ನಮ್ಮ ನಡೆ-ನುಡಿ, ಆಚಾರ-ವಿಚಾರ ಹಾಗು ಜೀವನದಲ್ಲಿ ಬಂದೊದಗುವ ಅನೇಕ ಸವಾಲುಗಳನ್ನು ಎದುರಿಸುವಿಕೆ ಇವೆಲ್ಲವುದರ ಉಗಮ ನಮ್ಮ ಬಾಲ್ಯ. ನಮ್ಮ ತಂದೆ ತಾಯಂದಿರು ನಮ್ಮ ಮೇಲೆ ಬೀರಿರುವ ಪ್ರಭಾವ ಅದಾವುದೋ ರೂಪದಲ್ಲಿ ನಮ್ಮ ಜೀವನದ ಪ್ರತಿ ಹಂತದಲ್ಲಿಯೂ ಪ್ರತ್ಯಕ್ಷವಾಗುತ್ತಿರುತ್ತದೆ ಮತ್ತು ಅನೇಕ ಬಾರಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ದಾರಿದೀಪವಾಗಿರುತ್ತದೆ. ನಾವು ಚಿಕ್ಕವರಿದ್ದಾಗ ಅನೇಕ ಸಂಗತಿಗಳು ನಮ್ಮ ಬುದ್ದಿಯ ಪರಿಮಿತಿಗೆ ಬಾರದೇ ಹೋಗಿ, ನಾವು ಬೆಳೆದು ನಮ್ಮ ದೈನಂದಿನ ಜೀವನದಲ್ಲಿ ಆ ಸಂಗತಿಗಳ ತಾತ್ಪರ್ಯ ಹೊಳೆದಾಗ, ನಮ್ಮ ತಂದೆ ತಾಯಂದಿರ ಮೇಲಿನ ಗೌರವ ಹೆಚ್ಚುತ್ತದೆ ಮತ್ತು ಹೆಮ್ಮೆಯೆನಿಸುತ್ತದೆ.
ಈ ವಾರ ‘ಅನಿವಾಸಿ’ಯಲ್ಲಿ ಎರಡು ಲೇಖನಗಳು ವಿಭಿನ್ನ ಮಗ್ಗಲುಗಳನ್ನು ಹೊಂದಿದ್ದರೂ, ತಾಯಿಯನ್ನೂ ಹಾಗೂ ಬಾಲ್ಯವನ್ನೂ ನೆನೆಯುವುದರ ಮೂಲಕ ಪರಸ್ಪರ ಪೂರಕವಾಗಿವೆ. “ನನ್ನ ಹೆಮ್ಮೆಯ ಅಮ್ಮ” ಎಂಬ ಲೇಖನದಲ್ಲಿ ಗೌರಿ ಪ್ರಸನ್ನ ರವರು ತಮ್ಮ ತಾಯಿಯ ಪ್ರೇರಣಾತ್ಮಕ ಜೀವನವನ್ನು ನೆನೆಯುತ್ತಾ, ಅವಳ ಮಗಳಾಗಿದ್ದಕ್ಕೆ ತಮಗೆ ಹೆಮ್ಮೆ ಇದೆ ಎಂದು ಹೇಳುತ್ತಿದ್ದರೆ , ಇತ್ತ ” ಗೃಹ ಬಂಧನ ” ಎಂಬ ಲೇಖನದಲ್ಲಿ ರಾಧಿಕಾ ಜೋಶಿ ರವರು ತಮ್ಮ ತಾಯಿ ಮತ್ತು ತಂದೆಯ ಜೀವನ ಕ್ರಮಗಳು, ಲಾಕ್ ಡೌನ್ ಸಂಧರ್ಭದಲ್ಲಿ ಹೇಗೆ ದಾರಿದೀಪವಾಗಿವೆ ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಈ ಎರಡು ಲೇಖನಗಳೂ ಓದುಗರನ್ನು ತಮ್ಮ ಬಾಲ್ಯದ ನೆನಪುಗಳಿಗೆ ಕರೆದೊಯ್ಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಎಲ್ಲರೂ ಈ ನೆನಪುಗಳಲ್ಲಿ ಮಿಂದು ಬನ್ನಿ ಎಂದು ಹಾರೈಸುತ್ತೇನೆ.
