‘ತೋಟಗಾರಿಕೆ ಮತ್ತು ಟ್ಯೂಲಿಪ್ ಚರಿತ್ರೆ’ – ರಾಮಮೂರ್ತಿ(ಬೆಸಿಂಗ್ ಸ್ಟೋಕ್) ಅವರ ಬರಹ

ಪೀಠಿಕೆ: ಮನೆಗೊಂದು ಕೈತೋಟವಿದ್ದು ಬಗೆ ಬಗೆಯ ಸುಂದರ ಹೂಗಳನ್ನು ಬೆಳೆಸಿ ಪ್ರತಿ ಮುಂಜಾನೆ, ಸಂಜೆಯಲ್ಲಿ ಅವುಗಳ ಅಂದವನ್ನು ಕಣ್ ತುಂಬಿಕೊಂಡು, ಮನಸಿಗೆ ಮುದ ನೀಡುವ ಸುಮಗಳನ್ನು ಮನೆಗೆ ಬಂದ ಅತಿಥಿಗಳಿಗೆ ತೋರಿಸಿ ಹೆಮ್ಮೆ ಪಡುವ ಒಂದು ಅನುಭವ ವಿಶೇಷವಾದದ್ದು. ಬರಿ ಪುಷ್ಪಗಳಲ್ಲದೆ ಕೆಲವು ಕಾಯಿಪಲ್ಲೆ (ತರಕಾರಿ)ಗಳನ್ನೂ ಬೆಳೆದು ಅದರಲ್ಲೇ ಅಡುಗೆ ಮಾಡಿ ಸವಿಯುವ ರುಚಿ ಹೊರಗೆ ಅಂಗಡಿಗಳಿಂದ ತಂದು ಮಾಡಿದ ಅಡುಗೆಯಲ್ಲಿ ಸಿಗುವುದಿಲ್ಲ. ಇನ್ನೂ ಕೆಲವರು ಮಕ್ಕಳನ್ನು ಬೆಳೆಸಿದ ಹಾಗೆ ಹೂಗಳನ್ನು ಬಹಳ ಮುತುವರ್ಜಿಯಿಂದ ಬೆಳೆಸುವುದನ್ನು ನೋಡಿದ್ದೇವೆ.ಅದು ಪ್ರಕೃತಿ-ಮನುಷ್ಯರೊಡನೆ ಇರುವ ಅವಿನಾಭಾವ ಸಂಬಂಧದ ಸಂಕೇತ.
ಬೆಸಿಂಗ್ ಸ್ಟೋಕ್ ನಿವಾಸಿಯಾದ ರಾಮಮೂರ್ತಿ ಮತ್ತು ಅವರ ಪತ್ನಿ ಸೀತಾ ಅವರ ತೋಟಗಾರಿಕೆಯ ಅನುಭವವನ್ನು ಒಂದು ಬರಹದಿಂದ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಜೊತೆಗೆ ಟುಲಿಪ್ ಪುಷ್ಪದ ಚರಿತ್ರೆಯನ್ನು ತಿಳಿಸಿದ್ದಾರೆ. ನೀವೂ ಓದಿ, ನಿಮಗೂ ಕೈತೋಟ ಮಾಡುವ ಆಸೆ ಇದ್ದರೆ ಇಂದೇ ಆಗಲಿ.

 

