ವಿನ್ನೀ-ದ-ಫೂ (Winnie the Pooh) ಅನ್ನೋ ಕನಸುಗಾರ ವೇದಾಂತಿ: ಡಾ. ವಿನತೆ ಶರ್ಮ ಬರೆದ ಲೇಖನ

ಸಾಹಿತ್ಯ ಒಂದು ಭಾಷೆಯ ಚೌಕಟ್ಟನ್ನು ಮೀರಿ ಬೇರೆ ನೆಲೆಗಳಿಗೆ ಹರಿದು ಸಹೃದಯರ ಕೈ ಜಗ್ಗುವುದು ಬಲ್ಲ ವಿಷಯ. ‘ಪಂಚತಂತ್ರ’ ಕತೆಗಳು ಭಾರತದಲ್ಲಿ ಹುಟ್ಟಿ, ಬೆಳೆದು, ಮಧ್ಯಪ್ರಾಚ್ಯ ದೇಶಗಳಿಗೆ ಹೋಗಿ, ಅಮೇರಿಕ ಮತ್ತು ಯೂರೋಪ್ ದೇಶಗಳಲ್ಲಿ ಕೂಡ ನೆಲೆಸಿವೆ. ನೈಜೀರಿಯಾ ದೇಶದ ಚಿನುವ ಅಚೆಬೆ ಬರೆದ ‘ಥಿಂಗ್ಸ್ ಫಾಲ್ ಅಪಾರ್ಟ್’ ಕೃತಿ ಆಫ್ರಿಕಾ ಖಂಡವನ್ನು ದಾಟಿ, ಆಂಗ್ಲ ಭಾಷೆ ಮಾತನಾಡುವ ಎಲ್ಲ ದೇಶಗಳನ್ನು ಮೀಟಿ ಅಲ್ಲಾಡಿಸಿ, ಪ್ರಪಂಚದ ಅನೇಕ ಭಾಷಿಗರನ್ನು ಹಿಡಿದಿಟ್ಟಿದೆ. ಒಂದು ಭಾಷೆಯ ಸಾಹಿತ್ಯ ಬೇರೆ ಭಾಷಿಗರನ್ನು ಮುಟ್ಟಬಹುದಾದ ಬಗೆಗಳು ಯಾವುವು? ಹಾಗೆಯೇ, ದೊಡ್ಡವರನ್ನು ಮಕ್ಕಳ ಸಾಹಿತ್ಯ ಆಕರ್ಷಿಸುತ್ತದೆಯೇ? ಓದುಗರಾಗಿ ಅವರನ್ನು ಆ ಸಾಹಿತ್ಯ ಪ್ರಕಾರ ಹೇಗೆ ಸಮರ್ಥವಾಗಿ ದುಡಿಸಿಕೊಳ್ಳಬಹುದು? ಚಿಂತನೆಗಳ ಸಂತೆ ಶುಕ್ರವಾರದ ಈ ಲೇಖನ!

 ವಿನ್ನೀ-ದ-ಫೂ  (Winnie the Pooh) ಅನ್ನೋ ಕನಸುಗಾರ ವೇದಾಂತಿ

ಡಾ. ವಿನತೆ ಶರ್ಮ

 ಅದು ೨೦೦೨, ಫೆಬ್ರವರಿ ತಿಂಗಳು. ಸ್ಥಳ ಆಸ್ಟ್ರೇಲಿಯ ದೇಶ. ಹಿಂದಿನ ವರ್ಷವಷ್ಟೇ ಮತ್ತೆ ಯೂನಿವರ್ಸಿಟಿ ಓದಿಗೆ ಮರಳಿ, ಮಹಿಳೆ ಮತ್ತು ಶಿಕ್ಷಣ ವಿಷಯದಲ್ಲಿ ಒಂದು ಚಿಕ್ಕ ಥೀಸಿಸ್ ಬರೆದು ಮುಗಿಸಿದ್ದೆ. ೯ ತಿಂಗಳ ಕಾಲ ಅದೆಷ್ಟು ಪುಸ್ತಕಗಳನ್ನ ಓದಿದ್ದು, ಅದೆಷ್ಟು ಅಕಡೆಮಿಕ್ ಲೇಖನಗಳನ್ನ ಜಾಲಾಡಿದ್ದು. ಮಧ್ಯೆ ಮಧ್ಯೆ ಒಂದಷ್ಟು ಕವನಗಳು, ‘ಡೈಲಾಗ್’ ಗಳು ಹುಟ್ಟಿದ್ದವು. ನಾಟಕದ ಅರ್ಧ ಭಾಗ ಕೂಡ ಕಾಗದದ ಮೇಲೆ ಮೂಡಿತ್ತು. ಪೌಲೊ ಫ್ರೇರಿ, ಮಹಾಶ್ವೇತ ದೇವಿ ಸದಾ ನನ್ನ ಜೊತೆಯಲ್ಲಿದ್ದರು. ಅಂಟೋನಿಯೋ ಗ್ರಾಮ್ಶಿ, ಗಾಯತ್ರಿ ಸ್ಪಿವಾಕ್ ಮತ್ತು ‘ಸಬ್ ಆಲ್ಟರ್ನ್’ ಎಂಬ ಹೊಸ ಗರಿಗಳು ಹಾರಿ ಬಂದಿದ್ದವು.

 ಎಲ್ಲವನ್ನು ಎರಡೂ ಬಗಲಿನಲ್ಲಿಟ್ಟುಕೊಂಡು ಪಿಎಚ್.ಡಿ ಓದನ್ನು ಆರಂಭಿಸಿದ್ದೆ. ಆ ಫೆಬ್ರವರಿ ತಿಂಗಳಲ್ಲಿ ಅವರು ವಿನ್ನೀ-ದ-ಪೂ ನನ್ನ ಕೈಗಿತ್ತರು. ಅವರು ಮಗುವಾಗಿದ್ದಾಗ ಅವರ ತಾಯಿ ಆ ಪುಸ್ತಕವನ್ನ ಅವರಿಗೆಂದು ಕೊಂಡು, ತಮ್ಮ ಪುಟಾಣಿಗೆ ಓದುತ್ತಿದ್ದರಂತೆ. ಆ ಮಧುರ ನೆನಪಿನ ಪುಸ್ತಕವನ್ನು ನನಗೆ ಕೊಟ್ಟು ಅವರು ಹೇಳಿದ್ದು, ‘ರೀಡ್ ದಿಸ್ ಫಾರ್ ಎ ಚೇಂಜ್”.the-original

ಓದಿದೆ. ವಿನ್ನೀ-ದ-ಫೂ ಎನ್ನುವ ಕನಸುಗಾರ, ಮತ್ತವನ ಸ್ನೇಹಿತರ ಪ್ರಪಂಚ ನನ್ನದರೊಳಗೆ ಸೇರಿಕೊಂಡುಬಿಟ್ಟಿತು. ಅಥವಾ, ನಾನವರ ಲೋಕಕ್ಕೆ ಹಾರಿ ಲೇಡಿಬರ್ಡ್ ಆಗಿ ಮರದ ಕೊಂಬೆಯ ಮೇಲೆ ಶಾಶ್ವತವಾಗಿ ಕೂತು ಬಿಟ್ಟೆ ಎನ್ನಲೇ!

 ಎ.ಎ. ಮಿಲ್ನ್ (A.A.Milne) ಎಂಬ ಆಂಗ್ಲ ಲೇಖಕ ತನ್ನ ಮಗ ಕ್ರಿಸ್ಟೊಫರ್ ರಾಬಿನ್, ಮತ್ತವನ ಆಟಿಕೆಯಾದ ಮುದ್ದು ಕರಡಿಯ ಸುತ್ತ ಹೆಣೆದಿರುವ ಈ ಕತೆಗಳು ಜೀವ ತಾಳಿದ್ದು ಇಂಗ್ಲೆಂಡಿನ ಸಸೆಕ್ಸ್ ಪ್ರಾಂತ್ಯದಲ್ಲಿರುವ ಆಶ್ದೌನ್ ಅರಣ್ಯದಲ್ಲಿ. ಫೂ  ಬೇರ್ ಮತ್ತವನ ಸಂಗಾತಿಗಳು (ಕತ್ತೆ, ಮೊಲ, ಹಂದಿಮರಿ, ಕಾಂಗರೂ, ಗೂಬೆ, ಹುಲಿಮರಿ) ನಡೆಸುವ ಏನೆಲ್ಲಾ ಸಾಹಸಗಳು, ರಂಪಾಟಗಳು, ರೋಚಕ ತಲೆನೋವುಗಳು, ಏಳುಬೀಳುಗಳು, ಜೊತೆಗೆ ಅವರುಗಳು ಕೊಡುವ ಒಳನೋಟಗಳು, ಜೀವನದೃಷ್ಟಿಗಳು… ಎಲ್ಲವೂ ಆ ಅರಣ್ಯ ಪ್ರದೇಶದ ‘ಹಂಡ್ರೆಡ್ ಏಕರ್ ವುಡ್’ ನಲ್ಲಿಯೇ ನಡೆಯುವುದು. ಆಹಾ, ಎಂಥ ಅದ್ಭುತ ಲೋಕವದು!

 ಚಿತ್ರ ಕೃಪೆ: ಡಾ.ಶ್ರೀವತ್ಸ ದೇಸಾಯಿ
ಚಿತ್ರ ಕೃಪೆ: ಡಾ.ಶ್ರೀವತ್ಸ ದೇಸಾಯಿ

 ಫೂ ಬೇರ್ (Pooh Bear) ಹುಟ್ಟಿನ ಬಗ್ಗೆ ಕೂಡ ಒಂದು ಸ್ವಾರಸ್ಯವಾದ ಹಿನ್ನಲೆಯಿದೆ. ಪುಟ್ಟ ಕ್ರಿಸ್ಟೊಫರ್ ರಾಬಿನ್ ಲಂಡನ್ ಝೂಗೆ ತಪ್ಪದೆ ಭೇಟಿ ಕೊಡುತ್ತಿದ್ದನಂತೆ. ಅಲ್ಲಿದ್ದ ಕೆನಾಡಾದ ಕಪ್ಪು ಕರಡಿ ‘ವಿನ್ನಿ’ಯ ಹೆಸರು (ಆ ಕರಡಿ ಕೆನಾಡಾದ ವಿನ್ನಿಪೆಗ್ ಪ್ರಾಂತ್ಯದ್ದು) ಮತ್ತು ಅವನ ಕುಟುಂಬದವರು ಒಮ್ಮೆ ರಜಾದಿನಗಳಲ್ಲಿ ಭೇಟಿಯಾಗಿದ್ದ ‘ಫೂ ” ಎಂಬ ಹಂಸಪಕ್ಷಿಯ ಹೆಸರನ್ನು ಸೇರಿಸಿ ತನ್ನ ಮುದ್ದು ಟೆಡ್ಡಿಯನ್ನು ವಿನ್ನೀ-ದ-ಫೂ ಎಂದು ಕರೆದನಂತೆ.ಇದಕ್ಕೂ ಮುಂಚೆ ಅವನ ಮುದ್ದು ಟೆಡ್ಡಿಯ ಹೆಸರು ಎಡ್ವರ್ಡ್ ಆಗಿತ್ತು. ಹುಡುಗ ಕ್ರಿಸ್ಟೊಫರ್ ನ ಬಳಿ ಇದ್ದ ಇತರ ಆಟಿಕೆ ಪ್ರಾಣಿಗಳಾದ ಪಿಗ್ಲೆಟ್, ಇಯೋರ್, ಟಿಗ್ಗರ್, ಕಾಂಗ ಮತ್ತು ರೂ (ಅಮ್ಮ-ಮಗನ ಜೋಡಿ) ಫೂ ಬೇರ್ ನ ಕತೆಗಳಲ್ಲಿ ಬರುತ್ತಾರೆ. ಲೇಖಕ ಮಿಲ್ನ್ ಕಾಲ ಕ್ರಮೇಣ ಮತ್ತೆರಡು ಪಾತ್ರಗಳನ್ನ – ರಾಬಿಟ್ ಮತ್ತು ಔಲ್ – ಸೇರಿಸಿದರಂತೆ. ನಡು ನಡುವೆ ಮತ್ತಷ್ಟು ಪಾತ್ರಗಳು – ಉದಾಹರಣೆಗೆ, ಹೆಫಲಮ್ಪ್ ಎಂಬ ಆನೆಮರಿ – ಬರುತ್ತವೆ. ಕ್ರಿಸ್ಟೊಫರ್ ನ ಆ ಮುದ್ದು ಆಟಿಕೆ ಕರಡಿ ವಿನ್ನೀ-ದ-ಫೂ  ನ್ಯೂ ಯಾರ್ಕ್ ಪಟ್ಟಣದ ಸಾರ್ವಜನಿಕ ಗ್ರಂಥಾಲಯದ ಪ್ರದರ್ಶನದಲ್ಲಿದೆ.winnie-the-pooh-with-friends

