’ಕಾಫಿ ವಿತ್ ಕಾಸರವಳ್ಳಿ ’- ಭಾಗ ೧- ಡಾ. ಶ್ರೀವತ್ಸ ದೇಸಾಯಿ ಮತ್ತು ಡಾ. ಪ್ರೇಮಲತ ಬಿ.

 

ಇದೇ ವರ್ಷ ಏಪ್ರಿಲ್ ನಲ್ಲಿ ಡಾಂಕಾಸ್ಟರಿನಲ್ಲಿ ನಡೆದ ಕನ್ನಡ ಬಳಗದ ಯುಗಾದಿ ಸಮಾರಂಭದಲ್ಲಿ   ’ ಅನಿವಾಸಿ ’ ತಂಡ ಡಾ.ಪ್ರಸಾದ್ ರ ನೇತೃತ್ವದಲ್ಲಿ  ’ ’ಕಾಫಿ ವಿತ್ ಕಾಸರವಳ್ಳಿ ’ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಎಲ್ಲರ ಸಮಕ್ಷಮದಲ್ಲಿ ನಡೆದ ಈ ಕಮ್ಮಟದಲ್ಲಿ  ಡಾ.ಗಿರೀಶ್ ಕಾಸರವಳ್ಳಿಯವರ ಆಯ್ದ ಸಿನಿಮಾಗಳ ಬಗ್ಗೆ ಹಲವರು ಮಾತನಾಡಿದರು. ಆಯಾ ಸಿನಿಮಾಗಳ  ಕೆಲವು ದೃಶ್ಯಾವಳಿಗಳನ್ನು ನೆರೆದ ಜನರಿಗೆ ತೋರಿಸಿದರು.ವಿಶೇಷ ಎಂದರೆ ಈ ಸಿನಿಮಾಗಳ ರೂವಾರಿ, ನಿರ್ದೇಶಕ, ಹಲವು ಚಿತ್ರಗಳ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಬರೆದ ಖ್ಯಾತಿಯ, ಕಲಾತ್ಮಕ ಚಿತ್ರಗಳ ಗಾರುಡಿಗ, ಪ್ರಪಂಚದ ಒಬ್ಬ ಶ್ರೇಷ್ಠ ಸಿನಿಮಾ ನಿರ್ದೇಶಕರಾದ ಪದ್ಮಶ್ರೀ ವಿಜೇತ ಡಾ. ಗಿರೀಶ್ ಕಾಸರವಳ್ಳಿಯವರೂ ನಮ್ಮೊಡನಿದ್ದುದು ! ಅವರ ಸಮ್ಮುಖದಲ್ಲೇ ಅವರ ಚಿತ್ರಗಳ ಬಗ್ಗೆ ಮಾತನಾಡುವ ನಮ್ಮ ಪ್ರಯತ್ನದ ನಂತರ ಅವರೊಂದಿಗೆ ಆ ಚಿತ್ರದ ಬಗ್ಗೆ ಒಂದೆರಡು ಪ್ರಶ್ನೆಗಳನ್ನು ಕೇಳುವ ಅವಕಾಶವೂ ಇತ್ತು.  ಈ ಕಾರ್ಯಕ್ರಮದಲ್ಲಿ ಅತ್ಯಂತ ಸಮಾಧಾನ  ಚಿತ್ತದೊಡನೆ ಕಾಸರವಳ್ಳಿಯವರು ಭಾಗವಹಿಸಿದ್ದಲ್ಲದೆ ಕೇಳಿದ ಪ್ರಶ್ನೆಗಳಿಗೆ ಪ್ರತಿಶತಃ ನೈಜ, ಸರಳ ಮತ್ತು ಪ್ರಬುದ್ಧ ಉತ್ತರಗಳನ್ನು ನೀಡಿ ಎಲ್ಲರ ಮನಗೆದ್ದರು. ಆ ದಿನದ ಕಾರ್ಯಕ್ರಮದಲ್ಲಿ  ಮೊಟ್ಟ ಮೊದಲಿಗೆ  ಮಾತನಾಡಿದವರು ನಮ್ಮೆಲ್ಲರ ಮಿತ್ರರಾದ ಡಾ. ಶ್ರೀವತ್ಸ ದೇಸಾಯಿಯವರು.  ಆ ನಂತರ  ಡಾ. ಪ್ರೇಮಲತ ಬಿ. ಗಿರೀಶ್ ಕಾಸರವಳ್ಳಿಯವರಿಗೆ  ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳ ಸುರಿಮಳೆಯನ್ನು  ನೀಡಿದ ಚಲನ ಚಿತ್ರ  ’ಗುಲಾಬಿ ಟಾಕೀಸಿ ’ ನ ಬಗ್ಗೆ ಮಾತನಾಡಿದರು.

ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಸಿನಿಮಾ ಮೆಲುಕುಗಳನ್ನು  ’ಅನಿವಾಸಿ್ ’ ನಿಮ್ಮೊಂದಿಗೆ  ಇಂದು ಮತ್ತು ಮುಂಬರುವ ವಾರಗಳಲ್ಲಿ ಹಂಚಿಕೊಳ್ಳುತ್ತದೆ-ಸಂ

 

”ಘಟಶ್ರಾದ್ಧ” ಎಂಬ ಕನ್ನಡ ಸ್ವರ್ಣ ಕಮಲ !

 

 

”ಘಟಶ್ರಾದ್ಧ”: ಗಿರೀಶ್ ಕಾಸರವಳ್ಳಿಯವರಿಗೆ ಮೊದಲ ’ಸ್ವರ್ಣ ಕಮ” ಪ್ರಶಸ್ತಿ ಕೊಟ್ಟ ಚಿತ್ರ.

ಯು. ಕೆ. ಕನ್ನಡ ಬಳಗದ ಯುಗಾದಿ (2019) ಸಮಾರಂಭ ಡೋಂಕಾಸ್ಟರಿನಲ್ಲಿ ನಡೆಯಿತು. ಆಗ ’ಕಾಫಿ ವಿತ್ ಕಾಸರವಳ್ಳಿ’ ಅನ್ನುವ ಗಿರೀಶ ಅವರ ಕೆಲವು ಸಿನಿಮಾಗಳ ಚರ್ಚೆ ಮತ್ತು ನಿರ್ದೇಶಕರೊಡನೆ ಪ್ರಶ್ನೋತ್ತರಗಳ ಕಾರ್ಯಕ್ರಮನ್ನು ಹಮ್ಮಿಕೊಂಡಾಗ ನಾನು ಅವರ ಮೊದಲ ಚಿತ್ರವಾದ ”ಘಟಶ್ರಾದ್ಧ”ವನ್ನು ಆರಿಸಿಕೊಂಡಿದ್ದೆ. ಚಿತ್ರದ ಕೊನೆಯ ದೃಶ್ಯವನ್ನು ಪರದೆಯ ಮೇಲೆ ಪ್ರದರ್ಶಿಸಿದ ನಂತರ ಸಂವಾದ-ಪ್ರಶ್ನೋತ್ತರ ನಡೆಯಿತು.ಈಗಾಗಲೆ ಅವರು ಕಥೆಗಳನ್ನು ಚಿತ್ರ ಮಾಧ್ಯಮಕ್ಕೆ ಅವರು ಅಳವಡಿಸುವ ರೀತಿಯ ಬಗ್ಗೆ ಮತ್ತು ’ಕಾಸರವಳ್ಳಿ ಕಥಾನಕದ ಸ್ಟೈಲ್ ” ಬಗ್ಗೆ ಬೇರೆಡೆಗೆ ಸಾಕಷ್ಟು ಚರ್ಚೆಯಾಗಿದೆ. ”ರೂಪಕಗಳ ಬ್ರಹ್ಮ” ಎಂದೆನಿಸಿಕೊಂಡ ಕಾಸರವಳ್ಳಿ ಅವರು ತಮ್ಮ ಸಿನಿಮಾಗಳಲ್ಲಿ ದೃಶ್ಯಗಳನ್ನು ಜೋಡಿಸುವ ರೀತಿ ವಿಡಿಯೋಗ್ರಫಿಯಲ್ಲಿ  ಆಸಕ್ತನಾದ ನನ್ನನ್ನೂ ಆಕರ್ಷಿಸಿದೆ.

ಪುಸ್ತಕದ ಕಥೆಯನ್ನು ತೆರೆಯಮೇಲೆ ತರುವಾಗ ಕೆಲವೊಮ್ಮೆ ಕಷ್ಟವೂ ಆಗಬಹುದು, ಕೆಲವೊಮ್ಮೆ ಹತ್ತಾರು ವಾಕ್ಯಗಳನ್ನು ಕೆಲವೇ ಸೆಕೆಂಡುಗಳಲ್ಲಿ ಚಿತ್ರದಲ್ಲಿ ತೋರಿಸ ಬಹುದು. ಇದು ಸಿನಿಮಾ ನಿರ್ದೇಶಕನ ನೈಪುಣ್ಯತೆ ಮೇಲೆ ಹೋಗುತ್ತದೆ.  ತಮ್ಮ ಇಪ್ಪತ್ತೈದನೆಯ ವಯಸ್ಸಿನಲ್ಲಿಯೇ ಅವರು ಹೊರತಂದ ಸಿನಿಮಾ ”ಘಟಶ್ರಾದ್ಧ”. ಇದು ’ಪರ್ಫೆಕ್ಟ್ ಪ್ರೋಡಕ್ಟ್’ ಅಲ್ಲವಾದರೂ ಸತ್ಯಜಿತ್ ರೇ ಅವರನ್ನೇ ಬೆರಗುಗೊಳಿಸಿದ ಚಿತ್ರ. ಆಗಾಗಲೇ ಅವರಿಗೆ ಸಿನಿಮಾ ಮಾಧ್ಯಮದ ಮೇಲೆ ಎಷ್ಟು ಹಿಡಿತ ಇತ್ತು ಎನ್ನುವುದನ್ನು ಇದರಲ್ಲಿ ಕಾಣುತ್ತೇವೆ.

