ಎಲಿಝಬೆತ್ ರಾಣಿಯ ಸಾರ್ಥಕ ಬದುಕು; ಪ್ಲಾಟಿನಂ ಉತ್ಸವದ ವಿಶೇಷಾಂಕ

ಫೋಟೋ ಕೃಪೆ ಗೂಗಲ್
ಈ ವಾರದ ಸಂಚಿಕೆಯನ್ನು ನಮ್ಮೆಲ್ಲರ ಪ್ರೀತಿ ವಿಶ್ವಾಸಗಳಿಗೆ ಗೌರವಕ್ಕೆ ಪಾತ್ರರಾಗಿರುವ ರಾಣಿ ಎಲಿಝಬೆತರ ಪ್ಲಾಟಿನಂ ಜ್ಯೂಬಿಲಿ ಉತ್ಸವಕ್ಕೆ ಅರ್ಪಿಸುತ್ತಿದ್ದೇವೆ. ಚಾರಿತ್ರಿಕ ಮಹತ್ವವುಳ್ಳ ಮೇರು ವ್ಯಕ್ತಿಯನ್ನು, ಅವರ ಬದುಕನ್ನು ಮೌಲ್ಯಗಳನ್ನು ಅವರು ತೀರಿದ ಬಳಿಕ ನೆನೆಯುವುದು, ಸಂಭ್ರಮಿಸುವುದು ಸಾಮಾನ್ಯ, ಆದರೆ ಅವರು ನಮ್ಮ ನಿಮ್ಮ ನಡುವೆ ಬಾಳಿ ಬದುಕುತ್ತಿರುವಾಗ ಅವರೊಡನೇ ಸೇರಿ ಸಂಭ್ರಮಿಸುವುದ ಔಚಿತ್ಯವಾದ ಆಯ್ಕೆ. ಎಲಿಝಬೆತ್ ತನ್ನ ಎಪ್ಪತ್ತು ವರ್ಷಗಳ ಸೇವಾ ಅವಧಿಯಲ್ಲಿ ಹಿಂದಿನ ಬ್ರಿಟಿಷ್ ಸಾಮ್ರಾಜ್ಯದ ಸಾಮ್ರಾಜ್ಞಿಯಾಗಿ, ಇಂಗ್ಲೆಂಡಿನ ರಾಣಿಯಾಗಿ, ಪ್ರಜಾಪ್ರಭುತ್ವದ ನಡುವೆಯೂ ಗೌರವಾನ್ವಿತ ಹಿರಿಯ ರಾಜತಂತ್ರತಜ್ಞೆಯಾಗಿ, ಕಾಮನ್ವೆಲ್ತ್ ರಾಷ್ಟ್ರ ಒಕ್ಕೂಟಗಳ ಮುಖ್ಯಸ್ಥಳಾಗಿ, ಪ್ರಪಂಚದ ನೂರಾರು ದೇಶಗಳಲ್ಲಿ ಪ್ರವಾಸ ಮಾಡಿ, ಜನ ನಾಯಕರೊಡನೆ ಸಮಾಲೋಚನೆ ನಡೆಸಿ ಎಲ್ಲರ ವಿಶ್ವಾಸಕ್ಕೂ ಪಾತ್ರರಾಗಿದ್ದಾರೆ. ರಾಣಿ ನಿಜವಾಗಿಯೂ ಒಬ್ಬ ಲೆಜೆಂಡ್ ಎನ್ನಬಹುದು. ಅಮೇರಿಕ, ಬ್ರಿಟನ್, ಕ್ಯಾನಡಾ, ಆಸ್ಟ್ರೇಲಿಯಾ ಮುಂತಾದ ಪ್ರಬಲ ರಾಷ್ಟ್ರಗಳಲ್ಲಿ ಕಳೆದ ಎಪ್ಪತ್ತು ವರ್ಷಗಳಲ್ಲಿ ಜನನಾಯಕರು, ಪ್ರಧಾನಿಗಳು, ಅಧ್ಯಕ್ಷರು ಚುನಾಯಿತರಾಗಿ ಬಂದು ಹೋಗಿದ್ದಾರೆ, ಆದರೆ ಎಲಿಝಬೆತ್ ರಾಣಿ ಇಂದಿಗೂ ಅದೇ ರಾಣಿ, ಅದೇ ಗೌರವ ಮತ್ತು ಅದೇ ಪ್ರಾಶಸ್ತ್ಯ. ವೈಯುಕ್ತಿಕ ನೆಲೆಯಲ್ಲಿ ರಾಣಿಯ ಬದುಕು ಹೂವಿನ ಹಾಸಿಗೆಯಷ್ಟೇ ಅಲ್ಲ. ಒಬ್ಬ ಗೃಹಿಣಿಯಾಗಿ, ತಾಯಿಯಾಗಿ, ಅಜ್ಜಿಯಾಗಿ, ಅಕ್ಕನಾಗಿ ಎಲ್ಲ ಸಂಸಾರಗಳಲ್ಲಿ ಸಂಭವಿಸಬಹುದಾದ ಭಾವನಾತ್ಮಕ ಏರು ಪೇರುಗಳನ್ನು, ಬಿಕ್ಕಟ್ಟುಗಳನ್ನು ಅನುಭವಿಸಿದ್ದಾಳೆ. ಪತ್ರಿಕೆ ಮತ್ತು ಮಾಧ್ಯಮಗಳ ಕುತೂಹಲ, ಅನಧಿಕೃತ ಆಕ್ರಮಣ ಮತ್ತು ಅದರ ಅಹಿತಕರ ಪರಿಣಾಮಗಳ ಜೊತೆ ರಾಣಿ ಮತ್ತು ರಾಜಮನೆತನ ನಿರಂತರವಾಗಿ ಹೋರಾಡುತ್ತಾ ಬಂದಿದೆ. ರಾಣಿಗೆ ತನ್ನ ಬದುಕಿನುದ್ದಕ್ಕೂ ಜನಾಭಿಪ್ರಾಯ, ಸಮ್ಮತ ಒಂದು ಕಡೆಯಾದರೆ ಇನ್ನೊಂದು ಕಡೆ ತನ್ನ ಸಂಸಾರದ ಸದಸ್ಯರ ವೈಯುಕ್ತಿಕ ಆಶಯಗಳನ್ನು, ವೈವಾಹಿಕ ಸಮಸ್ಯೆಗಳನ್ನು ತಕ್ಕಡಿಯಲ್ಲಿಟ್ಟು ಸೂಕ್ಷ್ಮವಾಗಿ ಬಗೆಹರಿಸಬೇಕಾಯಿತು. ಇಂತಹ ಸನ್ನಿವೇಶಗಳಲ್ಲಿ ರಾಣಿ ಒಬ್ಬ ಕೆಟ್ಟ ಅತ್ತೆ, ಕೆಟ್ಟ ಅಮ್ಮ ಅಥವಾ ಕೆಟ್ಟ ಅಜ್ಜಿಯಂತೆ ಕಂಡರೂ ಅವಳಿಗೆ ತನ್ನ ರಾಜಮನೆತನದ ಮರ್ಯಾದೆ, ಸ್ಥಾನಮಾನಗಳು ಮುಖ್ಯವಾಗಿದ್ದವು. ಅವಳಿಗೆ ತನ್ನ ಆದ್ಯತೆಗಳ ಅರಿವಿತ್ತು. ಇದೆಲ್ಲದರ ನಡುವೆ ರಾಣಿಯೂ ಒಬ್ಬ ಮನುಷ್ಯಳೇ ಎಂಬುದನ್ನು ಅರಿಯಬೇಕು. ಇಪ್ಪತ್ತೊಂದನೇ ಶತಮಾನದಲ್ಲಿ ರಾಜ ಮನೆತನದ ಅಸ್ತಿತ್ವವನ್ನು ಮತ್ತು ಪ್ರಸ್ತುತತೆಯನ್ನು ಪ್ರಶ್ನಿಸಲಾಗಿದೆ. ಈ ಪ್ಲಾಟಿನಂ ಜ್ಯುಬಿಲಿ ಉತ್ಸವದ ಸಿದ್ಧತೆಗಳನ್ನು ಮತ್ತು ಅದರ ಹಿಂದಿನ ಜನಾಸಕ್ತಿಯನ್ನು ಗಮನಿಸಿದಾಗ ಎಲ್ಲ ವಿವಾದಗಳ ನಡುವೆಯೂ ರಾಣಿ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಅರ್ಹಳಾಗಿ ಪ್ರಸ್ತುತವಾಗಿ ಉಳಿದಿದ್ದಾಳೆ ಎನ್ನ ಬಹುದು.

ಇಂತಹ ಒಂದು ಐತಿಹಾಸಿಕ, ಮಹತ್ವವಾದ ಘಳಿಗೆಯಲ್ಲಿ ಇಲ್ಲಿಯ ಪೌರತ್ವವನು ಸ್ವೀಕರಿಸಿರುವ ನಾವೂ ಕೂಡ ಈ ಉತ್ಸವದಲ್ಲಿ ಪಾಲ್ಗೊಳ್ಳುವುದು ಸಮಂಜಸವಾಗಿದೆ. ರಾಣಿ ಎಲಿಝಬೆತ್ತಿಗೆ ಈ ಸಂಚಿಕೆಯಲ್ಲಿ ನುಡಿ ನಮನಗಳನ್ನು ಸಲ್ಲಿಸುತ್ತಿದ್ದೇವೆ. ರಾಣಿಯ ಬಾಲ್ಯದ ಬದುಕನ್ನು ರಾಮಮೂರ್ತಿಯವರು, ರಾಣಿಯ ಪರಿಸರ ಪ್ರಜ್ಞೆಯನ್ನು ಶ್ರೀರಾಮುಲು ಅವರು, ರಾಣಿ ಮತ್ತು ಡಯಾನ ನಡುವಿನ ವೈಯುಕ್ತಿಕ ಸಂಬಂಧಗಳ ಬಗ್ಗೆ ವತ್ಸಲಾ ಅವರು, ಮತ್ತು ರಾಣಿಯ ಆಳ್ವಿಕೆಯಲ್ಲಿನ ಪ್ರಮುಖ ಮೈಲಿಗಲ್ಲುಗಳನ್ನು ದೇಸಾಯಿಯವರು ನೆನೆದಿದ್ದಾರೆ. ದೂರದ ಆಸ್ಟ್ರೇಲಿಯಾದಲ್ಲಿ ರಾಣಿಯ ಮತ್ತು ರಾಜ ಮನೆತನದ ಪ್ರಸ್ತುತತೆಯ ಬಗ್ಗೆ ವಿನತೆ ಅವರು ಸಂಕ್ಷಿಪ್ತವಾಗಿ ಬರೆದಿದ್ದಾರೆ. ನಮ್ಮ ಈ ಎಲ್ಲ ಹಿರಿಯ ಲೇಖಕರು ಕಳೆದ ಐದಾರು ದಶಕಗಳಿಂದ ಇಲ್ಲಿ ನೆಲಸಿ ರಾಣಿಯ ಬದುಕನ್ನು, ಕಾರ್ಯಗಳನ್ನು ಕೂಲಂಕುಷವಾಗಿ ಕಂಡವರು, ಗ್ರಹಿಸಿದವರು. ಹೀಗಾಗಿ ಅವರ ಬರವಣಿಗೆ ಈ ಒಂದು ಸಂಚಿಕೆಗೆ ವಿಶೇಷ ಮೌಲ್ಯವನ್ನು ಒದಗಿಸಿದೆ. ಕೊನೆಯದಾಗಿ ಯಾವುದೇ ಉತ್ಸವ ಅಂದಮೇಲೆ ಅಲ್ಲಿ ಒಂದು ವಿಶೇಷ ಸಿಹಿ ತಿಂಡಿ ಇರಬೇಕಲ್ಲವೇ? ಅಂದಹಾಗೆ ರಾಣಿಯರ ಹಿಂದಿನ ಜ್ಯೂಬಿಲಿಗಳಲ್ಲಿ ಕಾರೊನೇಷನ್ ಚಿಕೆನ್, ವಿಕ್ಟೊರಿಯಾ ಸ್ಪಾಂಜ್ ಮುಂತಾದ ಜನಪ್ರೀಯ ಕಿಚನ್ ಅನ್ವೇಷಣೆಗಳಾಗಿ ಈಗ ಪ್ಲಾಟಿನಂ ಪುಡ್ಡಿಂಗ್ ಮೂಡಿಬಂದಿದೆ. ಇದರ ಬಗ್ಗೆ ಸವಿರುಚಿ ಖ್ಯಾತಿಯ ಸವಿತಾ ಅವರು ಒಂದು ಲೇಖನವನ್ನು ಸಮಯೋಚಿತವಾಗಿ ಒದಗಿಸಿದ್ದಾರೆ. ಈ ಸಂಚಿಕೆಯ ಕೊನೆಗೆ ರಾಮ್ ಶರಣ್ ರಾಣಿಯ ಹೆಸರಲ್ಲೊಂದು ಪೈಂಟ್ ಏರಿಸಿ ನಮನ್ನೆಲ್ಲಾ ನಕ್ಕು ನಗಿಸಿದ್ದಾರೆ. ರಾಣಿ ಶತಾಯುಷಿಯಾಗಲಿ ಎಂದು ಹಾರೈಸೋಣ. 
 -ಸಂಪಾದಕ 
ಗೀಚು ಚಿತ್ರ (scribble doodle) ಕಲೆ: ಲಕ್ಷ್ಮೀನಾರಾಯಣ ಗುಡೂರ್
********************
ಬಾಲ್ಯದ ದಿನಗಳು
ಮೈಕ್ಯಾನಿಕ್ ಆಗಿ ( ಮಹಾ ಯುದ್ಧ )
ನವ ದಂಪತಿಗಳು
ಮೇಲಿನ ಮೂರೂ ಫೋಟೋ – ಗೂಗಲ್ ಕೃಪೆ
ರಾಣಿ ಎಲಿಝಬೆತ್ ಅವರ ಬಾಲ್ಯದ ದಿನಗಳು 
- ರಾಮಮೂರ್ತಿ, ಬೇಸಿಂಗ್ ಸ್ಟೋಕ್ 

