ಕೊಡಗಿನ ರಾಜಕುಮಾರಿ ಗೌರಮ್ಮ ವಿಕ್ಟೋರಿಯ- ಶ್ರೀ.ರಾಮ ಮೂರ್ತಿ

ಪ್ರಿಯ ಓದುಗರೇ !!
೧೮ನೇ ಶತಮಾನದ ಬ್ರಿಟಿಷರ ಆಳ್ವಿಕೆಯ ಕಾಲಾವಧಿಯಲ್ಲಿ ನಮ್ಮ ದೇಶದ ಅನೇಕ ರಾಜ್ಯಗಳನ್ನು ಹಂತ ಹಂತವಾಗಿ ತಮ್ಮ ಕಪಟತನದಿಂದ ಆಕ್ರಮಿಸಿ ಅವರ ಕೈವಶ ಮಾಡಿಕೊಂಡರು.ಆ ಪಟ್ಟಿಯಲ್ಲಿ ಕೊಡಗು ಪ್ರಾಂತ್ಯವೂ ಸೇರ್ಪಟ್ಟು ಇದೇ ಕಾಲಾವಧಿಯಲ್ಲಿ ನಡೆದ ಕೊಡಗು ಪ್ರಾಂತ್ಯದ ರಾಜಮನೆತನದ ಒಂದು ವಿಶೇಷ ಐತಿಹಾಸಿಕ ಘಟನೆಯನ್ನು ಶ್ರೀ. ರಾಮಮೂರ್ತಿ ರವರು ‘ಕೊಡಗಿನ ರಾಜಕುಮಾರಿ ಗೌರಮ್ಮ ವಿಕ್ಟೋರಿಯಾ’ ಎಂಬ ಶೀರ್ಷಿಕೆಯ ಈ ವಿಶೇಷ ಲೇಖನದಲ್ಲಿ ವಿಶ್ಲೇಷಿಸಿದ್ದಾರೆ. ಓದಿ ಪ್ರತಿಕ್ರಿಯಿಸಿ. -ಸವಿ.ಸಂ

ಕೊಡಗಿನ ರಾಜಕುಮಾರಿ ಗೌರಮ್ಮ ವಿಕ್ಟೋರಿಯ 

ಕೆಲವು  ವಾರಗಳ ಹಿಂದೆ ನಡೆದ ಟಿ.ವಿ ಸಂದರ್ಶನದಲ್ಲಿ ಮೆಗನ್ ಮಾರ್ಕಲ್ (Duchess of Sussex) ಇಂಗ್ಲೆಂಡ್  ರಾಜಮನೆತನದಲ್ಲಿ ವರ್ಣದ್ವೇಷ ಇದೆ ಎಂದು ದೂರಿದ್ದಳು . ಇಂತಹ ಅಪವಾದನೆ ಹೊಸದೇನಿಲ್ಲ ಬಿಡಿ. ವಿಕ್ಟೋರಿಯ ರಾಣಿ (೧೮೦೯-೧೯೦೧) .  ಅಬ್ದುಲ್ ಕರೀಮ್ ಎಂಬುವನನ್ನು ಭಾರತದಿಂದ ತನ್ನ ಸೇವಕನಾಗಿ ಕೆಲಸ ಮಾಡಲು ಕರೆಸಿಕೊಂಡ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ , ಇವನನ್ನು ಕೀಳು ಮಟ್ಟದಲ್ಲಿ ನೋಡಿದ್ದು ವಿಕ್ಟೊರಿಯಾ ರಾಣಿ ಅಲ್ಲ, ಅವಳ ಆಡಳಿತಲ್ಲಿದ್ದವರು, ರಾಣಿಗೆ ಇವನು ಅಚ್ಚುಮೆಚ್ಚಾನಾಗಿದ್ದ ಮತ್ತು ಅವಳಿಗೆ ಉರ್ದು ಭಾಷೆಯನ್ನೂ ಕಲಿಸಿದ. ಇಷ್ಟು ಸಲಿಗೆ ಇದ್ದಿದ್ದು ಅನೇಕರಿಗೆ ಸಹಿಸುವುದು ಆಗಲಿಲ್ಲ,  ರಾಣಿ ಮರಣವಾದ್ದ ಕೂಡಲೇ  ಆಗತಾನೆ ಪಟ್ಟಕ್ಕೆ ಬಂದಿದ್ದ ಎಡ್ವರ್ಡ್ ೭ ಇವನನ್ನು ಮನೆಯಿಂದ ಹೊರಗೆ ಹಾಕಿ ಭಾರತಕ್ಕೆ ಹಿಂತಿರುಗವಂತೆ ಆಜ್ಞೆ ಮಾಡಿದ. 

ಚಿಕ್ಕವೀರರಾಜೇಂದ್ರ (೧೮೦೫-೧೮೫೯) ೧೮೩೪ರಲ್ಲಿ ಬ್ರಿಟಿಷರು, ಅಂದರೆ ಈಸ್ಟ್ ಇಂಡಿಯ ಕಂಪನಿಯ ಸೈನ್ಯ  , ಕೊಡಗು ಪ್ರಾಂತ್ಯಕ್ಕೆ ನುಗ್ಗಿ  ಅರಮನೆ ಲೂಟಿ ಮಾಡಿ ಅರಸನನ್ನು  ಸೆರೆ ಹಿಡಿದು  ಅವನ ಪರಿವಾರದೊಂದಿಗೆ ಬೆನಾರಿಸ್ (ಕಾಶಿ) ಪಟ್ಟಣಕ್ಕೆ ಗಡಿಪಾರು ಮಾಡಿದರು, ಇಲ್ಲಿ ಈಸ್ಟ್ ಇಂಡಿಯಾ ಕಂಪನಿಯ ರಾಜಕೀಯ ಸೆರೆಯಲ್ಲಿ (Political Prisoner)  £೬೦೦೦ (೬೦೦೦೦ ರೂಪಾಯಿ )  ವರಮಾನದಿಂದ ಅವನ ಕೆಲವು ರಾಣಿಯರು ಮತ್ತು ಸೇವಕರು ನೆಲಸಿದರು.  ಇಲ್ಲಿ ಗೌರಮ್ಮ ೪/೭/ ೧೮೪೧ ನಲ್ಲಿ ಜನಸಿದಳು, ಆದರೆ ಇವಳ ತಾಯಿ, ರಾಜನ ನೆಚ್ಚಿನ ರಾಣಿ,  ಕೆಲವೇ ದಿನಗಳಲ್ಲಿ ಕಾಲವಾದಳು. ತಾಯಿ ಇಲ್ಲದ ಮಗಳಮೇಲೆ ಇವನಿಗೆ ಅತ್ಯಂತ  ಪ್ರೇಮ ಬೆಳೆಯಿತು. 

