ಪತ್ತೆಯಾಗಿವೆ ಗುರುತ್ವಾಕರ್ಷಣ ತರಂಗಗಳು! ನಿಜವಾಯಿತು ಐನಸ್ಟೈನನ 100 ವರ್ಷಗಳ ಹಿಂದಿನ ಭವಿಷ್ಯವಾಣಿ – ಡಾ ಉಮಾ ವೆಂಕಟೇಶ್

ಮನೆಯಲ್ಲಿ ಯಾರಾದರೂ ಸ್ವಲ್ಪ ಬುದ್ದಿವಂತಿಕೆಯ ಮಾತಾಡಿದರೆ, ಅವನ ಸುತ್ತಲಿನ ಜನ “ಏನಯ್ಯಾ ನೀನೇನು ಐನಸ್ಟೈನನ ಮರಿ ಅಂದ್ಕೊಂಡಿದ್ದೀಯಾ?” ಎಂದು ಲೇವಡಿ ಮಾಡುತ್ತಿದ್ದದ್ದು ಸರ್ವೇಸಾಧಾರಣದ ಮಾತಾಗಿತ್ತು. ಐನಸ್ಟೈನ್ ಒಬ್ಬ ಮಹಾ ಮೇಧಾವಿ ಎನ್ನುವುದು ಎಲ್ಲರಿಗೂ ತಿಳಿದಿದ್ದ ವಿಚಾರವಾದರೂ, ಅವನು ವಿಜ್ಞಾನಕ್ಕೆ ಇತ್ತ ಕೊಡುಗೆಯೇನು ಎನ್ನುವುದು ಬಹಳಷ್ಟು ಮಂದಿಗೆ ಬಹುಶಃ ತಿಳಿದಿರಲಾರದು. ಆದರೂ, ಬುದ್ದಿವಂತಿಕೆಯ ಮತ್ತೊಂದು ಹೆಸರೇ ಐನಸ್ಟೈನ್ ಎನ್ನುವುದು ಸಾಮಾನ್ಯ ಜ್ಞಾನವಲ್ಲವೇ! ಈ ಮೇಧಾವಿ ಈಗ 101 ವರ್ಷಗಳ ಹಿಂದೆ ಮಂಡಿಸಿದ, ಭೌತಶಾಸ್ತ್ರದ ಅತ್ಯಂತ ಪ್ರಮುಖ ಸಿದ್ಧಾಂತವೆನಿಸಿದ “ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತವು” (General Theory Of Relativity), ನಮ್ಮ ವಿಶ್ವದ ಆಗುಹೋಗುಗಳ ಬಗ್ಗೆ, ಅದರ ಹಿಂದಿನ ರಹಸ್ಯಗಳ ಬಗ್ಗೆ ಅನೇಕ ಪ್ರಮುಖ ಅಂಶಗಳನ್ನು ನಿಖರವಾಗಿ ಪ್ರತಿಪಾದಿಸುತ್ತದೆ. ಆ ಸಿದ್ಧಾಂತದಲ್ಲಿ ಆತ ಪ್ರಸ್ತಾಪಿಸಿ, ನುಡಿದ ಅಂತಿಮ ಭವಿಷ್ಯವಾಣಿಯೇ ಗುರುತ್ವಾಕರ್ಷಣಾ ತರಂಗಗಳ ಅಸ್ತಿತ್ವವಾಗಿದೆ.

