ಜೀರಜಿಂಬೆ – ಸಿನಿಮಾ ನೋಡಿ …

ಕಳೆದ ಎರಡು-ಮೂರು ವಾರಗಳಿಂದ ಭಾರತಕ್ಕಿಂತ ಮುಂಚೆಯೇ ಯು.ಕೆ. ಕನ್ನಡಿಗರಿಗೆ ಸಾಮಾಜಿಕ ಕಳಕಳಿಯ ಚಲಚ್ಚಿತ್ರ “ಜೀರಜಿಂಬೆ” ನೋಡುವ ಸದವಕಾಶ ಸಿಕ್ಕಿತ್ತು. ಈ ಅವಕಾಶವನ್ನು ತಂದಿಟ್ಟವರು ಗಣಪತಿ ಭಟ್ಟರ ನೇತೃತ್ವದ “ಕನ್ನಡಿಗರು ಯು.ಕೆ” ತಂಡದವರು. ಜೀರಜಿಂಬೆಯ ಸಹನಿರ್ಮಾಪಕಿ  ಹಾಗೂ ಚಿತ್ರದಲ್ಲಿ ಬದಲಾವಣೆಯ ವೇಗವರ್ಧಕವಾಗಿ ನಟಿಸಿದ ಸುಮನ್ ನಗರ್ಕರ್ ಅವರ ಸಂದರ್ಶನವನ್ನು ನೀವು ಕಳೆದ ವಾರ ಓದಿದಿರಿ. ಚಿತ್ರ ಹೇಗೆ ನಮ್ಮೆಲ್ಲರ ಮನ ಕಲಕಿ-ತಟ್ಟಿತೆಂಬುದನ್ನು ಅನಿವಾಸಿಯ ಚಿರಪರಿಚಿತ ಸದಸ್ಯರಿಂದಲೇ ಕೇಳಿ… (ಸಂ)

ಬಳ್ಳಿಗೆ ಕಾಯಿ ಭಾರವೇ ? 

-ಡಾ. ಜಿ. ಎಸ್. ಶಿವಪ್ರಸಾದ್, ಶೆಫೀಲ್ಡ್, ಯು.ಕೆ

.

ಕಳೆದ ವಾರಾಂತ್ಯ ಡೋಂಕಾಸ್ಟರ್ ಲಿಟ್ಲ್ ಥಿಯೇಟರ್ ನಲ್ಲಿ “ಜೀರ್ಜಿಂಬೆ” ಎನ್ನುವ ಕನ್ನಡ ಚಿತ್ರವನ್ನು ಅದರ ನಿರ್ಮಾಪಕ ಗುರು ಮತ್ತು ಅವರ ಪತ್ನಿ ಸುಮನ್ ( ಖ್ಯಾತ ಚಲನ ಚಿತ್ರ ತಾರೆ ಸುಮ್ಮನ್ ನಗರ್ಕರ್ ) ಹಾಗು ಯಾರ್ಕ್ ಶೈರ್ ಕನ್ನಡಿಗರೊಂದಿಗೆ ವೀಕ್ಷಿಸುವ ಸದಾವಕಾಶ ನನಗೆ ಒದಗಿಬಂದಿತು. ಈ ಚಿತ್ರದ ಹಿನ್ನೆಲೆಯ ಬಗ್ಗೆ ಕೆಲವು ಮಾಹಿತಿಯನ್ನು ಅರಿತಿದ್ದು ಅದು ಬಾಲ್ಯವಿವಾಹವನ್ನು ಕುರಿತಾದ ಚಿತ್ರ ಎಂದು ತಿಳಿದಾಗ ಯಾವುದೋ ಹಳೆಕಾಲದ ಸಾಮಾಜಿಕ ಪಿಡುಗು ಅದರ ಬಗ್ಗೆ ಸಿನಿಮಾ ಮಾಡುವ ಅವಶ್ಯಕತೆ ಏನಿದೆ ಎಂಬ ಭಾವನೆಯಿಂದ ವೀಕ್ಷಿಸಲು ತೆರಳಿದ ನನಗೆ ಚಿತ್ರ ನೋಡಿದ ಮೇಲೆ ನನ್ನ ಅನಿಸಿಕೆಗಳು ಬದಲಾದವು. ಮಕ್ಕಳ ತಜ್ಞನಾಗಿ ಕೆಲಸ ಮಾಡುತ್ತಿರುವ ನನಗೆ ಮಕ್ಕಳಿಗೆ ಸಂಬಂಧ ಪಟ್ಟ ಸಾಮಾಜಿಕ ವಿಚಾರಗಳ ಬಗ್ಗೆ ಕಾಳಜಿ ಇದೆ. ಪ್ರಪಂಚದ ವಿವಿಧ ದೇಶಗಳಲ್ಲಿ ವಿಭಿನ್ನವಾದ ಸಾಮಾಜಿಕ ಪಿಡುಗುಗಳು ಅಸ್ತಿತ್ವದಲ್ಲಿವೆ. ಜನ ಸಾಮಾನ್ಯರಲ್ಲಿ ಅದರ ಅರಿವು ಮೂಡಿಸುವುದು ಮಾಧ್ಯಮಗಳ ಹೊಣೆ. ಈ ಒಂದು ಹಿನ್ನೆಲೆಯಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆ ಎಂದು ನನ್ನ ಅನಿಸಿಕೆ. ನಿರ್ದೇಶಕ ಕಾರ್ತಿಕ್ ಸರಗೂರ್ ಅವರು ನಿರ್ದೇಶಿಸಿದ ಜಿರ್ ಜಿಂಬೆ ಈಗಾಗಲೇ ಹಲವು ಚಿತ್ರೋತ್ಸವದಲ್ಲಿ  ಬಹುಮಾನಗಳನ್ನು ಪಡೆದಿದೆ. ಮಕ್ಕಳು ಬಹಳ ನಿಸ್ಸಂಕೋಚವಾಗಿ ಸಹಜವಾಗಿ ಅಭಿನಯಿಸಿದ್ದಾರೆ. ಹಲವಾರು ಹೊಸಮುಖಗಳನ್ನು ಒಳಗೊಂಡ ಈ ಚಿತ್ರದಲ್ಲಿ ಬೆಳದಿಂಗಳ ಬಾಲೆ ಖ್ಯಾತಿಯ ಸುಮನ್ ನಗರ್ಕರ್ ಗುರುತಿಸಬಹುದಾದ ಚಹರೆ. ಕಮರ್ಷಿಯಲ್ ಸಿನೆಮಾ ಹಾದಿಯನ್ನು ಬಿಟ್ಟು ಸಾಮಾಜಿಕ ಸಮಸ್ಯೆಗಳ ಬಗ್ಗೆ ತಯಾರಿಸಿದ ಈ ಚಿತ್ರಕ್ಕೆ ಹಣಹೂಡುವ ನಿರ್ಮಾಪಕರು ವಿರಳ. ಇಂತಹ ಪರಿಸ್ಥಿತಿಯಲ್ಲಿ ಗುರುದೇವ್ ನಾಗರಾಜ್ ಮತ್ತು ಅವರ ಪತ್ನಿ ನಟಿ ಶ್ರೀಮತಿ ಸುಮನ್ ನಗರ್ಕರ್ ಕ್ರೌಡ್ ಫಂಡಿಂಗ್  ಮೂಲಕ ಚಿತ್ರಕ್ಕೆ ಹಣವನ್ನು ಹೂಡಲು ವ್ಯವಸ್ಥೆ ಮಾಡಿರುವುದು ಶ್ಲಾಘನೀಯ.ಈ  ಚಿತ್ರವನ್ನು ಹೊರದೇಶದಲ್ಲಿ ಪ್ರದರ್ಶಿಸಲು ಅವರು ಅನುವು ಮಾಡಿಕೊಟ್ಟಿದ್ದಾರೆ. ಕಾರ್ತಿಕ್ ಸರಗೂರ್ – ಬೀಹೈವ್ ಪ್ರೊಡಕ್ಷನ್ಸ್ ಮತ್ತು ಪುಷ್ಕರ್ ಫಿಲ್ಮ್ಸ್ ಸಹನಿರ್ಮಾಪಕರಾಗಿದ್ದರೆ. ಇನ್ನೊಂದು ವಿಶೇಷವೆಂದರೆ ಮೈಸೂರು ರಾಮಕೃಷ್ಣ ವಿದ್ಯಾಶಾಲೆಯ ಹಳೆ ವಿದ್ಯಾರ್ಥಿ ಸಂಘದವರು ಕಾರ್ತಿಕ್ ಅವರಿಗೆ ಪ್ರೋತ್ಸಾಹ ಹಾಗು ಸಹಾಯವನ್ನು ಒದಗಿಸಿದ್ದಾರೆ.