(ಸಂ)
ನನ್ನ ಹೆಮ್ಮೆಯ ಅಮ್ಮ


ಓಂ ನಮೋ ಭಗವತೇ ವಾಸುದೇವಾಯ. ಅಮ್ಮ: ಜಗದೆಲ್ಲ ಬಂಧಗಳು – ಸಂಬಂಧಗಳು ನಾವು ಈ ಭುವಿಯಲ್ಲಿ ಜನ್ಮ ತಾಳಿದ ನಂತರ ಶುರುವಾಗುವಂಥವು. ಆದರೆ ಅಮ್ಮನೊಡನೆ ?! ಜೀವವೇ ಇರದ ಅಂಗಾಂಗಳು ಮೊಳೆಯದೆ ಇದ್ದ ಒಂದು ಅಂಡಾಣುವಿನ ಸ್ಥಿತಿಯಲ್ಲಿದ್ದಾಗಿನಿಂದಲೇ ನಂಟು. ನಾನವಳ ಗರ್ಭದಲ್ಲಿ ಮೊಳಕೆಯೊಡೆದ ದಿನದಿಂದಲೇ ಅವಳ ದಿನಚರಿ, ಊಟ, ಉಡುಗೆ , ನಿದ್ದೆ- ಎಚ್ಚರ, ಪಥ್ಯ – ತಥ್ಯ, ಕನಸು- ಕನವರಿಕೆ, ಹಂಬಲ- ಹರಕೆ, ಪ್ರಾರ್ಥನೆಗಳೆಲ್ಲವೂ ನನಗನುಗುಣವಾಗಿಯೇ.
ಅದಕ್ಕೆಂದೇ ಭಾರತೀಯ ಸಂಸ್ಕೃತಿಯಲ್ಲಿ ಅಮ್ಮನಿಗೆ ಉನ್ನತ ಸ್ಥಾನ. “ಮಾತೃ ದೇವೋ ಭವ” ಎಂದು ವೇದಗಳು ಸಾರುತ್ತಿವೆ. ‘ಕೌಸಲ್ಯ ಸುಪ್ರಜಾ ರಾಮ’ ಎಂದು ಪರಮಾತ್ಮನನ್ನು ಋಷಿ ಮುನಿಗಳು ಕೌಸಲ್ಯೆಯ ಮಗನಾಗಿ ಕಾಣುತ್ತಿದ್ದಾರೆ. ಜಗದ ಬಂಧ ಹರಿದೊಗೆದು ಮುಕ್ತನಾದ ಸನ್ಯಾಸಿಯೂ ಮಾತೃ ಪಾದುಕೆಗೆ ಪ್ರಣಾಮ ಮಾಡುತ್ತಾನೆ.
“ತೊಟ್ಟಿಲಾಗಲಿ – ಬಟ್ಟಲಾಗಲಿ , ಜಾವಳಾಗಲೀ – ಜುಟ್ಟು ಆಗಲಿ, ಮದುವೆ ಆಗಲಿ – ಮುಂಜುವೆ ಆಗಲಿ, ಲಕ್ಷ್ಮಿ ನಾರಾಯಣನ ಕೃಪೆಯಿಂದ ಅಟ್ಟಡುಗೆ ಅಕ್ಷಯವಾಗಲಿ “- ಇದು ಮನೆಯಲ್ಲಿ ಮಾಡಿದ ಮೆಂತ್ಯಹಿಟ್ಟನ್ನೋ , ಚಟ್ನಿಪುಡಿಯನ್ನೋ , ಅಳ್ಳಿಟ್ಟನ್ನೋ ಡಬ್ಬದಲ್ಲಿ ತುಂಬಿಡುತ್ತ ಅಮ್ಮ ತಪ್ಪದೆ ಹೇಳುವ ಕನ್ನಡದ ಮಂತ್ರವಾಗಿತ್ತು. ಸಣ್ಣವಳಿದ್ದಾಗ ಅದರರ್ಥ ಅಷ್ಟು ಗೊತ್ತಾಗದಿದ್ದರೂ ಅವಳ ಬಾಯಿಂದ ಕೇಳಿ ಕೇಳಿ ಬಾಯಿಪಾಠವಾಗಿತ್ತು. ಅದರ ಹಿಂದಿರುವ ಅನ್ನ ನೀಡಿದ ಭಗವಂತನ ಬಗೆಗಿರುವ ಕೃತಜ್ಞತೆ , ಒಳ್ಳೆಯದರ ಆಶಯ – ಹಾರೈಕೆಗಳು ಎಲ್ಲ ಈಗ ಅರ್ಥವಾಗಿ ಅಚ್ಚರಿ ಹುಟ್ಟಿಸುತ್ತವೆ. ಹರಿಕಥಾಮೃತಸಾರದ ಸಂಧಿಗಳು , ಲಕ್ಷ್ಮಿ ಶೋಭಾನೆ, ವಿಜಯ ಕವಚ. ದುರ್ಗಾ- ಧನ್ವಂತರಿ ಇತ್ಯಾದಿ ಸುಳಾದಿಗಳು , ನಳ ಚರಿತ್ರೆ , ದಾಸರ ಪದಗಳು, ಹೀಗೆಯೇ ಹತ್ತು ಹಲವು ರೂಪದಲ್ಲಿ ಇಡೀ ದಿನ ಅವಳ ನಾಮಸಂಕೀರ್ತನೆ ಸಾಗುತ್ತಿತ್ತು – ಕೆಲಸಗಳ ಜೊತೆಜೊತೆಗೆ. ಅವಳು ಮಾಡದ ಪೂಜೆ ಪುನಸ್ಕಾರಗಳಿಲ್ಲ, ವ್ರತ ನಿಯಮಗಳಿಲ್ಲ. ಚೈತ್ರಾ ಗೌರಿ, ಶೀಗೀ ಗೌರಿ, ಜೇಷ್ಠ ಗೌರಿ , ಗಡಗಿ ಗೌರಿ, ಗೊತ್ತಿಲ್ಲ ಅದೆಷ್ಟು ಗೌರಿಯರೋ. ಹೂರಣದ ಆರತಿ, ಖೊಬ್ರಿಬೆಲ್ಲದ ಆರತಿ, ಸಕ್ರಿ ಅಚ್ಚಿನ ಆರತಿ, ಅದೆಷ್ಟು ಆರತಿಗಳೋ.
