“ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ. ವಿಠಲನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೊ..,” ಎಂದರು ಸಂತ ಪುರಂದರದಾಸರು . ಆದರೆ, ನನ್ನನಂಥಹ ಮರುಳನ ಮನಸ್ಸು, ರಾಮನವಮಿ ಎಂದಾಗೆಲ್ಲ, ಶ್ರೀರಾಮ್, ಜೈರಾಮ್ ಅಂತ ಭಜಿಸುವ ಬದಲು “ರಾಮನವಮಿಯ ಪಾನಕಕ್ಕೆ ” ಎಂದು ಗುಣುಗುಣಿಸಲು ಶುರು ಹಚ್ಚಿಬಿಡುತ್ತದೆ. ಇದಕ್ಕೆ ನನ್ನ ಬಾಲ್ಯದ ನೆನಪು ಕಾರಣವೆನ್ನಬಹುದು.

ಉಗಾದಿ ಹಬ್ಬದ ಹಿಂದೆಯೇ ಬಂದುಬಿಡುವುದು ರಾಮ ನವಮಿ. ವಿಷ್ಣುವಿನ ಏಳನೇ ಅವತಾರ ರಾಮ ಎನ್ನುತ್ತಾರೆ . ರಾಮನ ಜನ್ಮದಿನವನ್ನು ರಾಮನವಮಿಯೆಂದು ಭಾರತದ ಎಲ್ಲೆಡೆಯಲ್ಲೂ ಆಚರಿಸಲಾಗುತ್ತದೆ. ವಸಂತ ಮಾಸದ ಆಗಮನದ ಜೊತೆ, ಜೊತೆಯಲ್ಲಿ ಆರಂಭ ಈ ಹಬ್ಬ. ಈ ಹಬ್ಬ ಹಿಂದೂ ಧರ್ಮದ ಪರಂಪರೆಯಾದರೂ, ನನ್ನ ಬಾಲ್ಯದ ದಿನಗಳಲ್ಲಿ, ನನ್ನ ಮುಸಲ್ಮಾನ, ಕಿರಿಸ್ತಾನ ಸ್ನೇಹಿತರೂ ಆನಂದದಿಂದ ಇದರಲ್ಲಿ ಭಾಗವಹಿಸುತ್ತಿದ್ದರು. ರಾಮನ ಜನ್ಮದಿನದ ಆಚರಣೆ ಸಮುದಾಯದ ಹಬ್ಬವಾಗಿದ್ದು, ಅವರ ಪೋಷಕರಿಗಾಗಲಿ, ನಮ್ಮ ಪೋಷಕರಿಗಾಗಲಿ ಈ ಧರ್ಮ ದ್ವಂದದ ಬಗ್ಗೆ ಯಾವ ಕಾಳಜಿಯೂ ಇರದಿಲ್ಲದ ಕಾಲವದು. ಸಮುದಾಯ ಹಬ್ಬಗಳು ಜಾತ್ಯತೀತ ಭಾರತದ ಉತ್ತಮ ಉದಾಹರಣೆಯೆನ್ನಬಹುದು.
ಈ ಹಬ್ಬವನ್ನು ನಮ್ಮ ಮನೆಯಲ್ಲಿ ವೈಭವದಿಂದ ಆಚರಿಸದಿದ್ದರೂ, ಅಕ್ಕ ಪಕ್ಕದ ಮನೆಗಳಿಗೆ ನಾವು ತಪ್ಪದೇ ಆಗಾಗ ಭೇಟಿ ಕೊಡುತ್ತಿದುದ್ದರಿಂದ ಹಬ್ಬದ ಸಂಭ್ರಮಕ್ಕೇನು ಕೊರತೆಯಿರಲಿಲ್ಲ. ನಮ್ಮ ನೆರಮನೆಯ ಶೆಟ್ಟರ (ವೈಶ್ಯರ) ಮನೆಯಲ್ಲಿ ಏಗ್ಗಿಲ್ಲದೆ ಕೊಟ್ಟಿದ್ದೆಲ್ಲ ತಿನ್ನುವುದು ನಿಯಮಿತ ಕಾರ್ಯವಾಗಿದ್ದುದರಿಂದ, ಹಬ್ಬದ ದಿನ, ಊಟ ಉಪಚಾರ ಮಾಡಿಸಿಕೊಳ್ಳಲು ನಮಗೆ ನಾಚಿಕೆಯ ಪ್ರಶ್ನೆಯೇ ಇರಲಿಲ್ಲ. ನೆರೆಹೊರೆಯ ಸ್ನೇಹ, ಸಹಾಯ ಬಯಸದೇ ಇದ್ದರೂ ದೊರಕುತ್ತಿದ್ದ ಸಮಾಜ ನಮ್ಮದಾಗಿದ್ಧ ಕಾಲವದು ಅಥವಾ ಟೆಲಿವಿಷನ್ / ಇಂಟರ್ನೆಟ್ ಇರದಿದ್ದ ದಶಕಗಳವು.