 ವಿನ್ನೀ-ದ-ಫೂ  ಕತೆಗಳ ಗುಚ್ಛ ಜನ್ಮ ತಾಳಿದ್ದು ೧೯೨೬ರಲ್ಲಿ. ಈ.ಎಚ್.ಶೆಪರ್ಡ್ ರ ಪೆನ್ಸಿಲ್ ನಿಂದ ಹೊರ ಹೊಮ್ಮಿದ ಚಿತ್ರ ನಿದರ್ಶನಗಳು ಅಜರಾಮರ. ಆ ಕಥಾ ಗುಚ್ಛದ ನಂತರ ಮಿಲ್ನ್ ಇನ್ನೂ ಹಲವಾರು ಪುಸ್ತಕಗಳನ್ನು ಬರೆದರು – ರಿಟರ್ನ್ ಟು ದ ಒನ್ ಹಂಡ್ರೆಡ್ ಏಕರ್ ವುಡ್, ವೆನ್ ವಿ ವರ್ ವೆರಿ ಯಂಗ್, ನೌ ವಿ ಆರ್ ಸಿಕ್ಸ್ ಪುಸ್ತಕಗಳು ಮಿಲ್ನ್ ರ ಕವಿ ಹೃದಯವನ್ನು ಬಿಚ್ಚಿಡುತ್ತವೆ. ೧೯೩೦ ರಿಂದಾಚೆಗೆ ಈ ಕತೆಗಳನ್ನು ಅಮೆರಿಕ, ಬ್ರಿಟನ್ ದೇಶಗಳ ಟೆಲಿವಿಷನ್ ಗೆ ತಂದದ್ದು ಸ್ಟೀವನ್ ಸ್ಲೆಸಿಂಜರ್ (೧೯೩೦) ಮತ್ತು  ವಾಲ್ಟ್ ಡಿಸ್ನಿ ಸಂಸ್ಥೆ (೧೯೬೧). ಡಿಸ್ನಿ ಸಂಸ್ಥೆ ಹೊಸ ಚಿತ್ರಗಳನ್ನು, ಬಣ್ಣಗಳನ್ನು ಅಳವಡಿಸಿ ಹೊಸ ವಿನ್ಯಾಸದಲ್ಲಿ ಅದೇ ಕತೆಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದೂ ಅಲ್ಲದೆ, ವಿಡಿಯೋ ಮತ್ತು ಡಿ ವಿ ಡಿ ಗಳನ್ನೂ ತಂದು ಲಕ್ಷಾಂತರ ಮಕ್ಕಳು ಫೂ ಬೇರ್ ಕತೆಗಳನ್ನು ಪರದೆಯ ಮೇಲೆ ನೋಡುವಂತೆ ಮಾಡಿದೆ (https://www.youtube.com/watch?v=xHYvpXe75b8 ). ಹಾಡುಗಳು, ಆಡಿಯೋ, ರೇಡಿಯೋ, ರಂಗರೂಪಾಂತರ ಮುಂತಾದ ವಿಧ ವಿಧವಾದ ಅಳವಡಿಕೆಗಳಲ್ಲೂ ಅವು ಮೂಡಿ ಬಂದಿವೆ. ಅವನ ಹೆಸರಿನಲ್ಲಿ ಸಂಘ ಸಂಸ್ಥೆಗಳೂ ಇವೆ. (http://www.letssingit.com/?a=www_player&special_id=zv9p2sq )

 ಫೂ ಬೇರ್ ಒಬ್ಬ ನಿಷ್ಕಪಟ, ಸರಳ, ಕೆಲವೊಮ್ಮೆ ಸ್ವಲ್ಪ ಮೊದ್ದು ಸ್ವಭಾವದವ. ಅವನು ಮಕ್ಕಳನ್ನು, ದೊಡ್ಡವರನ್ನು ಗೆದ್ದಿದ್ದು ಅದೇ ಬೆಪ್ಪುತನದಿಂದ, ಅದೇ ನೈಜ ಮುಗ್ಧತೆಯಿಂದ. ಅವನ ನಿಧಾನಿಕೆಯಲ್ಲಿ ಅದೆಷ್ಟು ಅರಿವಿದೆ, ಹರಿವಿದೆ, ಜಾಣ್ಮೆಯಿದೆ, ಸ್ನೇಹವಿದೆ, ವಿವೇಚನೆಯಿದೆ! ಒಮ್ಮೊಮ್ಮೆ ಅವನ ಸ್ನೇಹಿತರಿಗೆ ಅವನು ಕೋಪ ತರಿಸಿ ಅವರು ಹಾರಾಡುವಂತೆ ಮಾಡಿದರೂ ಕಡೆಗೆ ಅವರು ಅವನ ಒಳ ಪ್ರಜ್ಞೆಯನ್ನು, ವಿವೇಕವನ್ನು ಮನಸಾರೆ ಒಪ್ಪಿಕೊಳ್ಳುತ್ತಾರೆ. ಪಿಗ್ಲೆಟ್ ಗಂತೂ ಫೂ  ಬೇರ್ ಇಲ್ಲದೆ ಜೀವನವಿಲ್ಲ. ಟಿಗ್ಗರ್ ಹೆಸರಿಗೆ ತಕ್ಕಂತೆ ಹುಲಿಮರಿಯಾಗಿ ಎಷ್ಟೆಷ್ಟೆ ಕುಣಿದಾಡಿದರೂ ಅವನ ಒಳ ಮನಸ್ಸಿಗೆ ಗೊತ್ತು – ಆಗೋ ಅಲ್ಲಿದ್ದಾನೆ ಫೂ  ಬೇರ್, ನನ್ನನ್ನು ವಾಸ್ತವಕ್ಕೆ ಮರಳಿ ತರುವ ನಿಧಾನಸ್ಥ, ಎಂದು. ಜಾಣ ರಾಬಿಟ್ ಮತ್ತು ಬುದ್ಧಿ ಹೇಳುವ ಔಲ್ ಗಳು ಎಷ್ಟೇ ಫೂ ಬೇರ್ ನ ಎಮ್ಮೆತನವನ್ನು ದೂರ ಸರಿಸಿದರೂ ಅವನ ಆ ‘ಈ ಕ್ಷಣದಲ್ಲಿ ಅಡಗಿರುವ ನಾನೆಂಬ ಅರಿವು’ ಎನ್ನುವ ಕೋಮಲ ಸ್ವಭಾವ ಅವರನ್ನು ಅವನ ಹತ್ತಿರಕ್ಕೆ ಎಳೆದು ತರುತ್ತದೆ.

 ಆ ನಿಧಾನಸ್ಥ ಅತ್ಯುತ್ತಮ ಕನಸುಗಾರ ಕೂಡ. ಅವನು ಹೇಳುವ ಮಾತುಗಳು, ಕಟ್ಟುವ ಪದ್ಯಗಳು, ಆಗಾಗ ಅನುರಣಿಸುವ ‘ಹಮ್’ ಗಳು ಓದುಗರ ಮುಖದಲ್ಲಿ ಮಂದಹಾಸವನ್ನು ಮೂಡಿಸುತ್ತವೆ. ಕತೆಗಳನ್ನು ಕೇಳುತ್ತಿರುವ ಚಿಕ್ಕ ಮಕ್ಕಳು ಕೇಕೆ ಹಾಕಿ ನಗುತ್ತಾರೆ, ಆ ಪದ್ಯಗಳನ್ನು ಮತ್ತೆ ಓದಿ ಎಂದು ದೊಡ್ಡವರನ್ನು ಪೀಡಿಸುತ್ತಾರೆ.

 ಚಿತ್ರ ಕೃಪೆ: ಡಾ.ಶ್ರೀವತ್ಸ ದೇಸಾಯಿ
ಚಿತ್ರ ಕೃಪೆ: ಡಾ.ಶ್ರೀವತ್ಸ ದೇಸಾಯಿ

 ಫೂ ನ ‘ಏನೂ ಮಾಡದ – ಡುಯಿಂಗ್ ನಥಿಂಗ್’ ಎಂಬ ಮನಸ್ಥಿತಿ ಮಕ್ಕಳಲ್ಲಿ ಕಿಲಿಕಿಲಿ ನಗು ಹುಟ್ಟಿಸಿದರೆ, ದೊಡ್ಡವರಲ್ಲಿ ಅಚ್ಚರಿ, ಹೊಟ್ಟೆಕಿಚ್ಚು ಕೂಡ ಉಂಟಾಗುತ್ತದೆ! ಅವನು ಮತ್ತು ಪಿಗ್ಲೆಟ್  ಜೊತೆಗೂಡಿ ಹೋಗುವ ನಡಿಗೆಗಳು, ತಮಗೆ ತಿಳಿಯದೆ ತೊಡಗಿಸಿಕೊಳ್ಳುವ ಪ್ರಕ್ರಿಯೆಗಳು – ವಾಹ್, ಅದೆಷ್ಟು ಮೃದುವಾಗಿ ಮಿಲ್ನ್  ಜೀವನದ ಬಗ್ಗೆ ವ್ಯಾಖ್ಯಾನಿಸುತ್ತಾರೆ! ಕ್ರಿಸ್ಟೊಫರ್ ರಾಬಿನ್ ನಕ್ಕು ಆಗಾಗ ಉದ್ಗರಿಸುವ ‘ಸಿಲ್ಲಿ ಓಲ್ಡ್ ಬೇರ್’ ನಾವು ಮನ ಸೋಲುವಂತೆ ಮಾಡುತ್ತಾನೆ.the-original-2

ಮನ ಸೋಲುವಂತೆ ಮಾಡಿರುವುದು ಕತೆಗಾರ ಮಿಲ್ನ್ ಎಂಬುದನ್ನು ನಾವು ದೊಡ್ಡವರು ಗುರ್ತಿಸುತ್ತೇವೆ. ಆ ‘ಸಿಲ್ಲಿ ಓಲ್ಡ್ ಬೇರ್’ ಹೇಳುವ ಮಾತುಗಳಿಗೆ ಒಮ್ಮೊಮ್ಮೆ ಮೊದಲಿಲ್ಲ, ಕೊನೆಯಿಲ್ಲ; ಇಂಗ್ಲಿಷ್ ಭಾಷೆಯಲ್ಲಿರುವ ಪದಗಳ ಅಕ್ಷರಗಳು ಕೆಲವೊಮ್ಮೆ ಹಿಂದು ಮುಂದು, ಉಲ್ಟಾ ಪಲ್ಟಾ, ಚೆಲ್ಲಾಪಿಲ್ಲಿ. ಕೆಲವೊಂದು ಪದಗಳ ಗುಚ್ಛದಲ್ಲಿ ಪ್ರತಿಯೊಂದು ಪದ ದೊಡ್ಡ ಅಕ್ಷರದಿಂದ (capital letter) ಆರಂಭವಾಗುವುದು ಮತ್ತಷ್ಟು ಆಸಕ್ತಿ ಹುಟ್ಟಿಸುತ್ತದೆ. ಈ ವಿಶೇಷತೆಯನ್ನು ಮಕ್ಕಳು ಕೂಡ ಗುರ್ತಿಸುತ್ತಾರೆ. ಯಾಕೆ ಬೇಕು ಅಷ್ಟೆಲ್ಲಾ ಫಜೀತಿ ಎಂದು ಫೂ ಬೇರ್ ಹೇಳುವುದು ‘ಓಹ್ ಬಾದರ್’. ಯಾರಾದರೂ “ಸಂಗೀತ ಮತ್ತು ಬದುಕು…” ಎಂದು ಮಾತು ಆರಂಭಿಸಿದರೆ ಪಟ್ಟನೆ ಫೂ ಹೇಳುವುದು “ಅವೆರಡೂ ಒಂದೇ”. ಇಂತಹ ಉದ್ಗಾರಗಳು,  ಅವನ ‘ಹಮ್’ ಕಾರ ತಕ್ಷಣ ಮಕ್ಕಳ ಹೃದಯಕ್ಕೆ ಹತ್ತಿರವಾಗಿ ಬಿಡುತ್ತವೆ.

