ಮುಗ್ಧ ಭಾವನೆ-ರಾಧಿಕಾ ಜೋಶಿ

ಪ್ರಿಯ ಓದುಗರೇ ,
‘ಸಿನೆಮಾ ನೋಡಿ’ ಸರಣಿಯ ಈ ವಾರದ ಸಂಚಿಕೆಯಲ್ಲಿ ರಾಧಿಕಾ ಜೋಶಿ ಅವರು ೧೯೮೩ ಯಲ್ಲಿ ತೆರೆಕಂಡ ಬಾಲಿವುಡ್ ಖ್ಯಾತಿಯ “ಮಾಸೂಮ್” ಸಿನೆಮಾದ ಚಿತ್ರಕಥೆ, ಸಂಗೀತ ಮತ್ತು ಮುಗ್ಧ ಭಾವನೆಗಳ ವೈಯಕ್ತಿಕ ಅಭಿಪ್ರಾಯಗಳನ್ನು ಮುಂದಿಟ್ಟಿದ್ದಾರೆ. ಓದಿ ಪ್ರತಿಕ್ರಿಯಿಸಿ. 🙏 -ಸವಿ.ಸಂ

Masoom (1983 film) - Wikipedia
ಚಿತ್ರ ಕೃಪೆ – ಗೂಗಲ್

ನಮ್ಮ ದೇಶ ವಿಶ್ವದಲ್ಲೇ ಅತಿ ಹೆಚ್ಚು ಚಲನಚಿತ್ರ ನಿರ್ಮಿಸಿ ಹಾಗು ಪ್ರದರ್ಶಿಸುವ ದೇಶ. ಹೀಗಾಗಿ ಎಲ್ಲರು ಸಿನಿಮಾ
ಪ್ರಿಯರೆ. ನಾನು ಕೂಡ. ನಮ್ಮ ಮನೆಯಲ್ಲಿ ಹಿಂದಿ ಸಿನಿಮಾ ಹಾಗು ಹಿಂದಿ ಸಿನಿಮಾ ಹಾಡುಗಳು ಕೇಳುವುದು ಹೆಚ್ಚು. ನನಗೆ ರೇಡಿಯೋದಲ್ಲಿ ಹಾಡು ಬರುವ ರೀತಿ ಹಾಗು ಆ ಕಾಲದಲ್ಲಿ ಆಯ್ದ ಹಾಡುಗಳನ್ನು ಅಂಗಡಿಗೆ ಹೋಗಿ ಕ್ಯಾಸೆಟ್ಗಳನಲ್ಲಿ ರೆಕಾರ್ಡ್ ಮಾಡಿ ಅವುಗಳನ್ನು ಟೇಪ್ ರೆಕಾರ್ಡರ್ನಲ್ಲಿ ಒಂದು ಆಶ್ಚರ್ಯವೆನಿಸುತಿತ್ತು.ನನ್ನ ತಂದೆ ಮುಕೇಶ್ ಹಾಗು ಮುಹಮ್ಮದ್ ರಫಿ ಹಾಡುಗಳ ಕ್ಯಾಸೆಟಗಳನ್ನು ಬಹಳಷ್ಟು ಕಲೆ ಹಾಕಿದ್ದರು, ಈಗಲೂ ಇವೆ ,ಕಳಕಲ್ಲೇ ಧೂಳು ಒರೆಸಿ ಅದನ್ನು ಟೇಪ್ ರೆಕಾಡ್ರ್ನಲ್ಲಿ ಹಚ್ಚುತ್ತಾರೆ.

