ಕಿರಿಕ್ ಪಾರ್ಟಿ ಚಿತ್ರ ವಿಮರ್ಶೆ

kirik-party-1

(ಕನ್ನಡ ಚಲನ ಚಿತ್ರಗಳನ್ನು ಕೆಲವು ವರ್ಷಗಳ ಹಿಂದೆ ಲಂಡನ್ ಮತ್ತು ಬರ್ಮಿಂಗ್ ಹ್ಯಾಮ್ ನಗರಗಳಲ್ಲಿ ಆಗೊಮ್ಮೆ ಈಗೊಮ್ಮೆ ಪ್ರದರ್ಶಿಸಲಾಗಿತ್ತು. ಕನ್ನಡ ಬಳಗ ಈ ಚಟುವಟಿಕೆಗಳಿಗೆ ಪ್ರಚಾರ ಒದಗಿಸಿ ಕೆಲವು ಸ್ಥಳೀಯ ಕನ್ನಡಿಗರು ಸೇರಿ ವೀಕ್ಷಿಸುತ್ತಿದ್ದೆವು. ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಯಶಸ್ವಿಯಾಗಿರುವ ಕನ್ನಡ ಚಿತ್ರಗಳು, ಇಲ್ಲಿಯ ಅನಿವಾಸಿ Distributor ಗಳ ಸಹಕಾರದಿಂದ ಯು.ಕೆಯ ಹಲವಾರು ನಗರಗಳಲ್ಲಿ ಪ್ರದರ್ಶನವಾಗುತ್ತಿವೆ. ಕೆಲವು ಪ್ರಿಮಿಯರ್ ಶೋ ಗಳಿಗೆ ಸಿನಿಮಾದ ಹಿರೋಗಳು ಬಂದು ಭಾಗವಹಿಸುವ ಮಟ್ಟವನ್ನು ತಲುಪಿದ್ದೇವೆ.

ಕನ್ನಡ ಚಿತ್ರಗಳಿಗೆ  ಧಿಡೀರನೆ ಒಂದು ಹೊರದೇಶದ  ಮಾರುಕಟ್ಟೆ ದೊರಕಿದೆ. ಈ ಹೊಸ ಬೆಳವಣಿಗೆ ಚಿತ್ರ ನಿರ್ಮಾಪಕರಿಗೆ ಆರ್ಥಿಕ ಸುಭದ್ರತೆಯನ್ನು ಕೊಟ್ಟಿರುವುದಲ್ಲದೆ ನಿರ್ದೇಶಕರಿಗೂ ಮತ್ತು ಕಲಾವಿದರಿಗೂ ಹುರುಪು ಪ್ರೋತ್ಸಾಹ ಗಳನ್ನು ಒದಗಿಸಿ ಉತ್ತಮ ಚಿತ್ರಗಳನ್ನು ಹೊರತರುವ ಅವಕಾಶ ಕಲ್ಪಿಸಿದೆ. ಇದರಿಂದ ಅನಿವಾಸಿ ಕನ್ನಡಿಗರಿಗೆ ಅವರ ತಾಯ್ನಾಡಿನ ಭಾಷೆ , ನೋಟ ಮತ್ತು ಬದುಕನ್ನು ಬೆಳ್ಳಿ ತೆರೆಯ ಮೇಲೆ ಅನುಭವಿಸುವ ಅವಕಾಶ ಒದಗಿದೆ. ಈ ಚಿತ್ರಗಳ ಮೂಲಕ ತಮ್ಮ ಮಕ್ಕಳಿಗೆ ಅನಾಯಾಸವಾಗಿ ಕನ್ನಡವನ್ನು ಪರಿಚಯಿಸುವ ಅವಕಾಶ ಲಭ್ಯವಾಗಿದೆ. ಜೊತೆಗೆ ಇಂಗ್ಲಿಷ್ ಟೈಟಲ್ಗಳನ್ನು  ಒದಗಿಸಿರುವುದರಿಂದ ಯುವ ಪೀಳಿಗೆ ಈ ಚಿತ್ರಗಳನ್ನು ನೋಡಲು ಅನುಕೂಲವಾಗಿದೆ. ಕೆಲವು ನಿರ್ದೇಶಕರು ತಮ್ಮ ಚಿತ್ರಕ್ಕೆ ಬಂಡವಾಳದ ಭಾಗವನ್ನು ಅನಿವಾಸಿ ಕನ್ನಡಿಗರಿಂದ ಹೊಡಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಈ ಮೇಲಿನ ಬೆಳವಣಿಗೆಗಳು ಕನ್ನಡ ಚಿತ್ರರಂಗವನ್ನು ಸಂವೃದ್ಧಿಗೊಳಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸೋಣ.

ಕಿರಿಕ್ ಪಾರ್ಟಿ ಎಂಬ ಚಿತ್ರ ಕರ್ನಾಟಕದಲ್ಲಿ ಹೌಸ್ ಫುಲ್ ವೀಕ್ಷಣೆ ಪಡೆದು ಜನಪ್ರಿಯವಾಗಿದೆ. ಈ ಚಿತ್ರ ಕಳೆದ ೨-೩ ವಾರಗಳಲ್ಲಿ ಯು.ಕೆ ಆದ್ಯಂತ ಹಲವು ಪ್ರದರ್ಶನಗಳನ್ನು ಕಂಡಿದ್ದು ಇದರ ಯಶಸ್ಸಿನ ಹಿನ್ನೆಲೆ ವಿಮರ್ಶಿಸುವ ಕಾರ್ಯವನ್ನು ವೈಶಾಲಿ ದಾಮ್ಲೆ  ಮತ್ತು ಕೇಶವ್ ಕುಲಕರ್ಣಿಯವರು ಕೈಗೊಂಡು ನಮ್ಮ ಜೊತೆ ಹಂಚಿಕೊಂಡಿದ್ದಾರೆ.ವೈಶಾಲಿ ನಮ್ಮ ‘ಅನಿವಾಸಿ’ ಗೆ ಸೇರಿಕೊಂಡ ನೂತನ ಪ್ರತಿಭೆ. ಮೂಲತಃ ಧರ್ಮಸ್ಥಳದವರಾಗಿದ್ದು ಮಂಗಳೂರಿನಲ್ಲಿ MBBS ಮುಗಿಸಿ ಕಳೆದ ಹತ್ತು ವರ್ಷಗಳಿಂದ ಇಲ್ಲಿ ನೆಲಸಿ ಸೈಕ್ಯಾಟರಿ ತಜ್ಞರಾಗಿ ಮ್ಯಾನ್ ಚೆಸ್ಟರ್ ನಲ್ಲಿ ವೃತ್ತಿ. ಪತಿ ಅನಿಲ್ ಮತ್ತು ಮಕ್ಕಳಾದ ಧಾತ್ರಿ ಮತ್ತು ಧೃತಿಯೊಂದಿಗೆ ಮ್ಯಾನ್ ಚೆಸ್ಟರ್ನಲ್ಲಿ ವಾಸವಾಗಿದ್ದಾರೆ. ಇವರಿಗೆ ಅನಿವಾಸಿ ಪರವಾಗಿ ತುಂಬು ಹೃದಯದ ಸ್ವಾಗತ. – ಸಂ)

***

‘ಕಿರಿಕ್ ಪಾರ್ಟಿ’  ಖಂಡಿತವಾಗಿಯೂ ಒಂದು ಶ್ಲಾಘನೀಯ ಪ್ರಯತ್ನ – ವೈಶಾಲಿ ದಾಮ್ಲೆ

img_5162

 

 

 

ಜಗದ ವಿದ್ಯಮಾನಗಳೆಲ್ಲ ಬೆಳಗ್ಗೆದ್ದರೆ ಬೆರಳ ತುದಿಗೇ ತಲುಪುವ ಯುಗ ಇದಾದ್ದರಿಂದ, ಕರ್ನಾಟಕದಲ್ಲಿ ‘ಕಿರಿಕ್ ಪಾರ್ಟಿ’ ಎಂಬ ಸಿನೆಮಾ ಬಿಡುಗಡೆ ಆದದ್ದು, ಹೌಸ್ ಫುಲ್ ಪ್ರದರ್ಶನಗಳನ್ನು ಕಾಣುತ್ತಿರುವುದು ಇತ್ಯಾದಿ ಸುದ್ದಿಗಳು ಕಳೆದೊಂದು ತಿಂಗಳಿಂದ ದಿನಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ದಿನವೂ ಕಣ್ಣಿಗೆ ಬೀಳುತ್ತಿವೆ. ಇದೇನಪ್ಪಾ ‘ಕಿರಿಕ್ ಪಾರ್ಟಿ’ ಅಂತ ಕುತೂಹಲದಿಂದ ಇದರ ಬಗ್ಗೆ ಒಂದು ಸ್ವಲ್ಪ ಓದಿಯೂ ಇದ್ದೆ. ಇಂತಹ ‘ಕಿರಿಕ್ ಪಾರ್ಟಿ’ ನಮ್ಮೂರಿನಲ್ಲೇ ಪ್ರದರ್ಶನ ಕಾಣುತ್ತಿದೆ ಎಂದು ಒಂದು ವಾರದ ಹಿಂದೆ ತಿಳಿಯಿತು. ”ಸಿನೆಮಾ ನೋಡಿ ಬರೋಣವೇ” ಎಂದು ನನ್ನವರು ಕೇಳಿದಾಗ ”ನಮಗೆ ಇಷ್ಟವಾಗುತ್ತದೆ ಅಂತೀರಾ? ಅದೇನೋ ಕಾಲೇಜು ಹುಡುಗರ ಕಥೆಯಂತೆ” ಅಂತ ಅನುಮಾನ ವ್ಯಕ್ತಪಡಿಸಿದ್ದೆ. ”ಇಲ್ಲಿ ನಮಗೆ ಕನ್ನಡ ಸಿನೆಮಾಗಳನ್ನು ನೋಡಲು ಸಿಗುವುದೇ ಅಪರೂಪ. ಚೆನ್ನಾಗಿದೆ ಅಂತ ಓದಿದೆ. ಚಿತ್ರೀಕರಣ ಬೇರೆ ನಮ್ಮೂರಲ್ಲಿ, ಅದೂ ಮನೆ ಪಕ್ಕದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ನಡೆದಿದೆ, ನೋಡಿ ಬರೋಣ ಬಾ” ಎಂದು ಇವರೆಂದಾಗ ಸರಿ ಎಂದು ಒಪ್ಪಿದ್ದೆ. ಇನ್ನು, ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ನಮ್ಮೂರಿನವನು, ಮುಂಚೆಯೂ ಕೆಲವು ಒಳ್ಳೆಯ ಚಿತ್ರಗಳನ್ನು ಕೊಟ್ಟವನು ಎಂಬ ಕಾರಣವೂ ಇತ್ತೆನ್ನಿ. ಅಂತೂ ಮೊನ್ನೆ ಶನಿವಾರದ ಸಂಜೆ ನಮ್ಮ ದೊಡ್ಡ ಮಗಳೊಂದಿಗೆ ‘ಕಿರಿಕ್ ಪಾರ್ಟಿ’ ನೋಡಲು ಹೊರಟೆವು.

