ರೇಡಿಯೋ, ಗಿರ್ಮಿಟ್ ಮತ್ತು ಅನಿವಾಸಿ – ಶ್ರೀವತ್ಸ ದೇಸಾಯಿ ಬರೆದ ಲೇಖನ

ಶ್ರೀವತ್ಸ ದೇಸಾಯಿ

‘ಅನಿವಾಸಿ’ ಯ ಕ್ರಿಯಾಶೀಲ ಬರಹಗಾರರೂ ಮತ್ತು ಪೋಷಕರೊಬ್ಬರಲ್ಲಾಗಿರುವ ಶ್ರೀವತ್ಸ ದೇಸಾಯಿಯವರು, ಇತ್ತೀಚಿಗೆ ಧಾರವಾಡಕ್ಕೆ ಪ್ರವಾಸ ಹೋಗಿದ್ದರು. ಅಲ್ಲಿರುವ ರೇಡಿಯೋ ಗಿರ್ಮಿಟ್ ಕಚೇರಿಗೆ ಭೇಟಿಯಾಗುವ ಮತ್ತು ಸಂದರ್ಶನವೊಂದನ್ನು ನೀಡುವ ಅವಕಾಶ ಒದಗಿ ಬಂದಾಗ ಅವರು  ‘ಅನಿವಾಸಿಯ’ ಧ್ವಜವನ್ನು ಹಾರಿಸಲು ಮರೆಯಲಿಲ್ಲ. ಸಂದರ್ಶನದ ಧ್ವನಿ ಸುರುಳಿ ವಾಟ್ಸಾಪ್ ನಲ್ಲಿ ನನಗೆ ಕೇಳಲು ದೊರಕಿದಾಗ, ಡಾ ।। ದೇಸಾಯಿ ಯವರ ‘ಅನಿವಾಸಿ’ ಬಗೆಗಿನಪ್ರೀತಿ , ಅದಕ್ಕಾಗಿ ದುಡಿದವರನ್ನು ಅವರು ನೆನೆಸಿದ ಪರಿ ಎಲ್ಲವೂ ಅವರ ‘ಅನಿವಾಸಿ’ ಯ ಬಗೆಗಿನ ಕಾಳಜಿ ಮತ್ತು ಅದರ ಬಗೆಗಿನ ವಿನಮ್ರತೆಯನ್ನು ತೋರಿಸುತ್ತಿತ್ತು. ಈ ಸಂದರ್ಶನವನ್ನೇಕೆ ಒಂದು ಲೇಖನವನ್ನಾಗಿಸಬಾರದು ಎಂದು ಅವರೊಡನೆ ಚರ್ಚಿಸಿದಾಗ, ಅವರು ಸಂದರ್ಶನವನ್ನೇ ವಸ್ತುವಾಗಿರಿಸದೆ, ಅದರ ಅನುಭವವನ್ನು ವಸ್ತುವನ್ನಾಗಿಸಿ ಒಂದು ಲೇಖನ ಬರೆಯಬಹುದು ಎಂದು ಹೇಳಿದರು. ಅದರಂತೆ ಈ ವಾರ ಅನಿವಾಸಿಯಲ್ಲಿ ಒಂದು ಲೇಖನದ ಗಿರ್ಮಿಟ್ ಅನ್ನು ನಮಗೆಲ್ಲ ಬಡಿಸಿದ್ದಾರೆ. ಯು ಕೆ ಯ ಹಲವಾರು ಭಾಗಗಳಲ್ಲಿ ಬರುವ ವಾರಾಂತ್ಯದಲ್ಲಿ ಹಿಮಪಾತವಾಗುವ ಮುನ್ಸೂಚನೆಯಿದ್ದು, ಈ ಲೇಖನವನ್ನು ಓದಿದಮೇಲೆ ಮನೆಯಲ್ಲಿ ಗಿರ್ಮಿಟ್ ಮಂಡಕ್ಕಿ ಮತ್ತು ಮೆಣಸಿನಕಾಯಿ ಬಜ್ಜಿ ಮಾಡಿಕೊಂಡು ತಿನ್ನಲು ಅನೇಕರು ಪ್ರಚೋದಿತರಾಗುವ   ಸಂಭವ ಹೆಚ್ಚಾಗಿದೆ. ತಪ್ಪದೇ  ಓದಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. 
                                                                                ಸಂ : ಶ್ರೀನಿವಾಸ ಮಹೇಂದ್ರಕರ್ 

ರೇಡಿಯೋ

ನನಗೂ ರೇಡಿಯೋಗೂ ಅಂಟಿದ ನಂಟು ಹುಟ್ಟಿನಿಂದಲೇ ಇರಬೇಕೇನೋ! ನಮ್ಮ ಮನೆ, ಅಂದರೆ ನಾನು ಧಾರವಾಡದ ಸಪ್ತಾಪುರದಲ್ಲಿ ಹುಟ್ಟಿದ ಮನೆ ಆಕಾಶವಾಣಿ ಧಾರವಾಡದ ಒಂದೇ ತರಂಗಾಂತರದಲ್ಲೇ ಇದ್ದಿರಬೇಕು, ಏಕೆ, ಒಂದೇ ಕೂಗಳತೆಯಲ್ಲೇ ಇತ್ತು. ಇನ್ನೊಂದು ರೀತಿಯಲ್ಲಿ ಹೇಳುವದೆಂದರೆ, ಆಗ AIR Dharwad ದಲ್ಲಿ ರೇಡಿಯೋ ಪ್ರೋಗ್ರಾಮ್ಮರ್ ಆಗಿ ಕೆಲಸ ಮಾಡುತ್ತಿದ್ದ ಹೆಸರಾಂತ ಲೇಖಕ ಹೆಚ್ ಕೆ ರಂಗನಾಥರ ಶಬ್ದಗಳಲ್ಲಿ ”ಮಾತು-ಮಾತು-ಮಾತಿನ ಮೋಡಿ ಹಾಕುವ ದ ರಾ ಬೇಂದ್ರೆ”ಯವರು ಆಗ AIR advisor ಆಗಿದ್ದಾಗ ತಮ್ಮ ಕೋಣೆಯಲ್ಲಿ ಕುಳಿತು ಸ್ವಲ್ಪ ಜೋರಾಗಿ ಮಾತಾಡಿದರೆ ಹೊರಗಿನಿಂದಲೇ ನಮ್ಮ ಮನೆಯವರೆಗೂ ಕೇಳುವಷ್ಟು ಸಮೀಪ ಆ ರೇಡಿಯೋ ಸ್ಟೇಷನ್! ನಮ್ಮ ಮನೆಯಲ್ಲಿ ನಮಗಾಗಿ ಒಂದು ರೇಡಿಯೋ ಇರಲಿಲ್ಲ. ನನ್ನ ಅಣ್ಣ ಮತ್ತು ನಾನು ಕೂಡಿ ಒಂದು ಕ್ರಿಸ್ಟಲ್ ರೇಡಿಯೋವನ್ನು (ನೀವಾರೂ ಅದನ್ನು ಕೇಳಿರಲಿಕ್ಕೆ ಅಥವಾ ನೋಡಿಯೂ ಇರಲಿಕ್ಕಿಲ್ಲ) ನಾವೇ ಕಟ್ಟಿ, ಇಯರ್ ಫೋನ್ ಕಿವಿಗೆ ಹಚ್ಚಿ ರೇಡಿಯೋ ಪ್ರಸಾರವನ್ನು ಕೇಳುತ್ತಿದ್ದೆವು.

Crystal Radio

ಆಗ ಧಾರವಾಡ ಆಕಾಶವಾಣಿಯಿಂದ ಹಿಂದುಸ್ತಾನಿ ಸಂಗೀತದ ದಿಗ್ಗಜರಾದ ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್ ಅವರ ಸಂಗೀತ, ಶ್ರೀರಂಗರ ನಾಟಕ ಇತ್ಯಾದಿ ಪ್ರಸಾರವಾಗುತ್ತಿದ್ದ ಕಾಲವದು. ಅದು 1950ರ ದಶಕ. ಆಲ್ ಇಂಡಿಯಾ ರೇಡಿಯೋ (AIR) ಆಗ ತಾನೇ ಅಧಿಕೃತವಾಗಿ ‘ಬಹುಜನಹಿತಾಯ, ಬಹುಜನ ಸುಖಾಯ‘ ಆಕಾಶವಾಣಿ ಎಂದು ಕರೆದುಕೊಳ್ಳಲಾರಂಭಿಸಿತು. ಡಾ ಗೋಪಾಲಸ್ವಾಮಿ ಪ್ರಾರಂಭಿಸಿದ ಮೈಸೂರು ಬಾನುಲಿ ಕೇಂದ್ರಕ್ಕೆ ’ಆಕಾಶವಾಣಿ’ ಎಂಬ ಆ ಹೆಸರನ್ನು ಮೊದಲು ಸೂಚಿಸಿದವರು ಸಾಹಿತಿ, ಹಾಸ್ಯಲೇಖಕ ನಾ. ಕಸ್ತೂರಿ ಅಂತ ದಾಖಲೆಯಾಗಿದೆ. ಆಗ ನಾನು ಶಾಲೆಯಲ್ಲಿದ್ದಾಗ ಓದಿದ ’ಗೆಳೆಯರ ಗುಂಪಿನ’ವರೊಲ್ಲೊಬ್ಬರಾದ ವಿನಾಯಕರು (ವಿ ಕೃ ಗೋಕಾಕ) ರಚಿಸಿದ ಕವಿತೆಯ ಆರಂಭ ಹೀಗಿತ್ತು:

”ಕಾಡಿಯೋ ಬೇಡಿಯೋ, ತಂದೆನೊಂದು ರೇಡಿಯೋ!” ರೇಡಿಯೋ ಅಷ್ಟು ಅಪರೂಪ. ಆಗ ರಾಷ್ಟ್ರೀಯ ಬಾನುಲಿ ಪ್ರಸಾರವೊಂದೇ ಇತ್ತು ನಮ್ಮ ಮನರಂಜನೆಗೆ. ಆನಂತರ ರೇಡಿಯೋ ಸಿಲೋನ್ ಗೆ ಪೈಪೋಟಿಯಾಗಿ ’ವಿವಿಧ ಭಾರತಿ” ಪ್ರಾರಂಭವಾಗಿ ಸ್ವಲ್ಪೇ ಸಮಯದಲ್ಲಿ ಜನಪ್ರಿಯವಾಯಿತು. ರೇಡಿಯೋ ಮನೆ ಮನೆಯಲ್ಲೂ ಕಾಣಿಸಿ, ಕೇಳಿಸಿಕೊಳ್ಳಲಾರಂಭಿಸಿತು. ರೇಡಿಯೋದ ರಿಸೆಪ್ಶನ್ ಸ್ಪಷ್ಟವಾಗಿ ಕೇಳಿಸದೆ ಮಧ್ಯ ಮಧ್ಯದಲ್ಲಿ ’ಕರ್ ಕರ್” ಎನ್ನುವ ಕಿವಿಗೆ ತ್ರಾಸ ಕೊಡುತ್ತಿದ್ದ ಕರ್ಕಶ ಸದ್ದುಗಳೊಂದಿಗೆ ಪ್ರಸಾರವಾಗುತ್ತಿದ್ದ ಮೀಡಿಯಂ ವೇವ್ AM (amplitude modulation) ರೇಡಿಯೋ ಮುಂದೆ ಸುಧಾರಿಸಿ FM (frequency modulation) ರೇಡಿಯೋ ಆಗಿ, ಈಗ ಅಂತರ್ಜಾಲದಲ್ಲಿ ಸ್ಟ್ರೀಮ್ ಆಗುವ ಕಾಲ ಬಂದಿದೆ. ಅವುಗಳನ್ನು ಸ್ಮಾರ್ಟ್ ಫೋನಿನ ಆಪ್ ನಲ್ಲಿಯೋ ಕಂಪ್ಯೂಟರಿನಲ್ಲೋ (IP ಪ್ರೋಟೋಕಾಲ್) ಕೇಳಲು ಸಿಗುವ ಸ್ವತಂತ್ರ ರೇಡಿಯೋ ಪ್ರಸಾರಗಳು ಹೇರಳವಾಗಿವೆ. ಅಂಥವುಗಳಲ್ಲೊಂದು ರೇಡಿಯೋ ಗಿರ್ಮಿಟ್ ಆನ್ ಲೈನ್ ರೇಡಿಯೋ.

ಗಿರ್ಮಿಟ್

ಏನಿದು ಗಿರ್ಮಿಟ್? ಈ ಊರಿನ ಎರಡು ಖಾದ್ಯಗಳು ಧಾರವಾಡದ ಕೀರ್ತಿಯನ್ನು ಅಜರಾಮರವನ್ನಾಗಿ ಮಾಡಿವೆ: ಒಂದು ಸಿಹಿಯಾದ ಧಾರವಾಡದ ಫೇಡೆ; ಇನ್ನೊಂದು ಖಾರದ ಗಿರ್ಮಿಟ್. ಅದೊಂದು ತರಹದ ಮಿಕ್ಷ್ಚರ್: ಚುರಮುರಿ, ಉಳ್ಳಾಗಡ್ಡಿ (ಇಲ್ಲಿ ಈರುಳ್ಳಿ, ಅಂದರೆ ತಪ್ಪು!), ಹುಣಸೆ ರಸ, ಅಥವಾ ನಿಂಬೆ, ಹಸಿರು ಮೆಣಸಿನಕಾಯಿ, ಉಪ್ಪು, ಸಕ್ಕರೆ, ಒಗ್ಗರಣೆ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಸಣ್ಣನೆಯ ಶೇವ್ ಇವೆಲ್ಲ ಕೂಡಿ ಪುಟಾಣಿ ಹಿಟ್ಟಿನೊಂದಿಗೆ ಕಲೆಸಿ, ಮೇಲೆ ಗಾರ್ನಿಶ್ ಗೆಂದು ಸ್ವಲ್ಪ ಸಣ್ಣಗೆ ಹೆಚ್ಚಿದ ಉಳ್ಳಾಗಡ್ಡಿ. ಕರಿದ ಹಸಿ ಮೆಣಸಿನಕಾಯಿಯನ್ನು ಜೊತೆಯಲ್ಲಿ ನಂಜಿಕೊಳ್ಳುತ್ತ, ಹಾಡು ಕೇಳುತ್ತ, ಹಾಡುತ್ತ ತಿಂದರೆ ಸ್ವರ್ಗಕ್ಕೆ ಮೂರೇ ಗೇಣು. ಉತ್ತರ ಕರ್ನಾಟಕದ ತುಂಬೆಲ್ಲ ಇದರ ಖ್ಯಾತಿ ಹರಡಿದೆ, ಈಗ ದಕ್ಷಿಣಕ್ಕೂ ಪಸರಿಸಿದೆ. ವಿಜಾಪುರ, ಬೆಳಗಾಂ ಕಡೆ ಇದಕ್ಕೆ ’ಸಂಗೀತ” ಅಂತ ಕರೆಯುತ್ತಾರಂತೆ. ರಾತ್ರಿಯಿಡೀ ನಾಟಕ ಸಂಗೀತ ನೋಡುತ್ತ ಕೇಳುತ್ತ ಟೆಂಟಿನ ಹೊರಗಡೆ ಬಿಸಿಬಿಸಿ ಬಿಕ್ಕುವ ಈ ಖಾದ್ಯಕ್ಕೆ ಆ ಹೆಸರು ಬಂದಿರಬೇಕೆಂದು ಕೆಲ ರಸಿಕರ ಗ್ರಹಿಕೆ. ಏನೇ ಇರಲಿ, ಹೊಸದೊಂದು ವೈಶಿಷ್ಟ್ಯಪೂರ್ಣ ರೇಡಿಯೋ ಸ್ಟೇಷನ್ ಧಾರವಾಡದಲ್ಲಿ ಶುರು ಮಾಡುವಾಗ ಇದರ ಸ್ಥಾಪಕರು ಇದಕ್ಕಿಂತ ಒಳ್ಳೆಯ ಹೆಸರನ್ನು ಹುಡುಕುವ ಗೋಜಿಗೇ ಹೋಗಿರಲಿಕ್ಕಿಲ್ಲ, ಎಂದು ನನ್ನ ತಿಳುವಳಿಕೆ. ಆ ರೇಡಿಯೋ ಸ್ಟೇಷನ್ನಿನ ವಿಳಾಸ ಗೋಪಾಳಪುರ, ಮಾಳಮಡ್ಡಿ, ಧಾರವಾಡ ಎಂದು ತಿಳಿದ ಮೇಲಂತೂ ಕೂಡಲೆ ಇದೇ ವರ್ಷಾರಂಭದಲ್ಲಿ ಊರಿಗೆ ಹೋಗಿದ್ದ ನಾನು ಅವರ ಆಮಂತ್ರಣಕ್ಕೊಪ್ಪಿ ನಡೆದುಕೊಂಡೇ ಸ್ಟುಡಿಯೋಕ್ಕೆ ಹೊರಟೆ.

