
ಅಮಿತಾ ರವಿಕಿರಣ್ ಅವರ ಆಸಕ್ತಿಗಳು ಒಂದೆರಡಲ್ಲ. ಅದ್ಭುತ ಹಾಡುಗಾರ್ತಿ, ಸಂಗೀತದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ನಮ್ಮ `ಅನಿವಾಸಿ` ಹಾಡಿನ ಸಿಡಿಗೆ ಧ್ವನಿಯಾಗಿದ್ದಾರೆ. ಫೋಟೋಗ್ರಾಫಿ ಇವರ ಇನ್ನೊಂದು ಹುಚ್ಚು. ಅದಲ್ಲದೇ ಚಂದದ ಕವನಗಳನ್ನು ಪೋಣಿಸುತ್ತಾರೆ. ಆಗಾಗ ಪ್ರಬಂಧ ಬರಹಗಳನ್ನು ಬರೆದು ಪ್ರಕಟಿಸುತ್ತಾರೆ. ಉತ್ತರ ಐರ್ಲಂಡಿನಲ್ಲಿ ವಾಸವಾಗಿರುವ ಅಮಿತಾ ಈ ಸಲ ಸಂಕ್ರಾಂತಿಯನ್ನು ನೆನೆಸಿಕೊಂಡು ಬರೆದಿದ್ದಾರೆ.
`ಎಳ್ಳು ಬೆಲ್ಲ ಕೊಟ್ಟು ಒಳ್ಳೊಳ್ಳೆ ಮಾತಾಡಿ` ಅಂತ ಕುಸುರೆಳ್ಳನ್ನು ಕೊಟ್ಟು, ಹಿರಿಯರ ಕಾಲಿಗೆ ನಮಸ್ಕರಿಸಿ, ಹೊಸ ಬಟ್ಟೆಯ ಜರಜರ ಸಪ್ಪಳದಲ್ಲೇ ಮೈ ಮರೆಯುತ್ತಿದ್ದ ಸಂಕ್ರಮಣಗಳು. ಆ ಸಡಗರ ಮರೆಯಾಗಿ ಎಷ್ಟೋ ವರ್ಷಗಳಾದವು. ಈಗಂತೂ ಹಬ್ಬಗಳಿಗಿಂತ ಅಂಗಡಿಯಲ್ಲಿರುವ ಸೇಲ್ ಎಂಬ ಕೆಂಪು ಬೋರ್ಡ ಕಂಡಾಗಲೇ ಬಟ್ಟೆ ಕೊಳ್ಳುವ ಸಂಭ್ರಮ. ಇವತ್ತು ಮನಸಿಗೆ ಬಂದಿದ್ದು ಅದೇ ವಿಷಯ. ಅವರಿವರ ವಿಷಯ ಯಾಕೆ ? ನಾನೇ ಅಮ್ಮನ ರೇಷ್ಮೆ ಸೀರೆಯಲ್ಲಿ ಲಂಗ, ರವಿಕೆ ಹೋಲಿಸಿಕೊಂಡು ದಾವಣಿ ಹಾಕಿಕೊಂಡು ಮನೆ ಮನೆಗೆ ಎಳ್ಳು ಹಂಚಲು ಹೋಗುವ ಸಂಭ್ರಮವನ್ನು ಮನಸ್ಪೂರ್ತಿ ಅನುಭವಿಸಿದ್ದೇನೆ.