ಚಿತ್ರದ ನಾಯಕ ಕರ್ಣ ಇಂಜಿನಿಯರಿಂಗ್ ವಿದ್ಯಾರ್ಥಿ. ಅವನು ಹಾಗೂ ಅವನ ಗೆಳೆಯರ ಗುಂಪೇ ‘ಕಿರಿಕ್ ಪಾರ್ಟಿ’. ಕಾಲೇಜು ಜೀವನದ ಹಲವು ಮುಖಗಳನ್ನು ಈ ಚಿತ್ರ ಹಂತ-ಹಂತವಾಗಿ, ಹಾಸ್ಯ, ಪ್ರೇಮ ಮತ್ತು ಕ್ರೌರ್ಯಗಳ ಮಿಶ್ರಣದೊಂದಿಗೆ ಪರಿಚಯಿಸುತ್ತದೆ. ಕಾಲೇಜು ಜೀವನದ, ಅದರಲ್ಲೂ ಹಾಸ್ಟೆಲ್ ಜೀವನದ ಅನುಭವ ಇರುವ ಎಲ್ಲರಿಗೂ ಈ ಚಿತ್ರ ಯಾವುದಾದರೂ ಒಂದು ರೀತಿಯಲ್ಲಿ ಬಹಳ ಹತ್ತಿರದ್ದೆನಿಸುತ್ತದೆ. ಇದರಲ್ಲಿ ಬರುವ ಒಂದಲ್ಲ ಒಂದು ದೃಶ್ಯದೊಂದಿಗೆ ನಮ್ಮ ಕಾಲೇಜು ಜೀವನದ ಘಟನೆಗಳು ತಾಳೆಯಾಗುತ್ತವೆ ಅನಿಸುತ್ತದೆ. ವೃತ್ತಿಪರ ಕಾಲೇಜುಗಳಿಗೆ ಪ್ರವೇಶ ಪಡೆದ ತಕ್ಷಣ ಪ್ರಪಂಚವನ್ನೇ ಗೆದ್ದವರಂತೆ,ಕಾಲೇಜು- ಹಾಸ್ಟೆಲ್ ಗಳ ನೀತಿ-ನಿಯಮಗಳ ಪರಿವೆಯೇ ಇಲ್ಲದಂತೆ ಇರುವ ಹುಡುಗ-ಹುಡುಗಿಯರನ್ನೆಲ್ಲ ನಾವು-ನೀವೆಲ್ಲರೂ ನೋಡಿದ್ದೇವೆ. ಇಂತಹ ‘ಕಿರಿಕ್ ಪಾರ್ಟಿ’ ಯ ಹುಡುಗರ ಯೋಚನೆಗಳು, ಅವರ ಜೀವನ ಮೌಲ್ಯಗಳು ಹೇಗೆ ಕಾಲ-ಕ್ರಮೇಣ ಬದಲಾಗುತ್ತವೆ, ಅವರು ಹೇಗೆ ತಮ್ಮನ್ನು ತಾವು ಕಂಡುಕೊಂಡು ಜವಾಬ್ದಾರಿಯುತ ನಾಗರಿಕರಾಗಿ ಬದಲಾಗುತ್ತಾರೆ ಎಂಬುದನ್ನು ಈ ಚಿತ್ರ ಬಹಳ ಪರಿಣಾಮಕಾರಿಯಾಗಿ ತೋರಿಸುತ್ತದೆ. ಚಿತ್ರದ ನಾಯಕ ಕರ್ಣನ ಈ ರೂಪಾಂತರಕ್ಕೆ ಕಾರಣರಾಗುವವರು ಅವನ ಸಹಪಾಠಿಗಳಾದ ಸಾನ್ವಿ ಹಾಗೂ ಆರ್ಯ.

‘ಉಳಿದವರು ಕಂಡಂತೆ’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’,  ‘ಸಿಂಪಲ್ ಆಗ್ ಒಂದು ಲವ್ ಸ್ಟೋರಿ’ ಇತ್ಯಾದಿ ಚಿತ್ರಗಳಲ್ಲಿ ಉತ್ತಮ ಅಭಿನಯ ನೀಡಿದ ರಕ್ಷಿತ್ ಶೆಟ್ಟಿ ಈ ಚಿತ್ರದಲ್ಲೂ ತನ್ನ ನಟನಾ ಕೌಶಲದಿಂದ ಮಿಂಚಿದ್ದಾನೆ. ಹೊಸಬರಾದ ರಶ್ಮಿಕಾ ಮಂದಣ್ಣ ಹಾಗೂ ಸಂಯುಕ್ತಾ ಹೆಗ್ಡೆ ತಮ್ಮ ಮುಗ್ಧತೆಯಿಂದ ಮನಸೂರೆಗೊಳ್ಳುತ್ತಾರೆ. ಅಜನೀಶ್ ಲೋಕನಾಥರ ಸಂಗೀತ ನೆನಪಿನಲ್ಲುಳಿಯುವಂತಿದೆ

ಇದಲ್ಲದೆ, ಕೆಲವು ಗಂಭೀರ ವಿಷಯಗಳನ್ನೂ ಚಿತ್ರ ಸಂಕ್ಷಿಪ್ತವಾಗಿ ಪರಿಗಣಿಸುತ್ತದೆ. ನಮ್ಮ ಮಡಿವಂತಿಕೆಯ ಸಮಾಜದಲ್ಲಿ ವೇಶ್ಯಾವೃತ್ತಿ ಶೀತ-ಜ್ವರಗಳಷ್ಟೇ ಸಾಮಾನ್ಯವಾಗಿದ್ದರೂ, ಜನರ ಕೆಂಗಣ್ಣಿಗೆ ಗುರಿಯಾಗುವುದು ವೇಶ್ಯೆ ಮಾತ್ರ, ಅವಳ ಅಸಹಾಯಕತೆಯನ್ನು ದುರ್ಬಳಕೆ ಮಾಡುವ ಗಂಡಸರಲ್ಲ ಎನ್ನುವುದು ಗೊತ್ತಿರುವ ವಿಚಾರವೇ ಆಗಿದ್ದರೂ ಇದನ್ನು ಮತ್ತೆ ಪರದೆಯ ಮೇಲೆ ಕಂಡು, ಕಣ್ಣು ಮಂಜಾಗಿದ್ದು ಸುಳ್ಳಲ್ಲ. ವೇಶ್ಯೆಯೊಬ್ಬಳಿಗೆ ಸಹಾಯ-ಹಸ್ತ ನೀಡುವ ಸಾನ್ವಿ ಹಾಗೂ ಕರ್ಣ, ಅವರಿಂದಾಗಿ, ಅವಳೊಂದು ಸಾಮಾನ್ಯ ಜೀವನ ನಡೆಸುವಂತೆ ಆಗುವ ಘಟನೆ ಮನಮಿಡಿಯುವಂತಿತ್ತು. ಹೆತ್ತವರಿಗೆ ತಮ್ಮ ಮಕ್ಕಳು ಉತ್ತಮ ನಾಗರಿಕರಾಗಿ ಬದುಕಬೇಕು ಎಂಬ ನಿರೀಕ್ಷೆ ಇರುವುದು ಎಷ್ಟು ಸಹಜವೋ, ಬೆಳೆಯುವ ವಯಸ್ಸಿನಲ್ಲಿ ಅವರು ಸಮಾನ-ವಯಸ್ಕರ ಪ್ರಭಾವಕ್ಕೊಳಗಾಗುವುದೂ ಅಷ್ಟೇ ಸಹಜ. ಈ ಹಂತದಲ್ಲಿ ಯುವಕ-ಯುವತಿಯರು ದಾರಿ ತಪ್ಪಿದರೆ, ಎಡವಿ ಬಿದ್ದರೆ, ಹೆತ್ತವರು ಹಾಗೂ ಅಷ್ಟೇ ಮುಖ್ಯವಾಗಿ ಶಿಕ್ಷಕರು ತಮ್ಮ ಘನತೆ-ಗೌರವಕ್ಕೆ ಧಕ್ಕೆ ಬಂತೆಂದು ಅವರನ್ನು ತಿರಸ್ಕರಿಸದೆ, ತಿಳಿಹೇಳಿ ಮುಕ್ತ ಮನಸ್ಸಿನಿಂದ ಅವರನ್ನು ಸ್ವೀಕರಿಸಿದರೆ, ಪರಿಣಾಮ ಒಳ್ಳೆಯದಾಗಬಹುದು ಎಂಬ ಸಂದೇಶವನ್ನೂ ಮನಮುಟ್ಟುವಂತೆ ನೀಡುತ್ತದೆ. ಇನ್ನು, ‘ಮಾಡರ್ನ್’ ಆಗುವ ಭರದಲ್ಲಿ, ಹುಡುಗರಿಗಿಂತ ನಾವೇನು ಕಮ್ಮಿ ಎಂದು ಹುಡುಗಿಯರೂ ಈಗ ಮದ್ಯ ಹಾಗೂ ಮಾದಕ ದ್ರವ್ಯಗಳನ್ನು ಸೇವಿಸುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಈ ‘ಮಾಡರ್ನ್’ ವರ್ತನೆಗಳಿಂದ ಅನಾಹುತಗಳೇನಾದರೂ ಸಂಭವಿಸಿದರೆ, ಹುಡುಗರನ್ನು ನೋಡುವ  ದೃಷ್ಟಿಯಿಂದ ಸಮಾಜ ಹುಡುಗಿಯರನ್ನು ಕಾಣುವುದಿಲ್ಲ, ಜನರ ಕಣ್ಣಿನಲ್ಲಿ ಅವರು ಎಂದಿಗೂ ತಪ್ಪಿತಸ್ಥರಾಗಿಯೇ ಇರುತ್ತಾರೆ ಎಂಬ ಕಠೋರ ಸತ್ಯವನ್ನೂ ಬಹಳ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.

