ವಿಶ್ವಭಾರತಿಗೆ ಕನ್ನಡದಾರತಿ..ಚನ್ನವೀರ ಕಣವಿಯವರಿಗೆ ಅನಿವಾಸಿಯ ಭಾವಾಂಜಲಿ

ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ
‘ವಿಶ್ವವಿನೂತನ ವಿದ್ಯಾಚೇತನ ಸರ್ವ ಹೃದಯಸಂಸ್ಕಾರಿ’... ಎಲ್ಲಾ ಶಾಲಾ-ಕಾಲೇಜುಗಳ ಪ್ರತಿಯೊಂದು ಕಾರ್ಯಕ್ರಮದಲ್ಲೂ ಈ ಹಾಡು ಸ್ವಾಗತ ಗೀತೆಯಾಗಿಯೋ, ಪ್ರಾರ್ಥನಾ ಗೀತೆಯಾಗಿಯೋ ಅನುರಣಿಸಲೇಬೇಕಿತ್ತು ಆಗ. ಅಂತೆಯೇ ‘ನನ್ನ ದೇಶ ನನ್ನ ಜನ ನನ್ನ ಮಾನಪ್ರಾಣಧನ ತೀರಿಸುವನೇ ಅದರ ಋಣ ಈ ಒಂದೇ ಜನ್ಮದಿ’ ಎನ್ನುವ ಆಕಾಶವಾಣಿಯ ವಂದನಾದ ಕೊನೆಯ ದೇಶಭಕ್ತಿ ಗೀತೆಯೊಂದಿಗೇ ನಮ್ಮ ಹೆಚ್ಚಿನ ಬೆಳಗುಗಳು ಆರಂಭವಾಗುತ್ತಿದ್ದವು. ಕವಿಯ ಬಗ್ಗೆ ಏನೇನೂ ಗೊತ್ತಿಲ್ಲದಾಗಲೂ ಅವರ ಕವನಗಳು ಹೀಗೆ ಹಾಡಾಗಿ ಹರಿದು ಸಾಮಾನ್ಯರ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿ ಬಿಡುವುದೇ ಆ ಕಾವ್ಯದ ಗೆಲುವು. 

ಸಾರ್ಥಕ ತುಂಬು ಜೀವನ ನಡೆಸಿದ ಚೆಂಬೆಳಕಿನ ಕವಿಚೇತನ ಮಹಾಬೆಳಗಿನಲಿ ವಿಲೀನವಾಗಿದೆ. ಆದರೆ ಅರವತ್ತೆಂಟು ವರುಷ ಜೊತೆಯಾಗಿ ದಾಂಪತ್ಯ ರಥವನ್ನೆಳೆದ ತಮ್ಮ ಪತ್ನೀವಿಯೋಗದ ಸಂದರ್ಭ ದಲ್ಲಿ ಅವರೇ ಹೇಳಿದ ಮಾತಿನಂತೆ ಹೇಳುವುದಾದರೆ –‘ಇಲ್ಲಿದ್ರು..ಇಲ್ಲೇ ಇದ್ರು..ಈಗ – ಎಲ್ಲಾ ಕಡೆ ಅದಾರ. ಇದ್ದಾಗ ಇರುವು ಇಲ್ಲಷ್ಟೇ ಇತ್ತು. ಈಗ ಸರ್ವವ್ಯಾಪಿ ಆದ್ರು. ಥೇಟ್ ಚೆಂಬೆಳಕಿನ್ಹಂಗ..’

ಸಮನ್ವಯ ಕವಿಯೆಂದೇ ಖ್ಯಾತರಾದ ಕಣವಿಯವರು ಕನ್ನಡದಲ್ಲಿ ಸಮೃದ್ಧವಾದ ಕಾವ್ಯಪರಂಪರೆಯನ್ನು ನಿರ್ಮಿಸಿದವರು.ಮೃದು ಮಾತಿನ ಆದರೆ ಖಚಿತ ನಿಲುವಿನ ಸಜ್ಜನಿಕೆಯ ಕವಿಯವರು. ಧಾರವಾಡದ ಅನೇಕ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ವೇದಿಕೆಯ ಮೇಲಿನ ಅವರ ಉಪಸ್ಥಿತಿ ನನಗೆ ಶಾಂತವಾಗಿ,ಸದ್ದಿಲ್ಲದೇ ಬೆಳಗುವ ನಂದಾದೀಪದಂತೆ ಕಂಡದ್ದಿದೆ.
ಕಣವಿಯವರ ಕಾವ್ಯ ಮುಂಗಾರಿನ ಮಳೆಯ ಆರ್ಭಟದಂತೆಯೋ, ಶ್ರಾವಣದ ಮುಸಲಧಾರೆಯಂತೆಯೋ ಅಬ್ಬರದ್ದಲ್ಲ;ಇದ್ದೂ ಇಲ್ಲದಂತೆ ಶೃತಿ ಹಿಡಿದು ಸುರಿದು ನೆಲವ ಹದಗೊಳಿಸಿ, ಮನವ ಮುದಗೊಳಿಸುವ ಮುಂಜಾವಿನ ಸೋನೆಮಳೆ.. ‘ಬಾನ ಸಾಣಿಗೆ ಹಿಟ್ಟು ಸಣಿಸಿದಂತೆ’ ಜಿನುಗಿದ ಸೋನೆ. 

ಕವಿವರ್ಯರ ಪ್ರಸಿದ್ಧ ಗೀತೆ ‘ಹೂವು ಹೊರಳುವವು ಸೂರ್ಯನ ಕಡೆಗೆ’ ಇದರ ಬಗ್ಗೆ ಅರ್ಥಪೂರ್ಣ ಲೇಖನವನ್ನು ನಮ್ಮ ಆಹ್ವಾನದ ಮೇರೆಗೆ ಅತಿ ಕಡಿಮೆ ವೇಳೆಯಲ್ಲಿ ಸರೋಜಿನಿ ಪಡಸಲಗಿಯವರು ಬರೆದು ಕಳಿಸಿದ್ದು ಅವರ ಕವಿ-ಕಾವ್ಯ ಪ್ರೇಮವನ್ನೂ, ಅನಿವಾಸಿಯ ಬಗೆಗಿನ ಅಭಿಮಾನವನ್ನೂ ಎತ್ತಿ ತೋರಿಸುತ್ತದೆ.

ತಮ್ಮ ಶೃತಿಬದ್ಧವಾದ ಇನಿದನಿಯಲ್ಲಿ ‘ಒಂದು ಮುಂಜಾವಿನಲಿ’ ಹಾಡುವುದರ ಮೂಲಕ ಕವಿಗೆ ಗೀತನಮನ ಸಲ್ಲಿಸಿದ್ದಾರೆ ಸುಮನಾ ಧ್ರುವ್ ಅವರು.

ತಮ್ಮ ವಿದ್ಯಾರ್ಥಿದೆಸೆಯಲ್ಲಾದ ಕವಿವರ್ಯರ ಮುಖಾಮುಖಿ ಭೇಟಿಯ ಕುರಿತಾದ ಮಧುರ ನೆನಪುಗಳನ್ನು ಹೆಮ್ಮೆಯಿಂದ ಸ್ಮರಿಸಿಕೊಂಡಿದ್ದಾರೆ ಶಿವ್ ಮೇಟಿ ಹಾಗೂ ಅಮಿತಾ ರವಿಕಿರಣ್ ಅವರು.

ಕವಿಯ ಯಶೋಕಾಯಕ್ಕೆ ಕಾಲದ-ಹಂಗಿಲ್ಲ.ಅನಂತದವರೆಗೂ ವಿಶ್ವಭಾರತಿಗೆ ಕನ್ನಡದಾರತಿ ಬೆಳಗುತ್ತಲೇ ಇರುತ್ತದೆ; ಮಂಗಳ ಜಯಭೇರಿ ಮೊಳಗುತ್ತಲೇ ಇರುತ್ತದೆ. ಮುಟ್ಟಿದರೆ ಮಾಸುತಿಹ ಮಂಜಹನಿ ಮುತ್ತಿನಲಿ ಸೃಷ್ಟಿ ಸಂಪೂರ್ಣತೆಯು ಬಿಂಬಿಸುತ್ತಲೇ ಇರುತ್ತದೆ. ಸೋನೆಮಳೆ ಸುರಿಸುರಿದು ನೆಲದೆದೆ ಹದಗೊಳ್ಳುತ್ತಲೇ ಇರುತ್ತದೆ.
ಬನ್ನಿ ಓದುಗರೇ, ಇವತ್ತಿನ ಸಂಚಿಕೆಯನ್ನೋದಿ ಕವಿಗೊಂದು ಭಾವನಮನ ಸಲ್ಲಿಸಿ.

~ ಸಂಪಾದಕಿ

ಪರಿಚಯ 

ಧಾರವಾಡದವಳಾದ ನಾನೀಗ ಸಧ್ಯ ಬೆಂಗಳೂರು ವಾಸಿ. ಸಾಮಾನ್ಯ ಗೃಹಿಣಿ. ಚಿಕ್ಕಂದಿನಿಂದಲೂ ಹಾಡಿನ ಹುಚ್ಚು; ಸಂಯೋಜಿಸುವ, ಹಾಡುವ ಗುಂಗು.ಇದೇ ಕವಿತೆಗಳನ್ನು ಬರೆಯುವತ್ತ ಕೊಂಡೊಯ್ತು. ಓದುವ ಹವ್ಯಾಸವೂ ಹಾಗೇ.

ಈಗ ಎರಡು ಕವನಸಂಕಲನ ಹೊರ ಬಂದಿವೆ. ವೈದ್ಯ ಪತ್ನಿಯ ಅನುಭವ ಕಥನ; ಸ್ವರಚಿತ ಸಂಪ್ರದಾಯದ ಹಾಡುಗಳು ತಾಯಿ-ಮಗು ಇವೆರಡೂ ಅಚ್ಚಿನಲ್ಲಿವೆ. ನಾನು ಅನಿವಾಸಿ ಅಲ್ಲದಿದ್ದರೂ ಅನಿವಾಸಿ ಮಗನ ತಾಯಿ ನಾನು. ಅದಕ್ಕೇ ಏನೋ ಈ ಅನಿವಾಸಿ ಬಳಗ ನನ್ನದೇ ಎಂಬ ಆತ್ಮೀಯ, ಆಪ್ತ ಭಾವ.