ಚಿತ್ರದ ಪ್ರಾರಂಭದಲ್ಲಿ ಗ್ರಾಮೀಣ ಶಾಲಾ ಹೆಣ್ಣು ಮಕ್ಕಳಿಗೆ ಶಾಲೆಗೆ ಬರಲು ಉತ್ತೇಜಿಸುವ ಉದ್ದೇಶದಿಂದ ಉಚಿತ ಸೈಕಲನ್ನು ಸರ್ಕಾರ ಒದಗಿಸುತ್ತದೆ. ಈ ಚಿತ್ರದ ಮೊದಲರ್ಧ ಕಥೆ ಈ ಸೈಕಲ್ ಸುತ್ತ ಹಬ್ಬಿದೆ ಎನ್ನಬಹುದು. ಈ ಸೈಕಲ್ ಹೆಣ್ಣು ಮಕ್ಕಳ ಸ್ವಾವಲಂಬನೆ ಮತ್ತು ಸ್ವೇಚ್ಛೆಯ ಸಂಕೇತವಾಗಿ ತೋರುತ್ತದೆ. ಈ ಒಂದು ಉಡುಗೊರೆ ಶಾಲಾ ಮಕ್ಕಳ ನಡುವೆ ಹಾಗೆ ಹಳ್ಳಿಯ ಪರಿವಾರದ ಒಳಗೆ ಸಾಕಷ್ಟು ಬಿಕ್ಕಟ್ಟುಗಳನ್ನು ಒಡ್ಡುತ್ತದೆ. ಇದೆ ಸೈಕಲ್, ಚಿತ್ರದ ಕಥಾ ನಾಯಕಿ ರುದ್ರಿ ಎಳೆ ವಯಸ್ಸಿನಲ್ಲಿ
ಬಾಲ್ಯವಿವಾಹಕ್ಕೆ ಒಳಗಾಗಲು ಅವಳ ತಂದೆ-ತಾಯಿ ಒತ್ತಾಯಿಸಿದಾಗ ಹೇಗೊ ಪಲಾಯನ ಮಾಡಿ ಮುಖ್ಯ ಮಂತ್ರಿಗಳ ಸಹಾಯಕ್ಕಾಗಿ ಬೆಂಗಳೂರು ತಲುಪಲು ಸಹಾಯಕವಾಗುತ್ತದೆ.

ಬಾಲ್ಯವಿವಾಹ, ಸತಿ, ದೇವದಾಸಿ ಇವುಗಳು ನಮ್ಮ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಕೆಲವು ಸಾಮಾಜಿಕ ಪಿಡುಗುಗಳು. ಯುನಿಸೆಫ್ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಬಾಲ್ಯ ವಿವಾಹ 2006 ರಲ್ಲಿ 47% ಇದ್ದು 2016 ರಲ್ಲಿ 27% ಇದೆಯೆಂದು ವರದಿ ಖಾತರಿಪಡಿಸಿದೆ. ಹಲವಾರು ಸರ್ಕಾರಿ ಸಮಾಜ ಕಲ್ಯಾಣ ಯೋಜನೆಯಿಂದ ಹಾಗು ಅರಿವಿನಿಂದ ಬಾಲ್ಯವಿವಾಹ ಕಡಿಮೆಯಾಗಿದೆ. ಬಾಲ್ಯವಿವಾಹದಿಂದಾಗಿ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗಳ ಮೇಲೆ ತೀವ್ರ ಪರಿಣಾಮಗಳು ಉಂಟಾಗಬಹುದು. ಮನಸ್ಸಿನ ಉದ್ವಿಗ್ನತೆಯನ್ನು ಹತೋಟಿಯಲ್ಲಿಡಲು ಕಷ್ಟವಾಗಬಹುದು. ಬಾಲ್ಯವಿವಾಹದಿಂದ ಅಪ್ರಾಪ್ತವಯಸ್ಸಿನಲ್ಲಿ ಗರ್ಭಿಣಿಯಾಗುವ ಹೆಂಗಸಿಗೆ ಹೆರಿಗೆ ಸಮಯದಲ್ಲಿ ಹೆಚ್ಚಿನ ತೊಂದರೆ ಕಾಣಿಸಿಕೊಳ್ಳುವುದು ಸಾಮಾನ್ಯ. ಹಾಗೆಯೇ ನವಜಾತ ಶಿಶುವಿನ ಪಾಲನೆ ಈ ತಾಯಂದಿರಿಗೆ ನಿಭಾಯಿಸಲು ಕಷ್ಟವಾಗಬಹುದು. ಬಾಲ್ಯ ವಿವಾಹದ ಬಗ್ಗೆ ಜಾಗೃತಿ ಮೂಡಿಸಿದರಷ್ಟೇ ಸಾಲದು. ಅದನ್ನು ಪೋಲೀಸರ ಗಮನಕ್ಕೆ ತರಬೇಕು. ಹೀಗೆ ಮಾಡುವಲ್ಲಿ ದೂರವಾಣಿ ಸಂಪರ್ಕದ ಅಗತ್ಯವಿದೆ. ಪೊಲೀಸರು ಪ್ರಾಮಾಣಿಕತೆಯಿಂದ ವಿಚಾರ ನಡೆಸಬೇಕು ಹಾಗೆ ತಪ್ಪಿಸ್ಥರಿಗೆ ಶಿಕ್ಷೆಯಾಗಬೇಕು. ಶಿಕ್ಷೆಯಿಂದ ತಪ್ಪಿತಸ್ಥನು ಪರಿವರ್ತನೆಗೊಳ್ಳಬೇಕು ಹಾಗೆ ಸಮಾಜದಲ್ಲಿ ಕೂಡ ಪರಿವರ್ತನೆ ಕಾಣಬೇಕು. ಆದರೆ ಇವನ್ನೆಲ್ಲಾ ಅನುಷ್ಟಾನಕ್ಕೆ ತರಲು ಹಲವಾರು ಅಡಚಣೆಗಳಿವೆ ಎಂಬ ವಿಚಾರ ಚಿತ್ರದಲ್ಲಿ ಕಂಡುಬರುತ್ತದೆ. ಹಾಗೆಯೇ ಇದಕ್ಕೆ ಸಂಬಂಧ ಪಟ್ಟ ಸನ್ನಿವೇಶಗಳು ಪರಿಣಾಮಕಾರಿಯಾಗಿವೆ. ಬಾಲ್ಯ ವಿವಾಹದ ಹಿನ್ನೆಲೆಯಲ್ಲಿ ತಪಿತಸ್ಥರು ಮಕ್ಕಳ ತಂದೆ ತಾಯಿ. ಅವರನ್ನು ಜೈಲಿಗೆ ತಳ್ಳುವುದರಿಂದ ಈ ಮಕ್ಕಳನ್ನು ನೋಡಿಕೊಳ್ಳುವ ಸಮಸ್ಯೆಯನ್ನು ಸಮಾಜ ಕಲ್ಯಾಣ ಇಲಾಖೆಯವರು ಅಥವಾ ಹತ್ತಿರದ ಸಂಬಂಧಿಕರು ನಿಭಾಯಿಸಬೇಕಾಗುತ್ತದೆ. ಈ ರೀತಿಯ ಸಮಸ್ಯೆಗಳಿಗೆ ನಮ್ಮ ಸಮಾಜ ಮತ್ತು ಸರ್ಕಾರ ಅಣಿಯಾಗಿಲ್ಲ ಎಂಬುದನ್ನು ಗಮನಿಸಬೇಕು.

ಬಾಲ್ಯ ವಿವಾಹವನ್ನು ತಮ್ಮ ಅನುಕೂಲಕ್ಕೆ ಬಳೆಸಿಕೊಳ್ಳುವ ಅಪ್ಪ ಅಮ್ಮಂದಿರು, ಈ ಪಿಡುಗಿನ ಅಸ್ತಿತ್ವವನ್ನು ಅಲ್ಲಗೆಳೆಯುವ ಶಾಲೆಯ ಹೆಡ್ ಮಾಸ್ಟರ್, ಪೊಲೀಸರಿಗೆ ದೂರುಕೊಡಲು ಮತ್ತು ಸಹಾಯ ಸ್ವೀಕರಿಸಲು ಹೆದರಿ ಹಿಂಜರಿಯುವ ಹೆಣ್ಣು ಮಕ್ಕಳು, ಮತ್ತು ಇದೆಲ್ಲವನ್ನು ಸಹಿಸಿಕೊಳ್ಳುವ ಸಮಾಜದ ನಿರ್ಲಿಪ್ತತೆ ಇವುಗಳ ನಡುವೆ ತನ್ನ ಬಿಡುವಿನ ವೇಳೆಯಲ್ಲಿ ಸಮಾಜ ಸೇವೆಯನ್ನು
ಮಾಡಲು ಶಾಲೆಗೆ ಆಗಮಿಸುವ ಸಾಫ್ಟ್ ವೇರ್ ಎಂಜಿನಿಯರ್ ನಿವೇದಿತಾ(ಸುಮನ್ ನಗರ್ಕರ್) ಮಕ್ಕಳಿಗೆ ಧೈರ್ಯವನ್ನು ತುಂಬಿ, ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ಸ್ಫೂರ್ತಿಯನ್ನು ನೀಡಿ ಮಕ್ಕಳಿಗೆ ಆಶ್ವಾಸನೆ ನೀಡುತ್ತಾಳೆ ಮತ್ತು ದಿಕ್ಕು ತೋಚದ ಮಕ್ಕಳಿಗೆ ಆದರ್ಶ ವ್ಯಕ್ತಿಯಾಗಿ ಭರವಸೆಯನ್ನು ನೀಡುತ್ತಾಳೆ. ಬಾಲಕಿ ರುದ್ರಿ ತನ್ನ ಗೆಳತಿ ಬಾಲ್ಯವಿವಾಹವಾಗುವ ಸಂದರ್ಭದಲ್ಲಿ
ತಾನು ದೂರವಾಣಿಯ ಮೂಲಕ ಪೊಲೀಸರನ್ನು ಎಚ್ಚರಿಸಿದರೂ ಪರಿಸ್ಥಿತಿಯ ಒತ್ತಡದಿಂದ ಮದುಮಗಳು ಅಸಹಾಯಕಳಾಗಿ ತನಿಖೆ ನಡೆಸುವ ಅಧಿಕಾರಿಗಳಿಗೆ ಸಾಕ್ಷಿ ನೀಡದೆ ರೋದಿಸುವ ಸಂದರ್ಭ ಹೃದಯಸ್ಪರ್ಶಿಯಾಗಿದೆ.

