇಲೆ ಕೊಲ್ಲಾಪುರ ಧಾರವಾಡ ಮತ್ತು ಬಿಜಾಪುರದಲ್ಲಿದಲ್ಲಿ ಇದೇ ರೀತಿಯ ನೀರಿನ ಸಮಸ್ಯೆಗಳ ಪರಿಹಾರ ಮಾಡಿದರು. ಭಾರತದ ಅನೇಕ ಪ್ರಾಂತಗಳಿಂದ chief engineer ಆಗುವುದಕ್ಕೆ ಆಹ್ವಾನ ಬಂದರೂ ಮುಂಬೈ ನಲ್ಲಿ ಸೇವೆಯನ್ನು ಮುಂದುವರೆಸಿ ನಿವೃತ್ತಿಗೆ ಮುಂಚೆ ರಜ ಪಡೆದು ೧೯೦೮ ನಲ್ಲಿ ಇಟಲಿ ಇಂಗ್ಲೆಂಡ್ ಅಮೇರಿಕ ಮತ್ತು ಕೆನಡಾ ದೇಶದಲ್ಲಿ ಪ್ರವಾಸಮಾಡಿದರು . ಇಟಲಿಯ ಪ್ರವಾಸ ದಲ್ಲಿ ಇದ್ದಾಗ ಹೈದರಾಬಾದ್ ನಿಜಾಮ್ ಇವರ ಸಹಾಯ ಬೇಕೆಂದು ವಿನಂತಿ ಮಾಡಿದಾಗ ೧೯೦೯ರಲ್ಲಿ ಭಾರತಕ್ಕೆ ಹಿಂತಿರಗಿ ಅಲ್ಲಿನ ಕೆಲಸ ಶುರು ಮಾಡಿದರು. ಮಳೆಗಾಲದಲ್ಲಿ ಮ್ಯೂಸಿ ನದಿಯ ನೀರಿನ ಪ್ರಹಾವದಿಂದ ವಿಪರೀತ ಅನಾಹುತ ತಪ್ಪಿಸಲು ಈ ನದಿಗೆ ಆಣೆಕಟ್ಟು ಕಟ್ಟಿ, ಕುಡಿಯುವ ನೀರು ಮತ್ತು ಒಳ ಚರಂಡಿಯ ವ್ಯವಸ್ಥೆ ಮಾಡಿ ಈ ಪ್ರಾಂತ್ಯದ ಸಮಸ್ಯೆಗಳನ್ನು ಪರಿಹರಿಸಿದರು. ನವೆಂಬರ್ ೧೯೦೯ ಮೈಸೂರಿನ ಮಹಾರಾಜರಾಗಿದ್ದ ಕೃಷ್ಣ ರಾಜಒಡೆಯರ್ಯರಿಂದ ಅಲ್ಲಿ ಚೀಫ್ ಇಂಜಿನೀಯರ್ ಆಗಲು ಆಹ್ವಾನ ಬಂದಾಗ ಸಂತೋಷದಿಂದ ತಾವು ಹುಟ್ಟಿದ ನಾಡಿಗೆ ಬರಲು ಒಪ್ಪಿಗೆ ಕೊಟ್ಟು ಅನೇಕ ಯೋಜನೆಗಳನ್ನು ಪ್ರಾರಂಭಿಸಿದರು.

 

ದಿವಾನರಾಗಿ ಸರ್ ಎಂ.ವಿ. ೧೯೧೨

 

ಈಗಿನ ಮಂಡ್ಯ ಮತ್ತು ಮದ್ದೂರು ಪ್ರದೇಶಗಳಲ್ಲಿ ಎಲ್ಲಿ ನೋಡಿದರೂ ಹಸಿರು! ಅದೇ ನೂರು ವರ್ಷದ ಹಿಂದೆ ಈ ಪ್ರದೇಶ ಬರಡಾಗಿತ್ತು. ನೀರಿನ ಅಭಾವಕ್ಕೆ ಬೆಳೆಗಳು ಇಲ್ಲದೆ ಜನರು ಬಹಳ ಕಷ್ಟದಲ್ಲಿದ್ದರು. ೧೮೭೫-೭೬ ನಲ್ಲಿ ತೀವ್ರ ಬರಗಾಲ ಬಂದು ಸಾವಿರಾರು ಜನರು ಸಾವನ್ನಪ್ಪಿದರು.
ಎಂವಿ ಅವರ ಸಲಹೆ ಮೇರೆಗೆ ಕಾವೇರಿ ನದಿಗೆ ಕನ್ನಂಬಾಡಿ ಊರಿನಲ್ಲಿ ಆಣೆ ಕಟ್ಟೆ ಕಟ್ಟುವುದು ಸೂಕ್ತವೆಂದು ನಿರ್ಧರಿಸಲಾಯಿತು