ರಾಮನವಮಿಯ ದಿನ ಎಲ್ಲಕ್ಕಿಂತ ಮುಖ್ಯವಾದ ನೆನಪೆಂದರೆ ಪಾನಕ ಮತ್ತುಕೋಸುಂಬರಿಯದು. ಬೆಲ್ಲದ ಪಾನಕ ಬಹಳ ಸಾಮಾನ್ಯ. ಅದರಲ್ಲೂ ಕೆಲವರು ಕರಬೂಜ ಹಣ್ಣಿನ ಮತ್ತು ಬೆಲ್ಲದ ಹಣ್ಣಿನ ಪಾನಕ ಮಾಡಿ ಹಂಚುತ್ತಿದ್ದರು. ಕರಬೂಜದ ಹಣ್ಣನ್ನ ಸಣ್ಣಗೆ ಹೆಚ್ಚಿ ಬೆಲ್ಲದ ನೀರಿನ ಜೊತೆ ಬೆರೆಸಿ ಅಥವಾ ಬೇಲದ ಹಣ್ಣಿನ ತಿರುಳನ್ನ ಕೆರೆದು, ತಿರುಳನ್ನು ಸೂಸಿ ತೆಗೆದು ಪಾನಕಕ್ಕೆ ಬೆರೆಸುತ್ತಿದ್ದರು. ಬರಿಯ ಬೆಲ್ಲದ ಪಾನಕಕ್ಕಿಂತ ಈ ಹಣ್ಣಿನ ಪಾನಕಕ್ಕೆ ಹೆಚ್ಚಿನ ರುಚಿ. ಪಾನಕ ಕುಡಿಯಲು ಹೇಳಿ ಮಾಡಿಸಿದಂತ ಸುಡು ಬಿಸಿಲಿನ ದಿನಗಳವು. ಆಗಿನ್ನೇನು ಫ್ರಿಡ್ಜ್ ಅಥವಾ ಐಸ್ ಕ್ಯೂಬ್ಸ್ ಅದೆಲ್ಲ ಏನಿರಲಿಲ್ಲ. ಕಪ್ಪು / ಕೆಂಪು ಮಡಿಕೆಯ ತಂಪಿನ ಸೊಗಡೂ (ವಾಸನೆ) ಸೇರಿ ಪಾನಕಕ್ಕೆ ರುಚಿಯೋ ರುಚಿ. ಈಗ ಬಿಸಿಲಿನ ದಿನಗಳಲ್ಲಿ ಅತಿ ಬೆಲೆ ತೆತ್ತು ಚೆಂದದ ಪ್ಯಾಕ್ ನಲ್ಲಿರುವ ಐಸ್ಕ್ರೀಂ ತಿಂದರೂ, ಆ ತೃಪ್ತಿ ಸಿಗುವುದಿಲ್ಲ. ಸಿಹಿ ಎಂದರೆ ಮೂಗುಮುರಿಯುವ ನನಗೂ ಸಹ ಹಣ್ಣು ಹಾಕಿದ, ತಣ್ಣನೆ ಬೆಲ್ಲದ ಪಾನಕ ರುಚಿಸುತ್ತಿತ್ತು. ಬಾಲ್ಯದ, ಸ್ನೇಹದ , ಉತ್ಸಾಹದ, ನೆನಪಿನ ಪದಾರ್ಥಗಳು ಪಾನಕದಲ್ಲಿ ಬೆರೆತು, ಸವಿರುಚಿ ಎನಿಸಿರಬಹುದು. ಈಗ ಅದೇ ಪಾನಕ ಯಾರಾದರೂ ಕೊಟ್ಟರೆ “ಸ್ವಲ್ಪವೂ ಚೆನ್ನಾಗಿಲ್ಲ” ಎಂದು ನಾನೇ ಮುಖ ತಿರಿಗಿಸುವ ಸಾಧ್ಯತೆ ಇದೆ. ವಯಸ್ಸಾದಂತೆಲ್ಲ ನನ್ನ ಆಯ್ಕೆಗಳ ನಿರ್ಬಂಧವೂ ಹೆಚ್ಚಾದಂತೆ ಕಾಣುತ್ತದೆ.
