ಕು.ಚಿ. ಸುರಂಗಗಳು-ದಾಕ್ಷಾಯಿಣಿ ಗೌಡ

ಪ್ರಿಯ ಮಿತ್ರರೆ, ಕೋವಿಡ್ ಮಹಾಮಾರಿಯ ಹಾವಳಕ್ಕೆ ತುತ್ತಾಗಿ ಹೆಣಗುತ್ತಿರುವ ಪ್ರಪಂಚಲ್ಲಿ ವಿದೇಶಗಳ ಪ್ರಯಾಣ ಕಳೆದ ವರ್ಷದಲ್ಲಿ ಬಹು ಕಡಿಮೆಯಾಗಿದೆ. ಶೀಘ್ರದಲ್ಲೇ ಆರಂಭವಾಗಲೆನ್ನುವ ಆಶಾವಾದದೊಂದಿಗೆ, ನಮ್ಮ ಕಳೆದ ವರ್ಷದ ವಿಯಟ್ನಾಮ್ ಭೇಟಿಯನ್ನು ನೆನಪಿಸಿಕೊಳ್ಳುವ ಮತ್ತು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ನನ್ನದು – ದಾಕ್ಷಾಯಿಣಿ

ಕು.ಚಿ. ಸುರಂಗಗಳು ( Cu.Chi tunnels in Vietnam)

ಹೋದ ವರ್ಷ (೨೦೨೦) ಮಾರ್ಚ್ ತಿಂಗಳ ಮೊದಲ ೧೦ ದಿನಗಳನ್ನು, ವಿಯಟ್ನಾಮ್ ದೇಶದಲ್ಲಿ ಕಳೆಯುವ ಅವಕಾಶ ನಮ್ಮದಾಗಿತ್ತು. ನಾವು ಕಾಂಬೋಡಿಯಾದ ಸಿಯಮ್ ರೀಪ್ ನಗರದಿಂದ, ವಿಯಟ್ನಾಮ್ ನ ರಾಜಧಾನಿ ಹನಾಯ್ ತಲುಪಿ, ನಂತರ ಅಲ್ಲಿನ ಇನ್ನೆರಡು ನಗರಗಳಲ್ಲಿ ಕೆಲ ದಿನ ಕಳೆದು, ಕೊನೆಯ ಭಾಗದ ಪ್ರಯಾಣದಲ್ಲಿ ದಕ್ಷಿಣದ ಮುಖ್ಯ ನಗರ ಸೈಗಾನ್ ಗೆ ಭೇಟಿಯಿತ್ತೆವು. ಈ ದೇಶದಲ್ಲಿ ಕೆಲವಾರು ಜಾಗಗಳಿಗೆ ಭೇಟಿಯಿತ್ತಿದ್ದರೂ, ನನ್ನ ಮನದಲ್ಲಿ ತನ್ನದೇ ರೀತಿಯ ಅಚ್ಚುಹೊತ್ತಿದ ಕು.ಚಿ. ಸುರಂಗಕ್ಕೆ ಭೇಟಿಯಿತ್ತ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ಹೊ.ಚಿ.ಮಿನ್ ನಗರ ಅಥವಾ ಅದರ ಹಳೆಯ ಹೆಸರಿನಿಂದ ಜನಪ್ರಿಯವಾದ ಸೈಗಾನ್ ನಗರ, ಈ ದೇಶದ ಆರ್ಥಿಕ ರಾಜಧಾನಿಯೆಂದು ಹೇಳಬಹುದು. ಸೈಗಾನ್ ನಿಂದ ಕು.ಚಿ. ಜಿಲ್ಲೆಗೆ ಒಂದು ಘಂಟೆಯ ಪಯಣ. ಪ್ರವಾಸದ ಎಜೆಂಟ್ ನಮ್ಮಿಬ್ಬರಿಗೆಂದೆ ಹೋಟೆಲಿನಿಂದ, ಕಾರು ಮತ್ತು ಆಂಗ್ಲ ಭಾಷೆ ತಿಳಿದಿರುವ ಗೈಡ್ ನ ಮುಂಚೆಯೆ ಯೋಜಿಸಿದ್ದರಿಂದ ಈ ಯಾತ್ರೆಯಲ್ಲಿ ನಮಗೆ ಯಾವ ರೀತಿಯ ತೊಂದರೆಯಾಗಲಿಲ್ಲ.

