ಹಾಡು ಹಳೆಯದಾದರೇನು?.. ಜಿ.ಎಸ್.ಎಸ್.ಭಾವನಮನ

ಕಬ್ಬಿಗರ ಓದಿನಲ್ಲಿ, ಆಸಕ್ತರ ಅಧ್ಯಯನದಲ್ಲಿ, ಸಹೃದಯರ ರಸಾಸ್ವಾದದಲ್ಲಿ, ಅಭಿಮಾನಿಗಳ ಎದೆಯ ಗುಡಿಯಲ್ಲಿ ಕವಿ ಬೆಳಗುತ್ತಲೇ ಇರುತ್ತಾನೆ;ಬೆಳಕು ಚೆಲ್ಲುತ್ತಲೇ ಇರುತ್ತಾನೆ. 

ಬರುವ ಫೆಬ್ರುವರಿಯ ಏಳರಂದು, ತಮ್ಮ ಕಾವ್ಯದಿಂದ ನವನವೀನ ಭಾವಗಳನ್ನು ಉಣಬಡಿಸಿದ ನಮ್ಮೆಲ್ಲರ ನೆಚ್ಚಿನ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ಜನುಮದಿನ. ನಿಷ್ಕಾರಣದೊಲುಮೆ ಇವರ ಕಾವ್ಯ ಹಾಗೂ ಬದುಕು ಎರಡರ ಜೀವಾಳ. ‘ನಿನ್ನೊಲವಿನಂಬುಧಿಗೆ ನನ್ನೆದೆಯ ಕರೆಯ ತೊರೆ ಸಂತತವೂ ಹೊನಲಾಗಿ ಹರಿಯುತಿರಲಿ’.

ಸ್ವತ: ಉತ್ತಮ ಕವಿ, ಬರಹಗಾರ, ಕಾದಂಬರಿಕಾರರಾದ ಕವಿಯ ಪುತ್ರರೂ ಆದ ಡಾ.ಶಿವ ಪ್ರಸಾದ್ ಅವರು ತಮ್ಮ ತಂದೆಯನ್ನೂ, ತಂದೆಯೊಳಗಿನ ಕವಿಯನ್ನೂ, ಕವಿಯೊಳಗಿನ ಅಪ್ಪಟ ಮಾನವತಾವಾದಿಯನ್ನೂ ನೆನೆಸಿಕೊಂಡು ತಮ್ಮ ಭಾವಗಂಗೆಯನ್ನು ಹರಿಯಬಿಟ್ಟಿದ್ದಾರೆ. ಅವರು ಈ ಹಿಂದೆಯೂ ಅನಿವಾಸಿಯಲ್ಲಿ ಬಾಲ್ಯದ ನೆನಪುಗಳು ಸರಣಿಯಲ್ಲಿ ತಮ್ಮ ತಂದೆಯವರ ನೆನಪುಗಳನ್ನು ಆತ್ಮೀಯವಾಗಿ ಹಂಚಿಕೊಂಡಿದ್ದರು. ಅವೆಲ್ಲ ಒಟ್ಟುಗೂಡಿ ಪುಸ್ತಕ ರೂಪದಲ್ಲಿ ಹೊರಬರಲೆಂಬುದು ಅನಿವಾಸಿಗಳ ಆಶಯ ಹಾಗೂ ಆಗ್ರಹ.

ಒಳ್ಳೆಯ ನೃತ್ಯಪಟುವಾದ ಡಾ.ಸುಮನಾ.ನಾರಾಯಣ ಅವರು ಚಿಕ್ಕಂದಿನಿಂದಲೂ ತಾವು ಅದ್ಹೇಗೆ ಜಿ.ಎಸ್.ಎಸ್.ಹಾಡಿನ ಮೋಡಿಗೆ ಸಿಕ್ಕಿದ್ದರೆಂಬುದನ್ನುಮತ್ತು ತಮ್ಮ ನೃತ್ಯಗಳಿಗೆ ಕವಿಯ ಹಾಡುಗಳು ಹೇಗೆ ಹಿನ್ನೆಲೆಯಾಗಿ ಒದಗಿಬಂದವೆನ್ನುವುದನ್ನು ತುಂಬು ಅಭಿಮಾನದಿಂದ ಆಪ್ತವಾಗಿ ಹಂಚಿಕೊಂಡಿದ್ದಾರೆ.

ಉತ್ತಮ ಸಂಗೀತಗಾರರಾದ ಶ್ರೀಯುತ ಅರುಣ್ ಕುಕ್ಕೆಯವರು ಜಿ.ಎಸ್.ಎಸ್. ಅವರ ‘ಎಲ್ಲಿದೆ ಬೃಂದಾವನ’ ಎಂಬ ಅಪರೂಪದ ಭಾವಗೀತೆಯೊಂದನ್ನು ಭಾವದುಂಬಿ ಹಾಡಿದ್ದಾರೆ. ನೀವೆಲ್ಲ ಕುತೂಹಲದಿಂದ ಕಾಯುತ್ತಿದ್ದ ಶಿವ್ ಮೇಟಿಯವರ ‘ಯಾರಿವಳು?’..ಕಥಾನಾಯಕಿಯ ರಹಸ್ಯಇವತ್ತಿನ  ಕೊನೆಯ ಕಂತಿನಲ್ಲಿ ಬಯಲಾಗುತ್ತದೆಯೇ? ಓದಿನೋಡಿ.

ಇಂದಿನ ಸಂಚಿಕೆಯನ್ನೂ ಅಂದಿನಂತೆಯೇ ಕುಳಿತು ಓದುವಿರೆಂಬ ವಿಶ್ವಾಸದಿಂದ , ನಿಮ್ಮ ಅನಿಸಿಕೆಗಳನ್ನು ಎದಿರು ನೋಡುತ್ತಿರುವೆ.

~ ಸಂಪಾದಕಿ

ಜಿ. ಎಸ್. ಎಸ್. ಅವರ ಬದುಕಿನ ವಿಶೇಷ ಮೌಲ್ಯಗಳು

ಒಬ್ಬ ಪ್ರಮುಖ ಲೇಖಕನ ಬದುಕಿನ ಧ್ಯೇಯವನ್ನು, ಮೌಲ್ಯಗಳನ್ನು, ಸಂದೇಶಗಳನ್ನು ಅರ್ಥಮಾಡಿಕೊಳ್ಳಲು ಅವರ ಆತ್ಮಕಥೆಯನ್ನು ಓದುವುದು ಅಗತ್ಯ. ಕನ್ನಡದ ಅನೇಕ ಸಾಹಿತಿಗಳು, ಗಣ್ಯರು ತಮ್ಮ ಆತ್ಮ ಕಥೆಯನ್ನು ಬರೆದುಕೊಂಡಿದ್ದಾರೆ. ಜಿ. ಎಸ್. ಎಸ್ ತಮ್ಮ ಆತ್ಮ ಕಥೆಯನ್ನು ಚತುರಂಗ ಎಂಬ ಶೀರ್ಷಿಕೆಯಲ್ಲಿ ನೂರು ಪುಟದ ಒಳಗೇ ಸಂಕ್ಷಿಪ್ತವಾಗಿ ಬರೆದು ಅದನ್ನು ಅಸಮಗ್ರ ಆತ್ಮಕಥೆ ಎಂದು ಕರೆದಿದ್ದಾರೆ. ಅದರಲ್ಲಿ ಬಾಲ್ಯದ, ತಾರುಣ್ಯದ, ವೃತ್ತಿ ಜೀವನದ ಮತ್ತು ಇನ್ನು ಅನೇಕ ಸ್ವಾರಸ್ಯಕರವಾದ ಬಿಡಿ ನೆನಪುಗಳಿವೆ. ಅವರು ಏಕೆ ತಮ್ಮ ಈ ಬರಹವನ್ನು ಅಸಮಗ್ರಕಥೆ ಎಂದು ಕರೆದಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಹೊತ್ತಿಗೆಯ ಮುನ್ನುಡಿಯಲ್ಲಿ ಜಿ.ಎಸ್.ಎಸ್ ಹೇಳಿರುವ ಹಾಗೆ " ಒಬ್ಬ ಸೃಜನ ಶೀಲ ಲೇಖಕ ವಾಸ್ತವವಾಗಿ ತನ್ನ ಬರಹಗಳಲ್ಲೇ ತನ್ನ ನಿಜವಾದ ಆತ್ಮಕಥೆಯನ್ನು ಬರೆದುಕೊಂಡಿರುತ್ತಾನೆ" ಹೀಗಿರುವಾಗ ಮತ್ತೊಂದು ಆತ್ಮಕಥೆಯನ್ನು ಸುದೀರ್ಘವಾಗಿ ಬರೆಯುವ ಅಗತ್ಯ ಅವರಿಗೆ ಕಂಡುಬಂದಿಲ್ಲ. ಜಿ.ಎಸ್.ಎಸ್ ಅವರ ಬದುಕಿನ ಮೌಲ್ಯಗಳನ್ನು ಗ್ರಹಿಸಬೇಕಾದರೆ ಅವರ ಕವನಗಳತ್ತ ಗಮನ ಹರಿಸಬೇಕು. ನಾನು ಅವರ ಮಗನಾಗಿ ಅವರ ಹತ್ತಿರದ ಒಡನಾಟದಿಂದ ಅವರ ಬದುಕಿನ ಮೌಲ್ಯಗಳನ್ನು ಗುರುತಿಸುತ್ತಾ ಬಂದಿದ್ದೇನೆ ಮತ್ತು ಅವುಗಳನ್ನು ನನ್ನದಾಗಿಸಿಕೊಂಡಿದ್ದೇನೆ. ಹಲವು ದಶಕಗಳಿಂದ ಅವರ ಕವನಗಳನ್ನು ಓದುತ್ತ ಕೇಳುತ್ತ ಅದರಲ್ಲಿ ಅಡಗಿರುವ ಸಂದೇಶವನ್ನು ಮತ್ತೆ ಮತ್ತೆ ಅವಲೋಕಿಸಿದ್ದೇನೆ. ಅವರು ಈ ಮೌಲ್ಯಗಳನ್ನು ಬರಿ ಕವಿತೆಗೆ ಅಷ್ಟೇ ಸೀಮಿತಗೊಳಿಸದೆ ಅದನ್ನು ತಮ್ಮ ನಿಜಜೀವನದಲ್ಲಿ ಅನುಷ್ಠಾನಕ್ಕೆ ತಂದಿದ್ದಾರೆ ಎಂಬ ವಿಚಾರದಲ್ಲಿ ನನಗೆ ಸಂದೇಹವಿಲ್ಲ. ಒಬ್ಬ ಲೇಖಕನ ಬರಹ ಅವನ ಬದುಕಿನ ವಿಸ್ತರಣೆಯಷ್ಟೇ. ಲೇಖಕರ ಬರಹವನ್ನು ಮತ್ತು ಬದುಕನ್ನು ಬೇರ್ಪಡಿಸಿದೆ ಅದನ್ನು ಒಟ್ಟಾರೆಯಾಗಿ ಗ್ರಹಿಸಬೇಕು ಎನ್ನುವುದು ಸಾರ್ವತ್ರಿಕ ಅಭಿಪ್ರಾಯ. ನನಗೆ ತಿಳಿದ ಮಟ್ಟಿಗೆ ನನ್ನ ತಂದೆ ಜಿ.ಎಸ್.ಎಸ್ ಅವರ ಬದುಕಿನ ಕೆಲವು ಘಟನೆಗಳನ್ನು ಉದಾಹರಿಸಿ ಅವರ ಮೌಲ್ಯಗಳನ್ನು ಕೃತಿಗಳಲ್ಲಿ ಕಾಣಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ.

ಅನುಕಂಪೆ ಅಪ್ಪನ ವ್ಯಕ್ತಿತ್ವದ ವಿಶೇಷ ಲಕ್ಷಣ. ಬಡವರ ಬಗ್ಗೆ, ಶೋಷಿತರ ಬಗ್ಗೆ ಅವರಿಗೆ ತೀವ್ರ ಕಾಳಜಿ ಇದೆ. ಅವರು ತಮ್ಮ ಬಾಲ್ಯದಲ್ಲಿ, ವಿದ್ಯಾರ್ಥಿದೆಸೆಯಲ್ಲಿ ಬಡತನವನ್ನು ಅನುಭವಿಸಿದವರು. ಹಿಂದೊಮ್ಮೆ ಬಡತನದ ಬವಣೆಯಲ್ಲಿದ್ದು ಶಾಲೆಯಲ್ಲಿ ಓದುತ್ತಿದ್ದ ಒಬ್ಬ ಹುಡುಗಿ ತನ್ನ ಓದನ್ನು ಬಿಟ್ಟು ನಮ್ಮ ಮನೆಗೆಲಸಕ್ಕೆ ಬರುವ ಪರಿಸ್ಥಿತಿ ಅನಿವಾರ್ಯವಾಗಿತ್ತು. ಅವಳ ತಾಯಿ ತೀರಿಕೊಂಡಿದ್ದು, ಹಲವಾರು ಮಕ್ಕಳಿರುವ ಸಂಸಾರವನ್ನು ನಿಭಾಯಿಸಲು ಹೆಣಗುತ್ತಿದ್ದ ಅವಳ ತಂದೆ ಈ ಬಾಲಕಿಯನ್ನು ಶಾಲೆಯಿಂದ ಬಿಡಿಸಿ ಕೆಲಸಕ್ಕೆ ಇರಿಸಿರುವ ತೀರ್ಮಾನಕ್ಕೆ ಬಂದಿದ್ದ. ಸ್ವಲ್ಪ ವರ್ಷದ ನಂತರ ಈ ಹುಡುಗಿ ಹಾಗು ಹೀಗೂ ಪಿಯುಸಿ ಓದಿಕೊಂಡ ನಂತರ ತನಗೆ ಎಲ್ಲಾದರೂ ಕೆಲಸ ಕೊಡಿಸಬೇಕೆಂದು ಜಿ.ಎಸ್.ಎಸ್ ಅವರನ್ನು ಬೇಡಿಕೊಂಡಳು. ಅವಳ ಹಿನ್ನೆಲೆಯನ್ನು ತಿಳಿದಿದ್ದ ಅಪ್ಪ, ತಾವೇ ಮೈಸೂರಿಗೆ ಖುದ್ದಾಗಿ ಹೋಗಿ ಜೆ.ಎಸ್.ಎಸ್ ಮಠದ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಕಂಡು ಈ ಬಡ ಹುಡುಗಿಗೆ ಜೆ.ಎಸ್.ಎಸ್ ಸಂಸ್ಥೆಯಲ್ಲಿ ಕೆಲಸ ಕೊಡಿಸಲು ವಿನಂತಿಸಿಕೊಂಡರು. ಸ್ವಾಮಿಜಿಯವರು ಈ ಹುಡುಗಿಯನ್ನು ಕೆಲಸಕ್ಕೆ ತೆಗೆದುಕೊಳ್ಳುವ ಬದಲು ವೃತ್ತಿಪರ ಶಿಕ್ಷಣದ ಕಾಲೇಜಿನಲ್ಲಿ ಒಂದು ಕೋರ್ಸಿಗೆ ಸೀಟು ಕೊಡುವುದಾಗಿ ಆಶ್ವಾಸನೆ ನೀಡಿದರು. ಇವಳ ಶಿಕ್ಷಣದ ವೆಚ್ಚವನ್ನು ಅಪ್ಪ ಭರಿಸುವುದಾಗಿ ಒಪ್ಪಿಕೊಂಡರು, ಸ್ವಾಮೀಜಿ ಈ ಬಡಹುಡುಗಿಯ ಮೇಲೆ ಕರುಣೆಯಿಟ್ಟು ಅವಳಿಗೆ ಹಾಸ್ಟೆಲಿನಲ್ಲಿ ಉಚಿತ ವ್ಯವಸ್ಥೆಗೆ ಅನುವುಮಾಡಿಕೊಟ್ಟರು. ಮುಂದಕ್ಕೆ ಈ ಹುಡುಗಿಗೆ ಒಳ್ಳೆ ಕೆಲಸ ಸಿಕ್ಕಿತ್ತು, ಅವಳ ಮದುವೆಯೂ ಆಯಿತು. ಇದಾದ ಹತ್ತಾರು ವರುಷಗಳ ನಂತರ ಅಪ್ಪ ಮತ್ತು ಜೆ.ಎಸ್.ಎಸ್ ದೇಶಿಕೇಂದ್ರ ಸ್ವಾಮಿಗಳು ಯಾವುದೋ ಒಂದು ಸಮಾರಂಭದಲ್ಲಿ ಅತಿಥಿಗಳಾಗಿ ವೇದಿಕೆಯಲ್ಲಿ ಭೇಟಿಯಾದಾಗ ಈ ಹುಡುಗಿಯ ಕ್ಷೇಮವನ್ನು ಸ್ವಾಮೀಜಿಯವರು ವಿಚಾರಿಸಿಕೊಂಡರಂತೆ. ಅಪ್ಪ, ಸ್ವಾಮೀಜಿಯವರಿಗೆ "ನೀವು ಅಸಂಖ್ಯಾತ ಕಾರುಬಾರುಗಳ ನಡುವೆ ಇಷ್ಟು ಸಣ್ಣ ವಿಚಾರವನ್ನು ನೆನಪಿಟ್ಟುಕೊಂಡಿದ್ದೀರಲ್ಲ" ಎಂದಾಗ ಸ್ವಾಮಿಜಿ ನಕ್ಕು ಹೇಳಿದರಂತೆ; "ಯಾವುದೂ ಸಣ್ಣದಲ್ಲ"! ನಂತರದಲ್ಲಿ ಅಪ್ಪ ಈ ಪ್ರಸಂಗವನ್ನು ಕುರಿತಾದ ಲೇಖನವನ್ನು ಒಳಗೊಂಡಂತೆ "ಯಾವುದೂ ಸಣ್ಣದಲ್ಲ" ಎಂಬ ಪ್ರಬಂಧ ಸಂಕಲವನ್ನು ಹೊರತಂದರು. ನಮ್ಮ ಮನೆಯಲ್ಲಿ ಕಾರು ತೊಳೆಯಲು ಬರುತ್ತಿದ್ದ ಒಬ್ಬ ಬಡ ಮುಸ್ಲಿಂ ಯುವಕನಿಗೆ ಅಪ್ಪನ ಸಹಾಯದಿಂದ ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿ ಕೆಲಸ ದೊರೆಯಿತು. ಅಂದಹಾಗೆ ಬಡತನದ ಕಷ್ಟದಲ್ಲಿದ್ದವರಿಗಷ್ಟೇ ಅಪ್ಪ ಶಿಫಾರಸ್ ಮಾಡುತ್ತಿದ್ದರು. ಅನೂಕೂಲವಾಗಿರುವ ಎಷ್ಟೋ ಹತ್ತಿರದ ಮತ್ತು ದೂರದ ಬಳಗದವರು ಶಿಫಾರಸ್ ಕೇಳಿಕೊಂಡು ಬಂದರೆ ಅಪ್ಪ ಅದನ್ನು ಸಮ್ಮತಿಸುತ್ತಿರಲಿಲ್ಲ. ಮಕ್ಕಳಾದ ನಮಗೂ ಯಾವ ರೀತಿಯಲ್ಲೂ ಅಪ್ಪ ಶಿಫಾರಸ್ ಮಾಡಲಿಲ್ಲ. ಪ್ರತಿಭೆ ಮತ್ತು ಅರ್ಹತೆ ಅವರಿಗೆ ಬಹಳ ಮುಖ್ಯವಾಗಿತ್ತು ಆದರೆ ಹಿಂದುಳಿದವರಿಗೆ ಮೀಸಲಾತಿಯನ್ನು ಕೊಡುವುದು ಸಾಮಾಜಿಕ ನ್ಯಾಯ ಎಂದು ಭಾವಿಸಿದ್ದರು. ಮೀಸಲಾತಿಯನ್ನು ದುರುಪಯೋಗ ಪಡಿಸಿಕೊಂಡವರ ವಿಚಾರ ಇಲ್ಲಿ ಉಲ್ಲೇಖಿಸುತ್ತಿಲ್ಲ.