`ಎಳ್ಳು ಬೆಲ್ಲ ಕೊಟ್ಟು ಒಳ್ಳೊಳ್ಳೆ ಮಾತಾಡಿ` ಅಂತ ಕುಸುರೆಳ್ಳನ್ನು ಕೊಟ್ಟು, ಹಿರಿಯರ ಕಾಲಿಗೆ ನಮಸ್ಕರಿಸಿ, ಹೊಸ ಬಟ್ಟೆಯ ಜರಜರ ಸಪ್ಪಳದಲ್ಲೇ ಮೈ ಮರೆಯುತ್ತಿದ್ದ ಸಂಕ್ರಮಣಗಳು. ಆ ಸಡಗರ ಮರೆಯಾಗಿ ಎಷ್ಟೋ ವರ್ಷಗಳಾದವು. ಈಗಂತೂ ಹಬ್ಬಗಳಿಗಿಂತ ಅಂಗಡಿಯಲ್ಲಿರುವ ಸೇಲ್ ಎಂಬ ಕೆಂಪು ಬೋರ್ಡ ಕಂಡಾಗಲೇ ಬಟ್ಟೆ ಕೊಳ್ಳುವ ಸಂಭ್ರಮ. ಇವತ್ತು ಮನಸಿಗೆ ಬಂದಿದ್ದು ಅದೇ ವಿಷಯ. ಅವರಿವರ ವಿಷಯ ಯಾಕೆ ? ನಾನೇ ಅಮ್ಮನ ರೇಷ್ಮೆ ಸೀರೆಯಲ್ಲಿ ಲಂಗ, ರವಿಕೆ ಹೋಲಿಸಿಕೊಂಡು ದಾವಣಿ ಹಾಕಿಕೊಂಡು ಮನೆ ಮನೆಗೆ ಎಳ್ಳು ಹಂಚಲು ಹೋಗುವ ಸಂಭ್ರಮವನ್ನು ಮನಸ್ಪೂರ್ತಿ ಅನುಭವಿಸಿದ್ದೇನೆ.
ಸಂಕ್ರಾಂತಿ ಹಬ್ಬ ಬರುವ ಎರಡು ತಿಂಗಳು ಮುಂಚಿನಿಂದಲೇ ನಮ್ಮ ತಯಾರಿ ಶುರು. ಅಂಥದ್ದೇನು ತಯಾರಿ ಅಂದಿರಾ? ಆಗ ನಾವು ಮಾರುಕಟ್ಟೆಯಲ್ಲಿ ಸಿಗುವ ಸಕ್ಕರೆ ಗುಳಿಗೆಗಳನ್ನುತರುತ್ತಿರಲಿಲ್ಲ. ಮನೆಯಲ್ಲೇ ಎಳ್ಳು ತಯಾರಿಸುತ್ತಿದ್ದೆವು.
ಸಕ್ಕರೆಪಾಕವನ್ನು ಏಳು ಬಾರಿ ಸೋಸಿ, ಕಾಸಿ, ಅದಕ್ಕೆ ನಿಂಬೆ ರಸ ಸೇರಿಸಿ ಸುಧಾರಸ ಎಂಬ ಪಾಕ ತಯಾರಿಸಿ, ಎಳ್ಳು, ಗೋಡಂಬಿ, ಕುಂಬಳ ಬೀಜದ ಒಳತಿರುಳು, ಜೀರಿಗೆ, ಬಡೆಸೋಪು, ಲವಂಗ, ಶೇಂಗ, ಪುಟಾಣಿ…ಹೀಗೆ ಎಲ್ಲವನ್ನೂ ಒಂದು ಹಿತ್ತಾಳೆ ಹರಿವಾಣದಲ್ಲಿ ಹಾಕಿ, ಕೆಂಡ ಹಾಕಿದ ಶೇಗಡಿ ಮೇಲೆ ಆ ಹರಿವಾಣವನ್ನು ಇಟ್ಟು, ಒಂದೆರಡು ಚಮಚ ಸುಧಾರಸ ಹಾಕಿ, ಮೆತ್ತಗೆ ಕೈ ಆಡಿಸಬೇಕು. ನಸುಕಿನಲ್ಲಿ ಎದ್ದು ಮಾಡಿದರೆ ಇನ್ನೂ ಒಳ್ಳೆಯದು, ಏಕೆಂದರೆ ಚಳಿ ಬಿದ್ದಷ್ಟು ಎಳ್ಳಿನ ಮೇಲೆ ಸಕ್ಕರೆ ಮುಳ್ಳುಗಳು ಏಳುತ್ತವೆ. ಅದಕ್ಕೆ ಸೂರ್ಯನ ದರ್ಶನ ಆಗಬರದಂತೆ!