ಕೆಲವು  ವರ್ಷಗಳು ಕಳೆದನಂತರ, ತನ್ನ ರಾಜ್ಯ ಮತ್ತು ಆಸ್ತಿಯನ್ನು ಕಳೆದುಕೊಂಡ ಕೊರಗನ್ನು  ಸಹಿಸಲಾರದೆ ಇಂಗ್ಲೆಂಡ್ ಗೆ ಪ್ರಯಾಣ ಮಾಡಿ   ರಾಣಿ ವಿಕ್ಟೋರಿಯನ್ನು ಖುದ್ದಾಗಿ ಭೇಟಿ ಮಾಡಿ  ತನಗೆ ಆಗಿರುವ  ಅನ್ಯಾಯವನ್ನು ವಿವರಿಸಿ  ಬ್ರಿಟಿಷ್ ಸರ್ಕಾರದಿಂದ  ಸೂಕ್ತವಾದ ಪರಿಹಾರವನ್ನು ಪಡೆಯುವ  ನಿರ್ಧಾರ ಮಾಡಿದ , ಇದಲ್ಲದೆ  ತನ್ನ ೧೧ ವರ್ಷದ  ಮಗಳು ಗೌರಮ್ಮನ ಭವಿಷ್ಯ ಭದ್ರ ಮಾಡುವ ಉದ್ದೇಶದಿಂದ  ಅಂದಿನ ಗೌರ್ನರ್ ಜನರಲ್ ಲಾರ್ಡ್ ಡಾಲ್ ಹೌಸಿ ಅವರನ್ನು ಸಂಪರ್ಕಿಸಿ ದೇಶದಿಂದ ಹೊರಗೆಹೋಗುವುದಕ್ಕೆ ಅಪ್ಪಣೆ ಕೇಳಿದ, ಬಹಳ ತಿಂಗಳ ನಂತರ ಚಿಕ್ಕವೀರರಾಜೇಂದ್ರ ಒಂದು ವರ್ಷದ ಅವಧಿಯಲ್ಲಿ ಹಿಂತಿರುಗಬೇಕು  ಮತ್ತು ಒಬ್ಬ ಬ್ರಿಟಿಷ್ ಅಧಿಕಾರಿ ಜೊತೆಯಲ್ಲಿ  ಪ್ರಯಾಣ ಮಾಡುವಂತ  ಷರತ್ತು ಬದ್ದಿನ ಮೇಲೆ ಅನುಮತಿ ಬಂತು, ಆದರೆ ಇದು ಗೌರಮ್ಮನಿಗೆ ಅನ್ವಯಿಸಲಿಲ್ಲ , ಇಬ್ಬರು ರಾಣಿಯರು, ಮಗಳು ಮತ್ತು ಹಲವಾರು ಸೇವಕರೊಂದಿಗೆ ಹಡಗಿನಲ್ಲಿ ಪ್ರಯಾಣ ಮಾಡಿ ೧೨/೫/೧೮೫೨ ಇಂಗ್ಲೆಂಡ್ ದೇಶದಲ್ಲಿ ಕಾಲಿಟ್ಟರು. ಭಾರತದ ರಾಜ್ಯ ವಂಶದ ದವರು ಇಂಗ್ಲೆಂಡಿಗೆ ಭೇಟಿ ಮಾಡಿದ್ದವರಲ್ಲಿ ಇವರು ಮೊದಲಿಗರು.

ಚಿಕ್ಕ ವೀರರಾಜೇಂದ್ರ (೧೮೦೫-೧೮೫೯)

 ರಾಣಿ ವಿಕ್ಟೋರಿಯ ಚಿಕ್ಕವೀರರಾಜೇಂದ್ರ ಮತ್ತು ಗೌರಮ್ಮನನ್ನು  ಬಹಳ ಆದರದಿಂದ ಸ್ವಾಗತಿಸಿ ಗೌರಮ್ಮನ ಬೆಳವಣಿಗೆ ತನ್ನ ಹೊಣೆ ಎಂದು ಭರವಸೆ ಕೊಟ್ಟಳು, ಆದರೆ ಹಣಕಾಸಿನ ಪರಿಹಾರದಬಗ್ಗೆ ಏನೂ ತೃಪ್ತಿದಾಯಕ ಉತ್ತರ ಕೊಡಲಿಲ್ಲ.  ಆದ್ದರಿಂದ ತನ್ನ ಕೊರತೆ ಗಳ  ಬಗ್ಗೆ ಲಂಡನ್ The Standard ಪತ್ರಿಕೆಯ ಸಂಪಾದಕರಿಗೆ  ಒಂದು ದೀರ್ಘ ವಾದ ಪತ್ರವನ್ನು  ಬರೆದ (೧೭/೧೧/೧೮೫೩).

 ಈ ವಿಚಾರ ಭಾರತದಲ್ಲಿದ್ದ ಗವರ್ನರ್ ಜನರಲ್ ಅವರಿಗೆ ಸಂಬಂಧ ಪಟ್ಟಿದ್ದು ಮತ್ತು ಈಸ್ಟ್ ಇಂಡಿಯಾ ಕಂಪನಿ ಜವಾಬ್ದಾರಿ ಎಂದು  ಬ್ರಿಟಿಷ್ ಸರ್ಕಾರ ಸುಮ್ಮನಿದ್ದರು, ( ಬ್ರಿಟಿಷ್ ಸರ್ಕಾರದ ನೇರ ಆಡಳಿತ ೧೮೫೭ ನಂತರ ) 

ವಿಕ್ಟೋರಿಯ ರಾಣಿಗೆ ಗೌರಮ್ಮತುಂಬಾ ಇಷ್ಟವಾಗಿ  ಅರಮನೆಯಲ್ಲಿ ಉಳಿಸಿಕೊಂಡು ಅವಳ ಬೆಳವಣಿಗೆಗೆ ಮೇಜರ್ ಮತ್ತು ಶ್ರೀಮತಿ ಡ್ರಮ್ಯಾನ್ಡ್ ಅವರಿಗೆ ಜವಾಬ್ದಾರಿ ವಹಿಸಿ ಅವಳನ್ನು ಅಪ್ಪಟ ಇಂಗ್ಲೀಷ್ ರಾಜಕುಮಾರಿ ಹಾಗೆ ಬೆಳಸುವಂತೆ ಆಜ್ಞೆ ಕೊಟ್ಟಳು,  ರಾಣಿ ಇವಳನ್ನು  ಕ್ರೈಸ್ತ್ದ ಮತಕ್ಕೆ  ಸೇರಿಸಿ ತನ್ನ ಸಾಕು  ಮಗಳನ್ನು ಮಾಡಿಕೊಳ್ಳುವ ಉದ್ದೇಶವು ಇದೆ ಎಂದಳು.  

ಚಿಕ್ಕವೀರರಾಜೇಂದ್ರನಿಗೆ ಮಗಳು ಕ್ರೈಸ್ತ್ ಮತಕ್ಕೆ ಪರಿವರ್ತ ವಾಗಲು ಏನು ಅಭ್ಯಂತರ ಇರಲಿಲ್ಲ. ಪರಂಪರೆಯಿಂದ ಕೊಡಗಿನ ರಾಜರು ವೀರಶೈವ ಪಂಗಡಕ್ಕೆ ಸೇರಿದವರು ಆದರೆ ಚಿಕ್ಕವೀರರಾಜ ತನ್ನ ಮತವನ್ನು  ತೀವ್ರವಾಗಿ ಅನುಸರಿಸುತಿರಲಿಲ್ಲ ಮತ್ತು  ಮಗಳ ಭವಿಷ್ಯ ಮುಖ್ಯವಾಗಿತ್ತು.  ೫/೭/೧೮೫೨ ದಿನ  ಅರಮನೆಯ ರಾಜ್ಯವಂಶದ ಪ್ರತೇಕ ಚಾಪೆಲ್ ನಲ್ಲಿ , ವಿಕ್ಟೋರಿಯಾ ರಾಣಿಯ ಸಮ್ಮುಖದಲ್ಲಿ, ಆರ್ಚ್ ಬಿಷಪ್ ಆಫ್ ಕ್ಯಾಂಟಬರಿ  ಇವಳನ್ನು ಕ್ರೈಸ್ತ್ ಮತಕ್ಕೆ ಸೇರಿಸಿ, ರಾಜಕುಮಾರಿ ವಿಕ್ಟೊರಿಯಾ ಗೌರಮ್ಮ ಎಂದು ನಾಮಕರಣ ಮಾಡಿದರು . 

ರಾಜಕುಮಾರಿ ಗೌರಮ್ಮ

ಗೌರಮ್ಮನಿಗೆ  ಹದಿನೇಳು ವರ್ಷಗಳು ತುಂಬಿದಾಗ ರಾಣಿ ಇವಳಿಗೆ ಮಾದುವೆ ಮಾಡುವ ಉದ್ದೇಶದಿಂದ ಸರಿಯಾದ ಜೋಡಿ ಹುಡುಕುವಂತೆ ಲೇಡಿ ಲಾಗಿನ್ ಅನ್ನುವರಿಗೆ ಸೂಚನೆ ಮಾಡಿದಳು.

