‘ದಂಡೆ ದಾಟುವಾಗ’ ಆಲ್ಫ್ರೆಡ್ ಲಾರ್ಡ್ ಟೆನಿಸನ್ ಕವಿಯ ‘ಕ್ರಾಸಿಂಗ್ ದಿ ಬಾರ್’ ಕವನದ ಭಾವಾಂತರ ಅನುವಾದಿಸಿದವರು ಡಾ:ಕೇಶವ ಕುಲಕರ್ಣಿ

ಇತ್ತೀಚಿಗಷ್ಟೇ ನೊಬೆಲ್ ಪುರಸ್ಕೃತ ಕವಿ ಸರ್ ವಿ.ಎಸ್.ನೈಪೌಲ್ ನಿಧನರಾದ ಸುದ್ದಿ ಬಹಳಷ್ಟು ಮಂದಿಗೆ ಗೊತ್ತಿದೆ.
ಶ್ರೇಷ್ಠ ಬರಹಗಾರರಾಗಿದ್ದ ನೈಪೌಲ್ ಅವರು ಷೇಕ್ಸ್ಪಿಯರ್ ಮತ್ತು ಲಾರ್ಡ್ ಟೆನಿಸನ್ ಅವರ ಬರಹಗಳಿಂದ ಪ್ರಭಾವಿತರಾಗಿದ್ದರು.
ತಮ್ಮ ಕೊನೆಯ ಕ್ಷಣದಲ್ಲಿ ಲಾರ್ಡ್ ಟೆನಿಸನ್ ನ ಜನಪ್ರಿಯ ಕವನವಾದ ‘ಕ್ರಾಸಿಂಗ್ ದಿ ಬಾರ್’ ಅನ್ನು ಓದಬೇಕು ಅದನ್ನು ಕೇಳುತ್ತಾ ನಾನು ಪ್ರಾಣ ಬಿಡಬೇಕು ಎಂದು ಬಯಸಿದ್ದ ಅಂತೆಯೇ ಅವರ ಆಸೆ ನೆರವೇರಿತ್ತು.

ಈ ಕವನ ಟೆನಿಸನ್ ಅವರ ಕೊನೆಯ ಕವಿತೆಯಾಗಿರದಿದ್ದರೂ ತಮ್ಮ ಕವನ ಸಂಕಲನದ ಕೊನೆಯಲ್ಲಿ ಅದನ್ನು  ಮುದ್ರಿಸಬೇಕೆಂದು ಕರಾರು ಹಾಕಿದ್ದರಂತೆ. ಅಂತಹ ಮಹತ್ತರವಾದ ಕವನವನ್ನು ಡಾ:ಕೇಶವ ಕುಲಕರ್ಣಿ ಅವರು ಕನ್ನಡಕ್ಕೆ ಭಾವಾಂತರಿಸಿದ್ದಾರೆ, ಓದಿ ಅನುಭವಿಸಿ.

ಈ ಕವನ ಓದುವಾಗ ಕನ್ನಡದ ಶ್ರೇಷ್ಠ ಕವಿಗಳಾದ ಡಾ:ಜಿ.ಎಸ್.ಎಸ್ ಅವರ ಜನಪ್ರಿಯ ಭಾವಗೀತೆ ‘ಕಾಣದ ಕಡಲಿಗೆ ಹಂಬಲಿಸಿದೆ ಮನ’ ದ ಸಾಲುಗಳು ಕಾಡುತ್ತವೆ.

sand bar

ದಂಡೆ ದಾಟುವಾಗ

ಇಳಿಸಂಜೆ ಮತ್ತು ಬೆಳ್ಳಿಚುಕ್ಕೆ

ಸ್ಪಷ್ಟ ಕರೆಯೊಂದು ನನಗಾಗ!

ಮತ್ತಾಗ ನರಳಿಕೆ ಇರದಿರಲಿ ಮರಳುದಿಬ್ಬಕೆ,

ಕಡಲೊಳು ನಾನು ಹೊರಟಾಗ,

 

ಆದರಂಥ ತೆರೆಯೂ ಅಲೆದಿದೆ ನಿದ್ರೆವೊಲು,

ಮೊರೆ-ನೊರೆಯಲಾಗದಷ್ಟು ತುಂಬಿಕೊಂಡು,

ಅಪರಿಮಿತದಾಳದಿಂದ ಸೆಳೆದಾಗಲೂ

ಮನೆಗೆ ಹೊರಟಾಗ ತಿರುಗಿಕೊಂಡು.

 

ಮಬ್ಬೆಳಕು ಮತ್ತೆ ಕೊನೆಗಂಟೆ,

ತದನಂತರ ಕಗ್ಗತ್ತಲಾದಾಗ!

