‘ಥಟ್ ಅಂತ ಹೇಳಿ‘ – ಅಂತಿಮ ಹಣಾಹಣಿ — ಕೇಶವ ಕುಲಕರ್ಣಿ ಬರೆದ ಲೇಖನ

ಪ್ರಿಯ ಓದುಗರೆ, ನೀವು‘ ಅನಿವಾಸಿ ಬಳಗ‘ದ ಸದಸ್ಯರು ಭಾಗವಹಿಸಿ ಬರೆದ “ಥಟ್ ಅಂತ ಹೇಳಿ“ ಕಾರ್ಯಕ್ರಮದ ಮೊದಲ ಎರಡು ಕಂತುಗಳನ್ನು ಓದಿರುತ್ತೀರಿ ಮತ್ತು ನಿಮ್ಮಲ್ಲಿ ಬಹಳಷ್ಟು ಜನ ಕಾರ್ಯಕ್ರಮವನ್ನು ನೋಡಿಯೂ ಇರುತ್ತೀರಿ. ಮೂರನೆಯ ಮತ್ತು ಅಂತಿಮ ಸುತ್ತಿನ ಕಾರ್ಯಕ್ರಮದ ವರದಿಯನ್ನು ಅದರಲ್ಲಿ ಭಾಗವಹಿಸಿದ ಡಾ. ಕೇಶವ ಕುಲಕರ್ಣಿ, ಅದು ನಡೆದ ಬಗೆ, ಆಂಗ್ಲನಾಡಿಗೆ ಕರುನಾಡಿನಿಂದ ಪಯಣಿಸಿದ ರೀತಿ, ಪ್ರೇಕ್ಷಕರ ಮನ ಗೆದ್ದ ಅಶುಕವಿತೆಯ ವಿವರದ ಜೊತೆಗೆ ಹಾಸ್ಯದ ಮೆರುಗನ್ನು ಸೇರಿಸಿ ಬರೆದಿದ್ದಾರೆ ಮತ್ತು ಹಿಂದಿನ ಕಾರ್ಯಕ್ರಮಗಳನ್ನು ನೋಡುವ ಅವಕಾಶವನ್ನೂ ಸಹ ನಮ್ಮ ಮುಂದಿಟ್ಟಿದ್ದಾರೆ. ಈ ಕಾರ್ಯಕ್ರಮ ಗಮನಾರ್ಹ ಅಂಕೆಯಲ್ಲಿ ಕನ್ನಡಿಗರನ್ನು ತಲುಪಿ ಯಶಸ್ವಿಯಾಗಿದೆ – (ದಾಕ್ಷಾಯಿಣಿ ಗೌಡ -ಸಂ)

ಕ್ವಿಜ಼್ ಮಾಸ್ತರ್ (ಮಾಸ್ಟರ್) ಡಾ. ನಾ ಸೋಮೇಶ್ವರ:  

ಡಾ. ನಾ ಸೋಮೇಶ್ವರ (ನಾಸೋ) ಅವರ ಹೆಸರು ಕೇಳದ ಕನ್ನಡಿಗನಿಲ್ಲ ಎಂದರೆ ಅತಿಶಯೋಕ್ತಿ ಏನಲ್ಲ. ಅವರ ವಿದ್ವತ್ತು, ಕನ್ನಡ ಭಾಷೆಯ ಮೇಲಿನ ಪ್ರೀತಿ, ಅಚ್ಚ ಕನ್ನಡದಲ್ಲಿ, ಸುಲಿದ ಬಾಳೆಯಹಣ್ಣಿನಂದದಿ, ಸಂಭಾಷಿಸುವ ವೈಖರಿಗೆ ಮಾರುಹೋಗದವರಿಲ್ಲ. ನಿತ್ಯಹಸನ್ಮುಖಿಯಾಗಿ ವಿನಯಪೂರ್ವಕವಾಗಿ ಮಾತನಾಡುತ್ತ ಕೆಲವೇ ನಿಮಿಷದಲ್ಲಿ ಆಪ್ತವಾಗುವ ಪರಿಭಾವ ಅವರದು.

ಡಾ. ನಾ ಸೋಮೇಶ್ವರ

ನಾಸೋ ಅವರೊಂದಿಗೆ ಮಾತನಾಡುವ, ಕಾಲ ಕಳೆಯುವ ಅವಕಾಶ ಸಿಗುತ್ತದೆ, ಎನ್ನುವ ಒಂದೇ ಕಾರಣಕ್ಕೆ ’ಅನಿವಾಸಿ’ಯ ಸ್ನೇಹಿತರು ನಾ ಮುಂದು ತಾ ಮುಂದು ಎಂದು ಈ ಇ-ಕ್ವಿಜ಼್‍ನಲ್ಲಿ ಪಾಲ್ಗೊಳ್ಳಲು ಮುಂದಾದದ್ದು ಸುಳ್ಳೇನಲ್ಲ.

ನಾಸೋ ಅವರು ವಿನಯಪೂರ್ಣ, ಸ್ಪುಟವಾದ, ಸ್ಪಷ್ಟವಾದ  ಕನ್ನಡದಲ್ಲಿ ಮಾತಾಡುತ್ತಿದ್ದರೆ, ಕನ್ನಡವನ್ನು ಕೇಳುತ್ತಲೇ ಇರಬೇಕು ಎನಿಸುತ್ತದೆ. ಅವರು ಗಾದೆಗಳನ್ನು ವಿವರಿಸುವ ರೀತಿ ಇರಬಹುದು, ಒಗಟುಗಳನ್ನು ವರ್ಣಿಸುವ ರೀತಿ ಇರಬಹುದು, ಸ್ಪರ್ಧಾಳುಗಳನ್ನು ಹುರಿದುಂಬಿಸುವ ರೀತಿ ಇರಬಹುದು, ಅದನ್ನು ನೋಡುವುದೇ ಚಂದ, ಕೇಳುತ್ತ ಕೂರುವುದೇ ಚಂದ.

ಕರ್ನಾಟಕದ ಭೂಗೋಲ ಮಾಹಿತಿ, ಇತಿಹಾಸ, ಜಾನಪದ, ಸಂಸ್ಕೃತಿ, ಒಗಟುಗಳು, ಗಾದೆಗಳು, ಸುಗಮಸಂಗೀತ, ಚಲನಚಿತ್ರ, ಕ್ರೀಡೆ, ಸಾಹಿತ್ಯ, ನಾಟಕ…ಒಂದೇ ಎರಡೇ… ಆಡುಮುಟ್ಟದ ಗಿಡವಿಲ್ಲ, ನಾಸೋ ಕೇಳದ ಪ್ರಶ್ನೆಯಿಲ್ಲ ಎನ್ನಬಹುದೇನೋ. ಅವರು ಕಾರ್ಯಕ್ರಮವನ್ನು ರೂಪಿಸುವ ರೀತಿಯಲ್ಲಿ ಸಮಗ್ರ ಕರ್ನಾಟಕದ ದರ್ಶನವಾಗುತ್ತದೆ.

3500ಕ್ಕೂ ಹೆಚ್ಚು ಕಂತುಗಳಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿರುವ ನಾಸೋ ಅವರ ’ಥಟ್ ಅಂತ ಹೇಳಿ’ ಕಾರ್ಯಕ್ರಮ ಜಾಲದ ಕಾರಣದಿಂದಾಗಿ ಇಂಗ್ಲಂಡಿಗೂ ಬಂದಿದ್ದು ನಮ್ಮ ಸುಯೋಗ.

ಸತ್ಯಪ್ರಮೋದ ಲಕ್ಕುಂಡಿ:

ಕರ್ನಾಟಕದ ದೂರವಾಹಿನಿಯಲ್ಲಿ ಮನೆಮಾತಾಗಿರುವ ಅವರ ’ಥಟ್ ಅಂತ ಹೇಳಿ’ ಕಾರ್ಯಕ್ರಮ ಕೊರೊನಾ ಕಾರಣದಿಂದಾಗಿ ಜಾಲಕ್ಕೆ ತರುವ, ಕರ್ನಾಟಕದಿಂದ ಹೊರಗೆ ತರುವ ಕೆಲಸದ ರುವಾರಿ ಹೊತ್ತವರು ಸತ್ಯಪ್ರಮೋದ ಅವರು.

ಸತ್ಯಪ್ರಮೋದ ಅವರು ಮಾತು ಕಡಿಮೆ, ಕೆಲಸ ಜಾಸ್ತಿ ಎಂದು ಹೇಳುತ್ತಾರಲ್ಲ, ಆ ಪಂಗಡಕ್ಕೆ ಸೇರಿದವರು. ಅವರು ನಡೆಸುವ ’ಮೂಕ ಟ್ರಸ್ಟ್’, ’ವಿವಿಡ್ಲಿಪಿ’ಗಳೇ ಅದಕ್ಕೆ ಸಾಕ್ಷಿ. ’ಮೂಕ ಟ್ರಸ್ಟ್’ ಹೆಸರಿನಿಂದ ಪ್ರತಿ ವಾರವೂ ಜಾಲದಲ್ಲಿ ಕನ್ನಡದ ಖ್ಯಾತ ಸಾಹಿತಿಗಳ, ಸಾಹಿತ್ಯ  ಕೃತಿಗಳ ಭಾಷಣಮಾಲೆಗಳನ್ನು ಏರ್ಪಡಿಸುತ್ತಾರೆ.

ನಾಸೋ ಅವರ, ’ಕ್ವಿಜ಼್ ನಡೆದು ಬಂದ ದಾರಿ’ ಎನ್ನುವ ಕಾರ್ಯಕ್ರಮವೂ ವಿವಿಡ್ಲಿಪಿಯ ಕಾರ್ಯಕ್ರಮದಲ್ಲಿದೆ. ಅದನ್ನು ನೋಡಲು ಇಲ್ಲಿ ಒತ್ತಿ.

ಇಂಗ್ಲಂಡಿನಲ್ಲಿ ’ಥಟ್ ಅಂತ ಹೇಳಿ’

’ಥಟ್ ಅಂತ ಹೇಳಿ’, ಕರ್ನಾಟಕದಲ್ಲಿ ಜನಪ್ರಿಯವಾದ ಜನಜನಿತವಾದ ಕ್ವಿಜ಼್ ಕಾರ್ಯಕ್ರಮ. ಯಾವ ಆಡಂಬರವಿಲ್ಲದೇ ಯಾವ ಆಮಿಷಗಳಿಲ್ಲದೇ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಇತಿಹಾಸವನ್ನು ಮನೆಯಲ್ಲಿ ಕೂತಲ್ಲೇ ಮನೋರಂಜಕವಾಗಿ ಡಾ|ನಾ ಸೋಮೇಶ್ವರ ಅವರು ದಶಕಗಳಿಂದ ಉಣಬಡಿಸುತ್ತ ಬಂದಿದ್ದಾರೆ. ವೈದ್ಯರಾಗಿ ವೈದ್ಯಕೀಯ ಕಾರ್ಯಗಳನ್ನು ನಿರ್ವಹಿಸುತ್ತಲೇ ’ಥಟ್ ಅಂತ ಹೇಳಿ’ ಕಾರ್ಯಕ್ರಮವನ್ನು ಚಾಚೂ ತಪ್ಪದೇ ನಡೆಸಿಕೊಂಡು ಬಂದಿದ್ದಾರೆ. ಕರ್ನಾಟಕದ ಮೂಲೆ ಮೂಲೆಗಳಿಂದ ಸ್ಪರ್ಧಾರ್ಥಿಗಳನ್ನು ಕರೆತಂದು ಕನ್ನಡದ ಮೂಲೆ ಮೂಲೆಗೆ ರಸದೌತಣವನ್ನು ಹಂಚುತ್ತಿದ್ದಾರೆ.