 ಆ ಸಮಯದಲ್ಲಿ ಪಂಜಾಬ್ ಪ್ರಾಂತ್ಯದ ರಾಜಕುಮಾರ ದುಲೀಪ್ ಸಿಂಗ್ ಅನ್ನುವನು  ಇಂಗ್ಲೆಂಡ್ ನಲ್ಲಿ ಇದ್ದ,  ಇವನು ಸಹ, ಪಂಜಾಬ್ ಪ್ರಾಂತ್ಯವನ್ನು ೧೮೪೯ನಲ್ಲಿ ಬ್ರಿಟಿಷರಿಗೆ ಕಳೆದುಕೊಂಡ ನಂತರ  ಇಂಗ್ಲೆಂಡ್ ಗೆ ಬಂದು ನೆಲಸಿದ್ದ, ರಾಣಿ ವಿಕ್ಟೊರಿಯ ಇವನನ್ನೂ  ಆದರದಿಂದ ಸ್ವಾಗತಿಸಿದ್ದಳು. ಅರಮನೆಯಲ್ಲಿ ಆಗುವ ಔತಣಗಳಿಗೆ ಆಮಂತ್ರಣ ಇರುತಿತ್ತು.  ದುಲೀಪ್ ಸಹ ಕ್ರೈಸ್ತ್ ಮತಕ್ಕೆ ಸೇರಿದ್ದ. ಆದ್ದರಿಂದ ಇವರಿಬ್ಬರ ಜೋಡಿ ಎಲ್ಲ ವಿಚಾರದಲ್ಲೂ ಸರಿ ಅಂದು ಇವರ ಮದುವೆ ವಿಚಾರ ಪ್ರಸ್ತಾಪ ಮಾಡಿದರು.  ಆದರೆ ಈ ಸಂಬಂಧ  ಇಬ್ಬರಿಗೂ ಸಮ್ಮತ ಇರಲಿಲ್ಲ, ದುಲೀಪ್ ಸಿಂಗ್ ಗೆ  ಇಂಗ್ಲೆಂಡಿನ ಶ್ರೀಮಂತರ ಮನೆತನದವರ ಸಂಬಂಧ ಬೇಕಿತ್ತು, ಗೌರಮ್ಮನಿಗೂ ಸಹ ಇದೇ  ಅಸೆ ಇತ್ತು.   ಇಬ್ಬರು ರಾಜಮನೆತನದ ಭಾರತೀಯರು ಮತ್ತು ಕ್ರೈಸ್ತ ಮತಕ್ಕೆ  ಸೇರಿದವರು, ಇವರಿಬ್ಬರು ಕೂಡಿದರೆ ಭಾರತದಲ್ಲಿ ಇನ್ನೂ ಅನೇಕರನ್ನು ಈ ಮತಕ್ಕೆ ಸೇರಿಸಿ ಕ್ರೈಸ್ತ ಮತವನ್ನು ಹರಡಬಹುದು ಅನ್ನುವ ಅಸೆ ಅನೇಕರಿಗಿತ್ತು.

ಗೌರಮ್ಮನನ್ನು  ಆಂಗ್ಲ ರೀತಿಯಲ್ಲಿ ಬೆಳಸುವ ಉದ್ದೇಶದಿಂದ ಹಲವಾರು ಕುಟುಂಬಗಳು ಭಾಗಿಯಾಗಿದ್ದರು. ಈ ಶತಮಾನದಲ್ಲಿ ಉನ್ನತ ದರ್ಜೆಯ ಮನೆತನದವರಿಗೆ ಸರಿಯಾದ ಸಂಗಾತಿಗಳು ಸಿಗುವುದು ಕಷ್ಟವಾಗಿತ್ತು ಮತ್ತು ವ್ಯವಸ್ಥಿತ ಮದುವೆಗಳು ಸಾಮಾನ್ಯವಾಗಿತ್ತು.  ಆದ್ದರಿಂದ ಇವಳಿಗೆ ಸರಿಯಾದ ಜೋಡಿ ಸಿಗುವುದು ಸುಲಭವಾಗಲಿಲ್ಲ . ಸರ್  ಹಾರ್ ಕೋರ್ಟ್ಎಂಬುವರ ಮನೆಯಲ್ಲಿ ಇದ್ದಾಗ ಇವಳಿಗೆ ಸಾಮಾಜಿಕ ಸಂಪರ್ಕ ಮತ್ತು ಸ್ವತಂತ್ರ ಇಲ್ಲದೆ  ಬೇಸರದಿಂದ ಇವರ  ಮನೆ ಬಟ್ಲರ್ ಜೊತೆಯಲ್ಲಿ ಓಡಿ   ಹೋಗುವ ಪ್ರಯತ್ನ ಮಾಡಿದಳು ಅನ್ನುವ  ಸುದ್ದಿಯು ರಾಣಿಯ ಕಿವಿಗೆ ಬಿತ್ತಂತೆ.  ಬೇರೆ ದೇಶಗಳಿಗೆ ಭೇಟಿ ಕೊಟ್ಟರೆ ಇವಳ ಜೀವನದ ಅನುಭವ ಹೆಚ್ಚಾಗಳೆಂಬ ಉದ್ದೇಶದಿಂದ  ಯೂರೋಪ್ ನಲ್ಲಿ ಪ್ರಯಾಣ ಮಾಡಲು ಲೇಡಿ ಲಾಗಿನ್ ಅನ್ನುವರ ಜೊತೆ ಮಾಡಿ ಕಳಿಸಿದಳು. 

ಗೌರಮ್ಮ ವಿಕ್ಟೋರಿಯಾಳ ಅಮೃತ ಶಿಲೆಯ ಪ್ರತಿಮೆ

ದುಲೀಪ್ ಸಿಂಗ್  ಸ್ನೇಹಿತ ಕರ್ನಲ್ ಕಾಂಪ್ ಬೆಲ್ ಅನ್ನುವ ಮಿಲಿಟರಿ ಅಧಿಕಾರಿ  ಮದ್ರಾಸ್ ರೆಜಿಮೆಂಟ್ ನಲ್ಲಿ  ಬಳ್ಳಾರಿಯಲ್ಲಿ  ವಾಸವಾಗಿದ್ದವನ ಪರಿಚಯ ಗೌರಮ್ಮನಿಗೆ ಆಯಿತು ಆದರೆ ಇವನು ಸುಮಾರು  ಇಪ್ಪತೈದು ಮೂವತ್ತು ವರ್ಷ ದೊಡ್ಡವನಾಗಿದ್ದ  ಮತ್ತು ಆಗಿನ ಹೆಂಡತಿಯಿಂದ ನಾಲ್ಕು ಮಕ್ಕಳು ಇದ್ದರು. ಇವರ ಸಂಬಂಧ ಅನೇಕರಿಗೆ  ಆಶ್ಚರ್ಯ ಆಯಿತು.  ಕೆಲವರ ಪ್ರಕಾರ ಈತನಿಗೆ ಗೌರಮ್ಮನ ಹತ್ತಿರ ಇದ್ದ ಓಡುವೆಗಳು ಮತ್ತು ವರ್ಷಕ್ಕೆ £೪೦೦ ಆದಾಯ ಆಕರ್ಷವಾಗಿತ್ತು. ಅಂತೂ ೧೮೬೦ ನಲ್ಲಿ ಮದುವೆ ನಡೆಯಿತು ಆದರೆ ಇವಳ ಗಂಡ ಜೂಜುಗಾರ ಮತ್ತು ಜವಾಬ್ದಾರಿ ಇಲ್ಲದ ಮನುಷ್ಯ ಅನ್ನುವುದು ಬೇಗ ಅರಿವಾಯಿತು. ಇವರ ಸಂಬಂಧ ಅತೃಪ್ತಿಕರ ವಾಗಿತ್ತು. ೧೮೬೨ ರಲ್ಲಿ ಒಬ್ಬ ಮಗಳು ಹುಟ್ಟಿದಳು , ಈಡಿತ್ ವಿಕ್ಟೋರಿಯಾ ಗೌರಮ್ಮ ಎಂದು ನಾಮಕರಣ ಮಾಡಿದರು. 

ದುರಾದೃಷ್ಟದಿಂದ ಗೌರಮ್ಮ ನ ಅರೋಗ್ಯ ಕ್ಷಯ ರೋಗದಿಂದ ಕೆಟ್ಟಿತ್ತು, ೩೦/೩/೧೮೬೪ ರಲ್ಲಿ ಅವಳ ೨೩ನೇ ಜನ್ಮದಿನಕ್ಕೆ ಮುಂಚೆ ತೀರಿಕೊಂಡಳು. ನಂತರ ಇವಳ ಗಂಡ ಗೌರಮ್ಮನ ಓಡುವೆಗಳನ್ನು ಕದ್ದು ಪರಾರಿ ಆದ . ವಿಕ್ಟೋರಿಯಾ ರಾಣಿಗೆ  ಗೌರಮ್ಮನ ಸಾವಿನಿಂದ  ಬಹಳ ನೋವಿತ್ತು. ಅವಳ ಸಮಾಧಿಯ ಕಲ್ಲಿನ ಶಾಶನ ಮೇಲಿರುವ ಸಂದೇಶ ಸ್ವತಃ ರಾಣಿಯಿಂದ ಬಂದಿದ್ದು.  