kirik-party-image-3ವ್ಯಂಗ್ಯ ಚಿತ್ರ – ಕೃಪೆ ಲಕ್ಷ್ಮೀನಾರಾಯಣ ಗುಡೂರ್

ಆದರೆ, ಚಿತ್ರದಲ್ಲಿ ಹಿಂಸೆ-ಕ್ರೌರ್ಯಗಳ ವೈಭವೀಕರಣ ಸ್ವಲ್ಪ ಜಾಸ್ತಿಯೇ ಇತ್ತು ಎಂದು ನನಗನ್ನಿಸಿತು. ಅಲ್ಪಪ್ರಾಣ- ಮಹಾಪ್ರಾಣಗಳು ಕನ್ನಡ ಭಾಷೆಯ ಅವಿಭಾಜ್ಯ ಅಂಗ ಎಂದು ನಂಬಿರುವ ನನಗೆ, ‘ಗರ್ಬಕೋಶ’, ‘ಚಕ್ರವ್ಯೂಹವನ್ನು ಬೇದಿಸಿದ ಅಬಿಮನ್ಯು’ ‘ಕರ್ಣ ಕರೀದಿಸಿದ ಕಾರು’ ಇತ್ಯಾದಿ ಭಾಷಾದೋಷಗಳು ಸಿಹಿ ಅವಲಕ್ಕಿಯೊಳಗಿನ ಕಲ್ಲಿನಂತೆ ಎತ್ತಿ ಕಾಣಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ. ಇನ್ನು, ಕುಡಿತ ಹಾಗೂ ಸಿಗರೇಟು ಸೇವನೆಯ ದೃಶ್ಯಗಳ ಪ್ರಮಾಣವಂತೂ ಉಸಿರುಗಟ್ಟಿಸುವಂತಿತ್ತು. ನಾನು ಮೊದಲು ಹೇಳಿದಂತೆ, ಕಾಲೇಜು ಜೀವನದಲ್ಲಿ ಕುಡಿತ, ಸಿಗರೇಟುಗಳೊಂದಿಗೆ ‘ಎಕ್ಸ್ ಪೆರಿಮೆಂಟ್’ ಮಾಡುವ ಹಲವರನ್ನು ನಮ್ಮಲ್ಲಿ ಬಹಳಷ್ಟು ಜನ ಕಂಡಿದ್ದೇವಾದರೂ, ಇವೆಲ್ಲ ಕಾಲೇಜು ಜೀವನದ ಅನಿವಾರ್ಯ ವಿಷಯಗಳು, ರಾತ್ರಿ ಹೊತ್ತು ಹಾಸ್ಟೆಲ್ ಗೆ ಬಂದು ಎಲ್ಲರೂ ಮಾಡುವುದೇ ಇದನ್ನು, ಅದೇನೂ ದೊಡ್ಡ ವಿಷಯವಲ್ಲಎಂಬಂತೆ ಬಿಂಬಿಸಿದ್ದನ್ನು ನೋಡಿ, ನನ್ನೊಳಗಿನ ಸಂಪ್ರದಾಯಸ್ಥ ತಾಯಿ ಜಾಗೃತಳಾಗಿದ್ದಳು. ‘Where do we draw the line between what is acceptable and what is not’ ಎಂದು ನಿಷ್ಕರ್ಷಿಸುತ್ತಲೇ ನಾನು ಸಿನೆಮಾ ಮಂದಿರದಿಂದ ಹೊರಬಂದೆ.

ಒಟ್ಟಿನಲ್ಲಿ, ಕನ್ನಡ ಸಿನೆಮಾ ಜಗತ್ತಿನಲ್ಲಿ ಉತ್ತಮ ಚಿತ್ರಗಳು ಬರುತ್ತಿರುವುದು ಸ್ವಾಗತಾರ್ಹ.

ಇತ್ತೀಚಿನ ಕನ್ನಡ ಸಿನೆಮಾಗಳ ಕೀಳು ಹಾಸ್ಯ, ಮುಜುಗರ ಬರಿಸುವ ಸಂಭಾಷಣೆ, ಅರ್ಥವಿಲ್ಲದ ಸಾಹಿತ್ಯ ಇತ್ಯಾದಿಗಳಿಂದ ಬೇಸತ್ತಿದ್ದ ಕನ್ನಡಾಭಿಮಾನಿಗಳು ಮತ್ತೆ ಚಿತ್ರಮಂದಿರಗಳತ್ತ ಹೋಗುವಂತೆ ಪ್ರೇರೇಪಿಸುತ್ತಿರುವ ಚಿತ್ರಗಳು ಈಗ ಮತ್ತೆ ಮೂಡಿಬರುತ್ತಿರುವುದು  ತುಂಬಾ ಸಂತೋಷದ ವಿಷಯ. ಈ ನಿಟ್ಟಿನಲ್ಲಿ ‘ಕಿರಿಕ್ ಪಾರ್ಟಿ’ ಖಂಡಿತವಾಗಿಯೂ ಒಂದು ಶ್ಲಾಘನೀಯ ಪ್ರಯತ್ನ. ಚಿತ್ರದ ಎರಡನೇ ಹಂತ ಸ್ವಲ್ಪ ದೀರ್ಘವೆನಿಸಿದರೂ,  ಎಲ್ಲಿಯೂ ನೀರಸತೆಯ ಭಾವ ಕಾಡದಂತೆ, ಕೆಲವು ಅನಿರೀಕ್ಷಿತ ಬೆಳವಣಿಗೆಗಳೊಂದಿದೆ ಪ್ರೇಕ್ಷಕರ ಮನಸ್ಸನ್ನು ಸೆರೆಹಿಡಿಯುವಲ್ಲಿ ಚಿತ್ರ ಯಶಸ್ವಿಯಾಗಿದೆ. ನಮ್ಮ-ನಿಮ್ಮೆಲ್ಲರನ್ನೂ ನೆನಪಿನಂಗಳದಲ್ಲೊಂದು ವಾಕ್ ಮಾಡಿಸಿ ಬರುತ್ತದೆ, ಮುಖದಲ್ಲೊಂದು ನಗು ಮೂಡಿಸುತ್ತದೆ.  ಕಾಲೇಜು ಜೀವನದ ಉತ್ಸಾಹ, ಅಲ್ಲಿಯ ಆಗು-ಹೋಗುಗಳು, ಕಾಲೇಜು ವಿದ್ಯಾರ್ಥಿಗಳ ದೃಷ್ಟಿಯಿಂದ ನೋಡಿದರೆ ಬಹಳ ಚೆನ್ನಾಗಿ ಚಿತ್ರಿತವಾಗಿವೆ.  ಸದಭಿರುಚಿಯ, ನಾವೆಲ್ಲರೂ  ಕುಟುಂಬದೊಡನೆ ಕುಳಿತು ನೋಡಬಹುದಾದ ಇನ್ನಷ್ಟು ಸಿನೆಮಾಗಳು ಕನ್ನಡದಲ್ಲಿ ಮೂಡಿಬರುತ್ತವೆ ಎಂದು ಆಶಿಸೋಣ. ಕನ್ನಡದ ಪ್ರತಿಭೆಗಳು ನಟಿಸಿರುವ, ನಿರ್ಮಿಸಿರುವ, ಒಳ್ಳೆಯ ಚಿತ್ರಗಳು ಬಂದಾಗ ಕೊಂಕು ನುಡಿಯುವುದನ್ನು ಬಿಟ್ಟು, ಅವುಗಳನ್ನು ಪ್ರೋತ್ಸಾಹಿಸೋಣ. ಹೀಗಾದರೆ, ಕನ್ನಡ ಚಿತ್ರರಂಗ ಡಾಕ್ಟರ್ ರಾಜ್, ಡಾಕ್ಟರ್ ವಿಷ್ಣುವರ್ಧನ್ ರವರ ಕಾಲದಲ್ಲಿ ಇದ್ದಂತೆ ಮತ್ತೆ ಉತ್ತುಂಗಕ್ಕೇರುವ ದಿನ ಬರಬಹುದು.