ramamurthy7

ನಮ್ಮ ಸ್ನೇಹಿತರಿಗೆ ತಿಳಿದಹಾಗೆ ನನ್ನ ಪತ್ನಿ ಸೀತೆ ಯ ಅತ್ಯಂತ ಪ್ರೀತಿಯ ಹವ್ಯಾಸ ತೊಟಗಾರಿಕೆ. ಇಲ್ಲಿ ಅನೇಕ ತರಕಾರಿ ಮತ್ತು ಹೂವುಗಳ ವ್ಯವಸಾಯದಲ್ಲಿ ದಿನಕ್ಕೆ ಹಲವಾರು ಗಂಟೆ ನಮ್ಮ ತೋಟದಲ್ಲಿ ಕಾಲ ಕಳೆಯುವುದು ಅವಳ ವಾಡಿಕೆ. ಆಗಾಗ್ಗೆ green house ನಲ್ಲಿ ಗಿಡಗಳನ್ನು “ಮಾತನಾಡಿಸಿವುದನ್ನ” ನಾನು ಕಂಡಿದ್ದೇನೆ ಅಲ್ಲದೆ ನಾವು ಎರಡು ಮೂರು ದಿನ ಮನೆಯಲ್ಲಿ ಇಲ್ಲದೆ ಇದ್ದಾಗ ” ಅಯ್ಯೋ ಪಾಪ ಗಿಡಗಳಿಗೆ ನೀರು ಇಲ್ಲ” ಅಂತ ಸಂಕಟ ಪಡುವಳು . ಗಾರ್ಡನ್ ಸೆಂಟರ್ ಗೆ ಹೋದಾಗ ಮಕ್ಕಳು ಆಟದ ಸಾಮಾನುಗಳ ಅಂಗಡಿಗೆ ಹೋದಹಾಗೆ ಇರುವ ಎಲ್ಲಾ ಗಿಡಗಳನ್ನು ಖರೀದಿ ಮಾಡುವ ಅಸೆ. ಬೇಸಿಗೆಯಲ್ಲಿ ನಾವು ಬೆಳಯುವ ತರಕಾರಿಗಳು , ಕೊತ್ತಂಬರಿ ಸೊಪ್ಪು, ನವಿಲು ಕೋಸು, ಬದನೆಕಾಯಿ ಕುಂಬಳಕಾಯಿ ಇತ್ಯಾದಿ ಇಂದ ನಾವು self sufficient ಅಂತ ಹೇಳಬಹುದು.
ನನ್ನ ಕೆಲಸ ಏನು ಅಂತ ಕೇಳಿದಿರಾ ? ಮಾಲಿ ಅನ್ನುವ ಪದ ಕೇಳಿದ್ದೀರಾ ? ನೀವು ನಗರದಲ್ಲಿ ಬೆಳದಿದ್ದರೆ ನಿಮಗೆ ಈ ಪದ ಗೊತ್ತಿರುವುದಿಲ್ಲ. ಮಾಲಿ ಕೆಲಸ ಅಗೆಯುವುದು, ನೀರು ಹಾಕುವುದು lawn cut ಮಾಡುವುದು ಇತ್ಯಾದಿ labour intensive ಕೆಲಸಗಳು. ಇದು ನನ್ನ ಕೆಲಸ, Management ಕೆಲಸ ಅಲ್ಲ. ಕೆಲವರು ಹೇಳಿದರು ಇಷ್ಟೆಲ್ಲಾ ದುಡ್ಡು ಖರ್ಚು ಮಾಡಿ ತರಕಾರಿ ಬೆಳೆಯುವುದಕ್ಕಿಂತ ಕೊಂಡು ಬರುವುದು ಚೀಪರ್, ಆದರೆ ಅವರಿಗೇನು ಗೊತ್ತು ಇದರ ಮಜಾ.

ramamurthy1
ಸೀತಾ ರಮಮೂರ್ತಿಯವರ ತೋಟಗಾರಿಕೆಯ ’ಫಲ’ ಈ ತರಕಾರಿ ಮತ್ತು ಹೂವುಗಳು

ramamurthy5

 

 