 ಫೂ ಹೇಳುವಂತೆ ಕವಿತ್ವ, ಕಾವ್ಯ ಕಟ್ಟುವುದು ಮತ್ತು ಹಮ್ ಗಳು ನಾವು ಗಳಿಸುವುದಲ್ಲ; ಅವು ನಮ್ಮನ್ನು ಪಡೆಯುತ್ತವೆ. ಅವು ನಮ್ಮನ್ನು ಎಲ್ಲಿ ಹುಡುಕುತ್ತವೋ ಅಲ್ಲಿ ನಾವು ಹೋಗುವುದಷ್ಟೇ ನಾವು ಮಾಡಬೇಕಿರುವುದು. ಆದರೆ ತೀಕ್ಷ್ಣ ಬುದ್ಧಿಯ, ಸ್ವಲ್ಪ ಸಿಡುಕಿನ ರಾಬಿಟ್ ಅದರಲ್ಲಿ ಅಷ್ಟೊಂದು ಅರ್ಥವಿಲ್ಲ ಅನ್ನುತ್ತಾನೆ. ಫೂನ ಉತ್ತರ, “ಅರ್ಥವಿಲ್ಲ, ಹೌದು. ಆದರೆ ನಾನು ಆ ಮಾತನ್ನು ಶುರು ಮಾಡಿದಾಗ ಅರ್ಥವಿತ್ತೇನೋ. ಮಾತು ಹೊರಡುತ್ತಿದ್ದಾಗ ಮಧ್ಯ ದಾರಿಯಲ್ಲಿ ಅದಕ್ಕೇನೋ ಆಗಿಬಿಟ್ಟಿತು”.

ಹೌದಲ್ಲ, ನಮ್ಮ ಜೀವನದ ಎಲ್ಲಕ್ಕೂ ನಾವು ಅರ್ಥ ಕಟ್ಟಲು ಪ್ರಯತ್ನಿಸುತ್ತೀವಿ. ಒಮ್ಮೆಮ್ಮೆ ಅದರಲ್ಲೇ ಕಳೆದುಹೋಗುವ ಅಪಾಯವುಂಟು. ಅರ್ಥ ಕಳೆದು ಹೋಗುವ ಕ್ಷಣದ, ಅರ್ಥ ಅನಗತ್ಯ ಎಂಬುದನ್ನು ಗುರ್ತಿಸುವವರು ನಾವಾದರೆ?! ನಾವೇ ನಾವಾಗಿ ನಮ್ಮ ಅಂತರಾಳಕ್ಕೆ ಇಳಿದು ಅಲ್ಲಿ ತಾನೇ ತಾನಾಗಿರುವ ಅರ್ಥವನ್ನು ನೋಡಿಬಿಟ್ಟರೆ!!unabridged

 ಫೂ ಬೇರ್ ನ ಅಚ್ಚುಮೆಚ್ಚಿನ ಜೇನುತುಪ್ಪದ ಬಗ್ಗೆ ಮಾತನಾಡುತ್ತಾ ಅವ ಇಡೀ ವಿಶ್ವದ ಬಗ್ಗೆ ಚಿಂತಿಸುತ್ತಾನೆ. ಕ್ರಿಸ್ಟೊಫರ್  ರಾಬಿನ್ ಒಮ್ಮೆ ಅವನನ್ನು ಈ ಪ್ರಪಂಚದಲ್ಲಿ ನಿನಗೆ ತುಂಬಾ ಇಷ್ಟವಾದದ್ದು ಏನು ಎಂದು ಕೇಳಿದಾಗ, ವೆಲ್ ಎಂದು ಫೂ  ಸುಮ್ಮನಾಗುತ್ತಾನೆ. ‘ಜೇನುತುಪ್ಪ ತಿನ್ನುವುದು ತುಂಬಾ ಇಷ್ಟವಾದದ್ದು; ಆದರೂ, ಅದನ್ನು ತಿನ್ನುವ ಮುನ್ನ ಒಂದು ಘಳಿಗೆಯಿತ್ತಲ್ಲಾ, ಆ ಘಳಿಗೆ ತಿನ್ನುವ ಕ್ರಿಯೆಗಿಂತಲೂ ಚೆನ್ನಿತ್ತಲ್ಲಾ, ಆದರೆ ಅದು ಆ ಘಳಿಗೆ ಏನೆಂದು ಅವನಿಗೆ ತಿಳಿದಿರಲಿಲ್ಲ’ – ಇಂತಹ ದಾರ್ಶನಿಕ ತತ್ವದ ಮಾತುಗಳನ್ನು ‘ಫೂ ಬೇರ್ ನೀಡುವ ಜೀವನದ ಒಳದೃಷ್ಟಿ, ಗಾಢವಾದ ತತ್ವಜ್ಞಾನ’ ಎಂದು ಬೆಂಜಮಿನ್ ಹೊಫ್ ಹೇಳುತ್ತಾರೆ. ಅದನ್ನೇ ಆಧರಿಸಿ ಅವರೂ ಕೂಡ ಟಾಓ ಆಫ್ ಫೂ  (Taoism) ಮುಂತಾದ ಪುಸ್ತಕಗಳನ್ನು, ಜಾನ್ ವಿಲಿಯಮ್ಸ್ ಫೂ ಅಂಡ್ ದ ಫಿಲಾಫರ್ಸ್ ಮುಂತಾದ ಪುಸ್ತಕಗಳನ್ನು ಬರೆದಿದ್ದಾರೆ. ಇಬ್ಬರೂ ಆ ಕತೆಗಳಲ್ಲಿ ಪಾಶ್ಯಾತ್ಯ ದಾರ್ಶನಿಕತೆ ಮತ್ತು ವೇದಾಂತ ಅಡಗಿದೆ ಎನ್ನುತ್ತಾರೆ. ಪ್ರಸಿದ್ಧ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಫೂ  ಬೇರ್ ಮತ್ತವನ ಸ್ನೇಹಿತರನ್ನೊಳಗೊಂಡ ಅನೇಕ ಚರ್ಚೆಗಳೂ ನಡೆಯುತ್ತವೆ. ಫೂ ಬೇರ್ ನ ಕತೆಗಳನ್ನಾಧರಿಸಿ ಕಾರ್ಪೊರೇಟ್ ವಲಯಗಳಲ್ಲಿ, ಮ್ಯಾನೇಜ್ಮೆಂಟ್ ತರಬೇತಿಗಳಲ್ಲಿ ಸೂಕ್ತ ಚಟುವಟಿಕೆಗಳನ್ನು ಕೂಡ ನಡೆಸುತ್ತಾರೆ.

 ಫೂ  ನ ಈ ಮಾತು – “ನೀ ದೂರ, ಬಲು ದೂರ ಹೇಗೆ ಹೋಗತ್ತೀ? ನೀ ಯಾರೆಂದು ನಿನಗೆ ಅರಿವಿಲ್ಲವೆಂದರೆ?”,  ಕತೆಗಳಲ್ಲಿ ಬರುವ ಹಾಡುಗಳು, ದಾರ್ಶನಿಕ ಮಾತುಗಳು, ಚಿಂತನೆ, ವಿಮರ್ಶೆ, ವ್ಯಾಖ್ಯಾನಗಳು ವಿನ್ನೀ-ದ-ಫೂ ಮತ್ತವನ ಸ್ನೇಹಿತರ ಪಾತ್ರಗಳು ನಮ್ಮ ಜೀವನವನ್ನು ಒರೆ ಹಚ್ಚಿ ನೋಡುವಂತೆ ಪ್ರೇರೇಪಿಸುತ್ತವೆ. ಅಷ್ಟರ ಮಟ್ಟಿಗೆ ಅವರೆಲ್ಲರೂ ತತ್ವ ಜ್ಞಾನಿಗಳೇ!!

ಎಲ್ಲಕ್ಕೂ ಒಂದು ಚೌಕಟ್ಟು, ಭೂಮಿಕೆಯನ್ನು ಒಡ್ಡಿಕೊಳ್ಳುವ ಪ್ರಮೇಯವನ್ನೇ, ಕಾರಣವನ್ನೇ ಬಿಟ್ಟು ಬದುಕುವ ಫೂ ಬೇರ್ ನಿಜಕ್ಕೂ ಒಬ್ಬ ವೇದಾಂತಿಯೇ ಹೌದು ಎನಿಸಿಬಿಡುತ್ತದೆ. ನನ್ನೊಳಗೆ ಅಡಗಿರುವ ಫೂ ಬೇರ್ ಎಲ್ಲಿ ಎನ್ನುವ ಹುಡುಕಾಟ ಆರಂಭವಾಗುತ್ತದೆ.

 ಡಾ. ವಿನತೆ ಶರ್ಮ

Advertisements

ಸ್ವಪ್ನ ಸಾರಸ್ವತ- ಎರಡು ಅನಿಸಿಕೆಗಳು- ನವೀನ ಗಂಗೋತ್ರಿ & ಸುದರ್ಶನ ಗುರುರಾಜರಾವ್

ಸ್ವಪ್ನ ಸಾರಸ್ವತ ಇತ್ತೀಚಿನ ವರ್ಷಗಳಲ್ಲಿ ಬಂದ ಕನ್ನಡ ಕಾದಂಬರಿಗಳಲ್ಲಿ ಮೇರು ಕೃತಿಯೇ ಸೈ. ಐತಿಹಾಸಿಕ ಸತ್ಯಗಳೊಂದಿಗೆ ತಾಳ ಹಾಕುತ್ತ ಹೋಗುವ ಕಥೆ ಓದುಗನನ್ನು ಸೆರೆಹಿಡಿದಿಡುವುದರಲ್ಲಿ ಯಶಸ್ವಿಯಾಗಿದೆ. ಕರಾವಳಿಯಲ್ಲಿ ಕೊಂಕಣಿಗರೊಂದಿಗೆ ಬೆಳೆದ ನನ್ನಂಥವರಿಗೆ ಇದರಲ್ಲಿ ಬರುವ ಪಾತ್ರಗಳು, ಊರುಗಳು, ಸಂಪ್ರದಾಯಗಳು ಹೊಸ ಮುದವನ್ನೇ ಕೊಟ್ಟವು; ಮತ್ತೆ ಊರಿನೆಡೆಗೆ ಕರೆದೊಯ್ದವು. ಸುದರ್ಶನ್ ಹೇಳುವಂತೆ,  ಪರ್ವ, ಅವಧೇಶ್ವರಿಗಳ ಸಾಲಿನಲ್ಲಿ ಎದೆ ಉಬ್ಬಿಸಿ, ತಲೆ ಎತ್ತಿ ನಿಲ್ಲುತ್ತದೆ ಸ್ವಪ್ನ ಸಾರಸ್ವತ. ನವೀನ್ ಹಾಗೂ ಸುದರ್ಶನ್ ಅವರ ಜುಗಲ್ಬಂಧಿ  ಸ್ವಪ್ನ ಸಾರಸ್ವತದ ಮೆರುಗನ್ನು ಎತ್ತಿ ತೋರಿಸುತ್ತಿದೆ…

 ಕುಲ ಮತ್ತು ಕಾಲದ ಕಥೆ – ಸ್ವಪ್ನ ಸಾರಸ್ವತ

ನವೀನ ಗಂಗೋತ್ರಿ

swapna_12

ನೆನಪಳಿಯದ ಕೃತಿಗಳ ಸಾಲಿನಲ್ಲಿ ಈ ಹೆಸರು ಎಂದಿಗೂ ಅಜರಾಮರ- ಸ್ವಪ್ನ ಸಾರಸ್ವತ. ಒಂದು ಕೃತಿ ಯಾಕೆ ಹಾಗೆ ಪದೇ ಪದೇ ಸ್ಮರಣೀಯವಾಗುತ್ತದೆ ಎನ್ನುವುದಕ್ಕೆ ಆ ಕೃತಿಯ ರೋಚಕತೆಯಾಗಲೀ, ಕಥೆಯ ಕಲ್ಪಕತೆ ಅಥವಾ ಕುತೂಹಲದ ತುದಿಯಲ್ಲಿ ನಿಲ್ಲಿಸುವ ಗುಣವಾಗಲೀ ಕಾರಣವಾಗದೆ ಆ ಕೃತಿಯು ತನ್ನ ಪಾತ್ರಗಳ ಮೂಲಕ ಮಾನವ ಬದುಕಿನ ಯಾವೆಲ್ಲ ಘಟ್ಟಗಳನ್ನು ತಾಕಬಲ್ಲದು, ಮತ್ತು ತಾತ್ತ್ವಿಕವಾಗಿ ಯಾವ ಅನಿಸಿಕೆಯನ್ನು ವ್ಯಕ್ತಪಡಿಸಬಲ್ಲದು ಎನ್ನುವುದು ಕಾರಣವಾಗುತ್ತದೆ. ಮಹಾಕಾವ್ಯಗಳಲ್ಲದೆ, ನಮ್ಮನಡುವೆ ಉಳಿದುಬಂದ ಉಳಿದ ಯಾವುದೇ ಮೌಲಿಕ ಕೃತಿಯನ್ನು ತೆಗೆದುಕೊಂಡರೂ ಅದರ ಸಾರ್ವತ್ರಿಕ ಗುಣ ಇದುವೇ ಆಗಿರುತ್ತದೆ- ಮಾನವ ಬದುಕನ್ನು ಅದು ಕಾಣುವ ರೀತಿ ಮತ್ತು ಕಟ್ಟಿಕೊಡುವ ತಾತ್ತ್ವಿಕತೆ. ಬದುಕಿನ ಅರ್ಥದ ಬಗ್ಗೆ ಮನುಷ್ಯನಿಗಿರುವ ಆರದ ಕುತೂಹಲವೂ ಇದಕ್ಕೆ ಕಾರಣವಿದ್ದೀತು. ಎಷ್ಟೇ ರೋಚಕವಾದರೂ ಯಾವುದೋ ಸಾಮಾನ್ಯ ಪತ್ತೇದಾರಿ ಕಾದಂಬರಿ, ಯಾವುದೋ ಸಾಮಾನ್ಯ ಪ್ರೇಮ ಕಥೆ ನೆನಪಿರುವುದು ತುಂಬ ತುಂಬ ವಿರಳ. ಸಾರಸ್ವತದ ಚಿರಂಜೀವಿತ್ವ ಇರುವುದು ಅದರ ಚಿಂತನೆ ಮತ್ತು ತಾತ್ತ್ವಿಕ ಹಿನ್ನೆಲೆಯಲ್ಲಿ.

