ಬ್ರಸೀಲ್ ಡೈರಿ: ಆನಂದ ಕೇಶವಮೂರ್ತಿ

ಲೇಖಕರು: ಆನಂದ ಕೇಶವಮೂರ್ತಿ

 ಪ್ರವಾಸ ಕಥನ ಬರೆಯುವುದು ಸುಲಭವಲ್ಲ.  ಗೂಗಲಿಸಿದರೆ ಸಾಕು ನೂರಾರು ಜಾಲತಾಣಗಳಿಂದ ಮಾಹಿತಿ ಸಿಗುತ್ತದೆ, ಲಕ್ಷಾಂತರ ಫೋಟೋಗಳು ಸಿಗುತ್ತವೆ. ಪ್ರವಾಸ ನಮಗೆ ಅಪ್ಯಾಯಮಾನವಾಗುವುದು ನಮ್ಮ ಅನುಭವಗಳಿಂದ. ನಿಮಗೆ ಗೂಗಲಿನಲ್ಲಿ ಸಿಗದಿರುವ ಕೆಲವು ವಿಷಯಗಳನ್ನು ಆನಂದ ಹಂಚಿಕೊಂಡಿದ್ದಾರೆ. 

`ಅನಿವಾಸಿ ಯುಕೆ` ಬಳಗದ ಲೇಖಕರ ಬಳಗಕ್ಕೆ ಇನ್ನೊಬ್ಬ ಲೇಖಕರ ಸೇರ್ಪಡೆ! ತುಂಬ ಓದುವ ಆನಂದ ಕೇಖವಮೂರ್ತಿಯವರು ಮೊಟ್ಟಮೊದಲ ಸಲ `ಅನಿವಾಸಿ`ಗೆ ಬರೆದಿದ್ದಾರೆ. ಆನಂದ ಅವರು ಇನ್ನೂ ಹೆಚ್ಚು ಬರೆಯಲಿ ಎಂದು ಆಶಿಸುತ್ತೇನೆ. ಆನಂದ ಮತ್ತು ಅನ್ನಪೂರ್ಣಾ ಅವರು ತಮ್ಮ ಬ್ರಸೀಲ್ ಪ್ರವಾಸದ ಡೈರಿಯಿಂದ ಆರಿಸಿದ ತುಣುಕುಗಳು ಇಲ್ಲಿವೆ.  – ಸಂ

ಇಂಗ್ಲೀಷೂ ಬ್ರಸೀಲೂ:

ಅಮೆಜಾನ್ ಎಕೋ ಲಾರ್ಡ್ ಇಂದ ಮಾನುಅಸ್ (Manaus) ನಗರದ ಹೋಟೆಲ್ ಗೆ ಹೋಗುತ್ತಾ ಇದ್ದೀವಿ. ಬೋಟಿನಲ್ಲಿ ರಿಯೋ ನೀಗ್ರೋ ನದಿ ದಾಟಿ ಟ್ಯಾಕ್ಸಿಯಲ್ಲಿ ಹೋಟೆಲ್ ಹೋಗುತ್ತಿರುವಾಗ ಮುಂದಿನ ದಿನದ ಕಾರ್ಯಕ್ರಮ ಬಗ್ಗೆ ಯೋಚನೆ ಶುರುವಾಯಿತು. ಯಾಕೆಂದರೆ ಟ್ಯಾಕ್ಸಿ ಡ್ರೈವರ್ ನಮ್ಮ ಗೈಡ್ ಅಲ್ಲ ಅಂತ ಗೊತ್ತಾಯ್ತು. ಅವನ ಕೆಲಸ ನಮ್ಮನ್ನು ಹೋಟೆಲ್ ತಲುಪಿಸುವುದು ಮಾತ್ರ ಅಂತ ಹೇಳಿದ. ಪುಣ್ಯ ಅವನಿಗೆ ಇಂಗ್ಲಿಷ್ ಬರುತ್ತಿತ್ತು.

ನಮ್ಮ ನಿಗದಿತ ಕಾರ್ಯಕ್ರಮದ ಪ್ರಕಾರ ಮುಂದಿನ ದಿನ ನಾವು 150 ಕಿಲೋ ಮೀಟರ್ ದೂರದ Presidente Fugueiredo ರಾಷ್ಟ್ರೀಯ ಉದ್ಯಾನವನದಲ್ಲಿ ಫಾಲ್ಸ್ ನೋಡಲು ಹೋಗಬೇಕಿತ್ತು. ಆದರೆ ಎಷ್ಟು ಹೊತ್ತಿಗೆ ಮತ್ತು ಯಾರು ಕರೆದುಕೊಂಡು ಹೋಗುತ್ತಾರೆ ಅಂತ ಗೊತ್ತಿರಲಿಲ್ಲ. ಹೋಟೆಲ್ ತಲುಪಿದಾಗ ಅವರಿಗೂ ಇದರ ಮಾಹಿತಿ ಇರಲಿಲ್ಲ. ನಮ್ಮ ಟ್ಯಾಕ್ಸಿ ಡ್ರೈವರ್ ಗೆ ನಮ್ಮ ಮುಂದಿನ ದಿನದ ಪ್ರವಾಸ ಇರುವ coupon ತೋರಿಸಿದವು. ಅವನು ತಕ್ಷಣ ಆ ಕಂಪನಿಗೆ ಫೋನ್ ಮಾಡಿ ಬೆಳಗ್ಗೆ 8 ಗಂಟೆಗೆ ತಯಾರು ಇರಿ, ನೀರಿನಲ್ಲಿ ಇಳಿಯಲು ಬೇಕಾಗುವ ಬಟ್ಟೆಗಳನ್ನು ತೆಗೆದುಕೊಂಡು ಹೋಗಿ ಅಂತ ತಿಳಿಸಿದ.

ಮುಂದಿನ ದಿನ ಬೇಗ ಎದ್ದು ತಿಂಡಿ ತಿಂದು ನೀರಿಗಿಳಿಯಲು ಸರಿಯಾದ ಬಟ್ಟೆ ಟವಲ್ ಇಟ್ಟುಕೊಂಡು ಕಾಯುತ್ತಾ ಕುಳಿತೆವು. ಸುಮಾರು ಎಂಟೂವರೆ ಗಂಟೆಗೆ ಒಬ್ಬ ಹೋಟೆಲ್ ಒಳಗೆ ಬಂದು ಯಾರನ್ನೋ ಹುಡುಕುತ್ತಿದ್ದ. ನಮ್ಮನ್ನೇ ಹುಡುಕುತ್ತಿರಬಹುದು ಎಂದು ಅನುಮಾನಿಸಿ ಅವನನ್ನು ಮಾತಾಡಿಸಿದೆ, ಗೊತ್ತಾಯ್ತು ಅವನಿಗೆ ಇಂಗ್ಲೀಷ್ ಕೊಂಚವೂ ಬರುವುದಿಲ್ಲ ಅಂತ. ಅವನು ಇಂಗ್ಲೀಷ್ ಬರುವ ಇನ್ನೊಬ್ಬನನ್ನು ಕರೆದುಕೊಂಡು ಬಂದ. ಅವನು ನಮಗೆ ಅವನ ಜೊತೆ ಹೋಗಲು ತಿಳಿಸಿ ಅವತ್ತಿನ ಕಾರ್ಯಕ್ರಮ ಬಗ್ಗೆ ಹೇಳಿದ. ಸ್ವಲ್ಪ ಸಮಾಧಾನವಾಯಿತು. ಆದರೆ ದಿನಪೂರ್ತಿ ಇಂಗ್ಲೀಷ್ ಬರದ ಇವನ ಜೊತೆ ಹೇಗೆ ಮಾತಾಡೋದು ಅಂತ ಸ್ವಲ್ಪ ಯೋಚನೆಯಾಯಿತು. ಕಾರಿನಲ್ಲಿ ಇನ್ನೂ ಇಬ್ಬರು ಹುಡುಗರು ಮತ್ತು ಒಂದು ಹುಡುಗಿ ಇದ್ದರು. ಆ ಇಬ್ಬರು ಹುಡುಗರಿಗೆ ಇಂಗ್ಲಿಷ್ ಚೆನ್ನಾಗಿ ಬರುತ್ತಿತ್ತು. ಹುಡುಗಿಗೆ ಇಂಗ್ಲಿಷ್ ಅರ್ಥ ಆಗ್ತಾ ಇತ್ತು. ನಾವು ಆ ಇಟಾಲಿಯನ್ ಹುಡುಗರ ಜೊತೆ ಹಾಗೂ ಬ್ರಝೀಲಿಯನ್ ಹುಡುಗಿಯ ಜೊತೆ ದಿನಪೂರ್ತಿ ಚೆನ್ನಾಗಿ ಮಾತಾಡಿಕೊಂಡು ಇದ್ದೆವು. ಆ ಇಟಾಲಿಯನ್ ಹುಡುಗರು ಒಂದು NGO ಮೂಲಕ ಬ್ರೆಜಿಲಿನ ರೈತರಿಗೆ ಸಹಾಯ ಮಾಡಲು ಬಂದಿದ್ದರು. ನಮ್ಮ ಗೈಡಿಗೆ ಇಂಗ್ಲಿಷ್ ಬರೆದಿರುವುದು ನಮಗೆ ಯಾವುದೇ ತೊಂದರೆ ಆಗಲಿಲ್ಲ.