ಹುಟ್ಟಿದ ದಿನ ೧೯೨೬, ದಿನಾಂಕ ೨೧ ಏಪ್ರಿಲ್ ತಿಂಗಳು, ಸಮಯ ೨ ೪೦ ಘಂಟೆ , ವಾಸವಾಗಿದ್ದ ಸ್ಥಳ , ಲಂಡನ್ ಮೇಫೇರ್ ನಲ್ಲಿರುವ ಬ್ರೂಟನ್ ರಸ್ತೆ. ಇದು ಅವರ ಅಜ್ಜನ ಮನೆ , ತಂದೆ ಡ್ಯೂಕ್ ಆಫ್ ಯಾರ್ಕ್ ( ಆಲ್ಬರ್ಟ್ ರಾಜಕುಮಾರ ), ತಾಯಿ ಎಲಿಝಬೆತ್ . ಇವರ ನಾಮಕರಣ ಎಲಿಝಬೆತ್ ಅಲೆಕ್ಸಾಂಡ್ರಾ ಮೇರಿ. ಮುದ್ದಿನ ಹೆಸರು, ಲಿಲಿಬೆತ್.
 
ಕೇವಲ ಹತ್ತು ವರ್ಷದ ಹಿಂದೆ ಮೊದಲನೆಯ ಮಹಾ ಯುದ್ಧ ಮುಗಿದಿತ್ತು, ಲಕ್ಷಾಂತರ ಸೈನಿಕರು ಹಿಂತಿರಿಗಿ ಬಂದು ಕೆಲಸ ಹುಡುಕುತ್ತಿದ್ದರು. ದೇಶದ ಅಂದಿನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಕಾರ್ಮಿಕರ ಮುಷ್ಕರ ಅಥವ ಹರತಾಳ ಶುರುವಾಗಿತ್ತು. ಸಮಾಜದಲ್ಲಿ ಅನೇಕ ಬದಲಾವಣೆಗಳು ಆಗುತ್ತಿರುವುದರಿಂದ, ಈಕೆಯ ಬೆಳವಣಿಗೆ ಬಗ್ಗೆ ಇವರ ತಂದೆ ತಾಯಿ ಒಂದು ನಿರ್ಧಾರಕ್ಕೆ ಬಂದರು, ರಾಜಕುಮಾರಿ ಆದರೂ , ತುಂಬಾ ಕಟ್ಟುನಿಟ್ಟು ಇರಬಾರದು ಅಥವಾ ಪ್ರಗತಿಪರ ವ್ಯಕ್ತಿಯೂ (liberal ) ಸಹಾ ಆಗದೆ ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳ ಅರಿವು ಇರಬೇಕು . 

೧೯೩೦ ರಲ್ಲಿ ತಂಗಿ ಮಾರ್ಗರೇಟ್ ಜನನ. ರಾಜಮನೆತನದ ಮಕ್ಕಳ ವಿದ್ಯಾಭ್ಯಾಸ ಮನೆಯಲ್ಲಿ ನಡೆಯಿತು, ತಂದೆ ಇಚ್ಛೆ ಹತ್ತಿರದ ಶಾಲೆಗೆ ಸೇರಿಸುವುದಾಗಿತ್ತು ಆದರೆ ಮಿಕ್ಕವರಿಂದ ಅನುಮತಿ ಸಿಗಲಿಲ್ಲ. ಕ್ಲಾರಾ ನೈಟ್ ಅನ್ನುವರಿಂದ ಮನೆಯಲ್ಲೇ ಶಿಕ್ಷಣ ನಡೆಯಿತು. 

೧೯೩೬ ರಲ್ಲಿ ಇವರ ಅಜ್ಜ ಐದನೇ ಜಾರ್ಜ್ ತೀರಿಕೊಂಡರು, ಹಿರಿಯ ಮಗ, ಪ್ರಿನ್ಸ್ ಎಡ್ವರ್ಡ್ ಆಫ್ ಯಾರ್ಕ್, ಎಂಟನೇ ಎಡ್ವರ್ಡ್ ಆಗಿ ಪಟ್ಟಕ್ಕೆ ಬಂದರು, ಆದರೆ ವಿಚ್ಚೇದಿ ವಾಲಿ ಸಿಂಪ್ಸನ್ ಜೊತೆ ಈತನ ಸಂಭಂದಕ್ಕೆ ರಾಜಮನೆತನದ ಅಥವಾ ಸರ್ಕಾರದ ಮನ್ನಣೆ ಇರಲಿಲ್ಲವಾದ್ದರಿಂದ ಇವರ ಮದುವೆಗೆ ಅನುಮತಿ ಸಿಗಲಿಲ್ಲ. ಬೇಸರದಿಂದ ಈತ ಪಟ್ಟದಿಂದ ಕೆಳಗಿಳಿದು ದೇಶ ಬಿಟ್ಟು ಹೊರಟುಹೋದರು . ಆದ್ದರಿಂದ ೧೯೩೭ ರಲ್ಲಿ ಎಲಿಝಬೆತ್ ತಂದೆ , ಪ್ರಿನ್ಸ್ ಆಲ್ಬರ್ಟ್ ಆಫ್ ಯಾರ್ಕ್, ಆರನೇ ಜಾರ್ಜ್ ಆಗಿ ಪಟ್ಟಕ್ಕೆ ಬಂದು ಬಕಿಂಗ್ಹ್ಯಾಮ್ ಅರಮನೆಯಲ್ಲಿ ವಾಸ ಮಾಡಲು ಬಂದರು. ೧೧ ವರ್ಷದ ಹುಡುಗಿ ಎಲಿಝಬೆತ್ ಮುಂದೆ ಪಟ್ಟಕ್ಕೆ ಬರಲು ಉತ್ತರಾಧಿಕಾರಿ ಸಹ. ತಂದೆ ಸಲಹೆಯಿಂದ ಈಟನ್ (Eton ) ಶಾಲೆಯಲ್ಲಿ ಸಂವಿಧಾನ ಮತ್ತು ಯುರೋಪ್ ಚರಿತ್ರೆ ಕಲಿಯಲು ಪ್ರಾರಂಭ. ಆದರೆ ೧೯೩೯ ಕೊನೆಯಲ್ಲಿ ಎರಡನೇ ಮಹಾಯುದ್ಧ ಶುರುವಾಯಿತು. ಲಂಡನ್ನಿನ ಅನೇಕ ಭಾಗಗಳಲ್ಲಿ ಬಾಂಬ್ ಬಿದ್ದು ನೂರಾರು ಮಂದಿ ಮಡಿದರು. ಒಗ್ಗಟ್ಟು ತೋರಿಸಲು ಎಲಿಝಬೆತ್ ತಂದೆ ತಾಯಿ ಜೊತೆಯಲ್ಲಿ ಈ ಸ್ಥಳಗಳಿಗೆ ಭೇಟಿ ಕೊಟ್ಟು ಜನರಿಗೆ ಧೈರ್ಯ ತುಂಬುವುದಕ್ಕೆ ಸಹಾಯ ಮಾಡಿದಳು . 

ಹದಿನಾರು ವರ್ಷದ ಎಲಿಝಬೆತ್, ಒಬ್ಬಳೇ Grenadier Guards ನವರನ್ನು ಭೇಟಿ ಮಾಡಿ, ಇಟಲಿ ದೇಶದಲ್ಲಿ ನಡೆಯುತ್ತಿದ್ದ ಕೆಲವು ಯುದ್ಧರಂಗಕ್ಕೆ ಹೋಗಿ ಅಲ್ಲಿ ಹೋರಾಡುತ್ತಿದ್ದ ಸೈನಿಕರಿಗೆ ಉತ್ತೇಜನ ಕೊಟ್ಟು ಅವರ ಮನಸ್ಸನ್ನು ಗೆದ್ದಳು. ಹದಿನೆಂಟು ತುಂಬಿದಾಗ WTA (Women's Auxiliary Territorial Service) ಸೇರಿ ಮೋಟಾರ್ ಮೆಕ್ಯಾನಿಕ್ ಮತ್ತು ಡ್ರೈವರ್ ಆಗಿ ತರಬೇತಿ ಪಡೆದು ಯುದ್ಧ ನಿಲ್ಲುವರೆಗೆ (೧೯೪೫) ಅದೇ ಸಂಸ್ಥೆ ಯಲ್ಲಿ ಕೆಲಸ ಮಾಡಿದಳು. ಯುದ್ಧ ನಿಂತ ಮೇಲೆ, ೧೯೪೭ರಲ್ಲಿ ಎಲಿಝಬೆತ್ ದಕ್ಷಿಣ ಆಫ್ರಿಕಾಗೆ ಭೇಟಿ ನೀಡಿದಳು. ಅವಳ ಮತ್ತು ಲೆಫ್ಟಿನೆಂಟ್ ಫಿಲಿಪ್ ಮೌಂಟ್ ಬ್ಯಾಟನ್ (ಪ್ರಿನ್ಸ್ ಫಿಲಿಪ್ ) ಜೊತೆ ಪ್ರೇಮ ಬೆಳದು ೨೦/೧೧/೧೯೪೭ರಂದು ವೆಸ್ಟ್ ಮಿನಿಸ್ಟರ್ ಅಬ್ಬಿಯಲ್ಲಿ ವಿವಾಹ ನಡೆಯಿತು. ಮಹಾತ್ಮಾ ಗಾಂಧಿ ಅವರೇ ಚರಕದಿಂದ ನೇಯ್ದ ಒಂದು ಕರವಸ್ತ್ರವನ್ನು ಉಡುಗೊರೆಯಾಗಿ ಕಳುಹಿಸಿದಾಗ ಹಿರಿಯ ರಾಣಿ ಮೇರಿ ಅವರನ್ನು ಹೀಯಾಳಿಸಿದಳಂತೆ! 

೧೯೫೨ರಲ್ಲಿ ಎಲಿಝಬೆತ್ ತಂದೆ ಆರನೇ ಜಾರ್ಜ್ ಅನಾರೋಗ್ಯದಿಂದ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ದೇಶಗಳಿಗೆ ಕೊಡಬೇಕಾಗಿದ್ದ ಭೇಟಿ ರದ್ದಾಗಿ, ಎಲಿಝಬೆತ್ ಮತ್ತು ಪ್ರಿನ್ಸ್ ಫಿಲಿಪ್ ಅವರನ್ನು ಕಳುಹಿಸಲಾಯಿತು, ಈ ದಂಪತಿಗಳಿಗೆ ದಾರಿಯಲ್ಲಿ ಕೀನ್ಯಾ ದೇಶದಲ್ಲಿ ಕೆಲವು ದಿನಗಳನ್ನು ಕಳೆದು ಮುಂದೆ ಪ್ರಯಾಣ ಮಾಡುವ ಆಲೋಚನೆ ಇತ್ತು. ಆದರೆ ದುರದೃಷ್ಟದಿಂದ ತಂದೆ ನಿಧನರಾದರೆಂಬ ಸುದ್ದಿ ಬಂದು ೨/೬/೫೩ ರಂದು ಕೀನ್ಯಾಯಿಂದ ಹೊರಟು ಬಂದು ಲಂಡನ್ನಿನಲ್ಲಿ ಇಳಿದಾಗ ರಾಜಕುಮಾರಿ ಎಲಿಝಬೆತ್ ಆಗಿರಲಿಲ್ಲ, ಅವಳು ಎರಡನೇ ಎಲಿಝಬೆತ್ ರಾಣಿಯಾಗಿದ್ದಳು!!
********************
ಮೇಲಿನ ಎರಡು ಫೋಟೋ – ಗೂಗಲ್ ಕೃಪೆ
ಪರಿಸರಕ್ಕಾಗಿ ರಾಣಿ ಎಲಿಝಬೆತ್ ಕೊಡುಗೆ
- ಡಾ. ಶ್ರೀ ರಾಮುಲು

ಬ್ರಿಟಿಷ್ ರಾಜ್ಯಾದಾಂತ ರಾಣಿಯ ಆಳ್ವಿಕೆಯ ಅಮೃತ ಮಹೋತ್ಸವ ಆಚರಿಸುತ್ತಿರುವ ಸಮಯದಲ್ಲಿ ಪರಿಸರಕ್ಕಾಗಿ ಆ ಪಟ್ಟಮಹಿಷಿಯ ಅಪಾರವಾದ ಕೊಡುಗೆಯನ್ನು ಎಲ್ಲರ ಗಮನಕ್ಕೆ ತರಲು ಪ್ರಯತ್ನಿಸುತ್ತಿದ್ದೇನೆ. ಕಳೆದ ಎರಡು ದಿನಗಳ ಹಿಂದೆ ನನ್ನ ಕೈ ತಲುಪಿದ ರಾಯಲ್ ಹಾರ್ಟಿ ಕಲ್ಚರಲ್ ಸೊಸೈಟಿ ಮಾಸ ಪತ್ರಿಕೆ ಈ ಬರಹಕ್ಕೆ ಕಾರಣವಾಯಿತು, ಹಾಗೆ ಅದು ಉಪಯುಕ್ತವೂ ಆಯಿತು. "Sun never sets on the British Empire" ಎಂಬ ಹೇಳಿಕೆಗೆ ಕಾರಣವಾದ ಮತ್ತು ಪ್ರಪಂಚದ ಕಾಲುಭಾಗ ವನ್ನು ಆಳಿದ ಈ ಸಣ್ಣ ದೇಶ ತನ್ನ ರಾಣಿಯ ಪ್ಲಾಟಿನಂ ಜ್ಯೂಬಿಲಿಯನ್ನು ವಿಜೃಂಭಣೆಯಿಂದ ಆಚರಿಸಲು ಸಿದ್ದವಾಗಿದೆ.