ಚೆಂಬೆಳಕಿನ ಕವಿ - ಚೆಂಬೆಳಕಿನ ಕವಿತೆ- ನಾಲ್ಕು ಮಾತು
   "ನಾಡೋಜ, ಚೆಂಬೆಳಕಿನ ಕವಿ ಚೆನ್ನವೀರ ಕಣವಿಯವರು ಇನ್ನಿಲ್ಲ" . ಟಿವಿ ಯಲ್ಲಿ ಬಿತ್ತರವಾಗುತ್ತಿದ್ದ ಸುದ್ದಿ ಕೇಳುತ್ತಿದ್ದಂತೆಯೇ ನನಗೇ ಗೊತ್ತಿಲ್ಲದಂತೆ ಒಂದು ಗಳಿಗೆ ಹಾಗೇ ಸ್ತಬ್ಧವಾಗಿ ಬಿಟ್ಟೆ. ಈ ೯೩ ರ, ಜೀವನದ ಸಂಧ್ಯಾ ಕಾಲದಲ್ಲಿ ಕೋರೋನಾದ ಕರಾಳ ಬಂಧನದಲ್ಲಿ ಸಿಲುಕಿ , ನಲುಗುತ್ತಿರುವ ಆ ಜೀವ ಸೋತು ಹೋಗಿದ್ದರೂ , ಮತ್ತೆ ಚಿಗುರೀತೇನೋ ಮಾಗಿದ ಚೇತನ ಎಂಬ ಅರ್ಥವಿಲ್ಲದ ಆಸೆ ದೂರದಲ್ಲಿತ್ತು. ಈಗ ' ದೀಪ ಹೊತ್ತಿಸಿದ ದೀಪವೇ ನಂದಿ ಹೋಯ್ತಲ್ಲ' ಎಂಬ ದಿಗ್ಭ್ರಮೆ !
ಈಗಿದ್ದು ಮುಂದಿನ ಗಳಿಗೆಗೇ ಇಲ್ಲದಂತಾಗುವುದು ಜೀವವೊಂದೇ ಏನೋ ಎಂಬ ಹತಾಶೆ ಭರಿತ ವಿಷಾದದಲೆ ಸುಳಿದು ಹೋಗಿ , ಕಣ್ತುಂಬಿ ತುಳುಕಿ ಅದರಲ್ಲೇ ಆ ಮಗುವಿನ ಮನದ, ಮುಗ್ಧ ನಗೆಯ ಮೃದು ವ್ಯಕ್ತಿತ್ವ ಅದೇ ಶುಭ್ರ ನಗೆಯೊಡನೆ ತೇಲಿದ ಭಾಸ.
ಒಣ ಕಠೋರತೆ, ಅಣುಕು ಮಾತುಗಳಿಂದ ಬಲು ದೂರ ಇದ್ದ ಆ ಭಾವಜೀವಿಯ ಎದೆ ತುಂಬಿದ ಕನಸುಗಳು ಅರಳಿ ಕವಿತೆಯಾಗಿ ಹರಿದ ಆ ಕೋಮಲ ಧಾರೆಯಲಿ ಮುಳುಗಿ ಹೋದೆ ನಾ, ಅವರ ಭೇಟಿಯಾದ ಗಳಿಗೆಯ ನೆನಪಿನೊಡನೆ!
    ಧಾರವಾಡದ ಕಲ್ಯಾಣ ನಗರದ ಅವರ ಮನೆಯ ಹೊಸ್ತಿಲನ್ನು ಅಳುಕುತ್ತಲೇ ತುಳಿದಾಗ ಅವರ ಆ ತುಟಿತುಂಬ ಹರಡಿದ ಮೃದು ಹಾಸ, ನೀಡಿದ ಮನದುಂಬಿದ ಸ್ವಾಗತ ," ಬಾ ಯವ್ವಾ ಬಾ ತಂಗಿ ಬಾ ಒಳಗ" ಅಂದ ಆ ಮೆತ್ತಗಿನ ಧ್ವನಿ ಇನ್ನೂ ಕಿವಿಯಲ್ಲಿ ಗುಂಜಿಸುತ್ತಿದೆ. ಆ ಒಂದು ಗಂಟೆಯಲ್ಲಿ ಎಷ್ಟೊಂದು ಮಾತಾಡಿದೆವು! ಆದರೆ ಅದರಲ್ಲಿ ನನ್ನ ತಲೆಗೆ ಎಷ್ಟು ಹೋಯ್ತೋ ಗೊತ್ತಿಲ್ಲ. ಅವರ ಕವಿತೆಯಂತೆ ಇರುವ ಆ ವ್ಯಕ್ತಿತ್ವದಲ್ಲಿ ಕರಗಿ ಹೋಗಿದ್ದೆ ನಾ! ಅಂತಹ ಧೀಮಂತ ಚೇತನ ಇನ್ನು ನಮ್ಮೊಡನಿಲ್ಲ. ಆದರೆ ಅವರ ಒಂದೊಂದು ಕವಿತೆ ಒಂದೊಂದು ಮಾತು ಹೇಳುತ್ತ ಚಿರಸ್ಥಾಯಿಯಾಗಿ ಉಳಿಯುವಂಥವೇ. ಆ ಕಾವ್ಯ- ಕವನಗಳೊಂದಿಗೆ ಅವರೂ ನಮ್ಮೊಡನೆಯೇ ಇದ್ದಾರೆ ಎಂಬ ಹುಚ್ಚು ಸಮಾಧಾನ." ಹೂವು ಹೊರಳುವವು ಸೂರ್ಯನ ಕಡೆಗೆ....." ಎಂದು ಅವರು ಹಾಡಿದಂತೆ ಆ ಸ್ವಚ್ಛ ಮನದ ಕವಿ ಆ ಶುಭ್ರತೆಯಲ್ಲೇ, ಆ ಬೆಳಕಿನಲ್ಲೇ ಒಂದಾಗಿ ಹೋಗಿದ್ದಾರೆ. ಅವರ ಈ ಕವಿತೆ ನನಗೆ ಅತ್ಯಂತ ಪ್ರಿಯವಾದ ಕವಿತೆ. ಅವರಿನ್ನಿಲ್ಲದ ಸುದ್ದಿ ಕೇಳಿದಾಗಿನಿಂದ ಎಷ್ಟು ಸಲ ಆ ಹಾಡು ರತ್ನಮಾಲಾ ಪ್ರಕಾಶ ಅವರ ಧ್ವನಿಯಲ್ಲಿ ಕೇಳಿದೀನೋ ನನಗೇ ಗೊತ್ತಿಲ್ಲ! ಮತ್ತೊಮ್ಮೆ ಹುಟ್ಟಿ ಬಾ ಅನ್ನುವುದು ಅದೆಷ್ಟು ವಾಸ್ತವಿಕ ಗೊತ್ತಿಲ್ಲ. ಈಗ ನಮ್ಮ ಕೈಲಿರುವುದು ಅವರ ನೆನಪಲ್ಲಿ ನಾಲ್ಕು ಹನಿ ಕಣ್ಣೀರು ಸುರಿಸುವ ಅಸಹಾಯಕತೆ ಒಂದೇ. ನಾನೀಗ ಅವರ ಈ ಕವಿತೆಯ ಕುರಿತು ನನಗೆ ತಿಳಿದ ಹಾಗೆ ಬರೆದ ನಾಲ್ಕು ಮಾತುಗಳೇ  ಚೆಂಬೆಳಕಿನ ಕವಿಗೆ ನನ್ನ ಶ್ರದ್ಧಾಂಜಲಿ ! 

ಹೂವು ಹೊರಳುವವು ಸೂರ್ಯನ ಕಡೆಗೆ..

ಹೂವು ಹೊರಳುವವು ಸೂರ್ಯನ ಕಡೆಗೆ
ನಮ್ಮ ದಾರಿ ಬರಿ ಚಂದ್ರನ ವರೆಗೆ
ಇರುಳಿನ ಒಡಲಿಗೆ ದೂರದ ಕಡಲಿಗೆ
ಮುಳುಗಿದಂತೆ, ದಿನ ಬೆಳಗಿದಂತೆ
ಹೊರ ಬರುವನು ಕೂಸಿನ ಹಾಗೆ

ಜಗದ ಮೂಸೆಯಲಿ ಕರಗಿಸಿ ಬಿಡುವನು
ಎಲ್ಲ ಬಗೆಯ ಸರಕು
ಅದಕೆ ಅದರ ಗುಣ ದೋಷಗಳಂಟಿಸಿ
ಬಿಡಿಸಿ ಬಿಟ್ಟ ತೊಡಕು

ಗಿಡದಿಂದುರುವ ಎಲೆಗಳಿಗೂ ಮುದ 
ಚಿಗುರುವಾಗಲೂ ಒಂದೆ ಹದ
ನೆಲದ ಒಡಲಿನೊಳಗೇನು ನಡೆವುದೋ
ಎಲ್ಲಿ ಕುಳಿತಿಹನೋ ಕಲಾವಿದ

ಬಿಸಿಲ ಧಗೆಯ ಬಸಿರಿಂದಲೇ ಸುಳಿವುದು
ಮೆಲು ತಂಗಾಳಿಯು ಬಳಿಗೆ
ಸಹಿಸಿಕೊಂಡ ಸಂಕಟವನು ಸೋಸಲು
ಬಂದೇ ಬರುವುದು ಗಳಿಗೆ

ಸಹಜ ನಡೆದರೂ ಭೂಮಿಯ ಲಯದಲಿ
ಪದಗಳನಿರಿಸಿದ ಹಾಗೆ
ವಿಶ್ವದ ರಚನೆಯ ಹೊಳಹಿನಲ್ಲಿ
ಕಂಗೊಳಿಸಿತು ಕವಿತೆಯು ಹೀಗೆ