ಗೌರಮ್ಮನ ಸಮಾಧಿ

ಚಿತ್ರಗಳ ಕೃಪೆ: ಗೂಗಲ್

ಇವಳ ಸಮಾಧಿ  ಲಂಡನ್ ಬ್ರಾಂಪ್ಟನ್ನಲ್ಲಿದೆ ಮತ್ತು ಇವಳ ಅಮೃತ ಶಿಲೆಯ ಪ್ರತಿಮೆ ಐಲ್ ಆಫ್ ವೈಟ್ (Isle of Wight ) ನಲ್ಲಿರುವ Osborn House ನಲ್ಲಿ ನೋಡಬಹುದು.

ಇವಳ ಮಗಳು ಈಡಿತ್ ನನ್ನು  ವಿಕ್ಟೋರಿಯಾ ರಾಣಿ ನೋಡುವ ಅವಕಾಶ ಬರಲಿಲ್ಲ ಈ ಸಮಯದಲ್ಲಿ ಅವಳ ಗಂಡ ಪ್ರಿನ್ಸ್ ಅಲ್ಬರ್ಟ್ ತೀರಿಕೊಂಡ ಕಾರಣ ರಾಣಿ ಶೋಕದಲ್ಲಿದ್ದಳು.  ಈ ಮಗು ಅನಾಥೆಯಾಗಿ ಬೆಳೆಯಿತು. ಇವಳನ್ನು ಬೆಳುಸುವ  ಜವಾಬ್ದಾರಿ ವಿಚಾರ ನ್ಯಾಯಾಲದಲ್ಲಿ ಚರ್ಚೆ ಸಹ ಆಯಿತು. ಅಂತೂ ಈಡಿತ್ ಬೆಳದಮೇಲೆ ೧೮೮೨ನಲ್ಲಿ ಹೆನ್ರಿ ಎಡ್ವರ್ಡ್ ಯಾರ್ಡ್ಲಿ ಅನ್ನವನ್ನು ಮದುವೆಯಾದಳು. 

ಚಿಕ್ಕವೀರರಾಜೇಂದ್ರನಿಗೆ ನ್ಯಾಯಾಲದಿಂದ ಸಹ ಪರಿಹಾರ ಸಿಕ್ಕಲಿಲ್ಲ, ಮಗಳ ಹತ್ತಿರ ಎಷ್ಟು ಸಂಭಂದ ಇತ್ತು ಅನ್ನುವುದು ಗೊತ್ತಿಲ್ಲ. ಕೊನೆಗೆ ಅನೊರೋಗ್ಯದಿಂದ ೨೪/೯/೧೮೫೯ ರಂದು, ಕ್ಲಿಫ್ಟನ್ ವಿಲ್ಲಾಸ್, ವಾರ್ವಿಕ್ ರಸ್ತೆ ಮೈಡ ಹಿಲ್ ಲಂಡನ್ ನಿಧನನಾದ. ಇವನ ಸಮಾಧಿ Kensal Green Cemetery ಯಲ್ಲಿದೆ. 

ಹೆಚ್ಚೆನ ಓದುವಿಕೆ ( Further Reading )

ಮಾಸ್ತಿ ಅವರ ಚಿಕ್ಕವೀರರಾಜೇಂದ್ರ ಪುಸ್ತಕಕ್ಕೆ ಜ್ಞಾನ ಪೀಠ ಪ್ರಶಸ್ತಿ (೧೯೮೩)

The Lost Princes of Coorg  by cp Belliappa 

Court Life and Camp Life by Lady Login (೧೮೨೦-೧೯೦೪) ಈಕೆ ಭಾರತದಲ್ಲಿ ವಾಸ ಮಾಡಿದ್ದವಳು, ಅವಳ ಅನುಭವಗಳನ್ನು ಇಲ್ಲಿ ಬರೆದಿದ್ದಾ.ಳೆ 

Coorg and Its Rajahs by an Officer . ಇದು ಒಂದು ಸ್ವಾರಸ್ಯಕರವಾದ   ಪುಸ್ತಕ, ೧೮೫೭ ರಲ್ಲಿ ಲಂಡನ್ ನಲ್ಲಿ ಪ್ರಕಟವಾಯಿತು. ಬರೆದವನ ಹೆಸರಿಲ್ಲ ಆದರೆ ಚಿಕ್ಕವೀರರಾಜೇಂದ್ರ ಆಸ್ಥಾನದಲ್ಲಿ ಇದ್ದವನು ಮತ್ತು ಕೊಡಗಿನ ಚರಿತ್ರೆಯನ್ನು ಬಹಳ ವಿವರವಾಗಿ ಬರೆದಿದ್ದಾನೆ,  ಕೆಲವು ಧಾಖಲೆಗಳನ್ನು ನೋಡಿದರೆ ಈತನಿಗೆ ನಮ್ಮ ಪಂಚಾಂಗದ ಬಗ್ಗೆ ಅರವಿತ್ತು, ಉದಾಹರಣೆಗೆ ” on a Amavasya day  in Shukla Paksha …..  ಇತ್ಯಾದಿ.    

ಕೊನೆಯದಾಗಿ , ಬೆಳ್ಳಿಯಪ್ಪನವರ ಸಂಶೋದನೆಯಿಂದ ಗೌರಮ್ಮನ ಮಗಳು ಈಡಿತ್ ಗೌರಮ್ಮ ಕ್ಯಾಮ್ಪ್ ಬೆಲ್ ಮನೆತನದವವರನ್ನು ಹುಡಿಕಿದ್ದಾರೆ. ಇಂದಿನ ಪೀಳಿಗೆಯ ಕೆಲವರು  ತಮ್ಮ ವಂಶದ ಬಗ್ಗೆ ತಿಳಿಯಲು ಕೊಡಗುಗೆ ಭೇಟಿ ಮಾಡಿದ್ದಾರೆ. 

ಬ್ರಿಟಿಷ ಪ್ರಜೆಗಳು ತಮ್ಮ ಕುಟುಂಬದ ವಂಶಾವಳಿಯನ್ನು ಹುಡಿಕಿದರೆ ಭಾರತಿಯರ  ರಕ್ತ ಸಂಭಂದ ಅನೇಕರಲ್ಲಿ ಸಿಗುವುದು ಏನು ಆಶ್ಚರ್ಯವಿಲ್ಲ,  ಅನೇಕರು  ಸ್ಥಳೀಯರನ್ನು ಮದುವೆಯಾಗಿ  ಸಂಸಾರಸ್ಥರಾಗಿದ್ದರು,  Who Do You Think You Are  ಅನ್ನುವ ಟಿವಿ ಪ್ರೋಗ್ರಾಮ್ ನಲ್ಲಿ ಪ್ರಸಿದ್ಧ ಹಾಸ್ಯಗಾರ Alistair McGowan ವಂಶದವರು ಭಾರತೀಯರು ಎನ್ನುವುದು ತಿಳಿಯಿತು , ಇವರು ಕಲಕತ್ತಾ ಗೆ ಭೇಟಿಮಾಡಿದಾಗ ಹಲವಾರು McGowan ಬಂಧುಗಳನ್ನು  ಭೇಟಿಮಾಡಿದರು, ಹೀಗೆ ಅನೇಕ ಉದಾಹರಣೆಗಳನ್ನು ಕೊಡಬಹುದು,  ಸ್ಕ್ಯಾಟ್ ಲ್ಯಾಂಡಿನ Billi Connolly  ಅವರ ಮುತ್ತಜ್ಜ ಅಥವಾ ಮುತ್ತಜ್ಜಿ, ಸರಿಯಾಗಿ ಜ್ಞಾಪಕ ಇಲ್ಲ, ಭಾರತೀಯರು.