ಎಲಿಝಬೆತ್ ರಾಣಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಮೂರು ಬಾರಿ ಭೇಟಿ ಕೊಟ್ಟಿದ್ದು ಅದರಲ್ಲೂ ೧೯೬೧ ಇಸವಿಯಲ್ಲಿ ಬಂದಿದ್ದು ನನಗೆ ಅಲ್ಪಸ್ವಲ್ಪ ಜ್ಞಾಪಕವಿದೆ. ಆದರೆ ೨೦೧೯ ರಲ್ಲಿ ಬಕಿಂಗ್ಹ್ಯಾಮ್ ಪ್ಯಾಲೇಸ್ ಗಾರ್ಡನ್ ಪಾರ್ಟಿಯಲ್ಲಿ ಅತಿ ಸಮೀಪದಿಂದ ಕಾಣುವ ಸೌಭಾಗ್ಯ ಒದಗಿಬಂತು. ನನ್ನ ನಿವೃತಿಯ ನಂತರ ಮೇ ೨೦೧೯ರಲ್ಲಿ ಅರಮನೆಯ ದಯೆಯಿಂದ ಈ ಆಮಂತ್ರಣ ನನಗೆ ಒದಗಿಬಂತು. ಇಳಿವಯಸ್ಸಿನ ಪ್ರಪಂಚದ ಪ್ರಖ್ಯಾತ ಮಹಿಳೆ, ರಾಣಿ ಎಲಿಝಬೆತ್ ಸಮಾಜದ ವಿವಿಧ ಸಾರ್ವಜನಿಕರೊಡನೆ, ಜೀವನದ ಎಲ್ಲ ಹಂತಗಳ, ಹಿನ್ನೆಲೆಗಳ, ವಿವಿಧ ಬಣ್ಣಗಳ ಜನರೊಡನೆ ಮಂದಹಾಸದಿಂದ ಮಾತನಾಡುತ್ತಿದ್ದು ಅದು ಎಲ್ಲರಿಗೂ ಖುಷಿ ಕೊಡುವ ವಿಚಾರವಾಗಿತ್ತು. ನಾನಂತೂ ಆಶ್ಚರ್ಯ ಚಕಿತನಾಗಿ ನೋಡಿತ್ತಿದ್ದೆ. 

ತಂದೆ ಕಿಂಗ್ ಜಾರ್ಜನ ೧೯೫೨ ರಲ್ಲಿ ಅಕಾಲ ಮರಣದಿಂದಾಗಿ ಕೀನ್ಯಾದೇಶದಲ್ಲಿ ಪ್ರವಾಸದಲ್ಲಿದ್ದ ಎಲಿಜಬೆತ್ ರಾಣಿ ತಮ್ಮ ರಜಗಳನ್ನು ಮೊಟುಕುಗೊಳಿಸಿ ಮರಳಿಬಂದು ದೇಶದ ಆಡಳಿತವನ್ನು ವಹಿಸಿಕೊಂಡರು. ಅವರ ಪಟ್ಟಾಭಿಷೇಕವಾದಾಗ ಅವರಿಗೆ ಕೇವಲ ೨೫ ವರ್ಷ. ಅವರಿಗೆ ತೋಟಗಾರಿಕೆ, ಮಕ್ಕಳು, ಅಶ್ವಗಳು ಮತ್ತು ಶ್ವಾನಗಳು ಅದರಲ್ಲೂ ಕೊರ್ಗಿ ತಳಿಯ ನಾಯಿಗಳೆಂದರೆ ಬಹಳ ಪ್ರೀತಿ ಎಂಬುದು ಬಹಳ ಜನಕ್ಕೆ ತಿಳಿದ ವಿಷಯ. ಜಗತ್ ಪ್ರಸಿದ್ಧವಾದ ಲಂಡನ್ Chelsea Flower Show ಗೆ ಅವರು ಪ್ರಪ್ರಥಮ ಭೇಟಿ ನೀಡಿದ್ದು ೧೯೫೨ರಲ್ಲಿ. ಆಗಿನಿಂದಲೂ, ಅಂದರೆ ಏಳು ದಶಕಗಳಿಂದ ಸತತವಾಗಿ ಈ ಪುಷ್ಪ ಪ್ರದರ್ಶನದ ಪೋಷಕರಾಗಿದ್ದಾರೆ. ತೋಟಗಾರಿಕೆಯೆಂದರೆ ಅವರಿಗೆ ಅಂತ್ಯಂತ ಪ್ರೀತಿ. ಅವರ ಅರಮನೆಯ ತೋಟಗಳ ಜವಾಬ್ದಾರಿಯನ್ನು ಸ್ವತಃ ಅವರೇ ಆಸಕ್ತಿವಹಿಸಿ ಉಸ್ತುವಾರಿ ಮಾಡುತ್ತಾರೆ. ಅವರ ಹಿರಿಯ ಪುತ್ರ ಚಾರ್ಲ್ಸ್ ನಂತೆ ಅವರೂ ಪರಿಸರ ಪ್ರೇಮಿ. ಈ ಚೆಲ್ಸಿ ಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ಪ್ರಾರಂಭದಲ್ಲಿ ಕೇವಲ ಕೆಲವೇ ಸಾವಿರ ಸಂಖ್ಯೆಗಳಲ್ಲಿ ಬರುತ್ತಿದ್ದ ಜನ ಸಂಖ್ಯೆ, ಕೋವಿಡ್ ಪಿಡುಗು ಅವರಿಸಿಕೊಳ್ಳುವ ಮುಂಚಿನ ಅವಧಿಯಲ್ಲಿ ೬೦ ಸಾವಿರಕ್ಕೂ ಅಧಿಕವಾಗಿತ್ತೆಂದು ಅಂದಾಜು ಮಾಡಲಾಗಿದೆ. Her Majesty ಸ್ವತಃ ವೈಯುಕ್ತಿವಾಗಿ ೧೫೦೦ ವೃಕ್ಷಗಳನ್ನು ನೆಟ್ಟಿದ್ದಾರೆ ಎಂದು Royal Horticulture Society ದಾಖಲಿಸಿದೆ. ಬಹಳಷ್ಟು ಪ್ರಪಂಚ ಪರ್ಯಟನೆ ಮಾಡಿರುವ ಅವರು ಜಾಗತಿಕವಾಗಿ ದಶ ಲಕ್ಷಕ್ಕೂ ಹೆಚ್ಚು ಜನರಿಗೆ ವೃಕ್ಷಗಳನ್ನು ನೆಡಲು ಸ್ಫೂರ್ತಿಯಾಗಿದ್ದಾರೆಂದು ತಿಳಿದು ಬರುತ್ತದೆ.

ಇತ್ತೀಚಿಗೆ ಅಷ್ಟೇ ಜನಗಳಿಗೆ ಪರಿಸರದ ಬಗ್ಗೆ ಅರಿವು ಬರುತ್ತಿರುವಾಗ ೭೦ ವರ್ಷಗಳ ಹಿಂದೆಯೇ ಹಸಿರು ಕ್ರಾಂತಿಯ ಬಗ್ಗೆ ಎಲಿಝಬೆತ್ ರಾಣಿ ಚಿಂತಿಸಿದ್ದು ನಿಜಕ್ಕೂ ಶ್ಲಾಘನೀಯ. ಪ್ರಸ್ತುತ ಲಂಡನ್ನಿನಲ್ಲಿ ನಡೆಯಿತ್ತಿರುವ The Chelsea Flower ಷೋಗೆ ಕೆಲವು ದಿನಗಳ ಹಿಂದೆ ಹೋಗುವ ಅವಕಾಶ ಒದಗಿ ಬಂತು. ಅಲ್ಲಿನ ಜನಸಂದಣಿ ನೋಡಿ ಜನ ಮರುಳೋ ಜಾತ್ರೆ ಮರುಳೋ ಎಂಬ ಗಾದೆ ನೆನಪಿಗೆ ಬಂತು. ಬಹಳಷ್ಟು ವಿಸ್ತಾರವಾಗಿ, ಕಣ್ಣು ಹಾಯಿಸಿದಷ್ಟೂ ಕಾಣುವ, ಲಂಡನ್ ಮಹಾನಗರದ ಮಧ್ಯದಲ್ಲಿ ಊಹೆಗೂ ಮೀರಿದಂತ ಈ ಉದ್ಯಾವನವನ್ನು ರಚಿಸಿರುವ ತಾಂತ್ರಿಕವರ್ಗದವರಿಗೂ ಮತ್ತು ತೋಟಗಾರಿಕೆ ನಿಪುಣರಿಗೂ ಎಷ್ಟು ಚಪ್ಪಾಳೆ ತಟ್ಟಿದರೂ ಸಾಲದು. ಈ ಪ್ರದರ್ಶನದಲ್ಲಿ ತೋಟಗಾರಿಕೆಗೆ ಸಂಭಂದ ಪಟ್ಟ ಎಲ್ಲಾ ಶಾಖೆಗಳಿದ್ದವು ಎಂದರೆ ಅತಿಶಯೋಕ್ತಿ ಅಲ್ಲ. Platinum jubilee ಅಂಗವಾಗಿ ಸಾಕಷ್ಟು ಕಡೆಗಳಲ್ಲಿ ಎಲಿಜಬೆತ್ ರಾಣಿಗೆ ಇಲ್ಲಿ ಬೆಳೆದು ನಿಂತ ಸುಂದರ ಪುಷ್ಪಗಳನ್ನು ಹೂ ಗಿಡಗಳನ್ನು ಅವರಿಗೆ ಮುಡುಪಾಗಿಟ್ಟು ಅರ್ಪಿಸಲಾಗಿತ್ತು. ಅವರ ವಿವಿಧ ಚಿತ್ರಗಳನ್ನು ಮತ್ತು ಪ್ರತಿಮೆಗಳನ್ನು ಹಸಿರು ಗಿಡಗಳಿಂದ ಅಲಂಕರಿಸಿಲಾಗಿತ್ತು. TV ಮಾಧ್ಯಮದ, ಬ್ರಿಟಿಷ್ ತೋಟಗಾರಿಕೆ ನಿಪುಣ Monty Don ಹೇಳುವಂತೆ “if you plant a tree and look after it, it will look after you” ಈ ಪ್ಲಾಟಿನಂ ಜುಬಿಲಿಗೆ ಒಂದೊಂದು ಮನೆಯಲ್ಲೂ ಗಿಡನೆಟ್ಟರೆ ಅದೇ ನಾವು ಪ್ರಪಂಚದ ಪರಿಸರಕ್ಕೆ ಮತ್ತು Her Majesty ಗೆ ಕೊಡಬಹುದಾದ ಬಹು ಅಮೂಲ್ಯ ಕಾಣಿಕೆ.                     