ramamurthy8

ನಮಗೆ ಬಹಳ ವರ್ಷದಿಂದ ಹಾಲೆಂಡ್ ನಲ್ಲಿ ನಡೆಯುವ ಟ್ಯೂಲಿಪ್ ಹಬ್ಬಕೆ ಹೋಗುವ ಅಸೆ ಇತ್ತು ಅದು ಈ ವರ್ಷ ಸಾಧ್ಯವಾಯಿತು. ಕುಕಿಂಹಾಫ್ (Keukenhof ) ಆಮ್ ಸ್ಟರ್ ಡ್ಯಾಮ್ ನಿಂದ ೫೦ ಕಿಮ್ ದೂರದಲ್ಲಿ ಇರುವ ಊರು ಲಿಸ್ಸ್ (Lisse ). ಈ ತೋಟದ ಅರ್ಥ Kitchen ಗಾರ್ಡನ್. ಕಾರಣ ಇದರ ಹತ್ತಿರುವ ದೊಡ್ಡ ಕೋಟೆಮನೆ (castle) ಗೆ ಬೇಕಾದ್ದ ಮೂಲಿಕೆಗಳು (herbs ) ಈ ತೋಟದಿಂದ ಬರುತಿತ್ತು . ೧೯೪೯ ರಲ್ಲಿ ಆ ಊರಿನ ಪುರಸಭಾಧ್ಯಕ್ಷ (ಮೇಯರ್) ತೋಟವನ್ನು ಶುರುಮಾಡಿ ಹೂವಿನ ಮಾರಾಟ ಆರಂಭ ವಾಯಿತು ನಂತರ ಬೇರೆ ದೇಶಗಳಿಗೆ ರಫ್ತು ಮಾಡಿ ಈ ದೇಶ ಪ್ರಪಂಚದಲ್ಲಿ ಆಗ್ರ ಸ್ಥಾನವನ್ನು ಪಡೆಯಿತು.
ಆದರೆ ಈ ಟ್ಯೂಲಿಪ್ ( Tulipa, botanical name ) ಹೂವು ಹಾಲೆಂಡ್ ದೇಶಕ್ಕೆ ಸೇರಿದ್ದಲ್ಲ. ಇದರ ಮೂಲ ಈಗಿನ ಟರ್ಕಿ, ಹಿಂದಿನ ಆಟೋಮನ್ ರಾಷ್ಟ್ರ ಟ್ಯೂಲಿಪ್ ಹೆಸರು ಪರ್ಷಿಯನ್ ಭಾಷೆಯ ಪೇಟ (ರುಮಾಲು ) ದಿಂದ ಬಂದಿದೆ ಅಂತ ಕೆಲವರ ಅಭಿಪ್ರಾಯ. ಹದಿನಾರನೇ ಶತಮಾನದಲ್ಲಿ ಇದರ ಗಡ್ಡೆಯನ್ನು ತಂದು ಹಾಲಂಡ್ ನಲ್ಲಿ ಬೆಳಸಿದರು ನಂತರ ೧೫೯೨ ರಲ್ಲಿ ಇದರ ಬಗ್ಗೆ ಒಂದು ಪುಸ್ತಕ ಪ್ರಕಟವಾದಾಗ ಈ ಹೂವು ಪ್ರಚಾರಕ್ಕೆ ಬಂತು. ಹದಿನೇಳನೆ ಶತಮಾನದಲ್ಲಿ ಟ್ಯೂಲಿಪ್ ಉನ್ಮಾದ ( Tulip mania) ಶುರುವಾಗಿ ಇದು ಚಲಾವಣೆಯ ನಾಣ್ಯವೂ ಆಗಿ ಈ ದೇಶದಲ್ಲಿ ಹಣಕಾಸಿನ ಪರಿಸ್ಥಿತಿ ಕೆಟ್ಟು ಒಂದು ಕ್ರಾಂತಿಯೇ ಆರಂಭವಾಯಿತು. ಇದಕ್ಕೆ ಕಾರಣ ಈ ಗಡ್ಡೆ ಗಳನ್ನು ಕೊಳ್ಳುವರು ಜಾಸ್ತಿ ಆಗಿ ಇದರ ಬೆಲೆಯೂ ಹೆಚ್ಚಾಯಿತು ೧೬೨೪ನಲ್ಲಿ ಕೆಂಪು ಮತ್ತು ಬಿಳಿ ಹೂವಿನ ಕೆಲವು ಗಡ್ಡೆಗಳ ಬೆಲೆ ೧೨೦೦ ಫ್ಲ್ಯಾರಿನ್ , ಇದು ಒಂದು ಗಡ್ಡೆಯ ಬೆಲೆ !! ಆಗ ವರ್ಷದ ವರಮಾನ ಒಬ್ಬನಿಗೆ ೧೫೦ ಫ್ಲ್ಯಾರಿನ್ ಮಾತ್ರ. ೧೬೩೭ ನಲ್ಲಿ ಸಿಕ್ಕಿದ ದಾಖಲೆ ಪ್ರಕಾರ ಒಂದು ಗಡ್ಡೆ ಮೌಲ್ಯಕ್ಕೆ ಒಂದು ಮನೆಯನ್ನೆ ಖರೀದಿ ಮಾಡಬಹುದಾಗಿತ್ತು ಈ ಪರಿಸ್ಥಿತಿಯಿಂದ ಕೊನೆಗೆ ಆರ್ಥಿಕ ಕುಸಿತವೂ ಆಯಿತು (Market crash ).
ಮೊಘಲ್ ಸಾಮ್ರಾಜ್ಯ ವನ್ನು ಸ್ಥಾಪಿಸಿದ ಬಾಬರ್ ಈ ಹೂವನ್ನು ಭಾರತಕ್ಕೆ ತಂದ ಅಂತ ದಾಖಲೆ ಇದೆ.