ರಾತ್ರಿ ಮಲಗುವ ಮುನ್ನ ವಿವಿದ್ ಭಾರ್ತಿ, ಸಿಲೋನ್ ರೇಡಿಯೋ ಸ್ಟೇಷನ್ ಹಚ್ಚಿ ನನ್ನ ತಂದೆ ತಾಯಿ ಅಲ್ಲಿ ಪ್ರಸಾರವಾಗುವ ಹಾಡು ಕೇಳಿ ಗುನುಗುತ್ತಾ ,ಅವುಗಳ ಬಗ್ಗೆ ಮಾತಾಡುತ್ತಾ ದಿನ ದಣಿಗೆ ಕಳೆವ ಪದ್ಧತಿ. ಹಾಗೆ ಕೇಳುತ್ತಿದಾಗ ಒಂದು ಹಾಡಿಗೆ ನನ್ನ ತಾಯಿ ಭಾವುಕಳಾಗುತ್ತಿದ್ದಳು. ನನ್ನ ತಂದೆಗೆ ಅವಳು ಎಂಥ ಅರ್ಥಪೂರ್ಣ ಹಾಡು, ಆ ಸಿನಿಮಾದಲ್ಲಿ ನಟಿಸಿದ್ದ ಪುಟ್ಟ ಹುಡುಗನ ಅಭಿನಯ ಪ್ರಭುದ್ದತೆ ಮೆಚ್ಚುತ್ತಾ ಮಮತೆಯ ಒಂದು ಒಳ್ಳೆಯ ಸಿನಿಮಾ ಅಂತಿದ್ಲು. ಸುಮಾರು ನನಗೆ ೪-೫ ವರ್ಷಗಳಿರಬಹುದು. ಆಗ ಕಪ್ಪು ಬಿಳುಪು ಟಿವಿ ನಮ್ಮನೇಲಿ. ಆ ಹಾಡು ಟಿವಿಲಿ ಬಂದಾಗ ನನ್ನ ತಾಯಿ ಕಣ್ಣು ಮಂಜಾಗುತ್ತಿತ್ತು. ಯಾಕಮ್ಮ ಅಳ್ತಿದೀಯಾ ಅಂತ ನಾವು ಕೇಳಿದ್ರೆ ನಿಮಗೆ ಈಗ ತಿಳಿಯುದಿಲ್ಲ ಅಂತ ಹೇಳಿ ಸುಮ್ಮನಾಗ್ತಿದ್ಲು. ನನ್ನ ಹುಟ್ಟು ವರ್ಷದಲ್ಲಿ 1983 ಬಿಡಿಗಡೆಯಾದ ಸಿನಿಮಾ ”ಮಾಸೂಮ್ ”. ಅದೇ ವರ್ಷ ಸಿನಿಮಾ ಮಂದಿರಕ್ಕೆ ಹೋಗಿ ನೋಡಿದ್ರಂತೆ. ನೋಡಿ, ಆ ಕಾಲದಲ್ಲಿ ನಮ್ಮ ಅಮ್ಮ , ಮೌಶಿ, ಮಾಮಿ , ಕಾಕುಗಳೆಲ್ಲಾ ಕೂಸುಗಳನ್ನು ಕಟ್ಕೊಂಡೋ ಅಥವಾ ಅವುಗಳನ್ನು ಮನೇಲಿ ಬಿಟ್ಟೋ ಸಿನಿಮಾ ನೋಡಲು ಹೋಗ್ತಿದ್ರಂತೆ. ಈಗ ನಾವು ನಮ್ಮ ಪುಟ್ಟ ಮಕ್ಕಳನ್ನು ಸಿನಿಮಾಕ್ಕೆ ಕರ್ಕೊಂಡು ಹೋಗ್ಬೇಕು ಅಂದ್ರೆ ಎಷ್ಟು ಯೋಚನೆ ಮಾಡ್ತೀವಿ.

