ಜಯಂತ್ ವಿಷ್ಣು ನಾರ್ಲೀಕರ್ (JVN)- ಭಾರತೀಯ ವಿಜ್ಞಾನ ಲೋಕದ ಹೊಳೆ ಹೊಳೆಯುವ ಧ್ರುವತಾರೆ – ಡಾ ಉಮಾ ವೆಂಕಟೇಶ್ ಬರೆದ ಲೇಖನ

 ನಮ್ಮ ಭಾರತ ದೇಶದಲ್ಲಿ ಜ್ಞಾನ ವಿಜ್ಞಾನದ ಬೆಳಕನ್ನು ಹರಡುವ ಅನೇಕ ಜ್ವಲಂತ ನಕ್ಷತ್ರಗಳಿವೆ. ಈ ನಕ್ಷತ್ರಗಳ ಹೊಳಪನ್ನು ಅನೇಕ ಕ್ಷೇತ್ರಗಳು ಪ್ರತಿಫಲಿಸುತ್ತಿವೆ. ಆರೋಗ್ಯದಲ್ಲಾದರೆ ಆಯುರ್ವೇದವಿದೆ; ಗಣಿತದಲ್ಲಾದರೆ ಶೂನ್ಯದ ಕೊಡುಗೆಯಿದೆ; ಪಾಕಶಾಸ್ತ್ರದಿಂದ ಹಿಡಿದು ಪರಿಪಕ್ವವಾದ ಅನೇಕ ಕಲೆಗಳು, ಸಂಗೀತ, ಸಾಹಿತ್ಯ ಮತ್ತು ಸಾಮಾಜಿಕ ಬದಲಾವಣೆಗಳು, ಚಳವಳಿಗಳು – ಅನೇಕಾನೇಕ ಧಾರೆಗಳು ಹರಿದ ನೆಲವದು. ಅಂತಹ ಧಾರೆಗಳಲ್ಲಿ ಒಂದು ಮಿನುಗುವ ಧ್ರುವತಾರೆ ಜಯಂತ್ ನಾರ್ಲೀಕರ್. ವಿಶ್ವಮಟ್ಟದಲ್ಲಿ ಅತ್ಯುತ್ತಮ ಭೌತಶಾಸ್ತ್ರದ ವಿಜ್ಞಾನಿಯಾಗಿ ಜಯಂತ್ ನಾರ್ಲೀಕರ್ ಖಭೌತ ಶಾಸ್ತ್ರದಲ್ಲೂ ಮಹತ್ತರ ಕೊಡುಗೆಯಿತ್ತು ಭಾರತದ ಕೀರ್ತಿ ರತ್ನವಾಗಿದ್ದಾರೆ. ಅವರ ಬಗ್ಗೆ ಡಾ.ಉಮಾ ವೆಂಕಟೇಶ್ ಸವಿವರವಾಗಿ, ಸುಲಲಿತವಾಗಿ ಬರೆದಿದ್ದಾರೆ. ಅವರ ಈ ಮತ್ತೊಂದು ವಿಜ್ಞಾನ-ವಿಶೇಷದ ಲೇಖನವನ್ನು ಓದಿ. ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ಇತರ ಸಹೃದಯ ಓದುಗರೊಡನೆ ಹಂಚಿಕೊಳ್ಳಿ. ಸಂ

1964 ಕೊನೆಯ ದಿನಗಳವು; ದೇಶದಾದ್ಯಂತ ಎಲ್ಲಾ ವೃತ್ತಪತ್ರಿಕೆಗಳೂ ತಮ್ಮ ಮೊದಲ ಪುಟದಲ್ಲಿ, ಪ್ರಸಿದ್ಧ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಒಬ್ಬ ಯುವ ಭಾರತೀಯ ಪ್ರಾಧ್ಯಾಪಕ, ಮತ್ತು ಅವನ ಹಿರಿಯ ಸಂಶೋಧನಾ ಸಹಭಾಗಿ ಇಬ್ಬರೂ, ತಮ್ಮ ನೂತನ ಗುರುತ್ವಾಕರ್ಷಣೆಯ ಸಿದ್ಧಾಂತದಲ್ಲಿ, ಐನಸ್ಟೈನನನ್ನೂ ಮೀರಿಸಿದ ಪ್ರತಿಪಾದನೆಯನ್ನು ಮಾಡಲು ಸಾಧ್ಯವಾಗಿತ್ತು ಎನ್ನುವ ಬಿಸಿ ಸುದ್ದಿಯನ್ನು ಸಿಡಿಸಿದ್ದರು. ಆಗ ತಾನೇ ಲಂಡನ್ನಿನ ಪ್ರತಿಷ್ಟಿತ ರಾಯಲ್ ಖಗೋಳ ಸೊಸೈಟಿಯ ಸಭೆಯಲ್ಲಿ ಘೋಷಿಸಲಾಗಿದ್ದ ಈ

ಜಯಂತ್ ವಿಷ್ಣು ನಾರ್ಲೀಕರ್
ಜಯಂತ್ ವಿಷ್ಣು ನಾರ್ಲೀಕರ್ b 1938

ಸುದ್ದಿಯನ್ನು, ವೈಜ್ಞಾನಿಕ ಪ್ರಪಂಚವು ಬಹಳ ಉತ್ಸಾಹದಿಂದಲೇ ಸ್ವಾಗತಿಸಿತ್ತು. ಬ್ರಿಟಿಷರ ದಾಸ್ಯದಿಂದ ವಿಮುಕ್ತವಾದ ತರುಣ ಭಾರತ ದೇಶಕ್ಕೆ, ಅಂತಹ ಭಾರಿ ಮನ್ನಣೆಯ ಅಗತ್ಯವಿತ್ತು. ಸ್ವತಂತ್ರ ಭಾರತವು ಸಮಾಜದ ಸರ್ವ ರಂಗಗಳಲ್ಲೂ, ಅದರಲ್ಲೂ ವೈಜ್ಞಾನಿಕ ವಲಯದಲ್ಲಿ ಪಾಶ್ಚಿಮಾತ್ಯ ದೇಶಗಳೊಂದಿಗೆ ಸರಿಸಮನಾಗಿ ಹೆಜ್ಜೆಹಾಕುತ್ತಾ ಮುಂದುವರೆಯುವ ಉತ್ಸಾಹ ಮತ್ತು ತವಕಗಳನ್ನು ಹೊಂದಿದ್ದು, ದೇಶವೊಂದರ ವಸ್ತುಪ್ರಗತಿಯಲ್ಲಿ, ವಿಜ್ಞಾನವು ಒಂದು ಪ್ರಮುಖ ಪರಿವರ್ತನಾ ವಾಹನವೆಂದು ನಂಬಲಾಗಿತ್ತು. ಭಾರತೀಯ ವಿಜ್ಞಾನ ದಿಗಂತದಲ್ಲಿ ಈ ರೀತಿಯ ಒಂದು ಮಹಾಸ್ಫೋಟದಂತೆ ತಮ್ಮ ಛಾಪನ್ನು ಒತ್ತಿದ ಆ ತರುಣ ವಿಜ್ಞಾನಿಯೇ ಜಯಂತ್ ವಿಷ್ಣು ನಾರ್ಲೀಕರ್. ರಾತ್ರೋರಾತ್ರಿ ಮನೆಮಾತಾದ ಅವರ ಯಶಸ್ಸಿನ ಕಥೆಯನ್ನು ತಿಳಿಯಲು ಓದುಗ ತನ್ನ ಕಲ್ಪನೆಯನ್ನು ಬಹಳ ವಿಸ್ತರಿಸಬೇಕಿಲ್ಲ. ಉದಯೋನ್ಮುಖ ಮತ್ತು ಮಹತ್ವಾಕಾಂಕ್ಷಿ ಭಾರತೀಯ ವಿಜ್ಞಾನ ಲೋಕದ ಉಜ್ವಲ ತಾರೆ, ಹಾಗೂ ಅಪ್ರತಿಮ ಆದರ್ಶ ಮಾದರಿಯಾದ ಜಯಂತ್ ನಾರ್ಲೀಕರ್, ತಮ್ಮ ಅಸಾಧಾರಣ ಪ್ರತಿಭೆ ಮತ್ತು ವೈಜ್ಞಾನಿಕ ಸಾಧನೆಗಳಿಗೆ ಭಾರತ ಸರ್ಕಾರದ ಅತ್ಯುತ್ತಮ ನಾಗರೀಕ ಪುರಸ್ಕಾರವಾದ ಪದ್ಮಭೂಷಣ ಪ್ರಶಸ್ತಿಯನ್ನು ತಮ್ಮ ಕಿರಿಯ ವಯಸ್ಸಿನಲ್ಲೇ ಪಡೆದ ಪ್ರತಿಭಾವಂತ ವ್ಯಕ್ತಿ, ಹಾಗೂ ಈ ಪ್ರಶಸ್ತಿಗೆ ಪಾತ್ರರಾದ ಅತ್ಯಂತ ಕಿರಿಯ ವ್ಯಕ್ತಿಯೂ ಹೌದು.

1938ರ ಜುಲೈ 19ರಂದು, ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಪಟ್ಟಣದಲ್ಲಿ (ಅಂದು ಕೊಲ್ಲಾಪುರ ಒಬ್ಬ ಸ್ವತಂತ್ರ ಅರಸನ ರಾಜ್ಯಾಡಳಿತಕ್ಕೆ ಒಳಪಟ್ಟಿತ್ತು) ಜನಿಸಿದ ಜಯಂತ್ ನಾರ್ಲೀಕರ್ (JVN) ಅವರ ತಂದೆ ವಿಷ್ಣು ವಾಸುದೇವ್ ನಾರ್ಲೀಕರ್ (VVN), ವಾರಾಣಾಸಿಯ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಒಬ್ಬ ಪ್ರಸಿದ್ಧ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿದ್ದು, ತಾಯಿ ಸುಮತಿ ಸಂಸ್ಕೃತ ವಿದ್ವಾಂಸರೆನಿಸಿದ್ದರು. ಹಾಗಾಗಿ ಜಯಂತ್ ಅವರಿಗೆ ಇಂದು ಬಹುತೇಕವಾಗಿ ನಮಗೆಲ್ಲಾ ಕೊರತೆಯಿರುವ, ಒಂದು ಸುಂದರವಾದ ಶಾಸ್ತ್ರೀಯ ಸ್ಪರ್ಶ ಮತ್ತು ಅಭಿರುಚಿಗಳ ಉತ್ತಮ ಸಂಯೋಜನೆಯಾದ ಸಂಸ್ಕೃತ ಭಾಷೆಯ ಒಂದು ಸುಸಂಸ್ಕೃತ ಹಾಗೂ ಆದರ್ಶ ಪಾಲನೆಯು ಅವರ ಪಾಲಿಗೆ ಲಭ್ಯವಾಗಿತ್ತು. ಆದ್ದರಿಂದಲೇ ಜಯಂತ್ ತಮ್ಮ ಮಾತುಕತೆಗಳ ಮಧ್ಯದಲ್ಲಿ ಸಂಸ್ಕೃತ ಭಾಷೆಯ ಸೂಕ್ತ ಹಾಗೂ ಶ್ರೇಷ್ಠ ಉಲ್ಲೇಖಗಳನ್ನು ಲೀಲಾಜಾಲವಾಗಿ ಬೆರೆಸುತ್ತಾ ನಡೆದಾಗ ಆಶ್ಚರ್ಯವೆನಿಸುವುದಿಲ್ಲ. ಭಾರತದಲ್ಲಿ ಅಂದು ಸಾಮಾನ್ಯ ಸಾಪೇಕ್ಷತೆಯ ಬಗ್ಗೆ (General Relativity) ನಡೆಸುತ್ತಿದ್ದ ಪ್ರಥಮಾನ್ವೇಷಕ ಸಂಶೋಧನೆಯಲ್ಲಿ ತೊಡಗಿದ್ದ  ವಿಜ್ನಾನಿಗಳಲ್ಲಿ, ಜಯಂತ್ ಅವರ ತಂದೆ ವಿಷ್ಣು ನಾರ್ಲೀಕರ ಮತ್ತು ಕಲ್ಕತ್ತಾದ ಎನ್.ಆರ್.ಸೆನ್ (N.R.Sen) ಸೇರಿದ್ದರು. ಹೀಗೆ ಜಯಂತ್ ನಾರ್ಲೀಕರ್ ಹುಟ್ಟುವಾಗಲೇ ಸಾಪೇಕ್ಷತೆಯನ್ನು ತಮ್ಮ ಮೊದಲ “ಜನ್ಮಘುಂಟಿ” ಅಂದರೆ ಮೊದಲ ನೀರಿನ ಗುಟುಕೆಂಬಂತೆ ಕುಡಿಯುತ್ತಲೇ ಬೆಳೆದಿದ್ದರೆನ್ನಬಹುದು. ಆದರೂ ಸಹಾ ಆಶ್ಚರ್ಯಕರವೆಂಬ ರೀತಿಯಲ್ಲಿ ಆ ಗಮನಾರ್ಹವಾದ ದೀಕ್ಷೆಗೆ ತಕ್ಕಂತೆಯೇ ತಮ್ಮ ಜೀವನದಲ್ಲಿ ವೈಜ್ಞಾನಿಕ ಸಾಧನೆಗೈದರು ಎನ್ನುವುದು ಇಲ್ಲಿ ಮುಖ್ಯ.

ತಮ್ಮ ಶಾಲಾ ದಿನಗಳಿಂದಲೇ ಜೆ.ವಿ.ಎನ್ ಒಬ್ಬ ಅಸಾಧಾರಣನಾದ ಸರ್ವತೋಮುಖ ವಿದ್ಯಾರ್ಥಿಯಾಗಿದ್ದು, ಎಲ್ಲಾ ವಿಷಯಗಳಲ್ಲೂ ಉತ್ತಮ ಅಂಕಗಳನ್ನು ಗಳಿಸುತ್ತಿದ್ದರು. ಅಷ್ಟೇ ಅಲ್ಲದೇ ಒಬ್ಬ ಕ್ರೀಡಾಳುವೂ ಆಗಿದ್ದು, ಉತ್ತಮ ಬ್ಯಾಡಮಿಂಟನ್ ಆಟಗಾರನಾಗಿದ್ದರು (ನಂತರ ದಿನಗಳಲ್ಲಿ ಟೆನಿಸ್ ಆಟಕ್ಕೆ ತಮ್ಮ ಆಸಕ್ತಿಯನ್ನು ಬದಲಿಸಿ, ಪುಣೆಯಲ್ಲಿ IUCAA ಸಂಸ್ಥೆಯ ನಿರ್ದೇಶಕರಾಗಿದ್ದಾಗ, ಪ್ರತಿ ದಿನ ಬೆಳಿಗ್ಗೆ ಟೆನಿಸ್ ಆಟದಲ್ಲಿ ಒಂದು ಸೆಟ್ ಆಡುವುದನ್ನು ತಪ್ಪಿಸುತ್ತಿರಲಿಲ್ಲ). ವಾರಾಣಾಸಿಯಲ್ಲಿ ಬೆಳೆದ ಜಯಂತ್ ಅವರು, ಉತ್ತರ ಭಾರತದ ಭಾಷೆ ಮತ್ತು ನಡವಳಿಕೆಗಳನ್ನು ರೂಢಿಸಿಕೊಂಡಿದ್ದರು. ತಮ್ಮ ಮಾತಾಪಿತೃಗಳಿಂದ ಬಳುವಳಿಯಾಗಿ ಬಂದಿದ್ದ ಮರಾಠಿಯ ನೇರವಾದ ಮತ್ತು ಶಿಸ್ತುಗಳೊಂದಿಗೆ ಮೇಳೈಸಿತ್ತಲ್ಲದೇ, ಮುಂದೆ ಅವರ ಕೇಂಬ್ರಿಡ್ಜಿನ ದಿನಗಳಲ್ಲೂ ಮತ್ತೊಮ್ಮೆ ಬಲವರ್ಧಿತವಾಗಿತ್ತು. ಅಷ್ಟೇ ಅಲ್ಲದೇ ಈ ಶಿಸ್ತು ಮನೆಯಲ್ಲಿ ಸದಾಕಾಲ ಅವರ ತಂದೆ ವಿಷ್ಣು ನಾರ್ಲೀಕರ್ ರೂಪದಲ್ಲಿ (VVN), ಮನೆಯಲ್ಲಿ ಒಂದು ಜೀವಂತ ಕೇಂಬ್ರಿಡ್ಜಿನಂತೆ ಕಂಡುಬರುತ್ತಿತ್ತು. ಈ ಸಾಂಸ್ಕೃತಿಕ ಮಾರ್ಗದರ್ಶನದ ಫಲಿತಾಂಶವನ್ನು, ಅವರ ಅದ್ಭುತವಾದ ವರ್ತನೆ ಮತ್ತು ನಡವಳಿಕೆಯ ವಿಶಿಷ್ಟತೆಯಲ್ಲಿ ಕಾಣಬಹುದಾಗಿತ್ತು. ಬನಾರಸ್ ವಿಶ್ವವಿದ್ಯಾಲಯದಂತಹ ಸ್ಥಳದ ಗತದಿನಗಳು, ಇಂತಹ ಸುಂದರವಾದ ಸಾಮಾಜಿಕ ತತ್ವಗಳನ್ನು ಪೋಷಿಸುತ್ತಿತ್ತು.

ಬನಾರಸ್ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದ ನಂತರ, ತಮ್ಮ ತಂದೆಯಂತೆ ಜೆವಿಎನ್ ಕೂಡಾ, ಪ್ರತಿಷ್ಟಿತ ಟಾಟಾ ವಿದ್ವತ್ ವೇತನವನ್ನು ಪಡೆದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಹೋದರು, ಹಾಗೂ ಅಲ್ಲಿನ ಅಸಾಧಾರಣವೆನಿಸಿದ ಗಣಿತದ ಟ್ರೈಪೋಸ್ ಪರೀಕ್ಷೆಯನ್ನು ದಾಖಲೆಯ ಸಮಯದಲ್ಲಿ ಮಾಡಿ ಮುಗಿಸಿ, ಸೀನಿಯರ್ ರಾಂಗ್ಲರ್ ಪದವಿ ಪಡೆದು ತಮ್ಮ ಕೀರ್ತಿಯನ್ನು ಮೆರೆದಿದ್ದರು. ಆ ಸಮಯದಲ್ಲಿ ಕೇಂಬ್ರಿಡ್ಜಿನಲ್ಲಿದ್ದ ಫ಼್ರೆಡ್ ಹಾಯ್ಲ್ ಎಂಬ ಪ್ರಸಿದ್ಧ ಭೌತಶಾಸ್ತ್ರಜ್ಞರು (Fred Hoyle), ಖಗೋಳಶಾಸ್ತ್ರದಲ್ಲಿ ಸಂಶೋಧನೆಗೆ ಹೆಸರುವಾಸಿಯಾಗಿದ್ದು, ಡಾಕ್ಟರೇಟ್ ಪದವಿಯ ಮಾರ್ಗದರ್ಶನಕ್ಕೆ ಬಹಳ ಬೇಡಿಕೆಯಲ್ಲಿದ್ದ ವ್ಯಕ್ತಿಯಾಗಿದ್ದರು. ಜಯಂತರ ಜೊತೆಯಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳ ಬಳಗದಲ್ಲಿ, ಅತ್ಯಂತ ಪ್ರತಿಭಾವಂತರ ಸಾಲೇ ಇದ್ದು, ಅವರಲ್ಲಿ ಸ್ಟೀಫನ್ ಹಾಕಿನ್ಸ್ (Stephen Hawking), ಮಾರ್ಟಿನ್ ರೀಸ್ (Martin Rees), ಬ್ರಾಂಡನ್ ಕಾರ್ಟರ್ (Brandon Carter), ಮತ್ತು ಜಾರ್ಜ್ ಎಲ್ಲಿಸ್ (George Ellis) ರಂತಹ ಅತ್ಯಂತ ಸುಪ್ರಸಿದ್ಧರ ಗೋಷ್ಠಿಯೇ ಇತ್ತಲ್ಲದೇ, ಅವರೆಲ್ಲಾ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿರುವ ವಿಜ್ಞಾನಿಗಳೆನಿಸಿದ್ದಾರೆ.

ಇಂತಹ ಅಸಾಧಾರಣ ಪ್ರತಿಭೆ, ಮತ್ತು ಬುದ್ಧಿವಂತಿಕೆಯ ಸಮೃದ್ಧಿಯ ಮಧ್ಯೆ, ಹಾಯ್ಲ್ ಅವರು, ಜಯಂತ್ ನಾರ್ಲೀಕರ್ ಅವರನ್ನು ತಮ್ಮ ಡಾಕ್ಟರೇಟ್ ವಿದ್ಯಾರ್ಥಿಯನ್ನಾಗಿ ಆರಿಸಿದ್ದು, ಒಬ್ಬ ವಿದ್ಯಾರ್ಥಿಯಾಗಿ ಅವರಿಗಿದ್ದ ಪ್ರಖ್ಯಾತಿ, ಅವರ ಬುದ್ದಿಮತ್ತೆ ಮತ್ತು ಸ್ಥಾನಮಾನಗಳನ್ನು ಎತ್ತಿ ತೋರುತ್ತದೆ. ಅಷ್ಟೇ ಅಲ್ಲದೇ, ಒಬ್ಬ ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗ ಗಣ್ಯನೀಯವೆನಿಸಿದ್ದ ಸ್ಮಿತ್ ಪ್ರಶಸ್ತಿಯನ್ನು ಪಡೆದಿದ್ದ ಜಯಂತ್, ಮುಂದೆ ಐದು ವರ್ಷಗಳ ನಂತರ ರೋಜರ್ ಪೆನ್ರೋಸ್ (Roger Penrose) ಮತ್ತು ಸ್ಟೀಫನ್ ಹಾಕಿನ್ಸ್ ಅಂತಹವರ ಭವ್ಯ ಸನ್ನಿಧಿಯಲ್ಲಿ ಗಳಿಸಿದ್ದ ಮತ್ತೊಂದು ಪ್ರತಿಷ್ಟಿತ ಪುರಸ್ಕಾರವಾದ ಆಡಮ್ಸ್ ಪ್ರಶಸ್ತಿ ಇಲ್ಲಿ ಖಂಡಿತವಾಗಿಯೂ ಉಲ್ಲೇಖಾರ್ಹವಾದ ಸಂಗತಿ. ತಮ್ಮ ಗುರು ಮತ್ತು ಮಾರ್ಗದರ್ಶಿ ಫ಼್ರೆಡ್ ಹಾಯ್ಲರಂತೆ, ಜಯಂತ್ ಕೂಡಾ ಸಂಪ್ರದಾಯಕವಲ್ಲದ, ಆದರೆ ಮೂಲಭೂತವೆನಿಸಿದ ವೈಜ್ಞಾನಿಕ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವುದನ್ನು ಇಷ್ಟಪಡುತ್ತಿದ್ದರು. ಖಗೋಳಶಾಸ್ತ್ರಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡುವ ಕಾರ್ಯವನ್ನು ಮುಂದುವರೆಸಿದ ಜಯಂತ್ ನಾರ್ಲೀಕರ್ ಅವರ ಕಾರ್ಯಕ್ಕೆ ದೊರೆಯಬೇಕಾಗಿದ್ದ ಅರ್ಹ ಮೆಚ್ಚುಗೆ ಸಿಗಲಿಲ್ಲ. ಅಂದು ಅವರು ನುಡಿದಿದ್ದ ಹಲವಾರು ಭವಿಷ್ಯವಾಣಿಗಳು ಮತ್ತು ಕಲ್ಪನೆಗಳು ಆ ಸಮಯಕ್ಕೆ ಮೀರಿದ ವಿಷಯಗಳೆನಿಸಿದ್ದು, ಅಂದು ಅವನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಆದಾಗ್ಯೂ ಮುಂದೆ ವೀಕ್ಷಣೆಗಳ ಮೂಲಕ ಪರಿಶೀಲಿಸಿದ ನಂತರ, ವೈಜ್ಞಾನಿಕ ಸಮುದಾಯದವರು ಆ ಕಲ್ಪನೆಗಳನ್ನು ಅಂಗೀಕರಿಸಿದ್ದಾರೆ. ವಿಜ್ಞಾನದಲ್ಲಿ ಯಾವುದೇ ಒಬ್ಬ ವಿಜ್ಞಾನಿಯ ಕಾರ್ಯದ ನಿಜವಾದ ಮಾಪನವು, ಹೊಸ ಕಲ್ಪನೆಯೊಂದನ್ನು ಪ್ರತಿಪಾದಿಸುವ, ಅಥವಾ ಯಾವುದೋ ಭೌತಿಕ ವಿದ್ಯಮಾನವೊಂದನ್ನು ಮುನ್ನುಡಿಯುವ ಸೃಜನಶೀಲತೆಯಾಗಿದ್ದು, ಅದನ್ನು ಒಂದಲ್ಲಾ ಒಂದು ದಿನ ವೈಜ್ಞಾನಿಕ ಪರಿಶೀಲನೆಗಳ ಮೂಲಕ ಎಲ್ಲರೂ ಸ್ವೀಕರಿಸುತ್ತಾರೆ. ಆ ರೀತಿಯಲ್ಲಿ ಜಯಂತ್ ನಾರ್ಲೀಕರ್ ಅವರ ಕೊಡುಗೆಗಳು ಇಂದಿಗೂ ಅತ್ಯಂತ ಉತ್ತಮವಾದ ವೈಜ್ಞಾನಿಕ ಸಾಧನೆಗಳ ನಡುವೆ ಇದೆಯಾದರೂ, ಅವುಗಳು ಅರ್ಹವಾದ ಗಮನ ಸೆಳೆಯುವಲ್ಲಿ ವಿಫಲವಾಗಿವೆ. ಖಗೋಳ ವೀಕ್ಷಣೆಗಳು ನಿರ್ಣಾಯಕ ಉತ್ತರಗಳನ್ನು ನೀಡುವಷ್ಟು ಸದಾ ತೀಕ್ಷ್ಣವಾಗಿಲ್ಲದಿರಬಹುದು, ಆದರೆ ಎಲ್ಲಾ ವೀಕ್ಷಣೆಗಳನ್ನು ಒಂದು ಸೈದ್ಧಾಂತಿಕ ಮಾದರಿಯ ಚೌಕಟ್ಟಿನಲ್ಲಿ ನಿರೂಪಿಸಲಾಗುತ್ತದೆ. ಈ ನಿರೂಪಣೆಗಳು ಅತ್ಯಂತ ಜಟಿಲ ಮತ್ತು ಸಂಕೀರ್ಣವಾದ ವಿಷಯವಾಗಿದೆ. ಪ್ರಾಮಾಣಿಕವಾಗಿ ಸತ್ಯವನ್ನರಸುವ ಪ್ರತಿಯೊಬ್ಬರ ಮನಸ್ಸು, ಒಂದು ಮೂಲಭೂತದ ಮಟ್ಟದಲ್ಲಿ ಮುಕ್ತವಾಗಿರಬೇಕು. ಆದರೆ ದುರದೃಷ್ಟವಶಾತ್ ಇಂದಿನ ವೈಜ್ಞಾನಿಕ ಸಮುದಾಯದಲ್ಲಿ ಇಂತಹದೊಂದು ಅಪೇಕ್ಷಣೀಯ ಮತ್ತು ತಾರ್ಕಿಕವಾದ ನಿಲುವು ಕಂಡುಬರುವುದಿಲ್ಲ. ಇಂದು ಪ್ರತಿಯೊಬ್ಬರ ಗಮನವೂ “ಗೆದ್ದೆತ್ತಿನ ಬಾಲಹಿಡಿಯುವ’’ ವಿಚಾರಗಳತ್ತ ಸೆಳೆಯಲ್ಪಟ್ಟಿದೆ, ಹಾಗೂ ಇತರ ಸಮರ್ಥವಾದ ಪರ್ಯಾಯಗಳನ್ನು ಯಾರೂ ಗೌರವಿಸದೆ ಬಹಿಷ್ಕರಿಸುತ್ತಿದ್ದಾರೆ. ಇದು ವಿಜ್ಞಾನಕ್ಕೆ ಮತ್ತು ಅದರ ಬೆಳವಣಿಗೆಗೆ ಆರೋಗ್ಯಕರವಲ್ಲ.

