ಎಚೆಸ್ವಿ ಅವರ ಷೆಫೀಲ್ಡ್ ಕವಿತೆಗಳ ಬಗ್ಗೆ ಷೆಫೀಲ್ಡ್ ನಿವಾಸಿ ಡಾ. ಜಿ.ಎಸ್.ಶಿವಪ್ರಸಾದ್ ಅವರ ಅನಿಸಿಕೆಗಳು

‘ಮಾಮರವೆಲ್ಲೋ ಕೋಗಿಲೆಯೆಲ್ಲೋ ಏನೀ ಸ್ನೇಹ ಸಂಬಂಧ’ ಎನ್ನುವ ಚಿ.ಉದಯಶಂಕರ್ ಅವರ ಸಾಲುಗಳು ನೆನಪಿಗೆ ಬಂದವು.
ಕರುನಾಡ ಕವಿ ಕೋಗಿಲೆಯೊಂದು ಇಂಗ್ಲಂಡಿನಲ್ಲಿ ವಿಹರಿಸಿ, ವಿಹಂಗಮ ನೋಟಗಳನ್ನು, ಸಂಸ್ಕೃತಿಗಳ ಚಿಗುರನ್ನು ಸವಿದು ಮತ್ತೆ ತನ್ನ ನಾಡಿಗೆ ಹೋಗಿ ಮೆಲುಕು ಹಾಕಿ ಈ ವರೆಗೆ ಸವಿದ ಚಿಗುರಿನಿಂದ ಪಂಚಮದ ಸ್ವರದಲ್ಲಿ ಹಾಡಿದಂತೆ ಭಾಸವಾಯಿತು ಷೆಫಿಲ್ಡ್ ಕವಿತೆಗಳನ್ನು ಓದಿ.
ಅಷ್ಟೇ ಅರ್ಥಪೂರ್ಣವಾದ ವಿಮರ್ಶೆ ಡಾ.ಶಿವಪ್ರಸಾದ್ ಅವರದ್ದು, ಸಾಲದಕ್ಕೆ ಇದು ನಮ್ಮ ತೋಟದ ಚಿರ ಪರಿಚಿತ ಕೋಗಿಲೆ ಎನ್ನುವ ಭಾವವೂ ಇದೆ.ನೀವೂ ಓದಿ ಆಸ್ವಾದಿಸಿ. (ಸಂ)

sheffield-kavithegalu.jpg

ಎಚೆಸ್ವಿ ಅವರು ೨೦೧೪ರಲ್ಲಿ ಯು.ಕೆ ಕನ್ನಡ ಬಳಗದ ದೀಪಾವಳಿ ಸಮಾರಂಭಕ್ಕೆ ಆಹ್ವಾನಿತರಾಗಿ ಸುಗಮಸಂಗೀತದ ಕಲಾವಿದರೊಡನೆ ಆಗಮಿಸಿ ಷೆಫೀಲ್ಡ್ ನಗರದಲ್ಲಿ ನಮ್ಮೊಡನಿದ್ದು ನಾವೆಲ್ಲಾ ಕೆಲವು ಸ್ಮರಣೀಯ ದಿನಗಳನ್ನು ಕಳೆದವು. ಪ್ರವಾಸ ಮುಗಿಸಿದನಂತರ ಅವರಿಂದ ಒಂದು ಪ್ರವಾಸ ಕಥನವನ್ನು ನಿರೀಕ್ಷಿಸಿದ್ದ  ನಮಗೆ ಒಂದು ವಿಸ್ಮಯ ಕಾದಿತ್ತು. ಅವರ  ಪ್ರವಾಸದ  ಅನುಭವಗಳು ಒಂದು ೧೨ ಸಾಲಿನ ( ದ್ವಾದಶಪದಿ ) ನೀಳ್ಗವನ, ‘ಷೆಫೀಲ್ಡ್  ಕವಿತೆಗಳು’  ಎಂಬ ಸ್ವರೂಪವನ್ನು ತಳೆಯಿತು!   ಈ ಕವನ ಸಂಕಲನದಲ್ಲಿ ಷೆಫೀಲ್ಡ್ ಕವಿತೆಯಲ್ಲದೆ ಚತುರ್ದಶಿ ಎಂಬ ೧೪ ಸಾಲಿನ ಇನ್ನೊಂದು ನೀಳ್ಗವಿತೆ ಸೇರಿ ಇತರ ಬಿಡಿ ಕವನಗಳೂ ಇವೆ. ನಾನು ಷೇಫೀಲ್ಡ್ ಕವಿತೆಯ ಬಗ್ಗೆ ನನ್ನ ಕೆಲವು ಅನಿಸಿಕೆಗಳನ್ನು ತಿಳಿಸಿ ಈ ಸಂಕಲನದ ಉಳಿದ ಕವಿತೆಗಳನ್ನು ಕೈಬಿಟ್ಟಿದ್ದೇನೆ. ಎಚೆಸ್ವಿ ಅವರೊಡನೆ ಹಲವಾರು ದಶಕಗಳ ಪರಿಚಯ, ಆತ್ಮೀಯತೆ, ಹಾಗೂ ನನ್ನ ೨೦ ವರ್ಷಗಳ ಇಂಗ್ಲೆಂಡಿನ ವಾಸ ಈ ಕಾರಣಗಳಿಂದ ಷೆಫೀಲ್ಡ್ ಕವಿತೆಯ ಬಗ್ಗೆ ವಿಶ್ಲೇಷಣೆ ಮಾಡಲು ನಾನು ಅನುಕೂಲಕರ  ಸ್ಥಾನದಲ್ಲಿ ಇರುವೆನೆಂದು ಭಾವಿಸಿದ್ದೇನೆ.  ಪ್ರವಾಸದ ಅನುಭವಗಳನ್ನು ಒಂದು ಕವಿತೆ ರೂಪದಲ್ಲಿ ಬರೆಯುವುದು ಸುಲಭದ ಕೆಲಸವಲ್ಲ. ಹಾಗೆಯೇ ಅದನ್ನು ೧೨ ಸಾಲಿನ ೩೭ ಪಂಕ್ತಿಗಳಲ್ಲಿ ಮೂಡಿಸಿರುವುದು ಇನ್ನೂ ವಿಶೇಷ. ಇದು ಒಂದು ನೂತನ ಪ್ರಯೋಗ. ‘ನಿಬಂಧನೆ ಕವಿಗೆ ಮಾತ್ರ, ಕವಿತೆಗಿಲ್ಲ, ಗಿಡದ ಹಂಗಿರದೆ ಅರಳುವ ಹೊವಲ್ಲವಾ ಅದು’ ಎಂದು ಹೇಳುತ್ತಾ ದ್ವಾದಶಪದಿ, ಚತುರ್ದಶಿ ನೀಳ್ಗವನ ಹೀಗೆ ಕಾವ್ಯಕ್ಕೆ ಅನೇಕ ಸ್ವರೂಪಗಳನ್ನು ಕೊಡುತ್ತ ಬಂದಿದ್ದಾರೆ ಎಚೆಸ್ವಿ. ಪಾಶ್ಚಿಮಾತ್ಯ ಸಾಂಪ್ರದಾಯಿಕ ಸಾಹಿತ್ಯದಲ್ಲಿ  ೧೪ ಸಾಲಿನ ಚತುರ್ದಶಿ ಕವನಗಳನ್ನು  ಸಾನೆಟ್ಟ್ ಎಂಬ ಹೆಸರಿನಿಂದ ಗುರುತಿಸಬಹುದಾದರೂ ದ್ವಾದಶಪದಿ ಕವನಗಳಿಗೆ ನಿರ್ಧಿಷ್ಟ ಹೆಸರಿಲ್ಲ. ಹೀಗಾಗಿ ಈ ಶೈಲಿ ಎಚೆಸ್ವಿ ಅವರ ಸ್ವಂತಿಕೆ ಎನ್ನಬಹುದು. ಈ ಬರಹದಲ್ಲಿ ಕಾರಣಾಂತರದಿಂದ ಆ ದ್ವಾದಶಪದಿ ಸ್ವರೂಪವನ್ನು ಕೊಟ್ಟಿಲ್ಲವೆಂಬುದನ್ನು ಓದುಗರು ಗಮನಿಸಬಹುದು.