ಕೊರೊನಾ ಮಾರಿ ವಿಶ್ವವನ್ನೆಲ್ಲಿ ವ್ಯಾಪಿಸಿರುವಾಗ ವಿವಿಡ್ಲಿಪಿಯ ಶ್ರೀ ಸತ್ಯಪ್ರಮೋದ ಲಕ್ಕುಂಡಿಯವರ ’ಮೂಕ ಟ್ರಸ್ಟ್’ ಈ ಸುಂದರ ಕಾರ್ಯಕ್ರಮನನ್ನು ಅಂತರಜಾಲದ ಮೂಲಕ ಇಂಗ್ಲಂಡಿಗೂ ತಂದೇ ಬಿಟ್ಟಿದ್ದು ನಿಮಗೆಲ್ಲ ತಿಳಿದೇ ಇದೆ. ಈಗ ಎರಡು ತಿಂಗಳಲ್ಲಿ, ’ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ (KSSVV)’ಯ ಸ್ನೇಹಿತರಿಗೆ ಮನೆಯಲ್ಲೇ ಕೂತು ಬೆಂಗಳೂರಿನಿಂದ ನಾಸೋ ಅವರು ’ಥಟ್ ಅಂತ ಹೇಳಿ’ ಕಾರ್ಯಕ್ರಮವನ್ನು ಪಾಕ್ಷಿಕವಾಗಿ ನಡೆಸಿಕೊಟ್ಟಿದ್ದಾರೆ. ಪ್ರತಿ ಕಾರ್ಯಕ್ರಮದಲ್ಲಿ ನಾಲ್ಕು ಸ್ಪರ್ಧಾರ್ಥಿಗಳು. ಹತ್ತು ಸುತ್ತುಗಳು. ಪ್ರತಿ ಸುತ್ತಿನಲ್ಲಿ ನಾಲ್ಕು ಪ್ರಶ್ನೆಗಳು, ಬಜ಼ರ್ ಒತ್ತಿದ ಮೊದಲ ಅಭ್ಯರ್ಥಿಗೆ ಮೊದಲ ಅವಕಾಶ; ಉತ್ತರ ತಪ್ಪಿದ್ದರೆ ಬಜ಼ರ್ ಒತ್ತಿದ ಎರಡನೇಯವರಿಗೆ. ಋಣಾಂಕವಿಲ್ಲ. ಸರಿ ಉತ್ತರಕ್ಕೆ ವಿವಿಡ್ಲಿಪಿಯ ವತಿಯಿಂದ ಪುಸ್ತಕ. ಪ್ರತಿ ಸ್ಪರ್ಧೆಯ ವಿಜೇತರು ಅಂತಿಮ ಸುತ್ತಿಗೆ.

ಮೊದಲ ಸುತ್ತಿನ ವರದಿಗಾಗಿ ಇಲ್ಲಿ ಒತ್ತಿ

ಎರಡನೇ ಸುತ್ತಿನ ವರದಿಗಾಗಿ ಇಲ್ಲಿ ಒತ್ತಿ

ಮೂರನೇ ಸುತ್ತು:

ಮೂರನೇ ಸುತ್ತಿನಲ್ಲಿ ಇದ್ದವರು ಮುರಳಿ ಹತ್ವಾರ್, ರಮ್ಯಾ ಭಾದ್ರಿ, ಸ್ವರೂಪ ಮಠ ಮತ್ತು ನಾನು (ಕೇಶವ ಕುಲಕರ್ಣಿ) ಭಾಗವಹಿಸಿದ್ದೆವು. ಮುರಳಿ ಮತ್ತು ರಮ್ಯಾ ಅವರು ಆರಂಭದ ಸುತ್ತುಗಳಿಂದಲೇ ಪಿಂಚ್ ಹಿಟ್ಟಿಂಗ್ ಶುರು ಮಾಡಿದರು, ಅಂದರೆ ಬಜ಼ರ್ ಒತ್ತಿ ಸರಿ ಉತ್ತರಗಳನ್ನು ಕೊಟ್ಟರು. ಸ್ವರೂಪ ಮತ್ತು ನಾನು ಟೆಸ್ಟ್ ಆಟಗಾರರ ತರಹ ನಿಧಾನವಾಗಿ ಆರಂಭಿಸಿದೆವು. ಕನ್ನಡ ಭೂಗೋಲ, ಇತಿಹಾಸ ಹಾಗೂ ಕನ್ನಡ ಸಾಹಿತ್ಯದ ಪ್ರಶ್ನೆಗಳು ತುಂಬ ಉಪಯುಕ್ತವಾಗಿದ್ದವು, ಆದರೆ ಉತ್ತರ ಮಾತ್ರ ನನಗೆ ಗೊತ್ತಿರಲಿಲ್ಲ. ಕನ್ನಡದ ಗಾದೆ ಮಾತುಗಳನ್ನು ಒಗಟುಗಳನ್ನು ನಾಸೋ ಅವರು ವಿವರಿಸುವ ರೀತಿ ಅನನ್ಯ. ಅವರ ಮಾತಿನ ಮೋಡಿಯಲ್ಲಿ, ಮುರಳಿಯವರ ಭರ್ಜರಿ ಬ್ಯಾಟಿಂಗ್‍ನಲ್ಲಿ ಕೆಲ ನಿಮಿಷ ನಾನು ಸ್ಪರ್ಧಾರ್ಥಿ ಎನ್ನುವುದನ್ನೂ ಮರೆತು ನೋಡುಗನಾಗಿ ಆನಂದಿಸುತ್ತ ಕೊತಿದ್ದು ಸುಳ್ಳಲ್ಲ.

ಬೇಂದ್ರೆಯವರ ಬದುಕು ಬರಹದ ಬಗ್ಗೆ ’ಚಿಟ್ ಪಟ್ ಚಿನಕುರುಳಿ’ ಸುತ್ತಿನಲ್ಲಿ ’ನರಬಲಿ’ ಎನ್ನುವ ಉತ್ತರ ಗೊತ್ತಿದ್ದರೂ ನನಗೆ ಉತ್ತರ ನಾಲಿಗೆಗೆ ಬರಲಿಲ್ಲ; ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಹಾಗೆಂದು ಕಾರ್ಯಕ್ರಮ ಮುಗಿದ ಮೇಲೆ ನನ್ನ ತಮ್ಮನಿಗೆ ’ಹಾಟ್‍ಸೀಟ್’ ಪ್ರಭಾವ ಎಂದು ಹೇಳುತ್ತಿದ್ದೆ. ಅದಕ್ಕೆ ನನ್ನ ತಮ್ಮನ  ಪುಟ್ಟ ಮಗ, ’ಕಾಕಾ ಎಲ್ಲೆ ಹಾಟ್‍ಸೀಟ್‍ನ್ಯಾಗ ಕೂತಿದ್ರು? ಅವರು ತಮ್ಮ ಮನ್ಯಾಗ ಅವರ ಕುರ್ಚಿ ಮ್ಯಾಲೆ ಕೂತಿದ್ರು,’ ಎನ್ನಬೇಕೇ?

ಮೂರನೇ ಸುತ್ತನ್ನು ಮುರಳಿ ಹತ್ವಾರ್ ಅವರು ಲೀಲಾಜಾಲವಾಗಿ ಗೆದ್ದು ಅಂತಿಮ ಸುತ್ತಿಗೆ ನಡೆದರು. 150ಕ್ಕೂ ಹೆಚ್ಚಿನ ಅಂಕ ಪಡೆದ ಖುಷಿ ಮತ್ತು ನಾಸೋ ಅವರೊಂದಿಗೆ ಮಾತನ್ನಾಡುವ ಅವಕಾಶ ಸಿಕ್ಕಿದ್ದು ನನ್ನ ಆನಂದಕ್ಕೆ ಪಾರವೇ ಇರಲಿಲ್ಲ.

ಅಂತಿಮ ಹಣಾಹಣಿ (ಫೈನಲ್ಸ್) :

ಮೊದಲ ಸುತ್ತಿನಲ್ಲಿ ಲಕ್ಷ್ಮೀನಾರಾಯಣ ಗುಡೂರ್, ಎರಡನೇ ಸುತ್ತಿನಲ್ಲಿ ದಿವ್ಯತೇಜ, ಮತ್ತು ಮೂರನೇ ಸುತ್ತಿನಲ್ಲಿ ಮರಳಿ ಹತ್ವಾರ್ ವಿಜೇತರಾಗಿದ್ದರು. ನಾಲ್ಕನೇಯ ಅಭ್ಯರ್ಥಿ ಯಾರಿರಬಹುದು ಎನ್ನುವುದು ಕೊನೆಯ ಕ್ಷಣದಲ್ಲಿ ಘೋಷಿಸಲಾಯಿತು. ಲಂಡನ್ನಿನ ’ಭಾರತೀಯ ವಿದ್ಯಾಭವನ’ದ ನಿರ್ದೇಶಕರಾದ ಡಾ. ಮತ್ತೂರು ನಂದಕುಮಾರ ಅವರು ವೈಲ್ಡ್‍ಕಾರ್ಡ್ ಸೆಲಿಬ್ರಿಟಿ ಗೆಸ್ಟ್ ಆಗಿ ನಾಲ್ಕನೇ ಸ್ಪರ್ಧಾರ್ಥಿಯಾದರು. ಕಾರ್ಯಕ್ರಮಕ್ಕೆ ಕಳೆ ಬಂದಿತು.

ಡಾ ಮತ್ತೂರು ನಂದಕುಮಾರ

ಸ್ವಾತಂತ್ರ್ಯ ದಿನಾಚರಣೆಯ ಮುಂದಿನ ದಿನ, ಅಂದರೆ ಅಗಷ್ಟ್ 16 ರಂದು, ’ಏರ್-ಮೀಟ್’ ಮಾಧ್ಯಮದ ಮೂಲಕ ಯಶಸ್ವಿಯಾಗಿ ನಡೆಯಿತು. 

ಕಾರ್ಯಕ್ರಮವನ್ನು ಪೂರ್ತಿ ನೋಡಲು ಇಲ್ಲಿ ಒತ್ತಿ. ಕಾರ್ಯಕ್ರಮದ ಕೆಲವು ಪ್ರಮುಖ ಅಂಶಗಳನ್ನು ಇಲ್ಲಿ ದಾಖಲಿಸಿದ್ದೇನೆ:

ಫೈನಲ್ಸ್-ನಲ್ಲಿ ನಿಯಮಗಳಲ್ಲಿ ಒಂದು ಮಹತ್ವದ ಬದಲಾವಣೆಯಾಯಿತು. ಬಜ಼ರನ್ನು ತೆಗೆದು ಹಾಕಲಾಯಿತು. ಇದರಿಂದಾದ ಅನುಕೂಲಗಳ ಎರಡು: ಎಲ್ಲರಿಗೂ ಅವಕಾಶ ಸಿಕ್ಕಿದ್ದು ಮತ್ತು ಸಮಯದ ಉಳಿತಾಯ.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಲೇ ಗುಡೂರ್ ಅವರು ನಂದಕುಮಾರ ಮತ್ತು ಮುರಳಿಯವರ ಕ್ಯಾರಿಕೇಚರ್ ಬರೆದದ್ದು ವಿಶೇಷವಾಗಿತ್ತು. (ಕೆಳಗೆ ನೋಡಿರಿ)

ಚಿತ್ರಕಾವ್ಯ ಸುತ್ತಿನಲ್ಲಿ ಬರೆದ ನಾಕು ಸಾಲಿನ ಕವನಗಳ ಆಶುಕವಿತೆಗಳು ಅದ್ಭುತವಾಗಿದ್ದವು.