ರಾಮಮೂರ್ತಿ

ಬೇಸಿಂಗ್ ಸ್ಟೋಕ್ 

ಮೈಸೂರು ಒಡೆಯರ ರಾಜವಂಶ ಮತ್ತು ಅಲುಮೇಲಮ್ಮನ ಶಾಪ

 

ಮೈಸೂರನ್ನು ಆಳಿದ ದೊರೆಗಳ ಬಗ್ಗೆ, ಅವರ ವ೦ಶ ಬೆಳೆದು ಬ೦ದ ಬಗ್ಗೆ ಮತ್ತು ಯಾವ ದೊರೆಗಳ ಕಾಲದಲ್ಲಿ ಈ ಪ್ರಾ೦ತ ಯಾವ ರೀತಿಯ ಬದಲಾವಣೆಗಳನ್ನು ಕ೦ಡಿತು ಎನ್ನುವುದರ ಬಗ್ಗೆ ತಿಳಿದಿರುವುದು ಕಡಿಮೆ ಎ೦ದು ನನ್ನ ಅಭಿಪ್ರಾಯ. ಅನಿವಾಸಿ ತಾಣದ ನುರಿತ ಲೇಖಕ ರಾಮಮೂರ್ತಿಯವರು ಇದನ್ನು ಆಳವಾಗಿ ಅಭ್ಯಾಸ ಮಾಡಿ, ಸ೦ಕ್ಷಿಪ್ತವಾಗಿ ನಮ್ಮ ಮು೦ದಿಟ್ಟಿದ್ದಾರೆ. ಕರ್ನಾಟಕದ ಜನತೆಯೆಲ್ಲರೂ ತಿಳಿದುಕೊಳ್ಳಬೇಕಾಗಿರುವ ವಿಷಯ ಈ ಲೇಖನದಲ್ಲಿದೆ. ಅಲುಮೇಲಮ್ಮನ ಶಾಪದ ಬಗ್ಗೆ ಕೇಳಿರಬಹುದು, ಅದರ ಕಾರಣದ ಕತೆ ಮತ್ತು ಪರಿಣಾಮದ ವಿವರ ಈ ಲೇಖನಕ್ಕೆ ಪೂರಕವಾಗಿದೆ. ಓದಿ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ – ಸ೦

ಮೈಸೂರು ಒಡೆಯರ ರಾಜ್ಯವಂಶ ಮತ್ತು ಅಲುಮೇಲಮ್ಮನ ಶಾಪ

ಮೈಸೂರಿನ ಒಡೆಯರು ತಾಳಿಕೋಟೆ ಅಥವಾ ರಕ್ಕಸತಂಗಡಿ ಯುದ್ಧವಾದ ( ಜನವರಿ ೧೫೬೫ )ನಂತರ ವಿಜಯನಗರದ ಸಂಪ್ರದಾಯವನ್ನು  ನಡೆಸಿಕೊಂಡು ಬಂದರು. ೧೫ನೇ ಶತಮಾನದಲ್ಲಿ ಇವರ ಪೂರ್ವಜರು ದಕ್ಷಿಣ ಮೈಸೂರಿನಲ್ಲಿ ನೆಲೆಊರಿ   ಸುಮಾರು ೫೦೦ ವರ್ಷ ಆಳಿದರು. ೧೩೯೯ ರಲ್ಲಿ ಯಾದವ ವಂಶದ ಯದುರಾಯ  ಮತ್ತು ಕೃಷ್ಣರಾಯ ಎಂಬ ಸಹೋದರರು ಈ ವಂಶದ  ಮೂಲ ಪುರುಷರು ಅನ್ನುವುದುಕ್ಕೆ ಸಾಕಷ್ಟು ಮಾಹಿತಿ ಇದೆಯಂದು ಅನೇಕ ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ. ಸಣ್ಣ ಪಾಳೇಪಟ್ಟಿನಿಂದ ಶುರುವಾದದ್ದನ್ನು ಯದುರಾಯರು ತಮ್ಮ  ೨೪ ವರ್ಷದ ಆಡಳಿತದಲ್ಲಿ ರಾಜ್ಯವನ್ನಾಗಿ ವಿಸ್ತರಿಸಿದರು . ಇವರ ಕಾಲದಲ್ಲಿ  ಬೆಟ್ಟದ ಮೇಲೆ  ಯೋಗ ನರಸಿಂಹನ ದೇವಸ್ಥಾನದಲ್ಲಿ ನಾಲಕ್ಕು ಕೋಟೆಗಳನ್ನು ಕಟ್ಟಿ ಈ ಊರಿಗೆ “ಮೇಲುಕೋಟೆ” ಅಂತ ನಾಮಕರಣವಾಯಿತು. ಹಾಗೆಯೆ ಮೈಸೂರಿನ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೂ ಅನೇಕ  ಸುಧಾರಣೆಗಳನ್ನು ಮಾಡಿದರು.  ಯದುರಾಯರ  ನಂತರ ೧೫ ವರ್ಷದ ಹಿರಿಯಮಗ ಬೆಟ್ಟದ ಚಾಮರಾಜ ಒಡೆಯರು ಪಟ್ಟಕ್ಕೆ ಬಂದು ೩೬ ವರ್ಷ  ರಾಜ್ಯಭಾರ ಮಾಡಿದರು . ಈ ಅರಸರು ಹಿಂದೂ ಧರ್ಮದ ವಿವಿಧ ಶಾಖೆಗಳನ್ನು ಬಹಳ ಉದಾರತೆಯಿ೦ದ ಬೆಳಸಿಕೊಂಡು ಬಂದರು.

 

Jayachamaraja Wadiyar

ತಿಮ್ಮರಾಜ ಒಡೆಯರು (೧೪೫೮-೧೪೭೮), ಎರಡನೇ ಚಾಮರಾಜ ಒಡೆಯರು (೧೪೭೮-೧೫೧೩),  ಮತ್ತು ಮೂರನೇ ಚಾಮರಾಜ ಒಡೆಯರು (೧೫೧೩-೧೫೫೩), ನಲವತ್ತು ವರ್ಷಗಳ ಕಾಲ ಈ ರಾಜ್ಯವನ್ನು ಆಳಿ ಅನೇಕ ಸುಧಾರಣೆಗಳನ್ನು ತಂದು ಜನರು ಶಾಂತಿಯಿಂದ ಬಾಳುವಂತೆ ಮಾಡಿದರು. ಚಾಮುಂಡಿ ಬೆಟ್ಟದಮೇಲೆ ಕೆರೆ ನಿರ್ಮಾಣ ಆದದ್ದು ಇವರಿಂದಲೇ. ಇವರ ಮಗ ತಿಮ್ಮರಾಜ ಒಡೆಯರ್ ೧೫೫೩ರಲ್ಲಿ ಪಟ್ಟಕ್ಕೆ ಬಂದು ನೆರೆಯ ಪಾಳೇಗಾರನ್ನು ಗೆದ್ದು “ಬಿರುದುಳ್ಳವರೆಗೆಲ್ಲಾ ಪ್ರಭು ” ಅನ್ನುವ ಬಿರುದನ್ನೂ ಪಡೆದರು. ಇವರ ಕೊನೆಯ ತಮ್ಮ “ಬೋಳ” ಚಾಮರಾಜ ಒಡೆಯರು (೧೫೭೨ -೧೫೭೬), ನಾಲಕ್ಕು ವರ್ಷ ಮಾತ್ರ ಇವರ ಆಡಳಿತ. ಇವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದಾಗ ಸಿಡಿಲು ಹೊಡೆದು ಇವರ ಕೂದಲ್ಲೆಲ್ಲಾ ಉದುರಿದ್ದರಿಂದ ಈ ಹೆಸರು ಬಂತಂತೆ!! ಇವರ ಮಗ ಬೆಟ್ಟದ ಚಾಮರಾಜ ಒಡೆಯರು ಎರಡು ವರ್ಷ ಮಾತ್ರ ಆಳಿದರು, ಕಾರಣ, ಅಸಾಮರ್ಥ್ಯತನ (sacked for being inefficient !!) ೧೫೭೮ ರಲ್ಲಿ ಇವರ ತಮ್ಮ ರಾಜ ಒಡೆಯರು ಪಟ್ಟಕ್ಕೆ ಬಂದರು.

ಮೈಸೂರಿನಲ್ಲಿ ಯಾದವ ವಂಶವನ್ನು ಸ್ಥಾಪಿಸುವ ಗೌರವ ಯದುರಾಯರದಾದರೆ, ಓ೦ದು ಸಣ್ಣ ಮೈಸೂರು ಪ್ರದೇಶವನ್ನು ದೊಡ್ಡ ರಾಜ್ಯವನ್ನಾಗಿ ಮಾಡಿದವರು ರಾಜ ಒಡೆಯರು. ಇವರು ಸುತ್ತ ಮತ್ತಲ ಪ್ರದೇಶಗಳನ್ನು ಆಕ್ರಮಿಸಿ ಬಲವಾದ ಕೋಟೆಯನ್ನು ಕಟ್ಟಿ ಪ್ರಭಲರಾದರು ಮತ್ತು ೧೬೦೮ ನಲ್ಲಿ ೨೫೦೦೦ ವರಹ ವರಮಾನವುಳ್ಳ ಮೂವತ್ತುಮೂರು ಗ್ರಾಮಗಳಿಗೆ ಅರಸರಾದರು.