ಕುಲ್ಕರ್ಣ್ಯಾರ ಮನಿದು, ಜಹಗೀರದಾರರ ಮನಿದು, ಆಚಾರ್ಯರ ಮನಿದು ಹೀಗೆ ಇಡೀ ಬಲಕುಂದಿಯ ಎಲ್ಲರ ಮನೆಯ ‘ದಾರಗಳು’ ನಮ್ಮ ಗೌರಿಯ ಒಡಲಲ್ಲೇ. ಮಟ ಮಟ ಮಧ್ಯಾಹ್ನ ೧೨ ಹೊಡೆದರೂ ನಾರಣಪ್ಪನ ಗುಡಿಗೆ ಬರಿಗಾಲಲ್ಲಿ ಹೋಗಿಬರದೆ ಒಂದಗಳನ್ನೂ ಬಾಯಿಗೆ ಹಾಕದ ಶ್ರದ್ದೆ. ಆದರೆ ತನ್ನ ನಂಬುಗೆಗಳನ್ನ ನಮ್ಮ ಮೇಲೆಂದೂ ಹೇರದ ವೈಶಾಲತೆ. ನಮ್ಮ ಬಾಲಿಶ ವೈಚಾರಿಕ ಕ್ರಾಂತಿಗಳಿಗೆಲ್ಲ ಸದಾ ಅವಳ ಬೆಂಬಲ. ಗಳಗನಾಥ, ಅ ನ ಕೃ , ವಾಣಿ , ಎಲ್ಲರ ಪುಸ್ತಕ ಓದಿದಾಕಿ, ಈಗಲೂ ಪುಸ್ತಕ ಪ್ರಿಯೆ.
ಯಾವುದಕ್ಕೂ ಹಪಹಪಿಸದೆ, ಗೊಣಗದೆ, ಅತಿಯಾಸೆ ಪಡದೆ ಇದ್ದುದರಲ್ಲಿ ತೃಪ್ತಳಾಗಿ ದುಡಿಯುವ ಕರ್ಮಯೋಗಿಯಾಗಿಯೇ ನಾನವಳನ್ನು ಕಂಡದ್ದು. ಕಸ ಮುಸುರೆ, ಉಡಸಾರಣೆ ಉಪಕರಣಿ, ದೀಪ ರಂಗೋಲಿಗಳು , ಭಾವಿಯ ನೀರು , ಒಲೆಯ ಮೇಲಿನ ಅಡುಗೆ, ಒಳ್ಳು ರುಬ್ಬು ಗುಂಡು ಹಾರೆಗಳ ಒಡನಾಟ, ಹಳ್ಳ – ಹಸನು, ಅವಲಕ್ಕಿ – ಅಳ್ಳಿಟ್ಟು, ಉಪ್ಪಿನಕಾಯಿ – ತೊಕ್ಕು , ಗುಳಂಬ ಹಪ್ಪಳ, ಸಂಡಿಗೆಗಳ ಸಂಭ್ರಮ …ಹಬ್ಬ ಹರಿದಿನಗಳ, ಶ್ರಾದ್ಧ ಪಕ್ಷಗಳ ಮಡಿ ಹುಡಿ …ಇಷ್ಟಾದರೂ ಕೆಲಸ ಹೆಚ್ಚಾಯಿತು ಎಂದು ಅವಳು ಸಿಡಿಗುಟ್ಟಿದ್ದು ನನಗಂತೂ ನೆನಪಿಲ್ಲ.