ಬ್ರಸೀಲಿನ ಅಂಗಡಿ

ರಾಷ್ಟ್ರೀಯ ಉದ್ಯಾನವನ:

Presidente Fugueiredo ರಾಷ್ಟ್ರೀಯ ಉದ್ಯಾನವನದಲ್ಲಿ ಸ್ನಾನ ಮಾಡಲು ಅನುಕೂಲವಾಗಿರುವ ನೀರಿನ ಜಲಪಾತಗಳು ಹಾಗೂ ಸುಮಾರು 150 ಮಿಲಿಯನ್ ವರ್ಷಗಳ ಹಿಂದೆ ಸಮುದ್ರ ಕೊರೆದಿರುವ ಗುಹೆಗಳು ಇವೆ. ಕೆಮ್ಮಣ್ಣುಗುಂಡಿಯ ಕಲ್ಹತ್ತಿಗಿರಿ ಜಲಪಾತ, ಬೆಂಗಳೂರು ಸನಿಹದ pearl valley ಜಲಪಾತ, ಹೊಗೇನಕಲ್ ಜಲಪಾತದ ತರಹ ಇಲ್ಲೂ ಜಲಪಾತದ ಕೆಳಗೆ ನಿಂತು ಆಸ್ವಾದಿಸಬಹುದು; ಸುಮಾರು ನಾಲ್ಕು ಗಂಟೆಗಳ ಕಾಲ ಚೆನ್ನಾಗಿ ಜಲಪಾತದ ಕೆಳಗೆ ಕೂತು ಮೈ ಕೈಯನ್ನು ಮಸಾಜ್ ಮಾಡಿಸಿಕೊಂಡು ಖುಷಿ ಪಟ್ಟೆವು. ಕತ್ತಲಾಗುತ್ತಾ ಬಂದಿದ್ದರಿಂದ ಇಲ್ಲದ ಮನಸ್ಸಿನಿಂದ ನಾವೆಲ್ಲ ಆ ಜಲಪಾತದ ಕೆಳಗಿಂದ ಮತ್ತೆ Manaus ಕಡೆಗೆ ಹೊರಟೆವು.

ಅಂದು ರಾತ್ರಿ ಬ್ರಝೀಲಿಯನ್ ಊಟ ಮಾಡಿ ಸಾಕಾಗಿದ್ದರಿಂದ ಒಂದು ಇಟಾಲಿಯನ್ ರೆಸ್ಟೋರೆಂಟ್ ಗೆ 20 ನಿಮಿಷ ನಡೆದು ಕೊಂಡು ಹೋದೆವು. ಇಲ್ಲಿಯೂ ವೇಟರ್ ತುಂಬಾ ಸಂಯಮದಿಂದ ತನ್ನ ಫೋನ್ ನಲ್ಲಿ ಗೂಗಲ್ ಟ್ರಾನ್ಸ್ಲೇಟ್ ಉಪಯೋಗಿಸಿ ನಮಗೆ ವೆಜಿಟೇರಿಯನ್ pizza ಆಯ್ಕೆ ಮಾಡಲು ಸಹಾಯ ಮಾಡಿದ.

ರಮಣೀಯ ಬ್ರಸೀಲ್

ರಿಯೋ:

ಹಿಂದಿನ ವರ್ಷ ನಾನು ಕೆಲಸದ ಮೇಲೆ ಬ್ರಸೀಲ್ ನ ಸಾವು ಪೋಲೋ ನಗರಕ್ಕೆ ಹೋದಾಗ ಅಲ್ಲಿನ ನನ್ನ ಕೆಲವು ಸ್ನೇಹಿತರು ರಿಯೋ ಡಿ ಜನೈರೋ ದಲ್ಲಿ ನಡೆಯುವ ಕ್ರೈಂ; ಪ್ರವಾಸಿಗಳಿಂದ ದುಡ್ಡು ಆಭರಣ ಮತ್ತು ಬೆಲೆಬಾಳುವ  ವಸ್ತುಗಳನ್ನು ದೋಚುವ ಬಗ್ಗೆ ಬಹಳಷ್ಟು ವಿಚಾರಗಳನ್ನು ತಿಳಿಸಿದ್ದರು. ಅಲ್ಲಿ ಪೊಲೀಸರಿಂದ ಯಾವುದೇ ಸಹಾಯ ಅಪೇಕ್ಷಿಸುವುದು ನಿರುಪಯೋಗ ಅಂತಲೂ ತಿಳಿಸಿದ್ದರು.  ಹೀಗಾಗಿ ಅತ್ಯಂತ ಭಯ ಮತ್ತು ಆತಂಕ ದಿಂದ ನಾವು ಅಕ್ಟೋಬರ್ 20 ರಿಯೋ ಡಿ ಜನೈರೋ ತಲುಪಿದೆವು.

ವಿಮಾನ ಇಳಿದು ನಮ್ಮ ಲಗೇಜ್ ತೆಗೆದುಕೊಂಡು ಹೊರಗೆ ಬಂದಾಗ ನನ್ನ ಹೆಸರು ಹಿಡಿದುಕೊಂಡು ನಿಂತಿದ್ದ ವೇರ(Vera)ಳನ್ನು ನೋಡಿ ನಿರಾಳವಾಯಿತು. ವೇರ ನಮ್ಮನ್ನು ಕೋಪಕಬಾನದಲ್ಲಿ ಇದ್ದ ಹೋಟೆಲಿಗೆ ಬಿಟ್ಟು ಮುಂದಿನ ದಿನ ಬೆಳಗ್ಗೆ ಬಟಾನಿಕಲ್ ಗಾರ್ಡನ್ ಕರೆದುಕೊಂಡು ಹೋಗುತ್ತೇನೆ ಎಂದು ತಿಳಿಸಿ ಹೋದಳು.

ಗುಹೆ

ಕೋಪ ಕಬಾನ:

ಮುಂದಿನ ದಿನ ವೇರಳು ಬಟಾನಿಕಲ್ ಗಾರ್ಡನ್ ಹಾಗೂ ಭಾನುವಾರ ಮಾತ್ರ ಇರುವ ಮಾರ್ಕೆಟ್ ಗೆ ಕರೆದುಕೊಂಡು ಹೋದಳು. ಅಲ್ಲಿ ಆಫ್ರಿಕಾದಿಂದ ಬಂದ ಜನರು ಮಾಡುವ ರಸ್ತೆ ಬದಿ ತಿನಿಸುಗಳನ್ನು ತಿಂದೆವು. ವೇರ ಹೇಳಿಕೊಟ್ಟಂತೆ ರಿಯೋ ಡಿ ಜನೈರೋ ಮೆಟ್ರೋದಲ್ಲಿ ನಮ್ಮ ಹೋಟೆಲಿಗೆ ವಾಪಸ್ ಬಂದೆವು. ಆಗಿನ್ನೂ ಸಾಯಂಕಾಲ, ಬೆಳಕಿತ್ತು; ಹಾಗಾಗಿ ಹೋಟೆಲಿನ ಲಾಕರಿನಲ್ಲಿ ನಮ್ಮ ಎಲ್ಲಾ ಆಭರಣಗಳನ್ನು, ಕ್ಯಾಮೆರಾ ಉಳಿದ ಬೆಲೆಬಾಳುವ ವಸ್ತುಗಳನ್ನು ಇಟ್ಟು ಸ್ವಲ್ಪವೇ ಹಣ ಜೋಬಲ್ಲಿ ಇಟ್ಟುಕೊಂಡು ಕೋಪ ಕಬಾನ ನೋಡಲು ಹೊರಟೆವು. ಕೋಪ ಕಬಾನ ಶಾಂತಿಯುತವಾಗಿ ಕಾಣಿಸಿತು. ನಾನು ನೋಡಿರುವ ಬೀಚುಗಳಲ್ಲಿ ಇದು ತುಂಬಾ ರಮಣೀಯ ಅಂತ ನನ್ನ ಅಭಿಪ್ರಾಯ. ದೊಡ್ಡದಾದ, ಸ್ವಚ್ಛವಾದ, ಸಮುದ್ರದ ಅಲೆಗಳು ಇರುವ ಬೀಚು; ಸಮುದ್ರದ ಉಪ್ಪು ನೀರು ತೊಳೆದುಕೊಳ್ಳಲು ಸಿಹಿ ನೀರಿನ ಶವರುಗಳು ಅಲ್ಲಲ್ಲಿ ಇವೆ; ನಾವು ಅಲ್ಲಿದ್ದ ಸುಮಾರು ಒಂದೂವರೆ ಗಂಟೆಗಳಲ್ಲಿ ಯಾರೂ ಅನುಮಾನಾಸ್ಪದವಾಗಿ ಓಡಾಡುತ್ತಿರಲಿಲ್ಲ. ಇದರಿಂದ ನಮಗೆ ಸ್ವಲ್ಪ ಧೈರ್ಯ ಬಂತು, ಆದರೆ ಯಾವ ಪೊಲೀಸ್ ಅವರನ್ನೂ ನೋಡದೆ, ಇನ್ನೂ ಸ್ವಲ್ಪ ಭಯ ಕಾಡುತ್ತಿತ್ತು.