ಕೊನೆಗೆ ರುದ್ರಿಗೆ ತಾನೇ ಬಾಲ್ಯವಿವಾಹ ಕ್ಕೆ ಒಳಗಾಗುವ ಪರಿಸ್ಥಿತಿ ಬರುತ್ತದೆ. ಆಗ ತನ್ನೆಲ್ಲ ಸ್ಥೈರ್ಯವನ್ನು ಕೂಡಿಸಿಕೊಂಡು ತನ್ನ ಅಕ್ಕನ ಸಹಕಾರದಿಂದ ಒಬ್ಬಳೇ ಸೈಕಲ್ ತುಳಿದು ಬೆಂಗಳೂರಿಗೆ ರಾತ್ರೋರಾತ್ರಿ ತೆರಳಿ ಟಿವಿ ಮಾಧ್ಯಮ ಮತ್ತು ಮುಖ್ಯಮಂತ್ರಿಗಳ ಸಹಾಯದಿಂದ ತಾನು ಮುಕ್ತಳಾಗುತ್ತಾಳೆ. ಶಿಕ್ಷಣ, ಮೂಲಭೂತ ಸೌಕರ್ಯಗಳು, ಸಂರಕ್ಷಣೆ, ಮಾರ್ಗದರ್ಶನ ಮತ್ತು ಸ್ವಾತಂತ್ರ್ಯ ಇವು ಮಕ್ಕಳ ಮನೋವಿಕಾಸಕ್ಕೆ ಅಗತ್ಯ. ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳ ಬಗ್ಗೆ ಇರುವ ಸಾಮಾಜಿಕ ನಿಲುವುಗಳು
ಬದಲಾಗಬೇಕು. ಜನಸಾಮಾನ್ಯರಿಗೆ ಅದರಲ್ಲೂ ಗ್ರಾಮೀಣ ಜನತೆಗೆ ಈ ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕು. ಈ ಒಂದು ಪ್ರಯತ್ನದಲ್ಲಿ ಜಿರ್ ಜಿಂಬೆ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ಕಮರ್ಷಿಯಲ್ ಸಿನಿಮಾಗಳ ಹಾವಳಿಯಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ನಿರ್ಮಿಸಿದ ಚಿತ್ರಗಳು ವಿರಳ. ಇವುಗಳ ಮಧ್ಯೆ ಜೀರ್ ಜಿಂಬೆ ಕಲಾತ್ಮಕ ಚಿತ್ರವಾಗಿ ಎದ್ದು ತೋರುತ್ತದೆ.

ಜೀರಜಿಂಬೆ

ಜೀರಜಿಂಬೆ – ನನ್ನ ನೋಟ 

– ಡಾ.ಅರವಿಂದ ಕುಲಕರ್ಣಿ

ರ್ರ್ಯಾಡ್ಲೆಟ್, ಯು ಕೆ.

ಇದೇ ರವಿವಾರ ಎಪ್ರಿಲ್ 15, 2018 ರಂದು ಯುಕೆ ಬ್ರಿಸ್ಟಲ್ ದ ಸ್ಕಾಟ್ ಸಿನಿಮಾದಲ್ಲಿ “ಜೀರಜಿಂಬೆ” ಚಿತ್ರ ನೋಡುವ ಅವಕಾಶ ಸಿಕ್ಕಿತ್ತು. ಚಿತ್ರವನ್ನು ನೋಡುವ ಮತ್ತು ಅದರಲ್ಲಿ ನಟಿಸಿದ ತಾರೆ ಸುಮನ್ ನಗರ್ಕರ್ ಮತ್ತವರ ಪತಿ ಗುರುದೇವ ಅವರನ್ನು ಭೇಟಿ ಮಾಡುವ ಸದವಕಾಶವನ್ನು ಉಪಯೋಗಿಸಿಕೊಳ್ಳಲು ಸುತ್ತ ಮುತ್ತಲಿನ ಮತ್ತು ದೂರ ದೂರದ ಪ್ರದೇಶಗಳಿಂದ ಸುಮಾರು 50ರಿಂದ 60 ಕನ್ನಡ ಅಭಿಮಾನಿಗಳು ಬ್ರಿಸ್ಟಲ್ ದಲ್ಲಿ ನೆರೆದಿದ್ದರು. ಇದು ಮಕ್ಕಳ ಚಿತ್ರ ಎಂದು ಕೇಳಿದ್ದರಿಂದಲೋ ಏನೋ ಹಲವರು ಮಕ್ಕಳೊಂದಿಗೆ ಬಂದಿದ್ದರು.

ಈ ಚಲನ ಚಿತ್ರ ಇನ್ನೂ ಭಾರತದಲ್ಲಿ ರಿಲೀಜ್ ಆಗಿಲ್ಲ, ಸದ್ಯದಲ್ಲೇ ಆಗಬಹುದೆಂದು ತಿಳಿದು ಬಂದಿತು. ಆದರೆ ಈಗಾಗಲೇ ಬೇರೆಡೆಗೆ ಇದರ ಪ್ರದರ್ಶನ ಆಗಿದೆ ಎಂತಲೂ ಇದು ಯುಕೆದಲ್ಲಿ ಮೂರನೆಯ ಪ್ರದರ್ಶನ ಎಂದು ತಿಳಿಸಲಾಯಿತು. ಈಗಾಗಲೇ ಹಲವಾರು ಕಡೆಯಿಂದ ಉತ್ತಮ ಶ್ಲಾಘನೀಯ ಪ್ರತಿಕ್ರಿಯೆಗಳು ಬಂದಿರುವವು. ಅಲ್ಲದೆ ಇದಕ್ಕೆ 4 ರಾಜ್ಯ ಪ್ರಶಸ್ತಿಗಳೂ ಸಿಕ್ಕಿವೆ.

ಮೊಟ್ಟ ಮೊದಲು ಬೆಂಗಳೂರಿನಿಂದ ಎಪ್ಪತ್ತು ಕಿ.ಮೀ ದೂರದಲ್ಲಿಯ ಒಂದು ಸಣ್ಣ ಹಳ್ಳಿಯ ಸನ್ನಿವೇಶದೊಂದಿಗೆ ಚಿತ್ರ ಪ್ರಾರಂಭವಾಯಿತು. ಅಲ್ಲಿಯ ಚಿಕ್ಕ ಮಕ್ಕಳ ವಿದ್ಯಾಭ್ಯಾಸ, ಮನೆಯಲ್ಲಿರುವ ತಂದೆ ತಾಯಂದಿರು ಮತ್ತು ಪರಿಸರದ ಹಳ್ಳಿಯ ಹಿರಿಯರು ಆಚರಿಸುತ್ತ ಬಂದಿರುವ ಮೂಢ ನಂಬಿಕೆಗಳನ್ನು ಚೆನ್ನಾಗಿ ಚಿತ್ರಿಸಲಾಗಿದೆ. ಮುಖ್ಯವಾಗಿ ಮಕ್ಕಳಲ್ಲಿ ಅಡಗಿರುವ ಮುಗ್ಧತೆ, ಸರಳತೆ, ಚೇಷ್ಟೆ, ಈರ್ಷ್ಯೆಗಳನ್ನು ಮನಮುಟ್ತುವ ರೀತಿಯಲ್ಲಿ ಪ್ರದರ್ಶಿಸಿ ಚಿತ್ರ ಮುಂದೆ ಸಾಗಿತು. ಈ ಚಿತ್ರದ ಮೂಲ ಉದ್ದೇಶ ’’ಬಾಲ್ಯ ವಿವಾಹ ಮತ್ತು ಅವರ ಮೇಲೆ ಅದರಿಂದಾಗುವ ಪರಿಣಾಮಗಳು.” ಆ ಹದಿಮೂರು ವರ್ಷದ ಹುಡುಗಿಯರನ್ನು ತಂದೆ ತಾಯಂದಿರು ಮದುವೆಗಾಗಿ ಬಲವಂತ ಮಾಡುವ ದೃಶ್ಯ ಎಲ್ಲ ಪ್ರೇಕ್ಷಕರ ಮನವನ್ನು ಕಲುಕಿತು. ನಂತರದ ಘಟನೆಗಳಲ್ಲಿ ಚಿತ್ರದಲ್ಲಿ ಮೂಲಪಾತ್ರದಲ್ಲಿ ನಟಿಸಿದ ಹದಿಮೂರು ವರ್ಷದ ಎಳೆಯಳ ಮನಸ್ಸು ಆ ಹಳ್ಳಿಗೆ ಟೆಂಪರರಿ ಶಿಕ್ಷಕಿಯಾಗಿ ಬಂದ ಮಹಿಳೆಯ (ಸುಮನ್ ನಗರ್ಕರ್) ಬೋಧನೆಗಳಿಂದ ಹೇಗೆ ಪರಿವರ್ತನೆಯಾಯಿತು ಮತ್ತು ಹೇಗೆ ಆಕೆ ದೃಢವಿಶ್ವಾಸದಿಂದ ತನ್ನ ಜೀವನದಲ್ಲೂ ಉದ್ಭವಿಸಿದ ಬಾಲ್ಯವಿವಾಹದ ಘಟನೆಯನ್ನು ಹೇಗೆ ಎದುರಿಸಿದಳು ಎಂಬುದನ್ನು ಚೆನ್ನಾಗಿ ಚಿತ್ರೀಕರಿಸಿದ್ದಾರೆ. ಅವರಿಬ್ಬರ ಆಕ್ಟಿಂಗ್ ಬಲು ಚೆನ್ನಾಗಿ ಬಂದಿದೆ.