ವೃಕ್ಷೋ ರಕ್ಷತಿ ರಕ್ಷಿತಃ 
********************
ಫೋಟೋ – ಗೂಗಲ್ ಕೃಪೆ
ಇಂಗ್ಲೆಂಡ್ ರಾಣಿ ಮತ್ತು ಅವಳ ಸೊಸೆ ಡಯಾನ
- ಡಾ. ವತ್ಸಲಾ ರಾಮಮೂರ್ತಿ

ಡಯಾನಾ ಎಲಿಜಬೆತ್ ರಾಣಿಯ ಹಿರಿಯ ಮಗ ಪ್ರಿನ್ಸ್ ಚಾರ್ಲ್ಸನ್ನು ೧೯೮೧ರಲ್ಲಿ ಮದುವೆಯಾಗಿ ಬಂದಳು. ಆಗ ಅವಳು ೨೦ವರ್ಷದ ಅಮಾಯಕ ಕನ್ಯೆ, ಚಾರ್ಲ್ಸ್ ೩೩ವರ್ಷದ ಯುವಕ. ಡಯಾನಾ, ‘ಸ್ಪೆನ್ಸರ್ಸ್’ ಎಂಬ ಶ್ರೀಮಂತ ಮನೆತನದವಳು. ಡಯಾನ ಮತ್ತು ಚಾರ್ಲ್ಸ್ ಇವರಿಬ್ಬರ ಮದುವೆ ವೈಭವವಾಗಿ ನಡೆದು ಪ್ರಪಂಚದ ೭೪ ದೇಶಗಳ, ೭೫೦ ಮಿಲಿಯನ್ ಜನರು ಈ ಸಂಭ್ರಮವನ್ನು ಟಿವಿಯಲ್ಲಿ ವೀಕ್ಷಿಸಿದರು.

ರಾಣಿ ಮತ್ತು ಡಯಾನಾ ಸಂಬಂಧ ಬಗ್ಗೆ ಬೇಕಾದಷ್ಟು ಲೇಖನಗಳು ಇವೆ. ಅವರದ್ದು ಅಲ್ಲೋಲ ಕಲ್ಲೊಲ್ಲವಾದ ಸಂಬಂಧ. ಡಯಾನಾ ಶ್ರೀಮಂತ ಮತ್ತು ಹೆಸರುವಾಸಿಯಾದ ಮನೆತದವಳು, ಜೊತೆಗೆ ಸುರಸುಂದರಿ. ಸೋಷಿಯಲ್ ಮೀಡಿಯಾಗಳು, ಟಿವಿ, ಪತ್ರಿಕೆಗಳು ಅವಳನ್ನು ದೇವತೆಯ ಸ್ಥಾನಕ್ಕೆ ಕೂಡಿಸಿದ್ದರು. ಅವಳನ್ನು 'ಪೀಪಲ್ಸ್ ಪ್ರಿನ್ಸೆಸ್' ಎಂದು ಕರೆಯುತ್ತಿದ್ದರು. ಜನಸಾಮನ್ಯರಿಗೆ ಡಯಾನಾ ಆತ್ಮೀಯಳಾಗಿದ್ದಳು. ರಾಣಿ ತನ್ನ ಸ್ಥಾನ ಮಾನಗಳಿಂದ ಜನ ಸಾಮಾನ್ಯರೊಂದಿಗೆ ಸಲಿಗೆಯಿಂದ ವರ್ತಿಸಲು ಸಾಧ್ಯವಿರಲಿಲ್ಲ, ಅವಳು ತನ್ನ ಸಂಯಮದಿಂದಾಗಿ ತನ್ನ ಭಾವನೆಗಳನ್ನು ಇತರರೊಡನೆ ಹಿಂಚಿಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ. ಕೆಲವರು ಭಾವಿಸಿದಂತೆ ರಾಣಿಗೆ ಬಿಗುಮಾನ. ಅರಮನೆಯ ಮತ್ತು ರಾಜಮನತನದ ಕಟ್ಟುನಿಟ್ಟುಗಳನ್ನು ಶಿಷ್ಟಾಚಾರವಾಗಿ ಪರಿಪಾಲಿಸುತ್ತಿದ್ದಳು. ರಾಣಿಗೆ ಜನಸಾಮನ್ಯರೊಡನೆ ಬೆರತು ಅನುಕಂಪತೋರಿಸುವುದು ಸುಲಭ ಸಾಧ್ಯವಾಗಿರಲಿಲ್ಲ. ಹೀಗಾಗಿ ರಾಜ ಮನತನದವರು "ಸ್ಟಿಫ್ ಅಪ್ಪರ್ ಲಿಪ್" ಎಂದು ಜನ ಆಡಿಕೊಳ್ಳುತ್ತಿದ್ದರು. ಜನ ಏನೇ ಅಂದುಕೊಂಡರು ಈ ರಾಜ ಗಾಂಭೀರ್ಯ್ಯ ಅನಿವಾರ್ಯವಾದ ಪರಿಸ್ಥಿತಿಯ ಒತ್ತಡ ಎಂದು ಪರಿಗಣಿಸಬಹುದು. ಜನರ ಗ್ರಹಿಕೆಗೆ ರಾಣಿ ಮತ್ತು ಡಯಾನ ಇವರಿಬ್ಬರ ವ್ಯಕ್ತಿತ್ವ ವಿರುದ್ಧವಾಗಿದ್ದು ಉತ್ತರ ದಕ್ಕಿಣದಂತಾಗಿತ್ತು. ರಾಣಿಗೆ ಡಯಾನ ತಗ್ಗಿ ಬಗ್ಗಿ ವಿಧೇಯಳಾಗಿ ರಾಜಮಾನತನದ ಮರ್ಯಾದೆ ಕಾಪಾಡಬೇಕೆಂಬ ನಿರೀಕ್ಷೆ ಇತ್ತು. ಮುಕ್ತಮನಸ್ಸಿನಲ್ಲಿ ಜನರೊಡನೆ ಹೃದಯವಂತಿಕೆಯಿಂದ ಒಡನಾಡುವ ಡಯನಾಗೆ ತಾನು ‘ಚಿನ್ನದ ಪಂಜರದಲ್ಲಿ ಸಿಕ್ಕಿಕೊಂಡ ಗಿಳಿ’ಯೆಂಬ ಭಾವನೆ ಮೂಡಿತ್ತು.

ಒಮ್ಮೆ ಅವಳು ಅಳುತ್ತಾ “ನಾನು ಅರಮನೆಯ ಶಿಷ್ಟಾಚಾರಕ್ಕೆ ಹೊಂದಿಕ್ಕೊಳ್ಳಲು ಏನುಮಾಡಬೇಕು" ಎಂದು ಕೇಳಿದಾಗ ರಾಣಿ “ನೀನು ಏನುಮಾಡಬೇಕೆಂದು ನನಗೆ ಗೊತ್ತಿಲ್ಲ” ಎಂದು ಬಿಟ್ಟಳಂತೆ. ಡಯಾನಳ ಜನಪ್ರಿಯತೆ ಹೆಚ್ಚಾದಂತೆ ರಾಣಿಗೆ ಅವಳ ನಡತೆ ಬಗ್ಗೆ ಅಸಮಾಧಾನ ಹೆಚ್ಚಾಯಿತು. ಇಲ್ಲಿ ಇನ್ನೊಂದು ಗಮನಾರ್ಹವಾದ ಅಂಶವೆಂದರೆ ಪ್ರಿನ್ಸ್ ಚಾರ್ಲ್ಸ್ ತನ್ನ ಮದುವೆಯ ಹೊರಗೆ ಕಮಿಲ ಪಾರ್ಕರ್ ಬೌಲ್ಸ್ ಎಂಬ ತನ್ನ ಗೆಳತಿಯ ಜೊತೆ ಸಂಬಂಧವನ್ನು ಬೆಳೆಸಿದ್ದ. ಈ ವಿಚಾರದಲ್ಲಿ ಡಯಾನಾ ಮತ್ತು ಪ್ರಿನ್ಸ್ ಚಾರ್ಲ್ಸ್ ಇವರಿಬ್ಬರ ನಡುವೆ ಮನಸ್ತಾಪಗಳು, ಬಿರುಕುಗಳು ಮೂಡಿದವು. ಇವರಿಬ್ಬರ ಮದುವೆ ವಿಚ್ಚೇದನದಲ್ಲಿ ಮುಕ್ತಾಯವಾಯಿತು. 

ಜನರು ರಾಣಿ ಮತ್ತು ರಾಜಮನೆತನವನ್ನು ದೂರಿದರು. ರಾಣಿಯು ಡಯಾನಾಳ ಮಾನಸಿಕ ಆಂದೋಲನವನ್ನು ಅರ್ಥಮಾಡಿಕೊಳ್ಳಲಿಲ್ಲ ಎಂದು ದೂರಿದರು. ಡಯಾನ ವಿಚ್ಚೇದನವಾದ ಮೇಲೆ ಹಲವು ಪರಗಂಡಸರ ಸಂಬಂಧ ಮಾಡಿದಳು. ರಾಣಿ ಮನೆಯವರು ಅವಳನ್ನು ದೂರಮಾಡಿದರು.

೧೯೯೭ರಲ್ಲಿ ಡಯಾನ ಕಾರಿನ ಅಪಘಾತದಲ್ಲಿ ಸಿಲುಕಿಕೊಂಡು ಪ್ಯಾರಿಸ್ಸಿನಲ್ಲಿ ಪ್ರಾಣಬಿಟ್ಟಳು. ಆಗ ರಾಣಿ ಯಾವ ತರಹದ ಭಾವನೆಗಳನ್ನುತೋರಿಸಲ್ಲಿಲ್ಲ. ಜನಸಾಮನ್ಯರು ತಮ್ಮ ಹತ್ತಿರದ ಬಂಧುವನ್ನು ಕಳೆದುಕೊಂಡಂತೆ ಗೋಳಾಡಿದರು. ರಾಣಿಯು ತನ್ನ ಸಹಾನುಭೂತಿಯನ್ನು ತೋರಿಸಲಿಲ್ಲ ಎಂದು ಜನ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿದರು. ಡಯಾನಾಳ ಶವಸಂಸ್ಕಾರಕ್ಕಾಗಿ ಕಿಕ್ಕಿರಿದ ಜನ, ಅವರ ಶೋಕ, ದುಃಖ, ರೋದನಗಳು ರಾಣಿಗೆ ಅಚ್ಚರಿಯನ್ನುಂಟು ಮಾಡಿದವು. ಅರಮನೆಯ ಸುತ್ತ ಸಂತಾಪಸೂಚಿಸಲು ನೆರೆದಿದ್ದ ಜನ, ಅವರು ಕಾಣಿಕೆಯಾಗಿ ತಂದಿದ್ದ ಹೂ ಗುಚ್ಛಗಳ ಬೆಟ್ಟ, ರಾಣಿಗೆ ದಿಗ್ಭ್ರಮೆಯನ್ನು ನೀಡಿತ್ತು. ಇವೆಲ್ಲವು ನಡೆದ ಮೇಲೆ ಕೊನೆಗೆ ರಾಣಿ ಜನರೂಡನೆ ಬೆರತು ಅನುಕಂಪ ತೋರಿಸಿದಳು. ಈಗ ರಾಣಿ ಎಲ್ಲರ ಅಚ್ಚುಮೆಚ್ಚು! 
********************

ನನ್ನ ಜ್ಯುಬಿಲಿ ನೆನಪುಗಳು
- ಶ್ರೀವತ್ಸ ದೇಸಾಯಿ

ನಾನು ಆಗ ಆರು ವರ್ಷದವನಿದ್ದಾಗ ಊಟಿಯಲ್ಲಿ ಜೆಲ್ ಮೆಮೋರಿಯಲ್ ಸ್ಕೂಲಿನಲ್ಲಿ ಓದುತ್ತಿದ್ದಾಗಿನ ನೆನಪು. ಫೆಬ್ರುವರಿ ಕೊನೆ ಅಥವಾ ಮಾರ್ಚ್ ತಿಂಗಳ ಹೊಂಬಿಸಿಲಿನ ಬೆಳಿಗ್ಗೆ. ನಮ್ಮ ಶಾಲೆಯ ಆಡಳಿತದಲ್ಲಿ ಇಬ್ಬರು ಬಿಳಿಯ ಹಿರಿಯರು ಬರುತ್ತಾರೆಂದೂ ಅಸೆಂಬ್ಲಿಯಲ್ಲಿ ಏನೋ ಮಹತ್ವದ ಘೋಷಣೆ ಅಗುವದಿದೆ ಅಂತ ನಾವೆಲ್ಲ ವಿದ್ಯಾರ್ಥಿಗಳು ಓಪನ್ ಟಾಪ್ ಕಾರಿನಲ್ಲಿ ಬರಲಿರುವ ಗಣ್ಯರನ್ನು ಹರ್ಷದಿಂದ ಸ್ವಾಗತಿಸಲು ಶಾಲೆಯ ಒಳಾಂಗಣದ ರಸ್ತೆಗುಂಟ ಕೈಯಲ್ಲಿ ಒಂದು ಬಾವುಟವನ್ನು ಹಿಡಿದು ಕಾಯುತ್ತಾ ನಿಂತ ನೆನಪು. ಆ ಎಳೆ ವಯಸ್ಸಿನಲ್ಲಿ ಇಂಗ್ಲೆಂಡ್ ಅನ್ನುವ ಒಂದು ದೇಶವಂತಾಗಲಿ, ಎಲಿಝಬೆತ್ ಎನ್ನುವವಳು ಹೊಸತಾಗಿ ಅದರ ರಾಣಿಯಾಗಲಿದ್ದಾಳೆ ಎನ್ನುವದಾಗಲಿ ನಮ್ಮ ಬಾಲಿಶ ಬುದ್ಧಿಗೆ ಎಟುಕದ ವಿಷಯವಾಗಿತ್ತು. ನನಗೆ ಇನ್ನೂ ನೆನಪಿನಲ್ಲಿ ಅಚ್ಚಳಿಯದೆ ಒತ್ತಿದ ಅದರ 3124 ನಂಬರ್ ಪ್ಲೇಟ್ ಹೊತ್ತ ಕಾರು ಮಂದಗತಿಯಿಂದ ಬರುತ್ತಿದ್ದುದು, ನಮ್ಮ ಕ್ಲಾಸ್ ಟೀಚರ್ ಸೂಚನೆಯಂತೆ ನಾವೆಲ್ಲ ಕೈಧ್ವಜಗಳನ್ನು ಆಡಿಸುತ್ತ ಹರ್ಷೋದ್ಗಾರ ಮಾಡಿದ್ದು ಈಗ ನೆನಪಿಸಿಕೊಂಡರೂ ರೋಮಾಂಚನ.