ಬಹಳ ಹಿಂದೆ ನಾವು ರಾಜು ಎಂಬ ನಾಯಿಯನ್ನು ಸಾಕಿಕೊಂಡಿದ್ದೇವು. ಅದರ ಬಗ್ಗೆ ಅಪ್ಪನಿಗೆ ವಿಶೇಷ ಕಾಳಜಿ. ನಾಯಿಗೆ ಊಟ ಹಾಕಿದ್ದೀಯಾ? ಎಂದು ಅಮ್ಮನನ್ನು ಪದೇ ಪದೇ ಕೇಳುತ್ತಿದ್ದರು. ಅವರ ಕಾಳಜಿ ನಾಯಿಗೂ ತಿಳಿದಿತ್ತು! ಊಟದ ಕೋಣೆಗೆ ಬಂದರೆ ಅದನ್ನು ಆಚೆಗೆ ಅಟ್ಟುತ್ತಿದ್ದ ನಮನ್ನು ಬಿಟ್ಟು ಅಪ್ಪನ ಕಾಲ ಬಳಿ ಬಂದು ರಾಜು ಕುಂಯ್ ಗುಟ್ಟುತ್ತಿದ್ದ. ಪ್ರತಿಯಾಗಿ ಅಪ್ಪನ ತಟ್ಟೆಯಿಂದ ಅವನಿಗೆ ರೊಟ್ಟಿ ಚಪಾತಿಯ ತುಣುಕುಗಳು ದೊರೆಯುತ್ತಿದ್ದವು. ಇದೊಂದು ತಿಂಡಿ ಪೋತ ಎಂದು ನಾವೆಲ್ಲಾ ದೂರುತ್ತಿದ್ದೆವು. ನಮ್ಮ ಮನೆಯ ಪ್ರಾಣಿಯೂ ಅಪ್ಪನ ಅನುಕಂಪೆಗೆ ಪಾತ್ರವಾಗಿತ್ತು. ಮನೆ ಕೆಲಸದವರನ್ನು ಪ್ರೀತಿ ವಿಶ್ವಾಸ ಮತ್ತು ಗೌರವದಿಂದ ಅಪ್ಪ ಕಾಣುತ್ತಿದ್ದರು. ನನ್ನ ಅಣ್ಣ ಜಯದೇವ ಅಪ್ಪನ ಈ ಅನುಕಂಪೆಯ ಮೌಲ್ಯಗಳನ್ನು ಹೀರಿಕೊಂಡು ಮುಂದಕ್ಕೆ ಗಿರಿಜನರ, ಅನಾಥರ ದೀನಬಂಧುವಾದ. 

ಅಪ್ಪನ ಅನುಕಂಪೆಯನ್ನು ಅವರ ಕವನಗಳಲ್ಲಿ ಯಥೇಚ್ಛವಾಗಿ ಕಾಣಬಹುದು. ಕೆಳಗಿನ ಸಾಲುಗಳು ಅದಕ್ಕೆ ಸಾಕ್ಷಿಯಾಗಿದೆ;

"ದೀಪವಿರದ ದಾರಿಯಲ್ಲಿ ತಡವರಿಸುವ ನುಡಿಗಳೇ 
ಕಂಬನಿಗಳ ತಲಾತಲದಿ ನಂದುತಿರುವ ಕಿಡಿಗಳೇ 
ಉಸಿರ ನಿಡುವೆ ಹೆಸರ ಕೊಡುವೆ, ಬನ್ನಿ ನನ್ನ ಹೃದಯಕೆ"

ಈ ಕವನದಲ್ಲಿ ತಲಾಂತರದಿಂದ ಶೋಷಣೆಗೊಂಡು ಕತ್ತಲಲ್ಲಿ ತಡವರಿಸುವ ,ಬಾಯಿಲ್ಲದೆ ಮೌನದಲ್ಲಿರುವ, ಜಲವಿಲ್ಲದೆ ಕಮರುತಿರುವ, ಬಿರು ಬಿಸಿಲಿನ ತುಳಿತದಲ್ಲಿ ಸೊರಗಿರುವ, ಹೆಸರಿಲ್ಲದ ಜನರಿಗೆ ಅಸ್ತಿತ್ವವನ್ನು ನೀಡಿ ಉಸಿರನ್ನು ಕೊಡುವ ಕವಿಯ ಅನುಕಂಪೆ ಬಹಳ ಸುಂದರವಾಗಿ ಮೂಡಿದೆ. 

 ಅಪ್ಪ ಬರೆದ ಇನ್ನೊಂದು ಕವನ ‘ಯಾವಹಾಡ ಹಾಡಲಿ’ ಬಹಳ ಜನಪ್ರಿಯ ಭಾವ ಗೀತಯೂ ಆಗಿದೆ. ಅದರ ಕೆಲ ಸಾಲುಗಳು ಹೀಗಿವೆ;

“ಯಾವ ಹಾಡ ಹಾಡಲಿ 
ಯಾವ ಹಾಡಿನಿಂದ ನಿಮಗೆ ನೆಮ್ಮದಿಯನು ನೀಡಲಿ 
ಸುತ್ತ ಮುತ್ತ ಮನೆಮಠಗಳು ಹೊತ್ತಿಕೊಂಡು ಉರಿಯುವಲ್ಲಿ  
ಸೋತು ಮೂಕವಾದ ಬದುಕು ನಿಟ್ಟುಸಿರೊಳು ತೇಲುವಲ್ಲಿ 
ಯಾವ ಹಾಡ ಹಾಡಲಿ 

ಬರಿ ಮಾತಿನ ಜಾಲದಲ್ಲಿ, ವಂಚನೆಗಳ ಸಂಚಿನಲ್ಲಿ, ಶೋಷಣೆಗಳ ಶೂಲದಲ್ಲಿ, ಹಸಿದ ಹೊಟ್ಟೆ ನರಳುವಲ್ಲಿ, ಇರುವ ಕನಸು ಸೀಯುವಲ್ಲಿ, ಕುರುಡು ಪಯಣ ಸಾಗುವಲ್ಲಿ ಯಾವ ಹಾಡ ಹಾಡಲಿ? ಅಂತ ಕವಿ ಮರುಗುತ್ತಾರೆ. ಈ ಹಾಡನ್ನು ನಮ್ಮ ಮನೆಗೆ ಬಂದು ಹಲವಾರು ಸಾರಿ ಹಾಡಿದ ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಮ್ಮ ಕಣ್ಣುಗಳಲ್ಲಿ ನೀರು ಬರುವಂತೆ ಹಾಡಿ ಕೊನೆಗೆ ಅವರೇ ಭಾವುಕರಾಗಿ ಎಷ್ಟೋ ಸಾರಿ ಅತ್ತುಬಿಡುತ್ತಿದ್ದರು. ಒಬ್ಬ ಕವಿ ತನ್ನ ಕವಿತೆಯಲ್ಲಿ ಬರಿ ಪ್ರೀತಿ, ಪ್ರೇಮ, ನಿಸರ್ಗ ಇದನ್ನಷ್ಟೇ ವರ್ಣಿಸಿದರೆ ಸಾಲದು ಅವನಿಗೆ ಸಾಮಾಜಿಕ ವಿಚಾರಗಳ ಬಗ್ಗೆ ಕಾಳಜಿ ಇರಬೇಕು ಎಂದು ನನ್ನ ಹತ್ತಿರ ಅವರು ಹೇಳಿದ್ದುಂಟು. 

ಮಾಡುವ ಕೆಲಸದಲ್ಲಿ ಅಪ್ಪನಿಗೆ ಬಹಳ ಶ್ರದ್ಧೆ. ತಮ್ಮ ಒಂದು ಕಾರು ತೊಳೆಯುವ ಸಣ್ಣ ಕೆಲಸದಿಂದ ಹಿಡಿದು ತಮ್ಮ ಪ್ರೊಫೆಸ್ಸರ್ ಹುದ್ದೆಯವರೆಗೆ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದರು. ಅವರು ಎಂಎ ವಿದ್ಯಾರ್ಥಿಗಳಿಗೆ ಪಾಠಮಾಡುವ ಮುನ್ನ ಸಾಕಷ್ಟು ತಯಾರಿಯನ್ನು ಮಾಡಿಕೊಂಡು ಅದಕ್ಕೆ ಬೇಕಾದ ಟಿಪ್ಪಣಿಗಳನ್ನು ಸಾರಾಂಶವನ್ನು ಸಣ್ಣ ಕಾಗದದಲ್ಲಿ ಪಟ್ಟಿಮಾಡಿಕೊಂಡು ಉಲ್ಲೇಖಿಸುತ್ತಾ ಪಾಠ ಹೇಳುತ್ತಿದ್ದರು. ಕೊಂಚ ತಡವಾಗಿ ಬಂದು, ಯಾವ ಸೃಜನಶೀಲತೆ ಇಲ್ಲದೆ, ಹೇಳಿದ್ದನ್ನೇ ಹೇಳುವ ಪ್ರೊಫೆಸ್ಸರ್ ಅವರಾಗಿರಲಿಲ್ಲ ಎಂದು ಅವರ ವಿದ್ಯಾರ್ಥಿಗಳು ಹೇಳುವುದನ್ನು ಕೇಳಿದ್ದೇನೆ. ಅವರು ಬರೆಯುತ್ತಿದ್ದ ಲೇಖನದ ಮೂಲ ಹಸ್ತಪ್ರತಿಯನ್ನು ನಾನು ಖುದ್ದಾಗಿ ಕಂಡಿದ್ದೇನೆ. ಅವರ ಮುದ್ದಾದ ಅಕ್ಷರಗಳು ಮಣಿ ಪೋಣಿಸಿದಂತೆ ಕಾಣುತ್ತಿದ್ದವು. ಅಲ್ಲಿ ತಿದ್ದುಪಡಿಗಳು ಕಾಟು ಹಾಕಿದ ಸಾಲುಗಳು ಇರುತ್ತಿರಲಿಲ್ಲ. ಅಲ್ಲಿ ಎಲ್ಲವೂ ಸ್ಪುಟವಾಗಿದ್ದು ಅವರ ಶ್ರದ್ಧೆಗೆ ಸಾಕ್ಷಿಯಾಗಿದ್ದವು. ಯಾವ ಕೆಲಸವನ್ನು ಕೈಗೆತ್ತಿಕೊಂಡರೂ
ಅದನ್ನು ಸಂಪೂರ್ಣವಾಗಿ ಮಾಡಿ ಮುಗಿಸುವವರೆಗೆ ಅವರಿಗೆ ಸಮಾಧಾನವಿರುತ್ತಿರಲಿಲ್ಲ. ಅಪ್ಪ ಸ್ಪರ್ಧೆಗಿಂತ ಶ್ರದ್ಧೆಗೆ ಹೆಚ್ಚು ಬೆಲೆನೀಡುತ್ತಿದರು. ಅವರಿಗೆ ತೋರ್ಪಡಿಕೆ, ಆಡಂಬರ ಮುಜುಗರದ ವಿಚಾರ. ಶ್ರದ್ಧೆ ಅವರ ಬದುಕನ್ನು ಪ್ರಚೋದಿಸಿದ ರೂಪಿಸಿದ ಶಕ್ತಿ ಎಂದು ಹೇಳಬಹುದು. ಒಂದು ಕಡೆ ಅವರೇ ಹೇಳಿದಂತೆ; “ಶ್ರದ್ಧೆಗೆ ನಿರಾಡಂಬರವೇ ಇಷ್ಟವಾದರೆ ಸ್ಪರ್ಧೆಗೆ ಆಡಂಬರ ಅಟ್ಟ ಹಾಸಗಳೇ ಇಷ್ಟ, ಶ್ರದ್ಧೆ ಮುಗ್ಧವಾದರೆ ಸ್ಪರ್ಧೆ ಕುಟಿಲವಾದದ್ದು. ಸ್ಪರ್ಧೆಯ ಪಾಲಿಗೆ ಜಗತ್ತೆಲ್ಲ ರಣರಂಗ. ಪ್ರತಿಯೊಂದೂ, ಪ್ರತಿಯೊಬ್ಬರೂ ತನಗೆ ಪ್ರತಿಸ್ಪರ್ಧಿಯಾಗಿದ್ದರೆಂಬ ಭ್ರಮೆಯೇ ಅದಕ್ಕೆ ಪ್ರಚೋದಕ. ಎಲ್ಲರನ್ನೂ ಹಿಂದೆ ಹಾಕುವುದು ತಾನು ಮಾತ್ರ ಮುಂದುವರಿಯುವುದು ಹೇಗೆ ಎನ್ನುವುದೇ ಅದರ ಧ್ಯಾಸ
ಶ್ರದ್ಧೆಗೆ ಎಲ್ಲರೊಂದಿಗೆ ಸಹಯಾತ್ರಿಯಾಗುವುದಲ್ಲೇ ಆಸಕ್ತಿ ಮತ್ತು ಜಗತ್ತೆಲ್ಲಾ ಸ್ನೇಹರಂಗವೆಂಬ ವಿಶ್ವಾಸವಿದೆ. ಸ್ಪರ್ಧೆಗೆ ಸ್ವಾರ್ಥ ಮೂಲವಾದರೆ ಶ್ರದ್ಧೆಗೆ ಪರಾರ್ಥ ಪ್ರಿಯವಾದದ್ದು”. 

ಜಿ. ಎಸ್. ಎಸ್ ಅವರ ಯಶಸ್ವಿಯಾಗಿರುವ ಶಿಷ್ಯ ವರ್ಗವನ್ನು ಗಮನಿಸಿದಾಗ ಜಿ.ಎಸ್.ಎಸ್ ಹೇಗೆ ತಾವು ಬೆಳೆಯುವುದರ ಜೊತೆಗೆ ಎಲ್ಲರನ್ನು ಬೆಳೆಸಿದರು ಎಂಬ ವಿಚಾರ ತಿಳಿದು ಬರುತ್ತದೆ. ಅವರ ಹಲವಾರು ಶಿಷ್ಯರು ಅಪ್ಪನ ಎತ್ತರಕ್ಕೆ ಬೆಳೆದದ್ದು ಅವರಿಗೆ ಹೆಮ್ಮೆಯಾದ ವಿಷಯ ಎನ್ನುವುದನ್ನು ಮೇಲಿನ ಶ್ರದ್ಧೆ -ಸ್ಪರ್ಧೆಗಳ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು. ಹಲವು ದಶಕಗಳ ಹಿಂದೆ ಕಿರಿಯ ಉದಯೋನ್ಮುಖ ಕವಿಗಳಾಗಿದ್ದ (ಇಂದು ಹನಿಗವನ ಖ್ಯಾತಿಯ) ಡುಂಡಿರಾಜ್ ಒಮ್ಮೆ ತಮ್ಮ ಪದ್ಯವನ್ನು ಒಂದು ಪತ್ರಿಕೆಯಲ್ಲಿ ಪ್ರಕಟಿಸಿದ್ದು ಅದನ್ನು ಓದಿದ ಜಿ.ಎಸ್.ಎಸ್ ಕೂಡಲೇ ಅವರಿಗೆ ಒಂದು ಪೋಸ್ಟ್ ಕಾರ್ಡಿನಲ್ಲಿ ಅವರನ್ನು ಪ್ರಶಂಸಿಸಿ ಮುಂದಕ್ಕೆ ಇನ್ನು ಹೆಚ್ಚಿನ ಕವನವನ್ನು ಬರೆಯುವಂತೆ ಪ್ರೋತ್ಸಾಹಿಸಿದ್ದರೆಂದು ಡುಂಡಿ ರಾಜರು ನನಗೆ ತಿಳಿಸಿದರು. ಹಲವಾರು ಯುವ ಲೇಖಕ ಲೇಖಕಿಯರಿಗೆ ಅಪ್ಪ ಮೆಚ್ಚುಗೆಯನ್ನು ನೀಡಿ ಪ್ರೋತ್ಸಾಹಿಸಿದ್ದಾರೆ. ಅಪ್ಪ ನಡೆಸುತ್ತಿದ್ದ ಸೆಂಟ್ರಲ್ ಕಾಲೇಜಿನ ಅನೇಕ ವಿಚಾರ ಸಂಕಿರಣಗಳ ವೇದಿಕೆಯಲ್ಲಿ ತಮ್ಮ ಶಿಷ್ಯರಿಗೆ ಮತ್ತು ಇತರ ಯುವ ಪ್ರತಿಭೆಗಳಿಗೆ ಅವಕಾಶ ನೀಡಿ ಅವರಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸಿದ್ದಾರೆ ಎಂದು ನಾನು ಕೇಳಿದ್ದೇನೆ. ಅವರು ಕಿರಿಯ ಸಾಹಿತ್ಯ ಮಿತ್ರರೊಂದಿಗೆ ಅನ್ಯೋನ್ಯವಾಗಿ ಸಾಹಿತ್ಯ ಸಂವಾದಕ್ಕೆ, ಚರ್ಚೆಗೆ ತೊಡಗಿಸಿಕೊಳ್ಳುತ್ತಿದ್ದರು ಎಂಬ ವಿಚಾರವನ್ನು ಖ್ಯಾತ ವಿಮರ್ಶಕರಾದ ಟಿ.ಪಿ ಅಶೋಕ್ ಅವರಿಂದ ತಿಳಿದೆ. 

ಸ್ಪರ್ಧೆಗೆ ಬದುಕೇ ರಣರಂಗವಾದರೆ, ಶ್ರದ್ಧೆಗೆ ಬದುಕು ಸ್ನೇಹರಂಗ, ಈ ಮೇಲಿನ ಜಿ.ಎಸ್.ಎಸ್ ಸಂದೇಶವನ್ನು ಇಂದಿನ ಬದುಕಿನ ಹಿನ್ನೆಲೆಯಲ್ಲಿ ಗಮನಿಸಬೇಕಾಗಿದೆ. ನಾನು, ನಮ್ಮ ದೇಶ, ನಮ್ಮ ಸಂಸ್ಕೃತಿ, ನಮ್ಮ ಧರ್ಮ ಶ್ರೇಷ್ಠವೆಂಬ ಸ್ಪರ್ಧೆಗೆ ಇಳಿದರೆ ಅದು ರಣರಂಗವಾಗಿ ಸಂಭವಿಸುವುದರಲ್ಲಿ ಸಂದೇಹವಿಲ್ಲ. ಬದಲಿಗೆ ಎಲ್ಲರು ತಮ್ಮ ತಮ್ಮ ಕಾರ್ಯಗಳನ್ನು ಶ್ರದ್ಧೆ ,ಪ್ರೀತಿ, ವಿಶ್ವಾಸಗಳಿಂದ ಮಾಡಿದರೆ ಬದುಕು ಒಂದು ಸ್ನೇಹ ರಂಗವಾಗಿ ಶಾಂತಿ ನಿಮ್ಮದಿಗಳು ಸಿಗುತ್ತದೆ. ಎಲ್ಲರು ಜತೆ ಜೊತೆಯಾಗಿ ಬೆಳೆಯಬಹುದು. 

ಅಪ್ಪ ಬಹಳ ಸ್ವಾಭಾಮಾನಿ. ಅವರಿಗೆ ಇತರರನ್ನು ಅವಲಂಬಿಸುವುದು ಸಲ್ಲದ ವಿಷಯ. ನಾನು ಇಂಗ್ಲೆಂಡಿನಲ್ಲಿ ನೆಲೆಸಿದ ಮೇಲೆ ಹಲವು ಬಾರಿ ಅವರನ್ನು ಆಹ್ವಾನಿಸಿ ಅವರ ಪ್ರಯಾಣದ ಏರ್ ಟಿಕೆಟ್ ಕೊಳ್ಳಲು ಮುಂದಾದಾಗ ಅದನ್ನು ಸ್ವೀಕರಿಸದೆ ತಾವೇ ಖರ್ಚುಹಾಕಿಕೊಂಡು ಬರುತ್ತೇನೆ ಎಂದು ಹಠ ಹಿಡಿಯುತ್ತಿದ್ದರು. ಒಂದೇ ಒಂದು ಬಾರಿ ಅವರಿಗೆ ಎಂಬತ್ತು ತುಂಬಿದಾಗ ನಾನು ಅವರಿಗೆ ಉಡುಗೊರೆಯಾಗಿ ಪ್ಯಾರಿಸ್ ಮತ್ತು ವಿಯನ್ನ ನಗರದ ಪ್ರವಾಸವನ್ನು ಸೂಚಿಸದಾಗ ಅವರು ನನ್ನ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲು ಅನುಮತಿಸಿದರು. ಅಪ್ಪನಿಗೆ ಕೊನೆಯಲ್ಲಿ
ನರರೋಗ ಉಂಟಾಗಿ ನಡೆಯಲು ತೊಂದರೆಯಾದಾಗ ಅವರು ಇತರರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಬಂತು. ಆ ಅವಲಂಬನೆ ಅವರಿಗೆ ಹಿತವಾಗಿರಲಿಲ್ಲ, ಬೇರೆ ದಾರಿಯೂ ಇರಲಿಲ್ಲ. ಅಪ್ಪನಿಗೆ ಪ್ರಾಮಾಣಿಕತೆ ಬಹಳ ಮೌಲಿಕವಾದದ್ದು. ಖಾಸಗಿ ವಿಷಯ ಮತ್ತು ಆಫೀಸ್ ವಿಷಯ ಎರಡೂ ಬೇರೆ ಬೇರೆ. ಕೆಲವೊಮ್ಮೆ ಇರುವ ಸವಲತ್ತುಗಳನ್ನು ಬಳಸಿಕೊಳ್ಳುವ ಆಸಕ್ತಿ ಇರಲಿಲ್ಲ. ಯಾವುದೇ ಕುರ್ಚಿ, ಅವಾರ್ಡ್ ಇತ್ಯಾದಿಗಳ ಹಿಂದೆ ಅವರು ಲಾಬಿ ಮಾಡಲಿಲ್ಲ. "ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ" ಎಂಬ ಒಂದು ನಿರ್ಲಿಪ್ತ ಮನೋಭಾವವಿದ್ದು ರಾಷ್ತ್ರ ಕವಿ, ಪಂಪ ಪ್ರಶಸ್ತಿ, ಮತ್ತು ಇನ್ನು ಅನೇಕ ಪ್ರಶಸ್ತಿಗಳೇ ಅವರನ್ನು ಹುಡುಕಿಕೊಂಡು ಬಂದವು ಎನ್ನಬಹುದು. "ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ ಕರ್ಮ ನನಗೆ” ಎಂಬ ಸಾಲುಗಳಲ್ಲಿ ಅವರ ಶ್ರದ್ಧೆ ಪ್ರಾಮಾಣಿಕತೆಗಳನ್ನು ಗುರುತಿಸಬಹುದು.