ಕ್ಷಣಕ್ಷಣಕ್ಕೆ ಕಾಲ ಮೇಲೆ ಹರಿದು ಬರಬಹುದಾದ ಕಾರು, ದ್ವಿಚಕ್ರಗಳಿಂದ ಬಚಾಯಿಸಿಕೊಳ್ಳುತ್ತ ನಡೆದು, ಜೀವವನ್ನು ಮುಷ್ಟಿಯಲ್ಲಿ ಹಿಡಿದುಕೊಂಡು ಚರಂಡಿ, ನಾಯಿಗಳಿಂದ ತಪ್ಪಿಸಿಕೊಳ್ಳಲು ’ಹಾಪ್ ಸ್ಟೆಪ್ ಅಂಡ್ ಜಂಪ್’ ಮಾಡದೆ ಕೇರ್ ಫ್ರೀ ಕಾಲ್ನಡಿಗೆಯ ಆನಂದವನ್ನು ಇನ್ನೂ ಅನುಭವಿಸಲು ಸಾಧ್ಯವಾಗುವ ಕೆಲವೇ ಪಟ್ಟಣಗಳಲ್ಲಿ ನನ್ನ ಹುಟ್ಟೂರು ಧಾರವಾಡವೂ ಒಂದು. ಈ ರೇಡಿಯೋ ಸ್ಟುಡಿಯೋ ಈಗ ಮನೆಮಾಡಿರುವ ಪವಮಾನ ಅಪಾರ್ಟ್ಮೆಂಟ್ಸ್ ಕಟ್ಟಡದ ಮುಂದಿನ ರಸ್ತೆಯಗುಂಟವೇ ನಾನು ಪ್ರತಿದಿನ ಶಾಲೆಯಿಂದ ಮನೆಗೆ ಮರಳುತ್ತಿದ್ದುದನ್ನು ನೆನೆದು ಎದೆಯಲ್ಲಿ ಪುಳಕ. ಆ ಕಟ್ಟಡದ ಎದುರಿಗೇ ’ಆನಂದಕಂದ’ವೆಂಬ ಹೆಸರಿನ ಮನೆ, ಆ ಕಾಲದ ಪ್ರಸಿದ್ಧ ಸಾಹಿತಿ ಬೆಟಗೇರಿ ಶರ್ಮರ ಕುಟುಂಬದ್ದು. ಅವರು ಬದುಕಿದ್ದ ಸಮಯದಲ್ಲಿ ಊರಿನ ವೀಥಿಗಳಲ್ಲಿ ಅಡ್ಡಾಡುವಾಗ ಕನ್ನಡದ ಕೆಲಸ ಮಾಡಿದ ಅದೆಷ್ಟು ಸಾಹಿತಿಗಳು, ಕವಿಗಳು, ಕಲಾಕಾರರು ಕಾಲ್ನಡಿಗೆಯಲ್ಲೋ ಟಾಂಗಾದಲ್ಲೋ ಹೋಗುವದನ್ನು ನೋಡುವದು ಸರ್ವೇ ಸಾಮಾನ್ಯವಾಗಿತ್ತು! ಬೇಂದ್ರೆ, ಆಲೂರು ವೆಂಕಟರಾಯರು, ಶಂ ಭಾ ಜೋಷಿ, ಚೆನ್ನವೀರ ಕಣವಿ, ಕೆ ಕೃಷ್ಣಮೂರ್ತಿ, ಹೀಗೇ ಅನೇಕರನ್ನು ನೋಡಿದ್ದ ನೆನಪು ಇನ್ನೂ ಹಸಿರಾಗಿಯೇ ಇದೆ.

Audacity ಕಾರ್ಯದಲ್ಲಿ ತೊಡಗಿದ ವಿಜಯ ಸತ್ತೂರ

ನಾನು ರೇಡಿಯೋ ಗಿರ್ಮಿಟ್ ಗೆ ಮೊದಲ ಭೇಟಿಕೊಟ್ಟ ದಿನ ಒಂದು ಜಾನೇವರಿ ಮುಂಜಾವಿನ ಎಳೆ ಬಿಸಿಲಿನಲ್ಲಿ ನಡೆಯುತ್ತಾ ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಾ ಹೋದೆ. ಒಂದು ಹೊಸ ಕಟ್ಟಡದ ಮೂರನೆಯ ಮಹಡಿಯ ಬಾಗಿಲಲ್ಲಿ ನಿಂತು ಕಾಲ್ ಬೆಲ್ ಒತ್ತಿದಾಗ ಹೃತ್ಪೂರ್ವಕವಾಗಿ ಸ್ವಾಗತಿಸಿದವರು ವಿಜಯ ಸತ್ತೂರ್ ಮತ್ತು ಹಸನ್ಮುಖಿಯರಾದ ಅವರ ಸಹೋದ್ಯೋಗಿಗಳು! ಇದಾದ ಕೆಲ ದಿನಗಳ ನಂತರ ಸಂದರ್ಶನ ತೆಗೆದುಕೊಂಡವರು ಇನ್ನೊಬ್ಬ ವಿಜಯರು (ಇನಾಂದಾರ್). ಚಿಕ್ಕಂದಿನಲ್ಲಿ ನಾನು ನೋಡಿದ್ದ ಆಲ್ ಇಂಡಿಯಾ ರೇಡಿಯೋದ ಐವತ್ತರ ದಶಕದ ಆಕಾಶವಾಣಿ ಕೇಂದ್ರಕ್ಕೂ ಇಪ್ಪತ್ತೊಂದನೆಯ ಶತಮಾನದ ಇಂಟರ್ನೆಟ್ ಆಧಾರಿತ ನವಯುಗದ ಒಂದು ಸ್ಟುಡಿಯೋಕ್ಕೂ ಬಹಳ ವ್ಯತ್ಯಾಸವಿರಬಹುದು, ಇಲ್ಲಿ ರೇಡಿಯೋ ಪ್ರಸಾರ ಹೇಗೆ ಆಗುತ್ತದೆ, ಏನು ವ್ಯತ್ಯಾಸ, ಅದರ nuts and bolts ಏನೆಂದು ತಿಳಿದುಕೊಳ್ಳುವ ತವಕ ನನಗೆ. ರೇಡಿಯೋ ಗಿರ್ಮಿಟ್ ಇತ್ತೀಚೆಗಷ್ಟೇ ಪ್ರಾರಂಭವಾದ, ಎರಡು ವರ್ಷಗಳಿಗಿಂತ ಕಡಿಮೆಯ ವಯಸ್ಸಿನ ಹಸುಳೆ, ಎಂದು ಗೊತ್ತಾಯಿತು. ’ವಿವಿಡ್ ಲಿಪಿ’ (VIVIDLIPI)ಮತ್ತು ಈ ರೇಡಿಯೋ ಎರಡೂ ಪ್ರಮೋದ LNS ಅವರ  ಕನಸಿನ ಕೂಸು. ಕೆಲವೇ ಕಾಯಂ ಸಿಬ್ಬಂದಿಗಳು. ಆಡಳಿತಕ್ಕೆ ಆರೇಳು ಜನರಷ್ಟೇ ಫುಲ್ ಟೈಮ್ ಕೆಲಸಮಾಡುವವರು. ಇನ್ನುಳಿದವರೆಲ್ಲ ಪಾರ್ಟ್ ಟೈಮ್. ಅವರ ಕುಟುಂಬದವರನ್ನೇಕರು ಅದರಲ್ಲಿ ಕೆಲಸಮಾಡುತ್ತಾರೆ. ಎಲ್ಲರೂ ಈಗಿನ ಕಾಲದಲ್ಲಿ ಸಾಮಾನ್ಯವೆನ್ನುವ ‘ಮಲ್ಟಿ ಟಾಸ್ಕಿಂಗ್’ ಪಟುಗಳು.