 ಕುಕಿಂಹಾಫ್ ತೋಟದಲ್ಲಿ ಸುಮಾರು ೭ ಮಿಲಿಯಾನ್ ಗಡ್ಡೆ ಗಳನ್ನ ಆಕ್ಟೋಬರ್/ನವಂಬರ್ ತಿಂಗಳಲ್ಲಿ ನೆಲದಲ್ಲಿ ಹೂಳಿದರೆ  ಮಾರ್ಚ್ ತಿಂಗಳಿಗೆ ಹೂವು ಬಿಡುವುದಕ್ಕೆ ಶುರುವಾಗಿ ಮೇ ನಲ್ಲಿ ಚೆನ್ನಾಗಿ ಅರಳುತ್ತೆ, ಈ ತೋಟವನ್ನು ನೋಡುವ  ಸಮಯ ಏಪ್ರಿಲ್ ಕೊನೆ ಅಥವಾ ಮೇ ತಿಂಗಳ ಮೊದಲನೇ ವಾರ.  ಟ್ಯೂಲಿಪ್ ತೋಟ ಸುಮಾರು ೮೦ ಎಕ್ಕರೆ ವಿಸ್ತರಣ.  ಮಾರ್ಚ್ ನಿಂದ ಮೇ ತಿಂಗಳು ಇಲ್ಲಿ ಅರಳಿರುವ  ಟ್ಯೂಲಿಪ್ ನೋಡುವುದಕ್ಕೆ ಕೋಟ್ಯಂತರ ಜನಗಳು ಬರುತ್ತಾರೆ. ಈ ತೋಟದಲ್ಲಿ ಸುಮಾರು ೭೫ ವಿವಿಧ ಟ್ಯೂಲಿಪ್ ಗಳನ್ನು ಬೆಳಸುತ್ತಾರೆ

ನಿಮಗೆ ತೋಟಗಾರಿಕೆಯಲ್ಲಿ ಆಸಕ್ತಿ ಇದ್ದರೆ ಈ ವರ್ಷ ಅಕ್ಟೊಬರ್ ಅಥವಾ ನವೆಂಬರ್ ತಿಂಗಳಲ್ಲಿ ಗಡ್ಡೆಗಳನ್ನು  ತಂದು ನೆಡಿ ಮುಂದಿನ ವರ್ಷ ಮಾರ್ಚ್ ನಲ್ಲಿ ಸೊಗಸಾದ ಹೂವುಗಳನ್ನು ನೋಡಿ ಆನಂದ ಪಡಬಹುದು.