ಪ್ರವಾಸಪ್ರಿಯರಿಗೆ ಅಪರೂಪದ  ಸ್ಥಳಗಳನ್ನು ವೀಕ್ಷಿಸುವುದುರಲ್ಲಿ ಒಂದು ಸಂತಸ ಸಂಭ್ರಮ, ಕೆಲವರಿಗದು ನನಸಾದ ಕನಸು. ಇಂಗ್ಲೆಂಡ್ ಪ್ರವಾಸ ಎಚೆಸ್ವಿ ಅವರಪಾಲಿಗೆ ಬರಿ ಕನಸಲ್ಲ ಅದು ಕನ್ನಡದ ಕನಸು!  ಎಚೆಸ್ವಿ ಅವರು ಇಂಗ್ಲೆಂಡಿಗೆ ಇತರರಂತೆ ಬರಿ ಪ್ರವಾಸ ಮಾಡುವ ಉದ್ದೇಶದಿಂದ ಬಂದವರಲ್ಲ, ಅವರು ಬಂದದ್ದು ಕನ್ನಡ ಸಾಹಿತ್ಯದ  ರಾಯಭಾರಿಯಾಗಿ  ಕನ್ನಡ ಭಾಷೆಗಾಗಿ ಮತ್ತು ಭಾಷೆಯೊಳಗೆ ಮಿಡಿಯುವ  ಅಂತಃಕರಣಕ್ಕಾಗಿ. ಇದನ್ನು ಕವಿತೆಯ ಪ್ರಾರಂಭದಲ್ಲಿ ಕಾಣಬಹುದು

‘ಈ ಕನಸು ನನಗಿಂತ ಮೊದಲೇ ಇಲ್ಲಿಗೆ ಬಂದಿತ್ತೆ?, ಇಲ್ಲೇ ಇತ್ತೆ ನನ್ನನೇ ಕಾಯುತ್ತಾ ?

ಕನ್ನಡ ಭಾಷೆ ಕಂಡ ಅತ್ಯಾಪ್ತ ಕನಸೇ ಇದು ? ಭಾಷೆಯೊಳಗೇ ಮಿಡಿಯುತ್ತಿತ್ತೇ ಅಂತಃಕರಣ?

ಅಂಥ ಅಂತಃಕರಣಕ್ಕೊಂದು ಪುಷ್ಪ ಪಾತ್ರೆಯೇ ಈ ನನ್ನ ಕವನ?’

ಹೊರದೇಶದಲ್ಲಿ ಪ್ರವಾಸ ಮಾಡುವಾಗ ಅಲ್ಲಿ ಕಾಣುವ ನಗರ, ಊರು, ಬೆಟ್ಟ,ನದಿ, ಕಣಿವೆ, ಇವೆಲ್ಲವೂ ಚಿರಪರಿಚಿತವಾಗಿ ಕಾಣಬಹುದು. ನಮ್ಮ ತಾಯ್ನಾಡ  ನೆಲ ಜಲ ಇವುಗಳನ್ನು ನೆನಪಿಗೆ ತಂದು ಮನಸ್ಸಿನಲ್ಲಿ ಅಲ್ಲಿ-ಇಲ್ಲಿಗಳ ಹೋಲಿಕೆ ಮೊದಲುಗೊಳ್ಳುವುದು ಸಹಜ. ಈ ಎರಡೂ ದೃಶ್ಯಾವಳಿಗಳು ಭೌಗೋಳಿಕವಾಗಿ ಸಾವಿರಾರು ಮೈಲಿ ಅಂತರದಲ್ಲಿದ್ದರೂ   ಭಾಷೆ, ವರ್ಣ, ಸಂಸ್ಕೃತಿ ಇವುಗಳ ಗಡಿಯಿಂದಾಚೆ ಎಲ್ಲವು ಒಂದೇ! ಮಾನವ ನಿರ್ಮಿಸಿದ ರೇಖೆ ಬೇಲಿಗಳು ನಮ್ಮನ್ನು ವಿಭಜಿಸಲು ಸಾಧ್ಯವೇ ಹೊರತು ನಮ್ಮ ಮನಸ್ಸಿನಲ್ಲಿರುವ ಕಲ್ಪನೆಗಳಿಗೆ ಎಲ್ಲೆ, ಮಿತಿ ಇರುವುದಿಲ್ಲ. ಎಚೆಸ್ವಿ ಹೇಳುವಂತೆ

‘ಗಡಿ ಗುರುತು ದೇಶಕ್ಕೆ ಮಾತ್ರ, ಹರಿಯುವ ನದಿಗಲ್ಲ, ಬೀಸುವ ಗಾಳಿಗಲ್ಲ

ಇದ್ದೂ ಇರದ ಆಕಾಶಕ್ಕಲ್ಲ, ಅಲ್ಲಿ ಹಾಯುವ ಕಿರಣಕ್ಕಲ್ಲ

ಷೆಫೀಲ್ಡ್ ನ್ನು ಕಲ್ಮರಡಿ ಎಂದರೆ ಏನಾಗತ್ತೆ? ಷೆಫ್ ನದಿಯನ್ನು ಷಿಂಷಾ ಎಂದರೆ?

ಚೆಸ್ಟರ್ಫೀಲ್ಡ್  ಹಿಲ್ಲನ್ನು ರಾಮಗಿರಿ ಎಂದರೆ?’

ನವೆಂಬರ್ ತಿಂಗಳು ಪಾಶ್ಚಿಮಾತ್ಯ ಉತ್ತರವಲಯಗಳಲ್ಲಿ ಫಾಲ್ ಅಥವಾ ಆಟಮ್  ಎಂದು ಕರೆಯಬಹುದಾದ ಶರತ್ಕಾಲದ ಋತು. ಚೈತ್ರದ ಚಿಗುರು ವಿಜೃಂಭಿಸಿ, ವಸಂತ ಕಳೆದು ಎಲೆಗಳು ಹಣ್ಣಾಗಿ ಕೆಂಪು ಹಳದಿ ಬಣ್ಣಕ್ಕೆ ತಿರುಗಿ ನಿಧಾನಕ್ಕೆ ಒಂದೊಂದೇ  ತರಗೆಲೆಗಳು ಉದುರುವ ಸಮಯ. ಈ ಶರತ್ಕಾಲದ ಸೌಂದರ್ಯ ಮತ್ತು  ಅದಕ್ಕೆ ಸಂಬಂಧಿಸಿದ ಚಿಂತನೆಗಳು ಸೊಗಸಾಗಿವೆ.  ಹಾಗೆ ನಿಸರ್ಗದ ಸೃಷ್ಟಿ ಮತ್ತು ಲಯಗಳಲ್ಲಿ ಇರುವ ಸೊಬಗು ಮನುಷ್ಯನ ದೇಹದ ಅಂತ್ಯದಲ್ಲಿ ಏಕಿಲ್ಲ ? ಅಥವಾ ಮುಪ್ಪಿನಲ್ಲೂ ಚೆಲುವು ಅಡಗಿರಬಹುದೇ ಎಂಬ ಪ್ರಶ್ನೆಗಳು ಮೂಡುತ್ತವೆ.

autumn-colorful-colourful-33109.jpg

‘ ಕಳಚಿ ಬೀಳುವ ಎಲೆಗೆ ಇಷ್ಟೊಂದು ಸೊಬಗೆ?