ಗುಡೂರ್ ಅವರು ಬರೆದ ಆಶುಕವನವನ್ನು ಇಲ್ಲಿ ಉಲ್ಲೇಖಿಸುತ್ತೇನೆ. ತಂದೆಯ ಹೆಗಲ ಮೇಲೆ ಕುಳಿತ ಮಗುವಿನ ಚಿತ್ರಕ್ಕೆ ಅವರು ಬರೆದ ಕವನ:

‘ನನ್ನ ಅಪ್ಪನ ಹೆಗಲು ಕಡಿಮೆಯೇ ಯಾವಸಿಂಹಾಸನಕ್ಕೆ?

ಮೇಲೇರಿ ಕೂಡುವನು ಹೊರಡುವೆನು ಅಲ್ಲಿಂದ

ಜೀವನದ ಸಿಂಹಾವಲೋಕನಕ್ಕೆ’’

ಲಕ್ಷ್ಮಿನಾರಾಯಣ ಗುಡೂರ್

ಗಾಯಕಿಯರನ್ನು ಗುರುತಿಸುವ ಶ್ರವ್ಯಕಾವ್ಯ ಕಷ್ಟಕರವಾಗಿತ್ತು.

ನಾಸೋ ಅವರು ಅಂಕಗಳನ್ನು ಎಣಿಸಲು ಬ್ರೇಕ್ ತೆಗೆದುಕೊಂಡಾಗ, ಪ್ರವೀಣ B V ಅವರು ಸುಶ್ರಾವ್ಯವಾಗಿ ಕನ್ನಡದ ಭಾವಗೀತೆಗಳನ್ನು ಹಾಡಿದರು. ಕೈಲಾಸಂ ಅವರ ‘ತಿಪ್ಪಾರಳ್ಳಿ’ ಹಾಡನ್ನು ಹಾಡಿ ಖುಷಿಪಡಿಸಿದರು. ಆ ಹಾಡು ಮುಗಿದ ಮೇಲೆ ನಾಸೋ ಅವರು ಆ ಹಾಡಿನ ಇತಿಹಾಸವನ್ನು ಮೆಲುಕು ಹಾಕಿದರು. ಪ್ರವೀಣ ಅವರು ಶರೀಫರ ಮತ್ತು ಕುವೆಂಪು ಅವರ ಕೃತಿಗಳನ್ನೂ ಹಾಡಿದರು. ಪ್ರವೀಣ್ B V ಮತ್ತು ಪ್ರದೀಪ್ B V ಅವರದು ಜೋಡಿ ಸಂಗೀತ. ವೃತ್ತಿಯಲ್ಲಿ ಐಟಿಯಾದರೂ ಅವರು ಕನ್ನಡ ಸುಗಮಸಂಗೀತದಲ್ಲಿ ತೊಡಗಿಸಿಕೊಂಡಿದ್ದಾರೆ. ಸಿ ಅಶ್ವಥ್ ಅವರ ಗರಡಿಯಲ್ಲಿ ಪಳಗಿದ್ದಾರೆ. ನಾಟಕಸಂಗೀತ ಮತ್ತು ಭಕ್ತಿಸಂಗೀತದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಹಾಡುಗಳನ್ನು ಕೇಳಲು ಇಲ್ಲಿ ಒತ್ತಿ.

ಡಾ ನಂದಕುಮಾರ ಅವರ ಪತ್ರ

ಅ ಆ ಇ ಈ ಕಲಿತರೆ ಭಾಷೆಯ ಓದಲು ಬಲು ಸುಲಭ’ ಎಂದು ತಾವು ಬರೆದು ಸ್ವರಸಂಯೋಜಿಸಿದ ಹಾಡನ್ನು ಸುಶ್ರಾವ್ಯವಾಗಿ ನಂದಕುಮಾರ್ ಅವರು ಹಾಡಿದರು. ಈ ಹಾಡನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರು ತಮ್ಮ ಇತ್ತೀಚಿನ ಚಿತ್ರ ’ಇಂಗ್ಲಂಡ್ ವರ್ಸಸ್ ಇಂಡಿಯಾ’ ಸಿನಿಮಾದಲ್ಲಿ ಬಳಸಿಕೊಂಡಿದ್ದಾರೆ.

ನಾಸೋ ಅವರಿಗೆ ’ಅನಿವಾಸಿ’ ಬಳಗದಿಂದ ಕೃತಜ್ಞತಾಪೂರ್ವಕವಾದ ವಂದನೆಗಳು ಮತ್ತು ಸತ್ಯಪ್ರಮೋದ ಅವರಿಗೆ ಧನ್ಯವಾದಗಳು.

ಅಂಕಿಅಂಶಗಳು:

ಮೂರನೇ ಸುತ್ತು ಸುಮಾರು ಐವತ್ತು ಸಾವಿರ ಜನರನ್ನು ತಲುಪಿದೆ. ಫೈನಲ್ಸ್ ಈಗಾಗಲೇ 34,891 ಜನರನ್ನು ತಲುಪಿದೆ. ಅಷ್ಟಲ್ಲದೇ ಲೋಕಲ್ ಚಾನಲ್ ಗಳು ಈ ಕಾರ್ಯಕ್ರಮಗಳ ನೇರ ಪ್ರಸಾರ ಮಾಡಿದ್ದಾರೆ; ಇದು ಕೂಡ ಸಾವಿರಾರು ಜನರನ್ನು ತಲುಪಿದೆ. Engagements: 1,104; Comments: 154; 33 shares; 14.000 views.

ಕೇಶವ ಕುಲಕರ್ಣಿ

‘ಆರಂಕುಶಮಿಟ್ಟೊಡಂ ”ಥಟ್ಟನೆ ಪೇಳ್”ವುದೆನ್ನ ಮನಂ … !’

ಇದನ್ನು ಯಾರು ಬರೆದದ್ದು: ’ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಇದು ಒಂದು ಕ್ವಿಜ್ ಪ್ರಶ್ನೆಯೆಂದು ಕೊಳ್ಳಿರಿ. ಉತ್ತರಕ್ಕೆ ಆಯ್ಕೆಗಳು: ರನ್ನ, ಪೊನ್ನ,ಪಂಪ,ಜನ್ನ? The usual suspects. ಇದಕ್ಕೆ ಉತ್ತರವೇನೋ ಸುಲಭ ಎನ್ನ ಬಹುದು. ಆದರೆ ಆರಂಕುಶ ಪದದ ಸರಿಯಾದ ಅರ್ಥ ಮಾತ್ರ ಥಟ್ಟನೆ ಹೊಳೆಯಲಿಕ್ಕಿಲ್ಲ; ಅಥವಾ ನಿಖರವಾಗಿಲ್ಲ ಎನಿಸಬಹುದು. ಬನವಾಸಿ ಕವಿಯ ಆ ಉದ್ಗಾರ ಡಾ. ನಾ. ಸೋಮೇಶ್ವರ ಅವರು ನಡೆಸಿಕೊಡುವ ಸುಪ್ರಸಿದ್ಧ ರಸಪ್ರಶ್ನೆ ಅಥವಾ ಕ್ವಿಜ್ ಕಾರ್ಯಕ್ರಮದಲ್ಲಿ ಈಗಾಗಲೆ ಬಂದು ಹೋಗಿರಬಹುದು. ಅದನ್ನು ನೀವು ನೋಡಿದ್ದರೆ, ಥಟ್ಟನೆ ಉತ್ತರವನ್ನು ಹೇಳಿದರೆ ಆಶ್ಚರ್ಯವಾಗಲಿಕ್ಕಿಲ್ಲ.

ಯು ಕೆ ದ ’ಅನಿವಾಸಿ’ ಕ್ವಿಜ್ ಎರಡನೆಯ ಸುತ್ತಿನ ಕಾರ್ಯಕ್ರಮ

ಕಳೆದ ರವಿವಾರ (19-7-2020) ಯು ಕೆ ದ ’ಅನಿವಾಸಿ ಬಳಗದ’ ನಾಲ್ವರು ಸ್ಪರ್ಧಿಗಳೊಡನೆ ಸೋಮೇಶ್ವರ ಅವರು ಎರಡನೆಯ ಸುತ್ತಿನ ಕ್ವಿಜ್ ಕಾರ್ಯಕ್ರಮ ನಡೆಸಿ ಕೊಟ್ಟರು. ಇದಕ್ಕೆ ವಿವಿಡ್ಲಿಪಿ (www.vividlipi.com)ಯವರು ಕೊಟ್ಟ ತಾಂತ್ರಿಕ ಸಹಾಯ, ಪುಸ್ತಕಗಳ ದೇಣಿಗೆ ಮತ್ತು ಪ್ರಚಾರದ ಸಹಾಯವನ್ನು ”ಅನಿವಾಸಿ” ಇಲ್ಲಿ ಇಂದು ಸ್ಮರಿಸುತ್ತದೆ. ಆ ಯಶಸ್ವಿ ಕಾರ್ಯಕ್ರಮದಲ್ಲಿ ಪಾಲುಗೊಂಡ ಕೆಲವರ ಅನಿಸಿಕೆಗಳನ್ನು ಈ ಲೇಖನದ ಕೊನೆಯಲ್ಲಿ ಕೊಟ್ಟಿದೆ. ಇಂಗ್ಲೆಂಡಿನಲ್ಲಿಯ ”ಅನಿವಾಸಿ’’ ಎನ್ನುವ ಜಾಲ ಜಗುಲಿ (ಇ-ಪೇಪರ್) ಯಲ್ಲಿ ಮೊದಲ ಸುತ್ತಿನ ವಿವರಗಳನ್ನು (https://wp.me/p4jn5J-2K5) ಜುಲೈ 10ರ ಸಂಚಿಕೆಯಲ್ಲಿ ಈಗಾಗಲೇ ಕೊಟ್ಟಿದೆ. ಅದರಲ್ಲಿ ಕ್ವಿಜ್ ಮಾಸ್ಟರ್ ಮತ್ತು ’ಅನಿವಾಸಿ’ ಮತ್ತು ’ಕಸಾಸಾಂವಿವೇ’(KSSVV) ಸಂಘಟನೆಯ ಕಿರು ಪರಿಚಯವನ್ನೂ ಮಾಡಿಕೊಡಲಾಗಿತ್ತು.