***

`ಪ್ರೇಮಲೋಕ`ದಿಂದ `ಕಿರಿಕ್ ಪಾರ್ಟಿ`- ಕೇಶವ್ ಕುಲಕರ್ಣಿ

೧೯೮೭:

ನಾನಿನ್ನೂ ಕಾಲೇಜಿಗೆ ಕಾಲಿಟ್ಟಿರಲಿಲ್ಲ. `ಈ ನಿಂಬೆಹಣ್ಣಿನಂಥ ಹುಡುಗಿ ಬಂತು ನೋಡೋ`, `ಚಲುವೆ ಒಂದು ಕೇಳ್ತೀನಿ, ಇಲ್ಲ ಅಂದೇ (ಅನ್ನದೇ ಅಲ್ಲ) ಕೊಡ್ತೀಯಾ?`, `ನೋಡಮ್ಮಾ ಹುಡುಗಿ ಕೇಳಮ್ಮಾ ಸರಿಯಾಗಿ`,  ಎಂದು ಮಾತಾಡುವಂಥ ವಾಕ್ಯಗಳ ಹಾಡು ಕಿವಿಗೆ ಬಿದ್ದವು. ಚಿ ಉದಯ ಶಂಕರ್ ಅವರ ಸರಳಿತ ಸುಲಲಿತ, ವಿಜಯ ನಾರಸಿಂಹ ಅವರ ಕ್ಲಿಷ್ಟಪದಗಳ ಹಾಡುಗಳನ್ನು ಕೇಳಿ ಬೆಳೆದ ನನಗೆ ಮೊದಮೊದಲು ಸ್ವಲ್ಪ ಕಸಿವಿಸಿಯೇ ಆಯಿತು. We all resist change. ಆದರೆ ಸ್ವಲ್ಪೇ ದಿನಗಳಲ್ಲಿ ಹಾಡುಗಳು ಹುಚ್ಚು ಹಿಡಿಸಿದವು, ಬಾಯಿಪಾಠ ಆದವು. ಹೊಸಪರಿಭಾಷೆಯ ಸಾಹಿತ್ಯ ಮತ್ತು ಸಂಗೀತದ ಹೊಸತನ ಮಲಗಿದ್ದ ಕನ್ನಡ ಚಿತ್ರಸಂಗೀತವನ್ನು ಬಡಿದೆಬ್ಬಿಸಿತು. ಇನ್ನೂ ಕಾಲೇಜಿನ ಮೆಟ್ಟಿಲು ಹತ್ತಿಲ್ಲದಿದ್ದರೂ ಕಾಲೇಜಿಗೆ ಹೋಗುವ ಅಣ್ಣ ಇದ್ದ, ಬಳಗದ ಜನ ಇದ್ದರು, ಗೆಳೆಯರ ಅಣ್ಣ ತಂಗಿಯರಿದ್ದರು. ಎಲ್ಲರ ಬಾಯಲ್ಲೂ `ಪ್ರೇಮಲೋಕ`ದ ಹಾಡುಗಳೇ. ಈ ಸಿನೆಮಾ ಮಹತ್ವದ್ದಾಗುವುದು ಬರೀ ಹಾಡುಗಳಿಂದಲ್ಲ. ಹಾಡುಗಳ ಮೂಲಕ ಸಿನೆಮಾದ ಕತೆ ಹೇಳುವ, ಕಾಲೇಜು ಬದುಕಿನ ಪ್ರೇಮವನ್ನು ಪಡ್ಡೆ ಹುಡುಗರ ದೃಷ್ಟಿಯಿಂದ ತೋರಿಸಿತು. ಸಿನೆಮಾ ಯಾವಾಗ ನಮ್ಮೂರಿಗೆ ಬರುತ್ತೋ ಎಂದು ಕಾದಿದ್ದೇ ಕಾದಿದ್ದು. ಕಾಲೇಜಿನ ಬಗ್ಗೆ ಅದೇ ಮೊದಲ ಸಿನೆಮಾ ಏನಲ್ಲ. ಆದರೆ ಪ್ರೇಮಲೋಕ ಕನ್ನಡ ಕಮರ್ಷಿಯಲ್ ಚಿತ್ರದ ಒಂದು ಮಹತ್ವದ ಮೈಲುಗಲ್ಲಯಿತು. ಕಾಲೇಜ್ ಲೈಫನ್ನು ಬೆಳ್ಳಿಪರದೆ ಮೇಲೆ ಅಜರಾಮರವಾಗಿಸಿತು. ತುಂಡುಲಂಗದ ಜೂಹಿ ಚಾವ್ಲಾ ಹುಡುಗರ ಎದೆಯಲ್ಲಿ ಭದ್ರವಾದರು. ತುಟಿಗೆ ತುಟಿಯಿಟ್ಟು ಮುತ್ತನಿತ್ತು ಹುಡುಗರಿಗೆ ಹುಚ್ಚುಹಿಡಿಸಿದರು.

೨೦೧೬-೨೦೧೭:

ಫಾಸ್ಟ್ ಪಾರ್ವರ್ಡ್ ೨೦ ಇಯರ್ಸ್. `ಬೆಳಗೆದ್ದು ಯಾರ ಮುಖವ ನಾನು ನೋಡಿದೆ`, `ಸಾರ್, ತಿರ್ಬೋಕಿ ಜೀವನಾ ನಮ್ಮದಲ್ಲ`, ಎನ್ನುವ ಹಾಡುಗಳು ಕನ್ನಡಿಗರ ಫೋನುಗಳಲ್ಲಿ ಗುಣಗುಣಿಸುತ್ತಿದೆ. ಈಗ ಕೆಲ ವರ್ಷದಿಂದ ಯೋಗರಾಜ ಭಟ್ಟರು ಕನ್ನಡ ಹಾಡುಗಳನ್ನು ಬರೆಯುವ ಶೈಲಿಯನ್ನೇ ಬದಲಾಯಿಸಿದರು (ಹಳೆಪಾತ್ರೆ ಹಳೆಕಬಣ ಹಳೆ ಪೇಪರ್ ತರ ಹೋಯಿ). ಅಲ್ಲಿಂದ ಶುರುವಾದ ಟ್ರೆಂಡು `ಕಿರಿಕ್ ಪಾರ್ಟಿ`ಯಲ್ಲಿ ಮುಂದುವರೆದಿದೆ.

ಮತ್ತೆ ಕಾಲೇಜು ಲೈಫು. ಮತ್ತೊಂದು ಪ್ರೇಮಲೋಕ ಎಂದುಕೊಂಡರೆ ಅದು ಶುದ್ಧ ಸುಳ್ಳು. ಇಲ್ಲಿ ಪ್ರೇಮವಿದೆ, ಆದರೆ ಅದೇ ಮುಖ್ಯ ಎಳೆ ಅಲ್ಲ. ಇಂಜಿನಿಯರಿಂಗ್ ಕಾಲೇಜಿದೆ ಎಂದ ಮಾತ್ರಕ್ಕೆ `ಥ್ರಿ ಇಡಿಯಟ್ಸ್` ನ ನಕಲು ಆಗಿಲ್ಲ, ಎಲ್ಲಿಯೂ ಪ್ರೀಚ್ ಮಾಡುವುದೇ ಇಲ್ಲ. ಹುಡುಗಿಯರು ತುಂಡುಲಂಗ ಹಾಕುವುದಿಲ್ಲ, ಎದೆಸೀಳು ತೋರಿಸುವುದಿಲ್ಲ.  ತುಟಿಗೆ ತುಟಿಯಿಟ್ಟು ಮುತ್ತನಿಡುವುದಿಲ್ಲ. ಆದರೆ ಸಿನೆಮಾ ಬಾಕ್ಸಾಫೀಸನ್ನು ದೋಚುತ್ತಿದೆ.

ಇಪ್ಪತ್ತು ವರ್ಷಗಳಲ್ಲಿ ಎಷ್ಟೊಂದು ಬದಲಾಗಿದೆ!

ಮಲಯಾಳಂನಲ್ಲಿ ಕಾಲೇಜ್ ಜೀವನದ ಬಗ್ಗೆ ಅದ್ಭುತ ಸಿನೆಮಾಗಳನ್ನು ಮಾಡಿದ್ದಾರೆ. ಅದರಲ್ಲಿ ಸುಮಾರು ಸಿನೆಮಾಗಳು ಕನ್ನಡಕ್ಕೂ ಬಂದಿದೆ. `ಅಟೋಗ್ರಾಫ್`, `ಪ್ರೇಮಂ` ಉದಾಹರಣೆಗಳು. `ಕಿರಿಕ್ ಪಾರ್ಟಿ` ಅದಕ್ಕೊಂದು ಉತ್ತರ ಕೊಟ್ಟಿದೆ.