ಯಾವುದೇ ಮರ ನೋಡಿ, ಹಸಿರು ಹಳದಿ ಕೆಂಪಿನ ಲಕ ಲಕ

ಅದರಲ್ಲೂ ಆ ಕೆಂಪೆಲೆಯ ಸೊಬಗೇ ಸೊಬಗು ,

ಇಡೀ ಮರಕ್ಕೆ ಮರವೇ ಬೋಳಾಗುವ ವಿರಕ್ತಿಗೆ ಮುನ್ನ ಅದೆಂಥಾ ಪರಮಾಕರ್ಷಕ ರಕ್ತಿ

ಮುಳುಗುವ ಮುನ್ನ ಬಣ್ಣಗೊಳ್ಳುವ ಸೂರ್ಯ, ಹುಟ್ಟಿನಷ್ಟೇ ಚೆಲುವು ಈ ಕೊನೆಗೊಳ್ಳುವ ಕೊನರು’

 

ಎಚೆಸ್ವಿ ಮತ್ತು ಇತರ ಅತಿಥಿಗಳನ್ನು ನಾನು ಒಂದು ದಿನ ಷೆಫೀಲ್ಡ್ ನಗರ ಮಧ್ಯ ಪ್ರಮುಖ ಚೌಕವೊಂದಕ್ಕೆ ಕರೆದುಕೊಂಡು ಹೋಗಿದ್ದ ನೆನಪು ನನಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ವೃದ್ಧರನ್ನು ಕಾಡುವುದು ಒಂಟಿತನ. ಅದನ್ನು ಕಳೆಯಲು ವೃದ್ಧರು ಇಲ್ಲಿಯ ಹಸಿರಿನ ಮೇಲೆ ಬೌಲಿಂಗ್ ಎಂಬ ಆಟವಾಡುವುದು, ಕ್ಲಬ್ ಗಳಲ್ಲಿ ಬ್ರಿಡ್ಜ್ ಎಂಬ ಇಸ್ಪೀಟ್ ಆಡುವುದು ಅಥವಾ ನಗರದ ಚೌಕಗಳ ರೆಸ್ಟೋರೆಂಟ್ಗಳ ಒಳಗೆ – ಹೊರಗೆ ಕುಳಿತು ಪೇಪರ್ ಓದುತ್ತ ಅಥವಾ ಕಾಫಿ ಹೀರುತ್ತಾ ‘ಜಂಗಮ ಜಗತ್ತನ್ನು’ ವೀಕ್ಷಿಸುವುದು ಸಾಮಾನ್ಯ. ಇಂತಹ ಒಂದು ಸನ್ನಿವೇಶವನ್ನು ಎಚೆಸ್ವಿ ಅವರು ಬಹಳ ಕೂಲಂಕುಷವಾಗಿ ಗಮನಿಸಿರುವುದನ್ನು ಕಾಣಬಹುದು. ಹಾಗೆ ಹಿರಿಯರಲ್ಲಿ ‘ಜೀವ ವೃಕ್ಷದಿಂದ ಕಳಚಿಕೊಳ್ಳುವ ನಿರ್ಲಿಪ್ತತೆಯನ್ನು’ ಅವರು ಗಮನಿಸಿದ್ದಾರೆ. ಎಚೆಸ್ವಿ ಅವರು ಇಲ್ಲಿಯ ಪ್ರಕೃತಿಯಲ್ಲಿ ಕಂಡ ಶರತ್ಕಾಲದ ‘ಚಿಗುರುಗೆಂಪಿನ ಸಂಧ್ಯಾರಾಗ’ವನ್ನು ಇಲ್ಲಿಯ ಹಿರಿಯ ನಾಗರೀಕರಲ್ಲಿ ಕಂಡಿದ್ದು ವಿಶೇಷ. ಅದು ಹೀಗಿದೆ;

‘ಷೆಫೀಲ್ಡ್ ಸ್ಕ್ವೇರಲ್ಲಿ ಹೊಳೆ ಹೊಳೆವ ಬೆಳಕಲ್ಲಿ

ಹಣ್ಣು ಹಣ್ಣು ಮುದುಕರ ನಿಶಬ್ದ ಧ್ಯಾನದ ಮಧ್ಯಾಹ್ನ

ಕಾಫಿ ಹೀರುವ ಪೇಪರೋದುವ ತಗ್ಗಿದ ವಿರಳಗೂದಲ ಶಿರ

ಯಾರು ಯಾರೊಂದಿಗೂ ಮಾತನಾಡದೆ ಜಂಗಮ ಜಗತ್ತಿನತ್ತ

ಸುಮ್ಮನೆ ಕಣ್ಣಾಡಿಸುತ್ತಾ ಜೀವ ವೃಕ್ಷದಿಂದ ಕಳಚಿಕೊಳ್ಳುವ

ನಿರ್ಲಿಪ್ತ ಕ್ಷಣಕ್ಕೆ ಕಾಯುತ್ತಿರುವಂತಿರುವ ಮಂದಿಯ

ಥಳ ಗುಡುವ ಚಿಗುರುಗೆಂಪಿನ ಸಂಧ್ಯಾರಾಗ’

 

ಷೆಫೀಲ್ಡ್ ನಗರಮಧ್ಯ ಚೌಕದಲ್ಲಿ ಮಳೆ ಇಲ್ಲದ ದಿನ ಅಡ್ಡಾಡುವುದೇ ಒಂದು ಉಲ್ಲಾಸಕರ ಅನುಭವ.  ಅಲ್ಲಿ ಹೆಮ್ಮೆಯಿಂದ ನಿಂತಿರುವ ಪುರಸಭಾ ಭವನ, ಅದರಪಕ್ಕಕ್ಕೆ ಹಲವಾರು ಕಾರಂಜಿಗಳು, ಹಸುರಿನ ಹಾಸು, ಕಾಳು ಹೆಕ್ಕುವ ಪಾರಿವಾಳಗಳು ಕಟ್ಟುಮಸ್ತಾದ ಹುಡುಗಿಯರು, ಜೊಲ್ಮೊಲೆಯ ಗುಜ್ಜುಮೈ ಹೆಂಗಸು, ಅವಳು ಧರಿಸಿದ ಅಸಮಂಜಸ ಉಡುಪು, ಮೊಮ್ಮಗಳ ಉಡುಪನ್ನು ಕಣ್ತಪ್ಪಿ ಧರಿಸಿದ ಇನ್ನೊಬ್ಬಳು, ತುಟಿಗೆ ರಬಡ್ದಾಗಿ ಬಡಿದ ರಂಗು ಇವುಗಳನ್ನು ನೋಡಿ ಎಚೆಸ್ವಿ ‘ಅವ್ವಾ’ ಎಂದು ಆಶರ್ಯ ಪಟ್ಟಿರುವುದು ಈ ಕವಿತೆಗಳಲ್ಲಿ ಒಂದು ತಿಳಿ ಹಾಸ್ಯದ ಎಳೆಯನ್ನು ತಂದಿಟ್ಟಿದೆ. ಕೆಲವು ಹಿರಿಯ ಸುಂದರಿಯರನ್ನು ಗಮನಿಸಿ  ‘ಹಳೆಯೇಜ ಮುಚ್ಚಿಡುವ ಇವತ್ತಿನ ಹೊಸ ಪ್ಯಾಕೇಜ್’  ಎಂದು ಹೇಳುತ್ತಾ ಎಚೆಸ್ವಿ ಅವರು ಏಜಿಂಗ್ ಎಂಬ ನೈಸರ್ಗಿಕ ಅನಿವಾರ್ಯ ಒತ್ತಡದ ಜೊತೆ ಸೆಣೆಸುತ್ತಾ ಬದುಕುವವರ ಬಗ್ಗೆ ವ್ಯಥೆ ಹಾಗು ಕನಿಕರದ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗೆಯೇ ಆ ಅಸ್ತಿಪಂಜರಗಳಲ್ಲಿ ಹುದುಗಿರುವ ‘ಎಳೆಗಾಲದ ಹಕ್ಕಿಮರಿ ಚೇತನವನ್ನು’ ಪ್ರಶಂಸಿಸಿದ್ದಾರೆ.