 

ಲೇಖನ:  ಬೇಸಿಂಗ್ ಸ್ಟೋಕ್  ರಾಮಮೂರ್ತಿ 

 

    ಚಿತ್ರಕೃಪೆ: ರಾಮಮೂರ್ತಿ(attributed) , ಗೂಗಲ್

ಫ್ಯಾಬರ್ಜೆ -*ಒಂದು ಮೊಟ್ಟೆಯ ಕಥೆ! ಬರೆದವರು ಶ್ರೀವತ್ಸ ದೇಸಾಯಿ

ಆ* ಹೆಸರಿನ ಸಿನಿಮಾದಲ್ಲಿ ಬರುವವನಂತೆ ನನ್ನೂರು ಮಂಗಳೂರು ಅಲ್ಲದಿದ್ದರೂ, ನನ್ನ ತಲೆಯನ್ನು ನೋಡಿ ಕೆಲವರು ಮೊಟ್ಟೆ ಅಂತ ಕರೆದರೆ, ನನ್ನೂರಾದ ಧಾರವಾಡದಲ್ಲಿ (ಅಲ್ಲಿ ಮರಾಠಿ ಮತ್ತು ಹಿಂದಿ ಬಳಕೆ ಸಹ ಉಂಟು) ಅರವತ್ತರ ಅರಳು-ಮರಳು ದಾಟಿದ ನನ್ನ ಹಳೆಯ ಮಿತ್ರರು ’ಟಕಲೂ’ ಎಂದು ಕರೆದದ್ದುಂಟು. ಆದರೆ ಈ ಲೇಖನ ನನ್ನ ಬಗ್ಗೆಯ ಕಥೆಯಲ್ಲ. ನಾನು ಬರೆಯುತ್ತಿರುವದು ರಷ್ಯಾದ ಸುಪ್ರಸಿದ್ಧ ಫ್ಯಾಬರ್ಜೆ(Faberge̕ ) ಮೊಟ್ಟೆಯ ಕಥೆ.

ಇತ್ತೀಚೆಗೆ ನಾನು ರಷ್ಯಾದ ಅತ್ಯಂತ ಆಕರ್ಷಕ ಮಹಾನಗರವಾದ ಸೇಂಟ್ ಪೀಟರ್ಸ್ ಬರ್ಗ್ ಗೆ ಭೆಟ್ಟಿಯಿತ್ತಾಗ ಫುಟ್ಬಾಲ್ ವಿಶ್ವಕಪ್ಪಿನ ಜ್ವರ ಇಳಿದಿತ್ತು. ಅಲ್ಲಿಯ ಸುಪ್ರಸಿದ್ಧ ಹರ್ಮಿಟೇಜ್ ಮ್ಯೂಜಿಯಂ. ಕ್ಯಾಥರಿನ್ ಪ್ಯಾಲೆಸ್, ಪೀಟರ್ಹಾಫ್ ಪ್ಯಾಲೇಸ್ ಇವೆಲ್ಲವನ್ನು ನೋಡಿಯಾಯಿತು. ಆದರೆ ಕಣ್ಣಿಗೆ ಒತ್ತಿದ್ದು, ಮನಸ್ಸನ್ನು ಸೆಳೆದದ್ದು ಮಾತ್ರ Faberge̕ Museum ನಲ್ಲಿಯ ಫ್ಯಾಬರ್ಜೆ ಮೊಟ್ಟೆಗಳು ಮತ್ತು ಅದರ ಇತಿಹಾಸ.