Mise-en-scène

ಪ್ರತಿಯೊಂದು ದೃಶ್ಯವನ್ನೂ ಚಿತ್ರೀಕರಿಸುವಾಗ ಡೈರೆಕ್ಟರ್ ಕಣ್ಣ ಮುಂದಿನ ಚಿತ್ರದ ಚೌಕಟ್ಟಿನಲ್ಲಿ ನಿಂತ ಅಥವಾ ಚಲಿಸುವ ಮತ್ತು ಜೋಡಿಸಿದ ಎಲ್ಲ ’ವಸ್ತು’ಗಳ ಮೇಲೆ ಕಣ್ಣಿಟ್ಟಿರಬೇಕಾಗುತ್ತದೆ. ಈ ರಂಗಸಜ್ಜಿಕೆಗೆ Mise-en-scène (ಉಚ್ಚಾರ: ಮೀಸಾನ್ ಸೇನ್) ಎನ್ನುವ ಫ್ರೆಂಚ್ ಪದಗುಚ್ಚವನ್ನುಪಯೋಗಿಸುತ್ತಾರೆ. ಯಾಕಂದರೆ “everything in the frame can carry meaning.”  ಮನೆಯ ದೃಶ್ಯವಿದ್ದರೆ ಅಲ್ಲಿಯ ಕಂಬ, ಗೋಡೆ, ಅದರ ಮೇಲಿನ ಚಿತ್ರಗಳು, ನಟರು ನಿಲ್ಲುವ ಜಾಗ, ನಟರ ವಸ್ತ್ರ, ಆಭರಣ, ಬಣ್ಣ, ಮೇಕಪ್,  ವಿನ್ಯಾಸಗಳು, ಅವರಮೇಲೆ ಬೀಳುವ ಬೆಳಕು-ಕತ್ತಲೆ, ಎಲ್ಲವೂ ’ಮೀಸಾನ್ ಸೇನ್’ ದ ಅಂಗಗಳು. ಘಟಶ್ರಾದ್ಧ ಅವರ ಮೊದಲ ಚಿತ್ರವಾದರೂ ಅದರಲ್ಲಿ ಈ ರೂಪಕಗಳ ಸಾಲನ್ನೇ ನೋಡುತ್ತೇವೆ. ಈ ಸಿನಿಮಾ ಒಬ್ಬ ಬಾಲ ವಿಧವೆ ಯಮುನಕ್ಕನ ದಾರುಣ ಕಥೆ. ಆಕೆಯ ಹತ್ತಿರ ಬಂದ ನಾಣಿ (ಅಜಿತ್ ಕುಮಾರ್) ಎಂಬ ಬಾಲಕ ವೇದ ಪಾಠಶಾಲೆಯಾದ ಉಡುಪರ ಮನೆಯಲ್ಲಿದ್ದು  ಕಲಿಯಲು ಬಂದ ಆಗ ತಾನೆ ಉಪನಯನವಾದವನು. ಆಗ ಆಕೆ ತನ್ನ ಗರ್ಭವನ್ನು ಕಳೆದುಕೊಳ್ಳುವ ಪ್ರಯತ್ನದಲ್ಲಿರುತ್ತಾಳೆ. ಚಿತ್ರದ ಕೊನೆಯಲ್ಲಿ ಅಕ್ರಮ ಗರ್ಭಪಾತವಾದರೂ ಕುಲದಿಂದ ಬಹಿಷ್ಕಾರ ತಪ್ಪದೆ ಆಕೆಯ ಘಟಶ್ರಾದ್ಧವಾಗುತ್ತದೆ. ಮೊದಲಿನ ಹಲವಾರು ದೃಶ್ಯಗಳಲ್ಲಿ ವಿಶಾಲವಾದ ಮನೆಯ ಕಂಬದ ಅರೆಮರೆಯಾಗಿ ನಿಂತ ಯಮುನಕ್ಕ (ಮೀನಾ) ಕಾಣಿಸಿಕೊಳ್ಳುತ್ತಾಳೆ.  ಅಕೆ ಗರ್ಭ ಧರಿಸಿದ ಹೊಟ್ಟೆಯಮೇಲೆ ನಾಣಿ ಒದ್ದ ಮೇಲೆ ಗೋಡೆಗೊರಗಿದ ಕೊಡದ ಮೇಲಿನ ಚೆಂಬು ಉರುಳುವ ಘಟ್ಟ, ಆ ಮನೆಯೊಳಗೆ ಬಂದು ಹೋಗುವವರ ಪ್ರವೇಶ-ನಿರ್ಗಮನ ಇವೆಲ್ಲವನ್ನೂ ನಿರ್ಮಾಪಕರು ಅತ್ಯಂತ ಮುತವರ್ಜಿಯಿಂದ ರಚಿಸಿದ್ದು ಸ್ಪಷ್ಟವಾಗುತ್ತದೆ. ಆದರೆ ಸಿನಿಮಾದ ಒಳ ಮತ್ತು ಹೊರಾಂಗಣ ಚಿತ್ರೀಕರಣದಲ್ಲೂ ಗಿರೀಶ ಕಾಸರವಳ್ಳಿ ಅವರ ಕುಶಲತೆಯನ್ನು ನೋಡುತ್ತೇವೆ. ಕಥೆ ಮುಂದುವರೆಯಲು ಇವಷ್ಟೇ ಸಾಲದು. ನಟನೆ, ಸಂಭಾಷಣೆ, ಹಿನ್ನೆಲೆಯ ಶಬ್ದ, ಸಂಗೀತ ಸಂಯೋಜನೆ ಇವೆಲ್ಲವೂ ಬೇಕು, ಅವು ವೀಕ್ಷಕನ ಅನುಭವವನ್ನು ವಿಸ್ತರಿಸುತ್ತವೆ . ಅವುಗಳನ್ನು ಜೋಡಿಸಿದ ರೀತಿ ದೃಶ್ಯದ ಸಾಫಲ್ಯಕ್ಕೆ ಅಥವಾ ವಿಫಲತೆಗೆ ಕಾರಣವಾಗುತ್ತದೆ.

ಕೆಲವೇ ದೃಶ್ಯಗಳನ್ನು ಬಿಟ್ಟರೆ, (ಅವರ ನಂತರದ ಚಿತ್ರಗಳಲ್ಲಿ ಆದಂತೆ) ಈ ಚಿತ್ರಕಥೆ (script) ಲೇಖಕ ಯು.ಆರ್.  ಅನಂತಮೂರ್ತಿಯವರ ಮೂಲ ಕಥೆಯಿಂದ ದೂರ ಸರಿದಿಲ್ಲ, ಅದಕ್ಕೆ ನಿಷ್ಠವಾಗಿಯೇ ಇದ್ದಾರೆ. ಒಂದು ಮುಖ್ಯ ಬದಲಾವಣೆಯೆಂದರೆ, ಮೂಲ ಕಥೆಯಲ್ಲಿ ನಮ್ಮ ಕಣ್ಣಮುಂದೆ ಬರುವದು ಬಾಲ ವಿಧವೆ ಯಮುನಕ್ಕ ಸೆರಗು ಹೊದಿಸಿದ ಬೋಳುತಲೆಯೇ. ಆದರೆ ಸಿನಿಮಾದಲ್ಲಿ ಅದನ್ನು ನಾವು ಸ್ಪಷ್ಟವಾಗಿ ನೋಡುವುದು ಕೊನೆಯ ದೃಶ್ಯದಲ್ಲೇ. ಅದರ ಹಿಂದಿನ ದೃಶ್ಯದಲ್ಲಿ ಒಂದು ’ಕ್ಲೋಸ್ ಅಪ್’ ಇದೆ – ಅದು ಹೆಗಲವರೆಗೆ ಇಳಿಬಿಟ್ಟ ಯಮುನಕ್ಕನ ಕೇಶರಾಶಿ.