ಅಪ್ಪನ ಬದುಕಿನಲ್ಲಿ ಸಮಯ ಪ್ರಜ್ಞೆ, ಶಿಸ್ತು, ಕ್ರಮ ಅವರಿಗೆ ಅತಿ ಮುಖ್ಯ. ಅವರು ನನಗೆ ಕೆಲವೊಮ್ಮೆ ಮಿಲಿಟರಿ ಕರ್ನಲ್ ಅಂತೆ ಕಾಣುತ್ತಿದ್ದರು. ಹೊತ್ತು ಹೊತ್ತಿಗೆ ಊಟ, ನಿದ್ರೆ, ಓದು ಅವರ ಆದ್ಯತೆಯಾಗಿತ್ತು. ಅವರನ್ನು ಭಾಷಣಕ್ಕೆಂದು ಅಥವಾ ಮುಖ್ಯ ಅತಿಥಿಯಾಗಿ ಆಹ್ವಾನಿಸಿದಾಗ ಕಾರ್ಯಕ್ರಮವನ್ನು ತಡಮಾಡದೆ ನಿಗದಿಯಾದ ವೇಳೆಗೆ ಶುರುಮಾಡಬೇಕೆಂದು ಸಂಘಟಿಕರಿಗೆ ಸೂಚಿಸುತ್ತಿದ್ದರು. ಈ ವಿಚಾರದಲ್ಲಿ ಲೋಪಗಳಾದರೆ ಅವರು ಸಹಿಸುತ್ತಿರಲಿಲ್ಲ. ಕೆಲವು ಕಾರ್ಯಕ್ರಮದ ವ್ಯವಸ್ಥಾಪಕರು ನಿರೀಕ್ಷೆಗಿಂತ ತೀರಾ ತಡವಾಗಿ ಕಾರು ಕಳುಹಿಸಿದಾಗ ಅಪ್ಪ ಇಷ್ಟು ತಡವಾದದ್ದರಿಂದ ತಾವು ಬರುವುದಿಲ್ಲವೆಂದು ಗಾಂಧೀಜಿಯ ರೀತಿಯಲ್ಲಿ ಹಠ ಹಿಡಿದು ಕೂರುತ್ತಿದ್ದರು. ಸಂಘಟಿಕರು ಇಂತಹ ಪರಿಸ್ಥಿತಿಯಲ್ಲಿ ಅಮ್ಮನನ್ನು "ನೀವು ಸ್ವಲ್ಪ ಹೇಳಿ ಮೇಡಂ" ಎಂದು ಗೋಗರೆಯುತ್ತಿದ್ದರು. ಅಪ್ಪನಿಗೆ ಗರ್ವ ಇರಲಿಲ್ಲ ಬದಲಾಗಿ ಜನರ ಸಮಯ ಪ್ರಜ್ಞೆಯ ಬಗ್ಗೆ ಅಸಮಾಧಾನವಿತ್ತು ಎಂದು ಹೇಳಬಹುದು. ಅಪ್ಪನ ಪುಸ್ತಕಗಳನ್ನು ಪ್ರಕಾಶಕರು, ಪ್ರಿಂಟಿಂಗ್ ಪ್ರೆಸ್ ಕೆಲಸದವರು ಅಪ್ಪನ ನಿರೀಕ್ಷೆಗೆ ಸರಿಯಾಗಿ ಸಿದ್ಧ ಪಡಿಸದಿದ್ದರೆ ಅವರು ಚಡಪಡಿಸುತ್ತಿದ್ದರು, ಕೆಲವೊಮ್ಮೆ ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಅಪ್ಪನ ಸಿಟ್ಟಿನಲ್ಲಿ ತಿರಸ್ಕಾರ ದುರುದ್ದೇಶಗಳು ಇರಲಿಲ್ಲ, ಅದು ಒಂದು ರೀತಿ ಜನರನ್ನು ತಿದ್ದುವ ಸದುದ್ದೇಶದ ಕೋಪ ಎನ್ನಬಹುದು. ಅವರು ಎಷ್ಟೇ ಸಿಟ್ಟಿಗೆದ್ದರು ಅಷ್ಟೇ ಬೇಗ ತಣ್ಣಗಾಗುತ್ತಿದ್ದರು, ತಮ್ಮ ಸಿಟ್ಟನ್ನು ಹೊಗೆಯಾಡಲು ಬಿಡುತ್ತಿರಲಿಲ್ಲ. ಅಪ್ಪನ ಸಮಯ ಪ್ರಜ್ಞೆ ಕೆಲವು ನಿಧಾನಸ್ಥರಿಗೆ ಮತ್ತು ನಿರಾಸಕ್ತರಿಗೆ ಕಿರಿಕಿರಿ ಉಂಟು ಮಾಡಿರಬಹುದು.

ವೈಚಾರಿಕತೆ ಅಪ್ಪನ ಚಿಂತನೆಗಳಲ್ಲಿ, ಕಾವ್ಯದಲ್ಲಿ, ಬರಹದಲ್ಲಿ, ಅವರ ಬದುಕಿನಲ್ಲಿ ಎದ್ದು ತೋರುತ್ತದೆ. ಅಪ್ಪ ಎಂತಹ ಕಷ್ಟದ ಪರಿಸ್ಥಿತಿಯಲ್ಲಿ ಇದ್ದರೂ ಅಂಧ ಶ್ರದ್ಧೆ, ಮೂಢ ನಂಬಿಕೆಗೆ ಶರಣಾಗಲಿಲ್ಲ. ಜನ ಸಾಮಾನ್ಯರು ತಮ್ಮ ಸ್ವಾರ್ಥಕ್ಕಾಗಿ ದೇವರಿಗೆ ಮೊರೆ ಹೋಗುವುದು ಸಾಧಾರಣ. ಆದರೆ "ಶಕ್ತಿಯ ಕೊಡು ಶಕ್ತಿಯ ಕೊಡು ಹೇ ಪ್ರಭು,  ಸತ್ಯಕಾಗಿ ನಿಲುವ ಛಲವ ದೀಪ್ತಿ ಗೊಳಿಸು ಎನ್ನೊಳು" ಎನ್ನುತ್ತಾ ದೇವರನ್ನು ಅವರು ಬೇಡುವುದು ಸತ್ಯಕಾಗಿ ನಿಲುವ ಸಹನಾ ಶಕ್ತಿಯನ್ನು! ಈ ಕವನ ಒಂದು ನಿರ್ಮಲ ಪ್ರಾರ್ಥನೆ. 

ಆಚಾರ, ಪೂಜೆ, ಸಂಪ್ರದಾಯ ಇವುಗಳಲ್ಲಿ ಅವರಿಗೆ ನಂಬಿಕೆಯಿರಲಿಲ್ಲ. ಈ ಒಂದು ಹಿನ್ನೆಲೆಯಲ್ಲಿ ಅವರು "ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಎಂದು ಬರೆಯುತ್ತಾರೆ. ಅದು ನಾಸ್ತಿಕ ವಾದವಲ್ಲ. ದೇವಸ್ಥಾನದ ನಿರಾಕರಣೆಯೇ ಹೊರತು ದೇವರ ನಿರಾಕರಣೆಯಲ್ಲ. ದೇವರ ಹೆಸರಲ್ಲಿ ನಡೆಯುವ ವ್ಯಾಪಾರ ಶೋಷಣೆ ಇವುಗಳನ್ನು ಕಂಡು "ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೇ" ಎಂದು ಹೇಳುತ್ತಾರೆ. ಅವರು ಶರಣರ ವಚನಗಳಲ್ಲಿಯ ಸಾಮಾಜಿಕ ವಿಚಾರಗಳ ಬಗ್ಗೆ ಅದರಲ್ಲೂ ವೈಚಾರಿಕತೆಯನ್ನು ಪ್ರತಿಪಾದಿಸುವ ವಚನಗಳನ್ನು ಹಲವಾರು ವೇದಿಕೆಗಳಲ್ಲಿ ವ್ಯಾಖ್ಯಾನಿಸಿದ್ದಾರೆ. 

“ಪ್ರೀತಿ ಕರುಣೆ ಸ್ನೇಹ ಮರುಕ ಇವೇ ನಮ್ಮ ದೇವರು 
ಕಂಬನಿಯೇ ಇಲ್ಲಿ ತೀರ್ಥ ನಿಟ್ಟುಸಿರೇ ಧೂಪವು 
ಬೇಡ ಬೇರೆ ದೇಗುಲ ಇಲ್ಲಿ ಎಲ್ಲ ನಿರ್ಮಲ” 

ಎಂಬ ಅವರ ಕವನದ ಸಾಲುಗಳಲ್ಲಿ ಅವರ ದೇವರ ಪರಿಕಲ್ಪನೆಯನ್ನು ತಿಳಿಸಿದ್ದಾರೆ. ಅವರ ಅನೇಕ ಚಿಂತನೆಗಳನ್ನು ಒಳಗೊಂಡ ‘ಗಂಗೆಯ ಶಿಖರಗಳಲ್ಲಿ’ ಎಂಬ ಪ್ರವಾಸ ಕಥನದಲ್ಲಿ ಗಂಗೆಯ ಬಗ್ಗೆ ಜನಕ್ಕಿರುವ ಗಾಢವಾದ ನಂಬಿಕೆಯ ಬಗ್ಗೆ ಬರೆಯುತ್ತ "ಈ ಎಲ್ಲ ನಂಬಿಕೆಗಳನ್ನು ಒಂದು ಹಂತದಲ್ಲಿ ಮೆಚ್ಚಿಕೊಳ್ಳ ಬಹುದಾದರೂ ಅವುಗಳಿಂದ ಆಗುವ ಅಪಾಯವನ್ನು ಕಡೆಗಣಿಸುವುದು ಒಳ್ಳೆಯದಲ್ಲ. ಗಂಗೆಯಲ್ಲಿ ಸ್ನಾನ ಮಾಡಿದರೆ ಸಮಸ್ತ ಪಾಪಗಳು ಪರಿಹಾರವಾಗುತ್ತವೆ ಎಂಬ ಪುರಾಣದ ಮಾತನ್ನು ನಂಬಿಕೊಂಡು ಬದುಕಿನುದ್ದಕ್ಕೂ ಮಾಡಬಾರದ್ದನ್ನು ಸಲೀಸಾಗಿ ಮಾಡಿದರೆ ಆಶ್ಚರ್ಯವೇನಿಲ್ಲ" ಎಂದು ಹೇಳುತ್ತಾರೆ. ಇದನ್ನು ಮುಂದಕ್ಕೆ ವಿಸ್ತರಿಸಿ "ವಿಚಾರ ಮಾಡುವ ತಲೆಗಳಿಗಿಂತ ಭಜನೆ ಮಾಡುವ ಬಾಯಿಗಳೇ ಹೆಚ್ಚಾಗಿರುವ ಈ ದೇಶದಲ್ಲಿ ಏನು ಮಾಡಿದರೂ ಹಳೆಯ ನಂಬಿಕೆಗಳದ್ದೇ ಮೇಲುಗೈ" ಎನ್ನುತ್ತಾರೆ. ಜಿ.ಎಸ್. ಎಸ್ ಈ ಮಾತುಗಳನ್ನು ಹೇಳಿ ಮೂರು ದಶಕಗಳಾಗಿವೆ. ನಾನು ಕಂಡಂತೆ ವೈಜ್ಞಾನಿಕವಾಗಿ ಭಾರತ ಮುನ್ನಡೆದಿದ್ದರೂ ಜನರು ಅವೈಚಾರಿಕ ಮನೋಭಾವಗಳನ್ನು ಪೋಷಿಸಿಕೊಂಡು ಬಂದಿದ್ದಾರೆ. ಧರ್ಮ ಪ್ರಚೋದಕರನ್ನು ಪ್ರಶ್ನಿಸಲು ಮುಂದಾದರೆ “ಜನರ ನಂಬಿಕೆ” ಎನ್ನುವ ಭಾವೋದ್ವೇಗ ಸಮರ್ಥನೆ ವೈಚಾರಿಕತೆಯನ್ನು ಮೂಲದಲ್ಲೇ ಧ್ವಂಸ ಮಾಡಿಬಿಡುತ್ತದೆ. ಶತಮಾನಗಳಿಂದಲೂ ಹೀಗೆ ಭಾರತದಲ್ಲಿ ನಂಬಿಕೆಗಳದ್ದೇ ಮೇಲುಗೈ! ನನಗೆ ತಿಳಿದಂತೆ ಅಪ್ಪ ಜಾತಿ ವಿರೋಧಿ. ಜಾತಿ ರಾಜಕೀಯದಿಂದ ಅವರು ದೂರ ಉಳಿದಿದ್ದರು. ಅಪ್ಪನ ಅಂತಿಮ ಸಂಸ್ಕಾರದಲ್ಲಿ ಜಮಾಯಿಸಿದ್ದ ಅಭಿಮಾನಿಗಳು "ಜಿ.ಎಸ್.ಎಸ್ ಮತ್ತೆ ಹುಟ್ಟಿ ಬನ್ನಿ, ಜಾತೀಯತೆ ತೊಲಗಲಿ ಮಾನವೀಯತೆ ಉಳಿಯಲಿ" ಎಂಬ ಹಾರೈಕೆಯ ವಿದಾಯವನ್ನು ಕೂಗಿ ಹೇಳಿದ್ದು ಹೃದಯ ಸ್ಪರ್ಶಿಯಾಗಿತ್ತು. 

ಅಪ್ಪ ಬದುಕನ್ನು ವಿಶೇಷವಾಗಿ ಪ್ರೀತಿಸಿದವರು, ಕನ್ನಡದ ವರ್ಡ್ಸ್ ವರ್ಥ್, ರೋಮ್ಯಾಂಟಿಕ್ ಕವಿ ಎಂದು ಗುರುತಿಸಲ್ಪಟ್ಟವರು. "ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಒಂದು ಆಸೆಯಿಂದ" ಹಣತೆ ಹಚ್ಚುತ್ತೇನೆ ಎನ್ನುವ ಕವಿಗೆ ಹಣತೆ ಉರಿಯುವವರೆಗೂ ಎಲ್ಲರೊಡನೆ ಪ್ರೀತಿ ಸ್ನೇಹ ವಿಶ್ವಾಸಗಳೊಂದಿಗೆ ಬಾಳುವ ಹಂಬಲ. ಹಣತೆ ಎಂಬ ಕವಿತೆಯ ಈ ಸಾಲು ಅವರ ಬದುಕಿನ ಪ್ರೀತಿಗೆ ಸಾಕ್ಷಿಯಾಗಿದೆ. ಅಪ್ಪನ ಬದುಕಿನ ಮೌಲ್ಯಗಳು ಅವರ ಕಾಲಘಟ್ಟದ ಮೌಲ್ಯಗಳೂ ಆಗಿದ್ದವು. ಅವರ ಸಮಕಾಲೀನರು, ಗುರುಗಳು ಈ ಶ್ರದ್ಧೆ, ಶಿಸ್ತು, ಪ್ರಾಮಾಣಿಕತೆ, ಸಮಯ ಪ್ರಜ್ಞೆ, ಇವುಗಳಿಗೆ ಹೆಚ್ಚಿನ ಬೆಲೆ ನೀಡುತ್ತಿದ್ದರು. ಬಹುಶಃ ಇದು ದಕ್ಕಿದ್ದು ಇನ್ನೂರು ವರ್ಷಗಳ ಕಾಲದ ಬ್ರಿಟಿಷ್ ಆಳ್ವಿಕೆಯಿಂದ ಎಂದು ನನ್ನ ಊಹೆ. ಬ್ರಿಟನ್ನಿನಲ್ಲಿರುವ ಅನಿವಾಸಿ ಕನ್ನಡಿಗರ ಬದುಕಿನಲ್ಲಿ ಈ ಮೌಲ್ಯಗಳು ಹಾಸುಹೊಕ್ಕಾಗಿವೆ. ಜಿ.ಎಸ್.ಎಸ್ ಪರಿವಾರದಲ್ಲಿ ನನ್ನ ಹುಟ್ಟು ಆಕಸ್ಮಿಕ ಮತ್ತು ಅದು ನನ್ನ ಒಂದು ಸೌಭಾಗ್ಯವೆಂದು ನಾನು ಪರಿಗಣಿಸಿದ್ದೇನೆ. ಅಪ್ಪನ ಈ ಮೌಲ್ಯಗಳನ್ನು ಪ್ರಜ್ಞಾ ಪೂರ್ವಕವಾಗಿ ಮತ್ತು ಕೆಲವೊಮ್ಮೆ ಉಪಪ್ರಜ್ಞೆಯಲ್ಲಿ ಹೀರಿಕೊಂಡು ನನ್ನದಾಗಿಸಿಕೊಂಡಿದ್ದೇನೆ.  ಇವು ನನ್ನ ಬದುಕಿನ ಯಶಸ್ಸಿಗೆ ಸೂತ್ರವಾಗಿದ್ದು ನನ್ನ ವ್ಯಕ್ತಿತ್ವವನ್ನೂ ರೂಪಿಸಿವೆ. 