ಇನ್ನೇನು ಜನೆವರಿ ತಿಂಗಳ ೧೫ ಬಂದೆ ಬಿಡ್ತು ಎನ್ನುವ ಹೊತ್ತಿಗೆ ಈ ಎಳ್ಳುಗಳು ಬಿಳಿ ಬಿಳಿ ಅರಳು ಮಲ್ಲಿಗೆಯ ನಗುವನ್ನು ಶೆಗಡಿಯ ಬಿಸಿಯಲ್ಲೇ ನಗುತ್ತವೆ. ನಂತರದ್ದು ಅದನ್ನು ಎಲ್ಲಾ ಬಂಧು ಬಾಂಧವರಿಗೆ ಕಳಿಸುವ ಕಾರ್ಯಕ್ರಮ.
ಕಾಮತ್ ಮಾಮನ ಅಂಗಡಿಗೆ ಹೋಗಿ ಚಂದದ ಗ್ರೀಟಿಂಗ್ ತಂದು ಅಥವಾ ಎಷ್ಟೋ ದಿನಗಳಿಂದ ಪುಸ್ತಕದಲ್ಲಿ ಒಣಗಿಸಿಟ್ಟ ಗುಲ್ಮೊಹರ್, ಹೂವು, ಎಲೆಗಳು, ಗುಲಾಬಿ ಪಕಳೆಗಳನ್ನು ಬಳಸಿ ಆಸ್ಥೆಯಿಂದ ಗ್ರೀಟಿಂಗ್ ತಯಾರಿಸಿ, ಅಲ್ಲಿ ಇಲ್ಲಿ ಕದ್ದು ತಂದ ಸಾಲುಗಳನ್ನು ಬರೆದು, ತಯಾರಿಸಿದ ಎಳ್ಳು ಹಾಕಿ ಅಂಚೆ ಪೆಟ್ಟಿಗೆಗೆ ಹಾಕಿದರೆ ಏನೋ ಒಂದು ದೊಡ್ಡ ಸಮಾಧಾನ (ಕೆಲವೊಮ್ಮೆ ಸ್ಟಾಂಪ್ ಮರೆತು ಗ್ರೀಟಿಂಗ್ಸ್ ನನಗೇ ವಾಪಾಸ್ ಸಿಕ್ಕಿದ್ದೂ ಉಂಟು).
ಸಂಕ್ರಾಂತಿಯ ದಿನ ಆ ದಿನ ಅಬ್ಬಲಿಗೆ (ಆಬೂಲಿ ಎಂದೂ ಹೇಳುತ್ತಾರೆ), ಅಂದರೆ ಕನಕಾಂಬರ ಹೂ ಮುಡಿಯಲೆಬೇಕಂತೆ, ಅದು ಆ ಹೊತ್ತಿಗೆ ಅರಳುವ ಹೂವು. ನಮ್ಮಕಡೆ ಪ್ರತಿ ಮನೆಯಲ್ಲೂ ಮಾರು ಅಲ್ಲದಿದ್ದರೂ, ಒಂದು ಮೊಳ ಅಬ್ಬಲಿಗೆ ಸಿಕ್ಕೇ ಸಿಗುತ್ತೆ. ಅದಲ್ಲದಿದ್ದರೂ, ಆಡುಸೋಗೆ ಹೂವು ಅಬ್ಬಲಿಗೆಯಂತೆ ಕಾಣುವ ಬಿಳಿ ಹೂವನ್ನು ನನ್ನ ಸೋದರತ್ತೆ ಅಕ್ಕರೆಯಿಂದ ದಂಡೆ ಕಟ್ಟಿ ನನ್ನ ನಾಗರಜಡೆಗೆ ಮುಡಿಸಿ ಸಿಂಗಾರ ಮಾಡುತ್ತಿದ್ದನ್ನು ಮರೆಯಲಾದೀತೇ?