ಆದರೆ J.V.N ಯಾವಾಗಲೂ ಈ “ಗೆದ್ದೆತ್ತಿನ-ಬಾಲ ಹಿಡಿಯುವ ರೋಗಗ್ರಸ್ಥರ” ಒಂದು ಬಲಿಷ್ಠ ಸಮಾನಸ್ಕಂದರ ಗುಂಪನ್ನು ಕೆಣಕುವಂತಹ ಮೂಲಭೂತ ಸಮಸ್ಯೆಗಳ ಬಗ್ಗೆ ಸಂಶೋಧನೆ ನಡೆಸುವುದರಲ್ಲಿ ಆಸಕ್ತಿಹೊಂದಿದ್ದು, ಆ ಗುಂಪಿನಲ್ಲಿ ಎದ್ದುಕಾಣುವ ವ್ಯಕ್ತಿಯೆನಿಸಿದ್ದಾರೆ. 1960ರ ಆರಂಭಿಕ ದಿನಗಳಲ್ಲಿ ಕೇಂಬ್ರಿಡ್ಜಿನಲ್ಲಿದ್ದ ಸಮಯದಿಂದಲೂ ಅವರಲ್ಲಿದ್ದ ಈ ವಿಶಿಷ್ಟ ಗುಣವನ್ನು ನಾವು, ಇಂದಿಗೂ ಕಾಣಬಹುದು. ಈ ಹಿಂದೆಯೇ ಹೇಳಿದಂತೆ, ಈ ಗುಣವನ್ನು ಅವರು ತಮ್ಮ ಗುರು ಫ಼್ರೆಡ್ ಹಾಯ್ಲರಿಂದ ಬಹುಶಃ ಸಂಪಾದಿಸಿರಬಹುದು. ಅದಕ್ಕಿಂತಲೂ ಮುಖ್ಯವಾಗಿ, ಹಾಯ್ಲರಂತೆಯೇ, ಜಯಂತ್ ನಾರ್ಲೀಕರ್ ಅವರಿಗೂ ತಮ್ಮದೇ ಆದ ಒಂದು ಸ್ವಂತಿಕೆಯಿದ್ದು, ಸದಾ ಕಾಲವೂ ತೀವ್ರವಾದ ಸ್ವತಂತ್ರ ಮನೋಭಾವ, ಹಾಗೂ ಗೆದ್ದೆತ್ತಿನ ಬಾಲವನ್ನನುಸರಿಸುವವರ ವಿರುದ್ಧ ಹೋರಾಡುವ ಒಂದು ಸ್ವಭಾವವಿದೆ. ಅಷ್ಟೇ ಅಲ್ಲದೇ, ತಮ್ಮ ಸ್ವಂತ ನಿರ್ಧಾರಣದ ಪ್ರಕಾರ, ಯಾವುದೇ ಒಂದು ದೃಢವಾದ ಸಿದ್ಧಾಂತವೂ, ಒಂದು ಸ್ವತಂತ್ರವಾದ, ಮತ್ತು ನಿಷ್ಪಕ್ಷವಾದ ಪರೀಕ್ಷೆಗೊಳಗಾಗಿ, ಅದನ್ನೆದುರಿಸಿ ನಿಲ್ಲದಿದ್ದಲ್ಲಿ, ಅದನ್ನು ಪ್ರಶ್ನಿಸಿ, ಅದಕ್ಕೆ ಸವಾಲೊಡ್ಡುವಂತಹ ಒಂದು ಧೈರ್ಯ ಮತ್ತು ಗಾಢ-ನಂಬಿಕೆಗಳು ಅವರಲ್ಲಿವೆ. ಇದನ್ನೇ ಅವರು ತಮ್ಮ ವೈಜ್ಞಾನಿಕ ವೃತ್ತಿಜೀವನದುದ್ದಕ್ಕೂ ನಡೆಸುತ್ತಲೇ ಬಂದಿದ್ದಾರೆ. ಅವರ ಆನಂತರದ ವೃತ್ತಿಪರ ಪ್ರತ್ಯೇಕೀಕರಣವು, ಸತ್ಯ ಮತ್ತು ತತ್ವಗಳನ್ನು ವಸ್ತುನಿಷ್ಠವಾಗಿ, ಹಾಗೂ ನಿಷ್ಪಕ್ಷಪಾತವಾಗಿ ಪರಿಶೀಲಿಸುವಾಗ, ಹಿಂಜರಿಯದೆ, ಖಚಿತವಾದ ನಿಷ್ಠೆಗೆ ಅಂಟಿಕೊಳ್ಳುವ ಒಂದು ಸ್ವಭಾವದಿಂದಲೇ ಉದ್ಭವಿಸಿದೆ ಎಂದು ಹೇಳಬಹುದು.

ಈಗಂತೂ ಬಿಗ್-ಬ್ಯಾಂಗ್ ಮಹಾಸ್ಫೋಟ ಸಿದ್ಧಾಂತದ ವಿರುದ್ಧ ದನಿಯೆತ್ತಿರುವ ಗುಂಪಿನ ಏಕೈಕ ಸದಸ್ಯರಾಗಿರುವ ಒಂದು ಹಾಸ್ಯಾಸ್ಪದ ಅಲ್ಪಸಂಖ್ಯಾತ ಕುಲದ JVN, ಅವರ ಪ್ರಚಲಿತ ವಿಶ್ವವಿಜ್ಞಾನದ ವಿರುದ್ಧದ ಟೀಕೆಯನ್ನು ಇನ್ನೂ ವಿಜ್ಞಾನಿಗಳು ಗೌರವದಿಂದ ಗಂಭೀರವಾಗಿಯೇ ಪರಿಗಣಿಸುತ್ತಿದ್ದಾರೆ. ಇದಕ್ಕೆ ಕಾರಣ ಅವರು ನೀಡಿರುವ ಹಲವಾರು ಮೂಲಭೂತ ಕೊಡುಗೆಗಳು. ಅವನ್ನು ಯಾರೂ ಕಡೆಗಣಿಸಲು ಸಾಧ್ಯವಾಗಿಲ್ಲ. ಅವುಗಳ ಸ್ವಂತಿಕೆ ಮತ್ತು ಸೃಜನಶೀಲತೆಯನ್ನು ಗುರ್ತಿಸಿರುವ ವೈಜ್ಞಾನಿಕ ಸಮುದಾಯವು, ಅವರನ್ನು 1994-1997ರ ಅವಧಿಯಲ್ಲಿ, ಅಂತರಾಷ್ಟ್ರೀಯ ಖಗೋಳಶಾಸ್ತ್ರ ಸಂಘದ, ವಿಶ್ವವಿಜ್ಞಾನ ಆಯೋಗದ ಅಧ್ಯಕ್ಷರನ್ನಾಗಿ ಚುನಾಯಿಸಿದ್ದು ಪ್ರತ್ಯಕ್ಷ ಸಾಕ್ಷಿಯಾಗಿದೆ. ಇದೊಂದು ಆರೋಗ್ಯಕರ ಬೆಳವಣಿಗೆಯಾಗಿದ್ದು, ಪ್ರಾಮಾಣಿಕವಾಗಿ ಸತ್ಯವನ್ನರಸುವ ವಿಜ್ಞಾನದ ಅಭಿವೃದ್ಧಿಗೆ ಇದರ ಅವಶ್ಯಕತೆಯಿದೆ. JVN ನಿಜವಾಗಿಯೂ ಇಂತಹ ಪರಂಪರೆಯನ್ನು ಅನುಸರಿಸುತ್ತಾ ನಡೆದಿರುವ ಒಬ್ಬ ಆದರ್ಶ ವಿಜ್ಞಾನಿಯೆನಿಸಿದ್ದಾರೆ. ಜನಗಳ ನಿತ್ಯ ಜೀವನದಲ್ಲಿ ವಿಜ್ಞಾನವು ವಹಿಸಿರುವ ಅರ್ಥಪೂರ್ಣ ಪಾತ್ರದ ಬಗ್ಗೆ ಪ್ರವಚನಗಳನ್ನು ನೀಡಿ, ಅವರ ಮನಗಳಲ್ಲಿ ವೈಜ್ಞಾನಿಕ ಪದ್ಧತಿಗಳ ಬಗ್ಗೆ ತಿಳುವಳಿಕೆಯನ್ನು ನೀಡುವ ಕಾರ್ಯವನ್ನು, ಒಂದು ಪೂರ್ಣ ವಿಶ್ವಾಸ ಮತ್ತು ನಿಷ್ಠೆಯಿಂದ ನಡೆಸುತ್ತಾ ಬಂದಿರುವ ಜಯಂತ್ ನಾರ್ಲೀಕರ್, ಭಾರತದ ಜನಗಳ ಮನದಲ್ಲಿರುವ ಮೂಢನಂಬಿಕೆಗಳು, ಮತ್ತು ಜ್ಯೋತಿಶಾಸ್ತ್ರಗಳಲ್ಲಿರುವ ಅಂಧ ವಿಶ್ವಾಸದ ವಿರುದ್ಧ ತಮ್ಮ ಧ್ವನಿಯನ್ನು ನಿರಂತರವಾಗಿ ಎತ್ತಿ ಹಿಡಿದ ಒಬ್ಬ ಪ್ರಮುಖ ವಿಜ್ಞಾನಿಯೆನಿಸಿದ್ದಾರೆ.

photo-2

ತಮ್ಮ ಜನಪ್ರಿಯ ವಿಜ್ಞಾನ ಪ್ರವಚನಗಳನ್ನು ಎಲ್ಲಾ ವರ್ಗಗಳಲ್ಲೂ ನೀಡಿ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಗಳಲ್ಲಿ ತಮ್ಮ ಪ್ರಖ್ಯಾತಿಯನ್ನು ಮೆರೆದಿದ್ದಾರೆ. ಮೂಲಭೂತ ಭೌತಶಾಸ್ತ್ರ, ಖಭೌತಶಾಸ್ತ್ರ ಮತ್ತು ವಿಶ್ವವಿಜ್ಞಾನಗಳಲ್ಲಿ ಅವರು ನೀಡಿರುವ ಪ್ರಥಮಾನ್ವೇಷಕ ಕೊಡುಗೆಗಳು ಹಲವಾರು. ಅವರ ಅನೇಕ ಕಲ್ಪನೆಗಳು ಅವರು ಪ್ರತಿಪಾದಿಸಿದ ಸಮಯಕ್ಕೆ ಸ್ವಲ್ಪ ತೀವ್ರಗಾಮಿಯೆನಿಸಿದರೂ, ತರುವಾಯ ಸರಿಯೆಂದು ಸಾಬೀತಾಗಿವೆ. ಆದರೆ, ಆ ಕಲ್ಪನೆಗಳಿಗೆ ಸಿಕ್ಕಬೇಕಾದ ಅರ್ಹವಾದ ಮೆಚ್ಚುಗೆ ಇಲ್ಲಿಯವರೆಗೂ ದೊರೆತಿಲ್ಲದಿರುವುದು ಸ್ವಲ್ಪ ವಿಪರ್ಯಾಸವೇ ಅಲ್ಲದೇ, ಒಂದು ನಿಗೂಢವಾದ ವಿಷಯವೂ ಹೌದು.

ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ವಿಶ್ವವಿಜ್ಞಾನದ ಸಂಶೋಧನೆಗೆ ಹೆಸರಾದ ಜಯಂತ್, ಜನಪ್ರಿಯ ಬಿಗ್-ಬ್ಯಾಂಗ್ ಮಾದರಿಗೆ ಪರ್ಯಾಯವಾದ, ಸ್ಥಿರಸ್ಥಿತಿ ವಿಶ್ವದ ಮಾದರಿಯನ್ನು ಹುಟ್ಟುಹಾಕಿದವರಲ್ಲಿ ಒಬ್ಬರು. ಗುರುತ್ವದ ಸರಹದ್ದುಗಳು, ಮತ್ತು ಮ್ಯಾಕ್ಸ್ ನಿಯಮಗಳು (Mach’s Principle), ಕ್ವಾಂಟಮ್ ವಿಶ್ವವಿಜ್ಞಾನ (Quantum Cosmology), ಹಾಗೂ ಭೌತಶಾಸ್ತ್ರದಲ್ಲಿ ಹಲವಾರು ಸಕ್ರಿಯವಾದ ಸಂಶೋಧನೆಗಳನ್ನು ನಡೆಸಿರುವ ಜಯಂತ್ ನಾರ್ಲೀಕರ್, ಇತ್ತೀಚೆಗೆ ಬಾಹ್ಯಾಕಾಶ ಸಂಶೋಧನೆಯಲ್ಲೂ ತಮ್ಮ ಹೆಗ್ಗಳಿಕೆಯನ್ನು ಮೆರೆದಿದ್ದಾರೆ. 1999ರಿಂದ, ಅಂತರಾಷ್ಟ್ರೀಯ ಖ್ಯಾತಿಯುಳ್ಳ ವಿಜ್ಞಾನಿಗಳ ತಂಡದ ನಾಯಕತ್ವವನ್ನು ವಹಿಸಿದ್ದಾರೆ. ಅವರು ನಡೆಸುತ್ತಿರುವ ಒಂದು ಪ್ರಥಮಾನ್ವೇಷಕ ಪ್ರಯೋಗದಲ್ಲಿ, ಸುಮಾರು 41 ಕಿಲೋಮೀಟರುಗಳವರೆಗಿನ ಎತ್ತರದವರೆಗೂ ವಾಯುವಿನ ನಮೂನೆಗಳನ್ನು ಸಂಗ್ರಹಿಸಿ, ಅದರಲ್ಲಿನ ಸೂಕ್ಷ್ಮಾಣು ಜೀವಿಗಳನ್ನು ವಿಶ್ಲೇಷಿಸಿ ನೋಡುತ್ತಿದ್ದಾರೆ. ಈ ರೀತಿಯಾಗಿ, 2001, ಮತ್ತು 2005ರಲ್ಲಿ ಸಂಗ್ರಹಿಸಿದ ಸ್ಯಾಂಪಲ್ಲುಗಳು, ಹಲವಾರು ಗುಂಪಿನ ಜೀವ ಕಣಗಳು, ಮತ್ತು ಬ್ಯಾಕ್ಟೀರಿಯಾಗಳನ್ನು ಪತ್ತೆಹಚ್ಚಿ, ನಮ್ಮ ಭೂಮಿಯನ್ನು ಸದಾಕಾಲ ಈ ಸೂಕ್ಷ್ಮಾಣುಜೀವಿಗಳು ಬಂದು ಅಪ್ಪಳಿಸುತ್ತವೆ, ಹಾಗೂ ಇಂತಹ ಜೀವಿಗಳೇ ನಮ್ಮ ಭೂಮಿಯಲ್ಲಿ ಜೀವದ ಬೀಜವನ್ನೂ ಬಿತ್ತಿರಬಹುದು ಎನ್ನುವ ಕುತೂಹಲಕರ ಸಾಧ್ಯತೆಗಳ ಬಗ್ಗೆ ವಿಚಾರವನ್ನು ಪ್ರಾರಂಭಿಸಿದೆ. ವ್ಹೀಲರ್-ಫ಼ೈನಮನ್ ಸಿದ್ಧಾಂತದ ಸಾಮಾನ್ಯೀಕರಣ (Generalization of Wheeler-Feynman’s Theory), ತಾರಾಗಣಗಳ ಕೇಂದ್ರಭಾಗದಲ್ಲಿ ಭಾರಿ ಕಪ್ಪುಕುಳಿಗಳಿರಬಹುದಾದ ಸಾಧ್ಯತೆಗಳು, ಕ್ವಾಂಟಮ್ ವಿಶ್ವವಿಜ್ಞಾನ ಮತ್ತು ವಿಶ್ವದ ವಿಸ್ತರಣೆಯ ಕಲ್ಪನೆಯನ್ನು 15 ವರ್ಷಗಳು ಮುಂಚಿತವಾಗಿ ನಿರೀಕ್ಷಣೆಮಾಡಿದ್ದ ವಿಚಾರ, ಹೀಗೆ ಅವರ ಹಲವಾರು ಪ್ರಥಮಾನ್ವೇಷಕ ಸಂಶೋಧನೆಗಳಿಗೆ ಸಿಗಬೇಕಾಗಿದ್ದ ಮನ್ನಣೆ ಅವರಿಗೆ ಸಿಕ್ಕಿಲ್ಲ.

ತಮ್ಮ ಅದ್ಭುತವಾದ ಪುಸ್ತಕಗಳಿಂದ, ಜಗತ್ಪ್ರಸಿದ್ಧ ಶಿಕ್ಷಕರೆನಿಸಿರುವ ಜಯಂತ್ ನಾರ್ಲೀಕರ್, ಜನಪ್ರಿಯ ವಿಜ್ಞಾನದ ಪುಸ್ತಕಗಳನ್ನು ರಚಿಸಿ, ಎಳೆಯ ಮನಗಳನ್ನು ವಿಜ್ಞಾನದತ್ತ ಕೊಂಡೊಯ್ಯಲು ಪ್ರೇರೇಪಿಸುತ್ತಿದ್ದಾರೆ. ವಯಸ್ಸಿನಲ್ಲಿ ತಮಗಿಂತ ಹಿರಿಯ ಮತ್ತು ಕಿರಿಯರಿಬ್ಬರಿಗೂ ಒಬ್ಬ ಅಪೂರ್ವ ಮಾರ್ಗದರ್ಶಕರೆನಿಸಿರುವ ಅವರು, 1972ರಲ್ಲಿ ತಾವು  ಭಾರತಕ್ಕೆ ಮರಳಿದ ನಂತರ, ಕಲಕತ್ತಾದ ಪ್ರಸಿದ್ಧ ಪ್ರೆಸಿಡೆನ್ಸಿ ಕಾಲೇಜಿನ ಎ.ಕೆ. ರಾಯ್ ಚೌಧುರಿಯಂತಹ ಅಪೂರ್ವ ಪ್ರತಿಭೆಯನ್ನು ಹೊರತರುವುದರಲ್ಲಿ ಸಫಲರಾದರು. ಇಂದು ರಾಯ್ ಚೌಧುರಿಯ ಶಿಷ್ಯರು ತಮ್ಮ ಕ್ಷೇತ್ರಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದವರಾಗಿದ್ದಾರೆ. ಜಯಂತ್ ಭೌತಶಾಸ್ತ್ರದ ತಮ್ಮ ತೀವ್ರ ಕಲ್ಪನೆಗಳನ್ನು ತಮ್ಮ ವಿದ್ಯಾರ್ಥಿಗಳ ಮೇಲೆ ಎಂದೂ ಹೇರಿದವರಲ್ಲ. ಅವರ ವಿದ್ಯಾರ್ಥಿಗಳಿಗೆ ತಮ್ಮ ಕಲ್ಪನೆಗಳನ್ನು ಮುಂದುವರೆಸಿ ಸಂಶೋಧನೆ ನಡೆಸುವ ಸಂಪೂರ್ಣ ಸ್ವಾತಂತ್ರ್ಯವಿದ್ದು, ಇದು ಜಯಂತ್ ಅವರ ಭೌತಿಕ  ದೃಢನಿಷ್ಠೆ ಮತ್ತು ಪ್ರಾಮಾಣಿಕತೆಗಳಿಗೆ ಜ್ವಲಂತ ಸಾಕ್ಷಿಯಾಗಿದೆ.

ಭಾರತೀಯ ವಿಜ್ಞಾನ ಪ್ರಪಂಚಕ್ಕೆ ಜಯಂತ್ ನಾರ್ಲೀಕರ್ ನೀಡಿರುವ ಅತ್ಯುತ್ತಮ ಕೊಡುಗೆಯೆಂದರೆ, ಪುಣೆಯ ವಿಶ್ವವಿದ್ಯಾಲಯದ ಆವರಣದಲ್ಲಿ, ಅವರು ಕಟ್ಟಿ ಬೆಳೆಸಿರುವ ವಿಶ್ವದ ಅಗ್ರಶ್ರೇಣಿಯ ಖಭೌತಶಾಸ್ತ್ರ ಸಂಸ್ಥೆಯಾದ, ಅಂತರ ವಿಶ್ವವಿದ್ಯಾಲಯ ಖಗೋಳಶಾಸ್ತ್ರ ಮತ್ತು ಖಭೌತಶಾಸ್ತ್ರ ಕೇಂದ್ರ (Inter University Center For Astronomy And Astrophysics-IUCAA), ಸಂಸ್ಥೆಯಾಗಿದೆ. ತಮ್ಮ ಕನಸುಗಳು ಮತ್ತು ದೃಷ್ಟಿಕೋನದಲ್ಲಿ, ಎಲ್ಲರನ್ನೂ ಸಮಭಾಗಿಯನ್ನಾಗಿ ಮಾಡುವ ಅವರ ಕಲೆ ನಿಜಕ್ಕೂ ಒಂದು ರೀತಿಯಲ್ಲಿ ಅಲೌಕಿಕವೆನ್ನಬಹುದು. ಸಂಸ್ಥೆಯ ಪ್ರಥಮ ನಿರ್ದೇಶಕರಾಗಿ, ಈ ಸಂಸ್ಥೆಯನ್ನು ಒಂದು ಉನ್ನತ ಮಟ್ಟದಲ್ಲಿ ನಿಲ್ಲಿಸುವ ಅವರ ಪ್ರಯತ್ನದಲ್ಲಿ ತಮ್ಮ ಸಹೋದ್ಯೋಗಿಗಳೊಡನೆ ಅವರ ಸಹಭಾಗಿತ್ವ ಸರ್ವರೀತಿಯಲ್ಲೂ ಪ್ರಜಾಪ್ರಭುತ್ವ ವಿಚಾರಕ್ಕೆ ಒಳಪಟ್ಟಿದೆ. ಇಂದು IUCAA ಸಂಸ್ಥೆಯ ಯುವ ವಿಜ್ಞಾನಿಗಳು, ಹಲವು ಹತ್ತು ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆಯುತ್ತಿದ್ದಾರೆ. ಸರಳತೆ ಮತ್ತು ಸಜ್ಜಿನಿಕೆಗಳ ಸಾಕಾರವಾಗಿರುವ ಜಯಂತ್, ನಾಲ್ಕು ತಲೆಮಾರಿನ ಯುವಜನತೆಗೆ ಆದರ್ಶಪ್ರಾಯವಾಗಿದ್ದು, ಪ್ರೇರಣೆಯಾಗಿದ್ದಾರೆ. ಭಾರತೀಯ ವಿಜ್ಞಾನ ಲೋಕದ ಅಪರೂಪ ತಾರೆಯೆನಿಸಿದ ಜಯಂತ್ ನಾರ್ಲೀಕರ್ ಅವರ ಸಾಧನೆಗಳಿಗೆ ದೊರೆತಿರುವ ಪ್ರಶಸ್ತಿ ಮತ್ತು ಪುರಸ್ಕಾರಗಳ ಒಂದು ಪಟ್ಟಿಯೇ ಇದೆ.