ಯಾವುದೇ ಬೋಧನೆ ಅಥವಾ ಉಪದೇಶದ ಹಂಗಿಲ್ಲದೇ ಒಂದು ದೊಡ್ಡ ಸೋಷಿಯಲ್ ಮೆಸೇಜನ್ನು ಹುಳ ಬಿಡುತ್ತದೆ ಈ ಚಿತ್ರ. ಈ ಲಾಸ್ಟ್ ಬೆಂಚ್ ಹುಡುಗರು ಮಾತೆತ್ತಿದರೆ ಕುಡಿಯುತ್ತಾರೆ, ಸೇದುತ್ತಾರೆ, ಬ್ಯಾಟು-ಸ್ಟಂಪು ಹಿಡಿದು ಹೊಡೆದಾಡಿಕೊಳ್ಳುತ್ತಾರೆ, ಸಸ್ಪೆಂಡಾಗುತ್ತಾರೆ, ಫೇಲಾಗುತ್ತಾರೆ, ಆನ್ಸರ್ ಪತ್ರಿಕೆಯನ್ನೇ ಕದ್ದು ಹಾಸ್ಟೇಲಿನಲ್ಲಿ ಕುಡಿಯುತ್ತ ಸೇದುತ್ತ ಜ್ಯೂನಿಯರುಗಳನ್ನು ಜಾನುವಾರುಗಳಂತೆ ಅಳಿಸುತ್ತ ಉತ್ತರ ಬರೆಯುತ್ತಾರೆ. ಆದರೆ ಈ ಹುಡುಗರ ಬಗ್ಗೆ ಯಾರೂ ಒಂದೇ ಒಂದು ಕೆಟ್ಟ ಮಾತು ಹೇಳುವುದಿಲ್ಲ.

ಆದರೆ ಹುಡುಗಿ, ಕುಡಿದು ಕುಣಿಯುತ್ತ ಅಕಸ್ಮಾತ್ತಾಗಿ ಬಿದ್ದು ಸತ್ತರೆ ಆ ವೀಡಿಯೋ ಮನೆ ಮನೆಯನ್ನೂ ತಲುಪಿ ಹುಡುಗಿಯ ಜನರ ಬಾಯಿಚಪಲದ ವಸ್ತುವಾಗುತ್ತಾಳೆ.  ತಂದೆಯ ಕಣ್ಣಲ್ಲಿ ಮಗಳು ನಿಷ್ಕೃಷ್ಟವಾಗುತ್ತಾಳೆ. ನಗಿಸುತ್ತ, ಎಪಿಸೋಡಿಕ್ ಆಗಿ ಕತೆ ಹೇಳುತ್ತ, ಎರಡೂವರೆ ಗಂಟೆ ಕಾಲೇಜು ಮತ್ತು ಕಾಲೇಜ್ ಹಾಸ್ಟೇಲಿನಲ್ಲಿ ನಮ್ಮನ್ನು ಕರೆದೊಯ್ಯುತ್ತಾರೆ.

ಬದಲಾಗುತ್ತಿರುವ ಸಮಾಜಕ್ಕೆ, ಎಲ್ಲರ ಕೈಯಲ್ಲಿ ಮೊಬೈಲ್ ಇರುವ ಜನಾಂಗಕ್ಕೆ ಈಗ ಮನರಂಜನೆ ಎಂದರೆ ಮರ ಸುತ್ತಿ ಕುಣಿಯುವ ಹಾಡುಗಳಲ್ಲ, ತುಂಡುಲಂಗದ ಹುಡುಗಿಯರಲ್ಲ, ಕ್ಯಾಬರೆಗಳಲ್ಲ. ಒಂದು ಚಿಕ್ಕ ಕತೆ, ಚಂದದ ಚಿತ್ರಕತೆ, ಅದಕ್ಕೊಪ್ಪುವ ಹಾಡುಗಳು, ಒಂದಿಷ್ಟು ನಗು, ಸ್ವಲ್ಪವೇ ಅಳು, ದಿನಾ ಮಾತಾಡುವಂಥ ಸಂಭಾಷಣೆ, ಸುಪ್ತವಾಗಿ ಹರಿಯುವ ಒಂದು ಮೆಸೇಜು ಇದ್ದರೆ ಜನ ಸಿನೆಮಾ ಹಾಲಿಗೆ ಬರುವಂತೆ ಮಾಡಬಹುದು ಎನ್ನುವುದಕ್ಕೆ ಈ ಸಿನೆಮಾ ಉದಾಹರಣೆ.

ಈ ಸಿನೆಮಾ ಏನು ಧಿಡೀರ್ ಎಂದು ಆದದ್ದಲ್ಲ. ಇದೇ ರಕ್ಷಿತ್ `ಉಳಿದವರು ಕಂಡಂತೆ` ಎನ್ನುವ `ರೋಶೋಮಾನ್` ತರಹದ ಸಿನೆಮಾ ಮಾಡಿದವರು. ಕಳೆದ ಕೆಲ ವರ್ಷ ಕನ್ನಡದಲ್ಲಿ ಹೊಸ ಹುಡುಗರು ವಿಭಿನ್ನ ಸಿನೆಮಾಗಳನ್ನು ಮಾಡುತ್ತಿದ್ದಾರೆ, ಅಷ್ಟೇ ಅಲ್ಲ, ಚೆನ್ನಾಗಿ ದುಡ್ಡು ಕೂಡ ಮಾಡುತ್ತಿದ್ದಾರೆ. `ರಂಗಿತರಂಗ`, `ಆಟಗಾರ`, `ಲೂಸಿಯಾ`, `ಯು ಟರ್ನ್`, ಕೆಲವು ಉದಾಹರಣೆಗಳು.

ಈ ಸಿನೆಮಾ, ಕಾಲೇಜು ಬರೀ ಪ್ರೇಮಿಸುವುದನ್ನು ಕಲಿಸುವುದಿಲ್ಲ, ನಗುವುದನ್ನು, ಗೆಳೆಯರನ್ನು, ವೈರಿಗಳನ್ನು, ಕುಡಿಯುವುದನ್ನು, ಸೇದುವುದನ್ನು, ವಿರಹವನ್ನು ಕಲಿಸುತ್ತದೆ ಎಂದು ಹದವಾಗಿ ಹೇಳುತ್ತದೆ, ಕಡೆಬೆಂಚಿನ ಹುಡುಗರ ದೃಷ್ಟಿಕೋನದಿಂದ.

ಬದಲಾಗುತ್ತಿರುವ ಹಿಂದೀ ಸಿನೆಮಾ ಸಂಗೀತದಂತೆಯೇ ಕನ್ನಡ ಸಂಗೀತವೂ ಬದಲಾಗುತ್ತಿದೆ. ಸಂಗೀತದಂತೆ ಸಿನೆಮಾ ಸಾಹಿತ್ಯವೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಹೊಸಕಾಲಕ್ಕೆ ಹೊಸಹುಡುಗರು ಹೊಸ ರೀತಿಯಲ್ಲಿ ಕತೆ ಹೇಳುತ್ತಿದ್ದಾರೆ, ಹೊಸ ರೀತಿಯಲ್ಲಿ ಹಾಡುತ್ತಿದ್ದಾರೆ. ಸಿನೆಮಾದಲ್ಲಿ ಕ್ಲೀಷೆಯಾಗಿರುವ ಸೀನುಗಳನ್ನು ಧಿಕ್ಕರಿಸಿ ಸೀನುಗಳನ್ನು ಹೆಣೆಯುತ್ತಿದ್ದಾರೆ.  ಇಂಗ್ಲಂಡಿಗೂ ಸಿನೆಮಾ ರಿಲೀಸ್ ಮಾಡಿ ನಮಗೆಲ್ಲ ಮುದನೀಡಿದ್ದಾರೆ. ಖುಷಿಯಾಗುತ್ತದೆ.

***

Advertisements

‘ಇಷ್ಟಕಾಮ್ಯ’ – ಡಾ.ಪ್ರೇಮಲತಾ ಬರೆದ ಸಿನಿಮಾ ವಿಮರ್ಶೆ

‘ಇಷ್ಟಕಾಮ್ಯ’ ಕನ್ನಡ ಚಲನಚಿತ್ರವನ್ನು ಅದರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್ ಇತ್ತೀಚಿಗೆ ಬ್ರಿಟನ್ ನ ಕೆಲ ಊರುಗಳಲ್ಲಿ ಬಿಡುಗಡೆ ಮಾಡಿದ್ದರು. ‘ಅನಿವಾಸಿ’ ಬಳಗದ ಡಾ.ಪ್ರೇಮಲತಾರವರು ಚಂದ್ರಶೇಖರ್ ರ ಜೊತೆ ನಡೆಸಿದ ಸಂದರ್ಶನವನ್ನು ‘ಅನಿವಾಸಿ’ ಪ್ರಕಟಿಸಿತ್ತು- ಡಾ. ನಾಗತಿಹಳ್ಳಿ ಚಂದ್ರಶೇಖರ ರೊಡನೆ ಸಂದರ್ಶನ-ಡಾ. ಪ್ರೇಮಲತ ಬಿ.. ಪ್ರೇಮಲತಾ ಬರೆದಿರುವ ‘ಇಷ್ಟಕಾಮ್ಯ’ ಚಲನಚಿತ್ರದ ವಿಮರ್ಶೆ ಇಲ್ಲಿದೆ.

ಸಿಂಗಪುರದ ಕನ್ನಡ ಸಂಘ ಏರ್ಪಡಿಸಿದ್ದ ಸಾಹಿತ್ಯ ಸ್ಪರ್ಧೆಯ ಅನಿವಾಸಿಗಳ ವಿಭಾಗದಲ್ಲಿ ಪ್ರೇಮಲತಾರ ಸಣ್ಣ ಕಥೆ ‘ಸ್ವಾತಂತ್ರ್ಯ’ ಕ್ಕೆ ಪ್ರಥಮ ಬಹುಮಾನ ದೊರಕಿದೆ. ಅವರಿಗೆ ‘ಅನಿವಾಸಿ’ಯ ಅಭಿನಂದನೆಗಳು.

ಮರೆಯುವ ಮುನ್ನ – ಈ ನವೆಂಬರ್ ತಿಂಗಳ ಕನ್ನಡ ರಾಜ್ಯೋತ್ಸವದ ಶುಭಾಶಯಗಳು!