ರೇಡಿಯೋ ಗಿರ್ಮಿಟ್ ಈಗ ಲಾಭೋದ್ದೇಶಬಾಹಿರ (non-profit making) ಸಂಸ್ಥೆ. ಅದರ ಪ್ರಸಾರವನ್ನು ರೇಡಿಯೋ ಜಾರ್ (Jar) ಹೋಸ್ಟ್ ಮಾಡುತ್ತದೆಯಂತೆ. ಅದು 24*7 ಪ್ರಸಾರವಾಗುವ ರೇಡಿಯೋ. ಅದರ ವೆಬ್ ಸೈಟ್ (www.radiogirmit.com) ನಲ್ಲಿ ಅವರ ಪ್ರಸಾರಗಳ ವಿವಿಧ ಅಂಗಗಳನ್ನು ಕೇಳಬಹುದು: ಹರಟೆ ಕಟ್ಟೆ, ಸ್ಪಂದನ, ವಿಷಯಧಾರೆ, ಚಿಣ್ಣರ ಕಥಾಗುಚ್ಛ, ವಿಶೇಷ ಸಂದರ್ಶನ, ಇತ್ಯಾದಿ. ಅವುಗಳಲ್ಲಿ ಕೆಲವು ತಪ್ಪದೆ ನಿಯತ ಕಾಲದಲ್ಲಿ ಪ್ರಸಾರವಾದರೂ ಇನ್ನು ಕೆಲವು ಮಧ್ಯದಲ್ಲಿ ಸ್ಥಗಿತಗೊಂಡಂತೆ ಕಾಣುತ್ತದೆ. ಈ ಕಾರ್ಯಕ್ರಮಗಳು ಪ್ರಸಾರವಾಗದ ಉಳಿದ ಸಮಯದಲ್ಲಿ ಹಾಡು, ಸಂಗೀತವನ್ನು 24/7 ಕೇಳಬಹುದು. ’ಲಹರಿ’ ಯವರು ಕೊಡಮಾಡಿದ ಹಾಡುಗಳ ಲಹರಿ ಸತತವಾಗಿ ಹರಿಯುತ್ತಿರುತ್ತದೆ. ಇಲ್ಲಿಯವರೆಗೆ ತಡೆಯಿಲ್ಲದೆ ಪ್ರಸಾರವಾದ ಹರಟೆಕಟ್ಟೆಯ ಹಲವಾರು ಉತ್ಕೃಷ್ಟ ಹರಟೆಗಳನ್ನು ನಾನು ಸ್ವತ: ಆಲಿಸಿ ಆನಂದಿಸಿರುವೆ. ಅದರಲ್ಲಿ ಪ್ರಸ್ತುತ ಪಡಿಸುತ್ತಿರುವ ಬಲಕುಂದಿಯ ಗೌರಿ ಪ್ರಸನ್ನ (ಈಗ ಯುಕೆ ವಾಸಿ) ಅವರ ’ಧಾರವಾಡಿ’ ಭಾಷೆ ಮತ್ತು ಶೈಲಿ ಹರಟೆಗೆ ಒಗ್ಗುತ್ತದೆ. ಪ್ರತಿಯೊಂದು ಹರಟೆಗಳಲ್ಲಿ ತುಂಬ ವಿಷಯ ವೈವಿಧ್ಯತೆ ಮತ್ತು ಸಾಹಿತ್ಯದ ಉಲ್ಲೇಖ, ಇವು ಬರೀ ಒಣ ಹರಟೆಯಾಗದೆ ಅವನ್ನು ಮುದ್ರಿಸಿದರೆ ಒಳ್ಳೆಯ ಲೇಖನಗಳಾಗುವ ಸಾಧ್ಯತೆಯಿದೆ ಎಂದೆನಿಸುವದು. ಉದ್ಘೋಷಕಿ ಉಮಾ ಭಾತಖಂಡೆಯವರ ಇಂಪಾದ ಧ್ವನಿ ಕೆಲವೊಂದು ಕಾರ್ಯಕ್ರಮಗಳಿಗೆ ಮೆರುಗು ಕೊಟ್ಟಿದೆ. ಈ ರೇಡಿಯೋದ ನಿರ್ವಾಹಕರ ಉದ್ದೇಶಗಳೇನೋ ಮಹತ್ತರವಾದವು; ”ಇದನ್ನು ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ತಂಗುದಾಣವನ್ನಾಗಿ ಮಾಡಬೇಕೆಂದು” ಅವರ ಗುರಿ. ಸಮಯ ಕಳೆದಂತೆ, ಕ್ರಮೇಣ ಸಂಸ್ಥೆ ಬೆಳೆದಂತೆ ಅದು ಸಫಲವಾಗಲಿ ಎಂದು ಹಾರೈಸುವೆ.

ನನ್ನ ಸಂದರ್ಶನ

ನಿಗದಿತ ಸಂದರ್ಶನದ ತಾರೀಖು ಬದಲಾಗಿದ್ದರಿಂದ, ಮತ್ತು ತಪ್ಪಿಸಲಾರದ ಬೇರೆ ಅಪಾಯಿಂಟ್ಮೆಂಟ್ ಕಾರಣದಿಂದಾಗಿ ನನ್ನ ಸಂದರ್ಶನ ನಡೆದದ್ದು ಫೆಬ್ರುವರಿ 8, 2020 ರಂದು ಮಧ್ಯಾಹ್ನ. ಬಲಿಪಶುವಿನಂತಿಲ್ಲದಿದ್ದರೂ ಸ್ವಲ್ಪ ’ನರ್ವಸ್’ ಆಗಿಯೇ ಸ್ಟೂಡಿಯೋದಲ್ಲಿ ಕಾಲಿಟ್ಟೆ. ಸಂದರ್ಶಕ -ಸಂದರ್ಶನಾರ್ಥಿಗಳ ಸಂಬಂಧ ವಿಚಿತ್ರ. ಅವರ ಕೆಮಿಸ್ಟ್ರಿ ಸರಿಯಾದರೆ ಇಬ್ಬರಿಗೂ ’ವಿನ್-ವಿನ” ಲಾಭದ ಆಟ. ಸಂದರ್ಶನ ಹರಿತವಾದ ಎರಡಲುಗಗಳ ಕತ್ತಿಯಿದ್ದಂತೆ. ಯಾರು ಘಾಸಿಯಾಗುತ್ತಾರೆ ಎನ್ನುವದು ಭಾಗವಹಿಸುವ ಆಟಗಾರರ ಮೇಲೆ ಅವಲಂಬಿಸಿದ್ದು. ನಾನು ಬಿ.ಬಿ.ಸಿ.ಯ ರೇಡಿಯೊ 4 ರ ನಿಷ್ಠಾವಂತ ಶ್ರೋತೃ ಅನ್ನಿ. ಅದು ಜಗತ್ತಿನ ನಂಬರ್ 1 ರೇಡಿಯೋ ಸ್ಟೇಷನ್ ಆಗಿ ಇನ್ನೂ ಉಳಿದಿದೆಯೋ ಗೊತ್ತಿಲ್ಲ, ಆದರೂ ನಾನು ಕೇಳುತ್ತ ಬಂದ ನಾಲ್ಕು ದಶಕಗಳಲ್ಲಿ ಅದು ಪ್ರಸಾರ ಮಾಡಿದ ಅವಿಸ್ಮರಣೀಯ ಸಂದರ್ಶನಗಳು ಮತ್ತು ವುಗಳನ್ನು ನಡೆಸಿಕೊಟ್ಟ ಅಸಾಧಾರಣ ನಿರೂಪಕರ ಸಾಲೇ ಇದೆ ಬ್ರಾಡ್ಕಾಸ್ಟಿಂಗ್ ಹೌಸ್ ದಲ್ಲಿ. ಅವರಲ್ಲಿ ಸುಪ್ರಸಿದ್ಧರು 30 ವರ್ಷಗಳ ಅಖಂಡ ಸೇವೆಯ ನಂತರ ಇತ್ತೀಚೆಗೆ ದಿನನಿತ್ಯದ ಬೆಳಿಗ್ಗಿನ ರೇಡಿಯೋ ’’ಟುಡೇ” ದಿಂದ ನಿವೃತ್ತರಾದ ’ರಾಟ್ ವೈಲರ್’ ಬಿರುದಿನ ಜಾನ್ ಹಂಫ್ರೀಸ್. ಅವರೆಂಥ ಪ್ರಚಂಡ ಸಂದರ್ಶಕರೆಂದರೆ ಅತಿರಥಿ ಮಹಾರಥಿ ರಾಜಕಾರಣಿಗಳು ಸಹ ಅವರ ಸಮ್ಮುಖದಲ್ಲಿ ಕಿಂಚಿತ್ತಾದರೂ ನಡುಗಿತ್ತಿದ್ದರಂತೆ. ಆದರೂ ಕೆಲವರು ತೋರಗೊಡುತ್ತಿರಲಿಲ್ಲವಂತೆ. ಆದರೆ ನಾನು ರಾಜಕಾರಣಿಯೂ ಅಲ್ಲ ಮತ್ತು ವಿರೋಧಾಭಾಸದ ಮನುಷ್ಯನೂ ಅಲ್ಲವೆಂದ ಮೇಲೆ ಏಕೆ ಅಳುಕು?

ಸಂದರ್ಶಕ ವಿಜಯ ಇನಾಂದಾರ ಮತ್ತು ಲೇಖಕ (Photo: Radio Girmit)