ಗೋವೆಯೆಂಬ ಪುಟ್ಟ ನಾಡಲ್ಲಿ ತಮ್ಮಪಾಡಿಗೆ ತಾವು ಬದುಕಿದ್ದ ಸಾರಸ್ವತ ಜನಾಂಗ, ಏಕಾ ಏಕಿ ಎರಗಿದ ಹುಂಬ ಪೋರ್ಚುಗೀಸರ ಭಯಂಕರ ಕಿರುಕುಳ ತಾಳಲಾರದೆ ತಮ್ಮ ಉಸಿರಿನ ನೆಲ ಬಿಟ್ಟು, ಬದುಕಲ್ಲಿ ಎಂದಿಗೂ ಕಂಡಿರದಿದ್ದ ಅರಿಯದ ನೆಲೆಗೆ ಎದ್ದುನಡೆದ ಕಥೆ ಅದು. ಕಥೆಯ ಹಂದರವಂತೂ ತುಂಬ ತುಂಬ ಸಂಕೀರ್ಣವಾಗಿದೆ. ಓದುವುದಕ್ಕೇ ಅದೊಂದುಬಗೆಯ ಏಕಾಗ್ರತೆಯನ್ನು ಬೇಡುವ ಈ ಕೃತಿ ತನ್ನ ಬರಹಗಾರನಲ್ಲಿ ಬೇಡಿದ ತಪಸ್ಸಿನ ಮೊತ್ತವನ್ನು ಕಲ್ಪಿಸಿ ಚಕಿತನಾಗುತ್ತೇನೆ.

ಸಮುದಾಯವೊಂದು ತನ್ನ ಜೀವನೆಲೆಯಂತಿರುವ ಭೂಭಾಗವನ್ನು ತೊರೆದು ಬರುವಾಗ ಅದೊಂದು ’ಕೇವಲ ಸ್ಥಾನಾಂತರಣ’ ಆಗಿರದೆ, ತಲೆಮಾರುಗಳನ್ನು ಪ್ರಭಾವಿಸುವ ಸಂಗತಿಯಾಗಿರುತ್ತದೆ ಎನ್ನುವುದು ಸಾರಸ್ವತವನ್ನು ಓದುವಾಗ ನಿಚ್ಚಳವಾಗುತ್ತದೆ. ತನ್ನ ಪರಿವಾರ, ಪರಿಸ್ಥಿತಿ, ಸಮೂಹದ ಸಮೇತ ಒಂದು ಕುಲ ಸ್ಥಾನಾಂತರವಾಗುವಾಗ ಯಾವುದೆಲ್ಲವನ್ನು ತನ್ನೊಡನೆ ಕೊಂಡೊಯ್ಯಬಹುದು? ಆಸ್ತಿ, ಹಣ, ಒಡವೆ, ಉಳಿಕೆ, ಗಳಿಕೆ- ಯಾವುದನ್ನು? ಸಾರಸ್ವತದ ದೃಷ್ಟಿ ಕೇಂದ್ರಗೊಳ್ಳುವುದು ಇದ್ಯಾವುದರ ಮೇಲೆಯೂ ಅಲ್ಲ, ಬದಲಿಗೆ ಆ ಹಂತದಲ್ಲಿ ಮನುಷ್ಯ ತುಂಬಾ ಗಾಢವಾಗಿ ಹೊತ್ತೊಯ್ಯಲು ಬಯಸುವುದೆಂದರೆ ತನ್ನ ತಲೆಮಾರುಗಳಿಗೆ ಸಾಕಾಗುವಷ್ಟು ನೆನಪನ್ನು, ಸಂಪ್ರದಾಯ ಆಚಾರ ಮತ್ತು ನಂಬುಗೆಗಳನ್ನು ಎಂಬ ನಿಲುಮೆಗೆ ಸಾರಸ್ವತ ಬರುತ್ತದೆ. ನೆಲ ಬಿಟ್ಟೆದ್ದು ಬಂದದ್ದೇ ಆಚಾರದ ಉಳಿಕೆಗಾಗಿ ಎಂಬಾಗ, ಹೊತ್ತೊಯ್ಯಬೇಕಿರುವುದು ಅದನ್ನೇ ಅಲ್ಲವೆ?

ಒಂದು ಕಥೆಯನ್ನು ಕಲ್ಪಿಸಿಕೊಂಡು ಬರೆಯುವುದರಿಂದ ಸಾರಸ್ವತದಂಥಾ ಕೃತಿ ಹುಟ್ಟಲಾರದು. ಮನುಷ್ಯನ ಕಲ್ಪನೆಯು ವಾಸ್ತವದೊಡನೆ ಸಮಬೆರೆತಾಗಲೇ ಅದು ಅಮೂಲ್ಯವೆನಿಸುತ್ತದೆ. ಭೌಗೋಳಿಕ ವಿವರ, ಸಂಚಲನದ ಕಾಲದ ವಿವರ, ಆಗಿನ ಸಮಾಜಿಕ ಮತ್ತು ರಾಜಕೀಯ ಸ್ಥಿತಿಗಳನ್ನೊಳಗೊಂಡಂತೆ, ಮಾನವನೊಳಗೆ ಕಾಲವನ್ನು ಮೀರಿಯೂ ಉಳಿದುಕೊಳ್ಳುವ ಸಾಮಾನ್ಯ ಜಿಜ್ಞಾಸೆ ಮತ್ತು ಆಸೆಗಳ ಕಥನವೇ ಸ್ವಪ್ನ ಸಾರಸ್ವತ.

ಎಲ್ಲ ಪಾತ್ರಗಳೂ ತಮ್ಮದೇ ಆದ ನೆಲೆಯಲ್ಲಿ ಅನನ್ಯ ಅನ್ನಿಸುತ್ತವೆಯಾದರೂ, ನಾಗ್ಡೋ ಬೇತಾಳ ಎಂಬುವ ಸಾವಿರದ ಪಾತ್ರವು ಸಾರಸ್ವತದ ಜೀವಾಳ. ದೇಶ ಕಾಲಗಳ ಮೇರೆಯಿಲ್ಲದವನಂತೆ ಅವುಗಳ ಆಚೆಗೂ ಈಚೆಗೂ ಸಂಚಲಿಸುವ ನಾಗ್ಡೋ ಬೇತಾಳ ( ನಗ್ನ ಬೇತಾಳ ಸನ್ಯಾಸಿ) ಪೂರ್ಣ ಕೃತಿಯಲ್ಲಿ ನನ್ನನ್ನು ಬಹುವಾಗಿ ತಾಕಿದ ಪಾತ್ರ. ಅದೊಂದು ಪಾತ್ರ ಮಾತ್ರವೇ ಆಗಿರದೆ, ಮಾನವ ಬದುಕಿನ ಭರವಸೆ, ಆಶಾಭಾವ, ಯಾವುದೋ ಅರಿಯದೊಂದು ಬಲ ತನ್ನೊಡನೆ ಇದೆಯೆನ್ನುವ ಭಾವ- ಸ್ಥೂಲವಾಗಿ ದೇವರು ಎನ್ನುವುದರ ಪ್ರತಿನಿಧಿಯೂ ಹೌದು. ಪೂರ್ತಿ ಕಥೆಯು ಒಂದು ಜನಾಂಗದ ಸಂಕ್ರಮಣದ ದೀರ್ಘವೃತ್ತಾಂತವಾಗುತ್ತಲೂ ಅದು ಉಳಿಸಿಕೊಳ್ಳುವ ಏಕಸೂತ್ರತೆಯೆಂದರೆ ನಾಗ್ಡೋಬೇತಾಳ ಎಂಬ ಆಶಾವಾದ.

ಗೋವೆಯನ್ನು ತೊರೆಯುವ ಸಂಕಲ್ಪದ ಹಿಂದೆ ಮುಂದೆ ಎಲ್ಲಕಡೆಗೂ ಇದ್ದವ ಬೇತಾಳ. ಅವನ ಆಜ್ಞೆ ಅನುಜ್ಞೆಯನ್ನಲ್ಲದೆ ಸಾರಸ್ವತರು ಅನುಸರಿಸಿದ್ದು ಬೇರೆಯದನ್ನಲ್ಲ. ಅತಿ ಸಾಮಾನ್ಯರ ಜೊತೆಯಲ್ಲಿ ಸಾಮಾನ್ಯರಂತೆ ಬಂದು ಸುಳಿದಾಡುವ ಈ ಸನ್ಯಾಸಿ ಕಾಲದ ಒಳಗನ್ನು ಹೊಕ್ಕು ನಾಳೆಯನ್ನು ನೋಡಬಲ್ಲೆನೇನೋ ಎಂಬಂತೆ ಮಾತಾಡುತ್ತಾನೆ. ಮತ್ತು ಅವನ ಮಾತು ಸಂಭವಿಸುತ್ತದೆ ಎನ್ನುವುದನ್ನು ಕೃತಿಯು ಬಹಳೇ ನಾಜೂಕಾಗಿ ನಿರ್ವಹಿಸುತ್ತದೆ. ದೈವಿಕ ಮತ್ತು ಮಾನವೀಯ ಸಂಗತಿಗಳ ಇಷ್ಟು ಹದವಾದ ಮಿಶ್ರಣವು ಬದುಕಿನ ದೃಷ್ಟಿಯಿಂದ ಬಲು ಸ್ವೀಕಾರ್ಯವಾದ ಅಂಶ. ಇದು ಹೀಗಿಲ್ಲದಿದ್ದರೆ- ಒಂದೋ ನಾಗ್ಡೋ ಬೇತಾಳನನ್ನು ಅತಿಮಾನುಷನೆಂದು ಬಗೆದು ಅವನ ಆಣತಿಯಂತೆಯೇ ಕಾಲವು ಸಾಗಿತೆಂದು ಚಿತ್ರಿಸಬೇಕಿತ್ತು. ಅಥವಾ, ಕಾಲದ ಊಹೆಯನ್ನು ನಾಗ್ಡೋ ಕೂಡ ಮಾಡದಾದ, ಮತ್ತು ಬದಲಾದ ಕಾಲದಲ್ಲಿ ನಾಗ್ಡೋ ಅಪ್ರಸ್ತುತವಾದ ಎಂದು ಬರೆಯಬೇಕಿತ್ತು. ಆದರೆ ಹೀಗೆ ಏಕಪಕ್ಷೀಯವಾಗುವ ಅಪಾಯದಿಂದ ತಪ್ಪಿಸಿಕೊಂಡು ಕೃತಿಯು ನಾಗ್ಡೋ ಬೇತಾಳ ಎನ್ನುವ ಆದರ್ಶ ಪಾತ್ರವೊಂದನ್ನು ಕಟ್ಟಿಕೊಡುತ್ತದೆ. ಇಲ್ಲಿ ಆದರ್ಶ ಪಾತ್ರ ಎಂದು ನಾಗ್ಡೋ ಬೇತಾಳನನ್ನು ನಾನು ಬಗೆದಿರುವುದು ಆ ಪಾತ್ರವು ಕಾಲದೊಂದಿಗೆ ಸಂವಹನವನ್ನೂ, ಸಮತೆಯನ್ನೂ ಸಾಧಿಸುವ ರೀತಿಯ ಕಾರಣಕ್ಕೆ.