ಮೆಕ್ಸಿಕನ್ ರೆಸ್ಟೋರಂಟಿನಲ್ಲಿ ಪೋರ್ತುಗೀಸ್ ಮೆನು ಹಿಡಿದ ಕಂಗ್ಲೀಷರು:

ಸರಿ, ಇನ್ನು ಊಟ ಮಾಡುವ ಅಂತ ಅಲ್ಲೇ ಹುಡುಕುತ್ತಿರುವಾಗ ಒಂದು ಮೆಕ್ಸಿಕನ್ ಹೋಟೆಲ್ ಕಾಣಿಸಿತು.

ನಮ್ಮ ಅಮೆರಿಕ ಮತ್ತು ಯುರೋಪ್ ಅನುಭವದ ಮೇಲೆ ಮೆಕ್ಸಿಕನ್ ಹೋಟೆಲಿನಲ್ಲಿ ವೆಜಿಟೇರಿಯನ್ ಊಟ ಸಿಗುತ್ತದೆ ಅಂತ ಒಳಹೊಕ್ಕೆವು. ನಾವು ಇಂಗ್ಲೀಷ್ ಮೆನು ಅಂತ ಕೇಳಿದೊಡನೆ ಅವರಿಗೆ ದಿಗಿಲಾಯಿತು. ನಮ್ಮ ಟೇಬಲ್ ಮೇಲೆ ಪೋರ್ಚುಗೀಸ್ ಮೆನು ಇಟ್ಟು ಅವರು ಕಾಣೆಯಾದರು. ಗೂಗಲ್ ಟ್ರಾನ್ಸ್ಲೇಟ್ ಉಪಯೋಗಿಸಬೇಕು, ಆದರೆ ನಾನು ಫೋನನ್ನು ಹೋಟೆಲಿನಲ್ಲಿ ಬಿಟ್ಟು ಬಂದಿದ್ದೆ. ಬೆಲೆಬಾಳುವ ವಸ್ತುಗಳನ್ನು ತಗೊಂಡು ಹೋಗಲು ಭಯ ನೋಡಿ. ಏನಾದರೂ ಅರ್ಥವಾಗುತ್ತಾ ಅಂತ ಅದೇ ಪೋರ್ಚುಗೀಸ್ ಮೆನು ತಿರುವು ಹಾಕುತ್ತಾ ಕುಳಿತಿದ್ದೆವು. ಒಂದು ಐದಾರು ನಿಮಿಷ ಕಳೆದಿರಬಹುದು ಒಬ್ಬ ತರುಣ ಮತ್ತು ಒಬ್ಬಳು ಹುಡುಗಿ ನಮ್ಮ ಟೇಬಲ್ ಗೆ ಬಂದು ಆಂಗ್ಲ ಭಾಷೆಯಲ್ಲಿ ನಾವು ನಿಮಗೆ ಆರ್ಡರ್ ಮಾಡಲು ಸಹಾಯ ಮಾಡುತ್ತೇವೆ ಅಂತ ಹೇಳಿದರು. ನಮಗಂತೂ ಅತ್ಯಂತ ಖುಷಿ ಆಯ್ತು. ವೆಜಿಟೇರಿಯನ್ ಊಟ ಆರ್ಡರ್ ಮಾಡಿದ ಮೇಲೆ ನಾವಿಬ್ಬರೂ ಮಕ್ಕಳ ಜೊತೆ ( ಏಕೆಂದರೆ ಇಷ್ಟು ಹೊತ್ತಿಗೆ ಗೊತ್ತಾಯ್ತು ಹುಡುಗನಿಗೆ 17 ಮತ್ತು ಹುಡುಗಿಗೆ 12 ವಯಸ್ಸು ಅಂತ)  ಹರಟೆ ಹೊಡೆಯಲು ಶುರು ಮಾಡಿದೆವು; ಅವರಿಗೆ ನಾವು ಭಾರತದವರು, ಇಂಗ್ಲೆಂಡ್ ದೇಶದಿಂದ ಬಂದವರು ಅಂತ ಕೇಳಿ ತುಂಬಾ ಆಶ್ಚರ್ಯವಾಯ್ತು. ನಾವು ಹೇಗೆ ಇಂಗ್ಲೆಂಡ್ ದೇಶಕ್ಕೆ ಹೋಗಿ ಅಲ್ಲಿ ಏನು ಮಾಡುತ್ತಿವೆ ಇತ್ಯಾದಿ ಪ್ರಶ್ನೆಗಳನ್ನು ಕೇಳಿದರು. ಹೀಗೆ ಸುಮಾರು ಹದಿನೈದು ನಿಮಿಷ ಮಾತಾಡುತ್ತಿದ್ದಾಗ ಅವರ ತಂದೆ ಮತ್ತು ಚಿಕ್ಕಪ್ಪ ಬಂದು ಅವರನ್ನು ಮನೆಗೆ ಓದಿಕೊಳ್ಳಲು ಕಳಿಸಿದರು. ಹೀಗೆ ನಮಗೆ ಪೋರ್ಚುಗೀಸ್ ಬರದಿದ್ದರೂ ಬ್ರೆಝಿಲ್ ಜನರ ಔದಾರ್ಯತೆ ಮತ್ತು ಸಹಾಯ ಮಾಡುವ ಗುಣ ಸ್ವಲ್ಪ ಮಟ್ಟಿಗೆ ಅರ್ಥವಾಯಿತು.

ಕಾಚಕಾ ಮದ್ಯ:

ಮುಂದಿನ ಸಾಯಂಕಾಲ ಸ್ವಲ್ಪ ಧೈರ್ಯ ಬಂದಿದ್ದರಿಂದ ಸುಮಾರು 8.00 ಗಂಟೆಗೆ ಕೋಪ ಕಬಾನ ರಾತ್ರಿ ಹೊತ್ತು ಹೇಗೆ ಇರುತ್ತೆ ನೋಡಲು ಜೋಬಲ್ಲಿ ಸ್ವಲ್ಪ ಹ್ಯಾಸ್ (Real) ಇಟ್ಟುಕೊಂಡು ಹೊರಟೆವು. ಬೀಚ್ ಗೆ ಲೈಟ್ ಇಲ್ಲದಿದ್ದರಿಂದ ಬೀಚ್ ಕಾಣುತ್ತಾ ಇರಲಿಲ್ಲ. ಸುಮಾರು ಮೂರು ಅಥವಾ ನಾಲ್ಕು ಕಿಲೋಮೀಟರ್ ಉದ್ದ ಇರುವ ಬೀಚ್ promenade ನಲ್ಲಿ ತುಂಬಾ ಜನ ಇದ್ದರು. ನಮ್ಮಲ್ಲಿ ಪಾನಿಪುರಿ ಮಾರುವ ಗಾಡಿಗಳಂತಹ ಗಾಡಿಗಳಲ್ಲಿ caipirinha ಮಾಡಿಕೊಳ್ಳುತ್ತಿದ್ದರು. ರೋಡಲ್ಲಿ ಮದ್ಯ ಮಾರುತ್ತಿರುವುದನ್ನು ನೋಡುತ್ತಿರುವುದು ನಮಗೆ ಇದೇ ಮೊದಲು. ಇನ್ನು ಯಾವುದೇ ದೇಶದಲ್ಲೂ ನೋಡಿಲ್ಲ. ನಮಗೆ ರುಚಿ ನೋಡಲು ಆಸೆ, ಆದರೆ ಭಾಷೆ ಬರುವುದಿಲ್ಲ. ಸುಮ್ಮನೆ ನೋಡುತ್ತಾ ನಿಂತೆವು. ನಿಂಬೆಹಣ್ಣಿನ ಚೂರುಗಳು, ಸಕ್ಕರೆ, ಸ್ಟ್ರಾಬೆರಿ, ಕಿವಿ ಹಣ್ಣುಗಳನ್ನು ಒಂದು drinks shaker ಒಳಗೆ ಹಾಕಿ, masher ಇಂದ ಚೆನ್ನಾಗಿ ಜಜ್ಜಿ ಅದಕ್ಕೆ ice, custurd ಮತ್ತು cachaça (ಕಬ್ಬಿನ ಹಾಲಿನಿಂದ ತಯಾರು ಮಾಡುವ ಮದ್ಯ) ಹಾಕಿ, ಮುಚ್ಚಳ ಹಾಕಿ ಚೆನ್ನಾಗಿ ಅಲ್ಲಾಡಿಸಿ ಒಂದು ಲೋಟಕ್ಕೆ ಬಗ್ಗಿಸಿ ಕೊಡುತ್ತಿದ್ದ. ನಮಗೂ ಬೇಕು ಆದರೆ ಹೇಗೆ ಹೇಳುವುದು ಅಂತ ಯೋಚಿಸುತ್ತಾ ನಿಂತೆವು. ಅವನು ಮಾಡಿ ಕೊಟ್ಟಿದ್ದನ್ನು ಇಬ್ಬರು ಹುಡುಗಿಯರು ಕುಡಿಯುತ್ತಾ ಅವನ ಜೊತೆ ಹರಟೆ ಹೊಡೆಯುತ್ತಾ ಇದ್ದರು. ನಾವು ಇಂಗ್ಲೀಷ್ ಅಂದ ಕೂಡಲೇ ಅವರ ಮುಖ ಸಪ್ಪಗಾಯಿತು.  ಯಾಕೆಂದರೆ ಅವರು ಯಾರಿಗೂ ಇಂಗ್ಲಿಷ್ ಬರುತ್ತಾ ಇರಲಿಲ್ಲ. ನಾವು ಕೈ ಸನ್ನೆ ಬಾಯಿ ಸನ್ನೆ ಇಂದ ನೀವು ಕುಡಿಯುತ್ತಾ ಇರುವುದು ಏನು ಅಂತ ಕೇಳಿದೆವು. ಅವರು ಪೋರ್ಚುಗೀಸ್ ನಲ್ಲಿ ಹೇಳಿದ್ದು ನಮಗೆ ಗೊತ್ತಾಗಲಿಲ್ಲ. ಆವಾಗ ಆ ಹುಡುಗಿ ತಾನು ಕುಡಿಯುತ್ತಿರುವುದನ್ನು ನಮಗೆ ಇನ್ನೊಂದು ಸ್ಟ್ರಾ ಹಾಕಿ ಕೊಟ್ಟಳು; ನಾವು ಅದನ್ನು ಸ್ವಲ್ಪ ಕುಡಿದು ಅದನ್ನೇ ಇನ್ನೊಂದು ಕೊಡು ಅಂತ ಸನ್ನೆ ಭಾಷೆಯಿಂದ ಹೇಳಿದೆವು. ಹೀಗೆ ನಮ್ಮ ಬ್ರಸೀಲ್ ಜನರ ಜೊತೆ ಅನುಭವ ಮುಂದುವರೆಯಿತು.