‘ಅಲ್ಲಲ್ಲ್ಲಿ ಕಾಳು ಹೆಕ್ಕುವ ಪಾರಿವಾಳ ಅವುಗಳ ಫಡ ಫಡ ಸದ್ದು

ಹದಿಹರೆಯದ ಕಟ್ಟುಮಸ್ತು ನೀಲಾಂಜನೇಯ ಕಾಲ್ಕುಣಿಸುವ ಗಿಟಾರಿನ ಪರಮಪದ!

ಬಿಗಿಯಾದ ಒತ್ತುಡುಪು, ಒಂದು ಭುಜದಿಂದ ನಿರುದ್ದಿಶ್ಯ ಜಾರಿದ ಜಾಕೆಟ್ಟು

ಗುಜ್ಜುಮೈ ಒಬ್ಬಾಕೆಗೆ, ಆದರೆ ಉಡುಪು ಮಾತ್ರ  ಅವ್ವಾ! ನವೋನ್ನವ.

ಮೊಮ್ಮಗಳ ಉಡುಪ ಕಣ್ತಪ್ಪಿ ಧರಿಸಿದಂಥ ಇನ್ನೊಬ್ಬಾಕೆಯನ್ನು ನೋಡುವಾಗ ಚುರುಕ್ಕೆನ್ನುವ ಕರುಳು.

ನಿತ್ತಿಯ ವಿರಳಗೂದಲಿಗೆ  ಹಚ್ಚಿದ ತಳಿರ ಬಣ್ಣ, ಜೊಲ್ಮೊಲೆಯ ಮೇಲೆ ಹಾಲ್ಮಣಿ ಸರ

ಹಳೆಯೇಜ ಮುಚ್ಚಿಡುವ ಇವತ್ತಿನ ಹೊಸ ಪ್ಯಾಕೇಜ್

ಈಕೆ ಹೊಚ್ಚ ಹೊಸ ಫ್ರೆಮಿನ ನಡುವೆ ಮಾಸಿದ ಶೈಶವ’

ಲಂಡನ್ ನಗರಕ್ಕೆ ಇರುಳಲ್ಲಿ ತನ್ನದೇ ಆದ ತಳುಕು ರಂಗಿನ ಸೊಬಗಿದೆ. ಎಚೆಸ್ವಿ ಅವರು ತಮ್ಮ ಗೆಳೆಯರೊಡನೆ ತಾವು ಇರುಳು ಕಂಡ ಲಂಡನ್ ಬಗ್ಗೆ ವಿಸ್ಮಯಗೊಂಡು ಬ್ರಿಟಿಷ್ ಸಾಮ್ರಾಜ್ಯ ಕದ್ದುತಂದ ಸಂಪತ್ತಿನ ಬಹಿರಂಗ ಪ್ರದರ್ಶನವೆಂದು ಟೀಕಿಸುತ್ತಾರೆ. ಲಂಡನ್ನಿನ ಟ್ಯೂಬ್ ( ಮೆಟ್ರೋ) ಎಂಬ ಪಾತಾಳದಿಂದ ( London Underground) ಉದ್ದನೆಯ ಕೋಟ್ ಧರಿಸಿ ಮೇಲೇರಿ ಬರುವ ಮುಕ್ತ ಪ್ರೇಮಿಗಳನ್ನು ಕುತೂಹಲದಿಂದ ಗಮನಿಸಿದ್ದಾರೆ. ಲಂಡನ್ ಬ್ರಿಡ್ಜ್  ಪಕ್ಕದಲ್ಲಿರುವ ಲಂಡನ್ ಕಣ್ಣಿಂದ (London Eye)  ‘ಕನಸುಗಳು ಮೇಕಪ್ ಸಮೇತ ಬೀದಿಗಿಳಿದಂತೆ’ ಅವರಿಗೆ ಭಾಸವಾಗಿ ಹಾಗೆ ಷೇಕ್ಸ್ ಪಿಯರ್ ನಾಟಕದ ತುಣುಕುಗಳನ್ನು ನೋಡಿದ ಅನುಭವವಾಗುತ್ತದೆ. ಇರುಳು ಕಳೆದ ಬಳಿಕ ಇದೇ ಮಂದಿ ‘ಮೇಕಪ್ ರಹಿತ ಕಾಲಾವಿದರು  ನಾಳೆ ಮತ್ತಿದೇ ರಾಣಿ ರಸ್ತೆಯಲ್ಲಿ  ನೆಲಕ್ಕೆ ಕಾಲು ಹಚ್ಚಿ ನಡೆದಾಡುವುದನಿವಾರ್ಯ’ ಎಂಬ ಕಟು ಸತ್ಯವನ್ನು ನೆನೆಯುತ್ತಾರೆ.

‘ಇರುಳು ಲಂಡನ್ನಿಗೆಂಥ ಮರುಳೋ!

ಕದ್ದು ತಂದು ಅಡಗಿಸಿದ್ದ ಸಂಪತ್ತೆಲ್ಲ ಕಾಲಗರ್ಭದಿಂದ ಒಮ್ಮೆಗೆ ಹೊರಕ್ಕೆ ಬಂದಂತೆ

ಲಂಡನ್ ಬ್ರಿಜ್ಜಿನ ಕಣ್ಣಿಂದ ಕನಸುಗಳು ಮೇಕಪ್ ಸಮೇತ ಅಡ್ಡಾಡಲಿಕ್ಕೆಂದು ಬೀದಿಗಿಳಿದಂತೆ

ಪಾತಾಳ ತಳದಿಂದ ದುಮು ದುಮು ಮೇಲೆದ್ದು ಬರುತ್ತಲೇ ಇವೆ,

ಲಾಂಗ್ ಕೋಟಿನ   ರೆಕ್ಕೆಯಾಡಿಸುವ  ಪ್ರಣಯ ಮಿಥುನ

ಮೇಕಪ್ ರಹಿತ ಕಲಾವಿದರು ನಾಳೆ ಬೆಳಗ್ಗೆ ಮತ್ತಿದೇ ರಾಣಿ ರಸ್ತೆಯಲ್ಲಿ

ನೆಲಕ್ಕೆ ಕಾಲು ಹಚ್ಚಿ ನಡೆದಾಡುವುದನಿವಾರ್ಯ’

 

ಬೆಂಗಳೂರಿನ ಮುಂಜಾನೆಗೂ ಷೆಫೀಲ್ಡ್ ಮುಂಜಾನೆಗೂ ಅಜಗಜಾಂತರ ವ್ಯತ್ಯಾಸ. ಅಲ್ಲಿ ಪೇಪರ್, ತರಕಾರಿ ಮತ್ತು ಹಾಲಿನ ಪ್ಯಾಕೆಟ್ ಒದಗಿಸುವರ ಹಾವಳಿ ಗಜಿ ಬಿಜಿ. ಇಲ್ಲಿ  ಶ್ಮಶಾನ ಮೌನ. ಅಲ್ಲಿ ಕಸಗುಡಿಸುವವರ ಕರ ಕರ ಶಬ್ದ, ಇಲ್ಲಿ ನಿಶಬ್ದ. ಅಲ್ಲಿ ಚೇತನ, ಇಲ್ಲಿ ಜಡತೆ. ವಾರಾಂತ್ಯವಾದರೆ ಬೆಳಗ್ಗೆ ಬೆಚ್ಚಗೆ ಮಲಗುವ ಜನ. ಹೊರಗೆ ಸಣ್ಣಗೆ ಜಿನುಗವ ಮಳೆ, ಛಳಿ. ಕರ್ನಾಟಕದಿಂದ ಬಂದವರಿಗೆ ಇಲ್ಲಿಯ ಮುಂಜಾನೆಯ ಮೌನದಲ್ಲಿ  ಏನನ್ನೋ ಕಳೆದುಕೊಂಡ ಅನುಭವ. ಕೆಲವರಿಗೆ ಈ ಪ್ರಶಾಂತತೆ ಧ್ಯಾನಮಗ್ನರಾಗುವಂತೆ ಪ್ರಚೋದಿಸಬಹುದು. ಈ ಒಂದು ಷೆಫೀಲ್ಡ್ ಮುಂಜಾನೆ ಚಿತ್ರವನ್ನು ಕೆಳಗಿನ ಸಾಲುಗಳಲ್ಲಿ ಕಾಣಬಹುದು.