ವರ್ಷಕ್ಕೊಮ್ಮೆ ತಗೆದುಕೊಳ್ಳುವ ಎರಡೂ ನಾಲ್ಕೋ ಹೊಸ ಕಾಟನ್ ಸೀರೆಗಳನ್ನೂ ಕೂಡ ತಾನು ಮೊದಲು ಉಡದೆ ಊರಿನ ಶೋಭಾಕ್ಕನಿಗೋ, ನಂದಾ ಮಾಂಶಿಗೊ, ವೇಣವ್ವನಿಗೋ “ಘಳಿಗಿ ಮುರುದು” ಕೊಡಲು ಕೊಡಬೇಕು. ಮಲ್ಲಿಗೆ ಮಾಲೆಯ ಸಣ್ಣ ತುಂಡನ್ನು ತನ್ನ ತುರುಬಿಗೆ ಹಾಕಿಕೊಂಡು ಉದ್ದುದ್ದ ಮಾಲೆಗಳನ್ನು ನಮಗೆಲ್ಲ ಕೊಡಬೇಕು. ‘ಸಣ್ಣವರು ಉಡಲಿ ತೊಡಲಿ’ ಎಂಬ ಆಶಯ. ಆದರೆ ತಾನು ಮಾತ್ರ ಹುಟ್ಟಿನಿಂದಲೇ ದೊಡ್ಡವಳು, ದೊಡ್ಡ ಮಗಳು, ದೊಡ್ಡ ಸೊಸೆ, ದೊಡ್ಡ ಅಕ್ಕ, ದೊಡ್ಡ ಅತ್ತೆ, ದೊಡ್ಡಮ್ಮ …ನಿಜಕ್ಕೂ ‘ದೊಡ್ಡವಳೆ’…
ನಮ್ಮೂರ ಅನಾಥೆ, ಕುರುಡಿ ಗುರುಬಸವ್ವನಿಗೆ ಅಮ್ಮನ ಚಟ್ನಿ ಭಕ್ರಿಯೆ ಬೇಕು. ಎದುರು ಮನಯೆ ಗೌಡರ ಕೂಸು ಶರಣು ಅಮ್ಮನ ಮೆಂತ್ಯಹಿಟ್ಟಿದ್ದರೆನೇ ಅನ್ನ ತಿನ್ನುವದು. ಬ್ಯಾಗಾರ ಮಲ್ಲಪ್ಪನ ಮನೆಯಲ್ಲಿ ಜ್ವರ ಬಂದು ಮಲಗಿದವರಿಗೆಲ್ಲ ಅಮ್ಮನ ನಿಂಬೆಹಣ್ಣಿನ ಉಪ್ಪಿನಕಾಯಿಂದಲೇ ಬಾಯಿ ರುಚಿ ಬರಬೇಕು. ಎರಡು ರೂಪಾಯಿಯ ಮೊಸರು ಹಾಕಲು ಬರುವ ಈರವ್ವ ಮನೆಯ ಎಂಟು ಜನ ಮಕ್ಕಳಿಗೂ ಅಮ್ಮ ಬೆಲ್ಲದ ತುಣುಕನ್ನೋ, ಖೊಬ್ರಿಯ ಚೂರನ್ನೋ ಕೊಡದೆ ಕಳಿಸಲಾರಳು. ಆಚಾರರ ಮನೆಯ ಕರುವಿಗೂ ಅಮ್ಮನ ಕಲಗಚ್ಚೆ ಪ್ರೀತಿ.
“ಯಾವದ್ವಿತ್ತೋಪಾರ್ಜನ ಶಕ್ತ: ತಾವನ್ನಿಜ ಪರಿವಾರೋರಕ್ತ:
ಪಶ್ಚಾಜ್ಜೀವತಿ ಜಝ೯ರ ದೇಹೇ ವಾರ್ತಾ೦ಕೋಪಿನ ಪ್ರಚ್ಚತಿ ಗೇಹೇ “
ಎಂದ ಆದಿ ಶಂಕರರ ಮಾತನ್ನೇ ಸುಳ್ಳೆಂದು ಸಾಬೀತು ಮಾಡಿದಾಕಿ ನನ್ನ ಈ ಹಡೆದವ್ವ. ಸುಮಾರು ೧೫ ವರ್ಷಗಳಿಂದ ಹಾಸಿಗೆ ಹಿಡಿದ ನನ್ನ ತಂದೆಯನ್ನು ಓರ್ವ ತಾಯಿಯಾಗಿ ಕೂಸಿನಂತೆ ಜೋಪಾನ ಮಾಡಿದವಳು ಅವಳು. ಎಲ್ಲ ಯಾತ್ರಾ ತೀರ್ಥಗಳನ್ನು , ದೈವದರ್ಶನಗಳನ್ನು ತನ್ನ ಕರ್ತವ್ಯದಲ್ಲೇ ಕಂಡುಕೊಂಡವಳು. ” ಕರ್ಮಣ್ಯೇವಾಧಿಕಾರಾಸ್ತೆ ಮಾ ಫಲೇಷು ಕದಾಚನ ” ಎಂದ ಕೃಷ್ಣನ ಮಾತುಗಳನ್ನು ಚಾಚು ತಪ್ಪದೆ ಪಾಲಿಸಿದವಳು – ಪಾಲಿಸುತ್ತಿರುವವಳು. ಅಮ್ಮ, ಹೆಮ್ಮೆಯಿದೆ ನನಗೆ ನಿನ್ನ ಮಗಳೆಂದು ಹೇಳಿ ಕೊಳ್ಳಲು.