ನಂತರ ಮನೆ ಮನೆ ತಿರುಗಾಡಿ, ಪುಟ್ಟ ಸ್ಟೀಲ್ ಡಬ್ಬಿ ಖಾಲಿ ಆಗುತ್ತೇನೋ ಅನ್ನೋ ಭಯದಲ್ಲೇ ನಾಲ್ಕೇ ನಾಲ್ಕು ಕಾಳು ಕೊಟ್ಟು, ನನ್ನ ಡಬ್ಬಿ, ನಿನ್ನ ಡಬ್ಬಿ ಅಂತ ತಂಗಿ ನಾನೂ ಜಗಳ ಮಾಡುತ್ತ ರಸ್ತೆಯಲ್ಲೇ ಮಾತು ಬಿಟ್ಟು ಮತ್ತೆ ದೋಸ್ತಿನೂ ಆಗಿ ಮನೆಗೆ ಮರಳುತ್ತಿದ್ದ ದೃಶ್ಯ ಇವತ್ತಿಗೂ ನಿಚ್ಚಳ.
ಮತ್ತೊಂದು ವಿಶೇಷ ಎಂದರೆ ಸಂಕ್ರಾಂತಿಯ ಜಾತ್ರೆಗಳು. ನಮ್ಮೂರಿಂದ ಐದಾರು ಮೈಲಿ ದೂರ ಇರುವ ಸಾಲಗಾಂವಿಯಲ್ಲಿ ಬಾಣಂತಿದೇವಿಯ ಜಾತ್ರೆ, ದನಗಳ ಸಂತೆ ನಡೆಯುತ್ತದೆ. ಅಲ್ಲಿ ಮಾವಿನ ತೋಪಿನ ನಡುವೆ ಅಂಗಡಿಗಳು ಎಷ್ಟು ಚಂದ! ಅಲ್ಲೇ ಊಟ ಕಟ್ಟಿಕೊಂಡು ಹೆಗೆಡೆರ ಅಡಿಕೆ ತೋಟದಲ್ಲಿ ಕೂತು ಊಟ ಮುಗಿಸಿ, ಜೋಕಾಲಿ, ಮಿರ್ಚಿ ಭಜಿ, ಕಬ್ಬಿನಹಾಲು, ಮಂಡಕ್ಕಿ, ಖಾರದಾಣಿ ತಿಂದು, ಒಂದಷ್ಟನ್ನು ಕಟ್ಟಿಸಿಕೊಂಡು ಬಂದರೆ, ಇನ್ನೊಂದು ಜಾತ್ರೆ ಬರುವತನಕ ಅದರ ಉಮೇದಿ ಜಾರಿಯಲ್ಲಿರುತ್ತಿತ್ತು.
ಎಷ್ಟೋ ”ಚಾಳಿ ಟೂ”ಗಳು ಮತ್ತೆ ಗೆಳೆತನವಾಗಿ ಮಾರ್ಪಡುವ ಸದವಕಾಶ ಈ ಹಬ್ಬದಲ್ಲಿ ಬಹಳ. ಹೈಸ್ಕೂಲು ಮುಗಿಯುವ ಹೊತ್ತಿಗೆ ಈ ಜಾತ್ರೆಗೆ ಹೋಗೋ ಉತ್ಸಾಹ ಕಡಿಮೆ ಆಗುತ್ತ ಬಂತು. ಜಾತ್ರೆಯಲ್ಲಿ ನಡೆಯುತ್ತ ಮೈತಿಕ್ಕುವ ಚಟಕೋರರು, ದೇವರಿಗೆ ಮುಗಿಯುವ ಕೈಗಿಂತ ಹುಡುಗಿಯರ ಮೈ ಕೈ ಚೂಟುವ ಕೈಗಳೇ ಜಾಸ್ತಿ ಆಗಿದ್ದು ಒಂದು ಮುಖ್ಯ ಕಾರಣ, ಕಾಲೇಜು ದಿನಗಳಲ್ಲಿ ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ ಎಳ್ಳು, ತಿರುಗಾಟವೂ ಕಡಿಮೆಯೇ, ಅಬ್ಬಲಿಗೆ ಮುಡಿದದ್ದು ಇನ್ನೂ ಕಡಿಮೆಯೇ.