Albert Einstein
Albert Einstein

ಗುರುತ್ವಾಕರ್ಷಣೆಯ ತರಂಗಗಳೆಂದರೇನು? ಇವು ಎಲ್ಲಿವೆ? ಎಲ್ಲಿಂದ ಬರುತ್ತಿವೆ? ಇವುಗಳ ಉಗಮಸ್ಥಾನವಾವುದು? ಇದರಿಂದ ಮಾನವ ಸಂಕುಲಕ್ಕೇನು ಪ್ರಯೋಜನ? ಇಂತಹ ಹಲವು ಹತ್ತು ಪ್ರಶ್ನೆಗಳು ನಮ್ಮ ಮನದಲ್ಲೇಳುವುದು ಸಹಜವೇ! ಭೌತವಿಜ್ಞಾನಿಗಳು ಈ ಗುರುತ್ವಾಕರ್ಷಣಾ ತರಂಗಗಳನ್ನು ವೀಕ್ಷಿಸುವುದಕ್ಕೆ ಮುಂಚೆ, ನಮಗೆ ಈಗಾಗಲೇ ಪರಿಚಿತವಿರುವ ಇತರ ಮೂಲಭೂತ ತರಂಗಗಳೆನಿಸಿದ ಬೆಳಕು, ರೇಡಿಯೋ, ಕ್ಷ-ಕಿರಣ ಮತ್ತು ಗ್ಯಾಮಾ-ಕಿರಣಗಳ ತರಂಗಗಳೆಲ್ಲವೂ, ವಿವಿಧ ಆವರ್ತನಗಳ ವಿದ್ಯುತ್ಕಾಂತೀಯ ತರಂಗಗಳಾಗಿದ್ದು, ಅವುಗಳ ಸೈದ್ಧಾಂತಿಕ ಪ್ರತಿಪಾದನೆಯನ್ನು ಸುಮಾರು 150 ವರ್ಷಗಳ ಹಿಂದೆಯೇ ಮಾಡಿದ್ದ ಜೇಮ್ಸ್ ಕ್ಲರ್ಕ್ ಮಾಕ್ಸ್ವೆಲ್ (James Clerk Maxwell) ಎನ್ನುವವನು ಒಬ್ಬ ಪ್ರಸಿದ್ಧ ಬ್ರಿಟಿಷ್ ಭೌತವಿಜ್ಞಾನಿಯಾಗಿದ್ದು, ಈ ತರಂಗಗಳ ಇರುವಿಕೆಯನ್ನು ಅಲ್ಲಿಂದ ಮುಂದಕ್ಕೆ 22 ವರ್ಷಗಳ ನಂತರ ನಿರ್ಣಾಯಕವಾಗಿ ಖಚಿತಪಡಿಸಿದ ಹೈನ್ರಿಚ್ ಹರ್ಟ್ಝ್  (Heinrich Hertz), ಮತ್ತೊಬ್ಬ ಸುಪ್ರಸಿದ್ಧ ಜರ್ಮನ್ ಭೌತಶಾಸ್ತ್ರಜ್ಞ. 1916ರಲ್ಲಿ ಆಲ್ಬರ್ಟ್ ಐನಸ್ಟೈನ್, ಈ ವಿದ್ಯುತ್ಕಾಂತೀಯ ತರಂಗಗಳನ್ನೇ ಹೋಲುವಂತಹ ಗುರುತ್ವಾಕರ್ಷಣಾ ತರಂಗಗಳು ಅಸ್ತಿತ್ವದಲ್ಲಿದೆ ಎನ್ನುವುದನ್ನು ಲೆಕ್ಕಾಚಾರಗಳ ಮೂಲಕ, ತನ್ನ ಗುರುತ್ವದ ಸಿದ್ಧಾಂತದಲ್ಲಿ (Theory of Gravity) ತೋರಿಸಿದ್ದನು. ಕಳೆದ ವಾರ ಸುಮಾರು 1000 ಭೌತವಿಜ್ಞಾನಿಗಳು ಮತ್ತು ಇಂಜಿನೀಯರುಗಳು ಕೂಡಿ, ಈಗ 30 ವರ್ಷಗಳಿಂದ ನಡೆಸುತ್ತಿದ್ದ ಒಂದು ಭಾರಿ ಸಹಭಾಗಿತ್ವದ ಪ್ರಯೋಗದ ಮೂಲಕ, ಈ ಗುರುತ್ವಾಕರ್ಷಣ ತರಂಗಗಳನ್ನು ವೀಕ್ಷಿಸಿದ್ದು, ಪ್ರಪಂಚದ ಎಲ್ಲೆಡೆಯಲ್ಲೂ, ಪತ್ರಿಕೆ, ದೂರದರ್ಶನ ಹಾಗೂ ಸಾಮಾಜಿಕ ಜಾಲಗಳಲ್ಲಿ ಭಾರಿ ಜನಪ್ರಿಯವಾದ ಸುದ್ದಿಮಾಡಿದೆ. ಇದರ ಜೊತೆಗೆ ಈ ಸುದ್ದಿಯನ್ನು ವೀಕ್ಷಿಸಿದ ಎಲ್ಲಾ ಸಾಮಾನ್ಯ ಜನಗಳ ಬಾಯಿಯಲ್ಲೂ, “Gravitational waves are ripples in the fabric of spacetime” ಎನ್ನುವ ಒಂದು ಝೇಂಕಾರದ ಜಾಣ್ನುಡಿ ಸಲೀಸಾಗಿ ಹರಿದಾಡುತ್ತಿದೆ. ಆದರೆ ಈ ಜಾಣ್ನುಡಿಯ ಅರ್ಥವಾದರೂ ಏನು? ಖಭೌತವಿಜ್ಞಾನಿಗಳ ಪ್ರಕಾರ, ಗುರುತ್ವಾಕರ್ಷಣಾ ತರಂಗಗಳು ವ್ಯೋಮಸಮಯ ಅಥವಾ ತೆರಪು ಮತ್ತು ಸಮಯದ (ಅಥವಾ ವಕ್ರತೆಯ) ಚೌಕಟ್ಟಿನಲ್ಲಿರುವ ಕಲರವ-ತರಂಗಗಳು ಎನ್ನುವ ಅರ್ಥವಿದೆ. ಹಾಗಾದರೆ ಈ ವ್ಯೋಮಸಮಯ ಅಥವಾ ತೆರಪು-ಸಮಯದ ವಕ್ರತೆ ಅಥವಾ ಬಾಗುವಿಕೆ ಎನ್ನುವುದರ ಅರ್ಥವೇನು?