ತದನಂತರ ಮುಂದಿನ ನಾಲ್ಕೂ ಮುಖ್ಯ ಜ್ಯುಬಿಲಿಗಳನ್ನು(25, 50, 60 ಮತ್ತು ಈ ವಾರದ 70) ಈ ದೇಶದಲ್ಲಿ ಕಂಡಿದ್ದೇನೆ. 2012ರಲ್ಲಿ ನಮ್ಮ ಸ್ಥಳೀಕ ಚರ್ಚಿನವರು ಭರ್ಜರಿ ಸ್ಥಳೀಯ ಸಮುದಾಯ ಸ್ಟ್ರೀಟ್ ಪಾರ್ಟಿ ಮತ್ತು ಡಿನ್ನರ್ ಯೋಜಿಸಿದಾಗ ಅದನ್ನು ನಮ್ಮಊರಿನ ವಿಡಿಯೋ ಕ್ಲಬ್ಬಿನ ಮಿತ್ರರೊಂದಿಗೆ ವಿಡಿಯೋ ಮಾಡುವ ಅವಕಾಶ ಸಹ ಒದಗಿ ಬಂದಿತ್ತು.

ಈ ’ಜ್ಯುಬಿಲಿ ” ಪದದ ಇತಿಹಾಸ ಸ್ವಾರಸ್ಯಕರವಾಗಿದೆ. ಆ ಶಬ್ದದ ಉತ್ಪತ್ತಿ ಯಹೂದ್ಯರ ಹೀಬ್ರೂ ಭಾಷೆಯ ಯೋಬೇಲ್ ಶಬ್ದ ಅಂತ ಹೇಳುತ್ತಾರೆ. ಆದರ ಅರ್ಥ ಟಗರಿನ ಕೊಂಬಿನಿಂದ ಮಾಡಿದ ಕಹಳೆ ಅಂತ. ರೋಮನ್ ಕ್ಯಾಥೊಲಿಕ್ ಧರ್ಮದ ಪ್ರಕಾರ ಹಿಂದಿನಕಾಲದಲ್ಲಿ ಏಳನೆಯ ವರ್ಷ ಕೃಷಿಕರು ಭೂಮಿಯನ್ನು ಬೀಳು ಬಿಟ್ಟರೆ ಮುಂದಿನ ವರ್ಷ ನಿಸರ್ಗ ಸಮೃದ್ಧಿ ಕೊಡುತ್ತದೆ ಎನ್ನುವ ನಂಬಿಕೆ. ಅದು ಬಂಧ ವಿಮೋಚಕ ಅಥವಾ ಪಾಪ ವಿಮೋಚಕ ಅನ್ನುವ ನಂಬಿಕೆ. 14ನೆಯ ಶತಮಾನದ ನಂತರ ಅದು ಬದಲಾಗಿ ರಜತ (25), ಸುವರ್ಣ(50) ಮತ್ತು ವಜ್ರಮಹೋತ್ಸವಗಳ(60) ಪದ್ಧತಿ ಜಾರಿಯಲ್ಲಿ ಬಂದಂತಿದೆ. Platinum ಇನ್ನೂ ಹೊಸತು, ಇಲ್ಲಿಯವರೆಗೆ ಯಾವ ರಾಜ-ರಾಣಿಯೂ ಆ ಮಲಿಗಲ್ಲನ್ನು ದಾಟಿಲ್ಲ ಎಂತಲೆ ಈ ವರ್ಷದ ಸಂಭ್ರಮಕ್ಕೆ ಹೆಚ್ಚಿನ ಮಹತ್ವ. ಇತ್ತಿತ್ತಲಾಗಿ ಅಂದರೆ 50, 60 ಮತ್ತು 70 ವಾರ್ಷಿಕಗಳು ಹೆಚ್ಚು ಅದ್ದೂರಿಯಿಂದ ಆಚರಿಸಲ್ಪಟ್ಟಿವೆ. ನಾನು ಈ ದೇಶಕ್ಕೆ ಬಂದ ಹೊಸತರಲ್ಲಿ ಸಿಲ್ವರ್ ಜುಬಿಲೀ ಕಾಲದ 1977ರಲ್ಲಿ ಎಲ್ಲ ಊರುಗಳಲ್ಲಿ ಸ್ಟ್ರೀಟ್ ಪಾರ್ಟಿ ನಡೆದ ವಿವರ ಪೇಪರಿನಲ್ಲಿ ಓದಿದ್ದೆ. 2002 ರ ಸುವರ್ಣ ಮಹೋತ್ಸವ ಇನ್ನೂ ಮಹತ್ವದ್ದಾಗಿತ್ತು. ಟೆಲಿವಿಷನ್, ಇಂಟರ್ನೆಟ್ಗಳ ಪ್ರಚಾರ ಹೆಚ್ಚುತ್ತ ಹೋಯಿತು. 

2012ರ ವಜ್ರಮಹೋತ್ಸವ ಹೊತ್ತಿಗೆ ಎಲಿಝಬೆಥ್ ರಾಣಿಯ ’ಆಳಿಕೆ’ ಇಲ್ಲಿಯವರೆಗೆ ಸುದೀರ್ಘ ಕಾಲ ಸಿಂಹಾಸನದಲ್ಲಿ ಕುಳಿತ ವಿಕ್ಟೋರಿಯಾ ಮಹಾರಾಣಿಯ ದಾಖಲೆಗೆ ಹತ್ತಿರ ಬಂದಾಗ ನಮ್ಮೂರಿನ ಸೇಂಟ್ ಫ್ರಾನ್ಸಿಸ್ ಚರ್ಚಿನವರು ತಮ್ಮ ಸಮುದಾಯ ಕಾರ್ಯದ ಅಂಗವಾಗಿ ದೊಡ್ಡ ಪ್ರಮಾಣದಲ್ಲಿ ಸ್ಟ್ರೀಟ್ಪಾರ್ಟಿ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಾಗ ನಮ್ಮ ವಿಡಿಯೋ ಕ್ಲಬ್ಬಿನ ಪರವಾಗಿ ಅದರ ಸಿದ್ಧತೆ ಮತ್ತು ಪಾರ್ಟಿಯ ದಿನ ವಿಡಿಯೋ ಹೊಣೆಯನ್ನು ಹೊತ್ತೆವು ನಾವಿಬ್ಬರು. ಮೆನು ಪ್ರಕಾರ ತಯಾರಿಸಿದ ಭವ್ಯ ಭೋಜನಕ್ಕಾಗಿ 63 ಕೆ ಜಿ ಬಟಾಟೆ,50 ಕೆ ಜಿ ಈರುಳ್ಳಿ, 27 ಕೆ ಜಿ ಗಜ್ಜರಿ, 26 ಪೈಂಟು ಡಬಲ್ ಕ್ರೀಂ ತಂದಾಯಿತು. ಎಂಟು-ಹತ್ತು ಅಡುಗೆಯವರು ದುಡಿದರು, ಅಲ್ಲದೆ ಟೇಬಲ್ ಮತ್ತು ಕೋಣೆಗಳ ಅಲಂಕಾರಕ್ಕೆ ಸ್ವಯಂಸೇವಕರು ಇದ್ದರು. ಕೊನೆಗೆ ಆ ದಿನವೇ ಧೋ ಅಂತ ಮಳೆ ಬಂದು ಬೀದಿಯಲ್ಲಾಗಲಿದ್ದ ಮೇಜವಾನಿ ಚರ್ಚಿನ ಒಳಗೇ ಆಯಿತು. ಆದರೂ ಜನರ ಉತ್ಸಾಹ ಮತ್ತು ಸಂಭ್ರಮಕ್ಕೆ ಕೊರತೆಯಿರಲಿಲ್ಲ. ಹಿರಿಯರು, ಮಕ್ಕಳು, ಸ್ಕೌಟ್ ಪಡೆಗಳು ಭಾಗವಹಿಸಿದ್ದನ್ನು ಮರೆಯಲಾಗದು. ಅದನ್ನು ಇದರೊಟ್ಟಿಗಿರುವ ವಿಡಿಯೋದಲ್ಲಿ ನೋಡ ಬಹುದು.

ನಾವು ಭಾರತದಲ್ಲಿ ಹುಟ್ಟಿದ್ದರೂ ದಶಕಗಳಿಂದ ನಮಗೆ ಆಶ್ರಯಕೊಟ್ಟು ಸಲುಹಿದ ಈ ದೇಶದ ರಾಣಿ ಎಲಿಝಬೆಥ್ ರಾಣಿಯ ’ಆಡಳಿತದ’ ಈ ಐತಿಹಾಸಿಕ ದಿನದಲ್ಲಿ ಈ ದೇಶದ ಪ್ರಜೆಗಳಂತೆ ನಾವು ಸಹ ಪಾಲುಗೊಳ್ಳುವುದರಲ್ಲಿ ತಪ್ಪೇನಿಲ್ಲ ಅಂತ ನನ್ನ ಎಣಿಕೆ. ಅಭ್ಯುದಯ, ಪ್ರಜಾಪ್ರಭುತ್ವ ಮತ್ತು ಶಾಂತಿ ಇವು ಮೂರಕ್ಕೆ ಪ್ರಾಶಸ್ತ್ಯ ಕೊಡುವ 1949 ರಿಂದ ಬದಲಾದ ಬ್ರಿಟಿಷ್ ಕಾಮನ್ ವೆಲ್ತ್ ಸಂಘಟನೆಯ ಪ್ರಮುಖಳಾಗಿರುವದರಿಂದ ಈ ದೇಶದಲ್ಲಷ್ಟೇ ಅಲ್ಲದೆ ಜಗತ್ತಿನ ಅರ್ಧದಷ್ಟು ಜನರಿಗೆ ಸಹ ಈ ಸಾಧನೆ ಒಂದು ಮತ್ವದ ಘಟನೆ. ಇದು ನಮ್ಮ ಮನದಲ್ಲಿ ಅವಿಸ್ಮರಣೀಯವಾಗಿ ಉಳಿಯಲಿದೆ.
Queen’s diamond jubilee dinner ( credits: Shrivatsa Desai and Doncaster Movie Makers)
********************
ಫೋಟೋ – ಗೂಗಲ್ ಕೃಪೆ
ರಾಣಿ ಬೇಕೊ? ರಾಜ ಮನೆತನ ಬೇಕೊ ?- ಆಸ್ಟ್ರೇಲಿಯದ ಜಿಜ್ಞಾಸೆ! 
- ಡಾ. ವಿನತೆ ಶರ್ಮ, ಬ್ರಿಸ್ಬೇನ್, ಆಸ್ಟ್ರೇಲಿಯಾ  