ಅವರ ಹೆಸರಿನ ಕೊನೆಯಲ್ಲಿಯ ಅಕ್ಸೆಂಟ್ accent (e̕ ) ಹೇಳುವಂತೆ ಫ್ಯಾಬರ್ಜೆ ಮನೆತನದ ಮೂಲ ಫ್ರಾನ್ಸ್. ಅವರು ಪ್ರೋಟೆಸ್ಟಂಟ್ ಕ್ರಿಶ್ಚಿಯನ್ನರು. ಅಂದರೆ ವಲಸೆ ಹೋದ ಹ್ಯೂಗೆನಾಟ್, (ಅಥವಾ ಹ್ಯೂಗೆನೋ) (Huguenots) ಪಂಗಡಕ್ಕೆ ಸೇರಿದವರು.  ಹದಿನೇಳನೆಯ ಶತಮಾನದಲ್ಲಿಕ್ಯಾಥಲಿಕ್ ಫ್ರಾನ್ಸ್ ದಲ್ಲಿ ಅನ್ಯರ ಕಾಟ ಸಹಿಸಲಾರದೆ ಪ್ರೋಟೆಸ್ಟಂಟ್ ಕ್ರಿಶ್ಚಿಯನ್ನರು ಯೂರೋಪಿನ ಬೇರೆ ಬೇರೆ ದೇಶಕ್ಕೆ ಹೋಗಿ ಆಶ್ರಯ ಪಡೆದರು. ಕೆಲವರು ಬೇರೆ ಖಂಡಗಳಿಗೂ ಹೋದದ್ದುಂಟು. ಆಗಿನ ರಷ್ಯದಲ್ಲಿ ಫ್ರೆಂಚ್ ಸಂಬಂಧವಿದ್ದುದರಿಂದ ಫ್ಯಾಬರ್ಜೆ ರಷ್ಯಕ್ಕೆ ಬಂದರು. ಅವರಲ್ಲಿ ಗೂಸ್ಟಾವ್ ಫ್ಯಾಬರ್ಜೆ ಒಬ್ಬ ಅಕ್ಕಸಾಲಿಗ. ಆತ ಸೇಂಟ್ ಪೀಟರ್ಸ್ ಬರ್ಗ್ ದಲ್ಲಿ ಒಂದು ಅಂಗಡಿ ಸ್ಥಾಪಿಸಿದ. ಆತನ ಮಗನೇ ಮುಂದೆ ಪ್ರಸಿದ್ಧಿ ಪಡೆದ ಪೀಟರ್ ಕಾರ್ಲ್ ಫ್ಯಾಬರ್ಜೆ.

Imperial Coronation Faberge Egg
ಕಾರ್ಲ್ ಫ್ಯಾಬರ್ಜೆ (Photo: in Public Domain)