ವ್ಯೋಮದಲ್ಲಿರುವ ಎರಡು ಸ್ಥಿರ ಬಿಂದುಗಳ ನಡುವಿನ ಅಂತರವನ್ನು, ವ್ಯೋಮ-ಸಮಯದ ಬಾಗುವಿಕೆ ಅಥವಾ ವಕ್ರತೆ ಎಂದು ವ್ಯಾಖ್ಯಾನಿಸಲಾಗುತ್ತದೆ.  ಐನಸ್ಟೈನನು ತನ್ನ ಲೆಕ್ಕಾಚಾರಗಳಲ್ಲಿ ಗಮನಿಸಿದ ಪ್ರಕಾರ, ಸ್ಥಿರ ಬಿಂದುಗಳ ನಡುವಿನ ಈ ಅಂತರವನ್ನು ಕ್ರಮಿಸಲು ಬೆಳಕಿನ ಕಿರಣವೊಂದಕ್ಕೆ ತಗಲುವ ಸಮಯವು, ಗುರುತ್ವಾಕರ್ಷಣ ಬಲವನ್ನು ಅವಲಂಬಿಸಿದ್ದು ಭಿನ್ನವಾಗಿರುತ್ತದೆ.  ಯಾವ ಪ್ರದೇಶಗಳಲ್ಲಿ ಗುರುತ್ವಾಕರ್ಷಣ ಬಲವು ಬಹಳ ಪ್ರಬಲವಾಗಿರುತ್ತದೋ (ಉದಾಹರಣೆಗೆ ಕೃಷ್ಣರಂಧ್ರಗಳಿಗೆ ಸಮೀಪವಾಗಿರುವ ಪ್ರದೇಶಗಳಲ್ಲಿ), ಅಂತಹ ಜಾಗಗಳಲ್ಲಿ ಬೆಳಕಿನ ಕಿರಣಗಳಿಗೆ ಒಂದು ನಿಗದಿತ ದೂರವನ್ನು ಕ್ರಮಿಸಲು, ದುರ್ಬಲ ಗುರುತ್ವಾಕರ್ಷಣೆಯ ಬಲವಿರುವ ಪ್ರದೇಶಗಳಿಗಿಂತ ಬಹಳಷ್ಟು ಹೆಚ್ಚಿನ ಸಮಯ ಬೇಕಾಗುತ್ತದೆ (ಉದಾಹರಣೆಗೆ ನಮ್ಮ ಭೂಮಿಯ ಹತ್ತಿರ).  ವ್ಯೋಮಸಮಯ ವಕ್ರತೆ ಅಥವಾ ಬಾಗುವಿಕೆ, ಗುರುತ್ವಾಕರ್ಷಣೆಯ ಬಲದ ಉಪಸ್ಥಿತಿಯಲ್ಲಿ, ಗಡಿಯಾರಗಳು ನಡೆಯುವ ಲಯಬದ್ಧತೆಯ ಗತಿಯೆನ್ನಬಹುದು. ಕೃಷ್ಣರಂಧ್ರದ ಬಳಿ ಇರುವ ಒಂದು ಗಡಿಯಾರವು, ಭೂಮಿಯ ಮೇಲಿರುವ ಅದೇ ರೀತಿಯ ಒಂದು ಗಡಿಯಾರಕ್ಕಿಂತಲೂ ಬಹಳ ನಿಧಾನ ಗತಿಯಲ್ಲಿ ತಿರುಗುತ್ತದೆ. ಕೇವಲ ಗಡಿಯಾರಗಳೇ ಅಲ್ಲ, ಕೃಷ್ಣರಂಧ್ರಗಳ ಬಳಿ ಜೀವಿಸುವ ಮನುಷ್ಯರ ವಯಸ್ಸು, ಭೂಮಿಯಲ್ಲಿರುವ ಅವರ ಸಂಬಂಧಿಗಳ ವಯಸ್ಸಿಗೆ ಹೋಲಿಸಿದರೆ, ಅವರಿಗಿಂತ ಕಡಿಮೆಯಿದ್ದು, ನಿಧಾನವಾಗಿ ಮುಪ್ಪಾಗುತ್ತಾರೆ. ಗುರುತ್ವಾಕರ್ಷಣಾ ತರಂಗಗಳ ಪರಿಣಾಮವೂ, ಗುರುತ್ವಾಕರ್ಷಣೆಗಿಂತ ಭಿನ್ನವಾಗಿಲ್ಲ.