ನಾಲ್ಕು ಮಾತುಗಳು ಕವಿತೆ ನನಗನಿಸಿದಂತೆ -

    ನಾಡೋಜ ಕವಿ ಚೆನ್ನವೀರ ಕಣವಿಯವರ ಈ ಕವಿತೆ " ಹೂವು ಹೊರಳುವವು ಸೂರ್ಯನ ಕಡೆಗೆ....." ಹಾಗೇ ಓದಿ, ಆಲಿಸಿದ್ರೆ ಒಂದು ಸರಳ , ಸುಂದರ ಭಾವಗೀತೆ ಅನ್ನಿಸಿದ್ರೂ ಬಗೆದಷ್ಟು ಗೂಢಾರ್ಥ ಅದರೊಡಲಲ್ಲಿ ಅಂತ ನನಗನ್ನಿಸ್ತು.
 ಹೂವು ಇಲ್ಲಿ ಸುಂದರ, ಸರಳ, ಸ್ವಚ್ಛ ಮನದ ಪ್ರತೀಕ. ಅಂತೆಯೇ ಸಹಜವಾಗಿಯೇ ಅವು ಸೂರ್ಯನ ಅಂದರೆ ತಮದ ಲವಲೇಶವೂ ಇಲ್ಲದ, ಶುಭ್ರ, ಸ್ವಚ್ಛ ಪ್ರಕಾಶದ, ಅರಿವಿನ ದ್ಯೋತಕ; ಅತ್ತ ಹೊರಳಬಲ್ಲವು , ಆ ಬೆಳಕು ಪ್ರಖರವಾಗಿದ್ದರೂ. ಆದರೆ ನಾವು ಮನುಷ್ಯರು ; ಮಾನವ ಸಹಜ ದುರ್ಬಲತೆ ನಮ್ಮಲ್ಲಿ. ಮಾಯಾ, ಮೋಹ, ಅಹಂ ದ ಗಾಢ ಕತ್ತಲು, ತುಮುಲದಲ್ಲಿ ಮುಳುಗಿರುವ ನಾವು ಅದನ್ನು ಜೀರ್ಣಿಸಿಕೊಳ್ಳುವ ತಾಕತ್ತೂ ಇಲ್ಲದವರು. ನಮ್ಮ ದಾರಿ ಬರಿ ಚಂದ್ರನ ವರೆಗಷ್ಟೇ; ಸೂರ್ಯನ ಪ್ರತಿಫಲಿತ ಬೆಳಕಿನ ಚಂದ್ರನ ವರೆಗಷ್ಟೇ . ಆ ಜ್ವಾಜ್ವಲ್ಯಮಾನ ಬೆಳಕಿನೆಡೆ ಕಣ್ಣೆತ್ತಿ ನೋಡಲೂ ಆಗದಷ್ಟು ಆಳವಾಗಿ ಹುದುಲಿನಲ್ಲಿ ಸಿಲುಕಿದವರು. ಆ ಇರುಳಿನ ಒಡಲಿಂದ ಸಾಗಿ ಬೆಳಕಿನೆಡೆ ಸಾಗಲು ಸೇತುವೆಯಂತಿರುವ ಈ ಜೀವನದ ಕಡಲಿನಲ್ಲೇ ಮುಳುಗಿ ಅಲ್ಲೇ ಎಲ್ಲಾ ದುರ್ಬಲತೆ, ಜಂಜಾಟಗಳನ್ನೆಲ್ಲ ಕಳಚಿ ಎದ್ದು ನಿಷ್ಕಲ್ಮಶ ಮನಸಿನ ಕೂಸಿನಂತೆ ಹೊರಬಂದರೆ ಸೂರ್ಯನತ್ತ ಹೊರಳುವ ಯೋಗ್ಯತೆ ಬಂದೀತೋ ಏನೋ ಅಂತ. ಸೂರ್ಯನು ದಿನವೂ ಇರುಳಿನೊಡಲಲ್ಲಿ ಮುಳುಗಿ, ಕಡಲಿನಿಂದ ಬೆಳಗುತ್ತ ಕೂಸಿನ ಹಾಗೆ ಶುಭ್ರವಾಗಿ ಹೊರಬಂದು ಇದನ್ನೇ ಹೇಳ್ತಾ ಇದಾನೆ ಅಂತ ಕವಿ ಸೂಚ್ಯವಾಗಿ ಹೇಳಿದ್ದಾರೆ ಇಲ್ಲಿ. ನಿಜಕ್ಕೂ ಇದೊಂದು ಅನುಪಮ ಪ್ರತಿಮೆ.ಮಾನವನೂ ಸೂರ್ಯ ದಿನ ಬೆಳಗಿದ ಹಾಗೆ ಬೆಳಗುತ್ತ ಅಂದರೆ ತುಸು ತುಸುವಾಗಿ ತಿಳಿವು ವಿಕಸಿಸಿ, ಸ್ವಚ್ಛ ಮನದ ಬೆಳಕಲಿ ಹೊಳೆಯುತ್ತ ಕೂಸಿನ ಹಾಗೆ ಶುಭ್ರವಾಗಿ ಹೊರಬರಲಿ ಕಡಲ ಮಡಿಲಿಂದ ಥೇಟ್ ಆ ನೇಸರ ಬಂದ ಹಾಗೆ ಎಂಬುದು ಕವಿಯ ಆಶಯ. 
     ಎರಡನೇ ಚರಣದಲ್ಲಿ ಇದನ್ನೇ ಮುಂದುವರಿಸುತ್ತ ಕವಿ ಹೇಳ್ತಾರೆ - ಯಾರು ಹೇಗೇ ಬಂದರೂ, ಅವರ ಯಾವ ಗುಣಾವ ಗುಣಗಳನ್ನು ಗಣನೆಗೆ ತಾರದೇ ಅವರವರ ಯೋಗ್ಯತೆಗೆ ತಕ್ಕಂತೆ ಈ ಜಗದ ದಿನ ನಿತ್ಯದ ಬದುಕಿನಲ್ಲಿ ಮುಳುಗಿಸಿ ಬಿಡ್ತಾನೆ ಆತ. ಹಾಗೇ ಆ ಒಂದೇ ಮೂಸೆಯಲ್ಲಿಯೇ ಅಕ್ಕಸಾಲಿಗನಂತೆ ಕರಗಿಸಿ ಮಸೆಸಿ ಬಿಟ್ಟು, ಒರೆಗ್ಹಚ್ಚಿ ಶುದ್ಧೀಕರಿಸುವದೊಂದೇ ಆತನ ಕೆಲಸ. ಆದರೆ ಒಂದೇ ಬಾರಿಗೆ ಆಗುವುದಲ್ಲ ಅದು. ಅವರವರ ಒಳಿತು ಕೆಡುಕುಗಳ ಕರ್ಮದ ಗಂಟು ಅವರ ಬೆನ್ನಿಗೇ. ಅಲ್ಲಿ ಯಾವ ಏಚು ಪೇಚಿಲ್ಲ; ತೊಡಕು ತೊಡರಿಲ್ಲ. ಬಲು ಸ್ಪಷ್ಟ ಆ ಲೆಕ್ಕ.
    ಇನ್ನು ಈ ಕರಗಿಸಿ ಶುದ್ಧೀಕರಿಸಿದ್ದು ಎಷ್ಟರ ಮಟ್ಟಿಗೆ ಫಲ ಕೊಟ್ಟಿದೆ ಎಂಬುದನ್ನು ಮೂರನೇ ಚರಣದಲ್ಲಿ ಹೇಳ್ತಾರೆ ಕವಿ. ಗಿಡದಿಂದ ಉದುರುವ ಎಲೆಗೂ ಒಂದು ಮುದ ಇದೆ ಅಂತ. ನಿಜ; ಮಾಗಿದ ಮನದ ಪ್ರತೀಕ ಅದು. ಮನ ಮಾಗಿ ಪಕ್ವವಾಗಿ ತೊಟ್ಟು ಕಳಚಿ ಗಿಡದಿಂದ ಉದುರುವ ಎಲೆಯಂತಾಗಿದ್ರೂ ಆ ಹಣ್ಣಾದ ಮನದಲ್ಲಿ ಏನೋ ಒಂದು ನಿರಾಳ, ನಿವಾಂತ ಭಾವ. ಯಾವ
ಗೊಂದಲದ ಗೋಜಿಲ್ಲದೇ, ತಿಳಿವು ಅರಿವಿನ ಹುಡುಕಾಟದಿ ನಲುಗದ ಸ್ಥಿತಿ ಅದು; ಸ್ಥಿತಪ್ರಜ್ಞನ ಹಾಗೆ. ತಾ ಏನು, ತನ್ನ ದಾರಿ ಎತ್ತ ಎಂಬುದರ ಕಲ್ಪನೆ ನಿಚ್ಚಳವಾಗಿದೆ ಈಗ ಆ‌ ಜೀವಕೆ. ಅದಕ್ಕೇ ಹೊಸ ಚಿಗುರಿನ ಹದದಂತೆಯೇ ಆ ಮನವೀಗ. ಷೇಕ್ಸ್ ಪಿಯರ್ ನ ಕವಿತೆಯ ನೆನಪು ಬಾರದಿರದೀಗ; ಶಿಶುವಾಗಿ ಆಗಮಿಸಿ ಶಿಶುವಿನಂತೆ ನಿರ್ಗಮನ. ನಿರ್ಗಮನ ಆದ ಹಣ್ಣೆಲೆ ಭೂಮಿ ಒಡಲು ಸೇರಿ ಮತ್ತೆ ಚಿಗುರೊಡೆಯುವುದೂ ಅಲ್ಲಿಂದಲೇ. ಆ ಹಂತದಲ್ಲಿ ಅಲ್ಲಿ ಏನು ನಡೀತದೋ ಗೊತ್ತಿಲ್ಲ, ಆಗುವುದೂ ಇಲ್ಲ. ಇದು ಜನನ- ಮರಣ - ಜನನ ಈ ಚಕ್ರದ ಸೂಚಕ. ಆ ಕಲಾವಿದ ಮತ್ತೆ ಅವುಗಳ ಗುಣದೋಷಗಳನು ಅಂಟಿಸಿ ಕಳಿಸಬೇಕಲ್ಲ ರೂಪಿಸಿ! ಒಂದು ಹದದ ಲೆಕ್ಕ, ಅಳತೆಗೋಲು ಇಟ್ಟುಕೊಂಡೇ ಇರ್ತಾನೆ ಆ ಕಲಾವಿದ- ಅದೇ ಸೃಷ್ಟಿಕರ್ತ, ಯಾರ ಅಳಿವಿಗೂ ನಿಲುಕದವನಾತ ಎಂದು ಹೇಳ್ತಿದ್ದಾರೆ ಕವಿ.
     ಈಗ ನಾಲ್ಕನೇ ಚರಣದಲ್ಲಿ ಕವಿ ಸಂತೈಸ್ತಿದಾರೆ ಆ ಜೀವಗಳನ, ಗುಣದೋಷಗಳ ಮೂಟೆ ಹೊತ್ತು ತಿರುಗುವ ಜೀವಗಳನ. ಈ ಹೆಣಗಾಟದ ಮಧ್ಯೆಯೂ ಒಂದು ಸುಂದರ ಗಳಿಗೆ ಬಂದೇ ಬರತದೆ.ಸಾಗಿ ಬಂದ ದಾರಿಯ ಹಿಂದಿರುಗಿ ನೋಡಿ , ತನ್ನನ್ನೇ ತಾ ಮಥಿಸಿ ಸೋಸಿ ನೋಡಿದಾಗ ವಿಷಯ ನಿಚ್ಚಳವಾಗಿ ಗೋಚರಿಸಿ ಒಂದು ನಿರಾಳತೆ ಮನದಲ್ಲಿ. ಇದೇ ಆ ಹೆಣಗಾಟದ ಗರ್ಭದಲ್ಲಿಯೇ ಇರುವ ತಂಪೆರೆವ ಹಾಯಿಯ ನೆರಳಿನೆಳೆ. ಇದನ್ನು ಗುರುತಿಸುವ ಗಳಿಗೆ ಬಂದೇ ಬರುತ್ತದೆ ಎಂಬುದು ಕವಿಯ ಧೃಡ ನಂಬಿಕೆ. ಇಲ್ಲಿ ಬಿಸಿಲಿನ ಧಗೆ ಜೀವನ ಪರ್ಯಂತದ
 ಜಂಜಾಟ, ಗುದ್ದಾಟವೇ; ಮಾಗುವಿಕೆ ಬರೋ ತನಕ. ನಂತರ ಬರುವುದು ಮೆಲು ತಂಗಾಳಿಯ ಅಲೆ. ನಿಧಾನವಾಗಿ ಬರೋದದು. ಆ ಹಣ್ಣೆಲೆಗೆ ಮುದ ನೀಡುವುದೂ ಇದೇ.
ಇದನ್ನೆಲ್ಲ ನೋಡಿ ಕವಿಗೆ ಎಲ್ಲ ಅಂಶಗಳ ನಡೆ, ಚಲನೆಯಲ್ಲೂ ಒಂದು ಲಯಬದ್ಧತೆ, ಕ್ರಮ ಬದ್ಧತೆ ಎದ್ದು ಕಾಣುತ್ತದೆ. ಸೃಷ್ಟಿಯ ಪ್ರತಿ ಅಣು , ಪ್ರತಿ ಕಣವನ್ನೂ ವ್ಯವಸ್ಥಿತವಾಗಿ, ಸರಿಯುತ್ತಿರುವ ಸಮಯದ ಚಲನೆಯಲ್ಲೂ, ಭೂಮಿಯು ಸಾಗುವ ಗತಿಯಲ್ಲೂ ಆಚೀಚೆ ಅಲುಗಾಡದಂತೆ , ಅದರದರದೇ ಸ್ಥಳದಲ್ಲೇ ಜೋಡಿಸಿರುವುದರಲ್ಲೂ ಒಂದು ಸೌಂದರ್ಯ ಕಾಣ್ತಿದೆ , ಕವಿತೆಯ ಲಯಬದ್ಧ ಪದ ಜೋಡಣೆಯಲ್ಲಿರುವ ಹಾಗೆ. ಅದಕ್ಕೇ ಕವಿಗೆ ಈ ಜೀವನವೇ ಒಂದು ಕವಿತೆ ಅನಿಸಿ ಬಿಟ್ಟು, ಅದು ಈ ಜಗದ ಮೊಳಹಿನಲ್ಲಿಯೇ ಅಂದರೆ ಜೀವನದ ಉಗಮದಲ್ಲಿಯೇ ರೂಪ ತಾಳಿ ಬಿಟ್ತು ಅಂತ ಹೇಳ್ತಾರೆ. ಹೀಗೆ ಜೀವನದ ಸಾರವನ್ನು ಪೂರ್ತಿಯಾಗಿ ಹೇಳಿ ಅದನ್ನು ಕವಿತೆ ಎನ್ನುವುದು ಅನುಪಮ ಹೇಳಿಕೆ.ಜೀವನವೇ ಕವಿತೆ ಎನ್ನುವುದು ನಿಜಕ್ಕೂ ಅಪ್ರತಿಮ ಪ್ರತಿಮೆ.