ಫ್ಯಾಬರ್ಜೆ ಮೊಟ್ಟೆಗಳ ಖ್ಯಾತಿ ಶುರುವಾದದ್ದು ರಷ್ಯಾದ ಮೂರನೆಯ ಅಲೆಕ್ಸಾಂಡರ್ ಝಾರ್ ಚಕ್ರವರ್ತಿ 1885 ರಲ್ಲಿ ತನ್ನ ಪತ್ನಿ ಮರಿಯಾಗೆ ಪೀಟರ್ ಕಾರ್ಲ್ ಫ್ಯಾಬರ್ಜೆ (ಮುಂದೆ ಬರೀ ಕಾರ್ಲ್ ಎಂದೇ ಆತನನ್ನು ಕರೆದರು) ತನ್ನ ಕುಶಲತೆಯಿಂದ ರಚಿಸಿದ “ಹೆನ್ ಎಗ್” ( Hen egg ) ಎಂಬ ಫ್ಯಾಬರ್ಜೆ ಮೊಟ್ಟೆ ಕೊಟ್ಟಾಗ. ಝಾರನ ಕರಾರಿನ ಪ್ರಕಾರ ಅದರಲ್ಲಿ ಒಂದು “ಸರ್ಪ್ರೈಸ್” ಸಹ ಇತ್ತು. ನೋಡಲಿಕ್ಕೆ ಮೇಲೆ ಸಾದಾ ಎನಾಮಲ್ಲಿನ ಬಿಳಿ ಮೊಟ್ಟೆಯಂತಿದ್ದರೂ ಅದನ್ನು ಬಿಡಿಸಿದರೆ ಒಳಗೆ ಬಂಗಾರದ ಹಳದಿ ಯೋಕ್ (ಲೋಳೆ), ಅದು ಎರಡು ಹೋಳಾದಾಗ ಒಳಗೆ ಒಂದು ಪುಟ್ಟ ಬಂಗಾರದ ಕೋಳಿ, ಅತ್ಯಂತ ಕುಸುರಿನ ಕೆಲಸದ್ದು. ಡೇನಿಶ್ ರಾಜಕುಮಾರಿಯಾಗಿದ್ದ ಮರಿಯಾಗೆ, ಮತ್ತು ಅವಳ ಪತಿಗೆ ಆದ ಸಂತೋಷಕ್ಕೆ ಪಾರವೇ ಇಲ್ಲ. ಇದಾದ ನಂತರ ಕಾರ್ಲ್ ಅಧಿಕೃತವಾಗಿ ಅರಮನೆಯ ಕುಂದಣಗಾರನೆನಿಸಿಕೊಂಡ. ಅಂದು ಪ್ರಾರಂಭವಾದ ಪರಂಪರೆ 1917 ರ ವರೆಗೆ ಮುಂದುವರೆಯಿತು. ಪ್ರತಿವರ್ಷ ಈಸ್ಟರ್ ಸಮಯಕ್ಕೊಂದರಂತೆ 50 ’’ಇಂಪೀರಿಯಲ್ ಮೊಟ್ಟೆ”ಗಳು ಹುಟ್ಟಿದವು ‘ಹೌಸ್ ಆಫ್ ಫ್ಯಾಬರ್ಜೆ’ ಸಂಸ್ಥೆಯಿಂದ. ಝಾರ್ ಅಲೆಕ್ಸಾಂಡರ್ ನಂತರ ಪಟ್ಟಕ್ಕೆ ಬಂದ ಎರಡನೆಯ ನಿಕೋಲಸ್ ತನ್ನ ತಾಯಿಗೆ 30 ಮತ್ತು ಪತ್ನಿ (ಝರಿನ)ಗೆ 20 ಮೊಟ್ಟೆಗಳನ್ನು ಉಡುಗೊರೆಯಾಗಿ ಕೊಟ್ಟ ದಾಖಲೆಯಿದೆ. ದುರ್ದೈವವಶಾತ್ ಬೋಲ್ಶೆವಿಕ್ ಕ್ರಾಂತಿಯ ನಂತರ ಫ್ಯಾಬರ್ಜೆ ಕಾರ್ಯಾಗಾರವನ್ನು ರಾಷ್ಟ್ರೀಕರಣ ಮಾಡಲಾಯಿತು. 1918ರಲ್ಲಿ ಆ ಮನೆತನ ರಷ್ಯಾದಿಂದ ಹೊರಬಿದ್ದಿತು. ಕಾರ್ಲ್ನ ಮೊಮ್ಮಗ ಥಿಯೋ ಲಂಡನ್ನಿನಲ್ಲಿ ಹೌಸ್ ಆಫ್ ಪ್ಯಾಬರ್ಜೆ ಇಟ್ಟುಕೊಂಡಿರುವನೆಂದು ತಿಳಿದುಬರುತ್ತದೆ. ಇಂಗ್ಲೆಂಡಿನ ರಾಣಿಯ ಹತ್ತಿರ ಮೂರು ಇಂಪೀರಿಯಲ್ ಮೊಟ್ಟೆಗಳಿವೆ. ಇನ್ನುಳಿದ ದೊಡ್ಡ ಸಂಗ್ರಹ ಮಾಸ್ಕೋದಲ್ಲಿ (10), ಮತ್ತು ಅಮೇರಿಕ, ಯೂರೋಪಿನ ದೇಶಗಳಲ್ಲಿ ಒಂದೆರಡು ಕಾಣಲು ಸಿಗುತ್ತವೆಯಂತೆ.

ರಿನೇಸ್ಸಾನ್ಸ್ (Renaissance) ಮೊಟ್ಟೆ
ರೋಮನಾಫ್ ಮನೆತನದ ಲಾಂಛನ ಗಂಡ ಭೇರುಂಡವನ್ನು ಹೋಲುತ್ತದೆ
ರೋಸ್ ಬಡ್ ಮೊಟ್ಟೆ
ಬೇ ಟ್ರಿ ಮೊಟ್ಟೆ

 

 

 

 

 