ಚಿತ್ರದ ಕೊನೆಯ ಹಂತದಲ್ಲಿ ಚಿತ್ರದ ಕೇಂದ್ರವಸ್ತುವಾದ ಬಾಲ್ಯವಿವಾಹ ದ ಬಗ್ಗೆ ಹಲವಾರು ಅಂಕಿ ಅಂಶಗಳ ಸುರಿಮಳೆಯನ್ನೇ ಕಾಣುತ್ತೇವೆ, ಕಂಡು ಬೆರಗಾಗುತ್ತೇವೆ. ಈ ವಿಷಯದಲ್ಲಿ ಕರ್ನಾಟಕದ ಸ್ಥಾನ ಭಾರತದಲ್ಲೇ ಎರಡನೆಯದು ಎಂದು ತಿಳಿದು ವಿಷಾದ-ಮುಜುಗರ ಪಡುತ್ತೇವೆ.

ಚಿತ್ರ ಪ್ರದರ್ಶನದ ನಂತರ ನಿರ್ಮಾಪಕ ತಂಡದ ಆಹ್ವಾನದಂತೆ ಇದರ ಬಗ್ಗೆ ಚರ್ಚೆ, ಚಿತ್ರದ ಬಗ್ಗೆ ಹಿನ್ನುಣಿಕೆ ಇತ್ಯಾದಿ ನಡೆಯಿತು. ಇದರಲ್ಲಿ ಹಲವಾರು ಪ್ರೇಕ್ಷಕರು ಪಾಲುಗೊಂಡರು. ಅವರಲ್ಲಿ ಒಬ್ಬ ಮಹಿಳೆ ತನ್ನ ಸ್ವಾನುಭವದ ಕಥೆಯನ್ನು ಹೇಳಿ ಎಲ್ಲರನ್ನು ಚಕಿತಗೊಳಿಸಿದಳು. ತಾನೂ ಬಾಲ್ಯವಿವಾಹವಾಗಿ ಹೇಗೆ ದುರಂತ ಘಟನೆಗಳನ್ನು ಎದುರಿಸಿದೆ ಎಂಬ ವರ್ಣನೆಯಿಂದ ಸಭಿಕರನ್ನು ಮೂಕವಿಸ್ಮಿತರನ್ನಾಗಿಸಿದಳು. ಸಂಕ್ಷಿಪ್ತವಾಗಿ ಹೇಳುವದೆಂದರೆ ಆಕೆಯ ಕಥೆ ಹೀಗಿದೆ:

“ನನಗೂ ಚಿಕ್ಕ ವಯಸ್ಸಿನಲ್ಲೇ ನನ್ನ ತಂದೆ ತಾಯಿಗಳು ತಾವೇ ಆಯ್ದು ಸೂಕ್ತವರನೆಂದು ಪರದೇಶದಿಂದ ಬಂದಿದ್ದ ಒಬ್ಬ ಹುಡುಗನ ಜೊತೆಗೆ ನನ್ನ ಮದುವೆ ಮಾಡಿದರು. ಆದರೆ ಆತ ಮೊದಲೇ ಒಂದು ಲಗ್ನಮಾಡಿಕೊಂಡಿದ್ದ ಎಂಬ ಸತ್ಯ ನಂತರ ಬಯಲಿಗೆ ಬಂದಿತು. ಆಮೇಲೆ ಆತ ನನ್ನ ಕೈಬಿಟ್ಟ. ಈ ಮೋಸದಿಂದ ನನಗೆ ದಿಕ್ಕೇ ತೋಚದಂತಾಯಿತು. ಆದರೂ ಧೈರ್ಯಗೆಡದೆ ನಾನು ಪಕ್ಕದ ಮನೆಯ ಹೆಂಗಸಿನ ನೆರವಿನಿಂದ ಆಕೆಯ ಮನೆಯಲ್ಲಿದ್ದ ಟೈಪ್ ರೈಟರ್ದಿಂದ ಟೈಪಿಂಗ್ ಕಲಿತೆ. ಆಮೇಲೆ ಒಂದು ಡಿಗ್ರಿಯೂ ಆಯಿತು. ಮುಂದೆ ಬೆಂಗಳೂರು ವಿಧಾನ ಸೌಧದಲ್ಲೆ Gazetted officer (Class I) ಹುದ್ದೆಯನ್ನು ನಿಭಾಯಿಸಿದೆ. ಇಬ್ಬರು ಡಾಕ್ಟರು ಮಕ್ಕಳ ತಾಯಿಯಾಗಿರುವೆ.” ಆಕೆಯ ಭಾವಪೂರ್ಣ ಮಾತು ಮುಗಿದಾಗ ಎಲ್ಲರೂ ಎದ್ದು ನಿಂತು ಕರತಾಡನದ ಸುರಿಮಳೆಗೈದರು. ಸಿನಿಮಾದಲ್ಲಿಯ ಕಥೆಯನ್ನೇ ಪ್ರತ್ಯಕ್ಷವಾಗಿ ಕಂಡ ಅನುಭವವಾಯಿತು. ಪ್ರೊಜೆಕ್ಷನ್ ಪರದೆಯ ಹಿಂದೆಯೂ ಮುಂದೆಯೂ ಅದೇ ನೈಜ ನಾಟಕದ ಪ್ರದರ್ಶನ ನೋಡಿದಂತೆ ಭಾಸವಾಯಿತು.

ತದನಂತರ, ಸಭಿಕರ ಎದುರು ಬಂದು ಈ ಚಿತ್ರವನ್ನು ಯುಕೆ ಗೆ ತಂದ ಗುರುದೇವ ಮತ್ತು ಸುಮನ್ ನಗರ್ಕರ್ ಅವರು ಈ ಚಿತ್ರಕ್ಕೆ ಜನರ ಪ್ರೋತ್ಸಾಹ ಮತ್ತು ಪ್ರಚಾರ ಕೊಡಿ ಎಂದು ಮನವಿ ಮಾಡಿದರು.

ನನ್ನ ವೈಯಕ್ತಿಕ ವಿಚಾರವೆಂದರೆ ಈ ಚಲನ ಚಿತ್ರವನ್ನು ಭಾರತದ ಪ್ರತಿಯೊಂದು ಶಾಲೆಯಲ್ಲಿ ಮತ್ತು ಸಾಂಸ್ಕೃತಿಕ ಘಟಕಗಳಲ್ಲಿ ಪುಕ್ಕಟೆಯಾಗಿ ಪ್ರದರ್ಶಿಸ ಬೇಕು. ಈ ಬಾಲ್ಯವಿವಾಹ ವೆನ್ನುವ ಜಟಿಲ ಸಮಸ್ಯೆಯನ್ನು ಬಿಡಿಸಿ, ಬೇರು ಸಹಿತ ಕಿತ್ತೆಸೆಯಬೇಕಾಗಿದೆ. ಮನಸ್ಸು ಮಾಡಿದರೆ ಅದು ಸಾಧ್ಯ. ಇದಕ್ಕೆ ಅಲ್ಲಿಯ ತಂದೆ-ತಾಯಿ-ಪಾಲಕರ ಬೆಂಬಲ, ಶಿಕ್ಷಕರ ಸಹಕಾರ (ಚಿತ್ರದಲ್ಲಿ ಅವರು ಕೈಕೊಡವಿ ಕುಳಿತಂತಿದೆ!) ಅಲ್ಲದೆ ರಾಜಕಾರಣಿಗಳ ಬೆಂಬಲದ ಅಗತ್ಯವಿದೆ. ಕಾಯದೆ ಪಾಸು ಮಾಡಿ, ಜಾರಿಗೆ ತಂದರೂ ಸಮಸ್ಯೆಗೆ ನಿಜವಾದ ಪರಿಹಾರ ಸಿಗುವದಿಲ್ಲ. ತಂದೆ ತಾಯಿಗಳನ್ನು ಜೇಲಿಗೆ ತಳ್ಳಿದರೆ ಅವರ ಮಕ್ಕಳ ಪಾಡೇನು? ಅವರ ವ್ಯವಸ್ಥೆಗೆ, ಪಾಲನೆಗೆ ಯಾರು ಜವಾಬ್ದಾರರು? ಇವೆಲ್ಲ ಪ್ರಶ್ನೆಗಳನ್ನು ಕೇಳುವ ಈ ಚಲನ ಚಿತ್ರ ಜನ ಜಾಗೃತಿಯನ್ನುಂಟು ಮಾಡುವದರಲ್ಲಿ ಸಫಲವಾಗಿದೆ. ಮುಂದಿನ ಘಟ್ಟ?