’ಕ್ವಿಜ್’ ಪದದ ಮೂಲ

’ಕ್ವಿಜ್’ ಶಬ್ದಕ್ಕೆ ಸಮಾನಾದ ಪದ ಕನ್ನಡದಲ್ಲಿ ಸಿಗುವದಿಲ್ಲ ಎಂಬುದು ಡಾ. ನಾ. ಸೋಮೇಶ್ವರ ಅವರ ಮತ. ರಸಪ್ರಶ್ನೆಎನ್ನುವ ಪದದಲ್ಲಿ ಪ್ರಶ್ನೆ ಕೇಳುವ ಮತ್ತು ಉತ್ತರ ಕೊಡುವದರ ಅರ್ಥ ಸರಿಯಾಗಿ ಧ್ವನಿಸುವದಿಲ್ಲ ಎಂದು ಅವರು ಹೇಳುತ್ತಾರೆ. ಚಿಕ್ಕವರಿದ್ದಾಗಲೇ ಕ್ವಿಜ್ ಹುಚ್ಚು ಹಿಡಿದ ಅವರು ’ಕ್ವಿಜ್ ನಡೆದುಬಂದ ದಾರಿ’ ಎನ್ನುವ ಪುಸ್ತಕದಲ್ಲಿ ತಾವು ಹೇಗೆ ಮೊದಲ ಸಲ ಕ್ಯಾಡ್ಬರಿ ಅವರ ವಿವಿಧ ಭಾರತಿಯ ಬೋರ್ನ್ವಿಟಾ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿದರೂ ಮುಂದೆಒಂದು ದಿನ ಟಿ.ವಿ ಯಲ್ಲಿ ಸುದೀರ್ಘ ಕಾಲದ ವರೆಗೆ ಕ್ವಿಜ್ ಮಾಸ್ಟರ್ ಆಗಿರುತ್ತೇನೆ ಅನ್ನುವ ವಿಚಾರ ಕನಸು ಮನಸ್ಸಿನಲ್ಲಿಯೂ ಬಂದಿರಲಿಲ್ಲ ಅನ್ನುತ್ತಾರೆ. ತಮ್ಮ ಜೀವನದ ಪಯಣವನ್ನು  ಮೇಲೆ ಉಲ್ಲೇಖಿಸಿದ ಪುಸ್ತಕದಲ್ಲಿ ಬರೆದಿರುವದಲ್ಲದೆ ಅದೇ ಹೆಸರಿನ ಸಾಮಾಜಿಕ ತಾಣದ ಪ್ರಸಾರ ಕಾರ್ಯ ಕ್ರಮದಲ್ಲಿ ಹೇಳಿದ್ದಾರೆ. ಅದನ್ನು ಯೂ ಟ್ಯೂಬಿನಲ್ಲೂ ನೋಡಬಹುದು( https://youtu.be/SH9ow_GJn_Q)

ಕ್ವಿಜ್ ಶಬ್ದದ ವ್ಯುತ್ಪತ್ತಿ ಬಗೆಗಿನ ಸ್ವಾರಸ್ಯಕರ ಕಥೆಯಿದೆ. ಆದರೆ ಬಹುಶ: ಅದೊಂದು ದಂತ ಕಥೆಯಿರಬಹುದು. ಅದು ಹೀಗಿದೆ:

1791ರ ಒಂದು ಶನಿವಾರ ಡಬ್ಲಿನ್ ಶಹರದ ಡೇಲಿ ಎಂಬ ಹೆಸರಿನ ಒಂದು ನಾಟಕ ಥಿಯೇಟರಿನ ಮಾಲಕ  (ಆತನ ಇಟ್ಟ ಹೆಸರು ರಿಚರ್ಡ್ ಅಥವಾ ಜೇಮ್ಸ್ ) ಒಂದು ಶನಿವಾರಮಿತ್ರರೊಂದಿಗೆ ಇದ್ದಾಗ 25 ಗಿನಿ ಪಣ ಹೂಡಿದನಂತೆ: ಈ ವರೆಗೆ ಯಾವುದೇ ಭಾಷೆಯಲ್ಲಿರದ ಯಾವುದೇ ಅರ್ಥವಿರದ ಶಬ್ದವನ್ನು ಬರೀ 24 ಗಂಟೆಗಳಲ್ಲಿ ಡಬ್ಲಿನ್ನಿನ ಮನೆಮಾತನ್ನಾಗಿ ಮಾಡಿ ಬಿಡುವೆ ಎಂದು. ಅದನ್ನು ಸ್ವೀಕರಿಸಿದ ಮಿತ್ರರೊಡನೆ ಕೈ ಕುಲುಕಿ ತಕ್ಷಣ ತನ್ನ ನಾಟಕ ಶಾಲೆಗೆ ಬಂದವನೇ ಕೆಲಸ ಮಾಡುವ ಕೆಳದರ್ಜೆಯ ನೌಕರರಿಗೆ ಮತ್ತು ಬೀದಿ ಹುಡುಗರಿಗೆ ತಲಾ ಒಂದು ಕಾರ್ಡು, ಮತ್ತು ಒಂದು ಸುಣ್ಣದ ಕಡು ಕೊಟ್ಟು ಆ ಶನಿವಾರ ರಾತ್ರಿ ಎಲ್ಲರ ಮನೆಯ ಮುಂಬಾಗಿಲ ಮೇಲೆ ‘quiz’  ಅನ್ನುವ ಚಿಕ್ಕ ಪದವನ್ನು ಬರೆಯಿಸಿದನಂತೆ. ಕ್ಯಾಥಲಿಕ್ ಮತದವರೇ ಆಗಿದ್ದ ಜನ ಮರುದಿನ ರವಿವಾರದ ಚರ್ಚಿನಿಂದ ವಾಪಸ್ಸಾದಾಗ ಅದನ್ನು ನೋಡಿ ಎಲ್ಲರ ಬಾಯಲ್ಲೂ ಯಾರಿಗೂ ಗೊತ್ತಿರದ ಆ ಶಬ್ದ ಕೂತುಬಿಟ್ಟಿತ್ತಂತೆ. ಆತ ಪಣ ಗೆದ್ದ. ಇದೆಷ್ಟು ನಿಜವೋ ಸುಳ್ಳೋ ಎಂದು ಇಂದಿಗೂ ಅನುಮಾನವಿದೆ. ಯಾಕಂದರೆ 1835ರಲ್ಲಷ್ಟೇ  ಕಥೆ ಮೊದಲ ಬಾರಿ ಪತ್ರಿಕೆಗಳಲ್ಲಿ ಮುದ್ರಣ ಕಂಡಿದ್ದು. ಅದಕ್ಕೂ ಮೊದಲು ಆ ಪದ ಅದು ಬೇರೆಯೇ ಅರ್ಥದಲ್ಲಿ ಬಳಕೆಯಾಗುತ್ತಿತ್ತಂತೆ – ಅಂದರೆ ಬೇರೆಯೇ ಆಗಿ ವರ್ತಿಸುವವ, ವಿಕ್ಷಿಪ್ತ ಮನುಷ್ಯ ಎನ್ನುವ ಅರ್ಥದಲ್ಲಿ. ’ಮೇಧಾವಿ’ ಸ್ಟೀವನ್ ಫ್ರೈ ಹೇಳುವದೆಂದರೆ ಅದು ಲ್ಯಾಟಿನ್ Qui es? (ನೀನು ಯಾರು) ಎನ್ನುವ ಮಾತಿನಿಂದ, ಇನ್ನು ಕೆಲವರು inquisitive ದಿಂದ ಹುಟ್ಟಿದ್ದು ಎಂದು 1971 ರ OED (ಆಕ್ಸ್ ಫರ್ಡ್ ಇಂಗ್ಲಿಷ್ ಡಿಕ್ಷನರಿ) ದಾಖಲಿಸುತ್ತದೆ.

 

ಕುರುಕ್ಷೇತ್ರದಲ್ಲಿ ನಡೆದ ಅರ್ಜುನ -ಶ್ರೀಕೃಷ್ಣ ರ ನಡುವಿನ ಗಹನವಾದ ವಿಚಾರಗಳ ಪ್ರಶ್ನೋತ್ತರ ಸಂವಾದ ಭಗವದ್ಗೀತೆಯಲ್ಲಿ ಇರುವದು ಎಲ್ಲರಿಗೂ ಸರ್ವವಿದಿತವಾಗಿದೆ. ಆದರೆ ಮಹಾಭಾರತದಲ್ಲಿ ಬರುವ ಯಕ್ಷ ಪ್ರಶ್ನೆಯೇ ಜಗತ್ತಿನ ಮೊದಲ ’ಕ್ವಿಜ್’ ಎನ್ನಬಹುದು ಎನ್ನುತ್ತಾರೆ ಕ್ವಿಜ್ ಮಾಸ್ಟರ್ ಸೋಮೇಶ್ವರ ಅವರು.

ಆರು ಸೇವಕರು

ಅಭ್ಯರ್ಥಿಗಳು ಮತ್ತು ಕ್ವಿಜ್ ಮಾಸ್ಟರ್ ಕ್ವಿಜ್ ಗೆ ತಯಾರಿ ಮಾಡುವದು ಹೇಗೆ? ಅದಕ್ಕೆ ಸೋಮೇಶ್ವರ ಅವರು ಕೊಡುವ ಸರಳ ಸೂತ್ರ ಕೆಳಗಿನ ರಡ್ಯಾರ್ಡ್ ಕಿಪ್ಲಿಂಗನ ಈ ಕವಿತೆಯ ಸಾಲುಗಳಲ್ಲಿ ಅಡಕವಾಗಿದೆ:

I keep six honest serving-men
(They taught me all I knew);
Their names are What and Why and When
And How and Where and Who. Rudyard Kipling

ಯಾವುದೇ ವಿಷಯವನ್ನು ತಿಳಿದುಕೊಳ್ಳಲು ಈ ಆರು ಪ್ರಶ್ನೆಗಳನ್ನು (ಏನು,ಯಾಕೆ, ಯಾವಾಗ, ಹೇಗೆ, ಎಲ್ಲಿ ಮತ್ತು ಯಾರು) ಕೇಳಿ ಓದಿ ಅರ್ಥಮಾಡಿಕೊಂದರೆ ಕ್ವಿಜ್ದಲ್ಲಿ ಯಶಸ್ಸು ಪಡೆಯುವ ಸಾಧ್ಯತೆ ಇರುತ್ತದೆ ಎನ್ನುವದರಲ್ಲಿ ಸಂದೇಹವಿಲ್ಲ. ಆದರೆ ಅದನ್ನು ಸಾಧಿಸಲು ಎಷ್ಟು ಪರಿಶ್ರಮ ಮತ್ತು ಸಮಯ ಬೇಕು, ಅದನ್ನು ಅವರವರಿಗೆ ಬಿಟ್ಟದ್ದು.

ಇತ್ತೀಚಿನ 2ನೆಯ ಸುತ್ತಿನ ಸ್ಪರ್ಧಿಗಳ ಅನಿಸಿಕೆಗಳು (19-7-2020)

1) ಹೃ. ದಿವ್ಯತೇಜ ಬರೆಯುತ್ತಾರೆ

ಯುಕೆ ಕನ್ನಡಿಗರ ತಂಗುದಾಣ -ಅನಿವಾಸಿ ಸಂಘ ನಮಗೆ ಅಂತರ್ಜಾಲದಲ್ಲಿ “ಥಟ್  ಅಂತ ಹೇಳಿ ” ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಿದಾಗ ಆದ ಸಂತೋಷ ಅಷ್ಟಿಷ್ಟಲ್ಲ. ತಕ್ಷಣವೇ ರಸಪ್ರಶ್ನೆಯಲ್ಲಿ ಪಾಲ್ಗೊಳ್ಳಲು ನಾನು ಮತ್ತು ನನ್ನ ಪತ್ನಿ ನೊಂದಾಯಿಸಿದೆವು. ಡಾ. ನಾ ಸೋಮೇಶ್ವರ ಅವರೊಂದಿಗೆ ಸಂವಾದಿಸುವುದೇ ಒಂದು ಸುಯೋಗ ಅವಕಾಶವಾಗಿತ್ತು . ಅವರ ಕನ್ನಡದ ಬಗ್ಗೆ ಇರುವ ಒಲವು, ವಿದ್ವತ್ತು, ಭಾಷೆಯ ಮೇಲಿನ ನಿಯಂತ್ರಣಕ್ಕೆ ಸರಿಸಾಟಿಯೇ ಇಲ್ಲ. ಕಾರಣಾಂತರಗಳಿಂದ ನನ್ನ ಪತ್ನಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ರಸಪ್ರಶ್ನೆಯ ದಿನ ಹತ್ತಿರವಾದಂತೆ ನನಗೆ ಎಲ್ಲೋ ಸ್ವಲ್ಪ ಅಳುಕು ಕಾಣಿಸಿಕೊಂಡಿತು. ಆದರೂ ಧೈರ್ಯ ಮಾಡಿ ಭಾಗವಹಿಸಲು ಸಿದ್ದವಾದೆ. ಜುಲೈ ೫ ಪ್ರಸಾರಗೊಂಡ ಮೊದಲ ಕಂತು ನೋಡಿದ ಮೇಲಂತೂ ಒಂದು ರೀತಿಯ ಹುರುಪು ಅನುಭವವಾಯಿತು.