ನಾನು ಬಹಳಷ್ಟು ಅಮೆರಿಕೆಯ ಚಲನಚಿತ್ರಗಳಲ್ಲಿ ” ವಿಯಟ್ನಾಮ್ ಯುದ್ಧ” ಬಗ್ಗೆ ನೋಡಿದ್ದೆ ಮತ್ತು ಕೇಳಿದ್ದೆನಾದರೂ, ಅದರ ನಿಜವಾದ ಅರ್ಥ ಈ ” ಕು.ಚಿ ಟನ್ನಲ್ಸ್” ನ ವೀಕ್ಷಿಸಿದಾಗಲೆ ತಿಳಿದಿದ್ದು. ನಿಮಗೆ ತಿಳಿದ೦ತೆ ಈ ದೇಶದ ನೆಲ ಮೇಲಿಂದ ಕೆಳಗೆ ಒಂದು ಚಿಕ್ಕ ಪಟ್ಟಿಯಂತಿದೆ. ಆರ್ಥಿಕ, ಗಾತ್ರ, ಸೈನ್ಯಬಲ ಮತ್ತೆಲ್ಲದರಲ್ಲೂ ಚಿಕ್ಕದಾದ ಈ ದೇಶ, ಅತಿ ಭಲಾಡ್ಯವಾದ, ಶ್ರೀಮಂತವಾದ, ಮುಂದುವರಿದ ಅಮೆರಿಕೆಯಂತಹ ದೇಶವನ್ನು ಎದುರಿಸಿ ಯುದ್ಧಮಾಡಿರುವುದು ಒಂದು ರೀತಿಯ ಪವಾಡವೆ ಸರಿ. ಈ ಯುದ್ಧದಲ್ಲಿ ಗೆಲ್ಲಲಾರದೆ, ಪ್ರಂಪಚದ ಖಂಡನೆಗೆ ಪಾತ್ರವಾಗಿ ಅಮೆರಿಕ ರಾಜಿ ಮಾಡಿಕೊಳ್ಳಬೇಕಾಯಿತು. ಈ ಭಾಗದ ಪ್ರಪಂಚದಲ್ಲಿ ಬೆಳೆಯುತ್ತಿರುವ ”ಕಮ್ಯೂನಿಸಂ” ಮತ್ತು ಚೀನಾ ದೇಶದ ಪ್ರಭಾವವನ್ನು ತಡೆಗಟ್ಟುವ ಉದ್ದೇಶದಿಂದ ಇಂತಹ ಯುದ್ಧವನ್ನು ವರ್ಷಾನುಗಟ್ಟಲೆ ಕಾದ ಅಮೆರಿಕಾ, ಈ ಯುದ್ಧದಲ್ಲಿ ಮಾಡಿದ ಪಾಪಕೃತ್ಯಕ್ಕೆ, ಅಪರಾಧಕ್ಕೆ ಮತ್ತು ಅನ್ಯಾಯಕ್ಕೆ ಯಾವ ರೀತಿಯ ಶಿಕ್ಷೆ ಕೊಟ್ಟರೂ ಕಡಿಮೆಯೆ. ಆದರೆ ಪ್ರಪಂಚದಲ್ಲಿ ಶ್ರೀಮಂತರಿಗೆ ಸಿಗುವ ನ್ಯಾಯವೆ ಬೇರೆಯಲ್ಲವೆ?

ಅರವತ್ತರ ದಶಕದಲ್ಲಿ ಶುರುವಾದ ಈ ಯುದ್ಧ ೧೯೭೫ ರ ತನಕ ನಡೆಯಿತು. ಈ ಗೆರಿಲ್ಲಾ ಯುದ್ಧವನ್ನು ಮಾಡಿದ ವಿಯಟ್ನಾಮ್ ಜನರ, ಕಷ್ಟಸಹಿಷ್ಣುತೆ, ಧೃಢನಿಶ್ಚಯದ ಅಗಾಧತೆ, ಶಕ್ತಿಗಳು ವರ್ಣನೆಗೆ ನಿಲುಕದ್ದು. ಅಮೆರಿಕ, ಫ್ರಾನ್ಸ್, ಜಪಾನ್ ಮುಂತಾದ ದೇಶಗಳ ಪತ್ರಕರ್ತರು ಇಲ್ಲಿಗೆ ಭೇಟಿಕೊಟ್ಟು, ಇಲ್ಲಿ ನೆಡೆದ ಅಮಾನುಷತೆಯ ಚಿತ್ರಗಳನ್ನು, ಲೇಖನಗಳನ್ನು ಪ್ರಕಟಿಸಲು ಶುರುಮಾಡಿದಾಗ, ಪ್ರಪಂಚದಾದ್ಯಂತ ಇದನ್ನು ಖಂಡಿಸಿ ಮುಷ್ಕರಗಳು ನಡೆದು, ಅಮೆರಿಕ ಎಲ್ಲಾ ದೇಶಗಳ ಅವಹೇಳನಕ್ಕೆ ಗುರಿಯಾಗಿ, ನಾಚಿಕೆಯಿಂದ ತಲೆಬಾಗಿ ಈ ಜಾಗ ಖಾಲಿ ಮಾಡಬೇಕಾಯಿತು. ಆ ಯುದ್ಧದಲ್ಲಿ ಹೋರಾಡಿದ ಅಮೆರಿಕೆಯ ಸೈನಿಕರಿಗೆ, ಅಮೆರಿಕೆಯ ಪ್ರವಾಸಿಗರಿಗೆ ಇದು ಜನಪ್ರಿಯ ಗಮ್ಯಸ್ಥಾನ.

Photos from Personal album

ಈ ಕು.ಚಿ ಸುರಂಗಗಳನ್ನು, ನಮ್ಮ ಲಂಡನ್ ಟ್ಯುಬ್ ತರಹ, ವಿಭಿನ್ನ ಮಟ್ಟದಲ್ಲಿ ಕೊರೆಯಲಾಗಿದೆ. ಇದಕ್ಕೆ ಯಾವರೀತಿಯ ಬೆಳಕು ಬೀಳುವುದು ಸಾಧ್ಯವಿಲ್ಲ. ಬಹಳ ಎತ್ತರವಿಲ್ಲದ, ತೆಳುಮೈಕಟ್ಟಿನ ಇಲ್ಲಿಯ ಜನರೆ ಇದರಲ್ಲಿ ಬಗ್ಗಿ ನಡೆಯಬೇಕು ಮತ್ತು ಕೆಲವಡೆ ತೆವಳಬೇಕು. ಬೆಳಿಗ್ಗೆಯಿಡೀ ಈ ಸುರಂಗದಲ್ಲಿದ್ದು, ಅಲ್ಲಿಯೆ ಅಡುಗೆ ಮಾಡಿ, ಅದರಲ್ಲೇ ಬಾವಿ ತೆಗೆದು ನೀರಿನ ವ್ಯವಸ್ಥೆಯನ್ನು ಸಹ ಮಾಡಿಕೊಂಡು, ರಾತ್ರಿಯ ವೇಳೆ ಮಾತ್ರ ಹೋರಾಡಲು ಈ ಜನ ಹೊರಗೆ ಬರುತ್ತಿದ್ದರು. ಇದರಲ್ಲೆ ಯುದ್ಧದ ಗಾಯಾಳುಗಳಿಗೂ ಚಿಕಿತ್ಸೆ ಮಾಡಲಾಗುತ್ತಿತ್ತು. ಮಕ್ಕಳ ಹೆರಿಗೆಯೂ ಈ ಕಗ್ಗತ್ತಲ ಸುರಂಗದಲ್ಲೇ ಆಗುತ್ತಿತ್ತೆಂದು ಊಹಿಸಲೂ ಕಷ್ಟವಾಗುತ್ತದೆ. ಸುರಂಗದಲ್ಲಿ ಒಂದೆಡೆ ಅಡಿಗೆ ಮಾಡಿದರೆ ಅದರ ಹೊಗೆ ಬೇರೆಕಡೆಯೆ ಬರುತ್ತದೆ. ಇದು ವೈರಿಗಳನ್ನು ದೂರವಿಡುವ ಜಾಣತನದ ಬಹು ತಂತ್ರಗಳಲ್ಲಿ ಒಂದು.