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳ ಗೌರವಕ್ಕೆ ಪಾತ್ರರಾದ ಇವರು ಇದುವರೆಗೂ, ಫ಼್ರೆಂಚ್ ಖಗೋಳ ಸಂಘದ ಅಸೊಸಿಯೇಟ್, ರಾಯಲ್ ಖಗೋಳಶಾಸ್ತ್ರ ಸಂಘದ ಅಸೋಸಿಯೇಟ್, UNESCO ಪ್ರಶಸ್ತಿ, ವರ್ಲ್ಡ್ ಅಕ್ಯಾಡೆಮಿ ಆಫ಼್ ಸೈನ್ಸಸ್ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಇವರ ಪ್ರತಿಭೆಯನ್ನು ಮೆಚ್ಚಿ ಭಾರತ ಸರ್ಕಾರ ಇವರಿಗೆ 1965ರಲ್ಲಿ ಪದ್ಮಭೂಷಣ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಈ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿ ಇವರಾಗಿದ್ದಾರೆ. ಇದರ ಜೊತೆಗೆ, ಭಾರತ ಸರ್ಕಾರದ ಮತ್ತೊಂದು ಮನ್ನಣೆ ಪದ್ಮವಿಭೂಷಣವನ್ನೂ 2004ರಲ್ಲಿ ನೀಡಲಾಯಿತು. ರೇಡಿಯೋ-ದೂರದರ್ಶನದ ಜನಪ್ರಿಯ ವಿಜ್ಞಾನ ಕಾರ್ಯಕ್ರಮಗಳ ಮೂಲಕವೂ ಇವರು ಮನೆಮಾತಾಗಿರುವ ವ್ಯಕ್ತಿ. ತಮ್ಮ ಮೊಮ್ಮಕ್ಕಳನ್ನು ನಮ್ಮ ದೇಶದ ಅಜ್ಜ-ಅಜ್ಜಿಯರು, ಜಯಂತ್ ನಾರ್ಲೀಕರಂತೆ ಕೀರ್ತಿವಂತನಾಗು ಎಂದು ಹರಸುವ ಮಟ್ಟಿಗೆ ಪ್ರಖ್ಯಾತಿ ಪಡೆದ ಜಯಂತ್ ನಾರ್ಲೀಕರ್, ಭಾರತೀಯ ವಿಜ್ಞಾನ ಲೋಕದ ಮಹಾಮೇಧಾವಿಗಳ ಸಾಲಿನಲ್ಲಿ ಅಗ್ರಪಂಕ್ತಿಯವರು ಎಂಬ ಮಾತಿನಲ್ಲಿ ಯಾವ ಸಂಶಯವೂ ಇಲ್ಲ.

ಈ ಅಪರೂಪದ ವಿಜ್ಞಾನಿ ಮತ್ತು ಅವರ ಸರಳತೆ ಮತ್ತು ಸಜ್ಜನಿಕೆಗಳನ್ನು ಬಹಳ ಹತ್ತಿರದಿಂದ ಕಾಣುವ ಸುವರ್ಣಾವಕಾಶ ನನಗೆ ದೊರೆತಿತ್ತು. ೧೯೯೧ರಲ್ಲಿ ಮದುವೆಯಾದಾಗ, ನನ್ನ ಪತಿ ಸತ್ಯಪ್ರಕಾಶ್ ಇದೇ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಹಾಗಾಗಿ ಈ ಲೇಖನದಲ್ಲಿ ಉಲ್ಲೇಖವಾಗಿರುವ ಜಯಂತ್ ನಾರ್ಲೀಕರ್ ಅವರ ವ್ಯಕ್ತಿತ್ವದ ಸಂಗತಿಗಳು ನೂರಕ್ಕೆ ನೂರು ಸತ್ಯವಾದ ವಿಷಯಗಳು. ಸುಮಾರು ೪ ವರ್ಷಗಳ ಕಾಲ, ಪುಣೆಯ Inter University For Astronomy and Astrophysics 1%e0%b2%9c%e0%b2%af%e0%b2%82%e0%b2%a4%e0%b3%8d-%e0%b2%a8%e0%b2%be%e0%b2%b0%e0%b3%8d%e0%b2%b2%e0%b3%80%e0%b2%95%e0%b2%b0%e0%b3%8d-%e0%b2%85%e0%b2%b5%e0%b2%b0-%e0%b2%aa%e0%b2%a4%e0%b3%8d%e0%b2%a8ಸಂಸ್ಥೆಯಲ್ಲಿ, ಜಯಂತ್ ನಾರ್ಲೀಕರ್ ಅವರ ಮನೆಯ ಪಕ್ಕದಲ್ಲೇ ವಾಸಿಸುತ್ತಿದ್ದ ನಮಗೆ, ಅವರ ವ್ಯಕ್ತಿತ್ವದ ಉತ್ತಮ ಪರಿಚಯವಿದೆ.

ಇಂದಿನ ವಿಜ್ಞಾನಿಗಳಲ್ಲಿ ಬಹಳ ವಿರಳವೆನಿಸಿದ ಅನೇಕ ಸದ್ಗುಣಗಳನ್ನು ಜಯಂತ್ ಅವರಲ್ಲಿ ಕಾಣಬಹುದು. ಇಂತಹ ಅಪರೂಪ ವ್ಯಕ್ತಿಯ ಮಡದಿ ಡಾ ಮಂಗಳಾ ನಾರ್ಲೀಕರ್, ಇವರಿಗೆ ತಕ್ಕ ಬಾಳಸಂಗಾತಿ. ಮಂಗಳಾ ಅವರ ಬಗ್ಗೆ ನನಗೆ ಬಹಳ ಗೌರವವಿದೆ. ಅಷ್ಟೊಂದು ದೊಡ್ಡ ವಿಜ್ಞಾನಿಯ ಪತ್ನಿ, ಸ್ವತಃ ಉತ್ತಮ ಗಣಿತ ತಜ್ಞೆಯಾದ ಆಕೆಯ ಸರಳತೆಗೆ ನಾನು ಮಾರುಹೋಗಿದ್ದೇನೆ. ಪತಿ-ಪತ್ನಿಯರಿಬ್ಬರೂ ಆದರ್ಶಪ್ರಾಯರು. ಅವರ ಮೂವರು ಹೆಣ್ಣುಮಕ್ಕಳು ಅವರಿಂತ ಬೇರೆಯಲ್ಲ – ಇಂದು ವಿಜ್ಞಾನಿಗಳೆನಿಸಿ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯವನ್ನು ನಡೆಸಿದ್ದಾರೆ. ಇಂದಿನ ತರುಣ ಪೀಳಿಗೆಯ ವಿಜ್ಞಾನಿಗಳು ಇವರಿಂದ ಕಲಿಯಬೇಕಾದ ಬಹಳ ವಿಷಯಗಳಿವೆ. ಜಯಂತ್ ನಾರ್ಲೀಕರ್ ಅವರಂತಹ ವ್ಯಕ್ತಿಗಳನ್ನು ಇಂದಿನ ಸಮಯದಲ್ಲಿ ನೋಡುವುದು ಬಹಳ ಅಪರೂಪವೆನ್ನಬಹುದು.

( ಲೇಖನದ ಪ್ರೇರಣೆ : Living Legends in Indian Science- Jayant Vishnu Narlikar, by Dr Naresh Dadhich, Current Science, July 2014.)

ಡಾ ಉಮಾ ವೆಂಕಟೇಶ್ಸ್ಟೇಟ್ ಕಾಲೇಜ್, ಪೆನ್ಸಿಲ್ವೇನಿಯಾ, ಯು.ಎಸ್.ಎ

 

 

 

ತಾರಾಯಣದಲ್ಲಿ  ತಾರಮ್ಮಯ್ಯ – ಸುದರ್ಶನ್ ಗುರುರಾಜರಾವ್

ಇಂಟರ್-ಸ್ಟೆಲ್ಲಾರ್ ಸಿನೆಮಾದಿಂದ ಆರಂಭಿಸಿ, ಖಗೋಲ ಶಾಸ್ತ್ರದ ಕ್ಲಿಷ್ಟವಾದ ವಿಷಯಗಳನ್ನು ಭಾರತೀಯ ತತ್ವಮೀಮಾಂಸೆಯ ಜೊತೆ ಸಮೀಕರಿಸಿ ಎಲ್ಲರಿಗೂ ಅರ್ಥವಾಗುವಂತೆ ಹಾಸ್ಯದ ಹರಟೆಯ ರೂಪದಲ್ಲಿ ಬರೆದಿದ್ದಾರೆ, ಲೇಖಕ ಸುದರ್ಶನ್ ಅವರು. ಈ ಲೇಖನವನ್ನು ನಮ್ಮ ಅನಿವಾಸಿ ಬಳಗದ ಖಭೌತಶಾಸ್ತ್ರದ ವಿಜ್ಞಾನಿ ಸತ್ಯಪ್ರಕಾಶ್ ಅವರಿಗೆ ಅರ್ಪಿಸಿದ್ದಾರೆ.

ನಮ್ಮ ಕಥಾ ನಾಯಕ ವಿಜಯ ಮತ್ತೆ ಹೊಸ ಸಮಸ್ಯೆಯೊಂದಿಗೆ ಹಾಜರ್!! ತಾನು ಕೈಗೊಂಡ ಮಂಗಳಯಾನದ ಬಗ್ಗೆ ಸ್ನೇಹಿತರಿಗೆ ಬೂಸಿ ಬಿಟ್ಟು ಬೇಸ್ತು ಬೀಳಿಸಿದ್ದ ಇವನನ್ನು ಅವನ ಸ್ನೇಹಿತ ಉಗ್ರಿ `Interstellar` ಎಂಬ ಆಂಗ್ಲ ಭಾಷೆಯ ಸಿನೆಮಾಗೆ ಕರೆದೊಯ್ದು, ಅವನ ತಲೆ ಕೆಡಿಸಿ ಜುಗ್ಗ ವಿಜಯನ ಕೈಲಿ ಧಾರಾಳ ಖರ್ಚು ಮಾಡಿಸಿದ ಕಥೆ-ಹರಟೆ ಇಲ್ಲಿದೆ.

ಸುದರ್ಶನ್ ಅವರು ಧಾರಾಳವಾಗಿ ಕೀಲಿಮಣೆ ಕುಟ್ಟಿ ಸುದೀರ್ಘವಾದ ಲೇಖನವನ್ನೇ ಬರೆದಿದ್ದಾರೆ. ನೀವೂ ಧಾರಾಳವಾಗಿ ಸಮಯ ವ್ಯಯಿಸಿ ಓದುತ್ತಿರೋ ಎಂಬುದೇ ಇಲ್ಲಿನ ಪ್ರಶ್ನೆ. ಓದಿದ್ದೇ  ಆದರೆ, ನಿಮ್ಮ ವೈಜ್ಞಾನಿಕ ತಿಳುವಳಿಕೆ ಹೆಚ್ಚಿ ಉಕ್ಕಿ ಹರಿಯುವುದೆಂಬ ದುರಾಸೆ ಸುದರ್ಶನ್ ಅವರದು!!

ಓದಿ ನಿಮ್ಮ ಅಭಿಪ್ರಾಯಗಳನ್ನು ಕೆಳಗೆ  ಕಮೆಂಟ್ಸ್ ನಲ್ಲಿ ಬರೆದು ಹಂಚಿಕೊಳ್ಳಿ.

—೦—

ಪ್ರೇಮದ ಕಾಣಿಕೆ ಚಿತ್ರದಲ್ಲಿ ರಾಜ್ ಕುಮಾರ ಸ್ಟೈಲ್ ನಲ್ಲಿ ಕೂತು ವಿಜಯ ತಲೆ ಮೇಲೆ ಕೈ ಹೊತ್ತು  ಇದು ಯಾರು ಬರೆದ ಕಥೆಯೋ ಹಾಡಿನ ಧಾಟಿಯಲ್ಲಿ ,

“ಇದು ಯಾವ ಸೀಮೆ ಪಿಚ್ಚರ್ರೋ
ಇದನ್ಯಾಕೆ ಜನಗಳು ಮೆಚ್ಚಿದ್ದ್ರೋ
ತಲೆ-ಬುಡವ ತಿಳಿಯದಾದೆ
ಗೊಂದಲದಿ ಕಳೆದು ಹೋದೆ ,ಇದು ಯಾವ ಸೀಮೆ ಪಿಚ್ಚರ್ರೋ …”

ಅಂತ ಹಾಡಿಕೊಳ್ತಾ ಇದ್ದ.

ಅದನ್ನು ಕಂಡ ಜಗ್ಗು, “ಇದೇನ್ ವಿಜಯಾ, ಅಷ್ಟೊಂದು ಆಳವಾದ ದುಃಖ ದಲ್ಲಿ ಮುಳುಗಿದ್ದೀ? ಏನಾಯ್ತು?” ಅಂತ ವಿಚಾರಿಸ್ದ.

interstella“Interstellar ಮೂವಿಗೆ ಹೋಗ್ಬಂದು ನಂ ತಲೆ ಎಲ್ಲಾ ಕೆಟ್ಟು ಕೂತಿದೆ. ಅದರ ಅರ್ಥ ತಿಳಿಯಕ್ಕಾಗ್ದೆ ಚಡಪಡಿಸ್ತಾ ಇದೀನಿ” ಅಂತ ಅಲವತ್ತುಕೊಂಡ.

“ಅದುಕ್ಯಾಕ್ ಯೋಚಿಸ್ಬೇಕು , ಎಲ್ಲಾರ್ಗೂ ಕಾಫಿ ತಿಂಡಿ ಕೊಡಿಸ್ಬಿಡು. ನಮ್ಮ ಸಂಜಯ ಇಲ್ಲೇ ನಿನಗೆ ಎಲ್ಲಾ ಅರ್ಥ ಮಾಡಿಸ್ತಾನೆ. ನಮಗೂ ಎಲ್ಲಾ ವಿಚಾರ ತಿಳಿಯುತ್ತೆ ;ನಿನಗೆ ಪುಣ್ಯಾನೂ ಬರುತ್ತೆ”. ಪುಟ್ಟ ಪುಕ್ಕಟೆ ಸಲಹೆ ಕೊಟ್ಟ.

“ಲೋ, ಈಗಾಗಲೇ ಈ ಉಗ್ರಿ ನನ್ಮಗನ್ನ ಕರ್ಕೊಂಡು ಹೋಗಿ ಪ್ರೀಮಿಯಂ ಟಿಕೇಟು, ಪಾಪ್ಕಾರ್ನ್ ಬಕೇಟು,ಕೋಕು,ಪಾಕು ಅಂತ ಜೋಬಿಗೆ ಚಾಕು ಹಾಕಿಸ್ಕೊಂಡಾಗಿದೆ. ಇವ್ನು,ನಾನು ಅದ್ರ ರಿವ್ಯೂ ಎಲ್ಲಾ ಓದ್ಬಿಟ್ಟಿದೀನಿ, ನಿನ್ಗೆಲ್ಲಾ ಅರ್ಥ ಮಾಡಿಸ್ತೀನಿ ಅಂತ ಪುಂಗಿ ಬಿಟ್ಟ. ನಾನೂ ನಂಬಿ ಕರ್ಕೊಂಡು ಹೋದ್ರೆ, ಅರ್ಧ ಸಿನಿಮಾ ಆದಾಗ ಉಚ್ಛೆ ಹುಯ್ಯಕ್ಕೆ ಎದ್ಧೋಗಿ ಬಂದು ಕೇಳ್ತಾನೆ, ಸಿನಿಮಾ ಶುರು ಆಯ್ತೇನಮ್ಮಾ ಅಂತ! ಆಮೇಲೆ ,, ಎಲ್ಲಾ ಲಿಂಕ್ ತಪ್ಪೋಯ್ತು ಅದುಕ್ಕೆ ವಿವರ್ಸಕ್ಕೆ ಆಗಲ್ಲ,ನೀನೇ ಅರ್ಥ ಮಾಡ್ಕೋ ಅಂತ ತಲೆ ಬೋಳ್ಸಿ ಕೈತೊಳ್ಕೊಂಡಾ. ಹಸೀಸುಳ್ಳ’’ ಅಂತ ಹಪಹಪಿಸಿ ದೂಷಣೆ ಮಾಡ್ದ.  

“ಹೋಗ್ಲಿ ಬಿಡಮ್ಮಾ,.. ಅಷ್ಟೇ ಖರ್ಚು ಮಾಡಿದೀಯಂತೆ  ಇದನ್ನೂ ಸ್ವಲ್ಪ ಮಾಡ್ಬುಡು. ರಾತ್ರಿ ನಿದ್ದೇನಾದ್ರೂ ಚೆನ್ನಾಗಿ ಮಾಡ್ಬ್ಹೋದು” ಪುಟ್ಟ ಹೇಳ್ದ.

“ಸರಿ, ಅದೇನ್ ತಿಂತೀರೋ ತಿಂದು ಸಾಯ್ರಿ..ಆದ್ರೆ ನನ್  ತಲೇ ತಿಂತಿರೋ ಕಗ್ಗಂಟಾದ ಈ ಸಿನಿಮಾದ ಮರ್ಮ ಬಿಡಿಸಿ ಹೇಳಿದ್ರೆ ಸಾಕು. ಅದ್ಯಾಕೆ ನಮ್ಮ ರಾಜ್ಕುಮಾರ್ ಥರದಲ್ಲಿ ಸೀದಾ ಸಾದಾ ಕಥೆ ಹೇಳಕ್ಕಾಗಲ್ವೋ  ಇವರ್ಗುಳ್ಗೆ. ‘ಕಾಸೂ  ಹಾಳು ತಲೆಯು ಬೋಳು’ “ ಥರ ಆಗೋಯ್ತು ನಂ ಪರಿಸ್ಥಿತಿ ಅಂತ ಗೊಣಕ್ಕೊಂಡೇ  ಹೋಗಿ ಆರ್ಡರ್ ಮಾಡಿ ಬಂದ.

ಅಲ್ಲಿವರ್ಗೂ ಸುಮ್ನೆ ಇದ್ದ ಸಂಜಯ್, “ಅಲ್ಲಾ, ನೀನು ಮಂಗಳಯಾನಕ್ಕೆಲ್ಲಾ ಹೋಗಿ ರಾಕೆಟ್ನಲ್ಲಿ ಸುತ್ತು ಹಾಕ್ಕೋಂಡ್  ಬಂದ್ಯಂತೆ, ಇವರುಗಳು ಮಾತಾಡ್ಕೋತಾ ಇದ್ರು. ಎಲ್ಲಾ ಚೆನ್ನಾಗಿ ಗೊತ್ತಾಗಿರ್ಬೇಕಾಗಿತ್ತು. ಅದ್ಯಾಕೆ ಹಿಂಗಾಯ್ತು?” ಅಂತ ಕಿಚಾಯಿಸಿದ.

ಎಲ್ಲರೂ ಹೋ… ಅಂತ ನಕ್ಹಾಕಿದ್ರು.

ಸಂಜಯನಿಗೆ  ಉಳಿದವರಂತೆ ಜೋರು ಮಾಡಲಾಗದ ವಿಜಯ, “ಸುಮ್ನಿರಪ್ಪ.. ಮೊದ್ಲೇ ಆಗಿರೋ ಗಾಯಕ್ಕೆ ನೀನು ಇನ್ನಷ್ಟು ಉಪ್ಪು ತಿಕ್ಕಬೇಡ. ನೀನೂ ನೋಡ್ಕೊಂಡು ಬಂದ್ಯಲ್ಲ, ನೀನೇ ಹೇಳು ನನ್ನ ದೂಷಣೆ ನಿಜಾತಾನೇ?” ಅಂತ ಕೇಳ್ದ.

“ನಾನೂ ಒಂದ್ಸಾರಿ ನೋಡ್ಕೊಂಡು ಬಂದೆ. ಪರವಾಗಿಲ್ಲ ಅಂತ ಅನ್ನುಸ್ತು. ಏನು ನಿನಗೆ ಅರ್ಥ ಆಗದೆ ಇದ್ದಿದ್ದು?”. ಸಂಜಯ ಕೇಳ್ದ.

“ಅಲ್ಲಾ, ಆ ಸಿನಿಮಾದಲ್ಲಿ, ಮೊದಲೇ ಅದು ಐ ಮ್ಯಾಕ್ಸು. ಅಷ್ಟೊಂದು ಎತ್ತರ ಇರುವ ಪರದೆನಲ್ಲಿ ಏನ್ ನೋಡೋದು, ಏನ್ ಬಿಡೋದು ಅಂತ ಕಣ್ -ಕಣ್ ಬಿಡೋ ಹೊತ್ಗೆ ಎಷ್ಟೊಂದು ಸಂಭಾಷಣೆಗಳು ಮುಗಿದೇ ಹೋಗ್ತವೆ. ಅವರ ಮಾತೂ ಕತೆ ಅರ್ಥ ಮಾಡ್ಕೊಳ್ಳೋಕೆ ಹೋದ್ರೆ, ಆ ‘ಕೂಪರ್’ ನನ್  ಮಗ ಸರಿಯಾಗಿ ಮಾತೇ ಆಡದಿಲ್ಲ ಅಂತೀನಿ! ಅರ್ಧ ಗೊಣಗ್ತಾನೆ, ಅರ್ಧ ನುಂಗಿ ಹಾಕ್ತಾನೆ. ಇನ್ನು ಆ ವಿಜ್ಞಾನಿಗಳೋ, ನಮ್ಮಂಥ ಪಾಮರರು ಈ ಸಿನಿಮಾ ನೋಡ್ತೀವಿ ಅನ್ನೋ ಪರಿವೆ ಇಲ್ದೆ ಏನೇನೋ ಹಾಯ್-ಫೈ ಮಾತಾಡ್ತಾರೆ. ಸರಿ , ಏನೋ ಅರ್ಥ ಆಗ್ತಾ ಇದೆ ಅಂತ ಭ್ರಾಂತಿ ಬರೋ ಹೊತ್ಗೆ, ಭೂತ, ವರ್ತಮಾನ-ಭವಿಷ್ಯತ್  ವಿದ್ಯಮಾನಗಳೆಲ್ಲಾ  ಹಿಂದೆ ಮುಂದೆ ಆಗಿ,ಕಲಸು ಮೇಲೋಗರ ಆಗ್ಹೋಯ್ತು. ಒಟ್ನಲ್ಲಿ ಐ ಮ್ಯಾಕ್ಸ್-ನಲ್ಲಿ ಈ ಸಿನಿಮಾದ ಕ್ಲೈಮ್ಯಾಕ್ಸ್ ಬರೋಹೊತ್ಗೆ ನಮ್ಮ ತಲೆ ಎಲ್ಲಾ ಎಣ್ಣೆ ಮುಗಿದು  ಆರಿ ಹೋಗಿರೋ ಪೆಟ್ರೋಮ್ಯಾಕ್ಸ್  ಥರ ಬೆಳಕು ಇಲ್ದೆ  ಬರೀ ಬಿಸಿ  ಆಗಿ ಹೋಯ್ತು. ನಮ್ ಮನಸ್ಸು ಹಳಿ ತಪ್ಪಿದ್ ರೈಲು ಥರ ಎಲ್ಲೆಲ್ಲಿಗೋ ಕಿತ್ಕೊಂಡು ಹೋಯ್ತು ನೋಡು. ಈ ಕೂಪರ್ ನನ್ಮಗನ `Interstellar` ಗಿಂತ ನಮ್ಮ ಜಗ್ಗೇಶನ `ಸೂಪರ್ ನನ್ಮಗ` ಎಷ್ಟೋ ವಾಸಿ” ಅಂದ.

“ಓ, ಹಂಗಾ ವಿಚಾರ. ಅದೂ, ನೀನು ಹೇಳಿದ್ರಲ್ಲೂ ಸ್ವಲ್ಪ ಸತ್ಯ ಇಲ್ಲದಿಲ್ಲ. ನಿರೂಪಣೆ ನೇರವಾಗಿ ಇರಬಹುದಿತ್ತು. ಕಥೇನೂ, ಒಂಥರ  ಬ್ಲ್ಯಾಕ್ ಹೋಲ್ ಬಗ್ಗಿಸಿದ ಬೆಳಕಿನ ಕಿರಣಗಳಂತೆ ಸ್ವಲ್ಪ ನೆಪ್ಪ ನೇರ ಇಲ್ಲ” ಅಂತ ಅನುಮೋದಿಸಿದ. ವಿಜಯನಿಗೆ ಸ್ವಲ್ಪ ಗೆಲುವೆನ್ನಿಸಿತು. ತಾನೊಬ್ಬನೇ ದಡ್ಡ ಅಲ್ಲ ಹಾಗಾದ್ರೆ, ಅಂತ ಮನಸ್ಸಿನಲ್ಲಿ ತನ್ನ ಬಗೆಗೆ ಇದ್ದ ಮರುಕ, ಆತ್ಮವಿಶ್ವಾಸವಾಗಿ ಬದಲಾಯ್ತು.

‘’ಮಾರಯ್ಯನ ಮಂಗಳಯಾನ ದಲ್ಲಿ ಸೊನಾಲಿ ಜೊತೆ ಕೂತ್ಕೊಂಡು ಮೆಣಸಿನ ಕಾಯಿ ಬೋಂಡ ತಿಂದು ನಮಗೆಲ್ಲ ರೈಲು ಬಿಟ್ಟಷ್ಟು ಸುಲಭ ಅಂತ ಗೊತ್ತಾಯ್ತೇನೋ ಯಜಮಾನ್ರಿಗೆ” ಅಂದ ಓಂಕಾರಿ.

“ಇಲ್ಲ ಕಣ್ರೋ, ಸೊನಾಲಿ ಜೋತೆನಲ್ಲಿ ಇಲ್ದೆ ತಲೆ ಓಡಲಿಲ್ಲ ನಮ್ಮ ಉಮ್ಮರ್ ಖಯ್ಯಾಮ್ ಗೆ. ಇಲ್ದಿದ್ರೆ ಆ ಎಂಡುರನ್ಸ್ ರಾಕೆಟ್ನ ಯಾವ ತೊಡರು ಇಲ್ದಂಗೆ ಓಡುಸ್ತಿದ್ದ ಅಲ್ವೇನೋ ವಿಜಯ”, ಜಗ್ಗು ಕಾಲು ಜಗ್ಗಿದ.

“ನೋಡ್ರೋ, ಪಾಪಿ ಜೀವಗಳ, ನೀವು ಪಿಚ್ಚರು ನೋಡಿಲ್ಲ. ನೋಡ್ಕೊಂಡ್ ಬಂದು ಆಮೇಲ್ ಮಾತಾಡಿ. ನೀವು ಅಂದ್ಕೊಂಡಷ್ಟು ಸರಳ ಇಲ್ಲ”- ವಿಜಯ ಸವಾಲೆಸೆದ.

“ಅದೂ ಸರೀನೆ. ಕಥೆ ಸರಳವಾಗಿಯೇ ಇದೆ, ಆದ್ರೆ ನಿರೂಪಣೆ ಸ್ವಲ್ಪ ಸಂಕೀರ್ಣವಾಗಿದೆ”.

ಕಾಫೀ ಚುರುಮುರಿ ಎಲ್ಲಾ ಬಂತು. ಎಲ್ಲರೂ ಕೈಗೆ ತೆಗೆದುಕೊಂಡು  ಶುರುಹಚ್ಚಿಕೊಂಡರು.