ಇಲ್ಲಿ ಕಾವೇರಿ,ಹೇಮಾವತಿ ಮತ್ತು ಲಕ್ಷ್ಮಣ ತೀರ್ಥ ಮೂರು ನದಿಗಳು ಸೇರುವ ಜಾಗ . ಈಗಲೂ ಕಾವೇರಿ ನೀರನ ಬಗ್ಗೆ ಕರ್ನಾಟಕ ಮತ್ತು ತಮಿಳು ನಾಡಿಗೂ ಸಾಕಷ್ಟು ಮನಸ್ತಾಪಗಳಿವೆ. ಇದೇನು ಹೊಸದಲ್ಲ ೧೨೦ ವರ್ಷಗಳ ಹಿಂದೆಯೊ ಈ ಸಮಸ್ಯೆ ಇತ್ತು . ಆಗಿದ್ದ ಬ್ರಿಟಿಷ್ ಕೇಂದ್ರ ಸರ್ಕಾರದ ೧೮೯೨ ಒಪ್ಪಂದದ ಪ್ರಕಾರ ಎರಡು ಪ್ರಾಂತ್ಯಗಳ ಒಪ್ಪಿಗೆ ಇಲ್ಲದೆ ಕಾವೇರಿ ನದಿಯ ಬಗ್ಗೆ ಯಾವ ಯೋಜನೆಯನ್ನು ಮುಂದೆವರೆಸುವಾಗಿರಲಿಲ್ಲ.ಅಂದಿನ ಮೈಸೂರ್ ಸರ್ಕಾರದ ಹಣಕಾಸಿನ ಮಂತ್ರಿಗಳು ಸಹ ಈ ಯೋಜನೆಗೆ ೮೧ ಲಕ್ಷ ಖರ್ಚು ಮಾಡುವ ಅಗತ್ಯ ಇಲ್ಲ ಎಂದು ಸರ್ ಎಂವಿ ಅವರಿಗೆ ತಿಳಿಸಿದರು. ಆದರೆ ದಿವಾನ್ ಆನಂದ ರಾಯರು ಮಹಾರಾಜರೊಂದೊಂದಿಗೆ ಚರ್ಚೆ ಮಾಡಿ ಈ ಯೋಜನೆಗೆ ಅನುಮತಿ ತಂದರು . ಮದ್ರಾಸ್ ಸರ್ಕಾರ ಮೊದಲು ನಿರಾಕರಿಸಿ ಕೊನಗೆ ೮೧ ಅಡಿ ಎತ್ತರದ ಕಟ್ಟೆಗೆ ಮಾತ್ರ ಅನುಮತಿ ಬಂದಿತು. ಆದರೆ ಸರ್ ಎಂವಿ ಅವರ ವಿನ್ಯಾಸ ೧೨೪ ಅಡಿ! ಈ ಬಗ್ಗೆ ಮದ್ರಾಸಿನ ರಾಜಕಾರಣಿಗಳು ಈ ಕಟ್ಟೆ ವಿರುದ್ಧ ದೊಡ್ಡ ಚಳುವಳಿಯನ್ನೇ ಪಾರಂಬಿಸಿ ಈ ಯೋಜನೆ ಶುರುವಾಗುವುದಕ್ಕೆ ತುಂಬಾ ತಡವಾಯಿತು. ಕೊನೆಗೆ ಮೈಸೂರಿಗೆ ಜಯವಾಗಿ ೧೯೧೧ ನವೆಂಬರ್ ನಲ್ಲಿ ಕೆಲಸ ಶುರುವಾಗಿ ೧೯೩೧ರಲ್ಲಿ ಪೂರೈಕೆಗೊಂಡಿತು. ೧೯೧೧ ನಲ್ಲಿ ಸಿಮೆಂಟ್ ಭಾರತದಲ್ಲಿ ಇರಲಿಲ್ಲ ಹೊರದೇಶದಿಂದ ತರಿಸಿದ್ದರೆ ವಿಪರೀತ ವೆಚ್ಚ ಆದ್ದರಿಂದ ಸ್ಥಳೀಯ ಗಾರೆ (ಸುರ್ಕಿ) ಯನ್ನು ಇಲ್ಲಿ ಉಪಯೋಗಿಸಲಾಯಿತು .