ಈ ಜಿಜ್ಞಾಸೆ ಯಾವತ್ತೂ ಇರುವುದೆ ಹೌದು! ಅದನ್ನು ಮತ್ತೆ ಕೆದಕಿದ್ದು ಕಳೆದ ಏಪ್ರಿಲ್ ತಿಂಗಳಲ್ಲಿ ರಾಜಕುಮಾರಿ ಆನ್ ಆಸ್ಟ್ರೇಲಿಯಕ್ಕೆ ಕೊಟ್ಟ ಭೇಟಿ. ಪ್ರತಿವರ್ಷವೂ ಸಿಡ್ನಿ ನಗರದಲ್ಲಿ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನಡೆಯುವ Roya Easter Show ಗೆ ಅವರು ಬರುತ್ತಾರೆ ಎನ್ನುವುದು ಖಾತ್ರಿಯಾದಾಗ ಮಾಧ್ಯಮದವರು ಸಾರ್ವಜನಿಕರೊಡನೆ ಚಿಕ್ಕದೊಂದು ಸಮೀಕ್ಷೆ ನಡೆಸಿ ‘ಆಸ್ಟ್ರೇಲಿಯಕ್ಕೆ ರಾಜ ಮನೆತನ ಅವಶ್ಯವಿದೆಯೆ’ ಎಂದು ಕೇಳಿದ್ದರು. ಇದೇನು ಹೊಸಪ್ರಶ್ನೆಯಲ್ಲ, ಆಗಾಗ ದಿಢೀರನೆ ಪ್ರತ್ಯಕ್ಷವಾಗುವ ಪ್ರಶ್ನೆಯದು. ಮಾಮೂಲಿನಂತೆ ‘ರಾಣಿ ಎಲಿಝಬೆತ್ ಎಂದರೆ ನಮಗೆಲ್ಲಾ ಇನ್ನಿಲ್ಲದ ಪ್ರೀತಿ, ಅದಕ್ಕೇ ರಾಜಮನೆತನವನ್ನು ಪ್ರೀತಿಸುತ್ತೀವಿ’ ಅಂದರು ಜನ. ಇಸವಿ ೨೦೧೧ರಲ್ಲಿ ರಾಜಕುಮಾರ ವಿಲಿಯಂ ಮತ್ತವರ ಪ್ರಿಯ ಸಂಗಾತಿ ಕೇಟ್ ಮದುವೆಯಾದ ದಿನ ನಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಸಹೋದ್ಯೋಗಿಯೊಬ್ಬರು ಸ್ಪಾಂಜ್ ಕೇಕ್ ಬೇಯಿಸಿ ತಂದಿದ್ದರು. ಅದರ ಜೊತೆಗೆ ಒಂದಷ್ಟು ಅಲಂಕಾರ ಮತ್ತು ಪುಟಾಣಿ ವಿಲಿಯಂ ಮತ್ತು ಕೇಟ್ಗೊಂಬೆಗಳು!! ನಮ್ಮನ್ನೆಲ್ಲಾ ಕರೆದು ಕೇಕ್ ಕತ್ತರಿಸಿ ಬಲು ಸಂಭ್ರಮಿಸಿದ್ದರು. ಅವರು ಕಟ್ಟಾ ರಾಜಮನೆತನದ ಬೆಂಬಲಿಗರು, ಆರಾಧಕರು ಎಂದು ಹೇಳಿಕೊಂಡರು. ಅದೂ ಕೂಡ ಹೊಸತೇನಲ್ಲ. ಹೇಳಿಕೇಳಿ ಇಲ್ಲಿನ ಜನಸಂಖ್ಯೆಯಲ್ಲಿ ಹದಿನೆಂಟನೇ ಶತಮಾನದಿಂದ ಆಸ್ಟ್ರೇಲಿಯವನ್ನು ಆಕ್ರಮಿಸಿಕೊಂಡು ವಸಾಹತುಶಾಹಿಗಳಾಗಿ ತಳವೂರಿದ ಬ್ರಿಟಿಷರ ಸಂತತಿಯೆ ಹೆಚ್ಚಿರುವುದು. ಮುಕ್ಕಾಲು ಜನ ಬಿಳಿಯರಿಗೆ ಇಂದಿಗೂ ತಮ್ಮ ಮಾತೃದೇಶ ಬ್ರಿಟನ್ ಎನ್ನುವ ಭಾವನೆ ಬಲವಾಗಿದೆ. ಅವರಿಗೆಲ್ಲ ತಾಯ್ನಾಡು ಬ್ರಿಟನ್ನಿನಲ್ಲಿ ಮುತ್ತಜ್ಜ-ಮುತ್ತಜ್ಜಿ, ಅಜ್ಜ-ಅಜ್ಜಿ, ಅಂಕಲ್-ಆಂಟಿ ಹೀಗೆ ಕುಟುಂಬದ ನಂಟಿದೆ. ‘ತಮ್ಮ ರಾಣಿ’ ಎಂದು ರಾಣಿ ಎಲಿಝಬೆತ್ ಅವರನ್ನು ಬಹಳ ಅಕ್ಕರೆಯಿಂದ ನೆನಪಿಸಿಕೊಳ್ಳುತ್ತಾರೆ. ಇಂಗ್ಲೆಂಡಿನಲ್ಲಿ ರಾಜ ಮನೆತನಕ್ಕೆ ಎಷ್ಟು ಗೌರವ ಸೂಚಿಸುತ್ತಾರೋ ಇಲ್ಲಿ ಕೂಡ ಅಷ್ಟೇ ಮುತುವರ್ಜಿಯಿದೆ. ಹಾಗಾಗಿ ಇಂದಿಗೂ ಕಾಮನ್ವೆಲ್ತ್ ದೇಶವಾದರೂ, ಪ್ರಜಾಪ್ರಭುತ್ವದ ಆಡಳಿತ ಕ್ರಮವಿದ್ದರೂ ರಾಣಿಯೇ ಇಲ್ಲಿನ ಆಡಳಿತದ ಯಜಮಾನಿ. ಆಕೆಯ ಪ್ರತಿನಿಧಿಯಾಗಿ ದೇಶೀಯ ಮಟ್ಟದಲ್ಲಿ ಒಬ್ಬರು ಗವರ್ನರ್ ಜನರಲ್ ಇದ್ದಾರೆ. 

ಇತ್ತೀಚೆಗೆ ರಾಣಿ ಬೇಕೊ ರಾಜ ಮನೆತನ ಬೇಕೊ ಎನ್ನುವ ವಿಷಯ ಕ್ಲಿಷ್ಟವಾಗುತ್ತಿದೆ. ಒಂದು ರೀತಿಯಲ್ಲಿ ಬ್ರೆಕ್ಸಿಟ್ ತರಹ. ಅವರನ್ನು ತೊರೆದುಕೊಂಡು ಸ್ವತಂತ್ರವಾಗಬೇಕು ಎಂದರೂ ಅಧಿಕಾರದಲ್ಲಿರುವವರಿಗೆ ರಾಜ ಮನೆತನವನ್ನು ಬಿಟ್ಟಿರಲಾಗುವುದಿಲ್ಲ. ಈ ರಾಣಿಯ ನಂತರ ರಾಜನ ಕಾಲ ಶುರುವಾದಾಗಲೂ ಅದೇ ವಾಂಛೆ, ಬಾಂಧವ್ಯ, ಅವಶ್ಯಕತೆ ಇರುತ್ತದೊ ಇಲ್ಲವೊ ಕಾಲವೇ ಹೇಳುತ್ತದೆ. 

********************

ಪ್ಲಾಟಿನಂ ಪುಡ್ಡಿಂಗ್; ಫೋಟೋ ಕೃಪೆ ಗೂಗಲ್
ಪ್ಲಾಟಿನಂ ಜ್ಯೂಬಿಲಿಯ ಪ್ಲಾಟಿನಂ ಪುಡ್ಡಿಂಗ್ - ಸವಿರುಚಿ 
(ಲೆಮನ್ ಸ್ವಿಸ್ಸ್ ರೋಲ್ ಹಾಗೂ ಅಮರೆಟ್ಟಿ ಟ್ರೈಫಲ್) 
- ಶ್ರೀಮತಿ ಸವಿತಾ ಸುರೇಶ 

ಬ್ರಿಟನಿನ ಮಹಾರಾಣಿಯವರ 70ನೇ ಹುಟ್ಟುಹಬ್ಬದ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಿದ್ದ ಪ್ಲ್ಯಾಟಿನಮ್ ಪುಡ್ಡಿಂಗ್ ಸ್ಪರ್ಧೆಯಲ್ಲಿ ವಿಜಯಶಾಲಿಯಾದ ಜೆಮ್ಮಾ ಮೆಲ್ವಿನ್ ರವರ ಈ ವೈವಿಧ್ಯಮಯ ವೈಶಿಷ್ಟ್ಯದ ಸವಿ ಖಾದ್ಯಕ್ಕಾಗಿ ಬೇಕಾಗುವ ಸಾಮಗ್ರಿಗಳು:

ಸ್ವಿಸ್ಸ್ ರೋಲ್ ಗಾಗಿ:
ಮೊಟ್ಟೆ (ದೊಡ್ಡ)- 4
ಸಕ್ಕರೆ (ಕ್ಯಾಸ್ಟರ್)- 100 ಗ್ರಾಂ 
(ಡಸ್ಟಿಂಗಾಗಿ ಸ್ವಲ್ಪಧಿಕವಾಗಿ ಇಟ್ಟುಕೊಳ್ಳಿ)
ಜರಡೆ ಹಿಡಿದ ಸೆಲ್ಫ್ ರೈಸಿಂಗ್ ಫ್ಲೋರ್- 100 ಗ್ರಾಂ 
ಬೆಣ್ಣೆ- ಸ್ವಲ್ಪ 

ಲೆಮನ್ ಕರ್ಡ್ ಗಾಗಿ:
ಮೊಟ್ಟೆಯ ಭಂಡಾರ- 4
ಸಕ್ಕರೆ-135 ಗ್ರಾಂ 
ಬೆಣ್ಣೆ- 85 ಗ್ರಾಂ 
ನಿಂಬೆಯ ಹೊರ ತಿರುಳು(zest)- 1
ನಿಂಬೆ ರಸ- 80 ಮಿ.ಲಿ

ಸೇಂಟ್ ಕ್ಲೆಮೆಂಟ್ ಜೆಲ್ಲಿ:
ಜಿಲ್ಯಾಟಿನ್ ಎಲೆ-6
ನಿಂಬೆ ಹಣ್ಣು-4
ಆರೆಂಜ್- 3
ಗೋಲ್ಡನ್ ಕ್ಯಾಸ್ಟರ್ ಸಕ್ಕರೆ-150 ಗ್ರಾಂ 
	
ಕಸ್ಟರ್ಡ್: 
ಡಬಲ್ ಕ್ರೀಂ-425 ಮಿ.ಲಿ
ಮೊಟ್ಟೆ ಭಂಡಾರ- 3
ಗೋಲ್ಡನ್ ಕ್ಯಾಸ್ಟರ್ ಸಕ್ಕರೆ-25 ಗ್ರಾಂ
ಕಾರ್ನ್ ಫ್ಲೋರ್-1 ಚಮಚ 
ಲೆಮನ್ ಎಕ್ಸ್ ಟ್ರ್ಯಾಕ್ಟ್- 1 ಚಮಚ

ಅಮರೆಟ್ಟಿ ಬಿಸ್ಕತ್ ಗಾಗಿ:
ಮೊಟ್ಟೆಯ ಬಿಳಿಯ ಭಾಗ- 2
ಕ್ಯಾಸ್ಟರ್ ಸಕ್ಕರೆ-170 ಗ್ರಾಂ 
ಬಾದಾಮಿ ಪುಡಿ-170 ಗ್ರಾಂ 
ಅಮರೆಟ್ಟೊ-1 ಚಮಚ
ಬೆಣ್ಣೆ/ ಎಣ್ಣೆ- ಸ್ವಲ್ಪ 

ಚಂಕಿ ಮ್ಯಾಂಡರಿನ್ ಕಾಲಿಸ್ ಗಾಗಿ :
ಮ್ಯಾಂಡರಿನ್ ಟಿನ್ನುಗಳು- 4
ಕ್ಯಾಸ್ಟರ್ ಸಕ್ಕರೆ-45 ಗ್ರಾಂ 

ಜ್ಯೂವೆಲ್ಡ್ ಚಾಕಲೇಟ್ ಬಾರ್ಕ್ ಗಾಗಿ:
ಮಿಕ್ಸ್ಡ್ ಪೀಲ್ - 50 ಗ್ರಾಂ 
ಸಕ್ಕರೆ- 1 ಚಮಚ 
ಬಿಳಿ ಚಾಕಲೇಟ್- 200 ಗ್ರಾಂ 
ಜೋಡಣೆಗಾಗಿ ಡಬಲ್ ಕ್ರೀಂ- 600 ಮಿ.ಲಿ.

ಸ್ವಿಸ್ಸ್ ರೋಲ್ ಮಾಡುವ ವಿಧಾನ:
ಮೊದಲಿಗೆ 2 ಸ್ವಿಸ್ಸ್ ರೋಲ್ ಟಿನ್ ಗಳಿಗೆ ಬೆಣ್ಣೆ ಸವರಿ ಬೇಕಿಂಗ್ ಕಾಗದ ಹಾಕಿ, ಓವನ್ ನನ್ನು 180° ಮುಂಗಾವಿಸಿ. ಒಂದು ದೊಡ್ಡ ಬೌಲಿಗೆ ಮೊಟ್ಟೆಗಳನ್ನು ಹಾಗೂ ಸಕ್ಕರೆಯನ್ನು ವಿದ್ಯುತ್ ವಿಸ್ಕಿನ ಸಹಾಯದಿಂದ 5 ನಿಮಿಷ ಬೀಟ್ ಮಾಡಿ. ಇದಕ್ಕೆ ಸೆಲ್ಫ್ ರೈಸಿಂಗ್ ಫ್ಲೋರ್ ಹಾಕಿ ನಿಧಾನವಾಗಿ ಬೆರೆಸಿ ಎರಡೂ ಟಿನ್ ಗಳಿಗೆ ವಿಭಜಿಸಿ.
10-12 ನಿಮಿಷ ಬೇಕ್ ಮಾಡಿ. ನಂತರ ಬೇಕಿಂಗ್ ಕಾಗದದ ಮೇಲೆ ಸಕ್ಕರೆ ಪುಡಿ ಸಿಂಪಡಿಸಿ ಬೇಕ್ ಮಾಡಿದ ಸ್ಪಾಂಜನ್ನು ಅದರ ಮೇಲಿಟ್ಟು ಪೇಪರ್ ತೆಗೆದು ಸಣ್ಣಗೆ ಎರಡೂ ಬದಿಯಿಂದ ಸುತ್ತಿ ತಣಿಯಲು ಬಿಡಿ. 