1983 ಬಿಡಿಗಡೆಯಾದ ಸಿನಿಮಾ ”ಮಾಸೂಮ್ ” ಸಿನಿಮಾ ನೋಡಲು ಮಂದಿರದಲ್ಲೂ ಅತ್ಳಂತೆ ನಮ್ಮ ಅಮ್ಮ. ಆ ಸಿನಿಮಾದ ಪ್ರಭಾವವೋ ಅಥವಾ ಬಾಣಂತಿಯ ಹಾರ್ಮೋನುಗಳೋ ಗೊತ್ತಿಲ್ಲ. ಯಾಕೆಂದರೆ ಆ ಸಿನಿಮಾ ನಾನು ಚಿಕ್ಕವಳಿದ್ದಾಗ ನೋಡಿದ್ದೇ ನನಗೆ ಹಿಂದಿನೂ ತಿಳಿತಿರ್ಲಿಲ್ಲ ಆ ಮುಗ್ಧ ಭಾವನೆ , ಸಂಕೀರ್ಣ ಸಂಭಂಧಗಳೂ ಅರ್ಥವಾಗುತ್ತಿರಲಿಲ್ಲ. ಆ ಸಿನಿಮಾ ಸುಮಾರು ಬಾರಿ ನೋಡಿದ್ದೀನಿ. ಆ ಹಾಡು ”ತುಝಸೆ ನಾರಾಜ್ ನಹಿ ಜಿಂದಗಿ ಹೈರಾನ್ ಹೂ ಮೈ” ಲತಾ ಮಂಗೇಶ್ಕರ್ ಹಾಗು ಅನೂಪ್ ಘೋಷಾಲ್ ಇಬ್ಬರ ದನಿಯಲ್ಲಿದ್ದು , ನನಗೆ ತುಂಬಾ ಇಷ್ಟವಾಗಿದ್ದು ಅನೂಪ್ ಅವರ ಗಾಯನ. ಸುಮಾರು ವರ್ಷಗಳ ನಂತರ ಇತ್ತೀಚೆಗಷ್ಟೇ ಮತ್ತೊಮ್ಮೆ ನೋಡಿದಾಗ ನನ್ನ ಅಮ್ಮ ಏಕೆ ಭಾವುಕಳಾಗುತ್ತಿದ್ದಳು ಅಂತ ಅರ್ಥವಾಗುತ್ತದೆ. ಆ ಹಾಡಿನ ಸಾಹಿತ್ಯವನ್ನು ಹುಡುಕಿ ಓದಿದಾಗ ಗುಲ್ಜಾರ್ ಸಾಬ್ ಎಂಥಹ ಕವಿ , ಸೂಕ್ಷ್ಮ ಭಾವನೆಗಳನ್ನು ಅತಿ ಸೂಕ್ಷ್ಮವಾದ ಸರಳ ಸೂಕ್ತ ಪದಗಳಿಂದ ಎಷ್ಟು ಮನಃ ಮುಟ್ಟುವಂತೆ ಬರಿದ್ದಾರೆ ಎಂದು ಮತ್ತೆ ಮತ್ತೆ ಆ ಹಾಡನ್ನು ಕೇಳಿದೆ. ಆ ಹಾಡಿನ ತಕ್ಕಂತೆ ಸಿನೆಮಾದಲ್ಲೂ ಅನನುಕರಣೀಯ ಅಭಿನಯ ಮಾಂತ್ರಿಕ ನಸೀರುದ್ದೀನ್ ಶಾಹ್, ವಿಷಣ್ಣತೆ ನಡುವಳಿಕೆಯ ಪುಟ್ಟ ಜುಗಲ್ ಹಾಗು ಅತೃಪ್ತಿ , ದುಮ್ಮಾನದ ವರ್ತನೆ ಕಣ್ಣಿನಿಂದಲೇ ತೋರಿಸುವ ಶಬಾನಾ ಆಜ್ಮಿ. ಒಬ್ಬರಿಗಿಂತ ಮತ್ತೊಬ್ಬರು ತಮ್ಮ ನಿಜ ಜೀವನದಲ್ಲೇ ನಡೆದಿರುವ ರೀತಿ ಅಭಿನಯ ಮಾಡಿದ್ದೂ ನನಗೆ ಮರೆಯಲಾಗದ ಒಂದು ಅದ್ಭುತ ಚಲನ ಚಿತ್ರ. ಚಿತ್ರ ನಿರ್ದೇಶಕನಾಗಿ ಪ್ರಥಮ ಸಿನಿಮಾ ಮಾಡಿದ ಮತ್ತೊಬ್ಬ ಶ್ರೇಷ್ಠ ನಿರ್ದೇಶಕ ಶೇಖರ್ ಕಪೂರ್ ನೋಡುಗರನ್ನು ಭಾವನಾತೀತ ಹಾಗು ಮಂತ್ರಮುಗ್ಧ ಮಾಡುವ ತಂತ್ರ ಇರಬಹುದು.