ಗೃಹ ಬಂಧನ


ಲೇಖಕಿ ರಾಧಿಕಾ ಜೋಶಿ ರವರು ‘ಅನಿವಾಸಿ’ ಯಲ್ಲಿ ಹೊಸ ಬರಹಗಾರಾಗಿದ್ದಾರೆ. ಮೂಲತಃ ಹುಬ್ಬಳ್ಳಿಯವರಾದರೂ ಮೈಸೂರೀನಲ್ಲಿ ವಿದ್ಯಾಭ್ಯಾಸ ಮುಗಿಸಿ, CA ಮಾಡಲು ಬೆಂಗಳೂರಿಗೆ ಬಂದು, ಕೊನೆಗೆ ಲಂಡನಿನ್ನ ನಿವಾಸಿ ಆಗಿದ್ದಾರೆ. ಇಬ್ಬರು ಮಕ್ಕಳು ಹಾಗೂ ಪತಿಯೊಡನೆ ಸುಮಾರು 10 ವರುಷಗಳಿಂದ ಹ್ಯಾರೋದಲ್ಲಿವಾಸವಾಗಿದ್ದಾರೆ. ‘ಅನಿವಾಸಿ’ ಗುಂಪಿನ ಸದಸ್ಯರಿಗೆ ತಮ್ಮ ಅಭಿನಂದನೆಗಳನ್ನು ವ್ಯಕ್ತ ಪಡಿಸುವ ರಾಧಿಕಾ ತಮ್ಮ ಬರಹಗಳನ್ನು ಬ್ಲಾಗ್ ತಾಣದಲ್ಲಿ ಪ್ರಕಟಿಸುತ್ತಾರೆ
ನೆನಪಿನ ಬಾವಿಯಲ್ಲಿ ಇಣುಕಿ ನೋಡಿದಾಗ ನೀರಿನ ಮೇಲಿದ್ದ ಒಣಗಿದ ಎಲೆಗಳು, ಧೂಳು ಎಲ್ಲವೂ ಕೆಳಗಿದ್ದ ನೀರನ್ನು ಮುಚ್ಚಿತ್ತು. ಸ್ವಚ್ಛ ನೀರು ನೋಡ ಬಯಸಿ ನಾನು ಒಂದು ಕಲ್ಲನ್ನು ಎಸೆದಾಗ ನೀರು ಅಷ್ಟೇ ಅಲ್ಲದೆ ಬಾವಿಯ ಆಳವು ಗೊತ್ತಾಯಿತು. ನಮಗೆ ತಿಳಿಯದೆ ನಮ್ಮ ಮನಸ್ಸಿನ ಆಳದಲ್ಲಿ ಅದೆಷ್ಟೋ ನೆನಪುಗಳನ್ನು ಕೂಡಿಟ್ಟು ಅವುಗಳ ಮಹತ್ವ ನಮಗೆ ಆಗ ತಿಳಿಯದೇ ಈಗ ಸಮಯ ಬಂದಾಗಲೆಲ್ಲ ಅವುಗಳ ಆಳ ತಿಳಿಯುತ್ತದೆ.