ಕಡೆಗೆ ಆ ದಿನ ಬಂದೇಬಿಟ್ಟಿತು. ನನ್ನ ಸಹ ಸ್ಪರ್ಧಿಗಳಿಗೆ ಶುಭವನ್ನು ಕೋರುತ್ತಾ ಕಾರ್ಯಕ್ರಮದಲ್ಲಿ ಭಾಗಿಯಾದೆನು. ಡಾ. ನಾ ಸೋಮೇಶ್ವರ ಅವರು ನಮ್ಮನ್ನೆಲ್ಲ ಬಹಳ ಆತ್ಮೀಯವಾಗಿ ಮಾತನಾಡಿಸಿ ನಮ್ಮ ಆತಂಕವನ್ನು ದೂರಮಾಡಿ ಇದೊಂದು ಅವಿಸ್ಮರಣೀಯ ಘಟನೆಯಾಗಿ  ನಮ್ಮ ನೆನಪಿನಲ್ಲಿ ಉಳಿಯುವಂತೆ ಮಾಡಿದರು. ನಾನು ಈ ಮೊದಲು ೨೦೦೨ ಇಸವಿಯಲ್ಲಿ ಬೆಂಗಳೂರಿನ ಗಾಂಧಿನಗರದ ಸ್ಟುಡಿಯೋದಲ್ಲಿ ಈ ರಸಪ್ರಶ್ನೆಯಲ್ಲಿ ಪಾಲ್ಗೊಂಡಿದ್ದೆ. ಡಾ. ನಾ ಸೋಮೇಶ್ವರ ಅವರ ಹುರುಪು ಅಂದಿಗೂ ಇಂದಿಗೂ ಒಂದು ಚೂರು ತಗ್ಗಿಲ್ಲ. ಅದನ್ನು ಕಂಡು ಆಶ್ಚರ್ಯಚಕಿತ ಹಾಗು ಸಂತಸ ಎರಡೂ ಆಯಿತು. ಕಾರ್ಯಕ್ರಮದ ಚಿತ್ರಕಾವ್ಯ  ಸುತ್ತು ನಮ್ಮಲ್ಲಿರುವ ಕವಿಯನ್ನು ಎಚ್ಚರಗೊಳಿಸುವ ವಿಶೇಷವಾದ ಪ್ರಯತ್ನ. ನಾನಿನ್ನು ಇದರಲ್ಲಿ ಸಾಕಷ್ಟು ಪ್ರಗತಿ ತೋರಿಸಬೇಕಾಗಿದೆಯಾದರೂ ಬಹಳವಾಗಿ ಆನಂದಿಸಿದೆ.

 “ಥಟ್ ಅಂತ ಹೇಳಿ” ಬಹಳ ವಿಶೇಷವಾದ ಕಾರ್ಯಕ್ರಮ. ಒಂದಷ್ಟು ರಸಪ್ರಶ್ನೆ ಕಾರ್ಯಕ್ರಮಗಳು ಯಾವುದಾದರೂ ಒಂದು ವಿಷಯಕ್ಕೆ ಪ್ರಾಮುಖ್ಯತೆ ಕೊಟ್ಟರೆ  “ಥಟ್ ಅಂತ ಹೇಳಿ” ಕನ್ನಡ ನಾಡಿನ, ಕನ್ನಡ ಭಾಷೆಯ ಎಲ್ಲ ಆಯಗಳನ್ನು ಅಳವಳಿಸಿಕೊಂಡಿದೆ. ನಮ್ಮ ಇತಿಹಾಸ, ಸಂಸ್ಕೃತಿ, ಜಾನಪದ, ನುಡಿಗಟ್ಟುಗಳು, ಗಾದೆಗಳು , ಒಗಟುಗಳು, ಸಾಹಿತ್ಯ, ಗಾಯನ, ಚಲನಚಿತ್ರ, ಕಾವ್ಯ, ಕ್ರೀಡೆ ಹೀಗೆ ಸಕಲ ವಿಷಯವನ್ನು ಒಳಗೊಂಡು  ಸ್ಪರ್ದಿಗಳ ಬುದ್ಧಿಮತ್ತೆಯನ್ನು ಪರೀಕ್ಷೆ ಮಾಡುತ್ತದೆ. ನಮ್ಮ ಕನ್ನಡ ನಾಡಿನ ಸಮಸ್ತ ಪರಿಚಯವಾಗುತ್ತದೆ. ಸುಮಾರು ೩೫೦೦ ಹೆಚ್ಚು ಕಂತುಗಳಲ್ಲಿ ಪ್ರಸಾರವಾಗಿ ಧಾಖಲೆಯನ್ನು ಸೃಷ್ಟಿಸಿದೆ. ಇದು ಇನ್ನೂ ಜನಪ್ರಿಯವಾಗಲಿ ಮತ್ತು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ಈ ಕಾರ್ಯಕ್ರಮವನ್ನು ಅಂತರ್ಜಾಲದ ಮೂಲಕ ನಮಗೆ ತಂದ ಅನಿವಾಸಿ ತಂಡದ ಪ್ರಮುಖರಾದ ಶ್ರೀವತ್ಸ ದೇಸಾಯಿ ಅವರಿಗೂ ಮತ್ತು ವಿವಿಡ್ಲಿಪಿಯ ಪ್ರಮೋದ್ ಅವರಿಗೂ ಅನಂತ, ಅನಂತ ಧನ್ಯವಾದಗಳು.  ಮುಂದಿನ ಕೆಲವು ದಿನಗಳಲ್ಲಿ  ಜೋಡಿಗಳನ್ನು( couples) ಸೇರಿಸಿ ಮತ್ತಷ್ಟು ಕಂತುಗಳು ಪ್ರಸಾರವಾಗಲಿ ಎಂದು ಆಶಿಸುತ್ತಾ ಎದುರು ನೋಡುತ್ತಿರುತ್ತೇವೆ.

(ದಿವ್ಯತೇಜ ಅವರು ಈ ಸಲದ ಸುತ್ತಿನಲ್ಲಿ ವಿಜೇತರಾಗಿದ್ದಾರೆ)

2) ಥಟ್ ಅಂತ ಹೇಳಿ – ನನ್ನ ಅನುಭವ, ಅನಿಸಿಕೆ —ನವೀನ ಬರೆಯುತ್ತಾರೆ

ನಾನು ಒಂದು ಗಂಭೀರ ತರಹದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಇದೇ ಪ್ರಥಮ ಭಾರಿ – ಅದರಲ್ಲೂ ನಮ್ಮದೆ ಭಾಷೆಯಲ್ಲಿ. ದಾಖಲೆ ನಿರ್ಮಿಸಿ, ಕರ್ನಾಟಕದಲ್ಲಿ ಮನೆಮಾತಾಗಿರುವ “ಥಟ್ ಅಂತ ಹೇಳಿ”, ನನ್ನಂಥ ಅಪ್ರೌಢ ಉತ್ಸಾಹಿಗಳಿಗೆ ಸಂಸ್ಕೃತಿ ಪರಿಚಯಿಸುವ ಒಂದು ಸಾಧನ ಎಂದು ತಿಳಿಯುವೆ. ಈ ಸುವರ್ಣವಕಾಶ ದೊರಕಿಸಿಕೊಟ್ಟ ಸಂಸ್ಥೆಗಳಿಗೆ ಮತ್ತು ನಿರಂತರ ಶ್ರಮವಹಿಸುತ್ತಿರುವ ತಜ್ಞರಿಗೆ ನಾನು ಚಿರಋಣಿ.

ಯು.ಕೆ. ಕನ್ನಡಿಗರಿಗಂತಲೆ ರಚಿಸಿರುವ ವಿಶೇಷ ಕಾರ್ಯಕ್ರಮವಿದು. ಸಾಮಾನ್ಯ ಪ್ರಚಲಿತದಂತಿರದೆ, ನಮಗಾಗಿ ಸುಮಾರು ಉದ್ದ ವಾಗಿದ್ದು, ಕನ್ನಡನಾಡಿನ ಸಮಸ್ತ ಪರಿಚಯ ಮಾಡುವಂತಹದು. ನಮ್ಮಲ್ಲಿರುವ ಹಲವಾರು ಪ್ರತಿಭಾವಂತರನ್ನು ಗುರಿತಿಸಿಯೆ, ಶ್ರೀ ಸೋಮೇಶ್ವರವರು ಈ ಮಾರ್ಪಾಟು ಮಾಡಿದ್ದಾರೇನೊ ಅನಿಸುತ್ತೆ.

ನಾನು ಪಾಲ್ಗೊಂಡ ಎರಡನೆ ಕಂತು ಎರಡು ಗಂಟೆಯಷ್ಟು ದೀರ್ಘವಾದದ್ದು. ನನಗೆ ಅದು ತಿಳಿದಿದ್ದು ಮುಕ್ತಾಯವಾದಾಗಲೆ. ಅಷ್ಟೊತ್ತು ಕುಳಿತಿದ್ದೆನೆ ಎದ್ದೇಳದೆ, ಎನ್ನುವ ಅಚ್ಚರಿ. ನಾನು ಗಳಿಸಿದ ಅಂಕಗಳು ಮೇಲೇಳದಿರುವಾಗಲೂ ನನ್ನ ಆಸಕ್ತಿ ಮತ್ತು ಕುತೂಹಲ ಕುಂದಿರಲಿಲ್ಲ. ಇತರ ಸ್ಪರ್ಧಿಗಳ ಸರಿ ಉತ್ತರ ಹಾಗು ನಾ. ಸೋಮೇಶ್ವರವರ ವಿವರಣೆ ನಾನೂ ಒಬ್ಬ ಸ್ಪರ್ಧಿ ಅನ್ನುವುದನ್ನು ಮರೆಸಿ, ಆಲಿಸಿ ಆನಂದಿಸುವಂತೆ ಮಾಡಿತು.

ಒಟ್ಟಿನಲ್ಲಿ ಕರ್ನಾಟಕದ ಸಮಗ್ರ ಅವಲೋಕನ: ನೆಲೆ, ಭಾಷೆ, ಇತಿಹಾಸ, ಸಾಹಿತ್ಯ, ಕಲೆ, ಕಾವ್ಯ, ಜೊತೆಗೆ ಜಾಣ್ಮೆಯ ತಪಾಸಣೆ. ಉತ್ತರಿಸುವಲ್ಲಿ ಜಾಗ್ರತೆ ಮತ್ತು ಶೀಘ್ರತೆ ಪ್ರಮುಖ – ಅಂಕ ಗಳಿಸುವುದಕ್ಕೆ. ಯೋಚಿಸಲು ಸಮಯವಿರುವುದಿಲ್ಲ. ಎಲ್ಲರಿಗೂ ಆಗುವುದಿಲ್ಲವೇನೊ ಇದು. ಬಹಳಷ್ಟು ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿರಲಿಲ್ಲ; ಆದರೂ ಬಝರ್ ಬೇಗ ಒತ್ತದೆ ಒಂದಷ್ಟು ಅಂಕಗಳನ್ನು ಕಳೆದುಕೊಂಡೆ. ಉದಾಹರಣೆಗೆ, ಪ್ರಶ್ನೆ “ಭಿತ್ತಿ”.