ಇಷ್ಟಕಾಮ್ಯ– ಸಿನಿಮಾ ವಿಮರ್ಶೆ

ಡಾ.ಪ್ರೇಮಲತಾ

ishtakaamya-poster-1

ಇಷ್ಟವಾದ ಕಾಮನೆಗಳೇ ಗಂಡು – ಹೆಣ್ಣಿನ ನಡುವಿನ ಪಾಸಿಟಿವ್ ಕೆಮಿಸ್ಟ್ರಿ!!

ಇವೇ ಸಂಬಂಧ/ಮದುವೆಯ ಮೂಲವಾಗಬಹುದು ಅಥವಾ ಪರಸ್ಪರರ ವ್ಯಕ್ತಿತ್ವಗಳ ಆಕರ್ಷಣೆ ಬೆಳೆದು ಸಾಂಗತ್ಯವನ್ನು ಮುಂದುವರೆಸುವ ಕಾರಣಕ್ಕೆ ಸಂಬಂಧ ಮುದ್ರೆಯ ಹೆಸರಲ್ಲಿ ಮದುವೆ ಸಂಭವಿಸಬಹುದು. ಮೇಲಿನೆರಡು ಸಂದರ್ಭಗಳಲ್ಲಿ ಹುಟ್ಟುವ ಕಾಮನೆಗಳು ಪರಸ್ಪರರಿಗೆ ಸಮ್ಮತವಾದವು. ಸಲಿಂಗ ಪ್ರೇಮದ  ಅಯಾಮವೂ ಇದೇ ವ್ಯಾಪ್ತಿಯಲ್ಲಿ ಬರುತ್ತದೆ. ಮದುವೆಯ ಹೊರತಾದ ಸಮ್ಮತಿ ಪೂರ್ಣ ಮಿಲನವೂ ಇದೇ ಹೆಸರಡಿ ಬರುವಂತವು. ಇಷ್ಟಕಾಮ್ಯಗಳು,

‘ಇಷ್ಟಕಾಮ್ಯ’ ಚಿತ್ರ ಡಾ. ದೊಡ್ಡೇರಿ ವೆಂಕಟಗಿರಿ ರಾವ್ ರ ಕಾದಂಬರಿಯನ್ನು ಆಧರಿಸಿದ  ಚಿತ್ರ. ’ಸುಧಾ’ ವಾರಪತ್ರಿಕೆಯಲ್ಲಿ ಇದು ಧಾರವಾಹಿಯಾಗಿ ಬಂದಿತ್ತು. ಡಾ. ಡಿ.ವಿ. ರಾವ್ ರ ಕಥೆಗಳ ವಿಶೇಷಣಗಳು ಹಲವು. ಅವರ ಕಾದಂಬರಿಗಳಿಗೆ ಬಹಳ ವಿರಳವಾಗಿ ಕೇಳಿಬರುವ ಹೆಸರುಗಳನ್ನು ಇಡುತ್ತಾರೆ. ಜೊತೆಗೆ, ಪಾತ್ರಗಳಿಗೂ. ಇವರ ಪಾತ್ರಗಳು ಓದಿದ, ಉತ್ತಮ ಮನೆತನದಿಂದ ಬಂದವು. ಪ್ರೌಢತೆಯನ್ನು ಬೆಳೆಸಿಕೊಂಡಂತವು.ಕಥೆಗಳು ನಡೆಯುವುದು ಪ್ರಕೃತಿಗೆ ಹೆಸರಾದ ಮಲೆನಾಡು, ಚಿಕ್ಕಮಗಳೂರು, ಶಿವಮೊಗ್ಗಗಳಂತ ಜಾಗಗಳಲ್ಲಿ.ಇವರು ಕಟ್ಟುವ ಪ್ರೀತಿ –ಪ್ರೇಮಕ್ಕೆ ರಮ್ಯವಾದ ಹಂದರಗಳಿರುತ್ತವೆ. ನಾಜೂಕಾದ ಮಾತುಗಳಲ್ಲಿ ಪ್ರೇಮ ಅರಳುತ್ತದೆ. ಇಲ್ಲಿ ಕ್ರೌರ್ಯ, ಕೊಲೆ, ಅತ್ಯಾಚಾರ,ಅತಿರೇಕಗಳಿಗೆ ಕಡಿಮೆ ಆದ್ಯತೆ.

ಸ್ವತಃ ಉತ್ತಮ ಬರಹಗಾರರಾದ,ತಮ್ಮ ಸೃಜನಶೀಲತೆಯಿಂದ ಚಿತ್ರೋದ್ಯಮದ ಗಮನ ಸೆಳೆದ, ಚಿತ್ರ ಕಥೆ-ಸಂಭಾಷಣೆ-ಹಾಡು-ನಿರ್ದೇಶನಕ್ಕೆ ಹಲವಾರಿ ಪ್ರಶಸ್ತಿ ಗಳಿಸಿರುವ ಡಾ. ನಾಗತಿಹಳ್ಳಿ ಚಂದ್ರಶೇಖರರ ಕಲಾವಿದ ಕಣ್ಣುಗಳಿಗೆ  ’ಇಷ್ಟಕಾಮ್ಯ’ ದ ಕಥೆ ಬಿದ್ದದ್ದು ಆಶ್ಚರ್ಯವೇನಿಲ್ಲ.ಇದನ್ನು ಆಧರಿಸಿ ಅದೇ ಹೆಸರಲ್ಲಿ ಸಿನಿಮಾ ಮಾಡುವಾಗ ಅವರು ರಿಸ್ಕ್ ತಗೊಂಡರೆನ್ನಬಹುದೇನೋ.

ಇಷ್ಟಕಾಮ್ಯ ಸಿನಿಮಾಕ್ಕೆ ನಾಗತಿಯವರ ಚಿತ್ರ ಕಥೆ, ಸಂಭಾಷಣೆ ಮತ್ತು ನಿರ್ದೇಶನ ದೊರೆತಿದೆ. ಸಿನಿಮಾಕ್ಕೆ ಬೇಕಾದಂತೆ ಕಥೆಯನ್ನು ಮುಂದುವರೆಸಿ ಬೆಳೆಸಲಾಗಿದೆ.

ಒಳ್ಳೆಯದು– ಕಣ್ತಣಿಸುವ  ಛಾಯಾಗ್ರಹಣ, ಮನಸ್ಸನ್ನು ಹದವಾಗಿ ಮೀಟುವ, ಉತ್ತಮ ಸಾಹಿತ್ಯವಿರುವ ಹಾಡುಗಳು, ಅರ್ಥಗರ್ಭಿತವಾದ ಸಂಭಾಷಣೆಗಳಿರುವ, ಸಭ್ಯ ಚಿತ್ರವಿದು. ಚಿತ್ರ ಕಥೆ ಮಲೆನಾಡಿನಲ್ಲಿ ನಡೆವಂತದ್ದು. ಅಂದಮೇಲೆ ಸೌಂದರ್ಯಕ್ಕೆ ಕೊರತೆಯೇ ಇಲ್ಲ.

ಯುವ ಜೋಡಿಗಳನ್ನು ಆಧರಿಸಿ ಮಾಡಿದ ತ್ರಿಕೋನ ಪ್ರೇಮಕಥೆಯಿರುವ ಕಾರಣ, ಸಣ್ಣವಯಸ್ಸಿನ  ಸುಂದರ ತಾರಾಗಣವಿದೆ. ಇವರಿಗೆ ಪೂರಕವಾಗಿ ಮನೋಜ್ಞ ಅಭಿನಯ ನೀಡಬಲ್ಲ ನುರಿತ ಕಲಾವಿದರ  ದೊಡ್ಡ ತಂಡವಿದೆ. ಒಂದಷ್ಟು ಹಾಸ್ಯ ಚಿತ್ರ ಕಥೆಯುದ್ದಕ್ಕೂ ಇದೆ. ಇವರಲ್ಲಿ ಕಾಲಕ್ಕೆ ತಕ್ಕಂತೆ ಪಾತ್ರ ಬದಲಾಯಿಸುವ ನಿಂಬೆಯ ಪಾತ್ರವಾಗಿ ಚಿಕ್ಕಣ್ಣ, ಮದುವೆಯ ಅಗತ್ಯವಿಲ್ಲದ ‘ಲಿವಿಂಗ್ ಟುಗೆದರ್’ ಸಂಬಂಧ ಪ್ರತಿಪಾದಕನಾಗಿ ಪ್ರಕಾಶ ಬೆಳವಾಡಿಯವರ, ಪಾತ್ರ ಗಮನ ಸೆಳೆಯುತ್ತವೆ. ’ಮದುವೆಯ ಅಜ್ಜಿ’ಯಾಗಿ ಕಾಣಿಸಿಕೊಂಡಿರುವ ಬಿ. ಜಯಶ್ರೀ, ಇಲ್ಲಿ ಸಾಂಕೇತಿಕ ಪಾತ್ರವಾಗಿ ಯುವ ಹೃದಯಗಳಲ್ಲಿ ಮದುವೆಯ ಸಂಭ್ರಮವನ್ನು ಹರಡುತ್ತಾಳೆ. ಮಿಕ್ಕರ್ಧದಲ್ಲಿ, ಇದೇ ಪಾತ್ರ ಸಾಂಕೇತಿಕವಾಗಿ ಜೀವನದ ಅನಿರೀಕ್ಷಿತ ಘಟನೆಗಳಿಕೆ ತಿರುವು ನೀಡುತ್ತದೆ. ಬದುಕಲ್ಲಿ ಅಂದು ಕೊಂಡಂತೆ ಎಲ್ಲ ಆಗುವುದಿಲ್ಲ ಎಂಬುದನ್ನು ಪ್ರತಿಪಾದಿಸುತ್ತದೆ.