ನಮ್ಮ ತಾಯಂದಿರು ಊಟ ಬಡಿಸಿ ಎಲ್ಲರ ಊಟ ಮುಗಿದಮೇಲೆ ತಾವು ಊಟ ಮಾಡುವುದು ಸಾಮಾನ್ಯ ಪದ್ಧತಿ. ನಾವೆಲ್ಲ ಆಗ ಅವರ ಮಕ್ಕಳು, ಗಂಡಸರು, ಹಾಗು ಹಿರಿಯರಿಗೆ ಊಟ ಬಡಿಸುವ ಮೂಲಕ ಮರ್ಯಾದೆ ಕೊಡುತ್ತಾರೆ ಅಥವಾ ಹೆಂಗಸರ ಕೆಲಸವೇ ಅಷ್ಟು ಎಂದು ತಿಳಿದಿದ್ದರೆ ಮತ್ತೊಂದು ಅರ್ಥ ನನಗೆ ಈತ್ತೀಚೆಗಷ್ಟೇ ತಿಳಿಯಿತು. ನಮ್ಮ ತಾಯಿ ಎಲ್ಲರಿಗೂ ಊಟ ಬಡಿಸುವ ಮೂಲಕ ತಾವು ಎಷ್ಟು ಊಟ ಮಾಡುತ್ತಾರೆ ಅಷ್ಟು ಉಳಿಸಿ, ಉಳಿದದನ್ನು ಎಲ್ಲರಿಗೆ ಹಂಚಿ ,ಅನ್ನ ವ್ಯರ್ಥವಾಗದಂತೆ ನೋಡಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ತಂಗಳು ಪೆಟ್ಟಿಗೆ ಇರುತ್ತಿರಲಿಲ್ಲ, ತಾಜಾ ಹಾಗು ಬಿಸಿ ಊಟ ಮಾಡುವುದು ಆರೋಗ್ಯಕ್ಕೆ ಹಿತಕರ ಎಂಬ ನಂಬಿಕೆ. ಈ ಲೇಖನ ಬರೆಯುವ ಸಂದರ್ಭದಲ್ಲಿ ಪ್ರಪಂಚವನ್ನೇ ನಡುಗಿಸುತ್ತಿರುವ ಅದೃಶ್ಯವಾದ ಒಂದು ವೈರಾಣು ಕೋವಿಡ್ ೧೯,ಇಡೀ ಪ್ರಪಂಚವನ್ನು ತಿಂಗಳು ಗಟ್ಟಲೆ ಗೃಹ ಬಂಧನದಲ್ಲಿ ಇಟ್ಟಿದೆ.
ಪೀಳಿಗೆಗಳು ಬದಲಾಗುತ್ತಿದ್ದಂತೆ ಆದ್ಯತೆಗಳು ಬದಲಾಗಿತ್ತವೆ. ನಮ್ಮ ತಾಯಿ, ದೊಡ್ಡಮ್ಮ, ಚಿಕ್ಕಮ್ಮ ಎಲ್ಲರೂ ಆಗಿನ ಕಾಲದ ಪದವೀಧರರಾಗಿದ್ದರೂ, ಮನೆಯ ಹೊರಗೆ ಹೋಗಿ ಕೆಲಸ ಮಾಡುವ ಅವಶ್ಯಕತೆ ಅವರಿಗೆ ಕಾಣ ಬರಲಿಲ್ಲ. ನಾವೆಲ್ಲರೂ ಶ್ರೀಮಂತಿಕೆಯಲ್ಲಿ ಬೆಳೆಯಲಿಲ್ಲ. ನನ್ನ ಮುಂದಿನ ಮಾತುಗಳು ಪ್ರಗತಿಶೀಲ ಮಹಿಳೆಯ ಲಕ್ಷಣಗಳನ್ನು ಕೊಡುತ್ತವೋ ಇಲ್ಲವೋ ಗೊತ್ತಿಲ್ಲ ಆದರೆ ಕೆಲವು ಸನ್ನಿವೇಶ ಹಾಗು ಸಂದರ್ಭಗಳು ನನ್ನ ಪ್ರಸ್ತುತ ಜೀವನಶೈಲಿಯನ್ನು ಬದಲಾಯಿಸಲು ಯೋಚನೆ ಮಾಡುವಂತೆ ಮಾಡಿವೆ.
ನಮ್ಮ ತಂದೆಯ ಮಾಸಿಕ ಆದಾಯ ಕೇವಲ ೮೦ರೂಗಳು. ಅದರಲ್ಲೇ ಮನೆ ಬಾಡಿಗೆ, ನಮ್ಮ ಶಾಲಾ ಖರ್ಚು, ತಿಂಗಳ ದಿನಸಿ ಮತ್ತು ಇನ್ನಿತರ ವೆಚ್ಚಗಳು. ಆಗಿನ ಕಾಲದಲ್ಲಿ ಎಲ್ಲವು ಇತಿಮಿತಿಯಲ್ಲಿ ಇರುತ್ತಿತ್ತು. ಆದರೂ ಮನೆ ನಡೆಸುವುದು ಕಷ್ಟವೇ ಇತ್ತು. ಅನಿರೀಕ್ಷಿತ ಬಂಧು ಮಿತ್ರರರ ಆಗಮನ, ಹಬ್ಬ ಹರಿದಿನಗಳ ಖರ್ಚು ಎಲ್ಲವೂ ನೀಗಿಸುವುದು ಒಂದು ಸವಾಲೇ ಆಗಿತ್ತು. ಆದರೆ ನಮಗೆ ಎಂದೂ ಇವೆಲ್ಲದರ ಬಗ್ಗೆ ಸ್ವಲ್ಪವೂ ಸುಳಿವಿರುತ್ತಿರಲಿಲ್ಲ. ಮದುವೆ ಮುಂಜವಿ ಸಮಾರಾಧನೆ ಸಧರ್ಭಗಳಲ್ಲಿ ಕೆಲವೊಮ್ಮೆ ನಾವು