ಮಾನವ ಬದುಕನ್ನು ನಿರ್ಣಯಿಸುವ ಅಂಶ ಯಾವುದು? ಎಲ್ಲೋ ಸೂಕ್ಷ್ಮವಾಗಿ ಕೃತಿಯು ಈ ಪ್ರಶ್ನೆಗೆ ಉತ್ತರ ಕೊಡುತ್ತದೆ. ಮತ್ತು ಆ ಉತ್ತರ ’ನೈತಿಕತೆ’ ಎನ್ನುವುದಾಗಿದೆ. ನೈತಿಕ ಜಾರುವಿಕೆಯು ಬದುಕನ್ನು ಒಂದಿಲ್ಲ ಒಂದು ಬಗೆಯಲ್ಲಿ ಕೂಪಕ್ಕೇ ತಳ್ಳುತ್ತದೆ ಎನ್ನುವ ಧ್ವನಿಯಿದೆ ಅಲ್ಲಿ .

ಉದಾ- ಧಡ್ಡನೆಂಬೋ ಮೂಕ ಪಾತ್ರವೊಂದು ತನ್ನ ಬದುಕನ್ನೆಲ್ಲ ಒಂದೇ ಪರಮ ಕಾರ್ಯಕ್ಕೆ ಎಂಬಂತೆ ಬದುಕಿ ಕೊನೆಯಲ್ಲಿ ಆ ಕಾರ್ಯವನ್ನು ಸಮರ್ಥವಾಗಿ ನೆರವೇರಿಸಿರುತ್ತದೆ. ಪೋರ್ಚುಗೀಸರ ಕ್ರೂರತೆಗೆ ಸೋತ ವೆರಣೆಯ (ಗೋವೆಯ ಒಂದು ಭಾಗ) ಸಾರಸ್ವತರ ಕುಲವೇ ಊರು ಬಿಡುತ್ತಿದ್ದ ಸಂದರ್ಭ ಅದು. ಅದೇನೇ ಆದರೂ ಕುಲದೇವಿ ಮ್ಹಾಳಶಿ ಮಾಯಿಯ ಬೃಹತ್ ವಿಗ್ರಹವು ಪೋರ್ಚುಗೀಸರ ಕೈಗೆ ಸಿಗಲೇ ಬಾರದೆಂದು ಬಗೆದ ನಾಗ್ಡೋ ಬೇತಾಳ ಧಡ್ಡನ ಕೈಯಲ್ಲಿ ಆ ವಿಗ್ರಹವನ್ನು ರಾತ್ರೋ ರಾತ್ರಿ ಹೊರಿಸಿ ಬೇರೆಡೆಗೆ ಸಾಗಿಸುವ ವ್ಯವಸ್ಥೆ ಮಾಡಿರುತ್ತಾನೆ. ಗುಡಿಯಲ್ಲಿ ವಿಗ್ರಹ ಇಲ್ಲದ್ದನ್ನು ಕಂಡ ಪೋರ್ಚುಗೀಸ್ ಸೈನಿಕರು ಕೆಲವು ಸಾರಸ್ವತ ಬ್ರಾಹ್ಮಣರನ್ನು ಹಿಡಿದು ವಿಗ್ರಹದ ಜಾಡಿಗಾಗಿ ಹಿಂಸಿಸುತ್ತಾರೆ. ಹಾಗೆ ಹಿಂಸೆಗೆ ಒಳಗಾದವರಲ್ಲಿ ವಿಟ್ಠು ಪೈ ಎಂಬ ಕಥೆಯ ಅತಿಮುಖ್ಯ ಪಾತ್ರವೂ ಒಂದು. ದುರಂತವೆಂದರೆ ಆ ಬಂಧನಕ್ಕೊಳಗಾದ ಗುಂಪಿನಲ್ಲಿ ವಿಗ್ರಹದ ಗುಟ್ಟು ತಿಳಿದವನೇ ಈ ವಿಟ್ಠು ಪೈ ಮಾತ್ರ. ಛಡಿಯೇಟಿನ ಹಿಂಸೆ ತಾಳದಾದ ಆತ ಧಡ್ಡನ ವಿಷಯವಾಗಿ ಹೇಳಿಬಿಡುತ್ತಾನೆ. ಅಲ್ಲಿಗೆ ಇವರನ್ನು ಬಿಟ್ಟು ಧಡ್ಡನನ್ನು ಕಾಡುವ ಸೈನಿಕರ ಕ್ರೂರತೆಗೆ ಧಡ್ಡ ಯಾತನಾಮಯವಾದ ದಯನೀಯ ಸಾವು ಕಾಣುತ್ತಾನೆ. ಗುಟ್ಟು ಬಿಚ್ಚಿಡಲು ಬಾಯೇ ಇಲ್ಲದ ಅವನ ಅವಸ್ಥೆ ಸೈನಿಕರಿಗೂ ತಿಳಿಯದೆ ಹೋಗುತ್ತದೆ. ಮ್ಹಾಳಶಿ ಮಾಯಿಯ ವಿಗ್ರಹ ಉಳಿದುಕೊಳ್ಳುತ್ತದೆ, ಆದರೆ ಇತ್ತ ಧಡ್ಡನ ದಯನೀಯ ಸಾವಿನಿಂದ ಕ್ರುದ್ಧನಾದ ನಾಗ್ಡೋ ಬೇತಾಳ, ಅದಕ್ಕೆ ಕಾರಣನಾದ ವಿಟ್ಠು ಪೈ ವಿಷಯದಲ್ಲಿ ನಖಶಿಖಾಂತ ಉರಿದು ಶಾಪ ಕೊಡುತ್ತಾನೆ. ವೆರಣೆಯ ನೀರು ನೆಲ ಎಲ್ಲವೂ ನಿನಗೂ ನಿನ್ನ ನಾಲ್ಕು ತಲೆಮಾರಿಗೂ ವಿಷ, ಎದ್ದು ಹೋಗು ಇಲ್ಲಿಂದ ಎನ್ನುತ್ತಾನೆ. ಅದೇ ಶಾಪ ಮುಂದಿನ ತಲೆಮಾರುಗಳಲ್ಲಿ ಪ್ರತಿಫಲಿಸುತ್ತದೆ. ಅದೇ ಮುಂದಿನ ಕಥೆಯ ಮೂಲವೂ ಆಗುತ್ತದೆ.

ವಿಟ್ಠು ಪೈ ಯಾಕೆ ಬಾಯ್ಬಿಟ್ಟ ಎನ್ನುವುದಕ್ಕೆ ಹಿಂಸೆ ಮಾತ್ರವೆ ಕಾರಣವೇ ಅಂದರೆ, ಹಾಗಿಲ್ಲ. ಎಲ್ಲೋ ಒಂದು ಕಡೆ ಸೈರಣೆಯನ್ನೂ, ಕಷ್ಟಸಹಿಸುವ ಶಕ್ತಿಯನ್ನು, ನಿಷ್ಠೆಗೆ ಬೇಕಾದ ತಪಸ್ಸಿನಂಥಾ ಗುಣವನ್ನು ವಿಟ್ಠು ಪೈ ಕಳೆದುಕೊಂಡಿರುತ್ತಾನೆ. ತನಗೆ ಹೆಂಡತಿಯಿದ್ದೂ ಅಲ್ವೀರಾ ಎನ್ನುವ ಪ್ರೆಂಚ್ ಹುಡುಗಿಯೆಡೆಗಿನ ಮೋಹ ಮತ್ತು ನೈತಿಕವಲ್ಲದ ಸಂಬಂಧ ವಿಟ್ಠುವಿನ ಆತ್ಮಬಲವನ್ನು ಎಲ್ಲೋ ಸಡಿಲಮಾಡಿಬಿಟ್ಟಿರುತ್ತದೆ. ನೇರವಾಗಿ ಕೃತಿ ಆ ಮಾತು ಹೇಳದಿದ್ದರೂ, ವಿಟ್ಠುವಿನ ಮುಖ ನೋಡಿದ ನಾಗ್ಡೋ ಬೇತಾಳ ಒಂದೊಮ್ಮೆ ಆಡಿದ ಮಾತು ಅದನ್ನೇ ಧ್ವನಿಸುತ್ತದೆ. ಮನುಷ್ಯನ ನೈತಿಕ ಅಧಃಪಾತವು ಎಷ್ಟು ದೊಡ್ಡ ಪ್ರಮಾದಗಳಿಗೆ ಪರೋಕ್ಷ ಕಾರಣವಾಗಬಹುದು ಎನ್ನುವುದು ಧ್ವನಿತವಾಗಿದೆ ಇಲ್ಲಿ.

ಎಂಥ ಸೂಕ್ಷ್ಮ ಸಂದಿಗ್ಧ ಇಲ್ಲಿದೆಯೆಂದರೆ, ಧಡ್ಡನ ಕುರಿತಾದ ಸತ್ಯವನ್ನು ಸೈನಿಕರಿಗೆ ಹೇಳುವ ಸಾಧ್ಯತೆಯಿದ್ದವ, ಗುಟ್ಟು ತಿಳಿದವ ವಿಟ್ಠು ಪೈ ಮಾತ್ರ. ಅದಲ್ಲದೆ ಆ ಗುಟ್ಟು ಅವನನ್ನೂ ಮತ್ತು ಉಳಿದ ಬಂಧಿಗಳನ್ನೂ ಬಿಡುಗಡೆ ಮಾಡುವ ಸಾಮರ್ಥ್ಯ ಹೊಂದಿತ್ತು. ಮನುಷ್ಯ ಇಂಥದೊಂದು ಸಂದರ್ಭದಲ್ಲಿ ಏನಂತ ಯೋಚಿಸುತ್ತಾನೆ? ಉದಾತ್ತ ಆದರ್ಶವಾದಿಯಾಗಿ, ಕುದಿಯುವ ವಾಸ್ತವದಲ್ಲಿ ಬದುಕುವುದು ಎಷ್ಟು ಜನರಿಗೆ ಸಾಧ್ಯವಾದೀತು?

ನಾಗ್ಡೋ ಬೇತಾಳನಂಥಾ ವ್ಯಕ್ತಿ ಇರುವುದೆಂದರೇನು, ಶಾಪ ಕೊಡುವುದೆಂದರೇನು, ಅದು ಸಂಭವಿಸುವುದೆಂದರೇನು- ಎಲ್ಲವೂ ಪುರಾಣದ ಕಥೆಯಂತಿದೆಯಲ್ಲವೆ ಅನ್ನಿಸಬಹುದು. ಆದರೆ ಕೃತಿಯು ಕಟ್ಟಿಕೊಡುವ ಸಂದರ್ಭದಲ್ಲಿ ನಾಗ್ಡೋ ಬೇತಾಳ ಆ ಕಾಲದ ಮಾತನ್ನಾಡಿದ ಅನ್ನಿಸುವುದೇ ಹೊರತು ಕಾಲವನ್ನು ಆದೇಶಿಸುವ ಮಾತಾಡಿದ ಅನ್ನಿಸದು. ಉದಾ- ಶಾಪದಿಂದಲ್ಲದಿದ್ದರೂ ಪೋರ್ಚಿಗೀಸರ ಪೈಶಾಚಿಕತೆಗೆ ರೋಸಿ ಆ ಬ್ರಾಹ್ಮಣ ಸಮುದಾಯ ವೇರಣಾ ಪ್ರದೇಶವನ್ನು ಬಿಟ್ಟು ತೆರಳಲೇ ಬೇಕಿತ್ತು, ಬೇತಾಳನ ಮಾತು ಅದಕ್ಕೆ ಸೇರಿಕೊಂಡಿತಷ್ಟೆ. ಈ ಅರ್ಥದಲ್ಲಿ ಬೇತಾಳ ಎನ್ನುವ ಪಾತ್ರ ಕಾಲವನ್ನು ತುಂಬ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳುವ ಮಾನವೀಯ ಪಾತ್ರವೇ ಹೊರತು ಯಾವುದೋ ಅಲೌಕಿಕ ಶಕ್ತಿಯ ಕಲ್ಪಕ ಪಾತ್ರವಲ್ಲ. ಕಾಲವನ್ನು ಚಿಂತಿಸುವ ಆ ಪಾತ್ರದ ಸೂಕ್ಷ್ಮತೆ ನನ್ನನು ಪದೇ ಪದೇ ಅಚ್ಚರಿಗೊಳ್ಳುವಂತೆ ಮಾಡುತ್ತದೆ. ಅಂಥದೊಂದು ಪಾತ್ರವನ್ನು ಗೋಪಾಲ ಕೃಷ್ಣ ಪೈಗಳು ಒಲಿಸಿಕೊಂಡುದು ಹೇಗೆ ಎಂದು ಬೆರಗುಂಟಾಗುತ್ತದೆ.