Spinning Black holes CC:Wiki

Spinning Balck holes

ಅದನ್ನೇ LIGO ಸಹಭಾಗಿತ್ವ ಪ್ರಯೋಗದಲ್ಲಿ ಭೌತಶಾಸ್ತ್ರಜ್ಞರು ತಮ್ಮ ಪತ್ತೇಕಾರದ ಮೂಲಕ ಅದನ್ನು ಅಳತೆಮಾಡಲು ಪ್ರಯತ್ನಿಸಿದ್ದು, ಅದರ ಮೂಲಕ ಗುರುತ್ವಾಕರ್ಷಣಾ ತರಂಗಗಳನ್ನು (Gravitational Waves) ಪತ್ತೆಹಚ್ಚುವ ಕಾರ್ಯದಲ್ಲಿ ಸಫಲತೆಯನ್ನು ಪಡೆದಿದ್ದಾರೆ.  LIGO ಪತ್ತೇಕಾರದ ನಾಲ್ಕು ಕಿಲೋಮೀಟರ್ ತೋಳುಗಳಲ್ಲಿರುವ ಎರಡು ಕನ್ನಡಿಗಳನ್ನು, ವ್ಯೋಮ ಅಥವಾ ಬಾಹ್ಯಾಕಾಶದಲ್ಲಿರುವ ಎರಡು ಸ್ಥಿರ ಬಿಂದುಗಳೆಂದು ಊಹಿಸಿಕೊಳ್ಳಿ. ಗುರುತ್ವಾಕರ್ಷಣೆಯ ಗೈರುಹಾಜರಿಯಲ್ಲಿ ಈ ಎರಡು ಕನ್ನಡಿಗಳ ನಡುವಿನ ದೂರವನ್ನು, ಒಂದು ಬೆಳಕಿನ ಕಿರಣಕ್ಕೆ ಕ್ರಮಿಸಲು ಬೇಕಾಗುವ ಸಮಯ ನಿಗದಿತವಾಗಿರುತ್ತದೆ.  ಗುರುತ್ವಾಕರ್ಷಣೆಯ ತರಂಗಗಳ ಉಪಸ್ಥಿತಿಯಲ್ಲಿ, ಈ ದೂರ ಸ್ವಲ್ಪ ಬದಲಾಯಿಸುತ್ತದೆ, ಹಾಗೂ ಒಂದು ತೋಳಿನಲ್ಲಿ ಬೆಳಕಿನ ಕಿರಣಕ್ಕೆ ಈ ದೂರವನ್ನು ಕ್ರಮಿಸಲು ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ, ಮತ್ತು ಇನ್ನೊಂದು ತೋಳಿನಲ್ಲಿ ಅದಕ್ಕಿಂತ ಸ್ವಲ್ಪ ಕಡಿಮೆ ಸಮಯ ತಗುಲುತ್ತದೆ. ಆದ್ದರಿಂದ LIGO ಪತ್ತೇಕಾರಗಳು ಗುರುತ್ವಾಕರ್ಷಣ ತರಂಗಗಳ ಇರುವಿಕೆಯನ್ನು ಪತ್ತೆಹಚ್ಚಲು, ಈ ಎರಡು ಅವಧಿಗಳನ್ನು ಹೋಲಿಕೆ ಮಾಡಿನೋಡಿವೆ. ಈ ವಿವರಣೆ ಸರಳವಾಗಿ ಕಂಡರೂ, ಪತ್ತೇಕಾರಗಳಲ್ಲಿರುವ ಎರಡು ಕನ್ನಡಿಗಳನ್ನು, ಬಾಹ್ಯ ಪ್ರಪಂಚದ ಗದ್ದಲ ಗಲಭೆಗಳಿಂದ ಆದಷ್ಟೂ ಪ್ರತ್ಯೇಕವಾಗಿಟ್ಟು, ಅಲ್ಲಿ ಹಾಯ್ದುಹೋಗುವ ಗುರುತ್ವಾಕರ್ಷಣ ತರಂಗಗಳನ್ನು  ಗ್ರಹಿಸುವಷ್ಟು ಅವುಗಳ ಸೂಕ್ಷ್ಮತೆಯನ್ನು ಕಾಪಾಡುವ ಕಾರ್ಯವು ದೊಡ್ಡ ಸವಾಲಿನ ಕಾರ್ಯವಾಗಿತ್ತು. ಆ ಸವಾಲನ್ನೇ ನಮ್ಮ ಭೌತವಿಜ್ಞಾನಿಗಳು ಯಶಸ್ವಿಯಾಗಿ ಎದುರಿಸಿ, ದುರ್ಬಲವಾದ ಈ ಗುರುತ್ವಾಕರ್ಷಣಾ ತರಂಗಗಳನ್ನು ಪತ್ತೆಹಚ್ಚಿದ್ದಾರೆ.