ಹೋಗುತ್ತಿರಲಿಲ್ಲ ಏಕೆಂದರೆ ಹಬ್ಬಗಳು ಹಾಗು ಹೆಚ್ಚಿನ ವೆಚ್ಚದಿಂದ ಮದುವೆ ವರವಧುವಿಗೆ ಅಥವಾ ಮನೆಯವರಿಗೆ ಉಡುಗೊರೆ ಕೊಡುವಷ್ಟು ದುಡ್ಡು ಇರುತ್ತಿರಲಿಲ್ಲ. ನಮ್ಮ ತಾಯಿ ಯಾವುದಾರೂ ನೆಪ ಮಾಡಿ ಕಾರ್ಯಕ್ರಮವನ್ನು ತಪ್ಪಿಸುತ್ತಿದ್ದರು ಅಥವಾ ಮನೆಯಿಂದ ಒಬ್ಬರೇ ಹಾಜರಾಗುತ್ತಿದ್ದರು. ಆದರೆ ನಮ್ಮ ಅವಶ್ಯಕತೆಗಳಿಗೆ ಯಾವತ್ತೂ ಕೊರತೆ ಬಂದಿರಲಿಲ್ಲ. ಹೊಸ ಬಟ್ಟೆ, ಶಾಲಾ ಪುಸ್ತಕಗಳು ಮತ್ತು ಇನ್ನಿತರ ವಸ್ತುಗಳಿಗೆ ಬರ ಇರಲಿಲ್ಲ. ತಂದೆ ತಾಯಿ ಇಬ್ಬರು ದುಡಿಯುವ ಮಕ್ಕಳ ಹತ್ತಿರ ಎಷ್ಟು ಆಟಿಕೆಗಳು, ಬಟ್ಟೆಗಳು ಇರೊತ್ತಿದ್ದವೋ ಅಷ್ಟು ಇರುತ್ತಿರಲಿಲ್ಲ ಆದ್ರೆ ಹೂ ಕೇರ್ಸ್ !!
ತಂದೆಗೆ ಕೆಲಸದ ಒತ್ತಡ ಇದ್ದರೂ ಅದು ನಮಗೆ ಎಂ ತಿದೂ ಳಿಯುತ್ತಿರಲಿಲ್ಲ. ಸಾಂಪ್ರದಾಯಿಕ(ಕನ್ಸರ್ವೇಟಿವ್) ಜೀನನಶೈಲಿ ಆದ ನಮ್ಮೆಲ್ಲರ ಬದುಕಿನಲ್ಲಿ ಒಂದು ರೀತಿಯ ಶಾಂತತೆ ಇತ್ತು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದಷ್ಟೇ ಅವರ ಧ್ಯೇಯವಾಗಿತ್ತೇ ಹೊರತು ಅವರು ಮುಂದೆ ನಾವು ಏನಾಗುತ್ತೀವಿ ಎಂದು ಅಷ್ಟು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನಾವು ಒಳ್ಳೆಯ ದಾರಿ ಹಿಡಿದು ನಮ್ಮ ಭವಿಷ್ಯ ನಾವೇ ನಿರೂಪಿಸಿಕೊಳ್ಳುತ್ತೇವೆ ಎಂಬ ನಂಬಿಕೆ ಇರುತ್ತಿತ್ತು. ನಾವು ದೊಡ್ಡವರಾದ ಮೇಲೆ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಸೀಟ್ ಬಗ್ಗೆ ಬಹಳ ಆತಂಕ ಇತ್ತು ಬಿಡಿ. ನಾನು ಎರಡೂ ಆಗಲಿಲ್ಲ.
ನಮ್ಮ ತಾಯಿಗೆ ನಮ್ಮಂತೆ ಎಷ್ಟು ಡಿಗ್ರಿ ಮಾಡಿದೀವಿ ಕೆಲಸಕ್ಕೆ ಹೋಗ್ಲೇಬೇಕು ಎಂಬ ಛಲ ಇರಲಿಲ್ಲ. ನಾವೆಲ್ಲ ಒಳ್ಳೆಯ ಗುಣಗಳನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕೊಡುವಂತೆ ನಮ್ಮನ್ನು ಬೆಳೆಸಿದಿರು. ಪ್ರಗತಿಶೀಲ ಮಹಿಳೆ ಹಾಗು ಜವಾಬ್ದಾರಿ, ಪೋಷಕರ ಲಕ್ಷಣ ಎಂದು ನನಗೆ ಈಗ ಅನಿಸುತ್ತಿದೆ. ಕಡಿಮೆ ಆದಾಯದಲ್ಲಿ ಹೇಗೆ ಜೀವನ ಸಾಗಿಸುವುದು ಎಂಬ ಭೀತಿ ನನ್ನ ಕೆಲವು ಸ್ನೇಹಿತೆಯರಿಗೆ ಬಂತು(ಕಾಂಟ್ರಾಕ್ಟಿಂಗ್ ಮಾಡುವ ಜನ ತಮ್ಮ ಕೆಲಸ ಅಕಾಲಿಕವಾಗಿ ಕೊನೆಗೊಂಡಾಗ) ಹಾಗೇ ಕೆಲವರು ಈ ಕಠಿಣ ಸಮದಲ್ಲಿ ನಿಶ್ಚಲವಾಗಿದ್ದರು.