ಆ ರಾತ್ರಿ ನಾವು ಕೋಪ ಕಬಾನ ಬೀಚ್ ರಸ್ತೆಯಲ್ಲಿ ಯಾವುದೇ ಹೆದರಿಕೆ ಇಲ್ಲದೆ ಓಡಾಡಿದೆವು. ಅಲ್ಲೊಬ್ಬ ಇಲ್ಲೊಬ್ಬ ಗನ್ ಇಟ್ಟುಕೊಂಡು ಪೊಲೀಸ್ ಇದ್ದರು (ಈಗ ಗೊತ್ತಾಗಿದೆ ಅವರು ಮಿಲಿಟರಿ ಅಂತ). ರಿಯೋ ಡಿ ಜನೈರೋ ಈಗ ಶಾಂತಿಯುತವಾಗಿ ಇದೆ. ಆದರೂ ಪ್ರವಾಸಿಗರು ಜಾಗರೂಕತೆಯಿಂದ ಇರುವುದು ಲೇಸು.

View Post

ಇಗುವಾಸ್ಸು ಜಲಪಾತ:

ರಿಯೋ ದಲ್ಲಿ ಉಳಿದ ರಮಣೀಯ ಸ್ಥಳಗಳನ್ನು ನೋಡಿ ನಾವು ಮುಂದೆ ಇಗುವಾಸ್ಸು ಜಲಪಾತ ನೋಡಲು ಬಂದೆವು. ಇಲ್ಲಿ ನಮಗೆ ನಿಜವಾದ ಮೆಕ್ಸಿಕೋ ರೆಸ್ಟೋರೆಂಟ್ ಸಿಕ್ಕಿತ್ತು; ಆದರೆ ವೇಟರ್ಗೆ ಇಂಗ್ಲೀಷ್ ಬರುತ್ತಿರಲಿಲ್ಲ!! ಪಾಪ ಆ ವೇಟರ್ ತುಂಬಾ ಸಹನೆಯಿಂದ ಗೂಗಲ್ ಟ್ರಾನ್ಸ್ಲೇಟ್ ಉಪಯೋಗಿಸಿ ನಮ್ಮ ಆರ್ಡರ್ ಬರೆದುಕೊಂಡ. ಅದಾದ ಮೇಲೆ ಊಟ ಹೇಗಿದೆ ಎಂದು ಮತ್ತೆ ಗೂಗಲ್ ಟ್ರಾನ್ಸ್ಲೇಟ್ ನಿಂದ ಬಂದು ನಮ್ಮನ್ನು ವಿಚಾರಿಸಿಕೊಂಡ. ಊಟ ಚೆನ್ನಾಗಿತ್ತು ನಾವು ಆ ವೇಟರ್ ಗೆ ಬಹಳಷ್ಟು ಧನ್ಯವಾದ ಹೇಳಿದೆವು.

೨.೭ ಕಿಮೀ ಉದ್ದ ಮತ್ತು 250 ಜಲಪಾತಗಳ ಬೃಹತ್ ಜಲಪಾತ Iquazu ಜಲಪಾತ. ಅದಕ್ಕೇ ಇದು ಜಗತ್ತಿನ ಏಳು ವಿಸ್ಮಯಗಳಲ್ಲಿ ಒಂದು. ಜೀವನದಲ್ಲಿ ಒಮ್ಮೆ ನೋಡು ಜೋಗದ ಗುಂಡಿ ಅನ್ನುವ ಹಾಗೆ ಅನುಕೂಲ ಇದ್ದರೆ ಒಮ್ಮೆ ಜಲಪಾತ ಖಂಡಿತ ನೋಡಿ.

ಮಾನುಅಸ್ ನಗರ:

ನಾವು ಬ್ರಸೀಲ್ ದೇಶದ Manaus ಊರಿನಲ್ಲಿ ಐದು ದಿನ ಉಳಿದುಕೊಂಡೆವು. ಇದು ರಿಯೋ ನೀಗ್ರೋ ನದಿಯ ತೀರದಲ್ಲಿದೆ. ರಿಯೋ ನೀಗ್ರೋ ನದಿಯ ಪಾತ್ರ ಎರಡರಿಂದ ಆರು ಕಿಲೋ ಮೀಟರ್ ಅಗಲ. ಈ ನದಿ Manuas ಇಂದ ಸ್ವಲ್ಪ ಮುಂದೆ ಅಮೆಜಾನ್ ನದಿಯನ್ನು ಸೇರುತ್ತದೆ; ಕರಿಯ ಬಣ್ಣದ ರಿಯೋ ನೀಗ್ರೋ ನದಿ ನೀರು, ಕೆಂಪು ಮಣ್ಣಿನ ಬಣ್ಣದ ಅಮೆಜಾನ್ ನದಿ ಸೇರುವ ಜಾಗ ರಮಣೀಯವಾಗಿದೆ; ಎರಡು ನದಿಗಳು ಬೆರೆಯುವುದು ಸುಮಾರು 3ರಿಂದ 5 ಕಿಲೋಮೀಟರ್ ವರೆಗೆ ನಡೆಯುತ್ತದೆ.

ಸುಮಾರು ಮೂರು ಲಕ್ಷ ಜನರಿರುವ Manuas ನಗರದಲ್ಲಿ ನಾವು mall ಗೆ ಹೋಗಿದ್ದೆವು. ಅಲ್ಲಿ ಮತ್ತೆ  ವೆಜಿಟೇರಿಯನ್ ಊಟ ಕೇಳುವುದಕ್ಕೆ ಪಟ್ಟ ಪಾಡು ಅಷ್ಟಿಷ್ಟಲ್ಲ; ಇಷ್ಟರಲ್ಲಿ ಕಾರ್ನೆ(carne) ಅಂದರೆ ಮಾಂಸ ಅಂತ ತಿಳಿದುಕೊಂಡಿದ್ದೆ. No-carne ಅಂತ ಹೇಳಿದರೂ ನಮಗೆ ಅನುಮಾನ, ಅವರಿಗೆ ತಿಳಿಯಿತೋ ಇಲ್ಲವೋ ಅಂತ. ಮಾಲ್ ನಲ್ಲಿ ವೈಫೈ ಇದ್ದಿದ್ದರಿಂದ ಗೂಗಲ್ ಟ್ರಾನ್ಸ್ಲೇಟ್ ಉಪಯೋಗಿಸಿ ಬೇರೆಯವರು ಮೂರು ನಿಮಿಷ ತಗೊಳ್ಳೋದು ನಾವು 12 ನಿಮಿಷ ತಗೊಂಡು ನಮಗೆ ಬೇಕಾದ ವೆಜಿಟೇರಿಯನ್ ಊಟ ಆರ್ಡರ್ ಮಾಡಿದ್ವಿ. ಇಲ್ಲೂ ಸಹ ನಮ್ಮ ಹಿಂದೆ ಜನ ಕಾಯುತ್ತಿದ್ದರೂ ಅಂಗಡಿಯವರು ನಮಗೋಸ್ಕರ ತುಂಬಾ ತಾಳ್ಮೆಯಿಂದ ಗೂಗಲ್ ಟ್ರಾನ್ಸ್ಲೇಟ್ ನಲ್ಲಿ ಟೈಪ್ ಮಾಡಿ ಅಥವಾ ಮಾತಾಡಿ ಅದನ್ನು ಇಂಗ್ಲೀಷ್ ಗೆ ತರ್ಜುಮೆ ಮಾಡಿ ತೋರಿಸುತ್ತಿದ್ದರು.