 

Advertisements

ಅನಿವಾಸಿಗಳು ಓದಿದ ಪುಸ್ತಕ (ಭಾಗ-೨)

(ಕಳೆದ ವಾರ ಅನಿವಾಸಿಗಳು ಓದಿದ ಮೂರು ಪುಸ್ತಕಗಳ ಪರಿಚಯ ಮಾಡಿಸಿಕೊಡಲಾಗಿತ್ತು. ಈ ಸಲ ಇನ್ನು ಮೂರರ ನಾಲ್ಕರ ವಿಮರ್ಶೆಯನ್ನು ಪ್ರಸ್ತುತಪಡಿಸುತ್ತಿದ್ದೇವೆ – ಎರಡು ಮೂರು ಇಂಗ್ಲಿಷ್ ಮತ್ತು ಒಂದು ಕನ್ನಡ ಪುಸ್ತಕಗಳು. ಅವು ಎಲ್ಲರಿಗೂ ಪರಿಚಿತವಿರಲಿಕ್ಕಿಲ್ಲ, ಅಥವಾ ಓದಿ ಮರೆತಿರಲೂಬಹುದು. ಆದರೆ, ನಮ್ಮ ಕರೆಗೆ ಓಗೊಟ್ಟು ಕಳಿಸಿಕೊಟ್ಟ ಬರಹಗಾರರೆಲ್ಲರೂ ಮಾತ್ರ ”ಅನಿವಾಸಿ” ಓದುಗರಿಗೆ ಚಿರಪರಿಚಿತರು.  ಚಿತ್ರಬಿಡಿಸುವ ’ಕುಂಚ’ದ ಬದಲು  ಈ ಸಲ ಕೈಗೆ ’ಲೇಖನಿ’ಯನ್ನೆತ್ತಿಕೊಂಡಿದ್ದಾರೆ ಲಕ್ಷ್ಮಿನಾರಾಯಣ ಗುಡೂರ್ ಅವರು! ಓದುಗರು ಎಂದಿನಂತೆ ತಮ್ಮ ಪ್ರತಿಕ್ರಿಯೆಗಳನ್ನು ಕೆಳಗೆ ಕಮೆಂಟ್ಸ್ ನಲ್ಲಿ ಬರೆಯ ಬೇಕಾಗಿ ಬಿನ್ನಹ. -ಸಂ)

(ಈಗ ತಾನೆ ಕೈಸೇರಿದ ನಮ್ಮ ಹೊಸ ಬರಹಗಾರರಾದ ವಿಜಯನರಸಿಂಹ ಅವರ ಇನ್ನೊಂದು ಪುಸ್ತಕ ವಿಮರ್ಶೆಯನ್ನೂ ಕೆಳಗೆ ಸೇರಿಸಿದ್ದೇನೆ.-ಸಂ)

1)”ಅಮೆರಿಕಾನ” ( Americanah) – ಚಿಮಮ೦ಡ ಅಡಿಚಿಯವರ ಕಾದ೦ಬರಿ – ದಾಕ್ಷಾಯಿಣಿ

book (1)ಅಡಿಚಿಯವರು ಅಮೆರಿಕದಲ್ಲಿ ನೆಲೆಸಿದ್ದರೂ ಮೂಲತಃ ನೈಜೀರಿಯನ್. ಈಕೆಯ ” ಪರ್ಪಲ್ ಹಿಬಿಸ್ಕಸ್ (Purple Hibiscus)” ಮತ್ತು “ಹಾಫ಼ ಆಫ಼್ ಎ ಯೆಲ್ಲೊ ಸನ್( Half of a yellow sun)” ಪ್ರಶಸ್ತಿ ವಿಜೇತ ಮತ್ತು ಪ್ರಸಿದ್ಧ ಕೃತಿಗಳು. ಈ ಲೇಖಕಿಯ  ಇವೆರಡು ಪುಸ್ತಕಗಳನ್ನು ನಾನೀಗ ೬-೭ ವರ್ಷಗಳ ಹಿ೦ದೆಯೆ ಓದಿದ್ದೆ. ಹೊರದೇಶದಲ್ಲಿದ್ದು ತಾಯ್ನಾಡಿನ ಬಗ್ಗೆ ಬರೆಯುವ ಈ ಲೇಖಕಿಯ ಬರಹಗಳು, ಅನಿವಾಸಿಯಾದ ನನ್ನನ್ನು ಬಹಳ ಪ್ರಭಾವಿತಗೊಳಿಸಿತೆ೦ದು ಹೇಳಬಹುದು. ಈ ಲೇಖಕಿಯ ಪುಸ್ತಕಗಳನ್ನು ಕೊ೦ಡು ಓದುವ೦ತೆ ಪ್ರೇರಿಪಿಸಿದ ನನ್ನ ಆಗಿನ ಹದಿಹರೆಯದ ಮಗಳು ಸಿರಿಗೆ ನನ್ನ ವ೦ದನೆಗಳನ್ನು ಹೇಳಬೇಕು. ಯಾಕೆ೦ದರೆ, ಯಾವ ಆ೦ಗ್ಲ ಭಾಷೆಯ ಪುಸ್ತಕವನ್ನು ಓದಲು ಆರಿಸಿಕೊಳ್ಳಬೇಕೆ೦ದು ಕೆಲವೊಮ್ಮೆ, ನನಗೆ ಸ್ವಲ್ಪ ಗೊ೦ದಲವೆ ಆಗುತ್ತದೆ೦ದು ಹೇಳಬಹುದು. ಈ ನಡುವೆ ನಾನು ಓದಿದ ಪುಸ್ತಕಗಳು ” ಕಾನೂರು ಹೆಗ್ಗಡತಿ” ಮತ್ತು ”ಅಮೆರಿಕಾನ”. ಕುವೆ೦ಪು ಅವರ ಕಾನೂರು ಹೆಗ್ಗಡತಿಯನ್ನು ನಾನು ಎರಡನೆಯ ಬಾರಿ ಓದಿದ್ದು ಮತ್ತು ಅದು ನೀವೆಲ್ಲರೂ ಈಗಾಗಲೆ ಓದಿರುವ ಪುಸ್ತಕವೆ೦ದು ನನ್ನ ಊಹೆ. ಲೇಖಕಿ ಅಡಿಚಿಯವರ ಕೃತಿಗಳನ್ನು ಸಹ ನಿಮ್ಮಲ್ಲಿ ಕೆಲವರು ಓದಿರಬಹುದು. ಈ ಲೇಖಕಿಯನ್ನು ಕೃತಿಗಳನ್ನು ಓದಲು ನೀವು ಆರಿಸಿಕೊಳ್ಳುವುದಾರೆ ಆಕೆಯ ಪ್ರಶಸ್ಥಿ ವಿಜೇತ ಪುಸ್ತಕಗಳನ್ನು ಮೊದಲು ಓದಿ ಆಕೆ ಬರೆಯುವ ಶೈಲಿಯನ್ನು ಅರಿವು ಮಾಡಿಕೊಳ್ಳುವುದು ತರವೆ೦ದು ನನಗನ್ನಿಸುತ್ತದೆ. ಈ ಲೇಖಕಿಯನ್ನು ಅನಿವಾಸಿ ಓದುಗರಿಗೆ ಪರಿಚಯಿಸುವುದು ನನ್ನ ಉದ್ದೇಶ.

”ಅಮೆರಿಕಾನ” ಕಾದ೦ಬರಿ ನೈಜೀರಿಯ ದೇಶದ ಇಬ್ಬರು ಯುವ ಪ್ರೇಮಿಗಳಾದ ಇಫ಼ೆಮುಲು(Ifemelu)ಮತ್ತು ಓಬಿನೀಜಿ (obinze)ಯ ಕತೆ. ಈ ದೇಶದಲ್ಲಿದ್ದ ಬಹಳ ವರ್ಷಗಳ ಮಿಲಿಟರಿ ಆಡಳಿತದಿ೦ದಾದ ಪರಿಣಾಮ, ಯುವಜನತೆ ಎದುರಿಸುವ ಸಮಸ್ಯೆಗಳನ್ನು ಲೇಖಕಿ ನಮಗೆ ಪರಿಚಿಸುವುದಲ್ಲದೆ, ಇತ್ತೀಚಿನ ದಶಕಗಳಲ್ಲಿ ನೈಜೀರಿಯಾದಲ್ಲಾಗಿರುವ ಬದಲಾವಣೆ, ಭ್ರಷ್ಟಾಚಾರ, ವೇಗವಾದ ಆರ್ಥಿಕ ಬೆಳವಣಿಗೆ ಮತ್ತು ಈ ಅತಿವೇಗದ ಆರ್ಥಿಕ ಬೆಳವಣಿಗೆ ತರಬಹುದಾದ ಸಾಮಾಜಿಕ ಬದಲಾವಣೆಗಳು, ಸ೦ಸ್ಕೃತಿಯ ಮೇಲಾಗುವ ಪರಿಣಾಮ ಇವುಗಳನ್ನು, ತಾನು ಹೇಳಹೊರಟಿರುವ ಕತೆಯಲ್ಲಿ, ಓದುಗರ ಆಸಕ್ತಿಗೆ ಧಕ್ಕೆ ಬರದ ಹಾಗೆ ಅಳವಡಿಸಿಕೊ೦ಡಿದ್ದಾರೆ. ನೈಜೀರಿಯಾ ದೇಶದ ಬಗೆಗೆ ಈಕೆಗಿರುವ ಒಲವು, ಪ್ರೀತಿಯ ಅರಿವು ಸಹ ನಮಗೆ ಮನವರಿಕೆಯಾಗುತ್ತದೆ. ಕೆಲವೊ೦ದು ವಿಷಯಗಳು ಭಾರತೀಯಳಾದ ನನಗೆ ಅಪರಿಚಿತವೆ೦ದೆನ್ನಿಸುವುದಿಲ್ಲ.