~ ಡಾ. ಜಿ.ಎಸ್. ಶಿವಪ್ರಸಾದ್

ಉಡುಗಣ ವೇಷ್ಟಿತ ಚಂದ್ರಸುಶೋಭಿತ

ಪರಿಚಯ ಸುಮನ ನಾರಾಯಣ್ - ಹನುಮಂತನಗರ ಬಸವನಗುಡಿಯಲ್ಲಿ ಹುಟ್ಟಿ ಬೆಳೆದ ಪಕ್ಕಾ ಬೆಂಗಳೂರು ಸೌತ್ ಹುಡುಗಿ. ಸಧ್ಯ ನಾಟಿಂಗ್ಹ್ಯಾಮ್ ನಲ್ಲಿ ಪತಿ ಡಾ ದಿವ್ಯತೇಜ ಮತ್ತು ಅವಳಿ ಮಕ್ಕಳೊಂದಿಗೆ ವಾಸ. ವೃತ್ತಿಯಲ್ಲಿ ಪ್ರಸೂತಿ ತಜ್ಞೆ (Obstetrician) ಮತ್ತು ಭರತನಾಟ್ಯ ಕಲಾವಿದೆ.
ಎಂದಿನಂತೆ busy ಇದ್ದ ಶನಿವಾರ. ರಾತ್ರಿ ಫೋನ್ ಟ್ರಿಂಣಿಸಿತು. ಗೌರಿ ಅವರಿಂದ ಮೆಸೇಜ್ ಹೀಗಿತ್ತು- " ಫೆಬ್ರವರಿ ೭ ಕ್ಕೆ ಡಾ. ಜಿ. ಎಸ್. ಎಸ್ ರವರ ಜನ್ಮದಿನ . ಇದಕ್ಕೆ ನೀವು ಒಂದು ಲೇಖನ ಬರೆದು ಕೊಡಬಹುದೇ?" ಇದನ್ನು ನೋಡಿ ಆಶ್ಚರ್ಯ ಮತ್ತು ಗಾಬರಿ ಒಟ್ಟಿಗೆ ಆಯಿತು....ಅಯ್ಯೋ ನಾನೇ!!! ಇವರೇನಾದ್ರೂ ತಪ್ಪು ನಂಬರಿಗೆ ಮೆಸೇಜ್ ಕಳುಹಿಸಿದ್ದಾರ ಅಂತ. ಆದರೆ ಅವರ gentle but persistent ಪ್ರೋತ್ಸಾಹದ ಮಾತುಗಳಿಗೆ ಕಟ್ಟುಬಿದ್ದು, ನನ್ನ ಇಷ್ಟವಾದ ಕವಿಯ ಕೆಲ ಕವನಗಳು ಹಾಗು ಅದನ್ನು ನಾನು ಅರ್ಥಮಾಡಿಕೊಂಡ ಬಗೆ ಹಾಗೆ ಕೆಲವನ್ನು ನೃತ್ಯಕ್ಕೆ ಅಳವಡಿಸಿಕೊಂಡು ಅನುಭವಿಸಿದ ಬಗೆ- ಇದನ್ನು ಬರೆಯುವ ಸಾಹಸ ಮಾಡಿರುತ್ತೇನೆ. 
ಬೆಂಗಳೂರಿನ ಬಸವನಗುಡಿಯಲ್ಲಿ ಕಲೆ ಮತ್ತು ಸಾಹಿತ್ಯ ಪ್ರಿಯರ ಮನೆಯಲ್ಲಿ ಹುಟ್ಟಿ ಬೆಳೆದ ನಾನು ಚಿಕ್ಕಂದಿನಿಂದ ಡಾ. ಜಿ.ಎಸ್.ಎಸ್ ರವರ ಕವನಗಳನ್ನ ಹಲವಾರು ಬಾರಿ ರೇಡಿಯೋ ಮತ್ತು ಟಿ.ವಿಯಲ್ಲಿ ಕೇಳಿದ್ದು, ನೋಡಿದ್ದು ಉಂಟು. ಆದರೆ ಮನಸ್ಸಿಗೆ ಮುಟ್ಟಿದ ಅನುಭವವೆಂದರೆ ಅವರ ಉಡುಗಣ ವೇಷ್ಟಿತ ಕವನದ ನೃತ್ಯ. ಆಗ ನನಗೆ ಸುಮಾರು ೭ ಅಥವಾ ೮ ವರ್ಷ ಇದ್ದಿರಬಹುದು. ನಮ್ಮ ನೃತ್ಯ ಶಾಲೆಯ ಸೀನಿಯರ್ students ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮವೊಂದಕ್ಕೆ ಈ ಕವನದ ನೃತ್ಯ ಮಾಡಿದ್ದರು. ಅದರ ಅಭ್ಯಾಸ ಮತ್ತು Rehearsal ಗಳಿಗೆ free audienceಆಗಿ ಕೂತಿದ್ದ ನೆನಪು! ಶಿವನ ಪಾತ್ರಧಾರಿ ನನ್ನ favourite ಅಕ್ಕ (ಸೀನಿಯರ್). ಶಿವನ ವರ್ಣಿಸುವ ಈ ಕವನದ ವಿಶಿಷ್ಟ ಸಾಲುಗಳು ಮತ್ತು ಆಕೆಯ ಮನೋಜ್ಞ ಅಭಿನಯ ಮನಸ್ಸಿನಲ್ಲಿ ಅಚ್ಚಾಯ್ತು. ಆದರೆ ಗಹನವಾದ ಈ ಕವನವನ್ನ ಅರ್ಥ ಮಾಡಿಕೊಳ್ಳುವುದು ದೂರ, ಪೂರ್ಣ ಕವಿತೆಯನ್ನೂ ಸರಿಯಾಗಿ ಹೇಳಲು ಬಾರದ ನಾನು "ತಣ್ಣ ನೀರಿನಲಿ ಮಣ್ಣ ಧೂಳಿನಲಿ" ಅಂತ ಹಾಡುತ್ತಿದ್ದುದನ್ನು ನೋಡಿ ಅಲ್ಲಿದ್ದ ಹಿರಿಯರೊಬ್ಬರು ನನ್ನ ಕರೆದು "ಅದು ತಣ್ಣೀರು ಅಲ್ಲಮ್ಮ ಕಣ್ಣೀರು" ಅಂತ ತಿದ್ದಿದ್ದು ನೆನಪಿದೆ! ಮುಂದೆ ಹೈ ಸ್ಕೂಲ್ಗೆ ಬಂದಾಗ ಈ ಕವಿತೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಆ ದೇವನ dual characterisation- ವಿರೋಧಾಭಾಸವೆನಿಸುವ ಮೂರ್ತ ಮತ್ತು ಅಮೂರ್ತ ಸ್ವರೂಪವನ್ನು ಎಷ್ಟು ಚೆಂದವಾಗಿ ಚಿತ್ರಿಸಿದ್ದನ್ನು ಕಂಡು ಬೆರಗಾದೆ. ಮುಂದೆ ಹಲವು ಬಾರಿ ನೃತ್ಯ ಸಂಯೋಜನೆ ಮಾಡಿ ಖುಷಿ ಪಟ್ಟೆ.
ನನಗೆ ಬಹಳ ಇಷ್ಟವಾದ ಇನ್ನೊಂದು ಕವಿತೆಯೆಂದರೆ "ಎಲ್ಲೊ ಹುಡುಕಿದೆ ಇಲ್ಲದ ದೇವರ." ಇದನ್ನು ಮೊದಲ ಬಾರಿ ಕೇಳಿದ್ದು, ಕಲಿತಿದ್ದು ನನ್ನ ಸೋದರತ್ತೆಯಿಂದ. ಇದರ ಸಾಲುಗಳು ನನ್ನ ಮೇಲೆ ಬಹಳಷ್ಟು ಪರಿಣಾಮ ಬೀರಿತು. ಇದನ್ನು ಹಾಡುವಾಗಲ್ಲೆಲ್ಲ ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರಚೋದಿಸುತ್ತದೆ. ನಮ್ಮ ಅಹಮ್ಮಿನ ಕೋಟೆ ಒಡೆಯಬೇಕು, ಆದಷ್ಟು ಹೊಂದಿಕೊಂಡು ಹೋಗಬೇಕು ಎಂದೆನಿಸದೆ ಇರಲಾರದು.
ಹೋದ ವರ್ಷ ಡಾ. ಜಿ.ಎಸ್.ಎಸ್ ರವರ ೯೫ನೇ ಹುಟ್ಟು ಹಬ್ಬದ ಪ್ರಯುಕ್ತ ನೆಡೆದ ಆನ್ಲೈನ್ ಸಮಾರಂಭಕ್ಕೆ,ಕವಿವರ್ಯರ ಯಾವುದಾದರು ಭಾವಗೀತೆಗೆ ನೃತ್ಯ ಮಾಡೆಂದು ಡಾ. ಶಿವಪ್ರಸಾದ್ ರವರು ಒಂದೆರಡು ಭಾವಗೀತೆಗಳ ಲಿಂಕ್ ಅನ್ನು ಕಳುಹಿಸಿದ್ದರು. ಅವುಗಳಲ್ಲಿ ನನ್ನ ಮನ ಸೆಳೆದದ್ದು ಶ್ರೀಮತಿ ರತ್ನಮಾಲಾ ಪ್ರಕಾಶ್ ರವರ ಸುಮಧುರ ಧ್ವನಿಯಲಿದ್ದ "ಯಾರವರು ಯಾರವರು" ಹಾಡು. ಹಿಂದೆಂದೂ ಕೇಳದ ಈ ಗೀತೆಯನ್ನು ನಾನು ಮೊದಲು ಬಾರಿಗೆ ಕೇಳಿದ್ದು ಕೆಲಸಕ್ಕೆ (Leicester ) ಡ್ರೈವ್ ಮಾಡ್ಕೊಂಡು ಹೋಗುವಾಗ. ಆಗ ನನಗನಿಸಿದ್ದು ಇದೊಂದು ಪ್ರೇಮ ಕವಿತೆ- ಒಬ್ಬ ನಾಯಕಿ/ ನಾಯಕನೋ ತನ್ನ ಪ್ರೇಯಸಿ/ಪ್ರಿಯಕರನ ಬಗ್ಗೆ ಹೇಳಿದಂತಿದೆ. ಕೆಲಸ ಮುಗಿಸಿ ವಾಪಸ್ಸು ಬರ್ತಾ ಕೇಳಿದಾಗ - ಇಲ್ಲ ಇದು ಒಬ್ಬ ತಾಯಿ ತನ್ನ ಜೀವನದ ಪುಟಗಳನ್ನ ತಿರುವಿದಂತಿದೆ ಅನ್ನಿಸಿತ್ತು. ಹಾಗೆ ಮತ್ತೊಮ್ಮೆ ಕೇಳಿದಾಗ ಇದು ಎಲ್ಲವನ್ನು ಬಿಟ್ಟು ಆಧ್ಯಾತ್ಮದ ಬಾಗಿಲ ಬಳಿ ನಿಂತವನ ಕವಿತೆಯಂತೆ ಭಾಸವಾಯ್ತು! ಡಾ ಶಿವಪ್ರಸಾದ್ ಹೇಳಿದಂತೆ ಇದನ್ನು ಅರ್ಥ ಮಾಡಿಕೊಳ್ಳುವುದು ಓದುಗರಿಗೆ/ಕೇಳುಗರಿಗೆ ಬಿಟ್ಟಿದ್ದು. ಹಾಗಾಗಿ ನನ್ನೆಲ್ಲಾ ಆನಿಸಿಕೆಗಳನ್ನ ಅಳವಡಿಸಿಕೊಂಡು  ಈ ಕವಿತೆ ಯನ್ನು ಒಂದು ಹೆಣ್ಣಿನ  ಬದುಕಿನಲ್ಲಿ ಬರುವ "ಯಾರವರು" ಗಳನ್ನ ಚಿತ್ರಿಸಿ ನರ್ತಿಸಿದ್ದು ಅದ್ಭುತ ಅನುಭವ. ನಮ್ಮೊಳಗಿನ ಕುತೂಹಲ ಕೆರಳಿಸಿ, ವೈಚಾರಿಕತೆ ಬೆಳಸಿ ಹಾಗು ವಿಮರ್ಶಾ ಶಕ್ತಿಯನ್ನೂ ವೃದ್ಧಿಸುವುದು ಶ್ರೇಷ್ಠ ಕವಿ ಧರ್ಮವಲ್ಲವೆ?

ಹೀಗೆ ಹೇಳ್ತಾ ಹೋದರೆ ಜಿ.ಎಸ್. ಎಸ್ ರವರ ಕವಿತೆಗಳಿಗೇನು ಬರವೇ? 
ಶಿಶುಗೀತೆ ಎಳೆ ಬೆಳದಿಂಗಳಿಂದ ಹಿಡಿದು, ಮುಂಗಾರಿನ ಅಭಿಷೇಕವೋ, ಎದೆ ತುಂಬಿ ಹಾಡಿದ ಹಾಡೋ ಅಥವಾ ಆಧ್ಯಾತ್ಮದ ಎಲ್ಲೆ ಮೀರಿಸುವ ಕಾಣದ ಕಡಲಿಗೆ ನಮ್ಮನ್ನು ಕರೆದೊಯ್ಯಬಲ್ಲ ಈ ಶ್ರೇಷ್ಠ ಕವಿಪುಂಗವರಿಗೆ ಹೀಗೊಂದು ನಮನ. 
ಇವರ ಇನ್ನಷ್ಟು ಕವನಗಳನ್ನ ನೃತ್ಯಕ್ಕೆ ಅಳವಡಿಸುವ ಆಸೆ ಹೊತ್ತ

~ ಸುಮನ

ಎಲ್ಲಿದೆ ಬೃಂದಾವನ

ಶ್ರೀಯುತ ಅರುಣ್ ಕುಕ್ಕೆ ಅವರು ಕರ್ನಾಟಕೀ ಶಾಸ್ತ್ರೀಯ ಸಂಗೀತಗಾರರು ಭದ್ರಾವತಿ ಆಕಾಶವಾಣಿಯಲ್ಲಿ ಕೆಲಸ ಮಾಡಿದವರು.ಪ್ರಸ್ತುತ O2 ನಲ್ಲಿ ರೇಡಿಯೋ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಮಕ್ಕಳು-ದೊಡ್ಡವರಾದಿಯಾಗಿ ಆಸಕ್ತರಿಗೆ ಸಂಗೀತ ಪಾಠ ಹೇಳಿಕೊಡುತ್ತಾರೆ. ಕನ್ನಡ ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆಗಳ ಬಗ್ಗೆ ಇವರಿಗೆ ಅಪರಿಮಿತ ಆಸಕ್ತಿ.