 ಕನ್ನಡ, ಕನ್ನಡನಾಡಿನ ಸಿಂಹಾವಲೋಕನಕ್ಕೆ ನಮ್ಮನ್ನು ಕರೆದೊಯ್ಯಲು, ಶ್ರೀ ಸೋಮೇಶ್ವರರವರು ಯಾವ ಅಂಶವನ್ನೂ ಬಿಡದಂಥ ಹನ್ನೆರಡು ಸುತ್ತುಗಳನ್ನು ನಿರ್ಮಿಸಿದ್ದಾರೆ. ಒಂದೊಂದು ಪ್ರಶ್ನೆ ಅವರು ಗಳಿಸಿರುವ ಪಾಂಡಿತ್ಯದ ನಿದರ್ಶನ. ನಿರೂಪಣೆಯಲ್ಲಿ ಅವರ ವಿನಯ, ಸಂಯಮ, ಸ್ಪಷ್ಟ ಉಚ್ಚಾರಣೆ, ಹಸನ್ಮುಖ, ಉತ್ತರ ಕೊಡಲಾಗದಿದ್ದರೂ ನಿರಾಶರಾಗದೆ ನಾವು ಮುಂದಿನ ಪ್ರಶ್ನೆಗೆ ಕಾತುಕದಿಂದ ಕಾಯಲು ಎಡೆ ಮಾಡಿಕೊಡುತ್ತದೆ. ಇಷ್ಟೆಲ್ಲ ಅಡಗಿರುವಈ ಕಾರ್ಯಕ್ರಮ ಸ್ವಾಭಾವಿಕವಾಗಿ ಉದ್ದವಾಗಿದೆ. ಕಾರ್ಯಕ್ರಮ 90 ನಿಮಿಷಗಳಿಗೆ ಸೀಮಿತಗೊಳಿಸಿದರೆ ಹೆಚ್ಚು ಜನ ನೋಡುವಂತಾಗಬಹುದು. ಭಾಗಿಗಳಿಗೆ ಸಮಯ ಹೋಗುತಿರುವ ಅರಿವಾಗದಿದ್ದರೂ ವೀಕ್ಷಕರ ಗಮನದ ಅವಧಿ ಅಷ್ಟೊಂದಿರಲಾರದೇನೊ. ಆದ್ದರಿಂದ ಕಾರ್ಯಕ್ರಮವನ್ನ ಸ್ವಲ್ಪ ಚುಟುಕುಗೊಳಿಸಿದರೆ ಎಲ್ಲರೂ ಆಸಕ್ತಿಯಿಂದ ಗಮನ ಬದಲಿಸದೆ, ಮಿತ್ರರೊಡನೆಯೊ ಕುಟುಂಬದವರೊಡನೆಯೊ ಕುಳಿತು ನೋಡಿ ಕೇಳಿ, ತಮ್ಮತಮ್ಮಲ್ಲೆ ಸರಿಯೊ ತಪ್ಪೊ ಉತ್ತರ ಹೇಳಿಕೊಂಡು ನಲಿದಾಡಬಹುದು. ಹೇಗೆ ಚುಟುಕುಗೊಳಿಸುವುದು? ಕರ್ನಾಟಕ – ಪ್ರಾಚೀನ ಉಲ್ಲೇಖಗಳು, ನಮ್ಮ ಕನ್ನಡ ಒಗಟುಗಳು, ಅಕ್ಷರಗಳನ್ನು ಜೋಡಿಸೋಣ, ಕನ್ನಡ ಪದಬಂಧ, ಇವುಗಳನ್ನು ತೆಗೆದರೂ ಒಟ್ಟಾರೆ ಕಾರ್ಯಕ್ರಮದ ಆಕರ್ಷಣೆ ಕಡಿಮೆಯಾಗಲಾರದು ಎನ್ನುವುದು ನನ್ನ ಅನಿಸಿಕೆ. ಜೊತೆಗೆ ಚಟ್ ಪಟ್ ಚಿನಕುರಳಿ 10 ರಿಂದ 5 ಕ್ಕೆ ಇಳಿಸಬಹುದು. ಈ ಸುತ್ತಿನಲ್ಲಿ ಅಂಕಗಳು ಅನಾಮತ್ತು ಮೇಲೆಕೆಳಗಾಗಿ, ಅಲ್ಲಿಯವರೆಗು ಸಾಧಿಸಿದ್ದ ಸ್ಥಾನ ಕುಸಿದುಬಿದ್ದು, ಹತಾಶೆಗೊಳಗಾಗುವ ಪರಿಸ್ಥಿತಿಯನ್ನು ಕಿಂಚಿತ್ ಕಡಿಮೆ ಮಾಡಬಹುದು.

 ಚಿತ್ರಕವನ ವ್ಯಾಪಕ ಪ್ರತಿಭೆಯ ಪ್ರತಿಬಿಂಬ – ಕಾವ್ಯ ಸಾಮರ್ಥ್ಯ ಮತ್ತು ಚುರುಕು ಬುದ್ಧಿ ಗುರುತಿಸುವಂಥದು. ನಾನು ಹಿಂದೆ ನೋಡಿದ್ದೆ ಶತಾವಧಾನಿ ಗಣೇಶರವರು ಡಾ ವರ್ಮ ಚಿತ್ರ ಬಿಡಿಸುತ್ತಿದ್ದಂತೆ ದೊಡ್ಡ ಸಭೆಯಲ್ಲಿ ಅದ್ಭುತ ಕಾವ್ಯ ರಚಿಸಿದ್ದು. ಜನರ ಆನಂದಕ್ಕೆ ಪಾರವೇ ಇರಲಿಲ್ಲ. ಅಂತಹ ಪ್ರತಿಭೆ ಅಪರೂಪದ್ದು. ನಮ್ಮ ಸ್ಪರ್ಧೆಯಲ್ಲಿ ನಾವೆಲ್ಲ ತಡವರಿಸಿದಿವಿ. ಬಹುಷಃ ಮುಂದಿನ ಕಂತಿಗೆ ಬರುವವರಲ್ಲಿ ಈ ಕುಶಲತೆ ಹೆಚ್ಚಿನ ಪ್ರಮಾಣದಲ್ಲಿರಬಹುದು. ಒಂದು ನಿಮಿಷದ ಕಾಲ ಒಳ್ಳೆಯ ರಚನೆಗೆ ಸಾಕಾಗಲಾರದೇನೊ. ಬದಲು ಎರಡು ನಿಮಿಷಗಳಾದರೆ ಹೆಚ್ಚು ಪರಿಣಾಮಕಾರಿಯಾಗುವುದು ಅನಿಸುತ್ತೆ.

ಈ ಕಾರ್ಯಕ್ರಮ ನಡೆಸಿಕೊಡುವ ನಾ. ಸೋಮೇಶ್ವರರವರನ್ನ ಎಷ್ಟು ಹೊಗಳಿದರು ಸಾಲದು. ನಮಗಾಗಿಯೇ ರೂಪಿಸಿ ನಮ್ಮ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ತಿಳಿಯಲು ಉತ್ತೇಜನ ಕೊಟ್ಟಿದ್ದಾರೆ. ವ್ಯೆದ್ಯನಾಗಿಯೂ ದೂರದರ್ಶನದ ಜನಪ್ರಿಯ ನಿರೂಪಕನಾಗಿರುವುದು ಇವರೊಬ್ಬರೆಯೇನೊ. ಪ್ರಮೋದ್ ಮತ್ತು ದೇಸಾಯಿಯವರು ತಮ್ಮ ನಿರಂತರ ಯತ್ನದಿಂದ ನಮಗೊಂದು ದೊಡ್ಡ ಅವಕಾಶ ದೊರಕಿಸಿ ಕೊಟ್ಟರು. ಅನಿವಾಸಿ ತಂಗುದಾಣದಡಿ ಇದು ಒಂದು ಯಶಸ್ವಿ ಚಟುವಟಿಕೆಯಾಗಿರುವುದು ಇವರೆಲ್ಲರ ಸಕ್ರಿಯ ಶ್ರಮದಿಂದ.

ಸಂಕ್ಷಿಪ್ತವಾಗಿ “ಥಟ್ ಅಂತ ಹೇಳಿ”,  ನನ್ನ ಭಾಷೆ, ಅದರ ಚರಿತ್ರೆ, ಸಂಸ್ಕೃತಿ ಮತ್ತು ಜನದಿಗ್ಗಜರ ಬಗ್ಗೆ ತಿಳಿಯಲು ಒಂದು ದೊಡ್ಡ ಸ್ಪೂರ್ತಿ.

ನವೀನ

3) ಥಟ್ ಅಂತ ಹೇಳಿ… ಕಾರ್ಯಕ್ರಮದ ಧೀರ್ಘ ಸುಖ! – ಡಾ.ಪ್ರೇಮಲತ ಬಿ. ಅವರ ಬರಹ

ಸಭೆಯೋ, ಸಮಾರಂಭವೋ, ಹಬ್ಬವೋ ಅಥವಾ ಸ್ಪರ್ಧೆಯೋ -ಎಲ್ಲದರ ಸಂತೋಷ ಅದು ನಡೆಯುವ ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ. ಅದರ ಸಿದ್ಧತೆ, ಸಡಗರ, ಗುಂಪಿನಲ್ಲಿ ನಡೆವ ಮಾತು ಕತೆ ಸಲ್ಲಾಪ, ಜೋಕ್ ಗಳು, ಪರಿಹಾಸ್ಯದ ಕಮೆಂಟ್ ಗಳು ಎಲ್ಲದರ ಅನುಭವವೂ ಸೇರಿಕೊಳ್ಳುತ್ತವೆ. ಇನ್ನು ಆ ದಿನದ ಅನುಭವಗಳು ಅದಕ್ಕೆ ಕಳಶವಿಡುತ್ತದೆ.

ಥಟ್ ಅಂತ ಹೇಳಿ… ಕಾರ್ಯಕ್ರಮ ಎರಡು ಗಂಟೆಗಳಲ್ಲಿ ಮುಗಿದೇ ಹೋದರೂ, ಅದು ನಡೆಯುತ್ತಿರುವ ಎರಡು ತಿಂಗಳಲ್ಲಿ ನಮ್ಮ ಅನಿವಾಸಿ ಮಿತ್ರರ ನಡುವೆ ನಡೆಯುತ್ತಿರುವ ಸಂವಾದಗಳ ಎಲ್ಲ ಪುಳಕಗಳಲ್ಲಿ ಭಾಗಿಯಾಗುತ್ತ ಬಂದಿರುವ ಅನುಭವ ನನ್ನದಾಗುತ್ತಿದೆ. ಕಾರ್ಯಕ್ರಮದಲ್ಲಿ ಸ್ಪರ್ದಿಸುವ ಸಲುವಾಗಿ ಕರ್ನಾಟಕದ ಸಾಹಿತ್ಯ, ನದಿ, ಬೆಟ್ಟ, ಉದ್ದ-ಅಗಲಗಳಲ್ಲಿ ಒಮ್ಮೆ ನವಿರಾಗಿ ಅಲೆದಾಡಿ  ಬಂದದ್ದಾಯ್ತು.ಇಲ್ಲದಿದ್ದರೆ ಅದಕ್ಕಾಗಿ ಪ್ರತ್ಯೇಕವಾಗಿ ಸಮಯ ತೆಗೆಯುವುದು  ದೇವರಾಣೆಗೂ ಸಾಧ್ಯವಾಗುತ್ತಿರಲಿಲ್ಲ ಅಥವಾ ಅಂತಹ ಪ್ರಯತ್ನವನ್ನು ಮಾಡುತ್ತಿರಲಿಲ್ಲ.

ಅನಿವಾಸಿಯಾದ ನನಗೆ ಇತರೆ ಹಲವರಿಗಿರುವ ಅವೇ ಅಳ್ಳಕಗಳಿದ್ದವು. ಕರ್ನಾಟಕದ ಹೊಸ ವಿಚಾರಗಳ ಬಗ್ಗೆ ತಿಳಿದಿರಲಿಲ್ಲ. ಹಳೆಯ ವಿಚಾರಗಳು ಮರೆತುಹೋಗಿದ್ದವು. ಅಥವಾ ಮೊದಲಿಂದಲೂ ಗೊತ್ತಿರಲಿಲ್ಲ. ಸಾಹಿತ್ಯದ ವಿಧ್ಯಾರ್ಥಿಯಲ್ಲ.ಆದರೆ, ನಾನು ಸ್ಪರ್ಧಿಸುತ್ತಿದ್ದ ಇತರೆ ಎಲ್ಲರೂ ನನ್ನಂತವರೇ ಆದ ಕಾರಣ ಭಂಡ  ಧೈರ್ಯ ಮಾಡಿ ಹೆಸರು ಕೊಟ್ಟೆ.