LIGO Observatory picture

ಇದನ್ನೇ ಕಳೆದ ವಾರ ಭೌತವಿಜ್ಞಾನಿಗಳು ಘೋಷಿಸಿದ ಅವಿಷ್ಕಾರದಲ್ಲಿ LIGO-Linear Interferometer Ground Observatory ಪತ್ತೇಕಾರದ ಮೂಲಕ ಪತ್ತೆ ಹಚ್ಚಿರುವುದು. ಈ ಪತ್ತೆಯಿಂದ ಗುರುತ್ವಾಕರ್ಷಣೆಯ ತರಂಗಗಳು ಅಸ್ತಿತ್ವದಲ್ಲಿವೆ ಎನ್ನುವುದು ಪ್ರಮಾಣಿಕರಿತವಾಗಿದೆಯಲ್ಲದೇ, ಐನಸ್ಟೈನ್ 100 ವರ್ಷಗಳ ಹಿಂದೆ ತನ್ನ ಸಿದ್ಧಾಂತದಲ್ಲಿ ತೋರಿಸಿ ನುಡಿದ ಭವಿಷ್ಯವಾಣಿ ನಿಜವೆಂದು ಸಾಬೀತಾಗಿದೆ.

ಈ ತರಂಗಗಳು ಉಗಮವಾದದ್ದಾರೂ ಎಲ್ಲಿ?

ನಮ್ಮಿಂದ ಬಹುದೂರದಲ್ಲಿರುವ ಮತ್ತೊಂದು ವಿಶ್ವದ ಮೂಲೆಯಲ್ಲೆಲ್ಲೋ, ಸುಮಾರು 1.3 ಶತಕೋಟಿ ಜ್ಯೋತಿರ್ವರ್ಷಗಳ ದೂರದಲ್ಲಿರುವ ಮಹಾವಿಪ್ಲವವೊಂದರಲ್ಲಿ ಉತ್ಪನ್ನವಾದ ಈ ತರಂಗಗಳನ್ನು, ನಮ್ಮ ವಿಜ್ಞಾನಿಗಳು ಬಳಸಿದ ಪತ್ತೇಕಾರವು ಗ್ರಹಿಸಿದೆ. ಈ ಮಹಾವಿಪ್ಲವದ ಮೂಲವು, ಎರಡು ವೇಗವಾಗಿ ಪರಿಭ್ರಮಿಸುವ ಕೃಷ್ಣರಂಧ್ರಗಳ ವಿಲೀನ ಪ್ರಕ್ರಿಯೆ ಎಂದು ತಿಳಿದುಬಂದಿದೆ. ಈ ಪ್ರಕ್ರಿಯೆಯಿಂದ ದೊರೆತಿರುವ ಸಂಕೇತವು ಒಂದು ಸೆಕೆಂಡಿನ ಐದನೆ ಒಂದು ಭಾಗದಷ್ಟು ಕಾಲ ಮಾತ್ರಾ ದೊರೆತಿದ್ದು, ಅದಕ್ಕೆ ಅಮೆರಿಕೆಯ ಲೂಸಿಯಾನಾ ರಾಜ್ಯದಲ್ಲಿರುವ, ಲಿವಿಂಗ್ಸ್ಟನ್ ಪತ್ತೇಕಾರದಿಂದ, ವಾಷಿಂಗ್ಟನ್ ರಾಜ್ಯದ ಹಾನ್ಫ಼ೋರ್ಡ್ ಪತ್ತೇಕಾರಕ್ಕೆ ದಾಟಿ-ಹೋಗಲು ಕೇವಲ 7 ಮಿಲಿಸೆಕೆಂಡುಗಳ ಸಮಯ ತಗುಲಿದೆ. ಈ ಅನ್ವೇಷಣೆಯಲ್ಲಿ ಎರಡು ಬಹು ಮುಖ್ಯವಾದ ಅಂಶಗಳಿವೆ. ಅದರಲ್ಲಿ ಮೊದಲನೆಯದಾಗಿ ಇದುವರೆಗೂ ನೇರವಾಗಿ ಯಾರೂ ವೀಕ್ಷಿಸದಿದ್ದ ಜೋಡಿ ಕೃಷ್ಣ-ರಂಧ್ರಗಳನ್ನು (Binary Black holes) ವೀಕ್ಷಿಸಲಾಗಿದೆ.