ಗೀತ ನಮನ – ಎಲ್ಲಿದೆ ಬೃಂದಾವನ
ಸಂಗೀತ ಸಂಯೋಜನೆ – ಶ್ರೀ ಪ್ರಸನ್ನ ವೆಂಕಟೇಶ

ಯಾರಿವಳು??(ವೊ ಕೌನ್ ಥಿ?) 3

ಫೋನಿನ ಮುಖಾಂತರ ಅವಳ ಬಗ್ಗೆ ವಿಷಯವನ್ನು ಸಂಗ್ರಹಿಸಲು ಪ್ರಯತ್ನಿಸಿದೆ.ಆದರೆ ಸಾಧ್ಯವಾಗಲಿಲ್ಲ . ಏನೋ ಅರ್ಜೆಂಟ್ ಕೆಲಸ ಎಂದು ಮನೆಯಲ್ಲಿ ಸುಳ್ಳು ಹೇಳಿ ಇಂಡಿಯಾಗೆ ಹೋದೆ.
ಅವಳ ಅನ್ವೇಷಣೆಯಲ್ಲಿ ಇನ್ನೊಮ್ಮೆ ಹಳ್ಳಿಗೆ ಭೇಟಿಕೊಟ್ಟಿದ್ದಾಯಿತು . ಗುರ್ಜಿಯ ಮನೆಗೆ ಬೀಗ ಹಾಕಿತ್ತು. ಆದರೆ ಊರ ಜನರಿಂದ ಅವಳ ವಿಷಯವೆಲ್ಲಾ ಗೊತ್ತಾಯಿತು .
ಅವಳು ಸ್ವಲ್ಪ ಸಮಯದ ನಂತರ ಬೆಳಗಾವಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ತನ್ನ ಚಾಣಾಕ್ಷತನ ಮತ್ತು ಕರ್ತವ್ಯ ನಿಷ್ಠೆಯಿಂದ ಒಳ್ಳೆಯ ಹೆಸರನ್ನು ಗಳಿಸಿದ್ದಳು. ಹಾಗೆಯೇ ಕೆಲವು ವರ್ಷಗಳ ನಂತರ ಭಡ್ತಿ ದೊರೆತು ಬೆಂಗಳೂರಿಗೆ ಬಂದಿದ್ದಳು. ಬೆಂಗಳೂರಿನ ಪರಿಸರ ಮತ್ತು ಉರುಳಿ ಹೋದ ಕಾಲ ಜೀವನದಲ್ಲಿ ಅವಳಿಗೆ ಒಳ್ಳೆಯ ಪಾಠವನ್ನೇ ಕಲಿಸಿದ್ದವು. ಸ್ತ್ರೀ ಸಮಾನತೆ ಮತ್ತು ಸ್ವಾತಂತ್ರ್ಯದ ಬಗ್ಗೆ ತುಂಬಾ ಅರಿವಾಗಿತ್ತು . ಕಟ್ಟಿಕೊಂಡವನು ತನ್ನನ್ನು ಬಿಟ್ಟು ಇನ್ನೊಬ್ಬರೊಂದಿಗೆ ಹಾಯಾಗಿರುವಾಗ ತಾನೇಕೆ ಹೀಗೆ ಬದುಕಬೇಕೆಂಬ ಪ್ರಶ್ನೆ ಹುಟ್ಟಿತ್ತು . ತನಗೂ ಬದುಕಿದೆ, ಬಾಳುವ ಆಸೆಯಿದೆ ಎಂಬುದನ್ನು ಕಂಡುಕೊಂಡಿದ್ದಳು. ಮನೆಯಲ್ಲಿ ಯಾರಿಗೂ ಹೇಳದೆ ತಾನೇ ಕೋರ್ಟಿನ ಕಟ್ಟೆಯನ್ನು ಏರಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದಳು. ಸ್ತ್ರೀ ಸಂಘಟನೆಗಳಲ್ಲಿ ಭಾಗಿಯಾಗಿ ತನ್ನ ಧ್ವನಿಯನ್ನು ಎತ್ತಿದ್ದಳು. ಅಕ್ಕ ಪಕ್ಕದ ಹಳ್ಳಿಗಲ್ಲಿ ತನ್ನಂತೆ ಅನ್ಯಾಯಕ್ಕೆ ಒಳಗಾದ ಸ್ತ್ರೀಯರಿಗೆ ಸಂಘಟನೆಗಳ ಮೂಲಕ ನ್ಯಾಯವನ್ನು ಕೊಡಿಸಲು ನೆರವಾಗಿದ್ದಳು . ಹಳ್ಳಿಯ ಮಣ್ಣಿನ ಬಣ್ಣವನ್ನು ಬದಲಿಸಿದ್ದಳು .
ಹಾಗೆಯೇ ಎಷ್ಟೋ ಗಂಡಸರೊಂದಿಗೆ ವೈರತ್ವವನ್ನೂ ಬೆಳೆಸಿಕೊಂಡಿದ್ದಳು. ತಾನು ನಡೆಯುತ್ತಿರುವ ದಾರಿ ಅಪಾಯಕಾರಿಯೆಂದು , ಏನಾದರು ಪರಿವರ್ತನೆ ತರಬೇಕಾದರೆ ಇದನ್ನು ಎದುರಿಸುವುದು  ಅನಿವಾರ್ಯವೆಂಬುದರ ಅರಿವು ಅವಳಿಗಿತ್ತು .
ಟಾಟಾ ಸಂಘಟನೆಯು ಸ್ಕಾಟ್ಲೆಂಡಿನ ಸ್ಕಾಟಿಷ್ ಎನರ್ಜಿ್  ಫಾರ್ಮನೊಂದಿಗೆ ಒಪ್ಪಂದ ಮಾಡಿಕೊಂಡಿದೆ . ಸ್ಕಾಟಿಷ್ ಕೆಲಸಗಾರರು ಭಾರತಕ್ಕೂ ಮತ್ತು ಅಲ್ಲಿಯವರೂ ಇಲ್ಲಿಗೆ ಬರುವದು ಸಹಜವಾಗಿದೆ . ಹಾಗೆಯೇ ಅವಳಿಗೆ ಕೆಲಸದ ಸ್ಥಳದಲ್ಲಿ ಸ್ಕಾಟಿಷ್ ಹುಡುಗನೊಬ್ಬನ ಪರಿಚಯವಾಗಿತ್ತು . ಪರಿಚಯ ಸ್ನೇಹವಾಗಿ , ಸ್ನೇಹ ಪ್ರೀತಿಯಾಗಿ ಪರಿವರ್ತನೆಗೊಂಡಿತ್ತು . ಮನೆಯಲ್ಲಿ ಯಾರಿಗೂ ಹೇಳದೆ ರೆಜಿಸ್ಟ್ರಾರ್ ಆಫೀಸಿನಲ್ಲಿ ಅವನೊಂದಿಗೆ ಮದುವೆಯನ್ನು ಮಾಡಿಕೊಂಡಿದ್ದಳು . ಕೆಲವು ಸಮಯದ ನಂತರ ತಂದೆ ಮತ್ತು ಅಣ್ಣನಿಗೆ ಹೇಳಿದ್ದಳು . ಅಣ್ಣ ಕುಪಿತನಾಗಿ ಹೋಗಿದ್ದ ' ಕುಲ ಕೆಡಿಸಿದಳು ಮುಂಡೆ ' ಎಂದು ಬೈದುಕೊಂಡಿದ್ದ. ತಂದೆ ತುಂಬಾ ನೋವನ್ನು ಮಾಡಿಕೊಂಡು ಮಾತನಾಡುವದನ್ನೇ ನಿಲ್ಲಿಸಿ ಬಿಟ್ಟಿದ್ದರು. ಊರ  ಜನರಿಗೆಲ್ಲ ವಿಷಯ ಗೊತ್ತಾಗಿತ್ತು .
ಗುರ್ಜಿಯವರಿಗೆ ಹೊರಗೆ ಮುಖ ತೋರಿಸದಂತಾಗಿತ್ತು .
ಅಣ್ಣನೇ ಮುಂದಾಗಿ ಬೆಳಗಾವಿಯಲ್ಲಿದ್ದ ಧಾರ್ಮಿಕ ಸಂಘಟನೆಗೆ ವಿಷಯವನ್ನು
ತಿಳಿಸಿದ್ದ , ಧರ್ಮಾಂತರ ಹೊಂದಿದ್ದಾಳೆಂದು ಪಿತೂರಿ ಮಾಡಿದ್ದ . ಅವಳಿಗೂ ವಿಷಯ ಗೊತ್ತಾಗಿತ್ತು. ಇದರ ಬಗ್ಗೆ ಅವಳು ಕಿಂಚಿತ್ತೂ ತಲೆ ಕೆಡಿಸಿಕೊಳ್ಳಲಿಲ್ಲ . ಆದರೆ ಅಪಾಯ ಅಷ್ಟು ಬೇಗ ಬರುತ್ತದೆ ಎಂಬುದರ ಅರಿವು ಅವಳಿಗೆ ಇರಲಿಲ್ಲ . ಅಚಾನಕಾಗಿ ಅದೊಂದು ದಿನ ಅವಳು ತನ್ನ ಗಂಡನೊಂದಿಗೆ ಮಾಯವಾಗಿ ಬಿಟ್ಟಿದ್ದಳು, ಮತ್ತೆ ಅವಳು ಯಾರಿಗೂ ಕಾಣಿಸಿಕೊಳ್ಳಲೇ ಇಲ್ಲ . ಯಾರೋ ಅವರಿಬ್ಬರನ್ನು ಅಪಹರಿಸಿ ಕೊಲೆ ಮಾಡಿರುವರೆಂದು ಎಲ್ಲರ ಬಲವಾದ ನಂಬಿಕೆ ಹಾಗು ಧರ್ಮ ಸಂಘಟನೆಯ ಕೈವಾಡ ಅದರಲ್ಲಿದೆಯೆಂದು ಎಲ್ಲರ ಊಹಾಪೋಹ. ವಿಷಯ ತಿಳಿದ ಗುರ್ಜಿ ಕುಸಿದು ಹೋಗಿದ್ದರು , ಊರನ್ನು ಬಿಟ್ಟು ಬೆಳಗಾವಿಯಲ್ಲಿ ಮಗನೊಂದಿಗೆ ವಾಸಿಸಲು ತೊಡಗಿದ್ದರು. ರಘು ಇದ್ದ ಜಮೀನನ್ನು ಮಾರಿಬಿಟ್ಟಿದ್ದ ಆದರೆ ಮನೆಯನ್ನು ಮಾತ್ರ ಯಾರೂ ಕೊಂಡುಕೊಳ್ಳಲಿಲ್ಲ . ಮಂಜು ಭೂತವಾಗಿದ್ದಾಳೆಂದು ಹಾಗು ಅಮಾವಾಸೆಯ ರಾತ್ರಿ ಮನೆಯ ಸುತ್ತ ತಿರಗುತ್ತಾಳೆಂದು ಹಳ್ಳಿಯ ಜನರ ಬಲವಾದ ನಂಬಿಕೆ . ವಿಷಯ ತಿಳಿದು ನನಗೆ ತುಂಬಾ ಬೇಜಾರಾಯಿತು . ಈ ಹಳ್ಳಿಗಳ ಮಣ್ಣನ್ನು ಬದಲಿಸಲು ಇನ್ನೂ ಸಾವಿರ ಮಂಜುಗಳ ಅವಶ್ಯಕತೆಯಿದೆ ಎಂದು ಅಂದುಕೊಂಡೆ . ಅವಳ ಧೈರ್ಯಕ್ಕೆ ಒಂದು ದೊಡ್ಡ ಸಲಾಮು ಹಾಕಿದೆ . ದೇಶದಲ್ಲಿ ಎಷ್ಟೊಂದು ಬದಲಾವಣೆ ಆಗುತ್ತಿದ್ದರೂ ಹಳ್ಳಿಗಳಲ್ಲಿ ಇಂಥ ಸಮಸ್ಯೆಗಳು ಇನ್ನೂ ಬೇರು ಬಿಟ್ಟಿರುವದು ದುಃಖಕರ ಸಂಗತಿ ಎನಿಸಿತು. ನನ್ನ ಸಾಹಿತಿ ಗೆಳೆಯನೊಬ್ವನಿಗೆ ಅವಳ ಬಗ್ಗೆ ಕಥೆ ಬರೆಯಲು ಹೇಳಿದ್ದಕ್ಕೆ " ಇದೇನು ದೊಡ್ಡ ಘಟನೆಯಂತ ಕಥೆ ಬರೆಯುವದು , ಇಂಥ ಘಟನೆಗಳು ಸರ್ವೇ ಸಾಮಾನ್ಯ , ಯಾರು ಈ ಕಥೆಗಳನ್ನು ಓದುತ್ತಾರೆ " ಎಂದು ಅಂದಿದ್ದ . ಅವನು ಹೇಳಿದ್ದು ನಿಜ ಎನಿಸಿತು . ಇಂಥ ಸಾವಿರಾರು ಹೆಣ್ಣುಗಳು ತಮ್ಮ ಕಥೆಯನ್ನು ತಾವೇ ಬರೆದುಕೊಂಡು ಒಂದು ದೊಡ್ಡ ಗ್ರಂಥವನ್ನೇ ಸೃಷ್ಟಿಸಿದ್ದಾರೆ , ಆ ಪುಸ್ತಕದಲ್ಲಿ ಇವಳೂ ಒಂದು ಪುಟವಾಗಿ ಹೋಗಿರುವದು ಸತ್ಯ ಎಂದು ಅನಿಸಿತು.
ಯಾಕೋ ಗುರ್ಜಿಯನ್ನು ಭೇಟಿಯಾಗಲು ಮನಸು ಬರಲಿಲ್ಲ . ಅವಳು ಈ ಲೋಕದಲ್ಲಿ ಇಲ್ಲದ್ದು ಮಾತ್ರ ಖಚಿತವಾಗಿತ್ತು.
ಹಾಗಾದರೆ ನನಗೆ ಸ್ಕಾಟ್ಲೆಂಡಿನಲ್ಲಿ ಭೇಟಿಯಾಗಿ ಮಾತನಾಡಿದ್ದು ಯಾರು ಎಂಬುದು ಮಾತ್ರ ಯಕ್ಷಪ್ರಶ್ನೆಯೇ ಆಗಿತ್ತು . ಈ ವಿಷಯವನ್ನು ನನ್ನ ಹಳ್ಳಿಯ ಮಿತ್ರನೊಬ್ಬನಿಗೆ ಹೇಳಿದೆ . ಅವನು ಸುಸ್ತಾಗಿ ಹೋಗಿ ಅಂದ " ಏನಪ್ಪಾ ! ಅವಳ ಭೂತ ನೀನಿದ್ದ ಕಡೆಗೂ ಬಂದು ಬಿಟ್ಟಿತಾ? ಹುಷಾರಾಗಿರು, ಹೆಣ್ಣು ಭೂತಗಳು ತುಂಬಾ ಕೆಟ್ಟ " ಎಂದು ಭೂತಗಳಲ್ಲೂ ಲಿಂಗ ಭೇದವನ್ನು ತೋರಿಸಿದ್ದ. ಇವನ ನಂಬಿಕೆಗೆ ಬೆಂಕಿ ಹಾಕಾ ಎಂದೆಂದುಕೊಂಡು ಸುಮ್ಮನಾದೆ.
ವಿಷಯ ನಮ್ಮಣ್ಣನಿಗೂ ಗೊತ್ತಾಗಿ ದೇವರಿಗೆ ಒಂದು ದೊಡ್ಡ ಪೂಜೆಯನ್ನೂ ಮಾಡಿಸಿದ್ದ , ಮಂತ್ರಿತ ದಾರವನ್ನು ಕೈಯ್ಯಲ್ಲಿ ಕಟ್ಟಿಕೊಳ್ಳಲು ಹೇಳಿದ್ದ . ಹೆಂಡತಿ ತುಂಬಾ ಚಿಂತಿತಳಾಗಿದ್ದಳು . ನನಗೆ ಭೂತ ಬಡಿದಿರುವದು ಖಚಿತ ಎಂದು ಅಂದುಕೊಂಡಿದ್ದಳು . ಗುಣಪಡಿಸಲು ದೇವರಿಗೆ ಹತ್ತು ಸಾವಿರ ರೂಪಾಯಿಯನ್ನು ಹರಕೆಯ ರೂಪದದಲ್ಲಿ ಕೊಡುವದಾಗಿ ಬೇಡಿಕೊಂಡು ದೇವರಿಗೂ ಸಹ ಲಂಚವನ್ನು ಕೊಡಲು ಮುಂದಾಗಿದ್ದಳು .
ಸ್ಕಾಟ್ಲ್ಯಾಂಡಿಗೆ ವಾಪಸ್ ಬಂದಾದ ಮೇಲೆ ಈ ವಿಷಯ ನನ್ನ ಪರಿವಾರದ ಆಪ್ತ ಗೆಳೆಯರಿಗೂ ಗೊತ್ತಾಯಿತು . ಮಾನಸಿಕ ರೋಗ ತಜ್ಞನೊಬ್ಬ ಹೇಳಿದ ' ನನಗೆ ಆಡಿಯೋ ವಿಜುವಲ್ ಹಾಲುಸಿನೇಶನ್ (ಭ್ರಮೆ )' ಇದೆ ಎಂದು ಹಾಗು ಚಿಕಿತ್ಸೆ ಬೇಕಿದೆಯೆಂದು . ಫಿಸಿಷಿಯನ್ ಒಬ್ಬ ಮೆದುಳಿನ MRI ಕೂಡ ಮಾಡಿಸು ಎಂದ . ಇನ್ನೊಬ್ಬ ನನಗೆ 'ಸಿಕ್ಸ್ತ್ ಸೆನ್ಸ್' ಇದೆ ಎಂದು ಗೇಲಿಯನ್ನೂ ಮಾಡಿದ್ದ.
ಅವರವರು ಅವರವರ ಅನಿಸಿಕೆ ಕೊಡಲಿ ಬಿಡು ಎಂದು ಸುಮ್ಮನಾದೆ. ನನಗೆ ಗೊತ್ತಿತ್ತು ನನಗೇನು ಆಗಿಲ್ಲವೆಂದು. ಭೂತ ಪ್ರೇತಗಳಲ್ಲಿ ನನಗೆ ಎಳ್ಳಷ್ಟೂ ನಂಬಿಕೆ ಇಲ್ಲ .
ಹಾಗಾದರೆ ;
ಅವಳ್ಯಾರು ? ವೊ ಕೌನ್ ಥಿ ?
ನನ್ನ ಅಂತರಂಗದಲ್ಲಿ ಸುಪ್ತವಾಗಿ ಅಡಗಿದ್ದ ಅವಳ ಬಗೆಗಿನ ಭಾವನೆಗಳು ಅವಳ ರೂಪವಾಗಿ ಕಾಣಿಸಿಕೊಂಡು ನನಗೆ ಅವಳ ಕಥೆಯನ್ನು ಹೇಳಿದವು ಎಂದು ನಾನು ಭಾವಿಸಿದ್ದೇನೆ.
ನೀವೇನೆನ್ನುತ್ತೀರಿ? 
ನನಗೆ ಅವಳು ಮತ್ತೆ ಕಂಡಿಲ್ಲ, ಕಂಡರೆ ಮನಬಿಚ್ಚಿ ಇನ್ನಷ್ಟು ಮಾತನಾಡಬೇಕು ಎಂದು ಅನಿಸುತ್ತದೆ 

ಮುಗಿಯಿತು (ಕಥೆಯಲ್ಲಿ ಮಾತ್ರ )

~ ಶಿವ ಮೇಟಿ

ಬಾಲ್ಯದ ನೆನಪುಗಳು – ಶ್ರೀವತ್ಸ ದೇಸಾಯಿ ಹಾಗೂ ಗೌರಿ ಪ್ರಸನ್ನ

ಪ್ರಿಯ ಓದುಗರೇ, ಕೆಳಗಿನ ಎರಡು ಲೇಖನಗಳು ‘ಬಾಲ್ಯದ ನೆನಪುಗಳು’ ಸರಣಿಯ ಕೊನೆಯ ಲೇಖನಗಳು. ಗೌರಿ ಪ್ರಸನ್ನ ಅವರು ಪ್ರೀತಿಯಿಂದ ತಮ್ಮ ಅಜ್ಜಿಯನ್ನು (ಓಣ್ಯಾಯಿ) ನೆನಪಿಸಿಕೊಂಡರೆ, ದೇಸಾಯಿಯವರು ತಮ್ಮ ಬಾಲ್ಯವನ್ನು ಕಳೆದ ಊರಿನ ಬಗ್ಗೆ ಬರೆಯುತ್ತಾರೆ. ಓದಿ ನನ್ನಂತೆ ನಿಮಗೂ ಅಜ್ಜಿಯ, ಊರಿನ ನೆನಪಾಗದಿದ್ದರೆ ಹೇಳಿ. – ಎಲ್ಲೆನ್ ಗುಡೂರ್ (ಸಂ.)

ನನ್ನ ಬಾಲ್ಯದ ದಿನಗಳು – ಶ್ರೀವತ್ಸ ದೇಸಾಯಿ

ಸಾಮಾನ್ಯವಾಗಿ childhood ಅಂದರೆ 1 ರಿಂದ 12ರ ವಯಸ್ಸಿನ ವರೆಗಿನ ವರ್ಷಗಳು. ಆ ಸಮಯವನ್ನು ನಾನು ನೀಲಗಿರಿಯ ಮಧ್ಯದಲ್ಲಿ ರಮಣೀಯ ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಪವಡಿಸಿದ್ದ ಊಟಿ ಅಥವಾ ಉದಕಮಂಡಲ ಎನ್ನುವ ಊರಲ್ಲಿ ಕಳೆದೆ. ಅದು ನನ್ನ ಜೀವನದ ಅತ್ಯಂತ ಸಂತೋಷದ ಕಾಲ ಎಂದರೆ ಉತ್ಪ್ರೇಕ್ಷೆಯಾಗಲಾರದು. ಬಹುತೇಕ ಎಲ್ಲರಿಗೂ ಬಾಲ್ಯದ ದಿನಗಳೆಂದರೆ ಹಾಗೆಯೇ ’ಹ್ಯಾಪ್ಪಿ ಡೇಸ್’ ಅಲ್ಲವೆ? ಮೊದಲು ನೀಲಗಿರಿ ಜಿಲ್ಲೆ ಮೈಸೂರು ಅರಸರ ಕಾಲದಿಂದಲೂ ಹಳೆಯ ಮೈಸೂರು ರಾಜ್ಯದಲ್ಲಿತ್ತು. 1956ರಲ್ಲಿ ಭಾಷಾವಾರು ಪ್ರದೇಶಗಳ ವಿಂಗಡನೆಯಾದ ನಂತರ ಅದು ತಮಿಳುನಾಡಿಗೆ ಸೇರಿತು. ಅದಕ್ಕೂ ಮೊದಲು ಕನ್ನಡ ಮತ್ತು ತಮಿಳು ಎರಡೂ ಭಾಷೆಗಳನ್ನು ಜನರು ಆಡಿಕೊಳ್ಳುತ್ತಿದ್ದರೂ ಕ್ರಮೇಣ ತಮಿಳಿನ ಪ್ರಭಾವ ಹೆಚ್ಚಾಗಿ ನಾನು ಶಾಲೆಗೆ ಹೋಗುವಾಗ ತಮಿಳೇ ಹೆಚ್ಚು ಬಳಕೆಯಲ್ಲಿತ್ತು. ನಾನು ಹುಟ್ಟಿದ್ದು ಧಾರವಾಡದಲ್ಲಿ. ಆದರೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಮಯದಲ್ಲಿ ನಮ್ಮ ತಂದೆ ಊಟಿಯಲ್ಲಿ ಕೇಂದ್ರ ಸರಕಾರದ ಎಪಿಗ್ರಾಫಿ ಮತ್ತು ಆರ್ಕಿಯಾಲಜಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಊಟಿಯಲ್ಲಿ ಬೆಳೆದೆ. ಮನೆಯಲ್ಲಿ ಕನ್ನಡ ಮಾತೃಭಾಷೆ. ಹೊರಗಡೆ ತಮಿಳು ಆಡು ಮಾತು. ಮೊದಮೊದಲು ನಮಗೆ ಇದು ಗೊಂದಲವನ್ನುಂಟು ಮಾಡಿದರೂ ದಿನ ಕಳೆದಂತೆ ಸರಿಹೋಯಿತು. ವಿಚಿತ್ರವೆಂದರೆ ಮತ್ತೆ ನನ್ನ 12ನೆಯ ವಯಸ್ಸಿನಲ್ಲಿ ಧಾರವಾಡಕ್ಕೆ ವಾಪಸ್ ಬಂದಾಗ ಈ ಗೊಂದಲ ವಿರುದ್ಧ ದಿಕ್ಕಿನಲ್ಲಿ ಮರುಕಳಿಸಿತು.

ಹೊಳಪಿನ ಕಣ್ಣುಗಳು!

ನನ್ನ ನಾಲ್ಕನೆಯ ವಯಸ್ಸಿನಲ್ಲಿಯೇ ನಾನು ಒಂದನೆಯ ಕ್ಲಾಸಿಗೆ ಸೇರಿದ್ದು ನಮ್ಮ ಮನೆಯಿಂದ ಒಂದೇ ಫರ್ಲಾಂಗ್ ದೂರದಲ್ಲಿದ್ದ ಜೆಲ್ ಮೆಮೋರಿಯಲ್ ಪ್ರೈಮರಿ ಸ್ಕೂಲ್ ನಲ್ಲಿ. ಕೆಲವೊಂದು ಅಪ್ರಿಯ ಅಥವಾ ಅಹಿತಕರ ಅನುಭವಗಳು ಎಳೆಯ ಮನಸ್ಸಿನ ಮೇಲೆ ವಿಪರೀತ ಭೀತಿಯನ್ನುಂಟು ಮಾಡುವ ಸಾಧ್ಯತೆಯಿದೆ. ಮನೆಯ ಅಕ್ಕಪಕ್ಕದಲ್ಲಿಯ ನಾಯಿಗಳಿಗೆ ನಾನು ಹೆದರಿದ್ದೆನೋ ಏನೋ. ಆಗ ತಾನೆ ಸ್ವಾತಂತ್ರ್ಯ ಸಿಕ್ಕು ಕೆಲವರ್ಷಗಳಷ್ಟೇ ಆಗಿತ್ತು. ತಮಿಳು ನಾಡಿನ ಸುಪ್ರಸಿದ್ಧ ದೇಶಭಕ್ತ ಮತ್ತು  ಮಹಾಕವಿ ಸುಬ್ರಹ್ಮಣ್ಯ ಭಾರತಿ ಅವರ ಸುಪ್ರಸಿದ್ಧ ಹಾಡು ”ಒಳಿಪಡೈತ್ತ ಕಣ್ಣಿನಾಯ್ ವಾ ವಾ ವಾ” (ಪ್ರಕಾಶಯುಕ್ತ ಕಣ್ಣಿನವನಿಗೆ ಸ್ವಾಗತ) ಎನ್ನುವ ಹಾಡನ್ನು ನಾವು ಶಾಲೆಯಲ್ಲಿ ವಾರಕ್ಕೊಮ್ಮೆ ಸಾಮೂಹಿಕವಾಗಿ ಹಾಡುತ್ತಿದ್ದೆವು. ನನ್ನ ಭಾಷಾ ಗೊಂದಲದ ಕಾರಣ ಅದರಲ್ಲಿಯ ’ನಾಯ್’ ಎನ್ನುವ ಶಬ್ದ (ಅದರರ್ಥ ತಮಿಳಿನಲ್ಲಿ ”ಉಳ್ಳವನು’ ಅಂತ) ಬಂದ ಕೂಡಲೆ ಒಂದು ಹೊಳೆಯುತ್ತಿರುವ ದೊಡ್ಡ ಕಣ್ಣಿನ ಕರಿ ಬೇಟೆ ನಾಯಿ ಬಂದು ಕೂತ ಚಿತ್ರ ನನ್ನ ಕಣ್ಣ ಮುಂದೆ ಬಂದು ಹೆದರಿಕೆಯಾಗುತ್ತಿತ್ತು! ರಾತ್ರಿಯಲ್ಲಿ ಸಹ ನನ್ನ ಕನಸಿನಲ್ಲಿ ಬಂದು ಹೆದರಿಸುತ್ತಿತ್ತು. ಸುಪ್ರಸಿದ್ಧ ಗಾಯಕಿ ಎಂ ಎಸ್ ಸುಬ್ಬುಲಕ್ಷ್ಮಿ ಈ ಹಾಡನ್ನು ತಮ್ಮ ಸುಶ್ರಾವ್ಯ ಕಂಠದಲ್ಲಿ ಹಾಡಿ ಅಜರಾಮರ ಮಾಡಿದ್ದಾರೆ (https://youtu.be/Jkg0ng6aEs4).  ಆ ಹಾಡಿನಿಂದಲೋ ಏನೋ, ಮುಂದೆ ನಾನು ಕಾಲೇಜಿನಲ್ಲಿದ್ದಾಗ ಶೆರ್ಲಾಕ್ಸ್ ಹೋಮ್ಸ್ ಕಥೆಯನ್ನೋದಿದಾಗ ಕತ್ತಲಲ್ಲಿ ಮಿನುಗುವ ರಂಜಕ ಲೇಪಿತ ಮುಖದ ಆ ನಾಯಿಯ ರೂಪ (ಹೌಂಡ್ ಆಫ್ ಬ್ಯಾಸ್ಕರ್ವಿಲ್ಸ್) ನನ್ನ ಮನಸ್ಸಿನ ಮೇಲೆ ವಿಪರೀತ ಪರಿಣಾಮವನ್ನುಂಟುಮಾಡಿ ಮಧ್ಯರಾತ್ರಿಯಲ್ಲಿ ಹಾಸಿಗೆಯಿಂದ ಬಡಿದೆಬ್ಬಿಸುತ್ತಿತ್ತು!

ಮುಸಲ ಧಾರ ಮಳೆ ಮತ್ತು ಚಿಲ್ ಬ್ಲೇನ್ಸ್!