ಬ್ರಸೀಲಿನಲ್ಲಿ ಶಮ್ಮಿಕಪೂರ್:

Manuas ನಗರಕ್ಕೆ ಬರುವ ಮೊದಲು ಮೂರು ರಾತ್ರಿ ನಾವು ಅಮೆಜಾನ್ ಕಾಡಿನಲ್ಲಿ ಇರುವ ಅಮೆಜಾನ್ ಲಾಡ್ಜ್ ಪಾರ್ಕ್ ನಲ್ಲಿ ಇದ್ದೆವು. ಇದು ರಿಯೋ ನೆಗ್ರೋ ನದಿಯ ತೀರದಲ್ಲಿ ಇದ್ದರೂ ಈ ಎಲ್ಲ ಪ್ರದೇಶವನ್ನು Amazon Rain Forest ಅಂತ ಹೇಳುತ್ತಾರೆ. ಈ ಪ್ರದೇಶ equator ಹತ್ತಿರ ಇರುವುದರಿಂದ ಸೆಕೆ ಜಾಸ್ತಿ ಮಳೆ ಜಾಸ್ತಿ. ಈ ದಟ್ಟ ಕಾಡಿನಲ್ಲಿ ಓಡಾಡಿದ್ದು ತುಂಬಾ ಚೆನ್ನಾಗಿತ್ತು. ನಮ್ಮ guide ಅಲ್ಲಿನ ಬೇರೆ ಬೇರೆ ಮರಗಳು, parasite ಮರಗಳು, ರಬ್ಬರ್ ಮರಗಳು, ಕರ್ಪೂರ ತಯಾರಿಸುವ ಮರಗಳು ಎಲ್ಲವನ್ನು ವಿವರವಾಗಿ ತೋರಿಸಿದ. ಆ guide ಹೆಸರು ಶಮ್ಮಿ.  ಅವನು ನಮಗೆ ನಾನು ಶಮ್ಮಿ ಕಪೂರ್ ಅಂತ ಪರಿಚಯಿಸಿಕೊಂಡು ಕೆಲವೊಂದು ಶಮ್ಮಿ ಕಪೂರ್ ಚಿತ್ರಗಳ ಹಿಂದಿ ಹಾಡುಗಳನ್ನು ಹೇಳಿ ಮನರಂಜಿಸಿದ. ಅವನು ಗಯಾನ ದೇಶದವನು, ಅಮ್ಮ ಭಾರತೀಯ ಮೂಲದವರು, ತಂದೆ ಆಫ್ರಿಕನ್ ಮೂಲದವರು. ಗಯಾನಾದಲ್ಲೂ ಬಾಲಿವುಡ್ ತುಂಬಾ ಪ್ರಸಿದ್ಧಿ; ಹಾಗಾಗಿ ನನಗೆ ಶಮ್ಮಿ ಕಪೂರ್ ಹಾಡುಗಳು ಗೊತ್ತು ಅಂತ ಹೇಳಿದ.

ಅಮೇಜಾನ್ ತೀರದಲ್ಲಿ:

ಲಾಡ್ಜ್ ಪಾರ್ಕ್ ನಲ್ಲಿ ಮೂರು ದಿನ ಇರುವ ನಮಗೆ ಬೇರೆ ಬೇರೆ ದೇಶದವರ ಪರಿಚಯ ಆಯಿತು ಸ್ಪೇನ್ ನವರು ಅಮೆರಿಕಾದವರು ಜರ್ಮನಿಯವರು ಇತ್ಯಾದಿ. ರೂಮುಗಳಲ್ಲಿ ಟಿವಿ ಇಲ್ಲದ ಕಾರಣ ಹಾಗೂ ವೈಫೈ ಕೇವಲ ರಿಸೆಪ್ಷನ್ ಹಾಗೂ ಬಾರ್ ಇರುವ ಜಾಗದಲ್ಲಿ ಇದ್ದಿದ್ದರಿಂದ ಎಲ್ಲ ಪ್ರವಾಸಿಗರು ಒಟ್ಟು ಸೇರಲು ಕಾರಣವಾಗಿತ್ತು. ಇದು ನಮಗೆ ಕೇರಳದ ವೈತಿರಿ ಜಾಗದಲ್ಲಿ ಇದ್ದ ಒಂದು ರಿಸಾರ್ಟ್ ನೆನಪು ತಂದಿತು.

ಭಯಂಕರ ಶಖೆ ಮತ್ತು ಗಾಳಿಯಲ್ಲಿನ ತೇವಾಂಶ ಸೇರಿ ದಿನಕ್ಕೆ ಒಂದು-ಎರಡು ಲೀಟರ್ ಬೆವರು ಬರುತ್ತಿತ್ತು. ಅವಾಗ ಅಮೆಜಾನ್ ಲಾಡ್ಜ್ ಪಾರ್ಕ್ ನಲ್ಲಿ ಬೆಟ್ಟದಿಂದ ಇಳಿದು ಬರುವ ಝರಿಯ ನೀರಿನಲ್ಲಿ ಕೂತುಕೊಳ್ಳಲು ಅಪ್ಯಾಯಮಾನವಾಗಿತ್ತು.

ಗೇರು ಹಣ್ಣನ್ನು (ಉಪ್ಪು ಹಚ್ಚಿಕೊಂಡು) ತಿನ್ನುತ್ತಾ ಬಾಲ್ಯದ ನೆನಪು ಬಂತು; ಬೆಂಗಳೂರನ್ನು ನೆನೆಸಿಕೊಳ್ಳುತ್ತಾ ಎಳನೀರು ಕುಡಿದೆವು, ಹಲಸಿನ ಹಣ್ಣು ತಿಂದೆವು; ಎಳನೀರಿಗೆ ತೂತು ಮಾಡುವ ಹೊಸ ವಿಧಾನವನ್ನು ಇಲ್ಲಿ ನೋಡಿದೆ.

ಸಸ್ಯಹಾರಿಗಳಿಗೆ ಕಿವಿಮಾತು:

ಬ್ರೆಜಿಲ್ ನಲ್ಲಿ ಬರೀ ವೆಜಿಟೇರಿಯನ್ ಊಟ ಮಾಡುವವರಿಗೆ ಖಂಡಿತವಾಗಿ ಕಷ್ಟ ಆಗುತ್ತೆ. ಬ್ರಝೀಲಿಯನ್ ಊಟದ ಜಾಗಗಳಲ್ಲಿ ಎರಡು ವಿಧ ಒಂದು ಎಷ್ಟು ಬೇಕಾದರೂ ತಿನ್ನಬಹುದಾದ buffet, ಇನ್ನೊಂದು ಪ್ಲೇಟಿನಲ್ಲಿ ಎಲ್ಲವನ್ನು ಹಾಕಿ ಅದರ ಭಾರದ ಮೇಲೆ ಹಣ ಕೊಡುವುದು. ಎರಡರಲ್ಲೂ ಊಟ ಒಂದೇ ತರಹ ಅನ್ನ ಅಲ್ಲದೆ ಬೇರೆ ಬೇರೆ ಮಾಂಸದ ಊಟಗಳು ಇರುತ್ತವೆ. ಕಪ್ಪು ಹುರಳಿಯಿಂದ (black beans) ಮಾಡಿದ ನೀರಾದ ಪಲ್ಯ, ಇದನ್ನು ಅನ್ನದ ಜೊತೆ ತಿನ್ನಲು ಚೆನ್ನಾಗಿರುತ್ತದೆ. ತಿನ್ನುವ ಮೊದಲು ಕೇಳಿ, ಯಾಕೆಂದರೆ ಅದರಲ್ಲಿ ಹಂದಿಯ ಅಥವಾ ದನದ ಮಾಂಸ ಹಾಕಿರುತ್ತಾರೆ. ಸಸ್ಯಾಹಾರಿಗಳಿಗೆ ಸಲಾಡೇ ಗತಿ.