ವಿಜಯನಗರದ ಅರಸ ಎರಡನೇ ವೆಂಕಟರಾಯನ  ಆಡಳಿಕೆಯಲ್ಲಿ ಅವನ ಸಬ೦ಧಿಕ  ತಿರುಮಲ ಶ್ರೀರಂಗಪಟ್ಟಣದಲ್ಲಿ ರಾಜಪ್ರತಿನಿಧಿಯಾಗಿದ್ದ. ಆದರೆ ಇವರಿಬ್ಬರಲ್ಲಿ ಸೌಹಾರ್ದತೆಯಿರಲಿಲ್ಲ. ಈ ಪರಿಸ್ಥಿತಿಯನ್ನು ರಾಜ ಒಡೆಯರು  ಉಪಯೋಗಿಸಿಕೊಂಡು ೧೬೧೦ ರಲ್ಲಿ ತಿರುಮಲನನ್ನು  ಹೊರಗೆ ಹಾಕುವ ಪ್ರಯತ್ನದಲ್ಲಿ ಯಶಸ್ವಿಯಾಗಿ,  ವಿಜಯನಗರದ ರಾಜಪ್ರತಿನಿಧಿಯಿಂದ  ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡು  ಮೈಸೂರು ಚರಿತ್ರೆಯಲ್ಲಿ ಒಂದು ಹೊಸ ಅಧ್ಯಾಯವನ್ನೆ ಪ್ರಾರಂಭಿಸಿದರು. ಇವರ ಆಡಳಿತದ ಕಾಲ ನಲವತ್ತು ವರ್ಷಗಳು. ಇವರ ಕಾಲದಲ್ಲಿ ಶ್ರೀರಂಗಪಟ್ಟಣ  ರಾಜಧಾನಿಯೂ ಆಯಿತು, ಈ ವರ್ಷದಲ್ಲಿ  ನವರಾತ್ರಿ ಹಬ್ಬದ ಆಚರಣೆ ಇವರಿಂದಲೇ ಶುರುವಾಗಿದ್ದು. 

ರಾಜಒಡೆಯರು ೧೬೧೭ ರಲ್ಲಿ  ತೀರಿದರು, ಇವರ ಗಂಡು ಮಕ್ಕಳು ಆಗಲೇ ತೀರಿದ್ದರಿಂದ ಅವರ ಮೊಮ್ಮಗ ೧೪ ವರ್ಷದ ಚಾಮರಾಜ ಒಡೆಯರು ಪಟ್ಟಕ್ಕೆ ಬಂದಿದ್ದರೂ ಆಡಳಿತ  ದಳವಾಯಿ ಬೆಟ್ಟದ ಅರಸರದ್ದು . ಇವರು ಸುತ್ತ ಮುತ್ತಲಾದ ಪಾಳೆಯಪಟ್ಟುಗಳ ಮೇಲೆ ಧಾಳಿ ನಡೆಸಿ ರಾಜ್ಯವನ್ನು ವಿಸ್ತರಿಸಿದರು.  ಇಪ್ಪತ್ತು ವರ್ಷ ಚಾಮರಾಜ ಒಡೆಯರ ಆಳಿಕೆಯಲ್ಲಿ ಅನೇಕ ಸುಧಾರಣೆಗಳು ಬಂದವು. ಮೊದಲನೆಯ ಬಾರಿಗೆ ಸೈನ್ಯದ ಬೆನ್ನೆಲುಬಾಗಿ ಗಜದಳ ಸ್ಥಾಪಿತವಾಯಿತು. ಈಗ  ಮೈಸೂರು ರಾಜ್ಯ ವಿಸ್ತಾರವಾಗಿ ಹರಡಿತ್ತು. ಕಾವೇರಿ ನದಿಗೆ ನಾಲೆ, ಮೇಲುಕೋಟೆಯಲ್ಲಿ ಸ್ನಾನ ಘಟ್ಟ ಮತ್ತು ಕೆರೆಗಳ ನಿರ್ಮಾಣವಾಯಿತು. ಇವರು ಸಾಹಿತ್ಯ ಪ್ರಿಯ, ವಾಲ್ಮೀಕಿ ರಾಮಾಯಣದ ಕನ್ನಡ ರೂಪವಾದ ಚಾಮರಾಜೊಕ್ತಿ ವಿಲಾಸ ವನ್ನು ಸ್ವತಃ ರಚಿಸಿದರು.

Mysore Dasara Celebration

ಇವರು ನಿಧನವಾದ (೧೬೩೭) ನಂತರ ೨೫ ವರ್ಷದ ಎರಡನೇ ರಾಜ ಒಡೆಯರು ಪಟ್ಟಕ್ಕೆ ಬಂದರು. ಆದರೆ ೧೬೩೮ ರಲ್ಲಿ ಇವರು ನಿಧನವಾದರು. ಇವರ ಉತ್ತರಾಧಿಕಾರರು ಸುಪ್ರಸಿದ್ದ ರಣಧೀರ ಕಂಠೀರವ ನರಸರಾಜ ಒಡೆಯರು. ಇವರ ಕತ್ತಿವರಸೆ, ದೈಹಿಕ ಬಲ ಮತ್ತು ಶೌರ್ಯ ಇಂದಿಗೂ ಜನಪ್ರಿಯವಾಗಿದೆ.  ಇವರ ಆಡಳಿತದಲ್ಲಿ ಅನೇಕ ಕಷ್ಟಗಳು ಬಂದರೂ ಮೈಸೂರು ರಾಜ್ಯವನ್ನು, ಈಗಿನ ಕೊಡಗು ಪ್ರದೇಶದವರೆಗೂ ವಿಸ್ತರಿಸಿದರು. ಟಂಕಸಾಲೆಯನ್ನು ಸ್ಥಾಪಿಸಿ ತಮ್ಮ ಹೆಸರಿನ ನಾಣ್ಯಗಳನ್ನು ತಂದರು. ಇವರ ಆಡಳಿತದಲ್ಲಿ ರಚಿತವಾದ ಗ್ರಂಥಗಳು, ಚಕ್ರಬಡ್ಡಿ, ಚದರ ಮತ್ತು ಸರಪಣಿ ಅಳತೆ ಮತ್ತು ಮಾರ್ಕಂಡೇಯ ರಾಮಾಯಣ ಮುಂತಾದವು. ಇವರು ನಲವತೈದನೇ ವರ್ಷದಲ್ಲಿ (೧೬೫೯) ನಿಧನರಾದರು.