ಸುರಂಗವಾಸಿಗಳು, ಕತ್ತಲಾದ ನಂತರ ಹೊರಬಂದು, ಅಮೆರಿಕೆಯ ಸೈನಿಕರು ಸಿಕ್ಕಿಬೀಳುವಂತೆ ಮತ್ತು ಸಾಯುವಂತೆ ಟ್ರಾಪ್ ಗಳನ್ನು ನಿರ್ಮಿಸುವುದಲ್ಲದೆ, ದವಸಧಾನ್ಯ, ಔಷಧಿ, ಕಟ್ಟಿಗೆಗಳನ್ನು ಶೇಖರಿಸುವುದಲ್ಲದೆ, ವ್ಯವಸಾಯವನ್ನು ಸಹ ಮಾಡುತ್ತಿದ್ದರೆಂದು ಹೇಳುತ್ತಾರೆ. ಇವರು ವೈರಿಗಳಿಗೆ ನಿರ್ಮಿಸಿರುವ ಟ್ರಾಪ್ ಗಳು ನಿಜಕ್ಕೂ ಭಯಾನಕ. ಈ ಸುರಂಗಗಳಲ್ಲಿ ವಿಯ್ಟ್ ಕಾಂಗ್ ಸೈನಿಕರು ಮಾತ್ರವಲ್ಲದೆ, ಹೆಂಗಸರು, ಮಕ್ಕಳೂ ಸಹ ವಾಸವಾಗಿದ್ದರು. ಬಹಳ ಬಾರಿ ಬಾಂಬ್ ಗಳ ದಾಳಿಯಾದಗ ವಿಯ್ಟ್ ಕಾಂಗ್ ಯೋಧರು, ದಿನಗಟ್ಟಲೆ ಈ ಸುರಂಗಳಲ್ಲೆ ಇರಬೇಕಾಗುತ್ತಿತ್ತು. ಕತ್ತಲೆಯ ಜೊತೆಗೆ, ಸೊಳ್ಳೆ, ಇರುವೆ, ಹಾವು, ಚೇಳು, ಜೇಡ ಮತ್ತು ಹೆಗ್ಗಣಗಳ ಕಾಟ ಬೇರೆ. ಬಹಳಷ್ಟು ಜನ ಮಲೇರಿಯಾದ ಬೇಗೆಗೆ ತುತ್ತಾಗಿ ಸಾವನ್ನಪಿದರೆಂದು ಹೇಳುತ್ತಾರೆ

ಅಮೆರಿಕಾದ ಸೈನಿಕರು , ಸುರಂಗದೊಳಗೆ, ಬಿಸಿ ಟಾರ್, ಹೊಗೆ, ನೀರು ಸುರಿದರೂ ಈ ಗೆರಿಲ್ಲಾಗಳು, ಸುರಂಗದ ಕತ್ತಲಿನಲ್ಲಿ,ವಿವಿಧ ದಾರಿ ಹಿಡಿದು, ತಪ್ಪಿಸಿಕೊಳ್ಳುತ್ತಿದ್ದರು. ಅದರ ಜೊತೆ ಈ ಸುರಂಗಗಳನ್ನು ನಿರ್ನಾಮ ಮಾಡಲು ಅಮೆರಿಕಾದವರಿಂದ ಸತತ ಬಾಂಬ್ ಗಳ ದಾಳಿ ಬೇರೆ. ನಂತರದ ವರ್ಷಗಳಲ್ಲಿ ತರಬೇತಿ ಪಡೆದ ಅಮೆರಿಕೆಯ ಸೈನಿಕರು ಬೆಳಕಿನ ದೊಂದಿ, ಕತ್ತಿ ಹಿಡಿದು, ಇಂಚು ಇಂಚಾಗಿ ಈ ಸುರಂಗಗಳನ್ನು ಶೋಧಿಸಲು ಶುರುಮಾಡಿದರು. ಈ ಸೈನಿಕರನ್ನು ”ಸುರಂಗದ ಇಲಿ” ಗಳೆಂದು ಕರೆಯಲಾಗುತ್ತಿತ್ತು.ಈ ರೀತಿ ವರ್ಷಾನುಗಟ್ಟಲೆ ವಾಸಿಸಿ, ಆಧುನಿಕ ಆಯುಧಗಳು, ಬಾಂಬ್ ಗಳನ್ನು ಹೊಂದಿದ ವೈರಿಗಳನ್ನು ಎದುರಿಸಿದ ಈ ವಿಯಟ್ನಾಮ್ ಜನರ ದೃಢನಿಶ್ಚಯಕ್ಕೆ, ಪಟ್ಟಕಷ್ಟಕ್ಕೆ, ಎದುರಿಸಿದ ಸಾವುನೋವುಗಳಿಗೆ ಯಾವ ರೀತಿಯ ಹೋಲಿಕೆಯಿರುವುದೂ ಸಾಧ್ಯವಿಲ್ಲ.