ಹಾಂ ಮರೆತಿದ್ದೆ: ಬೆಳಗಾವಿ, ಸೋಲ್ಲಾಪುರ ಗಳಲ್ಲಿ ಮಕ್ಕಳಿಗೆ ಬೊರೆ ಹಣ್ಣು (ಬಾರಿ ಹಣ್ಣು) ಮಂಡಕ್ಕಿಯ ಸ್ನಾನ ಮಾಡಿಸುತ್ತಾರಂತೆ, ಸಂಜೆಗೆ ಆರತಿ ಮಾಡುವುದು ಇದೆಯಂತೆ. ಇದು ನನ್ನ ಅತ್ತೆ ಅವರ ತವರುಮನೆಯ ಸಂಕ್ರಾಂತಿ ನೆನಪಿನಿಂದ ಹಂಚಿಕೊಂಡಿದ್ದು.
ಆದರೆ ಈಗ ಈ ಉತ್ಸಾಹ ಇಲ್ಲ ಅಥವಾ ನನಗೇ ಇಲ್ಲವೋ? ನನ್ನ ವಾರಗೆಯವರೆಲ್ಲರಿಗೆ ಹೀಗೆಯೋ? ಅಥವಾ ಈಗಿನ ದಿನಮಾನದ ಮಕ್ಕಳಲ್ಲಿ ಈ ಹಬ್ಬಗಳ ಬಗ್ಗೆ ಆಕರ್ಷಣೆ ಕಡಿಮೆ ಆಗಿದೆಯೋ ಗೊತ್ತಿಲ್ಲ.
ಒಟ್ಟಿನಲ್ಲಿ ಸಂಕ್ರಮಣವೇ ಏಕೆ ಯಾವ ಹಬ್ಬಗಳಲ್ಲೂ ಮೊದಲಿನ ಸ್ವಾರಸ್ಯ ಇಲ್ಲ ಅನಿಸುತ್ತೆ.
ನಾವು ದೊಡ್ಡವರಾಗಿ ಬಿಟ್ಟೆವಾ ಅಥವಾ ನಮ್ಮ ಮಕ್ಕಳಿಗೆ ಈ ಹಬ್ಬಗಳ ನಿಜವಾದ ರುಚಿಯನ್ನು ಉಣಿಸಲು ವಿಫಲವಾದೆವಾ ಗೊತಾಗುತ್ತಿಲ್ಲ. ಯಾಕೋ ನೀರಸ ಎನ್ನುವ ವಾತಾವರಣ. ನನಗನಿಸಿದ ಮಟ್ಟಿಗೆ ಮೊದಲಿನವರ ತಾಳ್ಮೆ, ಸಹನೆ ನಮ್ಮಲ್ಲಿಲ್ಲ.
ಹಬ್ಬಗಳೆಂದರೆ ನಮ್ಮ ಮನಸಿಗೆ ಬರುವುದು ಎರಡೇ ವಿಷಯ:
೧. ಹಬ್ಬ ಯಾವ ವಾರ ಬಂದಿದೆ(ಇದು ಸರದಿ ರಜೆಗಾಗಿ )
೨. ಈ ಬಾರಿಯ ರಜೆಯಲ್ಲಿ ಯಾವ ಬಾಕಿ ಕೆಲಸ ಪೂರೈಸಬಹುದು ಅಥವಾ ಎಷ್ಟು ವಿರಮಿಸಬಹುದು.