ಇದೆ ಸಿನಿಮಾ, ಈಗಿನ ಕಾಲಕ್ಕೆ ಮಾಡಿದ್ದಿದ್ದರೆ ಅದು ಬೇರೆ ರೀತಿನೇ ಇರ್ತಿತ್ತು. ಪರಿವಾರಕ್ಕಿಂತ ವೈಯಕ್ತಿಕ ನೀತಿ ನ್ಯಾಯಗಳ ಬಗ್ಗೆ ಚರ್ಚೆ ಆಗುತ್ತಿತ್ತು. ತಮ್ಮತಮ್ಮ ವರ್ತನೆ, ತಪ್ಪುಗಳನ್ನು ಸಮರ್ಥಿಸಿಕೊಂಡು ಬೇರೆಯಾಗಿ ಸಂಸಾರ ಒಡೆದು ,ಅವರವರ ದಾರಿ ಹುಡುಕಿಕೊಂಡು ಹೋಗುತ್ತಿದ್ದರು. ಬಹುಶಃ ಈಗಿನ ಪೀಳಿಗೆಯ ಲಿಂಗ ಬೇಧವಿಲ್ಲದ ಸಮಾನತೆಯ ಒಂದು ಆಲೋಚನ.

ರಾಧಿಕಾ ಜೋಶಿ

ಸಿನೆಮಾ ಮಾತು: ಒಂದು ಶಿಕಾರಿಯ ಕಥೆ (೨೦೨೦)- ಮುರಳಿ ಹತ್ವಾರ್

ಎಲ್ಲರಿಗೂ ಸವಿಯ ಪ್ರೀತಿಪೂರ್ವಕ ನಮಸ್ಕಾರಗಳು!
ಅನಿವಾಸಿ ತಂಗುದಾಣದ ಸಂಪಾದಕೀಯ ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಹಸ್ತಾ೦ತರಿಸಿದ ಡಾ.ದಾಕ್ಷಾಯಿಣಿ ಗೌಡರವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಮುಂದೆ ಸಂಪಾದಕಿಯಾಗಿ ನಾನು ನಡೆಸಲಿದ್ದೇನೆ. ನಿಮ್ಮೆಲ್ಲರ ಬೆಂಬಲ, ಪ್ರೋತ್ಸಾಹ ಮತ್ತು ನಿಮ್ಮ ಲೇಖನಗಳ ಮುಖಾಂತರ ನನಗೂ ಸಹ ನೀಡಿ ಎಂದು ಸವಿಯ ಸವಿನಯ ಪ್ರಾರ್ಥನೆ
.

‘ಸಿನೆಮಾ ನೋಡಿಸರಣಿಯಲ್ಲಿ ಮುರಳಿ ಹತ್ವಾರ್(ಲಂಡನ್) ರವರು ಕಳೆದ ವರ್ಷ ೨೦೨೦ ರಲ್ಲಿ ಬಿಡುಗಡೆಯಾದ “ಒಂದು ಶಿಕಾರಿಯ ಕಥೆ” ಸಿನೆಮಾದ ಒಂದು ಕಿರು ವಿಮರ್ಶೆ,ಮನದಾಳದ ಮಾತುಗಳನ್ನು ತಮ್ಮ ಲೇಖನದಲ್ಲಿ ಮುಂದಿಟ್ಟಿದ್ದಾರೆ. ಓದಿ ಪ್ರತಿಕ್ರಿಯಿಸಿ. – ಸವಿ (ಸಂ)

ಚಿತ್ರ ಕೃಪೆ – ಗೂಗಲ್

ಸಿನೆಮಾ ಮಾತು: ಒಂದು ಶಿಕಾರಿಯ ಕಥೆ (೨೦೨೦)