ಇನ್ನು ಕೊನೆಯ ದೃಶ್ಯಕ್ಕೆ ಬರೋಣ. ಈಗ ಉಡುಪರ ಸಂಸ್ಕೃತ ಪಾಠಶಾಲೆಯ ಋಣ ತೀರಿ ನಾಣಿ ತನ್ನ ತಂದೆಯೊಡನೆ ಕಾಲೆಳೆಯುತ್ತ ತನ್ನೂರಿಗೆ ಹೊರಟಿದ್ದಾನೆ. ಅವರು ಹಳ್ಳಿಯ ಗಡಿಯ ಹೊರಗಿರುವ ಒಂಟಿ ಅಶ್ವತ್ಥವೃಕ್ಷವನ್ನು ದಾಟುತ್ತಿರುವಾಗ ಅದರ ಕೆಳಗೆ ಆಕೆಯನ್ನು ಕಂಡು  ಬೆಚ್ಚಿ ಬಿದ್ದು ಆತ ”ಯಮುನಕ್ಕಾ!” ಎಂದು ಚೀರುತ್ತಾನೆ. ಬಿಕ್ಕಿ ಬಿಕ್ಕಿ ಅಳುತ್ತಿರುವ ಯಮುನಕ್ಕನ ತಲೆಯಮೇಲಿನ ಸೆರಗು ಸ್ವಲ್ಪವೇ ಸರಿದಿದ್ದು ಆಕೆಯ ಬೋಳುತಲೆ ಕಾಣಿಸುತ್ತದೆ. ಅದನ್ನು ನೋಡಿ ವೀಕ್ಷಕನಿಗೂ ಅಂಥದೇ ಅನುಭವವಾಗುತ್ತದೆ. ನಾಣಿ, ಯಮುನಕ್ಕ ಇಬ್ಬರಿಗೂ ಮಾತು ಹೊರಡುವದಿಲ್ಲ. ಕೆಲವೇ ನಿಮಿಷಗಳ ಆ ’ಸೀನ್’ ದಲ್ಲಿ ಅದೊಂದೇ ಮಾತನ್ನು ನಾವು ಕೇಳುತ್ತೇವೆ.  ’ಬ” ಎಂದು ಕರೆದಂತೆ ಆತನ ತಂದೆ ಮಗನ ಕೈ ಹಿಡಿದು ಮೆಲ್ಲಗೆ ಹೆಜ್ಜೆಯಿಡುತ್ತ ತಮ್ಮ ಊರಿನ ದಾರಿ ಹಿಡಿದು ಹೋಗುತ್ತಾರೆ. ಅವರು ಪರದೆಯಿಂದ ಮರೆಯಾಗುವ ವರೆಗೆ ತಂದೆ-ಮಕ್ಕಳನ್ನು ಲಾಂಗ್ ಶಾಟ್ ನಲ್ಲೇ ಕೆಲನಿಮಿಷಗಳ ವರೆಗೆ ಕ್ಯಾಮರಾ ಸೆರೆ ಹಿಡಿಯುತ್ತದೆ. ಇದೊಂದು ಅದ್ಭುತ ದೃಶ್ಯ ಅದು ನಿರ್ದೇಶಕನ ನಿಪುಣತೆಗೆ ಸಾಕ್ಷಿ. ”ನಾಣಿ’ಯಂಥ’ ಎಳೆಯ ಮಕ್ಕಳನ್ನು ನಿರ್ದೇಶಿಸುವದು ಎಷ್ಟು ಕಷ್ಟ ಎಂದು ಕೇಳಿದ ಪ್ರಶ್ನೆಗೆ ಅವರ ಉತ್ತರ ಅದು ಬಹು ಸುಲಭದ ಕೆಲಸ. ದೊಡ್ಡವರನ್ನು ನಿರ್ದೇಶಿಸುವದೇ ತೊಂದರೆ. ಅವರಿಗೆ ತಾವು ಹೇಗೆ ಕಾಣಿಸುತ್ತೇವೆ ಎಂಬ ಜಂಬ, self-consciousness ಇರುತ್ತದೆ ಎಂದರು. ಈ ಮೊದಲೇ ಅವರು ಫಿಲ್ಮ್ ಇನ್ಸ್ಟಿಟೂಟಿನಲ್ಲಿ ಕಲಿಯುತ್ತಿರುವಾಗ ಕೊನೆಯ ವರ್ಷದಲ್ಲಿ ಈ ಕಥೆಯನ್ನೇ ಆಧರಿಸಿ ಶ್ರಾದ್ಧವನ್ನೇ ಮುಖ್ಯವಸ್ತುವಾಗಿ ’ಅವಶೇಷ’ ಎಂಬ ಚಿತ್ರ ತಯಾರಿಸಿದ್ದು (ಅದಕ್ಕೂ ಶ್ರೇಷ್ಠ ಚಿತ್ರದ ಸ್ವರ್ಣ ಪದಕ) ಈ ಚಿತ್ರಕ್ಕೆ ನಾಂದಿಯಾಗಿರಬಹುದು. 1978ರಲ್ಲಿ ಇದಕ್ಕೆ ಭಾರತದ ರಾಷ್ಟ್ರಪತಿಗಳ ಸ್ವರ್ಣ ಕಮಲ ಪ್ರಶಸ್ತಿಯಲ್ಲದೆ ಅಂತಾರಾಷ್ಟ್ರೀಯ ಮತ್ತು ರಾಜ್ಯಪ್ರಶಸ್ತಿಗಳನ್ನೂ ಗಳಿಸಿದೆ. ಸಿನಿಮಾ, ಕಲಾಮಾಧ್ಯಮಗಳಲ್ಲಿ ಪದೆ  ಪದೇ ಇದರ ಉಲ್ಲೇಖ ಆಗುತ್ತಲೇ ಇರುತ್ತದೆ.

                                                                                                                                                                                                                                                ಶ್ರೀವತ್ಸ ದೇಸಾಯಿ

ಡೋಂಕಾಸ್ಟರ್

 ‘ ಕಪ್ಪು-ಬಿಳುಪು ’ ಗಳ  ವರ್ಣ ಚಿತ್ರ ಗುಲಾಬಿ ಟಾಕೀಸು !

 

ಜಗತ್ತಿನ ಮೇರು ನಿರ್ದೇಶಕ, ಅಪ್ಪಟ ಕನ್ನಡಿಗ, ನಮ್ಮ ನಾಡಿನ ಅಧ್ಬುತ ದೃಶ್ಯಮಾಧ್ಯಮದ ಗಾರುಡಿಗ, ಸೃಜನಶೀಲ ಕಲಾವಿದ, ಚಿಂತಕ ಡಾ. ಗಿರೀಶ್ ಕಾಸರವಳ್ಳಿಯವರು ಹಲವು ಅತ್ಯುತ್ತಮವಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕನ್ನಡ ಚಿತ್ರ ರಂಗವೊಂದರಲ್ಲೇ ಅಲ್ಲದೆ, ಇಡೀ ಭಾರತದಲ್ಲಿ ಸತ್ಯಜಿತ್ ರೇ ಯವರನ್ನು ಬಿಟ್ಟರೆ ಅತಿಹೆಚ್ಚಿನ  ರಾಷ್ಟ್ರಪತಿಗಳ ಸ್ವರ್ಣ ಮತ್ತು ರಜತ ಕಮಲ ಪ್ರಶಸ್ತಿಗಳನ್ನು ಚಿತ್ರ ನಿರ್ದೇಶನಕ್ಕಾಗಿ ಪಡೆದಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದಲ್ಲೇ ಅಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇಂತಹ ನಿರ್ದೇಶಕರ  ಎದುರೇ ಅವರದೊಂದು ಚಿತ್ರದ ಬಗ್ಗೆ ಮಾತನಾಡಲು ಅವಕಾಶ ಸಿಕ್ಕಾಗ ಗುಲಾಬಿ ಟಾಕೀಸು ಎನ್ನುವ ಚಿತ್ರವನ್ನು ಆಯ್ದುಕೊಂಡದ್ದು ಒಂದೇ ಕಾರಣಕ್ಕೆ. ಈ ಚಿತ್ರದ ವಿಡೀಯೋ ಸಿ.ಡಿ. ಯನ್ನು  ಬೆಂಗಳೂರಿನ  ’ಟೋಟಲ್ ಕನ್ನಡ ’  ಎನ್ನುವ ಮಳಿಗೆಯಿಂದ ತಂದು ನೊಡಿದ್ದರಿಂದ ಮತ್ತು ಅದನ್ನು ಮತ್ತೆ ನೋಡಿ ನನ್ನ ಅಭಿಪ್ರಾಯಗಳನ್ನು ರೂಪಿಸಲು ಅನುಕೂಲವಿದ್ದುದರಿಂದ. ಯಾಕೆಂದರೆ ನಾನು ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ ಹಲವು ಚಿತ್ರಗಳನ್ನು ನೋಡಿದ್ದೇನೆ. ಎಲ್ಲವೂ ಒಂದಲ್ಲ ಒಂದು ರೀತಿ ನನ್ನನ್ನು ಸಮ್ಮೋಹನಗೊಳಿಸಿವೆ.