ನಮ್ಮದು ಮಧ್ಯಮವರ್ಗದ ಕುಟುಂಬವಾಗಿತ್ತು. ನಮ್ಮ ತಂದೆಗೆ ನಾವು ಐದೂ ಗಂಡುಮಕ್ಕಳು. ಕೊನೆಯವನಾದ ನಾನು ಮತ್ತು ನನ್ನ ಇಬ್ಬರು ಅಣ್ಣಂದಿರಷ್ಟೇ ಊಟಿಯಲ್ಲಿದ್ದು ಕಲಿಯುತ್ತಿದ್ದೆವು. ಉಳಿದಿಬ್ಬರು ಹಿರಿಯರು ಉಚ್ಚ ಶಿಕ್ಷಣಕ್ಕೆ ಧಾರವಾಡ – ಪುಣೆಗಳಲ್ಲಿ ಉಳಿದಿದ್ದರು. ನಾವು ಅತಿ ಅನುಕೂಲಸ್ಥರಾಗಿರದಿದ್ದರೂ ಬಡತನವಿರಲಿಲ್ಲ. ಚಳಿ ಹೆಚ್ಚೆಂದು ಒಂದು ಉಣ್ಣೆ ಕೋಟನ್ನು ಹಾಕಿಕೊಂಡೇ ಶಾಲೆಗೆ ಬರಿಗಾಲಲ್ಲೇ ನಡೆದುಕೊಂಡೇ ಹೋಗುತ್ತಿದ್ದೆವು. ನಾವು ಹೋಗುತ್ತಿದ್ದ ಪ್ರಾಥಮಿಕ ಶಾಲೆಯಂತೆಯೇ ಮಾಧ್ಯಮಿಕ ಶಾಲೆ ಸೇಂಟ್ ಜೋಸೆಫ್ ಹೈಸ್ಕೂಲ್ ಸಹ ಕ್ರಿಸ್ತ ಮತದವರ ಮಿಷನ್ ಶಾಲೆಯಾಗಿತ್ತು. ಅದು ಫರ್ನ್ ಹಿಲ್ಲ್ ನಲ್ಲಿದ್ದ ನಮ್ಮ ಮನೆಯಿಂದ ಎರಡು ಮೈಲಿ ದೂರದಲ್ಲಿತ್ತು. ಛಳಿ-ಮಳೆ-ಬಿಸಿಲಲ್ಲಿ ನಡೆದುಕೊಂದು ಹೋಗುವ ರಸ್ತೆ ಊರ ಮಧ್ಯದ ಕೆರೆಯ ದಂಡೆಗುಂಟ ಹಾಯ್ದು ಹೋಗುತ್ತಿತ್ತು. ಊಟಿಯ ಮನ್ಸೂನ್ ಮಳೆಯ ಬಗ್ಗೆ ಹೇಳಲೇ ಬೇಕಿಲ್ಲ.

 ’ಶ್ರಾವಣದ ಕೊಳೆ’ ಎನ್ನುವ ಲೇಖನದಲ್ಲಿ ಎನ್ಕೆ ಕುಲಕರ್ಣಿಯವರು ಮಲೆನಾಡಿನ ಅಂಚಿನಲ್ಲಿದ್ದ ಧಾರವಾಡದ ಮಳೆಯನ್ನು ’ಜಿಟಿ ಜಿಟಿ, ಪಿಸಿ ಪಿಸಿ ಮಳ” ಅಂತ ವರ್ಣಿಸುತ್ತಾರೆ. ಇಂಗ್ಲಿಷ್ನಲ್ಲಿ ಜೋರಾಗಿ ಮಳೆ ಬಂದರೆ ’It rains cats and dog” ಅನ್ನುವ ರೂಢಿ. ಯಾರ್ಕ್ ಶೈರಿನಲ್ಲಿ ಅದಕ್ಕೆ ’’it rained stair rods’ ಅನ್ನುವ ರೂಪಕ ಕೊಡುತ್ತಾರೆ. ಊಟಿಯಲ್ಲಿ ಮಾತ್ರ ನಿಜವಾಗಿಯೂ ಮುಸಲ ಧಾರೆ ಮಳೆ! ಗಾಳಿ ಬೀಸಿದರೆ ೪೫ ಡಿಗ್ರಿಯಲ್ಲಿ ಬಂದು ಅಪ್ಪಳಿಸುತ್ತಿದ್ದ ಆ ಮಳೆಯ ನೀರು ಮನೆಯೊಳಗೆ ಬರದಿರಲು ನಮ್ಮ ಮನೆಯ ತಲಬಾಗಿಲಿನ ಹೊರಗೆ ಭದ್ರತೆಗಾಗಿ ಎರಡನೆಯ ತಗಡಿನ ಬಾಗಿಲು ಕಟ್ಟಿತ್ತು. ರಾತ್ರಿ ರಪ ರಪ ಅಂತ ಮಳೆ ನಿಜವಾಗಿಯೂ ಒನಕೆ (ಮುಸಲ್)ಯಿಂದ ಕುಟ್ಟಿದಂತೆ ಬಂದು ಅಪ್ಪಳಿಸುವುದು. ನನಗೆ ಮಲಗಲೂ ಅಂಜಿಕೆಯಾಗುತ್ತಿತ್ತು. ನರ್ಸರಿ ರೈಮ್ ದ Wee Willie Winkie ಬಂದನೇ ಅಂತ ಮತ್ತೆ ಮುಸುಕೆಳೆದುಕೊಂಡು ನಿದ್ದೆ ಹೋಗುತ್ತಿದ್ದೆ! ಅದರ ಒಂದು ಸಾಲು: Are the children in their bed, for it’s past ten o’clock? ಯಾವಾಗಲೂ ಆರ್ದ್ರ ಹವೆ, ಜೊತೆಗೆ ರಾತ್ರಿ ಹುಲ್ಲಿನಮೇಲೆ frost ಬೀಳುವ ಡಿಸೆಂಬರ್-ಜಾನೇವರಿ ತಿಂಗಳಿನ ಚಳಿಗಾಲದಲ್ಲಿ ಶಾಲೆಯಿಂದ ಮನೆಗೆ ಬರುವಷ್ಟರಲ್ಲಿ ರಕ್ಷಣೆಯಿರದ ನಮ್ಮಕಾಲಿನ ಬೆರಳುಗಳೆಲ್ಲ ಟೊಮೆಟೊದಂತೆ ಬಾತು ವಿಪರೀತ ತುರಿಕೆಯಾಗುತ್ತಿತ್ತು. ಇದು ಪ್ರತಿ ವರ್ಷ ಚಳಿಗಾಲದ ಅನುಭವ. ನಾವು ಚಿಕ್ಕ ಮಕ್ಕಳು. ನಮ್ಮ ಬವಣೆ ನೋಡಿ ನಮ್ಮ ಅವ್ವ – ಪಾಪ ಅವಳಿಗೇನು ಗೊತ್ತು, ಅದು ಏನು ಮತ್ತು ಯಾಕೆ ಅಂತ? – ಹಿತ್ತಾಳೆ ಪರಾತದಲ್ಲಿ ಬಿಸಿನೀರು ಉಪ್ಪು ಹಾಕಿ ಕಾಲುಗಳನ್ನು ಮುಳಿಗಿಸಿ ಕೂತು ಕೊಳ್ಳಲು ಹೇಳುವಳು. ಅದರಿಂದ ತುರಿಕೆಯೇನೂ ಶಮನವಾಗದಿದ್ದರೂ ಒಂದು ಕಾಲು ಗಂಟೆ ಅಣ್ಣ – ತಮ್ಮ ಶಾಲೆಯ ವಿಷಯ ಹರಟಲು ಅನುವಾಗುತ್ತಿತ್ತಲ್ಲ, ಮತ್ತು ತಾಯಿಯ ಪ್ರೀತಿ, ಅದೇ ಸಾಕು. ಮುಂದೆ ಒಂದು ದಶಕದ ನಂತರ ಅಲ್ಲಿಗಿಂತ ಹೆಚ್ಚು ಬೆಚ್ಚಗಿನ ಧಾರವಾಡಕ್ಕೆ ಬಂದ ನಂತರ ಆ ’ಬೇನೆ’ ಪೂರ್ತಿ ಹೋಗಿಯೇ ಬಿಟ್ಟಿತ್ತು – ಈ ದೇಶಕ್ಕೆ ಬರುವ ವರೆಗೆ! ಇಲ್ಲಿಗೆ (ಇಂಗ್ಲೆಂಡಿಗೆ) ಬಂದ ಹೊಸತರಲ್ಲಿ ನಮಗೆ ಕೊಟ್ಟ ಆಸ್ಪತ್ರೆಯೆ ಮನೆಯಲ್ಲಿ ಸರಿಯಾದ ಸೆಂಟ್ರಲ್ ಹೀಟಿಂಗ್ ಇರಲಿಲ್ಲ. ’ಟೆರೇಸ್ ಹೌಸಿನ’ ಅಟ್ಟದ ಕೆಳಗಿನ ಲೌಂಜಿನಲ್ಲಷ್ಟೇ ಒಂದು ಗ್ಯಾಸ್ ಹೀಟರ್. ಪೂರ್ತಿ ಗೋಡೆಯವರೆಗೆ ಸಹ ಚಾಚದ ಕಿರಿದಾದ ಕಾರ್ಪೆಟ್ಟು ಕೋಣೆಯ ಮಧ್ಯದಲ್ಲಿ. ಮಲಗುವ ಕೋಣೆಯಂತೂ ಐಸ್ ಬಾಕ್ಸ್! ಒಂದೇ ವಾರದಲ್ಲಿ ನನ್ನ ಊಟಿಯ ’ಟೊಮೇಟೋ ಪಾದಗಳು’ ಮತ್ತೆ ಹುಟ್ಟಿಬಂದವು! ಡಾಕ್ಟರ ಕಡೆಗೆ ಹೋದಾಗಲೇ ತಿಳಿದಿದ್ದು ನಾವು ಪುಸ್ತಕದಲ್ಲಿ ಓದಿದ್ದರೂ ಆದರೆ ನಮಗೆ ಕಲ್ಪಿಸಿ ಕೊಳ್ಳಲಾಗದ ’ಚಳಿ ಕಜ್ಜಿ” (chilblains) ಎಂದು ಅದಕ್ಕೆ ಕರೆಯುತ್ತಾರೆ ಅಂತ. ಅಂದರೆ ೨೫ ವರ್ಷಗಳ ನಂತರ ನನಗೇ retrospective diagnosis ಸಿಕ್ಕಿತ್ತು! ಕೆಲವರಷ್ಟೇ ಈ ’ದೋಷಕ್ಕೆ’ ಈಡಾಗುತ್ತಾರೆ ಅಂತ ಆಮೇಲೆ ತಿಳಿಯಿತು. ಚಳಿ ಮತ್ತು ತೇವಕ್ಕೆ ಒಡ್ಡಿದ ತುದಿ ಬೊಟ್ಟಿನ ರಕ್ತನಾಳಗಳ ಆಕುಂಚನದಿಂದ ಅವುಗಳು ಉಬ್ಬಿ ಹಾಗಾಗುತ್ತದೆ ಅಂತ. ಪಾಪ, ಅವ್ವನಿಗೆ ಆ ಜ್ಞಾನವಿರಲಿಲ್ಲವಲ್ಲ? ಯಾರು ತಿಳಿಹೇಳಬಹುದಿತ್ತು?

ಮರದ ಮೇಲೊಂದು ತಿತ್ತಿರಿ!

ಕಡುಬೇಸಿಗೆಯನ್ನು ತಾಳಲಾರದೆ ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ತಂಪು ಆದರೂ ಆಹ್ಲಾದಕರ ಹವೆಯನ್ನು ಹುಡುಕುತ್ತ ಭಾರತದಲ್ಲಿ ಬಿಡಾರ ಬಿಟ್ಟ ಬ್ರಿಟಿಷರು ಉತ್ತರದಲ್ಲಿದ್ದರೆ ಸಿಮ್ಲಾ, ದಕ್ಷೀಣದಲ್ಲಿದ್ದವರು ಊಟಿಗೆ ರಜೆಗೆ ಬರುತ್ತಿದ್ದರು. ಅದಕ್ಕೆ ‘going to the hills’ ಅನ್ನುವ ರೂಢಿ. ತದನಂತರ ಅದೇ ತರಹ ನಿವೃತ್ತ ಶಾಲಾ ಶಿಕ್ಷಕರಾಗಿದ್ದ ನನ್ನ ಅಜ್ಜ ಹಲವಾರು ಸಲ ಧಾರವಾಡದಿಂದ ಊಟಿಗೆ ನಮ್ಮ ಮನೆಗೆ ಬಂದು ಕೆಲ ತಿಂಗಳಿದ್ದು ಮರಳುತ್ತಿದ್ದರು. ನಮ್ಮ ಮನೆಗೆ ಬಂದಾಗ ಪ್ರತಿದಿನ ಬೆಳಿಗ್ಗೆ ನಾವು ಮೂವರು ಅಣ್ಣತಮ್ಮಂದಿರನ್ನು ತಮ್ಮ ಹತ್ತಿರ ಕೂಡ್ರಿಸಿಕೊಂಡು ಉಪನಿಷತ್ತುಗಳ ಶ್ಲೋಕಗಳನ್ನು ಮತ್ತು ಸಂಸ್ಕೃತವನ್ನು ಹೇಳಿಕೊಡುತ್ತಿದ್ದರು.  ಉಪನಿಷತ್: ಉಪ(ಹತ್ತಿರ) + ನಿ(ಶ್ರದ್ಧೆಯಿಂದ) + ಸತ್(ಕುಳಿತು) = ಉಪನಿಷತ್.  ಅದರಲ್ಲಿ ಈಶಾವಾಸ್ಯ, ತೈತ್ತಿರೇಯ ಉಪನಿಷತ್ತುಗಳ ಹಲವಾರು ಶ್ಲೋಕಗಳು ನೆನಪಿನಲ್ಲುಳಿದಿವೆ. ಆಗಲೇ ಬಹುಭಾಷಾವಿಶಾರದರಾಗಿದ್ದ ಅವರಿಗೆ ಇನ್ನು ತಮಿಳು ಭಾಷೆಯನ್ನು ಕಲಿಯುವ ಉತ್ಸಾಹ.  ನಾವು ಅವರಿಗೆ ತಮಿಳು ಓದಿ ಅವರು ಕಲಿಯಲು ಸಹಾಯ ಮಾಡುತ್ತಿದ್ದೆವು. ಆಗ ’ಕಲ್ಕಿ’ ಪತ್ರಿಕೆಯಲ್ಲಿ ಚಕ್ರವರ್ತಿ ರಾಜಗೋಪಾಲಾಚಾರಿಯವರ ರಾಮಾಯಣ ಧಾರಾವಾಹಿಯಾಗಿ ತಮಿಳಿನಲ್ಲಿ ಬರುತ್ತಿತ್ತು. ಇನ್ನುಳಿದ ಸಮಯದಲ್ಲಿ ಆಟ, ಪಾಠಗಳಲ್ಲಿ ನಮ್ಮ ರಜೆಯ ಸ್ವಚ್ಚಂದ ದಿನಗಳನ್ನು ಕಳೆಯುತ್ತಿದ್ದೆವು. ಮನೆಯ ತೋಟದಲ್ಲೇ ಕಾಯಿ ಪಲ್ಯೆ, ತರಕಾರಿ, ವಿವಿಧ ಗಡ್ಡೆಗಳನ್ನು ಬೆಳೆಯುತ್ತಿದ್ದೆವು. ನಮಗೆ ’ಗಿಡಮಂಗನ ಆಟ’ ಆಡಲು ಅನುಕೂಲವಾಗುವಂಥ ಅತಿ ಎತ್ತರವಲ್ಲದ ನಾಲ್ಕೈದು ಪೇರ್ (pear) ಹಣ್ಣಿನ ಮರಗಳು ಸಹ ಇದ್ದವು.

ಕ್ರಿಸ್ತ ಪಾದ್ರಿಗಳು ಕಲಿಸುತ್ತಿದ್ದ ಶಾಲೆಯಲ್ಲಿ ಕ್ರಿಸ್ಮಸ್ ಹಬ್ಬ ಜೋರಾಗಿ ಆಚರಿಸಲಾಗುತ್ತಿತ್ತು. ಚರ್ಚಿನಲ್ಲಿ ಕ್ರಿಸ್ಮಸ್ ಕ್ಯಾರಲ್ -Ten days of Christmas ಹಾಡುತ್ತಿದ್ದುದು ನಮಗೆ ಬಾಯಿಪಾಠವಾಗಿತ್ತು. On the first day of Christmas my true love sent to me a partridge in a pear tree ಎಂದು ಅದರ ಮೊದಲ ಸಾಲು. ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಮೊದಲ ದಿನ ಪ್ರೀತಿಯಿಂದ ಬಂದ ಉಡುಗೊರೆ ಪೇರ್ ಮರದಲ್ಲಿಯ ಒಂದು ತಿತ್ತಿರಿ (partridge) ಹಕ್ಕಿ ಅಂತ ಅದರ ಅರ್ಥ. ಪರ್ವತ ಪ್ರದೇಶದ ಊಟಿಯಲ್ಲಿ ಡಿಸೆಂಬರಿನಲ್ಲಿ ಸ್ವಲ್ಪಬೇಗನೆ ಕತ್ತಲೆಯಾಗುತ್ತಿತ್ತು, ಆದರೂ ಏಳೂ ವರೆಗೆ ರಾತ್ರಿಯ ಊಟ. ಅದೊಂದು ದಿನ ರಾತ್ರಿ ಊಟ ಇನ್ನೂ ಸಿದ್ಧವಾಗಿರಲಿಲ್ಲ. ನಮ್ಮ ದೊಡ್ಡ ಅಣ್ಣ ಯಾವುದೋ ವಿಷಯಕ್ಕಾಗಿ ಕೋಪ ಮಾಡಿಕೊಂಡು ಶಟಕೊಂಡು ”’ನಾನು ಮನೆ ಬಿಟ್ಟು ಹೋಗುತ್ತೇನೆ” ಅನ್ನುತ್ತ ಕಾಲು ಅಪ್ಪಳಿಸುತ್ತ ಹೊರಗೆ ಕತ್ತಲೆಯಿದ್ದರೂ ಬಾಗಿಲು ತೆರೆದು ಮನೆಯಿಂದ ಹೊರಗೆ ಓಡಿ ಹೋದ. ಅದೇನು ಮೊದಲ ಸಲವಲ್ಲ. ಮೊದಲೂ ಹೀಗೆಯೇ ಹೆದರಿಸಿದ್ದ! ಹತ್ತು-ಹದಿನೈದು ನಿಮಿಷಗಳಾದರೂ ಪತ್ತೆಯಿಲ್ಲ. ಹೊರಗೆ ದೀಪವಿಲ್ಲ, ಆಗಿನಕಾಲದಲ್ಲಿ. ಹುಳ, ಹುಪ್ಪಡಿ, ಹತ್ತಿರದ ಕಾಡು ಹುಲಿ-ಚಿರ್ಚುಗಳಂಥ ಕಾಡುಪ್ರಾಣಿಗಳ ಹೆದರಿಕೆ ಬೇರೆ. ಊಟ ಸಹ ಆಗಿಲ್ಲ, ತಾಯಿಗೆ ಸಂಕಟ. ನಾವಿಬ್ಬರೂ ಆತನ ಹೆಸರನ್ನು ಕೂಗುತ್ತ ಎರಡು-ಮೂರು ಸಲ ಮನೆಯ ಸುತ್ತ ಚಕ್ಕರ್ ಹೊಡೆದರೂ ಆತನ ಸುಳಿವಿಲ್ಲ, ಯಾವ ಸದ್ದೂ ಇಲ್ಲ. ನಮಗೆಲ್ಲ ಚಿಂತೆ. ಅವ್ವನಿಗ ತಳಮಳ. ನಾವಿಬ್ಬರು ತಮ್ಮಂದಿರು ಆತನನ್ನು ಹುಡುಕುತ್ತ ಹಿಂದಿನ ತೋಟದಲ್ಲಿ ನಿಂತು ‘ಅವನಿಲ್ಲಿಲ್ಲವಲ್ಲ’ ಅಂತ ನಾವು ಮಾತಾಡಿಕೊಂಡಾಗ ಪಕ್ಕದ ಮನೆಯ ನಾಯಿ ಬೊಗಳಲು ನಾವು ಹೆದರಿ ಓಡಲು ಶುರು ಮಾಡಿದೆವು. ಪೇರ್ ಮರದ ಕಡೆಯಿಂದ ಯಾರೋ ಕಿಸಕ್ಕನೆ ನಕ್ಕಂತೆ ಸದ್ದು. ಸ್ವಲ್ಪ ಸಿಟ್ಟು ಇಳಿದು ನಮ್ಮ ಪೇಚಾಟ ನೋಡಿ ತಡೆದುಕೊಳ್ಳಲಾರದೆ ಈ ತಮಾಷೆ ನೋಡಿ ಅಣ್ಣನಿಗೆ ನಗು!  ಅವನನ್ನು ಪುಸಲಾಯಿಸಿ ಒಳಗೆ ಕರೆದುಕೊಂದು ಬಂದ ಮೇಲೆಯೇ ಜೀವ ಬಂದಿತ್ತು ನಮ್ಮ ತಾಯಿಗೆ. ಆತನನ್ನು ಅಪ್ಪಿಕೊಂಡು ಕಣ್ಣೀರಿಟ್ಟು ಹೊಟ್ಟೆ ತುಂಬ ಉಣಿಸಿದ ದೃಶ್ಯಗಳನ್ನು (ಹೀಗೆ ಎರಡು ಮೂರು ಸಲ ಆಗಿತ್ತು!) ನಾವು ಎಂದೂ ಮರೆತಿಲ್ಲ. ಅದನ್ನು ಕಥೆಯಾಗಿ ನಮ್ಮ ಮಕ್ಕಳಿಗೆ, ಆತನ ಮೊಮ್ಮಕ್ಕಳಿಗೆ ಸಹ ಹೇಳಿ ಹಂಚಿಕೊಳ್ಳುತ್ತ ದಂತ ಕಥೆಯ ಮಟ್ಟಕ್ಕೆ ಏರಿಸಿಬಿಟ್ಟಿದ್ದೆವು! ಪೇರ್ ಮರದದಲ್ಲಿದ್ದುದು ಒಬ್ಬ ಹುಡುಗ ಅಲ್ಲದೆ ತಿತ್ತಿರಿ ಪಕ್ಷಿಯಲ್ಲ (partridge) ಅಂತ ಪ್ರತಿ ಕ್ರಿಸ್ಮಸ್ಸಿನಲ್ಲಿ ನೆನಪಾಗುವುದು. ಕಾಕತಾಳಿಯವೆಂಬಂತೆ ತೈತ್ತಿರೀಯ ಉಪನಿಷತ್ತಿಗೆ ಅ ಹೆಸರುಬಂದದ್ದೂ ತಿತ್ತಿರಿಯಿಂದಲೇ ಎನ್ನುವ ಕಥೆಯನ್ನು ಅಜ್ಜನಿಂದ ಉಪನಿಷತ್ ಪಾಠದಲ್ಲಿ ಕೇಳಿದಂತೆ ನೆನಪು!