ಸಂಜಯ, “ಸಿನಿಮಾದ ಮುಖ್ಯ ಭಾಗಗಳ ಸಾರಾಂಶ ಹೇಳಿ, ಅಲ್ಲಿನ ವಿಷಯದ ವಿವರಣೆ ನನಗೆ ಗೊತ್ತಿದ್ದಷ್ಟು ಹೇಳ್ತೀನಿ ಪರವಾಗಿಲ್ಲ  ತಾನೇ ?” ಕೇಳ್ದ  

ಹೇಳು ಗುರುವೇ, ”Every Little Helps’ ಅಂತ TESCO ಸ್ಟೈಲ್ ನಲ್ಲಿ,’  ಅಂದ ಉಗ್ರಿ.

“ಲೋ ಉಗ್ರಿ, ನಿನ್ನಾ  ‘ಉಗೀರಿ’ ಅಂತ ಕರದ್ರೆ ಸರಿ, ನಾಚಿಕೆಗೆಟ್ಟೋನೆ,”  ಅಂದ ವಿಜಯ.

—೦—

“ಸರಿ, ಈ ಚಿತ್ರದ ಹೀರೋ, ಕೂಪರ್ ಅನ್ನುವವನು ಒಬ್ಬ ನಿವೃತ್ತ ಪೈಲಟ್. ಬಹಳ ನಿಶಿತಮತಿ ಹಾಗೂ ಉಡಾವಣೆಯ ತಂತ್ರವನ್ನು ಚೆನ್ನಾಗಿ ಅರಿತವನು. ಅವನ ಹೆಂಡ್ತಿ ಸತ್ಥೋಗಿರ್ತಾಳೆ. ವಯಸ್ಸಾದ ಮಾವ , ಮಗ ಹಾಗೂ ಮಗಳ ಜೊತೆ ಅವನ ವಾಸ, ಒಂದು ದೊಡ್ಡ ಹೊಲದ ಮಧ್ಯೆ. ಅವರ ಸಂಸಾರ ಒಂಥರಾ ‘ಕಲ್-ಆಜ್-ಔರ್ ಕಲ್ ‘ ಚಿತ್ರದಲ್ಲಿ ಇದ್ದಂತೆ, ಮೂರು ಜನರೇಷನ್ನು ಒಂದೇ ಕಡೆ .  ವ್ಯವಸಾಯ ಮಾಡ್ತಾ ಇದ್ರೂ , ಅದರಲ್ಲೂ ಚಾಣಾಕ್ಷನೇ. ಆದ್ರೆ ಭೂಮಿ ಎಲ್ಲಾ ಎಕ್ಕುಟ್ಠೋಗಿ, ಹೊಸ ತೊಂದ್ರೆ ಬಂದು ಸಿಕ್ಹಾಕಿ ಕೊಂಡಿರುತ್ತೆ”.

‘ಏನದು?’ ಕೂಗಿದರ್ ಎಲ್ಲರೂ ಒಕ್ಕೊರಲ್.

“ಸುನಾಮಿ, ಧೂಳಿನ ಸುನಾಮಿ. ಅದೆಲ್ಲಿಂದ ಹೆಂಗೆ ಬರುತ್ತೆ ಅಂತ ಯಾರ್ಗೂ ಗೊತ್ತಾಗಲ್ಲ. ಧೂಳು ಸುನಾಮಿ ಅಲೆ ಥರ ಇದ್ದಕ್ಕಿದ್ದಂತೆ ಬಂದು ಮಳೆ, ಬೆಳೆ, ಮನೆ ಮಠ ಎಲ್ಲಾ ಹಳ್ಳ ಹಿಡಿಸ್ತಾ ಇರುತ್ತೆ. ಇನ್ನು ಭೂಮಿ ಮೇಲೆ ಮನುಷ್ಯನ ಋಣ ತೀರ್ತು, ಇನ್ನೇನಿದ್ರೂ ಬೇರೆ ಗ್ರಹನೇ ನೋಡ್ಕೋ ಬೇಕು ವಾಸ ಮಾಡಕ್ಕೆ ಅಂತ ಯೋಚ್ನೆ ಮಾಡ್ತಿರ್ತಾರೆ. ಆ ಪರಿಸ್ಥಿತಿಗೆ ಅವರು ಬ್ಲೈಟ್ (blight) ಅಂತ ಹೆಸರು ಕೊಟ್ಟಿರ್ತಾರೆ”. ಅಂದ.

“ಬ್ಲೈಟ್-ನ ಫೈಟ್ ಮಾಡಕ್ಕೆ ಯಾವ್ದೇ ಲೈಟ್ ಕಾಣಲಿಲ್ಲಾ ಅಂತ ಬೇರೆ ಗ್ರಹಕ್ಕೆ ಫ಼್ಲೈಟ್  ಹೋಗಕ್ಕೆ, ಸಿಕ್ರೆಟ್ ಆಗಿ ಟೈಟ್ ಆಗಿ ಕೆಲಸ ಮಾಡ್ತಿರ್ತಾರೆ ಅನ್ನಪ್ಪ,” ಪುಟ್ಟ ಸಾರಾಂಶ ಹೇಳ್ದ.

“ಹೌದು. ಒಂಥರಾ ಹಂಗೆ” ಸಂಜಯ ಅನುಮೋದಿಸಿದ.

“ಅಲ್ಲಾ, ಜಲ ಪ್ರಳಯ, ಅಗ್ನಿ ಪ್ರಳಯ ಕೇಳಿದೀವಿ. ಇದೇನಿದು ಧೂಳ್ ಪ್ರಳಯ?” ಕಿಟ್ಟು ಕೇಳ್ದ.

“ನಿಮ್ಮಂಥಾ ದಂಡ ಪಿಂಡ ಗಳು ಈ ಭೂಮಿನಲ್ಲಿ ಜಾಸ್ತಿಯಾದ್ರೆ ಇನ್ನೇನಾಗುತ್ತೆ. ಭೂಮ್ತಾಯಿ ಎಷ್ಟು ತಾನೇ ತಡ್ಕೋತಾಳೆ. ಧೂಳೆಬ್ಬಿಸಿ ಕೂಳಿಗೆ ತಾತ್ವಾರ ತಂದಿಡ್ತಾ ಇದಾಳೆ ಅಷ್ಟೆ”. ಜಗ್ಗು ಹೇಳಿದ.

“ಅದೇನೋ ನಂಗೋತ್ತಿಲ್ಲ. ನಂಗೂ ತಿಳೀದು. ಇದು ಭವಿಷ್ಯದಲ್ಲಿ ಈ ಕಥೆಯು ನಡೆಯುವುದರಿಂದ ವಿವರಗಳು ಅಸ್ಪಷ್ಟ. ಆದರೆ ಕಥೆಯ ಹಿನ್ನೆಲೆ ಇದು.  ಹೀಗೆ ಇರೂವಲ್ಲಿ ಅವರಿಗೆ ಕೆಲವು ವಿಚಿತ್ರ ಅನುಭವಗಳು ಆಗ್ತವೆ. ಇದ್ದಕ್ಕಿದ್ದಂತೆ ಒಂದು ಏರೋಪ್ಲೇನು ಅವರ ಹಿಂದೆ ಮುಂದೆ ಸುತ್ತಾಡುವುದು, ಅದನ್ನು ಇವರು ಬೆನ್ನು ಹತ್ತುವುದು, ಮನೆಯಲ್ಲಿನ ಮುರುಕು ಆಟಿಗೆಯೊಂದು ವಿಚಿತ್ರ ರೀತಿಯ ಸಂದೇಶಕ್ಕೆ ಸ್ಪಂದಿಸುವುದು, ಅದನ್ನು ಕೂಪರನ ಮಗಳು, ‘ಮರ್ಫಿ’ ಪುಸ್ತಿಕೆಯಲ್ಲಿ ಬರೆದುಕೊಳ್ಳುವುದು, ಗುರುತ್ವ ಬಲದ ಅಲೆಗಳಲ್ಲಿ  ಏರು-ಪೇರು ಉಂಟಾಗಿ ಇವರ G P S  ಕೆಲಸ ಸರಿ ಮಾಡದೆ ತೊಂದರೆಯಾಗುವುದು ಇತ್ಯಾದಿ, ಇವೆಲ್ಲ ಬೆಳವಣಿಗೆಗಳು ಕೂಪರನನ್ನು ತಾರಾಯಾನಕ್ಕೆ ಸಿದ್ಧತೆ ನಡೆಸಿರುವ ರಹಸ್ಯ ಸ್ಥಳಕ್ಕೆ ಕೊಂಡೋಯ್ಯುತ್ತದೆ. ಅಲ್ಲಿ ವಿಜ್ಞಾನಿಗಳು ತಾರಾಯಾನಕ್ಕಾಗಿ ಅವನನ್ನು ಒಪ್ಪಿಸುವಲ್ಲಿ ಯಶಸ್ವಿಯಾಗುತ್ತಾರೆ. ಅಲ್ಲಿಂದ ಕೊನೆಗೆ ಅವನು ಮನುಕುಲದ ಉಳಿವಿಗಾಗಿ ಸಂಸಾರವನ್ನು ತೊರೆದು ಈ ಅನ್ವೇಷಣೆಯ ನೇತೃತ್ವ ವಹಿಸಲು ಸಿದ್ಧನಾಗುತ್ತಾನೆ, ಹಾಗೂ ಮಗಳು ಮರ್ಫಿಗೆ  ಭಾಷೆ ಕೊಟ್ಟು ಮತ್ತೆ ಹಿಂದಿರುಗಿ ಬರುವುದಾಗಿ ಹೇಳಿ ಹೊರಟೂ ಬಿಡುತ್ತಾನೆ.

`‘ಮರ್ಫಿ’  ಅನ್ನೋದು ರೇಡಿಯೋ ತಾನೇ?` ಕಿಟ್ಟು ಸ್ವಗತದಲ್ಲಿ ಗೊಣಗಿಕೊಂಡ.

“ಹಾಗೇ ಹೋಗ್ತಾ ಬೇರೆ galaxy ನಲ್ಲಿರುವ ಮೂರು ಗ್ರಹಗಳಿಗೆ ಇವರಿಗೆ ಮುಂಚೇನೇ  ಆಗಲೇ ವಿಜ್ಞಾನಿಗಳು ಹೋಗಿರ್ತಾರೆ, ಮಾನ್ , ಮಿಲ್ಲರ್ ಮತ್ತು ಎಡ್ಮಂಡ್ಸ್ (Maan, Millar, Edmonds) ಅಂತ ಅವುಗಳ ಹೆಸರು.ಅವು ವಾಸ ಯೋಗ್ಯ ಅಂತ ಸಂದೇಶಾನೂ ಕಳಿಸಿರ್ತಾರೆ. ಇವರುಗಳು ಅಲ್ಲಿಗೆ ಹೋಗಿ ಯಾವುದಾದರೂ ಒಂದು ಗ್ರಹದಲ್ಲಿ ಮನುಷ್ಯನ ವಲಸೆ ವಾಸ ಸ್ಥಾಪನೆ ಮಾಡೋದು ಅವರ ಉದ್ದೇಶ ಆಗಿರುತ್ತೆ”.

“ಮಾನ್ , ಮಿಲ್ಲರ್ ಮತ್ತು ಎಡ್ಮಂಡ್ಸ್, ಅಂತಾ ಅನ್ನೋದು ಒಳ್ಳೇ ಜಾನ್-ಜಾನಿ -ಜನಾರ್ಧನ್  ತೆರರಂಪಂಪಂಪಂಪಂ  ಅಂಧಂಗೆ ಇದೆಯಲ್ಲಮ್ಮ” ಅಂದ ಪುಟ್ಟ. ಎಲ್ಲರೂ ನಕ್ಕರು.

“ಅಲ್ಲಿಗೆ ಹೋಗೋವಾಗ ಇವರ ಇಂಧನ ಕಡಿಮೆ ಆಗಿ ಯಾವುದಾದರು ಒಂದಕ್ಕೆ ಹೋಗೋಣಾ ಅಂತ ಯೋಚ್ನೆ ಮಾಡಿ ಮಿಲ್ಲರ್ ಗ್ರಹಕ್ಕೆ ಹೋದ್ರೆ, ಅಲ್ಲಿ ಆಳ ಇಲ್ದಿರೋ ಸಮುದ್ರದಲ್ಲಿ ದೊಡ್ಡ ದೊಡ್ಡ ಅಲೆಗಳು ಬಂದು ಇವರುಗಳಲ್ಲಿ ಒಬ್ಬನ್ನ ಬಲಿ ತಗೊಂಡು ಬಿಡುತ್ತೆ”.

“ಏನು? ಆಳ ಇಲ್ದಿರೋ ಸಮುದ್ರದಲ್ಲಿ ದೊಡ್ಡ ಅಲೆಗಳಾ? ಅಧೆಂಗೆ” ಉಗ್ರಿ ಕೇಳಿದ.

“ಅದು ತಮ್ಮಂಗೆ ಸ್ವಾಮಿ. ತುಂಬಿದ ಕೊಡ ತುಳುಕಲ್ಲ ಅಲ್ವಾ ಹಂಗೆ. ಅರ್ಧಂಬರ್ಧ ತುಂಬಿದರೆ ಹಂಗೇ ಅದು. ತುಳುಕಾಟ ಜಾಸ್ತಿ ನೋಡಿ”. ಓಂಕಾರಿ  ಬಾಯಿ ಹಾಕಿದ.

“ಅಲ್ಲಿಂದ ಮಾನ್ ಗ್ರಹಕ್ಕೆ ಹೋಗಿ ನೋಡಿದ್ರೆ, ಅದು ಬರೀ ಮಂಜು, ಹಿಮ ತುಂಬಿದ  ನೆಲ. ಅಲ್ಲಿ ಮಾನ್ ಎಂಬ ವಿಜ್ಞಾನಿ ಈ ಕೂಪರನ್ನೇ ಕೊಲ್ಲೋಕ್ ಹೋಗಿ ಕಡೆಗೆ ಇವರು ತಪ್ಪಿಸಿಕೊಂಡು ಪರಾರಿ ಆಗ್ತಾರೆ. ಕಡೆಗೆ ಕೂಪರ್ರು ತಾನು ಗರ್ಗಾಂಟುವಾ ಅನ್ನೋ ಕಪ್ಪುಕುಳಿ ಒಳಗೆ ತಾನು ಹಾಗೂ ರೋಬೋಟು  ಇಳಿದು,ಅಲ್ಲಿನ ಗುರುತ್ವದ ಏರು ಪೇರು  ನೋಡ್ಕೊಂಡು ಬರ್ತೀವಿ ಅಂತ ಹೋಗ್ತಾರೆ. ಹಾಗೂ ಆ ಮಹಿಳಾ ವಿಜ್ಞಾನಿ, ಅಮೀಲಿಯಾ  ಎಡ್ಮಂಡ್ ಅನ್ನೋ ಗ್ರಹಕ್ಕೆ ಹೋಗ್ತಾಳೆ”.

ಇತ್ತಲಾಗೆ ಕೂಪರ್ರು ಗ್ರಾವಿಟಿಯ ಅಂದರೆ ಗುರುತ್ವದ ಕೇಂದ್ರ ಬಿಂದುವಾದ ಸಿಂಗುಲ್ಯಾರಿಟಿ (singuilarity – ಏಕತ್ವ) ಎನ್ನುವಲ್ಲಿಗೆ ಹೋಗಿ ಅಲ್ಲಿಂದ ಸಂದೇಶಗಳನ್ನು, ಗುರುತ್ವದ ಅಲೆಗಳನ್ನು ಬಳಸಿಕೊಂಡು ಮಗಳಿಗೆ ರವಾನಿಸುತ್ತಾನೆ. ಈ ಏಕತ್ವ ಬಿಂದುವಿನಲ್ಲಿ ಕಾಲವು ಸ್ಥಬ್ಧವಾದಂತೆ, ಭೂತ, ವರ್ತಮಾನ ಭವಿಷ್ಯತ್ಗಳೆಲ್ಲ ಪರದೆಗಳ ಮೇಲಿನ ಚಿತ್ರಗಳಂತೆ ಅವನ ಅನುಭವಕ್ಕೆ ಬರುತ್ತದೆ.

‘’ಒಂಥರಾ ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ಅಂದಹಾಗಾಯ್ತು’’  ಜಗ್ಗ ಗೊಣಗಿದ.

“ಗುರುತ್ವ, ಏರುಪೇರು, ಗರ್ಗಾಂಟುವಾ ಎಲ್ಲಾ ಕಗ್ಗಂಟಾಯ್ತಲ್ಲ ಮಾರಾಯ!” ವಿಜಯ ಮತ್ತೆ ಕೊರಗಿದ.   

“ಏನೂ, ಗುರುತ್ವ ಬಲದಲ್ಲಿ ಏರು ಪೇರಾ? ಅದು ಹೆಂಗೆ ಸಾಧ್ಯ. ಗುರುತ್ವ ಬಲ ಅಂದ್ರೆ ದ್ರವ್ಯರಾಶಿ ಇರುವ ಯಾವುದೇ ಕಾಯ (body) ವೊಂದು, ತನ್ನ ತೂಕಕ್ಕೆ ಅನುಸಾರವಾಗಿ ಪ್ರದರ್ಶಿಸುವ ಆಕರ್ಷಣ ಬಲ ತಾನೇ? ಅದು ಅಲೆಯಾಗುವುದು ಅಂದರೇನು ? ಅದು ಬದಲಾಗುವುದು ಎಂದರೇನು?” ಉಗ್ರಿ ಕೇಳಿದ.

`ಎಲಾ ಎಲಾ,  ನೋಡ್ರೋ ಈ ಪ್ರಾಣೀನಾ, ಪರವಾಗಿಲ್ಲ! ಏನೋನೋ ತಿಳ್ಕೊಂಡ್ ಬಿಟ್ಟಿದೆ ಮುಂಡೇದು!!`, ಎಲ್ಲಾ ಚಕಿತರಾದರು.

ಉಬ್ಬಿದ ಉಗ್ರಿ ಕೊಚ್ಚಿದ, “ನೋಡ್ರೋ, ಈ ಗುತ್ವಾಕರ್ಷಣೆ  ಒಂದು ಬಲ ಅಂತ ನ್ಯೂಟನ್ ಅನ್ನೋ ವಿಜ್ಞಾನಿ, ತಲೆ ಮೇಲೆ ಸೇಬುಹಣ್ಣು ಬಿದ್ದಾಗ ಅದು ಹೆಂಗೆ ಬಿತ್ತು  ಅಂತ ಯೋಚ್ನೆ ಮಾಡಿ, ಕಂಡುಹಿಡಿದು  ಸಿದ್ಧಾಂತ ರೂಪಿಸಿ  ಪ್ರಪಂಚಕ್ಕೆ ಹೇಳಿದ್ದು. ಅದೇ ನಿಮ್ ತಲೆ ಮೇಲೆ ಸೇಬು ಬಿದ್ದಿದ್ರೆ, ತಿಂದು ತೇಗಿ ಮಲಿಕ್ಕಂತಿದ್ರಿ, ಪಡ್ಡೆ ಮುಂಡೇವಾ, ನನಗೇ ಗುನ್ನ ಹಾಕಕ್ಕೆ ಬರ್ತವೆ” ಸಿಕ್ಕ ಚಾನ್ಸು ಬಿಡಲಿಲ್ಲ.

“ಆಹಾಹಾ, ಕಂಡಿದ್ದ ಈ ನನ್ಮಗ. ಸೇಬು ನೇರವಾಗಿ ಬಿತ್ತೋ ಇಲ್ಲಾ ಅಲೆ-ಅಲೆಯಾಗಿ ಡ್ಯಾನ್ಸ್ ಮಾಡ್ಕೊಂಡು ಬಂದು ಬಿತ್ತೋ, ಬಡ್ಡೆತ್ತದೆ. ಗುರುತ್ವ ಪರತ್ವ ಅದೆಲ್ಲಾ ನ್ಯೂಟನ್ನು  ಮುಂಚೇನೇ ತಿಳ್ ಕಂಡಿರ್ತಾನೆ. ನಮ್ಮಂಥಾ ಶುದ್ಧ ಶುಂಠರಿಗೆ ಹಂಗೇ ಹೇಳಿದ್ರೆ ರುಚಿಸೋಲ್ಲಾ, ತಲೇಲಿ ಇಳಿಯಲ್ಲಾ  ಅಂತ ಸೇಬು ಹಣ್ಣಿನ ಕಥೆ ಕಟ್ಟಿರ್ತಾನೆ. ಬಂದ್ಬುಟ್ಟ ಬಾಯಿ ಬಿಟ್ಕೊಂಡು” ಓಂಕಾರಿ ಪಾಟಿ ಸವಾಲೆಸೆದ.

ದ್ರವ್ಯರಾಶಿಗೆ ಅನುಗುಣವಾಗಿ ಆಕರ್ಷಣೆ ಮಾಡ್ಬೇಕು ಅನ್ನೋದೇನೋ ಸರಿ. ನಮ್ಮ ಸುಬ್ಬ ಇಷ್ಟು ದಪ್ಪಗಿದ್ದು ಏನೆಲ್ಲಾ ತಿಪ್ಪರಲಾಗ ಹಾಕಿದರು ಆ ಸೊನಾಲಿ, ತೆಳ್ಳಗಿರೋ ವಿಜಯನ್ನೇ  ಯಾವಾಗ್ಲೂ ತಿರ್ಗಿ ತಿರ್ಗಿ ನೋಡ್ತಿರ್ತಾಳಲ್ಲಾ, ಅದು ಹೆಂಗೆ? ಪುಟ್ಟ ಕೇಳಿದ.

ಗುರುತ್ವದ ಅಲೆ ಅಂದ್ರೆ ಆಕರ್ಷಣೆಯ ಅಲೆನೇ. ಅದೇ ಕಣೋ, ನಮ್ಮ ವಿಜಯ- ಸೊನಾಲಿ ಇದ್ರೆ, ಅವೆಲ್ಲಾ ಅನುರಾಗದ ಅಲೆಗಳಾಗಿ ಬದಲಾಗ್ತಾ ಇರ್ತವೆ . ಇವರ ತಲೆ ಮೇಲೆ ಸೇಬು ಬಿದ್ದಿದ್ರೆ,

‘ನೀರಿನಲ್ಲಿ ಅಲೆಯ ಉಂಗುರಾ ಗಾಳಿಯಲ್ಲಿ ಸೇಬಿನುಂಗುರಾ
ಕ್ಯಾಚ್ ಹಿಡಿದುಕೊಂಡು, ಕಚ್ಚಿ ಕೊಂಡು
ತಿಂದಮೇಲೆ ತೇಗಿನುಂಗುರಾ.. ಆ..’ ಅಂತ ಹಾಡಿ ಮುಗಿಸ್ತಾ ಇದ್ರೂ ಅಲ್ವೇನೋ?

ಆಗಾ, ಈ ಗ್ರಾವಿಟಿ -ಚಾವಟಿ ಪ್ರಶ್ನೆನೇ ಬರ್ತಾ ಇರ್ಲಿಲ್ಲ.` ಉಗ್ರಿ ಬಿಡಲಿಲ್ಲ.

“ಸುಮ್ನಿರ್ರೋ, ಬರೀ ತಲೆ ಹರಟೆ ಮಾಡ್ತೀರಾ.‘ಅದೇನು, ಶಬ್ದದ ಅಲೆ ಕೇಳಿದ್ದೀನಿ, ಬೆಳಕಿನ ಅಲೆ ಕೇಳಿದ್ದೀನಿ . ಗುರುತ್ವ ಒಂದು  ಬಲ ಅಲ್ವಾ, ನೀನೇನೋ ಅಲೆನೋ ತರಂಗಾನೋ  ಅಂದಿ?” ಜಗ್ಗು ಕೇಳಿದ.

Albert-Einstein‘ನಿಜ, ಗುರುತ್ವ ಬಲ ಒಂದು ಮೂಲಭೂತವಾದ ನಾಲ್ಕು ಬಲಗಳಲ್ಲಿ ಒಂದು. ಮೊದಲನೆಯದು ಶಕ್ತಿಶಾಲಿ ಬೀಜಾಣು ಬಲ, (strong nuclear force), ಎರಡನೆಯದು ದುರ್ಬಲ ಬೀಜಾಣು ಬಲ (weak nuclear force), ಮೂರನೇಯದು ವಿದ್ಯುತ್ಕಾಂತೀಯ ಬಲ (electro-magnetic force) ಮತ್ತು ನಾಲ್ಕನೆಯದು ಗುರುತ್ವಾಕರ್ಷಣಾ ಬಲ (gravitational force). ಮೊದಲನೆಯ ಎರಡು ಬಲಗಳು ಸೂಕ್ಷ್ಮ ರೂಪದ್ದವು. ಅಣು ಬಾಂಬಿನಲ್ಲಿ, ಅಣುಶಕ್ತಿಯಲ್ಲಿ ಪ್ರಕಟವಾಗುವಂತಹವು; E =mc2 ಸಮೀಕರಣದ ಅನ್ವಯಿಕ ಉತ್ಪತ್ತಿಗಳು . ನಮ್ಮ ದೈನಂದಿನ ಅನುಭವಕ್ಕೆ ಸಿಗಲಾರವು. ಇನ್ನು ಮೂರನೇಯದು ನಿಮಗೆಲ್ಲ ಚೆನ್ನಾಗಿ ಪರಿಚಿತ. ಅದರಲ್ಲಿ ಆಕರ್ಷಣೆ ಮತ್ತು ವಿಕರ್ಷಣೆಗಳು, ಸಾಮಾನ್ಯ ಹಾಗೂ ವಿರುದ್ಧ ಧ್ರುವಗಳು ಇರುತ್ತವೆ. ಅದು ಕಣ್ಣಿಗೆ ಕಾಣದಿದ್ದರೂ ತನ್ನದೇ ಕಾಂತ ಕ್ಷೇತ್ರವನ್ನು ಹೊಂದಿರುತ್ತದೆ ಮತ್ತು ಅದರಲ್ಲಿ ಬರುವ ಬದಲಾವಣೆಗಳು ಅಲೆಗಳ ರೂಪದಲ್ಲಿ ಸಂವಹಿಸುತ್ತವೆ ಎಂಬುದು ನಮಗೆ ಗೊತ್ತು. ಈ ವಿದ್ಯುತ್ಕಾಂತೀಯ ಅಲೆಗಳ ಒಂದು ಶಕ್ತಿಯ ರೂಪ ನಾವು ಕಾಣುವ ಬೆಳಕು ಹಾಗೂ ನಮ್ಮ ಕಣ್ಣಿಗೆ ಕಾಣದಿರುವ ಬೆಳಕು. ನಾವು ಮೊದಲು ಬೆಳಕು ಅಂದ್ರೆ ನಮ್ಮ ಕಣ್ಣಿಗೆ ಕಾಣುವ ಏಳು ಬಣ್ಣಗಳು (VIBGYOR) ಮಾತ್ರನೇ ಅಂದ್ಕೊಂಡಿದ್ವು. ಈಗ ಕ್ಷ ಕಿರಣ, ಗ್ಯಾಮಾ ಕಿರಣ, ರೇಡಿಯೋ ತರಂಗ, ಮೈಕ್ರೋತರಂಗ, ಇತ್ಯಾದಿ ಇವೆ ಅಂತ ಆಮೇಲೆ ತಿಳೀತಲ್ಲ ಹಂಗೇ.  ಇನ್ನೂ  ಗುರುತ್ವ ಬಲದ ನಿಜ ಸ್ವರೂಪ ನಮಗೆ ಇಂದಿಗೂ ಪೂರ್ತಿ ತಿಳಿದಿಲ್ಲ. ಇದನ್ನು ಪರಿಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಸಧ್ಯಕ್ಕೆ ಅದು ಕೇವಲ ಆಕರ್ಷಿಸುವ ಗುಣ ಹೊಂದಿದೆ ಎಂದಷ್ಟೇ ತಿಳಿದಿದೆ. ಇನ್ನು ಈ ನಾಲ್ಕೂ ಮೂಲಭೂತ ಬಲದ ಸ್ವರೂಪಗಳು ಪರಸ್ಪರ ಸಂಬಧಿಸಿದವುಗಳಾಗಿದ್ದು ಅವುಗಳ ನಡುವಿನ ಸಾಮಾನ್ಯ ಕೊಂಡಿ ನಮ್ಮ ಕೈಗೆ ಸಿಕ್ಕಿಲ್ಲ. ಐನ್-ಸ್ಟೀನ್ ಇದರ ಬಗ್ಗೆ ಬಹಳ ಆಲೋಚಿಸಿದರು. ಅದು ಇನ್ನೂ ಕೈಗೂಡಿಲ್ಲ. ಎಲ್ಲಾ ಅರ್ಥ ಆಗ್ತಾ ಇದೆಯಾ? ಒಮ್ಮೆ ಖಾತ್ರಿ ಮಾಡಿಕೊಳ್ಳಲು ಕೇಳಿದ.