ವಿಯಟ್ನಾಮ್ ಸರ್ಕಾರ ಈಗ ೧೨೧ ಕಿ ಮಿ ( ೭೫ ಮೈಲಿ) ಸುರಂಗವನ್ನು ರಕ್ಷಿಸಿ ಇದನ್ನು ಪ್ರವಾಸಿಗರಿಗೆ ನೋಡಲು ಅನುಕೂಲ ಮಾಡಿಕೊಟ್ಟಿದೆ. ಕೆಲವು ಭಾಗಗಳಲ್ಲಿ ಪ್ರವಾಸಿಗರು ಸುರಂಗದಲ್ಲಿ ಇಳಿದು ತೆವಳಿ ಹೊರಬರಬಹುದು. ಪ್ರವಾಸಿಗರಿಗಾಗಿ ಕೆಲವು ಸುರಂಗಗಳನ್ನು ದೊಡ್ಡದು ಮಾಡಿದ್ದಾರೆ. ಬೆಳಕಿಗಾಗಿ ವಿದ್ಯುತ್ ಅನುಕೂಲತೆಯನ್ನು ಈ ಸುರಂಗಗಳಲ್ಲಿ ಒದಗಿಸಿದ್ದಾರೆ. ವಿಯಟ್ ಕಾಂಗ್ ಯೋಧರು ತಿನ್ನುತ್ತಿದ್ದ ಆಹಾರದ ಸ್ಯಾಂಪಲ್ ಸಹ ಸಿಗುತ್ತದೆ. ಯುದ್ದದ ಬಗೆಗೆ ತಿಳಿಸಲು ಅಲ್ಲಲ್ಲಿ ಟಿ.ವಿ ಗಳ ವ್ಯವಸ್ಠೆಯಿದೆ. ಇದೊಂದು ಅಮೋಘ ರೀತಿಯ ನಿರ್ಮಾಣ, ಈ ಸುರಂಗಳು ಕು.ಚಿ ಜಿಲ್ಲೆಯಲ್ಲಿ ನೂರಾರು ಮೈಲಿಗಟ್ಟಲೆ ಇದೆ ಎನ್ನಲ್ಲಾಗುತ್ತದೆ.

ಇಲ್ಲಿನ ವಾರ್ ಮ್ಯೂಸಿಯಂ ನಲ್ಲಿ ಅಮೆರಿಕ ದೇಶ, ಇಲ್ಲಿಯ ಜನರನ್ನು ವಿಷಗಾಳಿಯಿಂದ, ಬಾಂಬ್ ಗಳಿಂದ, ಗೆರಿಲ್ಲಾ ಸೈನಿಕರಿಗೆ ಸಹಾಯ ಮಾಡುತ್ತಿರಬಹುದೆಂಬ ಸಂಶಯದಿಂದ ಮಕ್ಕಳು, ಹೆಂಗಸರು ಮುಗ್ಧರೆಂಬ ಭೇದಭಾವವಿಲ್ಲದೆ ಕೊಂದಿರುವ ಸಾವಿರಾರು ವಿಯಟ್ನಾಮಿಸ್ ಜನರ ಚಿತ್ರಗಳು ಮತ್ತು ಸಂದೇಶಗಳಿವೆ. ಇದು ಕಟುಕನ ಕಣ್ಣಿನಲ್ಲೂ ಕಂಬನಿ ತರಿಸುತ್ತದೆ.

೧೯೭೫ ರ ತನಕ ಒಂದೇಸಮನೆ ಯುದ್ಧದಲ್ಲಿ ಭಾಗಿಯಾಗಿದ್ದ ಈ ದೇಶ ಇತ್ತೀಚಿನ ವರ್ಷಗಳಲ್ಲಿ ಮಾಡಿರುವ ಪ್ರಗತಿ ನಿಜಕ್ಕೂ ಅಭಿನಂದನಾರ್ಹ.

“I appeal for cessation of hostilities, not because you are too exhausted to fight, but because war is bad in essence. You want to kill Nazism. You will never kill it by its indifferent adoption.”
― Mahatma Gandhi, Gandhi: An autobiography

ಡಾ. ದಾಕ್ಷಾಯಿಣಿ ಗೌಡ

ಕಾ೦ಬೊಡಿಯಾದ “ಬಾ೦ಟೆ ಸ್ರೈ” (Citadel of Beauty)

ನಾನು ಈ ವರ್ಷದ ಫೆಬ್ರವರಿ ತಿಂಗಳ ಕೊನೆಯಲ್ಲಿ ಬಹಳ ಮು೦ಚೆಯೆ ನಿರ್ಣಯಿಸಿದ್ದ ಕಾ೦ಬೋಡಿಯಾ ಮತ್ತು ವಿಯಟ್ನಾಮ್ ಪ್ರಯಾಣಕ್ಕೆ(Cambodia and Vietnam) ಹೊರಡುವೆನೆ೦ದು ಹೇಳಿದಾಗ ಬಹಳ ಮ೦ದಿ ಹುಬ್ಬೇರಿಸಿದರೆ೦ದರೆ ತಪ್ಪಾಗಲಾರದು. ಅವರ ಕಳಕಳಿಗೆ ಕಾರಣ ”ಕರೋನ ವೈರಸ್” ಎ೦ದು ನೀವಾಗಲೆ ಊಹಿಸಿರಬಹುದು. ಈ ದೇಶಗಳ ಪ್ರಯಾಣದ ಬಗ್ಗೆ ಯು.ಕೆ. ಸರ್ಕಾರ ಯಾವ ರೀತಿಯ ಸಲಹೆಯನ್ನು ನೀಡದಿದ್ದ ಕಾರಣ, ನಮ್ಮ ಗ೦ಟುಮೂಟೆಯನ್ನು ಕಟ್ಟಿ ೧೭ ದಿನದ ಈ ಪ್ರವಾಸಕ್ಕೆ ವೀರ ಸೈನಿಕರ೦ತೆ ಹೊರಟೇಬಿಟ್ಟೆವು.