Spinning binary Black holes
Spinning binary Black holes CC:Wiki

ಎರಡನೆಯದಾಗಿ, ಎರಡು ಕೃಷ್ಣ-ರಂಧ್ರಗಳು ವಿಲೀನವಾಗಿ, ಹೊಸ ಕೃಷ್ಣ-ರಂಧ್ರವೊಂದು ರಚಿತವಾಗುವ ಪ್ರಕ್ರಿಯೆಯನ್ನು ಮೊಟ್ಟಮೊದಲ ಬಾರಿಗೆ ಪತ್ತೆಹಚ್ಚಲಾಗಿದೆ. ಈ ಪ್ರಯೋಗದಲ್ಲಿ ನಿರತರಾದ ವಿಜ್ಞಾನಿಗಳ ನಿರ್ಣಯದ ಪ್ರಕಾರ, ಕೃಷ್ಣರಂಧ್ರಗಳು ವಿಲೀನವಾಗಿ, ಹೊಸದಾದ ಭಾರಿ ಕೃಷ್ಣರಂಧ್ರವು ರಚನೆಯಾಗುವ ಅಂತಿಮ ಕ್ಷಣದ ಒಂದು ಭಾಗದಲ್ಲಿ ಈ ಗುರುತ್ವಾಕರ್ಷಣೆಯ ತರಂಗಗಳು ಉತ್ಪನ್ನವಾಗಿವೆ. ಈ ಪ್ರಯೋಗದ ಭೌತವಿಜ್ಞಾನಿಗಳು ಅಂದಾಜು ಮಾಡಿರುವ ಪ್ರಕಾರ, ಈ ಕೃಷ್ಣ-ರಂಧ್ರಗಳ ದ್ರವ್ಯರಾಶಿಯು, ನಮ್ಮ ಸೂರ್ಯನ ದ್ರವ್ಯರಾಶಿಗಿಂತ ಸುಮಾರು 29 ಮತ್ತು 36 ಪಾಲು ಹೆಚ್ಚಾಗಿದ್ದು, ಇವುಗಳ ವಿಲೀನದ ನಂತರ ರಚಿತವಾಗಿರುವ ಕೃಷ್ಣ-ರಂಧ್ರದ ದ್ರವ್ಯರಾಶಿ ನಮ್ಮ ಸೂರ್ಯನ ದ್ರವ್ಯರಾಶಿಗಿಂತ 62 ಪಾಲು ಹೆಚ್ಚಾಗಿದೆ. ಈ ಅನ್ವೇಷಣೆಯ ಫಲಿತಾಂಶಗಳು, ವಿಜ್ಞಾನಿಗಳು ಐನಸ್ಟೈನನ ಸಾಮಾನ್ಯ ಸಾಪೇಕ್ಷತಾವಾದವನ್ನು, ಹಿಂದೆಂದೂ ಸಾಧ್ಯವಾಗಿರದಂತಹ ರೀತಿಗಳಲ್ಲಿ ಒರೆಹಚ್ಚಿನೋಡಲು ಅವಕಾಶಮಾಡಿಕೊಟ್ಟಿದೆ. ಈ ಎರಡು ಕೃಷ್ಣ-ರಂಧ್ರಗಳ ವಿಲೀನದ ಪ್ರಕ್ರಿಯೆಯಲ್ಲಿ ಬಿಡುಗಡೆಯಾರಬಹುದಾದ ಭಾರಿ ಪ್ರಮಾಣದ ಶಕ್ತಿ ಮತ್ತು ಅಂತಿಮ ಕ್ಷಣಗಳಲ್ಲಿ ಅದರಿಂದ ಉತ್ಪನ್ನವಾಗಿರುವ ಗುರುತ್ವಾಕರ್ಷಣೆಯ ತರಂಗಗಳಿಂದ ಹೊಮ್ಮಿರುವ ಪ್ರಭೆಯು, ನಮ್ಮ ಸಂಪೂರ್ಣ ವಿಶ್ವವು ಬೆಳಕಿನಲ್ಲಿ ಪ್ರಕಾಶಿಸಬಹುದಾದಷ್ಟು ತೇಜಸ್ಸಿಗೆ 50 ರಷ್ಟು ಹೆಚ್ಚಿನ ಪ್ರಭೆಯನ್ನು ಬೀರಿರಬೇಕು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇದೊಂದು ಅಪೂರ್ವವಾದ ಪ್ರಕ್ರಿಯೆಯೇ ಸರಿ! ಮಾನವನ ಊಹೆಗೂ ಮೀರಿದ್ದಲ್ಲವೇ!

ಈ ಸಂಶೋಧನೆಯ ಮಹತ್ವವೇನು?