ಒಟ್ಟಿನಲ್ಲಿ ಈ ಛಂದದ ಕವಿತೆ ಮನದ ತುಂಬಾ ಯೋಚನಾ ಭಾವ ತರಂಗಗಳನೆಬ್ಬಿಸುವದಂತೂ ನಿರಂತರ ಸತ್ಯ! ಈಗ ಅವರನ್ನು ಕಳೆದುಕೊಂಡು ಮಂಕು ಕವಿದು, ಮಬ್ಬುಗತ್ತಲೆ ಆವರಿಸಿದ್ದರೂ, ಇಂತಹ ಅಪರೂಪದ ಕವಿತೆಗಳಿಂದ ಚೆಂಬೆಳಕನ್ನು ಹರಡುತ್ತಾ, ಆ ಮಬ್ಬುಗತ್ತಲೆಯ ಮಂಕನ್ನು ಸರಿಸುತ್ತಾ ನಮ್ಮ ಜೊತೆಯಲ್ಲೇ ಇರುತ್ತಾರೆಂಬುದೂ ಅಷ್ಟೇ ಸತ್ಯ!

~ ಸರೋಜಿನಿ ಪಡಸಲಗಿ
ಬೆಂಗಳೂರು

ಒಂದು ಮುಂಜಾವಿನಲಿ..ಸುಮನಾ ಧ್ರುವ್

ವಿಶ್ವ ವಿನೂತನ ವಿದ್ಯಾ ಚೇತನ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ ಜಯ ಭಾರತಿ	
ಈ ಹಾಡನ್ನು ಅದೆಷ್ಟು ಬಾರಿ ಆ ಮೊದಲು ಹಾಡಿದ್ದೆ ಆದರೆ , ಆ ದಿನ ಒಂಥರಾ ಭಯಮಿಶ್ರಿತ ಖುಷಿ ಯಾಕೆಂದರೆ ಕವಿಯ ಎದುರೆ ಅವರ ಹಾಡು ಹಾಡುವ ಸೌಭಾಗ್ಯ ಎಲ್ಲ ಗಾಯಕರಿಗೂ ಸಿಗುವಂತದ್ದಲ್ಲ, ಆ ಒಂದು ವಿಷಯದಲ್ಲಿ ನಾನು ನಿಜಕ್ಕೂ ನಶೀಬವಾನ,ಈ ಅವಕಾಶ ನನಗೆ ಹಲವುಬಾರಿ ಸಿಕ್ಕಿದೆ. 

ಕಣವಿ ಅವರನ್ನ ಅದೇ ಮೊದಲ ಬಾರಿ ನೋಡಿದ್ದು , ಧಾರವಾಡದ ವಿದ್ಯಾವರ್ಧಕ ಸಂಘದ ಯಾವುದೋ ಕಾರ್ಯಕ್ರಮಕ್ಕೆ ವಿಶ್ವ ವಿನೂತನ ಹಾಡಲಿಕ್ಕೆಂದು ನಾವು ಕೆಲವು ಸಂಗೀತ ವಿದ್ಯಾರ್ಥಿಗಳು ಹೋಗಿದ್ದೆವು. ವಿಶ್ವವಿನೂತನ ಹಾಡಿನ ಹೊಸದೊಂದು ಸಂಯೋಜನೆಯನ್ನು ನಮ್ಮ ಉಪನ್ಯಾಸಕರಾದ ಡಾ ನಂದಾ ಪಾಟೀಲ್ ಅವರು ನಮಗೆ ಕಲಿಸಿದ್ದರು. ಹಾಡಿನ ನಂತರ "ಚಲೋ ಹಾಡಿದ್ರು ಹುಡುಗೂರು". ಅಂದು ಮುಗುಳುನಕ್ಕರು ಅವರ ಕವಿತೆಗಳಂತೆ ಅವರ ನಗುವೂ ಚಂದ ಚಂದ, ಪುಟ್ಟ ಮಗುವಿನ ನಗುವಿನಂತೆ.

ಧಾರವಾಡದಲ್ಲಿ ಇದ್ದಷ್ಟು ದಿನ ಆಗೊಮ್ಮೆ ಈಗೊಮ್ಮೆ ಸಾಹಿತ್ಯ ಸಂಗೀತ ಕಾರ್ಯಕ್ರಮದಲ್ಲಿ ಅವರ ಭೇಟಿ ಆಗುತ್ತಲೇ ಇರುತ್ತಿತ್ತು. ಈಗಿನಂತೆ selfi ಕಾಲವಾಗಿದ್ದ್ರೆ ಅದೆಷ್ಟು ಫೋಟೋಗಳ ಸಂಗ್ರಹವಾಗುತ್ತಿತ್ತೋ. ಮನಸ್ಸಲ್ಲಿ ಅಚ್ಚಾದ ಆ ನೆನಪಿನ ಚಿತ್ರಗಳನ್ನು ಅಕ್ಷರದಲ್ಲಿ ಬಿಂಬಿಸಲು ಸೋಲುತ್ತಿದ್ದೇನೆ.

ಕನ್ನಡ ಭಾವಗೀತೆಗಳ ಗುಂಗಿಗೆ ಬಿದ್ದವರು, ತಮ್ಮ ಜೀವನದ ಎಲ್ಲ ಸಂದರ್ಭಕ್ಕೂ ಒಂದು ಹಾಡನ್ನು ತಮ್ಮ ಅರಿವಿಲ್ಲದಂತೆ ಗುನುಗಿಕೊಂಡು ಬಿಡುತ್ತೇವೆ. ಹಾಗೆ ಎಂದೋ ಕೇಳಿದ ಮುಂಜಾವಾದಲಿ ಹಸಿರುಹುಲ್ಲ ಮಖಮಲ್ಲಿನಲಿ ಪಾರಿಜಾತವೂ ಹೂವು ಸುರಿಸಿದಂತೆ ಹಾಡು ಪಾರಿಜಾತ ಸಿಗದ ನಾಡಿಗೆ ಬಂದರೂ ಇಬ್ಬನಿ ತುಂಬಿದ ಹಸಿರು ಹೊದ್ದ ನೆಲವನ್ನು ಕಂಡರೆ ಪಕ್ಕನೆ ಗುನುಗಿಬಿಡುತ್ತೇನೆ. ಏಳುತ್ತಲೇ ಮಳೆ ನಾದ ಕೇಳಿದರೆ ತುಂತುರಿನ ಸೋನೆಮಳೆ ಎಂದು ಮನಸು ಹಾಡತೊಡಗುತ್ತದೆ. ಎಲ್ಲಕ್ಕಿಂತ ಹೆಚ್ಚು ಆಪ್ಯಾಯಮಾನ ಹಾಡು ಎಂದರೆ ಹೂವು ಹೊರಳುವವು ಸೂರ್ಯನ ಕಡೆಗೆ ಎನ್ನುವ ಗೀತೆ, ಈಗಲೂ ಸೂರ್ಯನತ್ತ ಮುಖಮಾಡಿದ ಹೂಗಳನ್ನು ನೋಡಿದಾಗ, ಆ ಸಾಲು ನೆನಪಾಗುತ್ತದೆ. 