ಪೋರ್ಚುಗೀಸರ ಪ್ರಭಾವದಿಂದಾಗಿ ಗೋವೆಗೆ ಹೊಸದಾಗಿ ಮುದ್ರಣ ಯಂತ್ರಗಳು ಬಂದ ಸಂದರ್ಭ ಅದು. ಬರವಣಿಗೆ ಎನ್ನುವುದು ಕೆಲವೇ ಜನರಿಗೆ ತಿಳಿದಿದ್ದು ಅವರ ಜೀವನೋಪಾಯವೇ ಅದಾಗಿದ್ದ ಕಾಲದಲ್ಲಿ ಈ ಯಂತ್ರ ಬಂದಾಗ ಜನ ಆತಂಕಗೊಳ್ಳುತ್ತಾರೆ, ಆ ಯಂತ್ರಕ್ಕೆ ಬಹಿಷ್ಕಾರ ಹಾಕುವ ಯೋಚನೆ ಮಾಡುತ್ತಾರೆ. ನಾಗ್ಡೋ ಬೇತಾಳನೊಬ್ಬ ಮಾತ್ರ ಈ ಮಾತು ಹೇಳುತ್ತಾನೆ. “ಈ ಯಂತ್ರ ನಾಳೆ ಬಹುದೊಡ್ಡ ಪಾತ್ರವಹಿಸುತ್ತದೆ. ಬರಹ ಯಾರೊಬ್ಬರದೇ ಸೊತ್ತಾಗಿ ಉಳಿಯದು, ಹಾಗಂದುಕೊಳ್ಳುವುದೂ ಸಲ್ಲದು. ಈ ತಕ್ಷಣಕ್ಕೆ ಕೆಲವರಿಗೆ ಜೀವನೋಪಾಯ ಕಷ್ಟವಾಗಬಹುದು, ಅವರು ಬೇರೆ ಕೆಲಸ ಹುಡುಕಿಕೊಳ್ಳುವುದು ಒಳ್ಳೆಯದು. ಯಂತ್ರಕ್ಕೆ ಬಹಿಷ್ಕಾರ ಹಾಕುವುದು ಮೂರ್ಖತನ”. ಅತ್ಯಮೂಲ್ಯವಾದ ವಿಚಾರ ಇದು. ಕಾಲದೊಂದಿಗೆ ಯೋಚಿಸಬಲ್ಲವ ಮಾತ್ರ ಈ ಮಾತಾಡಬಲ್ಲ. ಕಾದಂಬರಿಯ ಕೊನೆಯಲ್ಲೂ ಆತ ಅತ್ಯಂತ ಯುಕ್ತವಾದ ಮಾತಾಡುತ್ತಾನೆ. ಅಂಥಾ ಅವನನ್ನೇ ಕಾಯುತ್ತ ಕಾಯುತ್ತ ಬದುಕಿನ ಕೊನೆಯ ಕ್ಷಣಗಳನ್ನು ಅಪ್ಪುತ್ತಿದ್ದ ರಾಮಚಂದ್ರ ಪೈಯ ಮನಸನ್ನು ಮಮತೆಯಿಂದ ಮುಕ್ತಗೊಳಿಸುವವನೂ ಬೇತಾಳನೇ.

ಇಡೀ ಕಾದಂಬರಿಯ ಓದಿನಬಳಿಕವೂ ಬಹುಕಾಲ ಓದುಗನ ಕಣ್ಣೆದುರು ತನ್ನ ರೂಪು ಮರೆಯದಂತೆ ಮಾಡುವವ ನಾಗ್ಡೋ ಬೇತಾಳ.

ನಾನು ಭಾವಿಸುವಂತೆ ಕಾದಂಬರಿಯ ಬೆನ್ನೆಲುಬಾದ ಅಂಶವೆಂದರೆ, ಯಾವೊಂದು ಸಂಗತಿಗೂ ಪೂರ್ತಿ ಅರ್ಪಿತವಾಗಿ ಅದರಲ್ಲಿಯೇ ಲೀನವಾಗದೆ ಅತ್ಯಂತ ದಕ್ಷವಾದ ’ಸ್ಥಿತಿ’ಯೊಂದನ್ನು ಕಂಡುಕೊಂಡುದು. ಇನ್ನಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ- ಬರಿಯ ಅದೃಷ್ಟಕ್ಕಾಗಲೀ, ಯಾವುದೋ ಆದರ್ಶವನ್ನು ಕಾಣಿಸುವ ಒತ್ತಡಕ್ಕಾಗಲೀ, ಇತಿಹಾಸವೆಂಬುದು ಅನ್ಯಾಯ ಎಸಗಿದ ಪಾಪಿ ಎಂಬ ಭಾವಕ್ಕಾಗಲೀ, ಮಾನವಾತೀತವಾದ ಶಕ್ತಿಗಾಗಲೀ, ಅಥವಾ ಪ್ರಕೃತಿಯೆಂಬ ಚಿರಂತನ ಸತ್ಯಕ್ಕೇ ಆಗಲೀ ಕಾದಂಬರಿಯು ತನ್ನೆಲ್ಲ ಮೈ ಅರ್ಪಿಸಿ ಮೈಲಿಗೆಯಾಗಿಲ್ಲ. ಹಾಗಂತ ಅದೆಲ್ಲವನ್ನೂ ಬಿಟ್ಟ ಸೆಕ್ಯುಲರ್ ಕೃತಿಯೂ ಆಗದೆ, ಎಲ್ಲವನ್ನೂ ಹದವರಿತು ಬಳಸಿಕೊಂಡು ’ಬೆನ್ನು ಹುರಿ ಇರುವ” ಅಪರೂಪದ ಕೃತಿಯಾಗಿ ಹೊಮ್ಮಿದೆ. ಯಾವುದೋ ಒಂದು ಸಂಗತಿಗೆ ಅರ್ಪಿತವಾಗುವ ಕೃತಿ- ಅದು ದೇಶಭಕ್ತಿ, ಮಾನವ ಪ್ರೇಮ, ದೈವಿಕತೆ, ನಂಬುಗೆ, ಆಚಾರ, ಇತಿಹಾಸ, ಕರ್ಮ ಸಿದ್ಧಾಂತ ಹೀಗೆ ಯಾವುದೇ ಇರಬಹುದು- ಅಷ್ಟರಮಟ್ಟಿಗೆ ಬದುಕಿನ ಸಮಗ್ರತೆಯನ್ನು ಚಿತ್ರಿಸುವಲ್ಲಿ ಹಿಂದೆ ಉಳಿಯುತ್ತದೆ. ರಸೋನ್ನತಿಯನ್ನು ಸಾಧಿಸುವುದಕ್ಕೆ ಹಾಗೂಂದು ಆನಿಕೆಯನ್ನು ಅರಸುವುದು ಅನಿವಾರ್ಯವೂ ಇರಬಹುದೇನೋ. ಹಾಗಿದ್ದೂ, ತತ್ತ್ವದ ಹುಡುಕಿಗೆ ಹೊರಟ ಕೃತಿಯೊಂದು ರಸದ ಗುಲಾಮಿತನಕ್ಕೆ ಬೀಳದೆ ಇರುವುದೇ ಹೆಚ್ಚು ಪ್ರಶಸ್ತವಾದ್ದು. ಸ್ವಪ್ನ ಸಾರಸ್ವತ ಆ ದಿಶೆಯಲ್ಲಿ ವಿಜೃಂಭಿಸುವ ಕೃತಿ. ಯಾವುದರ ಹೆಗಲ ಮೇಲೆಯೂ ಅತಿಯಾದ ಭಾರ ಹಾಕದೆ ತಾನೇ ತಾನಾಗಿ ಉಳಿಯುವ ಶಕ್ತಿ ಇದರಲ್ಲಿದೆ.

ಬಳಸಿಕೊಂಡ ಭಾಷೆಯು ಸಂದರ್ಭಗಳಿಗೆ ಹೊಂದಿಕೊಳ್ಳುವಂತಿದ್ದು, ಹಲವೊಮ್ಮೆ ಗ್ರಾಮೀಣ ಭಾಗದ ವಿಶಿಷ್ಟ ನುಡಿಗಟ್ಟಿನ ಪ್ರಯೋಗವೂ ಕಾಣುತ್ತದೆ. ಉದಾ- ಕಾಲುಗುರು ಕಾಣದ ಬಸುರಿ ಎಂಬ ನುಡಿಗಟ್ಟು. ತುಂಬು ತಿಂಗಳಿನ ಬಸುರಿ ಎನ್ನುವ ಅಭಿಪ್ರಾಯದ ಮಾತು ಅದು. ಕೆಲವಾರು ಕೊಂಕಣಿ ಪದಗಳು (ಶಿತ್ತಾಡೊ, ಉಪ್ಕರಿ), ಕೊಂಕಣಿ ಜನಪದ ಹಾಡುಗಳ ಮೂಲಕ ಸಾರಸ್ವತವೇ ಆದ ಲೋಕವೊಂದನ್ನು ಕಾದಂಬರಿ ತನ್ನೊಳಗೆ ಸೃಷ್ಟಿಸಿಕೊಳ್ಳುತ್ತದೆ.

ಇಷು ದೀರ್ಘವಾಗಿ ಬರೆಯುವಾಗ ಆ ನೆಲ ತಪ್ಪಿದ ತನ್ನವರ ಇತಿಹಾಸದ ಕಥೆ ಗೋಪಾಲಕೃಷ್ಣ ಪೈಗಳನ್ನು ಯಾವ ಬಗೆಯಲ್ಲಿ ತಾಕಿರಬಹುದು! ಹೌದು, ಕೃತಿ ಓದಿದ ಯಾರೇ ಆದರೂ ತನ್ನ ತಲೆಮಾರುಗಳ ಕಥೆಯನ್ನುಇದೇ ಬಗೆಯಲ್ಲಿ ತಿಳಿದುಕೊಳ್ಳಬೇಕೆಂದು ಬಯಸುವಂತಿದೆ, ಈ ವಂಶಾವಳಿಯ ಕಥೆ.

ನಡು ನಡುವೆ ಕೆಲವೊಮ್ಮೆ ನಿರೂಪಣೆಯ ಏಕತಾನತೆ ಬೇಸರವೆನ್ನಿಸಬಹುದು. ಕೆಲವು ಸಂದರ್ಭಗಳು ಅದೇ ಅದೇ ಮರುಕಳಿಕೆಯಿಂದಾಗಿ ಅನಗತ್ಯವಾಗಿತ್ತು ಎಂದೂ ಅನ್ನಿಸಬಹುದು. ಇಂಥ ಕೆಲವು ಹಿನ್ನಡೆಗಳನ್ನು ಹೊರತುಪಡಿಸಿ ಸ್ವಪ್ನ ಸಾರಸ್ವತ ಎನ್ನುವುದು ಕನ್ನಡದ ಅಪೂರ್ವ ಕಾದಂಬರಿ. ಕೇಂದ್ರಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಭಾಜನವಾದ್ದು ಯುಕ್ತವಾಗೇ ಇದೆ.

ಗಂಭೀರ ದೀರ್ಘ ಓದಿನ ಬಯಕೆಯಿರುವ ಯಾರೇ ಆದರೂ ಓದಬೇಕಾದ, ಓದುವ ಮೂಲಕ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ಇತಿಹಾಸವನ್ನು ಅರಿಯಬಹುದಾದ ಹೂರಣ ಇಲ್ಲಿದೆ. ಓದುವ, ,ಓದಿ ಮುಗಿಸುವ ಖುಷಿಯ ಅನುಭವ ಬೇಕಿದ್ದರೆ ಇಂಥಾ ಕೃತಿಯನ್ನೋದಬೇಕು.  