ವಿಶ್ವವಿದ್ಯಾನಿಲಯದ ವ್ಯಾಸ೦ಗಕ್ಕೆ೦ದು ಯುವತಿ ಇಫ಼ೆಮುಲು ಅಮೆರಿಕಾ ದೇಶಕ್ಕೆ ಪಯಣಿಸುತ್ತಾಳೆ. ಅಲ್ಲಿ ಆಕೆ ಎದುರಿಸುವ ವರ್ಣಭೇಧ, ಹಣದ ಕೊರತೆ, ಮಾಡಬೇಕಾಗುವ ವಿಧವಿಧದ ಕೆಲಸಗಳು, ತನ್ನ ಪ್ರೇಮಿ ಓಬಿನೇಜಿ ನೆನಪು ಸದಾ ಕಾಡುತ್ತಿದ್ದರೂ ಅನಿವಾರ್ಯವಾಗಿ ಬೆಳಿಸಿಕೊಳ್ಳುವ ಸ೦ಬ೦ಧಗಳ ಬಗೆಗೆ ಓದುಗರಿಗೆ ಮನಮುಟ್ಟುವ೦ತೆ ಈ ಲೇಖಕಿ ಬರೆಯುತ್ತಾರೆ. ಇಫ಼ೆಮುಲು ತನ್ನದೇ ಆದ ಬ್ಲಾಗ್(blog) ಅನ್ನು ಅಮೆರಿಕಾಕ್ಕೆ ವಲಸೆ ಬ೦ದ ಆಫ಼್ರಿಕಾನ್ನ(Africans)ರಿಗೆ೦ದು ಶುರುಮಾಡಿ ಯಶಸ್ವಿಯಾಗುತ್ತಾಳೆ. ಈ ಬ್ಲಾಗ್ ನಲ್ಲಿ ಇಫ಼ೆಮುಲು ಬರೆಯುವ ಸ್ವಗತಗಳು ಈ ಕಾದ೦ಬರಿಯ ಮುಖ್ಯಾ೦ಶಗಳೆ೦ದು ಹೇಳಬಹುದು. ವಲಸೆ ಬ೦ದವರೆಲ್ಲರೂ ಅಮೆರಿಕಾದ ಸ೦ಸ್ಕೃತಿ, ಸೊಬಗಿಗೆ ಮರುಳಾಗಿದ್ದಾರೆ೦ಬ ಭಾವನೆ, ತಾವು ಮಾಡುವುದೆಲ್ಲ ಚೆನ್ನ ಎನ್ನುವ ಅಮೆರಿಕನ್ನರ ಆತ್ಮವಿಶ್ವಾಸವನ್ನು ಈ ಪುಸ್ತಕ ಮತ್ತೆ ಮತ್ತೆ ಪ್ರಶ್ನಿಸುತ್ತದೆ.

ಅಮೆರಿಕಾಗೆ ಹೋಗಲು ವಿಸಾ ಸಿಗದ ಕಾರಣ, ತನ್ನ ಪ್ರೇಯಸಿಯನ್ನ ಹೇಗಾದರೂ ಮಾಡಿ ಸೇರುವ ಹ೦ಬಲದಿ೦ದ ಓಬಿನೀಜಿ ಇ೦ಗ್ಲೆಡಿಗೆ ಬರುತ್ತಾನೆ. ವ್ಯಾಸ೦ಗಕ್ಕೆ೦ದು ಇಲ್ಲಿಗೆ ಬರುವ ಈ ಯುವಕನ ಅನುಭವಗಳು, ನಿಪುಣ (skilled workers) ಎ೦ದು ಇಲ್ಲಿಗೆ ಬ೦ದ ನಮ್ಮಗಳಿಗೆ ಸ೦ಪೂರ್ಣ ಅಪರಿಚಿತವೆ೦ದು ಹೇಳಬಹುದು. ಹೊರ ದೇಶಕ್ಕೆ ವಲಸೆ ಬರುವವರೆಲ್ಲರೂ, ಪಾಶ್ಚಿಮಾತ್ಯ ಅನುಭವವನ್ನು ಆನ೦ದಿಸಲು ಅಥವಾ ಹಣಗಳಿಸಲು ಬರುವರೆ೦ದು ಭಾವಿಸಿರುವ ಹಲಜನರ ಮೂಢತನವನ್ನು ಈ ಕಾದ೦ಬರಿ ಏತ್ತಿತೋರಿಸುತ್ತದೆ. ಕತೆ ಬಹಳ ಕಾಲ ಒಬ್ಬರಿದೊಬ್ಬರು ದೂರವಿದ್ದು, ಜೀವನದಲ್ಲಿ ಬೇರೆ ಬೇರೆ ಹಾದಿಯನ್ನು ಆರಿಸಿಕೊ೦ಡ ಈ ಬುದ್ದಿಜೀವಿಗಳನ್ನು ಮತ್ತೆ ನೈಜೀರಿಯಾಕ್ಕೆ ಕರೆತರುವ ಹೊಸ ಅಧ್ಯಾಯದೊ೦ದಿಗೆ ಮು೦ದುವರಿಯುತ್ತದೆ.

ಇತ್ತೀಚಿನ ವರ್ಷಗಳಲ್ಲಿ, ಪಾಶ್ಚಿಮಾತ್ಯ ದೇಶಗಳಲ್ಲಿ ನೆಲಸಿ, ತಾಯ್ನಾಡಿನ ಮೂಲವನ್ನು ಅಳವಡಿಸಿಕೊ೦ಡು ಪುಸ್ತಕಗಳನ್ನು ಬರೆಯುವ ಲೇಖಕ, ಲೇಖಕಿಯರ ಸ೦ಖ್ಯೆ ಹೆಚ್ಚಾಗುತ್ತಿರುವುದು ಸ೦ತೋಷದ ವಿಷಯ. ಅನಿವಾಸಿಯಾದ ನನಗೆ ಈ ಪುಸ್ತಕಗಳು ಬಹುಬೇಗ ಮನಮುಟ್ಟುವುದಲ್ಲದೆ ಹೊಸ ನಾಡಿನ ಪರಿಚಯವನ್ನು ಮಾಡಿಕೊಡುವುದರಲ್ಲಿ ಯಶಸ್ವಿಯಾಗಿವೆ. ನಿಮಗೂ ಸಹ ಈ ಕಾದ೦ಬರಿ ಮೆಚ್ಚುಗೆಯಾಗುತ್ತದೆ೦ದು ನನ್ನ ನ೦ಬಿಕೆ.

2) ನನ್ನ ಮೆಚ್ಚಿನ ಪುಸ್ತಕ – ಲಕ್ಷ್ಮೀನಾರಾಯಣ ಗುಡೂರ್ 

20180213_071829ಇದು ನಾನು ಚಿಕ್ಕವನಾಗಿದ್ದಾಗಿನ ವಿಷಯಆಕರ್ಷಣೆ, ಓದುವ ಹುಚ್ಚು ಸಿಕ್ಕಾಪಟ್ಟೆ ಇತ್ತು. ನನಗಾಗ ೧೦ ವರ್ಷ, ಆಗಿನ್ನೂ ತಾತನ ಮನೆಗೆ ಗುಲ್ಬರ್ಗಾಕ್ಕೆ ಇರಲು ಬಂದಿದ್ದೆ, ಅಲ್ಲೇ ಶಾಲೆಗೆ ಸೇರಿದ್ದೆ ಕೂಡ. ತಾತನ ಮನೆಯಲ್ಲಿನ ದೊಡ್ಡ ಆಕರ್ಷಣೆಯೆಂದರೆ ಅಲ್ಲಿದ್ದ ಪುಸ್ತಕ ಭಂಡಾರ. ಅದರಲ್ಲೂ ರೀಡರ್ಸ್ ಡೈಜೆಸ್ಟ್ ಹಾಗೂ ಕಸ್ತೂರಿ ಸಂಚಿಕೆಗಳ ಪುಸ್ತಕ ವಿಭಾಗಗಳ ಹಾರ್ಡ್ ಬೌಂಡ್ ಸಂಗ್ರಹಗಳು. ಆ ಸಂಗ್ರಹದಲ್ಲಿದ್ದ ಕಥೆಗಳನ್ನು ನಾನು ಮತ್ತೆ ಮತ್ತೆ ಎಷ್ಟು ಬಾರಿ ಓದಿದ್ದೇನೋ ನನಗೇ ನೆನಪಿಲ್ಲ. ಅವುಗಳಲ್ಲಿ ನನ್ನ ಅತ್ಯಂತ ಮೆಚ್ಚಿನ ಪುಸ್ತಕ ಸರ್ ಎಚ್ ರೈಡರ್  ಹ್ಯಾಗಾರ್ಡ್ ಅವರ “ಸೋಲೊಮನ್ನನ ಗಣಿಗಳು” (King Solomon’s Mines), ಹದಿನೆಂಟನೆಯ ಶತಮಾನದ ಅಪರಿಚಿತ ಆಫ್ರಿಕಾದಲ್ಲಿ ನಡೆಯುವ ಸಾಹಸದ ಗಾಥೆ. ಅದನ್ನು ಕನ್ನಡಕ್ಕೆ ಭಾಷಾಂತರಿಸಿದವರ ಹೆಸರು ಮರೆತು ಹೋಗಿದ್ದರೂ, ಅದರಲ್ಲಿನ ಪ್ರತಿಯೊಂದು ಸನ್ನಿವೇಶ, ಪಾತ್ರ ಹಾಗೂ ವಿವರಣೆಯನ್ನು ಇನ್ನೂ ಕಣ್ಣಮುಂದೆ ತಂದುಕೊಳ್ಳಬಲ್ಲೆ. ಅಷ್ಟು ಪರಿಣಾಮಕಾರಿಯಾದ ಕಥೆ.