~ ಅಮಿತಾ ರವಿಕಿರಣ್
ಕಣವಿಯವರ ಜೊತೆಗೆ ನನ್ನದೊಂದು ಭೇಟಿ 
ನಾವಿದ್ದ ಸಮಯದಲ್ಲಿ ಕೆಎಂಸಿಯ ಕನ್ನಡ ಸಂಘ ತುಂಬಾ ಚುರುಕಾಗಿತ್ತು . ಪ್ರತಿ ವರ್ಷ ' ಬೇಂದ್ರೆಯವರ ' ದಿನಾಚರಣೆಯನ್ನು ಆಚರಿಸುವುದು ವಾಡಿಕೆಯಾಗಿತ್ತು . ಯಾರಾದರೂ ಸಾಹಿತಿಗಳನ್ನು ಮುಖ್ಯ ಅತಿಥಿಗಳನ್ನಾಗಿ ಕರೆತರುವದು ವರ್ಷಗಳಿಂದ ನಡೆದುಬಂದ ರೂಢಿಯಾಗಿತ್ತು .
ಅದು ೧೯೯೦ ರ ಬೇಂದ್ರೆ ದಿನಾಚರಣೆ . ನಮ್ಮ ಸಂಘದ ಮುಖ್ಯಸ್ಥರಾಗಿದ್ದ ಡಾ . ಪಾರ್ಶ್ವನಾಥ ಸಾರರ ಮೇರೆಗೆ ಆ ಸಲ ನಾಡೋಜ ಕವಿ ಚೆನ್ನವೀರ ಕಣವಿಯವರನ್ನು ಮುಖ್ಯ ಅತಿಥಿಯಾಗಿ ಕರೆಯಬೇಕೆಂದು ನಿರ್ಧಾರವಾಗಿತ್ತು .
ನನ್ನ ಸೌಭಾಗ್ಯವೋ ಏನೊ ನನಗೆ ಆ ಜವಾಬ್ಧಾರಿಯನ್ನು ಒಪ್ಪಿಸಲಾಗಿತ್ತು . ನಾನು ಅವರನ್ನು ಪ್ರತ್ಯಕ್ಷವಾಗಿ ನೋಡಿರಲಿಲ್ಲ . ಅವರ ಪದ್ಯಗಳನ್ನು ಪಠ್ಯ ಪುಸ್ತಕದಲ್ಲಿ ಓದಿದ್ದೆ. ಧಾರವಾಡದಲ್ಲಿ ಇದ್ದಾಗ ಬೇಂದ್ರೆಯವರ ಮನೆಗೆ ಹೋಗುವ ಅವಕಾಶ ಸಿಕ್ಕಿತ್ತಾದರೂ ಕಣವಿಯವರನ್ನು ಕಾಣುವ ಸಂದರ್ಭ ಒದಗಿ ಬಂದಿರಲಿಲ್ಲ.
ಒಂದು ಸಂಜೆ ನಾನು ಮತ್ತು ನನ್ನ ಗೆಳೆಯ ಸೇರಿ ಧಾರವಾಡಕ್ಕೆ ಪಯಣ ಬೆಳೆಸಿದೆವು. ಆಗಿನ ಸಮಯದಲ್ಲಿ ಈಗಿನಂತೆ ಮೊಬೈಲ್ ಫೋನಗಳು ಮತ್ತು ಅಂತರ್ಜಾಲದ ಅನುಕೂಲತೆಯೂ ಇರಲಿಲ್ಲ . ಅವರು ಧಾರವಾಡ ವಿಶ್ವ ವಿದ್ಯಾಲಯದ ನೌಕರರ ಕ್ವಾರ್ಟರ್ಸ್ ನಲ್ಲಿ ಇರುತ್ತಾರೆಂದು ಗೊತ್ತಿತ್ತು . ಮನೆಯ ನಂಬರನ್ನು ನಮ್ಮ ಸಾರರಿಂದ ಪಡೆದುಕೊಂಡಿದ್ದೆವು . ಸಂಜೆ ೭ ಘಂಟೆಯ ಸುಮಾರಿಗೆ ಸಿಟಿ ಬಸ್ಸ ಹಿಡಿದು ವಿಶ್ವವಿದ್ಯಾಲಯವನ್ನು ತಲುಪಿದ್ದೆವು . ಬಸ್ಸಿನಿಂದ ಕೆಳಗಿಳಿದ ಮೇಲೆ ಎಲ್ಲಿಹೋಗಬೇಕೆಂದು ಗೊತ್ತಾಗದೆ ಯಾರನ್ನಾದರೂ ಕೇಳಿದರಾಯಿತು ಎಂದು ಕಾಯುತ್ತಿದ್ದೆವು. ಅಷ್ಟರಲ್ಲಿಯೇ ನಮ್ಮ ಹಿಂದೆಯೇ ಇನ್ನೊಬ್ಬರು ಬಸ್ಸಿನಿಂದ ಇಳಿದರು . ನೆಹರು ಶರ್ಟ್ ಮತ್ತು ಪಾಯಜಾಮ್ ಹಾಕಿದ್ದರು ತಲೆಯ ಮೇಲೆ ಒಂದು ಟೋಪಿ ಇತ್ತು ಮತ್ತು ಕೈಯಲ್ಲಿ ಒಂದು ಕಾಯಿಪಲ್ಲೆ ತುಂಬಿದ ಚೀಲವಿತ್ತು . ನಾವು ಹೋಗಿ ಅವರನ್ನು ಕೇಳಿದೆವು - 'ಕಣವಿ ಸರ್ರರ್ ಮನೆಗೆ ಹೋಗಬೇಕು , ದಾರಿಯನ್ನು ಹುಡುಕುತ್ತಿದ್ದೇವೆ ನಿಮಗೇನಾದರೂ ಗೊತ್ತೇನು' ಎಂದು . ನಮ್ಮನ್ನೊಮ್ಮೆ ನೋಡಿ ಅವರೆಂದರು  ' ನಾನು ಅಲ್ಲಿಯೇ ಹೊರಟಿದ್ದೇನೆ ನೀವೂ ನನ್ನ ಜೊತೆಗೆ ಬರಬಹುದು ಎಂದು. ಅವರನ್ನೇ ಹಿಂಬಾಲಿಸಿದೆವು 
ಅವರ ಮನೆಯನ್ನು ಮುಟ್ಟಿದ್ದಾಗ ನಮಗೆ ಗೊತ್ತಾಯಿತು ಅವರೇ ಕಣವಿಯವರೆಂದು . ನಾವೇನೋ ತಪ್ಪು ಮಾಡಿದೆವು ಎಂದು ಅನಿಸಿತ್ತು. 'ನಿಮ್ಮನ್ನು ಗೊತ್ತು ಹಿಡಿಯಲು ಆಗಲಿಲ್ಲವೆಂದು ' ಕ್ಷಮೆಯಾಚಿಸಿದ್ದೆವು .ನಾವು ಬೆಪ್ಪಾಗಿರುವದನ್ನು ಕಂಡು ಅವರೇ ಮಾತನಾಡಿದರು . 'ಪರವಾಗಿಲ್ಲ ಬಿಡ್ರಪ್ಪಾ ! ಎಲ್ಲರೂ ಗೊತ್ತು ಹಿಡಿಯುವದಕ್ಕೆ ನಾನೇನು ಫಿಲ್ಮ್ ನಟನೇನೂ ' ಅಂತ ಎಂದಿದ್ದರು . ಬಂದ ವಿಷಯವನ್ನು ಹೇಳಿದೆವು . ಅವರು ತುಂಬು ಹೃದಯದಿಂದ ಒಪ್ಪಿಕೊಂಡಿದ್ದರು. ಅಷ್ಟರಲ್ಲಿಯೇ ಅವರ ಪತ್ನಿಯವರು ಗರಂ ಚಹಾ ತಂದು ಇಟ್ಟಿದ್ದರು. ಚಹಾ ಕುಡಿದು ಮನೆಯನ್ನು ಬಿಟ್ಟಿದ್ದೆವು . ಅವರ ಸರಳ ಜೀವನದ ಶೈಲಿಯನ್ನು ಕಂಡು ನಾನು ದಂಗಾಗಿದ್ದೆ.
೧೫ ದಿನಗಳ ನಂತರ ಅವರನ್ನು ಕಾರ್ಯಕ್ರಮಕ್ಕೆ ಕರೆ ತರಲು ಕಾರು ತೆಗೆದುಕೊಂಡು ಹೋಗಿದ್ದೆವು. ಕಾರನ್ನು ಕಂಡು ಅವರೆಂದಿದ್ದರು ' ಇದಕ್ಕ್ಯಾಕ ಇಷ್ಟು ಖರ್ಚು ಮಾಡಿದ್ರಿ , ಅರ್ಧ ಘಂಟೆಗೊಂದ ಸಿಟಿ ಬಸ್ಸ ಅದಾವ ಬಸ್ಸಿನಾಗ ಹೋಗಬಹುದಿತ್ತಲ್ಲ?' ಎಂದು . ಆ ಮಾತುಗಳು ಅವರ ಸರಳ ಜೀವನಕ್ಕೆ ಇನ್ನೊಂದು ಸಾಕ್ಷಿಯಾಗಿದ್ದವು . ಅರ್ಧ ಘಂಟೆಯ ಕಾರು ಪಯಣದಲ್ಲಿ ನಮ್ಮ ಜೊತೆಗೆ ಎಷ್ಟೊಂದು ಸಲೀಸಾಗಿ ಮಾತನಾಡಿದ್ದರು . ಅವರಿಗೆ ತಾವೊಬ್ಬ ದೊಡ್ಡ ಕವಿ ಎಂಬ ಅಹಂಕಾರ ಸ್ವಲ್ಪವೂ ಇರಲಿಲ್ಲ . 
ಕೆಎಂಸಿ ಯ ಕನ್ನಡ ಸಂಘದ ಬಗ್ಗೆ ಮತ್ತು ಬೇಂದ್ರೆಯವರ ದಿನಾಚರಣೆ ಬಗ್ಗೆ ತುಂಬಾ ಸಂತೋಷವನ್ನು ವ್ಯಕ್ತಪಡಿಸಿದ್ದರು. ಬೇಂದ್ರೆಯವರ ಬಗ್ಗೆ ಅವರಿಗೆ ತುಂಬಾ ಗೌರವವಿತ್ತು . ಅವರ ಬಗ್ಗೆ ಮನಸು ಬಿಚ್ಚಿ ಮಾತನಾಡಿದ್ದರು ಕಾರ್ಯಕ್ರಮದಲ್ಲಿ . 
ಅಂಥ ಸರಳ ಮತ್ತು ಶಿಸ್ತಿನ ಕವಿ ಜೀವಿಯ ಜೊತೆಗಿನ ನನ್ನ ಸಣ್ಣ ಭೇಟಿ ಮತ್ತು ಅರ್ಧಘಂಟೆಯ ಕಾರು ಪಯಣ ನನ್ನ ಜೀವನದಲ್ಲಿ ಮರೆಯಲಾಗದ ಘಟನೆಯೊಲ್ಲೊಂದು . ಇಲ್ಲಿ ಅದನ್ನು ನೆನಪಿಸಿಕೊಳ್ಳಲು ಹೆಮ್ಮೆ ಎನಿಸುತ್ತಿದೆ.