ನಿರ್ದೇಶಕರಾಗಿ ನಾಗತಿಯವರು ಎಲ್ಲ ಪಾತ್ರಗಳಿಗೂ ಉತ್ತಮ ಸಂಭಾಷಣೆಯನ್ನು ನೀಡಿದ್ದಾರೆ. ಹಾಸ್ಯದ ಹೊರತಾಗಿ ಮಿಕ್ಕ ಎಲ್ಲ ಸಂಭಾಷಣೆಗಳು ಸಂದೇಶಗಳೇ. ವಿಚಾರಪರವೇ. ಹಾಗಾಗಿ ಕೇಳಿದ ನಂತರ, ಮರೆತುಹೋಗುವುದಿಲ್ಲ. ಮನಸ್ಸಲ್ಲಿ ಉಳಿಯುತ್ತವೆ. ವೀಕ್ಷಕರು ಯಾರೆಂಬುದರ ಮೇಲೆ ಇದು ನಿರ್ಧರಿತ!

ನಿರ್ದೇಶಕರು ಯುವಜನತೆಗೆ ಬೇಕಾದ ಪ್ರೀತಿಯ ಸಿಹಿಯನ್ನು ಮೊದಲರ್ಧ ಸಿನಿಮಾದ ಉದ್ದಕ್ಕೂ ಹಂಚಿದ್ದಾರೆ. ಆದರ್ಶಗಳನ್ನು ಹೊತ್ತ ಯುವ ವೈದ್ಯ ‘ಆಕರ್ಷ’ನಾಗಿ ವಿಜಯ್ ಸೂರಿಯ ಪಾತ್ರ, ಅವನ ಆಸಕ್ತಿಯನ್ನು ಗಮನಿಸಿ ಆಕರ್ಷಣೆಗೊಳಗಾಗಿ ಪ್ರೀತಿಗೆ ಬೀಳುವ, ಮದುವೆಯ ಕನಸು ಕಾಣುವ ಹುಡುಗಿಯಾಗಿ ಮಯೂರಿ ಕ್ಯಾತರಿ ‘ಅಚ್ಚರಿ’ಯಾಗಿ ಅಭಿನಯಿಸಿದ್ದಾರೆ. ishtakaamya-poster-2ಒಮ್ಮೆ ಈ ಯುವ ವೈದ್ಯ ಮೆಲ್ಲನೆ ಬಾಗಿ ಪ್ರೇಯಸಿಯ ಗಲ ಗಲಿಸುವ ಝುಮುಕಿಯನ್ನು ಸಣ್ಣಗೆ ಬಡಿಯುತ್ತಾನೆ. ಇಲ್ಲಿಯ ನವಿರು ಪ್ರೇಮದ ಪರಿ, ತಕದಿಮನೆ ಕುಣಿವ ಪ್ರೇಮದ ಹಲವು ಹಾಡುಗಳಿಗಿಂತ ಹೆಚ್ಚು ಬಲವಾಗಿ ಮನಸ್ಸುಗಳಲ್ಲಿ ನಿಲ್ಲುತ್ತದೆ. ಚಿತ್ರದ ಮೊದಲಲ್ಲೇ ಕಾಣಿಸಿಕೊಂಡರೂ, ನಂತರ ಈ ಆಕರ್ಷನ ಹೆಂಡತಿಯಾಗಿ ಬರುವ ’ಅದಿತಿ’ ಪಾತ್ರದಲ್ಲಿ   ಕಾವ್ಯ ಶೆಟ್ಟಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ತನ್ನ ದೈನಂದಿನ ವ್ಯಾಪಾರದ ನಡುವೆ ನಿಜವಲ್ಲದ ಬೊಗಳೆಯಲ್ಲಿ ಒಂದಷ್ಟು ಸುಖ ಕಾಣುವ ಪಾತ್ರದ ಮಾವನಾಗಿ ರಂಗಾಯಣದ ರಘು ಮಿಂಚಿದ್ದಾರೆ. ರೋಗಿಯಾಗಿ ಮಂಡ್ಯ ರಮೇಶ್ ಹಾಸ್ಯ ಪಾತ್ರಧಾರಿಯಾದರೆ ಮಿಮಿಕ್ರಿ ದಯಾನಂದ ’ವೈದ್ಯ’ ರಾಗಿದ್ದಾರೆ.

ಉಳಿದರ್ಧ ಭಾಗದಲ್ಲಿ ಅನಿರೀಕ್ಷಿತ ತಿರುವು ಕಾಣಿಸುತ್ತದೆ. ಇಲ್ಲಿ ಪ್ರೇಕ್ಷಕನಿಗೂ ಶಾಕ್ ! ಇಲ್ಲಿಯೇ ವಿವಾದಗಳೂ ಹುಟ್ಟುತ್ತವೆ. ಕೊನೆಗೆ ಇಬ್ಬರು ಹೆಣ್ಣು ಪ್ರೇಮಿಗಳಲ್ಲಿ ಒಬ್ಬರ ಸಾವಿನ ದುರಂತದ ಜೊತೆ ಅಂತ್ಯ. ಆದರೆ ನಾಯಕನ ಮುಂದಿನ ಬದುಕು ಪ್ರೇಕ್ಷಕ ಚಿತ್ರಿಸಬಹುದಾದ ಖಾಲಿ ಕ್ಯಾನ್ವಾಸ್ ಆಗುತ್ತದೆ! ಅಂದರೆ ಸಿನಿಮಾದಲ್ಲಿ ಈ ಬಗ್ಗೆ ಏನನ್ನೂ ತೋರಿಸದೆ ಪ್ರೇಕ್ಷಕನ ಊಹೆಗೆ ಇದನ್ನು ಬಿಡಲಾಗಿದೆ

ನಿರ್ದೇಶಕರಾಗಿ ನಾಗತಿಯವರು ಉದ್ದಕ್ಕೂ ಮದುವೆಯ ವಿವಿಧ ಮುಖಗಳನ್ನು ವಿಮರ್ಷೆಗೆ ಒಡ್ಡಿದ್ದಾರೆ. ಮಲೆನಾಡಿನ ದೀಪಾವಳಿ, ಟೀ ಎಸ್ಟೇಟಿನ ಕಾರುಭಾರುಗಳು, ಆಳು ಕಾಳುಗಳು, ಮದುವೆಯ ಜಾನಪದ ವರ್ಣನೆ, ಮಿಡಿಮಾವಿನ ಕಾಯಿ ಉಪ್ಪಿನ ಕಾಯಿಯ ಬಗ್ಗೆಗಿನ ದೃಶ್ಯಗಳಲ್ಲಿ , ಹವ್ಯಕ ಕನ್ನಡದ ಬಳಕೆಯಲ್ಲಿ ಸಂಪ್ರದಾಯಗಳಿಗೆ ಮೆರುಗುಕೊಟ್ಟಿದ್ದಾರೆ. ಉತ್ತಮ ಭಾಷೆಯನ್ನು ಬಳಸಿ ಕನ್ನಡವನ್ನು, ಅದರ ಸೌಂದರ್ಯ- ಸಂಸ್ಕೃತಿಯನ್ನು ಉಳಿಸಿ ಈ ಚಿತ್ರವನ್ನು ಸಂಭಾವಿತರು ಕೂತು ನೋಡುವಂತೆ ಮಾಡಿದ್ದಾರೆ.

ಕುವೆಂಪು ಬದುಕಿ ಬಾಳಿದ ಮನೆ, ಕವಿ ಶೈಲದ ದೃಶ್ಯದ ಬಳಕೆ, ಕವಿಸಮಾಧಿಯ ದರ್ಶನ ಮಾಡಿಸಿದ್ದಾರೆ. ಕುವೆಂಪು ಬರೆದ ಹಾಡಿನಲ್ಲಿ ಹೆಣ್ಣನ್ನು ಬಹುವಚನದಲ್ಲಿ ಸಂಬೋಧಿಸುವ ಮೂಲಕ ಮನುಕುಲದ ಉನ್ನತ ಸಂಸ್ಕೃತಿಯನ್ನು ಮತ್ತೆ ಕನ್ನಡ ಸಿನಿಮಾರಂಗಕ್ಕೆ ತಂದಿದ್ದಾರೆ!

ಟೀಕಿಸುವಂತದ್ದು–   ಈ ಚಿತ್ರದ ನಾಯಕ ಆದರ್ಶಗಳನ್ನು ಹೊತ್ತ ನವ ಯುವಕ. ಹಳ್ಳಿಯ ತನ್ನ ತಾತನ ನರ್ಸಿಂಗ್ ಹೋಂ ಅನ್ನು ನಡೆಸುತ್ತ ತನ್ನ ಮನೆತನದ ಆಸ್ತಿಯೊಡನೆ ಪ್ರೀತಿಯಿಂದ ಜನರ ಸೇವೆ ಮಾಡುತ್ತ ನಡೆವ ಮನೋಭಾವದವನು. ತನಗೆ ತಿಳಿಯದಾಗ ಬೇರೆಯವರೊಡನೆ ಸಲಹೆ-ಉತ್ತರಗಳನ್ನು ಕೇಳುವ-ಕಾಣುವಂತವನು. ಇಂತಹ ವಿಚಾರವಂತ, ತನ್ನ ಮೊದಲನೆಯ ಹೆಂಡತಿಯೊಡನೆ ವಿಚ್ಛೇದನವಿಲ್ಲದೆ ಇನ್ನೊಂದು ಜೀವಿಯೊಡನೆ ಸರಸ ಸಲ್ಲಾಪ ನಡೆಸುವಾಗ ಅವನ ಮನಸ್ಸಿನ ತಳಮಳಗಳನ್ನು ಇನ್ನಷ್ಟು ಗಾಢವಾಗಿ ಚಿತ್ರಿಸಬೇಕಿತ್ತು ಅನ್ನುವುದು ಈ ಚಿತ್ರದ ಮುಖ್ಯ ಕುಂದಾಗಿದೆ.