ಒಟ್ಟು ೪೮ ಉಕ್ಕಿನ ಗೇಟುಗಳನ್ನು ಒಳಗೊಂಡ ವಿಶೇಷ ವ್ಯವಸ್ಥೆಯನ್ನು ಇಲ್ಲಿ ಬಳಸಲಾಗಿದೆ. ೧೯೨೪ ರಲ್ಲಿ ಈ ನಿರ್ಮಾಣ ಪೂರ್ಣಗೊಂಡಿತು. ಈ ಜಲಾಶದಿಂದ ಅನೇಕ ಕಾಲುವೆಗಳು ತೋಡಿ ಮಂಡ್ಯ ಮತ್ತು ಸುತ್ತಮುತ್ತ ಹಳ್ಳಿಗಳಿಗೆ ನೀರು ದೊರಕಿ ಅಲ್ಲಿನ ಪರಿಸರ ಬದಲಾಗಿ ಜನಗಳಿಗೆ ಕುಡಿಯುವ ನೀರು ಸಹ ಒದಗಿತು , ಜಮೀನುಗಳೆಲ್ಲಾ ಹಸಿರಾಯಿತು . ೧೦,೦೦೦ ಜನರಿಗೆ ನೌಕರಿ ದೊರಕಿತು . ಆದರೆ ಕೆಲವು ಸುತ್ತಮುತ್ತಿನ ಹಳ್ಳಿಗಳು ನೀರಿನಲ್ಲಿ ಮುಳಗಿದ್ದರಿಂದ ಅನೇಕರು ತಮ್ಮ ಮನೆಗಳನ್ನು ಕಳೆದುಕೊಂಡರು. ಇವರೆಲ್ಲರಿಗೂ ಸರ್ಕಾರ ಬೇರೆ ಜಾಗದಲ್ಲಿ ಜಾಮೀನು ಮತ್ತು ಮನೆಗಳನ್ನು ಕೊಟ್ಟು ಸಂರಕ್ಷಿಸಿದರು . ಕನ್ನಂಬಾಡಿ ಕಟ್ಟೆ ಹೆಸರು ಅಂದಿನ ಮಹಾರಾಜರಾಗಿದ್ದ ಶ್ರೀಮಾನ್ ಕೃಷ್ಣರಾಜ ಒಡೆಯರ್ ಹೆಸರನಲ್ಲಿ. ಕೃಷ್ಣರಾಜ ಸಾಗರ ಎಂದು ನಾಮಕರಣ ವಾಯಿತು.

ಶ್ರೀಮಾನ್ ಕೃಷ್ಣರಾಜ ಒಡೆಯರ್

೧೯೧೨ ನವೆಂಬರ್ ರಲ್ಲಿ ಮಹಾರಾಜರು ಸರ್ ಎಂವಿ ಅವರನ್ನು ಮೈಸೂರಿನ ದಿವಾನರಾಗಿ ನೇಮಕ ಮಾಡಿದರು. ಈ ಹುದ್ದೆ ಯಲ್ಲಿ ಆರು ವರ್ಷ ಕೆಲಸ ಮಾಡಿ ೧೯೧೮ರಲ್ಲಿ ಸರ್ ಎಂವಿ ಅವರು ರಾಜೀನಾಮೆ ಕೊಟ್ಟರು. ಮದ್ರಾಸಿನಲ್ಲಿ ಶುರುವಾಗಿದ್ದ ಜಾತಿಯತೆಯ ಚಳುವಳಿ ಮೈಸೂರಿಗೂ ಹರಡಿ ಸರಕಾರೀ ಕೆಲಸಗಳು ಹಿಂದುಳಿದ ಜಾತಿ ಯವರಿಗೆ ಮೀಸಲಾಗಬೇಕು ಅನ್ನುವ ವಿಚಾರದ ಬಗ್ಗೆ ಮಹಾರಾಜರಿಗೆ ತುಂಬಾ ಒತ್ತಡ ಬಂದಿತ್ತು. ಮಹಾರಾಜರು ಅಂದಿನ ಮುಖ್ಯ ನ್ಯಾಯಾಧೀಶರಾಗಿದ್ದ ಸರ್ ಲೆಸ್ಲಿ ಮಿಲ್ಲರ್ ಅವರ ನೇತೃತ್ವದಲ್ಲಿ ನೇಮಿಸಿದ ಸಮಿತಿ ಕೆಲಸಗಳನ್ನು ಮೀಸಲಾತಿ (reservation ) ಮಾಡಬಹುದೆಂದು ಸಲಹೆ ಕೊಟ್ಟರು. ಸರ್ ಎಂವಿ ಇದನ್ನು ವಿರೋಧಿಸಿ ಹಿಂದೆ ಉಳಿದ ವರ್ಗದವರಿಗೆ ಹಣ ಕಾಸಿನ ಸಹಾಯಮಾಡಿ ಓದುವುದಕ್ಕೆ ಉತ್ತೇಜನ ಕೊಟ್ಟು ಮುಂದೆತರಬೇಕೆಂದು ವಾದಿಸಿದರು. ಆದರೆ ಇವರಿಗೂ ಮಹಾರಾಜರಿಗೂ ಈ ವಿಚಾರದಲ್ಲಿ ಮನಸ್ತಾಪ ಬಂದು ಡಿಸೆಂಬರ್ ೧೯೧೮ ರಲ್ಲಿ ರಾಜೀನಾಮೆ ಕೊಟ್ಟರು. ಈ ಸಂಧರ್ಭದಲ್ಲಿ ಸರ್ ಎಂವಿ ಅವರು ಮಹಾರಾಜರನ್ನು ಕಾಣಲು ಹೋದಾಗ ದಿವಾನರ ವಾಹನದಲ್ಲಿ ಹೋಗಿ ರಾಜೀನಾಮೆ ಕೊಟ್ಟು ತಮ್ಮ ಸ್ವಂತ ವಾಹನದಲ್ಲಿ ವಾಪಸ್ಸು ಬಂದದ್ದು ಅವರ ನಿಷ್ಠಾವಂತಿಕೆಗೆ ಸಾಕ್ಷಿಯಾಗಿತ್ತು