‘ಇಲ್ಲಿ ಬೆಳಗ್ಗೆ ಯಾರ ಮನೆಗೂ ಪೇಪರ್ ಬರುವುದಿಲ್ಲ,

ಗೇಟಿನಮೇಲೆ ಹಾಲಿನ ಪ್ಯಾಕೆಟ್ ಇಡುವವರಿಲ್ಲ.

ಇಲ್ಲವೇ ಇಲ್ಲ ತಳ್ಳುಗಾಡಿಯ ತರಕಾರಿಯವನ ತರಾವರಿ ಕೂಗು,

ಇರು ಇರು ಎನ್ನುವ ಸಾಂತ್ವನದಭಯ

ಕೆದರು ತಲೆ ಪೊರಕೆಯ ಕರ ಕರವಿಲ್ಲ.

ಫಾಲಿನ ಎಲೆ ತಮ್ಮ ತಮ್ಮಲ್ಲೇ ಕಲಸಿಕೊಳ್ಳುತ್ತಾ

ಬೆಕ್ಕಿನ ಮರಿಗಳಂತೆ ಚಿನ್ನಾಟವಾಡುವುದಷ್ಟೆ ಕಾಣುತ್ತೆ’

 

ಪ್ರವಾಸ ಮುಗಿಸಿಕೊಂಡು ಬಂದಾಗ ನಮ್ಮ ಗೆಳೆಯರು, ಮನೆಯವರು ನಮ್ಮ ಅನುಭವಗಳ ನಿರೀಕ್ಷೆಯಲ್ಲಿ ವಿಚಾರಿಸಿಕೊಳ್ಳುವುದು ಸಹಜ. ನಿಮಗೆ ಅಲ್ಲಿ ಚಂದವೋ ಇಲ್ಲಿ ಚಂದವೋ ಎಂಬ ಅನಿವಾರ್ಯ ಪ್ರಶ್ನೆ ಸಾಮಾನ್ಯ. ಈ ಪ್ರಶ್ನೆಯನ್ನು ಎಚೆಸ್ವಿಯವರಿಗೆ ಅವರ ಸ್ನೇಹಿತರು ಕೇಳಿರಬಹುದು. ಅವರ ಉತ್ತರ ಹೀಗೆದೆ;

 

‘ನಮ್ಮೂರು ಚಂದವೋ ನಿಮ್ಮೂರು ಚಂದವೋ

ಎಂದು ಈವತ್ತು ಯಾರು ಯಾರನ್ನು ಕೇಳುವಂತಿಲ್ಲ

ವ್ಯತ್ಯಯ ಬಹಿರಂಗವಷ್ಟೇ

ಯಾವ ಬಾಟ್ಲಿಗೆ ಯಾವ ಬಿರಡೆಯೂ ಆದೀತು!

ಯಾವ ನೆರಳಿಗೆ ಯಾವ ಬಿಸಿಲೂ , ಯಾವ ಮೈಚಳಿಗೆ ಯಾವ ಬೆಂಕಿಯೂ

ಯಾವ ಸಂವೇದನೆಗೆ ಯಾವ ಕವಿತೆಯೂ, ಯಾವ ಕಿವಿಗೆ ಯಾವ ಗೀತೆಯೂ

ದೀಪಕ್ಕೆ ದೀಪ ಜೋಡಿಸಿ ನೋಡಿ’

ಹಾಗೆ ನೋಡಿದರೆ ಈ ಮೇಲಿನ ಪ್ರಶ್ನೆಗೆ ಸಮರ್ಪಕವಾದ ಉತ್ತರಸಿಗುವುದಿಲ್ಲ. ಹಲವು ದಶಕಗಳ ಹಿಂದೆ  ಕವಿ ಕೆ.ಎಸ. ಏನ್.   ಇದೇ ಪ್ರಶ್ನೆಯನ್ನು ಎತ್ತಿ ‘ನನ್ನರಸ ಸುಮ್ಮನಿರಿ’ ಎಂಬ ಉತ್ತರವನ್ನು ಕವಿತೆಯಲ್ಲಿ ತಮ್ಮ ಹೆಂಡತಿಯಿಂದ ಕಂಡುಕೊಂಡರು. ವ್ಯತ್ಯಾಸ ಬಹಿರಂಗವಷ್ಟೇ ಎನ್ನುವುದು ಎಷ್ಟು ಸತ್ಯ! ನಾನು ಎರಡು ದಶಕಗಳನ್ನು ಮೀರಿ ಇಂಗ್ಲೆಂಡಿನಲ್ಲಿನಲ್ಲಿ ವಾಸ ಮಾಡುತ್ತಿದ್ದರೂ ನನ್ನ ಹೃದಯ ತುಡಿಯುವುದು ಬೆಂಗಳೂರಿಗೆ. ನನ್ನ ಮಗಳ ಪಾಲಿಗೆ ಷೆಫೀಲ್ಡ್ ಬಲು ಚೆನ್ನ!

ಒಬ್ಬ ಕನ್ನಡದ ಕವಿ ಶೇಕ್ಸ ಪಿಯರ್ ಸಮಾಧಿಯ ಬಳಿ ನಿಂತು ಅವನ ‘ಅಂಗೈಚಲಕ್ಕೆ ತಲೆಬಾಗಿ’ ‘ತಾಯ ಹೊಟ್ಟೆಯಲ್ಲಿ ಮತ್ತೆ ಮೈಮರೆತು ಮಲಗಿರುವ ಮಹಾಕವಿಗೆ ನಿಶಬ್ದ ಲಾಲಿಯನ್ನು ಹಾಡಿ’ ತಮ್ಮ ಶ್ರದ್ಧಾಂಜಲಿಯನ್ನು ಅರ್ಪಿಸಿರುವುದು ಹೃದಯಸ್ಪರ್ಶಿಯಾಗಿದೆ.  ಪ್ರವಾಸಕಥನದ ಹಾದಿಯಲ್ಲಿ ಸಾಗುವ ಕವಿತೆ, ಮಧ್ಯದಲ್ಲಿ ತಟ್ಟನೆ ಒಂದು ಅನಿರೀಕ್ಷಿತ ತಿರುವನ್ನು ಪಡೆಯುತ್ತದೆ. ಇಂಗ್ಲೆಂಡಿನಲ್ಲಿ ವಿಹರಿಸುತ್ತಿದ್ದ  ಕವಿ ಕನ್ನಡದ  ಮಹೋಕ್ತಿಗಳನ್ನು  ಆವಾಹನೆ ಮಾಡಿದಂತೆ ತೋರುತ್ತದೆ. ಪದಗಳು ಕವಿಯ ಕಲ್ಪನೆಯಲ್ಲಿ ನಾಲಿಗೆಯ ಹಂಗಿರದ ದಿವ್ಯಸಖರಾಗುತ್ತವೆ,  ಪ್ರಾಚೀನ ಮರಗಳಿಂದ ಮೂಡುವ ಹೊಚ್ಚ ಹೊಸ ಹೂಗಳಾಗುತ್ತವೆ, ಕಾಲಾತೀತ ಕುಕಿಲಗಳಾಗುತ್ತವೆ.  ಹೂಂಕಾರದಿಂದ  ಅರೆಕ್ಷಣದಲ್ಲಿ  ಪರ್ವತಾರಣ್ಯಗಳ  ನಿರ್ಮಿಸುವ ಸಾಮರ್ಥ್ಯವುಳ್ಳ ಈ ಮಂತ್ರಾರ್ಥಗಳನ್ನು ಕವಿ ತಮ್ಮ ಎದೆಗೂಡಿಗೆ ಹಿಂದಿರುಗುವಂತೆ ಆವಾಹನೆ ನೀಡುತ್ತಾರೆ. ಪದಗಳ ತರಂಗ ಪಂಕ್ತಿಗಳು ಭಾಷಾಂತರಗೊಂಡು ಕಾವ್ಯ ಸ್ವರೂಪವನ್ನು ಪಡೆಯಲಿ ಎಂದು ಆಶಿಸುವ ಈ ಕವನದ ತುಣುಕು  ಬಹಳ ಉತ್ಕೃಷ್ಟ ಉಪಮೆಗಳಿಂದ ಕೂಡಿದೆ. ಈ ನೀಳ್ಗವಿತೆಯಲ್ಲಿ ಇದು ನನ್ನ ಮೆಚ್ಚಿನ ಪಂಕ್ತಿ.