ಹೊಲಿ ನಿನ್ನ ತುಟಿಗಳನು!

ನಮ್ಮ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಣ (co-educational) ಇತ್ತು.  ಜೆಲ್ ಮೆಮೋರಿಯಲ್ ಹುಡುಗಿಯರ ಶಾಲೆಯಾಗಿದ್ದರೂ ಮೂರನೆಯ ಕ್ಲಾಸಿನ ವರೆಗೆ ಗಂಡು ಹುಡುಗರಿಗೂ ಪ್ರವೇಶವಿತ್ತು. ಆದರೆ ನಾವು ಹುಡುಗರು ನಿಜಕ್ಕೂ ’ಮೈನಾರಿಟಿ”ಯಲ್ಲಿದ್ದೆವು. 20 ಜನರ ನನ್ನ ವರ್ಗದಲ್ಲಿ ನಾವು ಐದೇ ಹುಡುಗರು. ಶಾಲೆಯಲ್ಲಿ ಪಠ್ಯದ ಜೊತೆಗೆ ಹೊಲಿಗೆ-ಕಸೂತಿಯನ್ನೂ ಕಡ್ಡಾಯವಾಗಿ ಹೇಳಿಕೊಡುತ್ತಿದ್ದರು. ಮುಂದೆ ನಾನು ಕಣ್ಣಿನ ವೈದ್ಯನಾದಾಗ ಇದರ ಲಾಭ ಪಡೆದಿರಬೇಕು. ಯಾಕಂದರೆ ನೇತ್ರತಜ್ಞನಾಗಿ ವೃತ್ತಿ ಆರಂಭಿಸಿದ ಮೇಲೆ ಕಣ್ಣು, ಮತ್ತು ಮುಖದ ಮೇಲೆ ಆಪರೇಷನ್ ಮಾಡುವಾಗ ಪುಟ್ಟ ಪುಟ್ಟ ಸೂಕ್ಷ್ಮ ಹೊಲಿಗೆ (surgical sutures) ಹಾಕಲು ಬಾಲ್ಯದ ಪಾಠ ಸಹಾಯವಾಗಿರಬೇಕು ಅನಿಸುತ್ತದೆ!

ಆಶ್ಚರ್ಯವೆಂದರೆ ಹೊಲಿಗೆಯಲ್ಲಿ ಅವರೆಲ್ಲ ಹುಡುಗಿಯರಿಗಿಂತ ನನಗೇ ಹೆಚ್ಚು ಗುಣಗಳು ಬರುತ್ತಿದ್ದವು. ಅವೆರಡೂ ವರ್ಷ ನನಗೇ ಎಂಬ್ರಾಯ್ಡರಿಯಲ್ಲಿ ಸಹ ಮೊದಲ ಸ್ಥಾನ! ನಾನು ಹೇಳುವ ಉದ್ದೇಶ ಜಂಬಕ್ಕಲ್ಲ. ಮರೆತೇ ಹೋಗಿದ್ದ ಈ ಸಣ್ಣ ವಿಷಯವನ್ನು ಹೇಗೆ ದಶಕಗಳ ನಂತರ ನನಗೆ ಇನ್ನೊಬ್ಬರು ನೆನಪಿಸಿದರೆಂದು ಎನ್ನುವ ಮಾತು ಈಗಲೂ ಅಚ್ಚಾರಿಯನ್ನುಂಟು ಮಾಡುತ್ತದೆ. ಅದು ಆದದ್ದು ಹೀಗೆ:

ನಾನು ಮತ್ತು ನನ್ನ ಅಣ್ಣ ಕಲಿಯುತ್ತಿದ್ದಂತೆ ಒಬ್ಬ ಹುಡುಗಿ ಮತ್ತು ಆಕೆಯ ತಮ್ಮ (ನನ್ನ ಕ್ಲಾಸ್ ಮೇಟ್ ವಿನ್ಸೆಂಟನ ಹೆಸರು ಮಾತ್ರ ನನಗೆ ನೆನಪಿದೆ) ಸಹ ತಮ್ಮ ತಮ್ಮ ವರ್ಗಗಳಲ್ಲಿ ನಮ್ಮಿಬ್ಬರ ಸಹಪಾಠಿಗಳಾಗಿದ್ದರು. ಆ ನಂತರ ಸೆಕೆಂಡರಿ ಸ್ಕೂಲಿನಲ್ಲಿ ನಮ್ಮ ದಾರಿಗಳು ಬೇರೆ ಬೇರೆಯಾದವು. ವರ್ಷಗಳು ಉರುಳುತ್ತಿದ್ದರೂ ಒಂದು ದಿನ ನನ್ನ ಬಾಲ್ಯದ ಊರು, ಶಾಲೆ ಮತ್ತು ನಮ್ಮ ಮನೆಗೆ ಭೆಟ್ಟಿಕೊಡುವ ಕನಸು ಕಾಣುತ್ತಲೇ ಇದ್ದೆ. ಅದು ಕೈಗೂಡಿದ್ದು ಸುಮಾರು ನಲವತ್ತು ವರ್ಷಗಳ ನಂತರ, 1989ರಲ್ಲಿ, ನಾನು ಈ ದೇಶದಲ್ಲಿ ನೆಲೆಸಿದ ನಂತರ ರಜೆಯಲ್ಲಿ ಭಾರತಕ್ಕೆ ಹೋದಾಗ.

ಊಟಿ ಪಟ್ಟಣ ಒಂದು ಗುಡ್ಡದ ಮೇಲೆ. ಪಕ್ಕದ ಗುಡ್ಡ ’ಫರ್ನ್ ಹಿಲ್” ಅಲ್ಲಿಯೇ ನಮ್ಮ ಮನೆಯಿತ್ತು. ಅದಕ್ಕೆ ಪಾದುಕಾ ಎಂದು ಹೆಸರಿಟ್ಟಿದ್ದರು. ಆ ಮನೆಯ ಹಾಲಿ ಮಾಲೀಕರಿಗೆ ಒಂದು ಪತ್ರ ಬರೆದು ನಿಗದಿತ ದಿನದಂದು ಬೆಳಗ್ಗೆ 10 ಗಂಟೆಗೆ ನಾನು ಬಂದು ಭೆಟ್ಟಿಯಾಗುವ ವಿಷಯ ತಿಳಿಸಿದ್ದೆ. ಫರ್ನ ಹಿಲ್ಲಿನಲ್ಲಿ ಮೈಸೂರು ಮಹಾರಾಜರ ”ಭವಾನಿ ಹೌಸ್’ ಅರಮನೆಯಿತ್ತು. ಆ ಅರಮನೆಯ ಪಕ್ಕದಲ್ಲಿಯೇ ನಮ್ಮ ಗೆಸ್ಟ್ ಹೌಸ್. ನಮ್ಮ ಅಪಾಯಿಂಟ್ಮೆಂಟಿನ್ ಸಮಯಕ್ಕೆ  ಕಾಯದೆ ಬೆಳಿಗ್ಗೆ ಎದ್ದ ಕೂಡಲೇ ’ಪಾದುಕಾ’ಗೆ ಧಾವಿಸಿದೆ. ಆ ತಗಡಿನ ಬಾಗಿಲು ಮುಚ್ಚಿತ್ತು. ಈಗ ಕಾಲ್ಬೆಲ್. ಒತ್ತಿದಾಗ ನನ್ನ ಪ್ರತೀಕ್ಷೆಯಲ್ಲಿ ಇದ್ದ ಒಬ್ಬ ಮಧ್ಯವಯಸ್ಸಿನ ಹೆಂಗಸು ಬಾಗಿಲು ತೆರೆದಳು. ನನ್ನ ಹೆಸರು ಹೇಳಿದೆ. ಬರಮಾಡಿಕೊಳ್ಳುವ ಮೊದಲೇ ಆಕೆಯ ಬಾಯಿಂದ ಬಂದ ಮೊದಲ ಪ್ರಶ್ನೆ ನನ್ನನ್ನು ದಂಗು ಬಡಿಸಿತು: ”ನೀವಿಬ್ಬರೂ ಅಣ್ಣ ತಮ್ಮಂದಿರಲ್ಲಿ ಯಾರು ಹೊಲಿಗೆಯಲ್ಲಿ ಮುಂದೆ ಇದ್ದರು?” ಔಪಚಾರಿಕವಾಗಿಯೋ ಉಭಯ ಕುಶಲೋಪರಿ ವಿಚಾರಿಸಲಿಕ್ಕೋ, ಮಾತಾಡುವ ವಿಷಯಗಳಿರಲಿಲ್ಲವೇ ಆಕೆಗೆ ಅಂತ ಅದನ್ನು ನೆನೆದರೆ ಇಂದಿಗೂ ನಂಬಲಿಕ್ಕಾಗುವದಿಲ್ಲ. ”ಅದು ನಿಮಗೆ ಹೇಗೆ ಗೊತ್ತು?” ಅಂದೆ. ಆಗಲೇ ಆಕೆ ಹೇಳಿದ್ದು ಅವರ ಇಬ್ಬರು ಮಕ್ಕಳು- ಒಂದು ಗಂಡು ಒಬ್ಬ ಹೆಣ್ಣು ಮಕ್ಕಳೇ-ನಮ್ಮ ಸಹಪಾಠಿಗಳಾಗಿದ್ದರು ಎಂದು. ’ಸೆಲೆಕ್ಟಿವ್ ಮೆಮರಿ’ ಅಂದರೆ ಇದೇನಾ? ಆಮೇಲೆ ಬಹಳೇ ಸಂತೋಷದಿಂದ ಬರಮಾಡಿಕೊಂಡು ತನ್ನ ಮನೆಯೊಳಗೆ, ಹೊರಗೆ ಎಲ್ಲ ಕಡೆ ಕರೆದುಕೊಂಡು ತೋರಿಸಿದರು. ’ಪಾದುಕಾ’ ದೊಳಗೆ ಕಾಲಿಟ್ಟಾಗ ಆದ ರೋಮಾಂಚನ, ಹಳೆಯ ನೆನಪುಗಳೊಂದಿಗೆ ಹೊಸ ದೃಶ್ಯಗಳನ್ನು ಬೆಸೆದುಕೊಂಡು ಆಕಾಶದಲ್ಲಿ ಹಾರುತ್ತಿರುವಂಥ ಅನುಭವ! ಪಡಸಾಲೆ, ಮಲಗು ಮನೆ ಊಟದ ಮನೆ, ಹಿತ್ತಲ ಬಾಗಿಲಿನಿಂದ ಆ ಪೇರ್ ಮರಕ್ಕೆ ಹೋಗುವ ದಾರಿ ಎಲ್ಲವನ್ನೂ ಫೋಟೋ ಮತ್ತು ವಿಡಿಯೋದಲ್ಲಿ ಸೆರೆಹಿಡಿದೆ.  

ಈ ಘಟನೆಯನ್ನು ಹೇಳುವ ಉದ್ದೇಶ ಈ ’ಮಂಕು ತಿಮ್ಮ”ನ ಬಾಲ್ಯದ ದಿನಗಳ ಸ್ಮರಣೆಗಾಗಿ ಅಷ್ಟೇ. ಜಂಬ ಬೇಡ, ಹೊಲಿ ನಿನ್ನ ತುಟಿಗಳನ್ನು ಅನ್ನುವ ಡಿ ವಿ ಜಿಯವರ ಕಗ್ಗದ ಮಾತು ಎಚ್ಚರಿಸುತ್ತಿದೆ ನನ್ನ ಕಿವಿಯಲ್ಲಿ ಈಗ!

ಇತ್ತೀಚಿನ ಕೋವಿಡ್ ಸ್ಥಿತಿಯಲ್ಲಿ ಇನ್ನೊಮ್ಮೆ ನನ್ನ ಬಾಲ್ಯದ ದಿನಗಳನ್ನು ನೆನಪಿಸುವ ಊಟಿಗೆ ಭೇಟಿ ಕೊಡುವ ಕನಸು ನನಸಾಗುವ ಸಾಧ್ಯತೆಯಿಲ್ಲ ಅಂತ ನಿರಾಶೆಯಾಗಿದೆ.

************************************************************************

ನನ್ನ ಆಯಿ, ಓಣ್ಯಾಯಿ – ಗೌರಿ ಪ್ರಸನ್ನ

   ಬಾಲ್ಯ ಅಂದಕೂಡಲೇ ಥಟ್ಟನೆ ನೆನಪಿಗೆ ಬರುವವರು ಅಜ್ಜ-ಅಜ್ಜಿ. ಯಾವ ಕೊಡ-ತಗೊಳ್ಳೋ ಆಪೇಕ್ಷೆಯಿಲ್ಲದೇ ಅಂತಃಕರಣ ಸುರಿಸೋ ಜೀವಗಳು ಅಂದ್ರ ಈ ಅಜ್ಜ-ಅಜ್ಜಿಯರು. ನಮ್ಮ ಸವ೯ಜ್ಞ ಕವಿ ಹಾಡೂ ಹಂಗ ’ಮಜ್ಜಿಗೂಟಕೆ ಲೇಸು..ಮಜ್ಜನಕೆ ಮಡಿ ಲೇಸು..ಕಜ್ಜಾಯ ತುಪ್ಪ ಉಣಲೇಸು..ಮನೆಗೊಬ್ಬ ಅಜ್ಜಿಯೇ ಲೇಸು  ಸವ೯ಜ್ಞ’.

 ನಂಗ ನಮ್ಮ ಆಯಿ, ಅಂದ್ರ ನಮ್ಮ ಅಮ್ಮನ ಅಮ್ಮ, ಯಾವಾಗಲೂ ಬಹಳ ನೆನಪಾಗತಿರತಾಳ. ನಮ್ಮಜ್ಜಿ ನಮಗೆಲ್ಲ ಭಾಳ ‘ಅಚ್ಛಾ’ ಮಾಡತಿದ್ದಳೇನೋ ಖರೇ.. ಆದ್ರ ನಮ್ಮದೇನರೇ ಮಂಗ್ಯಾನಾಟ ನಡದ್ರ ‘ಉಣಲಿಕ್ಕೆ ಅಚ್ಛಾ..ತಿನಲಿಕ್ಕೆ ಅಚ್ವಾ..ಇದೆಲ್ಲಾ ಏನು ಒಣಾ ತಿರಕಚ್ಛಾ’ ಅಂತ ಜಬರಿಸಿ ಬಿಡಾಕಿ.

ಅಕಿಯಿಂದ ಮನಿ ತುಂಬ ಗದ್ದಲ; ಹಬ್ಬದ ವಾತಾವರಣ. ೪ ಜನ ಹೆಣ್ಣುಮಕ್ಕಳು, ೪ ಜನ ಅಳಿಯಂದಿರು,  ೫ ಜನ ಗಂಡುಮಕ್ಕಳು, ೪ ಜನ ಸೊಸೆಯಂದಿರು, ೨೪ ಮೊಮ್ಮಕ್ಕಳ ದೊಡ್ಡ ಸಂಸಾರ ಅವಳದು. ಬರಹೋಗುವವರಿಗಂತೂ ಬರವಿರಲಿಲ್ಲ.  ಮ್ಯಾಲೆ ಸ್ವಣ೯ಗೌರಿ, ವರಮಹಾಲಕ್ಷ್ಮಿ, ಋಷಿಪಂಚಮಿ, ಅನಂತ ಇತ್ಯಾದಿ ಹತ್ತು  ಹಲವಾರು ವ್ರತಾಚರಣೆಗಳ ನೆಪದಲ್ಲಿ ಮನೆತುಂಬ ಬಂಧು-ಬಾಂಧವರು. ಎಲ್ಲವನ್ನೂ – ಎಲ್ಲರನ್ನೂ ಅದ್ಹೆಂಗ ಅಚ್ಚುಕಟ್ಟಾಗಿ ನಿಭಾಯಿಸ್ತಿದ್ಲೋ ಭಗವಂತನೇ ಬಲ್ಲ.

  ಅರಿಶಿನದ ಛಾಯೆಯ ಬಿಳಿಬಣ್ಣದ, ಕುಲುಕುಲು ನಗುವಿನ ಲಕ್ಷಣವಾದ ಮುತ್ತೈದಿ ಅಕಿ. ಓದು ಬರಹ ಕಲಿತಿರದಿದ್ದರೂ ಲೆಕ್ಕ ಬಾಯ್ ತುದಿಯಲ್ಲಿ. ಮೂರುಜನಕ್ಕೂ- ನೂರುಜನಕ್ಕೂ ಬೇಕಾಗುವ ಅಡುಗೆಯ ಅಳತೆಯನ್ನು ಪಾವು-ಸೊಲಗೆಗಳಲ್ಲಿ ಕರಾರುವಕ್ಕಾಗಿ ಹೇಳುವವಳು. ಗೌರಿ ಹಾಡು, ದಶಾವತಾರದ ನಿಂದಾಸ್ತುತಿ, ಸಂಪೂಣ೯ ರಾಮಾಯಣದ ಹಾಡುಗಳಿರಲಿ.. ದೊಡ್ಡ ದೊಡ್ಡ ಗಂಟಿನ ಎಳೆಯ ರಂಗೋಲಿಗಳು; ನಾನಾ ನಮೂನಿ ಕ್ಯಾದಗಿ – ಹೂವಿನ  ಹೆರಳುಗಳು; ಚಿರೋಟಿ, ತರಗು, ಹತ್ತು ಹಲವಾರು ಥರದ  ಖಾದ್ಯಗಳ ರೆಸಿಪಿಗಳು.. ಅವಳೊಂದು ಖಜಾನೆ. ಆಕೆಯ ಹೆಸರು ಶಾರದಾಬಾಯಿ. ನಾನು ‘ಓಣ್ಯಾಯಿ’ ಅಂತಿದ್ದೆ. ಇದೆಂಥಾ ಹೆಸರು ಅಂದ್ಯ್ರಾ? ಅದಕ್ಕೂ ಒಂದು ಇತಿಹಾಸನೋ ,ಪುರಾಣನೋ ಏನಂತೀರೋ ಅನ್ರಿ..ಅದು ಅದ. ನಾನು ನಮ್ಮಾಯಿಗೆ ಮೊದಲನೇ ಮೊಮ್ಮಗಳು. ಹಿಂಗಾಗಿ ಸ್ವಾಭಾವಿಕವಾಗಿಯೇ ಅಚ್ಛಾ, ಪ್ರೀತಿ ಎಲ್ಲಾದಕ್ಕೂ ಏಕಮೇವ ಅಧಿಕಾರ. ಮುಂದ ಒಂದೆರಡು ವಷ೯ದಾಗ ನಮ್ಮ ಮಾಮಾನ ಮಗಳು ಹುಟ್ಟಿದ್ಲಂತ. ಅಕಿನ್ನ ಹೆಸರು ‘ರೋಹಿಣಿ’. ಅದಕ್ಕಽ ನಮ್ಮ ಮಾಮ – ಮಾಂಶಿಯರೆಲ್ಲ ‘ಅಕಿ ನಿಮ್ಮ ಆಯಿ ಅಲ್ಲ..ರೋಹಿಣಿ ಆಯಿ’ ಅಂದಂದು ನನ್ನ ತೊದಲು ಬಾಯಲ್ಲಿ ಅದು ‘ಓಣ್ಯಾಯಿ’ ಆಗಿ ಬರೀ ನಮ್ಮ ಮನೆ ಮಕ್ಕಳಿಗಷ್ಟೇ ಅಲ್ಲದಽ ಇಡಿಯ ಓಣಿಗೇ ‘ಓಣ್ಯಾಯಿ’ ಆಗಿಬಿಟ್ಲು.