++++++++++++++++++++++++++++++++++++++++++++++++++++++++++++++++++

ಸ್ವಪ್ನ ಸಾರಸ್ವತ- ನನ್ನ ಅನಿಸಿಕೆಗಳು :ಸುದರ್ಶನ ಗುರುರಾಜರಾವ್

swapna_12

ನಾವು ಶಾಲೆಯಲ್ಲಿ ಇತಿಹಾಸವನ್ನು ಓದುತ್ತಿದ್ದಾಗ ಯುರೋಪಿಯನ್ನರು ಬಂದಿದ್ದು, ವ್ಯಾಪಾರ ಮಾಡಿದ್ದು, ಕಾಲಕ್ರಮೇಣ ಅಧಿಕಾರವನ್ನು ಅತಿಕ್ರಮಿಸಿದ್ದು, ಹಲವಾರು ಬದಲಾವಣೆಗಳಿಗೆ ಕಾರಣರಾಗಿದ್ದನ್ನು ಓದುತ್ತೇವೆ,. ಇವೆಲ್ಲದರ ನಡುವೆ ಅವರು ತಮ್ಮ ಧರ್ಮ ಶ್ರೇಷ್ಠವೆಂದು ಬಗೆದು ಅವರು ಅದನ್ನು ಭಾರತದ ಸಮಾಜದಲ್ಲಿ  ಬಲವಂತಪೂರ್ವಕವಾಗಿ ತಂದು ತುರುಕಿದ್ದನ್ನು ನಾವು ಓದುವುದಿಲ್ಲ. ಅವರ ಪಾದ್ರಿಗಳು ಭಾರತಕ್ಕೆ ಬಂದು ತಮ್ಮ ಧರ್ಮ ಸ್ಥಾಪನೆ ಮಾಡಿದರೆಂದು ಮಾತ್ರ ಓದುತ್ತೇವೆ. ಆದರೆ ಆ ಪ್ರಕ್ರಿಯೆಯಲ್ಲಿ ಅವರುಗಳು ಅನುಸರಿಸಿದ ವಿಧ್ವಂಸಕ ಮಾರ್ಗಗಳನ್ನು ಕುರಿತು ಅವು ವಿದ್ಯಾರ್ಥಿಗಳಿಗೆ ಅದೇ ಇತಿಹಾಸದ ಪಠ್ಯಗಳು ತಿಳಿಸದೇ ಹೋಗುತ್ತವೆ. ಇದು ಒಂದು ಬಗೆಯ ಎಕಪಕ್ಷೀಯ ಇತಿಹಾಸ ಎಂದೆನ್ನಬಹುದು. ಇತಿಹಾಸವನ್ನು ತಿಳಿಯುವುದು ಅದನ್ನು ಕಲಿತು ನಮ್ಮ ತುಲನಾತ್ಮಕ ಶಕ್ತಿಯನ್ನು ಬೆಳೆಸಿಕೊಳ್ಳಲಿಕ್ಕೆ ಎಂದಾದರೆ ಅದು ಆದಷ್ಟು ಪರಿಪೂರ್ಣವಾಗಿರಬೇಕಲ್ಲವೇ?

ಇನ್ನು ಯಾವುದೇ ಪುರಾತನ ಇತಿಹಾಸವನ್ನು ಓದಿದಾಗಲೂ ನಮಗೆ ಒಂದು ವಿಚಾರ ಗೋಚರವಾಗುತ್ತದೆ. ರಾಜ ಸಂತತಿಗಳು, ಹಲವಾರು ಪ್ರಸಿದ್ಧ ವಂಶಗಳು ಮೂರು ಅಥವಾ ನಾಲ್ಕನೆಯ ತಲೆಮಾರಿಗೆ ಬರುವಲ್ಲಿ ತಮ್ಮ ವೈಶಿಷ್ಟ್ಯತೆಯನ್ನು ಕಳೆದುಕೊಂಡು ದುರ್ಬಲವಾಗುವುದೋ ಇಲ್ಲವೇ ನಿರ್ನಾಮವಾಗುವುದೋ ಕಾಣುತ್ತೇವೆ. ಇದು ಒಂದು ನಿಯತ ಚಕ್ರದಂತೆ ಹಾಸು ಹೊಕ್ಕಾಗಳು ಕಾರಣವೇನಿರಬಹುದು? ತಮ್ಮ ಮೊದಲಿನ ಅಥವಾ ಎರಡನೆ ತಲೆಮಾರಿನ ಜನರಲ್ಲಿ ಕಂಡುಬರುವ ಸಾಮರ್ಥ್ಯಗಳು ತರುವಾಯು ಬರುವ ಪೀಳಿ ಗೆಗಳಲ್ಲಿ ನಶಿಸಲು ಕಾರಣಗಳೇನು? ಅದೇ  ರೀತಿಯಲ್ಲಿ ಮೌಲ್ಯಗಳ ಅದಃಪತನವನ್ನು ನಾವು ಕಾಣುತ್ತೇವೆ.  ಪೀಳಿಗೆಯಿಂದ ಪೀಳಿಗೆಗೆ ನಿಜವಾಗಿಯೂ ವರ್ಗಾವಣೆಯಾಗಬೇಕಾದ ಸಂಪತ್ಯಾವುದು?

ಈ ಪುರಾಣೇತಿಹಾಸಗಳ ಈ ವಿದ್ಯಮಾನಗಳ ನಡುವಿನ ಸಾಮಾನ್ಯ ಕೊಂಡಿ ಯಾವುದು? ಮನುಷ್ಯನ ಮೂಲಭೂತ ಗುಣ ಕ್ರೌರ್ಯ-ಸ್ವಾರ್ಥಗಳಾದರೂ ಅದನ್ನು ನಿಯಂತ್ರಿಸುವಲ್ಲಿ ಇರುವ ಎಡರು ತೊಡರುಗಳೇನು, ಅವು ಅನಾವರಣಗೊಳ್ಳುವ ಸಂದರ್ಭಗಳು ಹೇಗಿರುತ್ತವೆ , ಧರ್ಮ- ನೈತಿಕತೆಯ ಜೊತೆಗಿನ ಅವುಗಳ ಸೆಣೆಸಾಟ ಯಾವ ರೀತಿಯದ್ದು ಇತ್ಯಾದಿಗಳನ್ನು ಕುರಿತ ಜಿಜ್ಞಾಸೆಗಳನ್ನು ಯಾವ ಪೂರ್ವಾಗ್ರಹಕ್ಕೂ ಒಳಗಾಗದೆ ಸಮುದಾಯದ ಹಿನ್ನೆಲೆ ಇಟ್ಟುಕೊಂಡು ಕುಟುಂಬವೊಂದರ ನಾಲ್ಕು ತಲೆಮಾರುಗಳ ವಿದ್ಯಮಾನಗಳನ್ನು  ಕಥಾರೂಪದಲ್ಲಿ  ನಿರೂಪಿಸಿರುವುದೇ ಈ ‘’ಸ್ವಪ್ನ ಸಾರಸ್ವತ’’ ಕಾದಂಬರಿ.

ಯೂರೋಪಿಯನ್ನರಲ್ಲಿ ಮೊದಲು ಭಾರತಕ್ಕೆ ಬಂದವರು ಪೋರ್ಥುಗೀಸರೇ. ವ್ಯಾಪಾರ ಅವರ ಉದ್ದೇಶವಾಗಿದ್ದರೂ, ದೋಚಿ-ಬಾಚಿ ಹಣ ಮಾಡಿಕೊಂಡು ವಾಪಸ್ಸಾಗುವುದೋ ಅಥವಾ ಭಾರತದಲ್ಲೇ ಇರುವುದೋ ಎಂಬ ಆಸೆಯಿಂದ ಬಂದವರೇ ಅವರಲ್ಲಿ ಹೆಚ್ಚು. ಹೀಗೆ ಬಂದವರು ಸ್ಥಳೀಯರನ್ನು ದಬ್ಬಾಳಿಕೆ ಮಾಡಿ, ಅವರ ವ್ಯಾಪಾರ ವ್ಯವಹಾರಗಳನ್ನು ಅಸ್ಥಿರಗೊಳಿಸಿ, ದೋಚಿ ಬಾಚಿ ಹೆಣ್ಣು ,ಹೆಂಡ -ಖಂಡಗಳ ಜೀವನ ನಡೆಸಿದ್ದು  ಒಂದು ಕಡೆಗಿದ್ದರೆ, ಸೈನ್ಯ-ಅಧಿಕಾರದ ಬಲದ ಮೂಲಕ ಕ್ರೈಸ್ತ ಮತವನ್ನು ಗೋವಾದ ಹಿಂದುಗಳ ಮೇಲೆ ಬಲವಂತವಾಗಿಯೂ, ಆಮಿಷ ತೋರಿಸುವ ಮೂಲಕವೂ, ದೌರ್ಜನ್ಯ, ಬೆದರಿಕೆಗಳನ್ನೊಡ್ಡಿ ಅಲ್ಲಿನ ಜನರ ಜೀವನವನ್ನೇ ಬುಡಸಮೇತ ಮಾಡುವುದರ ಕ್ರೂರ ಮಾರ್ಗಗಳಿಂದಲೂ  ಅಸ್ಥಿರಗೊಳಿಸಿದ ಇತಿಹಾಸದ ಇನ್ನೊಂದು ಮುಖ ನಮಗೆ ಈ ಕಾದಂಬರಿಯಲ್ಲಿ ಕಾಣಬರುತ್ತದೆ. ಮುಸ್ಲಿಮರ ಧಾಳಿಗೆ ತುತ್ತಾಗಿ ಹಲವು ದೇವಾಲಯಗಳು ನಾಶವಾಗಿದ್ದನ್ನು ಓದಿರುತ್ತೇವೆ;ಆದರೆ ಪೋರ್ಚುಗೀಸರು ಗೋವೆಯಲ್ಲಿ ನಡೆಸಿದ ವಿಧ್ವಂಸಕ ಕ್ರಿಯೆಗಳು ನಮಗೆ ಅಪರಿಚಿತವಾಗಿಯೇ ಉಳಿದಿದ್ದವು. ಅದನ್ನೂ ವಿಸ್ತಾರವಾಗಿ ಈ ಕಾದಂಬರಿ ಚಿತ್ರಿಸುತ್ತದೆ. ನಂತರದಲ್ಲಿ ಬಂದ ಬ್ರಿಟಿಷರು ಸನಾತನ ಹಿಂದು ಧರ್ಮವನ್ನು ಒಡೆಯುವ ಕುರಿತಾಗಿ ನೇರ ಆಕ್ರಮಣ ನೀತಿಯನ್ನು ಅನುಸರಿಸದಿದ್ದರೂ, ಪರೋಕ್ಷವಾಗಿ ಅ ಕಾರ್ಯವನ್ನು ಮುಂದುವರಿಸಿದ್ದು ಇತಿಹಾಸ. ಆದರೆ ಪೊರ್ತುಗೀಸರು ತಮ್ಮ ಧರ್ಮ ಪ್ರಚಾರದ, ಧರ್ಮಾಂಧತೆಯ ಮತ್ತಿನಲ್ಲಿ ಗೋವೆಯ ಸಮಾಜದ, ಸಾಮಾಜಿಕ ಸಾಮರಸ್ಯದ,ಧಾರ್ಮಿಕ ನಂಬಿಕೆ-ಭಾವನೆಗಳಿಗೆ ನೇರವಾಗಿ ಹಾಗೂ ಅಮಾನುಷವಾಗಿ ಧಕ್ಕೆ ತಂದದ್ದನ್ನು,ಈ ವಿದ್ಯಮಾನಗಳನ್ನು, ಆ ಜನಗಳ ಆತಂಕವನ್ನು ಕಣ್ಣಿಗೆ ಕಟ್ಟುವಂತೆ ಪದಗಳಲ್ಲಿ ಹಿಡಿದಿಟ್ಟಿದ್ದಾರೆ ಲೇಖಕರು. ಈ ಕುರಿತು LIES WITH LONG LEGS ಎನ್ನುವ ಪುಸ್ತಕದಲ್ಲಿಯೂ  ಐತಿಹಾಸಿಕ ದಾಖಲೆಗಳ ಸಮೇತ ವಿವರಿಸಲಾಗಿದೆ.