ಗುಲಾಬಿ ಟಾಕೀಸು ಎನ್ನುವ ಚಿತ್ರವನ್ನು ವೈದೇಹಿಯವರ ಒಂದು ಸಣ್ಣ ಕಥೆಯನ್ನು ಆಧರಿಸಿ ಮಾಡಲಾಗಿದೆ. ಜಾನಕಿ ಶ್ರೀನಿವಾಸ ಮೂರ್ತಿ ಎನ್ನುವ ನಿಜ ನಾಮಧೇಯದ ಈ ಕಥೆಗಾರ್ತಿ ತಮ್ಮ ಕಥೆಗಳಲ್ಲಿ ಬಳಸುವ ಪ್ರಾಂತೀಯ ಭಾಷಾಸೊಗಡು ಮತ್ತು  ಅತಿಸಾಮಾನ್ಯರ ನಿರಾಡಂಬರ ಬದುಕಿನ ಚಿತ್ರಣಕ್ಕಾಗಿ ಹೆಸರುವಾಸಿ. ಜೊತೆಗೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಕೂಡ ಗಳಿಸಿದಂತವರು.

ಒಬ್ಬ ಸೃಜನಶೀಲ ಬರಹಗಾರ್ತಿಯ ರಚನೆ ಮತ್ತೊಬ್ಬ ಸೃಜನಶೀಲನ ಕೈಗೆ ಸಿಲುಕಿದಾಗ ಏನಾಗಬಹುದು?

“ಗಂಟೆಯ ನೆಂಟನ ಓ ಗಡಿಯಾರ

ಬೆಳ್ಳಿಯ ಬಣ್ಣದ ಗೋಲಾಕಾರ

ಹೊತ್ತನು ತಿಳಿಯಲು ನೀನಾಧಾರ “…..

ಎನ್ನುವ ಜೀವಂತಿಕೆಯೇ ತುಂಬಿ ಟಿಕ.. ಟಿಕ… ನೆನ್ನುವ ದಿನಕರ ದೇಸಾಯಿಯವರ ಕವನವೊಂದು ಗಡಿಯಾರವನ್ನು ವರ್ಣಿಸಿ ನಮ್ಮಲ್ಲಿ ಸೋಜಿಗವನ್ನೂ, ಆನಂದವನ್ನೂ ತರದಿರಲು ಸಾಧ್ಯವೇ? ಇದೊಂದು ಕಾಲದಲ್ಲಿ ಮಕ್ಕಳ ಪಠ್ಯ ಪುಸ್ತಕದಲ್ಲಿ ಅಚ್ಚಾಗಿದ್ದ ಶಿಶುಗೀತೆ.  ಆದರೆ ಇದೇ ಗಡಿಯಾರ ಎನ್ನುವ ಪದ ಗಿರೀಶ್ ಕಾರ್ನಾಡರ ಕೈಯಲ್ಲಿ ವಿಭಿನ್ನ ಬಗೆಯ ಸಂಶೋಧನೆಗೆ ಪಾತ್ರವಾಗಬಲ್ಲುದು,  ’ಆಗೊಮ್ಮೆ-ಈಗೊಮ್ಮೆ ’ ಎನ್ನುವ ಅವರ ಲಲಿತ ಪ್ರಭಂದವೊಂದರಲ್ಲಿ  ಇದೇ ಗಡಿಯಾರದ, ಗೋಲಾಕಾರ, ಶೂನ್ಯ, ಬ್ರಂಹಾಂಡ, ಅಧ್ಯಾತ್ಮ, ಪರಾಭೌತ ಶಾಸ್ತ್ರ ಮತ್ತಿತರ ಹಲವು ಕೋನಗಳನ್ನು ಪಡೆದು ಓದುಗರನ್ನು ತಟ್ಟನೆ ಚಿಂತನೆಗೆ ತೊಡಗಿಸುತ್ತದೆ. ಇದೊಂದು ಸಣ್ಣ ಉದಾಹರಣೆ ಮಾತ್ರ.

ಇದೇ ರೀತಿಯಲ್ಲಿ ಸಣ್ಣ ಕಥೆಯಾಗಿದ್ದ ಗುಲಾಬಿ ಟಾಕೀಸು, ಕಾಸರವಳ್ಳಿಯವರ ಕೈಯಲ್ಲಿ ಹಲವು  ಮಟ್ಟಗಳಲ್ಲಿ, ಅಲಂಕಾರ,ರೂಪುಗಳನ್ನು ಪಡೆಯಿತು.  ಪ್ರಾಂತ್ಯ, ಭಾಷೆಯ ಸೊಗಡನ್ನು ಹಾಗೆಯೇ ಉಳಿಸಿಕೊಂಡು ಹಲವು ಭಿನ್ನ ಮಜಲುಗಳಲ್ಲಿ ಅರಳಿತು. ಈ ಸಿನಿಮಾಕ್ಕೆ ಚಿತ್ರ ಕಥೆಯನ್ನು ಬರೆದವರು ಸ್ವತಃ ಗಿರೀಶ್ ಕಾಸರವಳ್ಳಿಯವರು. ತಮ್ಮ ಗುರುಗಳು, ಆದರ್ಶ ಪ್ರಾಯರು, ಶತ್ರುಗಳು, ಮಿತ್ರರು ಎಲ್ಲರ ನಿರೀಕ್ಷೆಗಳನ್ನು ಮೀರಿ ಎತ್ತರವಾಗಿ ಬೆಳೆದಂತ ಸಿನಿಮಾ ನಿರ್ದೇಶಕರು. ಅಡೆ ತಡೆಗಳನ್ನು ನುಂಗಿ ಅದೇ ಉತ್ಸಾಹ ಮತ್ತು ಪ್ರೇರಣೆಗಳಲ್ಲಿ, ಆದರ್ಶಗಳಲ್ಲಿ ಕೆಲಸ ಮಾಡಿದವರು.

2008 ರಲ್ಲಿ ಹೊರಬಂದ  ಗುಲಾಬಿ ಟಾಕೀಸು ಚಲನ ಚಿತ್ರ  ಸಿನಿಮಾಕ್ಷೇತ್ರದ ಎಲ್ಲ ಮಟ್ಟಗಳ ಪ್ರಶಸ್ತಿಗಳನ್ನು ಬಗಲಿಗೆ ಹಾಕಿಕೊಂಡಿತು.

2008 ರಲ್ಲಿ  ಅತ್ಯುತ್ತಮ ಚಿತ್ರ, ಅತ್ಯುತ್ತಮ ಚಿತ್ರ ಕಥೆ ಮತ್ತು ನಾಯಕಿ ಉಮಾಶ್ರೀಗೆ ಅತ್ಯುತ್ತಮ ನಟಿ  ಎಂದು ಮೂರು ವಿಭಾಗಗಳಲ್ಲಿ ಪ್ರಶಸ್ತಿ ದೊರಕಿತು. 57 ನೇ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ  ಅತ್ಯುತ್ತಮ ಕನ್ನಡ ಚಿತ್ರ ಎನ್ನುವ ರಾಷ್ಟ್ರ ಪ್ರಶಸ್ತಿ ದೊರಕಿತು. ಅಂತರ ರಾಷ್ಟ್ರೀಯ ಸಿನಿಮಾ ಸ್ಪರ್ಧೆಯಲ್ಲಿ  ಭಾರತ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಮತ್ತು ನಟನೆಗಾಗಿ ಉಮಾಶ್ರೀ ಅವರಿಗೆ ಅತ್ಯುತ್ತಮ ನಟಿ ಎನ್ನುವ ಪ್ರಶಸ್ತಿಗಳು ದೊರೆತವು. Ocean’s  cinefan festival of Asian and Arab cinema  .ಕಾರ್ಯಕ್ರಮದಲ್ಲಿ  ಮತ್ತೆ ನಿರ್ದೇಶನಕ್ಕಾಗಿ ಕಾಸರವಳ್ಳಿ ಮತ್ತು ನಟನೆಗಾಗಿ ಉಮಾಶ್ರೀ ಅವರಿಗೆ ಪ್ರಶಸ್ತಿಗಳು ದೊರೆತವು.