ಅವರು ಹೇಳಿದಂತೆ ಆ ದಿನ ಮಧ್ಯಾಹ್ನ ಮೂರೂವರೆಗೆ ಅದೇ ಅಟ್ಟ ಹತ್ತಿ ಹೋದೆ. ಕೈಯಲ್ಲಿ ’ಅನಿವಾಸಿ’ ಬಗೆಗಿನ ಮಾಹಿತಿಯ ಟಿಪ್ಪಣಿ ಮಾಡಿಕೊಂಡ ನೋಟ್ ಬುಕ್ಕು. ಉಮಾ ಅವರು ಬರಮಾಡಿಕೊಂಡು ಸ್ಟೂಡಿಯೋಕ್ಕೆ ಕರೆದೊಯ್ದರು. ಸ್ಟೂಡಿಯೋ ಅಂದರೆ ಚಿಕ್ಕದಾದರೂ ಬೆಳಕಿನಿಂದ ಕೂಡಿದ ಆ ಕೋಣೆಯಲ್ಲಿ ಒಂದು ಟೇಬಲ್ಲು; ಅದರ ಮೇಲೆ ವಿಜಯ ಸತ್ತೂರ್ ಮತ್ತು ಉಮಾ ಅವರು ಎಡಿಟಿಂಗ್ ಗೆ ಉಪಯೋಗಿಸುವ ಕಂಪ್ಯೂಟರ್; ಅದರಲ್ಲಿ ಲೋಡ್ ಮಾಡಿದ ಮತ್ತು ಈ ಮೊದಲೇ ನನಗೆ ಪ್ರದರ್ಶಿಸಿದ ’ಆಡಾಸಿಟಿ’ ತಂತ್ರಾಂಶ; ಗೋಡೆಯ ಮೇಲೆ ರೇಡಿಯೋ ಗಿರ್ಮಿಟ್ಟಿನ ಲೋಗೋ ಹೊತ್ತ ದೊಡ್ಡ ಪೋಸ್ಟರ್. ಕೋಣೆಯ ಇನ್ನೊಂದು ಭಾಗದಲ್ಲಿ ಇಬ್ಬರಿಗೂ ಕೂಡಲು ಕುರ್ಚಿಗಳು; ಅವರ ಮಧ್ಯದಲ್ಲಿ ಗೋಡೆಯ ಬ್ರಾಕೆಟ್ಟಿನಿಂದ ತೂಗುಬಿಟ್ಟ ಪ್ರೋಫೆಷನಲ್ ಮೈಕ್ರೋಫೋನ್. ಇದನ್ನೆಲ್ಲ ನೋಡುವಷ್ಟರಲ್ಲಿ ಕೋಣೆಯಲ್ಲಿ ಹೊಕ್ಕರು ವಿಜಯ ಇನಂದಾರ್. ಪರಿಚಯ, ಪೀಠಿಕೆಯ ಮಾತುಗಳು ಆದವು. ನಾನು ಈ ಮೊದಲೇ ಕಳಿಸಿದ್ದ ಅನಿವಾಸಿಯ ಲೇಖನಗಳು ಅವರಿಗೆ ತಲುಪಿದೆಯೆಂದು ಖಚಿತ ಪಡಿಸಿಕೊಂಡೆ. ಸಂದರ್ಶನದ ರೂಪರೇಷೆಗಳನ್ನು ಸ್ಪಷ್ಟಪಡಿಸಿಯಾದ ಮೇಲೆ, ಉಮಾ ಅವರು ಸ್ವಿಚ್ಚಾನ್ ಮಾಡಿ (?) ಸೋನಿ ಡಿಜಿಟಲ್ ರೆಕಾರ್ಡರನ್ನು ಅವರ ಕೈಗಿತ್ತರು. ತಡಮಾಡದೇ ಸಂದರ್ಶನ ಪ್ರಾರಂಭವಾಯಿತು. ಸರತಿ ಪ್ರಕಾರ ಮೈಕ್ರೋಫೋನಿನಂತೆ ಅದನ್ನು ಕೈಯಲ್ಲಿ ಹಿಡಿದು ಅದರೊಳಗೆ ನಾವು ಒಬ್ಬೊಬ್ಬರಾಗಿ ಮಾತಾಡ ಬೇಕು, ಮತ್ತು ಇನ್ನೊಬ್ಬರಿಗೆ ವಾಪಾಸ್ ಕೊಡಬೇಕು.

ಸಂದರ್ಶನ ಮುಂದುವರೆದಂತೆ ಅದರಲ್ಲಿ ಪಳಗಿದ ಇನಾಂದಾರರು ನನ್ನ ಮೇಲೆ ಪೂರ್ತಿ ವಿಜಯ ಸಾಧಿಸಲು ಸನ್ನದ್ಧರಾಗಿದ್ದಂತೆ ಕಾಣದೆ ಬಹಳ ಸೌಹಾರ್ದಕರ ವಾತವರಣ ನಿರ್ಮಿಸಿ ರಿಲಾಕ್ಸ್ ಆಗುವಂತೆ ಮಾಡಿದ್ದಕ್ಕೆ ನಾನು ಋಣಿ. ಬರ್ದುಗರಾದ್ದರಿಂದ ಆಗಾಗ ಪ್ರಶ್ನೆಗಳಿಂದಲೇ ಪೇಚು ಹಾಕುತ್ತಿದ್ದರು! ಕನ್ನಡ ಬಳಗ ಯು ಕೆದ ಪ್ರಾರಂಭ, ಮತ್ತು ಅದು ಹೇಗೆ ಅನಿವಾಸಿಯ ಹುಟ್ಟಿಗೆ ನಾಂದಿ ಹಾಡಿತು, ಅದರ ಪ್ರೇರಣೆ, ಬೆಳವಣಿಗೆ ಎಲ್ಲ ಚರ್ಚೆ ಮಾಡಿದೆವು. ಧನ್ಯಾವಾದಗಳೊಂದಿಗೆ ಸಂದರ್ಶನ ಮುಗಿಯಿತು. ರೆಕಾರ್ಡರ್ನಲ್ಲಿ ಹೇಗೆ ಮೂಡಿದೆ ಎಂದು ನೋಡುವಾ ಅಂತ ಉಮಾ ಅವರು ಕಂಪ್ಯೂಟರಿನಲ್ಲಿ ಹಾಕಿದರೆ ಏನೂ ಕೇಳಿಸವಲ್ಲದು. Blank, ಶೂನ್ಯ! ಹಾಂಡ್ ಸೆಟ್ ಸ್ವಿಚ್ ಆನ್ ಆಗಿರಲೇ ಇಲ್ಲ. ಸುಮ್ಮನೆ ಗಾಳಿಯ ಜೊತೆಗೆ ಮಾತಾಡಿದಂತೆ ಆಗಿತ್ತು! ದೀಪವಿಲ್ಲದೆ ಆರತಿಯಂತೆ. ’ತುಪ್ಪದ ಬತ್ತಿ ಹಚ್ಚಿ’ ಎರಡನೆಯ ಸಲ ಮತ್ತೆ ಸಂದರ್ಶನದ ಪುನರಾವೃತ್ತಿ. ಈ ಸಲ ರೆಕಾರ್ಡ್ ಆದದ್ದು ಖಚಿತ ಪಡಿಸಿಕೊಂಡು ಹೊರಬಿದ್ದೆ. ಹೋಗುವಾಗ ರೇಡಿಯೋ ಗಿರ್ಮಿಟ್ಟಿನ ಮೆಮೆಂಟೊ ಹಿಡಿದು de rigueur ಫೋಟೋ ತೆಗೆಸಿಕೊಂಡು ಅವಿಸ್ಮರಣೀಯ ಭೆಟ್ಟಿಗೆ, ಮತ್ತು ‘ಅನಿವಾಸಿ’ಯ ಬಗ್ಗೆ ಚರ್ಚೆ ಮಾಡಲು ಕೊಟ್ಟ ಅವಕಾಶಕ್ಕೆ ಧನ್ಯವಾದಗಳನ್ನರ್ಪಿಸಿ ಮರಳಿದೆ. ಏನೋ, ನನ್ನ ಕರ್ತವ್ಯ ಮಾಡಿದ ಸಮಾಧಾನ.

ಶ್ರೀವತ್ಸ ದೇಸಾಯಿ (ಲೇಖನ ಮತ್ತು ಫೋಟೋಗಳು)

ಕೃಪೆ: ರೇಡಿಯೋ ಗಿರ್ಮಿಟ, ಸರೋಜಿನಿ ಪಡಸಲಗಿ

 

 

ಯಾರ್ಕ್ ಶೈರ್ ಕನ್ನಡ ಬಳಗ –   ಸಂಕ್ರಾಂತಿ ಆಚರಣೆ 

ಪ್ರಿಯ ಅನಿವಾಸಿ ಓದುಗರೇ, ಜನವರಿ ೧೮  ರಂದು YSKB ತಂಡದವರು   ಸಂಕ್ರಾಂತಿ ಸಂಜೆ ಮತ್ತು ‘ಅನಿವಾಸಿ’ ಯ ಐದನೇ ವಾರ್ಷಿಕೋತ್ಸವವನ್ನು ವಿದ್ಯುಕ್ತವಾಗಿ  ಆಚರಿಸಿ ಸಂಭ್ರಮಿಸಿದರು. YSKB ತಂಡದವರು ಸಂಕ್ರಾಂತಿ ಸಂಜೆಯಲ್ಲಿ  ಎಳ್ಳು ಬೆಲ್ಲದ ಜೊತೆಗೆ , ಮೈ ಚಳಿ ಬಿಡಿಸಲು ಬಿಸಿ ಬಿಸಿ ಬಜ್ಜಿ, ಟೀ/ಕಾಫಿ ಹಾಗೂ ರಾತ್ರಿಯೂಟಕ್ಕೆ ಪೊಂಗಲ್ ಬಡಿಸಿದ್ದರಂತೆ. ‘ಅರೆ! ಅದೆಲ್ಲಾ ಇರಲಿ YSKB  ಅಂದರೆ ಏನು ಹೇಳು ಮಾರಾಯ’ ಅಂತ ಮನಸ್ಸೊಳಗೆ ಗೊಣಗುತ್ತಿದ್ದೀರಾ?. ಬನ್ನಿ YSKB  ಎಂದರೆ ಏನು ಎಂದು ಅದರ ಸಂಸ್ಥಾಪಕ ಸದಸ್ಯರಲ್ಲೊಬ್ಬರಾದ ಡಾ||ಶ್ರೀವತ್ಸ ದೇಸಾಯಿ ಅವರ ಬಾಯಿಯಲ್ಲೇ ಕೇಳೋಣ. 

