‘ಅಂತಃಪುರ ಗೀತೆ’- ಡಿ.ವಿ.ಜಿ ಸ್ಮರಣೆ ಮತ್ತು Dr.ಸುಮನಾ ನಾರಾಯಣ್ ಅವರ ನಾಟ್ಯ ವೈಭವ

‘ಅಂತಃಪುರ ಗೀತೆ’-  ಡಿ.ವಿ.ಜಿ ಅವರು ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟ ಒಂದು ಅಪೂರ್ವವಾದ ಕೊಡುಗೆ.
ಮೂಲತಃ ‘ಬೇಲೂರು ಶಿಲಾಬಾಲಿಕೆಯರು’ ಎಂಬ ಶೀರ್ಷಿಕೆಯಡಿ 1920ರಲ್ಲಿ ರಚಿಸಿದ್ದರೂ, ಅಧಿಕೃತವಾಗಿ 1950 ರಲ್ಲಿ ಮೊದಲ ಬಾರಿಗೆ ಮುದ್ರಣವಾಗಿ ಲೋಕಾರ್ಪಣೆಯಾಯಿತು.

dvgapg-cover

ಬೇಲೂರ ಶಿಲಾ ಬಾಲಿಕೆಯರ ಸೌಂದರ್ಯದ ಅತೀಸೂಕ್ಷ್ಮತೆಯನ್ನು ಗಮನಿಸಿ ತಮ್ಮ ಅಗಾಧ ಪ್ರತಿಭೆಯಿಂದ ಗೀತೆಗಳನ್ನು ರಚಿಸಿ ಚನ್ನಕೇಶವನಿಗೆ ಅರ್ಪಿಸಿದ ದಿವ್ಯ ಸಂಕಲನ ಇದಾಗಿದೆ.
ಬೇಲೂರ ಶಿಲಾ ಬಾಲಿಕೆಯರ ಒಂದೊಂದು ಭಂಗಿಯ ಭಾವದ ನಾಡಿ ಹಿಡಿದು ಪ್ರತ್ಯೇಕ ರಾಗಗಳನ್ನೊಳಗೊಂಡ ಗೀತೆಗಳನ್ನು ಚಿತ್ರ ಸಹಿತವಾಗಿ ಈ ಸಂಕಲನದಲ್ಲಿ ಹಿಡಿದಿಟ್ಟಿದ್ದಾರೆ ಪೂಜ್ಯ ಡಿ.ವಿ.ಜಿ ಅವರು.
ಪ್ರತಿಯೊಂದು ಗೀತೆಗೂ ಡಿ.ವಿ.ಜಿ ಅವರೇ ಸ್ವತಃ ರಾಗಗಳನ್ನು ಸೂಚಿಸಿ ಅದಕ್ಕಾಗಿ ಸಂಗೀತ ವಿದ್ವಾನ್ ವೀಣೆ ರಾಜಾರಾವ್ ಅವರಿಂದ ಸಹಾಯವನ್ನು ಪಡೆದದ್ದನ್ನು ಸ್ಮರಿಸಿದ್ದಾರೆ.ಈ ಸಂಕಲನದಲ್ಲಿ ಗೀತೆಗಳ ಜೊತೆಗೆ ಬೇಲೂರು ದೇವಾಲಯಗಳು ಮತ್ತು ಸೌಂದರ್ಯೋಪಾಸನೆ ಎಂಬ ಟಿಪ್ಪಣಿಗಳನ್ನು ಕೂಡ ಬರೆದಿದ್ದಾರೆ.
ಎಲ್ಲಾ ಗೀತೆಗಳು ಮೂಲತಃ ಹಳಗನ್ನಡದಲ್ಲಿ ಇದ್ದರೂ ಸಹಿತ ಸಂಗೀತ ಸಾಧಕರಿಗೆ ಇದೊಂದು ಜ್ಞಾನ ಕೋಶವಾಗಿದೆ ಎಂದು ಬಲ್ಲವರು ಹೇಳುತ್ತಾರೆ.ಸಂಗೀತವಷ್ಟೇ ಏಕೆ ಸಾಂಪ್ರದಾಯಿಕ ನೃತ್ಯಗಾರರು ಈ ಗೀತೆಗಳಿಗೆ ನೃತ್ಯ ಸಂಯೋಜಿಸಿ ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ಹೀಗೆ ಸಂಗೀತ,  ನಾಟ್ಯ ಗಳಿಂದ ಅಂತಃಪುರ ಗೀತೆಗಳು ಇಂದಿಗೂ ಬೆರಗು ಮೂಡಿಸುತ್ತಿವೆ ಮತ್ತು ಕನ್ನಡದ ಹೆಮ್ಮೆಯ ಹೊಯ್ಸಳ ಸಾಮ್ರಾಜ್ಯದ ಶಿಲ್ಪ ಕಲಾ ವೈಭವವನ್ನು ಜೀವಂತವಾಗಿರಿಸಿವೆ.
ಕನ್ನಡ ಬಳಗ, ಯು.ಕೆ (KBUK) 2018 ಏಪ್ರಿಲ್ 21ರಂದು ಕೊವೆಂಟ್ರಿ(coventry)ಯಲ್ಲಿ ಆಚರಿಸಿದ ಯುಗಾದಿ ಸಂಭ್ರಮದಂದು ಡಿ.ವಿ.ಜಿ ಸ್ಮರಣೆಯ ಅಂಗವಾಗಿ ಖ್ಯಾತ ಭರತನಾಟ್ಯ ಕಲಾವಿದೆ Dr.ಸುಮನಾ ನಾರಾಯಣ್ ಅವರು ಅದ್ಭುತವಾದ ನೃತ್ಯ ಪ್ರದರ್ಶನ ಮಾಡಿದರು.
‘ನಟನ ವಾಡಿದಳ್ ತರುಣಿ’ ಮತ್ತು ‘ಏನೀ ಮಹಾನಂದವೇ ಓ ಭಾಮಿನಿ’ ಎನ್ನುವ ಗೀತೆಗಳು ಅತಿ ಜನಪ್ರಿಯವಾಗಿದ್ದು ಅವುಗಳನ್ನು ತಮ್ಮ ನೃತ್ಯಕ್ಕೆ ಆಯ್ದುಕೊಂಡಿದ್ದರು.