ಗುಲಾಬಿ ಟಾಕೀಸಿನಲ್ಲಿ  ಕುಂದಾಪುರದ ಹಳ್ಳಿಯ  ಮೀನುಗಾರರ ಬದುಕಿನ ಚಿತ್ರಣವಿದೆ. ಆರಕ್ಕೇರದ ಮೂರಕ್ಕೇರದ ಇವರ ಬದುಕಿನಲ್ಲಿ ಜಾಗತೀಕರಣ ತರುವ ಉಪದ್ರವಗಳ ಚಿತ್ರಣವಿದೆ. ಧರ್ಮವೊಂದರಲ್ಲಿ ಕಾಣಿಸುವ ಸಮಸ್ಯೆಗಳು, ಧಾರ್ಮಿಕ ತಿಕ್ಕಾಟಗಳು, ಹೊಟ್ಟೆ ಹೊರೆವ ಸರ್ಕಸ್ಸಿನ ನಡುವೆಯೇ ಹೆಡೆಯಾಡುವ ಶೋಷಣೆಗಳು, ಬಡವರ ಬದುಕಿನಲ್ಲಿ ಅರಳುವ ಕನಸುಗಳು, ಆ ಕಾಲದಲ್ಲಿ ಹೊಸದಾಗಿ ಬಂದಿದ್ದ ಟೆಲೆವಿಷನ್  ಬಿತ್ತಿದ ಕನಸುಗಳು, ಗಂಡಸು-ಹೆಂಗಸಿನ ನಡುವಿನ ಸಾಮಾಜಿಕ ತಾರತ್ಮಮ್ಯಗಳು, ಮನುಷ್ಯನನ್ನು ಕಾಡುವ ಬಯಕೆಗಳು, ನಿರಾಶೆಯಲ್ಲಿ  ಹೊತ್ತಿ ಉರಿಯುವ ಮತ್ತು ಅರಳುವ ಕನಸುಗಳು, ಈ ವಿರಾಟ್ ರೂಪಗಳ ನಡುವೆ ಮುಗ್ದ ಬದುಕುಗಳು ಮಾಡಿಕೊಳ್ಳುವ  ಸಂಧಾನಗಳು, ಅರ್ಥವಿಲ್ಲದ ಸಾಮಾಜಿಕ ಕಟ್ಟಲೆಗಳು, ಕೊನೆಗೆ ಎಲ್ಲವೂ ಅವರವರ ಅನುಕೂಲಗಳಿಗೆ ಎನ್ನುವುದೇ ಬದುಕಿನ ದೊಡ್ಡ ಆಟಗಳಾಗುವುದು ಹೀಗೆ ಹಲವು ಚಿತ್ರಣಗಳಿವೆ. ರಾಜಕೀಯ ತರುವ ಸಾಮಾಜಿಕ ಗೊಂದಲಗಳಿವೆ, ಮಹಿಳೆಯ ಮನಸ್ಸಿನ ಸಂಕಲ್ಪಗಳ ಆಶೋತ್ತರಗಳು ,  ‘ನನ್ನನ್ನು ಇಲ್ಲಿ ಕಳೆದರೆ ಅಲ್ಲಿ ಅರಳುವೆ ‘ ಎನ್ನುವ ಸಂದೇಶದ ಜೊತೆ ಬದುಕನ್ನು ನಡೆಸುವ ಭರವಸೆಗಳ ದೃಶ್ಯಗಳಿವೆ.

ಈ ಚಿತ್ರದ ನಿರ್ಮಾಪಕರು ಅಮೃತ ಮತ್ತು ಬಸಂತ ಕುಮಾರ್ ಪಾಟೀಲರು. ಸಿನಿಮಾಟೊಗ್ರಫಿ ಎಸ್. ರಾಮಚಂದ್ರ ಅವರದು. ಬದುಕಿನ ಅಪರಿಪೂರ್ಣತೆಯಲ್ಲಿಯೇ ಜೀವನದ ರೀತಿಗಳಿರುವುದು ಎನ್ನುವಂತೆ ಸಿನಿಮಾ ಚಿತ್ರಣದಲ್ಲಿ ಅತ್ಯಂತ ನೈಜವಾದ ಬೆಳಕು-ನೆರಳುಗಳನ್ನು ಬಳಸಲಾಗಿದೆ.

ಈ ಸಿನಿಮಾದ ಕಥೆಯನ್ನು ಹೇಳುವುದು ಈ ಲೇಖನದ ಉದ್ದೇಶವಲ್ಲ. ಆದರೆ, ಈ ಸಿನಿಮಾವನ್ನು ನೀವೆಲ್ಲರು ಖಂಡಿತ ನೋಡಿ. ಕೊಂಡಾದರು, ಕಡ ತಗೊಂಡಾದರು ಅಥವಾ ಕದ್ದಾದರೂ ಸರಿಯೇ. ಅಂದ ಹಾಗೆ ಈ ಚಿತ್ರ ಯೂ ಟ್ಯೂಬಿನಲ್ಲಿಯೂ  ಲಭ್ಯವಿದೆ. ಅದರ ಲಿಂಕ್ ಕೆಳಗಿದೆ.

https://www.youtube.com/watch?v=XnCsEs7OOYk

 

———————ಡಾ. ಪ್ರೇಮಲತ ಬಿ.

 

ಡಾ. ಪ್ರೇಮಲತ ಬಿ. ನೋಡಿದ `ಸಕಹಿಪ್ರಾಶಾ,ಕಾ,ಕೊ:ರಾರೈ` ಎನ್ನುವ ಸಿನೆಮಾ

premalata
ಲೇಖಕರು: ಡಾ ಪ್ರೇಮಲತ ಬಿ
(ಶೀರ್ಷಿಕೆ ನೋಡಿ ಏನಾದರೂ ತಪ್ಪಾಗಿದೆಯಾ ಅಂದುಕೊಂಡಿರಾ? ಖಂಡಿತ ಇಲ್ಲ. ಬರೆದುಕೊಡಿ ಎಂದು ಕೇಳಿದ ಕೆಲವೇ ಗಂಟೆಗಳಲ್ಲಿ ಬರೆದ ಪ್ರೇಮಲತ ಅವರಿಗೆ ತುಂಬ ಧನ್ಯವಾದಗಳು. `ಸಕಹಿಪ್ರಾಶಾ,ಕಾ,ಕೊ:ರಾರೈ` ಎನ್ನುವ ಸಿನೆಮಾ ಇಂಗ್ಲಂಡಿನ ಕೆಲವು ಊರುಗಳಲ್ಲಿ ಬಂದಿದೆ, ಬರುತ್ತಿದೆ. ನೋಡಿದವರೆಲ್ಲ `ಪರ್ವಾಗಿಲ್ಲ` ಎನ್ನುತ್ತಿದ್ದಾರೆ. ನನಗಿನ್ನೂ ನೋಡುವ ಭಾಗ್ಯ ಸಿಕ್ಕಿಲ್ಲ. ಆದರೆ ಪ್ರೇಮಲತ ಅವರು ಸೀದಾ ಸಿನೆಮಾ ಟಾಕೀಜಿಗೇ ಕರೆದುಕೊಂಡು ಹೋಗಿ ಸಿನೆಮಾ ತೋರಿಸುತ್ತಾರೆ. ತಡವೇಕೆ? ಓದಿ. ಕೆಳಗೆ ನಿಮ್ಮ ಪ್ರತಿಕ್ರಿಯೆ ಹಾಕುವುದನ್ನು ಮಾತ್ರ ಮರೆಯಬೇಡಿ – ಸಂ)

“ಎರಡು ವರ್ಷಕ್ಕೊಮ್ಮೆ ಬರ್ತೀಯ, ಈ ಬಾರಿಯಾದರೂ ಒಂದು ಸಿನಿಮಾ ನೋಡು “ ಎಂದಳು ಭಾರತದ ನನ್ನ ಅಕ್ಕ.

“ ಹೌದಲ್ಲವಾ” ಅಂತ ನಮ್ಮೂರಿನಲ್ಲಿ ನಡೆಯುತ್ತಿದ್ದ ಸಿನಿಮಾ ಪಟ್ಟಿ ನೋಡಿದೆ. ಪ್ರೀತಿ –ಪ್ರೇಮ, ಫೈಟಿಂಗ್ ಗಳ ಚಲನಚಿತ್ರವನ್ನು ನೋಡುವುದೆಂದರೆ, ‘ನೋಡಿದ್ದನ್ನೆ ನೋಡುವ’ ಕಷ್ಟ. ವೈಚಾರಿಕ ಸಿನಿಮಾಗಳು ಜಾಸ್ತಿ ಓಡದ ಕಾಲವಿದು. ಇನ್ನು ಸಾಂಸಾರಿಕ ಚಿತ್ರಗಳು ಬರುವುದು ನಿಂತ ಮೇಲೆ ಸಂಸಾರಗಳು ಒಟ್ಟಿಗೆ ಸಿನಿಮಾಕ್ಕೆ ಹೋಗುವುದನ್ನು ನಿಲ್ಲಿಸಿ ಮನೆಗಳಲ್ಲೇ ಮನರಂಜನೆ ಕಂಡುಕೊಳ್ಳುತ್ತಿರುವ ಯುಗವಿದು. ಹಾಗಾಗಿ ನನ್ನ ‘ಟಿಕ್ ಲಿಸ್ಟಿ’ಗೆ ಬರಲು ಸಿನಿಮಾಗಳು ತಿಣುಕಾಡಿದವು.