ಗೊತ್ತಾಯಿತಲ್ಲವಾ , YSKB  ಎಂದರೆ ವಯಸ್ಸಾದವರ  ಕನ್ನಡ ಬಳಗ ಅಲ್ಲ ಇದು ಯುವಕರ ಕನ್ನಡ ಬಳಗ !! . ಈ ವಾರ ನಾವು ಅನಿವಾಸಿಯಲ್ಲಿ  ಡಾ . ಜಿ. ಎಸ್. ಶಿವಪ್ರಸಾದ್ ರವರು  “ಸಂಕ್ರಾಂತಿ ಸಂಜೆ” ಯ ಬಗ್ಗೆ ಬರೆದ ಒಂದು ಸಂಪೂರ್ಣ ವರದಿಯನ್ನು  ಪ್ರಕಟಿಸುತ್ತಿದ್ದೇವೆ. ಅಷ್ಟೇ ಅಲ್ಲದೆ ಈ ಸಂಕ್ರಾಂತಿ ಸಂಜೆಯಲ್ಲಿ ಅನಿವಾಸಿಯ ಕವಿಗಳಾದ ಕೇಶವ್ ಕುಲ್ಕರ್ಣಿ ರವರು, ಗೌರಿ ಪ್ರಸನ್ನ ರವರು ಮತ್ತು ಶಿವಪ್ರಸಾದ್ ರವರು  “ಕವಿ ನೋಡಿ ಕವಿತೆ ಕೇಳಿ”  ಕಾರ್ಯಕ್ರಮದಲ್ಲಿ ವಾಚಿಸಿದ ಹಾಸ್ಯ ಕವಿತೆ ಗಳನ್ನೂ ಕೂಡಾ ಪ್ರಕಟಿಸಿದ್ದೇವೆ. ಓದಿ, ನೋಡಿ,  ಕೇಳಿ  ಜೊತೆಗೆ ನಿಮ್ಮ ಕಾಮೆಂಟುಗಳಿಂದ ಪ್ರೋತ್ಸಾಹಿಸಿ.                       

-ಶ್ರೀನಿವಾಸ ಮಹೇಂದ್ರಕರ್ 

ಎಳ್ಳು ಬೆಲ್ಲಗಳ ನಡುವೆ ಹೀಗೊಂದು ಸಂಕ್ರಾಂತಿ ಸಂಜೆ

ಬರೆದವರು: ಡಾ . ಜಿ. ಎಸ್. ಶಿವಪ್ರಸಾದ್

ಯಾರ್ಕ್ ಶೈರ್ ಕನ್ನಡ ಬಳಗ (YSKB) ಯು.ಕೆ ಕನ್ನಡ ಬಳಗದ ಒಂದು ಸ್ಥಳೀಯ ಶಾಖೆ. ಇದು ರೂಪುಗೊಂಡು ಐದು ವರ್ಷಗಳು ತುಂಬಿವೆ. ಕಳೆದ ಐದು ವರುಷಗಳಲ್ಲಿ ನಮ್ಮ ಈ ಶಾಖೆ ತಾನು ಬೆಳೆಯುವುದಲ್ಲದೆ ತನ್ನ ಮೂಲ ಸಂಸ್ಥಾಪನೆಯಾದ ಯು.ಕೆ ಕನ್ನಡ ಬಳಗಕ್ಕೆ ಶೋಭೆ, ಗರಿಮೆ ಮತ್ತು ಗೌರವಗಳನ್ನು ತಂದು ಕೊಟ್ಟಿದೆ.

ಹಾಗೆ ಯಾರ್ಕ್ ಶೈರ್ ಸದಸ್ಯರು ಯು ಕೆ ಕನ್ನಡ ಬಳಗದ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿ ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ. ಯು ಕೆ ಕನ್ನಡ ಬಳಗದ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಂಡು ಸಕ್ರಿಯವಾಗಿ ಭಾಗವಹಿಸಿದ್ದಾರೆ. ಅನೇಕ ಸಾಂಸ್ಕೃತಿಕ ನೃತ್ಯ ಸಂಗೀತ ಕಾರ್ಯಕ್ರಮಗಳನ್ನು ಯುಗಾದಿ ದೀಪಾವಳಿಯಲ್ಲಿ ಒದಗಿಸಿದ್ದಾರೆ. ಚೆಸ್ಟರ್ ಫೀಲ್ಡ್, ಮತ್ತು ಡೋಂಕಾಸ್ಟರ್ ಗಳಲ್ಲಿ ಸ್ಮರಣೀಯವಾದ ಯುಗಾದಿ ದೀಪಾವಳಿಗಳನ್ನು ನಡೆಸಿಕೊಟ್ಟಿದ್ದಾರೆ. ನಾನು ಇದರ ಅಧ್ಯಕ್ಷನಾಗಿ ಕೆಲಸ ಮಾಡಲು ಅನುವು ಮಾಡಿಕೊಟ್ಟ ನಮ್ಮ ಸದಸ್ಯರಿಗೆ ನನ್ನ ಕೃತಜ್ಞತೆಗಳು.

ನಾವು ಪ್ರತಿ ವರುಷ ಸಂಕ್ರಾತಿ ಹಬ್ಬವನ್ನು ಆಚರಿಸುತ್ತ ಬಂದಿದ್ದೇವೆ. ಈ ವರುಷ ಐದನೇ ವಾರ್ಷಿಕ ಉತ್ಸವ ಶೆಫೀಲ್ಡ್ ಬಳಿ ಬಹಳ ಯಶಸ್ವಿಯಾಗಿ ಜರುಗಿತು. ವೈ. ಎಸ್. ಕೆ. ಬಿ. ಹುಟ್ಟಿದ ಸಮಯದಲ್ಲೇ ಅಸ್ತಿತ್ವಕ್ಕೆ ಬಂದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರವೇದಿಕೆ (ಅನಿವಾಸಿ) ತನ್ನ ಐದನೇ ಮೈಲಿಗಲನ್ನು ದಾಟಿದ್ದು ಮತ್ತು ಈ ‘ಸಂಕ್ರಾಂತಿ ಸಂಜೆ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾದ ಸಂಗತಿ.

ಯಾವುದೇ ಸಂಘ ಸಂಸ್ಥೆ ಯಶಸ್ಸನ್ನು ಕಾಣಬೇಕಾದರೆ ಅಲ್ಲಿಯ ಸದಸ್ಯರ ಒಮ್ಮತ, ಒಗ್ಗಟ್ಟು, ಸಹಕಾರ ಮತ್ತು ಬೆಂಬಲಗಳು ಅಗತ್ಯ. ಈ ಕಾರ್ಯಕ್ರಮಕ್ಕೆ ನಮ್ಮ ಹಿರಿಯ ಕಿರಿಯ ಸದಸ್ಯರು ಪ್ರೀತಿ ವಿಶ್ವಾಸಗಳಿಂದ ತಮ್ಮ ಪರಿಶ್ರಮ ಮತ್ತು ಸಮಯವನ್ನು ನೀಡಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಇಲ್ಲಿ ಕೌಟುಂಬಿಕ ಅನ್ಯೋನತೆ ಮತ್ತು ಸಾಮರಸ್ಯದ ಭಾವನೆಗಳಿವೆ.

ಯಾವುದೇ ಕಾರ್ಯಕ್ರಮದ ಯಶಸ್ಸಿಗೆ ಆಗಮಿಸಿದ ಅತಿಥಿಗಳು ಕೂಡ ಕಾರಣರಾಗಿರುತ್ತಾರೆ. ನಮ್ಮ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ರೇಡಿಯೋ ಗಿರ್ಮಿಟ್ ಖ್ಯಾತಿಯ ಗೌರಿ ಪ್ರಸನ್ನ ಅವರು ಆಗಮಿಸಿದ್ದು ಎಲ್ಲರು ಅವರ ಸಂಕ್ರಾಂತಿಯ “ಹರಟೆ” ಯನ್ನು ಮೆಚ್ಚಿಕೊಂಡರು. ಸಂಕ್ರಾಂತಿಯ ವಿವಿಧ ಸಾಂಸ್ಕೃತಿಕ ರೂಪಗಳನ್ನು ಹಿನ್ನೆಲೆಗಳನ್ನು ಪರಿಚಯಿಸಿದರು. ಅವರ ಹಾಸ್ಯ ಪ್ರಜ್ಞೆ ಹರಟೆಗೆ ಮೆರುಗನ್ನು ತಂದಿತ್ತು. ಗೌರಿ ಪ್ರಸನ್ನ ರವರು ಈ ಹರಟೆಯನ್ನು, ವಿಡಿಯೋ ಗಿರ್ಮಿಟ್ ನಲ್ಲಿ ಮತ್ತೊಮ್ಮೆ ಮರು ನಿರ್ಮಿಸಿ ಪ್ರಸ್ತುತ ಪಡಿಸಿದ್ದಾರೆ.