ಪತ್ರಿಕಾ ವಲಯ ಮತ್ತು ಪ್ರಚಾರ ಮಾಧ್ಯಮದವರು ಈ ಸಂಶೋಧನೆಯನ್ನು, 400 ವರ್ಷಗಳ ಹಿಂದೆ ಗೆಲಿಲಿಯೋ ತನ್ನ ದೂರದರ್ಶಕವನ್ನು ಗುರುಗ್ರಹದ ಉಪಗ್ರಹಗಳತ್ತ ಗುರಿಯಿಟ್ಟು ನೋಡಿದಾಗ ಸಂಭವಿಸಿದ ಪ್ರಗತಿಗೆ ಹೋಲಿಸಿ ಸ್ವಲ್ಪ ಉತ್ಪ್ರೇಕ್ಷಿಸಿದ್ದಾರೆ ಎನ್ನಬಹುದು. ಈ ಅವಿಷ್ಕಾರದ ಸತ್ಯಾಂಶವು, ಬಹುಶಃ ಉತ್ಪ್ರೇಕ್ಷೆಗಿಂತ ಬಹಳ ದೂರವೇನಿಲ್ಲ. ಮುಂದಿನ ಮೂರು ವರ್ಷಗಳಲ್ಲಿ, LIGO ಪತ್ತೇಕಾರದ ಸೂಕ್ಷ್ಮಗ್ರಾಹಿತ್ವವನ್ನು ಉತ್ತಮಪಡಿಸಲಾಗುತ್ತದೆ, ಇದರ ಜೊತೆಗೆ ಸೇರ್ಪಡೆಯಾಗಲಿರುವ ಜಪಾನ್ ದೇಶದ KAGRA, ಯೂರೋಪಿನ Virgo ಮತ್ತು ಭಾರತದ LIGO-india ಎಂಬ ಮೂರು ಹೊಸ ಶೋಧಕಗಳು, ಪ್ರಸಕ್ತ ಪತ್ತೇಕಾರಕ್ಕಿಂತ, ನಮ್ಮ ವಿಶ್ವದ ವೈಶಾಲ್ಯತೆಯ ಪರಿಮಾಣವನ್ನು 30-100 ಪಾಲು ಹೆಚ್ಚು ಸಮೀಕ್ಷಿಸುವ ಅವಕಾಶ ಮತ್ತು ಸಾಮರ್ಥ್ಯವನ್ನು ನಮ್ಮ ವಿಜ್ಞಾನಿಗಳಿಗೆ ನೀಡುತ್ತವೆ. ಸುಧಾರಿತಗೊಂಡ ಗುರುತ್ವಾಕರ್ಷಣ ತರಂಗಗಳ ಶೋಧಕಗಳ ಸಂಕೀರ್ಣ-ಜಾಲವ್ಯವಸ್ಥೆಯು, ಪ್ರತಿ ದಿನವೂ ಈ ಮೇಲೆ ಹೆಸರಿಸಿದ ಕೃಷ್ಣ-ರಂಧ್ರಗಳ ವಿಲೀನದಂತಹ ಒಂದು ಘಟನೆಯನ್ನು ಪತ್ತೆ ಮಾಡುವ ಸಾಧ್ಯತೆಗಳಿವೆ. ಇದರ ಜೊತೆಗೆ, ನ್ಯೂಟ್ರಾನ್ ನಕ್ಷತ್ರಗಳ ಸಂಘರ್ಷಣೆಗಳು (Collision of Neutron stars), ಮಹಾನವ್ಯಗಳು (Supernovae), ಹಾಗೂ ಇತರ ಸಮಾನರೀತಿಯ ಘಟನೆಗಳನ್ನು ಭೌತವಿಜ್ಞಾನಿಗಳು ವೀಕ್ಷಿಸಬಹುದಾದ ನಿರೀಕ್ಷೆಯಿದೆ. ಅಷ್ಟೇ ಅಲ್ಲದೇ, ನಮ್ಮ ವಿಜ್ಞಾನಿಗಳಿಗೆ ನಮ್ಮ ವಿಶ್ವದಲ್ಲಿರಬಹುದಾದ ವೈಪರೀತ್ಯ ಪರಿಸ್ಥಿತಿಗಳ ಬಗ್ಗೆ ಹೆಚ್ಚು ಆಳವಾಗಿ ಅಧ್ಯಯನ ನಡೆಸಲು ಸಹಾಯವಾಗುತ್ತದೆ. ಎಲ್ಲಕ್ಕಿಂತಲೂ ಪ್ರಮುಖವಾಗಿ, ಈ ಗುರುತ್ವಾಕರ್ಷಣೆಯ ತರಂಗಗಳು, ಮೂಲ ಭೌತಶಾಸ್ತ್ರ, ಖಭೌತಶಾಸ್ತ್ರ ಹಾಗೂ ವಿಶ್ವವಿಜ್ಞಾನಗಳ ಅಧ್ಯಯನದಲ್ಲಿ ಒಂದು ನೂತನ ಸಾಧನವಾಗುತ್ತದೆ ಎನ್ನಬಹುದು.