ಕೊನೆಗೆ ಆಗಸ್ಟ್ ೨೪ನೇ ತಾರೀಖು ಬಿಡುಗಡೆಯಾಗಿದ್ದ “ಸರ್ಕಾರೀ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು, ಕೊಡುಗೆ :ರಾಮಣ್ಣ ರೈ” ಎನ್ನುವ ಉದ್ದ ಹೆಸರಿನ ಸಿನಿಮಾಕ್ಕೆ ಹೋಗೋಣ ಎಂದು ನಿರ್ಧರಿಸಿದೆವು. ಹೆಸರು ಕೇಳಿದ ಕೂಡಲೇ ಅರೆ-ಬರೆ ಅದರ ತಿರುಳನ್ನು ಬಿಟ್ಟು ಕೊಡುತ್ತಿದ್ದ ಈ ಸಿನಿಮಾಕ್ಕೆ ನಮ್ಮನ್ನು ಬಿಟ್ಟರೆ ಇನ್ಯಾರ್ಯಾದರೂ ಬರ್ತಾರಾ, ಇಲ್ಲವಾ ಎನ್ನುವ ಅನುಮಾನದಲ್ಲೇ ಗುಬ್ಬಿ ವೀರಣ್ಣನವರ ಸಂಸಾರಕ್ಕೆ ಸೇರಿದ ‘ಪ್ರಶಾಂತ್’ ಎನ್ನುವ ಹೆಸರಿನ ಸಿನಿಮಾ ಮಂದಿರ ತಲುಪಿದೆವು. ನಾನು ಬೇಕಂತಲೇ ಅಲ್ಲದಿದ್ದರೂ ಕಣ್ಣಿಗೆ ಬಿತ್ತು ಅಂತ ಈ ಸಿನಿಮಾದ ರಿವ್ಯೂ ಕೂಡ ಓದಿಬಿಟ್ಟಿದ್ದೆ. ಮೂರೂವರೆ ನಕ್ಷತ್ರ ಸಿಕ್ಕಿತ್ತೆಂಬ ಕಾರಣಕ್ಕೆ ಒಂದಷ್ಟು ನಿರಿಕ್ಷೆಯೂ ಗೊತ್ತಿಲ್ಲದಂತೆ ಸೇರಿ ಕೊಂಡು ಬಿಟ್ಟಿತ್ತು.

Sarkari-Hi-Pra-Shaale-Kasaragodu-1

ಏನಾಶ್ಚರ್ಯ! ಸಿನಮಾ ಮಂದಿರದ ಬಳಿ ಟಿಕೇಟು ಪಡೆಯಲು ಯುವಕ ಯುವತಿಯರ ತಂಡಗಳೇ ದಂಡು ಕಟ್ಟಿ ನಿಂತಿದ್ದರು. ಬಿಡುಗಡೆಯಾಗಿ ಎರಡೇ ದಿನಗಳಾಗಿದ್ದ ಕಾರಣ ಜೊತೆಗೆ ಭಾನುವಾರವಾದ್ದರಿಂದ ತುಮಕೂರು ನಗರದ ಕನ್ನಡ ಜನರು ಭಿನ್ನವೆಣಿಸದೆ ಬಂದಿದ್ದರು.

ಬಾಲ್ಕನಿಗೆ ನಮಗೆ ಟಿಕೇಟು ದೊರಕಿತು. ಅದೇ ಕಮಟು ವಾಸನೆಯ, ಪಾನ್ ಬೀಡಾ ತಿಂದು ಉಗುಳಿದ ಗೋಡೆಗಳ ಈ ಸಿನಿಮಾ ಮಂದಿರಗಳಿಗೆ ಭೇಟಿ ನೀಡುವುದೆಂದರೆ ನಿಮ್ಮ ಬಾಲ್ಯದ ಬಣ್ಣಗಳಿಗೂ, ಯೌವನದ ಮೆರುಗಗಳಿಗೂ ಒಂದು ಬಗೆಯ ಕೊಂಡಿಗಳನ್ನು ಜೋಡಿಸಿಕೊಳ್ಳುವ ಅನುಭೂತಿಯೂ ಹೌದಾಗುತ್ತದೆ. ಅದನ್ನೆಲ್ಲ ಅನುಭವಿಸುತ್ತ ಕುಳಿತಿದ್ದವಳಿಗೆ ಪಕ್ಕದ ಸೀಟಿನಲ್ಲಿ, ಹಿಂದೆ,ಮುಂದೆ ಮರ್ಯಾದಸ್ಥ ಜನರು ಬಂದು ಕೂತರೆ ನಿರಾಳವಾಗಿ ಚಿತ್ರ ನೋಡಬಹುದೆಂದು ಅನಿಸಿತು. ಹಾಗಂತ ಹೇಳಿಯೂ ಬಿಟ್ಟೆ.

ಜೊತೆಯಲ್ಲಿದ್ದ ಅಕ್ಕ “ ಈಗೆಲ್ಲ ಹುಡುಗರು ಚುಡಾಯಿಸುವುದು, ಕಿಚಾಯಿಸುವುದು ನಿಂತು ಹೋಗಿದೆ” ಎಂದಳು.

“ಹೌದಾ?” ಅಂತ ಅಚ್ಚರಿಯಿಂದ ಕೇಳಿದೆ.

“ಹೂಂ, ಯಾಕೆಂದ್ರೆ ಅದರ ಅಗತ್ಯವೇ ಇಲ್ವಲ್ಲಾ, ಈಗೆಲ್ಲ ಹುಡುಗ ಹುಡುಗಿಯರು ಪಟ್ಟಂತ ಫ್ರೆಂಡ್ಸ್ ಆಗಿಬಿಡ್ತಾರೆ. ಎಲ್ಲರಿಗೂ ದಂಡು ದಂಡೇ ಗೆಳೆಯ, ಗೆಳತಿಯರಿರ್ತಾರೆ “ ಅಂತ ನನ್ನ ನಾಲೆಡ್ಜ್ ಅನ್ನು ಅಪ್ಡೇಟ್ ಮಾಡಿದಳು.

ಅಷ್ಟರಲ್ಲಿ ತೆರೆಯ ಮೇಲೆ ಬೆಳಕು ಕಂಡಿತು. ವೀಕೋ ವಜ್ರದಂತಿ, ಕೋಲ್ಗೇಟ್, ರಿನ್ ಸೋಪು ಮತ್ತು ನಿರ್ಮಾ ವಾಷಿಂಗ್ ಪೌಡರಗಳ ಜಾಹೀರಾತುಗಳಿಗೆ ಕಾದು ಕುಳಿತಿದ್ದವಳಿಗೆ ನಿರಾಸೆಯಾಯ್ತು. ಯಾಕಪ್ಪಾ ಒಂದೂ ಬರಲಿಲ್ಲ ಅಂತ ಕಂಗಾಲಾದೆ. “ತಂಬಾಕು ಸೇದುವುದನ್ನು ಬಿಡಿ “, “ಶೌಚಾಲಯ ಬಳಸಿ” ಅನ್ನೋ ಅಕ್ಷಯ್ ಕುಮಾರ್ ನ ಒಂದೆರಡು ಸಂದೇಶ ನೀಡುವ ಜಾಹೀರಾತುಗಳು ಮಾತ್ರ ಕಾಣಿಸಿ ನಿರಾಸೆ ತಂದವು. “ ಹೀಗೂ ಉಂಟೆ?“ ಅನ್ನೋ ಕಸಿವಿಸಿಯಲ್ಲಿ ಕುಳಿತಿದ್ದೆ.

ಇದ್ದಕ್ಕಿದ್ದಂತೆ ಕುಳಿತಿದ್ದವರೆಲ್ಲ ದಡಕ್ಕನೆ ಎದ್ದು ನಿಂತರು. ಕಕ್ಕಾವಿಕ್ಕಿಯಾಗಿ ಅವರೆಡೆ ನೋಡುತ್ತ ನಾನೂ ಎದ್ದುನಿಂತೆ. ಯಾರಾದರೂ ಗಣ್ಯರು ಬಂದರೇನೋ ಎಂದು ಕತ್ತು ಉದ್ದ ಚಾಚಿ ನೋಡಿದೆ. ಈ ಕಸರತ್ತಿನಲ್ಲಿ ‘ ರಾಷ್ಟ್ರಗೀತೆ ಶುರುವಾಗಲಿದೆ’ ಎನ್ನುವ ಸಂದೇಶ ತೆರೆಯ ಮೇಲೆ ಬಂದಿದ್ದನ್ನು ನೋಡಿರಲೇ ಇಲ್ಲ!

“ಈಗೆಲ್ಲ ಸಿನಿಮಾ ಶುರುವಾಗುವ ಮುನ್ನ ರಾಷ್ಟ್ರಗೀತೆ ಹಾಕ್ತಾರೆ..” ಅಂತ ಅಕ್ಕ ಮತ್ತೆ ನನ್ನನ್ನು ತಿವಿದು,ತಿದ್ದಿದಳು. ಹತ್ತು ದಿನಗಳ ಹಿಂದೆ ಮನೆಯ ಬಳಿಯೇ ಇದ್ದ ಸ್ಟೇಡಿಯಂ ನಲ್ಲಿ ನಡೆದ ಸ್ವಾತಂತ್ರ ದಿನಾಚರಣೆಯನ್ನು ಜೋರು ಮಳೆಯ ಕಾರಣದಿಂದಾಗಿ ತಪ್ಪಿಸಿಕೊಂಡಿದ್ದೆ. ಈಗ ಹಠಾತ್ತನೆ ರಾಷ್ಟ್ರಗೀತೆಯನ್ನು ಎಲ್ಲರೊಡನೆ ಹಾಡುವ ಸುಸಲಿತ ಸಂದರ್ಭ ಸಿಕ್ಕಿ ಬಿಟ್ಟಿತ್ತು. ಜೋರಾಗಿಯೇ ಹಾಡಿ ಗೀತೆ ಇನ್ನೂ ನೆನಪಿನಲ್ಲಿದೆ ಎಂದು ಖಾತ್ರಿಪಡಿಸಿಕೊಂಡೆ.