~ ಶಿವ ಮೇಟಿ

ವಿಶ್ವಮಾನವ: ಜಿಮ್ ಹೇಯ್ನ್ಸ್- ಡಾ. ರಾಮಶರಣ್

“ಅನ್ನದಾತ ಸುಖೀಭವ" ಎಂದರು ನಮ್ಮ ಹಿರಿಯರು.ಯಾವುದೇ ಸಭೆ,ಸಮಾರಂಭ,ಹಬ್ಬ,ಸಂತೋಷ ಅಥವಾ ದುಃಖಗಳನ್ನು ಹಂಚಿಕೊಳ್ಳುವ ಆಚರಣೆಯ ಕಾರ್ಯಕ್ರಮಗಳಲ್ಲಿ ಆಹಾರದ ಪಾತ್ರ ಬಹುಮುಖ್ಯ. ಪ್ರಪಂಚದೆಲ್ಲೆಡೆಯಲ್ಲಿ,ಎಲ್ಲಾ ರೀತಿಯ ಜನರನ್ನು ಭೇದಭಾವವಿಲ್ಲದೆ ಒಂದುಗೂಡಿಸುವುದರಲ್ಲಿ ಆಹಾರಕ್ಕಿಂತ ದೊಡ್ಡ ಸಾಧನವಿಲ್ಲ.ಆಹಾರ ತರುವ ಆನಂದವನ್ನು ಗುರುತಿಸಿ, ಸ್ನೇಹಿತರನ್ನು, ಅಪರಿಚಿತರನ್ನು ಒಂದುಗೂಡಿಸಿದ ಸಜ್ಜನ ಜಿಮ್ ಹೇನ್ಸ್(Jim Haynes)ನ್ನು ಅನಿವಾಸಿ ಒದುಗರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ ರಾಂ-ಸಂ

ತಿಂಡಿ-ತಿನಿಸು ಎಂದಾಗ ಎಲ್ಲರ ಕಿವಿ ನಿಮಿರುವುದು ಸಹಜ. ಇತ್ತೀಚೆಗೆ ಅನಿವಾಸಿಯಲ್ಲಿ ಹರಿದ ಅಡುಗೆ ಮನೆಯ ಸರಣಿಯ ಯಶಸ್ಸು, ಅದಕ್ಕೆ ಸಮಾನಾಂತರವಾಗಿ ನಡೆಯುತ್ತಲೇ ಇರುವ ವಾಟ್ಸಾಪ್ ಸಂದೇಶ ಸರಪಣಿಗಳೇ ಇದಕ್ಕೆ ಸಾಕ್ಷಿ. ಬಾಲ್ಯದ ನೆನಪು, ಹರೆಯದಲ್ಲಿ ಸ್ನೇಹಿತರೊಡನೆ ಕಳೆದ ಕ್ಷಣಗಳೆಂಬ ಮುತ್ತುಗಳನ್ನು ಪೋಣಿಸಿ ಹಾರವನ್ನಾಗಿಸುವುದು ನಮ್ಮ ಆಹಾರದ ಮೇಲಿನ ಪ್ರೀತಿ ಎಂದೆನಿಸುವುದು ಹಲವು ಸಲ. ಚುಮು-ಚುಮು ನಸುಕಿನಲ್ಲಿ ಶಾಲೆಗೆ ಹೊರಡುವ ಮೊದಲು ಮನೆ ಮಕ್ಕಳನ್ನೆಲ್ಲ ಒಲೆಯ ಸುತ್ತ  ತರುವುದು ಅಮ್ಮ ಮಾಡುವ ತಿಂಡಿ. ಕ್ಲಾಸುಗಳ ನಡುವೆ ಕಾಲೇಜಿನ ಮಕ್ಕಳ ಕಾಲು ಸಾಗುವುದು ಕ್ಯಾಂಟೀನ್ ಕಡೆಗೆ. ಸಂಜೆ ಗೆಳೆಯರ ಗುಂಪು ಸೇರುವುದು ತಿಂಡಿ ಗಾಡಿಗಳಿದ್ದಲ್ಲಿ. ತಿಂಡಿ-ಪಾನೀಯಗಳ ಬುನಾದಿಯ ಮೇಲೆ ಬೆಳೆದ ಬಾಂಧವ್ಯ-ಗೆಳೆತನ ಜೀವನದುದ್ದ, ಬಳ್ಳಿಗೆ ಹಂದರದಂತೆ ಆಸರೆಯಾಗಿ ಭದ್ರತೆ ನೀಡುವುದು ಸುಳ್ಳೇ? ಅದಕ್ಕೆ ಅಲ್ಲವೇ ಇರುವುದು ನಾಣ್ಣುಡಿ: “ಮಾನವನ ಹೃದಯಕ್ಕೆ ಹಾದಿ ಆತನ ಹೊಟ್ಟೆ” ಎಂಬುದು? ಹಸಿದ ಹೊಟ್ಟೆ ಸಾಹಸಕ್ಕೆ ಹಾದಿ ತೋರುತ್ತದೆ. ಬೇಟೆಯಾಡಿ, ಸಂಗ್ರಹಿಸಿ ಹೊಟ್ಟೆ ಹೊರೆಯುವ ಯುಗದಿಂದ ಕುಳಿತಲ್ಲೇ ಬೇಕಾದ ತಿನಿಸು ತರಿಸಿ, ತಿನ್ನುವ ಸಿಗುವ ಯುಗಕ್ಕೆ ಮನು ಕುಲ ಕಾಲಿಟ್ಟಿದೆ. ಆದರೂ, ವಿಶೇಷ ತಿನಿಸಿಗಾಗಿ, ವಿಶಿಷ್ಟ ಅನುಭವಕ್ಕಾಗಿ  ಇಂದಿಗೂ ನೂರಾರು ಮೈಲಿ ಪ್ರಯಾಣ ಮಾಡುವವರಿದ್ದಾರೆ. ಇದೇ ಆಧಾರದ ಮೇಲೆ ಜಗದ್ವಿಖ್ಯಾತ ‘ಮಿಶೆಲಿನ್ ಗೈಡ್’ ಅಸ್ತಿತ್ವಕ್ಕೆ ಬಂತು. ನನಗೊಬ್ಬ ಗೆಳೆಯನಿದ್ದಾನೆ. ನಾವು ಮುಂಬೈನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೆವು. ಮುಂಬೈನಲ್ಲಿ ಯಾವ ಮೂಲೆಯಲ್ಲೂ ಊಟ-ತಿಂಡಿ ದುರ್ಲಭ ಎಂಬುದೇ ಇಲ್ಲ. ಅಂಥದ್ದರಲ್ಲಿ ಈತ ರಾತ್ರಿ ಪಾಳಿ ಮುಗಿದ ಮೇಲೆ ಕಿಕ್ಕರಿದ ರೈಲಿನಲ್ಲಿ ನೇತಾಡಿಕೊಂಡು ವಿ.ಟಿ. ಸ್ಟೇಷನ್ ಹತ್ತಿರವಿದ್ದ ತನ್ನ ನೆಚ್ಚಿನ ಹೋಟೆಲ್ಲಿನಲ್ಲಿ ಊಟ ಮಾಡಿ ಬರುತ್ತಿದ್ದ;  ಕೆಲವೊಮ್ಮೆ ಸ್ನೇಹಿತರನ್ನೂ ಸೇರಿಸಿಕೊಂಡು. ಇನ್ನೊಬ್ಬ ಗೆಳೆಯ ಖಯಾಲಿ ಬಂದಾಗೆಲ್ಲ, ಲಂಕಾಸ್ಟರ್ ನಿಂದ ಬ್ರಾಡ್ಫರ್ಡ್ ಗೆ ಗೆಳೆಯರ ಗುಂಪು ಕಟ್ಟಿಕೊಂಡು ಹೋಗುತ್ತಿದ್ದ. ಹೀಗೆ ಆಲೆಮನೆಗಳಲ್ಲಿ, ಚಹಾ ಅಡ್ಡಗಳಲ್ಲಿ, ಬಾರುಗಳಲ್ಲಿ  ಗೆಳೆತನಗಳು ಬೆಳೆದಿವೆ, ಬೆಳೆಯುತ್ತಲಿವೆ.  ಪಾರ್ಟಿ-ಸಮಾರಂಭಗಳ ನೆವದಲ್ಲಿ ಸಂಘ ಜೀವಿ ಮನುಜ ಬೆರೆಯುವ ಕಾರ್ಯದಲ್ಲಿ ತಿಂಡಿ-ತಿನಿಸುಗಳಿಲ್ಲದಿದ್ದರೆ ಕಳೆಯೇ ಇಲ್ಲ, ಕೊರತೆಯೇ ಜಾಸ್ತಿ.