ಆಗ ತಾನೇ ಮೊದಲನೇ ಮಹಾ ಯುದ್ಧ ಮುಗಿದಿತ್ತು. ಇವರ ದಿವಾನಗಿರಿಯಲ್ಲಿ ನೀರಾವರಿ ಮತ್ತು ಕೈಗಾರಿಕೆ ಮಾತ್ರವಲ್ಲ ಆಗಿನ ಶಾಸನ ಸಭೆ ಯಲ್ಲಿ ( Legislative Assembly ) ಕೇವಲ ೧೮ ಸದಸ್ಯರಿದ್ದು ಎಲ್ಲರೂ ನೇಮಕಪಟ್ಟವರಾಗಿದ್ದರು. ಇವರ ಕಾಲದಲ್ಲಿ ೧೮ ರಿಂದ ೨೪ ಸದಸ್ಯರು, ಚುನಾಯಿತರಾಗಿ ಈ ಸಭೆಯ ಅಧಿಕಾರವೂ ಹೆಚ್ಚಾಯಿತು. ಇಲ್ಲಿ ಹಣ ಕಾಸಿನ budget ಮೊದಲ ಬಾರಿಗೆ ಚರ್ಚೆ ಮಾಡಿದರು. ನ್ಯಾಯಾಂಗ ಮತ್ತು ಆಡಳಿತ ವಿಚಾರಗಳು ಬೇರೆ ಬೇರೆ ಆದವು. ಸರ್ ಎಂವಿ ಅವರ “ Memoirs of my working life” ಎಂಬ ಪುಸ್ತಕದಲ್ಲಿ ಇದರ ಬಗ್ಗೆ ವ್ಯಾಪಕವಾದ ಚರ್ಚೆ ಮಾಡಿದ್ದಾರೆ. ಇದನ್ನು ಅವರ ೮೯ ನೇ ವರ್ಷದಲ್ಲಿ ಬರೆದು ಪ್ರಕಟಿಸಿದರು !!

ಗಂಗಾ ನದಿಯ ೨ ಕಿಲೋ ಮೀಟರ್ ಮೊಕಾಮ ಸೇತುವೆ ೧೯೫೯ ರಲ್ಲಿ ಪ್ರಧಾನಮಂತ್ರಿ ನೆಹರು ಅವರಿಂದ ಉಧ್ಘಾಟನೆ ಆಯಿತು. ಇದು ಬಿಹಾರಿನ ದಕ್ಷಿಣ ಮತ್ತು ಉತ್ತರ ಪ್ರದೇಶಗಳ ಸೇರಿಸುವ ಸೇತುವೆ. ಆದರೆ ಇದನ್ನು ಎಲ್ಲಿ ಕಟ್ಟಬೇಕು ಅನ್ನುವುದು ದೊಡ್ಡ ರಾಜಕೀಯ ರಗಳೆಯೇ ಆಗಿತ್ತು . ನೆಹರು ಅವರು ಸರ್ ಎಂವಿ ಅವರ ಸಹಾಯ ಕೋರಿ ಸೇತುವೆ ಎಲ್ಲಿ ಕಟ್ಟಬೇಕೆಂದು ಸಲಹೆ ಕೇಳಿದರು. ಆಗ ಇವರಿಗೆ ೯೧ ವರ್ಷ ಆದರೂ ಆ ಪ್ರದೇಶಕ್ಕೆ ಹೋಗಿ ನದಿಯ ಸರ್ವೇ ಮಾಡಿ ಸರಿಯಾದ ಜಾಗವನ್ನು ಗುರುತಿಸಿದರು.