“ಅಯ್ಯೋ.. ಏನೆಲ್ಲ ಬದಲಾವಣೆಗಳಾಗಿವೆ, ಇವನ್ನೆಲ್ಲ ತಿಳಿದುಕೊಳ್ಳದೆ ನಾನೆಷ್ಟು ಗಾಂಪಳಾಗಿ ಹಿಂದುಳಿದಿದ್ದೇನೆ ಎಂದು ಪರಿತಪಿಸುತ್ತಲೇ ಕುಳಿತುಕೊಂಡೆ. ಅನಿವಾಸಿಗಳ ಪಾಡೇ ಹೀಗೆ. ಎರಡೆರಡು ಪ್ರಪಂಚದಲ್ಲಿ ಸದಾ ಅಪ್ಡೇಟ್ ಆಗ್ತಾ ಇರ್ಬೇಕು. ಇಲ್ಲದಿದ್ದರೆ ಎಲ್ಲಾದರೂ ಒಂದು ಜಗತ್ತಿನಲ್ಲಿ ಗೊತ್ತಿಲ್ಲದೆಯೇ ಹಿಂದುಳಿದವರಾಗಿ ಬಿಟ್ಟಿರ್ತೀವಿ!

ಸಿನಿಮಾ ಶುರುವಾಯ್ತು. ಅಪ್ಪಟ ಬಯಲು ಸೀಮೆಯವಳಾದ ನನಗೆ ತಟ್ಟನೆ ಕಾಸರುಗೋಡಿನ ಕಚ್ಚಾ ಭಾಷೆಯಲ್ಲಿ ಶುರುವಾದ ಸಂಭಾಷಣೆ ಅರ್ಥವಾಗದೆ ಎಲ್ಲರೂ ನಕ್ಕ ಕಾರಣ ಬೆಪ್ಪಳಂತೆ ನಾನೂ ನಗುತ್ತ ಕೂತೆ.ಒಂದೆರಡು ಸಂಭಾಷಣೆ ಮತ್ತು ಒಂದು ಸಣ್ಣ ಹಾಡಿಗೆ ಜೋರು ಶಿಳ್ಳೆಗಳು ಬಿದ್ದವು. ಮೊದಲೆಲ್ಲ ಬರೀ ಗಾಂಧೀ ಕ್ಲಾಸಿನಲ್ಲಿ ಕೂತವರು ಮಾತ್ರ ಸಖತ್ತಾಗಿ ಶಿಳ್ಳೆ ಹೊಡೀತಿದ್ರು ಎನ್ನುವ ನೆನಪು. ಇದೀಗ ಬಾಲ್ಕನಿಯ ಬಾಲೆಯರೂ ಸಾರಾ ಸಗಟಾಗಿ ಶಿಳ್ಳೇ ಹೊಡೆದದ್ದನ್ನು ನೋಡಿದ್ದೆ.

ಸಿನಿಮಾ ನಿಜವಾಗಿ ಶುರುವಾದ ಮೇಲೆ ಕಾಸರುಗೋಡಿನ ಭಾಷೆ, ಕಥೆ ಎಲ್ಲ ತಿಳಿಯಾಗುತ್ತ ಹೋಯಿತು. ಅನಂತನಾಗ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್ ,ರಂಜನ್, ಸಪ್ತ ಪವೂರ್,ಸಂಪತ್,ಚಿರಾಗ್, ಪ್ರಕೃತಿ, ಮಹೇಂದ್ರ ಇತ್ಯಾದಿ ನಟರಿರುವ ಈ ಚಿತ್ರ ‘ರಂಗಿತರಂಗ ‘, ‘ಉಳಿದವರು ಕಂಡಂತೆ’ ಇತ್ಯಾದಿ ಚಿತ್ರಗಳಂತೆಯೇ ಪ್ರಾದೇಶಿಕ ಮತ್ತು ನೈಸರ್ಗಿಕ ಚೆಲುವನ್ನು, ಸಂಸ್ಕೃತಿಯನ್ನು ತೆರೆದಿಡುತ್ತದೆ. ತಿಳಿಹಾಸ್ಯ, ಅತಿಶಯೋಕ್ತಿಯ ಪ್ರಸಂಗಗಳು ಎಲ್ಲವೂ ಧಾರಾಳವಾಗಿರುವ ಸಿನಿಮಾ ಇದು. ಜೊತೆಗೆ ಹಲವು ಗ್ರಾಮ್ಯ ಪಾತ್ರಗಳು ಅವುಗಳ ನೈಜರೂಪದಲ್ಲಿ ತೆರೆದುಕೊಂಡಂತೆ ಸಿನಿಮಾವನ್ನು ಎಂಜಾಯ್ ಮಾಡಲು ಶುರುಮಾಡಿದೆ. ಮಮ್ಮೂಟ್ಟಿ ಎಂಬ ಹೆಸರಿನ ಸಾಬರ ಹುಡುಗನ ಪಾತ್ರ ನಿರ್ದೇಶಕ ರಿಶಬ್ ಶೆಟ್ಟಿಯ ಬಾಲ್ಯದ ವ್ಯಕ್ತಿತ್ವವನ್ನು ಪ್ರತಿಪಾದಿಸಿದರೆ, ದಡ್ಡನಾಗಿ, ಪದೇ ಪದೇ ಫೇಲಾಗುತ್ತ ಅದೇ ತರಗತಿಯಲ್ಲಿರುವ ಪ್ರವೀಣನ ಪಾತ್ರ ತನ್ನ ಸೋದರನ ವ್ಯಕ್ತಿತ್ವವನ್ನು ಬಿಂಬಿಸಿದೆ ಎಂದು ಸ್ವತಃ ನಿರ್ದೇಶಕನೇ ಹೇಳಿಕೊಂಡಿರುವುದು ಆಸಕ್ತಿದಾಯಕ. ವಯಸ್ಸಿಗೆ ಬರುವ ಹುಡುಗನ ಮೊದಲ ಪ್ರೀತಿ, ಹೇಳಿಕೊಳ್ಳಲಾಗದ ಧಾವಂತಗಳು, ಭುಜಂಗನ ಉತ್ತರಕುಮಾರನಂತ ವ್ಯಕ್ತಿತ್ವ, ಟೀಚರುಗಳ ಪಾಡು, ಮುಖ್ಯೋಪಧ್ಯಾಯನ ಪೀಕಲಾಟ ಎಲ್ಲವೂ ಮನಸ್ಸಿಗೆ ಹಿಡಿಸುವ, ನಗಿಸುವ ಪಾತ್ರಗಳೇ.

ಮರಗಳನ್ನು ಸುತ್ತುವ ಹಾಡುಗಳಿಲ್ಲದ, ಮಾರಾ ಮಾರಿಯಿಲ್ಲದ, ವಿಪರೀತ ಎನ್ನಿಸುವ ಕೃತಕ ಹಾಸ್ಯವಿಲ್ಲದೇ ಸಹಜವಾಗಿ ನಗಿಸುವ ಉತ್ತಮ ಚಿತ್ರ ಇದು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಯೇ ಅವಶ್ಯಕತೆಯೇ ಇರದ ಹಲವು ಪಾತ್ರಗಳೂ ಈ ಚಿತ್ರಗಳಲ್ಲಿವೆ (ಅಯ್ಯಪ್ಪ ಸ್ವಾಮಿ ಪೋಲೀಸು ಸಬ್ ಇನ್ಸ್ಪೆಕ್ಟರ್ ಪಾತ್ರ, ರಮೇಶ್ ಭಟ್ ಮಾಡಿರುವ ನೆರೆಮನೆಯವನ ಪಾತ್ರ). ಆದರೆ ಹಾಗೊಂದಿಷ್ಟು ಪಾತ್ರ ಕಲ್ಪಿಸಿ ನಿಜ ಕತೆಗೆ ತಳುಕು ಹಾಕುವಲ್ಲಿ ಮಾತ್ರ ನಿರ್ದೇಶಕರು ಸಂಪೂರ್ಣ ಸೋತಿಲ್ಲ ಎನ್ನಬಹುದು. ಅದೇ ರೀತಿ ಯಾವ ಸಂದೇಶವನ್ನು ನೇರವಾಗಿ ಕೊಡದೆ ಒಂದು ಮನರಂಜನಾತ್ಮಕ ಕಾಲ್ಪನಿಕ ಕತೆಯಲ್ಲಿಯೇ ಕನ್ನಡ ಶಾಲೆಯನ್ನು ರಕ್ಷಿಸಲು ನಡೆಸಿದ ಹೋರಾಟವನ್ನು ಹಗೂರವಾಗಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ತಮ್ಮ ಬಾಲ್ಯದಲ್ಲಿ ಕುಂದಾಪುರದ ಒಂದು ಕನ್ನಡ ಶಾಲೆಯನ್ನು ರಕ್ಷಿಸಿದ ಪ್ರಸಂಗದ ನೆನಪಲ್ಲಿ ಹೊಸ ಕಥೆಯೊಂದನ್ನು ಹೆಣೆದಿದ್ದಾರೆ.