ಎಚೆಸ್ವಿ ಅವರಿಗೆ ಷೆಫೀಲ್ಡ್ ಗೆ ಆಹ್ವಾನವಿತ್ತು, ಆತಿಥ್ಯವನ್ನು ನೀಡಿದ ತೃಪ್ತಿಯ ಜೊತೆಗೆ ಅವರ ಷೆಫೀಲ್ಡ್ ಕವಿತೆಯನ್ನು ಓದಿ ಅದಕ್ಕೆ ಸ್ಪಂದಿಸುವ ಅವಕಾಶವೂ ಒದಗಿಬಂದದ್ದು ನನ್ನ ಪಾಲಿಗೆ ವಿಶೇಷ ಅನುಭವ. ೩೭ ಪಂಕ್ತಿಗಳ, ದ್ವಾದಶಪದಿಯುಳ್ಳ ಈ ನೀಳ್ಗವಿತೆಯಲ್ಲಿ ಅಡಗಿರುವ ಪ್ರವಾಸದ ಅನುಭವಗಳನ್ನು ಗದ್ಯರೂಪದಲ್ಲಿರುವ ಪ್ರವಾಸಕಥನಕ್ಕೆ ಹೋಲಿಸುವುದು ಉಚಿತವಲ್ಲವಾದರೂ, ಈ ಕವಿತೆಯಲ್ಲಿ ಎಚೆಸ್ವಿಯವರ ಇಂಗ್ಲೆಂಡಿನ ಪ್ರವಾಸದನುಭವ ಓದುಗರಿಗೆ ಸಮರ್ಪಕವಾಗಿ ಲಭ್ಯವಾಗಿದೆ ಎನ್ನಬಹುದು. ಇಲ್ಲಿ ಬಹಳಷ್ಟು ಸುಂದರ ದೃಶ್ಯಾವಳಿಗಳು, ಚರಿತ್ರೆ, ಜೀವನ ಶೈಲಿ, ಅಣಕ, ತಿಳಿಹಾಸ್ಯಗಳಲ್ಲದೆ ಗಂಭೀರ ಸಾಮಾಜಿಕ ಚಿಂತನೆಗಳು ಪ್ರಸ್ತಾಪಗೊಂಡಿವೆ. ನನಗೆ ತಿಳಿದ ಮಟ್ಟಿಗೆ ಪ್ರವಾಸದ ಅನುಭವವನ್ನು ನೀಳ್ಗವನದ ರೂಪದಲ್ಲಿ  ಸೃಷ್ಟಿಸಿದ ಲೇಖಕರಲ್ಲಿ ಎಚೆಸ್ವಿ ಅವರು ಮೊದಲನೆಯವರು. ಅವರ ಈ ಅಪ್ರತಿಮ ಪ್ರಯೋಗ ಬಹಳ ಯಶಸ್ವಿಯಾಗಿದೆ ಎನ್ನುವುದು ನನ್ನ ಅಭಿಪ್ರಾಯ.

ಷೆಫೀಲ್ಡ್ ನೀಳ್ಗವನ ಯು.ಕೆ. ಗೆ ಗುಡ್ ಬೈ ಹೇಳುವುದರ ಮೂಲಕ ಕೊನೆಗೊಳ್ಳುತ್ತದೆ. ಆ ಗುಡ್ ಬೈ ಕೂಡ ಬಹಳ ಅರ್ಥಗರ್ಭಿತವಾಗಿದೆ. ಅಲ್ಲೊಂದು ಆಧ್ಯಾತ್ಮದ ಎಳೆ  ಇದೆ.

‘ಗುಡ್ ಬೈ ಯು. ಕೆ.

ಬರಿಗೈಲಿ ಬಂದವ ಹಿಂದಿರುಗುವೆ ಬರಿಗೈಲಿ

ಉಂಟು ಎದೆತುಂಬ ನೆನಹು ಕಹಿಯಿಲ್ಲ

ನೀವು ನಾವೇ, ಒಬ್ಬರಿಗಾಗಿನೊಬ್ಬರು ನೋಯುವಾಗ, ಕಾಯುವಾಗ,

ಕತ್ತಲಲ್ಲೇಕಾಂಗಿ ಬೇಯುವಾಗ, ಸಾಯುವಾಗ’

                                                                         ಡಾ. ಜಿ.ಎಸ್.ಶಿವಪ್ರಸಾದ್, ಷೆಫೀಲ್ಡ್, ಯು.ಕೆ.

 

***

 

 

 

 

 

 

 

 

 

ಕವನ ಕೇಳಿ – ‘ಅನಿವಾಸಿ’ಯ ಹೊಸ ಪ್ರಯತ್ನ + ಬೋನಸ್!

ಬ್ರಿಟ್-ಕನ್ನಡಿಗರ ಕವನಗಳು: ತುಂಗೆ-ಟೆಮ್ಸ್ ನದಿಗಳ ನಡು ಸೇತುವೆ!

ಹೊಸ ಪ್ರಯತ್ನವಿದು. ‘ಅನಿವಾಸಿ’ಯ ಈ ಜಾಲಜಗುಲಿಯಲ್ಲಿ ಹೊಸ ಪ್ರಯತ್ನ – ಕವನ ವಾಚನವನ್ನು ನೇರ ನಿಮಗೆ ತಲುಪಿಸುವುದು.

ಕಳೆದ ವಾರ ಕೆಲ ಕವನಗಳನ್ನು ಪ್ರಕಟಿಸಿದ್ದೆವು. ಆಗ ಹೇಳಿದ್ದು – “ಕನ್ನಡದಿಂದ ಇಂಗ್ಲಿಷ್ ಗೆ ಭಾವಾನುವಾದ ಮಾಡಿದರು. ಇಂಗ್ಲಿಷ್ ನಿಂದ ಕನ್ನಡಕ್ಕೆ ಧಾರೆಯಿಳಿಸಿದರು. ಜೀವ ಕೊಟ್ಟರು, ತಮ್ಮ ಖಾಸಗಿ ಅನುಭವಗಳಿಗೆ, ಕ್ಷಣಗಳಿಗೆ, ಭಾವನೆಗಳಿಗೆ. ಮೆಚ್ಚಿದರು, ಯಾವುದೋ ದೇಶ ಭಾಷೆ ಸಂಸ್ಕೃತಿಗೆ ಸೇರಿದ ಕವನವನ್ನು, ಅದಕ್ಕೂ ಕನ್ನಡದ ಕಂಪನ್ನ ಹೊದಿಸಿದರು. ಕನ್ನಡದ ಮನಸ್ಸಿನಿಂದ ಹೊಮ್ಮಿದ ಕವನಗಳು ಇಂಗ್ಲಿಷ್ ನಲ್ಲಿ, ಇಂಗ್ಲೆಂಡಿನ ನೆಲದ ಮೇಲೆ ನೆಲೆ ನಿಂತವು.”