ಇವರ ಸಾದನೆಗಳು ಮತ್ತು ಕನ್ನಡನಾಡಿಗೆ ಮಾಡಿದ ಉಪಕಾರ ಬಹಳ. ಇದನ್ನು ಕೆಳಗಿನ ಪಟ್ಟಿಯಲ್ಲಿ ಗಮನಿಸಬಹುದು
೧೯೧೧ ಕನ್ನಂಬಾಡಿ ಅಣೆಕಟ್ಟೆ ಪ್ರಾರಂಭ
೧೯೧೩ Bank of Mysore ಮತ್ತು ಹೆಬ್ಬಾಳದ ವ್ಯವಸಾಯದ ಶಾಲೆ ಸ್ಥಾಪನೆ
೧೯೧೪ ಮಲೆನಾಡು ಸಂರಕ್ಷಿತ ಯೋಜನೆ
೧೯೧೫ ಮೈಸೂರು ವಿಶ್ವ ವಿದ್ಯಾನಿಲಯ, ಬೆಂಗಳೂರು ಮತ್ತು ಮೈಸೂರಿನ ಸಾರ್ವಜನಿಕ ಪುಸ್ತಕ ಭಂಡಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ
೧೯೧೬ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜ್, Chamber of commerce ಸ್ಥಾಪನೆ. ರೇಷ್ಮೆ, ಗಂಧದ ಎಣ್ಣೆ, ಮೈಸೂರ್ ಸ್ಯಾಂಡಲ್ ಸೋಪ್ ಹೀಗೆ ಹಲವಾರು ಕೈಗಾರಿಕೆ ಗಳ ಪ್ರಾರಂಭ
೧೯೧೮ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಂಪನಿ, ಜೋಗ ಜಲಪಾತದಿಂದ ವಿಧ್ಯುಕ್ ಶಕ್ತಿ ಯೋಜನೆ
ಇದಲ್ಲದೆ ಮಂಡ್ಯದ ಸಕ್ಕರೆ ಕಾರ್ಖಾನೆ, ಭದ್ರಾವತಿಯಲ್ಲಿ ಕಾಗದ ಉತ್ಪಾದನೆ ಇವರ ಕಾಲದಲ್ಲೇ ಶುರುವಾಯಿತು.
ಆ ಕಾಲ ಮೈಸೂರಿನ ಸುವರ್ಣ ಯುಗ ಅಂದರೆ ಏನೊ ತಪ್ಪಾಗಲಾರದು. ಭಾರತದಲ್ಲೆ ಮೈಸೂರು ಪ್ರಗತಿಪರ ರಾಜ್ಯ ವಾಗಿತ್ತು
೧೯೧೯ ರಲ್ಲಿ ಅನೇಕ ದೇಶಗಳ (ಜಪಾನ್ ಮತ್ತು ಅಮೇರಿಕ ) ಪ್ರವಾಸ ಮಾಡಿ ಇಂಗ್ಲೆಂಡ್ ನಲ್ಲಿ ಸುಮಾರು ೧೦ ತಿಂಗಳು ಇದ್ದು ೧೯೨೦ ರಲ್ಲಿ Reconstructing India ಪುಸ್ತಕ ಪ್ರಕಟಿಸಿದರು