ಲೆಮನ್ ಕರ್ಡ್ ಮಾಡುವ ವಿಧಾನ:
ಒಂದು ಗಾಜಿನ ಬೌಲಿಗೆ ಮೊಟ್ಟೆಯ ಭಂಡಾರ, ಸಕ್ಕರೆ, ಬೆಣ್ಣೆ, ನಿಂಬೆಯ ಹೊರ ತಿರುಳು, ನಿಂಬೆ ರಸ ಎಲ್ಲಾ ಬೆರೆಸಿ ಮತ್ತೊಂದು ಸಣ್ಣ ಉರಿಯಲ್ಲಿ ನೀರಿನ ಪಾತ್ರೆಯ ಮೇಲೆ ಇಟ್ಟು 15 ನಿಮಿಷ ವಿಸ್ಕ್ ಮಾಡಿ. 
ಗಟ್ಟಿಯಾದ ಬಳಿಕ ಇನ್ನೊಂದು ಬೌಲಿಗೆ ವರ್ಗಾಯಿಸಿ ತಣಿಯಲು ಬಿಡಿ. 

ಸೇಂಟ್ ಕ್ಲೆಮೆಂಟ್ ಜೆಲ್ಲಿ ಮಾಡುವ ವಿಧಾನ:
ಜಿಲ್ಯಾಟಿನ್ ಎಲೆಗಳನ್ನು ತಣ್ಣೀರಿನಲ್ಲಿ 5 ನಿಮಿಷ ನೆನೆಸಿ. ನಿಂಬೆ ಹಣ್ಣು ಮತ್ತು ಆರೆಂಜ್ ಸಿಪ್ಪೆಯನ್ನು ತಲಾ 6 ಸ್ಟ್ರಿಪ್ ಗಳಾಗಿ ಎರೆದಿಟ್ಟು ಒಂದು ಪಾತ್ರೆಯಲ್ಲಿ 400 ಮಿ.ಲಿ ನೀರು ಹಾಕಿ ಸಕ್ಕರೆ ಸೇರಿಸಿ ಮಧ್ಯಮ ಉರಿಯಲ್ಲಿ ಈ ಸಿಪ್ಪೆಯನ್ನು ಹಾಕಿ ತಿರುವುತ್ತಾ ಇದ್ದು ನಂತರ ಹೊರ ತೆಗೆದುಕೊಳ್ಳಿ. 
ಜಿಲ್ಯಾಟಿನ್ ಎಲೆ ಗಳಿಂದ ನೀರು ತೆಗೆದು ಈ ನಿಂಬೆ ನೀರಿಗೆ ಬೆರೆಸಿ. ಇದಕ್ಕೆ ನಿಂಬೆ ರಸ ಹಾಗೂ ಆರೆಂಜ್ ರಸವನ್ನು ಸೇರಿಸಿ ತಣಿಯಲು ಬಿಡಿ. 

ಅಮರೆಟ್ಟಿ ಬಿಸ್ಕತ್ ಮಾಡುವ ವಿಧಾನ:
ಮೊದಲಿಗೆ ಓವನ್ ನನ್ನು 180° ಮುಂಗಾವಿಸಿ. ಒಂದು ದೊಡ್ಡ ಬೌಲಿಗೆ ಮೊಟ್ಟೆಯ ಬಿಳಿಯ ಭಾಗವನ್ನು ಹಾಕಿ ಬೀಟ್ ಮಾಡಿ. ಇದಕ್ಕೆ ಸಕ್ಕರೆ, ಬಾದಾಮಿ ಪುಡಿ, ಅಮರೆಟ್ಟೊ ಬೆರೆಸಿ ನುಣುಪಾದ ಪೇಸ್ಟ್ ಹದಕ್ಕೆ ಮಾಡಿ. ಒಂದು ಬೇಕಿಂಗ್ ಟ್ರೇಯಲ್ಲಿ ಬೇಕಿಂಗ್ ಕಾಗದ ಹಾಕಿ ಬೆಣ್ಣೆ ಸವರಿ ಒಂದು ಚಮಚದಿಂದ ಈ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು 2cm-3cm ಅಂತರದಲ್ಲಿ ಹಾಕಿ 15-20 ನಿಮಿಷ ಹೊಂಬಣ್ಣ ಆಗುವವವರೆಗು ಬೇಕ್ ಮಾಡಿ. ನಂತರ ಹೊರತೆಗೆದು ತಣಿಯಲು ಬಿಡಿ. 

ಚಂಕಿ ಮ್ಯಾಂಡರಿನ್ ಕಾಲಿಸ್ ಮಾಡುವ ವಿಧಾನ:
2 ಮ್ಯಾಂಡರಿನ್ ಟಿನ್ ತೆಗೆದು ಸೋಸಿಕೊಳ್ಳಿ. ಒಂದು ಪಾತ್ರೆಯಲ್ಲಿ ವರ್ಗಾಯಿಸಿ ಸಕ್ಕರೆ ಸೇರಿಸಿ ನಿಧಾನವಾಗಿ ಕಾಯಲು ಇಡಿ. ಸ್ವಲ್ಪ ತಣ್ಣೀರಿಗೆ ಆರೋರೂಟ್ ಬೆರೆಸಿ ಈ ಮಿಶ್ರಣಕ್ಕೆ ಸೇರಿಸಿ, ನಿಂಬೆ ರಸ ಹಾಕಿ ದೊಡ್ಡ ಬೌಲಿಗೆ ವರ್ಗಾಯಿಸಿ ಮಿಕ್ಕ 2 ಟಿನ್ ಗಳ ಮ್ಯಾಂಡರಿನ್ ಹಣ್ಣು ಬೆರೆಸಿ ತಣಿಯಲು ಬಿಡಿ. 

ಜ್ಯೂವೆಲ್ಡ್ ಚಾಕಲೇಟ್ ಬಾರ್ಕ್ ಮಾಡುವ ವಿಧಾನ:
ಬಿಳಿ ಚಾಕಲೇಟನ್ನು ಡಬಲ್ ಬಾಯ್ಲಿಂಗ್ ವಿಧಾನದಲ್ಲಿ ಕರಗಿಸಿ. ಒಂದು ಬೇಕಿಂಗ್ ಟ್ರೇಯಲ್ಲಿ ಬೇಕಿಂಗ್ ಕಾಗದ ಹಾಕಿ ಮಿಕ್ಸ್ಡ್ ಪೀಲ್ ಹರಡಿ ಅದರ ಮೇಲೆ ಈ ಕರಗಿದ ಚಾಕಲೇಟ್ ಹರಡಿ ತಣಿದ ನಂತರ ಚಿತ್ರದಲ್ಲಿ ಕಾಣುವಂತೆ ಮುರಿಯಿರಿ.

ಅಂತಿಮವಾಗಿ ಇವೆಲ್ಲವನ್ನೂ ಜೋಡಿಸಲು ಒಂದು ಟ್ರೈಫಲ್ ಡಿಷ್ ತೆಗೆದುಕೊಂಡು ಮೊದಲಿಗೆ ತಣಿದ ಒಂದು ಸ್ವಿಸ್ಸ್ ರೋಲ್ ನ್ನು ಹರಡಿ ಅದಕ್ಕೆ ಲೆಮನ್ ಕರ್ಡ್ ಸವರಿ ಪುನಃ ಸುತ್ತಿ 2.5 cm ಅಂತರದಲ್ಲಿ ಬಿಲ್ಲೆಗಳನ್ನಾಗಿ ಕತ್ತರಿಸಿ ಕೆಳಭಾಗದಲ್ಲಿ ಈ ಸುರುಳಿಗಳು ಚಿತ್ರದಲ್ಲಿ ಕಾಣುವಂತೆ ಜೋಡಿಸಿ. ಮತ್ತೊಂದು ರೋಲನ್ನು ದಪ್ಪ ಬಿಲ್ಲೆಯಾಗಿ ಕತ್ತರಿಸಿ, ಉಳಿದ ಸ್ಪಾಂಜ್ ನಿಂದ ಮಿಕ್ಕ ಭಾಗ ತುಂಬಿಸಿ.

ಅದರ ಮೇಲೆ ಈಗ ಸೇಂಟ್ ಕ್ಲೆಮೆಂಟ್ ಜೆಲ್ಲಿ ಹಾಕಿ ಫ್ರಿಜ್ಜಿನಲ್ಲಿ 3 ಗಂಟೆಗಳ ಕಾಲ ಇಟ್ಟು ಸೆಟ್ ಮಾಡಿ. 
ತದನಂತರ ತೆಗೆದು ಕಸ್ಟರ್ಡ್ ಹರಡಿ ಒಂದು ಪದರ ಅಮರೆಟ್ಟಿ ಬಿಸ್ಕತ್ ಜೋಡಿಸಿ ಅದರ ಮೇಲೆ ಮ್ಯಾಂಡರಿನ್ ಕಾಲಿಸ್ ಹರಡಿ. ಒಂದು ಬೌಲಿಗೆ ಡಬಲ್ ಕ್ರೀಂ ಹಾಕಿ ಬೀಟ್ ಮಾಡಿ ಕಾಲಿಸ್ ಮೇಲೆ ಹಾಕಿ ಅಮರೆಟ್ಟಿ ಬಿಸ್ಕತ್ ಪುಡಿ ಸುತ್ತಲೂ ಉದುರಿಸಿ. ಚಾಕಲೇಟ್ ಬಾರ್ಕ್ ಗಳಿಂದ ಚಿತ್ರದಲ್ಲಿ ಕಾಣುವಂತೆ ಟಾಪ್ಪಿಂಗ್ ಮಾಡಿ.
********************
ರಾಣಿ ಹೆಸರಲ್ಲೊಂದು ಪೈಂಟು
- ಡಾ. ರಾಮ್ ಶರಣ್

ಸಂಜಿ ಕೆಲಸ ಮುಗದ ಮ್ಯಾಲ ಛಾ ಕುಡ್ಕೋತ ರವ್ಯಾ ಜಿಗರಿ ದೋಸ್ತ ದಿನ್ಯಾಗ ಫೋನ್ ಹಚ್ಚಿದ್ದ. ಈ ವೀಕೆಂಡು ದಿನ್ಯಾನ ಭೆಟ್ಟಿ ಆಗೂಣೇನೂ ಅನ್ನೋ ವಿಚಾರ ಅವನದ್ದು. ಮಕ್ಳು-ಮರಿ ಯುನಿವರ್ಸಿಟಿ, ನೌಕರಿ ಅಂತ ಮನಿ ಬಿಟ್ಟಾರ; ಹೆಣ್ತಿರೂ ಕೋರೋನಾ - ಪಿರೋನಾ ಗದ್ಲ ಮುಗೀತಂತ ಇಂಡಿಯಾ ಟ್ರಿಪ್ ಹೋಗ್ಯಾರ. ರಾಣಿ ಸಿಂಹಾಸನಾರೂಢಳಾಗಿ ಎಪ್ಪತ್ತು ವರ್ಷ ಆತಂತ ಬೋರಿಸ್ ಗೆ ಹೇಳಿ ಸುಟ್ಟಿನೂ ಕೊಡ್ಸ್ಯಾಳ. ಭೆಟ್ಟಿ ಆಗೂಣು, ಹರಟಿ ಹೊಡ್ಯೂಣು ಅನ್ನೂದು ರವ್ಯಾನ ಅನಿಸಿಕಿ . ದಿನ್ಯಾಗೂ ಬ್ಯಾರೆ ಕೆಲಸ ಇದ್ದಿದ್ದಿಲ್ಲ, “ಬರ್ತೀನ್ಬಿಡು” ಅಂದ. 