ಗೌರಿ ಅವರು ನಿರ್ದೇಶಿಸಿದ ‘ಗಿಳಿವಿಂಡು’ ತಂಡದವರು ಗಿರೀಶ್ ಕಾರ್ನಾಡ್ ಅವರ ತಲೆದಂಡ ನಾಟಕದ ಕೆಲವು ಸನ್ನಿವೇಶಗಳನ್ನು ಪ್ರಸ್ತುತ ಪಡಿಸಿದರು. ಬಸವಣ್ಣ ಮತ್ತು ಬಿಜ್ಜಳರ ನಡುವಿನ ಧಾರ್ಮಿಕ, ಸಾಮಾಜಿಕ ಬಿಕ್ಕಟ್ಟುಗಳು ಪರಿಣಾಮಕಾರಿಯಾಗಿ ರಂಗದ ಮೇಲೆ ಮೂಡಿಬಂದಿತು. ಪ್ರಸನ್ನ ಮತ್ತು ಪ್ರಮೋದ್ ಅವರು ವಿವಿಡ್ ಲಿಪಿಯ ಕೆಲವು ಉತ್ತಮ ಪುಸ್ತಕಗಳನ್ನು ಪುಸ್ತಕ ಪ್ರದರ್ಶನದೊಂದಿಗೆ ಪರಿಚಯಿಸಿದರು

ಅಂದು ಸಂಜೆ ಸಂಗೀತವನ್ನು ಒದಗಿಸಿದ ವಿಜಯೇಂದ್ರ ಮತ್ತು ಅವರ ಪತ್ನಿ ಶ್ರೀದೇವಿ ಅವರು ಮೊದಲಿಗೆ ಸುಮಧುರ ಸಿನಿಮಾ ಹಾಡುಗಳನ್ನು ಹಾಡಿ ಎಲ್ಲರ ಮನತಣಿಸಿ ನಂತರ ಫಾಸ್ಟ್ ನಂಬರ್ ಗಳನ್ನು ಹಾಡಿದಾಗ ಜನ ಹುಚ್ಚೆದ್ದು ಕುಣಿದರು.

ವೈ. ಎಸ್. ಕೆ. ಬಿ. ಯ ಕಿರಿಯ, ಹಿರಿಯ ಸದಸ್ಯರು ಮತ್ತು ಚಿಣ್ಣರು ತಮ್ಮ ವಯಸ್ಸು ಹಾಗೂ ಶಕ್ತಿಗೆ ಅನುಗುಣವಾಗಿ ಉತ್ಕೃಷ್ಟವಾದ ಮನೋರಂಜನಾ ಕಾರ್ಯಕ್ರಮಗಳನ್ನು ಒದಗಿಸಿದರು. ಕಾರ್ಯಕ್ರಮಗಳ ಜವಾಬ್ದಾರಿಯನ್ನು ಹೊತ್ತ ಶ್ರೀಮತಿ ವ್ರತ ಚಿಗಟೇರಿ ಮತ್ತು ಡಾ ಸುಮನಾ ನಾರಾಯಣ್ ಅವರ ಸಾಧನೆಗಳನ್ನು ಸ್ಮರಿಸಲಾಯಿತು

ಅನಿವಾಸಿ ನಡೆದು ಬಂದ ದಾರಿಯನ್ನು ಕೇಶವ್ ಮತ್ತು ರಾಮ್ ಶರಣ್ ಒಂದು ಸುಂದರ ಸ್ವಾರಸ್ಯಕರ ಸಂಭಾಷಣೆಯಲ್ಲಿ ಸಭಿಕರಿಗೆ ಸಂಕ್ಷಿಪ್ತವಾದ ಪರಿಚಯ ಮಾಡಿಕೊಟ್ಟರು. ಅನಿವಾಸಿ ಕಾರ್ಯಕ್ರಮದ ಅಂಗವಾಗಿ “ಕವಿ ನೋಡಿ ಕವಿತೆ ಕೇಳಿ” ಎಂಬ ಕಾರ್ಯಕ್ರಮದಲ್ಲಿ ಕೇಶವ್, ರಾಮಶರಣ್, ಗೌರಿ ಮತ್ತು ನಾನು ನಮ್ಮ ಕವಿತೆಗಳನ್ನು ಪ್ರಸ್ತುತಪಡಿಸಿದೆವು. ವೈದ್ಯನಾಗಿ ನಾನು NHS ಆಸ್ಪತ್ರೆಗಳ ಕುರಿತಾಗಿ ಬರೆದ ಪದ್ಯವನ್ನು ಹಿಂದೆಯೇ ಗಮನಿಸಿದ ಗೌರಿ ಅವರು ಆಸ್ಪತ್ರೆಗೆ ಬರುವ ರೋಗಿ ಮತ್ತು ಅವರ ಕುಟುಂಬದವರ ಪ್ರತಿಕ್ರಿಯೆ ಹೇಗಿರಬಹುದು ಎಂಬ ಬಗ್ಗೆ ತಾವು ಬರೆದ ಕವನವನ್ನು ಮಂಡಿಸಿದರು. ನಾವು ಅಂದು ಓದಿದ ಕವಿತೆಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಈ ಕವನಗಳಿಗೆ ಹಾಸ್ಯ ಮತ್ತು ಲಘು ಹಿನ್ನೆಲೆಗಳಿದ್ದು ಒಮ್ಮೆ ನಕ್ಕು ಮರೆತು ಬಿಡುವ ಪದ್ಯಗಳು ಎಂದು ಭಾವಿಸಬಹುದು.

ಒಟ್ಟಾರೆ ಸಂಕ್ರಾತಿ ಕಾರ್ಯಕ್ರಮ ನಮ್ಮೆಲ್ಲರ ನೆನಪಿನಲ್ಲಿ ಉಳಿಯುವ ಒಂದು ಅಪೂರ್ವ ಸಂಜೆ!

ಕವಿ ನೋಡಿ ಕವಿತೆ ಕೇಳಿ

ನಮ್ಮ ನೆಚ್ಚಿನ NHS

ಡಾ . ಜಿ. ಎಸ್. ಶಿವಪ್ರಸಾದ್

ನಮ್ಮ ನೆಚ್ಚಿನ ಏನ್ ಹೆಚ್ಚ್ ಎಸ್ಸು
ರಾಷ್ಟ್ರದ ಹೆಮ್ಮೆಯ ಸಂಪತ್ತು
ಏನೇ ಇರಲಿ ನಿಮ್ಮ ಅಂತಸ್ತು
ಎಲ್ಲರಿಗು ನಿಲುಕುವ ಸವಲತ್ತು

ವೈದ್ಯರ ಮೇಲೆ ನಿಗಾ ಇಡುವ
ಮ್ಯಾನೇಜರುಗಳದೇ ದೌಲತ್ತು
ಕಾಣಬಹುದಿಲ್ಲಿ ಶ್ರದ್ಧೆ ಶಿಸ್ತು
ಹಣದ ಅಭಾವದಿಂದ ಆಗಾಗ್ಗೆ ಆಪತ್ತು

ಹೀಗಿದ್ದರೂ ನಿರೀಕ್ಷಿಸುತ್ತಾರೆ
ವೈದ್ಯರಿಂದ  ನೀಯತ್ತು 
ಹಗಲೂ ರಾತ್ರಿ ದುಡಿಯುವ ವೈದ್ಯರಿಗೆ
ಪಾಪ ಇಲ್ಲ ಪುರುಸೊತ್ತು

ತರಾವರಿ  ಆಸ್ಪತ್ರೆಗಳಲಿ ಬೆಳಕು ಥಳಕು
ಕೈ ತೊಳೆಯಲು ಮರೆಯದಿರಿ
ವಾರ್ಡ ಗಳಲಿ ತುಂಬಿ ತುಳುಕಿದೆ
ಕ್ರಿಮಿಗಳ ಭಯಂಕರ  ಕೊಳಕು

ನರ್ಸಮ್ಮಗಳ  “Are you alright” 
ಎಂಬ ಪ್ರೀತಿ ಮಾತುಗಳ   ಆರೈಕೆ
“Save the NHS”
ಎಂಬುದು ಎಲ್ಲರ ಹಾರೈಕೆ

ಕ್ಯೂ ನಲ್ಲಿ ನಿಂತ ಬಡಜನರು
ಕಾದು ಕೊರಗಿದ್ದಾರೆ ಬೇಸತ್ತು
ಶ್ರೀಮಂತರಿಗೆ ಇವೆ ಪ್ರೈವೇಟ್
ಕ್ಲಿನಿಕ್ ಗಳು ಹತ್ತಿಪತ್ತು

ರೋಗಿ ವೈದ್ಯರುಗಳಿಗಿಲ್ಲ ಭಾವನೆಗಳ ನಂಟು
ಕಾಸು ಕೊಡದ ರೋಗಿಗಳ ಕಂಪ್ಲೇಂಟು, ನೂರೆಂಟು
ಕಾಂಪೆನ್ ಸೇಷನ್ ಕೊಡಲು ಇಂಶೂರೆನ್ಸ್ ಕಂಪನಿಗಳುಂಟು
ಬಿಚ್ಚ ಬೇಕಿಲ್ಲ ನಮ್ಮಪ್ಪನ ಮನೆಯ ಗಂಟು!