ಮೈಸೂರು ಅರಮನೆಯಲ್ಲಿ ನವರಾತ್ರಿ ಸಮಯದಲ್ಲಿ ದರ್ಬಾರ್ ಬಹಳ ವೈಖರಿಯ ಸಂಧರ್ಭವಾಗಿದ್ದು ಬ್ರಿಟಿಷ್ ರೆಸಿಡೆಂಟ್ ಮತ್ತು ಅವರ ಸಿಬ್ಬಂದಿ ಮತ್ತು ಬ್ರಿಟಿಷ್ ಸಿವಿಲ್ ಅಧಿಕಾರಿಗಳು, ಅರಮನೆಗೆ ಬಂದಾಗ ಅವರ ಕುಟುಂಬದವರು ಕುರ್ಚಿಗಳ ಮೇಲೆ ಕೂಡುತಿದ್ದರು . ಭಾರತೀಯ ಉನ್ನತ ಹುದ್ದೆಯ ಸಿಬ್ಬಂದಿಗಳು ಕರಿ ಕೋಟು ಮತ್ತು ಮೈಸೂರು ಪೇಟ ಧರಿಸಿ ಕೆಳಗೆ ಜಮಕಾನೆ ಮೇಲೆ ಕೂಡುವ ಪದ್ದತಿ ಬಹಳ ವರ್ಷಗಳಿಂದ ಇತ್ತು. ಇದನ್ನು ಸರ್ ಎಂವಿ ೧೯೧೦ ರಲ್ಲಿ ಮೊದಲನೇ ಬಾರಿ ಬಂದಾಗ ಗಮನಿಸಿ ೧೯೧೧ ನಲ್ಲಿ ಬಂದ ಆಹ್ವಾನವನ್ನು ನಿರಾಕರಿಸಿದರು. ದರ್ಬಾರ್ ನಡೆಸುವ ಜವಾಬ್ದಾರಿ ಆಗ ಸರ್ ಮಿರ್ಜಾ ಇಸ್ಮಾಯಿಲ್ ಅವರದ್ದು. ಇವರ ನಿರಾಕರಣ ಬಗ್ಗೆ ವಿಚಾರಿಸಿದ್ದಾಗ ಸರ್ ಎಂವಿ ಹೀಗೆ ಹೇಳಿದರಂತೆ “ಮೈಸೂರು ಸರ್ಕಾರದಿಂದ ಸಂಬಳ ತೆಗೆದುಕೊಳ್ಳುವ ಯುರೋಪಿಯನ್ ಜನಗಳು ಕುರ್ಚಿಯ ಮೇಲೆ ಕುಳಿತಿರುವಾಗ ದಿವಾನರು ಮೊದಲುಗೊಂಡು ದೇಶಿಯ ಅಧಿಕಾರಿಗಳು ಕೆಳಗೆ ಕೂಡುವುದು ಸರಿಯಲ್ಲ ಆದ್ದರಿಂದ .ನನ್ನ ಕ್ಷಮಿಸಿ ” ಅಂದರಂತೆ. ಈ ವಿಚಾರ ಮಹಾರಾಜರಿಗೆ ಗೊತ್ತಾಗಿ ಆ ವರ್ಷದಿಂದ ಎಲ್ಲರೂ ಕುರ್ಚಿಯ ಮೇಲೆ ಕೂಡುವ ಏರ್ಪಾಡು ಮಾಡಿದರು.

ಸರ್ ಎಂವಿ   ಅವರ  ಉಡುಪು ಯಾವಾಗಲೂ ಸೂಟ್, ಟೈ( three piece suit ) ಮತ್ತು ಮೈಸೂರು ರುಮಾಲು. ಆಗಿನ ನಮ್ಮಅಧಿಕಾರಿಗಳಿಗೆ ಈ ಉಡುಪಿನ ಅಭ್ಯಾಸವಿರಲಿಲ್ಲ. ತಿಂಗಳಿಗೆ ಎರಡು ಬಾರಿ , ಪಂಚಾಂಗ ನೋಡಿ ಮುಖ ಚೌರವಾಗುತ್ತಿದ್ದ  ಕಾಲವಾಗಿದ್ದು ಇದನ್ನು ಸರ್ ಎಂವಿ ಬದಲಾಯಿಸುವುದಕ್ಕೆ ಪ್ರಯತ್ನ ಪಟ್ಟರು. ಮಾಸ್ತಿ ಅವರು ತಮ್ಮ ಜೀವನ ಪತ್ರಿಕೆಯಲ್ಲಿ ಇದರ ವಿಚಾರ ಪ್ರಸ್ತಾಪಮಾಡಿದ್ದಾರೆ. ಮಾಸ್ತಿಯವರು ದಿವಾನರ ಕಚೇರಿಯಲ್ಲಿ ಕಾರ್ಯದರ್ಶಿಗಳಾ ಗಿದ್ದರು. ಒಂದು ದಿನ ದಿವಾನರ ಜೊತೆ ಮೀಟಿಂಗ್ ಮುಗಿದಮೇಲೆ ಮೇಲೆ ನಿಮ್ಮ ಶರ್ಟಿನ ಗುಂಡಿ ಬಿಚ್ಚಿ ಹೋಗಿದೆ ಮತ್ತು ಟೈ ಸರಿಯಾಗಿ ಕಟ್ಟಿಲ್ಲಎಂದು ಟೀಕೆ ಮಾಡಿದರಂತೆ !