ಇವರ ನಂತರ ದೇವರಾಜ ಒಡೆಯರು, ಚಾಮುಂಡಿಬೆಟ್ಟಕ್ಕೆ ಸಾವಿರ ಮೆಟ್ಟಲು ಮತ್ತು ಮಧ್ಯದಲ್ಲಿ ಸುಂದರವಾದ ವೃಷಭದ ಶಿಲಾಮೂರ್ತಿ ನಿರ್ಮಾಣ ಇವರದ್ದೆ. ೧೬೭೧ ರಲ್ಲಿ ಐರೋಪ್ಯ ಮತ್ತು ಮೈಸೂರು ರಾಜ್ಯದ ವಾಣಿಜ್ಯ ಸಂಪರ್ಕ ನಡೆಯಿತೆಂದು ಚರಿತ್ರೆಕಾರ ಆಮ್ಲೆ ಎಂಬಾತ ಹೇಳಿದ್ದಾನೆ. ೧೬೭೩ ರಲ್ಲಿ ಇವರು ನಿಧನರಾದರು. ಇವರ ನಂತರ ೨೮ ವರ್ಷದ ಚಿಕ್ಕದೇವರಾಜ ಒಡೆಯರು ಪಟ್ಟಕ್ಕೆ ಬಂದು ಕೇವಲ ಐದು ದಿನಗಳಲ್ಲೇ ಮಧುರೆಯ ಚೊಕ್ಕನಾಥನ ಧಾಳಿಯನ್ನು ಎದುರಿಸಬೇಕಾಯಿತು , ನಂತರ ಇಕ್ಕೇರಿ ಮತ್ತು ಬಿಜಾಪುರ, ೧೬೭೭ ರಲ್ಲಿ ಮರಾಠದ ಪ್ರಬಲ ಶಿವಾಜಿಯನ್ನು ಎದುರಿಸಿ ವಿಜಯರಾದರು. ಇವರಿಗೆ ಅನೇಕ ಬಿರದುಗಳು ಬಂದು ಮೈಸೂರಿನ ಸಾರ್ವಭೌಮ ಪ್ರಭುಗಳೆಂದು ಪ್ರಸಿದ್ಧವಾದರು. ೧೬೮೭ರಲ್ಲಿ ಮೊಗಲ್ ಚಕ್ರವರ್ತಿಯ ಪ್ರತಿನಿಧಿ ಖಾಸಿಂಖಾನ್ ನಿಂದ ಬೆಂಗಳೂರನ್ನು ಮೂರು ಲಕ್ಷ ರೂಪಾಯಿಗಳಿಗೆ ಕ್ರಯಕ್ಕೆ ಪಡೆದರು. ಇವರ ಮಂತ್ರಿ ಸಂಪುಟ ಅನೇಕ ಸುಧಾರಣೆಗಳನ್ನು ಜಾರಿ ಮಾಡಿ ಕಂದಾಯ ವಸೂಲಿ ಮತ್ತು ಗ್ರಾಮಕಲ್ಯಾಣಕ್ಕಾಗಿ ಹದಿನೆಂಟು ಇಲಾಖೆಗಳನ್ನು ತೆರೆದರು, ಬೆಂಗಳೂರಿನಲ್ಲಿ ೧೨,೦೦೦ ನೇಯಿಗೆಯವರನ್ನು ತಂದು ಅವರು ತಯಾರಿಸಿದ್ದ ವಸ್ತುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದುಇವರ ಕಾಲದಲ್ಲೇ. ಚಿಕ್ಕದೇವರಾಯ ಒಡೆಯರು ಮೂವತ್ತೆರಡು ವರ್ಷದ ಅಡಳಿಕೆಯ ನಂತರ ೧೭೦೪ರಲ್ಲಿ ನಿಧನರಾದರು.

ಮುಂದಿನ ೭೫ ವರ್ಷಗಳು ಒಡೆಯರ ಮನೆತದಲ್ಲಿ ಅನೇಕ ಏರು ಪೇರು ಗಳಾಗಿ ದಳವಾಯಿಗಳು, ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಈ ರಾಜ್ಯವನ್ನು ಆಳಿದರು. ೧೭೯೯ ರಲ್ಲಿ ಮೈಸೂರು ಮೂರನೇ ಯುದ್ಧದಲ್ಲಿ ಬ್ರಿಟಿಷ್ ಸೈನ್ಯ ಟಿಪ್ಪುಸುಲ್ತಾನ್ ಆಡಳಿತವನ್ನು ಕೊನೆ ಮಾಡಿ ಮೈಸೂರ್ ರಾಜ್ಯವನ್ನು ವಶಪಡಿಸಿಕೊಂಡರು. ನಂತರ ಆಗಿನ ರಾಜಮಾತೆ ಆಗಿದ್ದ ಮಹಾರಾಣಿ ಲಕ್ಷಿ ಅಮ್ಮಣ್ಣಿ ಮತ್ತು ಅರ್ಥರ್ ವೆಲ್ಲೆಸ್ಲಿ (ನಂತರ ಡ್ಯೂಕ್ ಆಫ್ ವೆಲ್ಲಿಂಗ್ಟನ್ ) ಜೊತೆ ಒಪ್ಪಂದ ಆಗಿ ಮೂರು ವರ್ಷದ ಮುಮ್ಮಡಿ ಕೃಷ್ಣರಾಜ ಒಡೆಯರನ್ನು ಪಟ್ಟಕ್ಕೆ ತಂದರು.

Diwan Poornaiah

ದಿವಾನ್ ಪೂರ್ಣಯ್ಯನವರು ಇವರಿಗೆ ನೆರವಾಗಿ ರಾಜ್ಯದ ಅಡಿಳಿತಕ್ಕೆ ಮಾರ್ಗದರ್ಶಕರಾದರು. ಹತ್ತು ವರ್ಷಗಳ ನಂತರ ಮಹಾರಾಣಿ ಮತ್ತು ಪೂರ್ಣಯ್ಯ ನವರು ತೀರಿಕೊಂಡು ಮೈಸೂರು ಪ್ರದೇಶದಲ್ಲಿ ಅನೇಕ ಗಲಭೆಗಳು ನಡೆದು ಮೈಸೂರು ಸೈನ್ಯ ಬ್ರಿಟಿಷ್ ನೆರವು ಪಡೆದು ಈ ದಂಗೆಗಳನ್ನು ಅಡಗಿಸಿತು. ಗವರ್ನರ್ ಜನರಲ್ ವಿಲಿಯಂ ಬೆಂಟಿಂಗ್ ಮೈಸೂರು ರಾಜ್ಯವನ್ನು ಬ್ರಿಟಿಷ್ ರ ನೇರ ಅಡಳಿತಕ್ಕೆ ಸ್ವಾಧೀನ ಪಡಿಸಿಕೊಳ್ಳಬೇಕೆಂದು ನಿರ್ಧರಿಸಿ ೧೮೩೧ ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅಡಳಿತವನ್ನು ಕೊನೆ ಮಾಡಿದ. ಹೀಗೆ ಬ್ರಿಟಿಷ್ ಅಧಿಕಾರಿಗಳು ೧೮೩೧-೧೮೮೧ ವರಗೆ ಮೈಸೂರು ರಾಜ್ಯವನ್ನು ಆಳಿದರು. ಈ ರಾಜರಿಗೆ ಮಕ್ಕಳಿರಲಿಲ್ಲವಾದ್ದರಿಂದ ಹತ್ತಿರದ ಸಭ೦ಧಿಕ ಚಾಮರಾಜ ಒಡೆಯರ್ ರವರನ್ನು ದತ್ತು ಪುತ್ರನಾಗಿ ಆರಿಸಿಕೊಂಡು, ಬ್ರಿಟಿಷ್ ಒಪ್ಪಂದದ  ನ೦ತರ ಒಡೆಯರ್ ರಾಜ್ಯ ವಂಶದವರು ಪುನಃ ಪಟ್ಟಕ್ಕೆ ಬಂದರು. ಆದರೆ ೧೮೯೪ ನಲ್ಲಿ ಇವರಿಗೆ ಕೇವಲ ೩೨ ವರ್ಷದ ವಯಸ್ಸಿನಲ್ಲಿ ಕಲಕತ್ತೆಗೆ ಭೇಟಿ ಇತ್ತಾಗ ರೋಗಕ್ಕೆ ತುತ್ತಾಗಿ ತೀರಿಕೊಂಡರು. ಇವರ ಮಗ ನಾಲ್ವಡಿಕೃಷ್ಣರಾಜಒಡೆಯರ್೧೯೦೨ ನಲ್ಲಿ ತನ್ನ ೧೮ ವರ್ಷ ತುಂಬಿದಾಗ ಪಟ್ಟಕ್ಕೆ ಬಂದರು. 