ಇದರ ಜೊತೆಗೆ, ಈ ಅವಿಷ್ಕಾರವು ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿಯೂ ಒಂದು ಬಲವಾದ ಪ್ರಭಾವವನ್ನು ಬೀರುವ ಸಾಧ್ಯತೆಯಿದೆ. ಇಂದು ಚಾಲ್ತಿಯಲ್ಲಿರುವ ನಮ್ಮ ತಂತ್ರಜ್ಞಾನಗಳು ಕೇವಲ ಮೂಲಭೂತ ಭೌತಶಾಸ್ತ್ರದ ತತ್ವಗಳಿಗೆ ಸೀಮಿತವಾಗಿದೆ ಎನ್ನುವುದನ್ನು ಈ ಶೋಧನೆ ನಮಗೆ ಎತ್ತಿತೋರಿಸಿದೆ. ಆದ್ದರಿಂದ ನಾವು ಈ ಎಲ್ಲೆಗಳನ್ನು ಮತ್ತಷ್ಟು ವಿಸ್ತರಿಸುತ್ತಾ ಮುನ್ನಡೆಯಬಹುದು. ಈ ಅವಿಷ್ಕಾರವು ವಿಜ್ಞಾನಕ್ಕೆ ಮತ್ತು ವಿಜ್ಞಾನಿಗಳು ಸಾಧಿಸಿರುವ ಒಂದು ಬೃಹತ್ ಸಾಧನೆಯಲ್ಲದೇ, ಈ ಪ್ರಯೋಗದಲ್ಲಿ  ಭಾಗಿಯಾಗಿದ್ದ ಅನೇಕ ಇಂಜಿನೀಯರುಗಳು, ಗಣಕ ತಂತ್ರಜ್ಞಾನಿಗಳು ಮತ್ತು ವಸ್ತು-ವಿಜ್ಞಾನಿಗಳ ಪಾಲಿನ ಅಪೂರ್ವ ಯಶಸ್ಸಾಗಿದೆ. ಎಲ್ಲಕ್ಕೂ ಮೇಲಾಗಿ, ಮುಂದಿನ ಪೀಳಿಗೆಯ ಯುವಕ-ಯುವತಿಯರಿಗೆ ವಿಜ್ಞಾನದಲ್ಲಿ ಭವಿಷ್ಯವನ್ನು ರೂಪಿಸಿ ಮುನ್ನಡೆಯಲು ಒಂದು ದೊಡ್ಡ ಪ್ರೇರಣೆಯೂ ಆಗಿದೆ. ವಿಜ್ಞಾನದಲ್ಲಿ ಪ್ರಗತಿಯ ನಡೆ ಸ್ವಲ್ಪ ನಿಧಾನವಾದರೂ, ಅದಕ್ಕೆ ಸಿಕ್ಕುವ ಫಲ ಮತ್ತು ಪುರಸ್ಕಾರಗಳು ಅಪರಿಮೇಯ. ಇದೊಂದು ಕೇವಲ ಬೌದ್ಧಿಕ ಕಸರತ್ತೇ ಅಲ್ಲ, ಜೊತೆಗೆ ಒಂದು ದೊಡ್ಡ ಸಾಹಸ ಮತ್ತು ಯಾರೊಬ್ಬರೂ ತುಳಿಯದ ಹಾದಿಯಲ್ಲಿ ಪ್ರಯಾಣಿಸುವ ಒಂದು ಸುವರ್ಣ ಅವಕಾಶವೂ ಆಗಿದೆ.

ಈ ಪ್ರಯಾಣ ಕೇವಲ ಈಗಷ್ಟೇ ಪ್ರಾರಂಭವಾಗಿದೆ! 

 ಈ ಲೇಖನದ ಮೂಲ ಲೇಖಕರು: ಈ ಪ್ರಯೋಗದಲ್ಲಿ ಕಳೆದ 27 ವರ್ಷಗಳಿಂದ ಸಕ್ರಿಯವಾಗಿ ಭಾಗವಹಿಸಿ, ಕಾರ್ಯನಿರ್ವಹಿಸಿರುವ, ನಮ್ಮ ವೇದಿಕೆಯ ಸದಸ್ಯರಲ್ಲಿ ಒಬ್ಬರಾದ ಪ್ರೊಫೆಸರ್ ಬಿ.ಎಸ್. ಸತ್ಯಪ್ರಕಾಶ್. ಅವರು ಕಾರ್ಡಿಫ಼ ವಿಶ್ವವಿದ್ಯಾಲಯದ ಭೌತಶಾಸ್ತ್ರ ಮತ್ತು ಖಗೋಳಶಾಸ್ತ್ರ ವಿಭಾಗದಲ್ಲಿ, ಗುರುತ್ವಾಕರ್ಷಣಾ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ. ಜೊತೆಗೆ ಗುರುತ್ವಾಕರ್ಷಣಾ ತರಂಗಗಳ ದತ್ತಾಂಶ ವಿಶ್ಲೇಷಣೆಯ ತಜ್ಞರೂ (Data Analysis of Gravitational Waves) ಹೌದು.

ಪ್ರೊಫ಼ೆಸರ್  ಸತ್ಯಪ್ರಕಾಶ ಅವರ ಮತ್ತಷ್ಟು ಲೇಖನಗಳನ್ನು ಓದುವ ಆಸಕ್ತಿ ಇರುವವರು ಈ ಕೆಳಗಿನ ಸಂಪರ್ಕ ಕೊಂಡಿಯನ್ನು ಕ್ಲಿಕ್ಕಿಸಿ: http://blogs.cardiff.ac.uk/sky/