ಎರಡು ದಿನಕ್ಕೆ ಮುನ್ನ ನಮ್ಮ ತಾಂತ್ರಿಕ ಸಿದ್ಧತೆಗಳನ್ನು ಪರೀಕ್ಷಿಸಿದ ಪ್ರಮೋದ್ ಅಸ್ತು ಎಂದಿದ್ದರು. ಅಂದಿನ ಸ್ಪರ್ಧೆ ತಾಂತ್ರಿಕ ಅಡಚಣೆಯಿಂದಲೇ ಶುರುವಾಯ್ತು. ಜೊತೆಗೆ ನಾಸೋ ಅವರು ಹೇಳಿದ ನಿಯಮಗಳು ಮತ್ತು ನಕಾರಾತ್ಮಕ ನಡೆಗಳ ಬಗ್ಗೆ ಯೋಚಸುತ್ತಿರುವಾಗಲೇ ಕಾರ್ಯಕ್ರಮ ಶುರುವೂ ಆಯ್ತು. ಹಲವು ಗೊಂದಲಗಳ ಜೊತೆಗೆ ಪ್ರಶ್ನೆಗಳೂ ತೂರಿಬಂದವು.

ಪ್ರಶ್ನೆಯನ್ನು ಓದುವ, ಉತ್ತರಗಳನ್ನು ಹಾಕುವ ಮುನ್ನವೇ ಬಜರ್ ಅನ್ನು ಒತ್ತುವ, ನಂತರ ಉತ್ತರಗಳನ್ನು ಓದುತ್ತಲೇ ಇರುವಾಗ ಬರೆದುಕೊಳ್ಳುವ ,ಉತ್ತರಿಸುವ, ಬಜರ್ ಅನ್ನು ಒತ್ತದೆ ಕಾದರೆ ಉತ್ತರಿಸುವ ಅವಕಾಶವನ್ನು ಕಳೆದುಕೊಳ್ಳುವ ಎಲ್ಲದರ ನಡುವೆ, ಉತ್ತರ ಗೊತ್ತಿದ್ದೂ ಹೇಳಲಾಗದ ಮೂರ್ಖತನಗಳ ಪ್ರದರ್ಶನಗಳ ಜೊತೆ ಸ್ಪರ್ಧೆ ಮುಗಿದೂ ಹೋಯಿತು.ಒಂದೆರಡು ಉತ್ತರದ ಅಂತರದಲ್ಲಿ ಮುಂದಿನ ಸುತ್ತಿಗೆ ಹೋಗಲಾಗದಿದ್ದರೂ ಒಂದು ಹೊಸ ಅನುಭವ ಲಾಕ್ ಡೌನಿನ ಈ ಕಾಲದಲ್ಲಿ ನನ್ನದಾಯಿತು.

ದಿನದ ಮಿಕ್ಕ  ಸಮಯದಲ್ಲೂ ಆ  ಹೊಸ ಅನುಭವದ ಸಡಗರ ಮುಂದುವರೆಯಿತು. ನಾಸೋ ಅವರ ನಿರರ್ಗಳ ಕನ್ನಡ, ಸ್ಪಷ್ಟ ಉಚ್ಚಾರ, ಅಗಾಧ ಅರಿವು, ಶಾಂತವಾಗಿ ಕಾರ್ಯಕ್ರಮ ನಡೆಸಿಕೊಡುವ ಶೈಲಿ ಮತ್ತು ಬೆಟ್ಟದಂತಹ ಅನುಭವ ಸ್ಪರ್ಧಿಗಳಿಗೆ ಜೀವಾಳ.

ಮುಂದಿನ ಎರಡು ದಿನಗಳ ಸ್ಪರ್ಧೆ ಮತ್ತು ಇನ್ನೂ ಬರಬೇಕಿರುವ ೨೫ ಪುಸ್ತಕಗಳ ನಿರೀಕ್ಷೆಯಲ್ಲಿ ಕಾತುರಳಾಗಿ ಕಾಯುತ್ತಿದ್ದೇನೆ.

ಡಾ.ಪ್ರೇಮಲತ ಬಿ.

4) ಥಟ್ ಅಂಥ ಹೇಳಿ, ತಟ್ಟದಿದ್ದರೆ ಬೀಳಿ: ರಾಮಶರಣ ಲಕ್ಷ್ಮೀನಾರಾಯಣ ಬರೆದುದು

 ಕೋವಿಡ್ ನಿರ್ಭಂದನೆ ಕೆಲವು ಮಟ್ಟಿಗೆ ಬಂಧನವಾದರೂ, ಇಂದ್ರಿಯಗಳಿಗೆ ವಿನೂತನ ಅನುಭವಗಳನ್ನು ತೆರೆದಿದೆ ನನ್ನ ಮಟ್ಟಿಗೆ. ಝೂಮ್ ನಂತಹ ಝಾಮ್ಗಳಲ್ಲಿ ಸಭೆಗಳಂತೂ ಪ್ರತಿ ದಿನವೆಂದರೂ ಸರಿಯೇ. ಸಮಯವಿದ್ದರೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಗುಣಮಟ್ಟ, ವೈವಿಧ್ಯ, ಎಲ್ಲವೂ ಲಭ್ಯ- ವಿಖ್ಯಾತ ಕಲಾವಿದರು, ಜ್ಞಾನಿಗಳು, ಎಲೆಮರೆಯ ಕಾಯಿಗಳು.  ಹಲವು ಸಂಘ ಸಂಸ್ಥೆಗಳ ವತಿಯಿಂದ ಎಲ್ಲವೂ ಕೈಗೆಟುಕುತ್ತಿರುವುದು ನಮ್ಮಸುದೈವ.

ವಿವಿಡ್ಲಿಪಿಯ ಪ್ರಮೋದ್ ವಾರಕ್ಕೊಂದರಂತೆ ಸಾಹಿತ್ಯಿಕ ಕಾರ್ಯಕ್ರಮ ನೀಡುತ್ತಿದ್ದಾರೆ. ಅವರು ಅನಿವಾಸಿ ಗುಂಪಿಗೆ ‘ಥಟ್ ಅಂಥ ಹೇಳಿ’ ರಸಪ್ರಶ್ನೆಯಲ್ಲಿ ಭಾಗವಹಿಸುತ್ತೀರಾ ಎಂದು ಆಹ್ವಾನಿಸಿದ್ದೇ ಸೈ, ಹಲವರು ಹುರುಪಿನಲ್ಲಿ ಮುಂದಾದರು. ನಾನೂ ಮೀನ-ಮೇಷ ಎಣಿಸಿ, ಗೆಳೆಯರ ಪ್ರೋತ್ಸಾಹಕ್ಕೆ ಮಣಿದು, ನನ್ನ ಹೆಸರನ್ನು ನೋಂದಾಯಿಸಿದೆ. ಅಲ್ಲ, ಯಾಕೆ ಬೇಕು ರಸಪ್ರಶ್ನೆ, ಸೋಲು-ಗೆಲುವಿನ ಆಟ? ನನ್ನ ಅರಿವೂ ನಾಡಿನ ಬಗ್ಗೆ ಅಷ್ಟಕ್ಕಷ್ಟೇ. ಒಂದು ತೆವಲು, ದಿಗ್ಬಂಧನದ ಕಾಲದಲ್ಲಿ ಮನರಂಜನೆಗೊಂದು ಸಾಧನ ನನ್ನಅಭಿಪ್ರಾಯದಲ್ಲಿ.

ಥಟ್ ಅಂಥ ಹೇಳಿ, ಕನ್ನಡದ ಖ್ಯಾತ ರಸಪ್ರಶ್ನೆ ಕಾರ್ಯಕ್ರಮ ಎಂದು ಕೇಳಿ ಗೊತ್ತಷ್ಟೆ ನನಗೆ. ಹಾಗೆ ಹೇಳ್ತೇನೆ ಅಂತ ನಗಬೇಡಿ. ನಾನು ಇಂಗ್ಲೆಂಡಿಗೆ ಬಂದಿದ್ದು ೧೯೯೯ರಲ್ಲಿ. ಈ ರಸಪ್ರಶ್ನೆ ಕಾರ್ಯಕ್ರಮ ದೂರದರ್ಶನದ ಚಂದನ ವಾಹಿನಿಯಲ್ಲಿ ಶುರುವಾಗಿದ್ದು ೨೦೦೨ರಲ್ಲಿ. ಊರಿಗೆ ಹೋದಾಗ ಒಂದು ಸಲ ಇದನ್ನು ನೋಡಿದ್ದು ನೆನಪು. ನನ್ನನ್ನು ಆಕರ್ಷಿಸಿದ್ದು ಮೂರು ಸಂಗತಿಗಳು. ಕನ್ನಡ ನಾಡು, ಭಾಷೆ, ಸಂಸ್ಕೃತಿಗಳ ಕುರಿತಾದ ಪ್ರಶ್ನೆಗಳು; ಸರಿ ಉತ್ತರಕ್ಕೊಂದು ಪುಸ್ತಕ ಹಾಗೂ  ಅಚ್ಚ ಕನ್ನಡದಲ್ಲಿ ಮಾತಾಡುವ ಕ್ವಿಜ್ ಮಾಸ್ಟರ್.

ಜುಲೈ ಮೊದಲಲ್ಲಿ ನಡೆದ ಪ್ರಥಮ ಸುತ್ತನ್ನು ನೋಡಿದ ಮೇಲೆ, ಈ ರಸಪ್ರಶ್ನೆಯ ವೈಖರಿ ಸ್ವಲ್ಪ ಅರ್ಥವಾಯಿತು. ಕಳೆದ ರವಿವಾರ ನನ್ನ ಸರದಿಯೂ  ಬಂತು. ಅದಕ್ಕೆ ಮೊದಲು ಗುರುವಾರ ಪ್ರಮೋದ್ ಸ್ಪರ್ಧೆಯ ಶಿಷ್ಟಾಚಾರಗಳನ್ನೆಲ್ಲ ವಿವರಿಸಿದರು. ಅವರಿಗಿದ್ದ ಮುಖ್ಯ ಚಿಂತೆ ನಮ್ಮ ಇಂಟರ್ನೆಟ್ ಸಂಪರ್ಕದ್ದಾಗಿತ್ತು. ಈ-ಜಗುಲಿಯ ಥಟ್ ಅಂಥ ಹೇಳಿ ಕಾರ್ಯಕ್ರಮದ ನಾವೀನ್ಯ ಈ – ಗಂಟೆ (ಬಝರ್) ನಾನಂತೂ ಈ ವರೆಗೆ ಇಂತಹ ಚಮತ್ಕಾರ ನೋಡಿಲ್ಲ. ಪ್ರಮೋದ್ ವಾಟ್ಸಾಪ್ ನಲ್ಲಿ ಕಳಿಸಿದ ಕೊಂಡಿಯೊತ್ತಿದ್ರೆ ಈ-ಗಂಟೆ ನಿಮ್ಮ ಫೋನಿನಲ್ಲಿ ಪ್ರತ್ಯಕ್ಷ. ಒಮ್ಮೆ ಒತ್ತಿದರೆ ಮತ್ತೆ ಪ್ರಮೋದ್‌ ಅದನ್ನು ಪುನಶ್ಚೇತಿಸಿದರೆ ಮಾತ್ರ ಹಸಿರಾಗಿ ಮತ್ತೊಮ್ಮೆ ಬಡಿಸಿಕೊಳ್ಳಲು ಸಿದ್ಧ. ಇಲ್ಲದಿದ್ದರೆ ಮಾತು ಕೇಳದೇ ಮುಖ ಕೆಂಪಾಗಿಸಿಕೊಂಡೇ ಇರುತ್ತದೆ.