ಗುರುವಾರ ಸಂಜಿ ಗೋಪ್ಯಾನ ಜೋಡಿಗೆ ದಿನ್ಯಾ ಹಾಜರಾದ. ಗೋಪ್ಯಾ, ದಿನ್ಯಾನ ಬಾಜೂ ಮನ್ಯಾಗ ಇರ್ತಿದ್ದ. ಅಂವ ಜಾಸ್ತಿ ಮಾತಾಡೋ ಮನಷಾ ಇದ್ದಿಲ್ಲ. ದೇವ್ರು-ಶಾಸ್ತ್ರ ಅಂದ್ರ ಆಗ್ತಿದ್ದಿಲ್ಲ; ಹಂಗಂತ ಮಾಡೋರಿಗೆ ನೋಡಿ ನಗ್ತಿದ್ದಿಲ್ಲ. ರವ್ಯಾ ಮಾತ್ರ ಶಾಸ್ತ್ರ ಎಲ್ಲ ಪದ್ಧತಿಶೀರ್ ಮಾಡಾಂವ. “ಏನಲೇ ಇವತ್ತಿನ ಪ್ಲ್ಯಾನ” ದಿನ್ನ ಅನ್ನುತ್ಲೆ, “ರಾಣಿ ಜ್ಯುಬಿಲಿ ಐತಲ್ಲ, ನಡಿ ಬುಲ್ಸ್ ಹೆಡ್ ಪಬ್ಬಿಗೆ”, ಎಂದ ರವ್ಯಾ. “ಆದ್ರ ಒಂದ ತ್ರಾಸಾತು ನೋಡು, ಮೂರು ಮಂದಿ ಆಗಿವಿ, ಅಪ್ಯ ಬರ್ತಾನ ಕೇಳ್ತೀನಿ ತಡಿ” ಎಂದು ಮೊಬೈಲ್ ಹಿಡಿದ. “ಬಿಡ್ರಿ, ಇಂಗ್ಲೆಂಡ್ ರಾಣಿ ಜ್ಯುಬಿಲಿ, ಮೂರಾದ್ರೇನು, ಮೂವತ್ತಾದ್ರೇನು; ಪಬ್ನ್ಯಾಗ ರಗಡ ಮಂದಿ ಇರ್ತಾರ, ಚಿಂತಿ ಮಾಡಬ್ಯಾಡ್ರಿ”, ಎಂದು ಗೋಪ್ಯಾ ಸಮಾಧಾನ ಮಾಡಿದ. “ಅಲ್ಲಲೇ, ಕುಡಿಯಾವ್ರ ನಡಕ ಸ್ನ್ಯಾಕ್ ತಿನ್ನಾಕಷ್ಟ ಕುಡಾಂವ, ನಿನ್ನ ಫೆವರಿಟ್ ಸ್ಟಾರ್ ಬಕ್ಸ್ ಬಿಟ್ಟು ಪಬ್ಬಿಗೆ ಕರಕೊಂಡು ಹೊಂಟಿಯಲ್ಲಲೇ” ಎಂದು ದಿನ್ಯ ಕಾಲೆಳೆದ. “ ಅಲ್ಲ, ರಾಜ ಮನತನದ ಸ್ಟಾರ್ ಈಗಂತೂ ಸಕ್ಸ್, ಅದಕ ಸ್ಟಾರ್ ಬಕ್ಸ್ ಬ್ಯಾಡಂತೇನು?” ಎಂದು ಗೋಪ್ಯಾ ಒಗ್ಗರಣಿ ಹಾಕಿದ. “ಹಾಗಲ್ರಲೇ, ಈ ವಾರ ಜ್ಯುಬಿಲಿ, ಇಂಗ್ಲೆಂಡಿನ ಶಾಸ್ತ್ರದ ಪ್ರಕಾರ ಪಬ್ಬಿಗೆ ಹೋಗಿ, ಏನಾರ ಕುಡದ, ತಿಂದ, ಜ್ಯುಬಿಲಿ ಆಚರಿಣಿ ಮಾಡಬೇಕ್ರಲೇ. ಮ್ಯಾಲಿಂದ ಇಲ್ಲಿ ಮಂದಿಗೂ ಸ್ವಲ್ಪ ಬಿಜಿನೆಸ್ ಆಗ್ತದ, ಲಾಭ ಆಗ್ತದ; ಸ್ಟಾರ್ ಬಕ್ಸ್ ನಾಗ ಬರೇ ಅಮೇರಿಕಾದ ಕಂಪೆನಿಗಷ್ಟ ಲಾಭ ಹೌದಿಲ್ಲೋ?” ಇದು ರವ್ಯಾನ ತರ್ಕ. ಗೋಪ್ಯಾ ಹೇಳಿ ಕೇಳಿ ವೆಜಿಟೇರಿಯನ್ನು. ಪಬ್ಬಿನ ಬರ್ಗರ್, ಕೆಟ್ಟ ಟೊಮ್ಯಾಟೋ ಪಾಸ್ತಾ ಅಂದ್ರ ಆಗ್ತಿದ್ದಿಲ್ಲ. ಆ ಊರಲ್ಲೇ ಇದ್ದ ‘ನಳ ಪಾಕ’ ಅನ್ನೋ ಸೌಥ್ ಇಂಡಿಯನ್ ಹೋಟೆಲ್ಲಿಗೆ ಹೋಗಲು ರವ್ಯಾ -ದಿನ್ಯಾರ ಮನಸ್ಸನ್ನು ತಿರಿಗಿಸಲು ಆದಷ್ಟು ಪ್ರಯತ್ನ ಮಾಡಿದರೂ, ಸೋತು, ಅವರ ಹಿಂದೆ ಇಷ್ಟವಿಲ್ಲದೆ ವಾಕಿಂಗ್ ಹೋಗುವ ನಾಯಿಯಂತೆ ಕಾಲೆಳೆಯುತ್ತ, ಜೋಲು ಮೋರೆ ಹಾಕಿ ದಾರಿಯುದ್ದಕ್ಕೂ ರಾಣಿಯನ್ನೂ, ಅವಳ ಜ್ಯುಬಿಲಿಯನ್ನೂ ಶಪಿಸಿಕೊಂಡು ನಡೆದ. 

ರಾಣಿ ಜ್ಯುಬಿಲಿಗೆ ಇಡೀ ಪಬ್ಬು ಮದುವಣಗಿತ್ತಿಯಂತೆ ಅಲಂಕರಿಸಿಕೊಂಡಿತ್ತು. ಗ್ವಾಡಿ ಮ್ಯಾಲೆಲ್ಲ ಕೆಂಪು, ನೀಲಿ, ಬಿಳೇ ಪತಾಕಿ; ರಾಣಿ, ಆಕಿ ಮಗ, ಸೊಸಿ, ಮೊಮ್ಮಗ, ಮೊಮ್ಮಸೊಸಿ ಫೋಟೋ ಹಚ್ಚಿದ ಪತಾಕಿ. ಟೇಬಲ್ ಮ್ಯಾಲ ಯೂನಿಯನ್ ಜ್ಯಾಕ್ ಮಗ್ಗು; ಕೆಂಪು, ಬಿಳೇ, ನೀಲಿ ಬಣ್ಣದ ಹೂವಿನ ಗುಚ್ಛ. ಎಲ್ಲ ನೋಡಿದ್ರಲ್ಲಿ ಮಜಾ ಮಾಡೋ ಮಂದಿ; ಒಟ್ಟ, ಹಬ್ಬದ ವಾತಾವರಣ ನೋಡ್ರಿ. ರಾಜ-ರಾಣಿ ಅಂದ್ರ ಹುಚ್ಚ ಆಗುವ ದಿನ್ಯಾ ಮೋಡದ ಮ್ಯಾಗ ಏರಿ ಕುಂತಿದ್ದ. ರವ್ಯಾ, ತನ್ನ ಬಾಜೂಕಿನ ಮನಿಯವ್ರಿಗೆ ಹಾಯ್ ಎಂದಂತೇ, ಅವರೂ, “Happy jubilee Rav, joining in the fun, eh !” ಎಂದು ಉದ್ಗರಿಸುತ್ತ ವೆಲ್ಕಮ್ ಮಾಡಿದ್ರು. ಗೋಪ್ಯಾನೂ ಸ್ವಲ್ಪ ಸಮಾಧಾನ ಆಗಿ, ತನ್ನ ಫೆವರಿಟ್ ಸ್ಕಾಚ್ ಹಿಡಕೊಂಡು ಗೆಳೇರು ಮಾತಾಡೋದು, ಖುಷಿ ಪಡೋದು ಕೇಳ್ಕೋತ, ನೋಡ್ಕೋತ ಕುಂತ. ಮಾತು ಕತಿ ಎಲ್ಲ ರಾಣಿ, ಇಂಗ್ಲೆಂಡಿನ ರಾಜ ಮನೆತನ ಹಿಂಗ ನಡದಿತ್ತು. ಏನಾತೇನೋ, ಒಮ್ಮೆಗೇ ಗೋಪ್ಯಾ “ಏ, ರಾಯಲ್ ಫ್ಯಾಮಿಲಿ ಇಂಡಿಯನ್ ಲೇ” ಎಂದ. “ಯಾಕಪಾ, ಎಣ್ಣಿ ತಲೀಗ್ ಹತ್ತೈತೋ, ಇಲ್ಲಾ ನಿನ್ನ ಕ್ಲಾಸ ವಾಟ್ಸಾಪ್ ಗ್ರೂಪ್ನಾಗ ಯಾರಾದ್ರೂ ಈ ಬಣ್ಣದ ಕಾಗಿ ಹಾರಿಸ್ಯಾರೋ?” ಎಂದು ದಿನ್ಯಾ ಹುಬ್ಬು ಮ್ಯಾಲೇರ್ಸಿದ. ಎರಡು ಪೆಗ್ ಬ್ಯಾರೆ ಬಿದ್ದಿತ್ತು, ಗೋಪ್ಯಾ ಇನ್ನೂ ಆವೇಶದಿಂದ, “ಹಾಂಗಲ್ರಪಾ, ನೀವs ನೋಡ್ರಿ. ರಾಣಿ ತನ್ನ ಮಕ್ಕಳಿಗೆಲ್ಲಾ ಅರೇಂಜ್ ಮ್ಯಾರೇಜ್ ಮಾಡ್ಸಿದ್ಲು. ಒಬ್ಬ ಮೊಮ್ಮಗ ಬ್ಯಾರೆ ಬಣ್ಣದಾಕಿನ ಮದುವಿ ಆಗ್ಯಾನಂತ ಬ್ಯಾರೇ ದೇಶಕ್ಕ ಓಡ್ಸಿದ್ಲು; ಇಂಡಿಯನ್ ಹೌದಿಲ್ಲೋ? ಬ್ಯಾರೆ, ಬ್ಯಾರೆ ಮನ್ಯಾಗಿದ್ರೂ ಜಾಯಿಂಟ್ ಫ್ಯಾಮಿಲಿ ಇದ್ಹಂಗ ಅದಾರ, ಇಂಡಿಯನ್". 

ಒಂದು ಗುಟಕ ಅರ್ಲ ಗ್ರೇ ಚಹಾ ಹೀರಿ ರವ್ಯಾ ಅಂದ “ಅದೆಲ್ಲ ಬಿಡ್ರೀಪಾ ರಾಣೀನೂ ಒಬ್ಬಾಕಿ ಹೆಂಗ್ಸ್ ಅಲ್ಲೇನು, ಖರೆ ಅಂದ್ರೆ ಅಕಿಗೂ ತನ್ನ ಮನ್ತನದ್ ಹೆಸ್ರು ಬೇಕು. ಪಾಪ ಅವ್ಳು ಅರಮನಿ ಒಳಗ ಕುಂತು ಮಕ್ಳು ಮೋಮ್ಮಕ್ಳು ಚಲೋ ಹೊತ್ನಾಗ ಹಾಳಾದ್ರು ಅಂತ ಎಷ್ಟು ಕಣ್ಣೀರ್ ಸುರ್ಸಿರ್ಬ್ಯಾಕು. ನೋಡ್ರಪ್ಪಾ ನಾವು ಸಾವ್ರಾರ್ ಮೈಲಿ ದೂರಿಂದ ಬಂದ್ವಿ, ಕೆಲಸ ಸಿಗ್ತು, ಈಗ ಚೊಲೋತ್ನಾಗ ಸೆಟಲ್ ಆಗೀವಿ. ಬ್ರಿಟನ್ನಿನ ಸಿಟಿಜನ್ನೂ ಆಗೀವಿ. ಹಂಗದ್ಮೇಲೆ ಇಲ್ಲಿನ ರೂಢಾ - ಪದ್ಧತಿ ಜೋಡಿ ಹೊಂದಾಣಕಿ ಮಾಡ್ಕೋಬೇಕ್ರಲೇ. ಅದಕs ಇಲ್ಲೀ ಮಂದಿ ಇಂಟಿಗ್ರೇಷನ್ ಅನ್ತಾರಲ್ಲ. ಇಂದು ಛೊಲೋ ದಿನಾ ಐತಿ. ಅಶುಭ ಮಾತಾಡ ಬಾರದು. ಮಂದಿ ಖುಷಿ - ಖುಷಿ ಅದಾರ. ನೀ ಇನ್ನೊಂದ ಪೆಗ್ ಹಾಕು, ಮನಸ ಹಗರ ಮಾಡ್ಕೋ" ಎನ್ನುತ್ತ, "One more of the same for my dear friend in the name of her majesty please" ಆರ್ಡರ್ ಕೊಟ್ಟ.

ಅಷ್ಟರಲ್ಲೇ 'ಗಾಡ್ ಸೇವ್ ದ ಕ್ವೀನ್' ಶುರುವಾಯ್ತು. 'ದಿನ್ಯಾ, ಗೋಪ್ಯಾ ಎದ್ದ ನಿಂದರ್ಲಲೇ, ಜ್ಯುಬಿಲಿ ಮುಹೂರ್ತ ಶುರವಾತು" ಎನ್ನುತ್ತ ರವ್ಯಾ ಎದ್ದು ನಿಂತ.

********************