ಹೀಗೆ ಮುಂದುವರಿದರೆ, ಒಂದು ದಿನ ನಮ್ಮ ಹಬ್ಬಗಳು ಕೇವಲ ಕ್ಯಾಲೆಂಡರಿನಲ್ಲಿ ಕೆಂಪು ಅಕ್ಷರವಾಗಿ ಉಳಿದು ಹೋಗುತ್ತೇನೋ ಎಂದು ಭಾರತದಲ್ಲಿದ್ದಾಗಲೇ ಅನಿಸುತ್ತಿತ್ತು. ಈ ಉತ್ತರ ಐರ್ಲಂಡಿಗೆ ಬಂದ ನಂತರವೇ ನಾನು ಮತ್ತೆ ಈ ಸಂಕ್ರಾಂತಿ ಮತ್ತು ಇತರ ಹಬ್ಬಗಳನ್ನು ಅಷ್ಟೇ ಉತ್ಸಾಹದಿಂದ ಆಚರಿಸಲು ಶುರು ಮಾಡಿದ್ದು,
ಮನೆಗೆ ಮಗಳು ಬಂದಮೇಲಂತೂ ಸಂಭ್ರಮ ಅಗಣಿತವಾಗಿದೆ. ನಾನಷ್ಟೇ ಅಲ್ಲ ನನ್ನ ಎಲ್ಲ ಸ್ನೇಹಿತೆಯಯರೂ ಸೇರಿ ಎಳ್ಳು ಬೀರಲು ತಮ್ಮ ಮಕ್ಕಳೊಂದಿಗೆ ಪರಸ್ಪರ ಮನೆಗೆ ಹೋಗುತ್ತೇವೆ. ನಮ್ಮದಲ್ಲದ ಶಾಸ್ತ್ರ ಸಂಪ್ರದಾಯಗಳನ್ನು ಕೇಳಿ ತಿಳಿದು ಆಚರಿಸಲು ಯತ್ನಿಸುತ್ತೇವೆ.
ಊಟ ತಿಂಡಿಯ ವಿಷಯವಂತೂ ಕೇಳಲೇಬೇಡಿ. ಸಂಕ್ರಾಂತಿಗೆ ನಮ್ಮಲ್ಲಿ ಸಜ್ಜೆ ರೊಟ್ಟಿ, ಅವರೆಕಾಳಿನ ಪಲ್ಯ, ಏಣಗಾಯಿ, ಕಾಳುಪಲ್ಯ, ಶೆಂಗ/ಎಳ್ಳು ಹೋಳಿಗೆ , ಬುತ್ತಿ ಅನ್ನ ಮಾಡುವ ರೂಡಿ, ಜೊತೆಗೆ ಉತ್ತರಭಾರತದ ಅಡುಗೆಗಳು, ಪೊಂಗಲ್, ಬೂರಿಯಲು ಎನ್ನುವ ನೆರೆರಾಜ್ಯದ ಅಡುಗೆಗಳು ಸೇರಿ ನಮ್ಮ ಹಬ್ಬದ ಮೆನು ತುಂಬಾ ವೈವಿಧ್ಯಮಯ ವಾಗಿದೆ.

ಸ್ವರೂಪ್ ಅಯ್ಯರ್ ವೃತ್ತಿಯಲ್ಲಿ ವೈದ್ಯರು , ಭಾಷೆ ಸಂಸ್ಕೃತಿ, ವೇದ ವಿಶ್ಲೇಷಣೆ ಮತ್ತು ಛಾಯಾಗ್ರಹಣ ಅವರ ಹವ್ಯಾಸಗಳು. ತಂದೆಯ ಶಿಕ್ಷಕ ವೃತ್ತಿಯ ನೈತಿಕ ಆದರ್ಶಗಳು ಮಾತೃಶ್ರೀಯವರ ಧಾರ್ಮಿಕ ಸಾಮಾಜಿಕ ಬದುಕು ಅವರ ಚಿಂತನೆಯನ್ನು ಪ್ರಭಾವಿತಗೊಳಿಸಿವೆ. ಕನ್ನಡ ಸಾಹಿತ್ಯದಲ್ಲಿ ಡಿ.ವಿ.ಜಿಯ ಮಂಕುತಿಮ್ಮನ ಕಗ್ಗ ಅವರಿಗೆ ಪ್ರೇರಣೆ. ಸಂಸ್ಕೃತಿಯ ಮೇಲೆ ನಿಸರ್ಗದ ಪ್ರಭಾವ, ವೈದ್ಯಕೀಯದಲ್ಲಿ ವೇದಗಳ ಮಹತ್ವ ಅವರ ಅಧ್ಯಯನದ ವಸ್ತುಗಳು. ಮೊದಲ ಬಾರಿಗೆ `ಅನಿವಾಸಿ` ಗೆ ಬರೆದಿದ್ದಾರೆ. ಸ್ವಾಗತಿಸಿ. ಓದಿ, ಹರಸಿ.