Advertisements

ಐತಿಹಾಸಿಕ ಬಸವನಗುಡಿ ಮತ್ತು ಗಾಂಧಿ ಬಜಾರ್: ರಾಮಮೂರ್ತಿ

Ramamurthy
ಲೇಖಕರು: ರಾಮಮೂರ್ತಿ

(ನೀವು ಬೆಂಗಳೂರಿನವರಾಗಿದ್ದರೆ ನಿಮಗೆ ಬಸವನಗುಡಿ ಮತ್ತು ಗಾಂಧಿಬಜಾರಿನ ಬಗ್ಗೆ ಎಷ್ಟು ಗೊತ್ತು ಎಂದು ಈ ಲೇಖನ ಓದಿದ ಮೇಲೆ ಕೇಳಿಕೊಳ್ಳಿ. ನೀವು ಬೆಂಗಳೂರಿನವರಾಗಿದ್ದರೂ ಆಗಿರದಿದ್ದರೂ ಬಸವನಗುಡಿ ಮತ್ತು ಗಾಂಧಿಬಜಾರಿನ ಬಗ್ಗೆ ಕೇಳದಿರುವ ಸಾಧ್ಯತೆ ತುಂಬ ಕಡಿಮೆ. ಈ ಲೇಖನ ಓದಿದ ಮೇಲೆ ನೀವು ಮತ್ತೊಮ್ಮೆ ಈ ಜಾಗಗಳಿಗೆ ಭೇಟಿಕೊಡಿ, ನೀವು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ನಮ್ಮ ಅನಿವಾಸಿ ಬಳಗದ ಹಿರಿಯ ಬರಹಗಾರ ರಾಮಮೂರ್ತಿ ತಮ್ಮ ನೆನಪಿನ ಕಣಜದಿಂದ ಒಂದು ಹಿಡಿ ಅನುಭವವನ್ನು ನಮ್ಮ ಮುಂದೆ ಹಾಸಿದ್ದಾರೆ. ಓದಿ, ಪ್ರತಿಕ್ರಿಯೆ ಬರೆಯಿರಿ, ಶೇರ್ ಮಾಡಿ – ಸಂ)

ನೀವು ಬೆಂಗಳೂರಿನಲ್ಲಿ ಬೆಳದೋ ಅಥವಾ ಹಿಂದೆ ವಾಸವಾಗಿದ್ದರೆ ಬಸವನಗುಡಿ ಗೊತ್ತಿರಬೇಕು, ಇಲ್ಲದೆ ಇದ್ದರೆ ನೀವು ಬೆಂಗಳೂರಿನವರಲ್ಲವೇ ಅಲ್ಲ ಎಂದು ಖಡಾಖಂಡಿತವಾಗಿ ಹೇಳಬಲ್ಲೆ.

ಹಿಂದಿನ ಕಾಲದಲ್ಲಿ ಇದು ಸುಕ್ಕೇನಹಳ್ಳಿ ಅಂತ ಒಂದು ಹಳ್ಳಿಯಾಗಿತ್ತು. ಒಂದು ದಂತಕಥೆಯ ಪ್ರಕಾರ ಇದು ಕಡಲೆಕಾಯಿ ಬೆಳೆಯುವ ಜಾಗವಾಗಿತ್ತಂತೆ. ಒಂದು ಗೂಳಿ ಬಂದು ರೈತರ ಬೆಳೆಯನ್ನು ಹಾಳುಮಾಡುತ್ತಿತ್ತಂತೆ. ಒಬ್ಬ ರೈತ ಕೋಪದಲ್ಲಿ ಕೋಲಿನಿಂದ ಹೊದೆದಾಗ, ಈ ಗೂಳಿ ಜ್ಞಾನ ತಪ್ಪಿ ಅಲ್ಲೇ ಬಿದ್ದಿದ್ದನ್ನು ನೋಡಿ ರೈತನಿಗೆ ತುಂಬಾ ನೋವಾಗಿ, ಹಳ್ಳಿಯಲ್ಲಿ ಅದರ ನೆನಪಿಗೆ ಒಂದು ಗುಡಿ ಕಟ್ಟಿದನಂತೆ. ಸುಕ್ಕೇನಹಳ್ಳಿ ಈಗ ಬಸವನಗುಡಿ; ಅಲ್ಲಿ ಪ್ರತಿವರ್ಷ ಕಡಲೆಕಾಯಿ ಪರಿಷ ಆಗುವುದು ಈ ಕಾರಣದಿಂದ.

೧೮೯೬ರಲ್ಲಿ ಬೆಂಗಳೂರಿನ ಕೆಲವು ಜಾಗದಲ್ಲಿ ಭಯಂಕರ ಪ್ಲೇಗ್ ಬಂದು ೩೦೦೦ ಜನರ ಮರಣ, ಅಂದಿನ ಡೆಪ್ಯುಟಿ ಕಮ್ಮಿಷನರ್ ಆಗಿದ್ದ ಮಾಧವ ರಾವ್ ಅವರು ಪ್ಲೇಗ್ ಬಂದ ಚಾಮರಾಜ್ ಪೇಟೆ ಮತ್ತು ಫೋರ್ಟ್ ಪ್ರದೇಶದಲ್ಲಿ ಉಳಿದವರನ್ನು “ಸ್ವಲ್ಪ ದೂರದ” ಬಸವನಗುಡಿ ಮತ್ತು ಮಲ್ಲೇಶ್ವರ ಕಡೆ ವಾಸಮಾಡಲು ಏರ್ಪಾಡು ಮಾಡಿದರು. ಆಗಿನ ಸರ್ಕಾರಕ್ಕೆ ಇವರ ಸಲಹೆಗೆ ಬೆಂಬಲ ಕೊಟ್ಟು ಈ ಹೊಸ ಜಾಗಗಳ ಬೆಳವಣಿಗೆ ಆಯಿತು. Town Planning ಇಲ್ಲೇ ಶುರು ವಾಗಿದ್ದು, ಮರಗಳ ವಿಶಾಲ ರಸ್ತೆಗಳು ಮತ್ತು ಅಂಗಡಿ ಬೀದಿಗಳು ಮತ್ತು ಜನರಿಗೆ ತಕ್ಕಂತೆ ಬೇಕಾದ ಮನೆಗಳು ಮತ್ತು ನೀರು ಮತ್ತು ನೈರ್ಮಲ್ಯ ವ್ಯವಸ್ಥೆ ಮಾಡಿದವರು ಮಾಧವರಾಯರು. ಹತ್ತಿರದಲ್ಲೇ ಲಾಲ್-ಬಾಗ್ ಸಹ ಶ್ರೀ ಕ್ರುಮ್ಬೆಗೋಲ್ ಅವರ ನೇತೃತ್ವದಲ್ಲಿ ಚೆನ್ನಾಗಿ ಅಭಿವೃದ್ಧಿ ಆಗುತಿತ್ತು. ಇಲ್ಲಿ ತಲತಲಾಂತರಿಂದ ಇರುವ ಕುಟುಂಬಗಳು ಅನೇಕರು, ಎಲ್ಲಾ ಮಧ್ಯಮವರ್ಗದವರು. ಆದರೆ ಈಚೆಗೆ ಹಳೇ ಮನೆಗಳು ಹೋಗಿ ಮೂರು ನಾಲ್ಕು ಅಂತಸ್ತಿನ ಮನೆಗಳು ಬಂದಿವೆ. ಗೋವಿಂದಪ್ಪ, ಸರ್ವೇಯರ್, ಹೆಚ್ ಬಿ ಸಮಾಜ ರಸ್ತೆ ಗಳು ನಾಗಸಂದ್ರ ರಸ್ತೆಯಿಂದ ಶುರುವಾಗಿ ಲಾಲ್-ಬಾಗಿನವರೆಗೆ ಬಹಳ ಉತ್ತಮ ದರ್ಜೆಯ ವಸತಿ ಪ್ರದೇಶಗಳು.

Vidyarthi Bhavan 1943
ವಿದ್ಯಾರ್ಥಿಭವನ: ೧೯೪೩ಯಲ್ಲಿ

ಗಾಂಧಿಬಜಾರ್ ಬಸವನಗುಡಿಯ ಪ್ರಮುಖ ಬೀದಿ, ಇದು ರಾಮಕೃಷ್ಣ ಆಶ್ರಮದಿಂದ ಶುರುವಾಗಿ ಸುಮಾರು ಒಂದು ಕಿಲೋಮೀಟರ್ ಉದ್ದದ ರಸ್ತೆ. ಇಲ್ಲಿ ಅನೇಕ ಅಂಗಡಿಗಳು ಮತ್ತು ಜಾಗಗಳು ಬಹಳ ವರ್ಷದಿಂದ ಇವೆ. ಜಾಸ್ತಿ ಬದಲಾವಣಿಗೆ ಕಂಡಿಲ್ಲ. ಗರಿ ಗರಿ ಮಸಾಲೆ ದೋಸೆ ಬೇಕಾದರೆ ವಿದ್ಯಾರ್ಥಿಭವನಕ್ಕೆ ಹೋಗಿ. ಈ ಹೋಟೆಲ್ ಅಂದರೆ ಕೆಫೆ ಪ್ರಾರಂಭವಾದದ್ದು ೧೯೪೩ರಲ್ಲಿ. ಹತ್ತಿರ ಇರುವ ಶಾಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಆರಂಭದೊಂಡಿತ್ತು. ಅಕ್ಟೋಬರ್ ೨೦೧೮ ರಲ್ಲಿ ೭೫ ಶತಮಾನೋತ್ಸವ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ಇದೆ. ಇದರ ವೈಶಿಷ್ಟವೇ ಬಹಳ. ಜಾಗ ಚಿಕ್ಕದು, ಒಳಗೆ ಸರಳವಾದ ವಾತಾವರಣ, ಗೋಡೆಗಳ ಮೇಲೆ