೨೦೨೦ರಲ್ಲಿ ಓಟಿಟಿ ಗಳಲ್ಲಿ ಬಿಡುಗಡೆಯಾದ ‘ಒಂದು ಶಿಕಾರಿಯ ಕಥೆ’ ಒಂದು ರೀತಿಯಲ್ಲಿ ಕನ್ನಡ ಸಿನೆಮಾಗಳ ಹೊಸ ಅಲೆಯ ೭೦ರ ದಶಕಕ್ಕೆ ವೀಕ್ಷಕರನ್ನು ಕೊಂಡೊಯ್ಯುವ ಸಿನೆಮಾ. ಹಲವು ಹಂದರಗಳಲ್ಲಿ ಅಡಗಿದ, ದೃಶ್ಯ ಮತ್ತು ಮಾತುಗಳ ಪದರ-ಪದರಗಳಲ್ಲಿ ಹೊರ ಬರುವ ಹಲವು ಮನಸ್ಸುಗಳ ಬೆಳವಣಿಗೆಯ ಅರ್ಥ ಪೂರ್ಣ ಕಥೆಯನ್ನ ಈ ಶಿಕಾರಿಯ ಸಿನೆಮಾ ಹೇಳುತ್ತದೆ. 
ಇಲ್ಲಿ ಶಿಕಾರಿ ಮಾಡುವವರಿದ್ದಾರೆ, ಶಿಕಾರಿಗೆ ಸಿಕ್ಕುವ ಪ್ರಾಣಗಳಿವೆ, ಮತ್ತೆ ಆಯಾ ಶಿಕಾರಕ್ಕೆ ತಕ್ಕಂತೆ ಹೊಂದುವ ಬಂದೂಕು ಮತ್ತೆ ಅದರಿಂದ ಹೊರಡುವ ಗುಂಡು. ನಿಜದ ಬಂದೂಕಿಗೆ ಹುಲಿಯೊಂದು ಸಾಯುತ್ತದೆ, ಹುಸಿಯೆಂದು ತಿಳಿದ ಗುಂಡೊಂದು ಮನುಷ್ಯನ ದೇಹ ಹೊಕ್ಕುತ್ತದೆ. ಅಲ್ಲಿಂದ ಕಥೆ ತಿರುಗುತ್ತ ಬಂದೂಕು, ಶಿಕಾರಿ, ಶಿಕಾರಿಗೆ ಸಿಕ್ಕ ಪ್ರಾಣಿ ಎಲ್ಲವೂ ಆಡಲು ಬದಲಾಗುತ್ತ ಹೊಸ-ಹೊಸ ಕೋನಗಳಲ್ಲಿ ಕಥೆ ತೆರೆದುಕೊಳ್ಳುತ್ತಾ ಹೋಗುತ್ತದೆ. 


ಆದರೆ, ಕಥೆ ಮುಗಿದ ನಂತರ ತೆರೆದುಕೊಳ್ಳುವದು ಅದರ ಒಳ ಸೆಲೆ. ಮನುಷ್ಯನ ಮನದೊಳಗಿನ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು ಹೇಗೆ ಕೆಲವೊಮ್ಮೆ ಬೇರೆಯವರ ಶಿಕಾರಿ ಮಾಡಿಸಿ, ಮತ್ತೆ ಕೆಲವೊಮ್ಮೆ ಅವನನ್ನೇ ಬಂದೂಕಿನ ಗುಂಡಿಗೆ ಒಪ್ಪಿಸುತ್ತದೆ ಎನ್ನುವದು ಈ ಕಥೆಯ ಮಹಾ-ಹಂದರ. ಇವೆಲ್ಲವನ್ನೂ ತ್ಯಾಗ ಮಾಡುವದು ಒಂದು ಪರಿಹಾರ ಇರಬಹುದು ಎನ್ನುವ ತಾತ್ವಿಕ ಸಂದೇಶ ಇದರಲ್ಲಿದೆ; ಅದರಲ್ಲೂ ಜೈನ ಧರ್ಮದ ತತ್ವಗಳು ಪ್ರಬಲವಾಗಿ ಎದ್ದು ಕಾಣುತ್ತವೆ. 
ಈ ಸಂದೇಶಗಳನ್ನ ಹೇಳಲು ಕಥೆ ಬಳಸಿಕೊಳ್ಳುವ ಪಾತ್ರಗಳಲ್ಲಿ ಯಾವುದಕ್ಕೂ ಹೇಸದ ಕಳ್ಳನಿದ್ದಾನೆ; ಹೆಂಡತಿಯನ್ನು ಅನುಮಾನದ ಬಂದೂಕಿನಿಂದ ಕೊಲ್ಲುವ ಗಂಡನಿದ್ದಾನೆ; ತನ್ನ ಮೋಹದ ಬಂಧನದ ಬಲೆಯೊಂದರಲ್ಲಿ ಸಿಕ್ಕು, ಭಯವೆಂಬ ಬಂದೂಕಿಗೆ ಶಿಕಾರಿಯಾಗುವ ಅಹಿಂಸಾ ಪ್ರಿಯನಿದ್ದಾನೆ. ಇವರೆಲ್ಲರ ಪಾಶಗಳಲ್ಲಿ ಸಿಕ್ಕು ಸೋಲುವ ಎರಡು ಪ್ರೀತಿಯ ಜೀವಗಳಿವೆ, ಅನಾಥವಾಗುವ ಅವರ ಪ್ರೀತಿಯಿದೆ.