ಸಂಕ್ರಾಂತಿಯ ಸವಿನೆನಪು
ಬಂದಿತು ಬಂದಿತು ಮಕರ ಸಂಕ್ರಮಣ
ತಂದಿತು ಎಲ್ಲೆಡೆ ಸಮೃದ್ಧಿ ಸುಖ ಶಾಂತಿ
ಲೋಹ್ರಿ ಪೊಂಗಲ್ ಬಿಹು ಸಂಕ್ರಾಂತಿ
ಹಲವಾರು ಹೆಸರುಗಳ ಧಾನ್ಯ ಕ್ರಾಂತಿ
ಮುಂಜಾನೆಯಲಿ ಎದ್ದು ಬಿಸಿ ಬಿಸಿ ಎಳ್ಳೆಣ್ಣೆ ಸ್ನಾನ
ನಂತರ ಎಲ್ಲರೂ ಕೂಡಿ ಹಾಡುವ ದೇವರಗಾನ
ಪೊಂಗಲ್ ನೈವೇದ್ಯ ಮಂಗಳಾರತಿಯೊಂದಿಗೆ ವಂದನ
ತಂದೆ ತಾಯಿಗೆ ನಮನ ನಂತರ ತೀರ್ಥ ಪ್ರಸಾದ ಪಾನ
ಪಾಕಶಾಲೆಯಲ್ಲಿ ಮೂಡಿತು ಅಮ್ಮನ ಸವಿ ಕೈಚಳಕ
ಪೊಂಗಲ್ ಅವಿಯಲ್ ಆಂಬೊಡೆ ತಯಾರು ಚಕ ಚಕ
ಜೊತೆಗೆ ಎಳ್ಳುಂಡೆ ಒಬ್ಬಟ್ಟಿನ ಘಮಘಮ ಸಿಹಿಪಾಕ
ಬಂಧು ಮಿತ್ರರೊಡನೆ ಭೋಜನವೇ ರೋಮಾಂಚಕ
ಎಳ್ಳು ಬೆಲ್ಲ ಕಬ್ಬು ಬಾಳೆಯ ಜೊತೆಗೆ ಸಕ್ಕರೆ ಅಚ್ಚು
ಮರೆಯದೆ ಎಲ್ಲೆಡೆ ಬೀರೋಣ ಸಮೃದ್ಧಿಯ ಸಂಪತ್ತು
ಮನೆಯ ಅತಿಥಿಗಳಿಗೆಲ್ಲಾ ನಮ್ಮ ಎಳ್ಳುಬೆಲ್ಲ ಅಚ್ಚುಮೆಚ್ಚು
ಆಶೀರ್ವದಿಸುವರು “ಚಿರವಾಗಿರಲಿ ಐಶ್ವರ್ಯ ಸಂತಸ ಯಾವತ್ತೂ"
ಸುಗ್ಗಿಯನು ಸವಿಯುತ್ತ ಎಲ್ಲರೂ ಹಿಗ್ಗುತ್ತ
ಪೊಂಗಲ್ ಓ ಪೊಂಗಲಿನ ವಿಶೇಷ ಮಹತ್ತು