ಕರ್ನಾಟಕದ ಪ್ರಸಿದ್ಧ ಕವಿಗಳು ಮತ್ತು ಲೇಖಕರ ಭಾವ ಚಿತ್ರಗಳು (ಅನ್ಯಾಯ: ಇಬ್ಬರು ಮೂವರು ರಾಜಕಾರಣಿಗಳದ್ದು ಸಹ ಇವೆ!). ಇಲ್ಲಿ ಮಾಡುವುದು ಕೆಲವೇ ತಿಂಡಿಗಳು, ಊಟ ಇಲ್ಲ, ದೋಸೆ ಮತ್ತು ರವೇ ಇಡ್ಲಿ ಪ್ರಮುಖವಾದ ತಿಂಡಿಗಳು. ಪಂಚೆ ಉಟ್ಟ ಮಾಣಿಗಳು ಒಟ್ಟಿಗೆ ೨೦ ದೋಸೆ ತಟ್ಟೆಗಳನ್ನು ತರುತ್ತಾರೆ, ಚಟ್ನಿ ಒಂದು ಪಾತ್ರೆಯಲ್ಲಿ ತಂದು ಬಡಿಸುತ್ತಾರೆ. ಕೈ ಒರಿಸಿಕೊಳ್ಳಲು ಹಿಂದೆ ಕನ್ನಡ ದಿನಪತ್ರಿಕೆಗಳನ್ನ ಹರಿದು ಕೊಡುತ್ತಿದ್ದರು, ಆದರೆ ಈಗ ಪರವಾಗಿಲ್ಲ ಸರಿಯಾದ ಟಿಶ್ಯೂಗಳು ಇವೆ. ರುಚಿಯಾದ ಕಾಫಿ ಎರಡು ಬಟ್ಟಲಿನಲ್ಲಿ. ಹೊರಗೆ ಜನಗಳು ಮುತ್ತಿಗೆ ಹಾಕಿರುತ್ತಾರೆ. ಆದ್ದರಿಂದ ನಿಮಗೆ ಅಲ್ಲಿ ವಿರಾಮವಾಗಿ ಕೂರುವುದಕ್ಕೆ ಅವಕಾಶವಿಲ್ಲ. ಆದರೆ ಇಲ್ಲಿ ತಿನ್ನದೇ ಹೋದರೆ ಬೆಂಗಳೂರಿಗೆ ಬಂದಹಾಗಿಲ್ಲ.

ಬಸವನಗುಡಿ ಕೋ-ಆಪರೇಟಿವ್ ಬಹಳ ಹಳೆಯ ಸಂಸ್ಥೆ, ಸರ್ ಎಂವಿ ದಿವಾನರಾಗಿದ್ದಾಗ ಶುರು ಮಾಡಿದ್ದು, ಈಗ ಈ ಕಟ್ಟಡ ಇಲ್ಲ, ಆದರೆ ಸಂಸ್ಥೆ ಇದೆ. ಇದರ ಮುಂದೆ ಅನೇಕ ಹೂವಿನ ಮತ್ತು ಹಣ್ಣುಗಳ ಪೂಜೆ ಸಾಮಾನುಗಳ ಅಂಗಡಿಗಳು ಫುಟ್-ಪಾತಿನ ಮೇಲೆ. ಹಬ್ಬದ ದಿನಗಳ ಹಿಂದೆ ಇಲ್ಲಿ ಕಾಲು ಇಡೋಕ್ಕೂ ಜಾಗ ಇರುವುದಿಲ್ಲ, ಅಷ್ಟು ಜನ! ಈಚೆಗೆ ಇಲ್ಲಿ ಜನರು ಮನೆಯಲ್ಲಿ ಹಬ್ಬದ ದಿನ ಹೋಳಿಗೆ, ಲಾಡು ಇತ್ಯಾದಿ ಮನೆಯಲ್ಲಿ ಮಾಡುವುದಿಲ್ಲವಂತೆ, ಗಾಂಧಿಬಜಾರಿನಲ್ಲಿ ಎಲ್ಲ ಸಿಗುತ್ತೆ. ಸಂಕ್ರಾಂತಿ ಸಮಯದಲ್ಲಿ ನಿಮಗೆ ಎಳ್ಳು, ಸಕ್ಕರೆ ಅಚ್ಚು, ಕಬ್ಬು ಮುಂತಾದವು ಸಿಗುತ್ತವೆ. ಗಾಂಧಿ ಬಜಾರ್ one stop for all your needs.

ಈ ರಸ್ತೆ ಕೊನೆಯಲ್ಲಿ ಬಸವನಗುಡಿ ಕ್ಲಬ್. ಎರಡು ಕಡೆ ಸಾಲುಮರಗಳು. ಮಾಸ್ತಿ ಅವರು ಈ ಕ್ಲಬ್ಬಿಗೆ ಸಾಯಂಕಾಲ ಹೋಗುವಾಗ ಛತ್ರಿ ಹಿಡಿದು ಹೋಗುತ್ತಿದ್ದರಂತೆ, ಯಾಕೆ ಅಂತ ಗೊತ್ತಲ್ಲ? ಕಾಗೆಗಳ ಕಾಟ! ಈಗ ಕಾಗೆಗಳು ಪತ್ತೆ ಇಲ್ಲ, ಯಾವ ಹಕ್ಕಿಗಳೂ ಇಲ್ಲ.

Gandhibazaar flowers
ಹೂವಿನಂಗಡಿಗಳು

ದೊಡ್ಡ ಗಣೇಶನ ದೇವಸ್ಥಾನ ಹತ್ತಿರದಲ್ಲೇ ನಂದಿ ಗುಡಿ. ಇದು ೧೫೩೭ ಕೆಂಪೇಗೌಡರು ಕಟ್ಟಿಸ್ಸಿದ್ದು, ಇದರ ವಾಸ್ತುಶಿಲ್ಪಿ ವಿಜಯನಗರದ ಶೈಲಿ. ನಂದಿಯ ವಿಗ್ರಹ ೧೫ ಅಡಿ ಎತ್ತರ ಮತ್ತು ೨೦ ಅಡಿ ಅಗಲ. ಈ ಎರಡು ದೇವಸ್ಥಾನಗಳು ಬ್ಯುಗಲ್-ರಾಕ್ ಅನ್ನುವ ಬಂಡೆಗಳ ಮತ್ತು ಮರಗಳ ಮಧ್ಯ ಇದೆ. ಹಿಂದಿನ ಕಾಲದಲ್ಲಿ ಜನಗಳಿಗೆ ಎಚ್ಚರಿಕೆಯ ಸುದ್ದಿ ಕೊಡುವ ಮುಂಚೆ ಗುಡ್ದದ ಮೇಲಿಂದ ಕಹಳೆ ಊದತ್ತಿದ್ದರು, ಇದು ಈಗ ಬ್ಯುಗಲ್ ರಾಕ್.

ಬುಲ್ ಟೆಂಪಲ್ ರಸ್ತೆಯಲ್ಲಿ ಸ್ವಲ್ಪ ಮೇಲೆ ಹೋದರೆ ಡಿವಿಜಿ ಅವರು ಶುರುಮಾಡಿದ್ದ ಗೋಖಲೆ ಸಂಸ್ಥಾನ ಇದೆ. ೧೯೧೫ರಲ್ಲಿ ಮಹಾತ್ಮಾ ಗಾಂಧಿಯವರು ಇಲ್ಲಿಗೆ ಭೇಟಿ ಕೊಟ್ಟಿದ್ದರು, ಆಗ ಡಿವಿಜಿ ಇವರನ್ನು ಭೇಟಿ ಮಾಡಿದ್ದರು.

ಡಿವಿಜಿ ಅವರ ಮನೆ ಗಾಂಧಿಬಜಾರಿಗೆ ಹತ್ತಿರವಿತ್ತು, ಈಗ ಈ ರಸ್ತೆ ಡಿವಿಜಿ ರಸ್ತೆ. ಆದರೆ ಇವರ ಮನೆ ಈಗ ಇಲ್ಲ ಇದನ್ನು ಕೆಡವಿ ಅಂಗಡಿಗಳು ಬಂದಿವೆ. ನೋಡಿ , ಇಂಗ್ಲೆಂಡ್ ನಲ್ಲಿ ಇಂಥಹ ಹೆಸರಾಂತ ವ್ಯಕ್ತಿ ಗಳ ಮನೆಗಳನ್ನು ಸಂರಕ್ಷಿತ್ತಾರೆ. ಹೀಗೆ ಕೈಲಾಸಂ ಬೆಳೆದಿದ್ದ ಮನೆ White House ಕೂಡ ಈಗ ಇಲ್ಲ. ಸದ್ಯ ಮಾಸ್ತಿಯವರ ಮನೆ ಇಲ್ಲೇ ಹತ್ತಿರದಲ್ಲಿ ಈಗ ಒಂದು ಮ್ಯೂಸಿಯಂ, ಅವರ ಮೊಮ್ಮಗಳು ಇದಕ್ಕೆ ಕಾರಣ. .