ಫೇಸ್ಬುಕ್ ಗೀತೆ

ಕೇಶವ ಕುಲಕರ್ಣಿ

ಜೈ ಇಂಟರ್ ನೆಟ್ಟಿನ ತನುಜಾತೆ
ಜಯ ಹೇ ಫೇಸ್-ಬುಕ್ಕಿನ ಖಾತೆ
ಜಯ ನೂರಾರ್ ಸುಳ್ ಫ್ರೆಂಡ್ಸ್ ಗಳ ನಾಡೆ
ಜಯ ಹೇ ಸ್ಟೇಟಸ್-ಗಳ ಬೀಡೆ
ಸೋಷ್ಯಲ್ ನೆಟ್-ವರ್ಕಿನ ಮಾರಾಣಿಯೇ
ಹೊನ್ನಿನ ಶೂಲ ಕಮೆಂಟಿನ ಖಣಿಯೇ
ಗೂಗಲು ಯಾಹೂsಗಳು ಅವತರಿಸಿದ
ಅಂತರ ಜಾಲದ ತನುಜಾತೆ
ಜಯ ಹೇ ಫೇಸ್-ಬುಕ್ಕಿನ ಖಾತೆ

ಪಾರ್ಟಿಯ ಟ್ರಿಪ್ಪಿನ ಅಲ್ಬಂ ಹಾಕು
ಹೊಸ ಹೇರ್ ಡ್ರೆಸ್ಸಿನ ಸೆಲ್ಫೀ ನಾಕು
ಲೈಕು ಇಮೋಜೀ ನೂರಾ
ಕಮೆಂಟುಗಳು ಭರಪೂರಾ
ಡಿಸ್ಲೈಕ್ ಎಂಬ ಬಟನ್ನೇ ಇಲ್ಲದ
ಹೊಗಳು ಭಟ್ಟರ ನಿಜ ಭ್ರಾತೆ
ಜಯ ಹೇ ಫೇಸ್-ಬುಕ್ಕಿನ ಖಾತೆ

ಯಾರದೋ ನಾಯಿಯ ಬೆಕ್ಕಿನ ವಿಡಿಯೋ
ಯಾರ ಮನೆಯೊಳಗದೇನ್ನಡೆದಿದೆಯೋ
ಸ್ಕ್ರೋಲು ಮಾಡುತ್ತ ಲೈಕು
ಕೆಲವು ಕೊಮೆಂಟನು ಹಾಕು
ವೇಳೆಯನೆಲ್ಲವ ತಿಂದು ತೇಗಿರಲು
ಅಡುಗೆಗೆ ಇಡಲೂ ಮರೆತೆ
ಜಯ ಹೇ ಫೇಸ್-ಬುಕ್ಕಿನ ಖಾತೆ

ಫಾರ್ಮ್-ವಿಲ್ಲಾವನು ಆಡುತ ಕೂತೆ
ಮಕ್ಕಳ ಕೈಗೆ ಐಪ್ಯಾಡ್ ಕೊಟ್ಟೆ
ಪ್ರೊಫೈಲಿಗೆ ನೂರಾರ್ ಹೊಗಳಿಕೆ
ಇರೆ ಗಂಡನ ಹೊಗಳಿಕೆ ಬೇಕೆ?
ಗಾಸಿಪ್ ಮಾಡಲು ಮೆಸೆಂಜರಿರಲು
ನನಗಿನ್ನೇತರ ಕೊರತೆ?
ಜಯ ಹೇ ಫೇಸ್-ಬುಕ್ಕಿನ ಖಾತೆ

ಸರ್ವಜನಾಂಗದ ವರ್ಚುವಲ್ ತೋಟ
ನಿಜ ಜೀವನವ ಮರೆಸುವ ನೋಟ
ಏನನು ಮಾಡುವ ಮೊದಲು
ಬೇಕು ಫೇಸ್ಬುಕ್ಕಿನ ವಾಲು
ಮೀನ್ ಮಾರ್ಕೆಟ್ಟನು ಹೋಲುವ ಧಾಮ
ಸಮಯ ಕೊಲ್ಲು ಬಾ ಆರಾಮ
ಫೇಸ್-ಬುಕ್ ಎನೆ ಕುಣಿದಾಡುವ ಮನಸು
ಸ್ಮಾರ್ಟ್ ಫೋನಿಲ್ಲದ ಬಾಳದು ಹೊಲಸು
ಜೈ ಅಂತರಜಾಲದ ತನುಜಾತೆ
ಜಯಹೇ ಫೇಸ್-ಬುಕ್ಕಿನ ಖಾತೆ

NHS..ನನ್ನ ಅನುಭವ(as a ಪೇಶಂಟ್)

ಗೌರಿ ಪ್ರಸನ್ನ

ಬೆಳಬೆಳಗ್ಗೆ ಕೆಲಸಬಿಟ್ಟು
ಕರೆಮಾಡಿದಾಗ ಗಂಟೆಯಷ್ಟು
ಫೋನೆತ್ತಿ ಹೆಸರು ಜನ್ಮದಿನದ
ಪ್ರವರವನಾಲಿಸಿದ ರಿಸೆಪ್ಶನಿಷ್ಟು
ಅಂತೂ ಚೌಕಾಸಿ ಮಾಡಿ
ಕೊಡುವಳೊಂದು ಅಪಾಯಿಂಟಮೆಂಟು

ದಡಪಡಿಸಿ ಓಡಿಹೋದರಲ್ಲಿ
ಪಾಕಿ೯ಂಗ್ ಗಿಲ್ಲ ಜಾಗ ಒಂದೀಟು
ತಾಸಧ೯ದ ಸ್ಲಿಪ್ ಅಂಟಿಸಿ ಚೆಕಿನ್
ಆದ್ರೂ ಪಾಳಿ ಬರುವುದು ಲೇಟು
ಪೋಲೀಸನ ಪೆನಲ್ಟಿ ಚೀಟಿಗೆ ತೆತ್ತಬೇಕು
ದೊಡ್ಡ ದೊಡ್ಡ ನೋಟು

ಮೆಡಿಕಲ್ ಸೆಂಟರ್ ನಲ್ಲೋ ಕಂಡಿದ್ದು
ಬರೀ ಹೆಡ್ ನಸ್೯ ಫಾಮಾ೯ಸಿಸ್ಟು
ಖಾಸಗಿ ಆಸ್ಪತ್ರೆಯ ವೈದ್ಯರೋ ನಮಗೆ
ಕೇವಲ ಕನ್ನಡಿಯ ಗಂಟು
ಹೀಗಾಗಿ ಅನಿವಾಸಿ -ಕನ್ನಡಬಳಗದಲ್ಲಷ್ಟೇ
ಡಾಕ್ಟರ್ ಗಳ ನೆಂಟು

‘ತಿಂದದ್ದೇನು? ಮಲಗಿದ್ದೆಷ್ಟಕ್ಕೆ
ಒಮ್ಮೆ ನೋಡೇಬಿಡೋಣ ವೇಟು’ ..
‘ಯುರೇಕಾ’ದ ಆಕಿ೯ಮಿಡಿಸ್ ನಂತೆ ನಸ೯ಮ್ಮ
ಎನುವಳು…ಎಲ್ಲಕ್ಕೂ ಮೂಲ ಈ 88 ಉ
‘ವಾಕ್ ಮಾಡಿ ,ಜಾಗ್ ಮಾಡಿ ,ಊಟ
ತಿನಿಸಿನಲ್ಲಿರಲಿ ಸ್ವಲ್ಪ ಡಯಟ್ಟು ‘

ಎಂದ್ಹೇಳಿ ದಬ್ಬುವಳು ಬರಿಗೈಲಿ
ಗುಳಿಗೆ-ಔಷಧಿಗಳಿಗಿಲ್ಲಿ ಬಾಯ್ಕಾಟು
ಸುರಿವಮೂಗು-ಸಿಡಿವ ತಲೆಗೂ 88 ರ ವೇಟಿಗೂ
ಏನು ಸಂಬಂಧವೆನುವುದೇ ಡೌಟು
‘ಇನ್ನಾದರೂ ಮೊಬೈಲ್ ಬಿಡು,ಸೋಫಾದಿಂದೆದ್ದು
ಮಾಡುಕೆಲಸ’ಪತಿರಾಯರ ಕಾಮೆಂಟು
ಕ್ಲೀನಿಂಗು ವಾಷಿಂಗು ಕುಕ್ಕಿಂಗು ಮ್ಯಾಜಿಕ್
ನಿಂದಾ-ಗುವುದೇ? ನನ್ನ ಲಾ-ಪಾಯಿಂಟು
ಅದೇನೇ ಇರಲಿ ಒಮ್ಮೆ ನೋಡಿಕೊಳ್ಳಬಾರದೇ
ಸೊಂಟದ ಮೇಜರಮೆಂಟು
ಪಾತ್ರೆಗಳ ಹಾರಾಟ ,ನನ್ನ ಚೀರಾಟದೊಂದಿಗೆ
‘ಪ್ರಸಂಗ’ಕ್ಕೆ ಫುಲ್ ಪಾಯಿಂಟು