ಮೇಲೆ ಹೇಳಿದ ಮಾತಿಗೆ ಮತ್ತಷ್ಟು ಕಳೆ ತುಂಬುವ ಪ್ರಯತ್ನವಿದು. ಇಲ್ಲಿ ಕೇಶವ ಕುಲಕರ್ಣಿ ಬಹಳ ಪ್ರೀತಿಯಿಂದ ಮಾಡಿದ ಭಾವಾನುವಾದ ಅಷ್ಟೇ ಅಲ್ಲ, ಅವರದೇ ದನಿಯಲ್ಲಿ ಕ್ಷಣಗಳು ಕವನವನ್ನು ನಾವು ಕೇಳಬಹುದು. ನವೆಂಬರ್ ೫ರಂದು ಅಷ್ಟೇ ಪ್ರೀತಿ, ಅಭಿಮಾನದಿಂದ ಅನ್ನಪೂರ್ಣ ಆನಂದ್ ಹಾಡಿದರು. ಯಾವ ಹಾಡು? ಯಾರದ್ದು? ಟಿ. ಪಿ. ಕೈಲಾಸಂ ಅವರದ್ದು! ‘ನಮ್ಮ ತಿಪ್ಪಾರಳ್ಳಿ ಬಲು ದೂರ’ ಹಾಡೂ (ಕವನ) ಇಲ್ಲಿದೆ. ಅದರ ಜೊತೆಗೆ ಕನ್ನಡದ ಇಬ್ಬರು ಮಹನೀಯರ ದನಿ ಕೇಳುವ ಬೋನಸ್!!

ಕೇಳಿ; ಕವನಗಳನ್ನು ಓದಿ. ಹಂಚಿಕೊಳ್ಳಲು ಮರೆಯದಿರಿ. – ಸಂ.

ಕೆಳಗಿನ ವಿಡಿಯೋ ಚಿತ್ರದ ಮೇಲೆ (ತ್ರಿಕೋನ ಇರುವ ಕಡೆ) ಕ್ಲಿಕ್ಕಿಸಿ. ಆಡಿಯೋ ಬರುತ್ತದೆ.

 

Instants: Jorge Luis Borges

 If I could live again my life,

In the next – I’ll try,

– to make more mistakes,

I won’t try to be so perfect,

I’ll be more relaxed,

I’ll be more full – than I am now,

 

 

In fact, I’ll take fewer things seriously,

I’ll be less hygenic,

I’ll take more trips,

I’ll watch more sunsets,

I’ll climb more mountains,

I’ll go to more places – I’ve never been,

I’ll eat more ice creams and less (lime) beans,

I’ll have more real problems – and less imaginary

Ones

 

I was one of those people who live

prudent and prolific lives –

each minute of his life,

Offcourse that I had moments of joy – but,

if I could go back I’ll try to have only good moments,

 

If you don’t know – thats what life is made of,

Don’t lose the now!

I was one of those who never goes anywhere

without a thermometer,

without a hot-water bottle,

and without an umberella and without a parachute,

If I could live again – I will travel light,

If I could live again – I’ll try to work bare feet

at the beginning of spring till

the end of autumn,

I’ll ride more carts,

I’ll watch more sunrises and play with more children

If I have the life to live

but now I am 85,

and I know that I am dying …

ಕ್ಷಣಗಳು: ಕೇಶವ ಕುಲಕರ್ಣಿ

ನಾ ಮತ್ತೆ ಬದುಕಬಲ್ಲೆನಾದರೆ

ನನ್ನ ಯತ್ನವೆಲ್ಲ ಆಗ

ಇನ್ನೂ ಹೆಚ್ಚು ತಪ್ಪು ಮಾಡುವುದು

ಈಗಿನಷ್ಟು ಒಳ್ಳೆಯವನಾಗದಿರುವುದು

ಇನ್ನೂ ಹೆಚ್ಚು ಆರಾಮವಾಗಿರುವುದು

ಈಗಿನಕ್ಕಿಂತ ಹೆಚ್ಚು ತುಂಬಿಕೊಂಡಿರುವುದು

 

ನಿಜಾಂದ್ರೆ, ಕಡಿಮೆ ಗಂಭೀರನಾಗಿರುವುದು

ಹೆಚ್ಚು ಕೊಳಕಾಗಿರುವುದು

ಹೆಚ್ಚು ಓಡಾಡುವುದು

ಹೆಚ್ಚೆಚ್ಚು ಸಂಜೆಬಾನು ನೋಡುತ್ತ ಕೂರುವುದು

ಹೆಚ್ಚೆಚ್ಚು ಬೆಟ್ಟ ಗುಡ್ಡ ಹತ್ತುವುದು

ಇನ್ನೂ ಕಂಡರಿಯದ ಜಾಗಕ್ಕೆ ಹೋಗುವುದು

ತುಂಬ ಐಸ್‍ಕ್ರೀಮು ತಿನ್ನುವುದು, ಕಡಿಮೆ ಬೀನ್ಸು ತಿನ್ನುವುದು

ಅಸಲಿ ಸಮಸ್ಯೆಗಳನ್ನು ಜಾಸ್ತಿ, ಕಾಲ್ಪನಿಕವಾದವುಗಳನ್ನು ಕಡಿಮೆ

ಮಾಡಿಕೊಳ್ಳುವುದು

 

ನಾನೊಬ್ಬ ದೂರದೄಷ್ಟಿಯ ಜಾಗರೂಕ ನಾಗರಿಕ

ಬದುಕಿನ ಪ್ರತಿ ನಿಮಿಷದಲ್ಲೂ!

ಹಾಗಂತ ಬದುಕಲ್ಲಿ ನಲಿವಿನ ಕ್ಷಣಗಳ ಕಂಡಿಲ್ಲ ಎಂದೇನಿಲ್ಲ

ಮರಳಿ ಹೋಗುವೆನಾದರೆ ನನಗಿನ್ನೂ ಅಂಥ ಕ್ಷಣಗಳೇ ಬೇಕು

 

ನಿನಗೆ ಗೊತ್ತಿಲ್ಲದಿದ್ದರೆ ಕೇಳು – ಬದುಕು ಎಂದರೆ ಅದೇ-

ಈಗನ್ನು ಕಳೆದುಕೊಳ್ಳಬೇಡ

 

ನಾನೀಗ ಎಲ್ಲಿಗೆ ಹೋದರೂ

ಜ್ವರ ಮಾಪಕ ಬೇಕು

ಬಿಸಿನೀರು ಇರಬೇಕು

ಕೊಡೆ ಬೇಕು, ಗಾಳಿಕೊಡೆ ಕೂಡ

 

ಮತ್ತೆ ಜೀವಿಸಬಲ್ಲೆನಾದರೆ ನನ್ನದು ಬೆಳಕಿನ ಪಯಣ

ಮತ್ತೆ ಬದುಕಬಲ್ಲೆನಾದರೆ ನನ್ನದು ಬರಿಗಾಲ ದುಡಿತ

ವಸಂತನಿಂದ ಹೇಮಂತ ಬರುವವರೆಗೂ.