ವಿದ್ಯಾರ್ಥಿಗಳಿಲ್ಲದೆ ಮುಚ್ಚುತ್ತಿರುವ ಕನ್ನಡ ಶಾಲೆಗಳು ಕೇರಳಕ್ಕೆ ಸೇರಿದ ಕಾಸರುಗೋಡಿನಲ್ಲಿ ಮಾತ್ರವಲ್ಲದೆ ರಾಜ್ಯದಾದ್ಯಂತ ಇವೆ. ಈಗಾಗಲೇ ಮುಚ್ಚಿಯೂ ಹೋಗಿವೆ. ಮನರಂಜನೆಯ ಜೊತೆಗೇ ಈ ಬಗ್ಗೆ ಒಂದಿಷ್ಟು ಮಾಹಿತಿಭರಿತ ಸಂದೇಶಗಳನ್ನು, ಅದರಿಂದಾಗುತ್ತಿರುವ ಸಮಸ್ಯೆಗಳನ್ನು ಹೇಳಲು ನಿರ್ದೇಶಕರಿಗೆ ಅವಕಾಶವೂ, ಪಾತ್ರಗಳೂ ಈ ಚಿತ್ರದಲ್ಲಿ ಸಿಕ್ಕಿದ್ದರೂ ಮನರಂಜನೆಯನ್ನೇ ಮುಖ್ಯವಾಗಿಟ್ಟುಕೊಂಡು ಕತೆಯನ್ನು ಸುಖಾಂತ್ಯ ನೀಡಿ ಮುಗಿಸಿದ್ದಾರೆ ಅನ್ನಿಸಿತು. ಆದರೆ, ಕನ್ನಡದ ಬಗೆಗಿನ ಒಂದೊಂದು ಡೈಲಾಗಿಗೂ ಕರತಾಡನ , ಕನ್ನಡದ ಬಗೆಗಿನ ಸಂಭಾಷಣೆಗಳಿಗೆ ಚಪ್ಪಾಳೆಗಳು ಬಿದ್ದಕಾರಣ ಕನ್ನಡತನವನ್ನು ಯುವ ಜನತೆಯ ಹೃದಯಕ್ಕೆ ಹಗುರವಾಗಿ ಈ ಚಿತ್ರದ ಮೂಲಕ ಸವರಿದ್ದಾರೆ ಅನ್ನಬಹುದು.

ಅನಂತನಾಗ್-ನ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ, “ನನ್ನ ತಮ್ಮ ಶಂಕರ” ಎನ್ನುವ ಪುಸ್ತಕವನ್ನು ನೋಡಿದ್ದೆ. ಆತ ಸ್ವತಃ ಹಾಡುವುದನ್ನೂ ಕೇಳಿದ್ದೇನೆ. “ಹೊಟ್ಟೆಗಾಗಿ ,ಗೇಣು ಬಟ್ಟೆಗಾಗಿ ಹಾಡನ್ನು ನಿಮಿಷಗಳಲ್ಲಿ ಇಂಗ್ಲಿಷಿಗೆ ಭಾಷಾಂತರಿಸಿಕೊಟ್ಟ ವಿಸ್ಮಯಕಾರಿ ಜಾಣ್ಮೆಯನ್ನು ಕೇಳಿ ಬೆರಗಾಗಿದ್ದೇನೆ. ಈ ಸಿನಿಮಾದಲ್ಲಿ ಕೂಡ ಆತನ ವಿಶಿಷ್ಠವಾದ,ಸ್ಪಷ್ಟವಾದ ಕನ್ನಡದ ಉಚ್ಚಾರದಲ್ಲಿ ಇವತ್ತಿಗೂ ಒಂದು ತುಂಟತನವನ್ನು ಉಳಿಸಿಕೊಂಡಿರುವುದರಲ್ಲಿ ಕಾಲ ಯಾವ ವ್ಯತ್ಯಾಸವನ್ನೂ ಮಾಡಿಲ್ಲ ಎನ್ನಿಸಿತು. ಈ ಸಿನಿಮಾದಲ್ಲಿ ಆತನದು ಎಂದಿನ ವಿನೋದ ಭರಿತ ವಿಶೇಷ ಪಾತ್ರವೇ. ಅನಂತನ ಪ್ರತಿ ಹೆಜ್ಜೆಗೂ, ಮಾತಿಗೂ ಸಿನಿಮಾ ಮಂದಿರದಲ್ಲಿದ್ದ ಇಂದಿನ ಯುವ ಜನತೆ ಶಿಳ್ಳೆ ಹೊಡೆದು ಮೆಚ್ಚುಗೆ ನೀಡಿತು.

ಸಣ್ಣ ಬಂಡವಾಳದಲ್ಲಿ, ಗ್ರಾಮೀಣ ಪರಿಸರ, ಗಡಿನಾಡ ವಿಶಿಸ್ಟ್ಯ ಸಮಸ್ಯೆಗಳ ಒಂದು ಮುಖದ ಪರಿಚಯದೊಂದಿಗೆ, ಹೊಸಮುಖಗಳ ತಾಜಾತನ, ಪ್ರತಿಭೆಗಳಿಗೆ ಅವಕಾಶ ಮತ್ತು ಕರ್ನಾಟಕದ ಒಂದು ಮೇರು ಭಾಗವಾದ ಮಂಗಳೂರು ಭಾಷೆ, ಪರಿಸರ, ಪ್ರಕೃತಿ ಎಲ್ಲವನ್ನು ಹೊಸತನದೊಂದಿಗೆ ನಿರ್ದೇಶಕ ರಿಷಬ್ ಶೆಟ್ಟಿ ಸಮರ್ಥವಾಗಿ ಹಿಡಿದಿಟ್ಟು ತೋರಿಸಿ ನಿಭಾಯಿಸಿದ್ದಾರೆ. ‘ರಿಕಿ’, ‘ಕಿರಿಕ್ ಪಾರ್ಟಿ’ ಸಿನಿಮಾದ ನಂತರ ಮೂರನೆಯ ವಿಶಿಷ್ಟ ಸಿನಿಮಾ ಮಾಡಿ ಹೊಸ ಅಧ್ಯಾಯವನ್ನು ಶುರುಮಾಡಿದ್ದಾರೆ. ಯುವ ಜನತೆಯನ್ನು ಸೋಶಿಯಲ್ ಮೀಡಿಯಾಗಳ ಮೂಲಕ ತಲುಪಿ, ಈ ಚಿತ್ರವನ್ನು ನೋಡಲು ಹುರಿದುಂಬಿಸಿದ್ದಾರೆ. ಹಾಗಾಗಿ ಈ ಚಿತ್ರದ ವಾಸುಕಿ ವೈಭವ್ ರ ಹಾಡುಗಳು ಯೂ-ಟ್ಯೂಬಿನಲ್ಲಿ ಮಿಲಿಯನ್ ವ್ಯೂ ಗಳಿಸಿವೆ. ವೆಂಕಟೇಶ ಅಂಗುರಾಜ್ ರ ಛಾಯಾಗ್ರಹಣ ಕೂಡ ಕಣ್ಸೆಳೆಯುತ್ತದೆ.

೧೯೫೬ರಲ್ಲಿಯೇ ಕೇರಳಕ್ಕೆ ಸೇರಿದ ಕಾಸರಗೋಡಿನ ಸೂಕ್ಷ್ಮ ಚರಿತ್ರೆಗೆ, ವಿವಾದಗಳಿಗೆ ಕೈಹಾಕದೆ, ಕೇವಲ ಗಡಿಪ್ರದೇಶಗಳಲ್ಲಿ ಕನ್ನಡ ಭಾಷಾ ಮಾಧ್ಯಮದ ಉಳಿವಿಗಾಗಿ ನಡೆವ ಹಾಸ್ಯಭರಿತ ಹೋರಾಟದ ಕಥೆಯ ಜಾಡನ್ನು ಹಿಡಿದು , ಸ್ಥಳೀಯರನ್ನೇ ಪ್ರಧಾನ ಪಾತ್ರಗಳಲ್ಲಿ ತೋರಿಸಿ, ಉತ್ತಮ ಚಿತ್ರ ಮಾಡುವಲ್ಲಿ ರಿಶಬ್ ಅಗತ್ಯವಾಗಿ ಗೆದ್ದಿದ್ದಾರೆ.

ಇದೇ ಮೂಡಿನಲ್ಲಿ, ‘ಸರ್ಕಾರೀ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು, ಕೊಡುಗೆ ; ರಾಮಣ್ಣ ರೈ’ ಚಿತ್ರವನ್ನು ಜಾಡಿಸಿ ಕೊಡವಲೂ ಆಗದೆ, ಮೆಚ್ಚದೆ ಇರಲೂ ಆಗದೆ, ಬೇಜಾರಿಲ್ಲದ ಮನಸ್ಸಿನಿಂದ ಹೊರಬಿದ್ದೆವು. ಮಮ್ಮೂಟ್ಟಿ, ಭುಜಂಗ, ಉಪಾಧ್ಯಾಯನ ಪಾತ್ರಗಳು ಮನಸ್ಸಲ್ಲಿ ಅಚ್ಚು ಹಾಕಿಕೊಂಡಿದ್ದವು.

ಈ ಚಿತ್ರ ತಂಡಕ್ಕೆ ಶುಭ ಹಾರೈಸೋಣ.