ಇಷ್ಟೆಲ್ಲಾ ಪೀಠಿಕೆ ಹಾಕಿದ್ದಕ್ಕೆ ಒಂದು ಕಾರಣವಿದೆ. ಹೊಟ್ಟೆಯ ಹಾದಿಯಾಗಿ, ವಿಶ್ವ ಭಾತೃತ್ವವನ್ನು ಬೆಳೆಸಿದವನ ಕಥೆ ನಿಮ್ಮೊಂದಿಗೆ ಹಂಚಿಕೊಳ್ಳಲು.  ಅವನೇ 1933ರಲ್ಲಿ ಲೂಯಿಸಿಯಾನದಲ್ಲಿ ಜನಿಸಿದ ಜಿಮ್ ಹೇಯ್ನ್ಸ್. ಆತನ ತಂದೆ ಪೆಟ್ರೋಲಿಯಂ ಕಂಪೆನಿಯ ಉದ್ಯೋಗಿಯಾಗಿ ವೆನಿಝುಯೆಲದಲ್ಲಿದ್ದ. ಜಿಮ್ ತನ್ನ ಬಾಲ್ಯ, ಹದಿ ಹರೆಯವನ್ನು ಅಮೆರಿಕೆ-ವೆನಿಝುಯೆಲಾ ಪ್ರವಾಸದಲ್ಲಿ ಕಳೆದದ್ದು ಮುಂದೆ ಆತನ ಪ್ರವಾಸೀ ಮನಸ್ಥಿತಿಗೆ ಕಾರಣವಾಗಿರಬಹುದು. ತಂದೆಯ ಸಂಗ್ರಹದಲ್ಲಿದ್ದ ಪುಸ್ತಕಗಳು ಜಿಮ್ ನ ಮೇಲೆ ತುಂಬಾ ಪ್ರಭಾವ ಬೀರಿದ್ದವು. ಮಿಲಿಟರಿ ವಸತಿ ಶಾಲೆಯಲ್ಲಿದ್ದಾಗ ಸಾಹಿತ್ಯ ಸಂಘವನ್ನು ಕಟ್ಟಿದ್ದ ಜಿಮ್, ಅದ್ಭುತ ಸ್ನೇಹ ಜೀವಿ. ಆ ಶಾಲೆ ಅವನು ಸೇರಿದ್ದು ತನ್ನ ಗೆಳೆಯನಿದ್ದಾನೆಂದು. ಅಂತೆಯೇ ತನ್ನ ನ್ಯೂಯಾರ್ಕ್ ಪ್ರವಾಸಗಳಲ್ಲಿ ನಾಟಕ ನೋಡುವ ಗೀಳನ್ನೂ ಹತ್ತಿಸಿಕೊಂಡಿದ್ದ. ಕೆಲಸಕ್ಕಾಗಿ ವಾಯು ಸೇನೆಯನ್ನು ಸೇರಿದ್ದ ಜಿಮ್ ಲ್ಯಾನ್ಡ್ ಆಗಿದ್ದು ಎಡಿನ್ಬರದಲ್ಲಿ ರಶಿಯನ್ನರ

Jim Haynes obituary | Scotland | The Times
(ಚಿತ್ರ ಕೃಪೆ: ಗೂಗಲ್)

ಸಂದೇಶಗಳನ್ನು ಕದ್ದು ಕೇಳಲು. ಎರಡನೇ ವಿಶ್ವ ಯುದ್ಧ ಮುಗಿದಿತ್ತಷ್ಟೇ. ಎಡಿನ್ಬರದಲ್ಲಿ ಆಗ ತಾನೇ ತೆರೆದಿದ್ದ ಕಾಫಿ ಅಂಗಡಿ ಹಾಗೂ ಶಾಖಾಹಾರಿ ಉಪಹಾರ ಗೃಹವೊಂದು ಎಡಿನ್ಬರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ, ಉಪನ್ಯಾಸಕರ ನೆಚ್ಚಿನ ತಾಣಗಳಾಗಿದ್ದವು. ಎಡಿನ್ಬರ ವಿಶ್ವವಿದ್ಯಾಲಯ ಸೇರಿದ್ದ ಜಿಮ್ ಈ ತಾಣಗಳಲ್ಲಿ ತನ್ನ ಗೆಳೆಯರ ಬಳಗವನ್ನು ಬೆಳೆಸಿಕೊಂಡ. ಅಲ್ಲಿಯೇ ನೆಲೆಸಲು ನಿರ್ಧರಿಸಿ ಉದ್ಯೋಗಕ್ಕಾಗಿ ಪುಸ್ತಕದಂಗಡಿ ತೆಗೆಯುವುದೆಂದು ನಿರ್ಧರಿಸಿದ. ಬಸ್ಸಿನಲ್ಲಿ ಗೆಳೆಯನಾದ, ದೋಣಿ ಕಟ್ಟುವ ವ್ಯಕ್ತಿಯೊಬ್ಬ  ಅವನಿಗೆ ಅಂಗಡಿ ಕಟ್ಟಿ ಕೊಟ್ಟ. ಬ್ರಿಟನ್ನಿನ ಎಲ್ಲ ಪುಸ್ತಕ ವ್ಯಾಪಾರಿಗಳಿಗೆ ಪತ್ರ ಬರೆದು, ತನ್ನ ಅಂಗಡಿಗೆ ಪೇಪರ್ ಬ್ಯಾಕ್ ಪುಸ್ತಕಗಳನ್ನು ತರಿಸಿಕೊಂಡ. ಅದು ಸ್ಕಾಟ್ ಲ್ಯಾನ್ಡ್ ನ ಮೊದಲ ಪೇಪರ್ ಬ್ಯಾಕ್ ಪುಸ್ತಕದ ಅಂಗಡಿಯಾಗಿತ್ತು. ಬಂದವರಿಗೆ ಉಚಿತ ಕಾಫಿ-ಚಹಾ ಸರಬರಾಜಾಗುತ್ತಿತ್ತು. ಎಷ್ಟೋ ಕಡೆ ಸಿಗದ, ನಿಷೇಧಿಸಿದ ಪುಸ್ತಕಗಳೂ ಲಭ್ಯವಿದ್ದುದರಿಂದ ಅಂಗಡಿ ಬಲುಬೇಗ ಜನಪ್ರಿಯವಾಯಿತು. ಇದರ ನೆಲ ಮಾಳಿಗೆಯಲ್ಲಿ ನಾಟಕಗಳ ಪ್ರದರ್ಶನ ನಡೆಯುತ್ತಿತ್ತು. ಇದೇ “ಟ್ರಾವರ್ಸ್ ರಂಗಭೂಮಿ” ಯ ಆರಂಭ. ಆಯಸ್ಕಾಂತೀಯ ವ್ಯಕಿತ್ವದ ಜಿಮ್ ಕಲಾತ್ಮಕ ಗೆಳೆಯರೊಡಗೂಡಿ ತೆವಳುತ್ತಿದ್ದ ಎಡಿನ್ಬರ ಹಬ್ಬಕ್ಕೆ (Edinburgh festival) ಹೊಸ ಆಯಾಮ ನೀಡಿದ. ಇಂದು ಅದು “ಫ್ರಿನ್ಜ್” ಎಂದೇ ವಿಖ್ಯಾತವಾಗಿದೆ ಜಗತ್ತಿನೆಲ್ಲೆಡೆಯಿಂದ ಪ್ರತಿಭಾವಂತ ಕಾಲವಿದರನ್ನು ಆಕರ್ಷಿಸುತ್ತಿದೆ. ಟ್ರಾವರ್ಸ್ ರಂಗಭೂಮಿ ಇಂದಿಗೂ ಉತ್ತಮ ನಾಟಕಗಳನ್ನು ಪ್ರದರ್ಶಿಸುತ್ತಿದೆ.

ನಾಟಕ ಪ್ರದರ್ಶನವನ್ನು ಲಂಡನ್ನಿಗೆ ತೆಗೆದುಕೊಂಡು ಹೋಗುವ ಮಹದಾಸೆಯಿಂದ ಜಿಮ್ ಎಡಿನ್ಬರ ಬಿಟ್ಟಿದ್ದು 1966ರಲ್ಲಿ. ಅಲ್ಲಿ ನಾಟಕಗಳ ಪ್ರದರ್ಶನ ಮಾಡುತ್ತಾ ‘ಇಂಟರ್ನ್ಯಾಶನಲ್ ಟೈಮ್ಸ್’ ಎಂಬ ಪತ್ರಿಕೆ ಹಾಗು “ದಿ ಆರ್ಟ್ಸ್ ಕ್ಲಬ್” ಎಂಬ ಸಂಘವನ್ನು ಸ್ಥಾಪಿಸುತ್ತಾನೆ. ಇಲ್ಲಿ ಈತನ ಗೆಳೆಯರ ಬಳಗದಲ್ಲಿದ್ದವರು ಜಾನ್ ಲೆನನ್, ಯೋಕೋ ಓನೋ, ಡೇವಿಡ್ ಬೋವಿಯಂತಹ ದಿಗ್ಗಜಗಳು.  ಜಿಮ್ ಯಾರ ಉತ್ಸಾಹಕ್ಕೂ ನೀರೆರಚಿದವನಲ್ಲ. ಗೆಳೆಯರಿಂದ ಹೊಮ್ಮುವ ಸೃಜನಶೀಲ ಕಲ್ಪನೆಗಳಿಗೆ ಪ್ರೋತ್ಸಾಹ ನೀಡುವುದು ಆತನ ಜಾಯಮಾನ. ಇಂತಹ ಒಂದು ಯೋಜನೆಗೆ ಮಣಿದು, ನಾಟಕ ಪ್ರದರ್ಶನವನ್ನು 1969ರಲ್ಲಿ ಆಮ್ಸ್ಟರ್ಡಾಮಿಗೆ ಕೊಂಡೊಯ್ದ ಜಿಮ್ ನನ್ನು ಅಧ್ಯಾಪಕನಾಗಿ ಕರೆದಿದ್ದು ಪ್ಯಾರಿಸ್ ನಗರದ ಹೊಸ ಪ್ರಾಯೋಗಿಕ ವಿಶ್ವವಿದ್ಯಾಲಯ. ಎಲ್ಲ ರೀತಿಯ ವಿಚಾರಗಳಿಗೆ ಪೂರ್ವಗ್ರಹಗಳಿಲ್ಲದೇ ಮನಸ್ಸೊಡ್ಡುಕೊಳ್ಳುವ ಜಿಮ್ ನಂತಹ ವ್ಯಕ್ತಿಗೆ ಸರಿಯಾದ ಸಂಸ್ಥೆ, ಉದ್ಯೋಗ ಇದಾಗಿತ್ತು. ಮಾಮೂಲಿಯಾಗಿ ಜಿಮ್ ಎಲ್ಲರನ್ನೂ  ಸ್ವಾಗತಿಸುತ್ತ, ಮೈತ್ರಿ ಬೆಳೆಸುತ್ತ ಪ್ಯಾರಿಸ್ ನಗರದಲ್ಲೊಂದಾಗಿಬಿಟ್ಟ. ಹ್ಯಾಂಡ್ ಶೇಕ್ ಪ್ರಕಾಶನ, ಧ್ವನಿಸುರುಳಿ ಪತ್ರಿಕೆ (ಕ್ಯಾಸೆಟ್ ಮ್ಯಾಗಝಿನ್) ಗಳನ್ನ ಹುಟ್ಟು ಹಾಕಿ ಸಾಹಿತ್ಯ ಸೇವೆಯನ್ನು ಮುಂದುವರೆಸಿದ. ಸ್ವಚ್ಚಂಧ ಮನೋಭಾವನೆಯ ಜಿಮ್ಮನಿಗೆ ದೇಶಗಳ ನಡುವಿನ ಗಡಿ, ಬಾಂಧವ್ಯ ಮುರಿಯುವ ಅಡ್ಡಗೋಡೆಗಳಾಗಿ ಕಂಡಿದ್ದು ಆಶ್ಚರ್ಯವಲ್ಲ. ಸೀಮಾತೀತ ಜಗತ್ತನ್ನು ನಿರ್ಮಿಸುವ ಕನಸಿನಲ್ಲಿ ತನ್ನದೇ ಜಾಗತಿಕ ಪಾಸ್ಪೋರ್ಟ್ಗಳನ್ನು ಇಂಗ್ಲಿಷ್ ಹಾಗೂ ಎಸ್ಪರಾಂತೋ ಭಾಷೆಗಳಲ್ಲಿ ಛಾಪಿಸತೊಡಗಿದ. ತನ್ನ ಮನೆಗೆ ಬಂದವರಿಗೆ ಅವನ್ನು ಹಂಚುತ್ತಿದ್ದ. ಇದರಿಂದ ಎಷ್ಟೋ ಬಾರಿ ಪೊಲೀಸರಿಂದ ಎಚ್ಚರಿಕೆ ಬಂದರೂ ಆತ ಕೇಳಿರಲಿಲ್ಲ.  ಕೊನೆಯಲ್ಲಿ ಕೋರ್ಟ್ ಕಟ್ಟೆ ಏರಿದ ಮೇಲೆ ಈ ಕಾರ್ಯಕ್ಕೆ ತಡೆ ಬಂತು.