ಕಥೆಯ ಒಂದು ಪಾತ್ರವೇ ಆದ ಆನೆಗಳ ಬೇಟೆಗಾರ ಅಲನ್ ಕ್ವಾರ್ಟರ್ಮೇನ್ (Allen Quartermain) ಈ ಕಥೆಯ ನಿರೂಪಕ ಸಹ. ಮನೆ ಬಿಟ್ಟು ಬಂದು ಆಫ್ರಿಕಾಕ್ಕೆ ಹೋದ ತಮ್ಮನನ್ನು ಹುಡುಕಲು ಬಂದ ಶ್ರೀಮಂತ ಸರ್ ಹೆನ್ರಿ ಹಾಗೂ ಅವನ ಮಿತ್ರ ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ಗುಡ್, ಅಲನ್ ಕ್ವಾರ್ಟರ್ಮೇನನ ಸಹಾಯ ಯಾಚಿಸುವುದರೊಂದಿಗೆ ಆರಂಭವಾಗುವ ಕಥೆ, ಅತ್ಯಂತ ರೋಚಕ ಸನ್ನಿವೇಶಗಳ ಮೂಲಕ ಹಾಯ್ದು, ಅಕಾಸ್ಮಾತ್ತಾಗಿ ಸರ್ ಹೆನ್ರಿಯ ತಮ್ಮ ನೆವಿಲ್ ದೊರೆಯುವುದರೊಂದಿಗೆ ಮುಗಿಯುತ್ತದೆ. ಈ ಮಧ್ಯೆ ಬರುವ ಶೂರ ಕುಕುವಾನಾ ಯೋಧರ ಜನಾಂಗ, ಅವರ ರಕ್ತಪಿಪಾಸು ರಾಜ ಟ್ವಾಲಾ, ಅವನ ಕ್ರೂರಿ ಮಗ ಸ್ಕ್ರಾಗ್ಗಾ, ಬೀಭತ್ಸ ಭಾವನೆ ತರಿಸುವ ಮಾಟಗಾತಿ ಗಗೂಲ್ ಮತ್ತವಳ ಶಿಷ್ಯೆಯರು; ಸಿಂಹಾಸನಕ್ಕೆ ನಿಷ್ಠನಾಗಿರುವ ಶೂರ ಚಿಕ್ಕಪ್ಪ ಇನಫಾದೂಸ್; ತಾಯಿಯಿಂದ ಕಥೆ ಕೇಳಿ, ಕೊಲೆಯಾದ ತನ್ನ ತಂದೆಯ ಸಿಂಹಾಸನವನ್ನು ಬಿಳಿಯರ ಸಹಾಯದಿಂದ ಮರಳಿ ಪಡೆಯಲು ಯತ್ನಿಸುವ ರಾಜಕುಮಾರ ಅಂಬೊಪಾ; ಸ್ಕ್ರಾಗ್ಗಾನ ಭರ್ಚಿಯಿಂದ ತನ್ನನ್ನು ರಕ್ಷಿಸಿದ ಕ್ಯಾಪ್ಟನ್ ಗುಡ್ ಗೋಸ್ಕರ ತನ್ನ ಪ್ರಾಣವನ್ನೇ ತ್ಯಜಿಸಿದ ಕುಕುವಾನಾ ಸುಂದರಿ ಫುಲಾಟಾ ಈ ಎಲ್ಲ ಪಾತ್ರಗಳು ಮನದಲ್ಲಿ ಉಳಿಯುತ್ತವೆ. ಈ ಕಥೆಯ ಮೂಲ ಹಂದರವಾದ ಸೋಲೋಮನ್ನನ ವಜ್ರದ ಗಣಿಗಳನ್ನು ಹುಡುಕುವ ಸಾಹಸ, ಬಿಳಿಯರನ್ನು ಗಣಿಗಳ ಆಳದಲ್ಲಿ ಸಿಕ್ಕಿಹಾಕಿಸಿ ಅವರನ್ನು ಕೊಲ್ಲಲೆತ್ನಿಸುವ ಮಾಟಗಾತಿ ಗಗೂಲಳ ಕುತಂತ್ರ, ಅಲ್ಲಿಂದ ತಪ್ಪಿಸಿಕೊಂಡು ಬರುವ ರೀತಿ ಎಲ್ಲ ನನ್ನ ಮನದ ಕಣ್ಣ ಮುಂದೆ ಇನ್ನೂ ಜೀವಂತವಾಗಿದೆ.

ಕಥೆಯ ಕಾಲ ಹಳೆಯದಾದರೂ, ಅದರ ಎಲ್ಲೂ ತಡೆಯದ ಹಾಗೆ ಓದಿಸಿಕೊಂಡು ಹೋಗುವ ರೀತಿಯಿಂದಾಗಿ King Solomon’s Mines ಮೆಚ್ಚಿನ ಪುಸ್ತಕ. ಆಸಕ್ತರು ಇ-ಪುಸ್ತಕವನ್ನು http://www.gutenberg.org ವೆಬ್ಸೈಟಿನಲ್ಲೂ, ಆಡಿಯೋಬುಕ್ ರೂಪದಲ್ಲಿ librivox.org ವೆಬ್ಸೈಟಿನಲ್ಲೂ ಪಡೆದು ಓದಿ, ಕೇಳಿ ಆನಂದಿಸಬಹುದು.   

3) ಮೋಹನಸ್ವಾಮಿ – ವಸುಧೇ೦ದ್ರ ಅವರ ಕಥಾ ಸಂಕಲನ

ಛಂದ ಪ್ರಕಾಶನ, ಬೆಂಗಳೂರು

ಇಂಜಿನಿಯರ್ ಪದವೀಧರ ವಸುಧೇ೦ದ್ರ, ಉದ್ಯೋಗ ಬಿಟ್ಟು, ಸಾಹಿತ್ಯ ಕೃಷಿ ಮಾಡುತ್ತಾ, ಛಂದ ಪ್ರಕಾಶನವನ್ನು ಕಟ್ಟಿ ಹೆಸರು ಮಾಡಿದ್ದಾರೆ. ಈ ಕಥಾ ಸಂಕಲನದಲ್ಲಿ ೧೨ ಕಥೆಗಳಿವೆ. ಇಲ್ಲಿನ ೫ ಕಥೆಗಳಲ್ಲಿ ಮೋಹನಸ್ವಾಮಿಯೇ ಪ್ರಮುಖ ಪಾತ್ರಧಾರಿ, ನಿರೂಪಕ. ಮೋಹನಸ್ವಾಮಿ ವೃತ್ತಿಯಲ್ಲಿ ಇಂಜಿನಿಯರ್. ಆತ ಸಲಿಂಗ ಪ್ರೇಮಿ. ಕನ್ನಡದಲ್ಲಿ ಸಲಿಂಗ ಪ್ರೇಮವನ್ನು ವಸ್ತುವಾಗಿಟ್ಟುಕೊಂಡು ಬರೆದಿರುವ ಪ್ರಥಮ ಕೃತಿ ಇದು. ಕೇವಲ ವಿಹಂಗಮಾವಲೋಕನವಾಗದೆ, ಆಳವಾಗಿ ನಮ್ಮನು ತಟ್ಟುವ ರೀತಿಯಲ್ಲಿ ಬರೆದಿದ್ದಾರೆ  ವಸುಧೇ೦ದ್ರ. ಇದನ್ನು ಓದಿದಾಗ ಇದು ಲೇಖಕರ ಆತ್ಮಾವಲೋಕನವೇ ಆಗಿMVIMG_20180214_143342.jpgರಬಹುದು ಎಂದೆನಿಸಿದರೂ ಆಶ್ಚರ್ಯವಲ್ಲ. ಕೆಲವೊಮ್ಮೆ ಭಾಷೆ ಒರಟಾಗಿದೆ ಎನಿಸಿದರೂ ಸಂದರ್ಭಕ್ಕೆ ಉಚಿತವಾಗಿರುವುದು ಲೇಖಕರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. ಈಗಾಗಲೇ ಇಂಗ್ಲೀಷ್, ಸ್ಪ್ಯಾನಿಷ್ ಹಾಗೂ ಇನ್ನಿತರ ಭಾರತೀಯ ಭಾಷೆಗಳಿಗೆ ‘ಮೋಹನಾಸ್ವಾಮಿ’ ಅನುವಾದವಾಗಿದೆ, ಓದುಗರ ಹಾಗೂ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ.