ರವಿವಾರ ಪ್ರಮೋದ್‌ ಆಣತಿಯಂತೆ ಭಾರತೀಯ ದಿರುಸನ್ನೇ ತೊಟ್ಟಿದ್ದಾಯ್ತು. ಸೋಮೇಶ್ವರರು ಸಮಯಕ್ಕೆ ಸರಿಯಾಗಿ ಆಸನವನ್ನಲಂಕರಿಸಿದರು. ಎಣ್ಣೆ ಹಚ್ಚಿ ತೀಡಿ ಬಾಚಿದ ನೆರೆ ಮಿಶ್ರಿತ ಕೂದಲು, ಬಾಚಿದ ಮೀಸೆ.  ಸದಾ ಮಂದಹಾಸ ಸೂಸುವ ಮೊಗ. ಕಣ್ಣಲ್ಲಿ ಸಣ್ಣಗೆ ಮಿಂಚುವ ತುಂಟತನ, ಠಾಕು-ಠೀಕಾಗಿ ಧರಿಸಿದ ಭಾರತೀಯ ಪೋಷಾಕು ಅವರ ವ್ಯಕ್ತಿತ್ವನ್ನು ಮೊದಲ ಬಾರಿಗೆ ನೋಡಿದ ನನಗೆ ಪರಿಚಯ ಮಾಡಿಸಿಬಿಟ್ಟಿತು. ನಾ .ಸೋಮೇಶ್ವರರು ನುರಿತ ಕ್ವಿಜ್ ನಿರ್ವಾಹಕ, ಜ್ಞಾನಿ. ಪ್ರಖ್ಯಾತ ವೈದ್ಯಕೀಯ ಬರಹಗಾರ ಕನ್ನಡದಲ್ಲಿ . ಎರಡು ಬಾರಿ ಅಕಾಡಮಿ ಪ್ರಶಸ್ತಿ ವಿಜೇತ. ಪ್ರಖ್ಯಾತ ಬಿ.ಸಿ.ರಾಯ್ ಪ್ರಶಸ್ತಿಯೂ ಅವರನ್ನರಸಿ ಬಂದಿದೆ. ಭಾರತದಲ್ಲಿ ಅತಿ ದೀರ್ಘ ಕಾಲ ಸತತವಾಗಿ ರಸಪ್ರಶ್ನೆ ನಡೆಸಿರುವ ದಾಖಲೆ ಅವರದ್ದು. ಇದನ್ನೆಲ್ಲ ನೀವು ಗೂಗಲ್ ಮಾಡಿ ಓದಬಹುದು. ಆದರೂ ಎಂಥ ನಿಗರ್ವಿ! ಮೃದುಭಾಷಿ, ಸಂಯಮಿ. ಕಳೆದ ಹದಿನೆಂಟು ವರ್ಷಗಳಿಂದ ರಸಪ್ರಶ್ನೆಗೆ ಸಮಯವನ್ನರ್ಪಿಸಿಕೊಂಡ ಸೋಮೇಶ್ವರರು ನೆಚ್ಚಿನ ಹವ್ಯಾಸಗಳಾದ ಚಾರಣ, ಚಿತ್ರಕಲೆಗಳಿಗೆ ತಿಲಾಂಜಲಿಯಿತ್ತಿದ್ದಾರಂತೆ ಅವುಗಳಿಗೆ ಸರಿಯಾದ ನ್ಯಾಯ ದೊರಕಿಸಲಾಗದೆಂದು. ಅವರ ಅಚ್ಚುಕಟ್ಟಿನ ವೇಷಭೂಷಣಗಳೇ ಅವರ ಕಾರ್ಯ ಪರಿಪೂರ್ಣತೆಗೆ ಕನ್ನಡಿ ಹಿಡಿದಿತ್ತಲ್ಲ! ಇದೆಲ್ಲ ಗೂಗಲ್-ವಿಕಿಪಿಡಿಯಾಗಳಲ್ಲಿ ಕಾಣದ ರೂಪ.  ಸ್ಪರ್ಧೆಯ ನಿಯಮಗಳನ್ನ ವಿಷದವಾಗಿ, ಸರಳವಾಗಿ ತಿಳಿ ಹೇಳುವ ಸಂಯಮ ಅವರದ್ದು. ಬಂದ  ಅನುಮಾನಗಳಿಗೆ ಸ್ಪರ್ಧಿಗಳ ಅಭಿಪ್ರಾಯ ಕೇಳಿಯೇ ಮುಂದುವರೆಯುವಂಥ ಮನೋಭಾವ. ತನ್ನಂಥ ನುರಿತ ನಿರ್ವಾಹಕ ಹೇಳಿದ್ದನ್ನೇ ನೀವು ಕೇಳಬೇಕೆಂಬ ಜಂಭವಿಲ್ಲ. 

೧೦ ಸುತ್ತುಗಳ ಸ್ಪರ್ಧೆ ಮುಗಿದದ್ದೇ ಗೊತ್ತಾಗಲಿಲ್ಲ. ಈ ಸಲ ಪದೇ ಪದೇ  ಗಣೇಶ ಸ್ತುತಿಯ ಅವಶ್ಯಕತೆ ಇರಲಿಲ್ಲ ಹೋದ ಸಲದಂತೆ. ವೀಕ್ಷಕರ ಅಭಿಪ್ರಾಯಗಳನ್ನಾಲಿಸಿ ರಸಪ್ರಶ್ನೆಗೆ ಮಾಡಿದ ಕೆಲವು ಬದಲಾವಣೆಗಳೂ ಕಾಲಾವಧಿಯನ್ನು ಕಡಿಮೆ ಮಾಡಿದ್ದರಲ್ಲಿ ಸಂಶಯವೇ ಇಲ್ಲ. ದಿವ್ಯತೇಜ ಪ್ರತಿ ಸುತ್ತಿನಲ್ಲೂ ಮಿಂಚಿ, ದ್ವಿಶತಕ ಬಾರಿಸಿ ವಿಜೇತರಾದರೆ, ಅವರ ಸಮಸಮಕ್ಕೆ ಪೈಪೋಟಿ ನೀಡಿದ ಪ್ರೇಮಲತಾ ದ್ವಿಶತಕ ಬಾರಿಸಿದರೂ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ನನಗೆ ಗಂಟೆ ಬಾರಿಸುವಲ್ಲಿ ಎಡವಟ್ಟಾದದ್ದೇ ಹೆಚ್ಚು. ನಾನು ಭಾಗವಿಹಿಸಿದ್ದು ಹೊಸ ಅನುಭವಕ್ಕಾಗಿ, ಕಳೆದ ಕಾಲಕ್ಕೆ ಪ್ರತಿಯಾಗಿ ಕೆಲವು ಪುಸ್ತಕಗಳನ್ನು ಪಡೆಯಲು. ನನ್ನ ಎರಡೂ ಗುರಿಗಳ ಸಾಧನೆಯಾಗಿದ್ದು ಖುಷಿ ಕೊಟ್ಟಿದೆ. ಅದರೊಟ್ಟಿಗೆ ಸೋಮೇಶ್ವರರಂಥ ಅಪೂರ್ವ ವ್ಯಕ್ತಿಯೊಡನೆ ಕೆಲ ಗಳಿಗೆ ಕಳೆಯುವ ಸಿಕ್ಕ ಅವಕಾಶ ಹೆಚ್ಚಿನ ಬೋನಸ್.

ಮುಂದಿನ ಸುತ್ತಿನ ಸ್ಪರ್ಧಿಗಳೇ, ಬನ್ನಿ, ಮಜಾ ಮಾಡಿ, ಈ-ಗಂಟೆ ಬಾರಿಸಿ ಪುಸ್ತಕಗಳ ಕೊಳ್ಳೆ ಹೊಡೆಯಿರಿ. ರಜೆಯಿಲ್ಲದ ಕೋವಿಡ್ ಕಾಲದಲ್ಲಿ ಪುಸ್ತಕಗಳನ್ನೋದಿ ಸ್ವರ್ಗಕ್ಕೆ ಕಿಚ್ಚು ಹಚ್ಚಿ.

ಆರಂಕುಶವಿಟ್ಟೊಡಂ …ಆರಂ+ಕುಶಮಿಟ್ಟೊಡಂ:

ದಿವಿಹಲಸು ಮತ್ತದರ ಖಾದ್ಯಗಳು

 ಈ ಲೇಖನದ ಶೀರ್ಷಿಕೆಯಲ್ಲಿಯ ಆದಿಕವಿ ಪಂಪನ ಉಕ್ತಿಯನ್ನು ನಾನು ಶಾಲೆಯಲ್ಲಿ ಓದುತ್ತಿದ್ದಾಗ ’ಯಾರು ಅಂಕುಶದಿಂದ ತಿವಿದರೂ ನನ್ನ ಮನಸ್ಸು ಬನವಾಸಿ ದೇಶವನ್ನು ನೆನೆಯುತ್ತದೆ’ ಎಂದೇ ಕಲಿತಿದ್ದೆ. ಈತ್ತೀಚೆಗೆ ನಾನು ಅರಿತಿದ್ದು ಅದನ್ನು ‘ಆರಂ+ಕುಶಮಿಟ್ಟೊಡಂ‘ ಎಂದು ವಿಭಜಿಸಬೇಕೆಂದು ಹೇಳುತ್ತಾರೆ. ‘ಆರಂ’ ಎಂದರೆ ಬನವಾಸಿಯ ಸುತ್ತಮುತ್ತ ಬೆಳೆಯುತ್ತಿದ್ದ ದಿವಿಹಲಸು (Artocarpus Altilis)  ಎಂಬ ಹಲಸಿನ ಜಾತಿಯ ಮರ. ‘ಕುಶಮಿಟ್ಟೊಡಂ’ ಎಂದರೆ ಹೂಬಿಟ್ಟಾಗ ಎಂಬ ಅರ್ಥ. ಅದರ ಸುಗಂಧ ಬಹಳ ಆಕರ್ಷಕವಾಗಿರುತ್ತದಂತೆ. ಹಾಗಾಗಿ ’ದಿವಿಹಲಸು ಹೂ ಬಿಟ್ಟಾಗ ನನ್ನ ಮನಸ್ಸು ಬನವಾಸಿ ದೇಶವಂ ನೆನೆವುದು, ಎಂದು ಪಂಪ ಹೇಳುತ್ತಾನೆ ಎಂದು ಕೆಲವು ಜಿಜ್ಞಾಸುಗಳ ವಿವರಣೆ. ದಿವಿಹಲಸು ಕುರಿತ ಇಂಗ್ಲಿಷ್ ವಿಕಿಪಿಡಿಯಾ ಎಂಟ್ರಿಯನ್ನೊಮ್ಮೆ ಬಿಡುವಿದ್ದರೆ ಓದಿ. http://en.wikipedia.org/wiki/Breadfruit

(ಮೇಲಿನ ಚಿತ್ರಕ್ಕೆ ಮತ್ತು ಹಣ್ಣನ್ನು ನನ್ನ ಗಮನಕ್ಕೆ ತಂದವರು ಅಂಕಣಕಾರ ಮಿತ್ರ ಶ್ರೀವತ್ಸ ಜೋಶಿ ಅವರಿಗೆ ಕೃತಜ್ಞತೆಗಳು.)

 ಶ್ರೀವತ್ಸ ದೇಸಾಯಿ