ಬಂಡಿ ಓಡಿಸುತ್ತೇನೆ ತುಂಬ ಸಲ

ಮೂಡಲದಲ್ಲಿ ನೇಸರನಿಗಾಗಿ ಕಾಯುತ್ತೇನೆ ತುಂಬ ಸಲ

ಮತ್ತೆ ಮಕ್ಕಳೊಡನೆ ಆಡುತ್ತೇನೆ ತುಂಬ ಹೊತ್ತು

 

ಮತ್ತೆ ಬದುಕನ್ನು ಇನ್ನೊಂದು ಸಲ ಬದುಕಬಲ್ಲೆನಾದರೆ…

ಆದರೆ ನನಗೀಗ ವರ್ಷ ಎಂಬತ್ತೈದು

ಇನ್ನೆಷ್ಟು ದಿನ ನಾನು ಬದುಕಬಲ್ಲೆ?

 

ಕೆಳಗಿನ ವಿಡಿಯೋ ಚಿತ್ರದ ಮೇಲೆ (ತ್ರಿಕೋನ ಇರುವ ಕಡೆ) ಕ್ಲಿಕ್ಕಿಸಿ. ಆಡಿಯೋ ಬರುತ್ತದೆ.

 

It’s a long way to Tipperary… Jack Judge

Up to mighty London

Came an Irishman one day.

As the streets are paved with gold

Sure, everyone was gay,

Singing songs of Piccadilly,

Strand and Leicester Square,

Till Paddy got excited,

Then he shouted to them there:

It’s a long way to Tipperary,

It’s a long way to go.

It’s a long way to Tipperary

To the sweetest girl I know!

Goodbye, Piccadilly,

Farewell, Leicester Square!

It’s a long long way to Tipperary,

But my heart’s right there.

(repeat)

Paddy wrote a letter

To his Irish Molly-O,

Saying, “Should you not receive it,

Write and let me know!”

“If I make mistakes in spelling,

Molly, dear,” said he,

“Remember, it’s the pen that’s bad,

Don’t lay the blame on me!

It’s a long way to Tipperary,

It’s a long way to go.

It’s a long way to Tipperary

To the sweetest girl I know!

Goodbye, Piccadilly,

Farewell, Leicester Square!

It’s a long long way to Tipperary,

But my heart’s right there.

ತಿಪ್ಪಾರಳ್ಳಿ ಬಲು ದೂರಾ

ಟಿ. ಪಿ. ಕೈಲಾಸಂ

 

ನಮ್ ತಿಪ್ಪಾರಳ್ಳಿ ಬಲು ದೂರಾ,

ನಡೆಯಕ್ ಬಲು ದೂರಾ
ಅಲ್ಲಿ ನಡೆಯೋಳ್ ನಮ್ ಬಸ್ವಿ ॥

ಬೋರೇಗೌಡನೆಂಬ ಗೌಡ ಬಂದ ಬೆಂಗಳೂರ್ಗೆ, ಬಂದ ಬೆಂಗಳೂರ್ಗೆ
ಬಳೇಪೇಟೆಮೇಲೆ ಹತ್ತಿ ಬರುತಿದ್ದಾಗ, ಗೌಡ ಬರುತಿದ್ದಾಗ
ಪೌಡರ್ ಗೀಡರ್ ಹಚ್ಚಿಕೊಂಡಾ ಮನುಷ್ಯಳೊಬ್ಬ್ಳು
ಕಣ್ಣು ಗಿಣ್ಣು ಮಿಟುಕ್ಸಿ ಗಿಟುಕ್ಸಿ ನೋಡಿ ನಕ್ಕಾಗ
ಆಗ ಬೇಡವ್ವಾ ಬಳೇಪೇಟೇ
ನಮಸ್ಕಾರ ನಗರ್ ಪೇಟೇ
ನಮ್ ತಿಪ್ಪಾರಳ್ಳಿ ಬಲು ದೂರಾ ॥೧॥

 

ತಮಾಶಿ ನೋಡೋದಕ್ಕೆ ಬೋರಾ ಬಂದ ಲಾಲ್ಬಾಗ್ ತೋಟಕ್ಕೆ
ಬೋರಾ ಲಾಲ್ಬಾಗ್ ತೋಟಕ್ಕೆ
ಹುಲೀನ್ ನೋಡಿ ಬರೇಹಾಕಿದ್ ದೊಡ್ಬೆಕ್ ಅಂದ್ಕೊಂಡ್ ಬೋರಾ
ದೊಡ್ಬೆಕ್ ಅಂದ್ಕೊಂಡಾ
ಬೋರಾ ನುಗ್ಗಿ ಹುಲೀ ಬೆನ್ ಸವರ್ಸ್ತಾ ಪುಸ್ ಪುಸ್ ಅಂತಿದ್ದಾ
ಬೋರಾ ಪುಸ್ ಪುಸ್ ಅಂತಿದ್ದಾ
ಹುಲೀ ರೇಗ್ಕೊಂಡ್ ಬೋರನ್ ಕೆಡುವ್ಕೊಂಡ್ ಹಲ್ಗಳ್ ಬಿಟ್ಟಾಗ
ಬೋರಾ ಹೆದರ್ಕೊಂಡ್ ಕಣ್ಣೀರ್ ಸುರಿಸ್ತಾ ಕೈಮುಗಿದ್ ಕಿರಿಚ್ದಾಗ
ಬುಟ್ಬುಡಪ್ಪಾ ಬೆಕ್ಕಿನ್ರಾಯಾ ನಮಸ್ಕಾರ್ ನನ್ನೊಡೆಯಾ
ನಮ್ ತಿಪ್ಪಾರಳ್ಳಿ ಬಲು ದೂರಾ ॥ ೨ ॥

 

ಬಸ್ವೀನ್ ಕರ್ಕೊಂಡ್ ಬಂದಾ ಬೋರಾ ವಿಜಯದಶಮೀಗೆ
ಬೋರಾ ವಿಜಯದಶಮೀಗೆ
ಅರಮನೆ ಗೇಟ್ ಮುಂದೆ ಅಂಬಾರಿ ಕಟ್ಟಿದ್ ಆನೆ ನೋಡ್ದ
ಬೋರಾ ಆನೆ ನೋಡ್ದ
ಬಸ್ವೀನ್ ಮೆಟ್ಟಿಲ್ ಮೇಲೆ ಹತ್ತಿಸ್ಬಿಟ್ಟು ತಾನು ಬುರ್ ಬುರ್ ನಕ್ಬಿಟ್ಟಾ
ಬೋರಾ ಬುರ್ ಬುರ್ ನಕ್ಬಿಟ್ಟಾ
ಮಾವ್ತಾ ಮುದ್ಕಾ ಗುರೀಗುರ್ ಗುಮ್ಮಾ ಇಲಿಯಂತ್ ಕಿರಿಚ್ಬಿಟ್ಟಾ
ಆನೆ ಕೊರಳ್ನಾ ಓಡಿಸ್ತಾ ನಡಸ್ತಾ ಹತ್ರ ಹೋಗ್ತಿದ್ದಾ
ಬೋರಾ ಹತ್ರ ಹೋಗ್ತಿದ್ದಾ
ಮನೇಗ್ ಹೋಗ್ರೋ ಮಾವುತ್ ಸಾಬ್ರ ಗಂಟೆ ಉಳಿಸ್ಕೊಂಡ್ ಗುರಿಕಾರಾ

 

ನಮ್ ತಿಪ್ಪಾರಳ್ಳಿ ಬಲು ದೂರಾ,

ನಡೆಯಕ್ ಬಲು ದೂರಾ
ನಮ್ ತಿಪ್ಪಾರಳ್ಳಿ ಬಲು ದೂರಾ, ನಡೆಯಕ್ ಬಲು ದೂರಾ
ಆದ್ರೆ ಅಲ್ಲಿ ನಡೆಯೋಳ್ ನಮ್ ಬಸ್ವಿ ॥ ೩॥