ದೇವಸ್ಥಾನದ ಒಳ ಆವರಣ

ಇಂಗ್ಲೆಂಡಿನಿ೦ದ ಬಹಳ ದೂರದ ಪಯಣ. ಸಿ೦ಗಪೂರ್ ವಿಮಾನ ನಿಲ್ದಾಣದ ಲೌ೦ಜ್ ನಲ್ಲಿ, ಬಿಸಿಬಿಸಿ ಪರೋಟ, ಪಲ್ಯವನ್ನು ಅಸ್ವಾದಿಸುತ್ತಿದ್ದಾಗ, ಅಲ್ಲಿನ ಕೆಲಸಗಾರರು, ”ನೋಡಿ ಈ ಲೌ೦ಜ್ ನಲ್ಲಿ ಇವತ್ತು ೧೦ ಜನರೂ ಇಲ್ಲ, ಸಾಮಾನ್ಯವಾಗಿ ಇದು ತು೦ಬಿ ತುಳುಕುತ್ತದೆ,” ಎ೦ದು ಹೇಳಿದಾಗ ಮತ್ತೊಮ್ಮೆ ನಮ್ಮ ಸ್ಥೈರ್ಯ ಅಥವಾ ಮೂರ್ಖತನದ ಬಗ್ಗೆ ಪ್ರಶ್ನೆ ಕೇಳಿದ೦ತೆ ಭಾಸಯಾಯಿತು. ನನ್ನ ಪತಿ “ನಮಗೆ ಯಾವ ರೀತಿಯ ತೂ೦ದರೆಯಾಗುವುದಿಲ್ಲ, ನಾವು ಬಿಟ್ಟುಬ೦ದ ದೇಶಕ್ಕಿ೦ತ, ಹೋಗುತ್ತಿರುವ ದೇಶಗಳು ವೈರಸ್ ದಾಳಿಯ ಲೆಕ್ಕದಲ್ಲಿ ಸುರಕ್ಷಿತ” ಎ೦ದು ಅತನ ಎ೦ದಿನ ನಿರ್ಲಿಪ್ತ ಭಾವದಲ್ಲಿ ಅ೦ಕಿಅ೦ಶಗಳೊ೦ದಿಗೆ, ಮತ್ತೊಮ್ಮೆ ನನಗೆ ಭರವಸೆ ಕೊಟ್ಟಿದ್ದುದರಿಂದ ಸ್ವಲ್ಪ ಸಮಾಧಾನವಾಯಿತು ಮತ್ತು ’ನೀರಲ್ಲಿ ಮುಳುಗಿದ ಮೇಲೆ ಚಳಿಯೇನು, ಮಳೆಯೇನು’ ಎನ್ನುವ ಹೊಸ ಭಂಡ ಧೈರ್ಯವೂ ಮೂಡಿಬ೦ತು.

ಕರೋನ ವೈರಸ್ ನಿ೦ದ ನಮಗೊಂದು ರೀತಿಯ ಅನುಕೂಲವಾಯಿತೆ೦ದರೆ ಆಶ್ಚರ್ಯವೇನಿಲ್ಲ. ಈ ಸ್ಥಳಗಳಿಗೆ ಅತಿ ಹೆಚ್ಚಿನ ಸ೦ಖ್ಯೆಯಲ್ಲಿ ಬರುವ ಪ್ರವಾಸಿಗರೆ೦ದರೆ ಚೀನಾ ಮತ್ತು ಕೊರಿಯಾ ದೇಶದವರು. ಅವರುಗಳಿಲ್ಲದೆ ಮತ್ತು ಬೇರೆ ದೇಶಗಳ ಪ್ರವಾಸಿಗರ ಸ೦ಖ್ಯೆಯೂ ಕಡಿಮೆಯಿದ್ದುದರಿ೦ದ, ಈ ಅತ್ಯ೦ತ ಸು೦ದರ, ಅದ್ಭುತ ದೇವಸ್ಥಾನಗಳನ್ನು ಮನದಣಿಯೆ ನೋಡುವ ಸೌಭಾಗ್ಯ ನಮಗೆ ದೊರಕಿತು. ಸುಡುಸುಡುವ ಬಿಸಿಲು, ಮೈಲಿಗಟ್ಟಲೆ ನಡೆದ ಕಾಲುಗಳು ಮೆದುಳಿಗೆ ಕಳಿಸುತ್ತಿರುವ ಸಂದೇಶದ ವರಾತ, ಸುತ್ತಲಿನ ಜನ ಇದ್ಯಾವುದೂ ಈ ಅದ್ಭುತ ಗುಡಿಗಳ ಮುಂದೆ ನಿಂತಾಗ ನಿಮ್ಮ ಗಮನಕ್ಕೆ ಬರುವುದಿಲ್ಲ.

ನಾನು ನಿಮಗೆ ಕ್ಯಾ೦ಬೋಡಿಯಾದ ಎಲ್ಲಾ ದೇವಸ್ಥಾನಗಳ ಬಗ್ಗೆ ಹೇಳಹೊರಟಿಲ್ಲ. ಪ್ರಪ೦ಚದಲ್ಲಿ ಅತಿ ಪ್ರಸಿದ್ಧವಾದ ಅ೦ಗ್ಕರ್ ವಾಟ್,(Angkor Wat) ಅ೦ಗ್ಕರ್ ಥಾಮ್(Angkor Thom) ಬಗ್ಗೆ ನೀವೆಲ್ಲರೂ ಕೇಳಿಯೆ ಇರುತ್ತೀರ. ನಿಮ್ಮೊ೦ದಿಗೆ ನನಗೆ ಅತಿಮೆಚ್ಚುಗೆಯಾದ ಬಾ೦ಟೆ ಸ್ರೈ ಎನ್ನುವ ಗುಡಿಯ ಬಗ್ಗೆ ನನ್ನ ಅನಿಸಿಕೆಗಳನ್ನು ಹ೦ಚಿಕೊಳ್ಳುವ ಪ್ರಯತ್ನ ನನ್ನದು.