ಈಗಿನ Bangalore ಕ್ಲಬ್ , ಇವರ ಕಾಲದಲ್ಲಿ Bangalore United Services Club ಎಂಬ ಹೆಸರಿನಲ್ಲಿದ್ದು ಬರಿ ಬಿಳೀ ಜನಗಳಿಗೆ ಮಾತ್ರ   ಸದಸ್ಯತ್ವ ವನ್ನು ಕೊಡುತ್ತಿದ್ದರು . ಇದನ್ನು ಸಹಿಸಲಾರದೆ ಸರ್ ಎಂವಿ ಕಬ್ಬನ್ ಪಾರ್ಕ್ನಲ್ಲಿ ನೂರು ಭಾರತೀಯರನ್ನು ಸೇರಿಸಿ ೧೯೧೭ ನಲ್ಲಿ Century Club ಪ್ರಾರಂಭಮಾಡಿದರು. ಸರ್ ಎಂವಿ ಅವರು ೧೯೨೩ ಲಕ್ನೋ ನಲ್ಲಿ ಸೇರಿದ Indian Science Congress ಅಧ್ಯಕ್ಷ ರಾದರು ಮತ್ತು ಭದ್ರಾವತಿಯ ಕಬ್ಬಿಣ ಕಾರ್ಖಾನೆಯ ಆಡಳಿತ ವನ್ನು ವಹಿಸಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಿದರು. ಈ ಕೆಲಸಕ್ಕೆ ಸರ್ಕಾರದಿಂದ ಆರು ವರ್ಷದ ಸಂಬಳ ಒಂದೂವರೆ ಲಕ್ಷ ರೂಪಾಯಿಗಳನ್ನು ತಮ್ಮ ಸ್ವಂತಕ್ಕೆ ಬಳಸದೆ  ಬೆಂಗಳೂರಿನಲ್ಲಿ Jayachamarajendra Technical Institute ಸ್ಥಾಪನೆ ಮಾಡಿದರು.

ಭಾರತದಲ್ಲಿ ಮೋಟಾರ್ ತಯಾರು  ಮಾಡುವ ಉದ್ದೇಶ ಸರ್ ಎಂವಿ ಅವರಿಗೆ ತೀವ್ರವಾಗಿತ್ತು. ಈ ಕಾರಣದಿಂದ All India Manufacturers Association ನಾಯಕರಾಗಿ ೧೯೩೫ ರಲ್ಲಿ ಅಮೇರಿಕ ಮತ್ತು ಇಟಲಿ ದೇಶಗಳ ಭೇಟಿ ಮಾಡಿ ಫೋರ್ಡ್ ಕಂಪನಿಯ ಹೆನ್ರಿ ಅವರನ್ನು ಕಂಡು ಅವರ ಸಹಾಯ ಕೋರಿದರು. ಭಾರತದಲ್ಲಿ ಕೈಗಾರಿಕೆ ಹೆಚ್ಚಾದರೆ ಇಂಗ್ಲೆಂಡಿಗೆ ರಫ್ತು (export ) ಕಡಿಮೆ ಆಗಿ ಅಲ್ಲಿನ ಆರ್ಥಿಕ ಪರಿಸ್ಥಿತೆಗೆ ತೊಂದರೆ ಉಂಟಾಗುವುದೆಂಬ ಕಾರಣದಿಂದ ಆಗಿನ ಕೇಂದ್ರ ಆಂಗ್ಲ ಸರ್ಕಾರ ದಿಂದ ಈ ಯೋಜನೆಗಳಿಗೆ ಉತ್ತೇಜನ ಸಿಗಲಿಲ್ಲ. ಹೀಗೆ ಸರ್ ಎಂವಿ ಅವರು ಹಾಕಿದ ಅನೇಕ ಯೋಜನೆಗಳಿಗೆ ಆಂಗ್ಲ ಸರ್ಕಾರದವರು ತೊಂದರೆ ಮಾಡಿದರು. ಆದರೆ ಬೆಂಗಳೂರಿನ HAL ಮತ್ತು Fiat ಕಂಪನಿಯ Premier Auto ಇವರ ಪ್ರಯತ್ನದಿಂದ ಪ್ರಾರಂಭ ವಾಯಿತು

ಇಪ್ಪತ್ತನೇ ಶತಮಾನದ  ಶುರುವಿನಲ್ಲಿ  ಕೇವಲ ಶೇಕಡ ೧೦-೧೫ ಅಕ್ಷರಸ್ಥರು ಮಾತ್ರ ಇದ್ದು , ಇದರಿಂದ ಭಾರತದ ಮುಂದೆವರೆವುದಿಲ್ಲ ಎಂಬ ವಿಚಾರವನ್ನು ಅರಿತು ಹಳ್ಳಿಗಳಲ್ಲಿ ಶಾಲೆಗಳನ್ನು ಪ್ರಾರಂಭಿಸಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡುವ ಯೋಜನೆಯಲ್ಲಿ ಸರ್ ಎಂವಿ ತೊಡಗಿದರು.