Subbammana angadi
ಸುಬ್ಬಮ್ಮನ ಅಂಗಡಿ

ಈ ರಸ್ತೆಯಲ್ಲಿ ಕೆಲವು ಅಂಗಡಿಗಳು ಬಹಳ ವರ್ಷದಿಂದ ಇದೆ. ಮಲ್ನಾಡ್ ಸ್ಟೋರ್ಸ್-ನಲ್ಲಿ ಒಳ್ಳೆ ಅಡಿಕೆ ಮತ್ತು ಇತರ ಮಲೆನಾಡಿನ ಪಧಾರ್ಥಗಳು, ಶ್ರೀನಿವಾಸ ಬ್ರಾಹ್ಮಣರ ಬೇಕರಿಯಲ್ಲಿ ಅನೇಕ ತಿಂಡಿಗಳು, ಕುರುಕುಲು ಮತ್ತು ಬ್ರೆಡ್ ಮಾರಾಟ. ಇಲ್ಲಿಯ “ಕಾಂಗ್ರೆಸ್ ಕಡ್ಲೆಬೀಜ” ಬಹಳ ಪ್ರಸಿದ್ಧ, ಈ ಹೆಸರು ಹೇಗೆ ಬಂತು ಅನ್ನುವುದು ಗೊತ್ತಿಲ್ಲ! ನ್ಯಾಷನಲ್ ಕಾಲೇಜವೃತ್ತದಲ್ಲಿ ಸುಮಾರು ವರ್ಷಗಳ ಹಿಂದೆ ಗೋಖಲೆ ಅನ್ನುವರು ಈ ಕಡ್ಲೇಬೀಜವನ್ನು ಮಾರುತಿದ್ದುದು ನನಗೆ ಜ್ಞಾಪಕ ಇದೆ, ಆ ವೃತ್ತಕ್ಕೆ ಕಾಂಗ್ರೆಸ್ ಅಂತ ನಾಮಕರಣ ಇತ್ತು. ಅಂದ ಹಾಗೆ ಈಗ ಈ ವೃತ್ತ ಇಲ್ಲ ಫ್ಲೈ ಓವರ್ ಕಟ್ಟಿ ಹಾಳುಮಾಡಿದ್ದಾರೆ. ಇಲ್ಲೇ ಹತ್ತಿರದಲ್ಲಿ ಸುಬ್ಬಮ್ಮನ ಅಂಗಡಿ, ಇದು ಇವತ್ತಿಗೂ ಸಣ್ಣ ಸ್ಥಳ. ಈಕೆ ಸುಮಾರು ೭೦ ವರ್ಷದ ಹಿಂದೆ ಬಾಲವಿಧವೆಯಾಗಿ ಬೆಂಗಳೂರಿನಲ್ಲಿ ಅಡಿಗೆ ಕೆಲಸ ಶುರು ಮಾಡಿ ಕೊನೆಗೆ ಒಂದು ಸಣ್ಣ ಅಂಗಡಿ ತೆರೆದರು. ಹಪ್ಪಳ ಸಂಡಿಗೆ ಹುರಿಗಾಳು ಇತ್ಯಾದಿ ಮಾರಾಟ. ಅವರ ಮನೆಯವರು ಅದೇ ಆಂಗಡಿಯಲ್ಲಿ ಇನ್ನೂ ವ್ಯಾಪಾರ ನಡೆಸುತ್ತಿದ್ದಾರೆ.

ಬಸವನಗುಡಿಯಲ್ಲಿ ನಾಷನಲ್ ಕಾಲೇಜ್ ಬಹಳ ಹಳೆ ಸಂಸ್ಥೆ. ೧೯೧೭ ರಲ್ಲಿ ಹೈಸ್ಕೂಲ್ ಶುರುವಾಗಿ ೧೯೪೫ರಲ್ಲಿ ಕಾಲೇಜ್ ಸಹ ಬಂತು. ಇದೇ ಶಾಲೆಯಲ್ಲಿ ಓದಿ ಅಲ್ಲೇ ವಾಸಮಾಡಿ ಕೊನೆಗೆ ಪ್ರಿನ್ಸಿಪಾಲ್ ಆಗಿದ್ದವರು ಡಾ ನರಸಿಮಯ್ಯ. ಪ್ರೀತಿ ಇಂದ ಎಲ್ಲಾರಿಗೂ ಎಚ್ಚೆನ್. ಇವರ ಸರಳತೆ ಮತ್ತು ಗಾಂಭೀರ್ಯ ಅಪಾರ. ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಉಪಕುಲಪತಿ ಆಗಿದ್ದರೂ ಕಾಲೇಜ್ ಹಾಸ್ಟೇಲಿನಲ್ಲಿ ಒಂದು ಸಣ್ಣ ಕೊಠಡಿಯಲ್ಲಿ ವಾಸವಾಗಿದ್ದರು, ಯಾವಾಗಲೂ ಖಾದಿ ಪಂಚೆ, ಜುಬ್ಬಾ ಮತ್ತು ಟೋಪಿ, ನಿಜವಾದ ಗಾಂಧಿ ಅಂದರೆ ಇವರೇ.

ಇದೆ ರಸ್ತೆಯಲ್ಲಿ ಬಿಎಂಎಸ್ ಕಾಲೇಜು, ಪ್ರಸಿದ್ದವಾದ ಬಹಳ ಹಳೆಯ ಇಂಜಿನೀರಿಂಗ್ ಕಾಲೇಜು. ೧೯೪೬ರಲ್ಲಿ ಸ್ಥಾಪನೆಯದ ಭಾರತದ ಮೊದಲನೆಯ ಖಾಸಗಿ ಇಂಜನೀರಿಂಗ್ ಕಾಲೇಜು.

ಪ್ರೊ. ನಿಸಾರ್ ಅಹ್ಮದ್ ಅವರ ಪ್ರೀತಿಯ ರಸ್ತೆ ಗಾಂಧಿಬಜಾರ್. ೨೦೦೮ರಲ್ಲಿ ನಮ್ಮ ಕನ್ನಡ ಬಳಗದ ಮುಖ್ಯ ಅಥಿತಿಯಾಗಿ ಬಂದವರು ನಮ್ಮ ಮನೆಯಲ್ಲಿ ಮೂರು ವಾರ ಇದ್ದರು. ಒಂದು ಸಂಜೆ ಕೆಲವು ಮಿತ್ರರ ಜೊತೆ ಮಾತನಾಡಿದಾಗ ದಿವಂಗತ ಶ್ರೀರಾಜಾರಾಮ್ ಕಾವಳೆ ಅವರನ್ನು `ಮುಂದಿನ ಜನ್ಮದಲ್ಲಿ ಹುಟ್ಟಿದರೆ, ಅದು ಎಲ್ಲಿ ಸಾರ್?` ಅಂತ ಕೇಳಿದರು. ನಿಸಾರ್ ಅವರ ಉತ್ತರ ಹೀಗಿತ್ತು, “ನೋಡಿ, ನನಗೆ ಮುಂದಿನ ಜನ್ಮ ಬಗ್ಗೆ ನಂಬಿಕೆ ಇಲ್ಲ, ಆದರೆ ನಾನು ಪುನಃ ಹುಟ್ಟಿದರೆ ಅದು ಭಾರತದಲ್ಲೇ, ಕರ್ನಾಟಕದಲ್ಲೇ, ಬೆಂಗಳೂರಿನಲ್ಲೇ ಮತ್ತು ಗಾಂಧಿಬಜಾರ್ ಹತ್ತಿರ!” ಬಹುಷಃ ಮಾಸ್ತಿ ಮತ್ತು ಡಿವಿಜಿ ಅವರೂ ಇದೇ ಉತ್ತರ ಕೊಡುತ್ತಿದ್ದರು ಅಂತ ಕಾಣತ್ತೆ.

ಕೊನೆಯದಾಗಿ ಒಂದು ವಿಷಾದಕರ ಸಂಗತಿ: ಗಾಂಧಿಬಜಾರ್ ಅಷ್ಟು ಖ್ಯಾತವಾದ ಮತ್ತು ಐತಿಹಾಸಿಕ. ಆದರೆ ಈಚೆಗೆ ಎಲ್ಲೆಲ್ಲಿ ನೋಡಿದರು ಕಸ. ಫುಟ್ಪಾತ್ ಕೂಡ ಸರಿಯಾಗಿಲ್ಲ, ರಸ್ತೆ ತುಂಬಾ ತೂತುಗಳು. ನೋಡಿದರೆ ತುಂಬಾ ಬೇಜಾರಾಗುತ್ತೆ. ಇಲ್ಲಿ ಬಡತನ ಇಲ್ಲ, ಮಧ್ಯಮ ಮತ್ತು ಉತ್ತಮವರ್ಗದ ಜನರ ವಾಸ ಆದರೂ ಈ ಸ್ಥಿತಿ ಏಕೆ ಅನ್ನುವುದು ದೊಡ್ಡ ಸಂಶಯ.

ನೀವು ಬೆಂಗಳೂರಿಗೆ ಹೋದರೆ ಗಾಂಧಿಬಜಾರಿಗೂ ಹೋಗಿ, ಇತಿಹಾಸವನ್ನು ಮೆಲುಕು ಹಾಕಿ, ವಿದ್ಯಾರ್ಥಿಭವನಲ್ಲಿ ದೋಸೆ ತಿನ್ನಿ. ನಂತರ ಗಾಂಧಿ ಬಜಾರನ್ನು ಮತ್ತೆ ಹೊಟ್ಟೆ ಹಸಿಯುವವರೆಗೆ ಸುತ್ತಿ. ಆಮೇಲೆ ಕಾಮತ್ ಬ್ಯುಗಲ್-ರಾಕ್ ಹೋಟೆಲಿನಲ್ಲಿ ಉತ್ತರ ಕರ್ನಾಟಕದ ಜೋಳದ ರೊಟ್ಟಿಯ ಸೊಗಸಾದ ಊಟ ಕಾದಿರುತ್ತೆ!