ತಪ್ಪೇ ಮಾಡದೆ, ಮದುವೆಯ ಸಹಜತೆಯಿಂದ ವಂಚಿತನಾಗುವ ಒಳ್ಳೆಯ ಮನಸ್ಸಿನ, ಸಲಹೆಗಳನ್ನು ಕೇಳುತ್ತ ನಡೆವ ನಾಯಕನ, ತನ್ನ ಬಡತನದ ಹಿನ್ನೆಲೆಯನ್ನು ಕಡೆಗಣಿಸಿ ಉಪಚರಿಸಿದ, ಸಹಾಯ ಮಾಡಿದ ವೈದ್ಯನ ಆಸಕ್ತಿಗೆ ನೀರೆರವ ಕನಸ ಕಂಗಳ ದುಡುಕಿನ ನಾಯಕಿ ಅಚ್ಚರಿಗೆ ಯಾವ ದೃಶ್ಯದಲ್ಲೂ ತನಗೆ ಈಗಾಗಲೇ ಮದುವೆಯಾಗಿರುವ ಬಗ್ಗೆ ಹೇಳುವುದೇ ಇಲ್ಲ. ನಿಂಬೆಯೂ ಕೂಡಿ, ಇಡೀ ಆಸ್ಪತ್ರೆಯೇ ಇವರ ಓಡಾಟವನ್ನು ಗಮನಿಸಿದರೂ ಯಾರೂ ಅಚ್ಚರಿಗೆ ವೈದ್ಯನಿಗೆ ಮದುವೆಯಾಗಿರುವ ಬಗ್ಗೆ ಹೇಳುವುದಿಲ್ಲ. ಯಾವ ಕಾರಣಕ್ಕೆ ಆಕರ್ಷ ಯಾರನ್ನೂ ಕರೆಯದೆ ಗುಟ್ಟಾಗಿ ಮದುವೆಯಾಗುವ ಬಗ್ಗೆ ಸಬಲ ಕಾರಣಗಳನ್ನು ಹೇಳಬೇಕಾಗಿತ್ತು. ಮಾನಸಿಕ ವ್ಯಾಧಿಗೆ ತುತ್ತಾದ ಅದಿತಿ ಪೂರ್ತಿ ’ಯು ಟರ್ನ್’ ತಗೊಳ್ಳಲು ಒಂದೆರಡು ಘಟನೆಗಳು ಮಾತ್ರ ಸಾಕಾದವೇ? ಒಬ್ಬ ವ್ಯಕ್ತಿ ತನ್ನವನು ಎನ್ನುವ ಅನ್ನುವ ಪೊಸೆಸಿವ್ ನೆಸ್ ಮತ್ತು ಈರ್ಷ್ಯೆ ಮಾತ್ರಕ್ಕೆ ಅವಳು ನಾಯಕನ ಬದುಕಿಗೆ ಹಿಂತಿರುಗುವ ಹೆಣ್ಣೇ?

ಸಂಭಾಷಣೆ ಚಿತ್ರದ ಜೀವಾಳ. ಆದರೆ ಮನೋಜ್ಞ ಅಭಿನಯದ ಮೌನ ಅದಕ್ಕಿಂತ ಪರಿಣಾಮಕಾರಿ. ಅಂತಹ ದೃಶ್ಯಗಳು ಕಡಿಮೆ. ಮಾನಸಿಕ ತುಡಿತಗಳನ್ನು, ತಾನು ಮಾಡುತ್ತಿರುವುದು ತಪ್ಪೇ, ಸರಿಯೇ ಅನ್ನುವ ತಾಕಲಾಟಗಳನ್ನು ಮೂರೂ ಪಾತ್ರಗಳಲ್ಲಿ ಮತ್ತಷ್ಟು ತರ ಬಹುದಿತ್ತು.

ಇತರೆ-ಪಾಶ್ಚಾತ್ಯ ಸಿನಿಮಾಗಳಲ್ಲಿ ಈ ಯಾವ ಕುಂದುಗಳೂ ದೊಡ್ಡವಾಗುತ್ತಿರಲಿಲ್ಲ. ಯಾಕೆಂದರೆ ಇಲ್ಲಿ ಪಾತ್ರಗಳಿಗಿಂತ ಸಂದೇಶ ಮುಖ್ಯವಾಗುತ್ತದೆ. ಆಧುನಿಕ ಜಗತ್ತಿನ ಲಿವಿಂಗ್ ಟುಗೆದರ್ ಆಗಲೀ, ಭಾರತ ಸರ್ಕಾರವೇ ಇನ್ನೂ ಗುರುತಿಸಿರದ ’ಗೇ’ಗಳ ಸಂಬಂಧವಾಗಲೀ, ಸಂಬಂಧದ ಹೆಸರಿನ ಅಗತ್ಯವಿಲ್ಲದ ಜೀವನ ಹಂಚಿಕೊಳ್ಳುವ ಪಾರ್ಟ್ನರ್ ಶಿಪ್ ನ ವೈಚಾರಿಕತೆಯನ್ನು ಈ ಸಿನಿಮಾ ಒರೆಗೆ ಹಚ್ಚುತ್ತದೆ. ಭಾರತೀಯ ಪರಂಪರೆಯ ಪುರಾತನ ಮದುವೆಯ ಮಿತಿಗಳನ್ನೂ ಇದು ಒರೆಗೆ ಹಚ್ಚುತ್ತದೆ. ಅದೇ ಜಾಡಿನಲ್ಲಿ ಬಡತನ, ಅದರ ಅರಿವನ್ನು ತಿಳಿಹೇಳುವ ಅಚ್ಚರಿಯ ತಾಯಿ, ಮಲೆನಾಡಿನ ತೋಟದ ಕೆಲಸಗಾರ್ತಿ, ಗಟ್ಟಿಗಿತ್ತಿ ಗೆಳತಿ ಎಲ್ಲ ಪಾತ್ರಗಳಲ್ಲಿ ನಾಗತಿಹಳ್ಳಿಯವರು ಕನ್ನಡ ಜನತೆಗೆ ನೂರಾರು ಸಂದೇಶಗಳನ್ನು, ತಾಕಲಾಟಗಳನ್ನು ಕೊಟ್ಟು ವಿಚಾರ ಮಾಡಲು ಕರೆಕೊಟ್ಟಿದ್ದಾರೆ. ಅದನ್ನು ಅತಿಯಾದ ಅತಿರೇಕಗಳ ಮೂಲಕ, ಉತ್ಪ್ರೇಕ್ಷೆಯಿಲ್ಲದೆ ಉಣಬಡಿಸಿದ್ದಾರೆ.

ಇತರೆ ಹಲವು ಸಿನಿಮಾ ನಿರ್ದೇಶಕರ ಸಿನಿಮಾದಲ್ಲಿ, ೫೦ ಜನ ಖದೀಮರನ್ನು ಐದು ನಿಮಿಷದಲ್ಲಿ ಸದೆ ಬಡಿವ ನಾಯಕನನ್ನು ತಂದದಕ್ಕೆ, ತಲೆ ಬುಡವಿಲ್ಲದ ಕಥೆ-ಸಂಭಾಷಣೆಗೆ, ದ್ವಂದ್ವಾರ್ಥದ ಹಾಸ್ಯಕ್ಕೆ ಯಾವ ಸಿನಿಮಾ ವಿಮರ್ಶಕನೂ ಚಕಾರ ವೆತ್ತದೆ ಸುಮ್ಮನಿರುತ್ತಿದ್ದರು. ಆದರೆ ನಾಗತಿಹಳ್ಳಿಯವರ ಸಿನಿಮಾ ಎಂದ ಕೂಡಲೆ ನಿರೀಕ್ಷೆ ಗಳು ಗರಿಗೆದರಿ ಬಿಡುತ್ತವೆ, ಸಿನಿಮಾ ವಿಮರ್ಶಕರು ನಾಲಿಗೆಯನ್ನು ಸಾಣೆ ಹಿಡಿಸಿಕೊಂಡು ಕಾಯುತ್ತಾರೆ. ಇವರು ಅರಿಯಬೇಕಾದ್ದು ಬಹಳ ಇದೆ. ಕಲಾತ್ಮಕ ನಿರ್ದೇಶಕನೊಬ್ಬ ಕಲಾವಂತಿಕೆಯನ್ನು, ಜೊತೆಗೆ ನಿರ್ಮಾಪಕರ ಹಣ ಹೂಡಿಕೆಗೆ ನ್ಯಾಯವನ್ನು ಎರಡನ್ನೂ ಕೂಡಿಸಿ ಒಂದು ಹೈಬ್ರಿಡ್ ತಳಿಯ ಸಿನಿಮಾ ವನ್ನು ಮಾಡಲು ಇಷ್ಟಕಾಮ್ಯದ ಮೂಲಕ ಪ್ರಯತ್ನ ಪಟ್ಟಿದ್ದಾರೆ.

ಈ ಪ್ರಯತ್ನವನ್ನು ಗುರುತಿಸಿ, ಆದರಿಸಿ ನೋಡಿದರೆ ಈ ಸಿನಿಮಾ ಇತ್ತೀಚೆಗೆ ನೋಡಿದ ಒಂದು ಉತ್ತಮ ಕನ್ನಡ ಸಿನಿಮಾ ಅನ್ನಬಹುದು

 (ಎರಡೂ ಪೋಸ್ಟೆರ್ಗಳು ಕೃಪೆ-ಗೂಗಲ್)