ವಿದಾಯದ ವಿಷಾದವಿಲ್ಲದಿರಲಿ, ಒಂಟಿ

ನಾ ಯಾತ್ರೆಗೆ ಹತ್ತಿದಾಗ;

 

ನಮ್ಮ ಕಾಲದ ನೆಲೆಯ ಇತಿಮಿತಿಯೊಳಗೆ

ದೂರದವರೆಗೂ ಸೈರಿಸಲಿ ಪ್ರವಾಹವು ನನ್ನನು,

ನನ್ನ ನಾವಿಕನನ್ನು ನೋಡುವ ನಿರೀಕ್ಷೆಯೊಳಗೆ

ನಾನು ದಾಟಿದಾಗ ದಂಡೆಯನು.

                                                      -ಕೇಶವ ಕುಲಕರ್ಣಿ

ಓದುಗರ ಆಸಕ್ತಿಗಾಗಿ ಮೂಲ ಕವನ

 Crossing the bar

Alfred Lord Tennyson 1809 – 1892

Sunset and evening star,

And one clear call for me!

And may there be no moaning of the bar,

When I put out to sea,

 

But such a tide as moving seems asleep,

Too full for sound and foam,

When that which drew from out the boundless deep

Turns again home.

 

Twilight and evening bell,

And after that the dark!

And may there be no sadness of farewell,

When I embark;

 

For tho’ from out our bourne of Time and Place

The flood may bear me far,

I hope to see my Pilot face to face

When I have cross’d the bar

-Alfred Lord Tenyson

‘ಹಳದಿ ಹೂಗಳು’ ವಿಲಿಯಮ್ ವರ್ಡ್ಸ್ವರ್ತ್ ಕವಿಯ ‘Daffodils/ I wandered lonely as a cloud’ ಕವಿತೆಯ ಅನುವಾದ- ಮುರಳೀಧರ ಹತ್ವಾರ ಅವರಿಂದ

daffodils2daffodils

 

ಪೀಠಿಕೆ:‘ ಡ್ಯಾಫ್ಫೋಡಿಲ್ಸ್’ ಎನ್ನುವುದು ಇಂಗ್ಲಿಷಿನ ಒಂದು ವಿವಿಧಾರ್ಥಕ ಪದ. ಹೊಸತನ, ಸ್ಫೂರ್ತಿ ,ಸೃಜನಶೀಲ, ಕ್ಷಮೆ, ನೆನಪು,ಅಂತರಂಗ ದರ್ಶನ ಎನ್ನುವ ಅರ್ಥಗಳು ಈ ಪದಕ್ಕೆ ಇವೆ.ಇಂತಹ ಪದದ ಹೆಸರನ್ನು ಹೊತ್ತ ಹೂವು ಮೇಲಿನ ಎಲ್ಲ ಅರ್ಥಗಳ ದ್ಯೋತಕವಾಗಿದೆ, ನೋಡಿದ ಕೂಡಲೇ ಎಂತಹವರೂ ಸಹ ಮೋಡಿಗೊಳಗಾಗುತ್ತಾರೆ. ಹಳದಿ, ಹಳದಿ ಮಿಶ್ರಿತ ಕೇಸರಿ, ಬಿಳಿ ಮಿಶ್ರಿತ ಹಳದಿ ಬಣ್ಣಗಳಲ್ಲಿ ಕಾಣಸಿಗುವ ಈ ಹೂಗಳು ವಸಂತ ಮಾಸದ ಸಂತಸ ಸುಮಗಳು ಎಂದರೆ ತಪ್ಪಾಗಲಾರದು.ಇಂಗ್ಲಿಷಿನ ಪ್ರಸಿದ್ಧ ಕವಿಯಾದ ವಿಲಿಯಮ್ ವರ್ಡ್ಸ್ವರ್ತ್ ಬರೆದ ‘Daffodils/ I wandered lonely as a cloud’ ಕವಿತೆಯನ್ನು ಕನ್ನಡಕ್ಕೆ ಮುರಳೀಧರ ಹತ್ವಾರ ಅವರು ಬಹಳ ಸೊಗಸಾಗಿ ಅನುವಾದಿಸಿದ್ದಾರೆ, ನೀವೂ ಓದಿ ಆಸ್ವಾದಿಸಿ.

ಮುರಳೀಧರ ಅವರ ಮಾತುಗಳಲ್ಲಿ-

ವಿಲಿಯಂ ವರ್ಡ್ಸ್ವರ್ತ್ (William Wordsworth) (1770-1850) ಇಂಗ್ಲೆಂಡಿನ ಬಹು ಪ್ರಸಿದ್ಧ ಕವಿ. ಅವನ ಡ್ಯಾಫೊಡಿಲ್ ಕವಿತೆ ಹೆಚ್ಚಿನವರ ಮನದಲ್ಲಿ ಇ೦ದಿಗೂ ಅವನ ನೆನಪನ್ನ ಉಳಿಸಿರುವ, ಬಹು ಜನರು ಮೆಚ್ಚಿದ ಕವಿತೆ. ಈ ಕವಿತೆಯ ಕನ್ನಡ ಅನುವಾದದ ಒಂದು ಪ್ರಯತ್ನ. ಜೊತೆಗೆ ಅವನ ಮನೆಯ(ಎಡಬದಿಯ ಚಿತ್ರ) ಮತ್ತು ಬಲಬದಿಯಲ್ಲಿ ಅವನ ಈ ಕವಿತೆಗೆ   ಸ್ಫೂರ್ತಿಯಾದ ಉಲ್ಸವಾಟರ್ (Ullswater lake) ಕೆರೆಯ ಚಿತ್ರಗಳು ನಿಮಗಾಗಿ:

 

 

ಹಳದೀ ಹೂಗಳು……..