ಒಂದೊಂದು ಮೊಟ್ಟೆಯೂ ಒಂದು ಗೇಣುದ್ದ, ಅಥವಾ ಒಂದು ಸಣ್ಣ ತೆಂಗಿನಕಾಯಿಯಷ್ಟು ದೊಡ್ಡದು. ಎರಡೂ ಕೈಜೋಡಿಸಿ ಬೊಗಸೆಯಲ್ಲಿ ಹಿಡಿದುಕೊಳ್ಳಬಹುದು, ಪರವಾನಗಿ ಸಿಕ್ಕರೆ! ಹೊರಗಡೆ ಎನಾಮಲ್ ಕವಚ, ಅದರ ಮೇಲೆ ಬಂಗಾರದ ಕುಸುರಿನ ಕೆಲಸ, ಹೊರಗೂ ಒಳಗೂ ರತ್ನಖಚಿತ ವಸ್ತುಗಳು, ಹೂ ಮೊಗ್ಗುಗಳು, ಚಲಿಸುವ ರಾಯಲ್ ಕೋಚ್, ಬಂಗಾರದ ಗಡಿಯಾರ, ಇತ್ಯಾದಿ. ಒಂದು ಕಾಲಕ್ಕೆ ಇಂಥ ಅನರ್ಘ್ಯ ರತ್ನಖಚಿತ ವಸ್ತುಗಳ ತಯಾರಿಕೆಗಾಗಿ ಕಾರ್ಲ್ ಫ್ಯಾಬರ್ಜೆ ಐದು ನೂರಕ್ಕೂ ಹೆಚ್ಚು ಕೆಲಸಗಾರರನ್ನಿಟ್ಟಿದ್ದನಂತೆ. ಒಂಬತ್ತು ಫ್ಯಾಬರ್ಜೆ ಮೊಟ್ಟೆಗಳು ಮತ್ತು ನೂರೆಂಬತ್ತರಷ್ಟು ಬೇರೆ ಕುಶಲ ಕೈಗಾರಿಕೆಯ ವಸ್ತುಗಳನ್ನು ಸೇಂಟ್ ಪೀಟರ್ಸ್ ಬರ್ಗ್ ನ ಮ್ಯೂಸಿಯಂನಲ್ಲಿ ನೋಡಿದಾಗ ಎರಡು ಕಣ್ಣು ಒಂದೆರಡು ಗಂಟೆಗಳ ಸಮಯ ಸಾಲಲಿಲ್ಲ. ರಷ್ಯದ ಲಕ್ಷಾಧೀಶ ವಿಕ್ಟರ್ ವೆಕ್ಸೆಲ್ ಬರ್ಗ್ 2013 ರಲ್ಲಿ ಈ ಫೋರ್ಬ್ಸ್ ಸಂಗ್ರಹವನ್ನು ನೂರು ಮಿಲಿಯ ಡಾಲರಿಗೆ ಕೊಂಡು ಈ ವಸ್ತುಸಂಗ್ರಹಾಲಯದಲ್ಲಿಟ್ಟಿದ್ದಾನೆ. ಜಗತ್ತಿನಲ್ಲಿ ಇವುಗಳಿಗಿಂತ ಉತ್ಕೃಷ್ಟ ಆಭರಣಗಳಿಲ್ಲವೆಂದು ನಂಬಿ ರಷ್ಯನ್ ಕಲೆ, ಸಂಸ್ಕೃತಿ ಮತ್ತು ಇತಿಹಾಸವನ್ನು ಕಾಯ್ದಿಡುವದಕ್ಕೋಸ್ಕರ ಮತ್ತು ಜನರಿಗೆ ಇದರ ಲಾಭವಾಗಲಿ ಎಂದುತೆರೆದಿಟ್ಟಿದ್ದಾನೆ. ಅವಕಾಶ ಸಿಕ್ಕರೆ ನೀವೂ ನೋಡಿಬನ್ನಿರಿ.

 

 

 

 

ಲೇಖನ ಮತ್ತು ಉಳಿದೆಲ್ಲ ಚಿತ್ರಗಳು ಮತ್ತು ವಿಡಿಯೋ: ಶ್ರೀವತ್ಸ ದೇಸಾಯಿ