 
ಈ ಕಥೆ ಸಾಗುವ ವೇಗ ಅಲ್ಲಲ್ಲಿ ವೀಕ್ಷಕರ ತಾಳ್ಮೆಗೆ ಪರೀಕ್ಷೆಯೊಡ್ಡುತ್ತದೆ. ಬಹುಷಃ, ಬೇಟೆಗೆ ಹೋಗಿ ಪ್ರಾಣಿಯೊಂದಕ್ಕೆ ಕಾಯುವದು ಹೀಗೆ ಇರಬಹುದೇನೋ. ತಾಳ್ಮೆಯಿಂದ ಕುಳಿತು ನೋಡುವವರಿಗೆ ಒಂದು ಒಳ್ಳೆಯ ಕಥೆಯ ಶಿಕಾರಿ ಸಿಕ್ಕಂತ ಅನುಭವವಂತೂ ಗ್ಯಾರಂಟಿ. 


ಸಿನೆಮಾದ ಕ್ಯಾಮೆರಾ ಕ್ಲೋಸ್-ಅಪ್ ಆ್ಯಂಗಲ್‍ಗಳನ್ನು ಉತ್ತಮವಾಗಿ ಹಿಡಿದಿದೆ. ಆದರೆ, ಲಾಂಗ್‍ಶಾಟ್‍ಗಳಲ್ಲಿ ಪಶಿಮ ಘಟ್ಟದ ಹಸಿರನ್ನು ಇನ್ನೂ ಗಟ್ಟಿಯಾಗಿ, ಮನ ಮುಟ್ಟುವ ಹಾಗೆ ಹಿಡಿದಿಡಬಹುದಿತ್ತು ಅನಿಸುತ್ತದೆ. ನಟನೆಯೂ ಅಷ್ಟೇ: ಕೆಲವರದ್ದು ಅತ್ಯುತ್ತಮ, ಉಳಿದವರದ್ದು ಎದ್ದು ಕಾಣುವ ಅನನುಭವ. 

ಇದೊಂದು ಕಲಾತ್ಮಕ ಚಿತ್ರ. ಮನರಂಜನೆಯ ಮೂಡಿನಲ್ಲಿದ್ದಾಗ ನೋಡಿದರೆ ಬೆರಳುಗಳು ತಂತಾನೇ ರಿಮೋಟಿನತ್ತ ಓಡುವಂತ ಸಿನೆಮಾ. ಇದಕ್ಕೆ ಒಂದು ಬಿಡುವಿನ ಸಂಜೆ ಬೇಕು, ಒಂದು ಕಥೆ ಕೇಳುವ ಮೂಡಿರಬೇಕು. ಆಗ ಇದೊಂದು ಒಳ್ಳೇ ಶಿಕಾರಿಯ ಕಥೆ!
ಕುಚೋದ್ಯ: ಸಾಧಾರಣವಾಗಿ ಸಿನೆಮಾದಲ್ಲಿ ಎಲ್ಲ ಮುಗಿಯುವ ಹೊತ್ತಿಗೆ ಪೊಲೀಸರು ಬರುತ್ತಾರೆ. ಈ ಸಿನೆಮಾದಲ್ಲಿ ಯಾರು ಸತ್ತರೂ, ಕಾಣೆಯಾದರೂ ಪೊಲೀಸರು ಬರುವದೇ ಇಲ್ಲ!

ಮುರಳಿ ಹತ್ವಾರ್, ಲಂಡನ್