Nalvadi Krishnaraja Wadiyar

ಮೈಸೂರ್ ದೇಶ ಆ ಕಾಲದಲ್ಲಿ ಪ್ರಾಮುಖ್ಯತೆ ಪಡೆಯುವುದಕ್ಕೆ ಈ ನಾಲ್ವಡಿ ಮಹಾರಾಜರು ಕಾರಣ. ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್, ಮೈಸೂರ್ ಬ್ಯಾಂಕ್, ಸಹಕಾರಿ ಸಂಘಗಳು ಮತ್ತು ಅನೇಕ ಕೈಗಾರಿಕೆಯ ಸಂಸ್ಥೆಗಳು ಇವರ ಪ್ರೇರಣೆಯಿಂದಲೇ ಪ್ರಾರಂಭವಾಗಿದ್ದು. ೧೯೪೦ ಆಗಸ್ಟ್ ನಲ್ಲಿ ಇವರು ನಿಧನರಾದರು. ತಮ್ಮನ ಮಗ ಜಯಚಾಮರಾಜ ಒಡೆಯರ್ ೨೩ ನೇ ವಯಸ್ಸಿನಲ್ಲಿ  ಮೈಸೂರು ರಾಜ್ಯದ ೨೫ನೇ ರಾಜರಾಗಿ ಸಿಂಹಾಸನಕ್ಕೆ  (೩/೮/೧೯೪೦) ಏರಿದರು .  ಭಾರತದ ಸ್ವತಂತ್ರ ಬಂದಮೇಲೆ ೨೬/೧/೧೯೫೦ ರಲ್ಲಿ ರಾಜಪ್ರಮುಖರಾದರು. ಜಯಚಾಮರಾಜ ಒಡೆಯರ್ ಬಹಳ ದೊಡ್ಡ ಮೇಧಾವಿ ಮತ್ತು ಸಂಗೀತ ಪ್ರೇಮಿ. ಲಂಡನ್ Philharmonica Concert Society ಯ ಮೊದಲನೇ ಅಧ್ಯಕ್ಷರು ಮತ್ತು Fellow of Trinity College of Music. ಇವರು ೨೩/೦೯/೧೯೭೪ ನಲ್ಲಿ ನಿಧನರಾದರು.  ಸುಮಾರು ೧೩೯೯ ನಲ್ಲಿ ಶುರುವಾದ ಮೈಸೂರು ರಾಜ್ಯ ಮನೆತನ ಇಲ್ಲಿ ಕೊನೆಯಾಯಿತು

ಮೈಸೂರು ಅರಸರ ಕುಟಂಬಕ್ಕೆ ಅಲುಮೇಲಮ್ಮನ ಶಾಪ

ಇದು ೧೬೧೨ ನಲ್ಲಿ ನಡೆದ ಸ್ವಾರಸ್ಯಕರವಾದ ಒ೦ದು ಪ್ರಸಂಗ, ದೊರೆತ ಮಾಹಿತಿಗಳ ಪ್ರಕಾರ ವಿಜಯನಗರದ ಪ್ರತಿನಿಧಿಯಾಗಿ ಶ್ರೀರಂಗಪಟ್ಟಣದಲ್ಲಿ ರಾಜ್ಯಾಡಳಿತ ನಡೆಸುತ್ತಿದ್ದ ತಿರುಮಲ ( ಶ್ರೀರಂಗರಾಯ ಅಂತಲೂ ಅವನ ಹೆಸರು ) ಅವರಿಗೆ ಬೆನ್ನುಪಣಿ ಅನ್ನುವ ರೋಗ ಬಂದು ಅದರ ನಿವಾರಣೆಗೆ ಅವನ ಎರಡನೇ ಪತ್ನಿ ಅಲಮೇಲಮ್ಮನ ಜೊತೆ ತಲಕಾಡಿನ ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಪೂಜೆಗೆ ತೆರಳುತ್ತಾನೆ. ಇದನ್ನು ಕೇಳಿ ಮೈಸೂರಿನ ಅರಸ ರಾಜ ಒಡೆಯರ್ ಇದೇ ಸೂಕ್ತ ಸಮಯವೆಂದು ಶ್ರೀರಂಗಪಟ್ಟಣದ ಮೇಲೆ ದಂಡೆತ್ತಿ ಹೋಗಿ ವಶಪಡಿಸಿಕೊಳ್ಳುತ್ತಾರೆ. ಇದನ್ನು ಕೇಳಿಯೋ ಅಥವಾ ರೋಗದಿಂದಲೋ ತಿರುಮಲರಾಜ ತಲಕಾಡಿನಲ್ಲಿ ತೀರಿಕೊಂಡ ನ೦ತರ ಅಲುಮೇಲಮ್ಮ ಹತ್ತಿರದಲ್ಲೇ ಇರುವ ಮಾಲಂಗಿ ಗ್ರಾಮದಲ್ಲಿ ನೆಲಸುತ್ತಾಳೆ. ಅಮೂಲ್ಯವಾದ ವಜ್ರದ ಮೂಗುಬಟ್ಟು ಮತ್ತು ಅನೇಕ ಒಡೆವೆಗಳು ಈಕೆಯ ಹತ್ತಿರ ಇರುವ ವಿಚಾರ ರಾಜ ಒಡೆಯರಿಗೆ ತಿಳಿದು ಅವುಗಳನ್ನು ವಶಪಡಿಸಿಕೊಳ್ಳಲು ಕೆಲವು ಸೈನಿಕರನ್ನು ಕಳಿಸುತ್ತಾರೆ. ಅಲುಮೇಲಮ್ಮ ತನ್ನ ಒಡೆವೆಗಳ ಜೊತೆ ಮನೆಯಿಂದ ತಪ್ಪಿಸಿಕೊಂಡು ಕಾವೇರಿ ನದಿಯಲ್ಲಿ ಬೀಳುತ್ತಾಳೆ ಮತ್ತು ಬೀಳುವ ಮುಂಚೆ ಕೋಪದಿಂದ “ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ, ಮೈಸೂರು ರಾಜರಿಗೆ ಮಕ್ಕಳಾಗದಿರಲಿ” ಎಂದು ಶಪಿಸುತ್ತಾಳೆ. ಈ ಮಾತುಗಳನ್ನು ಅಟ್ಟಿಸಿಕೊಂಡು ಬಂದ ಸೈನಿಕರು ಕೇಳಿ ರಾಜ ಒಡೆಯರಿಗೆ ತಿಳಿಸಿದಾಗ ಅವನಿಗೆ ತನ್ನ ದುರಾಸೆಯೇ ಇದಕ್ಕೆ ಕಾರಣ ಎಂದು ಅರಿವಾಗಿ,ಅರಮನೆಯ ಪುರೋಹಿತರ ಸಲಹೆಯ ಮೇಲೆ ಅಲುಮೇಲಮ್ಮನ ವಿಗ್ರಹವನ್ನು ಅರಮನೆಯ ಗುಡಿಯಲ್ಲಿ ಪ್ರತಿಷ್ಠೆ ಮಾಡಿದನು. ಮೈಸೂರು ರಾಜ್ಯವಂಶದವರು ಇಂದಿಗೂ ನವರಾತ್ರಿ ಹಬ್ಬದ ಪ್ರಾರಂಭ ಈ ಪೂಜೆಯಿಂದಲೇ ಪ್ರಾರಂಭಿಸುವುದು.

This image has an empty alt attribute; its file name is talakadu.jpg
Talakadu

ಮೈಸೂರು ಅರಸರ ಇತಿಹಾಸವನ್ನು ನೋಡಿದರೆ ರಾಜರ ದತ್ತು ಪಡೆದ ಮಗನಿಗೆ ಮಕ್ಕಳಾಗಿವೆ ಆದರೆ ಆತನಿಗೆ ಹುಟ್ಟುವ ಮಗನಿಗೆ ಮಕ್ಕಳಾಗದಿರುವುದನ್ನು ಕಾಣಬಹುದು. ಇತ್ತೀಚಿನ ಉದಾಹರಣೆಗೆ ಕೊನೆಯ ಮಹಾರಾಜರು ದತ್ತು ಪುತ್ರ ಜಯಚಾಮರಾಜ ಒಡೆಯರ್ ಗೆ ಶ್ರೀಕಂಠದತ್ತ ಜನಿಸಿದರೂ ಇವರಿಗೆ ಮಕ್ಕಳಿರಲಿಲ್ಲ. ಇವರ ದತ್ತು ಈಗಿನ ಯದುವೀರ್ ಒಡೆಯರ್ ಅವರಿಗೆ ಈಗ ಪುತ್ರ ಸಂತಾನವಾಗಿದೆ. ಕೊನೆಯದಾಗಿ ಈ ರಾಜ್ಯ ವಂಶದ ೫೦೦ ವರ್ಷದ ಚರಿತ್ರೆ ಎಲ್ಲ ಕನ್ನಡಿಗರಿಗೂ ಹೆಮ್ಮೆ ತರುವ ವಿಚಾರ. ಈ ರಾಜ್ಯದ ಅಭಿವೃದ್ಧಿಗೆ ಈ ವಂಶವದವರೇ ಕಾರಣ ಎಂದು ಹೇಳಬಹುದು.

ರಾಮಮೂರ್ತಿ, ಬೇಸಿಂಗ್ ಸ್ಟೋಕ್

 

30 June 1799. Coronation of Mummadi Krishnaraja Wodeyar. Dewan Purnaiah is seen standing on the right of the throne and Lt. Col. Wellesley seated on the left. (This picture was inadvertently left out from the earlier publication of this article. Apologies. Ed)