ನಡೆದಿದ್ದೆ ನಾ ಒಂಟಿಯಾಗಿ, ಕಣಿವೆ-ಗುಡ್ಡಗಳ 
ಮೇಲೆ ಎತ್ತರದಲಿ ತೇಲುವ ಮೋಡವೊಂದರಂತೆ.
ಕಂಡೆನೊಮ್ಮೆಲೆ ಬಹುದೊಡ್ಡ, ಹೊಂಬಣ್ಣದ 
ಹಳದಿ-ಹೂಗಳ ಗುಂಪೊಂದ;
ಕೆರೆಯ ತಡಿಯಲಿ, ಮರಗಳಡಿಯಲಿ
ಪಟಪಟಿಸಿ ಕುಣಿಯುತಿದ್ದವವು ತಂಗಾಳಿಯಲಿ.

ಮಿಂಚುತ, ಹೊಳೆಯುವ ಆಕಾಶ ಗಂಗೆಯ
ನಿರಂತರ ನಕ್ಷತ್ರಗಳಂತೆ, ಹರಡಿದ್ದವವು
ಎಂದೂ ಮುಗಿಯದ ಸಾಲಿನಂತೆ, ಆ ದಡದಂಚಿನಲಿ:
ಹತ್ತು ಸಾವಿರವ ಕಂಡೆ ಒಂದೇ ನೋಟದಲಿ,
ನರ್ತಿಸುತ್ತಿದ್ದವವು ನಲಿವಿನಲಿ ತಲೆದೂಗಿ.

ಪಕ್ಕದ ನೀರ ಅಲೆಗಳೂ ಕುಣಿಯುತಿದ್ದವು; ಆದರೆ
ಹೂಗಳು ಹಿಂದಿಕ್ಕಿದ್ದವು ಮಿಂಚುವಲೆಗಳ ಹರ್ಷದಿಂದಲಿ:-
ಕವಿಯೊಬ್ಬಗೆ ಸಂತಸವಲ್ಲದೆ ಮತ್ತೇನು
ಉಲ್ಲಸಿತರ ಇಂತಹ ಸಂಗದಲ್ಲಿ:
ನೋಡಿದೆ—ನೋಡುತ್ತಲೇ ಇದ್ದೆ—ಒಂದಿಷ್ಟೂ ಯೋಚಿಸದೆ
ಏನು ಸಿರಿಯ ತಂದಿಹುದು ಹೂಗಳೀ ಆಟ ನನಗೆಂದು:

ಏಕೆಂದರೆ ಮಂಚದ ಮೇಲೆ ಸುಮ್ಮನೆಯೋ,
ಮನನ ಮಾಡುತ್ತಲೋ ಮಲಗಿದಾಗಲೆಲ್ಲ
ನನ್ನೊಳಗಣ್ಣ ಹೊಳಪಿಸುವವೀ ಹೂಗಳು
ಅದುವೇ ನನಗೆ ಏಕಾಂತದ ಪರಮಾನಂದ,
ಮತ್ತೆ ನನ್ನ ಹೃದಯ ಹರುಷದಿಂದ ತುಂಬಿ,
ಕುಣಿಯುವುದು ಹಳದೀ ಹೂಗಳೊಟ್ಟಿಗೆ.


(ವಿಲಿಯಂ ವರ್ಡ್ಸವರ್ತ, ೧೮೧೫)

ಅನುವಾದ: ಮುರಳಿ ಹತ್ವಾರ , ಚಿತ್ರ ಕೃಪೆ : ಗೂಗಲ್ ಮತ್ತು ಲೇಖಕರು

 

ಈ ಹಿಂದೆ ಶ್ರೀವತ್ಸ ದೇಸಾಯಿ ಮತ್ತು ವಿನತೆ ಶರ್ಮ ಅವರು ಇದೇ ಕವಿತೆಯ ಬಗ್ಗೆ ಬರೆದಿದ್ದು, ಹೆಚ್ಚು ಮಾಹಿತಿಗಳನ್ನು ಒಳಗೊಂಡಿವೆ. ಈ ಕೆಳಗಿನ ಸಂಪರ್ಕ ಕೊಂಡಿಯನ್ನು ಬಳಸಿ

https://wordpress.com/post/anivaasi.com/1357

https://wordpress.com/post/anivaasi.com/5573