 

“ಏನೋ ಗುರುವೇ ಈ ತರಂಗಗಳ ವಿಚಾರ ನೀನೇ ನಂ ತಲೇಲಿ ಸುರಂಗ ಕೊರೆದು ಸುರಿಬೇಕು ಅಷ್ಟೇ. ಈ ವಿಸ್ವ ಸೃಷ್ಟಿ ಇಷ್ಟು ಗೋಜಲಾಗಿ ಯಾಕಿರೋದು. ಸಿಂಪಲ್ಲಾಗಿ ಇರಕ್ಕಾಗಲ್ವ?” ಕಿಟ್ಟು ಗೊಣಗಿದ.

“ಎಲ್ಲಾ  ಸಿಂಪಲ್ಲಾಗೇ ಇರುತ್ತೆ. ನಮಗೆ ಅರ್ಥ ಮಾಡ್ಕೊಳ್ಳೋ ಕೆಪಾಸಿಟಿ ಇರಬೇಕಷ್ಟೇ ಅಷ್ಟಕ್ಕೂ, ನಮಗೆ ಇದೆಲ್ಲಾ ಅರ್ಥ ಮಾಡ್ಸಿ ಪುಣ್ಯ ಕಟ್ಕೊಳ್ಳೋ  ದರ್ದು ಈ ಬ್ರಹ್ಮಾಂಡಕ್ಕೇನೂ ಇಲ್ಲ್ವಲ್ಲಾ. ಅದರ ಪಾಡಿಗೆ ಅದು ‘ಸತ್ಯಂ ಶಿವಂ ಸುಂದರಂ ಸರಳಂ’ ಅಂತ ಇದೇ ಇದೆ. ಕೆದುಕ್ಕೊಂಡು ಅರ್ಥ ಮಾಡ್ಕೊಳ್ಳೋಕೆ ಹೆಣಗ್ತಿರೋದು ಮನುಷ್ಯಾನೇ ತಾನೇ?” ಸಂಜಯ ಮರು ಪ್ರಶ್ನೆ ಮಾಡ್ದ.

“ಅಹುದಹುದು. ಈ ತೆಪರ ನನ್ಮಕ್ಳ ತಲೆಗೆ ಇಳೀದಿದ್ರೆ ಅದೇನು ವಿಜ್ಞಾನದ ತಪ್ಪಾ? ತಿನ್ನಕ್ಕೆ ಆಗದಿದ್ರೆ ದ್ರಾಕ್ಷೀನೇ ಹುಳಿ ಅಂತಲ್ಲ ಆ ನರಿ ನೆಂಟ್ರು ಈ ಹೆಡ್ಡ  ಮುಂಡೇವು.” ಕಿಟ್ಟು ದೂಷಿಸಿದ.

‘’ಏನೋ ತಾವು ಎಲ್ಲಾ ಅರೆದು ಕುಡುಧಂಗಿದೆ. ಗ್ರಾವಿಟಿ ಬಗ್ಗೆ ಸ್ವಲ್ಪ ಪರಾಂಬರಿಸಿ ಕೊಟ್ಟು ಪುಣ್ಯ ಕಟ್ಕೋಬೇಕಾಗಿ ವಿನಂತಿ’’  ಜಗ್ಗು ಸವಾಲೆಸೆದ.

ಈ ಗ್ರಾವಿಟಿ ಅಂದಿದ್ದು ಆಗ ತಾನೇ ಇವರ ಗುಂಪಿಗೆ ಸೇರಿಕೊಂಡ ಸುಬ್ಬನ ಕಿವಿಗೆ ‘ಗ್ರಾಚ್ಯುಟೀ’ ಥರ ಕೇಳಿಸಿ, ‘’ಲೋ, ಗೂಬೆ ಮುಂಡೇವಾ ಗ್ರಾಚ್ಯುಟಿ ಅಂದ್ರೆ ನಾವು ರಿಟೈರ್ ಆದಾಗ ಬರೋ ಹಣ ಕಣ್ರೋ, ಒಂದೇ ಇಡಿಗಂಟು ಕೊಡ್ತಾರಲ್ಲ ಅದು’’ ಅಂದ.

“ಆಹಾ, ಈ ಹಂದಿಗೆ ಹೇಲಿಂದೇ ಚಿಂತೆ ಅಂತಾರಲ್ಲ ಹಂಗಾಯ್ತು. ಮುಂಡೇದಕ್ಕೆ ದುಡ್ಡು ಬಿಟ್ರೆ ಬೇರೆ ಏನಾದ್ರೂ ಇದ್ಯಾ ಯೋಚ್ನೆ? ಹೌದು, ದಪ್ಪನೆ ಇಡಿಗಂಟು ನಿನ್ ಜೋಬ್ನಲ್ಲಿ ಬಂದು ಕೂತಿದೆ ಅಂತ ಗೊತ್ತಾದ್ರೆ ನೆಂಟ್ರು -ಇಷ್ಟರು ಎಲ್ಲಾ ಗ್ರಹಗಳ ಥರ ನಿನ್ ಸುತ್ತಾ ಸುತ್ತು ಹಾಕ್ತಾ ಇರ್ತಾರಲ್ಲ ಅದೇ ಗ್ರಾವಿಟಿ ಆಫ್ ಗ್ರಾಚ್ಯುಟೀ. ಸರಿಯಾಗಿ ಕೇಳಿಸ್ಕೊಂಡು, ತಿಳ್ಕೊಂಡು ಬಾಯಿ ಬಿಡು ಅಂತ ಎಷ್ಟು ಸಾರ್ತಿ ಬಡ್ಕೊಂಡ್ರೂ ತಲೆಗೆ ಇಳಿಯಲ್ಲ ಇದುಕ್ಕೆ’’ ಜಗ್ಗು ತನ್ನ ಅಸಹನೆ ತೋರಿಸಿದ. ಸುಬ್ಬ ತೆಪ್ಪಗೆ ಕೂತ್ಕೊಂಡ.

“ಲೋ, ನೀವೆಲ್ಲಾ ಎಲ್ಗೋ ವಿಷಯಾಂತರ ಮಾಡಿಕೊಂಡು ಹೋಗ್ತಾ ಇದೀರಾ. ಇಲ್ಲಿ ಕೇಳ್ರಿ. ಮನುಷ್ಯನ ಅರಿವಿನ ಹರವು ಯಾವುದೇ ಕಾಲದ ಅವಧಿಯಲ್ಲಿ ಒಂದು ಸೀಮಿತ ಪರಿಧಿಗೆ ಒಳಪಟ್ಟಿರುತ್ತೆ. ಅವನ ಆವಿಷ್ಕಾರಗಳು, ಯೋಚನೆಗಳು, ಸಮಸ್ಯೆಗಳು, ಅದರ ಪರಿಹಾರಕ್ಕಾಗಿ ನಡೆಸುವ ಪ್ರಯತ್ನಗಳು ಈ ಅರಿವನ್ನ ವಿಸ್ತರಿಸುತ್ತಾ ಇರುತ್ತವೆ. ಹಾಗೇ, ಮೊದಲು ಬೆಳಕು ಅಂದ್ರೆ ಕೇವಲ ಅಲೆ ಅಂತ ಅನ್ ಕೊಂಡ್ರು. ಆಮೇಲೆ ಅದು ಕಣಗಳ ಥರ ವ್ಯವಹರಿಸುತ್ತೆ ಅಂತ ಗೊತ್ತಾಯ್ತು. ಅದು ಉದ್ದುದ್ದ ಹರಿಯುವ ಅಲೆ ಅಂತ ಅಂದುಕೊಂಡ್ರೆ, ಅದಕ್ಕೆ ಅಡ್ಡ-ಅಡ್ಡ ಹರಿಯುವ ಗುಣವು ಇದೆ ಅಂತ ಗೊತ್ತಾಯ್ತು. ಬೆಳಕು ಅಂದ್ರೆ ಬರೀ ಬಿಳೀ ಬಣ್ಣ ಅಂತ ಊಹಿಸಿದ್ರು, ಆದರೆ ಅದಕ್ಕೆ ಏಳು ಬಣ್ಣ ಅಂತ ಗೊತಾಯ್ತು. ಅದರಿಂದಾಚೆಗೆ ನಮ್ಮ ಕಣ್ಣಿನ ಸಾಮರ್ಥ್ಯ ಮೀರಿದ ಬೆಳಕಿನ ಕಿರಣಗಳು ಇವೆ ಅಂತ ನಮಗೆ ತಿಳಿದಿದೆ. ಇದನು ನಾವು ೪೦೦ ವರ್ಷ ಹಿಂದೆ ಹೇಳಿದ್ರೆ ಎಲ್ಲಾ ಕುಂಡಿ ಬಡ್ಕೊಂಡು ನಗ್ತಾ ಇದ್ರೂ ಅಷ್ಟೇ. ಹಾಗೇ ಈ ಗುರುತ್ವದ ಸ್ವರೂಪ ಸಹಾ. ಇಂದು ನಮ್ಮ ಅರಿವು ಅದರ ಸ್ವರೂಪ ಕುರಿತು ಬಹಳ ಕಡಿಮೆ.’’  ಕಾಫಿಯ ಎರಡು ಸಿಪ್ಪು ಕುಡಿದ.

“ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಮಾರಾಯ. ಗುರುತ್ವ ಅಲೆ ಹೇಳು ಅಂದ್ರೆ ಬೆಳಕಿತ ತಳುಕಿನ ಬಗ್ಗೆ ಮಾತಾಡ್ತಾ ಇದೀಯಲ್ಲ?” ವಿಜಯ, ಎರಡನೇ ಡೋಸು ಕಾಫಿಗೆ ಹೇಳಿದ ಅಸಹನೆಯಿಂದ ಕೇಳಿದ.

“ಹೇಳ್ತೀನಿ ಇರಪ್ಪಾ. ಯಾವಾಗ್ಲೂ ಗೊತ್ತಿರುವುದರ ಆಧಾರದ ಮೇಲೆ ಗೊತ್ತಿಲ್ಲದೇ ಇರುವ ವಿಷಯದ ಕಡೆಗೆ ನಡೆಯುವ ಅಭ್ಯಾಸ ಮಾಡ್ಕೋಬೇಕು . ಆವಾಗ ವಿಷಯದ ಸಮಗ್ರತೆ ಗೊತ್ತಾಗುತ್ತೆ, ತರ್ಕಾನೂ ತಿಳಿಯುತ್ತೆ. ನಾನು ಅಷ್ಟೆಲ್ಲ ವಿವರಿಸಿದ್ದು, ಒಂದು ಶಕ್ತಿ ಅಥವಾ ಬಲದ ಸ್ವರೂಪ ಹೇಗೆ ನಮಗೆ ಸರಳತೆಯಿಂದ ಸಂಕೀರ್ಣತೆಯವರೆಗೆ ವಿಭಿನ್ನ ಸ್ವರೂಪದಲ್ಲಿ ಪ್ರಕಟ ಆಗುತ್ತೆ ಅಂತ ತಿಳಿಸೋದಕ್ಕೆ ಹಾಗೂ ವಿವಿಧತೆಯಿಂದ ಏಕತೆಯ ಸಾಕ್ಷಾತ್ಕಾರ ಪ್ರಕೃತಿಯಲ್ಲಿ ಯಾವ ರೀತಿ ಆಗುತ್ತೆ, ಈ ವಿಶ್ವದ ಅಗಾಧ ಸೃಷ್ಟಿಯಲ್ಲಿ ಅದನ್ನು ತನ್ನ ಆಂತರ್ಯದಲ್ಲಿ ಹಿಡಿದಿಟ್ಟುಕೊಂಡಿರುತ್ತೆ  ಅಂತ ಉದಾಹರಣೆ ಮೂಲಕ ತಿಳಿಸೋದಕ್ಕೆ.  ಈ ಹಿನ್ನೆಲೆಯಲ್ಲಿ ನಾವು ಗುರುತ್ವಬಲವನ್ನು ಅರ್ಥ ಮಾಡ್ಕೋಬೇಕು. ನಾನು ಮುಂಚೆ ಹೇಳಿದ ನಾಲ್ಕು ಮೂಲಭೂತ ಬಲಗಳಲ್ಲಿ ಅತ್ಯಂತ ಕ್ಷೀಣವಾದ ಬಲವೇ ಈ ಗುರುತ್ವಬಲ. ಇದರ ನಿಜ ರೂಪ, ಅದು ಪ್ರಕಟಗೊಳ್ಳುವ ವಿಧಾನ ಅದನ್ನು ಕಂಡುಹಿಡಿದ ನ್ಯೂಟನ್ನರಿಗೂ ಗೊತ್ತಿರಲಿಲ್ಲ. ಅದೊಂದು ಕಾಯಗಳನಡುವಿನ ಆಕರ್ಷಣಶಕ್ತಿ ಎಂದಷ್ಟೇ ಅವರಿಗೆ ತಿಳಿದಿದ್ದು. ಮತ್ತು ಅದನ್ನು ಅಳೆಯಲು F = G  M1x M2/ d2 ಅಂತ ಸಮೀಕರಣವನ್ನೂ ಕೊಟ್ಟರು. ಅವರ ಕಾಲಕ್ಕೆ ಅಷ್ಟೇ ತಿಳಿದಿದ್ದು.

ಮುಂದೆ  ಐನ್-ಸ್ಟೀನರ ಕಾಲಕ್ಕೆ ಗುರುತ್ವ ಎಂದರೆ ದೇಶ-ಕಾಲಗಳ (space-time) ನಡುವಿನ ಸಂವಹನ ಎಂದೂ, ಅದೊಂದು ಬಲೆಯ ತೆರದಲ್ಲಿ ಎಲ್ಲೆಲ್ಲೂ ಹರಡಿದೆ ಎಂದೂ, ಇಡೀ ಬ್ರಹ್ಮಾಂಡವನ್ನಾವರಿಸಿದ ಈ ಬಲೆಯ ಮೇಲೆ ಕುಳಿತ ಆಕಾಶಕಾಯಗಳು ತಮ್ಮ ದ್ರವ್ಯರಾಶಿ ಹಾಗೂ ಸಾಂದ್ರತೆಗೆ ಅನುಸಾರವಾಗಿ ಉಂಟುಮಾಡುವ ವಕ್ರತೆಯ ಪರಿಣಾಮವಾಗಿ  ಕಾಯಗಳನ್ನು ತಮ್ಮ ಕಡೆಗೆ ಸೆಳೆದುಕೊಳ್ಳುವ ಸಾಮರ್ಥ್ಯ ಪಡೆದುಕೊಳ್ಳುತ್ತವೆ  ಎಂದು ವ್ಯಾಖ್ಯಾನಿಸಿದರು. ತನ್ನ ಸ್ಮಾರ್ಟ್ ಫೋನು ತೆಗೆದು ಅದರಲ್ಲಿನ ಒಂದು ಚಿತ್ರವನ್ನು ತೋರಿಸಿದ.

ಈ ವ್ಯಾಖ್ಯಾನ ಬಹುತೇಕ ಭೌತಿಕ ಪ್ರಕ್ರಿಯೆಗಳು ಹಾಗೂ ಅದರ ಸಂಬಂಧಿಸಿದ ಅವಲೋಕನಗಳನ್ನು ವಿವರಿಸಲು ಶಕ್ತವಾಯಿತಾದರೂ ಉಳಿದ  ಮೂಲಭೂತ  ಗುರುತ್ವಬಲದ ಸಂಬಂಧವನ್ನು ವಿವಾದಾತೀತವಾಗಿ ವ್ಯವಸ್ಥಾಪಿಸಲು ಸಾಧ್ಯವಾಗಲಿಲ್ಲ. ಪ್ರಕೃತಿಯಲ್ಲಿ ಎಲ್ಲವೂ ಒಂದಕ್ಕೊಂದು, ಪರಸ್ಪರ ಸಂಬಂಧಗಳನ್ನು ಇಟ್ಟುಕೊಂಡೇ ಇರುತ್ತವಾದರೂ ಐನ್-ಸ್ಟೀನರಿಗೆ ಅದರ ವಿವರಣೆ ಸಾಧ್ಯವಾಗಲಿಲ್ಲ. ಈಗ ಗುರುತ್ವವು ಸಹ ಅಲೆಗಳ ಸ್ವಭಾವ ಮತ್ತು ಸ್ವರೂಪ ಪಡೆದಿರಬಹುದೆಂದು ವೈಜ್ಞಾನಿಕವಾಗಿ ಊಹಿಸಲಾಗುತ್ತಿದೆ. ಇದು ಅಲೆಗಳ ಸ್ವರೂಪ ಪಡೆದ ಕಾರಣ ಹಾಗೂ ವಿಶ್ವವ್ಯಾಪಿ ಗುಣಲಕ್ಷಣಗಳನ್ನು ಹೊಂದಿರುವ ಕಾರಣ ಅದನ್ನು ಉಪಯೋಗಿಸಿಕೊಂಡು ಬಹುದೂರದ ತನಕ ಸಂವಹನವನ್ನು (ಕಮ್ಯುನಿಕೇಷನ್) ಅತಿ ಕಡಿಮೆ ಕಾಲಾವಧಿಯಲ್ಲಿ, ಸಂದೇಶದ ಮೂಲ ರೂಪಕ್ಕೆ ಅಪಚಾರವಾಗದಂತೆ ಸಾಧಿಸಿಕೊಳ್ಳಬಹುದೆಂದೂ, ವಿದ್ಯುತ್ಕಾಂತೀಯ ಅಲೆಗಳಿಗಿಂತಲೂ (radio waves) ಕರಾರುವಾಕ್ಕಾಗಿ ಹಾಗೂ ಶೀಘ್ರವಾಗಿ ಇದು ದತ್ತಾಂಶಗಳನ್ನು ಕೊಂಡೊಯ್ಯಬಹುದೆಂಬ ತರ್ಕದ ಆಧಾರದ ಮೇಲೆ ಈ ಪರಿಕಲ್ಪನೆಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಅದೇ ಕಾರಣಕ್ಕೆ ಆ ಮಹಿಳಾ ವಿಜ್ಞಾನಿ ಕಳಿಸಿದ ದತ್ತಾಂಶಗಳನ್ನು ಭೂಮಿಯಲ್ಲಿದ್ದ ಕಿರಿವಿಜ್ನಾನಿಯಾದ ಮರ್ಫಿಯು ಉಪಯೋಗಿಸಿಕೊಂಡು ಮಾನವ ಸಂಕುಲವನ್ನು ಶನಿಗ್ರಹದ ಉಪ್ಗ್ರಹವೊಂದಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗುತ್ತಾಳೆ”.

“ಏನೋ ಅಪ್ಪ, ಬಲವೋ ಬಲೆಯೋ , ಬಿಲವೋ, ಎಲ್ಲಾ ಮಾಯೆ. ಅಂತು ಈ ಬಲದ ಬಿಲದೊಳಗೆ  ಸಿಕ್ಕ ಮೊಲ ವಿಲವಿಲ ಅಂತ ಅಂದಂತಾಯ್ತು ನನ್ನ ಪರಿಸ್ಥಿತಿ.  ಆದ್ರೂ… ಈ ಗುರುತ್ವಬಲ, ದೇಶ ಕಾಲ ಎಲ್ಲಾ ಬಲೆ ಥರ ಇದ್ಮೇಲೆ ಅಲೆ-ಅಲೆಯಾಗಿ ಹೆಂಗೆ ಹರಡುತ್ತೆ ಅನ್ನೋದು ಒಂಥರಾ ಅಸ್ಪಷ್ಟವಾಗಿ ಸ್ಪಷ್ಟ ಆದ್ರೂ, ಇನ್ನೂ ಪೂರ್ತಿ ಇಳ್ದಿಲ್ಲ. ಇನ್ನೊಂದು ಸ್ವಲ್ಪ ವಿವರಿಸ್ತೀಯಾ?” ಜಗ್ಗು ಕೇಳಿದ.

“ಎರಡು ಕಾಯಗಳು ಅಥವಾ ಬ್ರಹ್ಮಾಂಡದಲ್ಲಿರುವ ಎಲ್ಲಾ ಕಾಯಗಳು ಈ ವ್ಯೋಮಸಮಯದ ಮೇಲೆ ವಕ್ರತೆ ಉಂಟುಮಾಡಿ ನಿರಂತರ ಪರಿಭ್ರಮಿಸುತ್ತಿರುವುದರ ಕಾರಣ ಆ ಬಲೆಯ ಮೇಲೆ ಅಲೆಗಳನ್ನು ನಿರ್ಮಿಸುತ್ತಲೇ ಇರಬೇಕು. ಪ್ರತಿಯೊಂದು ಇಂತಹ ಕಾಯವು ತನ್ನದೇ ಆದ ವಿಶಿಷ್ಟ ಗುಣಲಕ್ಷಣಗಳಿರುವ ತರಂಗವನ್ನು ಉತ್ಪತ್ತಿಗೊಳಿಸುತ್ತಿರಬೇಕು. ಅದರ ತೀಕ್ಷ್ಣತೆ ಬಹಳ ಕಡಿಮೆ ಹಾಗೂ ಅದು ದುರ್ಬಲವಾಗಿರುವ ಕಾರಣಕ್ಕೆ ನಮ್ಮ ಅನುಭವಕ್ಕೆ ಬರುವುದಿಲ್ಲವೆಂದು ಕಾಣುತ್ತದೆ. ಇದನ್ನು ನಾವು ಪ್ರಾಯೋಗಿಕವಾಗಿ ನಿರೂಪಿಸಿ ಬಳಸಿಕೊಳ್ಳುವ ವಿಧಾನವನ್ನು ಕಂಡು ಹಿಡಿದರೆ ಹೆಚ್ಚಿನ ಸಮಯ ವ್ಯಯವಾಗದಂತೆ  ಬಹುದೂರದಿಂದ ಸಂದೇಶಗಳನ್ನು ಕಳುಹಿಸುವುದು ಮತ್ತು ಪಡೆಯುವುದು ಸಾಧ್ಯವಾಗಬಹುದೇನೋ ಎಂಬುದು ನನ್ನ ತರ್ಕ. ಇದನ್ನು ಈ ಚಿತ್ರದಲ್ಲಿ ಕೂಪರನು ಕಪ್ಪುಕುಳಿಯೊಳಗೆ ಇಳಿದು ತನ್ನ ರೋಬೋಟ್ ಕಳಿಸಿ ಪಡೆಯುವ ದತ್ತಾಂಶವನ್ನು ವರ್ಗಾಯಿಸಲು ಬಳಸಿಕೊಂಡಂತೆ ಬಿಂಬಿಸಿದ್ದಾರೆ’’ ಅಂದ ಸಂಜಯ.

 

gravitational-waves-simulation
ಗುರುತ್ವಲೆಗಳ ಪರಿಕಲ್ಪನೆ

“ಓಹೋ ಹಂಗಾ ವಿಚಾರ, ಈ ಗುರುತ್ವಬಲ ಉಂಟು ಮಾಡುವ ಅಲೆಯಲ್ಲು ವಿವಿಧ ಆವರ್ತನ, ಅಲೆಯ ಉದ್ದ, ಎತ್ತರಗಳು (frequency, amplitude and wavelength) ಇರಬೇಕು. ಇದು ಮುಂದಿನ ದಿನಗಳಲ್ಲಿ ಬೆಳಕು, ಶಬ್ದ ತರಂಗಗಳನ್ನು ಉಪಯೋಗಿಸಿಕೊಂಡಂತೆ ಬಲಸಿಕೊಳ್ಳಬಹುದು’’ ಎಂದು ಖುಷಿಯಾಗಿ ಜಗ್ಗು ತಲೆದೂಗಿದ. ಇತರರೂ ತಲೆ ಆಡಿಸಿದರು.