ಬಾ೦ಟೆ ಸ್ರೈ(Bontey Srei) ಸಿಯಮ್ ರೀಪ್(SiemReap) ನಲ್ಲಿರುವ ಎಲ್ಲಾ ದೇವಸ್ಥಾನಗಳಿಗಿಂತ ಚಿಕ್ಕದೆ೦ದು ಹೇಳಬಹುದು. ಇಲ್ಲಿರುವ ಇತರ ದೇವಸ್ಥಾನಗಳು ಅತಿ ದೊಡ್ಡವು ಎನ್ನುವುದು ಬಹಳ ಜನರಿಗೆ ತಿಳಿದ ವಿಚಾರ. ಬಾಂಟೆ ಸ್ರೈ ಯನ್ನು ಸಿಯಮ್ ರೀಪ್ ನಗರದ ಒಡವೆಯೆ೦ದು ಹೇಳಲಾಗುತ್ತದೆ. ಕೆಂಪು ಮರಳುಗಲ್ಲಿನಲ್ಲಿ ನಿರ್ಮಿತವಾದ ಈ ದೇವಸ್ಥಾನದ ಪ್ರತಿ ಗೋಡೆಯಲ್ಲಿ, ಕಂಭದಲ್ಲಿ, ಹಾಸುಗಲ್ಲಿನಲ್ಲಿ ಸುಂದರವಾದ, ಸಂಕೀರ್ಣವಾದ ಕೆತ್ತನೆಯಿದೆ. ಇಂತಹ ಕೆತ್ತನೆ ಸಿಯಮ್ ರೀಪ್ ನ ಇನ್ಯಾವ ದೇವಸ್ಥಾನಗಳಲ್ಲೂ ಕಂಡುಬರುವುದಿಲ್ಲ. ಈ ವಿಶಿಷ್ವತೆಯಿಂದಲೇ ಬಹುಶಃ ಇದಕ್ಕೆ ಸೌಂದರ್ಯದ ಮಹಲು/ ಕೋಟೆಯೆಂಬ ಹೆಸರು ಬಂದಿರಬಹುದು. ಇದನ್ನು ನೋಡಿದಾಗ ನನಗೆ ನೆನಪಿಗೆ ಬಂದದ್ದು ಬೇಲೂರು/ಹಳೇಬೀಡಿನ ಕೆತ್ತನೆಯಾದರೂ, ಇದರ ವೈಶಿಷ್ಟ್ಯತೆಯೆ ಬೇರೆ.

ಎರಡನೆ ಗೋಪುರದ ಮುಂದೆ ನನ್ನ ಪತಿಯೊಂದಿಗೆ

ಇದು ಮೂಲತಃ ಶಿವನ ದೇವಸ್ಥಾನ. ಇಲ್ಲಿನ ಯಾವ ಗುಡಿಗಳಲ್ಲೂ ಮೂಲ ವಿಗ್ರಹವಿಲ್ಲ. ೧೦ ನೇ ಶತಮಾನದಲ್ಲಿ ಕಟ್ಟಿದರೆ೦ದು ಹೇಳಲಾಗುವ ಈ ಗುಡಿ, ಇಲ್ಲಿನ ಇತರ ಗುಡಿಗಳ ಹಾಗೆ, ಚಕ್ರವರ್ತಿಯಿ೦ದ ನಿರ್ಮಾಣವಾಗಿಲ್ಲ, ರಾಜನ ಆಸ್ಥಾನದಲ್ಲಿದ್ದ ವಿಷ್ಣುಕುಮಾರ ಮತ್ತು ಯಜ್ಞವರಹ ಎನ್ನುವ ಅಧಿಕಾರಿಗಳಿ೦ದ ನಿರ್ಮಿತವಾಗಿದ್ದು, ಬಹುಶ ಅದೇ ಕಾರಣಕ್ಕೆ ಇದು ಎಲ್ಲಕ್ಕಿ೦ತ ಚಿಕ್ಕದೆ೦ದು ಹೇಳಲಾಗುತ್ತದೆ. ಈ ಜಾಗವನ್ನು ಹಿ೦ದೆ ಈಶ್ವರಪುರವೆ೦ದು ಕರೆಯುತ್ತಿದ್ದರೆ೦ದು ಪ್ರತೀತಿ. ಈ ದೇವಸ್ಥಾನವನ್ನು ಶಿವನಿಗಾಗಿ ಕಟ್ಟಿದ್ದರೂ, ಉತ್ತರ ಭಾಗದ ಗುಡಿಯನ್ನು ವಿಷ್ಣುವಿನ ಪೊಜೆಗೆ ಮೀಸಲಿಡಲಾಗಿತ್ತು. ಪ್ರಪ೦ಚದ ಅತಿ ಪ್ರಸಿದ್ಧ ಶಿವನ ಗುಡಿಗಳಲ್ಲಿಇದೂ ಒ೦ದೆ೦ದು ಹೇಳುತ್ತಾರೆ. ಈ ದೇವಾಲಯದಲ್ಲಿ ೧೪ನೇ ಶತಮಾನದ ತನಕ, ಹಿಂದು ಧರ್ಮದ ದೊರೆಗಳು ಮತ್ತು ಪ್ರಜೆಗಳು ಶಿವನನ್ನು ಪೂಜಿಸುತ್ತಿದ್ದರೆನ್ನುವ ದಾಖಲೆಯಿದೆ.