ಇಂತಹ ವಿದ್ರಾವಕ ಐತಿಹಾಸಿಕ ಕಾಲಘಟ್ಟದಲ್ಲಿ ಧರ್ಮ-ಮೌಲ್ಯಗಳನ್ನು ತ್ಯಜಿಸದೆ , ಅವುಗಳಿಗಾಗಿ ತಮ್ಮೆಲ್ಲ ಇತರ ಸಂಪತ್ತನ್ನು ತ್ಯಜಿಸಿ ಕರಾವಳಿ ಕರ್ನಾಟಕದ ಕಡೆಗೆ ಗುಳೆ ಹೊರಡುವ,ಕರ್ನಾಟಕದಲ್ಲಿ ನೆಲೆಸಿ ಜೀವನದೆಲ್ಲ ಏರು ಪೇರುಗಳನ್ನು, ಕಷ್ಟ ಕಾರ್ಪಣ್ಯಗಳನ್ನು, ಅಭಿವೃದ್ಧಿ ಅವನತಿಗಳನ್ನೂ, ಪ್ರೀತಿ-ಪ್ರೇಮ- ವಿಶ್ವಾಸ-ಅಂತಃಕರಣ ರಾಗ-ದ್ವೇಷ,ಕಲಹ ಮಾತ್ಸರ್ಯ ಎಲ್ಲವನ್ನೂ ಕಂಡು ಅನುಭವಿಸುವ ಸಾರಸ್ವತ ಬ್ರಾಹ್ಮಣ ಕುಟುಂಬ ಹಾಗೂ ಅದರ ಸುತ್ತಲಿನ  ಸಮುದಾಯದ ಕುರಿತ ಅತಿ ಅಪೂರ್ವವಾದ ಕಾದಂಬರಿಯೇ ಸ್ವಪ್ನ ಸಾರಸ್ವತ.

ಗೋವೆಯ ಜನ ಜೀವನ, ಸಾರಸ್ವತ ಬ್ರಾಹ್ಮಣರ ಸಂಪ್ರದಾಯಗಳು, ಅವರಲ್ಲಿನ ಸಿರಿತನ ಬಡತನಗಳ ಚಿತ್ರಣ,ಸಮುದಾಯ ಹಾಗೂ ಕುಟುಂಬದ ಚರಿತ್ರೆಯನ್ನು ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸುವುದರ ಪ್ರಾಮುಖ್ಯತೆ,ಆ ಮೂಲಕ ಹಿಂದಿನವರ ಸಾಧನೆ ವೈಫಲ್ಯಗಳನ್ನು,ತಪ್ಪು ಒಪ್ಪುಗಳನ್ನು, ಧರ್ಮದ -ನೈತಿಕತೆಯ ನೆಲೆಗಟ್ಟಿನಲ್ಲಿ ತೂಗಿನೋಡಿ,ಸಮಷ್ಟಿ ಪ್ರಜ್ಞೆಯ ಜೀವನ ವಿಧಾನದ ಮೂಲಕ, ಅದರ ತತ್ವಗಳ ಅನುಸಾರ ಸಮಸ್ಯೆಗಳ, ಪರಿಹಾರಗಳ ಯುಕ್ತಾಯುಕ್ತತೆಯ ಮಾರ್ಗವನ್ನು ಕಂಡುಕೊಳ್ಳುವ ಪರಿಕಲ್ಪನೆಯನ್ನು ಬೆಳೆಸುವ ಸೂಚ್ಯ ಸಂದೇಶ ಅಡಕವಾಗಿದೆ.ಅದು ಸಾಧ್ಯವಾಗದ ಪೀಳಿಗೆ ಮುಂದೆ ಕ್ಷೋಭೆಗೊಳಗಾಗಿ ಒಡಕು ಬಿರುಕುಗಳಿಗೆ ಬಲಿಯಾಗುವ ಅನಿವಾರ್ಯ ಸತ್ಯವನ್ನು ಅನಾವರಣಗೊಳಿಸುತ್ತದೆ. ಈ ಕಾದಂಬರಿಯು ರಾಮಕೃಷ್ಣ ಪೈ ಎಂಬ ಪಾತ್ರದ ಸ್ವಾಗತ ಹಾಗೂ ಅವನಜ್ಜ ವಿಟ್ಠು ಪೈ ನಡುವಿನ ಸಮ್ಭಾಶಣೆಯಂತೆ ಸಾಗುತ್ತದೆ. ಇತಿಹಾಸದ ಅರಿವಿದ್ದ ಈ ಎರಡೂ ಪಾತ್ರಗಳು, ಹಾಗೂ ನಾಗಪ್ಪೈ ಎಂಬ ಇನ್ನೊಂದು ಪಾತ್ರ ತಮ್ಮ ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿಯೇ ನಿರ್ವಹಿಸುತ್ತವೆ. ಆದರೆ ತಮ್ಮ ಕೆಲಸದ ಭರದಲ್ಲಿ, ಸಂಪತ್ತನ್ನು ಗಳಿಸುವ ಛಲದಲ್ಲಿ ಕುಟುಂಬಿಕ , ಐತಿಹಾಸಿಕ ಮೌಲ್ಯಗಳನ್ನು,ಸತ್ಯಗಳನ್ನು ವರ್ಗಾಯಿಸುವಲ್ಲಿ ರಾಚ್ಚು ಪೈ(ರಾಮಕೃಷ್ಣ ಪೈ) ಗಮನ ಕೊಡದ ಕಾರಣ ಮುಂದಿನ ಒಂದು ಜೀವವು ಆದರ್ಶಗಳನ್ನು ಪ್ರತಿನಿಧಿಸುವುದೇ ಇಲ್ಲ. ಈ ಕಾದಂಬರಿಯಲ್ಲಿ ಅಡಕವಾಗಿರುವ ಅತಿ ಸೂಚ್ಯವಾದ ಸಂದೇಶ ಇದು ಎಂದು ನನ್ನ ಭಾವನೆ. ಈ ಕಾರಣಕ್ಕಾಗಿ ಹಲವಾರು ಅನಾಹುತಗಳು ಸಂಭವಿಸುತ್ತಾ ಹೋಗುತ್ತವೆ. ತಾನು ಕಟ್ಟಿದ ಸಾಮ್ರಾಜ್ಯ ತನ್ನೆದುರೇ ಕುಸಿಯುವ ಕ್ರೂರ ವಿಪರ್ಯಾಸವನ್ನು ನೋಡುವುದು ರಾಮಕೃಷ್ಣನ ಹಣೆಬರಹವಾಗುತ್ತದೆ. ಜೊತೆಗೆ ವಿಟ್ಠು ಪೈ ನ ಅನೈತಿಕ ಸಂಬಂಧ, ರಾಮಕೃಷ್ಣ ಪೈ ಗೆ ಇದ್ದಿದ್ದಿರಬಹುದಾದ ಹಲವು ಅನೈತಿಕ ಸಂಬಂಧಗಳು ಹೇಗೆ ತಮ್ಮ ಮಕ್ಕಳನ್ನು ಪ್ರತಿಬಮ್ಧಿಸುವಲ್ಲಿ ಸೋಲುತ್ತವೆ ಹಾಗೂ ಅದು ಮುಂದಿನ ಸಂಕ್ಷೋಭಗಳಿಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ನೇರವಾಗಿ ಹೇಳದಿದ್ದರೂ ನೈತಿಕ ಪ್ರಜ್ಞೆ ಹಾಗೂ ಅದರ ಚೌಕಟ್ಟು ಮೀರಿದರೆ ಕಾಡಬಹುದಾದ ಪರಿಣಾಮಗಳನ್ನು ಮನದಟ್ಟು ಮಾಡಿಸುತ್ತದೆ  ದೀರ್ಘವಾದ ಕಾದಂಬರಿ, ಅನುಭವಿಸಿ ಬರೆದ ಕಥಾನಕದಂತೆ ಸಾಗುವುದರಿಂದ ಓದುಗನು ಪಾತ್ರಗಳನ್ನೂ ಸ್ವತಃ ಅನುಭವಿಸಿದಂತೆ ಭಾಸವಾಗುತ್ತದೆ.

ಹದಿಮೂರನೇ ಅಧ್ಯಾಯದಲ್ಲಿ, ಗುಳೆ ಹೊರಟ ಸಾರಸ್ವತ ಸಮುದಾಯ ಕರ್ನಾಟಕವನ್ನು ಪ್ರವೇಶಿಸಿ ಕನ್ನಡದ ವರ್ಣಮಾಲೆಯ ಅಕ್ಷರಗಳನ್ನು ಕಂಡು  ಅವುಗಳನ್ನು ವರ್ಣಿಸುವ  ರೀತಿ, ಕನ್ನಡಿಗ ಜನರನ್ನು ಸ್ನೇಹಮಯಿಗಳೆಂದು ವರ್ಣಿಸಿದ ಪರಿಯನ್ನು  ಕಾದಂಬರಿಯಲ್ಲಿ ಓದಿಯೇ ಅನುಭವಿಸಬೇಕು. ಇವು ಲೇಖಕರಿಗೆ ಅವರ ಪೂರ್ವಜರು ಹೇಳಿದ್ದ ಮಾತುಗಳಿರಬಹುದು ಅಥವಾ ಕನ್ನಡವನ್ನು ಕುರಿತಾದ ಲೇಖಕರ ಗಾಢಪ್ರೇಮವೇ ಇರಬಹುದು. ಈ ಕಾದಂಬರಿಯನ್ನು ಬರೆಯುವಲ್ಲಿ ಲೇಖಕರ ತೋರಿರುವ ಶ್ರದ್ಧೆಯನ್ನು ಓದುಗರಿಗೆ ಮನಗಾಣಲು ಆ ಒಂದು ಪುಟವೇ ಸಾಕು.

ಸಾರಸ್ವತ ಬ್ರಾಹ್ಮಣರನ್ನೂ ಒಳಗೊಂಡು ಗೋವೆಯ ಹಿಂದೂ ಸಮುದಾಯ ಬಹುವಾಗಿ ವಿಶ್ವಾಸವಿಟ್ಟಿದ್ದ ನಾಗ್ಡೋ  ಬೇತಾಳ ಎಂಬ ನಗ್ನ ಸಾಧುವಿನ ಪಾತ್ರ ಈ ಕಾದಂಬರಿಯ ನೈತಿಕ ಪ್ರಜ್ಞೆಯ ತಿರುಳುದಿಂಡು. ಭರವಸೆ, ಆತ್ಮಸ್ಥೈರ್ಯ, ಸಲಹೆ ನಿರ್ದೇಶನಗಳನ್ನು ನೀಡುತ್ತಾ, ಧರ್ಮವನ್ನು ಬಿಡದೇ ಧರ್ಮವನ್ನು ರರ್ಕ್ಷಿಸಿ ಆ ಮೂಲಕ ತಮ್ಮನ್ನು ರಕ್ಷಿಸಿಕೊಳ್ಳುವಂತೆ  ಅವನು ಕರೆ ನೀಡುತ್ತಾ, ಭವಿಷ್ಯದ ಬದಲಾವಣೆಗಳನ್ನು ಮನಗಾಣಿಸುತ್ತಾ,ಅವಶ್ಯಕತೆ ಇರುವಲ್ಲಿ ಬಂದು ದುಡಿಯುತ್ತಾ ,ಓದುಗರ ಮನದಲ್ಲಿ ಭದ್ರ ಸ್ಥಾನ ಗಳಿಸಿಕೊಳ್ಳುವ ಈ ಪಾತ್ರವನ್ನು ಲೇಖಕರು ಬೆಳೆಸಿರುವ ಪರಿ ಅನನ್ಯವಾಗಿದೆ.(ಧರ್ಮ ಎಂದರೆ ಬರೀ ಪೂಜೆ ಪುನಸ್ಕಾರಗಳಿಗೆ ಸಂಬಂಧಿಸಿದ ಅಚಾರವಾಗಿರದೇ ಜೀವನ ಮೌಲ್ಯಗಳ ಸಮಷ್ಟಿ ಪ್ರಜ್ಞೆ.)

ನಾಗ್ಡೋ  ಬೇತಾಳನೆಂಬ ತಿರುಳು ದಿಂಡಿನ ಸುತ್ತ ಉಳಿದ ಪಾತ್ರಗಳು, ಕಥೆ ಉಪ ಕಥೆಗಳು ಸಿಹಿ ಕಹಿ ಹುಳಿ ಉಪ್ಪು ಖಾರಗಳಿರುವ ಪದರುಗಳಾಗಿ ನಮ್ಮ ಅನುಭವಕ್ಕೆ ಬರುತ್ತವೆ.

ಓದಿದ ಮೇಲೂ ಚಿಂತನೆಗೆ ಹಚ್ಚುವ, ಗುಂಗಿನಿಂದ ಸುಳಿಯಲ್ಲಿ ಸಿಕ್ಕಿಸುವ ,ಮನುಷ್ಯನಾಗಿ ಓದುಗನನ್ನು ಒಂದು ಹಂತ ಮೆಲಕ್ಕೇರಿಸುವ ಅತ್ಯಪೂರ್ವವಾದ ಈ ಕೃತಿ ಇದುವರೆಗೆ ನಾನು ಓದಿರುವ ಕಾದಂಬರಿಗಳಲ್ಲಿ “ಪರ್ವ”ವನ್ನು ಹೊರತುಪಡಿಸಿ  ಉತ್ಕೃಷ್ಟವಾದದ್ದು. ನೀವೂ ಓದಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