 

“ಅದು ಸರಿ, ಅವರುಗಳು ಭೂಮಿ ಬಿಟ್ಟು ನಭೋಮಂಡಲದ ಆಚೆಗೆ ಜಿಗಿದ ಮೇಲೆ ಅದೇನೋ ವರ್ಮ್-ಹೋಲಿನಲ್ಲಿ ಹೋಗ್ತಾರಂತಲ್ಲಾ? ಅದ್ರಿಂದ ಬೇರೆ ಆಕಾಶಗಂಗೆಗೇ ಲಗ್ಗೆ ಹಾಕಿದ್ರಂತಲ್ಲಾ? ಅದೇನು ಈ ವರ್ಮ್-ಹೋಲು ಅಂದ್ರೆ? ಗಾಳಿನೇ ಇಲ್ದಿರೋ ಬಾಹ್ಯಾಕಾಶದಲ್ಲಿ, ಹುಳ ಹೆಂಗೆ ಬಿಲ  ಕೊರೀತು?” ವಿಜಯ ಪ್ರಶ್ನೆಗಳ ಹೊಸಗಂಟು  ಬಿಚ್ಚಿದ.

ಅಲ್ಲೇ ಕೂತಿದ್ದ ಸುಬ್ಬ, ತನ್ನ ಚಾನ್ಸು ಬಿಡಬಾರದು ಅಂತ ‘ತಾವು ಪ್ರಧಾನ ಪೈಲಟ್ ಪಾತ್ರವಹಿಸಿ ಮಂಗಳ ಯಾನಕ್ಕೆ ಸವಾರಿ ಹೋಗಿ ನೌಕೆಯಲ್ಲಿ ವಾಪಸ್ ಬರೋವಾಗ ತಲೆ ಕಡೀತು ಅಂತ ಸೊನಾಲಿ ಮುಂದೆ ಹೆಲ್ಮೆಟ್ ತೆಗೆದು ಭಾರೀ ಸ್ಟೈಲ್ ಆಗಿ ತಲೆ ಬಾಚ್ಕೊಂಡ್ರಲ್ಲಾ ಸಾರ್, ಆವಾಗ ತಮ್ಮ ತಲೆಯಿಂದ ಬಿದ್ದ ಹೇನುಗಳೇ ಅಗಾಧವಾಗಿ ಬೆಳೆದು ಅಲ್ಲಿ ಕೊರೆದ ಸುರಂಗಗಳೇ ಈ ವರ್ಮ್-ಹೋಲುಗಳು. ಅದರಲ್ಲಿ ರಾಕೆಟ್ಟು ಹೋಗುತ್ತೆ, ಮತ್ತೆ ತಮ್ಮ ಜೊತೆ ಇದ್ಮೇಲೆ ಜೇಬಲ್ಲಿರೋ ಪಾಕೆಟ್ಟೂ  ಹೋಗುತ್ತೆ’’ ಅಂತ ಕಿಚಾಯಿಸಿದ. ಎಲ್ಲರೂ ಬಿದ್ದು ಬಿದ್ದು ನಕ್ಕರು.

“ಹೌದೇನೋ ವಿಜಯ. ನೀನೊಂಥರಾ ಬ್ಯಾಬಿಲೋನಿಯಾದ ತೂಗುತೋಟದ ಥರ, ಮನುಜ ಮೃಗಾಲಯ ಬಿಡಪ್ಪ,” ಅಂದ್ರು.

“ಇರ್ಲಿ ಬಿಡ್ರೋ, ಅವನ್ ಜೀವ ಯಾಕ್ ತಿಂತೀರಾ?” ಸಂಜಯ ಸಹಾಯಕ್ಕೆ ಬಂದ.

ಅದನ್ನು ಕಂಡ ಸುಬ್ಬ ‘ಇಲ್ಲಮ್ಮಾ ಸಂಜಯ್, ನಿಮ್ಗೊತ್ತಿಲ್ಲ. ಈ ನನ್ಮಗ ಮಾರಯ್ಯನ ಮಂಗಳಯಾನದಲ್ಲಿ ನನಗೆ ಸ್ವಲ್ಪ್ ಅವಮಾನ ಮಾಡ್ಲಿಲ್ಲ ಆ ಸೊನಾಲಿ ಮುಂದೆ. ನೀನೇನ್ ಇವನ ಅನ್ನದ ಋಣಕ್ಕೆ ಬಿದ್ದಿಲ್ಲ ಸುಮ್ನಿರು. ಇವನ ಕೊಡ್ಸಿದ್ದ್ ತಿಂಡೀಗಿಂತಾ ಸಾವಿರ ಪಾಲು ಹೆಚ್ಚಿಗೆ ಗಂಟಲು ಹರ್ಕೊಂಡಿದೀಯ’ ಸಾಧಿಸಿದ.

 

worm hole
ವರ್ಮ್-ಹೋಲಿನ ಪರಿಕಲ್ಪನೆ

“ಸರಿ, ಇಲ್ಲಿ ಕೇಳ್ರಿ. ವರ್ಮ್-ಹೋಲು ಅಂದ್ರೆ, ಹುಳದ ಬಿಲ ಅಲ್ಲ,  ಕೀಟ ಕೊರೆದ ರಂಧ್ರವೂ ಅಲ್ಲ. ದೇಶ ಕಾಲಗಳು ನಾವು ಹಿಂದೆ ಹೇಳಿದ ಹಾಗೆ ಕೇವಲ ಒಂದೇ ಪದರಿನಲ್ಲಿ ಹರಡಿಕೊಂಡಿರುವುದಿಲ್ಲ. ಅದು ಒಂದರ ಮೇಲೊಂದು ಮಡಿಸಿಕೊಂಡ ಬೆಡ್ ಶೀಟಿನಂತೆ ಮಡಿಸಿಕೊಂಡಿರಬಹುದು. ಹಾಗಾದಾಗ ನೂರಾರು ಸಾವಿರಾರು ವರ್ಷಳ ಮುಂದುನಲ್ಲಿ ಇರಬಹುದಾದ ದೇಶ ಕಾಲಗಳ ಪರದೆಯ ಭಾಗವನ್ನು ಈ ವ್ಯೋಮರಂಧ್ರದ ಮೂಲಕ ತಲುಪಲು ಸಾಧ್ಯವಾಗಬಹುದೆಂಬ ತರ್ಕವನ್ನು ಇಲ್ಲ್ಲಿ ಬಳಸಲಾಗಿದೆ. ಇದು ಐನ್-ಸ್ಟೀನರೇ ತಮ್ಮ ಸಾಪೇಕ್ಷ ಸಿದ್ದಾಂತದ ಮಂಡನೆಯಲ್ಲಿ ಸಾಧ್ಯವಾಗಬಹುದೆಂದು ಹೇಳಿದ ವಿಷಯವಾಗಿದೆ. ಈ ಚಿತ್ರ ನೋಡಿದರೆ ನಿಮಗೆ ತಿಳಿಯಬಹುದು ಎಂದು ದೇಶಕಾಲಗಳು ಮಡಿಕೆಯಾಗಿರುವ , ಅವನ್ನು ಸಂಪರ್ಕಿಸುವ ವ್ಯೋಮರಂಧ್ರದ ಚಿತ್ರವನ್ನೂ ತೋರಿಸಿದ. ಇದೊಂಥರಾ ಎರಡು ಸಮಾನಾಂತರವಾಗಿರುವ ಬೀದಿಗಳನ್ನು ಕೂಡಿಸುವ ಅಡ್ದ ಓಣಿಯಂತೆ ಊಹಿಸಿಕೊಳ್ಳಬಹುದು,’’ ಎಂದ

 

ಅವರೆಲ್ಲಾ ಮಿಕಮಿಕ ಅಂತ ಬಕರಾಗಳ ಥರ ಮುಖ ಮಾಡ್ಕೊಂಡು ಕೂತ್ಕೊಂಡ್ರು. ಆ ಮೇಲೆ ಅವನು ತೋರಿಸಿದ ಚಿತ್ರ ನೋಡಿ, ಇದೇನೋ ಇದು ಇಡೀ ಬ್ರಹ್ಮಾಂಡನೇ, ಒಳ್ಳೆ ಬಟ್ಟೆ ಥರ ಮಾಡಿಸ್ಕೊಂಡು ಬಿಟ್ಟಿದೆ. ಅದೇನೂ ಬೆಡ್ಶೀಟಾ ಇಲ್ಲಾ ಮಸ್ಲಿನ್ ಬಟ್ಟೇನಾ? ದೇಶ -ಕಾಲಾನು ಹಿಂಗೆ ಬೆಂಕಿಪೋಟ್ಟಣದಲ್ಲಿ ಮಡಿಸಿಟ್ಟುಕೊಳ್ಳಬಹುದೆಂದ್ರೆ ಎಂಥಾ ವಿಚಿತ್ರ! ನಾನೂ ಈ ಥರ ಬೇಕಾಗಿದ್ದೆಲ್ಲಾ ಕಲ್ಪನೆ ಮಾಡ್ಕೊಂಡು ಸಿದ್ಧಾಂತ ಮಂಡಿಸಿದರೆ ನೋಬೆಲ್  ಪ್ರೈಜು ಗಿಟ್ಟಿಸ್ಕೊಂಡುಬಿಡಬಹುದು, ಸಿ.ವಿ. ರಾಮನ್ ಆಗಬಹುದು,’’ ಉಗ್ರಿ ಮಂಡಿಗೆ ತಿಂದ.

“ನಿನ್ ತಲೆ, ಸಿನಿಮಾ ಮುಗೀತಾ ಬಂದಿದ್ರೂ ಕಥೆ ಶುರು ಆಯ್ತೇನಮ್ಮಾ ಅಂತ ಕೇಳ್ತೀಯಾ , ಇನ್ನು ವಿಜ್ಞಾನಿ ಬೇರೆ ಕೇಡು ನಿನ್ ಯೋಗ್ಯತೆಗೆ” ಅಂತ ವಿಜಯ ಉರ್ಕೊಂಡ.

“ಇಲ್ಲಿ ಕೇಳ್ರಿ, ಮನಸ್ಸಿಗೆ ಬಂದಿದ್ದನ್ನೆಲ್ಲಾ ಸಿದ್ಧಾಂತ , ಆವಿಷ್ಕಾರ ಅಂತ ಹೇಳಕ್ಕೆ ಬರಲ್ಲ. ಅದಕ್ಕೆ ಪ್ರಾಯೋಗಿಕವಾದ ಸಾಕ್ಷಿ ಕೊಡಬೇಕು ಇಲ್ಲವೇ ಅದನ್ನು ಪುರಸ್ಕರಿಸಿ ಬೆಂಬಲ ಕೊಡುವಂಥ ಗಣಿತೀಯ ಸೂತ್ರಗಳನ್ನು ಅಭಿವೃದ್ಧಿ ಮಾಡಬೇಕು. ಅಂತಹ ಸೈದ್ಧಾಂತಿಕ ಕಲ್ಪನೆಗಳು ಕಾಲಾಂತರದಲ್ಲಿ ನಿಜವಾಗಿಯೂ ಅನುಭವವೇದ್ಯ ಪ್ರಾಯೋಗಿಕ, ಅನ್ವಯಿಕ ಸತ್ಯಗಳಾಗಿ ಹೊಮ್ಮುತ್ತವೆ. ಪಾಲ್ ಡಿರಾಕ್ ಪ್ರತಿಪಾದಿಸಿದ ಪಾಸಿಟ್ರಾನುಗಳು ಆ ಮೂಲಕ ಪ್ರತಿದ್ರವ್ಯ (antimatter)ದ ಅಸ್ತಿತ್ವತೆ ಹೀಗೇ ಸಾಗಿ ಬಂದ ದಾರಿ. ಐನ್ಸ್ಟೀನರ ಸಾಪೇಕ್ಷ ಸಿದ್ಧಾಂತದ ಅನ್ವಯ ದೇಶ ಕಾಲಗಳು ವಕ್ರೀಭವಿಸುವುದು, ಅವುಗಳ ನಡುವೆ ವಿವಿಧ ಯುಗಗಳ ನಡುವೆ ಸಂಪರ್ಕಸೇತುವೆಗಳು ಏರ್ಪಡುವುದು ಅಸಾಧ್ಯವಲ್ಲ. ಆದರೆ ಅವು ನಮ್ಮ ಭೌತಿಕ ಅನುಭವಕ್ಕೆ ಬರಲು ಕಾಲ ಕೂಡಿಬಂದಿಲ್ಲ ಅಷ್ಟೇ,” ಅಂದ.

ಅವರ್ಗಳ ತಲೆ ಗ್ರಾವಿಟಿಯಲ್ಲಿ ಸಿಕ್ಕ ಗ್ರಹಗಳು ಸುತ್ತುವಂತೆ ಗಿರ್ರ್ರರ್ರ್ರ್ ಅಂತ ಸುತ್ತಿತು. ಹೊಸ ಸುಳಿವಿನ ಹುಳವೊಂದು ತಲೆಯನ್ನು ಕೊರೆದು ಒಳಹೊಕ್ಕಿತು.

ವಿಜಯ ‘ಅಲ್ಲಪ್ಪಾ ಸಂಜಯ, ಈ ಅಂಡ ಪಿಂಡ ಬ್ರಹ್ಮಾಂಡಗಳ ಸತ್ಯಾನ ಒಟ್ಟಿಗೆ, ಸಮಗ್ರವಾಗಿ ಯಾಕೆ ನಾವು ಕಲೀತಿಲ್ಲ. ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಪೀಸು ಪೀಸು ಆಗಿ ಕಲ್ತು ಕನ್-ಫ್ಯೂಸ್ ಆಗಿದ್ದೆ ಆಯ್ತಲ್ಲ ನಮ್ಮ ಹಣೆಬರಹ. ಎಲ್ಲಿಯೂ ಸಲ್ಲದ ದಂಡ  ಪಿಂಡಗಳಾಗಿ ಬಿಟ್ವಲ್ಲಾ,’ ಅಂತ ಹಪಹಪಿಸಿದ.

ಎಲ್ಲರೂ ಅವನ ಮಾತನ್ನು  ಅನುಮೋದಿಸಿದರು.

“ಅಗಾಧವಾದ ವಿಶ್ವ ಸತ್ಯವನ್ನು ಹಾಗೇ ಒಮ್ಮೆಲೇ ಅರಿಯುವುದು ಮಾನವನಿಗೆ ಒಂದು ಜೀವಿತಾವಧಿಯಲ್ಲಿ ಹೇಗೆ ಸಾಧ್ಯವಾಗಬಹುದು? ಅದೂ ವೈಜ್ಞಾನಿಕವಾಗಿ ಎಲ್ಲದಕ್ಕೂ ಪ್ರಮಾಣಗಳನ್ನು ಒದಗಿಸಿ ನಿರೂಪಿಸುವುದು ಅಸಾಧ್ಯವೇ. ಅದು ಹಂತ ಹಂತವಾಗಿ ಬೆಳೆದುಬರುವ ಪ್ರಕ್ರಿಯೆ. ಅಷ್ಟಕ್ಕೂ ಈಗ ನಾವು ಕಲಿಯುವ ವಿಜ್ಞಾನ  ಶಿಕ್ಷಣ ಪಾಶ್ಚಾತ್ಯ ಮಾದರಿಯ ಸರಳೀಕರಣದ  ಕಲಿಕಾ ವಿಧಾನ (Reductionist method). ಇಲ್ಲಿ ಪ್ರಕೃತಿಯ ವೈಜ್ಞಾನಿಕ ಲಕ್ಷಣಗಳನ್ನು ಸಣ್ಣ ಸಣ್ಣ ವಿಭಾಗಗಳಾಗಿ ಒಡೆದು, ಅವನ್ನು ಕಲಿತು ಅನಂತರ ಪರಿಪೂರ್ಣತೆಯ ಚಿತ್ರವನ್ನು ಪಡೆಯುವುದು ಸಾಧ್ಯವೆಂದು ನಂಬಿದ ವಿಧಾನ. ಇದರಲ್ಲಿ ಮಾನವನ ಪರಿಮಿತಿಯಲ್ಲಿ ಕಲಿಕೆಯೂ ಸಾಧ್ಯ, ಆ ತತ್ವಗಳ ಪ್ರಾಪಂಚಿಕ ಉಪಯೋಗಗಳ ಅನ್ವಯಿಕೆಯು ಸಾಧ್ಯ. ಇಲ್ಲಿ  ಪ್ರತಿಯೊಂದೂ ಮಾನವನಿಗಾಗಿ ಎನ್ನುವ ಭಾವ.

ಇದಕ್ಕೆ ಪ್ರತಿಯಾಗಿ ಪೌರಾತ್ಯ ಜಗತ್ತಿನ Holistic method ಇದೆ. ಇದನ್ನು ಪರಿಪೂರ್ಣತಾವಾದ, ಸಮಗ್ರತಾ ಕಲಿಕೆಯ ಮಾರ್ಗ ಅಥವಾ ಸಮಷ್ಟಿಪ್ರಾಜ್ಞತೆ  ಎಂದೆನ್ನಬಹುದು. ಇದು ಅನುಭಾವಿಕ ಮಾರ್ಗ. ಇದು ಅನ್ವಯಿಕ (application ) ಪ್ರಾಧಾನ್ಯತೆ ಪಡೆದಿರುವುದಿಲ್ಲ. ಅಂದರೆ, ಈ ವಿಧಾನದಲ್ಲಿ ವಿಶ್ವಸತ್ಯಗಳು ತಾತ್ವಿಕ ನೆಲೆಯಲ್ಲಿ ಅಂತರಂಗದಲ್ಲಿ ಗೋಚರವಾಗ್ಬಹುದಾದರೂ ಅವುಗಳನ್ನು ನಮ್ಮ ಅನಿಕೂಲಕ್ಕೆ ಬೇಕಾದಂತೆ ಬಳಸಿಕೊಳ್ಳುವ ವಿಧಿವಿಧಾನಗಳು ದೊರೆಯದೆ ಹೋಗಬಹುದು. ನೀವು ಪೌರಾತ್ಯ ಸಂಸ್ಕೃತಿಗಳ ಜೀವನಕ್ರಮವನ್ನು ಗಮನಿಸಿದಾಗ ಈ ಸತ್ಯ ಅನುಭವಕ್ಕೆ ಬರುತ್ತದೆ. ಇಲ್ಲಿ ಎಲ್ಲವೂ ಒಂದಕ್ಕೊಂದು ಹೊಂದಿಕೊಂಡಂತೆ ಹೆಣೆದುಕೊಂಡಿರುವ ಪ್ರಕ್ರಿಯೆ ಅವರು ನಮ್ಮ ಬಾಳುವೆಯನ್ನು ಬೃಹತ್ ವ್ಯವಸ್ಥೆಯ ಭಾಗವಾಗಿ ಪರಿಗಣಿಸಿ ರೂಪಿಸುವುದು ಕಂಡುಬರುತ್ತದೆ. ಇದು ಹಾಗಾಗಿ ಅಪರ-ಬೌದ್ಧಿಕ (metaphysical), ವ್ಯಾವಹಾರಿಕ (practical) ಅಲ್ಲ. ಇಲ್ಲಿ ಮಾನವನು ಪ್ರತಿಯೊಂದಕ್ಕಾಗಿ ಎನ್ನುವ ಭಾವ”.

ಅವರೆಲ್ಲರ ಕಿವಿ ನೆಟ್ಟಗಾಯ್ತು, `ಅದೇನು ಸ್ವಲ್ಪ ಉದಾಹರಣೆ ಸಮೇತ ಹೇಳು ಗುರು,’ ಅಂದರು.

`ನೋಡಿ, ನಮ್ಮ ಪುರಾಣಗಳಲ್ಲಿ, ಹಲವಾರು ಸಂದರ್ಭಗಳಲ್ಲಿ, ಮಾನವರು ಬೇರೊಂದು ಲೋಕಕ್ಕೆ ಹೋಗಿ ಬರುವ ದೃಷ್ಟಾಂತ ಗಳಿವೆ. ರೈವತ, ಪುರೂರವ ಮುಂತಾದವರು ದೇವಲೋಕಕ್ಕೂ, ಭವಿಷ್ಯತ ಕಾಲಮಾನಕ್ಕೂ ತೆರಳಿ ಅಲ್ಲಿ ಸಮಯ ಕಳೆದು ತಿರುಗಿ ಭೂಲೋಕಕ್ಕೆ ಬಂದ ಉದಾಹರಣೆಗಳಿವೆ. ಅವರಿಗೆ ವಯೋಮಾನ ಕಳೆದಿರದಿದ್ದರೂ, ಭೂಮಿಯಲ್ಲಿ ಯುಗಗಳೇ ಬದಲಾಗಿಬಿಟ್ಟುರುತ್ತವ! ದೇಶಕಾಲಗಳನ್ನು ಕ್ರಮಿಸಿ ಇನ್ನೊದು ಲೋಕಕ್ಕೆ ಹೋಗುವುದು ಕಪೋಲ ಕಲ್ಪನೆ ಎಂದಾದರೂ, ಅವರು ವೇಗ, ತೆಗೆದುಕೊಳ್ಳುವ ದಾರಿ ಇತ್ಯಾದಿಗಳು ಇಲ್ಲಿ ಗಹನವಾಗಿ ಚಿಂತಿತವಾಗಿವೆ. ನಮಗೆ ಈಗ ತಿಳಿದಿರುವ ಮಾಹಿತಿಯಂತೆ, ಬೆಳಕಿನ ವೇಗದಲ್ಲಿ ನಾವು ಪ್ರಯಾಣಿಸಿದರೆ, ನಮ್ಮ ವಯಸ್ಸು ಕಳೆಯುವುದೇ ಇಲ್ಲ! ಆದರೆ ಈ ಸತ್ಯಗಳನ್ನು ಅವರು ಈಗ ನಾವು ಅಳವಡಿಸಿಕೊಂಡಿರುವ, ಸತ್ಯಸ್ಯ ಸತ್ಯವೆಂದು ನಂಬಿರುವ ವೈಜ್ಞಾನಿಕ ವಿಧಾನಗಳ ಪ್ರಕಾರ ಮಾಡಿಲ್ಲ. ಅ ಕಾಲದಲ್ಲಿ ಈ ರೀತಿಯ ಬೆಳವಣಿಗೆಗಳೂ ಇರಲಿಲ್ಲ. ಗಮನಿಸಬೇಕಾದ ಅಂಶವೆಂದರೆ ಬೇರೆ ಇತರ ನಾಗರಿಕತೆಗಳಲ್ಲಿ ಈ ಬಗೆಯ ಸಾಧ್ಯ-ಅಸಾಧ್ಯತೆಗಳ ಚಿಂತನೆ ಆಗದಿರುವುದು.

“ಅದು ಸರಿ, ಈ ವರ್ಮ್ ಹೋಲು ಅಥವಾ ಈ ವ್ಯೋಮರಂಧ್ರ  ಇರೋದು ನಿಜಾನೇ ಅಂತ ಸದ್ಯಕ್ಕೆ ನಂಬಿದರೂ, ಅದು ದೇಶ ಕಾಲಗಳ ವಿಭಿನ್ನ ವಲಯಗಳನ್ನು , ಯುಗಗಳನ್ನು ಬಂಧಿಸುವ ಸೇತುವೆಯಾಗುವುದಾದರೂ ಹೇಗೆ?” ಜಗ್ಗು ಕೇಳಿದ.

`ಒಳ್ಳೆಯ ಪ್ರಶ್ನೆ. ಇದು ನಿಮಗೆ ಹಲವು ಪ್ರಶ್ನೆಗಳಿಗೆ ಉತ್ತರವನ್ನು ತೋರಿಸುತ್ತೆ. ನನ್ನ ಕೈಲಾದಷ್ಟು ವಿವರಿಸ್ತೀನೆ, ಕೇಳಿ,’ ಅಂತ ಅಂದು ಸಂಜಯ ಮುಂದುವರಿಸಿದ.

“ನಾವು , ಅಂದರೆ ಮಕ್ಕಳಾಗಿದ್ದಾಗ ಜಗತ್ತನ್ನು ಎರಡು ಆಯಾಮಗಳಲ್ಲಿ ಅನುಭವಿಸುತ್ತೇವೆ. ಉದ್ದ ಅಗಲ , ಉದ್ದ ಎತ್ತರ ಅಥವಾ ಅಗಲ- ಎತ್ತರ ಅಂತ. ಅದು ನಿಧಾನವಾಗಿ ಮೂರು ಆಯಾಮಗಳಲ್ಲಿ ಇದೆ ಎಂದು ನಮ್ಮ ಅರಿವಿಗೆ ಬರುತ್ತೆ ಹಾಗೂ ಗೋಚರಿಸಲು ಶುರು ಮಾಡುತ್ತೆ. ನಾವು ಒಂದು ಹಗ್ಗದ ತೇರಿಗೆ ಹೋಲಿಸಬಹುದು (ropeway cable car). ಅದು ನಮ್ಮ ಜಗತ್ತು ಎಂದಾದರೆ ಅದಕ್ಕೆ ಉದ್ದ ಅಗಲ ಎತ್ತರಗಳಿಂದಾದ ಒಂದು ಅನುಭವ ಗ್ರಾಹ್ಯ ಗಾತ್ರ ಇದೆ ಎಂದಾಯಿತು. ಅದು ಚಲಿಸುವ cable , ಹಗ್ಗ ಇದೆಯಲ್ಲ, ಅದನ್ನು ಏನೆನ್ನುವುದು? Einstein ಅವರು ಅದನ್ನು ನಾಲ್ಕನೆಯ ಆಯಾಮವಾಗಿ ಗುರುತಿಸಿದರು. ಅದು ಚಲಿಸುತ್ತಿರುವಂತೆ , ಕಾಲನ ಹರಿವಿನಲ್ಲಿ ನಮ್ಮ ಪ್ರಾಪಂಚಿಕ ವಿದ್ಯಮಾನಗಳು ಬದಲಾಗುವುದನ್ನು ಕಾಣುತ್ತೇವೆ. ಅದು ಬೆಳಕಿಗಿಂತ ಬಹಳ ನಿಧಾನವಾಗಿ ಚಲಿಸುವ ಕಾರಣ ನಮಗೆ ವಯಸ್ಸಾಗುವ ಪ್ರಕ್ರಿಯೆ ಅರಿವಿಗೆ ಬರುತ್ತದೆ. ಈ ತೇರು ಬೆಳಕಿನ ವೇಗದಲ್ಲಿ ಜೋರಾಗಿ ಚಲಿಸಿದರೆ, ನಮಗೆ ವಯಸ್ಸಾಗುವುದೇ ಇಲ್ಲ. ಏಕೆಂದರೆ ಅಲ್ಲಿ ಸಾಪೇಕ್ಷತೆಗೆ ಆಸ್ಪದವೇ ಇಲ್ಲವಲ್ಲ. ಹಾಗಾಗಿ ಇದು ನಾಲ್ಕನೆಯ ಆಯಾಮವಾಗಿ ಹೊರಹೊಮ್ಮಿತು. ಪ್ರತಿಕ್ಷಣವೂ ನಮ್ಮನ್ನು ಹಾಯ್ದು ಹೋಗುವ ಬೆಳಕಿನ ಕಿರಣಗಳು ನಮ್ಮ ಆ ಕ್ಷಣದ ಬಹುತಿಕ ಜಗತ್ತಿನ ಚಲನಚಿತ್ರವನ್ನು ಮುಂದಕ್ಕೆ ಕೊಂಡೊಯ್ಯುತ್ತಾ ಇರುತ್ತವೆ. ನಮ್ಮಿಂದ ಲಕ್ಷಾಂತರ ಮೈಲು ದೂರದಲ್ಲಿ ಇನ್ನೊಂದು ಜೀವಿಗೆ ನಮ್ಮ ಇಂದಿನ ವಿದ್ಯಮಾನಗಳು ಸಾವಿರಾರು ವರುಷಗಳನಂತರ ಗೋಚರಿಸಬಹುದು.