“ಎಲ್ಲರಿಗೂ ಏನಾದರೂ ಒಳ್ಳೆಯದನ್ನು ಮಾಡಬೇಕು” ಎನ್ನುವುದು ಜಿಮ್ ನ ಜೀವನಧ್ಯೇಯ. ಹಾಗಾಗೇ ಅವನನ್ನು ಹುಡುಕಿಕೊಂಡು ಜನ ಜಗತ್ತಿನ ಎಲ್ಲೆಡೆಯಿಂದ  ಬರುತ್ತಿದ್ದರು. ಅಮೇರಿಕೆಯಿಂದ ಒಬ್ಬಳು ಬ್ಯಾಲೆ ನರ್ತಕಿ ಸ್ನೇಹಿತನೊಬ್ಬನ ಸಲಹೆಯಂತೆ ಆಸರೆ ಕೋರಿ ಜಿಮ್ ನ ಮನೆಯ ಬಾಗಿಲು ತಟ್ಟಿದಳು. ಬಂದವಳ ಬಳಿ ದುಡ್ಡಿರಲಿಲ್ಲ. ಅದರ ಬದಲಾಗಿ ಜಿಮ್ ನ ಮನೆಯಲ್ಲಿರುವವರಿಗೆ ವಾರಕ್ಕೊಮ್ಮೆ ಅಡಿಗೆ ಮಾಡಿ ಹಾಕಲು ಶುರು ಮಾಡಿದಳು. ಜಿಮ್ ನ ಮನೆಯಲ್ಲಿ ಬಂದು ಹೋಗುವವರಿಗೆ ಬರವಿರಲಿಲ್ಲ. ಈ ಊಟಗಳೇ ಒಂದು ರೀತಿಯಲ್ಲಿ ಸಂಪ್ರದಾಯವಾಗಿ, ರವಿವಾರ ಸಂಜೆಯ ಔತಣ ಕೂಟವೆಂದೇ ಹೆಸರಾಯಿತು. ರವಿವಾರ ಪ್ಯಾರಿಸ್ಸಿನಲ್ಲಿದೀರಾ? ಜೊತೆ ಬೇಕೇ, ಗೆಳೆತನ ಬೆಳೆಸಬೇಕೇ? ಹಿಂದೆ-ಮುಂದೆ ನೋಡಬೇಡಿ, ಹದಿನಾಲ್ಕನೇ

Jim Haynes: A man who invited the world over for dinner - BBC News
ರವಿವಾರ ಸಂಜೆಯ ಔತಣ ಕೂಟ (ಚಿತ್ರ ಕೃಪೆ: ಗೂಗಲ್)

ಆರ್ಯಾಂಡಿಸ್ಮೆಂಟಿನಲ್ಲಿರುವ ಜಿಮ್ ಹೈನ್ಸ್ ನ ಅಡ್ಡೆಗೆ ಲಗ್ಗೆಇಡಿ. ಅಲ್ಲಿ ಸಂಜೆಯ ಹೊತ್ತಿಗೆ ನಲವತ್ತು- ಐವತ್ತು ಜನ ಇರೋದು ಗ್ಯಾರಂಟಿ. ನಿಮ್ಮ ವೇವ್ ಲೆಂಗ್ತಿಗೆ ಹೊಂದಿಕೆ ಆಗುವವರು ಸಿಕ್ಕೇ ಸಿಗುತ್ತಾರೆ. ಅವರು ಯಾವುದೊ ದೇಶದವರಾಗಿರಬಹುದು. ಹರಟೆ ಕೊಚ್ಚಲಿಕ್ಕೆ ಎಲ್ಲಿಯವರಾದರೇನು? ಯಾರಿಲ್ಲದಿದ್ದರೂ ಅಡ್ಡೆಯ ಒಡೆಯ ಜಿಮ್ ಎಲ್ಲರೊಡನೆ ಬೆರೆಯುತ್ತಾ ಬಾಯ್ತುಂಬ ನಗುತ್ತ ನಿಮಗೂ ಸಾಥ್ ನೀಡುತ್ತಾನೆ. ಉದರ ಪೂಜೆಗೆ ಬಿಸಿ ಊಟ ಕಾದಿರುತ್ತದೆ.  ನೀವೇ ಕಾಗದದ ಪ್ಲೇಟಿನಲ್ಲಿ ಬಡಿಸಿಕೊಂಡು, ಪ್ಲಾಸ್ಟಿಕ್ಕಿನ ಕಪ್ಪಿನಲ್ಲಿ ಪಾನೀಯ ಬಗ್ಗಿಸಿಕೊಂಡರಾಯಿತು. ಹೊಸ ಗೆಳೆಯರೊಡನೆ ಕಾಲ ಕಳೆದು, ಸ್ನೇಹ ಸೇತುವನ್ನು ಕಟ್ಟುವ ಸುಲಭ ಅವಕಾಶ ಮಾಡಿಕೊಟ್ಟಿದ್ದಾನೆ ವಿಶ್ವ ನಾಗರಿಕ ಜಿಮ್. ಅಲ್ಲಿ ಯಾರೂ ಹಣ ಕೇಳುವುದಿಲ್ಲ.  25 ಯುರೋ ವರೆಗೆ ಹಣಕೊಡಬಹುದು. ಆ ಹಣವೆಲ್ಲ ಉತ್ತಮ ಕಾರ್ಯಗಳಿಗೆ ವಿನಿಯೋಗಿಸಲ್ಪಡುತ್ತದೆ. ಹೋಗುವ ಮೊದಲು ಜಿಮ್ ಗೆ ಮಿಂಚಂಚೆ ಕಳಿಸಿಯೋ, ಮೆಸ್ಸೇಜ್ ಮಾಡಿಯೋ ಹೋಗಬಹುದು. ಬೇರೆ ಯಾವುದೇ ಶಿಷ್ಟಾಚಾರಗಳಿಲ್ಲ.  1970ರ ದಶಕದಲ್ಲಿ ಶುರುವಾದ ಔತಣ ಕೂಟ  ಸುಮಾರು 120,000  ಜನರನ್ನು ಆಕರ್ಷಿಸಿದೆ! ಮತ್ತೆ ಮತ್ತೆ ಬರುವವರೂ ಇದ್ದಾರೆ. ಇಲ್ಲಿ ಭೇಟಿಯಾಗಿ ಮದುವೆಯಾದವರು, ವಾಣಿಜ್ಯ ವ್ಯವಹಾರಗಳಲ್ಲಿ ಪಾಲುದಾರರಾದವರು, ಅಜೀವ ಸ್ನೇಹಿತರಾದವರು, ಹೀಗೆ ಎಲ್ಲ ಬಗೆಯ ಉದಾಹರಣೆಗಳು ಇಲ್ಲಿವೆ.

ಜಿಮ್ ನ ಮನೆಯಲ್ಲಿ ಊಟ-ತಿನಿಸುಗಳ ಸುತ್ತ ಬೆಸೆದ ಬಾಂಧವ್ಯಗಳಿಗೆ ಮಿತಿಯಿಲ್ಲ.ಹಾಗೆಂದೇ ಅವನನ್ನು ಸಾಮಾಜಿಕ ಜಾಲ ಪ್ರವರ್ತಕನೆಂದೇ ಕರೆಯುತ್ತಾರೆ. ಜಿಮ್ ನ ಅಪ್ಪ ಮದ್ಯ ವ್ಯಸನಿಯಾಗಿದ್ದ. ಜಿಮ್ ತನ್ನ 40ನೆಯ ವಯಸ್ಸಿನ ನಂತರ ಕಾಫಿ ಕುಡಿಯುವುದನ್ನೂ ಬಿಟ್ಟಿದ್ದ. ಆದರೆ ಅಪ್ಪ ಕಲಿಸಿದ ಪಾಠವೊಂದನ್ನು ಎಂದೂ ಮರೆತಿರಲಿಲ್ಲ: “ ನೀನು ಮಾಡಿದ ಉಪಕಾರವನ್ನು ಕೂಡಲೇ ಮರೆತು ಬಿಡು, ಇತರರು ನಿನಗೆ ಮಾಡಿದ ಉಪಕಾರವನ್ನು ಎಂದೂ  ಮರೆಯಬೇಡ”. ಸದಾ ಇತರರ ಸಹಾಯಕ್ಕೆ, ಸಾಹಿತ್ಯ- ಸಾಂಸ್ಕೃತಿಕ ರಂಗಗಳ ಅಭಿವೃದ್ಧಿಗೆ ಜೀವನವನ್ನೇ ಮುಡುಪಾಗಿಸಿದ ಜಿಮ್ ಜನವರಿ 6ರಂದು ಇಹ ಲೋಕ ತ್ಯಜಿಸಿದರೂ, ಆತನ ಸ್ನೇಹವನ್ನು  ಆತ ಜನರೊಡನೆ ಹಂಚಿಕೊಂಡ ರೊಟ್ಟಿಯನ್ನು ಮರೆಯಲು ಸಾಧ್ಯವೇ?

ರಾಂ

(ಉಲ್ಲೇಖ: ಬಿ.ಬಿ.ಸಿ., ಗಾರ್ಡಿಯನ್, Unfinished Histories, http://www.jim-haynes.com)