    ಆಕೆಯ ತಕ೯ಗಳು,ಆಪದ್ಧಮ೯ಗಳು ಇವುಗಳ ಬಗೆಗೆಲ್ಲ ನೆನೆಸಿಕೊಂಡರೆ ಬಹಳ ಹೆಮ್ಮೆ ಅನಸತದ. ಒಮ್ಮೆ ಮಧ್ಯಾಹ್ನ ೨-೩ ರ ಸುಮಾರಿಗೆ ಬಾಜೂ ಮನಿಯ ಶಿವಮೊಗ್ಗಿ ಪಮ್ಮಕ್ಕಜ್ಜಿ ನಮ್ಮನಿಗೆ ಬಂದು ‘ಒಂದು ಕೊಡ ಮಡಿನೀರು ಇದ್ರ ಬೇಕಾಗಿತ್ತು. ಯಾರೋ ಆಚಾರ್ಯರು ಅಚಾನಕ್ ಆಗಿ ಊರಿಂದ ಬಂದಾರ .ಅವರಿಗೆ ಮಡೀಲೆ ಅಡಿಗಿ, ಪೂಜಾ ಎಲ್ಲ ಆಗಬೇಕು’ ಅಂತ ಕೇಳಿದ್ರು. (ಬಿಜಾಪೂರದಲ್ಲಿ ವಾರಕ್ಕೊಮ್ಮೆ ನಳ ಬರುತ್ತಿದ್ದುದರಿಂದ ತುಳಸಿ ಹಾಕಿ ಮಡಿನೀರನ್ನೂ ಕಾಯ್ದಿಟ್ಟುಕೊಳ್ಳಬೇಕಾಗುತ್ತಿತ್ತು.) ‘ಆಯ್ತು..ತಗೊಂಡ ಹೋಗ್ರಿ’ ಅಂದ ನಮ್ಮಜ್ಜಿ ಒಳಗ ಬಂದು ನೋಡಿದ್ರ ಮಡಿನೀರು ಇಲ್ಲ. ‘ಆ ತುಂಬಿದ ತಾಮ್ರದ ಕೊಡ ಒಯ್ಯಿರಿ’ ಅಂತ ಸಾದಾ ನೀರು ಕೊಟ್ಟು ಕಳಿಸಿದ್ಲು. ನಾ ಮದಲಽ ಉಪದ್ವ್ಯಾಪಿ. ’ಓಣ್ಯಾಯಿ, ಅವರು ಮಡಿನೀರು ಅಂದ್ರ ನೀ ಸಾದಾ ನೀರು ಕಳಿಸಿದ್ಯೆಲಾ’ ಅಂದೆ – ಪುಣ್ಯಾಕ್ಕ ಅವರು ಹೋದಮ್ಯಾಲೆ. ಅಕಿ ಹೇಳಿದ ಉತ್ತರ ನನಗಿನ್ನೂ ನೆನಪದ, ಅಷ್ಟೇ ಅಲ್ಲ ಎಷ್ಟೋ ಸಂದರ್ಭಗಳಲ್ಲಿ ನನ್ನನ್ನು ‘ದುವಿಧಾ’ದಿಂದ  ಪಾರುಮಾಡಿದೆ. ’ಹೀಂಗ ಹೊತ್ತಿಲ್ಲದ ಹೊತ್ತಿನಾಗ ನಮ್ಮ ಮನ್ಯಾಗ ಮಡಿನೀರು ಇದ್ದೇ ಇರತಾವ ಅಂತ ನಂಬಕೀಲೇ ಬಂದಾರ. ಇಲ್ಲ ಅಂತ ಕಳಿಸಿದ್ರ ಆ ಹಸಿದ ಬ್ರಾಹ್ಮಣರ ಪೂಜಿ, ಊಟಾ ಆಗಂಗಿಲ್ಲ. ಈಗ ಪಮ್ಮಕ್ಕ ಮತ್ತ ಆ ಆಚಾರ್ಯರಿಗಂತೂ ಅದು ಮಡಿನೀರೇನಽ. ಅಲ್ಲ ಅಂತ ನಂಗ ಗೊತ್ತದ. ಅದರ  ಪಾಪ ನನಗ ಸುತಗೋತದ.. ನಡೀತದ. ಅವರಿಗೆ ಏನೂ ಆಗಂಗಿಲ್ಲ. ಹಸಿದವರ ಹೊಟ್ಟಿ ತುಂಬಬೇಕು.. ಹಾರುವ ಹಸಕೊಂಡಿರಬಾರದು’ ಅಂದ್ಲು.  ಎಂಥ ಉನ್ನತ ವಿಚಾರ ಅಲ್ಲ?!  ‘ಇಲ್ಲ’ ಅಂದಬಿಡೂದು ಭಾಳ ಸರಳ. ಆದ್ರ ಪಾಪನ್ನೆಲ್ಲ ತನ್ನ ತಲೆಮೇಲೆ ಹೇರಿಕೊಂಡು ಇನ್ನೊಬ್ಬರಿಗೆ ಕೊಡುವುದು ಭಾಳ ಕಷ್ಟದ ಕೆಲಸ. ದೇವರು, ಕಮ೯ಫಲ… ಅನ್ನುವುದೆಲ್ಲ ಇದ್ದರೆ ಖಂಡಿತ ಅಕಿಗೆ ಪಾಪ ಬಂದಿರುವುದಿಲ್ಲ. ಉಲ್ಟಾ ಪುಣ್ಯದ ಒಂದೆರಡು ಪಾಲು ಹೆಚ್ಚಿಗೇ ಸಂದಾಯ ಆಗಿರತಾವ ಅಕಿನ್ನ ಅಕೌಂಟಿನಾಗ.

   ಈ ನಮ್ಮ ಓಣ್ಯಾಯಿ ಒಂಥರಾ snoozeಗೆ ಇಟ್ಟ ಮೊಬೈಲ್ ದ ಆಲಾರಂ ಥರ. ‘ಮುಂಜಾನೆ ಲಗೂ ಎಬ್ಬಸು…ಪರೀಕ್ಷಾಕ್ಕ ಓದಿಕೊಳ್ಳೋದದ’ ಅಂತೇನರೇ ಅಪ್ಪಿತಪ್ಪಿ ಹೇಳಿಬಿಟ್ಟಿದ್ರ ನಸುಕಿನ ೪ ರಿಂದಲೇ ಶುರು. ‘ಏಳು.. ಲಗೂ ಎಬ್ಬಸು ಅಂದಿದ್ದೀ. ೬ ಆಗೇದ ನೋಡು’ ಅಂತ ಯಾರಿಗೂ ಜಗ್ಗದ ಕಾಲರಾಯನನ್ನೇ ಹಿಗ್ಗಾಮುಗ್ಗಾ ಓಡಿಸ್ಯಾಡಬಿಡಕೀರಿ. ಇನ್ನಽ ೬:೩೦, ೭ ಆಗಿರಲಿಕ್ಕಿಲ್ಲ ‘ಇದೇನಽ ತೀರಾ ಇಷ್ಟೊತ್ತು ಮಲಗೂದು..ಸೂರ್ಯ ನೆತ್ತಿ ಮ್ಯಾಲೆ ಬಂದ..ಇನ್ನ ‘ಕು..’ ಮ್ಯಾಲ ಮಾಡಕೊಂಡು ಬಿದ್ದೀದಿ?’ ಅಂತ ಅದೇ ತಾನೇ ಹುಟ್ಟಿದ ಸೂಯ೯ನಿಗೂ ದಿಗ್ಭ್ರಮೆ ಹುಟ್ಟಿಸಿಬಿಡಾಕೀರಿ. ಇನ್ನ ಏನರೇ ಹಬ್ಬ-ಹುಣ್ಣಿಮಿ ಇತ್ತಿಲ್ಲ.. ಬ್ಯಾಡ ತಗೀರಿ ಅದರ ಸುದ್ದಿ. ‘ಇವತ್ತ ಉಗಾದಿ. ಏಳು.. ವರುಷದ ಮದಲನೇ ಹಬ್ಬ.. ಇವತ್ತಽ ಹೀಂಗ ಮಲಕೊಂಡರ ಹೆಂಗ? ಸಣ್ಣ ಹುಡುಗೂರು ಹೆಂಗ ಇರಬೇಕು ಜಿಂಕಿ ಹಂಗಽ..ಭಡಾಭಡಾ ಎದ್ದು, ಲಕಾಲಕಾ ತಯಾರಾಗಿ ಸರಾಭರಾ ಅಂತ ಓಡಾಡಬೇಕು’ ಅನ್ನಾಕಿ.

ಚೌತಿ-ಪಂಚಮಿ ಬಂತಂದ್ರ ‘ಏಳ್ರವಾ. ನಾಗಪ್ಪಗ ಹಾಲು ಹಾಕಬೇಕು. ತಿರುಗಿ ಬಾಜೂಮನಿ ಪಮ್ಮಕ್ಕ, ಎದುರಮನಿ ಶಾರಕ್ಕ ಎಲ್ಲಾರೂ ಹೋಗಿ ಹಾಲು ಹಾಕಿ ಬಂದ್ರು. (ಈಕಿಗೆ ಒಳಗ ಮಂಚದ ಮ್ಯಾಲೆ ಕೂತಲ್ಲೇ ಅವರೆಲ್ಲ ಹೆಂಗ ಕಾಣಸತಿದ್ರು ಅನ್ನೂದು ನನಗಿನ್ನೂ ಯಕ್ಷಪ್ರಶ್ನೆನೇ!) ಈಗಿನ್ನ ಅವರೆಲ್ಲಾರೂ ತಂಬಿಟ್ಟು- ಖಣ ಕೊಡಲಿಕ್ಕೆ ಬರತಾರ. ನೀವ ನೋಡಿದ್ರ ಹಾಸಿಗಿ ಹರವಿಕೊಂಡು ಮಲಗೀರಿ..ಏಳ್ರಿ.. ಒಬ್ಬೊಬ್ಬರೇ ಎದ್ದು, ಎಣ್ಣಿ ಹಚಗೊಂಡು, ಎರಕೊಳ್ಳೂದರಾಗ ‘ಢಣ್’ ಅಂತದ’  ಅನ್ನಾಕಿ. (ನಂಗೂ ಗೊತ್ತಿಲ್ಲ ಏನ ಢಣ್ ಅಂತದೋ ಅಂತ) ಗಣೇಶ ಚೌತಿ ದಿನಾ ಕಡಬು – ಬುರಬುರಿ – ಚಿತ್ರಾನ್ನ ಅಂತ ಮಸ್ತ್ ಪೈಕಿ ಊಟಾ ಗಡದ್ದಾಗಿ ಹೊಡದು ಕಣ್ಣ ಎಳೀತಾವಂತ ಅಡ್ಡಾಗಲಿಕ್ಕೆ ಹೋದರ ‘ಅಯ್ಯ, ಈಗೇನ ಮಲಗತೀಯ? ಇವತ್ತ ಸುಬ್ಭಣಾಚಾರ್ರು ಲಗೂನೇ ೫ ಕ್ಕೇ ಬರತೀನಂದಾರ ಉತ್ತರಪೂಜಾಕ್ಕ. ಹೋಗು ಲಗೂ ಲಗೂ ಹೆರಳು-ಮಾರಿ ಮಾಡಕೊಂಡು ಎಲ್ಲಾರನ್ನೂ ಅರಿಶಿಣ-ಕುಂಕುಮಕ್ಕ ಕರದ ಬಾ. ಹೋದಸಲ ಆ ಬಮ್ಮಣಗಿ ಶಾರಕ್ಕನ್ನ  ಕರಿಯೂದು ಮರತಽಬಿಟ್ಟಿದ್ದೀ.. ಮತ್ತ ಈ ಸಲಾನೂ ಹಂಗೇ ಮಾಡಿಬಿಡಬ್ಯಾಡ.’ ಅಂತ ಗಡಿಬಿಡಿ ಮಾಡಾಕಿ.

ಇನ್ನ ದೀಪಾವಳಿ ಬಂತಂದ್ರಂತೂ ಮುಗದಽ ಹೋತರಿ. ಪುಣ್ಯಾಕ್ಕ ಅವತ್ತ ಎದ್ದು ಹಲ್ಲು ತಿಕ್ಕೊಂಡು ಸೀದಾ ಹೊಸ ಬಟ್ಟಿ ಹಾಕೊಂಡ್ರ ಆತರೀ.. ಆರತಿಗೆ ತಯಾರ. ಮುಂಜಾನೆ ೪ – ೪:೩೦ ಯ ಚುಮುಚುಮು ನಸುಕಿನ್ಯಾಗ ಕೆಟ್ಟ ಥಂಡಿ. ಥಳಿ – ರಂಗೋಲಿ, ಪ್ರಣತಿ -ತುಳಸೀ ದೀಪ ಅಂತ ಇಷ್ಟಗಲ ತಲಬಾಗಲಾ ತಗದಽ ಇಟ್ಟಬಿಟ್ರ ಎರಡೆರಡು ಚಾದರ (ನಮ್ಮ ಬಿಜಾಪೂರದಾಗ ರಗ್ಗು ಅಂದ್ರೇನಂತ ಗೊತ್ತಿರಲಿಲ್ಲ) ಎಳಕೊಂಡ ಎಳಕೊಂಡ ಎಷ್ಟು ಮುದ್ದೆ ಆಗಿ ಮಲಗಿದ್ರೂ ಗಡಗಡ ನಡುಗಿ ನಿದ್ದಿ ಹಾರೇ ಹೋಗತಿತ್ತು ಅನ್ರಿ.

  ಇನ್ನ ಯಾವಾಗರೇ ಸೂಟಿ, ರವಿವಾರ ಅಂತ ಮಧ್ಯಾಹ್ನ ಮಲಕೊಳ್ಳಿಕ್ಕೆ ಹೋದ್ರ ‘ಏನ ನಟ್ಟ ಕಡದೀಯವಾ, ಹೊತಗೊಂಡು ಮಲಕೋಳಿಕ್ಕೆ.. ಎದ್ದು ನಿನ್ನ ಪುಸ್ತಕ ಮಾಡಾ ಸ್ವಚ್ಛ ಮಾಡಕೋಬಾರದ? ಎಷ್ಟು ಹರವಿ ನೋಡು.. ಆ ರಿಬ್ಬನ್ ಹೊಲಸ ಖಮಟ ಆಗ್ಯಾವ. ಒಂಚೂರು ಸಾಬಾಣ ಹಚ್ಚಿ ಒಕ್ಕೋಬಾರದ?’ ಅಂತೆಲ್ಲ ಮಾಡಬೇಕಾದ ಕೆಲಸಗಳ ಇಷ್ಟುದ್ದದ ಲಿಸ್ಟ್ ಹೇಳಿ ನಮ್ಮೊಳಗೆ ‘ಇಷ್ಟ ಕೆಲಸಾ ಇಟಗೊಂಡು ಮಲಗೀನಲಾ’ ಅನ್ನೋ ಅಪರಾಧೀಪ್ರಜ್ಞೆಯನ್ನು ಜಾಗೃತ ಮಾಡಿಬಿಡಾಕೀರಿ ಅಕಿ.

ಬರೀ ನಮ್ಮಾಯಿ ಅಷ್ಟೇ ಅಲ್ಲ; ಓಣಿಯ ಆಯಿ- ಓಣ್ಯಾಯಿ ಈಕಿ. ಮಂಚದ ಮೇಲೆ ಕುಳಿತೇ ದಬಾ೯ರು ನಡೆಸುವಾಕಿ. ಮೈ ಕುಣಿಸುತ್ತ ನಕ್ಕು ಎಲ್ಲರ ಮೈ ಮರೆಸುವಾಕಿ. ‘ಶೆಕೆ’ ಎಂದು ಬೆಂದಾಗ ಸೆರಗಿನ ಚಾಮರದಿಂದ ಗಾಳಿ ಬೀಸುವಾಕಿ. ‘ಥಂಡಿ’ ಎಂದಾಗ ಬೆಚ್ಚಗೆ ಅಪ್ಪಿಕೊಳ್ಳುವಾಕಿ. ಅಳುವಾಗ ರಮಿಸುವಾಕಿ. ಜಗಳಾಡಿದಾಗ ಬಯ್ದು ರಾಜಿ ಮಾಡಿಸುವಾಕಿ. ‘ಬೋಕಾಣಿ ಸಿದ್ಧ್ಯಾರ’ ಎಂದು ಜೋರು ಮಾಡುವಾಕಿ. ಒಂದು ಕೇಳಿದರೆ ಎರಡೆರಡು ಉಂಡಿಗಳನ್ನು ಕೈಗೆ ನೀಡುವಾಕಿ. ‘ಬಾಳೆಕಾಯಿ’ ಗಂಟಿನಿಂದ ನಾಣ್ಯಗಳನ್ನು ತೆಗೆದು ಜಾದೂ ಮಾಡುವಾಕಿ. ಖಲಬತ್ತಲಿನಲ್ಲಿ ಎಲೆಯಡಿಕೆ ಕುಟ್ಟಿ ವೀಳ್ಯದ ರುಚಿ ಹಚ್ದಾಕಿ. ಎರಡು ತುತ್ತು ಕಮ್ಮಿ ತಿಂದರೆ ‘ದೃಷ್ಟಿ’ಯಾಯಿತೆಂದು ಅಯ್ಯನ ಮಠದಿಂದ ತಾಯತ ಮಂತ್ರಿಸಿ ತರುವಾಕಿ. ಮಲಗಿದಾಗ ಕೋಲಿಂದ ತಿವಿದು ಎಚ್ಚರಿಸುವಾಕಿ. ಕುಂಟುತ್ತಲೇ ಕತ್ತಲಲ್ಲಿ ನಮ್ಮ ‘ಜೋಡಿ’ ಬರುವಾಕಿ.

‘ಮತ್ಸ್ಯನೆಂದು ಬಲು ಬಡಾಯಿ ಹೇಳತಿ ಹೆಂಗ ಬಂದ್ಯೋ ನೀ ಊರಾಗ..’ ಎಂದು ದಶಾವತಾರದ ಮಹಾವಿಷ್ಣುವಿಗೇ ‘ಚಾಲೆಂಜ್’ ಮಾಡುವಾಕಿ.’ ‘ಚೈತ್ರ ಶುದ್ಧ ಹಗಲು ನವಮಿ ರಾಮ ಜನಿಸಿದ. ಬಿದ್ದ ಶಿಲೆಯ  ಪಾದದಿಂದುದ್ಧಾರ ಮಾಡಿದಾ’ ಎಂದು ಇಡಿಯ ರಾಮಾಯಣವನ್ನೇ ನಾಲಗೆ ತುದಿಯಲ್ಲಿ ಇಟ್ಟುಕೊಂಡಾಕಿ. ವರಮಹಾಲಕ್ಷ್ಮಿ – ಸ್ವಣ೯ಗೌರಿಯರೊಡನೆ ನೆಂಟಸ್ತಿಕೆ ಕಟ್ಟಿಕೊಂಡಾಕಿ. ಒಂದಾಣೆಯ ಮುಡಿಪು ಕಟ್ಟಿಟ್ಟು ವಾಯುಜೀವೋತ್ತಮ ಭೋಗಾಪುರೇಶನನ್ನು ಕೆಲಸ ಮಾಡಲು ‘ಮಜಬೂರ್’ ಮಾಡುವಾಕಿ. ಎಲ್ಲರ ಪಾಲಿನ ಹಾಲು ಕುಡಿಸಿ ಚೌತಿಯ ನಾಗಪ್ಪನನ್ನೇ ದಣಿಸಿಬಿಡಾಕಿ.

  ಎದೆಯ ಗೂಡಲ್ಲಿ ಬೆಚ್ಚನೆಯ ನೆನಪಾಗಿ ಉಳಿದಾಕಿ. ನೆನಪಾಗಿ ಕಾಡಿ ಕಣ್ಣಂಚು ಒದ್ದೆ ಮಾಡುವಾಕಿ. ನಮ್ಮಾಯಿ..ಅಲ್ಲ, ಓಣ್ಯಾಯಿ.. ಅಲ್ಲಲ್ಲ, ‘ಮಹಾಮಾಯಿ’ ಆಕೆ.

**************************************************************

ಸಂಪಾದಕರ ಟಿಪ್ಪಣಿ: ಗೌರಿಯವರ ಬರಹ, ಬರಿಯ ಅಜ್ಜಿಯ ಬಗೆಗಲ್ಲದೇ ಶುದ್ಧ ಬಿಜಾಪುರ (ಈಗ ವಿಜಯಪುರ) ದ ನೆಲದ ಮಾತಿನ ಕನ್ನಡದ ಘಮಲನ್ನೂ ಹಂಚುತ್ತದೆ. ಇದನ್ನು ಮನಸ್ಸಿನಲ್ಲಲ್ಲ, ಜೋರಾಗಿ ಅಕ್ಕ-ಪಕ್ಕದವರಿಗೆ ಕೇಳುವಂತೆ ಓದಿ ಮಜಾ ತೊಗೊಳ್ಳೋದು ಒಳ್ಳೆಯದು!