ಹಾಗಾದರೆ ನಮ್ಮ ಬದುಕೇ, ಬೆಳವಣಿಗೆಗಳು ಪೂರ್ವನಿಯೋಜಿತವೇ? ಎನ್ನುವ ಪ್ರಶ್ನೆ ಮೂಡಬಹುದು. ಈ Interstellaar ಚಿತ್ರದ ಪ್ರಕಾರ ಕೂಪರ್ರು, ಅವನ ತಂಡ, ಅವರುಗಳ ವ್ಯೋಮಯಾನ ಎಲ್ಲವೂ ಪೂರ್ವ ನಿರ್ಧಾರಿತ ಬೆಳವಣಿಗೆಗಳು. ಅವನು  ಗರ್ಗಾಂಟುವಾದ ಏಕತಾಬಿಂದುವಿಗೆ ಭೇಟಿ ಕೊಟ್ಟಾಗ ಅದು ಅವನ ಅರಿವಿಗೆ ಬರುತ್ತದೆ. ಏಕೆಂದರೆ ಅವನಿಗೆ ಅಲ್ಲಿ ಕಾಲದ ಹರಿವಿನ ಪೂರ್ಣ ಚಿತ್ರಣ ಸಿಕ್ಕಿರುತ್ತದೆ. ತನ್ನ ಮನೆಗೆ ಸಂದೇಶವನ್ನು ತಾನೇ ಕಳಿಸಿಕೊಂಡಂತೆ ಅವನಿಗೆ ಅಲ್ಲಿ ಗೋಚರವಾಗುತ್ತದೆ. ಕಾಲವು ಅಲ್ಲಿ ಘನೀಭವಿಸಿ ಎಲ್ಲವನ್ನು ಏಕಕಾಲದಲ್ಲಿ ತೋರಿಸುತ್ತ ಇರುತ್ತದೆ. ಹೀಗೆ ಹರಿಯುವ ಕಾಲವು ಅನಿಯಂತ್ರಿತವಲ್ಲ. ಅದನ್ನು ಮಣಿಸುವ ಶಕ್ತಿ ಗುರುತ್ವಕ್ಕೆ ಇರುತ್ತದೆ. ಪ್ರಖರವಾದ ಗುರುತ್ವಬಲದ ಕ್ಷೇತ್ರದ ಪರಿಧಿಯಲ್ಲಿ ಚಿತ್ರಣಗಳನ್ನು ಕೊಂಡೊಯ್ಯುವ ಬೆಳಕು ಬಂದಾಗ ಅದು ಬಗ್ಗುವುದು, ನಿಧಾನಿಸಲ್ಪಡುವುದು, ವಿವಿಧ ಪ್ರಮಾಣದ ವಕ್ರತೆಗೆ ಒಳಗಾಗುವುದು, ಅದು ಸಂಪೂರ್ಣವಾಗಿ ಬಾಗಿ ಚಕ್ರಾಕಾರದಲ್ಲಿ ಸುತ್ತ ತೊಡಗಿದರೆ, ಅದು ಘನೀಭವಿಸಬಹುದು.

ಇಂತಹ ಪರಿಸ್ಥಿತಿಯಲ್ಲಿ, ಒಂದರ ಮೇಲೆ ಇನ್ನೊಂದು ಕಾಲ ವಲಯ ಬಾಗಿದಾಗ ಅವುಗಳ ನಡುವೆ, ಈ ವರ್ಮ್-ಹೋಲು ಇದ್ದರೆ, ವರ್ಷಾನುಗಟ್ಟಲೆ ತೆಗೆದುಕೊಳ್ಳುವ ಪ್ರಯಾಣವನ್ನು, ಕ್ಷಿಪ್ರವಾಗಿ ಕ್ರಮಿಸಲು ಸಾಧ್ಯವಿದೆ ಎಂಬುದೇ ಈ ತಿಳುವಳಿಕೆ. ಈ ಸಾಧ್ಯತೆಯ ಕಲ್ಪನೆಯನ್ನು ಬಳಸಿಯೇ ಅವರು ಬೇರೊಂದು galaxy ಯನ್ನು ಪ್ರವೇಶಿಸಲು ಶಕ್ತವಾಗುತ್ತಾರೆ.”

“ಆಹಾ, ನಮ್ಮ ಮನೆಯಲ್ಲಿ ಹರಿಕಥಾಮೃತಸಾರ, ಭಾಗವತ ಪುರಾಣಗಳನ್ನು ಓದಿಸಿ ಮುಗಿಸಿದಮೇಲೆ ಸಮಾರಾಧನೆ ಮಾಡುತ್ತಿದ್ದರು. ಹಾಗೆ ನಾವು ಈ ತಾರಯಾನದ ಕಥೆಯಲ್ಲಿ ಗುರುತ್ವದ ಗಹನತೆಯನ್ನು ತಿಳಿದ ಸಲುವಾಗಿ, ತಗೊಳ್ರಮ್ಮ ಈ ಗ್ಯಾಲೆಕ್ಸಿ ಚಾಕಲೇಟು ತಿಂದು ಬಾಯಿ ಸಿಹಿ ಮಾಡ್ಕೊಳ್ಳಿ,” ಅಂತ ಓಂಕಾರಿ ಎಲ್ಲರಿಗೂ ಚಾಕಲೇಟಿನ ತುಂಡುಗಳನ್ನು ಕೊಟ್ಟ.

‘’ಹಂಗಾದ್ರೆ , ಕಿಟ್ಟು ಪುಟ್ಟು ಚಿತ್ರದ ಕಾಲವನ್ನು ತಡೆಯೋರು ಯಾರೂ ಇಲ್ಲಾ ಅಂತ ಇರೋ ಹಾಡನ್ನ  ಕೇಳಿದರೆ, ಗ್ರಾವಿಟಿ ಎದ್ಬಂದು ‘ಯಾಕಿಲ್ಲ , ನಾನಿದ್ದೀನಿ ಅಂತ ಹೇಳ್ಭೋದು. ನಾನ್ ಬಗ್ಗಿಸ್ತೀನಿ’ ಅಂತ ಅಲ್ವೇನೋ ಕಿಟ್ಟು?” ಅಂದ ಪುಟ್ಟ.

“ಹೌಧೌದು. ಕಾಲವನ್ನ  ಬಗ್ಗಿಸಿದ್ರೆ, ಈ ಕಿಟ್ಟು  ಪುಟ್ಟು ನನ್ ಮಕ್ಳು ಮುಖ ಮೂತಿಯಲ್ಲಾ ತಿರುಚ್ಕೊಂದು, ದ್ವಾರಕೀಷು ಅಂಬರೀಷು ಥರಾನೂ, ವಿಷ್ಣುವರ್ಧನ್ನು , ಪ್ರಭಾಕರ್ ಥರಾನೋ ಆಗಿ ಹೋಗ್ ತೀರಾ ಮಕ್ಳಾ .” ಉಗ್ರಿ ಕೆಣಕಿದ.

‘ಅದು ಸರಿ, ಈ ವರ್ಮ್ ಹೋಲ್ ಅಸ್ತಿತ್ವಕ್ಕೆ ಬರೋದಾದ್ರೂ ಹೆಂಗೆ? ಅದೇನು ಸುರಂಗ ಥರ ಇರುತ್ತಾ ಅಥವಾ ಹರಿದು ಹೋದ ಸೀರೆ ತೂತಿನ್ ಥರ ಇರುತ್ತಾ?’ ಜಗ್ಗು ಕೇಳ್ದ.

‘ಇದೂನು ಒಳ್ಳೆ ಪ್ರಶ್ನೆ’ ಅಂತ ತಲೆದೂಗಿದ ಸಂಜಯ್, ‘ಇದಕ್ಕೆ ಸ್ವಲ್ಪ ಗಣಿತ ಹಾಗೂ ವಿಜ್ಞಾನದ ಹಿನ್ನೆಲೆ ಬೇಕು. ನೀವೆಲ್ಲಾ ಇಂಜಿನಿಯರಿಂಗು ಪಾಸು ಮಾಡಿರೋದ್ರಿಂದ ಅರ್ಥ ಆಗುತ್ತೆ ಅಂತ ನಂಬ್ತೀನಿ,’ ಅಂದು ಅವರ ಮುಖ ನೋಡಿದ.

‘ಏನೋ ಹಂಗೂ ಹಿಂಗೂ ಇಂಜಿನಿಯರಿಂಗು ಮಾಡಿದ ನಂಗೂ, ತುಂಬಾ ಗಂಭೀರವಾಗಿ ಅಭ್ಯಾಸ ಮಾಡಿದ ನಿಂಗೂ ವ್ಯತ್ಯಾಸಾ ಇಲ್ಲ್ವಾ, ಗುರೂ! ಇಂಗನ್ನಾದ್ರೂ ತಿಂದೇವು ,ಆ ಕಬ್ಬಿಣದ ಗಣಿತದ ಮಾತ್ರೆ ನುಂಗಕ್ಕೆ ಆಗ್ಲಿಲ್ಲ ನೋಡು. ಇದ್ದಿದ್ರಲ್ಲಿ ಸರಳವಾಗಿ ಹೇಳು, ತಲೆ ಒಳಗೆ ಇಳೀಬಹುದು,’ ಅಂದ ಓಂಕಾರಿ.  

‘ಇಂಥದ್ದೆಲ್ಲಾ ಸ್ಕೂಲು ಕಾಲೇಜಲ್ಲಿ ಯಾಕೆ ಕಲಿಸಲ್ಲಾ ಅಂತೀನಿ? ಕೆಲ್ಸಕ್ಕೆ ಬಾರದನ್ನ ಹೇಳಿ ಹೇಳಿ ತಲೆತಿಂಧಾಕಿದ್ರು,’’ ಉಗ್ರಿ ಗೊಣಗಿದ. ನಾಳೆ ಭಾನ್ವಾರ ಆಲ್ವಾ, ‘ಏನ್ ಪರ್ವಾಗಿಲ್ಲ. ಲೇಟಾಗಿ ಎದ್ರಾಯ್ತು,’ ವಿಜಯ ಕೂಡಾ ಸೇರಿಸಿದ.

‘ನೋಡಿ, ಈ ಪ್ರಪಂಚ ಪರಸ್ಪರ ವಿರುದ್ಧವಾದ ವಸ್ತು ಹಾಗೂ ಕ್ರಿಯೆಗಳ ಸಂಗಮ. ಹಗಲು-ರಾತ್ರಿ, ಬೆಳಕು-ಕತ್ತಲು, ಎಡ-ಬಲ, ದೇವ-ದಾನವ, ಸುರ-ಅಸುರ, ಗಂಡು-ಹೆಣ್ಣು, ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ, ಸತ್ಯ-ಮಿಥ್ಯ, ಒಳ್ಳೆಯದು-ಕೆಟ್ಟದ್ದು, ಪ್ರಕೃತಿ-ಪುರುಷ… ಹೀಗೆ ಭೌತಿಕ, ತಾತ್ವಿಕ, ಭಾವನಾತ್ಮಕ, ಆಧ್ಯಾತ್ಮಿಕ, ಪೌರಾಣಿಕ ಇತ್ಯಾದಿ ಯಾವುದೇ ನೆಲೆಯಲ್ಲಿ, ಆಯಾಮದಲ್ಲಿ ನೋಡಿದರೂ ಈ ಪರಸ್ಪರ ವಿರುದ್ಧವಾದ  ಧ್ರುವ ವಿಭಜನೆಯನ್ನು ಕಾಣಬಹುದು. ಇದರರ್ಥ ಪರಿಪೂರ್ಣತೆಯು ಯಾವುದೇ ಒಂದು ಗುಣ-ಸ್ವರೂಪದಿಂದ ಬರಲಾರದು ಎಂಬುದೇ ಆಗಿದೆ. ನಮ್ಮ ಅರ್ಧನಾರೀಶ್ವರ (ಅರ್ಧ ಶಿವ ಮತ್ತು ಅರ್ಧ ಪಾರ್ವತಿಯ ಸ್ವರೂಪ) ಇದ್ದನ್ನೇ ಪ್ರತಿನಿಧಿಸುವುದು.

ಇನ್ನು ವೈಜ್ಞಾನಿಕ-ಭೌತಿಕ ವಲಯದಲ್ಲಿ ಕಣ್ಣಾಡಿಸಿದರೂ  ನೇರ-ವಿರುದ್ಧ ಧ್ರುವಗಳು ಕಂಡು ಬರುತ್ತವೆ. ಧನಾತ್ಮಕ ಕಣಗಳು-ಋಣಾತ್ಮಕ ವಿದ್ಯುತ್ ಕಣಗಳು, ಉತ್ತರ-ದಕ್ಷಿಣ ಆಯಸ್ಕಾಂತ ಧ್ರುವಗಳು, ಧನಸಂಖ್ಯೆ-ಋಣಸಂಖ್ಯೆ ಹೀಗೆ. ಅವೆರೆಡೂ ಕೂಡಿದ ಜಾಗದಲ್ಲಿ ಶೂನ್ಯ ಇರುತ್ತದೆ. ಅಂದರೆ ಈ ವಿರುದ್ಧ ಲಕ್ಷಣಗಳು ಪರಸ್ಪರ ರದ್ದಾಗಿ ಅಲ್ಲಿ ಏನೂ ಉಳಿಯದು ಅಥವಾ ಪರಿಪೂರ್ಣತೆಯನ್ನು ಸಾಧಿಸುವುದು ಸಾಧ್ಯ. ಭಾರತೀಯ ತತ್ವದಲ್ಲಿ ಹೀಗೆ ‘ಶೂನ್ಯ’ ಅಥವಾ ಸೊನ್ನೆಯ ಸೇರಿಕೆ ಕೇವಲ ವ್ಯಾವಹಾರಿಕ ಅವಶ್ಯಕತೆಯನ್ನು ಸಂಖ್ಯಾ ಶಾಸ್ತ್ರದಲ್ಲಿ ಪ್ರತಿನಿಧಿಸುವುದಿಲ್ಲ. ಇದಕ್ಕೆ ಒಂದು ಆಧ್ಯಾತ್ಮಕ ಸ್ಥಾನವೂ ಇದೆ, ಆದ್ದರಿಂದಲೇ ಸೊನ್ನೆಯ ಮೂಲಕ ಗಣಿತದ ಅಗಣಿತ ಸಾಧ್ಯತೆಗಳು ನಮಗೆ ದಕ್ಕಿವೆ,’ ಎಂದ.

‘ಹಾಗೇನಿಲ್ಲ, ರೋಮನ್ ಅಂಕಿಗಳು ಇರಲಿಲ್ಲವೇ. ಅವರೂ ಅದನ್ನು ಉಪಯೋಗಿಸಿ ಲೆಕ್ಖ  ಮಾಡಲಿಲ್ಲವೇ?’ ಕಿಟ್ಟು ವಾದಿಸಿದ.

‘ಲೋ, ಅದುಕ್ಕೆ ಹೇಳಾದು ನೀನೊಬ್ಬ ಮೊದ್ದುಮಣಿ ಅಂತ. ರೋಮನ್ ಅಂಕಿ ತಗೊಂಡು ೨೫ X ೨೫ ಗುಣಾಕಾರ ಮಾಡಪ್ಪ, ನಿನಗೆ ನೋಬೆಲ್ ಪ್ರೈಜ್  ಕೊಡುಸ್ತೀನಿ,’ ಶೀನ ತಿವಿದ.

ಎಲ್ಲರೂ ಜೋರಾಗಿ ನಕ್ಕರು.

‘ಅದು ಇರಲಿ, ಇನ್ನೂ ಮುಂದೆ ಹೋದರೆ, ವಿಭಿನ್ನ ಧ್ರುವಗಳ ನಡುವಿನ ಪರಸ್ಪರ ಆಕರ್ಷಣೆಯನ್ನು, ಸಮಾನ ಧ್ರುವಗಳ ನಡುವಿನ ವಿಕರ್ಷಣೆಯನ್ನು ವ್ಯಾಖ್ಯಾನಿಸಬಹುದು. ಇವೆಲ್ಲವೂ ನಮಗೆ ಅನುಭವಕ್ಕೆ ಬರುವ ಹಾಗೂ ನಮ್ಮ ಪಂಚೇಂದ್ರಿಯಗಳಿಗೂ ಹಾಗೂ ನಾವು ನಮ್ಮ ಮನಸ್ಸಿಗೆ ದಕ್ಕಿಸಿಕೊಂಡ  ಜಗತ್ತಿನ ವಿದ್ಯಮಾನಗಳು. ಇವೆಲ್ಲವೂ ಸಹ ದ್ರವ್ಯರಾಶಿ ಇರುವ ವಸ್ತುವಿನ ಭೌತಿಕ ರೂಪ ಇಲ್ಲವೇ ಅದರಿಂದ ಉಂಟಾದ ಶಕ್ತಿಯ ಸ್ವರೂಪ.

`ಈ ಎಲ್ಲ ಅವಲೋಕನಗಳು ಮತ್ತು ಅನುಭವಗಳು ಒಂದೋ ವಸ್ತುವಾಗಿವೆ ಇಲ್ಲಾ ಶಕ್ತಿಯಾಗಿವೆ, ವಸ್ತು ಶಕ್ತಿಯನ್ನು ಪ್ರತಿನಿಧಿಸುತ್ತಿರಬಹುದು, ಅಥವಾ ಶಕ್ತಿ ವಸ್ತುವನ್ನು ಪ್ರತಿನಿಧಿಸುತ್ತಿರಬಹುದು. ಭೌತಶಾಸ್ತ್ರದ ಮೂಲಭೂತ ನಿಯಮದಂತೆ, ವಸ್ತು ಮತ್ತು ಶಕ್ತಿಯನ್ನು ಸೃಷ್ಟಿಸಲಾಗುವುದಿಲ್ಲ, ಕ್ಷಯಿಸಲಾಗುವುದಿಲ್ಲ, ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಿಸಬಹುದು, ಅಷ್ಟೇ.

‘ಬ್ರಹ್ಮಾಂಡದಲ್ಲಿ ಪ್ರತಿಯೊಂದಕ್ಕೂ ಅದರ ವಿರುದ್ಧ ಧ್ರುವವನ್ನು ಪ್ರತಿನಿಧಿಸುವ ಗುಣ ಇರುವ ಇನ್ನೊಂದು ಇದ್ದೇ ಇರಬೇಕು ಎನ್ನುವ ತರ್ಕವನ್ನು ನಾವು ಈಗಾಗಲೇ ಮಾಡಿದ್ದೇವೆ. ಅದನ್ನು ವಿಸ್ತರಿಸಿ ಹೇಳ ಬೇಕೆಂದರೆ, ಈ ದ್ರವ್ಯ (matter) ಗೆ ಒಂದು ಪ್ರತಿದ್ರವ್ಯ (antimatter) ಇರಲೇಬೇಕು. ನಮಗೆ ಭಾಸವಾಗುವ ಶಕ್ತಿಗೆ (energy ) ಗೆ ಪ್ರತಿಯಾಗಿ ಪ್ರತಿಶಕ್ತಿ (anti-energy) ಯೂ ಇರಬೇಕು. ಆದರೆ ಇದು ನಮ್ಮ ಅನುಭವಕ್ಕೆ ಬಂದಿಲ್ಲ.  ದ್ರವ್ಯರಾಶಿ ಇರುವ ವಸ್ತುವಿನಿಂದ ಆದ ಕಾಯಗಳು ಗುರುತ್ವಾಕಷಣೆಯನ್ನು ತಮ್ಮ ಸುತ್ತಲೂ ಪ್ರಯೋಗಿಸಿದರೆ, ಅದಕ್ಕೆ ಪ್ರತಿಯಾಗಿ ಪ್ರತಿದ್ರವ್ಯದಿಂದಾದ ಯಾವುದೇ ಒಂದು ಪ್ರತಿಗುರುತ್ವ (anti-gravity ) ಯನ್ನು ತನ್ನ ಸುತ್ತಲೂ ಪ್ರಯೋಗಿಸುವುದೆಂಬ ವೈಜ್ಞಾನಿಕ ಪರಿಕಲ್ಪನೆ ತಾರ್ಕಿಕವಾಗಿ ಸಧೃಢವಾಗಿದೆ ಎಂಬುದನ್ನು ಒಪ್ಪುತ್ತೀರಾ?’ ಕೇಳಿದ ಸಂಜಯ.

‘ಒಳ್ಳೆಯ ವಿಷಯ. ಜಗತ್ತನ್ನು ಹೀಗೂ ನೋಡಬಹುದೆಂಬುದೇ ನಮಗೆ ತಿಳಿದಿಲ್ಲ ನೋಡು. ಕೇಳ್ರೋ ದಂಡ ಪಿಂಡಗಳಾ, ಸುಮ್ನೆ ಸೊಳ್ಳೆ ನರಿ ನಾಯಿ, ಕತ್ತೆ ಥರ ಬದುಕು ಕಳಿಬೇಡ್ರಿ. ದಾಸರು ಅದಕ್ಕೇ ಹೇಳಿದ್ದು ಮಾನವ ಜನ್ಮ ದೊಡ್ದದು. ಇದ ಹಾಳ  ಮಾಡದಿರಿ ಅಂತ,’ ವಿಜಯ ಆದೇಶ ನೀಡಿದ.

ಎಲ್ರೂ ಉರ್ಕೊಂಡ್ರು, ಆದ್ರೆ ಏನೂ ಮಾತಾಡ್ಲಿಲ್ಲ.

‘ಇಲ್ಲಿ ಕೇಳಿ, ಮೂಲಭೂತವಾಗಿ ನಮ್ಮ ಎಲ್ಲಾ ವಸ್ತುಗಳು ಅಣುಗಳಿಂದ ಆಗಿದೆ. ಅವುಗಳು, ಪರಮಾಣುಕಣಗಳಿಂದ ಆಗಿವೆ. ಅದಕ್ಕೂ ಸಣ್ಣ ಕ್ವಾರ್ಕು (Quarks) ಗಳು, ಲೆಪ್ಟಾನುಗಳು ಇತ್ಯಾದಿಗಳು ಇಂದು ನಮಗೆ ತಿಳಿದಿದೆ. ಈ ಪರಮಾಣು ಕಣಗಳಲ್ಲಿ ಇರುವ ಪ್ರೊಟಾನು ಧನಾತ್ಮಕೆ ಕಣವಾದರೆ, ಎಲೆಕ್ಟ್ರಾನು ಋಣಾತ್ಮಕವಾದದ್ದು. ಆದರೆ ಪಾಲ್ ಡಿರಾಕ್ ಎನ್ನುವ ಮೇಧಾವಿ ತಮ್ಮ ಗಣಿತ ಸೂತ್ರಗಳ ಮೂಲಕ ಎಲೆಕ್ಟ್ರಾನುಗಳಿಗೆ ವಿರುದ್ಧವಾದ ಅದೇ ರೀತಿಯ ಆದರೆ ಧನಾತ್ಮಕ ಸ್ವರೂಪದ ಪಾಸಿಟ್ರಾನುಗಳು (Positrons) ಇವೆ ಎಂದು ಸಾಬೀತುಮಾಡಿದರು. ಅದಾದ ಕೆಲವು ವರ್ಷಗಳಲ್ಲಿ ಅದನ್ನು ಕಂಡೂ ಹಿಡಿದರು! ಅಂದರೆ ಪ್ರೋಟಾನುಗಳಿಗೆ ವಿರುದ್ಧವಾದ ಕಣಗಳು ಇರಬೇಕು. ಇಂತಹ ಎಲ್ಲಾ ಉಲ್ಟಾ ಪಲ್ಟಾ ಕಣಗಳಿರುವ ವಸ್ತುವೊಂದು ಈ ಸೃಷ್ಟಿಯಲ್ಲಿ ಇರಬೇಕು. ಅದನ್ನು ಪ್ರತಿದ್ರವ್ಯ ಎನ್ನಬಹುದು. ಇದು ಸಹ ಗಣಿತೀಯವಾಗಿ ಸಬಲವಾದ ಪರಿಕಲ್ಪನೆ , ಆದರೆ ಇನ್ನೂ ಅದರ ಭೌತಿಕ ಅನುಭವ ಪ್ರಾಯೋಗಿಕವಾಗಿ ಸಾಧ್ಯವಾಗಿಲ್ಲ.