DSC_0207 (2)apg-8.jpg

ಎರಡನೆಯ ಹಾಡಿನಲ್ಲಿ ಮುರಜಾ ಮೋದೆಯ ನೃತ್ಯ ಭಂಗಿಗಳು ನಯನ ಮನೋಹರವಾಗಿದ್ದವು.
ಈ ನೃತ್ಯ ಪ್ರದರ್ಶನಕ್ಕಾಗಿ ಸುಮಾರು ಮೂರು ತಿಂಗಳು ಸತತ ಅನ್ವೇಷಣೆ ಮತ್ತು ಅಭ್ಯಾಸ ಗಳೊಂದಿಗೆ ಪೂರ್ವ ತಯಾರಿ ನಡೆಸಿದ್ದನ್ನು Dr.ಸುಮನಾ ನಾರಾಯಣ್ ಅವರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಇದರಲ್ಲಿ ವಿಶೇಷವೆಂದರೆ ಸಂಪೂರ್ಣ ಸಾಂಪ್ರದಾಯಿಕ ನೃತ್ಯಕ್ಕೆ ಕಟ್ಟುಬೀಳದೆ ಹಾಡಿನ ಭಾವ, ರಾಗ, ತಾಳಗಳಿಗೆ ಅನುಗುಣವಾಗಿ ನೃತ್ಯ ಭಂಗಿಗಳನ್ನು ತಾವೇ ಸಂಯೋಜಿಸಿಕೊಂಡಿದ್ದನ್ನು ಪ್ರಸ್ತಾಪಿಸಿದರು.

Dr. ಸುಮನಾ ನಾರಾಯಣ್ ಅವರ ಕಿರು ಪರಿಚಯ-
ಭರತನಾಟ್ಯವನ್ನು ಗುರುಗಳಾದ ಶ್ರೀಮತಿ ಗೀತಾ ಅನಂತನಾರಾಯಣ್ ಅವರ ಗೀತಾಂಜಲಿ ನಾಟ್ಯ ಶಾಲೆಯಲ್ಲಿ ತಮ್ಮ ನಾಲ್ಕನೆ ವಯಸ್ಸಿಗೆ ಕಲಿಯಲು ಪ್ರಾರಂಭಿಸಿದರು. ಭಾರತ ಸರ್ಕಾರದ ವಿದ್ವತ್ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯನ್ನು ಪಡೆದು 1993-2002ರವರೆಗೆ ಕರ್ನಾಟಕ ರಾಜ್ಯ ಸರ್ಕಾರದ ಅನುದಾನಿತ ವಿದ್ಯಾರ್ಥಿವೇತನ ಮತ್ತು ಅನೇಕ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಬಹುತೇಕ ಸುಪ್ರಸಿದ್ಧ ವೇದಿಕೆಗಳಲ್ಲಿ ಇವರು ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ ಅವುಗಳಲ್ಲಿ Indian Institute of world culture, Milapfest, ‘ಬೆಂಗಳೂರು ಹಬ್ಬ’, ‘ಹಂಪಿ ಉತ್ಸವ’ ಪ್ರಮುಖವಾದವುಗಳು. ಇವರಿಗೆ ಸಂದ ಪ್ರಶಸ್ತಿಗಳು ಅನೇಕ.
ಇವರಿಗೆ ‘ನಾಟ್ಯ ವಿಶಾರದ’ ಎನ್ನುವ ಪ್ರತಿಷ್ಠಿತ ಬಿರುದನ್ನು ಕೊಟ್ಟು ಭಾರತ ಸರ್ಕಾರ ಗೌರವಿಸಿದೆ.

ಯು.ಕೆ (U.K)ಯಾದ್ಯಂತ ಅನೇಕ ಸಾಂಸ್ಕೃತಿಕ ವೇದಿಕೆಗಳಲ್ಲಿ ಕಲಾ ಪ್ರದರ್ಶನ ಮಾಡಿರುವ ಇವರು ಪ್ರಸ್ತುತ ಇಂಗ್ಲೆಂಡ್ ನ ನಾಟ್ಟಿಂಗ್ಹ್ಯಾಮ್ ಅಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಪ್ರಸೂತಿ ಶಾಸ್ತ್ರಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
‘ಲಾಸ್ಯ ಭರತನಾಟ್ಯ ಶಾಲೆ’ಯನ್ನು ಸ್ಥಾಪಿಸಿ ದೈವಿಕ ಕಲೆಯಾದ ಭರತನಾಟ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಒಬ್ಬ ಕನ್ನಡತಿ ಎಂಬುದು ನಮಗೆಲ್ಲ ಹೆಮ್ಮೆಯ ವಿಷಯ.