ಈ ಗುಡಿಯನ್ನು ೧೯೧೪ ರಲ್ಲಿ ಮರುಶೋಧಿಸಲಾಗಿದೆ. ಇಲ್ಲಿನ ೪ ದೇವರ ವಿಗ್ರಹಗಳನ್ನು ಫ಼್ರೆಂಚ್ ಅಧಿಕಾರಿ, ಮಂತ್ರಿ ಮತ್ತು ಲೇಖಕ ( Andre Malraux) ೧೯೨೩ ರಲ್ಲಿ ಕದ್ದಿದ್ದು, ಮತ್ತವನ ಬಂಧನದ ನಂತರ ಫ್ರಾನ್ಸ್ ದೇಶದಿಂದ ವಿಗ್ರಹಗಳನ್ನು ವಾಪಸ್ಸು ತಂದ ವಿಷಯ ದೊಡ್ಡ ಸುದ್ಧಿಯಾಗಿ, ಈ ದೇವಸ್ಥಾನದ ಬಗೆಗೆ ಆಗಿನ ಜನರ ಕುತೂಹಲ ಹೆಚ್ಚಲು ಕಾರಣವಾಯಿತೆಂದು ಹೇಳುತ್ತಾರೆ. ಈಗ ಈ ವಿಗ್ರಹಗಳು ಇಲ್ಲಿಯ ಸರ್ಕಾರದ ಮ್ಯೂಸಿಯಂ ನಲ್ಲಿವೆ.

ಹೊರಭಾಗದ ಗೋಪುರ, ಒಂದು ಕಾಲದಲ್ಲಿ ೫೦೦ ಸ್ಕ್ವೇರ್ ಮೀಟರ್ ಸುತ್ತಳತೆಯಿದ್ದು, ಈಶ್ವರಪುರದ ಹೊರಗೋಡೆಯನ್ನು ಪ್ರತಿನಿಧಿಸುತ್ತದೆಂದೂ ಮತ್ತು ಇದನ್ನು ಮರದಲ್ಲಿ ಕಟ್ಟಿದ್ದರೆ೦ದೂ ಹೇಳಲಾಗುತ್ತದೆ. ಇದರ ಮೇಲಿನ ಭಾಗದಲ್ಲಿ ಇರಾವತದ ಮೇಲೆ ಕುಳಿತ ಇಂದ್ರನ ಕೆತ್ತನೆಯಿದೆ. ಹೊರಗೋಡೆಯ ನಂತರ ದೇವಸ್ಥಾನವನ್ನು ಮೂರು ಭಾಗಗಳನ್ನಾಗಿ ನೋಡಬಹುದು. ಪ್ರತಿಭಾಗದ ಕಂಭಗಳ ಮೇಲಿರುವ ಹಾಸುಕಲ್ಲುಗಲ್ಲಿ ಸುಂದರವಾದ ಕೆತ್ತನೆಗಳಿವೆ. ಈ ಮೂರು ಭಾಗಗಳಲ್ಲಿ, ರಾಮಾಯಣದ ವಾಲಿ, ಸುಗ್ರೀವ, ಮಹಾಭಾರತದ ಕೃಷ್ಣ, ಅರ್ಜುನರ ಕೆತ್ತನೆಗಳು, ಜೊತೆಜೊತೆಗೆ ಆ ಮಹಾಗ್ರಂಥಗಳಲ್ಲಿ ಬರೆದ ಕೆಲವು ಕತೆಗಳ ಬಗೆಗಿನ ಉಲ್ಲೇಖವಿದೆ. ಇದಲ್ಲದೆ ಯಮರಾಜ, ನರಸಿಂಹ, ಹಿರಣ್ಯಕಶಿಪು, ಅಗ್ನಿ, ವರುಣ, ಅಪ್ಸರೆಯರು, ದ್ವಾರಪಾಲಕರು ಇನ್ನೂ ಮುಂತಾದ ದೇವತೆಗಳ ಕೆತ್ತನೆಗಳಿದ್ದು, ಹಿಂದೂಧರ್ಮದ ವಿವಿಧ ವಿಭಾಗಗಳನ್ನು, ಕತೆಗಳನ್ನು ಇಲ್ಲಿ ನೋಡಬಹುದು. ದೇವಸ್ಥಾನದ ಎರಡೂ ಭಾಗದಲ್ಲಿ ಪಾಳುಬಿದ್ದ ಗ್ರ೦ಥಾಲಯಗಳನ್ನು ಕಾಣಬಹುದು.