ಎರಡನೇ ಕಥೆಯಲ್ಲಿ ಮೋಹನಸ್ವಾಮಿ ಹಾಗು ಆತನ ಪ್ರೇಮಿ ಕಾರ್ತಿಕ್ ಅವರ ಸಂಬಂಧದ ವಿಶ್ಲೇಷಣೆ ಮನ ತಟ್ಟುತ್ತದೆ. ಕಾರ್ತಿಕ್ ನೊಟ್ಟಿಗೆ ತನ್ನ ಬದುಕನ್ನು ಕಳೆಯುವ ಗುಂಗಿನಲ್ಲಿರುವ ಮೋಹನಸ್ವಾಮಿಗೆ ಆತ ತನ್ನನ್ನು ಬಿಟ್ಟು ಹುಡುಗಿಯೊಬ್ಬಳ ಜೊತೆ ಮದುವೆಯಾಗುವ ವಿಚಾರ, ಕಾರ್ತಿಕನ ಫೋನ್ ಸಂಭಾಷಣೆಯನ್ನು ಕದ್ದಾಲಿಸಿ ತಿಳಿದಾಗ ಆಗುವ ತೊಳಲಾಟ, ಅಸಹಾಯಕತೆ ಕಣ್ಣಲ್ಲಿ ನೀರೂರಿಸುತ್ತದೆ. ತನ್ನ ನಿಷ್ಕಳಂಕ ಪ್ರೇಮವನ್ನು ಕಾರ್ತಿಕ್ ಅವಾಚ್ಯ ಶಬ್ದಗಳಿಂದ ನಿಂದಿಸಿದಾಗ ನಮ್ಮ ಪೂರ್ವಾಗ್ರಹ ಪೀಡಿತ ಮನೋಭಾವನೆ, ಸಮಯ ಸಾಧಕತೆ ಇವೆಲ್ಲ ತೆರೆದಿಟ್ಟುಕೊಳ್ಳುತ್ತವೆ. ಸಲಿಂಗ ಪ್ರೇಮಿಗಳ ಬಗ್ಗೆ ನಮ್ಮಲ್ಲಿರುವ ಕೀಳು ದೃಷ್ಟಿಕೋನ, ದಬ್ಬಾಳಿಕೆ ಹಾಗೂ ದೌರ್ಜನ್ಯ ಮನೋಭಾವನೆ ಇಲ್ಲಿನ ಪ್ರತಿ ಕಥೆಗಳಲ್ಲೂ ಹಾಸು ಹೊಕ್ಕಿದೆ. ವಸುಧೇ೦ದ್ರರು ಅಂತರ್ಮತೀಯ ಮದುವೆಗಿರುವ ವಿರೋಧ, ಅದರ ಸುತ್ತ ಅಪ್ಪ-ಮಗಳ ನಡುವಿನ ಸಂಬಂಧದ ಚಿತ್ರಣವನ್ನು ಮನಮೋಹಕವಾಗಿ ವರ್ಣಿಸಿದ್ದಾರೆ.

ನನ್ನನಿಸಿಕೆಯಂತೆ ಕನ್ನಡ ಸಾಹಿತ್ಯಾಸಕ್ತರೆಲ್ಲ ಓದಲೇಬೇಕಾದ ಪುಸ್ತಕ.

 — ರಾಂಶರಣ್ ಲಕ್ಷ್ಮಿನಾರಾಯಣ

ಪುಸ್ತಕ: The Monk as a Man

ಲೇಖಕರು:ಮಣಿ ಶಂಕರ್ ಮುಖರ್ಜಿ

ಮುದ್ರಣ: ಪೆಂಗ್ವಿನ್ ಪಬ್ಲಿಕೇಷನ್ಸ್

ಬಹುತೇಕ ಭಾರತೀಯರಿಗೆ ಸ್ವಲ್ಪ ಮಟ್ಟಿಗೆ ವಿದೇಶಿಯರಿಗೆ ಸ್ವಾಮಿ ವಿವೇಕಾನಂದರ ಹೆಸರು ಚಿರಪರಿಚಿತ.

ಭಾರತದ ಯುವಜನರ ನರನಾಡಿಗಳನ್ನು ಹುರಿಗೊಳಿಸಿದ ಅಪೂರ್ವ ಹುಮ್ಮಸ್ಸು ಎಂದರೆ ಅದು ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರು.ಅವರ ‘ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ’ ಎನ್ನುವ ಕೂಗು ಇಂದಿಗೂ ಅನೇಕರಿಗೆ ಸ್ಫೂರ್ತಿಯ ಒರತೆಯಾಗಿದೆ.

ನಮ್ಮ ಶಾಲಾ ಕಾಲೇಜುಗಳಲ್ಲಿ, ಅನೇಕ ಪುಸ್ತಕಗಳಲ್ಲಿ ಓದಿ ತಿಳಿದ ವಿವೇಕಾನಂದರು ಒಂದೆಡೆಯಾದರೆ

ಅವರ  ಜೀವನದ ಇನ್ನೊಂದು ಅಧ್ಯಾಯವನ್ನು ಮಣಿಶಂಕರ್ ಈ ಪುಸ್ತಕದ ಮುಖೇನ ಓದುಗರಿಗೆ ತೆರೆದಿಡುತ್ತಾರೆ.

ಹೆಸರೇ ಹೇಳುವ ಹಾಗೆ ಈ ಪುಸ್ತಕದಲ್ಲಿ ವಿವೇಕಾನಂದರು ಒಬ್ಬ ಸಂನ್ಯಾಸಿಯಗಿದ್ದುಕೊಂಡೂ ಸಹ ಸಾಮಾನ್ಯ ಮನುಷ್ಯರಂತೆ ಸಂಸಾರದ ಜಂಜಾಟವನ್ನು ಅನುಭವಿಸಿದ ಎಷ್ಟೋ ಸಂಗತಿಗಳು ನಮಗೆ ತಿಳಿಯುತ್ತವೆ.

ವಿವೇಕಾನಂದರ ಪೂರ್ವಾಶ್ರಮದ ಬಗ್ಗೆ ಅನೇಕ ಸತ್ಯ ಸಂಗತಿಗಳನ್ನು ಸಂಶೋಧಿಸಿ ಇದುವರೆಗೂ ಎಲ್ಲಿಯೂ ಓದಿರದ ವಿರಳ ಮಾಹಿತಿಗಳನ್ನು ತಿಳಿಸುವಲ್ಲಿ ಮಣಿಶಂಕರ್ ಅವರ ಕಾರ್ಯ ಶ್ಲಾಘನೀಯ.

ಅನೇಕ ವಿಚಿತ್ರವೆನಿಸುವಂತಹ ಹಾಗೂ ನಂಬಲಸಾಧ್ಯವೆನಿಸುವ ಘಟನೆಗಳು ಓದುಗರ ಕುತೂಹಲ ಹೆಚ್ಚಿಸುತ್ತವೆ.

ಇಂದಿನ ಅನೇಕ ಯುವಕರಂತೆ ವಿವೇಕಾನಂದರೂ ಕೂಡ ನಿರುದ್ಯೋಗದ ಸಮಸ್ಯೆಯನ್ನು ಎದುರಿಸುತ್ತಾರೆ,ಮತ್ತೊಂದು ಕಡೆ ತನ್ನ ತಮ್ಮ ತಂಗಿಯರ ಜವಾಬ್ದಾರಿ, ತಂದೆಯವರ ಸಾಲ, ತಾಯಿಯ ಕಣ್ಣೀರು, ತನ್ನ ದೇಹದ ಅನಾರೋಗ್ಯ ಹೀಗೆ ಕೊನೆವರೆಗೂ

ಒಬ್ಬ ಸಾಮಾನ್ಯ ಮಾನವನಂತೆ ಕಷ್ಟಗಳನ್ನು ಎದುರಿಸಿ ಬದುಕಿದ ಅನೇಕ ಸಂಗತಿಗಳು ಆಶ್ಚರ್ಯ ಮೂಡಿಸುತ್ತವೆ.

ಮತ್ತೆ ಹಲವು ಘಟನೆಗಳು ನಮಗೆ ವಿವೇಕಾನಂದರ  ಮೇಲಿರುವ ಗೌರವವನ್ನು ಪ್ರಶ್ನಿಸುವಂತಹವಾಗಿವೆ.

ಇವೆಲ್ಲದರ ಹೊರತಾಗಿಯೂ ತಾವು ಸಂನ್ಯಾಸಿಯಾಗಿ ದೇಶಕ್ಕೆ ಕೊಟ್ಟ ಕೊಡುಗೆ, ವಿಶ್ವದ ಇತರ ರಾಷ್ಟ್ರಗಳಲ್ಲಿ ನಮ್ಮ ಧರ್ಮದ ಬಗ್ಗೆ

ಮೂಡಿಸಿದ ಸಕರಾತ್ಮಕ ಕಾರ್ಯಗಳನ್ನು ಸ್ಮರಿಸಿ ಅವರ ಮೇಲಿನ ಗೌರವ ನೂರ್ಮಡಿಯಾಗುವಷ್ಟು ಮಾಹಿತಿಗಳು ಈ ಪುಸ್ತಕದಲ್ಲಿ ಓದಸಿಗುತ್ತವೆ.

       –ವಿಜಯನರಸಿಂಹ