ನೆರ ಮನೆಯ ಪಾನಕದ ಸೇವೆಯಾದ ನಂತರ, ಸ್ನೇಹಿತರ ಜೋಡಿ ಹತ್ತಿರದ ದೇವಸ್ಥಾನಕ್ಕೆ ಭೇಟಿ. ನಮ್ಮ ಮನೆಯ ಬಳಿಯಿದ್ದ ಆ ರಾಮನ ದೇವಸ್ಥಾನಕ್ಕೆ ದೊಡ್ಡ ಪ್ರಾಂಗಣವಿದ್ದು , ಅದರಲ್ಲಿ ದೊಡ್ಡ ಆಲದ ಮರವಿತ್ತು. ಸಾಯಂಕಾಲ ಆಯಿತೆಂದರೆ, ಮರದ ತುಂಬಾ ಕೋತಿಗಳು. ಬೆಳೆಗ್ಗೆ ಎದ್ದು ಆಹಾರ ಹುಡುಕಲು ಹೋದ ಕೋತಿಗಳೆಲ್ಲ ಕತ್ತಲಾಗುವ ಮುನ್ನ ಮರ ಸೇರಿಬಿಡುತ್ತಿದ್ದವು. ಶಾಲೆಗೆ ರಜೆ ಬಂತೆಂದರೆ ಆ ದೇವಸ್ಥಾನದಲ್ಲಿ ಬೆಳಗಿನಿಂದ ಸಂಜೆಯವರೆಗೂ, ನಾನು, ನನ್ನ ತಮ್ಮ ಆಟವಾಡಲು ಅ ಹೋಗುತ್ತಿದ್ದೆವು. ದೇವಾಲಯ ಮೂಲೆ, ಮೂಲೆಯೂ ನಮಗೆ ಪರಿಚಿತವಾದ ಜಾಗ. ಪಾನಕ, ಚೆರುಪು ಹಂಚುತ್ತಿದ್ದವರಿಗೆ ನಾವೊಂದು ಉಪದ್ರವ ಎನಿಸರಬಹುದು, ಆದರೆ ಆ ಜಾಗ ಮಕ್ಕಳಿಗೆ ಶಾಲೆಯ ಕೋಣೆಯಷ್ಟೇ ಪರಿಚಿತ. ಅದು ದೇವರ ನೆಲೆ, ಪವಿತ್ರ ಸ್ಥಳ ಎನ್ನುವ ಭಾವ ಬಂದ ನೆನಪು ನನಗಿಲ್ಲ. ಆ ರಾಮನ ದೇವಸ್ಥಾನ ನನ್ನ ಬಾಲ್ಯದ ನೆನಪುಗಳಲ್ಲಿ ಪ್ರತಿಷ್ಟಾಪಿಸಿ ಬಿಟ್ಟಿದೆ.
ಪಾನಕದ ಜೊತೆಗೇ ನೆನಪಾಗುವುದು, ರಾಮನವಮಿ ಸಂಜೆಯ ಕಾರ್ಯಕ್ರಮವಾದ ಸಂಗೀತ ಕಚೇರಿಗಳು. ವಾರಗಟ್ಟಲೆ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಕೆಲವೊಮ್ಮೆ ಹಿಂದೂಸ್ತಾನಿ ಸಂಗೀತದ ಕಚೇರಿಗಳು ನಡೆಯುತ್ತಿದ್ದವು. ಸಂಗೀತದಲ್ಲಿ ಆಸಕ್ತಿಯಿದ್ದವರಿಗೆ ಇದು ರಸದೌತಣ. ಮಕ್ಕಳಿಗೆ ಓದು ತಪ್ಪಿಸಿಕೊಳ್ಳಲು ಮತ್ತೊಂದು ನೆವ. ಕೆಲವು ಹಾಡುಗಳ ಮೊದಲಿನ ಸಾಲುಗಳು ಮತ್ತು ಕೆಲ ಹಾಡುಗಾರರ ಪರಿಚಿತ ಮುಖಗಳು ಇಷ್ಟೇ ಆಗ ನಮ್ಮ ಸಂಗೀತ ಪ್ರಪಂಚ. ಎಂಟು ಘಂಟೆಗೆ ಮನೆ ಸೇರಲೇ ಬೇಕು ಇಲ್ಲದಿದ್ದರೆ ಮುಂಗೋಪಿ ತಂದೆಯನ್ನ ಎದುರಿಸಬೇಕು ಎನ್ನುವ ಭಯದಿಂದ ಓಡಿ ಬಂದು ಮನೆಸೇರಿ ನೆಪಕ್ಕೆ ಪಠ್ಯ ಪುಸ್ತಕ ಹಿಡಿಯುವುದರೊಂದಿಗೆ ನಮ್ಮ ರಾಮನವಮಿಯ ಆಚರಣೆ ಮುಗಿಯುತ್ತಿತ್ತು.
ಕರ್ನಾಟಕದ ವಿವಿಧ ಭಾಗಗಳಲ್ಲಿ ಈ ಹಬ್ಬವನ್ನು ಬೇರೆ, ಬೇರೆ ರೀತಿಯಲ್ಲಿ ಆಚರಿಸುತ್ತಿರಬಹುದು. ಆಂಧ್ರ ಪ್ರದೇಶದ ಗಡಿಯಲ್ಲಿ ವಾಸಿಸುತ್ತಿದ್ದಾಗಿನ ನನ್ನ ಬಾಲ್ಯದ ನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮ ಬಾಲ್ಯದ ಕೆಲ ನೆನಪುಗಳನ್ನು ಈ ಲೇಖನ ಕೆದಕಿರಬಹುದಲ್ಲವೆ?
ರಾಮನವಮಿಯ ಶುಭಾಶಯಗಳು.
ಡಾ . ದಾಕ್ಷಾಯಿನಿ ಗೌಡ