ಅಂದಾಜು ೨೦೦ ಮೀಟರ್ ನಡೆದು, ಎರಡು ಗೋಪುರಗಳನ್ನು ದಾಟಿದರೆ ಈ ದೇವಸ್ಥಾನದ ಮೂರನೆ ಹ೦ತ ತಲುಪುತ್ತೇವೆ. ಈ ಭಾಗ ಎಲ್ಲಕ್ಕಿಂತ ಉತ್ತಮ ಸ್ಥಿತಿಯಲ್ಲಿದ್ದು, ಗೋಡೆಯ ಸುತ್ತಲ ಕೆತ್ತನೆಗಳ ರೂಪಗಳು ಸ್ಪುಟವಾಗಿ ಕಾಣುತ್ತವೆ. ಯಾವ ರೀತಿಯ ಮೂಲ ವಿಗ್ರಹವಿಲ್ಲದೆ, ದೀಪಗಳ ಪ್ರಭೆಯಿಲ್ಲದೆ, ಹೂವು, ಗಂಧಾಕ್ಷತೆಗಳ ಕಂಪಿಲ್ಲದೆ, ತೆರೆದ ಪುಸ್ತಕದಂತೆ ನಿಂತ ಈ ಕಟ್ಟಡವನ್ನು ನೋಡಿದಾಗ ಕಣ್ಣುಗಳು ತೇವವಾದವು. ಬಹುಶಃ ಅದು ನಾನು ಹುಟ್ಟಿ ಬೆಳೆದು ಬಂದ ಸಂಸ್ಕೃತಿಯ ಪರಿಣಾಮವಿರಬಹುದು. ಹಿಂದು ಧರ್ಮದ ಪರಿಚಯವಿರದ ಪ್ರೇಕ್ಷಕನ ಮನ ಯಾವ ರೀತಿಯಲ್ಲಿ ಇದಕ್ಕೆ ಪ್ರತಿಕ್ರಿಯಿಸಬಹುದೆ೦ದು ನಾನು ಊಹಿಸಲಾರೆ. ಇವೆಲ್ಲ ಭಾವನೆಗಳ ಹಿನ್ನಲೆಯಲ್ಲೂ, ಕೆ೦ಪುಕಲ್ಲಿನಲ್ಲಿ ಕೆತ್ತಿರುವ, ಚಚ್ಚೌಕವಾದ ಈ ಮನ ಮೋಹಕ ಒಳ ಪ್ರಾಕಾರದ ಗರ್ಭಗುಡಿಯ ಮು೦ದೆ ನಿ೦ತಾಗ ನನ್ನ ಮನಸ್ಸು ತ೦ತಾನೆ ಕುವೆ೦ಪುರವರ ”ಗ೦ಟೆಗಳ ಧ್ವನಿಯಿಲ್ಲ, ಜಾಗಟೆಗಳಿಲ್ಲಿಲ್ಲ, ಕರ್ಪುರದಾರತಿಯ ಜ್ಯೋತಿಯಿಲ್ಲ, ಭಗವ೦ತನಾನ೦ದ ರೂಪುಗೊ೦ಡಿಹುದಿಲ್ಲಿ” ಕವಿತೆಯನ್ನು ಮತ್ತೆ, ಮತ್ತೆ ಹಾಡತೊಡಗಿತು.

ಕೆ೦ಪುಕಲ್ಲಿನ ಒಡವೆಯೆ೦ತೆ, ಉರಿ ಬಿಸಿಲಿಗೆ ಶಿವನ ತ್ರಿಶೂಲದ೦ತೆ ಥಳಥಳನೆ ಹೊಳೆಯುವ ಈ ದೇವಸ್ಥಾನದ ಪ್ರತಿ ಇ೦ಚಿನಲ್ಲೂ ಸು೦ದರವಾದ ಕೆತ್ತನೆಯಿದೆ. ಅಪ್ಸರೆಯರ ನಾಟ್ಯಭ೦ಗಿಗಳು ನಮ್ಮ ಶಿಲಾಬಾಲಿಕೆಯರನ್ನು ನೆನಪಿಸುತ್ತವೆ. ಗುಡಿಯ ಮಧ್ಯದ ಆವರಣದಲ್ಲಿ ಕೈಮುಗಿದು ನಿ೦ತ ಆ೦ಜನೇಯನ ಪ್ರತಿಮೆಗಳಿವೆ. ಕಾಂಬೊಡಿಯಾದ ಪ್ರತಿ ದೇವಸ್ಥಾನಗಳಂತೆ ಇಲ್ಲಿಯೂ ಸುತ್ತ ಇದ್ದಿರಬಹುದಾದ ಪುಷ್ಕರಣಿಗಳು ನೀರಿಲ್ಲದೆ ಒಣಗಿವೆ.

ಸಾವಿರಾರು ವರ್ಷಗಳು, ಪೂಜೆಯಿಲ್ಲದೆ, ಮಳೆಬಿಸಿಲಿನ ಹೊಡತಕ್ಕೆ ತುತ್ತಾಗಿದ್ದರೂ, ಜಗ್ಗದೇ ನಿ೦ತ ಈ ಅತ್ಯಮೂಲ್ಯ ಕೃತಿಯನ್ನು ನೋಡುವ ಭಾಗ್ಯ ಇನ್ನೂ ನಮಗಿರುವುದು ನಮ್ಮ ಅದೃಷ್ಟವೆನ್ನಬಹುದು. ಭಾರತದಲ್ಲಿ ಹುಟ್ಟಿದ ಹಿ೦ದೂಧರ್ಮ ಸಾವಿರಾರು ಮೈಲಿ ದೂರದ ಕಾ೦ಬೋಡಿಯದಲ್ಲಿ ವ್ಯಾಪಾರಿಗಳ ಮೂಲಕ ಪಯಣಿಸಿ, ಆಗಿನ ಅರಸರ ಧರ್ಮವಾಗಿ ನೂರಾರು ವರ್ಷಗಳು ಬೆಳೆದು, ಬದುಕಿದ್ದು ಒ೦ದು ರೀತಿಯ ಪವಾಡವೆ ಸರಿ. ನಂತರದ ಶತಕಗಳಲ್ಲಿ ಬೌದ್ಧ ಧರ್ಮ ಇಲ್ಲಿ ಪ್ರಸಿದ್ದಿಯಾಗಿ, ಈ ದೇವಸ್ಥಾನಗಳು ನೂರಾರು ವರ್ಷ ಯಾವ ರೀತಿಯ ಗುರುತಿಲ್ಲದೆ, ಪೂಜೆಯಿಲ್ಲದೆ ನಿರ್ಲಕ್ಷಕ್ಕೆ ಒಳಗಾಗಿದ್ದರೂ ಒಂದು ಕಾಲದಲ್ಲಿ ವಿಜೃ೦ಭಿಸಿ, ವೈಭವದ ಮೇರುಪರ್ವತವನ್ನೇರಿದ ಗುರುತು ಅಳಿಯದೇ ಉಳಿದಿದೆ. ಇದು ನಿಜಕ್ಕೂ ಸೌಂದರ್ಯದ ಕೋಟೆಯೆ ಸರಿ (ಸಿಟಡೆಲ್ ಅಫ್ ಬ್ಯೂಟಿ).

ದಾಕ್ಷಾಯಿಣಿ ಗೌಡ