ಇಂತಹ ಪ್ರತಿದ್ರವ್ಯ ಎನ್ನುವುದು, ತನ್ಮೂಲಕ ಪ್ರತಿಗುರುತ್ವವನ್ನು ಪ್ರದರ್ಶಿಸಿದರೆ, ವಸ್ತು ದೂರ ತಳ್ಳಲ್ಪಡಬೇಕು, ಅಥವಾ ವ್ಯೋಮ (space) ಹಿಗ್ಗಬೇಕು. ಎಲ್ಲಿ ಈ ರೀತಿಯ ದ್ರವ್ಯ ಮತ್ತು ಪ್ರತಿದ್ರವ್ಯಗಳು ಪರಸ್ಪರ ಸಂಧಿಸುವವೋ ಅಲ್ಲಿ, ಗುರುತ್ವ ಮತ್ತು ಪ್ರತಿಗುರುತ್ವಗಳ ನಡುವಿನ ತಿಕ್ಕಾಟದಿಂದಾಗುವ ವ್ಯೋಮದ ಹಿಗ್ಗುವಿಕೆಯಿಂದ ಉಂಟಾಗುವ ಸುರಂಗವೇ ವರ್ಮ್-ಹೋಲ್. ಇದನ್ನು ಹಾಗಾಗಿ ನಾವು `ವ್ಯೋಮಸುರಂಗ` ಎಂದೆನ್ನಬಹುದು. ಇಂಥದ್ದೊಂದು, ಕಪ್ಪುಕುಳಿಯ ಬಳಿಯಿರುವ ಅಗಾಧ ಗುರುತ್ವಬಲಕ್ಕೆ ಪಕ್ಕಾಗಿ ಮಡಿಸಿಕೊಂಡ  ಕಾಲ-ದೇಶದ ಆಯಾಮದ ಪದರಕ್ಕೆ ಸಂಪರ್ಕ ಸಾಧಿಸಿದರೆ ನಮ್ಮನ್ನು ಎಲ್ಲೆಲ್ಲಿಗೋ ಕೊಂಡೊಯ್ಯುವ ಮಾರ್ಗ ಆಗಬಹುದು. ಅದನ್ನೇ ಈ ಚಿತ್ರದಲ್ಲಿ ತೋರಿಸಿದ್ದಾರೆ.  ಅರ್ಥವಾಯ್ತಾ?” ಕೇಳಿದ ಸಂಜಯ.

“ಏನೋ ಸ್ವಲ್ಪ ಸ್ವಲ್ಪ. ಇನ್ನೂ ನಾವೇ ಈ ಬಗ್ಗೆ ಓದ್ಕೋಬೇಕು,” ಅಂದ ಜಗ್ಗು.

“ಮಡಿಸಿಕೊಂಡು ಬಾಗಿದ ದೇಶ-ಕಾಲದ ಹರವಿನ ಬಲೆ ಭವಿಷ್ಯದ್ದಾಗಿದ್ದರೆ, ನಮಗೆ ಸಾವಿರಾರು ಮೈಲು ದೂರವನ್ನು ಸ್ವಲ್ಪ ಸಮಯದಲ್ಲೇ ಕ್ರಮಿಸುವ  ಸೌಲಭ್ಯ ಪ್ರಾಪ್ತಿಯಾಗುತ್ತದೆ. ನಮ್ಮ ಜೀವಿತಾವಧಿಯಲ್ಲಿ ಜ್ಯೋತಿರ್ವರ್ಷಗಳನ್ನು ಕ್ರಮಿಸಲು ಸಾಧ್ಯವಾಗಬಹುದು. ಅದರಿಂದಲೇ ಅವರು ಆ ಗರ್ಗಂಟುವಾ ಎಂಬ ಬ್ಲ್ಯಾಕ್-ಹೋಲ್ ತಲುಪಲು ಸಾಧ್ಯವಾಯ್ತು”. ಅಂದ.

ಅಂದರೆ,  ‘ಯುಗವೊಂದು ದಿನವಾಗಿ ದಿನವೊಂದು ಕ್ಷಣವಾಗಿ’ ಅಂತ ಆಯಿತು ಅನ್ನು, ಕೂಗಿದ ವಿಜಯ, ‘ಯುರೇಕಾ’ ಥರ.

ಅದ್ಯಾಕೆ ಅಲ್ಗೆ ನಿಲ್ಲುಸ್ಬುಟ್ಟೇ, ‘ನಮ್ಮಾಸೆ ಹೂವಾಗಿ, ಇಂಪಾದ ಹಾಡಾಗಿ ಮಳೆಯಲ್ಲಿ ಬಿಸಿಲಲ್ಲಿ ಚಳಿಯಲ್ಲಿ ಬಿಸಿಲಲ್ಲಿ, ಎಂದೆಂದು ಜೊತೆಯಾಗಿ ನಡೆವಾ ಒಂದಾಗಿ ಬಾರಾ…’ ಅಂತ ಸೊನಾಲಿ ಕರ್ದಂಗೆ ಆಗ್ಲಿಲವಾ ರಾಯರೆ,’ ತಿಕ್ಕಿದ ಶೀನ.

“ಅಹಾ,, ಎಂಥಾ ಮಾತು. ಹುಟ್ಟಿದ್ದುಕ್ಕೆ ಒಂದು ಒಳ್ಳೆ ಮಾತಾಡ್ದೆ ನೋಡು ಶೀನ” ಅಂತ ಎಲ್ಲರೂ ಶಹಬ್ಬಾಸ್ ಹೇಳಿದರು.  

ವಿಜಯ ಕುಕ್ಕರಗಾಲಲ್ಲಿ ಕೂತ್ಕೊಂಡು, “ಅದೆಲ್ಲಾ ಸರಿ ಸಂಜಯ, ಗ್ರಾವಿಟಿ ಅಂದ್ರೆ, ವರ್ಮ್-ಹೋಲು ಅಂದ್ರೆ ಅದರ ಹಿನ್ನೆಲೇಲಿ ಈ ಕಥೆಯ ವ್ಯಥೆ ಸ್ವಲ್ಪ ಸ್ವಲ್ಪವಾಗಿ ಅರ್ಥ ಆಗ್ತಾ ಇದೆ. ಆದ್ರೂ ಈ ಬ್ಲ್ಯಾಕ್-ಹೋಲು ಅಂದ್ರೆ ಏನು? ಅವರು ವರ್ಮ್-ಹೋಲಿನಿಂದ ತೂರಿಕೊಂಡು  ಹೋಗಿ ಕಪ್ಪುಕುಳಿ ಸುತ್ತಾ ಸುತ್ತುತ್ತಿರುವ ಗ್ರಹಗಳಲ್ಲಿ ಇಳೀಬೇಕು ಅಂತಿರ್ತಾರಲ್ಲಾ, ಅದೇನು? ಅಲ್ಲಿ ಕುಳಿ ಇದ್ರೆ ಅದರಲ್ಲಿ ಎಲ್ಲರೂ ಬಿದ್ಧೋಗಲ್ಲ್ವಾ?” ಅಂದ

`ಲೋ, ಬ್ಲ್ಯಾಕ್-ಹೋಲು ಅಂದ್ರೆ ನಮ್ಮ ಫೈನಾನ್ಸ್ ಡಿಪಾರ್ಟ್ ಮೆಂಟಿನೋರು ಯಾವಾಗ್ಲೂ ಹೇಳ್ತಿರಲ್ವ, ಅದೇ, ಆಯ-ವ್ಯಯಗಳ ನಡುವಿನ ವ್ಯತ್ಯಾಸ ತಾನೇ. ಹಾಗೇ ಈ ಬ್ರಹ್ಮಾಂಡದಲ್ಲಿ ಇರುವ ಬೆಳಕು ಕತ್ತಲಿನ ನಡುವಿನ ವ್ಯತ್ಯಾಸವೇ ಬ್ಲ್ಯಾಕ್ ಹೋಲು’’ ಅಂದ ಸುಬ್ಬ.

“ಅದಲ್ಲ, ದಾಸರಿ ಅಂದ್ರೆ ಗುಡಿ ಹಿಂದಕ್ಕೆ ಹೋಗಿ ಟಿಂಗ್ ಅಂತ ತಂಬೂರಿ ತೀಡಿದ್ನಂತೆ. ಮತ್ತೆ ಅಲ್ಲಿಗೇ ಬಂತು ಇವನ ವರಸೆ,” ವಿಜಯ ಅಸಹನೆ ತೋರಿಸಿದ.

ಎಲ್ಲ ಅವನ ಕಡೆಗೆ ತಿರುವುದಕ್ಕೂ, ಕರೆಂಟು ಹೋಗಿ ಕತ್ತಲಾಗುವುದಕ್ಕೂ ಸರಿ ಹೋಯ್ತು.

“ಸರಿಯಾದ ಸಮಯಕ್ಕೆ ಕತ್ತಲಾಯ್ತು ನೋಡಿ. ಈ ಕತ್ತಲು ಅಂದ್ರೆ ಏನು? ನಮ್ಮ ಕಣ್ಣಿಗೆ ಕಾಣದಿರುವ ಪರಿಸ್ಥಿತಿ. ಕುರುಡ ಆದವನು ಬೆಳಕೇ ಇಲ್ಲ ಆಟ ಹೇಳುವ ಹಾಗಿಲ್ವಲ್ಲ, ಹಾಗೆ. ನಾವೂ ನಮ್ಮ ಕಣ್ಣಿನ ಪರಿಮಿತಿಯನ್ನು ಮೀರಿದ ಪರಿಸ್ಥಿತಿಯಲ್ಲಿ ಕುರುಡರೇ. ಕಟ್ಟಲು ಇದ್ದಾಗ ಅದರ ಅರ್, ಅಲ್ಲಿ ನಮ್ಮ ಕಣ್ಣನ್ನು ಬೆಳಗಿಸುವ ಬೆಳಕಿಲ್ಲ ಅಂತ ಅಷ್ಟೇ. ಈ ಬ್ರಹ್ಮಾಂಡದ ತುಂಬ 85% ತುಂಬಿರುವ ವಸ್ತು ಇಂತಹ ಕೃಷ್ಣ ದ್ರವ್ಯವೇ (dark matter). ಉಳಿದ ೧೫% ಭಾಗ ಮಾತ್ರ ಬೆಳಕಿಗೆ ಸ್ಪಂದಿಸುವ ವಸ್ತು ಅಥವಾ ದ್ರವ್ಯ. ಇದರ ಪೂರ್ಣ ಮಾಹಿತಿ ನಮಗೆ ತಿಳಿದಿಲ್ಲ. ಹೀಗೆ ಜಗದ್ವ್ಯಾಪಿಯಾದ ಕೃಷ್ಣ ದ್ರವ್ಯ ಇರುವುದೆಂಬ ಅನುಭಾವದ ಕಾರಣದಿಂದಲೇ ನಮ್ಮ ಪೂರ್ವಜರು ಮಹಾವಿಷ್ಣುವನ್ನು “ವಿಶ್ವಾಧಾರಂ ಗಗನ ಸದೃಶಂ ಮೇಘವರ್ಣಂ ಶುಭಾಂಗಂ” ಎನ್ನುತ್ತಾ, ಕಪ್ಪುವರ್ಣದಲ್ಲಿ ಏಕೆ ಚಿತ್ರಿಸಿಕೊಂಡರೆಂದು ತರ್ಕಿಸಬಹುದು. ವಿಜ್ಞಾನಕ್ಕೂ, ಭಾರತೀಯ ತತ್ವಶಾಸ್ತ್ರಕ್ಕೂ ಇರುವ ಭಿನ್ನತೆ ಮತ್ತು ಸಾಮ್ಯತೆಗಳನ್ನು ಪರಾಮರ್ಷಿಸಿಕೊಳ್ಳಬೇಕು. ಆದರೆ ಈ ಕಪ್ಪು ದ್ರವ್ಯ, ಕಪ್ಪಗಿರುವುದು ನಮ್ಮ ಕಣ್ಣಿಗೆ ಮಾತ್ರವೇ. ದೃಷ್ಟಿ ಗ್ರಾಹ್ಯತೆ ನಮಗಿಲ್ಲ.

 

BlackHole_Lensing
ಕಪ್ಪುಕುಳಿಯ ಪರಿಕಲ್ಪನೆ

`ಇನ್ನು ಕಪ್ಪುರಂಧ್ರದ ವಿಚಾರಕ್ಕೆ ಬಂದರೆ, ಅದು ಕುಳಿಯೂ ಅಲ್ಲ, ರಂಧ್ರವೂ ಅಲ್ಲ. ಅದೊಂದು ಅತೀ ಸಾಂದ್ರತೆ ಇರುವಂಥಾ, ತನ್ನ ಗುರುತ್ವ ಕ್ಷೇತ್ರದ ಪರಿಧಿಯಲ್ಲಿ ಬರುವ ಬೆಳಕನ್ನು ಬಿಡದೆ ಹೀರಿಕೊಳ್ಳುವ ಪರಮ ಗುರುತ್ವಬಲದ ಕಪ್ಪು ಕಾಯ. ಬೆಳಕಿನ ಕಿಂಚಿತ್ತನ್ನೂ ಬಿಡದೆ ಆಪೋಷಣ ತೆಗೆದುಕೊಳ್ಳುವುದರಿಂದ ಕಪ್ಪಾಗಿ ಗೋಚರಿಸುತ್ತದೆ. ಇವುಗಳು ಗ್ಯಾಲಾಕ್ಸಿಗಳ ಮಧ್ಯದಲ್ಲಿ ವಿರಾಜಮಾನವಾಗಿದ್ದು ಅವುಗಳ ಸೌರವ್ಯೂಹಗಳನ್ನೇ ನಿಯಂತ್ರಿಸುವ ಶಕ್ತಿಯನ್ನು ಪಡೆದಿವೆ. ಗ್ಯಾಲಾಕ್ಸಿಗಳ ಕೇಂದ್ರದಲ್ಲಲ್ಲದೆ ಹೊರವಲಯಗಳಲ್ಲೂ ಅಲ್ಲಲ್ಲಿ ಕಂಡುಬರುತ್ತವೆ. ಇಂತಹ ಕಪ್ಪು ಕಾಯಗಳ ಸುತ್ತ ಸೌರವ್ಯೂಹದ ಗ್ರಹಗಳ ತೆರದಲ್ಲಿ, ಇನ್ನಿತರ ಗ್ರಹಗಳೂ ಇರಬಹುದು. ಹಾಗಾಗಿ ಇಂತಹ ವ್ಯೂಹಗಳನ್ನು ಸೌರವ್ಯೂಹ ಎಂಬುದರ ಬದಲು ಕೃಷ್ಣವ್ಯೂಹ ಎಂದೆನ್ನಬಹುದು. ಇಂತಹ ಒಂದು ವ್ಯೂಹವೇ ಈ ಗರ್ಗಾಂಟುವಾ ಮತ್ತದರ ಗ್ರಹ ಸಮೂಹಗಳಾದ ಮಾನ್, ಮಿಲ್ಲರ್, ಎಡ್ಮಂಡ್ಸ್ . ಈ ಕಪ್ಪು ಕಾಯಗಳು ಹೇಗೆ ಉತ್ಪತ್ತಿಯಾಗಿ ಅಸ್ತಿತ್ವಕ್ಕೆ ಬರುತ್ತವೆ ಎಂಬುದು ಇನ್ನೂ ಪೂರ್ತಿ ತಿಳಿದಿಲ್ಲವಾದರೂ, ಅವು ನಕ್ಷತ್ರಗಳು ಉರಿದು, ಬೂದಿಯಾಗಿ, ಚರಟವಾಗಿ, ತಮ್ಮೊಳಗೆ ತಾವೇ ಕುಸಿದು, ತಮ್ಮ ಸುತ್ತ ಇರುದನ್ನೆಲ್ಲಾ ನುಂಗಿ ನೀರ್ಕುಡಿದು ಅತಿಸಾಂದ್ರತೆಯುಳ್ಳ ಕಾಯಗಳಾಗಿ ಪರಿವರ್ತನೆಯಾದಾಗ ರೂಪುಪಡೆಯುವ ಕಪ್ಪುಕಾಯಗಳು. ಇವು ನ್ಯುಟ್ರಿನೋ ಎಂಬ ಕಿರಣಗಳನ್ನು ಹೊರಸೂಸುತ್ತವೆಯಾದರೂ ಅವು ನಮ್ಮ ಕಣ್ಣಿಗೆ ಕಾಣವು. ಇಂಥದ್ದೇ ಈ ಗರ್ಗಂಟುವಾ. ಇಂಥ ಕಾಯಗಳು ವ್ಯೋಮ-ಕಾಲಗಳ ಬಲೆಯಲ್ಲಿ ಆಳವಾದ ಬಾವಿಯಂಥಾ ಕುಳಿಗಳನ್ನು ನಿರ್ಮಿಸುತ್ತವೆ,” ಅಂದ ಸಂಜಯ.

 

`ಹೇ ಹ್ಹೆ ,. ಸರಿಯಾಗಿ ಹೇಳ್ದೆ. ಕಪ್ಪ್ಪು ಕುಳಿ ಎಂಬ ಕಗ್ಗಂಟಿಗೆ  ಗರ್ಗಂಟುವಾ ಅನ್ನೋ ಹೆಸರು. ಕಂತೆಗೆ ತಕ್ಕ ಬೊಂತೆ ಅನ್ನೋ ಥರ.!!` ವಿಜಯ ಹೇಳ್ದ.

“ಸೂರ್ಯನ ಸುತ್ತ ಸುತ್ತು ಹಾಕಿದ್ರೆ, ಬೆಳಕಾದ್ರೂ ಬರುತ್ತೆ. ಈ ಕಪ್ಪು ಕುಳಿ ಸುತ್ತ ಸುತ್ತಿದರೆ ಏನ್ ಬಂತು?” ಉಗ್ರಿ ಕೇಳ್ದ.

“ಸೊನಾಲಿ ಸುತ್ತ ಸುತ್ತಿದರೆ ಏನ್ ಬಂತು. ಅವಳಂತೂ ನೋಡೋರ ಕಣ್ಣೆಲ್ಲಾ ನನ್ನ ಮೇಲೆ, ನನ ಕಣ್ಣು ಮಾತ್ರಾ ನಿನ್ನ ಮೇಲೆ ಅಂತಿರ್ತಾಳೆ,` ಸುಬ್ಬ ರಾಗ ಎಳೆದ.

“ನೀವೆಲ್ಲಾ ಸೊನಾಲಿ ಡೆಸ್ಕು ಸುತ್ತಾ ಸುತ್ತಾಕ್ತಾ ಇರ್ತೀರಲ್ಲ. ಹಂಗೇ ಇದೂನೂ. ಹೆಂಗುಸ್ರು ಅಂದ್ರೆ ಅರ್ಥಾನೇ ಆಗದೆ ಇರೋ ಬ್ಲ್ಯಾಕ್ ಹೋಲು ಅಂತ ಗೊತ್ತಿದ್ರೂ ಅವರ ಸುತ್ತಾ ಸುತ್ತಾಕಲ್ವಾ ಈ ಎಲ್ಲಾ ಕ್ಷುದ್ರ ಗ್ರಹಗಳು,” ಜಗ್ಗು ತತ್ವಜ್ಞಾನಿ ಆದ.

“ಕೊನೆಗೆ, ಮಾನ್-ಮಿಲ್ಲರ್-ಎಡ್ಮಂಡ್ ಯಾವ್ದೂ ಸರಿ ಹೋಗದೆ, ಶನಿಗ್ರಹದ ಉಪಗ್ರಹಕ್ಕೆ ಮನುಷ್ಯರನ್ನ ಕರ್ಕೊಂಡು ಹೋಗಿ ಅಲ್ಲೇ ವಸಾಹತು ಸ್ಥಾಪನೆ ಮಾಡಿ ಮಾನವ ಸಂಕುಲವನ್ನು ಉಳಿಸಿಕೊಂಡಿರ್ತಾರೆ. ಅಲ್ಲಿಗೆ ಈ ಕೂಪರು ಕೊನೆಗೆ ಹೋದಾಗ, ಅವನ ಮಗಳು ಮುದುಕಿಯಾಗಿರ್ತಾಳೆ ಆದರೆ ಇವನಿಗೆ ಜಾಸ್ತಿ ವಯಸ್ಸೇ ಅಗಿರಲ್ಲ. ಎಲ್ಲಾ ಗುರುತ್ವದ ಪ್ರಭಾವ, ಕಾಲವನ್ನ ಅವನ ಪಾಲಿಗೆ ನಿಧಾನವಾಗಿ ಓಡಿಸಿರುತ್ತೆ. ಈ ಕಪ್ಪು ಕುಳಿಯಲ್ಲಿ ಏಕತ್ವ (singularity) ದಲ್ಲಿ ಮೂರು ಭೌತಿಕ ಆಯಾಮಗಳ ಜೊತೆಗೆ ಕಾಲ ನಾಲ್ಕನೆಯ ಆಯಾಮವಾಗಿ, ಗುರುತ್ವ ಐದನೆಯ ಆಯಾಮವಾಗಿ, ಮನಸ್ಸು ಆರನೆಯ ಆಯಾಮವಾಗಿ ನಮ್ಮ ನೇರ ಅರಿವಿಗೆ ಬರುತ್ತಂತೆ. ಅಲ್ಲಿ ಎಲ್ಲವೂ, ಆಲಯವು ಬಯಲೊಳಗೋ, ಬಯಲು ಅಲಯದೊಳಗೋ, ಬಯಲು ಅಲಯವೆರೆಡು ನಿನ್ನೊಳಗೊ ಎಂಬ ಕನಕದಾಸರ ಕೀರ್ತನೆಯ ಸಾಕ್ಷಾತ್ಕಾರ ಆಗಬಹುದೋ ಏನೋ. ಇವೆಲ್ಲಾ ಭವಿಷ್ಯದಲ್ಲಿ “ಸ್ಕೈ”ಗೂಡಬಹುದಾದ ಸಂಗತಿಗಳು,”  ಅಂದ ಸಂಜಯ.

“ನಡೀರೋ, ಸಧ್ಯಕ್ಕಂತೂ ಹೊಟ್ಟೆ ತಾಳ ಹಾಕುತ್ತಿದೆ. ಥ್ಯಾಂಕ್ಸು ಗುರೂ. ಕಪ್ಪು ಕುಳಿಯಲ್ಲಿ ಬಿದ್ದ ಕೂಪರನಂತೆ ನಮಗೆಲ್ಲಾ ಬ್ರಹ್ಮಾಂಡ ದರ್ಶನದ ಸಾಕ್ಷಾತ್ಕಾರ ಆಯಿತು ನೋಡು. ಪ್ರಪಂಚ ಅಂದ್ರೆ ಸದಾ ಜೀವಂತವಾಗಿ ಇರುವ ಒಂದು ಅದ್ಭುತ  ದೈವ ಸೃಷ್ಟಿ ಏನಂತೀಯಾ ವಿಜಯಾ?” ಜಗ್ಗು ಕೇಳ್ದ.

“ಹೌದು  “ಶ್ವ” ಅಂದರೆ ಸಂಸ್ಕೃತದಲ್ಲಿ ನಿಶ್ಚಲ ಅಥವಾ ಸುಮ್ಮನಿರುವುದು ಎಂದರ್ಥ. ನಾವು ಇರುವುದು “ವಿ-ಶ್ವ” ದಲ್ಲಿ ಅಂದರೆ ಚಲನಶೀಲವಾದ ವ್ಯವಸ್ಥೆ . ಹಾಗೆಯೇ ನಾಯಿ ಒಂದು ಕಡೆ ನಿಲ್ಲದೆ ಅಲೆಯುತ್ತಿರುವುದರಿಂದ, ಅದನ್ನು ‘ಶ್ವಾ-ನ’  ಎಂದು ಕರೆಯುವುದು,‘ ಅಂದ ಸಂಜಯ.

ಎಲ್ಲರ ದೃಷ್ಟಿ ಸುಬ್ಬನ ಕಡೆಗೆ ತಿರುಗಿತಾದರೂ ಯಾರೂ ಏನೂ ಅನ್ನಲಿಲ್ಲ.

`ಹೌದಮ್ಮಾ, ಎಲ್ಲೆಡೆ ತುಂಬಿದೆ ಆನಂದಾ ಎಲ್ಲೆಡೆ ಪ್ರೇಮದ ಸಂಬಂಧ ಲಲ್ಲ,ಲಲ್ಲ ಲಲ್ಲ ಲಾ…ಈ ಲೋಕವೆಲ್ಲ ನೀನೇ ಇರುವ ಪೂಜಾ ಮಂದಿರ, ನಾ ಕಾಣುತಿರುವ ನೋಟವೆಲ್ಲಾ ಸತ್ಯಾ ಸುಂದರ’ ಎಂಬ ಹಾಡಿಗೆ ಅರ್ಥ ಬಂತು ನೋಡು,” ಅಂತ ಅಂದ ವಿಜಯ. ಎಲ್ಲರೂ ತಂತಮ್ಮ ಮನೆಗಳಿಗೆ ತೆರಳಿದರು.

ಅಂದಿನ ರಾತ್ರಿ ನಿದ್ದೆಯಲ್ಲಿ  ವಿಜಯ ತಾನೇ ಕೂಪರ್ರು ಆಗಿ, ಸೊನಾಲಿ ಅಮೀಲಿಯಾ ಆಗಿ ತಾರಾಯಾನ ಮಾಡಿದಂತೆ ಕನಸು ಕಂಡಿದ್ದು ಅನಿರೀಕ್ಷಿತವಾಗಿಯೇನೂ ಇರಲಿಲ್ಲ.

—೦—

ಇದೇ ಸಿನೆಮಾದ ಬಗ್ಗೆ ಇನ್ನೊಂದು ಪ್ರಬಂಧ ಈ ಹಿಂದೆ ಪ್ರಕಟವಾಗಿದೆ: ಇಲ್ಲಿ ಒತ್ತಿ

ಇತ್ತೀಚೆ ವಿಜ್ಞಾನಿಗಳು ಗುರುತ್ವದ ಅಲೆಗಳನ್ನು ಪತ್ತೆ ಹಚ್ಚಿದ್ದನ್ನು, ಅದೇ ಕ್ಷೇತ್ರದಲ್ಲೇ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿರುವ ನಮ್ಮ ಕನ್ನಡದ ವಿಜ್ಞಾನಿ ನಮ್ಮ ಜಾಲದಲ್ಲೇ  ಅದರ ಬಗ್ಗೆ ಬರೆದಿದ್ದಾರೆ: ಇಲ್ಲಿ ಒತ್ತಿ