ಇವರಿಗೆ ಬಂದ ಪ್ರಶಸ್ತಿಗಳು ಅನೇಕ

Fellowship of Institute of Civil Engineers London
೧೯೧೧ CIE ( Companion of the Order of the Indian Empire )
೧೯೧೫ Knighthood (became Sir M.Vishweshraiah)
೧೯೫೫ ಭಾರತದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ
ಅನೇಕ ಡಾಕ್ಟ್ರೇಟ್ ಪದವಿಗಳು

ಬೆಂಗಳೂರು ಮತ್ತು ದೆಹಲಿಯಾ ಎರಡು ಮೆಟ್ರೋ ತಾಣಕ್ಕೆ ಇವರ ಹೆಸರನ್ನು ಇಡಲಾಗಿದೆ.

 

 

ಸರ್ ಎಂವಿ ಅವರು ಜೀವಮಾನದ ಪೂರ್ತಿ ಒಂಟಿ ಯಾಗಿದ್ದರು. ೧೮೮೨ ರಲ್ಲಿ ಚಿಕ್ಕಬಳ್ಳಾಪುರದ ರಾಮಚಂದ್ರ ಶಾಸ್ತ್ರೀ ಗಳ ಮಗಳು ಸರಸ್ವತಿ ಯೊಂದಿಗೆ ವಿವಾಹವೂ ನಡೆದಿತ್ತು. ಆದರೆ ದುರಾದೃಷ್ಟದಿಂದ ೧೮೮೮ ಅಕ್ಟೋಬರ್ ತಿಂಗಳಲ್ಲಿ ಮಡದಿ ಶಿಶುವಿಗೆ ಜನ್ಮವಿತ್ತ ದಿನವೇ ತಾಯಿ ಮಗು ತೀರಿಹೋದರು. ತಾಯಿಯ ಬಲವಂತದಿಂದ ಎರಡನೆ ಮದುವೆಯೂ ಆಗಿ ಹೆರಿಗೆಯಲ್ಲಿ ಪುನಃ ತಾಯಿ ಮತ್ತು ಮಗುವಿನ ಮರಣವಾಯಿತು.

ಕರ್ನಾಟಕ ಸರ್ಕಾರದವರು ಮುದ್ದೇನಹಳ್ಳಿಯಲ್ಲಿ ಇವರು ಹುಟ್ಟಿದ ಮನೆಯನ್ನು ವಸ್ತುಶಾಲೆಯಾಗಿ ಮತ್ತು ಸ್ಮಾರಕ ಮಂದಿರ ಮಾಡಿದ್ದಾರೆ. ಬೆಂಗಳೂರಿನ Vishwesharaiah Industrial and Science Museum ಬಹಳ ಜನಪ್ರಿಯವಾಗಿದೆ.

 

ಮುದ್ದೇನಹಳ್ಳಿಯಲ್ಲಿ ಸರ್ ಎಂವಿ ಅವರ ಸ್ಮಾರಕ

ಸರ್ ಎಂವಿ ೧೯೬೧ ಏಪ್ರಿಲ್ ೧೨ ನೇ ತಾರೀಕು ಕೊನಯ ಉಸಿರು ಬಿಟ್ಟು ನಮ್ಮಿಂದ ಅಗಲಿದರು ಆದರೆ ಅವರು ತೋರಿಸಿದ ದಾರಿ ಮತ್ತು ಆಧುನಿಕ ಭಾರತಕ್ಕೆ ಹಾಕಿದ ಅಡಿಪಾಯ ನಾವು ಎಂದಿಗೂ ಮರೆಯಬಾರದು

 

 

ರಾಮಮೂರ್ತಿ
ಬೇಸಿಂಗ್ ಸ್ಟೋಕ್

Acknowledgements
Memoirs of my working life by Sir MV. 1951
ಸರ್ ಎಂ ವಿಶ್ವೇಶ್ವರಯ್ಯ, Jeevana Publications By Masti Ventatesha Iyengar
Google Images