ಅನಗತ್ಯ ಖರ್ಚು, ಅಮಿತ ಹೋಟೆಲ್ ಊಟ, ಅಗತ್ಯವಿಲ್ಲದ ವಸ್ತುಗಳ ಖರೀದಿ ಇವೆಲ್ಲದರ ಬಗ್ಗೆ ಯೋಚನೆ ಮಾಡುವಂತೆ ಜೀವನದ ಈ ೪ ವಾರಗಳು ನನಗೆ ತಿಳಿಸಿವೆ. ನಾವು ಕಲಿತಂತೆ ಮಕ್ಕಳು ಕಲಿಯುತ್ತಾರೆ. ನಮ್ಮ ಅಭ್ಯಾಸಗಳು, ರೂಢಿ ಮಾಡಿಕೊಂಡಿರುವ ಜೀವನ ಸರಳ ಹಾಗು ಸೂಕ್ತವಾಗಿರಬೇಕು.
ಪ್ರತಿಯೊಂದು ಸಾಮಾಜಿಕ ಕಾರ್ಯಕ್ರಮಕ್ಕೆ ಅಂದವಾಗಿ ತಯಾರಾಗಬೇಕು ಎಂಬ ಆಸೆ ಎಲ್ಲಾ ಮಹಿಳೆಯರಲ್ಲೂ ಇರುತ್ತದೆ ಆದರೆ ಪ್ರತಿಬಾರಿಯೂ ಹೊಸ ಉಡುಗೆ, ಆಭರಣ ಖರೀದಿ ಆವಶ್ಯಕವೇ? ಪ್ರತಿ ವಾರ ಹೊರಗೆ ಊಟಕ್ಕೆ ಹೋಗುವುದು ಉಚಿತವೇ? ದಿನನಿತ್ಯ ಅಡುಗೆ ಮಾಡಿ ಹಾಗು ಆಫೀಸಿಗೆ ಹೋಗಿ ರೋಸುಹೋಗಿರುವ ಮಹಿಳೆಯ ಕಷ್ಟ ನನಗೆ ಅರ್ಥವಾಗಿತ್ತದೆ.
ನಮ್ಮ ಮನೆಯ ಅಟ್ಟದ ಮೇಲೆ ಸುಮಾರು ೧೦ ದೊಡ್ಡ ರಟ್ಟಿನ ಡಬ್ಬಿಗಳಲ್ಲಿ ಸಾಮಾನು ಇವೆ. ಸುಮಾರು ೩ ವರುಷಗಳಿಂದ ಅವುಗಳನ್ನು ತೆಗೆದು ನೋಡಿಲ್ಲ. ಇದರ ಅರ್ಥ ಅದರಲ್ಲಿರುವ ಯಾವುದೇ ಸಾಮಾನಿನ ಅವಶ್ಯಕತೆ ಇಲ್ಲ. ಅನವಶ್ಯಕ ವಸ್ತುಗಳ ಮೇಲೆ ಅದೆಷ್ಟು ದುಡ್ಡು ಸುರದಿದ್ದೀವಿ? ಬೇಕು ಬೇಡಗಳ ವ್ಯಾಖ್ಯಾನ ನಾನು ತಿಳಿದುಕೊಂಡು ನಮ್ಮ ಮಕ್ಕಳಿಗೆ ತಿಳಿಸಬೇಕು.
ಮನೆಯಲ್ಲಿ ಕುಳಿತುಕೊಂಡು ಬರುವ ಮುಂದಿನ ದಿನಗಳ ಬಗ್ಗೆ ಯೋಚಿಸುವಾಗ ನನಗೆ ನನ್ನ ಬಾಲ್ಯದ ದೃಶ್ಯಗಳೇ ಕಣ್ಣ ಮುಂದೆ ಬರುತ್ತಿವೆ. ಆಗ ಅವುಗಳ ಆಳವಾದ ಅರ್ಥವನ್ನು ತಿಳಿಯದೆ ಇದ್ದೆ. ಆದರೆ ಈಗ ಸ್ವಲ್ಪ ಮಟ್ಟಿಗೆ ಪ್ರಭುದ್ಧತೆ ಬಂದು(ಬಂದಿದೆ ಅಂದುಕೊಳ್ತೀನಿ ) ಅವುಗಳ ತಾತ್ಪರ್ಯ ಕಂಡುಹಿಡಿಯಲು ಹೊರಟಿದ್ದೇನೆ.